ಅಣ್ಣಾ ಹಜಾರೆಗೆ ಜಯವಾಗಲಿ! ಆದರೆ..............................
ಅಣ್ಣಾ ಹಜಾರೆ ಪ್ರಾಮಾಣಿಕರು, ಭ್ರಷ್ಟಾಚಾರದ ವಿರುದ್ಧದ ಹೋರಾಟದ ಕುರಿತ ಅವರ ಬದ್ಧತೆ ಪ್ರಶ್ನಾತೀತ. ಕಾಂಗ್ರೆಸ್ ನಾಯಕರು ಮತ್ತು ಯುಪಿಎ ಸರ್ಕಾರ ಏನೇ ಹೇಳಲಿ, ಟೀಂ ಅಣ್ಣಾ ಮೇಲೆ ಏನೇ ಗೂಬೆ ಕೂರಿಸಲಿ ಅದು ಅಣ್ಣಾ ಹಜಾರೆಯವರ ನ್ಯಾಯನಿಷ್ಠೆಗೆ ಧಕ್ಕೆಯುಂಟು ಮಾಡಲಾರದು. ಆದರೆ ಈ ಸಂದರ್ಭದಲ್ಲಿ ನಾವೆಲ್ಲರೂ ಕೇಳಿಕೊಳ್ಳಲೇಬೇಕಾದ ಬಹುಮುಖ್ಯ ಪ್ರಶ್ನೆಯೊಂದಿದೆ. ಪ್ರಾಮಾಣಿಕತೆ, ಬದ್ಧತೆ ಹಾಗೂ ನ್ಯಾಯನಿಷ್ಠೆಗಳು ಮಾತ್ರ ಒಂದು ಚಳವಳಿಯನ್ನು ಯಶಸ್ವಿಗೊಳಿಸುತ್ತವಾ? ಈ ಕುರಿತು ನನ್ನ ಅಭಿಪ್ರಾಯ ಹಂಚಿಕೊಳ್ಳುವ ಮುನ್ನ ಹೇಳಿಬಿಡುತ್ತೇನೆ. ಜನಲೋಕಪಾಲ ಜಾರಿಗಾಗಿ ಬೆಂಗಳೂರಿನಲ್ಲಿ ಚಳವಳಿ ಆರಂಭಗೊಂಡ ಸಂದರ್ಭದಲ್ಲಿ ನಡೆದ ರ‍್ಯಾಲಿಯಲ್ಲಿ, ನಂತರ ಫ್ರೀಡಂ ಪಾರ್ಕಿನಲ್ಲಿ ನಡೆದ ಧರಣಿಯಲ್ಲಿ ನಾನು ಪಾಲ್ಗೊಂಡಿದ್ದೆ. ಸಮಾಜದ ವಿವಿದ ಜನವರ್ಗಗಳು ಸ್ಟ್ರೈಕು, ಧರಣಿ ಅಂತೆಲ್ಲಾ ನಡೆಸುವಾಗ ಮುಖ ಸಿಂಡರಿಸಿಕೊಂಡು ಹೋಗುತ್ತಿದ್ದ ಐಟಿ ಗಯ್‌ಗಳು ಅಲ್ಲಿ ಅಂದು ಹೋರಾಟದ ಹುಮ್ಮಸ್ಸಿನಲ್ಲಿ ಕುಳಿತದ್ದು ಕಂಡು ಬಹಳ ಖುಷಿಗೊಂಡಿದ್ದೆ. ನಂತರ ಇತ್ತೀಚೆಗೆ ಅಣ್ಣಾ, ಕಿರಣ್ ಬೇಡಿ, ಕೇಜ್ರಿವಾಲ್ ತಂಡ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಸಿದ ಸಭೆಯಲ್ಲಿ ಪಾಲ್ಗೊಂಡಿದ್ದೆ. ಕೇಜ್ರಿವಾಲ್ ಅವರು ತಮ್ಮ ಕರಡಿನ ಪರವಾಗಿ ಮಂಡಿಸಿದ ಪ್ರತಿಯೊಂದಕ್ಕೂ ಅಲ್ಲಿದ್ದ ಎಲ್ಲರಂತೆ ನಾನೂ ಬೆಂಬಲ ಸೂಚಿಸಿದ್ದೆ. ಸರ್ಕಾರಿ ಲೋಕಪಾಲ ಮಸೂದೆಯನ್ನು ಎಲ್ಲರಂತೆ ನಾನೂ ಖಂಡಿಸಿದೆ....