ಮೈಸೂರು- ಮಾನಂತವಾಡಿ ಮಾರ್ಗದಲ್ಲಿ ನಾಗರಹೊಳೆ ಅಭಯಾರಣ್ಯದ ಕಾಕನಕೋಟೆ ಕಾಡಿನ ನಡುವೆ ಇರುವ ಆ ಜೇನುಕುರುಬರ ಹಾಡಿಯ ಹೆಸರು ಬಳ್ಳೇ ಹಾಡಿ. ಈ ಹಾಡಿಯ ಕೃಷ್ಣಪ್ಪ ಮತ್ತು ಲಕ್ಷ್ಮಿ ದಂಪತಿಗಳಿಗೆ ಇಬ್ಬರು ಹೆಣ್ಣುಮಕ್ಕಳು. ಒಬ್ಬ ಗಂಡುಮಗ. ಆತ ರಾಜೇಶ. ಇಂದು ಸುವರ್ಣ ವಾಹಿನಿಯ ಹಳ್ಳಿ ಹೈದ ಪ್ಯಾಟೆಗ್ ಬಂದ ರಿಯಾಲಿಟಿ ಶೋನಲ್ಲಿ ಗ್ರಾಂಡ್ ಫಿನಾಲೆವರೆಗೂ ಹೋಗಿ ವಿಜಯಿಯಾಗಿ ಬಂದು ನಂತರದಲ್ಲಿ ಇನ್ನೂ ಬಿಡುಗಡೆಯಾಗದ 'ಜಂಗಲ್ ಜಾಕಿ’ ಸಿನಿಮಾದಲ್ಲಿ ಐಶ್ವರ್ಯಳೊಂದಿಗೆ ನಟಿಸಿ, ಇದೀಗ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಮಾನಸಿಕ ಅನಾರೋಗ್ಯಕ್ಕೀಡಾಗಿ ಚಿಕಿತ್ಸೆ ಪಡೆಯುತ್ತಿರುವ ’ಹಳ್ಳಿ ಹೈದ’ನೇ ಈ ರಾಜೇಶ. ಕೆ.ಆರ್. ಆಸ್ಪತ್ರೆಯ ವೈದ್ಯರಾದ ಸುಧೀರ್ ಅವರು ಟಿಎಸ್‌ಐಗೆ ನೀಡಿದ ಮಾಹಿತಿಯ ಪ್ರಕಾರ ರಾಜೇಶ್‌ಗೆ ’ಅಕ್ಯೂಟ್ ಮೇನಿಯಾ’ ಅಟ್ಯಾಕ್ ಅಗಿದೆ. ಇದೊಂದು ರೋಗವೇನಲ್ಲ. ಆದರೆ ಮನಸ್ಸಿನಲ್ಲಿ ಉಂಟಾದ ತೀವ್ರ ಮಾನಸಿಕ ತಳಮಳ, ಹೊಯ್ದಾಟಗಳು ಒಬ್ಬ ವ್ಯಕ್ತಿಗೆ ಈ ಮಾನಸಿಕ ಅಸ್ವಸ್ಥತೆಯ್ನನು ಉಂಟು ಮಾಡುತ್ತದೆ ಎನ್ನುತ್ತಾರವರು. ಕಾಡಿನ ಹಾಡಿಯಲ್ಲಿ ತನ್ನ ಗೆಣೆಕಾರರೊಂದಿಗೆ ಸ್ವಚ್ಛಂದವಾಗಿ ಆಡಿಕೊಂಡಿದ್ದ ಜೇನುಕುರುಬರ ಹುಡುಗನೊಬ್ಬನಿಗೆ ಇಂತಹ ಪರಿಸ್ಥಿತಿ ಬರಲು ಕಾರಣಗಳೇನು? ಯಾರು ರಾಜೇಶನ ಇಂದಿನ ಈ ಸ್ಥಿತಿಗೆ ಕಾರಣರಾರು?
ಅದು ೨೦೧೦ನೇ ಇಸವಿಯ ಮೇ ತಿಂಗಳಿನಲ್ಲಿ ಸುವರ್ಣ ವಾಹಿನಿಯು ’ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು’ ಎಂಬ ರಿಯಾಲಿಟಿ ಶೋ ಸಾಕಷ್ಟು ಟಿಆರ್‌ಪಿ ಗಳಿಸಿಕೊಟ್ಟಿತ್ತು. ಅದರ ಹುರುಪಿನಲ್ಲೇ ’ಹಳ್ಳಿ ಹೈದ ಪ್ಯಾಟೆಗ್ ಬಂದ’ ಕಾರ್ಯಕ್ರಮವನ್ನು ಅಯೋಜಿಸಿದ ವಾಹಿನಿಯವರು ಅದಕ್ಕಾಗಿ ರಾಜ್ಯದ ನಾನಾ ಕಡೆಗಳ ಬುಡಕಟ್ಟು ಯುವಕ ಶಿಕಾರಿಗೆ ತೊಡಗಿಕೊಂಡರು. ಇದಕ್ಕಾಗಿ ಸೋಲಿಗ, ಸಿದ್ಧಿ, ಜೇನುಕುರುಬ ಆದಿವಾಸಿಗಳ ಸಂಘಟನೆಗಳ ಮುಖಂಡರನ್ನು ಸಂಪರ್ಕಿಸಿದರು. ಈ ಕಾರ್ಯಕ್ರಮದ ಮೂಲಕ ಆ ಬುಡಕಟ್ಟುಗಳ ಯುವಕರು ವಿಶ್ವಪ್ರಸಿದ್ಧರಾಗುತ್ತಾರೆಂದೂ, ಅವರ ಸಮಸ್ಯೆಗಳ ಬಗ್ಗೆಯೂ ಗಮನ ಸೆಳೆಯುತ್ತೇವೆಂದೂ ಹುರಿದುಂಬಿಸಲಾಯಿತು. ಇದನ್ನು ನಂಬಿದ ಬುಡಕಟ್ಟು ನಾಯಕರೂ ಸಹ ಸುವರ್ಣ ವಾಹಿನಿಗೆ ಬೇಕಾದ ಹುಡುಗರನ್ನು ಹುಡುಕಲು ನೆರವು ನೀಡಿದ್ದರು. ಈ ಪ್ರಕ್ರಿಯೆಯಲ್ಲೇ ಬುಡಕಟ್ಟು ಸಂಘದ ಸೋಮಣ್ಣ ಮತ್ತಿತರರೊಂದಿಗೆ ರಾಜೇಶ್ ಇರುವ ಹಾಡಿಗೂ ಈ ಪ್ಯಾಟೆ ಮಂದಿ ದಾಳಿ ನಡೆಸಿದ್ದರು.
ರಾಜೇಶ ಬಹಳ ನಾಚಿಕೆ ಸ್ವಭಾವದವನಾಗಿದ್ದನಲ್ಲದೆ ಹಾಡಿಯ ಇತರ ಹುಡಗರಂತೆಯೇ ಅತ್ಯಂತ ಮುಗ್ಧನೂ, ಗಟ್ಟಿಗನೂ ಆಗಿದ್ದ. ನಮಗೆ ಮೊಬೈಲ್ ಆಪರೇಟ್ ಮಾಡಲೂ ಗೊತ್ತಿರದ, ದಷ್ಟಪುಷ್ಟನಾಗಿರುವ ಅತ್ಯಂತ ಮುಗ್ಧ ಹುಡುಗ ಬೇಕು ಎಂದು ಹೇಳಿದ್ದರು ರಿಯಾಲಿಟಿ ಶೋ ಮುಖ್ಯಸ್ಥರು.. ಹೀಗಿರುವಾಗ ಇವರಿಗೆ ರಾಜೇಶನೇ ಒಳ್ಳೆಯ ಆಯ್ಕೆ ಎನ್ನಿಸಿದೆ. ಆದರೆ ಸಿಟಿ ಎಂದೊಡನೆ ಬೆಚ್ಚಿ ಬೀಳುತ್ತಿದ್ದ ರಾಜೇಶನನ್ನು ಅದು ಹೆಗೋ ಮುಖಂಡರೆಲ್ಲಾ ಸೇರಿ ’ಇಡೀ ಸಮುದಾಯಕ್ಕೇ ಒಳಿತಾಗುವ’ ಬಣ್ಣದ ಮಾತನಾಡಿ ಪುಸಲಾಯಿಸಿ ಒಪ್ಪಿಸಿದ್ದಾರು. ಕರೆದೊಯ್ಯುವ ದಿನ ಹರಕೆಯ ಕುರಿಗೆ ಸಿಂಗರಿಸುವಂತೆ ಹೂವಿನ ಹಾರ ಹಾಕಿ, ಹಾಡಿಯ ದೇವತೆ ಮಾಸ್ತ್ಯಮ್ಮನಿಗೆ ಪೂಜೆ ಮಾಡಿಸಿ ಜೀಪು ಹತ್ತಿಸಿದ್ದಾರೆ. ಇನ್ನೇನು ಜೀಪು ರಾಜೇಶನನ್ನು ಕೂರಿಸಿಕೊಂಡು ಹೊರಡಬೇಕು. ಅಷ್ಟರಲ್ಲಿ ಜೀಪಿನಿಂದ ಹಾರಿಬಿದ್ದ ರಾಜೇಶ್ ಸೀದಾ ಕಾಡಿನೊಳಕ್ಕೆ ಓಟಕಿತ್ತಿದ್ದಾನೆ! ಮತ್ತೆ ಅವನನ್ನು ಕರೆದುಕೊಂಡು ಬಂದು ಒಪ್ಪಿಸುವಲ್ಲಿ ಎಲ್ಲರಿಗೂ ಸುಸ್ತೋ ಸುಸ್ತು.
ಮುಂದಿನ ಎಪಿಸೋಡು ಎಲ್ಲರಿಗೂ ಗೊತ್ತಿರುವಂತದ್ದೇ. ರಾಜೇಶ ತಾನು ಹಿಂದೆಂದೂ ನೋಡಿರದ ಬೆಂಗಳೂರು ಪ್ಯಾಟೆಗೆ ತಂದು ರಿಯಾಲಿಟಿ ಶೋನಡೆಸುವವರ ಮನಸ್ಸಿನ ವಿಕೃತ ಟಾಸ್ಕ್‌ಗಳಿಗೆ ಆತನೊಂದಿಗೆ ಇತರ ಬುಡಕಟ್ಟು ಹುಡಗರನ್ನೂ ಗುರಿಪಡಿಸಲಾಗಿತ್ತು. ಪ್ರತಿ ಆದಿವಾಸಿ ಹುಡುಗನಿಗೆ ಒಬ್ಬೊಬ್ಬ ಪ್ಯಾಟೆ ಹುಡುಗಿಯರನ್ನು ಜೊತೆಯಾಗಿ (ಎಜೆ) ಬಿಡಲಾಗಿತ್ತು.. ’ಆಧುನಿಕತೆ’ಯನ್ನೇ ಉಸಿರಾಡುವ ಈ ಹುಡುಗಿಯರು ಹಾಕುವ ತುಂಡು ಚಡ್ಡಿಗಳು, ವೇಷಭೂಷಣ ಎಲ್ಲವೂ ರಾಜೇಶನಂತ ಈ ಹಾಡಿಯ ಬಾಲಕರಲ್ಲಿ ಇನ್ನೆಂತಹ ಇರುಸುಮುರುಸು ಹುಟ್ಟುಹಾಕಿರಬಹುದು? ನಾಲಗೆಯ ಮೇಲೆ ಹಿಡತವೆ ಇರದ ಆ ಹುಡುಗಿಯರಿಗೆ ಈ ನಗರ ಜೀವನದ ’ನಾಗರೀಕತೆ’ ಗೊತ್ತಿಲ್ಲದವರಿಗೆ ಮಾರ್ಗದರ್ಶನ ನೀಡಲು ಹೇಳಲಾಗಿತ್ತು. ಕಾಡನ್ನು ಬಿಟ್ಟು ಬಂದಿರುವ ಈ ಹುಡುಗರನ್ನು ಬ್ಯೂಟಿ ಪಾರ್ಲರುಗಳಿಗೆ ಕರೆದೊಯ್ದು ಅವರ ಮೈಮೇಲಿನ ಕೂದಲುಗಳನ್ನು (ವ್ಯಾಕ್ಸ್ ಮೂಲಕ) ಕೀಳಿಸಿ, ಫೇಷಿಯಲ್ ಮಾಡಿಸಿ, ತಲೆಗೂದಲಿಗೆ ಬಣ್ಣ ಬಳಿಸಿ ಅವರನ್ನು ವಿಚಿತ್ರವಾಗಿ ಕಾಣುವಂತೆ ಮಾಡಲಾಗಿದೆ.
ಯಾರೋ ಅಪರಿಚಿತ ಹುಡುಕಿಯರ ಬಳಿ ಮೊಬೈಲ್ ನಂಬರ್ ಕೇಳುವ, (ಹೀಗೆ ನಗರವಾಸಿ ಹುಡುಗರು ಯಾರಾದರೂ ಮಾಡುತ್ತಾರಾ?!) ಬಾಡಿಗೆ ಮನೆ ಹುಡುಕಲು ಬಿಡುವ, ಭೇಧಿ ಮಾತ್ರೆಯೊಂದಿಗೆ ಹೊಟ್ಟೆ ತುಂಬ ತಿನ್ನಿಸಿ ಟಾಯ್ಲೆಟಿಗೆ ನುಗ್ಗದಂತೆ ತಡೆದು ಹಿಡಿದುಕೊಳ್ಳುವ, ಲೀಟರ್‌ಗಟ್ಟಲೆ ಬಾಳೆಹಣ್ಣಿನ ಜ್ಯೂಸ್ ಕುಡಿಸಿ ವಾಂತಿಯಾಗದಂತೆ ತಡೆಗಟ್ಟುವ, ಎಷ್ಟೋ ವಿದ್ಯಾವಂತ ನಗರವಾಸಿಗಳೇ ಹೋಗಲು ಮುಜುಗರವಾಗುವ ದೊಡ್ಡ ಮಾಲ್‌ಗಳಿಗೆ ಹೋಗುವ ಚಿತ್ರವಿಚಿತ್ರ ಟಾಸ್ಕ್ ನೀಡಲಾಗಿತ್ತು. ಈ ಮುಗ್ಧ ರಾಜೇಶ್‌ನಿಗೂ ಆಕೆಯ ಜೊತೆಗಿದ್ದ ಎಜೆ ಐಶ್ವರ್ಯಳಿಗೂ ಒಂದು ಹಂತದಲ್ಲಿ ಹೊಡೆದಾಟವಾಗುವಂತೆ ಮಾಡಿ ಅದನ್ನು ತೋರಿಸಿ ಟಿಆರ್‌ಪಿ ಹೆಚ್ಚಿಸಿಕೊಂಡಿದ್ದರು. ರೂಮಿನೊಳಗೆ ಹುಡುಗಿಯೊಂದಿಗೆ ಬಿಟ್ಟು ಶೌಚಾಲಯದೊಳಗೂ ರಹಸ್ಯ ಕ್ಯಾಮೆರಾಗಳನ್ನಿಟ್ಟು ಇವರ ವರ್ತನೆಗಳನ್ನು ಚಿತ್ರೀಕರಿಸಿಕೊಂಡು ನಂತರ ಎಡಿಟ್ ಮಾಡಿ ಪ್ರದರ್ಶಿಸಲಾಗಿತ್ತು. ಈ ಸಂದರ್ಭದಲ್ಲಿ ಪ್ರಜ್ಞಾವಂತರಾದ ಎಷ್ಟೋ ಜನರಿಗೆ ಪಿಚ್ಚೆನಿಸಿತ್ತಲ್ಲದೆ ಆದಿವಾಸಿ ಹುಡುಗರನ್ನು ಈ ರೀತಿ ಅವಮಾನಿಸುತ್ತಿರುವ ಕುರಿತು ಅಲ್ಲಲ್ಲಿ ಅಸಮಾಧಾನವೂ ಕೇಳಿಬಂದಿತ್ತು.
ಕೊನೆಹಂತದಲ್ಲಿ ವೀಕ್ಷಕರ ಮತದ ಸಹಾಯದಿಂದ ಅಂತಿಮವಾಗಿ ವಿಜೇತರಾದದ್ದು ರಾಜೇಶ್ ಮತ್ತು ಐಶ್ವರ್ಯ. ಹಾಂ, ವಾಹಿನಿಯವರು ಬುಡಕಟ್ಟಿನ ಜನರ ಸಮಸ್ಯೆಗಳ ಕುರಿತು ಗಮನ ಸೆಳೆಯುತ್ತೇವೆ ಎಂದೂ ಮಾತುಕೊಟ್ಟಿದ್ದರಲ್ಲ. ಹಾಗಾಗಿ ಜೇನುಕುರುಬರ ಸಮಸ್ಯೆಗಳ ಬಗ್ಗೆಯೂ ಅಲ್ಲಲ್ಲಿ ಮಾತನಾಡುವಂತೆ ನೋಡಿಕೊಂಡಿದ್ದರು. ರಾಜೇಶನಿಗೆ ಪ್ರಶಸ್ತಿ ಪ್ರಧಾನ ಮಾಡಿದ್ದ ಪುನೀತ್ ರಾಜ್‌ಕುಮಾರ್ ತುಂಬಾ ಕಾಳಜಿಯಿಂದಲೇ ಮಾತನಾಡಿದ್ದರಾದರೂ ಇಡೀ ಕಾರ್ಯಕ್ರಮದ ಮುಗ್ಧ ಆದಿವಾಸಿಗಳ ಬದುಕಿನಲ್ಲಿ ಬೀರಬಹುದಾದ ಪರಿಣಾಮವನ್ನು ಗ್ರಹಿಸುವಲ್ಲಿ ಅವರೂ ಸೋತಿದ್ದರು.
ಇತ್ತ ರಿಯಾಲಿಟಿ ಶೋನಲ್ಲಿ ರಾಜೇಶ ಪ್ರಖ್ಯಾತನಾಗುತ್ತಿದ್ದಂತೆ ಗಾಂಧಿನಗರದಲ್ಲಿ ರಾಜೇಶ್-ಐಶ್ವರ್ಯ ಜೋಡಿಯನ್ನು ಇಟ್ಟುಕೊಂಡು ಒಂದು ಸಿನಿಮಾ ಮಾಡಿದರೆ ಹೇಗೆ ಎಂಬ ಆಲೋಚನೆ ಬಂದಿತ್ತು. ಅದರಂತೆ ರಾಜೇಶ ಮನೆ ಸೇರಿದ 20 ದಿನಗಳಲ್ಲಿ ನಿರ್ದೇಶಕ ರವಿ ಕಡೂರು ಬಳ್ಳೇಹಾಡಿಗೆ ಹೋಗಿ ರಾಜೇಶನನ್ನು ಸಿನಿಮಾ ’ಹೀರೋ’ಮಾಡುವೆನೆಂದು ಹೇಳಿ ತಮ್ಮ ಮನೆಗೆ ಕರೆದುಕೊಂಡು ಹೋಗಿ’ಕಾಡುಗಲ್ಲನ್ನು’ ಶಿಲೆಯಾಗಿಸಲು ಅವರು ಪ್ರಯತ್ನಿಸಿದ್ದರು!. ಈ ನಡುವೆ ಒಮ್ಮೆ ಸುವರ್ಣ ವಾಹಿನಿಯ ಕಛೇರಿಗೆ ರಾಜೇಶನನ್ನು ತಮ್ಮ ಮನೆಯಿಂದ ರವಿ ಕರೆದುಕೊಂಡು ಹೋದ ಸಂದರ್ಭದಲ್ಲಿ ಸಿನಿಮಾ ವಿಷಯ ವಾಹಿನಿಯವರ ಕಿವಿಗೆ ಬಿದ್ದು ಅಲ್ಲಿ ತಮ್ಮ ಅರಿವಿಗೇ ಬರದ ಕಾರಣ ವಾಹಿನಿಯವರು ನಿರ್ದೇಶಕರ ಮೇಲೆ ಮುನಿಸಿಕೊಂಡು ತಾವು ಬೆಳಕಿಗೆ ತಂದ ’ಹುಡುಗನ್ನು ಇವರು ಬಳಸಿಕೊಳ್ಳುತ್ತಿರುವ ಕುರಿತು ಅಸಮಧಾನ ವ್ಯಕ್ತಪಡಿಸಿದ್ದರು. ಆದರೆ ರಾಜೇಶ ’ಡೈರೆಕ್ಟರ್’ ರವಿಯವರ ಬಳಿಯೇ ಇರುತ್ತೇನೆ ಎಂದುಬಿಟ್ಟಿದ್ದರಿಂದ ವಾಹಿನಿಯವರು ಸುಮ್ಮನಾಗಿದ್ದರು. ರಾಜೇಶನಿಗೆ ಹತ್ತು ಲಕ್ಷ ರೂಪಾಯಿ ಕೊಡುವ ಭರವಸೆಯನ್ನು ಚಿತ್ರ ನಿರ್ಮಾಪಕ-ನಿರ್ದೇಶಕರು ಮಾತನಾಡಿ ಕೊನೆಗೆ 2011ರ ಜನವರಿ 24 ರಂದು ’ಜಂಗಲ್ ಜಾಕಿ’ ಸಿನಿಮಾದ ಚಿತ್ರೀಕರಣವೂ ಆರಂಭವಾಗಿತ್ತು. ನಂತರದಲ್ಲಿ. ಹೆಚ್ಚೂ ಕಡಿಮೆ 6 ತಿಂಗಳವರೆಗೆ ಆಗಾಗ ನಡೆದ ಚಿತ್ರೀಕರಣ ನಡೆದಿತ್ತು. ಅದಾದ ನಂತರ ಹಾಡಿ ಸೇರಿಕೊಂಡ ರಾಜೇಶನ ತಲೆಯಲ್ಲಿ ನಿಂತರೂ, ಕುಂತರೂ, ಮಲಗಿದರೂ ಎದ್ದರೂ 'ಜಂಗಲ್ ಜಾಕಿ' ಸಿನಿಮಾದಲ್ಲಿ ತಾನು ಹೀರೋ ಆಗಿ ತೆರೆಯ ಮೇಲೆ ಅದ್ಭುತವಾಗಿ ಕಾಣಿಸಿಕೊಳ್ಳುವ ರಂಗುರಂಗಿನ ದೃಶ್ಯಗಳೇ. ಈ ಸಿನಿಮಾಕ್ಕಾಗಿ ’ಅಭಿಮಾನಿಗಳು’ ತನ್ನ ಸಿನಿಮಾಕ್ಕಾಗಿ ತುಗಿಗಾಲಲ್ಲಿ ಕಾದುಕೊಂಡು ನಿಂತಿರುವ ದೃಶ್ಯವನ್ನು ಮನಸ್ಸಿಗೆ ತಂದುಕೊಂಡು ಅವನಿಗೆ ಮನಸ್ಸಿಗೆ ಸಮಾಧಾನವೇ ಇಲ್ಲದಂತಾಗಿಬಿಟ್ಟಿತ್ತು.
ಈ ನಡುವೆ ಬಳ್ಳೇಹಾಡಿಗೆ ಸಮೀಪದ ಅಂತರಸಂತೆಯ ಜಾತ್ರೆಯಲ್ಲಿ ತನ್ನದೇ ಜೇನುಕುರುಬ ಸಮುದಾಯದ ಹುಡುಗಿಯೊಬ್ಬಳು ರಾಜೇಶನ ಕಣ್ಣಿಗೆ ಬಿದ್ದಳು. ಅವಳು ಬೆಳ್ಳಗಿದ್ದ ಹುಡುಗಿ. ಹೇಗೂ ರಾಜೇಶನ ’ಪ್ಯಾಟೆ ಲೈಫು ಇಷ್ಟರಲ್ಲಾಗಲೇ ’ಸೌಂದರ್ಯ’ ಎಂದರೆ ನಾಡಿನ ಬಹುಸಂಖ್ಯಾತರ ಬಣ್ಣವಾದ ಕಪ್ಪು ಅಲ್ಲ, ಬೆಳ್ಳಗಿರುವುದು ಮಾತ್ರ ಎಂಬುದನ್ನು ತಿಳಿಸಿಕೊಟ್ಟಿತ್ತು. ಉಳಿದ ಜೇನುಕುರುಬ ಹುಡುಗಿಯರೆಲ್ಲ ಕಪ್ಪು ಇರುವಾಗ ಈ ಹುಡುಗಿ ಬೆಳ್ಳಗಿದ್ದದ್ದು ರಾಜೇಶನಿಗೆ ಆ ಹುಡುಗಿಯ ಮೇಲೆ ಮನಸ್ಸಾಗಿತ್ತು. ಮದುವೆಯಾಗಲೂ ನಿರ್ಧರಿಸಿಕೊಂಡುಬಿಟ್ಟ.
ಮದುವೆಯೂ ಆಯಿತು. ಆದರೆ ಹುಡುಗಿ ಬೆಳ್ಳಗಿದ್ದ ಮಾತ್ರಕ್ಕೆ ಪ್ಯಾಟೆ ಹುಡುಗಿಯರಂತೆ ಇರಲು ಸಾಧ್ಯವೇ? ರಿಯಾಲಿಟಿ ಶೋ ಮತ್ತು ಸಿನಿಮಾಗಳ ಹುಡುಗಿಯರು ’ಹುಡುಗಿಯರೆಂದರೆ ಹಿಂಗಿಂಗೆ ಇರಬೇಕು’ ಎಂದು ಹೇಳಿಕೊಟ್ಟಾಗಿತ್ತು. ಅದನ್ನೆಲ್ಲಾ ಈ ಹುಡುಗಿಯಿಂದ ನಿರೀಕ್ಷಿಸಲು ಹೇಗೆ ಸಾಧ್ಯ? ಪಾಪ ಆ ಹುಡುಗಿ ಕಾವ್ಯ ತೀರಾ ಮುಗ್ಧೆ. ರಾಜೇಶನ ಈ ಹೊತ್ತಿನ ಬದಲಾಗಿದ್ದ ಲೈಫ್‌ಸ್ಟೈಲ್‌ಗೆ ಹೊಂದಿಕೊಳ್ಳಲು ಆಕೆಗಾಗಲೇ ಇಲ್ಲ. ಆಗ ಆಕೆಯೊಂದಿಗೆ ತೀರಾ ಒರಟಾಗಿ ನಡೆದುಕೊಳ್ಳಲಾರಂಭಿಸಿದ್ದ. ಹೀರೋ ರಾಜೇಶ. ಆಕೆಯೊಂದಿಗೆ ಹೊಂದಿಕೊಳ್ಳದೇ ಹುಡುಗಿಯನ್ನು ಒಂದೂವರೆ ತಿಂಗಳಲ್ಲೇ ಮನೆಗೆ ಕಳಿಸಿಬಿಟ್ಟ. ಆತಂಕಗೊಂಡ ಹುಡುಗಿಯ ಅಪ್ಪ ಅಮ್ಮ ರಾಜೇಶನಿಗೆ ಬುದ್ಧಿ ಹೇಳಿದರು. ಪೋಲೀಸರಿಗೆ ದೂರು ನೀಡುತ್ತೇವೆಂದೂ ಹೇಳಿದರು. .
ಅಮ್ಮನೊಂದಿಗೆ ಆಸ್ಪತ್ರೆಯಲ್ಲಿ |
ಒಂದೆಡೆ ಹದಗೆಟ್ಟ ಸಂಸಾರ, ಕಾಡಿನ ರಿಯಾಲಿಟಿಗೆ ಮತ್ತೆ ಒಗ್ಗಿಕೊಳ್ಳಲಾಗದ ’ರಿಯಾಲಿಟಿ ಶೋ ಕಲಿಸಿದ್ದ’ ಪ್ಯಾಟೆ ಲೈಫು, ಮತ್ತೊಂದೆಡೆ ತನ್ನ ಸಿನಿಮಾ ಬಿಡುಗಡೆಗೆ ಕಾಯುತ್ತಿರುವ ’ಅಭಿಮಾನಿಗಳು’. ದಿನಕಳೆದಂತೆಯೂ ರಾಜೇಶ ಸುತ್ತಲಿನ ಜನರಿಗೆ ಮುಖತೋರಿಸಲಾಗದ ಮಾನಸಿಕ ವಿಹ್ವಲತೆಗೊಳಗಾಗಿದ್ದಾನೆ. ದೂರದಿಂದ ಯಾರಾದರೂ ಕಂಡ ಕೂಡಲೇ ಕಾಡಿನ ಕಡೆ ಓಟ ಕೀಳತೊಡಗಿದ್ದಾನೆ. ಏಕೆಂದು ಅಮ್ಮ ಕೇಳಿದರೆ ’ಅಭಿಮಾನಿಗಳು’ ಸಿನಿಮಾದ ಬಗ್ಗೆ ಕೇಳುತ್ತಾರೆ. ಅದಕ್ಕೆ ಏನು ಹೇಳಲಿ? ಎಂಬ ಮರುಪ್ರಶ್ನೆ. ನಾಚಿಕೆ ಸ್ವಭಾವದ ಜೊತೆಗೇ ತೀವ್ರ ಮುಂಗೋಪಿತನವೂ ಆತನ ಸ್ವಭಾವದಲ್ಲಿದ್ದುರಿಂದ ರಾಜೇಶನ ಮಾನಸಿಕ ನಿಯಂತ್ರಣ ತಪ್ಪಿದ್ದಾನೆ. ಹುಚ್ಚನಂತೆ ವರ್ತಿಸುವುದು, ನಿಂತಲ್ಲಿ ನಿಲ್ಲದಂತಿರುವುದು, ಜೋರಾಗಿ ಕಿರುಚುವುದು ಇತ್ಯಾದಿ ಹೆಚ್ಚಾಗಿದೆ. ಮನೆಯವರೆಲ್ಲ ದೇವರ ಮೊರೆಹೋದರೂ ಉಪಯೋಗವಾಗಿಲ್ಲ. ಒಂದು ದಿನ ಕಾಡಿನಲ್ಲಿ ಹತ್ತಾರು ಮೈಲು ಓಡಿ ಕೈಕಾಲು ಮುಖವೆಲ್ಲಾ ಮುಳ್ಳು ತರಿದು ರಕ್ತ ಹರಿದಿದೆ. ಅಂದು ನಾಲ್ಕಾರು ಜನರು ಸೇರಿ ಹಿಡಿದುಕೊಂಡರೂ ಎಲ್ಲರನ್ನೂ ಎತ್ತಿ ಬಿಸಾಕುವಷ್ಟು ಉಗ್ರಗೊಂಡಿದ್ದಾನೆ. ಅಂತಿಮವಾಗಿ ಹಾಡಿಯ ಜನರು, ಅಲ್ಲಿದ್ದ ಅರಣ್ಯ ಪಾಲಕರು ಕೈಕಾಲುಗಳಿಗೆ ಅಕ್ಷರಶಃ ಹೆಡೆಮುರಿ ಕಟ್ಟಿ ಸರಗೂರಿನ ವಿವೇಕಾನಂದ ಸ್ಮಾರಕ ಆಸ್ಪತ್ರೆಗೆ ಸಾಗಿಸಿದ್ದಾರೆ. ಅಲ್ಲಿ ಅವನ ಆರ್ಭಟ ನೋಡಿ ವಿಶೇಷ ಕೊಠಡಿಯಲ್ಲಿ ಎರಡು ದಿನ ಇಡಲಾಗಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಸಾಗಿಸಲಾಗಿದೆ.
ರಾಜೇಶನ ಈಗಿನ ಮಾನಸಿಕ ಸ್ಥಿತಿ ಇರುವ ಶುಷ್ರೂಶೆ ನೀಡಲು ತೀರಾ ಅಗತ್ಯವಾಗಿರುವುದು ಪ್ರಶಾಂತ ವಾತಾವರಣ ಮತ್ತು ಅಲ್ಲಿ ನಡೆಸುವ ತೀವ್ರವಾದ ಕೌನ್ಸೆಲಿಂಗ್‌ಗಳು. ಆದರೆ ರಾಜೇಶ ಆಸ್ಪತ್ರೆ ಸೇರಿದ ಬಗ್ಗೆಯೂ ಇನ್ನಿಲ್ಲದ ವಿವಾದಗಳನ್ನು ಹುಟ್ಟುಹಾಕಿ, ಅತಿರಂಜಕಗೊಳಿಸಿ ಟಿಆರ್‌ಪಿ ಹೆಚ್ಚಸಿಕೊಳ್ಳಲು ಬಯಸುವ ಟೀವಿ ಮಾಧ್ಯಮಗಳು ಅವನನ್ನು ಬಿಡುತ್ತಿಲ್ಲ. ತನ್ನ ಕಾಡಿನಲ್ಲಂತೂ ನೆಮ್ಮದಿಯಿಂದರಲು ಜೇನುಕುರುಬ ರಾಜೇಶನಿಗೆ ಬಿಡದ ನಮ್ಮ ಪ್ಯಾಟೆಯ ನಾಗರಿಕ ಸಮಾಜ ಮತ್ತು ಮಾಧ್ಯಮಗಳು ಕನಿಷ್ಠ ಈ ಮಾನಸಿಕ ಆಸ್ಪತ್ರೆಯಲ್ಲಾದರೂ ನೆಮ್ಮದಿ ನೀಡಬಾರದೇ?
ಹಣವೊಂದು ಕೆಡಿಸಿತ್ತು ಹಾಡಿಯನ್ನು!
೧೯೮೦ರಲ್ಲಿ ದಕ್ಷಿಣ ಆಫ್ರಿಕದ ಸಿನಿಮಾ ನಿರ್ದೇಶಕ ಜೇಮಿ ಉಯಿಸ್ ಎಂಬುವವರು ನಿರ್ದೇಶಿಸಿದ್ದ ’ದ ಗಾಡ್ಸ್ ಮಸ್ಟ್ ಬಿ ಕ್ರೇಝಿ’ ಸಿನಿಮಾದಲ್ಲಿ ಕಲಹರಿ ಮರುಭೂಮಿಯ ಬುಷ್‌ಮನ್ ಎಂಬ ಬುಡಕಟ್ಟು ಸಮುದಾಯವು ನಾಗರಿಕತೆಯೊಂದಿಗೆ ಎದುರುಗೊಳ್ಳುವ ಕತೆಯನ್ನು ಅದ್ಭುತವಾಗಿ ಚಿತ್ರ್ರಿಸಿದ್ದರು. ವಿಮಾನದಿಂದ ಕುಡಿದು ಎಸೆದ ಕೋಕೊಕೋಲಾ ಬಾಟಲಿಯೊಂದು ಬುಡಕಟ್ಟು ಜನರ ಹಾಡಿಗೆ ಬಂದು ಬಿದ್ದದ್ದೇ ಅವರ ನಡುವೆ ಇನ್ನಿಲ್ಲದ ಸ್ವಾರ್ಥ-ಹೊಡದಾಟ ಶುರುವಾಗಿಬಿಡುತ್ತದೆ. ತಮ್ಮ ನಡುವೆ ಕಲಹ ಸೃಷ್ಟಿಸಿದ ಅದು ಭೂತವೆಂದುಕೊಂಡು ಭೂಮಿಯ ಮತ್ತೊಂದು ತುದಿಯಲ್ಲಿ ಎಸೆದು ಬರಲು ಹೋಗುವ ಬುಡಕಟ್ಟು ಮನುಷ್ಯನೊಬ್ಬ ’ಆಧುನಿಕ’ಜಗತ್ತಿನೊಳಗೆ ಪಜೀತಿಗೆ ಸಿಕ್ಕಿಹಾಕಿಕೊಳ್ಳುವ ಕತೆ ಅದು. ಇದೇ ವೇಳೆಗೆ ಈ ಸಿನಿಮಾ ಬುಡಕಟ್ಟು ಜನರ ನಿಜವಾದ ’ನಾಗರಿಕ’ಬದುಕನ್ನು ಹಾಗೂ ಮಾನವೀಯತೆಯನ್ನೂ ಮನಮುಟ್ಟುವಂತೆ ಹೇಳಿತ್ತು. ನಮ್ಮ ನಾಗರಿಕ ಜಗತ್ತಿನ ಈ ಕಾಲದ ಐಲುಗಳಾದ ರಿಯಾಲಿಟಿ ಶೋಗಳು ಮತ್ತು ಹುಚ್ಚು ಭ್ರಮೆಗಳಲ್ಲಿ ಮುಳುಗಿಸುವ ಸಿನಿಮಾಗಳೂ, ಅವುಗಳನ್ನು ತಯಾರಿಸುವವರೂ, ನೋಡುವವರೂ ಎಲ್ಲಾ ಸೇರಿ ರಾಜೇಶನ ’ಜೇನು ಕುರುಬರ’ ಹಾಡಿಯಲ್ಲಿ ಸೃಷ್ಟಿಸಿರುವ ತಳಮಳ ಕೂಡ ಇದೇ ತೆರನಾದದ್ದು. ಅಲ್ಲಿ ಏನಾಗಿದೆ ನೋಡಿ.
ರಾಜೇಶನ ಮನೆ |
’ಹಳ್ಳಿ ಹೈದ ಪ್ಯಾಟೆಗ್ ಬಂದ’ ರಿಯಾಲಿಟಿ ಶೋದಲ್ಲಿ ತಮ್ಮ ಮಗನನ್ನು ನೋಡಲು ರಾಜೇಶನ ತಂದೆ ಟೀವಿಯೊಂದನ್ನು ತಂದರು. ಆದರೆ ಅಲ್ಲಿ ಕರೆಂಟಿಲ್ಲ. ಹೀಗಾಗಿ ನಾಲ್ಕಾರು ಸೋಲಾರ್ ಬ್ಯಾಟರಿಗಳನ್ನು ಹಾಕಿ ಕಾರ್ಯಕ್ರಮ ವೀಕ್ಷಿಸುವ ಪ್ರಯತ್ನ ಹಾಡಿಯಲ್ಲಿ ನಡೆಯುತ್ತದೆ. ಆದರೆ ಆ ಬ್ಯಾಟರಿ ಸುಟ್ಟು ಹೋಗುತ್ತದೆ. ಕೊನೆಗೆ ದೂರದ ಮನೆಗಳಿಗೆ ಹೋಗಿ ಟೀವಿ ನೋಡಿ ಅಲ್ಲಿ ಬಲವಂತವಾಗಿ ಖುಷಿಪಡುತ್ತಾರೆ. ನಂತರ ಮನೆಗೆ ಬಂದ ರಾಜೇಶ ಮನೆಯಲ್ಲೇ ಟೀವಿ ನೋಡುವಂತಾಗಲು ಒಂದು ಜನರೇಟರ್ ಖರೀದಿಸುತ್ತಾನೆ. ಅದಕ್ಕೆ ಇದುವರೆಗೆ ಏನಿಲ್ಲೆಂದರೂ ಲೀಟರ್‌ಗೆ ೪೦ ರೂಪಾಯಿಯಂತೆ ೩೦೦-೪೦೦ ಲೀಟರ್ ಸೀಮೆ ಎಣ್ಣೇ ಖರೀದಿಸಲಾಗಿದೆ. ರಿಯಾಲಿಟಿ ಶೋದಲ್ಲಿ ಗೆದ್ದರೆ ಊರಿನ ದೇವರಿಗೆ ದೇವಸ್ಥಾನ ಕಟ್ಟಿಸುತ್ತೇನೆಂದಿದ್ದ ರಾಜೇಶ. ವಾಹಿನಿಯವರು ಶೋ ಮುಗಿದ ಮೇಲೆ ಕೊಡಬೇಕಿದ್ದ ಹಣಕ್ಕಾಗಿ ಪಾನ್ ಕಾರ್ಡ್ ತರಲು ಮತ್ತು ಅಕೌಂಟ್ ತೆರೆಯಲು ಹೇಳೀದ್ದಾರೆ. ಆದರೆ ಪಾನ್‌ಕಾರ್ಡ್ ಬರಲು ತಿಂಗಳಾನುಗಟ್ಟಲೆಯಗಿದೆ. ಕೊನೆಗೂ ಹೆಚ್.ಡಿ.ಕೋಟೆಯ ಬ್ಯಾಂಕೊಂದರಲ್ಲಿ ೪,೯೦,೦೦೦ ರೂಪಾಯಿ ಫಿಕ್ಸೆಡ್ ಡೆಪಾಸಿಟ್ ಇಡಲಾಗಿದೆ. ಇಷ್ಟರ ಹೊತ್ತಿಗೆ ರಾಜೇಶನನ್ನು ಆರಂಭದಲ್ಲಿ ಶೋಗೆ ಹೋಗಲು ಒಪ್ಪಿಸಿದ್ದ ಬುಡಕಟ್ಟು ಮುಖಂಡರನ್ನು ಕಂಡರೂ ಮಾತಾಡಿಸದಂತಾಗಿದ್ದ ರಾಜೇಶ. ರಾಜೇಶನನ್ನು ಸನ್ಮಾನ ಮಾಡಲು ಕೆಲವು ಸ್ಥಳೀಯ ಹಾಡಿಯ ಜನರು ಪ್ರಯತ್ನಿಸಿದ್ದಾರೆ. ಅದಕ್ಕಾಗಿ ಆತನನ್ನು ಕರೆತರಲು ನಿರ್ದೇಶಕ ರವಿ ಕಡೂರು ಮನೆಗೆ ಹೋದವರಿಗೆ ’ಅವರು ಹಾಕುವ ಹಾರ ತೊಗೊಂಡು ನಾನೇನು ಮಾಡಲಿ? ಎಷ್ಟು ದುಡ್ಡು ಕೊಡ್ತಾರೆ ಹೇಳಿ ಬರ‍್ತೇನೆ’ ಎಂದು ಮುಖಕ್ಕೆ ಹೊಡೆದಂತೆ ಹೇಳಿ ವಾಪಸ್ಸು ಕಳಿಸಿಬಿಟ್ಟ. ಸಿನೆಮಾದವರು ಕೊಟ್ಟ ಹಣದಿಂದ ಪಲ್ಸಾರ್ ಬೈಕ್ ರಾಜೇಶನ ಗುಡಿಸಲು ನುಗ್ಗಿದೆ. ಟ್ಯಾಂಕ್ ಪೂರ್ತಿ ಭರ್ತಿ ಮಾಡಿಕೊಂಡು ಸಾಲದಾದರೆ ಎಂದು ಬೈಕಿನ ಹಿಂದುಗಡೆ ಒಂದು ಕ್ಯಾನ್ ಭರ್ತಿ ಪೆಟ್ರೋಲಿಟ್ಟುಕೊಂಡು ಬಳ್ಳೇ ಹಾಡಿ ಟು ಕಡೂರು ವಯಾ ಬೆಂಗಳೂರು ಹಲವಾರು ಸಲ ಸವಾರಿ ಮಾಡಿದ್ದಾನೆ.
ಹಾಡಿಯಲ್ಲಿ ಮೊದಮೊದಲು ರಾಜೇಶನ ಕುರಿತು ಸಂತಸಗೊಂಡಿದ್ದ ಜೊತೆಗಾರ ಹುಡುಗರನ್ನು ಈಗ ಮಾತಾಡಿಸದಂತಾಗಿಬಿಟ್ಟಿದ್ದ. ಹಾಡಿಗೆ ಬಂದರೂ ರಾಜೇಶನ ಲೋಕವೇ ಬೇರೆ ಆಗಿತ್ತು. ಈಗ ಅವನ ’ಅಭಿಮಾನಿಗಳೇ’ ಬೇರೆಯಾಗಿದ್ದರು. ಹೊಸ ಸೂಟು, ಬೂಟಿನ ರಾಜೇಶನಿಗೆ ಆ ಹಾಡಿಯ ತಲೆಗೆ ಎಣ್ಣೆ ಕಾಣದ, ದುಡಿಮೆ ಮಾಡುವ, ಕೂಲಿಕಾರ ಬಡವರು ’ಯಕಶ್ಚಿತ್’ ಎನಿಸಿದ್ದಾರೆ. ಇಷ್ಟೊತ್ತಿಗೆ ರಾಜೇಶ ಹಾಡಿಯ ಇತರರಂತೆ ಲೋಕಲ್ ಸಾರಾಯಿ ಕುಡಿಯುತ್ತಿರಲಿಲ್ಲ. ಬ್ರಾಂಡೆಡ್ ಕುಡುಕನಾಗಿದ್ದ! ರಾಜೇಶನ ಮದುವೆಗೆ ಹ್ಯಾಂಡ್ ಪೋಸ್ಟ್‌ನ ಕಲ್ಯಾಣಮಂಟಪವೊಂದರಲ್ಲಿ ಅರೇಂಜಾಗಿದೆ. ಅಲ್ಲಿನ ’ಇವೆಂಟ್ ಮ್ಯಾನೇಜ್‌ಮೆಂಟ್’ನವರು ಮದುವೆಯನ್ನು ವಹಿಸಿಕೊಂಡಿದ್ದಾರೆ. ರಾಜೇಶನ ಅಭಿಮಾನಿಗಳು ನೂರಾರು ಜನ ಮದುವೆಗೆ ಸಾಕ್ಷಿಯಾಗಿದ್ದಾರೆ. ರಾಜೇಶನ ಹಾಡಿಯ ಜನರನ್ನು ಹೊರತುಪಡಿಸಿ! ನಿಜ. ರಾಜೇಶನ ಕುಟುಂಬದ ಸಂಬಂಧಿಕರೂ ಒಳಗೊಂಡಂತೆ ಊರಿನ ಯಾರಿಗೂ ಮದುವೆಗೆ ಆಹ್ವಾನಿಸಿಯೇ ಇರಲಿಲ್ಲ!. ಇದರಿಂದಾಗಿ ಇಡೀ ಹಾಡಿಯ ಜನರು ಬೇಸರಗೊಂಡಿದ್ದಾರೆ. ಇನ್ನು ಸಿನಿಮಾದವರು ನೀಡಿದ ಐದು ಲಕ್ಷ ರೂಪಾಯಿಗಳಲ್ಲಿ ಒಂದು ಲಕ್ಷ ರೂಪಾಯಿಯನ್ನು ಅಮ್ಮನ ಹೆಸರಿಗೆ ಫಿಕ್ಸೆಡ್ ಮಾಡಿಸಿಡಲಾಗಿದೆ. ಉಳಿದ ಹಣವು ನೀರಿನಂತೆ ಖರ್ಚಾಗಿದೆ. ಅದು ಖಾಲಿಯಾದಾಗ ಕೊನೆಗೆ ತನ್ನ ಫಿಕ್ಸೆಡ್ ಹಣವನ್ನಾದರಿಸಿ ೭೫ ಸಾವಿರ ರೂಪಾಯಿ ಸಾಲವನ್ನೂ ತೆಗೆದುಕೊಂಡಿದ್ದಾನೆ. ಇದನ್ನು ತಿಳಿದ ರಾಜೇಶನ ತಂದೆಗೆ ಗಾಬರಿಯಾಗಿದೆ. ಟಿಎಸ್‌ಐನೊಂದಿಗೆ ಮಾತನಾಡಿದ ರಾಜೇಶ್ ತಂದೆ ಈ ಕುರಿತು ಕೆಲವೆ ತಿಂಗಳಲ್ಲಿ ಈ ಸಾಲದ ಬಡ್ಡಿ ಒಂದು ಲಕ್ಷ ಮುಟ್ಟಿ ಮತ್ತೊಂದು ಅಕೌಂಟ್‌ನಲ್ಲಿಟ್ಟಿರುವ ನಾಲ್ಕು ಲಕ್ಷ ರೂಪಾಯಿ ಫಿಕ್ಸೆಡ್‌ನ್ನೂ ತಿನ್ನಲು ಶುರುಮಾಡುತ್ತೆ ಅಂತ ಗೊತ್ಯಾಯ್ತು ಸರ್. ಹಿಂಗಾಗಿ ನಾನು ನನ್ನ ಉಳಿತಾಯದ ಹಣದಲ್ಲಿ ೫೦ ಸಾವಿರ ರೂಪಾಯಿ ತೆಗೆದು ಬ್ಯಾಂಕಿಗೆ ಕೊಟ್ಟು ಬಂದು ೩ ತಿಂಗಳಾಯ್ತು. ಆದರೆ ಅವರು ಅದನ್ನು ಇನ್ನೂ ಪಾಸ್‌ಬುಕ್‌ನಲ್ಲಿ ಬರೆದೇ ಇಲ್ಲ. ಆಸ್ಪತ್ರೆಯಿಂದ ಹೋದ ಕೂಡಲೇ ಆ ಕೆಲಸ ಮಾಡಬೇಕು ಎಂದು ತಮ್ಮ ಆತಂಕ ತೋಡಿಕೊಂಡರು.
ಪಲ್ಸಾರ್ ಬೈಕು, ಜನರೇಟರ್ , ಕರ್ಲಾನ್ ಬೆಡ್ಡು |
ನಾವು ಜೇನು ಕುರುಬ ಮಕ್ಕಳು...
ನಂಗ ಜೇನು ಕುರುಬ ಮಕ್ಕಳು ದೂರಿ ದೂರಿ
ನಂಗ ಕಾಡಿಗೆ ಅರಸರು ದೂರಿ ದೂರಿ
ನಂಗ ಹುಲಿಯ ಜೊತೆ ಹುಡುಗಾಟ ದೂರಿ ದೂರಿ
ನಂಗ ಆನೆ ಜೊತೆ ಐಲಾಟ ದೂರಿದೂರಿ
ನಂಗ ನವಿಲು ಜೊತೆ ನಲಿದಾಟ ದೂರಿ ದೂರಿ
ನಂಗ ಕಾಡಲಿ ಬದುಕವರು ದೂರಿ ದೂರಿ
ನಂಗ ಕತ್ತಲ ಲೋಕದಿ ಮಿಡಿತವರು ದೂರಿದೂರಿ...
ಎಂದು ಸಾಗುತ್ತದೆ ಜೇನುಕುರುಬರ ಹಾಡಿಯ ಹಾಡು. ದೇಶದ ಅತ್ಯಂತ ಪ್ರಾಚೀನ ಬುಡಕಟ್ಟುಗಳಲ್ಲಿ ಜೇನು ಕುರುಬ ಬುಡಕಟ್ಟು ಸಹ ಒಂದಾಗಿದೆ. ಈ ಹಿಂದೆ ಕಾಡಿನ ಅರಸರಾಗಿದ್ದ ಜೇನು ಕುರುಬರು ಎಂದೂ ಒಂದು ಕಡೆ ನೆಲೆ ನಿಲ್ಲುತ್ತಿರಲಿಲ್ಲ. ಒಂದೆಡೆಯಿಂದ ಮತ್ತೊಂದೆಡೆ ಅಲೆಯುತ್ತ ಜೇನು ಸಂಗ್ರಹಿಸುತ್ತ, ಗೆಡ್ಡೆ ಗೆಣಸು ಸಂಗ್ರಹಿಸುತ್ತ, ಕುಮರಿ ಬೇಸಾಯ ಮಾಡುತ್ತ, ಕರ್ನಾಟಕ-ಕೇರಳ-ತಮಿಳು ನಾಡುಗಳ ಗಡಿಭಾಗಗಳ ದಟ್ಟಾರಣ್ಯದಲ್ಲಿ ಅಲೆಮಾರಿಗಳಾಗಿ ಬದುಕಿದ್ದ ಸಮುದಾಯ ಇದು. ಆಗ ಅವರದ್ದು ಅತ್ಯಂತ ಕಷ್ಟದ ಬದುಕು. ಆದರೆ ಎಂದೂ ಸ್ವಾರ್ಥದ ಬದುಕಾಗಿರಲಿಲ್ಲ. ತೀರಾ ಇತ್ತೀಚೆಗೆ ಅವರು ಆಧುನಿಕತೆಗೆ ಒಡ್ಡಿಕೊಳ್ಳುವವರೆಗೂ ಸಾಮೂಹಿಕತೆ ಎನ್ನುವುದು ಅವರ ರಕ್ತದಲ್ಲಿತ್ತು. ಈಗಲೂ ಒಂದು ಮಟ್ಟಿಗಿದೆ. ನಾಳೆಯ ಚಿಂತೆ ಅವರಿಗಿಲಿಲ್ಲ. ಇಂದಿಗೆ ಇಂದೇ ಹುಡುಕಿಕೊಂಡು ಸಿಕ್ಕಷ್ಟು ಹಂಚಿಕೊಂಡು ತಿಂದು ತಮ್ಮ
ಲಿಂಗಮ್ಮ, ರಾಜೇಶನ ಅಜ್ಜಿ |
ಕಾಡಿನ ದೇವರುಗಳಾದ ತಾಳಬಳ್ಳಿ, ಕುಳಿತಳ ದೊರೆ, ಬಳ್ಳೆಗದ್ದೆ ತಾಯಿ, ಮಾಸ್ತ್ಯಮ್ಮರನ್ನು ಪೂಜಿಸಿಕೊಂಡು ಬದುಕಿದ್ದರು. ರಾಜೇಶನ ಅಜ್ಜಿ ಲಿಂಗಮ್ಮ ಟಿಎಸ್‌ಐನೊಂದಿಗೆ ಆಡಿದ ಈ ಮಾತು ಕೇಳಿ. "ನಮ್ಮ ಅರಮನೆ ಇದೇ ಸಾ. ನಿಮ್ಮರಮನೆ ನಮಗೆ ಆಗಲ್ಲ ಸಾ. ನಾವೆಂದೂ ಕಳ್ತನ ಮಾಡ್ದೋರಲ್ಲ ಸಾ. ಸರ್ಕಾರದೋರು ಬಂದು ಹಣ ಕೊಡ್ತೀವಿ ನೀವು ಕಾಡು ಬಿಟ್ಟು ಹೊರಗೆ ಹೋಗಿ ಅಂದರೆ ನಾವು ಹೋಗಕಾಗತ್ತಾ ಸಾ... ನಮಗೆ ಕರೆಂಟು ಕೊಡಿ, ನೀರು ಕೊಡಿ, ಮಕ್ಕಳಿಗೆ ಶಾಲೆ ಕೊಡಿ ಆದರೆ ಇಲ್ಲಿಂದ ಹೊರಗೆ ಕರೆದರೆ ಬೇಕಾದರೆ ವಿಷವನ್ನೇ ಕುಡೀತೀವಿ ಸಾ..". ಮತ್ತೂ ಮುಂದುವರೆದು ಮಾತನಾಡಿದ ಅವರು "ನಂಗೆ ಹತ್ತು ಜನ ಮಕ್ಕಳು. ಆ ಕಾಲದಲ್ಲಿ ಆಪೇಸನ್ನು ಇಲ್ಲ ಸಾ. ಇದ್ದಿದ್ರೆ ನಾನು ಮೂರೇ ಮಕ್ಕಳನ್ನ ಮಾಡ್ಸಿಕೊಳ್ವೇನು. ನಮ್ ತಾತನ ಕಾಲದಲ್ಲಿ ಅವೆಲ್ಲ ಇಲ್ಲ. ಈಗ ಹೊಟ್ಟೆ ಕತ್ತರಸಿ ಬನ್ನಿ, ಅಂತ ಸುರುವಗಿರದು. ನಾನು ಗುಂಡು ಕಲ್ಲಿನಂಗೆ ಇವ್ನಲ್ಲ? ಹತ್ತು ಮಕ್ಕಳು ಹೆತ್ರೂ ನಂಗೆ ಯಾವ ರೋಗ ಬಂದಿಲ್ವಲ್ಲ? ಈಗಿನವರು ಅಲ್ವಾ ರೋಗ ನೋಡ್ತಾ ಇರಾದು? ಲಕ್ಷ ಲಕ್ಷ ಡಾಕುಟ್ರಿಗೆ ಸುರಿಯಾದು? ಇಲ್ಲಿ ನಮಗೆ ಸೊಪ್ಪು ತಿಂದ ಮೇಲೆ ನಮಗೆ ಯಾವ ರೋಗ ಬರಲ್ಲ. ಪ್ಯಾಟೇಲೇ ರೋಗ. ನಿಮ್ ರೋಗ ನಂಗ ಹತ್ತಕಳದು ನನ್ನ ರೋಗ ನಿಮಗ ಹತ್ತಕಳದು. ನಾವು ಗಲೀಜು ನೀರು ಕುಡಿಯೋಕಾಗಲ್ಲ. ನಾವು ಗುಂಡಿ ಮಾಡಿಕಂಡು ಹೊಸ ನೀರನ್ನೇ ತೆಗೆಯೋದು. ಅರ್ಥ ಮಾಡ್ಕಳಿ. ಹಿಂಗೆ ಬದುಕದವರು ನಾವ್ ಅಲ್ಲೆಲ್ಲ ಹೋಗಿ ಬದುಕಕಾಯ್ತದ ಸಾ? ನಮ್ಮನ್ನು ಹಾಳು ಮಾಡಕಿರದು ಗೌರ‍್ಮೆಂಟು. ನಮ್‌ಗೆ ಅದೆಲ್ಲಾ ಬ್ಯಾಡ. ನನ್ನ ರಾಜೇಶನನ್ನ ಒಳ್ಳೇದ ಮಾಡಿ ಕಳಿಸಿ. ಅಷ್ಟೇ ಸಾಕು ಸಾ ನಮಗೆ.." ವಾಸ್ತವದಲ್ಲಿ ಜೇನುಕುರುಬರು ಕಾಡಿನ ಕುರಿತ ಅಪಾರ ಜ್ಞಾನ ಹೊಂದಿರುವಂತವರು. ಕಾಡಿನಲ್ಲಿ ಜೇನು ಕೀಳಲು ಹೋಗುವಾಗ ಬಾಯಾರಿತೆಂದರೆ ಇಂತದ್ಧೇ ಮರದ ಕಾಂಡದಲ್ಲಿ ನೀರಿದೆ ಹುಡುಕಿ ಆ ಮರವನ್ನು ಏರಿ ನೀರಿನ ಬುಗ್ಗೆ ಚಿಮ್ಮಿಸುವಷ್ಟು ಪಕ್ಕಾ ಪ್ರತಿಭೆ ಅವರದ್ದು. ಆದರೆ ಬುದ್ಧಿ ಮಾತ್ರ ಬಲಿತು ಹೃದಯವನ್ನೇ ಕಳೆದುಕೊಂಡ ಪೇಟೆಯ ಕೆಲ ವಿಕೃತ ಮನಸ್ಸಿನವರು ಇಂತಹ ಆದಿವಾಸಿಗಳನ್ನು ಇಲ್ಲಿ ತಂದು ಅವರನ್ನು ರಿಯಾಲಿಟಿ ಶೋಗಳಲ್ಲಿ ಅವಮಾನಿಸಿದ್ದ ರೀತಿ ಮಾತ್ರ ಅಕ್ಷಮ್ಯವಾದದ್ದು. ಇದೇ ವಹಿನಿಯಲ್ಲಿ ನಂತರ ಪ್ಯಾಟೆ ಮಂದಿ ಕಾಡಿಗೆ ಬಂದ್ರು ಎಂಬ ರಿಯಾಲಿಟಿ ಶೋ ಸಹ ಆದಿವಾಸಿಗಳನ್ನು ಹಳೆ ಶಿಲಾಯುಗದ ಜನರಂತೆ ತೋರಿಸಿ ಆದಿವಾಸಿ ಬದುಕನ್ನು ವಿಕೃತವಾಗಿ ತೋರಿಸಿದ್ದನ್ನು ನೆನಪಿಸಿಕೊಳ್ಳಬಹುದು.
ಬಳ್ಳೇಹಾಡಿ |
ವಾಸ್ತವದಲ್ಲಿ ಜೇನುಕುರುಬರಂತಹ ಬುಡಕಟ್ಟುಗಳು ಇಂದು ಅತ್ಯಂತ ಸಂಕಷ್ಟದಲ್ಲಿ ಸಿಲುಕಿವೆ. ಬಂಡೀಪುರ, ನಗರಹೊಳೆ ಅಭಯಾರಣ್ಯಗಳಲ್ಲಿನ ಐವತ್ತಕ್ಕೂ ಹೆಚ್ಚು ಜೇನುಕುರುಬ ಹಾಡಿಗಳನ್ನು ಈಗಾಗಲೇ ಎತ್ತಂಗಡಿ ಮಾಡಿರುವ ಕಾರಣ ಅವರಲ್ಲಿ ಅನೇಕರು ತಮ್ಮ ಸಾಂಪ್ರದಾಯಿಕ ಬದುಕಿನ ಮೂಲಗಳಿಂದ ದೂರವಾಗಿ ಹೊರಜಗತ್ತಿನ ಬದುಕಿಗೂ ಹೊಂದಿಕೊಳ್ಳಲಾಗದೆ ಸೋತುಸುಣ್ಣವಾಗುತ್ತಿದ್ದಾರೆ. ಬಳ್ಳೇ ಹಾಡಿ ಮತ್ತು ಸುತ್ತಲಿನ ಹಾಡಿಗಳ ಜನರು ಹೊರಹೋಗಲು ಒಪ್ಪಿಲ್ಲ. ಆದರೆ ಅರಣ್ಯ ಇಲಾಖೆಯ ನಿರ್ಬಂಧಗಳು ಅವರನ್ನು ಇದ್ದಲ್ಲಿಯೇ ಅಸಹಾಯಕರನ್ನಾಗಿ ಮಾಡಿವೆ. ವರ್ಷದಲ್ಲಿ ಮೂರುತಿಂಗಳು ಕಾಲ ಕೊಡಗಿನ ಕಾಫಿ ಎಸ್ಟೇಟುಗಳಿಗೆ ಹೋಗಿ ಒಂದಷ್ಟು ಕಾಸು ಮಾಡಿಕೊಂಡು ಬರುತ್ತಾರಾದರೂ ಅದು ಅವರ ಬದುಕಿನ ನಿರ್ವಹಣೆಗೆ ಸಾಲುತ್ತಿಲ್ಲ. ೨೦೦೬ರ ಅರಣ್ಯ ಹಕ್ಕು ಕಾಯ್ದೆ ಅವರಿಗೆ ತಮ್ಮ ಕಾಡಿನ ನೆಲೆಗಳನ್ನು ಖಾಯಂಗೊಳಿಸಿದೆಯಾದರೂ ಅದೂ ಸಹ ಈ ಜೇನುಕುರುಬರ ಸಾಮೂಹಿಕ ಬದುಕನ್ನು ಅರ್ಥಮಾಡಿಕೊಳ್ಳಲು ವಿಫಲವಾಗಿದೆ. ಈ ಹಿಂದೆ ಮೈಸೂರಿನ ಕಮಿಷನರ್ ಆಗಿದ್ದ ಹರ್ಷಗುಪ್ತ ಈ ಜನರನ್ನು ಅರಿಯಲು ಒಂದಷ್ಟು ಪ್ರಯತ್ನಿಸಿದ್ದರು ಮಾತ್ರವಲ್ಲ ಅವರ ಸಮಸ್ಯೆಗಳಿಗೆ ಸ್ಪಂದಿಸಲೂ ಯತ್ನಿಸಿದ್ದರು. ಅವರು ವರ್ಗಾವಣೆಯಾದಮೇಲೆ ಅದೂ ಈಗ ಅಂತಹ ಯಾವ ಪ್ರಯತ್ನಗಳೂ ನಡೆದಿಲ್. ತಮ್ಮ ಬದುಕುವ ಹಕ್ಕನ್ನು ರಕ್ಷಿಸಿಕೊಳ್ಳುವ ಹಿನ್ನೆಲೆಯಲ್ಲಿ ಜೇನುಕುರುಬರು ಸಂಘಟಿತರಾಗಿ ಹೋರಾಟವನ್ನೂ ನಡೆಸಿಕೊಂಡು ಬಂದಿದ್ದಾರೆ. ಪರಿಣಾಮವಾಗಿ ಸರ್ಕಾರವು ಡಾ. ಮುಜಾಫರ್ ಅಸ್ಸಾದಿಯವರ ನೇತೃತ್ವದಲ್ಲಿ ನೇಮಿಸಿದ್ದ ಅಧ್ಯಯನ ಸಮಿತಿಯು ಮಧ್ಯಂತರ ವರದಿಯು ಒಂದಷ್ಟು ಆಶಾಭಾವನೆಯನ್ನು ಮೂಡಿಸಿದೆ. ಅದರ ಪೂರ್ಣ ವರದಿ ಇನ್ನೂ ಬರಬೇಕಿದೆ ಎಂಬ ಅಭಿಪ್ರಾಯ ಸಮುದಾಯದ ಹೋರಾಟಗಾರ ಸೋಮಣ್ಣ ಅವರದ್ದು. ಟಿಎಸ್‌ಐನೊಂದಿಗೆ ಮಾತನಾಡಿದ ಸೋಮಣ್ಣ "೨೦೦೬ರ ಅರಣ್ಯ ಹಕ್ಕು ಕಾಯ್ದೆ ವಯುಕ್ತಿಕ ಆಸ್ತಿಯನ್ನು ಮಾತ್ರ ಗುರುತಿಸುವುದರಿಂದ ಜೇನು ಕುರುಬರಿಗೆ ಅನ್ಯಾಯವಾಗಿದೆ. ಅದರ ಪ್ರಕಾರ ನಾವು ಜೇನು ಸಂಗ್ರಹಿಸಬಹುದಾದರೂ ಅದನ್ನು ಮಾರುವಂತಿಲ್ಲ. ಈ ಕಾರಣಗಳಿಂದ ನಾವು ನಮ್ಮ ಸಮುದಾಯಕ್ಕೆ ಸಾಮೂಹಿಕ ಆಸ್ತಿಯನ್ನು ನೀಡಿ ಹಕ್ಕುಪತ್ರಗಳನು ನೀಡಲು ಒತ್ತಾಯಿಸುತ್ತಿದ್ದೇವೆ "ಎಂದರು.
ಬಿ.ಟಿ.ಪೋಷಿಣಿ ಹೀಗೆನ್ನುತ್ತಾರೆ....
ಬಿ.ಟಿ. ಪೋಷಿಣಿ, ಸ್ವಾಮಿ ವೇಕಾನಂದ ಯೂತ್ ಮೂವ್ಮೆಂಟ್ ಸಂಘಟಕಿ |
"ಜೇನುಕುರುಬರಿಗೆ ಯಾವತ್ತೂ ವಯುಕ್ತಿಕ ಆಸ್ತಿ ಎಂಬುದಿಲ್ಲ. ಈ ಅರಣ್ಯ ಹಕ್ಕು ಕಾಯ್ದೆ ಇತರೆ ಆದಿವಾಸಿಗಳಿಗೆ ಅನುಕೂಲ ಮಾಡಿದ್ದರೂ ಜೇನುಕುರುಬರು ಮಾತ್ರ ಅನ್ಯಾಯಕ್ಕೊಳಗಾಗಿದ್ದಾರೆ. ಅವರ ಗುಡಿಸಲು ಬಿಟ್ಟರೆ ಅವರ ಜಮೀನು ಇಲ್ಲ. ಕಾನೂನು ಏನಾದರೂ ಬದಲಾಗದ ಹೊರತು ಅವರಿಗೆ ಬದುಕು ಕಷ್ಟ. ಅವರ ಬದುಕು ಕಾಡಿನಲ್ಲೂ ಕಷ್ಟ ಹೊರಗೂ ಕಷ್ಟ ಎಂಬಂತಾಗಿದೆ. ನೇರವಾಗಿ ಅವರಿಗೆ ಬಿಟ್ಟು ಹೋಗಿ ಅನ್ನದಿದ್ದರೂ ಬೇರೆ ಬೇರೆ ತಂತ್ರಗಳ ಮೂಲಕ ಹೊಹೋಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ"- ಪೋಷಿಣಿ. ಬಿ.ಟಿ. ವಿವೇಕಾನಂದ ಯೂಥ್ ಮೂವ್‌ಮೆಂಟ್, ಸರಗೂರು.
ಬಳ್ಳೇಹಾಡಿಯ ಹುಡುಗರು |
ಬಳ್ಳೇಹಾಡಿಯ ಪ್ರಾಥಮಿಕ ಶಾಲೆ |