ಮೇ 08, 2014

ಆದರೇನಂತೆ, ನಾನೆದ್ದು ಬರುವೆ


ಆದರೇನಂತೆ, ನಾನೆದ್ದು ಬರುವೆ


ನೀ ಬರೆವ ಚರಿತ್ರೆಯಲ್ಲಿ ನನ್ನ ಹಂಗಿಸಬಹುದು ನೀನು
ನಿನ್ನ ತಿರುಚಿದ ಕಹಿಸುಳ್ಳುಗಳಿಂದ
ನನ್ನ ತುಳಿದು ಕೆಡವಬಹುದು ನೀನು
ಆದರೇನಂತೆ,
ಆಗಲೂ ನೆಲದಿಂದ ಪುಟಿವ ಗೋಧೂಳಿಯಂತೆ 
ನಾನೆದ್ದು ಬರುವೆ

ನನ್ನ ಅಹಂಕಾರ ನಿನ್ನ ನಿದ್ದೆಗೆಡಿಸುವುದೇ?
'ನನ್ನ ಜೀವಂತ ಕೋಣೆಯಯೊಳಗೆ
ತೈಲಬಾವಿಗಳಿರುವಂತೆ ನಾ ನಡೆಯುವುದ ನೋಡಿ
ನಿನಗೆ ಅಮರಿಕೊಂಡಿತೆ ಮಬ್ಬು?

ಕೇಳು
ಚಂದಿರರಂತೆ, ಸೂರ್ಯರಂತೆ
ಏಳುವ ಅಲೆಗಳ ನಿಖರತೆಯಂತೆ
ಹೊಸ ಭರವಸೆ ಬಾನೆತ್ತರಕೆ ಚಿಮ್ಮುವಂತೆ
ಈಗಲೂ ನಾನೆದ್ದು ಬರುವೆ

ತಲೆತಗ್ಗಿಸಿ ಕೆಳಗಣ್ಣು ಮಾಡಿ ನೆಲ ನೋಡುತ್ತಾ ನಿಲ್ಲಬಹುದೆಂದು
ಕಣ್ಣೀರ ಹನಿಗಳಂತೆ ನನ್ನ ಭುಜಗಳು ಕೆಳ ಜೋಲುವುವೆಂದು
ನನ್ನಾತ್ಮದ ಯಾತನೆಯಿಂದ ನಿತ್ರಾಣಳಾಗುವೆನೆಂದು
ಕುಸಿದು ಕೂರುವೆನೆಂದು
ನಿರುಕಿಸಿದ್ದೆಯಾ ನೀನು?

ನನ್ನ ದರ್ಪ ನಿನ್ನ ಕೋಪವ ನೆತ್ತಿಗೇರಿಸುವುದೇ?
ನನ್ನದೇ ಆದ ಹಿತ್ತಿಲಲ್ಲಿ ಚಿನ್ನದ ಗಣಿಯ ಅಗೆಯುವಂತೆ
ನಗುವ ನನ್ನ ನಗುವ ನೋಡಿ
ನಿನ್ನೆದೆ ಝಲ್ ಎಂದಿಲ್ಲವೇ?

ಕೇಳಿಲ್ಲಿ,
ನಿನ್ನ ಮಾತಿನ ಬುಲೆಟ್ಟುಗಳು ನನ್ನೆದೆ ಬಗೆಯಲಿ
ನಿನ್ನ ದುರುಗುಡವ ಕಣ್ಣುಗಳು ನನ್ನ ಕತ್ತರಿಸಲಿ
ನಿನ್ನ ದ್ವೇಷದ ಜ್ವಾಲೆ ನನ್ನ ಕೊಲ್ಲಲಿ
ಆದರೇನಂತೆ
ಆಗಲೂ ಸುಳಿಗಾಳಿಯಂತೆ ಬರುವೆ
ನಾನೆದ್ದು ಬರುವೆ

ನನ್ನ ಅಂಗಾಂಗಗಳ ಸೆಳೆತ ನಿನ್ನ ವಿಚಲಿತಗೊಳಿಸಿತೆ
ನನ್ನ ತೊಡೆಗಳು ಸಂಧಿಸುವೆಡೆ
ವಜ್ರವೈಢೂರ್ಯಗಳನಿಟ್ಟುಕೊಂಡವಳಂತೆ
ನಾ ಮೈದುಂಬಿ ಕುಣಿವುದ ಕಂಡು
ನಿನಗೆ ಕಕ್ಕಾಬಿಕ್ಕಿಯೇ?

ಚರಿತ್ರೆಯ ಅಪಮಾನದ ಗುಡಿಸಲೊಳಗಿಂದ
ನಾನೆದ್ದು ಬರುವೆ
ಯಾತನೆಯೇ ಬೇರೂರಿದ ಗತಕಾಲದಿಂದ
ನಾನೆದ್ದು ಬರುವೆ
ಕಪ್ಪುಸಮುದ್ರದಂತೆ ನೆಗೆಯುತ್ತ ಹರಿಯುತ್ತ
ಚಿಲುಮೆಯಂತೆ ಚಿಮ್ಮುತ್ತ,
ಅಲೆಯಂತೆ ಉಕ್ಕುತ್ತ
ಆ ಭಯಾನಕ ರಾತ್ರಿಗಳ ಹಿಂದಿಕ್ಕಿ
ನಾನೆದ್ದು ಬರುವೆ
ಶುಭ್ರ ಸುಂದರ ಮುಂಜಾವಿಗೆ
ನಾನೆದ್ದು ಬರುವೆ
ನನ್ನ ಹಿರೀಕರಿತ್ತ ಬಳುವಳಿಗಳ ತರುವೆ
ಗುಲಾಮರು ಕಂಡ ಕನಸಾಗಿ,
ಭರವಸೆಯ ಬೆಳಕಾಗಿ
ನಾನೆದ್ದು ಬರುವೆ
ನಾನೆದ್ದು ಬರುವೆ
ನಾನೆದ್ದು ಬರುವೆ

-ಮಯಾ ಏಂಜೆಲೋ
(ಅಮೆರಿಕದ ಕವಯಿತ್ರಿ, ಪ್ರಾಧ್ಯಾಪಕಿ, ನಟಿ, ಸಿನಿಮಾ ನಿರ್ಮಾಪಕಿ, ನಾಟಕಕಾರ್ತಿ, ಮಾನವ ಹಕ್ಕು ಹೋರಾಟ ಗಾರ್ತಿ, ಕಪ್ಪು ಮಹಿಳೆಯರ ಸ್ವಾಭಿಮಾನದ ದನಿ... ಹೀಗೆ ಎಲ್ಲವೂ ಆಗಿರುವ ಮಹಾನ್ ಲೇಖಕಿ ಮಯಾ ಏಂಜೆಲೋ ಬರೆದ - Still I Rise ಕವಿತೆಯ ಒಂದು ಅನುವಾದ)


ಕಾಮೆಂಟ್‌ಗಳಿಲ್ಲ:

ಮಾನ್ಯ ಸಬಾದ್ಯಕ್ಷರಿಗೆ ಒಂದು ಬಹಿರಂಗ ಪತ್ರ

  ಮಾನ್ಯ ವಿದಾನಸಬೆಯ ಸಬಾದ್ಯಕ್ಷರಾದ ಯು ಟಿ ಕಾದರ್ ಅವರೆ, ಶಾಸಕರ ಶಿಬಿರಕ್ಕೆ ಕೆಲವರು ಆಗಮಿಸುವುದು ದೃಡಪಟ್ಟಿಲ್ಲ ಎಂದು ತಿಳಿಸಿದ್ದೀರಿ. ಸಂತೋಷ. ದೃಡಪಡುವುದೇ ಬೇಡ ಎಂದ...

ಮರದೊಂದು ಎಲೆ ನಾನು..

ನನ್ನ ಫೋಟೋ
A Writer, Researcher, Journalist and Activist. Born and brought up from Kugwe a village near Sagara, Shimoga district of Karnataka state. Presently working as the Editor In Chief of PEEPAL MEDIA /PEEPAL TV.