ಗೌರಿ ಮೇಡಂ ಜೊತೆಗಿನ ಒಡನಾಟದ ನೆನಪುಗಳು

ಅದು 2008 ನೇ ಇಸವಿ . ಶಿವಮೊಗ್ಗದಲ್ಲಿ ವಿದ್ಯಾರ್ಥಿ ಸಂಘಟನೆಯಲ್ಲಿ ಪೂರ್ಣಾವಧಿ ಹೋರಾಟಗಾರನಾಗಿ ಕೆಲಸ ಮಾಡುತ್ತಿದ್ದ ನನಗೆ ಜೀವನದಲ್ಲಿ ದೊಡ್ಡ ಆಘಾತವೊಂದು ಎದುರಾಗಿತ್ತು . ನನ್ನ ಅವ್ವನಿಗೆ ದಿಢೀರ್ ಅನಾರೋಗ್ಯ ಕಾಣಿಸಿಕೊಂಡಿತ್ತು . ಅದುವರೆಗೆ ಸುಮಾರು ಹತ್ತು ಹನ್ನೆರಡು ವರ್ಷಗಳಿಂದ ಮನೆ , ಮಠ , ತಮ್ಮ , ತಂಗಿ , ಅಪ್ಪ , ಅಮ್ಮ ಎಲ್ಲರನ್ನೂ ಬಹುತೇಕ ತೊರೆದು ಸಮಾಜದಲ್ಲಿ ಬದಲಾವಣೆ ತರಬೇಕು ಎಂದುಕೊಂಡು ಕೆಲಸ ಮಾಡುತ್ತಿದ್ದ ನನ್ನ ಜಂಘಾಬಲ ಉಡುಗಿಸಿತ್ತು ಈ ಘಟನೆ . ಅವ್ವನನ್ನು ಆಸ್ಪತ್ರೆಗೆ ಸೇರಿಸಿ ಒಂದು ವಾರ ಅಡ್ಮಿಟ್ ಮಾಡಿಕೊಂಡರೆ ಡಿಸ್ಚಾರ್ಜ್ ಮಾಡಿಸುವಾಗ ಕೈಯಲ್ಲಿ ನಯಾಪೈಸೆ ಕಾಸಿಲ್ಲ . ಮನೆಯಲ್ಲಿ ಸಹ ಇದೇ ಸ್ಥಿತಿ . ಅವ್ವನ ಅನಾರೋಗ್ಯಕ್ಕೂ ಒಂದು ರೀತಿಯಲ್ಲಿ ನಾನೇ ಕಾರಣನಾಗಿದ್ದೆ . ನನ್ನ ಬಗ್ಗೆ ದೊಡ್ಡ ಕನಸುಗಳಿಟ್ಟುಕೊಂಡಿದ್ದ ಅವ್ವ ಒಂದು ರೀತಿ ಭ್ರಮನಿರಸನಳಾಗಿ ಮಾನಸಿಕ ಆಘಾತಕ್ಕೊಳಗಾಗಿದ್ದಳು . ಕೊನೆಗೆ ಆಸ್ಪತ್ರೆಗೆ ಕಟ್ಟಲು ಬೇಕಾಗಿದ್ದ 12 ಸಾವಿರ ರೂಪಾಯಿಗೆ ಶಿವಮೊಗ್ಗದ ಹಿರಿಯ ಕಿರಿಯ ಗೆಳೆಯರ ಬಳಿ ನಾಲ್ಕೈದು ದಿನ ಸೈಕಲ್ ಹೊಡೆದು ಸಾಲ ಮಾಡಿ ಆಸ್ಪತ್ರಗೆ ಕಟ್ಟಿ ಮನೆಗೆ ಕರೆದುಕೊಂಡು ಹೋಗಿದ್ದೆ . ಅಮ್ಮ ಪೂರ್ತಿ ಹುಷಾರಾಗಬೇಕಾದರೆ ತಂಗಿ ಮದುವೆಯ ಜವಾಬ್ದಾರಿಯನ್ನು ನಾನೇ ಹೊತ್ತು ನೆರವೇರಿಸು...