ಮೇ 26, 2012

ಕನ್ನಡಕ್ಕೆ ಬಂದ ಮತ್ತಷ್ಟು ಫ್ರೆಂಚ್ ಕತೆಗಳು




ಕೃತಿ: ಕಡಲಾಚೆಯ ಚೆಲುವೆ: ಫ್ರೆಂಚ್ ಕಥಾ ಸಾಹಿತ್ಯ.
ಅನುವಾದಕರು: ಕೇಶವ ಮಳಗಿ
ಪ್ರಕಾಶಕರು: ಕಥನ ಪ್ರಕಾಶನ
ಪುಟಗಳು: ೨೦೮
ಬೆಲೆ’ ೧೨೦ ರೂಪಾಯಿ


'ಕಥನ ಪ್ರಕಾಶನ’ವು ಪ್ರಕಟಿಸಿರುವ, ಕನ್ನಡದ ಪ್ರಮುಖ ಕತೆಗಾರರಲ್ಲಿ ಒಬ್ಬರಾದ ಕೇಶವ ಮಳಗಿಯವರ ’ಕಡಲಾಚೆಯ ಚೆಲು’ ಮತ್ತು ’ಸಂಕಥನ’ ಎಂಬ ಎರಡು ಕೃತಿಗಳು ಅವುಗಳ ವಿಷಯ ವಸ್ತುವಿನ ಕಾರಣಕ್ಕೆ ಅತ್ಯಂತ ಪ್ರಾಮುಖ್ಯತೆ ಇರುವಂತವು. ಎರಡೂ ಕೃತಿಗಳು ಫ್ರೆಂಚ್ ಸಾಹಿತ್ಯ ಲೋಕದ ಅನರ್ಘ್ಯ ರತ್ನಗಳನ್ನು ಕನ್ನಡಕ್ಕೆ ಪರಿಚಯಿಸುವಲ್ಲಿ ಮಹತ್ವದ ಕೊಡುಗೆ ನೀಡಿವೆ. ಇದರಲ್ಲಿ ’ಸಂಕಥನ’ವು ಫ್ರೆಂಚ್ ನೆಲದ ವೈಚಾರಿಕ ಧಾರೆಯನ್ನು, ಸಿದ್ದಾಂತಿಗಳನ್ನು ಅವರ ತಾತ್ವಿಕ ಬರೆಹಗಳ ಸಮೇತ ಪರಿಚಯಿಸಿಕೊಟ್ಟರೆ ’ಕಡಲಾಚೆಯ ಚೆಲುವೆ’ ಕೃತಿಯು ಫ್ರೆಂಚ್ ಕಥೆಗಳನ್ನು ಅವುಗಳೆಲ್ಲಾ ಸತ್ವದೊಂದಿಗೆ ಕನ್ನಡದ ಓದುಗರಿಗೆ ದಾಟಿಸುತ್ತದೆ.
ಫ್ರೆಂಚ್ ಸಾಹಿತ್ಯಲೋಕವನ್ನು ಕನ್ನಡ ಓದುಗರಿಗೆ ತೆರೆದಿಡುವ ಪ್ರಯತ್ನವನ್ನು ಈ ಹಿಂದೆ ಅನೇಕರು ಮಾಡುತ್ತಲೇ ಬಂದಿದ್ದಾರೆ. ಡಾ. ಡಿ.ಎ.ಶಂಕರ್ ಅನುವಾದಿಸಿದ್ದ ಅಲ್ಬರ್ಟ್ ಕಮುವಿನ ’ಅನ್ಯ’ ಲಂಕೇಶರ ಅನೇಕ ಬರಹಗಳು ಮತ್ತು ಎಸ್. ದಿವಾಕರ್, ಬಸವರಾಜ ರಾಯ್ಕರ್, ಕೆ.ವಿ.ತಿರುಮಲೇಶ್, ಚಂದ್ರಶೇಖರ್ ಆಲೂರು, ಮುಂತಾದವರು ಅನುವಾದಿಸಿರುವ ಹಲವಾರು ಬಿಡಿಬಿಡಿ ಕಥೆಗಳು ಕನ್ನಡಿಗರಿಗೆ ಫ್ರೆಂಚ್ ಮಣ್ಣಿನ ಸೊಗಡನ್ನು ಅನುಭವಿಸುವ ಅವಕಾಶ ಒದಗಿಸಿವೆ. ಆದರೆ ಫ್ರೆಂಚ್ ಕಥಾ ಸಾಹಿತ್ಯವನ್ನು ಹಾಗೂ ವಿಚಾರ ಸಾಹಿತ್ಯವನ್ನು ಸಾರಸಂಗ್ರಹವಾಗಿ ಕನ್ನಡಕ್ಕೆ ತರುತ್ತಿರುವುದು ಈಗ ಇದೇ ಮೊದಲು. ಕೇಂದ್ರ ಸಂಸ್ಕೃತಿ ಇಲಾಖೆಯ ಫೆಲೋಶಿಪ್ ಭಾಗವಾಗಿ ಬಂದಿರುವ ಕೇಶವ ಮಳಗಿಯವರ ಈ ಅನುವಾದ ಕೃತಿಗಳು ಓದುಗರನ್ನು ಫ್ರೆಂಚ್ ಮನೋಲೋಕಕ್ಕೆ ಸಲೀಸಾಗಿ ಕರೆದುಕೊಂಡು ಹೋಗುತ್ತಲೇ ಕನ್ನಡದೊಂದಿಗಿನ ’ಫ್ರೆಂಚ್ ಕನೆಕ್ಷನ್’ನ್ನು ಗಟ್ಟಿಗೊಳಿಸುವಲ್ಲಿ ಸಂಶಯವೇ ಇಲ್ಲ.
ಕಡಲಾಚೆಯ ಚೆಲುವೆಯಲ್ಲಿ ಒಟ್ಟು ೨೨ ಲೇಖಕರ ೨೭ಕಥೆಗಳಿವೆ. ಇದರಲ್ಲಿ ೧೦ ಮಹಿಳಾ ಲೇಖಕಿಯರ ಆತ್ಮ ಕಥನಗಳ ಬರಹಗಳೂ ಕಥೆಗಳೂ ಸೇರಿವೆ. ಇಡೀ ಕೃತಿಯ ಒಂದೊಂದು ಕತೆಗಳೂ ವಿಶಿಷ್ಟವಾದವು. ಅನರೆ ದ ಬ್ಲಾಕ್‌ನ ಸಂದೇಶ ಕತೆಯಲ್ಲಿ ವ್ಯಕ್ತವಾಗುವ ಉತ್ಕಟ ಪ್ರೇಮ ನಮ್ಮನ್ನು ಬಹುವಾಗಿ ಪ್ರಭಾವಿಸುವಂತಹ ಕತೆ. ಎಮಿಲಿ ಜೋಲಾನ ’ಹುಚ್ಚನ ಕತೆ’ ಒಂದು ಹದಗೆಟ್ಟ ವೈವಾಹಿಕ ಸಂಬಂಧ ಉಂಟು ಮಾಡುವ ಪರಿಣಾಮದ ಸುತ್ತ ಕೊಂಡೊಯ್ಯುತ್ತದೆ. ಮುಗ್ಧತೆ ಹಾಗೂ ಕ್ಷಮಿಸುವ ಗುಣವನ್ನು ತುಸು ಹೆಚ್ಚೇ ಹೊಂದಿರುವ ಇಸಡೋರ್ ಹುಚ್ಚನಾಗಿ ದುರಂತ ಅಂತ್ಯ ಕಾಣಲು ಆಕೆಯ ಹೆಂಡತಿ ಹಾಗೂ ಸಡಿಲ ನಾಲಗೆಯ ಸಮಾಜಗಳು ಕಾರಣವಾಗುವ ಚಿತ್ರಣ ನಮ್ಮನ್ನು ಗಾಢವಾಗಿ ತಟ್ಟುತ್ತದೆ. ಕನ್ನಡ ಓದುಗರಿಗೆ ಬಹು ಪರಿಚಿತವಿರುವ ಗೇ ದ ಮೊಪಾಸನ ’ಪರಿತ್ಯಕ್ತ’ ಕತೆ ಬದುಕಿನ ಮತ್ತೊಂದು ವಿಚಿತ್ರ ಸನ್ನಿವೇಶವನ್ನು ಬಿಚ್ಚಿಡುತ್ತದೆ. ವಿವಾಹಕ್ಕೆ ಮೊದಲೇ ಪ್ರಿಯಕರನಿಂದ ಮಗುವನ್ನು ಪಡೆದು, ಒಂದೇ ದಿನದ ಮಗುವನ್ನು ಬೇರೆಯವರ ಪಾಲಾಗಿಸಿ ಬೇರೊಬ್ಬನೊಂದಿಗೆ ವಿವಾಹವಾಗಿರುವ ಮಹಿಳೆಯೊಬ್ಬಳು ನಲವತ್ತು ವರ್ಷಗಳ ಬಳಿಕ ಮತ್ತೆ ಅದೇ ಪ್ರಿಯಕರನೊಂದಿಗೆ ತನ್ನ ಮಗನನ್ನು ನೋಡಲು ಹೊರಡುವ ವಿಚಿತ್ರ ಸನ್ನಿವೇಶವನ್ನು ಈ ಕತೆ  ತಣ್ಣಗೆ ಬಿಚ್ಚಿಡುತ್ತದೆ. ಆ ತಾಯಿಯ ಕುಂತೀಯಾತನೆ ನಮ್ಮನ್ನು ಕಾಡುತ್ತದೆ. ಈಗಾಗಲೇ ಬೇರೆಯವರು ಅನುವಾದಿಸಿರುವ ಕಮುವಿನ ದ ’ಅಡಲ್ಟ್ರಸ್ ವುಮನ್’ ಇಲ್ಲಿ ’ಚಂಚಲೆ’ ಹೆಸರಿನಲ್ಲಿ ಅನುವಾದವಾಗಿದೆ. ಹೆಣ್ಣೊಬ್ಬಳು ತಾನು ಹಂಬಲಿಸುವ ಸುಖವನ್ನು ಕೊನೆಯಲ್ಲಿ ನಿಸರ್ಗದಲ್ಲಿ ಪಡೆಯುವ ಈ ಕತೆಯ ಒಂದೊಂದು ವಿವರಗಳೂ ಅನನ್ಯವಾಗಿವೆ. ಇಲ್ಲಿ ಕಮುವಿನ ಇನ್ನಿತರ ಎರಡು ಕತೆಗಳೂ ಇವೆ. ಜಾನ್ ಪಾಲ್ ಸಾರ್ತ್ರ್‌ನ ನಿದ್ರೆ ಇರದ ಇರುಳು ಎರಡನೆಯ ಮಹಾಯುದ್ಧದಲ್ಲಿಜರ್ಮನಿ ಆಕ್ರಮಣಕ್ಕೆ ಒಳಗಾಗುವ ಫ್ರಾನ್ಸ್ ಮತ್ತು ಅದರಿಂದ ತಳಮಳಕ್ಕೆ ಒಳಗಾಗುವ ಫ್ರೆಂಚ್ ತರುಣರ ಉದ್ವೇಘವನ್ನೂ ಹಾಗೂ ಅವರ ವಯುಕ್ತಿಕ ನೆಲೆಯ ಬಡಾಯವನ್ನು ಚಿತ್ರಿಸುತ್ತದೆ. ಸೆಂಬೇನ್ ಉಸ್ಮಾನ್‌ನ ನಕಲಿ ಪ್ರವಾದಿ ಎಂಬ ಕಥೆ ನಂಬಿಕೆ ಮತ್ತು ಆಚರಣೆಗಳ ಪ್ರಶ್ನೆಯನ್ನು ಎತ್ತುವದರೊಂದಿಗೆ ಡೋಂಗಿ ಸ್ವಾಮಿಗಳೇ ತುಂಬಿರುವ ನಮ್ಮ ಪರಿಸರಕ್ಕೆ ಹತ್ತಿರವಾಗಿರುವ ಕತೆಯಾಗಿದೆ. ಇಲ್ಲಿನ ಬಹುತೆಕ ಕತೆಗಳು ಒಂದಲ್ಲಾ ಒಂದು ಬಗೆಯಲ್ಲಿ ನಮ್ಮದೇ ಪರಿಸರದಲ್ಲಿ ಮೂಡಿಬಂದ ಕತೆಗಳಂತೆ ತೋರುವುದರಲ್ಲಿ ಕತೆಗಳ ಸಾರದೊಂದಿಗೆ ಅನುವಾದಕರ ಪರಿಶ್ರಮ ಎದ್ದು ತೋರುತ್ತದೆ. ಕೆಲವು ಕತೆಗಳೊಳಗಿನ ಸಂಭಾಷಣೆಯನ್ನು ಬಯಲು ಸೀಮೆಯ ಕನ್ನಡದಲ್ಲಿ ಕನ್ನಡಿಸಿರುವ ಕಾರಣ ಅವುಗಳಿಗೆ ಒಂದು ಸಾಮೀಪ್ಯತೆ ಬಂದೊದಗಿದೆ.
ಫ್ರೆಂಚ್ ಮಹಿಳಾ ಲೇಖಕಿಯರಲ್ಲಿ ಸಿಮನ್ ದ ಬೊವ, ಅನೀಸ್ ನಿನ್, ನಫೀಸ ದಿಯಾ ಮುಂತಾದವರ ಬರಹಗಳಿವೆ. ಈ ಕೃತಿಯ ವಿಶೇಷತೆಯೆಂದರೆ, ಇಲ್ಲಿ ಕೇವಲ ಪ್ರಾನ್ಸ್ ಮೇನ್‌ಲ್ಯಾಂಡಿನ ಲೇಖಕರ ಬರೆಹಗಳನ್ನು ಮಾತ್ರವಲ್ಲದೆ ಸೆನೆಗಲ್‌ನಂತಹ ಪ್ರಾನ್ಸ್‌ನ ವಸಾಹತುಗಳ ಲೇಖಕರ ಹಾಗೂ ಕೆನಡದಂತ ದೇಶಗಳಲ್ಲಿದ್ದುಕೊಂಡೇ ಫ್ರೆಂಚ್ ಕೃತಿಗಳನ್ನು ಬರೆದವರ ಕತೆಗಳನ್ನೂ ಇದು ಒಳಗೊಂಡಿದೆ.
ಇಲ್ಲಿ ಎಲ್ಲಾ ೨೨ ಲೇಖಕರ ಬಗೆಗೂ ಒಂದು ಕಿರುಪರಿಚಯವನ್ನು ಕೇಶವ ಮಳಗಿಯವರು ನೀಡಿರುವುದ ಬಹು ಉಪಯುಕ್ತವಾಗಿದೆ. ಮಾತ್ರವಲ್ಲದೆ ಆ ಲೇಖಕರ ಯಾವುದಾದರೂ ಕೃತಿ ಈಗಾಗಕೇ ಅನುವಾದಗೊಂಡಿದ್ದರೆ ಅದರ ಮಾಹಿತಿಯನ್ನೂ ನೋಡುವ ಮೂಲಕ ಅನುವಾದಕರು ಮಾದರಿಯಾಗಿದ್ದಾರೆ. ಹೀಗೆ ಬರಹಗಳ ಲೇಖಕರ ಆಯ್ಕೆ, ಕಥೆಗಳ ವಸ್ತುವಿಷಯ ಆಯ್ಕೆ, ಕೃತಿಯ ಸಂರಚನೆ, ಅನುವಾದದ ಭಾಷಾ ಸೊಗಡು, ಈ ಎಲ್ಲಾ ರೀತಿಯಿಂದಲೂ ’ಕಡಲಾಚೆಯ ಚೆಲುವು’ ಓದಲೇಬೇಕಾದ ಕೃತಿಯಾಗಿದ್ದರೆ ಕನ್ನಡೇತರ ಕೃತಿಗಳನ್ನು ಅನುವಾದಿಸುವವರಿಗೂ ಒಂದು ವಿಶಿಷ್ಠ ಹಾಗೂ ಆಕರ್ಷಕ ಮಾದರಿಯನ್ನು ಮುಂದಿಡುತ್ತದೆ.

ಕೃತಿಯ ಪುಟಗಳಿಂದ..
"ಈ ನಲ್ವತ್ತು ವರ್ಷಗಳ್ಲಲಿ ಅಲ್ಲಿಗೆ ಹೋಗಿ ಆತನನ್ನು ಕಂಡು, ತಬ್ಬಿಕೊಳ್ಳಬೇಕು ಎಂದಾಕೆ ಆಸೆಪಟ್ಟಿದ್ದು ಎಷ್ಟುಸಲವೋ! ಆತ ಬೆಳೆದು ದೊಡ್ಡವನಾಗಿರುತ್ತಾನೆ, ಎಂದು ಕೂಡ ಆಕೆ ಕಲ್ಪಿಸಿಕೊಳ್ಳಲಾರಳು! ಆತನಿನ್ನೂ ತಾನು ಒಂದು ದಿನದ ಮಟ್ಟಿಗೆ ತನ್ನ ತೋಳುಗಳಿಂದ ಬಳಸಿ, ಮಡಿಲಲ್ಲಿ ಮಲಗಿಸಿಕೊಂಡಿದ್ದ ಪುಟ್ಟ ಜೀವ ಎಂದೇ ಯಾವಾಗಲೂ ಆಕೆ ಚಿತ್ರಿಸಿಕೊಳ್ಳುತ್ತಿದ್ದಳು. ಈ ಯಾತನೆ ತಡೆಯುವುದು ನನ್ನಿಂದ ಸಾಧ್ಯವಿಲ್ಲ; ನಾನು ಮಗುವನ್ನು ನೋಡಲೇಬೇಕು! ಎಂದು ಅಪರೀವಲ್‌ಗೆ ಆಕೆ ಎಷ್ಟೋ ಸಲ ಹೇಳಿದ್ದುಂಟು...."


(ದ ಸಂಡೆ ಇಂಡಿಯನ್ ನ  ಈ ಹೊತ್ತಗೆ ವಿಭಾಗಕ್ಕೆ ಬರೆದದ್ದು)

ಕಾಮೆಂಟ್‌ಗಳಿಲ್ಲ:

 ಧರ್ಮ V/s ರಿಲಿಜನ್ ಧರ್ಮ ಎಂತರೆ ಒಳಿತು ಮಾಡುವುದು, ನೀತಿ ಮಾರ್ಗದಲ್ಲಿ ನಡೆಯುವುದು ಎಂದು ನೀವು ಭಾವಿಸುವುದಾದರೆ ಅಂತಹ ತತ್ವ ಹೇಳಿದ ಧರ್ಮಗಳು ಮೂರು. -  1. ಬೌದ್ಧ ಧರ್...

ಮರದೊಂದು ಎಲೆ ನಾನು..

ನನ್ನ ಫೋಟೋ
A Writer, Researcher, Journalist and Activist. Born and brought up from Kugwe a village near Sagara, Shimoga district of Karnataka state. Presently working as the Editor In Chief of PEEPAL MEDIA /PEEPAL TV.