ಮೇ 17, 2012

"ಲೇಖಕನಾದವನು ತಾನು ಕಂಡ ಸತ್ಯವನ್ನು ಪರೀಕ್ಷಿಸುತ್ತಿರಬೇಕು" - ಡಾ. ನಟರಾಜ್ ಹುಳಿಯಾರ್




ಡಾ. ನಟರಾಜ್ ಹುಳಿಯಾರ್ ಅವರು ಕಥೆಗಾರರಾಗಿ, ವಿಮರ್ಶಕರಾಗಿ ಮತ್ತು ಅಂಕಣಕಾರರಾಗಿ ಚಿರಪರಿಚಿತರು. ಲೋಹಿಯಾ ಚಿಂತನೆಗಳನ್ನು ಕನ್ನಡಕ್ಕೆ ತರುವಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ. ಇತ್ತೀಚೆಗಷ್ಟೇ ನಟರಾಜ್ ಹುಳಿಯಾರ್ ಅವರ ಮೂರು ದಶಕಗಳ ಕತೆಗಳ ಸಂಕಲನ ’ಮಾಯಾಕಿನ್ನರಿ’ ಹಾಗೂ ಸಾಂಸ್ಕೃತಿಕ ಬರಹಗಳ ಸಂಕಲನ ’ಗಾಳಿ ಬೆಳಕು’ ಬಿಡುಗಡೆಯಾಗಿವೆ. ಇದೀಗ ಹಲವು ವಿಚಾರಗಳನ್ನು ಕುರಿತು  ತಮ್ಮ ನಿಲುವುಗಳನ್ನು ಅವರು ಇಲ್ಲಿ ಹಂಚಿಕೊಂಡಿದ್ದಾರೆ. 



ಸಾಹಿತ್ಯ ವಿಮರ್ಶೆಯನ್ನೂ ಬರೆದಿರುವ  ನೀವು ಸಾಹಿತ್ಯ ವಿಮರ್ಶೆ ಇಂದು ಪಡೆದುಕೊಂಡಿರುವ ಪ್ರಾಮುಖ್ಯತೆ ಬಗ್ಗೆ ಏನು ಹೇಳುತ್ತೀರಿ? 

ಸಾಹಿತ್ಯ ಇರುವವರೆಗೂ ಸಾಹಿತ್ಯ ವಿಮರ್ಶೆ ಇರಲೇಬೇಕಾಗುತ್ತದೆ. ಸಾಹಿತ್ಯ ವಿಮರ್ಶೆ ಇಂದು ಬೇರೆಯದೇ ಸ್ವರೂಪ ತಾಳಿದೆ. ಇಂದು ಅದು ಸಾಹಿತ್ಯ ಸಿದ್ಧಾಂತವಾಗುವ ಕಡೆ ಹೊರಳಿಕೊಂಡಿದೆ. ಸಾಹಿತ್ಯವಿಮರ್ಶೆ ಒಂದು  ಸ್ವತಂತ್ರ ಚಿಂತನಾ ಕ್ರಮವೂ ಹೌದು. ಸಂಸ್ಕೃತಿವಿಮರ್ಶೆ ಚಾಲ್ತಿಗೆ ಬಂದಾದ ಮೇಲೆ ಸಾಹಿತ್ಯವಿಮರ್ಶೆ ಕೇವಲ ಕೃತಿಯೊಂದನ್ನು ಕುರಿತ  ವಿಮರ್ಶೆಯಾಗಿ ಉಳಿದಿಲ್ಲ. ಅದು ಸಂಸ್ಕೃತಿ, ನಾಗರಿಕತೆಗೆ ಸಂಬಂಧಿಸಿದ ವಿಶಾಲ ಪ್ರಶ್ನೆಗಳನ್ನು ಕೈಗೆತ್ತಿಕೊಳ್ಳುತ್ತಿದೆ. ಕೀರ್ತಿನಾಥ ಕುರ್ತಕೋಟಿಯಂಥವರು ಆರಂಭಿಸಿದ ಸಾಹಿತ್ಯ ವಿಮರ್ಶೆಗೂ ಇಂದಿನ ಸಾಹಿತ್ಯ ವಿಮರ್ಶೆಗೂ ವ್ಯತ್ಯಾಸ ಇಲ್ಲಿದೆ. ಹೀಗಾಗಿ ಇಂದಿನ ಸಾಹಿತ್ಯ ವಿಮರ್ಶೆ ಸಾಹಿತ್ಯ ಕೃತಿಗಳಿಂದ ಹೆಚ್ಚು ಸ್ವತಂತ್ರವಾಗಿದೆ. ಹಾಗೇ ಸಾಹಿತ್ಯ ವಿಮರ್ಶೆ ಸಾಹಿತ್ಯ ಸಂಶೋಧನೆಗೂ ದೊಡ್ಡ ಮಟ್ಟದಲ್ಲಿ ಬಳಕೆಯಾಗುತ್ತಿದೆ. 

ಕನ್ನಡದಲ್ಲಿ ಸಾಹಿತ್ಯವೇನೋ ಅಪಾರ ಪ್ರಮಾಣದಲ್ಲಿ ಸೃಷ್ಟಿಯಾಗುತ್ತಿದೆ. ಆದರೆ ಈ ಸಾಹಿತ್ಯ ಯಾವ ಮೌಲ್ಯಗಳನ್ನು ಬಿಂಬಿಸುತ್ತಿದೆ?  
ಇಂದು ಸಹಸ್ರಾರು ಪುಸ್ತಕಗಳು ಬರುತ್ತಿರುವುದರಿಂದ ಎಲ್ಲಾ ಕೃತಿಗಳೂ ಎಲ್ಲರ ಕಣ್ಣಿಗೂ ಬೀಳದಿರಬಹುದು. ಆದರೆ ಎಲ್ಲಾ ಕಾಲದಲ್ಲೂ ಆ ಕಾಲದ ಶ್ರೇಷ್ಠ ಸಾಹಿತ್ಯ ಎನ್ನುವುದು ಬರುತ್ತಲೇ ಇರುತ್ತದೆ. ನಾನು ಜಗತ್‌ಸಾಹಿತ್ಯದ ವಿದ್ಯಾರ್ಥಿಯೂ ಆಗಿರುವುದರಿಂದ ಯಾಕೋ ನಮ್ಮ ಇತ್ತೀಚಿನ ಕೃತಿಗಳು ಆ ಮಟ್ಟವನ್ನು ತಲುಪುತ್ತಿಲ್ಲ್ಲವೇನೋ ಎಂದು ನನಗೆ ಅನ್ನಿಸಿದೆ. ಕುವೆಂಪು,ಅನಂತಮೂರ್ತಿ,ಲಂಕೇಶ್, ತೇಜಸ್ವಿ, ಬೇಂದ್ರೆ, ದೇವನೂರರಂತೆಯೇ ಕನ್ನಡೇತರ ಲೇಖಕರಾದ ಮಾರ್ಕ್ವೆಜ್, ನೆರೂಡ, ಮಿಲನ್ ಕುಂದೇರಾ ಕೂಡ ದೊಡ್ಡ ಲೇಖಕರು ಎಂಬ ಅರಿವು ಕೂಡ ನಮಗೆ ಬೇಕು. ಇದನ್ನು ಗ್ರಹಿಸುವಲ್ಲಿ ಅನೇಕರು ಸ್ಥಗಿತಗೊಂಡಿದ್ದಾರೆ ಅನ್ನಿಸುತ್ತದೆ. 

ಬರಹಗಾರರ ಮೇಲೆ ಇರುತ್ತಿದ್ದ ಪಾಶ್ಚಾತ್ಯ ಸಾಹಿತ್ಯ ಸಿದ್ಧಾಂತಗಳ ಪ್ರಭಾವ ಇಂದು ಆ ಮಟ್ಟಕ್ಕಿಲ್ಲ. ಈ ಕುರಿತು ಏನು ಹೇಳುತ್ತೀರಿ? 
ಪ್ರಾಯಶಃ ಕನ್ನಡಸಂಸ್ಕೃತಿ ತನ್ನನ್ನು ತಾನು ಸ್ವಯಂಪೂರ್ಣ ಎಂದುಕೊಂಡಿರಬಹುದು.ಆದರೆ,ನೋಮ್ ಚಾಮ್‌ಸ್ಕಿಯಂತಹ ಈ ಕಾಲದ ದೊಡ್ಡ ಸಿದ್ಧಾಂತಿಗಳಿದ್ದಾರೆ. ಅವರಿಂದ ನಾವು ಪಡೆಯದಿದ್ದರೆ ಹೇಗೆ?ಇಂದು  ಸಾಹಿತ್ಯದಲ್ಲಿ ಪೂರ್ವ,ಪಶ್ಚಿಮಗಳ ಕಲ್ಪನೆ ಹಿಂದಿನಂತೆ ಇಲ್ಲ. ಯೂರೋಪಿನ ಕಾರ್ಲ್‌ಮಾರ್ಕ್ಸ್ ಸಮಾಜವನ್ನು ನಿರ್ದಿಷ್ಟ ದಿಕ್ಕುಗಳಿಂದ ವಿವರಿಸದಿದ್ದಲ್ಲಿ ನಂತರ ಲೋಹಿಯಾ, ಅಂಬೇಡ್ಕರ್‌ರಿಗಾಗಲೀ, ಸ್ತ್ರೀವಾದಿಗಳಿಗಾಗಲೀ, ಚಾಮ್‌ಸ್ಕಿಯಂತವರಿಗಾಗಲೀ ಹೊಸ ಹಾದಿಗಳು ತೆರೆಯುತ್ತಲೇ ಇರಲಿಲ್ಲ. ವಿಮೋಚನಾ ಸಿದ್ಧಾಂತ ಜಗತ್ತಿನ ಯಾವುದೇ ಮೂಲೆಯಿಂದ ಬರಲಿ,ಅದನ್ನು ನಾವು ಸ್ವೀಕರಿಸಬೇಕಾಗುತ್ತದೆ. ಈಗಿನ ವಸಾಹತೋತ್ತರ ಸನ್ನಿವೇಶವನ್ನು ವಿವರಿಸಲು ಕನ್ನಡದಲ್ಲೇ ಹೆಚ್ಚು ಥಿಯರಿಗಳಿವೆ ಎಂದು ನಾನು ತಿಳಿದಿಲ್ಲ. ಇದೇ ಕಾಲದಲ್ಲೇ ಇರುವ ಆಫ್ರಿಕಾದ ಗೂಗಿ ವಾ ಥಿಯಾಂಗೋ, ಚಿನುವಾ ಅಚಿಬೆ ಕೂಡ ಸಿದ್ಧಾಂತಗಳನ್ನು ಕಟ್ಟುತ್ತಿದ್ದಾರಲ್ಲ? ಎಡ್ವರ್ಡ್ ಸೈದ್ ಪ್ಯಾಲೆಸ್ತೀನಿಯರ ಪರವಾಗಿ ಚಿಂತಿಸ್ತಾ ಇದ್ದರಲ್ಲ? ಪೂರ್ವ, ಪಶ್ಚಿಮ ಎನ್ನುವ ಆಯ್ಕೆ ಕೂಡ ಅನೇಕ ಸಲ ಅವರವರ ಅಭಿರುಚಿ, ಸಂವೇದನೆಗೆ ಬಿಟ್ಟಿದ್ದು. ಉದಾಹರಣೆಗೆ ನನ್ನ ಹದಿನೇಳನೇ ವಯಸ್ಸಿನಲ್ಲಿ ಸಿಕ್ಕಿದ ಆಲ್ಬರ್ಟ್ ಕಾಮುವಿನ ’ಅನ್ಯ’ ನನ್ನನ್ನು ಎಲ್ಲೆಲ್ಲೋ ಕರೆದುಕೊಂಡು ಹೋಯಿತು. ನಮಗೆ ವ್ಯಕ್ತಿಯ ವರ್ತನೆಯನ್ನು ಅರಿಯುವುದಕ್ಕೆ ದೇವನೂರರ ’ದತ್ತ’, ಅನಂತಮೂರ್ತಿಯವರ ’ಕಾರ್ತೀಕ’, ತೇಜಸ್ವಿಯವರ ’ಸ್ವರೂಪ’...ಹೀಗೆ ಎಲ್ಲ ಕತೆಗಳೂ ಬೇಕು;ಹಾಗೆಯೇ ಕಾಫ್ಕಾನ  ’ದ ಟ್ರಯಲ್’ ಕೂಡ ಬೇಕು.ಇವತ್ತು ಜಗತ್ತಿನ ಶ್ರೇಷ್ಠ ಲೇಖಕ ಮಾರ್ಕ್ವೆಜ್ ನಮ್ಮೊಂದಿಗಿದ್ದಾರೆ. ಝೆಕೋಸ್ಲವಾಕಿಯಾದ ಮಿಲನ್ ಕುಂದೇರ ನನಗೆ ಪ್ರಿಯವಾದ ಲೇಖಕ. ಅವರೊಂದಿಗೂ ನಾವು ಮಾತಾಡಿಕೊಳ್ಳಬೇಕಲ್ಲವೇ? ನಾವು ಪಶ್ಚಿಮದಿಂದ ಏನನ್ನೂ ಪಡೆಯಬಾರದು ಎಂದು ಒಂದು ತಡೆ ನಿರ್ಮಿಸಿಕೊಂಡು ಬಿಟ್ಟಿದ್ದೇವೆ.  ಆದರೆ ಪಶ್ಚಿಮ  ಎನ್ನುವುದು ಇಂದು ಏನೇನೋ ಆಗಿಬಿಟ್ಟಿದೆ. ಇಂದು ಇಂಗ್ಲೆಂಡ್‌ನಿಂದ ಯಾವ ದೊಡ್ಡ ಬರಹಗಾರನೂ ಬರುತ್ತಿಲ್ಲ. ಆದರೆ ಇಸ್ತಾನ್‌ಬುಲ್‌ನ ಒರಾನ್ ಪಾಮುಕ್ ಬರೆಯುತ್ತಿರುವುದು ನನಗೆ ಬಹಳ ಮುಖ್ಯ ಅನ್ನಿಸ್ತಿದೆಯಲ್ಲ? 

ಬರಹಗಾರನಾದವನು ತನ್ನ ಅನುಭವಗಳಿಗೆ ನಿಷ್ಠನಾಗಿರಬೇಕೋ ಅಥವಾ ಸಮಾಜಕ್ಕೋ? 
ಇದು ಯಾವತ್ತಿಗೂ ದೊಡ್ಡ ಪ್ರಶ್ನೆಯೇ. ನನ್ನ ಪ್ರಕಾರ ಬರಹಗಾರ ತಾನು ಕಂಡ ಸತ್ಯಕ್ಕೆ ನಿಷ್ಠವಾಗಿರಬೇಕು; ಜೊತೆಗೆ ಆ ಸತ್ಯವನ್ನು ಪರೀಕ್ಷಿಸುತ್ತಿರಬೇಕು. ನಾನು ಕಂಡ ಸತ್ಯವನ್ನು ಬರೆಯಲು ಸ್ವಾತಂತ್ರ್ಯ ಇರುವುದು ಸಾಹಿತ್ಯದಲ್ಲಿ ಮಾತ್ರ. ಅದು ಪತ್ರಿಕೋದ್ಯಮದಲ್ಲಿಲ್ಲ, ಟೀವಿಯಲ್ಲಿಲ್ಲ, ಟೀಚಿಂಗ್‌ನಲ್ಲೂ ಇಲ್ಲ. ಸಾರ್ವಜನಿಕ ಜೀವನದಲ್ಲಂತೂ ಇಲ್ಲವೇ ಇಲ್ಲ. ಆಳವಾದ, ನಿಷ್ಠುರವಾದ ಸತ್ಯಗಳನ್ನು ಹೇಳುವುದಕ್ಕೆ ಉಳಿದಿರುವ ಏಕಮಾತ್ರ ವೇದಿಕೆ ಸಾಹಿತ್ಯ. 

ಲೇಖಕರಿಗೆ ಸಾಮಾಜಿಕ ಬದ್ಧತೆ ಎಂಬುದೊಂದು ಇರಬಾರದೇ?
ಜವಾಬ್ದಾರಿ ಇರಲೇಬೇಕು. ಬದ್ಧತೆ ಎನ್ನುವುದು ಬಹಳ ವಿಸ್ತಾರವಾದ,ಸೂಕ್ಷ್ಮವಾದ ಪ್ರಶ್ನೆ.ನಮಗೆ ಯಾವುದೋ ಒಂದರ ಬಗೆಗೆ ಬದ್ಧತೆ ಇದೆ ಎನ್ನುವ ಕಾರಣಕ್ಕೆ ಸಾಹಿತ್ಯ ರಚನೆಯಲ್ಲಿ ಕೆಲವು ರೀತಿಯ ಪೂರ್ವಗ್ರಹ, ಪಕ್ಷಪಾತಗಳನ್ನು ಮಾಡಬಾರದು. ಅದು ಸಾಹಿತ್ಯರಚನೆಯ ಮನೋಧರ್ಮಕ್ಕೆ ವಿರುದ್ಧವಾಗಿರುತ್ತದೆ. ಆದ್ದರಿಂದ ವ್ಯಕ್ತಿನಿಷ್ಠತೆಯೂ ಅಂತಿಮವಲ್ಲ, ಸಮಾಜ ನಿಷ್ಠತೆಯೂ ಅಂತಿಮವಲ್ಲ. ಎರಡೂ ಅತಿರೇಕಗಳು. 

ಸಾಹಿತ್ಯದಲ್ಲಿ ಹಲವಾರು ಸಂವೇದನೆಗಳನ್ನು ಕಂಡಿದ್ದೇವೆ. ಇಂದು ಒಂದು ಬಗೆಯ ನಿರ್ದಿಷ್ಟ ಸಂವೇದನೆಯ ಚೌಕಟ್ಟಿಗೆ ಸಾಹಿತ್ಯವನ್ನು ಒಳಪಡಿಸಬಹುದಾ? 
ಇಂದು ಜನರು ವಾಸ್ತವವನ್ನು ನೋಡುವ ಕ್ರಮವೇ ಬದಲಾಗಿದೆ. ಇದಕ್ಕೆ ಕಾರಣ ಮಾರುಕಟ್ಟೆ. ಇದರ ಪ್ರಭಾವದಿಂದಾಗಿ ನಮ್ಮ ದಿನನಿತ್ಯದ ಭಾಷೆಯೊಳಗೆ ಒಂದು ಗಿಲೀಟು ಬಂದು ಸೇರಿಕೊಂಡಿದೆ. ಲಾಭ ಬರುವುದಿದ್ದರೆ ಯಾವ ಭಾಷೆಯನ್ನಾದರೂ ಬಳಸಬಹುದು ಎಂದು ಈಗ ನಂಬಿಸಲು ಯತ್ನಿಸಲಾಗುತ್ತಿದೆ. ’೧೯೨೦ರ ಸುಮಾರಿಗೆ  ಪಶ್ಚಿಮದ ಮನುಷ್ಯನ ಸ್ವಭಾವ ಬದಲಾಗಿದೆ’ ಎಂದು ವರ್ಜೀನಿಯಾ ವುಲ್ಫ್ ಹೇಳುತ್ತಿದ್ದರು. ತೊಂಬತ್ತರ ದಶಕದಲ್ಲಿ ಮನುಷ್ಯನ ಭಾಷೆ ಮತ್ತು ಸ್ವಭಾವ ಎರಡೂ ಬದಲಾಗಿರುವುದನ್ನು ನೋಡುತ್ತೇವೆ. ನಗರಗಳಲ್ಲಿ ಮತ್ತು ಸಣ್ಣ ಊರುಗಳಲ್ಲಿ ಮೊಬೈಲ್ ಬಳಕೆ ಹೆಚ್ಚಿದ ಮೇಲೆ ನಾವು ಅಗತ್ಯವೇ ಇಲ್ಲದೇ ಸುಳ್ಳು ಹೇಳುತ್ತಿದ್ದೇವಲ್ಲವೇ? ಆದ್ದರಿಂದ ಒಂದು ಕತೆಯಲ್ಲಿ ಅನುಭವವನ್ನು ಶೋಧಿಸುವಾಗ ಮನುಷ್ಯವರ್ತನೆಯ ಸರಿ-ತಪ್ಪುಗಳನ್ನು ಪುರಾಣಗಳ ಕಾಲದ ರೀತಿ ಗೆರೆ ಕೊಯ್ದು ಹೇಳುವುದು ಕಷ್ಟ. ನೀತಿ, ಅನೀತಿ, ಭ್ರಷ್ಟತೆ ಮುಂತಾದವನ್ನು ಬಹಳ ಸಂಕೀರ್ಣವಾಗಿ ನೋಡುವ ಸ್ಥಿತಿ ಬಂದಿದೆ. ಇದನ್ನೆಲ್ಲಾ ಶೋಧನೆ ಮಾಡಲು ಸಾಹಿತ್ಯದಲ್ಲಿ ಹೆಚ್ಚು ಅವಕಾಶ ಇದೆ. ಇನ್ನು ವಿಶಿಷ್ಟ ಸಂವೇದನೆಗಳ ವಿಷಯಕ್ಕೆ ಬಂದರೆ, ಇಂದು ದಲಿತ ಸಂವೇದನೆ ಒಂದು ಪ್ರತ್ಯೇಕವಾದ ವಿಶಿಷ್ಟ ಸಂವೇದನೆ ಎನ್ನಿಸುವುದಿಲ್ಲ. ಯಾಕೆಂದರೆ ಈಗ ಅದನ್ನು ಎಲ್ಲ ಪ್ರಗತಿಪರರೂ ಒಪ್ಪಿಕೊಂಡಿದ್ದಾರೆ. ಇಂದು ದಲಿತ ಸಂವೇದನೆಯನ್ನು ದಲಿತೇತರ ಬರಹಗಾರರೂ, ಮಹಿಳಾ ಸಂವೇದನೆಯನ್ನು ಪುರುಷ ಬರಹಗಾರರೂ ಸ್ವೀಕರಿಸುತ್ತಿದ್ದಾರೆ. ತೇಜಸ್ವಿಯವರ ’ಕಿರಗೂರಿನ ಗಯ್ಯಾಳಿಗಳು’ ಅಥವಾ ಮಹಾದೇವರ ’ಒಡಲಾಳ’ದ ಸಾಕವ್ವನ ಸೃಷ್ಟಿಗೆ ಸ್ತ್ರೀವಾದವೂ ಕಾರಣವಾಗಿದೆ. ಹೀಗಾಗಿ ಒಂದು ಕಾಲದಲ್ಲಿ ಒಂದು ನಿರ್ದಿಷ್ಟ ಸಂವೇದನೆ ಬೆಳೆದು ಕ್ರಮೇಣ ಅದು ಎಲ್ಲ ಲೇಖಕ,ಲೇಖಕಿಯರಿಗೂ ಹಬ್ಬಿ ಕನ್ನಡ ಸಾಹಿತ್ಯ ಸಂವೇದನೆಯಲ್ಲಿ ಬೆರೆತು ಹೋಗುತ್ತದೆ. 
ಲೇಖಕಿಯರ  ಸಂಖ್ಯೆ ಹಿಂದೆಂದಿಗಿಂತ ಹೆಚ್ಚಿರುವ ಇಂದಿನ ಸಂದರ್ಭದಲ್ಲಿ ಸ್ತ್ರೀವಾದ ಯಾವ ದಿಕ್ಕಿನಲ್ಲಿ ವಿಸ್ತರಿಸಿಕೊಂಡಿದೆ?
ಇವತ್ತಿನ ಸ್ತ್ರೀವಾದ ಹೊಸ ಹೊಸ ಅಧಿಕಾರ ಕೇಂದ್ರಗಳನ್ನು ಗುರುತಿಸುವ ಪ್ರಯತ್ನದಲ್ಲಿದೆ. ಇಂದು ದಲಿತ ಸ್ತ್ರೀವಾದ ಬರುತ್ತಿದೆ. ಪರಿಸರಕ್ಕೆ ಸಂಬಂಧಿಸಿದ  ಸ್ತ್ರೀವಾದ ಬರುತ್ತಿದೆ. ಭಾರತೀಯ ನೆಲದಲ್ಲೇ ದಲಿತ, ಹಿಂದುಳಿದ ವರ್ಗಗಳ ಮಹಿಳೆಯರ ಕಷ್ಟಗಳು ಬೇರೆ ಬೇರೆ ರೀತಿ ಇದೆ. ಅದಕ್ಕೆ ತಕ್ಕಂತೆ ಸ್ತ್ರೀವಾದವೂ ವಿಸ್ತರಿಸುತ್ತಿದೆ. ದುಡಿಯುವ ವರ್ಗದ ಬಡ ಮಹಿಳೆಯರ ದೃಷ್ಟಿಯಿಂದ ಸ್ತ್ರೀವಾದವನ್ನು ವ್ಯಾಖ್ಯಾನಿಸುವ ಅಗತ್ಯವೂ ಇದೆ. ಐವತ್ತರ ದಶಕದಲ್ಲಿ ಸ್ತ್ರೀವಾದ ಹೇಗಿತ್ತೋ ಅದೇ ರೀತಿ ಇಂದು ಇಲ್ಲ. 


ಒಂದು ಕಾಲದಲ್ಲಿ ತಾವು ಪ್ರತಿನಿಧಿಸಿದ ಆಶಯಗಳಿಗೇ ವಿರುದ್ಧವಾದ ಸ್ಥಾನದಲ್ಲಿ ಸಿದ್ಧಲಿಂಗಯ್ಯನವರಂತಹ ಸಾಹಿತಿ ನಿಂತಿದ್ದಾರಲ್ಲ?
ಬರಹಗಾರರು ಅಧಿಕಾರ ಮತ್ತು ಅಧಿಕಾರಸ್ಥರನ್ನು ವಿಮರ್ಶೆಗೆ ಒಳಪಡಿಸುವ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲಾಗದಿದ್ದರೆ ತಮ್ಮ ಬರವಣಿಗೆಯ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಾರೆ. ಆಗ ಬರವಣಿಗೆಯಲ್ಲೂ ಸಾರ್ವಜನಿಕತೆ ನುಸುಳುತ್ತದೆ. ಬರಹಗಾರನೊಬ್ಬ ತಾನು ಪ್ರತಿನಿಧಿಸಿದ ಆಶಯಗಳಿಗೆ ವಿರುದ್ಧವಾಗಿ ಹೋದಾಗ ಅವರನ್ನು ಒಪ್ಪಿಕೊಂಡು ಬಂದ ಓದುಗರಿಗೆ ನಿರಾಸೆ ಅಥವಾ ಅಸಹನೆ ಖಂಡಿತಾ ಹುಟ್ಟುತ್ತದೆ. ಪ್ರತಿ ಬರಹಗಾರನೂ ಸಹ ತನಗೆ ಸಾಹಿತ್ಯ ಮುಖ್ಯವೋ ಅಥವಾ  ಯಾವುದೋ ಅಧಿಕಾರ ಬೇಕೋ ಎಂಬ ಬಗ್ಗೆ ಖಚಿತವಾಗಿರಬೇಕು.ಮೌಲ್ಯಗಳನ್ನು ಪ್ರತಿಪಾದಿಸುವವರು, ಸಾಹಿತಿಗಳು ಅಧಿಕಾರಕ್ಕೆ, ರಾಜಕಾರಣಕ್ಕೆ ಹೋಗುವುದು ತಪ್ಪಲ್ಲ. ಒಬ್ಬ ಅರ್ಥಶಾಸ್ತ್ರಜ್ಞ, ಒಬ್ಬ ಸಾಫ್ಟ್‌ವೇರ್ ತಂತ್ರಜ್ಞ ಅಥವಾ ಒಬ್ಬ ಸ್ತ್ರೀವಾದಿ ವಿಧಾನ ಸೌಧಕ್ಕೆ ಹೋಗಬೇಕು. ಅದು ಒಳ್ಳೆಯದು ಕೂಡ. ಆದರೆ ಹಾಗೆ ಹೋದವರು ತಮ್ಮ ನಿಲುವು ಹಾಗೂ ಭಾಷೆಗಳನ್ನು ಬಳಸಬೇಕು.ಅದಕ್ಕೆ ಬದಲಾಗಿ ಅಲ್ಲಿನವರು ಕೊಟ್ಟ ಭಾಷೆಯಲ್ಲಿ ಅವರು ಮಾತನಾಡಲಾರಂಭಿಸುವುದು  ದುರದೃಷ್ಟಕರ. 

ಬರಹಗಾರನೊಬ್ಬನ ಬರಹ  ಮತ್ತು ಆತನ ವ್ಯಕ್ತಿತ್ವಗಳಲ್ಲಿ ವೈರುಧ್ಯಗಳು ಕಾಣಿಸಿಕೊಂಡಾಗ ಓದುಗರಾದವರು ಹೇಗೆ ಪ್ರತಿಕ್ರಿಯಿಸಬೇಕೆನ್ನುತ್ತೀರಿ?

ಬರಹ ಎನ್ನುವುದು ವ್ಯಕ್ತಿತ್ವದ ವಿಸ್ತರಣೆಯೂ ಹೌದು. ಬರಹಗಾರ ಒಂದು ರೀತಿಯ ಗಾಢ ಆಶಯಗಳನ್ನು ಕೃತಿಯಲ್ಲಿ ಬರೆದು, ಅದಕ್ಕೆ ತದ್ವಿರುದ್ಧವಾಗಿ  ನಡೆಯುವುದು ಸರಿಯಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುತ್ತದೆ. ಆದರೆ ನಮ್ಮ ಓದಿನ ಕ್ರಮದಲ್ಲಿ ಕೃತಿಯನ್ನು ಕೃತಿಕಾರನಿಂದ ಬಿಡಿಸಿಕೊಂಡು ಸ್ವತಂತ್ರವಾಗಿ ಓದಬೇಕು. ಎಷ್ಟೋ ಸಲ ಒಬ್ಬ ಬರಹಗಾರ ತನ್ನ ಹಳೆಯ ನಿಲುವುಗಳನ್ನು ಬದಲಿಸಿಕೊಂಡು ಮುಂದೆ ಹೋದಾಗಲೂ ನಾವು ಆತ ಮೊದಲಿನ ರೀತಿಯಲ್ಲಿಯೇ ಬರೆಯಬೇಕೆಂದು ನಿರೀಕ್ಷಿಸುತ್ತೇವೆ. ಈ ಥರದ ಓದುಗರ ಸರ್ವಾಧಿಕಾರವೂ ಬಹಳ ವಿಚಿತ್ರವಾಗಿರಬಲ್ಲದು. ಹೀಗಾಗಿ ನಾವು ಬಲ್ಲ ಬರಹಗಾರನ ವ್ಯಕ್ತಿತ್ವಕ್ಕೂ ಅವನ ಸಾಹಿತ್ಯ ಕೃತಿಗೂ ವೈರುಧ್ಯ ಏರ್ಪಟ್ಟಾಗ ನಾವು ಆ ಕೃತಿ ಹೇಳುವ ಸತ್ಯವನ್ನೇ ಹೆಚ್ಚು ಅವಲಂಬಿಸಬೇಕು. ಆದರೆ ಕೃತಿಯಾಚೆಗೆ ಲೇಖಕನ ಸಾಮಾಜಿಕ ನಿಲುವಿನಲ್ಲಿ ವೈರುಧ್ಯಗಳು ಕಂಡಾಗ ಖಂಡಿತ ಪ್ರಶ್ನೆ ಮಾಡಬೇಕಾಗುತ್ತದೆ. ಆದರೆ ಮನುಷ್ಯ ಎಂದರೆ ವಿರೋಧಾಭಾಸಗಳ ಮೊತ್ತ ಎಂಬ ಸತ್ಯವನ್ನೂ ನಾವು ಮರೆಯಬಾರದು. 

ಶಿಕ್ಷಣ ಹಕ್ಕು ಕಾಯ್ದೆಯ ಅನುಷ್ಠಾನದಲ್ಲಿ ಆಡಳಿತ ಮಂಡಳಿಗಳು ಹಿಂದೇಟು ಹಾಕುತ್ತಿವೆಯಲ್ಲ?
ಅವಕಾಶ ಇಲ್ಲದವರಿಗೆ ಅವಕಾಶ ನೀಡದಿದ್ದರೆ ಮುಂದೆ ದೊಡ್ಡ ದಂಗೆಯೇ ಆಗುತ್ತದೆ ಎಂದು ಸರ್ಕಾರವೇ ಎಚ್ಚೆತ್ತುಕೊಂಡಿದೆ. ಆದರೆ ಇಂದು ಖಾಸಗಿ ಆಡಳಿತ ಮಂಡಳಿಗಳು ತಮ್ಮ ವರ್ಗಹಿತಾಸಕ್ತಿಯ ಕಾರಣದಿಂದ  ಶಿಕ್ಷಣ ಹಕ್ಕು ಕಾಯ್ದೆಗೆ ವಿರೋಧ ವ್ಯಕ್ತಪಡಿಸುತ್ತಿವೆ. ಇದರಲ್ಲಿ ಜಾತೀಯತೆಯೂ ಇದೆ. ಆದರೆ ಈ ಕಾಯ್ದೆ  ಸರಿಯಾಗಿ ಜಾರಿಯಾಗದಿದ್ದಲ್ಲಿ ಒಂದು ಆಂದೋಲನವೇ ಸೃಷ್ಟಿಯಾಗಬೇಕಾಗುತ್ತದೆ. ಈ ಕಾಯ್ದೆಯಲ್ಲಿ ಲೋಪದೋಷಗಳಿವೆಯೇ ಎನ್ನುವುದನ್ನು ನಂತರ ನೋಡೋಣ. ಮೊದಲು ಅದು ಜಾರಿಯಾಗುವಂತೆ ನೋಡಬೇಕಾದ್ದು ಜಾಗೃತ ಶಕ್ತಿಗಳ ಕೆಲಸ. 

ಯಾವುದೇ ಸಾಹಿತ್ಯ ಚಳವಳಿಗಳಿಲ್ಲದಿರುವ ಈ ಕಾಲ ಬರೆಯುವವರಿಗೆ ಪೂರಕವೇ? 
ಸಾಮಾನ್ಯವಾಗಿ ದೊಡ್ಡ ವಾಗ್ವಾದಗಳು ನಡೆಯುವುದು ಒಂದು ಸಾಹಿತ್ಯ ಚಳವಳಿ ಹುಟ್ಟುವ ಸಮಯದಲ್ಲಿ. ಆದರೆ ಈ ಕಾಲದಲ್ಲಿ ಎಲ್ಲಾ ಸಾಹಿತ್ಯ ಚಳವಳಿಗಳ ಮಾದರಿಗಳೂ ಇರುವಂತೆ ನಮಗೆ ಕಾಣುತ್ತದೆ. ನಿರ್ದಿಷ್ಟ ಸಾಹಿತ್ಯ ಚಳವಳಿ ಇಲ್ಲದಿರುವುದು ಕೂಡ ಬರೆಯುವವರ ದೃಷ್ಟಿಯಿಂದ ಒಳ್ಳೆಯದೇ ಆಗಬಹುದಲ್ಲ? ಒಂದು ಸಾಹಿತ್ಯ ಚಳವಳಿ ಇದ್ದಾಗ ಯಾವುದೋ ಕಟ್ಟುಪಾಡುಗಳಿಗೆ ಒಳಗಾಗಿ ಬರೆಯುವ ಒತ್ತಡವಿರಬಹುದು. ಅದಿಲ್ಲದಿದ್ದಾಗ ಯಾವುದೇ ಆತಂಕವಿಲ್ಲದೆ ಪ್ರಯೋಗಗಳನ್ನು ನಡೆಸಬಹುದು. ಈ ಕಾಲವನ್ನು ನವಪ್ರಯೋಗಗಳ ಕಾಲ ಅಂತಲೂ ಕರೆಯಬಹುದು. 




ಸಾಮಾಜಿಕ ಚಳವಳಿಗಳು ವಿಘಟಿತಗೊಂಡಿರುವುದಕ್ಕೆ ಯಾರು ಕಾರಣ? 
ಚಳವಳಿಗಳು ಯಾವಾಗಲೂ ಒಂದೇ ರೀತಿ ನಡೀತಾ ಇರಲ್ಲ. ಕೆಲವೊಮ್ಮೆ ಚಳವಳಿಗಳು ಹೊಸ ರೂಪ ಪಡೆಯುತ್ತವೆ. ಇಂದು ಚಳವಳಿಗಳು ಒಡೆಯುವುದಕ್ಕೆ ಅನೇಕ ಶಕ್ತಿಗಳು  ಕಾರಣವಿರಬಹುದು. ಕೆಲವರಿಗೆ ಚಳವಳಿಗಳ ಬಗ್ಗೆ ನಂಬಿಕೆಗಳು ಕುಸಿದಿರಬಹುದಾದರೂ ಹೊಸ ತಲೆಮಾರುಗಳಿಗೆ  ಈ ಬಗ್ಗೆ ನಿರೀಕ್ಷೆ ಇದ್ದೇ ಇರುತ್ತದೆ. ಆದರೆ ಅದನ್ನು ಸಾಕಾರಗೊಳಿಸುವ ಪಡೆ ಹೊಸ ತಲೆಮಾರಿನಲ್ಲೂ ಹುಟ್ಟಬೇಕು. ಅದಕ್ಕೆ ಪೂರಕವಾದ ಒಂದು ಇಶ್ಯೂ  ಹುಟ್ಟಬೇಕು. ಸಮಾಜದ ಹಲವಾರು ವಲಯಗಳಲ್ಲಿ ಈ ಚಳವಳಿಯ ಶಕ್ತಿಗಳು ಇವೆ. ಆದರೆ ದೊಡ್ಡ ಮಟ್ಟದಲ್ಲಿ ಇವು ಒಂದಾಗಿ ಕ್ರಿಯೆಗಿಳಿಯುವ ಸಾಧ್ಯತೆಗಳು ಎದ್ದು ಕಾಣುತ್ತಿಲ್ಲ. ಹಾಗೆಯೇ ಚಳವಳಿಗಳಿಗೆ ಹಲವು ದಿಕ್ಕುಗಳಿಂದ ಬರುತ್ತಿದ್ದ ಬೆಂಬಲ ನಿಂತುಹೋಗಿದೆ. ನಮ್ಮ ಮಾಧ್ಯಮಗಳಿಗೆ  ಈ ಇಶ್ಯೂಗಳು ಮುಖ್ಯ ಎನ್ನಿಸುತ್ತಿಲ್ಲ ಅಥವಾ ಅವು ಚಳವಳಿಗಳ ಬಗ್ಗೆ ಸಿನಿಕತೆ ಬೆಳೆಸಿಕೊಂಡಿವೆ.’ಇಷ್ಟೊಂದು ದಲಿತ ಗುಂಪುಗಳಿವೆ; ನಾವು ಇವರ ಸುದ್ದಿ ಏನು ಹಾಕೋದು?’ ಎನ್ನುವ ಧೋರಣೆ ಕೆಲವು ಪತ್ರಿಕೆಗಳಲ್ಲಿದೆ. ಆದರೆ, ಇಷ್ಟೊಂದು ಜಾತಿ,ಧರ್ಮಗಳ ಗುಂಪುಗಳ ಸುದ್ದಿಗಳನ್ನು ಪ್ರಕಟಿಸುವಾಗ  ಅವರು ಈ ಪ್ರಶ್ನೆಯನ್ನು ಕೇಳಿಕೊಳ್ಳುತ್ತಿಲ್ಲ. ನಮ್ಮ ಮಾಧ್ಯಮಗಳಲ್ಲಿ ಚಳವಳಿಗಳ ಬಗ್ಗೆ ಅಭಿಪ್ರಾಯ ರೂಪಿಸುವ ಕೆಲಸ ನಡೆಯುತ್ತಿಲ್ಲ. ಹಾಗೆಯೇ ಚಳವಳಿಗಳಿಗೆ ಕಾಲೇಜು, ಯೂನಿವರ್ಸಿಟಿಗಳಿಂದ ಒದಗುತ್ತಿದ್ದ ದೊಡ್ಡ ಬೌದ್ಧಿಕ ಬೆಂಬಲ ನಿಂತುಹೋಗಿದೆ. ಚಳವಳಿಗಳು ಹಿನ್ನೆಲೆಗೆ ಸರಿಯಲು ಚಳವಳಿಗಾರರು ಮಾತ್ರ  ಕಾರಣವಲ್ಲ. ಅವರು ಚಳವಳಿಗಳನ್ನೇ ಮಾಡಿಕೊಂಡಿರಲಿ ಎಂದು ನಾವು ಅವರನ್ನು ನೇಮಿಸಿಲ್ಲ ಮತ್ತು ಹಾಗೆ ಹೇಳಲು ನನಗೆ ಹಕ್ಕಿಲ್ಲ. ನಾನು ಸಂಬಳ ತೆಗೆದುಕೊಳ್ಳುತ್ತೇನೆ.ಚಳವಳಿಗಾರರಿಗೆ ಸಂಬಳ ಬರುತ್ತಿಲ್ಲವಲ್ಲ?ಅದರ ಜೊತೆಗೆ, ಚಳವಳಿಗಳಿಗೆ ಹಿಂದಿನಂತೆ ತಾತ್ವಿಕ ಸ್ಪೂರ್ತಿಮೂಲಗಳೂ ಕಡಿಮೆಯಾಗಿವೆ. ಉಳಿದ ವರ್ಗಗಳು ತಾವು ಆರಾಮಾಗಿದ್ದು, ಚಳವಳಿಗಾರರ ಮೇಲೆಯೇ ಎಲ್ಲ ಹೊಣೆ ಹೊರಿಸಿ ಅವರು ಮಾತ್ರ ಈ ಕೆಲಸ ಮಾಡಬೇಕು ಎನ್ನುವುದು ಸರಿಯಲ್ಲ. 

ಲೋಹಿಯಾವಾದ ಒಂದು ಸಾಮಾಜಿಕ ತತ್ವವಾಗಿ ಕರ್ನಾಟಕದಲ್ಲಿ ಬೀರಿರುವ ಪರಿಣಾಮ ಎಂಥದ್ದು?  
ನಮ್ಮ ರೈತ ಚಳವಳಿ ಮಹಾರಾಷ್ಟ್ರ ಅಥವಾ ಉತ್ತರ ಪ್ರದೇಶದ ರೈತ ಚಳವಳಿಗಿಂತ ಭಿನ್ನವಾಗಿರಲು ಅದನ್ನು ಇಲ್ಲಿ ಮುನ್ನಡೆಸಿದ ನಂಜುಂಡಸ್ವಾಮಿಯವರು ಲೋಹಿಯಾವಾದಿಯಾಗಿದ್ದು ಕೂಡ ಕಾರಣ. ರೈತರನ್ನು ಒಂದು ವರ್ಗವಾಗಿ ರೂಪಿಸಿ ವ್ಯವಸ್ಥೆಯ ವಿರುದ್ಧದ ಚಳವಳಿಗೆ ತೊಡಗಿಸುವುದು ಲೋಹಿಯಾರ ಕನಸಾಗಿತ್ತು. ನಂಜುಂಡಸ್ವಾಮಿ ಅದನ್ನು ಇಲ್ಲಿ ಸಾಕಾರಗೊಳಿಸಿದರು. ಅವರು ದಲಿತ ಚಳವಳಿಯ ಪ್ರೇರಕರಲ್ಲೊಬ್ಬರಾಗಿದ್ದರು. ದಲಿತ ಸಂಘರ್ಷ ಸಮಿತಿಯಲ್ಲಿ ಲೋಹಿಯಾವಾದವೂ ಇದ್ದುದರಿಂದ ಅದು ಎಲ್ಲ ವರ್ಗದವರನ್ನೂ ಒಳಗೊಳ್ಳಲು ಸಾಧ್ಯವಾಯಿತು. ಹಾಗೆಯೇ ಸಾಹಿತಿಗಳು ನೋಡುವ ಕ್ರಮವನ್ನೇ ಅದು ಬದಲಿಸಿತು. ಚಿಂತಕರು, ಬರಹಗಾರರು ಲೋಹಿಯಾ ಚಿಂತನೆಯನ್ನು ತಾವೇ ಹುಡುಕಿಕೊಂಡು ಹೋಗಿ ಪ್ರಸಾರ ಮಾಡಿದ ಕಾಲದಲ್ಲಿ ಅದು ಹೆಚ್ಚು ಪ್ರಭಾವಶಾಲಿಯಾಗಿತ್ತು. ಆದರೆ ಸರ್ಕಾರವೇ ಕನ್ನಡ ಸಂಸ್ಕೃತಿ ಇಲಾಖೆಯಿಂದ ಲೋಹಿಯಾ ಕೃತಿಗಳನ್ನು ತಂದಾಗ (ಅದರ ಸಂಪಾದಕನಾಗಿ ನಾನು ಹೇಳುತ್ತಿರುವ ಮಾತಿದು) ಅದರ ಪ್ರಭಾವ ಕಡಿಮೆ ಎನಿಸುತ್ತದೆ. ಲೋಹಿಯಾವಾದವನ್ನು ಕೂಡ ನಾವು ಮರು ಓದಿಗೆ ಒಳಪಡಿಸಬೇಕು. ಪ್ರತಿ ತಲೆಮಾರಿನವರೂ ತಮ್ಮ ಲೋಹಿಯಾ, ತಮ್ಮ ಅಂಬೇಡ್ಕರ್‌ರನ್ನು ಹುಡುಕಿಕೊಳ್ಳಬೇಕಾಗುತ್ತದೆ.   

ನಿಮ್ಮ ಮೇಲೆ ಪ್ರಭಾವ ಬೀರಿದ ಕನ್ನಡದ ಲೇಖಕ ಮತ್ತು ಜಾಗತಿಕ ಲೇಖಕರು ಯಾರು? 
ನನಗೆ ಹದಿ ಹರೆಯದಲ್ಲಿ ಬಹಳ ಪ್ರಭಾವ ಬೀರಿದವನು ಆಲ್ಬರ್ಟ್ ಕಾಮು. ಆ ನಂತರ, ವ್ಯಕ್ತಿಗಳ ವರ್ತನೆಗಳನ್ನು, ಅನೇಕ ಬಗೆಯ ಸತ್ಯಗಳನ್ನು ಅರ್ಥ ಮಾಡಿಕೊಳ್ಳಲು ಶೇಕ್ಸ್‌ಪಿಯರ್ ನೆರವಾಗಿದ್ದಾನೆ. ಕನ್ನಡದಲ್ಲಿ ಲಂಕೇಶ್. ನನ್ನ ಜೀವನದ ಕೆಲವು ಶ್ರೇಷ್ಠ ಗಳಿಗೆಗಳನ್ನು ಲಂಕೇಶರ ಜೊತೆ ಕಳೆದಿರುವ ಬಗ್ಗೆ ನನಗೆ ಖುಷಿ ಇದೆ. 

4 ಕಾಮೆಂಟ್‌ಗಳು:

sampada ಹೇಳಿದರು...

ನಟರಾಜ ಹುಳಿಯಾರ ಅವರಿಗೆ ಒಂದು ಮಾತು. ಇಂದಿನ ಸಾಹಿತ್ಯದಲ್ಲಿ ಬ್ರಷ್ಟಾಚಾರ, ಶೋಷಣೆ, ಕೋಮುವಾದ, ಭಯೋತ್ಪಾದನೆ,ಬಡತನದ ಹಸಿವು - ಇಂತ ಸಮಸ್ಯಯಗಳ ಕುರಿತಾಗಿ ಇಂದು ಸಾಹಿತ್ಯ ಸಂವೇದನೆ ಹೆಚ್ಚೆಚ್ಚು ಸ್ಪಂದಿಸಬೇಕಿದೆ.

ಅನಾಮಧೇಯ ಹೇಳಿದರು...

mahantesh patil

ಅನಾಮಧೇಯ ಹೇಳಿದರು...

mahantesh patil

sampada ಹೇಳಿದರು...

ನಟರಾಜ ಹುಳಿಯಾರ ಅವರಿಗೆ ಒಂದು ಮಾತು. ಇಂದಿನ ಸಾಹಿತ್ಯದಲ್ಲಿ ಬ್ರಷ್ಟಾಚಾರ, ಶೋಷಣೆ, ಕೋಮುವಾದ, ಭಯೋತ್ಪಾದನೆ,ಬಡತನದ ಹಸಿವು - ಇಂತ ಸಮಸ್ಯಯಗಳ ಕುರಿತಾಗಿ ಇಂದು ಸಾಹಿತ್ಯ ಸಂವೇದನೆ ಹೆಚ್ಚೆಚ್ಚು ಸ್ಪಂದಿಸಬೇಕಿದೆ.

 ಧರ್ಮ V/s ರಿಲಿಜನ್ ಧರ್ಮ ಎಂತರೆ ಒಳಿತು ಮಾಡುವುದು, ನೀತಿ ಮಾರ್ಗದಲ್ಲಿ ನಡೆಯುವುದು ಎಂದು ನೀವು ಭಾವಿಸುವುದಾದರೆ ಅಂತಹ ತತ್ವ ಹೇಳಿದ ಧರ್ಮಗಳು ಮೂರು. -  1. ಬೌದ್ಧ ಧರ್...

ಮರದೊಂದು ಎಲೆ ನಾನು..

ನನ್ನ ಫೋಟೋ
A Writer, Researcher, Journalist and Activist. Born and brought up from Kugwe a village near Sagara, Shimoga district of Karnataka state. Presently working as the Editor In Chief of PEEPAL MEDIA /PEEPAL TV.