ಕಳೆದ ಮಾರ್ಚ್ ೨ ರಂದು ನಡೆದ ಬೆಂಗಳೂರಿನಲ್ಲಿ ನಡೆದ ವಕೀಲರು - ಪತ್ರಕರ್ತರು - ಪೊಲೀಸರ ನಡುವಿನ ವೃತ್ತಿಗಲಭೆ ನಿಧಾನಕ್ಕೆ ಜನಮಾನಸದಿಂದ ದೂರಾಗತೊಡಗಿದೆ. ಅಂದು ಮೂರೂ ಕಡೆಯವರಿಗೆ ಉಂಟಾದ ದೇಹದ ಮೇಲಿನ ಗಾಯಗಳೂ ವಾಸಿಯಾಗುತ್ತಿವೆ. ತಲೆಗೆ ಹಾಕಿದ್ದ ಹೊಲಿಗೆಗಳೂ ಬಿಚ್ಚಲಾಗಿದೆ. ಆದರೆ ಅಂದು ಉಂಟಾದ ಮಾನಸಿಕ ಗಾಯಗಳು ಇನ್ನು ಹತ್ತು ವರ್ಷಗಳಾದರೂ ವಾಸಿಯಾಗಲಾರವು. ಸಮಾಜದಲ್ಲಿ ಅತ್ಯಂತ ಜವಾಬ್ದಾರಿ ಹೊಂದಿದ್ದ ಈ ವೃತ್ತಿಪರರ ನಡುವಿನ ಕಂದಕ ದಿನೇ ದಿನೇ ಬೆಳೆಯುತ್ತಲೇ ಹೋಗುತ್ತಿದೆ.
ಅಂದಿನ ಘಟನೆ ಹೇಗೆ ನಡೆಯಿತೆಂದು ನೀವು ಪತ್ರಕರ್ತರಿಗೆ ಕೇಳಿದರೆ ಅವರು ಒಂದು ರೀತಿ ಮಾಧ್ಯಮಗಳ ಮೂಲಕ ಭಿತ್ತರಿಸಿದ್ದಾರೆ. ವಕೀಲರು ತಮ್ಮ ಅಳಲನ್ನು ತಮ್ಮದೇ ರೀತಿ ಹೇಳುವ ಪ್ರಯತ್ನ ನಡೆಸಿದ್ದಾರೆ. ಪೊಲೀಸರು ಕೂಡಾ ಮತ್ತೊಂದು ಬಗೆಯಲ್ಲಿ ಹೇಳುತ್ತಾರೆ. ಈ ಹೊತ್ತಿನಲ್ಲಿ ನನಗೆ ಮತ್ತೊಮ್ಮೆ ಕಾಡಿದ್ದು ಜಗತ್ಪ್ರಸಿದ್ಧ ನಿರ್ದೇಶಕ ಅಕಿರಾ ಕೊರೊಸಾವಾನ ರಶೋಮನ್ (೧೯೫೦ರಲ್ಲಿ ನಿರ್ಮಿಸಿದ್ದು) ಎಂಬ ಅದ್ಭುತ ಸಿನೆಮಾ. ಈ ಸಿನೆಮಾ ನೋಡಿರುವವರಿಗೆಲ್ಲಾ ನನ್ನ ಮಾತು ಅರ್ಥವಾಗಿರುತ್ತದೆ. ಕೊರೊಸಾವಾನ ಎಲ್ಲಾ ಸಿನಿಮಾಗಳಲ್ಲಿ ಬಹಳ ಸಲ ಮತ್ತೆ ಮತ್ತೆ ಕಾಡುವುದು ರಷೊಮನ್. ಯಾಕೆಂದರೆ ಮನುಷ್ಯನ ಸ್ವಾರ್ಥ ಮತ್ತು ಆಲೋಚನೆಯ ಮಿತಿಗಳನ್ನು ಆ ಸಿನೆಮಾದ ಕತೆ ಅನಾವರಣ ಮಾಡುವಷ್ಟು ಅದ್ಭುತವಾಗಿ ಬೇರೆ ಯಾವುದೂ ಮಾಡಲು ಅಸಾಧ್ಯವೆಂದು ನನ್ನ ಭಾವನೆ.
ರಶೋಮನ್ ಎಂದರೆ ಜಪಾನಿನ ಸ್ಮಾರಕವೊಂದರ ಬಾಗಿಲು. ಅಲ್ಲಿ ಹೊರಗೆ ಜೋರಾಗಿ ಮಳೆ ಬರುತ್ತಿದ್ದ ಹೊತ್ತಿನಲ್ಲಿ - ಒಬ್ಬ ಕಟ್ಟಿಗೆ ಕಡಿಯುವ ವ್ಯಕ್ತಿ, ಮತ್ತೊಬ್ಬ ಪೂಜಾರಿ ಹಾಗೂ ಒಬ್ಬ ಸಾಮಾನ್ಯ ಅಡ್ನಾಡಿ ಮನುಷ್ಯ- ಈ ಮೂವರ ನಡುವೆ ನಡೆಯುವ ಸಂಭಾಷಣೆಯೇ ರಷೋಮನ್ ಸಿನಿಮಾದ ಕತೆ. ಈ ಸಂಭಾಷಣೆಯಲ್ಲಿ ಕೆಲ ದಿನಗಳ ಹಿಂದೆ ನಡೆದ ಕೊಲೆಯೊಂದರ ಫ್ಲಾಷ್ ಬ್ಯಾಕ್ ಕತೆ ಅನಾವರಣಗೊಳ್ಳುತ್ತದೆ.
ಅಲ್ಲಿ ಒಂದು ಕೊಲೆಯಾಗಿರುತ್ತದೆ. ತನ್ನ ಹೆಂಡತಿಯನ್ನು ಕುದುರೆಯ ಮೇಲೆ ಕೂರಿಸಿಕೊಂಡು ಕಾಡಿನ ದಾರಿಯಲ್ಲಿ ನಡೆಯುತ್ತಿದ್ದ ಸಮುರಾಯ್ (ಜಪಾನಿ ಸೈನಿಕ) ಒಬ್ಬ ಕೊಲೆಯಾಗಿದ್ದನ್ನು ಕಟ್ಟಿಗೆ ಕಡಿಯುವ ವ್ಯಕ್ತಿ ಬಂದು ಹೇಳಿರುತ್ತಾನೆ. ಆ ಕೊಲೆಗೆ ಸಂಬಂಧಿಸಿದಂತೆ ಸಾಕ್ಷಿ ವಿಚಾರಣೆ ನಡೆಯುತ್ತದೆ. ಆ ವಿಚಾರಣೆಯನ್ನು ನೋಡಿ ಆಘಾತಕ್ಕೊಳಗಾದ ಪೂಜಾರಿ ಅದು ಮಾನವೀಯತೆಯಲ್ಲಿ ತನಗೆ ನಂಬಿಕೆಯ ಕಳೆದುಕೊಳ್ಳುವಂತೆ ಮಾಡಿದೆ ಎನ್ನುತ್ತಾನೆ. ಇಂದು ದಿನನಿತ್ಯ ಜರುಗುವ ಯುದ್ಧ, ಭೂಕಂಪ, ಬರಗಾಲ, ಪ್ರವಾಹ, ಇತ್ಯಾದಿ ಎಲ್ಲವುಗಳಿಗಿಂತ ಭೀಕರವಾದದ್ದು ಆ ವಿಚಾರಣೆಯಲ್ಲಿ ತಾನು ಕೇಳಿದ ವಿವರಣೆಗಳು ಎಂದು ಅವನು ಹೇಳುತ್ತಾನೆ. ಹೀಗೆ ಆ ಇಡೀ ವಿಚಾರಣೆಯ ಕುರಿತು ಮೂರೂ ಜನರಲ್ಲಿ ಒಂದು ಜಿಜ್ಞಾಸೆ ಆ ರಷೋಮನ್ ಬಳಿ ನಡೆಯುತ್ತದೆ.
ಕೊಲೆಯ ನ್ಯಾಯ ವಿಚಾರಣೆಯಲ್ಲಿ ಮೂವರು ಸಾಕ್ಷಿ ನುಡಿದಿರುತ್ತಾರೆ. ಆ ಮೂವರೆಂದರೆ ಕುಖ್ಯಾತ ಡಕಾಯಿತ ತಜೊಮಾರು, ಸಮುರಾಯ್‌ನ ಹೆಂಡತಿ ಹಾಗೂ ಕೊಲೆಯಾದ ಸಮುರಾಯ್ (ಸಮುರಾಯ್‌ನನ್ನು ಒಂದು ಮಾಧ್ಯಮದ ಮೂಲಕ ಮಾತನಾಡಿಸಲಾಗುತ್ತದೆ). ವಿಶೇಷವೆಂದರೆ ಪ್ರತಿಯೊಬ್ಬರ ವಿವರಣೆಯೂ ಮತ್ತೊಬ್ಬರ ವಿವರಣೆಗೆ ತದ್ವಿರುದ್ಧವಾಗಿರುತ್ತದೆ.
ಅಲ್ಲಿಗೆ ಕೈಕಟ್ಟಿ ಎಳೆದುಕೊಂಡು ತರಲಾದ ಕುಖ್ಯಾತ ಡಕಾಯಿತ ತಾಜೊಮಾರು ನೀಡುವ (ತೊಷಿರೋ ಮಿಫುನೆ) ಹೇಳಿಕೆಯ ಪ್ರಕಾರ ಸಮುರಾಯ್ ಮತ್ತು ಆತನ ಹೆಂಡತಿ ಹೋಗುತ್ತಿರುತ್ತಾರೆ. ಸಮುರಯ್‌ನ ಹೆಂಡತಿ ಆಕೆ ಬಹಳ ಸುಂದರವಾಗಿದ್ದರಿಂದ ಅವಳ ಮೇಲೆ ಮನಸ್ಸಾಗಿ ತಜೊಮಾರು ಸಮುರಾಯ್‌ನನ್ನು ಚಂಚಿಸಿ ಆತನನ್ನು ಬೇರೆಡೆ ಕರೆದುಕೊಂಡು ಹೋಗಿ ಆತನ ಹೆಡೆಮುರಿ ಕಟ್ಟಿ ಕೂರಿಸಿರುತ್ತಾನೆ. ಆತನ ಹೆಂಡತಿಯನ್ನು ಅಲ್ಲಿ ಕರೆದು ತೋರಿಸಿದಾಗ ಅವಳು ತನ್ನ ಬಳಿಯಿದ್ದ ಚೂರಿಯಿಂದ ಆತನನ್ನು ಇರಿಯಲು ಯತ್ನಿಸಿ ವಿಫಲವಾಗುತ್ತಾಳೆ. ಆತ ಅವಳ ಶೀಲಹರಣಕ್ಕೆ ಮುಂದಾಗುತ್ತಾನೆ. ಕ್ರಮೇಣ ಆಕೆ ಸಮ್ಮತಿ ಸೂಚಿಸುತ್ತಾಳೆ. ಇದೆಲ್ಲವೂ ಸಮುರಾಯ್‌ನ ಎದುರಿಗೇ ನಡೆಯುತ್ತದೆ. ಆಗ ಆಕೆ ತಾನು ಅವಮಾನಕ್ಕೊಳಗಾಗುವುದರಿಂದ ತಪ್ಪಿಸಿಕೊಳ್ಳಲು ತನ್ನ ಗಂಡನೊಂದಿಗೆ ಹೋರಾಡಿ ಇಬ್ಬರಲ್ಲಿ ಒಬ್ಬರು ಸಾಯಬೇಕೆಂದು ಹಠ ಹಿಡಿಯುತ್ತಾಳೆ. ಅವಳ ಷರತ್ತನ್ನು ಒಪ್ಪಿಕೊಳ್ಳುವ ತಜೊಮಾರು ಸಮುರಾಯ್‌ನೊಂದಿಗೆ ಲೀಲಾಜಾಲವಾಗಿ ಹೊಡೆದಾಡುತ್ತಾನೆ. ಅಂತಿಮವಾಗಿ ಆತ ಸಮುರಾಯ್‌ನನ್ನು ಕೊಲ್ಲುವಷ್ಟರಲ್ಲಿ ಆಕೆ ತಪ್ಪಿಸಿಕೊಂಡು ಓಡಿ ಹೋಗಿರುತ್ತಾಳೆ.
ಇನ್ನು ಸಮುರಾಯ್‌ನ ಹೆಂಡತಿ ಇಡೀ ಘಟನೆಯನ್ನು ಬೇರೊಂದು ರೀತಿಯಲ್ಲಿ ವಿವರಿಸುತ್ತಾಳೆ. ಅದರ ಪ್ರಕಾರ ಆಕೆಯ ಮೇಲೆ ಬಲಾತ್ಕಾರವೆಸಗಿದ ತಜೊಮಾರು ಆಕೆಯನ್ನು ಅಲ್ಲೇ ಬಿಟ್ಟು ಹೊರಡುತ್ತಾನೆ. ತನ್ನೆದುರೇ ನಡೆದ ಈ ಅತ್ಯಾಚಾರವನ್ನು ಕಂಡು ಆಕೆಯ ಗಂಡನೂ ಆಕೆಯತ್ತ ತಿರಸ್ಕಾರದ ನೋಟ ಬೀರುತ್ತಾನೆ. ಇದರಿಂದ ಕುಸಿದು ಹೋದ ಆಕೆ ತನ್ನನ್ನು ಕೊಂದುಬಿಡಲು ತನ್ನ ಗಂಡನಿಗೆ ಕೇಳುತ್ತಾಳೆ. ಆದರೂ ಅವಳೆಡೆಗೆ ಆತ ಬೀರಿದ ವಿಚಿತ್ರ ತಿರಸ್ಕಾರದ ನೋಟವನ್ನು ಸಹಿಸಲಾಗದೇ ತಲೆಸುತ್ತು ಬಂದಂತಾಗಿ ಬಿದ್ದುಬಿಡುತ್ತಾಳೆ. ಮತ್ತೆ ಎಚ್ಚರಾಗಿ ನೋಡಿದರೆ ಅವಳ ಕೈಯಲ್ಲಿದ್ದ ಚೂರಿಯಿಂದ ಆಕೆಯ ಗಂಡ ಇರಿದುಕೊಂಡು ಸತ್ತಿರುವುದು ಕಾಣುತ್ತದೆ. ತಾನೂ ಸಾಯಲು ಪ್ರಯತ್ನಿಸಿದರೂ ಆಗುವುದಿಲ್ಲ.
ಇನ್ನು ಸಮುರಾಯ್ ಹೇಳುವ ವಿವರಣೆ ಮೇಲೆ ಹೇಳಿದ ಇಬ್ಬರ ವಿವರಣೆಗಳಿಗೂ ತದ್ವಿರುದ್ಧವಾದದ್ದು. ಡಕಾಯಿತ ತಜೊಮಾರು ಅವನ ಹೆಂಡತಿಯ ಮೇಲೆ ಅತ್ಯಾಚಾರವೆಸಗಿದ ಮೇಲೆ ಅವಳ ಬಳಿ ತನ್ನನ್ನು ಮದುವೆಯಾಗು ಎಂದು ಕೇಳುತ್ತಾನೆ. ಬೇಕಾದರೆ ಅವಳಿಗಾಗಿ ಕಳ್ಳತನವನ್ನೆಲ್ಲಾ ಬಿಟ್ಟುಬಿಡುತ್ತೇನೆಂದೂ, ಕಷ್ಟಪಟ್ಟು ದುಡಿದು ಅವಳನ್ನು ಸಾಕುವೆನೆಂದೂ ಗೋಗರೆಯುತ್ತಾನೆ. ಅದಕ್ಕೆ ಒಪ್ಪುವ ಆಕೆ ಆತನೊಂದಿಗೆ ಹೋಗಲು ಒಪ್ಪುತ್ತಾಳೆ. ಆದರೆ ತಾನು ಇಬ್ಬರಿಗೆ ಸೇರಿದವಳಾಗುವುದನ್ನು ತಡೆಯಲಿಕ್ಕಾಗಿ ಆಕೆಯ ಗಂಡನನ್ನು ಕೊಂದುಬಿಡಲು ಕೇಳಿಕೊಳ್ಳುತ್ತಾಳೆ. ಅವಳ ಈ ಮಾತುಗಳಿಂದ ಕೋಪೋದ್ರಿಕ್ತನಾಗುವ ತಜೊಮಾರು ಸಮುರಾಯ್‌ನನ್ನು ಬಿಡುಗಡೆಗೊಳಿಸಿ ಆಕೆಯನ್ನು ಏನು ಬೇಕಾದರೂ ಮಾಡಲು ಅವಳ ಗಂಡನಿಗೆ ಬಿಡುತ್ತಾನೆ. ಅವನ ಈ ನಡವಳಿಕೆಯಿಂದಾಗಿ ಸಮುರಾಯ್ ತಜೊಮಾರುನನ್ನು ಕ್ಷಮಿಸಿಬಿಡುತ್ತಾನೆ. ಅಷ್ಟು ಹೊತ್ತಿಗೆ ತಪ್ಪಿಸಿಕೊಂಡು ಅಲ್ಲಿಂದ ಓಡಿ ಹೋಗುವ ಆಕೆಯನ್ನು ಬೆನ್ನತ್ತಿ ತಜಮೋರು ಓಡುತ್ತಾನೆ. ಆಕೆ ಬಿಟ್ಟು ಹೋಗಿದ್ದ ಚೂರಿಯಿಂದ ಸಮುರಾಯ್ ತನ್ನನ್ನು ತಾನೇ ಇರಿದುಕೊಂಡು ಅಸುನೀಗುತ್ತಾನೆ.
ನ್ಯಾಯ ವಿಚಾರಣೆಯಲ್ಲಿ ಈ ಮೂರು ವಿವರಣೆಗಳನ್ನು ನೀಡಲಾಗುತ್ತದೆ. ಆದರೆ ಇದಕ್ಕೆ ಹೊರತಾದ ಮತ್ತೊಂದು ವಿವರಣೆಯನ್ನು ರಷೋಮನ್ ಬಳಿ ನಡೆವ ಮಾತುಕತೆಯಲ್ಲು ಹೇಳುವುದು ಕಟ್ಟಿಗೆ ಕಡಿಯುವ ವ್ಯಕ್ತಿ. ವಾಸ್ತವವಾಗಿ ಆ ದಿನ ನಡೆದ ಘಟನೆಯನ್ನು ದೂರದಿಂದ ಆತ ನೋಡಿರುತ್ತಾನೆ. ಆದರೆ ಈ ವಿಚಾರಣೆಯ ಭಾಗವಾಗಿರಲು ಒಪ್ಪದೇ ತನಗೇನೂ ಗೊತ್ತಿಲ್ಲವೆಂದೇ ಹೇಳಿರುತ್ತಾನೆ.
ಕಟ್ಟಿಗೆ ಕಡಿಯುವವನ ಪ್ರಕಾರ ತಜೊಮಾರು ಆಕೆಯನ್ನು ತನ್ನೊಂದಿಗೆ ಬರಲು ಕೇಳುತ್ತಾನೆ. ಆದರೆ ಆಕೆ ತನ್ನ ಗಂಡನನ್ನ ಕಟ್ಟಿಹಾಕಿದ ಹಗ್ಗವನ್ನು ಬಿಚ್ಚುತ್ತಾಳೆ. ಆದರೆ ಸಮುರಾಯ್ ಶೀಲ ಕೆಟ್ಟಿರುವ ತನ್ನ ಹೆಂಡತಿಯನ್ನು ತಿರಸ್ಕರಿಸುತ್ತಾನೆ. ಆಕೆ ಅವರಿಬ್ಬರನ್ನೂ ನಿಂದಿಸಿ ಇಬ್ಬರೂ ಹೊಡೆದಾಡುವಂತೆ ಪ್ರೇರೇಪಿಸಿಸುತ್ತಾಳೆ. ಒಮ್ಮೆ ಅವರಿಬ್ಬರೂ ಹೊಡೆದಾಡತೊಡಗಿದಂತೆ ಇವಳಲ್ಲಿ ಭಯ ಆವರಿಸುತ್ತದೆ. ಆ ಇಬ್ಬರೂ ಸಹ ಜೀವಭಯದಲ್ಲೇ ಹೊಡೆದಾಡುತ್ತಾರೆ. ಕೊನೆಗೆ ತಜೊಮಾರು ಸಮುರಾಯ್‌ನನ್ನು ಕೊಲ್ಲುತ್ತಾನೆ. ಅಷ್ಟರಲ್ಲಿ ತಜೊಮಾರು ಮುಂದೆ ಚಲಿಸಲಾಗದಷ್ಟು ನಿತ್ರಾಣನಾಗಿರುತ್ತಾನೆ. ಆಕೆ ಭಯಗೊಂಡು ಅಲ್ಲಿಂದ ಓಡಿಹೋಗಿರುತ್ತಾಳೆ.
ಈ ವಿವರಣೆಯನ್ನು ಕಟ್ಟಿಗೆ ಕಡಿಯುವವನು ಹೇಳಿಮುಗಿಸುವಷ್ಟರಲ್ಲಿ ಆ ರಶೋಮನ್ ಕಟ್ಟಡದ ಬಳಿ ಯಾರೋ ಬಿಟ್ಟುಹೋದ ಹಸುಗೂಸೊಂದು ಅಳುವುದು ಕೇಳಿಸುತ್ತದೆ. ಅದಕ್ಕೆ ಹೊದಿಸಿದ ವಸ್ತ್ರವನ್ನು ಅಡ್ನಾಡಿ ವ್ಯಕ್ತಿ ಕಿತ್ತುಕೊಳ್ಳುತ್ತಾನೆ. ಇದರಿಂದ ನೊಂದುಕೊಂಡ ಕಟ್ಟಿಗೆ ಕಡಿಯುವವನು ಅವನನ್ನು ’ಸ್ವಾರ್ಥಿ’ ಎಂದು ಜರಿಯುತ್ತಾನೆ. ಆಗ ಆ ವ್ಯಕ್ತಿ ಕೂಡ ಈತನನ್ನು ನೀನೂ ಸಹ ಸ್ವಾರ್ಥಿ ಅಲ್ಲದಿದ್ದರೆ ನ್ಯಾಯ ವಿಚಾರಣೆಯಲ್ಲಿ ಯಾಕೆ ನೀನು ಕಂಡಿದ್ದನ್ನು ಹೇಳಲಿಲ್ಲ? ಎಂದು ಮರುಪ್ರಶ್ನಿಸುತ್ತಾನೆ. ಅಡ್ನಾಡಿ ವ್ಯಕ್ತಿ ಅಲ್ಲಿಂದ ಕಾಲ್ಕೀಳುತ್ತಾನೆ. ಅಷ್ಟರಲ್ಲಿ ಅಲ್ಲಿದ್ದ ಪೂಜಾರಿಗೆ ಮನುಷ್ಯರ ಮೇಲೆಯೇ ನಂಬಿಕೆ ಹೋಗಿರುತ್ತದೆ. ಆದರೆ ಆ ಅನಾಥ ಮಗುವನ್ನು ತನ್ನ ಕೈಗೆತ್ತಿಕೊಳ್ಳಲು ಕಟ್ಟಿಗೆ ಕಡಿಯುವ ವ್ಯಕ್ತಿ ಮುಂದಾದೊಡನೆ ಅವನನ್ನು ಪೂಜಾರಿ ತಡೆದು ನೀನು ಆ ಮಗುವಿನ ಮೇಲಿನ ಉಳಿದ ಬಟ್ಟೆತುಂಡನ್ನೂ ಕಿತ್ತುಕೊಳ್ಳುತ್ತೀಯಾ ಎಂದು ಕೇಳುತ್ತಾನೆ. ಅದಕ್ಕೆ ಕಟ್ಟಿಗೆ ಕಡಿಯುವವನು ’ಖಂಡಿತಾ ಇಲ್ಲ ನಾನು ಆ ಅನಾಥ ಮಗುವನ್ನು ಸಲಹುತ್ತೇನೆ’ ಎನ್ನುತ್ತಾನೆ. ಪೂಜಾರಿ ನಿನಗೆ ಇದೊಂದು ಹೊರೆಯಾಗುವುದಿಲ್ಲವೇ ಎಂದು ಕೇಳಿದ್ದಕ್ಕೆ ’ನನಗೆ ಈಗಾಗಲೇ ಆರು ಮಕ್ಕಳಿವೆ. ಇದೊಂದನ್ನು ಕೊಂಡೊಯ್ದರೆ ಅದೇನೂ ವ್ಯತ್ಯಾಸವುಂಟುಮಾಡುವುದಿಲ್ಲ’ ಎಂದು ಅದನ್ನು ತನ್ನ ಕೈಗೆ ಎತ್ತಿಕೊಳ್ಳುತ್ತಾನೆ. ಆಗ ಆ ಪೂಜಾರಿಗೆ ಮತ್ತೆ ಮನುಷ್ಯರ ಒಳ್ಳೆಯತನದಲ್ಲಿ ನಂಬಿಕೆ ಬರುತ್ತದೆ.
ಇಡೀ ಸಿನಿಮಾದಲ್ಲಿ ಅದರ ಕಥಾವಸ್ತುವನ್ನು ಫ್ಲಾಷ್‌ಬ್ಯಾಕ್ ನಿರೂಪಣೆ, ಬೆಳಕು ನೆರಳಿನ ಸಂಯೋಜನೆ ಹಾಗೂ ಕ್ಯಾಮೆರಾಗಳ ಕೈಚಳಕದಿಂದ ಅದ್ಭುತವೆನ್ನುವಂತೆ ಕುರೋಸಾವಾ ಕಟ್ಟಿಕೊಟ್ಟಿದ್ದಾರೆ. ನ್ಯಾಯದ ತತ್ವಮೀಮಾಂಸೆಯನ್ನು, ಮನುಷ್ಯನ ಸ್ವಭಾವದ ಸಂಕೀರ್ಣತೆಯನ್ನು ಈ ಚಿತ್ರದಲ್ಲಿ ಅವರು ಪ್ರತಿಫಲಿಸಿದ ರೀತಿ ನಿಜಕ್ಕೂ ಅಪೂರ್ವವಾದದ್ದು. ಪ್ರತಿಯೊಬ್ಬರು ಹೇಳುವ ವಿವರಣೆಯಲ್ಲೂ ಸ್ವಾರ್ಥವೇ ಇರುತ್ತದಲ್ಲದೆ ತಮ್ಮನ್ನು ತಾವು ನಿರಪರಾಧಿಗಳೆಂದೂ, ಅಸಹಾಯಕರೆಂದೂ ಇಲ್ಲವೇ ಆ ಸಂದರ್ಭಗಳಲ್ಲಿ ತಾವು ಮಾಡಿದ್ದು ಸರಿಯಾದ ಕೃತ್ಯ ಎಂದೂ ಸಮರ್ಥಿಸಿಕೊಳ್ಳುವ ನಡವಳಿಕೆ ಅದು. ಪ್ರತಿಯೊಬ್ಬರೂ ತನಗೆ ಯಾವುದು, ಎಷ್ಟು ಸತ್ಯ ಎಂದು ತೋರುತ್ತದೋ ಅದಷ್ಟನ್ನೇ ಸತ್ಯ ಎಂದು ಪ್ರತಿಪಾದಿಸುತ್ತದೆ. ಏಕೆಂದರೆ ಅದೇ ಸತ್ಯವಾಗಿರಲಿ ಎಂಬುದು ಅವರ ಬಯಕೆಯಾಗಿರುತ್ತದೆ.
ಮತ್ತೆ ಮೊನ್ನೆ ಇಲ್ಲಿ ನಡೆದ ಘಟನೆಗಳಲ್ಲಿ ಪತ್ರಕರ್ತರು, ವಕೀಲರು, ಪೊಲೀಸರು ನಡೆದುಕೊಳ್ಳುತ್ತಿರುವುದಕ್ಕೂ ಕುರೊಸೊವಾನ ರಷೋಮನ್ ಪಾಥ್ರಗಳಿಗೂ ಎಷ್ಟೊಂದು ಸಾಮ್ಯತೆ ಇದೆ ನೋಡಿ. ಇಲ್ಲಿ ಸಹ ಪ್ರತಿಯೊಂದು ವೃತ್ತಿಯವರೂ ತಮ್ಮ ಮೂಗಿನ ನೇರಕ್ಕೇ ಪ್ರತಿಯೊಂದನ್ನೂ ವಿವರಿಸುತ್ತಾರೆ. ಹಾಗೂ ತಾವು ಮಾಡಿದ ಪ್ರತಿಯೊಂದಕ್ಕೂ ಸಮರ್ಥನೆ ನೀಡುತ್ತಲೇ ಇದ್ದಾರೆ. ಅದಕ್ಕೆ ಹೊರಗಿನ ಬೆಂಬಲ ಪಡೆಯಲೂ ಯತ್ನಿಸಿದ್ದಾರೆ. ನಿಜಕ್ಕೂ ನಮ್ಮ ನಮ್ಮ ಸ್ವಾರ್ಥದ ಮನಸ್ಸುಗಳು ಅದೆಷ್ಟು ಗಟ್ಟಿಯಾಗಿರುತ್ತವೆಯೆಂದರೆ ಮತ್ತೊಬ್ಬರ ಮೇಲೆ ನಡೆದ ಹಲ್ಲೆಗಳೂ, ಮತ್ತೊಬ್ಬರ ಮೈಯಿಂದ ಹರಿದ ರಕ್ತವೂ, ಕಲ್ಲುಗಳಿಂದ ಜಖಂ ಆದ, ಸುಟ್ಟು ಕರಕಲಾದ ಮತ್ತೊಬ್ಬರ ವಾಹನಗಳೂ ನಮಗೆ ಎಲ್ಲೋ ಖುಷಿ ಕೊಡುವ ಮಟ್ಟಿಗೆ!
ಇದನ್ನು ಹೊರತು ಪಡಿಸಿ ಒಂದು ವಿಷಯವಿದೆ. ಸಾಮಾನ್ಯವಾಗಿ ಪ್ರಪಂಚದ ಸರ್ವಾಧಿಕಾರಿ ಆಡಳಿತಗಳನ್ನು, ಕಮ್ಯುನಿಷ್ಟ್ ಆಡಳಿತಗಳನ್ನು ಟೀಕಿಸುವಾಗ ಅಲ್ಲಿ ನಡೆಯುವ ಅನ್ಯಾಯ ಅನಾಚಾರಗಳ ಮಾಹಿತಿಯನ್ನೇ ಆ ಸರ್ಕಾರಗಳು, ಅಧಿಕಾರಸ್ಥರು ಹೊರಬರಲು ಬಿಡದಿರುವುದರ ಬಗ್ಗೆ ಚರ್ಚಿಸುತ್ತೇವೆ ಅಲ್ಲವೇ? ಈ ವಿಷಯವನ್ನು ಬೇಕಾದರೆ ಅಂಕಿ ಅಂಶಗಳನ್ನು ಹೆಕ್ಕಿ ಗಂಟೆಗಟ್ಟಲೆ ಮಾತಾಡುತ್ತೇವೆ, ಪುಟಗಟ್ಟಲೆ ಬರೆಯುತ್ತೇವೆ. ಆ ಸರ್ವಾಧಿಕಾರಿ ದೇಶಗಳಿಂದ ತಪ್ಪಿಸಿಕೊಂಡು ಓಡಿ ಹೋಗಿ ಬೇರೆ ದೇಶಗಳಲ್ಲಿ ರಕ್ಷಣೆ ಪಡೆದವರು ಹೇಳಿದ್ದನ್ನು ಸಾರಿ ಸಾರಿ ಹೇಳುತ್ತೇವೆ. ಹೀಗೆ ಮಾಡಿ ನಮ್ಮಷ್ಟಕ್ಕೆ ನಾವು ಪ್ರಜಾಪ್ರಭುತ್ವವಾದಿಗಳು ಎಂದು ಬೆನ್ನು ತಟ್ಟಿಕೊಳ್ಳುತ್ತೇವೆ. ಆದರೆ ಮೊನ್ನೆ ನಡೆದ ವೃತ್ತಿಗಲಭೆಯಲ್ಲಿ ಇಲ್ಲಿ ಸಂಭವಿಸಿರುವುದೇನು? ಯಾವ ಸರ್ವಾಧಿಕಾರಿಗಳನ್ನೂ ಮೀರಿಸುವ ರೀತಿಯಲ್ಲಿ ನಾವು ವಕೀಲರ ಮೇಲೆ ನಡೆದ ಹಲ್ಲೆಗಳ ಕುರಿತ ಮಾಹಿತಿಗಳನ್ನು ವ್ಯವಸ್ಥಿತವಾಗಿ ಮುಚ್ಚಿಹಾಕಿದೆವಲ್ಲವೇ? ಯೂಟ್ಯೂಬ್, ಫೇಸ್‌ಬುಕ್ ಮುಂತಾದ ಸಾಮಾಜಿಕ ಜಾಲ ತಾಣಗಳು ಇರದೇ ಹೋಗಿದ್ದರೆ ಕೆಲವು ಅವಿವೇಕಿ ವಕೀಲರಿಂದ ಪತ್ರಕರ್ತರು ಮತ್ತು ಪೊಲೀಸರ ಮೇಲೆ ಆದಂತೆಯೇ ಪತ್ರಕರ್ತರು ಹಾಗೂ ಪೊಲೀಸರು ಸೇರಿ ನಡೆಸಿದ ಭೀಕರ ಹಲ್ಲೆಗಳು, ಹಿಂಸಾ ಕೃತ್ಯಗಳು ಹೊರಜಗತ್ತಿಗೆ ತಿಳಿಯುತ್ತಲೇ ಇರಲಿಲ್ಲ.
ಈಗ ನಮ್ಮ ಮುಂದೆ ಎರಡು ಆಯ್ಕೆಗಳಿವೆ. ಒಂದೋ ನಾವು ನಮ್ಮ ತಪ್ಪನ್ನು ಒಪ್ಪಿಕೊಳ್ಳಬೇಕು ಇಲ್ಲವೇ ನಾವೂ ಸರ್ವಾಧಿಕಾರಿ ಮನಸ್ಥಿತಿಯವರೇ ಹೊರತು ಪ್ರಜಾಪ್ರಭುತ್ವವನ್ನು ಗೌರವಿಸುವವರಲ್ಲ ಎಂದು ಒಪ್ಪಿಕೊಳ್ಳಬೇಕು.