ಕಡಿದಾಳು ಶಾಮಣ್ಣನವರ ಸಂದರ್ಶನ ಮುಗಿಸಿಕೊಂಡು ಗೆಳೆಯ ಕಿರಣನ ಊರಾದ ಮಾರಶೆಟ್ಟಿಹಳ್ಳಿಗೆ ಹೋಗಿದ್ದಾಗ ಆ ಸಂಜೆ ಮಬ್ಬುಗತ್ತಲಿನಲ್ಲಿ ಕಿರಣನ ಮನೆಯಿಂದ ಸ್ವಲ್ಪ ದೂರ ಇರುವ ದಾರಿಯೊಂದರಲ್ಲಿ ನಡೆದುಕೊಂಡು ಹೋಗುತ್ತಿದ್ದೆವು. ಅಲ್ಲೇ ಸ್ವಲ್ಪ ದೂರದಲ್ಲಿರುವ ಬೆಟ್ಟವೊಂದು ತನ್ನಲ್ಲಿ ಉಂಟು ಮಾಡುವ ಭಾವನೆಗಳನ್ನು ಆತ ವರ್ಣಿಸುವುದನ್ನು ಕೇಳುತ್ತಾ ಅವನೊಂದಿಗೆ ನಡೆದಿದ್ದೆ. ದೂರದಿಂದ ಆ ಬೆಟ್ಟವನ್ನು ಕತ್ತಲಲ್ಲೇ ನೋಡಿಕೊಂಡು ವಾಪಾಸು ಬರುವಾಗ ಇಬ್ಬರ ಮನಸ್ಸಿನಲ್ಲಿ ಒಂದು ವಿಚಾರ ಬಂತು. ಎಲ್ಲಾದರೂ ದಟ್ಟವಾದ ಕಾಡು, ಗುಡ್ಡ, ಬೆಟ್ಟಗಳನ್ನು ಒಂದೆರಡು ದಿನ ಸುತ್ತಿಕೊಂಡು ಆ ಎರಡು ದಿನಗಳ ಕಾಲವಾದರೂ ನಮ್ಮನ್ನು ನಾವು ಮರೆತು ಪೃಕೃತಿಯೊಂದಿಗೆ ಬೆರೆತು ಬರುವ ಯೋಚನೆ ನಮಗೆ ಬಂದಿತ್ತು. ಅಂತ ಒಂದು ಅನುಭವ ನಮಗೆ ಬೇಕಾಗಿತ್ತು ಕೂಡ. ಇದಾದ ಕೂಡಲೇ ನಮ್ಮ ನಮ್ಮ ಕೆಲಸದಲ್ಲಿ ಮುಳುಗಿದ್ದರೂ ಆಗಾಗ ನೆನಪು ಮಾಡಿಕೊಳ್ಳುತ್ತಿದ್ದೆವು. ಕೊನೆಗೂ ದಿನ ಗೊತ್ತು ಮಾಡಿಕೊಂಡು ನಮ್ಮೊಂದಿಗೆ ಇನ್ನೂ ಕೆಲವರನ್ನು ಜೊತೆ ಮಾಡಿಕೊಂಡು ಹೋಗುವಾ ಎಂದುಕೊಂಡೆವು. ಇದರಂತೆ ನಾವಿಬ್ಬರಲ್ಲದೆ ನಮಗೆ ಸರಿಹೊಂದುವ ಇತರ ಐದು ಮಂದಿ ಗೆಳೆಯರು ಸಿದ್ಧರಾದರು. ಆದರೆ ಕೊನೆಯ ಕ್ಷಣದಲ್ಲಿ ಅನಿವಾರ್ಯತೆಗಳಿಂದ ಇಬ್ಬರು ಹೊರಡಲಾಗಿರಲಿಲ್ಲ. ಹೀಗಾಗಿ ಕೊನೆಗೆ ಹೊರಟಿದ್ದು ನಾವು ಐದು ಜನ- ನಾನು, ಕಿರಣ, ಶಿವು, ಹರೀಶ್ ಹಾಗೂ ರಾಜು.
ನಮ್ಮ ಚಾರಣ ಶುರುವಾಗಿದ್ದು ಸಾಗರದಿಂದ ಭಟ್ಕಳ ಮಾರ್ಗ ಮಧ್ಯೆ ಪಶ್ಚಿಮ ಘಟ್ಟದ ನಟ್ಟ ನಡುವೆ ಸಿಗುವ ಸಿಗುವ ನಾಗವಳ್ಳಿಯಲ್ಲಿ. ಅಂದು ಮುಂಜಾನೆ ಐದೂವರೆಗೇ ಶಿವಮೊಗ್ಗ ಬಿಟ್ಟಿದ್ದರೂ ನಾಗವಳ್ಳಿ ತಲುಪುವ ಹೊತ್ತಿಗಾಗಲೇ ಹನ್ನೊಂದೂ ಕಾಲಾಗಿತ್ತು. ನಾಗವಳ್ಳಿಯಿಂದ ಮೇಘಾನೆ ತಲುಪುವುದು ನಮ್ಮ ಮೊದಲ ಹಂತದ ಚಾರಣ. ಇದಕ್ಕಾಗಿ ವಾಹನಗಳು ಸಂಚರಿಸುವ ಒಂದು ಸುಗಮವಾದ ದಾರಿ ಇತ್ತಾದರೂ ನಾವು ಹೊರಟಿದ್ದು ಮಾತ್ರ ಪ್ರವಾಸಿ ಬಂಗಲೆ ಪಕ್ಕದ ಕಾಡೊಳಗಿನ ಕಾಲುದಾರಿ ಮೂಲಕ. ನಡಿಗೆ ಶುರುವಾಗಿ ಇನ್ನೇನು ನೂರಿನ್ನೂಡು ಅಡಿ ಕ್ರಮಿಸಿರಲಿಲ್ಲ. ಅಷ್ಟರಲ್ಲಿ ಶಿವು ಇದ್ದವನು ತನ್ನಿಂದಾಗುವುದಿಲ್ಲವೆಂದೂ, ತಾನು ವಾಪಾಸು ಹೋಗುವುದೇ ಸೈ ಎಂದೂ ಕುಳಿತುಬಿಟ್ಟ. ಅಯ್ಯಯ್ಯಪ್ಪಾ... ಇದು ಹೀಗಿರುತ್ತೆ ಅಂತ ದೇವರಾಣೆ ಗೊತ್ತಿರಲಿಲ್ಲ. ನನ್ನ ಕೈಯಲ್ಲಿ ಸಾಧ್ಯ ಇಲ್ಲ. ಇದನ್ನ ಹತ್ತೋದು. ಎಂದ. ಆ ಗುಡ್ಡ ಇದ್ದಿದ್ದೇ ಹಾಗೆ. ಏಕ್‌ದಂ ಕಡಿದಾಗಿ ಹೆಚ್ಚೂಕಡಿಮೆ ಲಂಬಕೋನಾಕಾರದಲ್ಲಿತ್ತು. ಎರಡು ಹೆಜ್ಜೆ ಇಡುವಷ್ಟರಲ್ಲಿ ಇಂಬಳಗಳು ತಲೆ ಎತ್ತಿ ಆ ಕಡೆ ಈ ಕಡೆ ದೇಹವನ್ನೆಲ್ಲಾ ಆಡಿಸುತ್ತಾ ರಾ...ರಾ... ಸರಸಕು ರಾರಾ.. ಎಂದು ವಿಧವಿಧವಾದ ಭಂಗಿಯಲ್ಲಿ ನಮ್ಮೆಡೆ ಅಷ್ಟದಿಕ್ಕುಗಳಿಂದ ಮುನ್ನುಗ್ಗುತ್ತಿದ್ದವು. ನಮ್ಮ ಬೂಟುಗಳನ್ನು ಹತ್ತಿ ಕಾಲುಚೀಲಗಳನ್ನು ತೂರಿಕೊಂಡು ಅದಾಗಲೇ ರಕ್ತಹೀರುವ ಕೆಲಸ ಶುರು ಮಾಡಿಕೊಂಡಿದ್ದ ಅವುಗಳನ್ನು ತೆಗೆದು ಹಾಕುತ್ತಾ ಎಲ್ಲರ ಬೂಟುಗಳಿಗೆ ಸುಣ್ಣವನ್ನು ಬಳಿದುಕೊಂಡು ಶಿವೂಗೆ ಧೈರ್ಯ ಹೇಳಿಕೊಂಡು ಮುನ್ನಡೆದೆವು. ಯಾವುದೇ ಶ್ರಮದ ಕೆಲಸ ಮಾಡುವಾಗ ಆರಂಭದಲ್ಲಿ ಸ್ವಲ್ಪ ಸುಸ್ತಾಗಿ ನಂತರ ದೇಹ ಅದಕ್ಕೆ ಒಗ್ಗಿಕೊಂಡು ಬಿಡುತ್ತದೆ ಎಂಬ ತಾನು ಕಂಡ ಸತ್ಯವನ್ನು ರಾಜು ತಾನ್ನ ದಿನನಿತ್ಯದ ಹೊಲದ ಕೆಲಸದ ಉದಾಹರಣೆ ಸಮೇತವಾಗಿ ವಿವರಿಸುತ್ತಾ ಹೇಳಿ ಶಿವೂಗೆ ಮತ್ತಷ್ಟು ಧೈರ್ಯ ತುಂಬಿದ. ಕೊನೆಕೊನೆಗೆ ಶಿವು ಸರಾಗವಾಗಿ ನಡೆಯತೊಡಗಿದಾಗ ಅದು ಹೌದೆಂದು ಅವನಿಗೂ ಅನ್ನಿಸಿರಬೇಕು.
ಇಲ್ಲಿಂದ ಎಡೆಬಿಡದೆ ಆ ದಟ್ಟ ಕಾಡಿನ ದಾರಿಯಲ್ಲಿ ಬಿಟ್ಟೂಬಿಡದೇ ಸುಮಾರು ನಾಲ್ಕು ತಾಸು ನಡೆದೇ ನಡೆದೆವು. ದಾರಿಯಲ್ಲಿ ಎರಡು ಹಾವುಗಳು ಮತ್ತು ಕಾಲಿನ ಹೆಬ್ಬೆರಳಿನ ಗಾತ್ರದ ಕೇಸರಿ ಕಪ್ಪು ಬಣ್ಣದ ಶತಪದಿ ನಮಗೆ ಗೋಚರಿಸಿ ’ಹಾಯ್’ ಹೇಳಿದವು. ಆ ಹಾವು ಕಚ್ಚಿದರೆ ಕಿಡ್ನಿಯೇ ಹೋಗುತ್ತದೆ ಎಂಬ ವಿವರಣೆ ನಮ್ಮ ತಂಡದ ವಿಷಯ ತಜ್ಞ ಹರೀಶ್ ಅವರಿಂದ ಸಿಕ್ಕಿತು! ಅದನ್ನು ಹಂಪ್ ನೋಸ್‌ಡ್ ವೈಪರ್ ಎನ್ನುತ್ತಾರೆ ಎಂದೂ ತಿಳಿಸಿದ. (ಆದರೆ ಈ ಹಾವು ವಿಷಕಾರಿಯಾದರೂ ಪ್ರಾಣಾಪಾಯ ಉಂಟು ಮಾಡುವಂತದ್ದಲ್ಲವೆಂಬ ವಿಷಯ ನಂತರ ನಾವು ಹೋದ ಊರಿನವರು ತಿಳಿಸಿದಾಗ ಶಿವೂಗೂ ಹರೀಶ್‌ಗೂ ಅಭಿಪ್ರಾಯಬೇಧ ತಲೆದೋರಿದ್ದು ಬೇರೆ ವಿಷಯ). ಇನ್ನು ಆ ಶತಪದಿ ಕಚ್ಚ್ಚಿದರೆ ಇಪ್ಪತ್ತನಾಲ್ಕು ಗಂಟೆ ವಿಚಿತ್ರ ಉರಿಯುಂಟಾಗುತ್ತದಂತೆ.
ಶತಪದಿ |
ಹೇಡಿಬೆಟ್ಟದ ನೆತ್ತಿಯ ಮೇಲೆ |
ಮೇಘಾನೆಯ ಕುಣುಬಿಗಳ ಬೀಡಿನಲ್ಲಿ..
ಮತ್ತೆ ಗುಡ್ಡವನ್ನು ಇಳಿಯತೊಡಗಿದಂತೆ ಬಾನಿನಲ್ಲಿ ಸೂರ್ಯನೂ ನಮ್ಮೊಂದಿಗೆ ಇಳಿಯುತ್ತಿದ್ದ. ಕೆಳಕ್ಕೆ ಒಂದು ಗುಡ್ಡವನ್ನು ಸರಾಗವಾಗಿ ದಾಟಿದೆವು. ಆದರೆ ಮುಂದಿನ ದಾರಿ ತಪ್ಪಿ ಹೋಯಿತು. ಒಂದು ದಾರಿ ಚೆನ್ನಾಗಿದ್ದರೂ ಅದು ಬೇರೆಯದೇ ದಿಕ್ಕಿನ ಕಡೆಗೆ ಮುಖ ಮಾಡಿದ್ದನ್ನು ನಮ್ಮ ಕೈಯಲ್ಲಿದ್ದ ಕಾಂಪಾಸ್ ಸೂಚಿಸುತ್ತಿತ್ತು. ಹೀಗಾಗಿ ಹಿಂಜರಿದ ನಾವು ದಾರಿ ಇಲ್ಲದಿದ್ದರೂ ನಾವು ಹೋಗಬೇಕಿದ್ದ ದಿಕ್ಕಿನ ಕಡೆಗೆ ಒಂದು ಒಣಗಿದ್ದ ತೊರೆಯ ಮೂಲಕ ಇಳಿಯತೊಡಗಿದೆವು. ಗಂಟೆಗೂ ಹೆಚ್ಚು ಕಾಲ ಪ್ರಯಾಸದಿಂದ ಕೆಳಗಿಳಿದ ಮೇಲೆ ಮೇಘಾನೆ ಊರಿನ ಒಂದು ತೋಟಕ್ಕೆ ಕಾಲಿಟ್ಟಿದ್ದೆವು. ಎಲ್ಲರಿಗೂ ಅದೆಷ್ಟು ಆಯಾಸವಾಗಿತ್ತೆಂದರೆ ಹೇಳತೀರದು. ಬಾಟಲಿಗಳಲ್ಲಿದ್ದ ನೀರೆಲ್ಲಾ ಖಾಲಿಯಾಯಿತು. ಬಿಸ್ಕತ್ತುಗಳು ಹೊಟ್ಟೆಯ ಒಂದು ಯಾವುದೋ ಒಂದು ಮೂಲೆಗೆ ಸೇರಿಕೊಂಡವು. ಹಾಗೇ ಮುಂದೆ ನಡೆದು ಮೇಘಾನೆಯ ಕೆಲ ಕುಣುಬಿ ಕುಟುಂಬಗಳ ಸದಸ್ಯರನ್ನು ಮಾತಾಡಿಸಿದೆವು. ಈಗ್ಗೆ ನಲವತ್ತು ಐವತ್ತು ವರ್ಷಗಳ ಹಿಂದೆ ಲಿಂಗನಮಕ್ಕಿ ಡ್ಯಾಮಿಗಾಗಿ ಎತ್ತಂಗಡಿಯಾದ ಏಳು ಕುಣುಬಿ ಕುಟುಂಬಗಳು ತಮ್ಮ ಸಾಮಾನು ಸರಂಜಾಮುಗಳನ್ನು ಈ ಗುಡ್ಡದ ಮೇಲೆ ಹೊತ್ತು ತಂದು ಬದುಕು ಶುರು ಮಾಡಿದ್ದರು. ಅವರೊಂದಿಗೆ ಮಾತನಾಡಿದ ಅರ್ಧ ಗಂಟೆಯಲ್ಲಿ ನಮಗೆ ಒಂದು ವಿಷಯ ಸ್ಪಷ್ಟವಾಯಿತು. ಮೇಘಾನೆಯ ಕುಣುಬಿಗಳ ಬದುಕು ಇಂದು ಬಹಳಷ್ಟು ಬದಲಾಗಿದೆ. ಅವರ ಅಂದಿನ ಸ್ವಾಭಿಮಾನದ ನಿರ್ಧಾರ ಮತ್ತು ನಂತರದ ಸಂಘರ್ಷದ ಬದುಕು ಇಂದು ಇವರನ್ನು ತಲೆಯೆತ್ತಿ ನಿಲ್ಲುವಂತೆ ಮಾಡಿದೆ ಎನ್ನುವುದು ಅರಿವಾಯಿತು. ಹಾಗಂತ ಇಲ್ಲಿ ಇವರ ಬದುಕು ಬಹಳ ಸುಗಮವಾಗಿಯೇನೂ ಇಲ್ಲ. ಮಳೆಗಾಲದಲ್ಲಿ ಒಂದು ಕ್ಷಣವೂ ಬಿಡದೇ ಸುರಿವ ಮಳೆ ಹಾಗೂ ಜಡಿಗಾಳಿಗಳು ಈ ಜನರಿಗೆ ಭಾರೀ ಸವಾಲನ್ನೇ ಒಡ್ಡುತ್ತವೆ. ಒಂದು ಹಂತದಲ್ಲಿ ಬೇಗ ಹಣ ಮಾಡುವ ಹುಚ್ಚಿನಿಂದ ಅಪಾರ ಕಾಡು ನಾಶವನ್ನು ಬೇಡುವ ಲಾವಂಚದ ಎಣ್ಣೆ ತೆಗೆಯುವ ದಂದೆಗಿಳಿದಿದ್ದ ಇಲ್ಲಿನ ಜನರು ಅರಣ್ಯ ಇಲಾಖೆ ಎಚ್ಚೆತ್ತುಕೊಂಡ ಮೆಲೆ ಅದನ್ನು ಕಡಿಮೆ ಮಾಡಿದ್ದಾರೆಂದು ತಿಳಿದು ಸ್ವಲ್ಪ ಸಮಾಧಾನವಾಯಿತು. ವಾಸ್ತವದಲ್ಲಿ ಲಾವಂಚ ಬೆಳೆಯಿಂದ ಭಾರೀ ಪ್ರಮಾಣದಲ್ಲಿ ಲಾಭವಾಗುತ್ತಿದ್ದುದು ಕೇರಳ ಮೂಲದ ವ್ಯಾಪಾರಿಗಳಿಗೇ ಹೊರತು ಸ್ಥಳಿಯರಿಗಲ್ಲ.
ನಂತರ ಅಲ್ಲಿದ್ದ ಒಂದೇ ಕುಣುಬಿಯೇತರ ಕುಟುಂಬವಾದ ರಾಜು ಶೆಟ್ಟರ ಮನೆಗೆ ಹೋದೆವು. ಅವರು ಒತ್ತಾಯದಿಂದ ನಮಗೆ ಉಣಬಡಿಸಿದರು. ಅಡಿಗೆಗೆ ಬೇಕಾದ ಎಲ್ಲಾ ಪರಿಕರ ಪದಾರ್ಥಗಳೂ ನಮ್ಮ ಬಳಿ ಇದ್ದವಾದರೂ ಅಡಿಗೆ ಮಾಡುವಷ್ಟು ತಾಳ್ಮೆ ನಮಗಿರಲಿಲ್ಲವಾದ್ದರಿಂದ, ಎಲ್ಲಾದರೂ ಒರಗಲು ನೆಲ ಸಿಕ್ಕಲು ಸಾಕು ಎಂಬಂತಾಗಿದ್ದರಿಂದ ಸೈ ಎಂದು ಅಲ್ಲಿಯೇ ಊಟಕ್ಕೆ ಕುಳಿತೆವು. ದಿನವಿಡೀ ಗುಡ್ಡ ಹತ್ತಿ ಹಸಿದಿದ್ದ ನಮ್ಮ ಹೊಟ್ಟೆಗೆ ಆ ಊಟ ಅದೆಷ್ಟು ರುಚಿಸಿತ್ತೆಂದರೆ ಹಿಂದೆಂದೂ ಅಂತಹ ರುಚಿಕಟ್ಟಾರ ಊಟ ಮಾಡಿಯೇ ಇರಲಿಲ್ಲವೆಂಬಂತೆ ಅನ್ನಿಸಿಬಿಟ್ಟಿತ್ತು. ಮೇಘಾನೆ ಊರಿಗೆ ವಿದ್ಯುತ್ ಬಂದು ಕೇವಲ ಒಂದೂ ವರ್ಷವಾಗಿದೆ. ಇದಕ್ಕಾಗಿ ಸಾಕಷ್ಟು ಶ್ರಮ ಪಟ್ಟಿರುವವರಲ್ಲಿ ರಾಜು ಶೆಟ್ಟರೂ ಒಬ್ಬರು. ಸುಮಾರು ವರ್ಷಗಳ ಹಿಂದೆ ಬಂಗಾರಪ್ಪ ಅವರು ಸಂಸದರ ನಿಧಿಯಿಂದ ಮಾಡಿಸಿರುವ ಸೋಲಾರ್ ಯಂತ್ರಗಳು ಕೆಟ್ಟೆ ಕೆರಹಿಡಿದಿವೆ. ಒಂದು ಹತ್ತು ವರ್ಷ ಮೊದಲೇ ಈ ಊರಿಗೆ ವಿದ್ಯುತ್ ದೊರಕಿಸಿಕೊಟ್ಟಿದ್ದರೆ ಬಹುಶಃ ಈ ಜನರು ಮತ್ತಷ್ಟು ಉತ್ತಮ ಸ್ಥಿತಿಗೆ ತಲುಪಲು ಸಾಧ್ಯವಾಗುತ್ತಿತ್ತು ಎನಗನಿಸಿತು. ನಾವು ಊಟ ಮಾಡಿಕೊಂಡು ಸನಿಹದಲ್ಲಿಯೇ ಇದ್ದ ಶಾಲೆಯಲ್ಲಿ ಅಲ್ಲಿನ ಏಕೋಪಾಧ್ಯಾಯರಾದ ಈಶ್ವರ್ ಅವರ ಸಹಕಾರದಿಂದ ಮಲಗಲು ಅಣಿಯಾದೆವು. ಎಲ್ಲರೂ ಹಾಸಿಗೆ ಹಾಸುತ್ತಿದ್ದಂತೆ ನಾನು ಆ ಶಿಕ್ಷಕರ ಬಳಿ ಕೊಂಚಹೊತ್ತು ಮಾತುಕತೆ ನಡೆಸಿದೆ. ಸರ್ಕಾರ ನೀಡುವ ಸಂಬಳಕ್ಕಾಗಿಯೇ ಅವರು ಇಲ್ಲಿಗೆ ಬಂದಿದ್ದರೂ ನಿಜಕ್ಕೂ ಶಿಕ್ಷಕ ಈಶ್ವರ್ ಅವರ ಸೇವೆ ಮಹತ್ತರವಾದದು ಎಂದೆನ್ನಿಸಿತು. ಪೇಟೆಗೆ ಸುಮ್ಮನೇ ಹೋಗಿ ಬರಬೇಕೆಂದರೂ ಅಷ್ಟು ದೂರ ಕೆಳಗಿಳಿದು ಮತ್ತೆ ಮೇಲೆ ಬರುವಷ್ಟರಲ್ಲಿ ಒಂದು ದಿನವೇ ಬೇಕಾಗುವಂತಿರುವ ಈ ಊರಿನಲ್ಲಿದ್ದುಕೊಂಡು ಆ ಕುಣುಬಿ ಮಕ್ಕಳಲ್ಲಿ ಅಕ್ಷರ ಜ್ಞಾನ ಬಿತ್ತುತ್ತಿರುವ ಈಶ್ವರ್ ಇಲ್ಲಿಗೆ ಬಂದು ಈಗಾಗಲೇ ನಾಲ್ಕು ವರ್ಷಗಳು ದಾಟಿವೆ. ತೀರಾ ಇತ್ತೀಚಿನವರೆಗೂ ಶಾಲೆ ಎಂದರೆ ಮರೀಚೀಕೆಯಾಗಿದ್ದ ಮೇಘಾನೆಯಲ್ಲಿ ನಡೆಯುತ್ತಿರುವ ಈ ಶಾಲೆಗೆ ಮತ್ತಷ್ಟು ಬೆಂಬಲ, ಪರಿಕರಗಳ ಸಹಾಯ ಅಗತ್ಯವಿದೆ. ಒಂದು ಸೆಕೆಂಡ್ ಹ್ಯಾಂಡ್ ಕಂಪ್ಯೂಟರ್ ವ್ಯವಸ್ಥೆ ಮಾಡಲು ಪ್ರಯತ್ನಪಟ್ಟಿದ್ದೇನಾದರೂ ಇದುವರೆಗೆ ಆಗಿಲ್ಲ. ಎಲ್ಲಾದರೂ ಇದ್ದರೆ ನೋಡಿ ಎಂದರು ಈಶ್ವರ್.
ನಂತರ ಹೋಗಿ ಹಾಸಿಗೆಯಲ್ಲಿ ಒರಗಿಕೊಂಡದ್ದೊಂದೇ ಗೊತ್ತು. ನಿದ್ರಾದೇವಿ ಎಲ್ಲರನ್ನೂ ಬಿಗಿದಪ್ಪಿಕೊಂಡಿದ್ದಳು.
ಎರಡನೆ ದಿನ:
ಆರ್ಕಳದ 'ಹೆಮ್ಮುಡಿ'ಯ ಕಂಡಾಗ...
ಎರಡನೆ ದಿನ:
ಆರ್ಕಳದ 'ಹೆಮ್ಮುಡಿ'ಯ ಕಂಡಾಗ...
ಮರುದಿನ ಐದುಗಂಟೆಗೇ ಎದ್ದು ಹೊರಕ್ಕೆ ಬಂದರೆ ಗಾಳಿ ಸುಂಯ್ಗುಡುತ್ತಿತ್ತು. ಆದರೆ ಬಹಳ ಚಳಿಯೇನೂ ಇರಲಿಲ್ಲ. ಬಹುಶಃ ಸಮುದ್ರದ ಕಡೆಯಿಂದ ಗಾಳಿ ಬೀಸುತ್ತಿದ್ದದರಿಂದ ಇರಬೇಕು. ಶಾಲೆಯಲ್ಲಿ ಬಿಸಿಯೂಟ ತಯಾರು ಮಾಡುವ ಒಲೆಯಲ್ಲಿ ಬೆಂಕಿ ಹಾಕಿ ಪಾತ್ರೆಯಲ್ಲಿ ಅನ್ನಕ್ಕೆ ಇಟ್ಟೆವು. ನಂತರ ಹರೀಶ್ ಒಂದೊಳ್ಳೆ ಪುಳಿಯೋಗರೆ ತಯಾರು ಮಾಡಿದರು. ಇಷ್ಟೊತ್ತಿಗೆ ದೊಡ್ಡ ಹಂಡೆಯೊಂದರಲ್ಲಿ ನೀರು ಕಾಯಿಸಿಕೊಂಡು ಸ್ನಾನಮಾಡಿ ಮುಂದಿನ ಪ್ರಯಾಣಕ್ಕೆ ತಯಾರಾದೆವು. ಆದರೆ ಹಿಂದಿನ ದಿನದ ಪ್ರಯಾಣ ಶಿವೂಗೆ ಬಹಳ ಪ್ರಯಾಸವೆನ್ನಿಸಿದ್ದರಿಂದ ಅವನ ಕಾಲುಗಳು ಮುಂದಿಡಲು ಒಪ್ಪಲೇ ಇಲ್ಲ. ಆದರೆ ನಮಗೆ ಆತನನ್ನು ಬಿಟ್ಟು ಹೋಗಲು ಮನಸ್ಸು ಒಂದರೆ ಕ್ಷಣ ಅಳುಕಿತು. ಹರೀಶ್‌ಗೆ ಕಾಲು ಕೊಂಚ ಗಾಯವಾಗಿ ಮುಂದೆ ನಡೆಯಲು ಆತನಿಗೂ ಕಷ್ಟವಾಗಿತ್ತು. ಇಬ್ಬರೂ ವಾಪಾಸು ಹೊರಡುವ ನಿರ್ಧಾರ ಪ್ರಕಟಿಸಿದಾಗ ಮುಂದಿನ ಅದ್ಭುತಯಾನದಲ್ಲಿ ಅವರನ್ನು ಸಿಕ್ಕಾಪಟ್ಟೆ ಮಿಸ್ ಮಾಡಿಕೊಳ್ಳುವ ಬಗ್ಗೆ ಸಕತ್ ಬೇಸರವಾಗಿತ್ತಾದರೂ ಅಂತಿಮವಾಗಿ ಅವರಿಂದ ಬೀಳ್ಕೊಳ್ಳಲೇ ಬೇಕಾಯಿತು. ಸಮಸ್ಯೆಯೆಂದರೆ ಹಿಂದಿನ ದಿನ ಐದೂ ಜನರು ಸಮನಾಗಿ ಹಂಚಿಕೊಂಡ ಇತರೆ ಲಗೇಜನ್ನು ಈಗ ಮೂವರೇ ಹೊತ್ತು ನಡೆಯಬೇಕಿತ್ತು. ಅದು ಅನಿವಾರ್ಯವಾಯಿತು.
ಹೆಮ್ಮುಡಿಯ ಮುಂದೆ |
ಮುಂದಿನ ದಾರಿ ಹೇಗೆ ಎಂದು ಕೇಳಿದ್ದಕ್ಕೆ ಸಿಕ್ಕವರೆಲ್ಲಾ ತೋರಿಸುತ್ತಿದ್ದುದು ವಾಹನಗಳು ಚಲಿಸುವ ರಾಜಮಾರ್ಗವನ್ನೇ. ಆದರೆ ಅಲ್ಲಿ ಒಂದು ಅಂಗಡಿಯಲ್ಲಿ ಒಬ್ಬ ಅಣ್ಣ ಮಾತ್ರ ನಮ್ಮ ಮುಂದಿನ ಗುರಿಯಾಗಿದ್ದ ಬಸವನಬಾಯಿಗೆ ಇರುವ ಕಾಲುದಾರಿಯನ್ನು ತಿಳಿಸಿದರು. ಹಾಗೇ ಮುಂದೆ ನಡೆದಾಗ ಒಂದು ಮನೆಯ ಎದುರಿಗೆ ಹೆಮ್ಮುಡಿ ಎಂದು ಕರೆಯಲಾಗುವ ಭತ್ತದ ಕಣಜವನ್ನು ನಿರ್ಮಿಸಿದ್ದರು. ಅದೆಷ್ಟು ಕಲಾತ್ಮಕವಾಗಿತ್ತೆಂದರೆ ನಾವು ಅದರ ಮುಂದೆ ನಿಂತು ಫೋಟೋ ತೆಗೆಸಿಕೊಂಡು ಆ ಮನೆಯವರಿಗೂ ನಿಲ್ಲಿಸಿ ಒಂದೆರಡು ಫೋಟೋ ತೆಗೆಸಿಕೊಂಡೆವು. ಸುಮಾರು 70 ಕ್ವಿಂಟಲ್ ಭತ್ತ ಹಿಡಿಸುವ ಆ ಹೆಮ್ಮುಡಿಯನ್ನು ಮೂರು ನಾಲ್ಕು ಗಂಟೆಗಳಲ್ಲಿ ನಿರ್ಮಿಸುತ್ತಾರೆ ಎಂದಾಗ ಆ ರೈತರ ಕಲೆಗಾರಿಕೆಗೆ ಮನದೂಗಿದೆವು. ನಮ್ಮ ಬದುಕು ಇಂದಿನ ಜಾಗತಿಕ ಬದಲಾವಣೆಯ ಚಂಡ ಮಾರುತಕ್ಕೆ ಸಿಲುಕಿ ಈ 'ಹೆಮ್ಮುಡಿ' ಯಂತಹ ರಚನೆಗಳು ಮತ್ತು ಅಂತಹ ಒಂದು ಸುಂದರ ಕನ್ನಡ ಶಬ್ದಗಳೇ ನಮಗೆ ಅಪರಿಚಿತವಾಗಿಬಿಟ್ಟಿದೆಯಲ್ಲಾ ಎಂದೆನಿಸಿತು. ನಮ್ಮ ಭಾಷೆಗೆ ಧಕ್ಕೆ ಬಂದಿದೆ ಎಂದು ಯೋಚಿಸುವಾಗ ನಿಜಕ್ಕೂ ತಲೆ ಕೆಇಡಿಸಿಕೊಳ್ಳಬೇಕಾದದ್ದು ಆ ಭಾಷೆಯ ಹಿಂದಿನ ಬದುಕಿನ ಬಗ್ಗೆ ಅಲ್ಲವೇ? ಹೀಗೆ ನಾವು ನೋಡಿದ ಈ ಹೆಮ್ಮುಡಿ ನನ್ನಲ್ಲಿ ಚಿಂತನೆಗೆ ಹಚ್ಚಿತ್ತು. ಯೋಚಿಸುತ್ತಿದ್ದಂತೆಯೇ ಆ ಮನೆಯ ಇಬ್ಬರು ಹುಡುಗರು ನಮಗೆ ದಾರಿ ತೋರಿಸಲು ಸುಮಾರು ದೂರದವರೆಗೆ ಬಂದರು.
ನಮಗೆ ದಾರಿಯಲ್ಲಿ ಸಿಕ್ಕವರೆಲ್ಲಾ ತಪ್ಪದೇ ಒಂದು ಮಾತು ಹೇಳುತ್ತಿದ್ದರು. ಇತ್ತೀಚೆಗೆ ಕಾಡಿನಲ್ಲಿ ಒಂಟಿ ಸಲಗ ಸೇರಿಕೊಂಡಿದೆಯಂತೆ. ಕರಡಿಗಳು ಮೈಮೇಲೆ ಬಂದಾವು ಹುಷಾರು ಒಂದೊಮ್ಮೆ ನಾವು ಅವುಗಳ ದಾಳಿಗೊಳಗಾದರೆ ಏನು ಮಾಡುವುದು ಎಂದು ಮನಸ್ಸನ್ನು ಸಿದ್ಧಗೊಳಿಸುತ್ತಾ, ಹಾಗೇನೂ ಆಗಲಾರದು ಎಂಬ ಆಶಾಭಾವನೆಯಿಂದಲೇ ಹೆಜ್ಜೆ ಹಾಕುತ್ತಿದ್ದೆವು. ನಮ್ಮ ಅಂದಿನ ಮಾತುಗಳು ಕಿರಣನ ಕೃಪೆಯಿಂದ ಬೇರೊಂದು ಅಯಾಮ ಪಡೆದುಕೊಂಡಿದ್ದವು. ನಮ್ಮ ಚರ್ಚೆ ಆಸ್ಟ್ರೋಫಿಸಿಕ್ಸ್ ಕಡೆ ಹೊರಳಿಕೊಂಡು ರಿಚರ್ಡ್ ಫೆನನ್, ಐನ್‌ಸ್ಟೀನ್, ರಿಲೇಟಿವಿಟಿ, ಹಾಗೂ ಕ್ವಾಂಟಂ ಫಿಸಿಕ್ಸ್ ಸುತ್ತಾ ಪ್ರದಕ್ಷಿಣೆ ಹಾಕತೊಡಗಿತ್ತು. ಮುಂದೆ ಮುಂದೆ ಹೋಗ ತೊಡಗಿದಂತೆ ಆ ದಾರಿಯಲ್ಲಿ ಹಲವಾರು ಸುಂದರ ದೃಶ್ಯಗಳು ಕಾಣತೊಡಗಿದವು. ಹೀಗೇ ನಡೆಯುತ್ತಿರುವಂತೆ ಕಿರಣ್ "ಸೂಪರ್ ಮ್ಯಾನ್ ನೋಡಿ ಸೂಪರ್ ಮ್ಯಾನ್ ...."ಎಂದವನೇ ತನ್ನ ಲಗೇಜನ್ನು ಬಿಟ್ಟು ಕ್ಯಾಮೆರಾ ತೆಗೆದ. ಕಡೆಗೆ ನೋಡಿದರೆ ಆ ಸೂಪರ್ ಮ್ಯಾನ್ ಬೇರೇನೂ ಆಗಿರದೇ ದಾರಿ ಮಧ್ಯೆ ಬಿಟ್ಟಿದ್ದ ಒಂದು ಒಣ ಟೊಂಗೆ. ಒಂದು ಕೋನದಿಂದ ನೋಡಿದರೆ ಅದು ಸೂಪರ್ ಮ್ಯಾನ್ ಭಂಗಿಯಂತೆಯೇ ಗೋಚರಿಸುತ್ತಿದ್ದು. ಕಿರಣನ ಕಲಾದೃಷ್ಟಿಗೆ ನಾವು ಭೇಷ್ ಎಂದು ತಲೆದೂಗಿದೆವು. ಇಂದು ನಾವು ಮೂವರೇ ಇದ್ದುದರಿಂದ ಹೊರುವ ಭಾರ ಹೆಚ್ಚಾಗಿದ್ದರೂ ಕಾಲುಗಳು ಬೇಗನೇ ಚಲಿಸುತ್ತಿದ್ದವು. ಹೀಗಾಗಿ ಎರಡು ಗಂಟೆಯ ಹೊತ್ತಿಗೆ ಬಸವನ ಬಾಯಿ ಸಮೀಪಿಸುತ್ತಿದ್ದಂತೆ ಬಿಸಿಲಿನ ಝಳ ರೊಮ್ ಎಂದು ಬಿತ್ತು. ಅಲ್ಲೊಂದು ಗಣಪತಿ ದೇವಸ್ತಾನವಿದೆ. ಅದರ ಮುಂದೆ ಒಂದು ಕಲ್ಲಿನ ಬಸವಣ್ಣ. ಆ ಬಸವಣ್ಣನ ಬಾಯೊಳಗಿಂದ ನೀರುಬರುವಂತೆ ಮಾಡಲಾಗಿದೆ. ಈ ದೇವಸ್ಥಾನದ ಹಿಂದೆ ಒಂದು ತೊರೆ ಇದೆ. ಅಲ್ಲೊಂದು ಸಣ್ಣ ಆದರೆ ಸುಂದರವಾದ ಜಲಪಾತವಿದೆ. ಅಲ್ಲಿಗೆ ಎಡತಾಕಿ ಆ ಕೊರೆಯುವ ತಣ್ಣನೆ ನೀರಿಬಲ್ಲಿ ಮುಖತೊಳೆದು ಆ ಜಲಪಾತವನ್ನೇ ನೋಡುತ್ತಾ ಊಟ ಮಾಡಿದೆವು. ಬೆಳಗ್ಗೆ ಮಿಕ್ಕಿದ್ದ ಪುಳಿಯೋಗರೆ ಹಾಗೂ ಬ್ರೆಡ್ ಹುಳಿ ಚಟ್ನಿ ಹೊಸದೇ ರುಚಿ ನೀಡಿದವು. ಅಲ್ಲಿ ಸ್ನಾನ ಮಾಡುವ ಮನಸ್ಸಾಗಿತ್ತಾದರೂ ಹೀಗಬೇಕಾದ ದಾರಿ ದಊರ ಇದ್ದುದರಿಂದ ಕೂಡಲೇ ಹೊರಟೆವು.
ಮುಂದೆ ದಾರಿಯಲ್ಲಿ ಒಂದು ಕೋಟೆ ಕಾಣಸಿಗುತ್ತದೆ. ಅದು ಹಿಂದೆ ಪಾಳೇಗಾರನಾಗಿದ್ದ ತಿಮ್ಮಣ್ಣ ನಾಯಕನ ಕೋಟೆ ಎನ್ನಲಾಗುತ್ತದೆ. ಕೋಟೆಯ ಭುರುಜಿನ ಮೇಲೆ ಹತ್ತಿ ಫೋಟೋಗಳಿಗೆ ಫೋಜು ನೀಡಿದೆವು. ಸ್ವಲ್ಪ ಮುಂದೆ ಶತಮಾನಗಳ ಹಿಂದಿನ ಮೇಲ್ಛಾವಣಿ ಇಲ್ಲದ ಒಂದು ಆಂಜನೇಯನ ದೇವಸ್ಥಾನ. ಹೀಗೇ ಒಂದಷ್ಟು ಹೊತ್ತು ನಡೆದರೆ ಒಂದು ವಿಶಾಲವಾದ ಮೈದಾನ. ಇದು ವಾಘೇದೊಡ್ಡಿ ಚೌಕ ಎಂಬ ಹೆಸರಿನ ಬಯಲು. ಇಲ್ಲಿ ಜಟಕದ ಬನ ಎಂದು ಕರೆಯಲಾಗುವ ದೇವತೆಯ ದೇವಸ್ಥಾನ, ಜನರನ್ನು ಕಾಯುವ, ಕಾಡುವ ಭೂತಪ್ಪ ಎಲ್ಲಾ ಇದ್ದಾರೆ. ಇಲ್ಲಿಂದ ಮುಂದೆ ನೇರವಾದ ದಾರಿಯಲ್ಲಿ ಹೋದರೆ ನಮಗೆ ಊರುಗಳು ಸಿಗುತ್ತವೆ. ಆದರೆ ನಾವು ಹೋಗಬೇಕಿದ್ದ ಊರು ಕಾಡು ಗುಡ್ಡಗಳ ಸಂಧಿನಲ್ಲಿದ್ದುದರಿಂದ ಆ ಊರಿಗೆ ದಾರಿ ಹುಡುಕಿದರೆ ಸಿಗಲೇ ಇಲ್ಲ. ಹಾಗೂ ಒಂದು ಅಂದಾಜಿನ ಮೇಲೆ ಬಯಲಿನ ಬಲಭಾಗದಲ್ಲಿಯೇ ನಡೆದು ದಾರಿಯಲ್ಲಿ ಸಿಕ್ಕ ಮನೆಗಳಲ್ಲಿ ವಿಚಾರಿಸುತ್ತಾ ಮುಂದೆ ಹೋದೆವು. ಒಂದು ಮನೆಯಲ್ಲಿ ವ್ಯಕ್ತಿಯೊಬ್ಬರು ನಮ್ಮನ್ನು ಬಹಳಾ ಸಂಶಯದಿಂದ ನೋಡುತ್ತಿದ್ದರು. ಅವರ ಬಳಿ ದಾರಿ ಕೇಳಿಕೊಂಡು ಹೋದೆವು. ಅವರ ಮನೆಯಲ್ಲಿ ಕೊಂಚ ನೀರು ಪಡೆದು ಕುಡಿದೆವು. ಅದೆಂತಹ ರುಚಿ ಆ ನೀರಿಗೆ! ಅಲ್ಲಿಂದ ಹೊರಟ ಮೇಲೆ ಅವರು ಹೇಳಿದ್ದೆಂದರೆ ಇತ್ತೀಚೆಗೆ ಗ್ರಾಮ ಪಂಚಾಯ್ತಿ ಸಭೆಯಲ್ಲಿ ಹೀಗೆ ಅಪರಿಚಿತರಾಗಿ ಬರುವವರ ಬಗ್ಗೆ ಚರ್ಚೆಯಾಗಿ ಅವರು ಚಾರಣಿಗರೋ, ನಕ್ಸಲೀಯರೋ ಗೊತ್ತಾಗುವುದಿಲ್ಲ ಎಂದು ಹೇಳಿದ್ದಕ್ಕೆ ಅಧಿಕಾರಿಯೊಬ್ಬರು ಅವರು ಯಾರೇ ಇರಲಿ ಪೋಲೀಸರ ಗಮನಕ್ಕೆ ತನ್ನಿ ಎಂದಿದ್ದರಂತೆ. ಹೀಗಾಗಿ ನಮ್ಮನ್ನು ಒಂದು ತರಾ ಡೌಟಿಂದನೋಡಿದ ಆ ವ್ಯಕ್ತಿ ಕೊನೆಗೆ ನಗುನಗುತ್ತಾ ಈ ವಿಷಯ ತಿಳಿಸಿ ನಮಗೆ ಮುಂದಿನ ದಾರಿಯನ್ನು ತಿಳಿಸಿದರು.
ಯಡಮಲೆಯ ಮನಮೋಹಕ ದೃಶ್ಯ |
ಯಡಮಲೆಯಲ್ಲೊಂದು ಸುಂದರ ಸಂಜೆ
ಅಂದು ಸಂಜೆ ನಾವು ಏರಿ ನಿಂತಿದ್ದು ಯಡಮಲೆ ಊರಿನ ಹಿಂದಿನ ಗುಡ್ಡದಲ್ಲಿ. ವಾಸ್ತವದಲ್ಲಿ ನಾವು ದಾರಿ ತಪ್ಪಿಸಿಕೊಂಡು ಯಡಮಲೆ ಎಂದೇ ಕರೆಯಲಾಗುವ ಬೆಟ್ಟವೊಂದನ್ನು ಹತ್ತಬೇಕಿತ್ತು. ಆದರ ಅದರ ಮೇಲಿನಿಂದ ಕಾಣುವ ಅದ್ಭುತ ದೃಶ್ಯಗಳನ್ನು ಮಿಸ್ ಮಾಡಿಕೊಂಡಿದ್ದೆವು. ಆದರೆ ಈಗ ನಿಂತಿದ್ದ ಗುಡ್ಡವೂ ನಮಗೆ ನೀಡಿದ ಅನುಭೂತಿಯೂ ಎಂದೂ ಮರೆಯಲಾಗದ್ದು. ಕೆಲವೇ ಕ್ಷಣಗಳ ಹಿಂದೆ ಸೂರ್ಯ ಕಂತಿದ್ದ. ಹೀಗಾಗಿ ಪಡುವಣದಲ್ಲಿ ದೊಡ್ಡ ಗುಡ್ಡಸಾಲಿನ ಹಿಂದಿದ್ದ ಆಗಸ ರಂಗುರಂಗಾಗಿ ಕಾಣತೊಡಗಿತ್ತು. ಸುತ್ತಲ ಎಂಟೂ ದಿಕ್ಕುಗಳಲ್ಲಿ ಗುಡ್ಡಬೆಟ್ಟಗಳೇ ತುಂಬಿಕೊಂಡಿದ್ದವು. ನವಿಲುಗಳು, ಕಾಡುಕೋಳಿಗಳು ಕೂಗುತ್ತಿದ್ದವು. ನಿಜಕ್ಕೂ ಅದೊಂದು ಅಪೂರ್ವ ರಮ್ಯ ಮನೋಹರ ಸಂಜೆ. ಆ ಗುಡ್ಡದ ಮೇಲೆ ಓಡಾಡುತ್ತಿದ್ದಂತೆ ನಮ್ಮ ಇಡೀ ದಿನದ ದಣಿವೆಲ್ಲವೂ ಮಾಯವಾಗಿತ್ತು. ಈಗಾಗಲೇ ನಮ್ಮನ್ನು ದಾರಿ ಮಧ್ಯೆ ಸಿಕ್ಕ ವಿಜಯ್‌ಕುಮಾರ್ ಯಡಮಲೆ ಊರಿಗೆ ಕರೆದುಕೊಂಡು ಹೊರಟಿದ್ದರು. ಸ್ವಲ್ಪ ದೂರದಲ್ಲಿ ಇದ್ದ ಗಣಪತಿ ನಾಯ್ಕರ ಮನೆಯಲ್ಲಿ ನಮ್ಮನ್ನು ಬಿಟ್ಟರು. ಆ ಕುಟುಂಬದವರೂ ನಮ್ಮನ್ನು ಉತ್ತಮ ರೀತಿಯಲ್ಲಿ ಉಪಚರಿಸಿದರು. ಬಚ್ಚಲಿನ ಒಲೆಯಲ್ಲಿ ಬೆಂಕಿ ಉರಿಯುತ್ತಿದ್ದುದರಿಂದ ಪಕ್ಕದಲ್ಲಿಯೇ ಜರಿಯ ನೀರೂ ಬರುತ್ತಿದ್ದರಿಂದ ಹಿಂದೆ ಮುಂದೆ ಯೋಚಿಸುವ ಪ್ರಮೇಯವೇ ಬರಲಿಲ್ಲ. ಮೂವರೂ ಬಿಸಿಬಿಸಿ ಬೀರಿನಲ್ಲಿ ಸ್ನಾನ ಮಾಡಿ ಪ್ರಸನ್ನರಾದೆವು. ರಾಜು ಅಂತೂ ಎಂದೂ ಸ್ನಾನವನ್ನೇ ಮಾಡಿಲ್ಲದವರಂತೆ ಗಂಟೆಹೊತ್ತು ನೀರು ಸುರಿದುಕೊಳ್ಳುಲೇ ಇದ್ದ. ಹಾಗೇ ಜಗುಲಿಯಲ್ಲಿ ಕುಳಿತುಕೊಂಡು ಗಣಪತಿ ನಾಯ್ಕರು ತಮ್ಮ ಬದುಕಿನ ಅನೇಕ ಸಾಹಸಗಳನ್ನು ಹೇಳಿ ನಮ್ಮನ್ನು ನಕ್ಕೂ ನಗಿಸಿ ಹೊಟ್ಟೆ ಹುಣ್ಣಾಗುವಂತೆ ಮಾಡಿಬಿಟ್ಟರು. ಮರುದಿನ ನಾವು ಗೂಡಿನಗುಂಡಿ ಮತ್ತು ಬೆಳ್ಳಿಗುಂಡಿಗಳನ್ನು ನೋಡಬೇಕಿತ್ತು. ವಿಜಯ್ ನಮ್ಮನ್ನು ಕರೆದುಕೊಂಡು ಹೋಗುವ ಮಾತು ನೀಡಿದರು. ಮಲಗಿ ನಿದ್ರೆಗೆ ಜಾರಿದ್ದೆವು.
ಮೂರನೆಯ ದಿನ:
ಬದುಕಿದ್ದಾಗಲೇ ಒಮ್ಮೆ ನೋಡು ಎರಡೂ ಗುಂಡಿ: (ಬೆಳ್ಳಿಗುಂಡಿ, ಗೂಡಿನಗುಂಡಿ)
ಬೆಳಿಗ್ಗೆ ಐದು ಗಂಟೆಗೇ ಎಚ್ಚರಾಗಿದ್ದರೂ ಎಲ್ಲರೂ ಹಾಸಿಗೆ ಬಿಟ್ಟೆದ್ದಿದ್ದು ಆರು ಗಂಟೆಗೇ. ಗಣಪತಿ ನಾಯ್ಕರ ಮನೆಯ ಮುಂದೆ ಬಹಳಷ್ಟು ಹಕ್ಕಿಗಳು ಚಿಲಿಪಿಗುಡುವುದು ಕಂಡು ದುರ್ಬೀನು ಕೈಲಿಡಿದುಕೊಂಡು ನಾನು ಓಡಿದ್ದೆ. ಒಂದರ್ದ ಗಂಟೆ ಹಾಗೇ ಸುಮ್ಮನೇ ಕುಳಿತು ವೀಕ್ಷಿಸಿದೆ. ಪ್ರಾಯಶಃ ಒಂದೇ ಜಾಗದಲ್ಲಿ ಅಷ್ಟೊಂದು ಬಗೆಯ ಹಕ್ಕಿಗಳನ್ನು ನಾನು ನೋಡಿದ್ದು ಇದೇ ಮೊದಲು. ನನ್ನ ಹೈಸ್ಕೂಲಿನಲ್ಲಿದ್ದಾಗ ಪಕ್ಷಿ ವೀಕ್ಷಣೆ ನನ್ನ ಹವ್ಯಾಸವಾಗಿತ್ತು. ಸಲೀಂ ಆಲಿಯವರ ಪುಸ್ತಕ ಹಿಡಿದುಕೊಂಡು ನಾನು ಸುಮಾರು ಒಂದು ತಿಂಗಳು ಕಾಲ ನೋಡಲು ಸಾಧ್ಯವಾಗಿದ್ದ ನಲವತ್ತೈವತ್ತು ವಿಧದ ಹಕ್ಕಿಗಳಲ್ಲಿ ಅರ್ಧದಷ್ಟನ್ನು ಇಲ್ಲಿ ಬರೀ ಆರ್ಧ ಗಂಟೆಯಲ್ಲಿ ನೋಡಿದ್ದೆ! ಮತ್ತೆ ವಾಪಾಸು ಹೋಗಿ ಕಿರಣನನ್ನೂ ಕರೆದುಕೊಂಡು ಕೈಯಲ್ಲಿ ರೆಕಾರ್ಡರ್ ಇಟ್ಟುಕೊಂಡು ಒಂದು ಹತ್ತು ಹದಿನೈದು ನಿಮಿಷ ಆ ಹಕ್ಕಿಗಳ ಕಲರವವನ್ನು ರೆಕಾರ್ಡ್ ಮಾಡಿಟ್ಟುಕೊಂಡು ಬಂದೆ.
ಬದುಕಿದ್ದಾಗಲೇ ಒಮ್ಮೆ ನೋಡು ಎರಡೂ ಗುಂಡಿ: (ಬೆಳ್ಳಿಗುಂಡಿ, ಗೂಡಿನಗುಂಡಿ)
ಬೆಳಿಗ್ಗೆ ಐದು ಗಂಟೆಗೇ ಎಚ್ಚರಾಗಿದ್ದರೂ ಎಲ್ಲರೂ ಹಾಸಿಗೆ ಬಿಟ್ಟೆದ್ದಿದ್ದು ಆರು ಗಂಟೆಗೇ. ಗಣಪತಿ ನಾಯ್ಕರ ಮನೆಯ ಮುಂದೆ ಬಹಳಷ್ಟು ಹಕ್ಕಿಗಳು ಚಿಲಿಪಿಗುಡುವುದು ಕಂಡು ದುರ್ಬೀನು ಕೈಲಿಡಿದುಕೊಂಡು ನಾನು ಓಡಿದ್ದೆ. ಒಂದರ್ದ ಗಂಟೆ ಹಾಗೇ ಸುಮ್ಮನೇ ಕುಳಿತು ವೀಕ್ಷಿಸಿದೆ. ಪ್ರಾಯಶಃ ಒಂದೇ ಜಾಗದಲ್ಲಿ ಅಷ್ಟೊಂದು ಬಗೆಯ ಹಕ್ಕಿಗಳನ್ನು ನಾನು ನೋಡಿದ್ದು ಇದೇ ಮೊದಲು. ನನ್ನ ಹೈಸ್ಕೂಲಿನಲ್ಲಿದ್ದಾಗ ಪಕ್ಷಿ ವೀಕ್ಷಣೆ ನನ್ನ ಹವ್ಯಾಸವಾಗಿತ್ತು. ಸಲೀಂ ಆಲಿಯವರ ಪುಸ್ತಕ ಹಿಡಿದುಕೊಂಡು ನಾನು ಸುಮಾರು ಒಂದು ತಿಂಗಳು ಕಾಲ ನೋಡಲು ಸಾಧ್ಯವಾಗಿದ್ದ ನಲವತ್ತೈವತ್ತು ವಿಧದ ಹಕ್ಕಿಗಳಲ್ಲಿ ಅರ್ಧದಷ್ಟನ್ನು ಇಲ್ಲಿ ಬರೀ ಆರ್ಧ ಗಂಟೆಯಲ್ಲಿ ನೋಡಿದ್ದೆ! ಮತ್ತೆ ವಾಪಾಸು ಹೋಗಿ ಕಿರಣನನ್ನೂ ಕರೆದುಕೊಂಡು ಕೈಯಲ್ಲಿ ರೆಕಾರ್ಡರ್ ಇಟ್ಟುಕೊಂಡು ಒಂದು ಹತ್ತು ಹದಿನೈದು ನಿಮಿಷ ಆ ಹಕ್ಕಿಗಳ ಕಲರವವನ್ನು ರೆಕಾರ್ಡ್ ಮಾಡಿಟ್ಟುಕೊಂಡು ಬಂದೆ.
ಗೂಡಿನ ಗುಂಡಿ |
ಪರಿಸರ ಎಂದರೆ ಯಾವುದೂ ಬಿಡಿಬಿಡಿಯಾಗಿರುವುದಿಲ್ಲ. ಇಲ್ಲಿ ಪ್ರತಿಯೊಂದೂ ಸೂಕ್ಷ್ಮವಾಗಿ ಒಂದಕ್ಕೊಂದು ಹೆಣೆದುಕೊಂಡೇ ನಮಗೊಂದು ವಿಶಾಲ ದೃಷ್ಟಿಯನ್ನು ನೀಡುತ್ತಿರುತ್ತದೆ. ತೇಜಸ್ವಿಯವರ ’ನೆರೆಹೊರೆಯವರು’ ಕೃತಿಯನ್ನು ಓದಿದರೆ ನಮಗೆ ಕಾಣುವ ಪ್ರತಿಯೊಂದೂ ಎಷ್ಟು ಅತ್ಯಮೂಲ್ಯವಾದದ್ದು ಮತ್ತು ಎಷ್ಟು ಸೂಕ್ಷ್ಮವಾದದ್ದು ಎನ್ನುವುದು ತಿಳಿಯುತ್ತದೆ. ಈ ನಮ್ಮ ಚಾರಣದಲ್ಲಿ ನಮಗೆ ಆ ಮಟ್ಟಿಗಿನ ಸೂಕ್ಷ್ಮಗ್ರಹಿಕೆಗೆ ಅವಕಾಶವಿರಲಿಲ್ಲ. ಒಂದೊಮ್ಮೆ ಇಲ್ಲಿ ಅಂತಹ ಅವಕಾಶ ಸಿಗುವುದಾದರೆ ಅದು ನೀಡುವ ಅನುಭವವೇ ಬೇರೆಯೇ ತೆರನಾದದ್ದು. ಆದರೆ ನಾವು ನಿಗದಿತ ಸಮಯದಲ್ಲಿ ಗುರಿ ತಲುಪಬೇಕಿತ್ತು. ಕಣ್ಣುಗಳು ಒಂದೇ ಕಾಲದಲ್ಲಿ ಸೂಕ್ಷ್ಮದರ್ಶಕವಾಗಿಯೂ, ದೂರದರ್ಶಕವಾಗಿಯೂ ಕೆಲಸಮಾಡುತ್ತಿದ್ದರೆ, ಕಿವಿಗಳು ಮಾಮಾಲಿಗಿಂತ ಚುರುಕಾಗಿದ್ದವು. ಆದರೆ ನಮ್ಮ ಚಾರಣದುದ್ದಕ್ಕೂ ಹೆಚ್ಚು ಪ್ರಾಶಸ್ತ್ಯ ಕಾಲುಗಳಿಗೇ.
ಬೆಳ್ಳಿಗುಂಡಿಯ ನೆತ್ತಿಯ ಮೇಲಿಂದ |
ಕೊಂಚ ಮೇಲೆ ಹೋಗಿ ಹೊಳೆಯ ನಡುವಿನ ಕಲ್ಲು ಹಾಸುಗಳ ಮೇಲೆ ಕುಳಿತುಕೊಂಡು ಎಲ್ಲರೂ ಶೂ ಬಿಚ್ಚಿದರೆ ಕಿರಣನ ಕಾಲಿನಲ್ಲಿ ಬೂಟು ಕಚ್ಚಿದ ಗಾಯಕ್ಕೆ ಹಾಕಿದ್ದ ಬ್ಯಾಂಡೇಜನ್ನೂ ಹರಿದುಕೊಂಡ ಮೂರು ಇಂಬಳಗಳು ಒಳನುಗ್ಗು ಹೊಟ್ಟೆ ಬಿರಿಯುವಷ್ಟು ರಕ್ತ ಕುಡಿದು ರಾಣಾರಂಪ ಮಾಡಿದ್ದವು. ಮತ್ತೆ ಹೊಸದಾಗಿ ಡ್ರೆಸಿಂಗ್ ಮಾಡಿದೆ. ಹೊತ್ತು ತಂದಿದ್ದ ಅನ್ನಕ್ಕೆ ಪುಳಿಯೋಗರೆ ಮಿಕ್ಸ್ ಕಲಸಿ ಎಲ್ಲರೂ ತಿಂದು ಶುದ್ಧವಾದ ಆ ನೀರು ಕುಡಿದೆವು.
ಮನದಲಿ ಪಡಿಮೂಡಿದ ಪಡಿಬೀಡು
ಮನದಲಿ ಪಡಿಮೂಡಿದ ಪಡಿಬೀಡು
ನನ್ನ ಪ್ರಕಾರಮುಂದಿನ ಪ್ರಯಾಣ ಅಲ್ಲಿಂದ ಕಾಡೊಳಗೆ ನಡೆದು ಅದ್ಭುತವಾದ ಮತ್ತೊಂದು ಸ್ಥಳಕ್ಕೆ ಹೋಗಬೇಕಿತ್ತು. ಹಾಗೆ ಹೋಗಿದ್ದರೆ ರಾತ್ರಿ ವಾಸ್ತವ್ಯ ಕಾಡಿನಲ್ಲೇ ಆಗುತಿತು. ಇದಕ್ಕೆ ಕಿರಣ ತಯಾರಿದ್ದರೂ ರಾಜುಗೆ ಇಷ್ಟಕ್ಕೆ ಪೂರ್ಣ ತೃಪ್ತಿಯಾಗಿತ್ತೆಂದು ಕಾಣುತ್ತದೆ. ಹೀಗಾಗಿ ಇಲ್ಲ ವಾಪಾಸು ಹತ್ತಿರ ಸಿಗುವ ಹಳ್ಳಿಗೆ ಹೋಗೋಣ ಎಂದ. ಒಲ್ಲದ ಮನಸ್ಸಿನಿಂದ ನಾನೂ ಒಪ್ಪಿದೆ. ಅಲ್ಲಿಂದ ಸ್ವಲ್ಪ ದೂರ ಹೊಳೆಯಲ್ಲೇ ಹಾದು ಹೋಗಿ ಅಡ್ಡ ಸಿಗುವ ಕಾಲುದಾರಿ ಹಿಡಿದು ಕತ್ತಲಾಗುವುದರೊಳಗೆ ಪಡಿಬೀಡು ತಲುಪಿದ್ದೆವು. ಹದಿನೈದೇ ಮನೆಗಳಿರುವ ಈ ಪಡಿಬೀಡನ್ನು ಪ್ರವೇಶಿಸುತ್ತಿದ್ದಂತೆ ಈ ಊರಿನ ಪರಿಸರ ಬಹಳಾ ಖುಷಿಕೊಟ್ಟಿತ್ತು. ಆ ಮುಸ್ಸಂಜೆಯಲ್ಲಿ ಇಡೀ ಊರು ಒಂದು ಸುಂದರ ಕಲಾಕೃತಿಯಂತೆ ಗೋಚರವಾಗಿತ್ತು. ನಾವು ಮಾತಾಡಿಸಿದ ಪ್ರತಿಯೊಂದು ಮನೆಗಳವರೂ ತೋರುತ್ತಿದ್ದ ಅಕ್ಕರೆ ಅಪೂರ್ವವಾಗಿತ್ತು. ಈ ಊರಿನ ಎಲ್ಲಾ ಕುಟುಂಬಗಳೂ ಬಡವರೇ ಎನ್ನುವುದು ಮನೆಯೊಳಗೆ ಹೋದ ಕೂಡಲೇ ತಿಳಿಯುತ್ತಿದ್ದು. ಕಾಡಿನ ನಡುವೆಯೇ ಇದ್ದರೂ ಯಾರೊಬ್ಬರೂ ತಮ್ಮ ಮನೆಗಳಿಗೂ ನಾಟಾ ಮಾಡಿಕೊಳ್ಳದೇ ಬಿದಿರು ಬೊಂಬುಗಳನ್ನೇ ಹಾಕಿಕೊಂಡಿರುವುದು ನಿಜಕ್ಕೂ ಅಚ್ಚರಿಯುಂಟು ಮಾಡಿತು. ಇಲ್ಲಿ ಕರೆಂಟೂ ಇಲ್ಲ. 'ನಮ್ಮ ಮನೆಯಲ್ಲೇ ಉಳಿದುಕೊಳ್ಳಿ ಎಂಬ ಆ ಜನರ ಪ್ರೀತಿಯ ಮಾತುಗಳಿಗೆ ಮಾರುಹೋಗಿದ್ದೆವು. ಕೊನೆಗೆ ನಾವು ಹೋಗಿ ತಂಗಿದ ಒಂದು ಮನೆಯಲ್ಲೂ ಅಷ್ಟೆ. ಗಂಡ, ಹೆಂಡತಿ ಇಬ್ಬರು ಮಕ್ಕಳಿರುವ ಸುಂದರ ಕುಟುಂಬ ಅದು. ಆ ಮಕ್ಕಳೊಂದಿಗೆ ಅದೂ ಇದೂ ಹರಟೆ ಹೊಡೆದು, ಮ್ಯಾಜಿಕ್ ಮಾಡಿ ಅವರ ಹುಬ್ಬೆರುವಂತೆ ಮಾಡುವಷ್ಟರಲ್ಲಿ ಅನ್ನ ತಯಾರಾಗಿತ್ತು. ಅವರು ಮಾಡುವ ಸಾಂಬಾರನ್ನು ನಾವು ಇಷ್ಟಪಡುತ್ತೇವೆಯೋ ಇಲ್ಲವೋ ಎಂಬ ಸಂಶಯದಿಂದ ಆ ಮನೆಯ ಅಕ್ಕ ನಮಗೆ ಕೇಳಿದ್ದರು. ಅವರಿಗೆ ಹೆಚ್ಚಿನ ತೊಂದರೆ ಕೊಡುವುದೆ ಬೇಡ ಎಂದು ಯೋಚಿಸಿ ಬಿಸಿನೀರು ಕಾಸಿಕೊಡಲು ತಿಳೀಸಿದೆವು. ಅದಕ್ಕೆ ನಾವು ಕೊಂಡೊಯ್ದಿದ್ದ ಒನ್ ಮಿನಟ್ ರಸಂ ಪುಡಿಯನ್ನು ಬೆರೆಸಿ ರಸಂ ತಯಾರಿಸಿಕೊಂಡು ಊಟ ಮಾಡಿದೆವು. ನಮ್ಮ ಬಳಿ ಉಳಿದಿದ್ದ ಪದಾರ್ಥಗಳನ್ನು ಅವರಿಗೆ ನೀಡಿದೆವು.
ಪಡಿಬೀಡಿನ ಒಂದು ದೃಶ್ಯ |
**
ನಮ್ಮ ಚಾರಣದ ಬಗ್ಗೆ ಇಷ್ಟು ಹೇಳಿದ ಮೇಲೂ ಒಂದು ಮಾತು. ಇಂತಹ ಒಂದು ಚಾರಣ ನಮಗೆ ನೀಡುವ ಅನುಭವವನ್ನು ಯಾವ ಪದಗಳಿಂದಲೂ ಯಥಾವತ್ತಾಗಿ ಅಕ್ಷರ ರೂಪದಲ್ಲಿ ಇಳಿಸಲು ಸಾಧ್ಯವಿಲ್ಲ. ಚಾರಣ ಮಾಡಿದವರಿಗೆ ಮಾತ್ರ ಆ ಅನುಭವ ದಕ್ಕಲು ಸಾಧ್ಯ.
**
“ಯಾಕೆ ಈ ಟ್ರೆಕಿಂಗ್ ಹೋಗ್ತಾ ಇದ್ದೀರಿ? ಫೇಸ್‌ಬುಕ್‌ಗೆ ಫೋಟೋ ಅಪ್‌ಲೋಡ್ ಮಾಡೋದಿಕ್ಕಾ?” ಎಂದು ಕೊಪ್ಪಳದ ಬಯಲು ಸೀಮೆಯ ಸ್ನೇಹಿತೆಯೊಬ್ಬಳು ಕೆಲದಿನಗಳ ಹಿಂದೆ ಪ್ರಶ್ನೆ ಹಾಕಿದ್ದಳು. ಏನು ಉತ್ತರ ಹೇಳುವುದು ಎಂದು ನನಗೆ ತೋಚಿರಲಿಲ್ಲ. ಸರಿಯಾದ ಸಿದ್ಧತೆಯಿಲ್ಲದೇ ಇದ್ದರೆ ಭಾರೀ ಅನಾಹುತಗಳೇ ಸಂಭವಿಸಿಬಿಡಬಹುದಾದರೂ ಇಂತಹ ಚಾರಣ ನನಗೇಕೆ ಇಷ್ಟವಾಗುತ್ತದೆ? ಆ ಕಾಡು, ಬೆಟ್ಟ, ಗುಡ್ಡ, ಹಸಿರು ಹಕ್ಕಿ, ನೀರು, ಜಲಲ ಜಲಧಾರೆಗಳನ್ನು ಅಷ್ಟು ಹತ್ತಿರದಿಂದ ಅನುಭವಿಸುವುದು ನನಗೇಕೆ ಇಷ್ಟವಾಗುತ್ತದೆ? ಊಂ..ಹೂಂ.. ಇಂತಹ ಪ್ರಶ್ನೆಗಳೇ ಅಸಂಬಂದ್ಧ ನನ್ನ ಪಾಲಿಗೆ. ನಗರವಾಸಿ ಮನುಷ್ಯನ ಪಾಪಕರ್ಮಗಳಿಂದ ಭೂಮಿಯ ಸಹಜ ಸೌಂದರ್ಯಕ್ಕೇ ಕುತ್ತು ಬಂದಿರುವ ಈ ಹೊತ್ತಿನಲ್ಲಿ, ಅಂತಹ ಪೃಕೃತಿ ಸೌಂದರ್ಯದ ಖಣಿಯೇ ಆದ ನಮ್ಮದೇ ಪಶ್ಚಿಮ ಘಟ್ಟಗಳಲ್ಲಿ ಹೀಗೆ ಸುತ್ತಾಡಿ ಬರುವುದು ದೇಹಕ್ಕೂ ಮನಸ್ಸಿಗೂ ಎಂತಹಾ ಎನರ್ಜಿ ನೀಡುತ್ತದೆ ಎಂದು ತಿಳಿಯಬೇಕಾದರೆ ಈ ಅನುಭವಗಳು ಬೇಕು.
ಗಣಪತಿ ನಾಯ್ಕರು ಮತ್ತು ವಿಜಯ್ ಕುಮಾರ್ |
ಒಂದು ಜಾತಿ ಅಣಬೆ |
ಕಿರಣ್ ಮಾರಶೆಟ್ಟಿಹಳ್ಳಿ m |