ನಾಡಿನ ರಂಗಭೂಮಿಯಲ್ಲಿ ಚಿದಂಬರರಾವ್ ಜಂಬೆಯವರ ಕೊಡುಗೆ ಅಪಾರವಾದದ್ದು. ಹೆಗ್ಗೋಡಿನ ನೀನಾಸಂ, ಮೈಸೂರಿನ ರಂಗಾಯಣ ಮತ್ತು ಸಾಣೆಹಳ್ಳಿಯ ಶಿವಸಂಚಾರ ಈ ಮೂರೂ ಪ್ರಮುಖ ರಂಗಶಾಲೆಗಳಲ್ಲಿ ಅತ್ಯಮೂಲ್ಯ ಕೊಡುಗೆ ನೀಡಿರುವ ರಂಗನಿರ್ದೇಶಕ ಮತ್ತು ಚಿಂತಕ ಚಿದಂಬರರಾವ್ ಜಂಬೆಯವರೊಂದಿಗೆ ನಡೆಸಿದ ಮಾತುಕತೆ ಇಲ್ಲಿದೆ.
(ಚಿತ್ರಗಳು-ಹರ್ಷಕುಮಾರ್ ಕುಗ್ವೆ)
ಆಧುನಿಕ ರಂಗಭೂಮಿಯ ಇಂದಿನ ಟ್ರೆಂಡ್ ಏನಾಗಿದೆ?
ಈ ’ಆಧುನಿಕತೆ’ ಎನ್ನುವುದನ್ನೇ ಆಲೋಚನೆ ಮಾಡಬೇಕಾಗಿದೆ. ಏಕೆಂದರೆ ಇಂದು ಆಧುನಿಕತೆ ಎಂದು ಕರೆಯುವುದು ಕೇವಲ ತಾಂತ್ರಿಕವಾಗಿಯೇ ವಿನಃ ವಸ್ತುಸಂವಿಧಾನದಲ್ಲಿ ಆದಂತಹ ಬದಲಾವಣೆಗಳನ್ನು ಇಟ್ಟುಕೊಂಡು ನಾವು ಆಧುನಿಕತೆಯನ್ನು ನೋಡುತ್ತಿಲ್ಲ. ಈಗ ತಾಂತ್ರಿಕವಾಗಿ ಅಷ್ಟೇನು ಬದಲಾವಣೆಗಳು ಆಗಿಲ್ಲ ಎಂಬುದು ನನ್ನ ಅಭಿಪ್ರಾಯ. ವಸ್ತು ಸಂವಿಧಾನದಲ್ಲಿ ಕೂಡ ಹೇಳಿಕೊಳ್ಳುವಂತಹಾ ಬಹಳಷ್ಟು ಏನೂ ಬಂದಿಲ್ಲ. ಇಂದು ಆಧುನಿಕ ಅಂದರೆ ಜಾಗತಿಕರಣದ ವೇಗದಲ್ಲಿ ಹೋಗುತ್ತಿರುವುದರಿಂದ ಅದನ್ನೇ ಆಧುನಿಕತೆ ಎನ್ನುವ ಸ್ಥಿತಿಗೆ ನಾವು ಬಂದು ಬಿಟ್ಟಿದ್ದೇವೆ. ವಾಸ್ತವದಲ್ಲಿ ಅದು ಆಧುನಿಕತೆಯಲ್ಲ. ಅದರ ಹೊರತಾಗಿ ಜಾಗತಿಕರಣವನ್ನು ನಿರಾಕರಣೆ ಮಾಡುವಂತಾದ್ದು ಅಥವಾ ಆ ವೇಗಕ್ಕೆ ಸಿಲುಕಿಕೊಳ್ಳದೇ ಇರುವ ಯಾವುದಾದರೂ ಒಂದು ಮಾರ್ಗವಿದ್ದರೆ ಅದನ್ನ ನಾವು ಆಧುನಿಕತೆ ಎಂದು ಕರೆಯಬಹುದು.
ನಮ್ಮ ಪಾರಂಪರಿಕವಾದ ರಂಗಭೂಮಿಗೂ ಇಂದಿನ ರಂಗಭೂಮಿಗೂ ಭಿನ್ನತೆಗಳು ಹೇಗೆ ವ್ಯಕ್ತಗೊಂಡಿವೆ?
ನಮ್ಮ ಪಾರಂಪರಿಕವಾಗಿ ಬಂದಂತಹ ರಂಗಭೂಮಿ ಎಷ್ಟೋ ಬಾರಿ ಆಧುನಿಕ ರಂಗಭೂಮಿಯನ್ನು ಮೀರಿ ನಿಲ್ಲುವಂತಹ ಸಂದರ್ಭವನ್ನು ನೋಡುತ್ತೇವೆ. ಉದಾಹರಣೆಗೆ ಭವಭೂತಿಯ ಉತ್ತರ ರಾಮಚರಿತವನ್ನೇ ನೋಡಿ. ಸಮರ್ಥವಾಗಿ ನಮ್ಮ ಸಮಕಾಲೀನ ಯಾವ ನಾಟಕದಲ್ಲಿ ಬರದೇ ಇರುವ ಆಧುನಿಕತೆಯನ್ನ ಭವಭೂತಿ ಹೇಳುತ್ತಾನೆ. ಏಕೆಂದರೆ ಆ ನಾಟಕದಲ್ಲಿ ಅರುಂಧತಿ ಒಬ್ಬ ಸ್ತ್ರೀವಾದಿಯಾಗಿ, ಒಬ್ಬ ಮಹಿಳಾವಾದಿಯಾಗಿ ಕೊನೆಯಲ್ಲಿ ರಾಮನ ಜೊತೆಗೆ ಸೀತೆ ಹೋಗಬೇಕು ಅನ್ನುವ ತೀರ್ಮಾನ ನೀಡುತ್ತಾಳೆ. ಪ್ರಸವ ವೇದನೆ ತಡೆಯಲಾಗದೆ ನೀರಿಗೆ ಹಾರಿ ಬಿಡುವ ಸೀತೆಯನ್ನು ಗಂಗೆ ಮತ್ತು ಭೂಮಿ ಸೇರಿ ಬದುಕಿಸುತ್ತಾರೆ. ಅರುಂಧತಿ ಬಂದು ಇಡೀ ಅಯೋದ್ಯಾ ಪುರದ ಜನರನ್ನ ಕರೆಸಿ ನಿಲ್ಲಿಸಿ ದೇವಾನು ದೇವತೆಗಳ ಸಮ್ಮುಖದಲ್ಲಿ ಸೀತೆಯ ಅಗ್ನಿಪರೀಕ್ಷೆಯಾದಮೇಲೆ ಮತ್ತೆ ಮತ್ತೆ ಅನುಮಾನವುದೇನಿದೆ? ಇನ್ನೊಂದು ಹೆಣ್ಣಿನ ಮೇಲೆ ಅನುಮಾನ ಪಡುವಂತಾ ಮನೋಭಾವ ಬಹಳ ಅಶ್ಲೀಲವಾದದ್ದು. ಅದಕ್ಕೆ ನಾನು ಹೇಳುತ್ತಿದ್ದೇನೆ ಶ್ರೀರಾಮ ಸೀತೆಯನ್ನ ಕರೆದೊಯ್ಯಬೇಕು ಎಂದು. ನೀವೇನು ಹೇಳುತ್ತೀರಿ? ಎಂದು ಕೇಳುತ್ತಾಳೆ. ಅಯೋದ್ಯಾ ಪುರ ಜನರೆಲ್ಲಾ ಬಂದು ಸೀತಾ ದೇವಿಯ ಕಾಲಿಗೆ ಬೀಳ್ತಾರೆ. ಇದು ವಾಲ್ಮೀಕಿ ರಾಮಾಯಣ ಅಲ್ಲ ಆದ್ರೆ ಭವಭೂತಿ ಸೃಷ್ಟಿಸಿದ ರಾಮಾಯಣ ಇದು. ಈ ನಾಟಕ ಸುಮಾರು ೬-೭ ನೇ ಶತಮಾನದಲ್ಲಿ ಬರೆದಂತಹ ನಾಟಕ. ಆದರೆ ಅದು ಇವತ್ತಿಗೂ ಕೂಡ ಅದು ಯಾವ ಆಧುನಿಕತೆಗೂ ಕಮ್ಮಿ ಇಲ್ಲದಂತಹ ನಾಟಕ ಅದು. ಕೆಲವೊಮ್ಮೆ ವಸ್ತುವು ಪೌರಾಣಿಕವಾಗಿದ್ದ ಹೊತ್ತಿಗೂ ಕೂಡ ಅದು ಹೇಳುವಂತಹ ಆಶಯ ಏನಿದೆ ಎಂದು ನೋಡಬೇಕು. ಅದು ತನ್ನ ಕಾಲವನ್ನೂ ಮೀರಿ ಹೇಳುವಂತದ್ದಿರಬಹುದು. ರಂಗನಿರ್ದೇಶಕರಾದ ರಘುನಂದನ ಅವರು ಪ್ರತಿಮಾ ಭಾಸವಿ ನಾಟಕ ಮಾಡಿದ್ದರು. ಅದು ನನಗೆ ಬಹಳ ಇಷ್ಟವಾದ ನಾಟಕ. ಅದು ಅದರಲ್ಲಿ ಭರತ ಶಿಕ್ಷಣಕ್ಕೆ ಹೋಗಿರುತ್ತಾನೆ. ಅಲ್ಲಿಂದ ವಾಪಾಸು ಬರುವಾಗ ಶೂ ಮತ್ತು ಜೀನ್ಸ್ ಪ್ಯಾಂಟ್ ಹಾಕಿಕೊಂಡು ಬರುತ್ತಾನೆ. ಬಂದವನು ಸುಮಂತನ ಬಳಿ ಇವರಿಗೆ ಯಾವ ರೀತಿ ನಮಸ್ಕರಿಸಬೇಕು ಎಂದು ಕೇಳುತ್ತಾನೆ. ಮನೆಗೆ ಬಂದಾಗ ಯಾರಿಗೆ ಹೇಗೆ ನಮಸ್ಕಾರ ಮಾಡಬೇಕು ಎಂದು ಗೊತ್ತಿಲ್ಲದೆ ಇದ್ದರೆ ಶಿಕ್ಷಣ ಏನಾಗಿದೆ ಅನ್ನುವುದನ್ನು ಯೋಚಿಸುವ ರೀತಿ ರಘುನಂದನ್ ಅದನ್ನು ಬಹಳ ಚೆನ್ನಾಗಿ ಮಾಡಿದ್ದರು.
ಜಾಗತೀಕರಣದಂತಹ ಪ್ರಕ್ರಿಯೆಗಳು ರಂಗಭೂಮಿಯನ್ನು ಪ್ರಭಾವಿಸುತ್ತಿಲ್ಲವೇ?
ಅದು ಕೇವಲ ರಂಗಭೂಮಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ನೋಡಲಾಗುವುದಿಲ್ಲ. ಯಾಕೆಂದರೆ ನಾಟಕ ಮಾಡುವವರೂ ಸಹ ನಮ್ಮಂತಹ ಮನುಷ್ಯ ಜೀವಿಗಳೆ. ಇಂದು ನಾವೆಲ್ಲ ಬದುಕುತ್ತಿರುವ ಸಂದರ್ಭದಲ್ಲಿ ನಮಗೆ ಗೊತ್ತಿಲ್ಲದೆ ಇರುವಂತಹ ರೀತಿಯಲ್ಲಿಯೇ ಈ ಜಾಗತೀಕರಣ ನಮ್ಮನ್ನು ಎಳೆದುಕೊಂಡು ಹೋಗುತ್ತಿರುತ್ತದೆ. ನಮ್ಮ ಶತ್ರುಗಳು ಎದುರುಗಡೆ ಇದ್ದಾಗ ನಾವು ನೇರವಾಗಿ ಹೋರಾಟ ನಡೆಸಬಹುದು ಆದರೆ ಅದು ಅಘೋಷಿತವಾಗಿದ್ದಾಗ ಹೋರಾಟ ಮಾಡುವುದಕ್ಕೂ ಗೊತ್ತಾಗುವುದಿಲ್ಲ. ಎಲ್ಲಿಗೆ ಎಂದು ಬಾಣ ಬಿಡುವುದು? ಈ ತರದ ಒಂದು ಗೊಂದಲದಲ್ಲಿ ನಾವಿದ್ದೇವೆ. ಹಾಗಾಗಿ ರಂಗಭೂಮಿ ಒಂದೇ ಅಲ್ಲ ಭೂಮಿ ಮತ್ತು ರಂಗಭೂಮಿ ಎರಡೂ ಅತಂಕದಲ್ಲಿದೆ. ಭೂಮಿ ಅಂದರೆ ನಾನು ಕೃಷಿ ಸಂಸ್ಕೃತಿ. ಕೃಷಿಗೂ ಮತ್ತು ಸಂಸ್ಕೃತಿಗೂ ಭಾಳ ದೊಡ್ಡ ಸಂಬಂಧ ಇದೆ. ಕೃಷಿ ಇಲ್ದೇ ಇರ್ತಿದ್ರೆ ಸಂಸ್ಕೃತಿ ಏನಾಗ್ತಿತ್ತು ಯಾವ ರೀತಿ ಬೆಳಿತಿತ್ತೊ ಗೊತ್ತಿಲ್ಲ. ಕೃಷಿಗೂ ಮತ್ತು ಭೂಮಿಗೂ ಭಾಳ ದೊಡ್ಡ ಸಂಬಂಧ ಇದೆ. ಈ ಅಗ್ರಿಕಲ್ಚರ್‌ಗೆ ಬರುವ ರೋಗಗಳೆವೂ ಕಲ್ಚರ್‌ಗೆ ಬಂದಿವೆ. ಕೃಷಿಗೆ ಮತ್ತು ಭೂಮಿಗೆ ಇರುವಂತಹ ಎಲ್ಲಾ ಆತಂಕ ತಲ್ಲಣಗಳು ನಮ್ಮ ಈ ರಂಗಭೂಮಿಯಲ್ಲೂ ಇವೆ.
ಹಿಂದೆ ವೃತ್ತಿರಂಗಭೂಮಿ ಮತ್ತು ಹವ್ಯಾಸಿ ರಂಗಭೂಮಿ ಎಂದು ಭಿನ್ನತೆ ಇದ್ದಂತೆ ಇಂದು ರಂಗಭೂಮಿಯಲ್ಲಿ ವೃತ್ತಿಪರರು ಮತ್ತು ಹವ್ಯಾಸಿಗಳ ನಡುವೆ ಭಿನ್ನತೆ ಉಂಟಾಗಿದ್ದು ಶ್ರೇಷ್ಠತೆಯ ಪ್ರಶ್ನೆ ಅಂತರಂಗದಲ್ಲಿದೆ ಎನ್ನಿಸುತ್ತದೆ. ಎನು ಹೇಳುತ್ತೀರಿ?
ಇದು ಶ್ರೇಷ್ಠತೆಯ ಪ್ರಶ್ನೆ ಅಲ್ಲ. ಇಂದು ರಂಗಭೂಮಿಯನ್ನೇ ಪೂರ್ಣವಾಗಿ ನಂಬಿಕೊಂಡು ಕೆಲಸ ಮಾಡುತ್ತೇವೆಂದರೆ ಅದರಿಂದ ಊಟ ಮಾಡಲು ಸಾಧ್ಯವಿಲ್ಲ. ಏಕೆಂದರೆ ಆ ರೀತಿಯಲ್ಲಿ ರಂಗಭೂಮಿ ಬೆಳೆಯಲೇ ಇಲ್ಲ. ಅಷ್ಟೇ ವರ್ಷಗಳಲ್ಲಿ ಕೆಲಸ ಮಾಡಿದ ಬೇರೆ ಯಾವುದೇ ಕ್ಷೇತ್ರವಾದರೆ ಅವರು ಎಷ್ಟೋ ದುಡಿದು ಸಂಪಾದನೆ ಮಾಡಬಹುದು. ೩೦-೩೫ ವರ್ಷ ರಂಗಭೂಮಿಲಿ ಕೆಲಸ ಮಾಡಿದರೂ ಸಹ ಬದುಕಲು ಅವರು ಬಹಳ ಕಷ್ಟಪಡಬೇಕಾಗಿದೆ. ಬಸವಣ್ಣನವರು ಹೇಳಿದಾರೆ ಕಾಯಕವೇ ಕೈಲಾಸ ಅಂತ, ಕೈಲಾಸ ಸೇರೋವರೆಗೂ ನಾವು ಕಾಯಕವೇ ಮಾಡ್ತಿರೋದು ಅಂತ. ರಂಗ ಭೂಮಿಗೆ ಹೇಳಿ ಮಾಡಿಸಿದ ಮಾತಿದು. ಕೃಷಿಗೂ ಅಷ್ಟೇ ಸರಿಹೊಂದುವ ಮಾತಿದು. ರಂಗಭೂಮಿಯಲ್ಲಿ ಮಧ್ಯವರ್ತಿಗಳಾಗಿ ಕೆಲಸ ಮಾಡುವವರ ಅವರ ವಿಷಯ ಬೇರೆ. ಅವರ ಬಗ್ಗೆ ನಾನು ಹೇಳಲು ಹೋಗುವುದಿಲ್ಲ. ಆದರೆ ಯಾರು ರಂಗಭೂಮಿಯನ್ನು ನಿಜವಾಗಿ ಅಪ್ಪಿಕೊಂಡು ಕೆಲಸ ಮಾಡ್ತಿದಾರೋ ಅವರು ಬಹಳ ಏನೂ ಸಂಪಾದನೆ ಮಾಡಲಾಗುವುದಿಲ್ಲ. ಆದರೆ ಬಹಳ ಪ್ರೀತಿಯಿಂದ ಕೆಲಸ ಮಾಡುವ ಅವರಿಗೆ ಅವರಿಗೆ ಅದೇ ಜೀವ ಆಗಿರುತ್ತದೆ. ಇಷ್ಟೂ ವರ್ಷಗಳಲ್ಲಿ ರಂಗಭೂಮಿಯನ್ನು ಬಿಟ್ಟು ಬೇರೇನೂ ಮಾಡಿಲ್ಲ ನಾನು. ಈಗ ಬೇರೆ ಏನಾದರೂ ಮಾಡಬೇಕೆಂದರೂ ಸಾಧ್ಯವಿಲ್ಲ. ಇಲ್ಲೇ ಇದ್ದು ಮಾಡಬೇಕಿರುವುದು ಅನಿವಾರ್ಯ. ಇದರಲ್ಲೇ ಹೋಗಬೇಕು, ಇದರಲ್ಲೇ ಮುಕ್ತಿ ಕಾಣ ಬೇಕಾಗಿದೆ ಅಷ್ಟೆ,
ದೃಶ್ಯ ಮಾಧ್ಯಮಗಳ ಪ್ರವೇಶ ರಂಗಭೂಮಿಗೆ ಪೆಟ್ಟು ನೀಡಿದೆ ಎನ್ನಿಸುವುದಿಲ್ಲವೆ?
ಇಲ್ಲ ನಾನು ಈ ಸಿನಿಮಾ ಮತ್ತು ಕಿರುತೆರೆಗಳನ್ನು ರಂಗಭೂಮಿಗೆ ಒಂದು ಸವಾಲು ಎಂದು ನಾನು ಯಾವತ್ತಿಗೂ ಹೇಳುವುದಿಲ್ಲ. ಅದರಲ್ಲಿ ಒಂದು ಗ್ಲಾಮರ್ರೇ ಬೇರೆ ಇದೆ.
ರಂಗಭೂಮಿಯ ಅನೇಕ ಪ್ರತಿಭೆಗಳು ಕಿರುತೆರೆಯಲ್ಲಿ ನೆಲೆಕಂಡುಕೊಳ್ಳುತ್ತಿದ್ದಾರಲ್ಲ?
ಅದನ್ನು ನಾನು ಒಪ್ತೇನೆ. ಅದು ಇಲ್ಲಿ ಬದುಕುವುದು ಕಷ್ಟವಾದ ಕಾರಣ ಬದುಕಿನ ಅನಿವಾರ್ಯತೆಗಳ ಕಾರಣದಿಂದ ಅಲ್ಲಿಗೆ ಹೋಗಬೇಕಾಗಿದೆ ಎನ್ನಬಹುದು. ಅದರರ್ಥ ಜನರು ರಂಗಭೂಮಿಯನ್ನು ನಿರಾಕರಣೆ ಮಾಡಿದಾರೆ ಎಂದಲ್ಲ. ಏಕೆಂದರೆ ಇದು ಜೀವಂತ ಪ್ರದರ್ಶನ. ನಾವೂ ನೀವೂ ಹೇಗೆ ಕುಳಿತುಕೊಂಡು ಮಾತನಾಡುತ್ತಿದ್ದೇವೋ ಹಾಗೆ ರಂಗಭೂಮಿ ಎಂಬುದು ಆ ಊರಿನ ಆ ಕ್ಷಣದಲ್ಲಿ ಸಂಭವಿಸುವ ಘಟನೆ ಅದು ಆ ಒಂದು ಸಮುದಾಯ ಮತ್ತು ಈ ನಟರು ಸೇರಿ ಹುಟ್ಟುವ ಅನುಭವ ಅದು. ಹಾಗಾಗಿ ಜನ ಯಾವತ್ತೂ ಕೂಡ ಒಂದು ಜೀವಂತ ಅನುಭವಕ್ಕಾಗಿ ತಮ್ಮನ್ನು ತೆರೆದುಕೊಳ್ಳುತ್ತಾರೆ. ಆ ಜೀವಂತ ಅನುಭವ ಬೇಕು ಎನ್ನವ ಒಂದು ಸಮುದಾಯ ಎಲ್ಲಿಯವರೆಗೂ ಇರುತ್ತದೆಯೋ ಅಲ್ಲ್ಲಿಯವರೆಗೆ ಈ ರಂಗಭೂಮಿಯಂತಹ ಮಾದ್ಯಮಗಳಿಗೆ ಸೋಲಿಲ್ಲ. ಈಗ ಕಿರುತೆರೆಯೂ ಸೋಲುತ್ತಿದೆ. ಜನರು ನೋಡಿ ನೋಡಿ ಸುಸ್ತಾಗಿಬಿಟ್ಟಿದ್ದಾರೆ. ಸಿನಿಮಾಗಳವರೂ ಕೂಡ ಪಾಪ, ಎಲ್ಲರೂ ಕೂಡ ಅಷ್ಟೇ ಕಷ್ಟದಲ್ಲಿರ‍್ತಾರೆ. ಈ ಯಕ್ಷಗಾನ ಕಲೆ ಇದೆಯಲ್ಲ, ಅದೂ ಕೂಡ ಕಷ್ಟದಲ್ಲಿದೆ ಆದರೂ ಕೂಡ ಅವರು ಆರು ತಿಂಗಳುಗಳ ಕಾಲ ಸತತವಾಗಿ ಪ್ರದರ್ಶನ ನೀಡಿ ಪ್ರೇಕ್ಷಕರ ಗಮನ ಸೆಳೆಯೋ ರೀತಿ ಕಂಡರೆ ಆಶ್ಚರ‍್ಯವಾಗುತ್ತದೆ. ಜಾಗತೀಕರಣದ ಪ್ರಭಾವದ ನಡುವೆಯೂ ಈ ಜನ ತಮ್ಮ ಕಲೆಯನ್ನು ನಂಬಿಕೊಂಡು ಬದುಕುತ್ತಿದ್ದಾರೆ. ಆದ್ರೆ ಈ ರೀತಿಯ ಕಲೆಯನ್ನು ನಂಬಿಕೊಂಡು ಬಂದ ಜನ ಎಷ್ಟೇ ವರ್ಷ ಕಲೆಗಾಗಿ ತಮ್ಮನ್ನು ಮುಡಿಪಾಗಿಟ್ಟರೂ ಕೂಡ ಕೊನೆಗೂ ಅದರಲ್ಲಿರುವವನು ಒಬ್ಬ ಕಲಾವಿದನಾಗಿಯೇ ಉಳಿಯುತ್ತಾನೆ. ಗಣ್ಯ ವ್ಯಕ್ತಿ ಎಂಬ ಪಟ್ಟ ಇತರೆ ಬೇರೆ ಕ್ಷೇತ್ರದಲ್ಲಿ ಅಲ್ಪಾವಧಿಯಲ್ಲಿ ದುಡಿದವರಿಗೆ ಸಿಗುತ್ತದೆ. ಆದರೆ ನಮ್ಮ ಕಲಾವಿದರು ಅದನ್ನು ಕಡೆಗಣಿಸಿ ತಮ್ಮ ಕಲೆಯನ್ನೇ ಸರ್ವಸ್ವ ಅನ್ನುವ ರೀತಿಯಲ್ಲಿ ನಡೆಸಿಕೊಂಡು ಹೋಗುತ್ತಿದ್ದಾರೆ. ಕಲೆಗಾಗಿ ಜೀವನಾನ ಮುಡಿಪಾಗಿಸಿಟ್ಟಿದ್ದಾರೆ. ನಾವು ಆದರ್ಶವನ್ನು ಹೇಳುವುದು ಎಷ್ಟು ಸುಲಭವೋ ಅದನ್ನು ಅನುಸರಿಸುವುದು ಅಷ್ಟೇ ತ್ರಾಸದಾಯಕವಾದ್ದು. ಕಲೆಗಾಗಿ ದುಡಿಯುತ್ತಿರುವವರನ್ನು ಗುರುತಿಸಿ ಅವರ ಜೀವನದ ಸುಭದ್ರತೆಗೆ ಏನಾದರೊಂದು ಪರ್ಯಾಯ ವ್ಯವಸ್ಥೆಯಾಗಬೇಕಾಗಿದೆ. ಕನ್ನಡ ಸಂಸ್ಕೃತಿ ಇಲಾಖೆಯಂತಹ ಘಟಕಗಳು ಈ ದಿಸೆಯಲ್ಲಿ ಯಾವತ್ತೂ ಚಿಂತನೆಯನ್ನೇ ಮಾಡಿಲ್ಲ. ರಂಗಸಂಸ್ಕೃತಿಯನ್ನು ಕಟ್ಟುವ ರೀತಿಯಲ್ಲಿ ರಂಗಾಯಣದಂತಹ ಅನೇಕ ರಂಗಸಂಸ್ಥೆಗಳಿವೆ ಅವುಗಳ ಉದ್ಧಾರವಾಗಬೇಕಿದೆ.
ನಿಮಗೆ ರಂಗಭೂಮಿಯೊಂದಿಗೆ ನಂಟು ಬೆಳೆದಿದ್ದು ಹೇಗೆ?
ನನ್ನ ವಿದ್ಯಾಭ್ಯಾಸ ಮುಗಿದ ಮೇಲೆ ಹೆಗ್ಗೋಡಿನ ಕೆ.ವಿ.ಸುಬ್ಬಣ್ಣನವರ ಸುದೈವದಲ್ಲಿ ಕೆಲಸ ಮಾಡುವ ಅವಕಾಶ ಲಭಿಸಿತು. ಅವರೊಂದಿಗೆ ಸಂಸ್ಥೆ ಕಟ್ಟುವ ಸುದೈವ ಸಿಕ್ಕು ಆ ಮೂಲಕ ನನಗೆ ಬಹಳಷ್ಟು ಅನುಭವ ಸಿಕ್ಕಿತು. ೨೨ ವರ್ಷಗಳಲ್ಲಿ ಸುಬ್ಬಣ್ಣ ನಮ್ಮ ಆಸರೆಯ ಸೂರಿನಂತಿದ್ದರು. ನಂತರ ರಂಗಾಯಣದಂತಹ ಸಾರ್ವಜನಿಕ ಸಂಸ್ಥೆಗೆ ಬಂದಾಗ ಜವಾಬ್ದಾರಿಗಳು ಬದಲಾದವು. ಖಾಸಗಿ ಸಂಸ್ಥೆಯಲ್ಲಿ ದುಡಿಯುತ್ತಿದ್ದ ನಾವು ಸಾರ್ವಜನಿಕ ಸಂಸ್ಥೆಗೆ ಬಂದಾಗ ಬಹಳಷ್ಟು ಬದಲಾವಣೆಗಳಾದವು. ಜನರೊಂದಿಗೆ ನೇರವಾದ ಸಂಪರ್ಕ ಸರ್ಕಾರದೊಂದಿಗೆ ಗುದ್ದಾಟ, ಕಲಾವಿದರೊಂದಿಗೆ ಒಡನಾಟ ಬೆದು ಒಂದು ದೊಡ್ಡ ಅನುಭವ ಸಿಕ್ಕಿತು. ಮುಂದೆ ನನಗೆ ರಂಗಾಯಣದ ಅವಧಿ ಮುಗಿಸಿದಾಗ ಸಾಣೆಹಳ್ಳಿಯ ಪಂಡಿತರಾಧ್ಯ ಸ್ವಾಮಿಗಳು ನನ್ನನ್ನು ಕರೆದು ರಂಗಶಾಲೆ ಕಟ್ಟುವ ಬಗ್ಗೆ ಮಾತಾಡಿದರು. ಆಗ ಆರ್ಥಿಕವಾಗಿ ರಂಗಶಾಲೆ ಸೋತಿರುವುದರ ಬಗ್ಗೆ ಮಾತಾಡಿ, ನಿಮಗೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಸುವ ಅವಕಾಶ ಇದ್ದರೆ ನನಗೆ ಕೆಲಸ ಮಾಡಲು ಸಾಧ್ಯ ಎಂದಾಗ ’ನಾನು ಮಕ್ತವಾಗಿರುತ್ತೇನೆ ನೀವು ಬಂದು ಮಾಡಿ’ ಎಂದರು. ನಂತರ ನನಗೆ ಅದೊಂದು ದೊಡ್ಡ ಸವಾಲಾಗಿತ್ತು. ನಂತರ ಎರಡು ವರ್ಷಗಳು ಅಲ್ಲಿ ಕೆಲಸ ಮಾಡಿದೆ. ಆಗ ರಂಗಶಾಲೆ ಒಂದು ವ್ಯವಸ್ಥೆಗೆ ಬಂದಿತ್ತು. ಮುಂದೆ ರಾಷ್ಟ್ರೀಯ ನಾಟಕ ಶಾಲೆಯಿಂದ ಅವಕಾಶ ಬಂತು. ಆಗ ಸ್ವಾಮಿಗಳಲ್ಲಿ ಹೋಗಲು ಅವಕಾಶ ಮಾಡಿಕೊಡಿ ಅಂದಾಗ ಕಳಿಸಲು ನಿರಾಕರಿಸಿದರು. ಹೀಗೆ ಮೂರು ತರದ ಮೂರು ಸಂಸ್ಥೆಗಳೊಂದಿಗೆ ಒಡನಾಟ ಬೆಳೆಯಿತು. ಅನುಭವವೂ ದೊರೆಯಿತು.
ರಂಗಭೂಮಿಯಿಂದ ನೀವು ಪಡೆದುಕೊಂಡಿರುವುದೇನು?
ಮನುಷ್ಯ ಸಂಬಂಧಗಳನ್ನು ಅರ್ಥಮಾಡಿಕೊಳ್ಳುವ ಸಂವೇದನೆಯನ್ನು, ಪ್ರೀತಿಯನ್ನು, ಮನುಷ್ಯ ಕಾಳಜಿಗಳನ್ನು ರಂಗಭೂಮಿ ನನನಗೆ ಕಟ್ಟಿಕೊಟ್ಟಿದೆ. ಇದು ಬಹಳ ಮುಖ್ಯ. ಅದಕ್ಕಿಂತ ಏನು ಬೇಕು? ಅದನ್ನು ಉಳಿಸಿಕೊಂಡರೆ ಸಾಕು.
ನಾಡಿನ ಪ್ರಮುಖ ರಂಗಶಾಲೆಗಳನ್ನು ಕಟ್ಟಿಬೆಳೆಸುವಲ್ಲಿ ವಿಶೇಷ ಪಾತ್ರವಹಿಸಿರುವ ನಿಮಗೆ ರಂಗಶಾಲೆಯ ಕುರಿತು ಇದ್ದ ಪರಿಕಲ್ಪನೆಗಳೇನು?
ಒಂದು ರಂಗಶಾಲೆಯನ್ನು ಕಟ್ಟುವ ಸಂದರ್ಭದಲ್ಲಿ ಅದರ ಪರಿಕಲ್ಪನೆ ಯಾವ ರೀತಿ ಎಂಬುದು ಮುಖ್ಯ. ನಂತರ ಅದನ್ನು ಅನುಷ್ಠಾನಗೊಳಿಸುವ ಅಂಶ. ಹೆಚ್ಚು ಒತ್ತು ನೀಡಿಕೊಂಡು ಶಿಕ್ಷಣದಲ್ಲಿ ರಂಗ ಭೂಮಿಯ ಅಂಶಗಳನ್ನು ಸೇರಿಸುತ್ತಾ ಹೋಗಬೇಕು. ಅದನ್ನು ಒಂದು ವಿಷಯವಾಗಿ ತೆಗೆದುಕೊಂಡಲ್ಲಿ ಬಹಳ ಇಷ್ಟವಾಗುತ್ತದೆ ಹಾಗೂ ಪ್ರಯೋಜನ ಆಗುವಂತಾದ್ದು. ಇದರಿಂದಾಗಿ ಸಮಾಜದ ಜೊತೆಗೆ ನೇರವಾದ ಸಂಪರ್ಕ ಇರುತ್ತದೆ. ಇದರಿಂದ ಅದರೊಂದಿಗೆ ಬರುವ ವಿದ್ಯಾರ್ಥಿಗಳು ಹಾಗೂ ನಾಟಕ ನೋಡುವ ಸಮುದಾಯ ಬೆಳೆಯುತ್ತ ಹೋಗುವ ಕಾರ್ಯ ಆಗಬೇಕು. ಆ ವಿದ್ಯಾರ್ಥಿ ಒಬ್ಬ ನಟನಾಗಿ ಬೆಳೆಯುವ ವಾತಾವರಣ ಸೃಷ್ಟಿಯಾಗಬೇಕು. ಅದನ್ನು ಪರಂಪರೆಯಿಂದ ಕೃಷಿ ಮಾಡಿ ಬೆಳೆಸಬೇಕಾಗುತ್ತದೆ. ಸಾಂಪ್ರದಾಯಿಕ ವ್ಯವಸ್ಥೆಯಲ್ಲಿ ಯಕ್ಷಗಾನ ಕಲಾವಿದರು ತಮ್ಮ ಕಲೆಯನ್ನು ಬೆಳೆಸಿಕೊಳ್ಳುತ್ತಾರೆ. ಆದರೆ ಇಲ್ಲಿ ಆ ಅವಕಾಶ ಕಡಿಮೆ. ಇಲ್ಲಿ ಒಬ್ಬ ನಟ ಬೆಳಕು ನಿರ್ವಹಣೆ, ಪ್ರಸಾದನಗಳಂತಹ ಎಲ್ಲಾ ಕೆಲಸಗಳನ್ನೂ ಮಾಡಬೇಕಾಗುತ್ತದೆ. ಇದರಿಂದ ನಟನೆ ಬೆಳೆಯಲು ಸಾದ್ಯವಿಲ್ಲ. ಆದುದರಿಂದ ಅಭಿನಯ ಪ್ರಯೋಗಶಾಲೆಯಂತಹ ವ್ಯವಸ್ಥೆಯನ್ನು ನೀಡಬೇಕು. ಇದರಿಂದ ನಾವು ಒಬ್ಬ ನಟನನ್ನು ಬೆಳೆಸಲು ಸಾದ್ಯ. ನೀನಾಸಂ ಇರಬಹುದು ಅಥವಾ ಸಾಣೆಹಳ್ಳಿಯ ಶಿವ ಸಂಚಾರ ಇರಬಹುದು. ಅವರೆಲ್ಲಾ ನಟರನ್ನು ಬೆಳೆಸುವ ನಿಟ್ಟಿನಲ್ಲಿ ಬೇರೆ ತರದ ವ್ಯವಸ್ಥೆಯನ್ನು ಕಲ್ಪಿಸಿ ಅವರನ್ನು ಬೆಳೆಸುವ ಪೂರಕ ವಾತಾವರಣವನ್ನು ಸೃಷ್ಟಿ ಮಾಡಿಲ್ಲ. ಈ ವಾತಾವರಣ ಸೃಷ್ಟಿಯಾಗಬೇಕು.
ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ರಂಗಭೂಮಿ ಶಿಕ್ಷಣವನ್ನು ನೀಡು ಪ್ರಯತ್ನವನ್ನು ಸರ್ಕಾರ ಆರಂಭಿಸಿದೆ. ಆದರೆ ಈ ನಿಟ್ಟಿನಲ್ಲಿ ಒಂದು ಪಠ್ಯಕ್ರಮವಾಗಲೀ, ನಾಟಕ ಶಿಕ್ಷಕರ ಪೂರಕ ವಾತಾವರಣಗಳಾಗಲೀ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಶಿಕ್ಷಣದಲ್ಲಿ ನಾಟಕ ಶಿಕ್ಷಣ ಹೇಗೆ ಸಾಧ್ಯ?
ಸರ್ಕಾರದ ವ್ಯವಸ್ಥೆಯಲ್ಲಿ ಕಲಾವಿದರು ಹೋಗಿ ಸೇರಿದರೆ ತಮ್ಮ ಸಂವೇದನೆಗಳನ್ನು ಕಳೆದುಕೊಂಡುಬಿಡುತ್ತಾರೆ. ಪೂರಕ ವಾತಾವರಣ ಶಾಲೆಗಳಲ್ಲಿ ಇರುವುದಿಲ್ಲ. ಶಾಲಾಶಿಕ್ಷಕರಾಗಿದ್ದ ಬಹಳ ದೊಡ್ಡ ಸಂಗೀತಗಾರರಾದ ಪರಮೇಶ್ವರ್ ಹೆಗ್ಡೆ ರಾಜೀನಾಮೆ ಕೊಟ್ಟ ಹೊರಗಡೆ ಬಂದರು. ಕಲೆಗೆ ಬೆಲೆ ಸಿಗುದುದೇ ಇದಕ್ಕೆ ಕಾರಣ. ನಾಟಕ ಶಿಕ್ಷಕರು ಶಿಕ್ಷಣದ ಮುಖ್ಯವಾಹಿನಿಯಲ್ಲಿ ಕಾರ್ಯ ನಿರ್ವಹಿಸುವಂತಾಗಬೇಕು. ಅಂದರೆ ಮಕ್ಕಳಲ್ಲಿ ಒಂದು ಸಂವೇದನೆ ಸೃಷ್ಟಿ ಮಾಡುವಂತಹ ಅವಕಾಶವಿರಬೇಕು. ಮಕ್ಕಳು ಎಷ್ಟೆಷ್ಟು ಸಂವೇನಾಶೀಲರಾಗುತ್ತಾರೋ ಅಷ್ಟು ಬೆಳೆಯಲು ಸಾದ್ಯ. ಆದರೆ ನಮ್ಮ ಸರಕಾರದೊಂದಿಗೆ ಗುದ್ದಾಡುವ ಕಾರ್ಯ ಸಾದ್ಯವಿಲ್ಲ. ವ್ಯವಸ್ಥೆಯಲ್ಲಿರುವ ಏರುಪೇರುಗಳಿಂದ ಕಲೆಗಾರನಿಗೆ ಬೆಳೆಯಲು ಸಾಧ್ಯವಿಲ್ಲದಾಗಿದೆ. ನಮ್ಮ ನಾಟಕದ ಮೇಸ್ಟ್ರು ಅಟೆಂಡರ್ ಅಗಿ ಕೆಲಸ ಮಾಡುವ ಪರಿಸ್ಥಿತಿ ಅಲ್ಲಿದೆ. ಆದರೆ ಶಿಕ್ಷಣದ ಮುಖ್ಯವಾಹಿನಿಯಲ್ಲಿ ಅವರನ್ನು ತೊಡಗುವಂತೆ ಮಾಡಲು ಸಾಧ್ಯವಿದೆ. ನಮ್ಮ ಶಿಕ್ಷಣವ್ಯವಸ್ಥೆಯಲ್ಲಿರುವ ಡ್ರಾಯಿಂಗ್ ಶಿಕ್ಷಕರಿರಲಿ, ಕ್ರಾಫ್ಟ್ ಶಿಕ್ಷಕರಿರಲಿ ಇವರೆಲ್ಲಾ ಸೇರಿ ಮುಖ್ಯವಾಹಿನಿಯೊಂದಿಗೆ ಹೇಗೆ ಕಾರ್ಯನಿರ್ವಹಿಸಿ ಮಕ್ಕಳ ಮನೋವಿಕಾಸಕ್ಕೆ, ಅವರಲ್ಲಿ ಸಂವೇದನೆ ಬೆಳೆಸುವ ನಿಟ್ಟಿನಲ್ಲಿ ಸಹಾಯವಾಗಬದುದೆಂದು ನಾವು ಪ್ರಯೋಗಾತ್ಮಕವಾಗಿ ಕ್ಷೇತ್ರಕಾರ್ಯದಲ್ಲಿ ಮಾಡಿ ತೋರಿಸಿದ್ದೇವೆ. ಹಲವಾರು ನಾಟಕದ ಶಿಕ್ಷಕರು ಈಗಾಗಲೇ ಅದ್ಭುತ ಕೆಲಸಗಳನ್ನು ಮಾಡಿಯೂ ತೋರಿಸಿದ್ದಾರೆ. ಆದರೆ ನಮ್ಮ ಶಿಕ್ಷಣ ವ್ಯವಸ್ಥೆಯ ಅಧಿಕಾರಿಗಳೊಂದಿಗೆ ಒದ್ದಾಡುವುದು ಬಹಳ ಕಷ್ಟವಿದೆ. ವ್ಯವಸ್ಥೆಯೊಳಗಿರುವ ತರತಮ ವ್ಯವಸ್ಥೆಯೂ ಕಲಾವಿದರಿಗೆ ಒಗ್ಗುವುದಿಲ್ಲ.
ಒಬ್ಬ ರಂಗಕರ್ಮಿಯಾಗಿ ಇಂದಿನ ಸಾಮಾಜಿಕ ರಾಜಕೀಯ ಸಂದರ್ಭದ ಕುರಿತು ಏನು ಹೇಳುತ್ತೀರಿ?
ನಮ್ಮ ಸಂದರ್ಭದ ದುರಂತ ಏನೆಂದರೆ ಇಂದು ಯಾವ ಚಳವಳಿಯನ್ನೂ ಮಾಡಲಾಗದ ಒಂದು ದುಸ್ಥಿತಿ ಇದೆ. ಎಲ್ಲಾ ಚಳವಳಿಗಳನ್ನೂ ಕ್ಯಾಪಿಟಲೈಸ್ ಮಾಡಿಕೊಂಡುಬಿಡಲಾಗುತ್ತಿದೆ. ಕೆಲವೊಮ್ಮೆ ಯೋಚಿಸಿದಾಗ ಈ ಕಾಲದಲ್ಲಿ ಬದುಕಲಿಕ್ಕೇ ಅರ್ಹತೆ ನಮಗೇ ಇಲ್ಲವೇನೋ ಅನ್ನಿಸಿಬಿಡುತ್ತದೆ. ಆದರೂ ಇದೊಂದು ಕಾಲಘಟ್ಟದವರೆಗೆ ಮಾತ್ರ ಅನ್ನಿಸುತ್ತದೆ. ರಾಜಕೀಯದಲ್ಲಿ ವಿಕೇಂದ್ರೀಕರಣ ಬಂದ ಮೇಲೆ ವಿಧಾನಸೌಧದಿಂದ ಗ್ರಾಮಪಂಚಾಯಿತಿ ಮಟ್ಟಕ್ಕೂ ಭ್ರಷ್ಟಾಚಾರ ಮುಂದುವರೆಯಿತು. ಆದರೆ ಜನರು ಇದನ್ನು ಎಲ್ಲಿಯವರೆಗೆ ಸಹಿಸಿಕೊಮಡಿರಲು ಸಾಧ್ಯ. ಇದೆಲ್ಲಾ ಕೊನೆಗೊಳ್ಳಲೇಬೇಕು.