ಮೇ 23, 2011

Moments With Nagesh hegade


ನಾಗೇಶ್ ಹೆಗಡೆಯವರ ಮನೆಯಲ್ಲಿ ಕಳೆದ ಒಂದೆರಡು ತಾಸು.......


               
              ನಮ್ಮ 'ದ ಸಂಡೆ ಇಂಡಿಯನ್ ಪತ್ರಿಕೆಯ ’ಸಾಕ್ಷಿ ಪ್ರಜ್ಞೆ ಅಂಕಣಕ್ಕಾಗಿ ಈ ಸಲಕ್ಕೆ ನಾಗೇಶ್ ಹೆಗಡೆಯವರನ್ನು ಸಂದರ್ಶನ ಮಾಡೋಣ ಎಂದು ತೀರ್ಮಾನಿಸಿ ಅವರಿಗೆ ಕಾಲ್ ಮಾಡಿದಾಗ ನಿಮ್ಮ ಪ್ರಶ್ನೆಗಳೇನಿವೆ ಕಳುಹಿಸಿ, ನಾನು ಉತ್ತರ ಕಳುಹಿಸುತ್ತೇನೆ ಎಂದರು. ಸಂದರ್ಶನದ ನೆಪದಲ್ಲಿಯಾದರೂ ಅವರನ್ನು ಖುದ್ದಾಗಿ ಮಾತನಾಡಿಸುವ ಅವಕಾಶ ಮಿಸ್ ಆಗಿ ಬಿಡುತ್ತಲ್ಲಾ, ಛೆ ಎಂದು ಮನಸ್ಸಲ್ಲೇ ಹೇಳಿಕೊಂಡು ’ಆಯ್ತು ಸರ್ ಎಂದು ಮರುಮಾತಲ್ಲೇ 'ನೀವು ಫ್ರೀ ಇರೋದಾದ್ರೆ ನಿಮ್ಮ ಮನೆಗೇ ಬರ‍್ತೀನಿ ಸರ್’ ಎಂದೆ. ಅದಕ್ಕವರು, ನಿಮಗೆ ಬರಬೇಕೆಂದರೆ ಬನ್ನಿ. ನಾನು ಬಿಡುವಾಗೇ ಇರ‍್ತೀನಿ. ಆದ್ರೆ ಪ್ರಶ್ನೆಗಳನ್ನು ಮೊದಲೇ ಕಳುಹಿಸಿರಿ ಎಂದರು. ’ಓಕೆ’ ಸರ್ ಹಾಗಾದ್ರೆ ಬೆಳಿಗ್ಗೆ ಬರ‍್ತೀನಿ ಎಂದು ಅವರ ಮನೆಯ ವಿಳಾಸ ಬರೆದುಕೊಂಡೆ.
ಪತ್ರಿಕೋದ್ಯಮದಲ್ಲಿ ಇನ್ನೂ ಅಂಬೆಗಾಲಿಡುತ್ತಿರುವ ನನ್ನಂತಹವರಿಗೆ ಈ ಕ್ಷೇತ್ರದಲ್ಲಿ ಅಪಾರ ಸಾಧನೆಯನ್ನೂ, ಅನುಭವವನ್ನೂ ಗಳಿಸಿಕೊಂಡಿರುವ ನಾಗೇಶ್ ಹೆಗಡೆಯವರಂತಹವರ ಜೊತೆ ಒಂದಷ್ಟು ಹೊತ್ತು ಕಳೆಯುವುದಕ್ಕಿಂತ ಬೇರೆ ಭಾಗ್ಯ ಇದೆಯೇ? ಮರುದಿನ ಬೆಳಿಗ್ಗೆ ಆರುವರೆಗೇ ಮನೆ ಬಿಟ್ಟು ಕೆಂಗೇರಿಯಿಂದ ಹಿರಿಯ ಮಿತ್ರ ಮೂರ್ತಿಯವರ ಕಾರಿನಲ್ಲಿ ನಾಗೆಶ್ ಹೆಗಡೆಯವರ ಮನೆ ಇರುವ 'ಮೈತ್ರಿ ಪಾರಂ’ಗೆ ಹೋಗಿ ತಲುಪುವುದು ಒಂಭತ್ತೂ ಕಾಲು. ನಾನು ಬೆಳಿಗ್ಗೆ ಹೊರಡುವಾಗ ನಾಗೇಶ್ ಹೆಗಡೆಯವರಿಗೆ ಕಾಲ್ ಮಾಡಿ ತಿಳಿಸುವುದನ್ನೇ ಮರೆತು ಬಿಟ್ಟಿದ್ದೆ. ಹಾಗಾಗಿ ಅವರು ಇನ್ನೂ ತಮ್ಮ ಕೆಲಸಗಳಲ್ಲಿ ತೊಡಗಿದ್ದವರು ನಮ್ಮನ್ನು ಆದರದಿಂದ ಬರ ಮಾಡಿಕೊಂಡವರು ’ಒಂದರ್ಧ ಗಂಟೆ ಫಾರಂ ಒಳಗೆಲ್ಲಾ ಸುತ್ತಾಡಿ ಬನ್ನಿ’ ಎಂದು ಹೇಳಿದರು. ಸೈ ಎಂದು ಹೊರಟೆವು. 

ಮೈತ್ರಿ ಫಾರಂ

ಫಾರಂ ಒಳಗೇ ಹೀಗೇ ಸುತ್ತಾಡುತ್ತಾ ನಮಗಾಗಿದ್ದು ಥೇಟ್ ನಮ್ಮ ಮಲೆನಾಡಿನ ಅನುಭವವೇ. ಮಾವಿನ ಮರಗಳು, ಬಿದಿರಿನ ತೋಪುಗಳು, ತರಹೇವಾರಿ ಹೂ ಬಿಟ್ಟ ಗಿಡಗಳನ್ನೆಲ್ಲಾ ನೋಡುತ್ತಾ, ಫೋಟೋ ತೆಗೆಯುತ್ತಾ ಅಲ್ಲೆಲ್ಲಾ ಅಡ್ಡಾಡಿದೆವು. ಫಾರಂ ಪಕ್ಕದಲ್ಲಿರುವ ’ಬೆಕ್ಕಿನ ಕಲ್ಲು ಗುಡ್ಡದ ಪವಿತ್ರವನ’ದ ಮೇಲೇರಿ ಅಲ್ಲಿರುವ ಆಲದ ಮರ ನೋಡಿದೊಡನೇ ನಮ್ಮ ಊರಿನಲ್ಲಿ ಸಣ್ಣವರಿದ್ದಾಗ ಆಲದ ಮರ ಹತ್ತಿ ಆಟವಾಡುತ್ತಿದ್ದು ನೆನಪಾಗಿ ಈ ಮರವನ್ನೂ ಹತ್ತೇ ಬಿಡುವ ಮನಸ್ಸಾಯಿತು. ಮೂರ್ತಿ ನಾನು ಇಬ್ಬರೂ ಹತ್ತಿ ಇಳಿದು ಮತ್ತೆ ನಾಗೇಶ್ ಹೆಗಡೆಯವರ ಮನೆ ತಲುಪುವಷ್ಟರಲ್ಲಿ ಹತ್ತು ಗಂಟೆ.
ನಾಗೇಶ್ ಹೆಗಡೆಯವರ ಮನೆ

ನಿಜ ಎಂದರೆ ನಾವು ಸಂದರ್ಶನಕ್ಕೆಂದು ಕಳುಹಿಸಿದ್ದ ಪ್ರಶ್ನೆಗಳಿಗೆ ಅವರು ಆಗಾಗಲೇ ಉತ್ತರ ಬರೆದಾಗಿತ್ತು. ಹೀಗಾಗಿ ನಾವು ನಾಗೇಶ ಹೆಗಡೆಯವರ ಮನೆಯ ಜಗಲಿಯ ಮೇಲೆ ಕುಳಿತುಕೊಂಡು ಅವರ ಅನುಭವಗಳನ್ನು ಕೇಳಲು ಕುಳಿತೆವು. ಸ್ವಲ್ಪ ಹೆಚ್ಚು ಅನ್ನಿಸುವಷ್ಟೇ ಮಾತನಾಡಿ ಬೇರೆಯವರನ್ನೂ ಮಾತಿಗೆಳೆಯುವ ಮೂರ್ತಿ  ನಾಗೇಶ್ ಹೆಗಡೆಯವರನ್ನು ಅದೂ, ಇದೂ ಕೇಳುತ್ತಾ ಹೋದಂತೆ ನಾನು ಸುಮ್ಮನೇ ಕೇಳಿಸಿಕೊಳ್ಳುತ್ತಾ ಆಗಾಗ ನಡುವೆ ಬಾಯಿ ಹಾಕುತ್ತಾ, ಫೋಟೋ ತೆಗೆಯುತ್ತಾ, ನಾನಾ ಜಾತಿಯ ಹಕ್ಕಿಗಳ ಕಲರವ ಸವಿಯುತ್ತಾ ’ಕಾಫಿ’ಯ (ನಾಗೇಶ್ ಹೆಗಡೆಯವರ ಮನೆಯ ನಾಯಿಯ ಹೆಸರು)ನ್ನು ನೋಡುತ್ತಾ ಕುಳಿತುಕೊಂಡಿದ್ದೆ.

ಸಾರ್ ನೀವು ಜರ್ನಲಿಸಂ ಕ್ಷೇತ್ರಕ್ಕೆ ಹೇಗೆ ಬಂದ್ರಿ? ಎಂಬ ನಮ್ಮ ಪ್ರಶ್ನೆಗೆ ಅವರು ತಾವು ಇಪ್ಪತ್ತು ವರ್ಷಗಳ ಹಿಂದೆ ಜರ್ನಲಿಸ್ಟ್ ಆದ ಬಗೆಯನ್ನು ಹೇಳಿದರು. ಅವರು ಖರಗಪುರ ಐಐಟಿ, ದೆಹಲಿಯ ಜೆಎನ್‌ಯುನಲ್ಲಿ ಓದಿದ್ದು ಪರಿಸರ ವಿಜ್ಞಾನ. ಹಾಗೆ ನೋಡಿದರೆ ಈ ವಿಷಯದಲ್ಲಿ ದೇಶದಲ್ಲೇ ಮೊತ್ತ ಮೊದಲು ಎಂಫಿಲ್ ಪಡೆದವರು ನಾಗೇಶ್ ಹೆಗಡೆ. ಇವರದ್ದೇ ಮೊದಲ ಬ್ಯಾಚ್. ನಂತರದಲ್ಲಿ ಉತ್ತರಖಂಡ್‌ನ ನೈನಿತಾಲ್‌ನಲ್ಲಿ ಪರಿಸರ ವಿಜ್ಞಾನ ಅಧ್ಯಾಪಕರಾಗಿ ಕೆಲಸ. ದೇಶದ ಮೊದಲ ಪರಿಸರ ವಿಜ್ಞನ ಪ್ರಾಧ್ಯಾಪಕ ಹುದ್ದೆ ಅದು. ಈ ಹೊತ್ತಿಗಾಗಲೇ ತಮ್ಮ ಹೈಸ್ಕೂಲು ಅವಧಿಯಿಂದಲೂ ಪ್ರಬಂಧ, ಪತ್ರಿಕೆಗಳಿಗೆ ಸಣ್ಣಪುಟ್ಟ ಲೇಖನ ಕತೆ ಬರೆಯುವ ಹವ್ಯಾಸ ಇಟ್ಟು ಕೊಂಡಿದ್ದವರು ನಾಗೇಶ್ ಹೆಗಡೆ. ಈ ಸಂದರ್ಭಕ್ಕೆ ಸುಧಾ ಪತ್ರಿಕೆಯಲ್ಲಿ ಕೆಲಸಕ್ಕೆ ಅರ್ಜಿ ಆಹ್ವಾನಿಸಲಾಗಿತ್ತು. ಏನಾದರಾಗಲಿ ಎಂದು ತಾವೂ ಒಂದು ಅರ್ಜಿ ಹಾಕಿದರೆ ಇವರು ಆಯ್ಕೆಯಾಗಿಯೇ ಬಿಟ್ಟಿದ್ದರು. ಸುಧಾದಲ್ಲಿ ಕೆಲಸ ಮಾಡುತ್ತಿದ್ದಂತೆಯೇ ನಂತರದಲ್ಲಿ ಇವರನ್ನು ಪ್ರಜಾವಾಣಿಯ ವಿಜ್ಞಾನ ವರದಿಗಾರರಾಗಿ ನೇಮಿಸಲಾಯಿತು. ಆಗ ಪ್ರಜಾವಾಣಿಯಲಿದ್ದ ವಡ್ಡರ್ಸೆ ರಘುರಾಮ ಶೆಟ್ಟರು ’ಯಾರು ತಂದ್ರೋ ನಿಮ್ಮನ್ನ.....? ಹೋಗಿ ಹುಡುಕ್ಕೊಂಡ್ ಹೋಗಿ. ಏನು ಸಿಗತ್ತೋ ಬರ್ದು ಬಿಡಿ’ ಎಂದರಂತೆ. ಆ ಸಂದರ್ಭದಲ್ಲಿ ಇವರು ಮಾತ್ರವಲ್ಲ, ಆರ್.ಪೂರ್ಣಿಮಾ, ಇಂದೂಧರ ಹೊನ್ನಾಪುರ ಇಂತಹವರನ್ನೆಲ್ಲಾ ಸೇರಿಸಿಕೊಳ್ಳಲಾಗಿತ್ತು. ವಿಶೇಷವೆಂದರೆ ಆಗ ನಾಗೇಶ್ ಹೆಗಡೆ ಬರೆದ ಹಲವಾರು ವಿಜ್ಞಾನ ಸಂಬಂಧಿ ಲೇಖನಗಳು ಪ್ರಜಾವಾಣಿ ಮುಖಪುಟದಲ್ಲಿ ಪ್ರಕಟವಾಗುತ್ತಿದ್ದವಂತೆ. ’ಕಾರ್ಬನ್ ಆರ್ಕ್ ಬಗ್ಗೆ ಬರೆದ ಲೇಖನ ಲೀಡ್ ಸುದ್ದಿಯಾಗಿತ್ತು’ ಎನ್ನುತ್ತಾರೆ ನಾಗೇಶ್ ಹೆಗಡೆ. ನಂತರ ಅವರಿಗೆ ಬಾತ್ಮೀದಾರರಾಗಿ ಭಡ್ತಿ ನೀಡಿ ನುಡಿಚಿತ್ರಗಳನ್ನು ಬರೆಯುವ ಕೆಲಸ ನೀಡಲಾಯಿತು. ಇದು ಆಗ ಕನ್ನಡ ಪತ್ರಿಕೋದ್ಯಮ ಲೋಕದಲ್ಲಿ ಹೊಸ ಪ್ರಯೋಗ. ಪ್ರಜಾವಾಣಿಯ ಗುರುವಾರದ ’ಕರ್ನಾಟಕ ದರ್ಶನ’ ಪುರವಣಿ ಆರಂಭಗೊಂಡಾಗ ಅದರ ಜವಾಬ್ದಾರಿ ಹೊತ್ತಿದ್ದು ನಾಗೇಶ್ ಹೆಗಡೆ. ಇದು ನಾಡಿನ ಪತ್ರಿಕೋದ್ಯಮದ ನುಡಿಚಿತ್ರ ಬರಹಕ್ಕೆ ಹೊಸ ತಿರುವನ್ನೇ ನೀಡಿ ನಾಡಿನ ಮೂಲೆ ಮೂಲೆಯಲ್ಲಿ ಬರಹಗಾರರು ಉದ್ಭವಿಸಿದರು. ಹೀಗೆ ಹಲವಾರು ಬರಹಗಾರರ ಬೆನ್ನಿಗಿದ್ದುದು, ಬೆನ್ನು ಬೀಳುತ್ತಿದ್ದುದು, ಬೆನ್ನು ತಟ್ಟುತ್ತಿದ್ದುದು ನಾಗೇಶ್ ಹೆಗಡೆ. ತದ ನಂತರ ಮತ್ತೆ ಸುಧಾ ಬಳಗ ಅವರನ್ನು ವಾಪಾಸು ಕರೆದುಕೊಂಡಿತು. 

ಹೀಗೆ ನಾಗೇಶ್ ಹೆಗಡೆ ಪತ್ರಿಕೋದ್ಯಮದಲ್ಲಿ ತಮ್ಮ ಆರಂಭಿಕ ದಿನಗಳನ್ನು ಹೇಳುತ್ತಾ ಹೋದರು. ನಂತರ ನಮ್ಮ ಚರ್ಚೆ ಇಂದಿನ ಪತ್ರಿಕೋದ್ಯಮದ ಗುಣ ಮಟ್ಟ, ಕೃಷಿ, ಆರೋಗ್ಯ, ಪರಿಸರ, ಉದ್ಯೋಗ, ಹೀಗೆ ಹತ್ತುಹಲವು ವಿಚಾರಗಳ ಸುತ್ತ ಮಾತನಾಡುತ್ತಾ ಎರಡೂವರೆ ಗಂಟೆ ಅವಧಿ ಬರೀ ಇಪ್ಪತ್ತು ನಿಮಷಗಳಲ್ಲಿ ಮುಗಿದುಹೋದಂತೆನ್ನಿಸಿತು.

    ಅವರ ಮನೆಯಲ್ಲಿದ್ದಷ್ಟೂ ಹೊತ್ತು ಪದೇ ಪದೇ ನಮಗನ್ನಿಸುತ್ತಿದ್ದುದು ನಾವು ಮಲೆನಾಡಿನ ಯಾವುದೋ ಕಾಡೊಳಗಿನ ಊರಲ್ಲಿ ಇದ್ದೀವಾ ಅಂತ. ನಾಗೇಶ್ ಹಗಡೆಯವರ ಮನೆನ ಮನೆಯ ಗೋಡೆ ಮೇಲಿನ ಚಿತ್ತಾರ, ಬಾಗಿಲಿಗೆ ಇಳಿಬಿಟ್ಟಿದ್ದ ಬಳ್ಳಿ,  ಮನೆ ಮುಂದಿನ ತರಹೇವಾರಿ ಹೂಗಿಡಗಳು, ಗಿಡ ಮೂಲಿಕೆಗಳು, ಮಾವು, ತೆಂಗು, ಚಿಕ್ಕು ಹೀಗೆ ನಾನಾ ತರದ ಮರ ಗಿಡಗಳು, ಕೋಗಿಲೆಯ ಹಾಡು, ಬುಲ್ ಬುಲ್ ಹಕ್ಕಿಯ ಉಲಿತ, ಪಿಕಳಾರಗಳ (ಫ್ಲವರ್ ಪೆಕ್ಕರ್‌)ಗಳ ಚಿಲಿಪಿಲಿ, ಜೀರುಂಡೆಯ ಕೀರಾಟ, ಕಾಗೆಗಳ ಕಿರುಚಾಟ...... ಇವೆಲ್ಲವುಗಳ ಜೊತೆಗೆ ಅವರು ತಂದಿಟ್ಟ ಅವಲಕ್ಕಿ ಕೊಬ್ಬರಿ, ಬ್ಲಾಕ್ ಟೀ!.....

 'ಯಾಕೆ ಬ್ಲಾಕ್ ಟೀ? ಇಲ್ಲಿ ಹಾಲು ಸಿಗಲ್ವಾ?’  

     ನಾಗೇಶ್ ಹೆಗಡೆ ತಾವು  ಡೈರಿಯಿಂದ ಬರುವ ಹಾಲು ಹಾಗೂ ಹಾಲುತ್ಪನ್ನಗಳನ್ನು ಉಪಯೋಗಿಸುವುದಿಲ್ಲ  ಅಂತ ನಮಗೆ ತಿಳಿದದ್ದು ಆಗಲೇ.  "ಅಷ್ಟಕ್ಕೂ  ದೊಡ್ಡವರಾದ ಮೇಲೂ ಹಾಲು ಕುಡಿಯುವುದು ಮನುಷ್ಯ ಮಾತ್ರ ತಾನೇ?  ನಮಗೆ ಬರೋ ಅರ್ಧ ರೋಗಗಳು ಈ ಹಾಲುತ್ಪನ್ನಗಳಲ್ಲೇ ಇವೆ. ಆ ಹಸುಗಳಿಗೆ ಅದೇನೇನು ಫೀಡ್ ಮಾಡ್ತಾರೋ.... ನಮ್ ಡೈರಿ  ಹಾಲಿನಲ್ಲಿ ಎಂಡೋಸಲ್ಫಾನ್ ಕೂಡಾ ಇರುತ್ತೆ ಎನ್ನುವ ಅಂಶ ಕೂಡಾ ಬೆಳಕಿಗೆ ಬಂದಿದೆ.." ಎನ್ನುವ ವಿಷಯಗಳನ್ನು ಅವರಿಂದ ಕೇಳಿ ನಮಗೆ ಶಾಕ್..! ಅಷ್ಟೇ ಏಕೆ ನಾಗೇಶ್ ಹೆಗಡೆ ಫ್ರಿಜ್, ವಾಷಿಂಗ್ ಮಶೀನ್ ಇಟ್ಟುಕೊಂಡಿಲ್ಲ. ಸುಮಾರು ೨೮ ವರ್ಷದ ಹಿಂದಿನ ಒಂದು ಹಳೆಯ ಟಿವಿ ಇದೆ. ಇದು ನಾಗೇಶ್ ಹೆಗಡೆಯವರು ಕೊಳ್ಳುಬಾಕ ಸಂಸ್ಕೃತಿಯಿಂದ ತಮ್ಮನ್ನು ಆದಷ್ಟು ದೂರ ಇಟ್ಟುಕೊಂಡಿರುವ ಬಗೆ. ಬಟ್ಟೆ ತೊಳೆಯಲು ಅಡಿಗೆ ಮಾಡಲು ಟೈಮೇ ಆಗಲ್ಲ, ಹಾಗಾಗಿ ಫ್ರಿಜ್ , ವಾಷಿಂಗ್ ಮಷೀನ್ ತೊಗೋ ಮಾರಾಯಾ ಎಂದು ನನ್ನ ಮನಸ್ಸಿನೊಳಗೆ ಆಗಾಗ ತಲೆ ಇತ್ತುತ್ತಿದ್ದ ಕೊಳ್ಳುಬಾಕ ಆಲೋಚನೆಗೆ 'ರಪ್’ ಎಂದು ಬಡಿಯಿತು ನಾಗೇಶ್ ಹೆಗಡೆಯವರ ಜೀವನ ಶೈಲಿ. ಫ್ರಿಜ್ ಅಂತೂ ’ನಮಗೂ ಕಸದ ಬುಟ್ಟಿಗೂ ಅದು ಮಧ್ಯವರ್ತಿ ಮಾತ್ರ’ ಎಂದು ನಾಗೇಶ್ ಹೆಗಡೆ ಹೇಳಿದ್ದರಲ್ಲಿ ಸತ್ಯವಿಲ್ಲದಿಲ್ಲ ಅಲ್ಲವೇ?


ತಮ್ಮ  ಫಾರಂನಲ್ಲಿ ಸಸಿಗಿಡಗಳನ್ನು ಆದಷ್ಟು ಸಹಜವಾಗಿ ಬೆಳಸುವ ಪ್ರಯತ್ನ ಕಂಡಿತು. ನೀರನ್ನು ಆದಷ್ಟು ವೃಥಾ ಪೋಲಾಗದಂತೆ ಎಚ್ಚರಿಕೆ ವಸಹಿಸಿದ್ದು ಗೋಚರಿಸಿತು.

ಅಂಗಳದಲ್ಲಿ ಬಿಟ್ಟ ಹೂ
ಈ ಮೊದಲೇ ನಾಗೇಶ್ ಹೆಗಡೆಯವರ ಬಗ್ಗೆ ಅವರ ಬರಹಗಳನ್ನು ಓದಿ, ಹೆಗ್ಗೋಡಿನ ಸಂಸ್ಕೃತಿ ಶಿಬಿರದಲ್ಲಿ ಅವರ ಭಾಷಣ ಕೇಳಿ ಅವರ ಬಗ್ಗೆ ಅಪಾರ ಗೌರವ ಹೊಂದಿದ್ದ ನನಗೆ ಅವರ ಸರಳಾತಿ ಸರಳ ಜೀವನ ಶೈಲಿಯನ್ನು ನೀಡಿ ಅವರ ಮೇಲಿನ ಗೌರಾವಾಧರ ಇಮ್ಮಡಿಗೊಂಡಿತು. ಇದರ ಜೊತೆ ಸುತ್ತ ಮುತ್ತಲಿನ ಹಲವಾರು ಜನರ ಜೊತೆಗೂಡಿ ಹಲವಾರು ಕಾರ್ಯಚಟುವಟಿಕೆಗಳನ್ನೂ ಅವರು ನಡೆಸುತ್ತಿದ್ದುದು ಕೇಳಿ ಮತ್ತಷ್ಟು ಸಂತೋಷವಾಯಿತು. ಪರಿಸರವನ್ನು, ಸಮಾಜವನ್ನು ಆರೋಗ್ಯವಾಗಿಡಬಯಸುವ ಹಲವಾರು ಯುವಕರ ಪ್ರಯತ್ನದ ಹಿಂದೆ ನಾಗೇಶ್ ಹೆಗಡೆ ಎಂಬ ಶಕ್ತಿ ಇದೆ ಎನ್ನುವುದು ನಮಗೆ ಅರಿವಾಯಿತು. 
ಬೆಂಗಳೂರಿನ ಟ್ರಾಫಿಕ್ನಲ್ಲಿ ದಿನಾ ಸಿಕ್ಕಾಕಿಕೊಂಡು ಚಿಟ್ಟು ಹಿಡಿದು ಹೋಗಿದ್ದ ತಲೆಗೆ ತಾಜಾ ಗಾಳಿ ಹೊಕ್ಕಂತಾಗಿ ’ಮತ್ತೆ ಬನ್ನಿ’ ಎಂಬ ಅವರ ಪ್ರೀತಿಯ ಆಹ್ವಾನಕ್ಕೆ ವಂದಿಸಿ ಹೊರಟೆವು.
ನಾಗೇಶ್ ಹೆಗಡೆಯವರ ನಾಯಿ -ಕಾಫಿ


 ಧರ್ಮ V/s ರಿಲಿಜನ್ ಧರ್ಮ ಎಂತರೆ ಒಳಿತು ಮಾಡುವುದು, ನೀತಿ ಮಾರ್ಗದಲ್ಲಿ ನಡೆಯುವುದು ಎಂದು ನೀವು ಭಾವಿಸುವುದಾದರೆ ಅಂತಹ ತತ್ವ ಹೇಳಿದ ಧರ್ಮಗಳು ಮೂರು. -  1. ಬೌದ್ಧ ಧರ್...

ಮರದೊಂದು ಎಲೆ ನಾನು..

ನನ್ನ ಫೋಟೋ
A Writer, Researcher, Journalist and Activist. Born and brought up from Kugwe a village near Sagara, Shimoga district of Karnataka state. Presently working as the Editor In Chief of PEEPAL MEDIA /PEEPAL TV.