ಇಂದು ನಾವು ಮರೆತಿರುವುದು ಮನುಷ್ಯತ್ವವನ್ನು- ಡಾ.ನಾ.ಡಿಸೋಜಾ
(ಚಿಕ್ಕಂದಿನಿಂದಲೂ ನಾಡಿ ಸರ್ ಬಗ್ಗೆ ಅತೀವ ಅಭಿಮಾನ ಮತ್ತು ಪ್ರೀತಿ ನನಗೆ . ಸಾಗರದ ಸ್ಥಳಿಯು ಪತ್ರಿಕೆಗಳಲ್ಲಿ ಆಗಾಗ ಓದುತ್ತಿದ್ದ ಅವರ ಕತೆಗಳು ನನ್ನನ್ನು ವಿಶಿಷ್ಟ ಪ್ರಪಂಚಕ್ಕೆ ಒಯ್ಯುತ್ತಿದ್ದವು . ನಾನು ಪಿಯುಸಿಯಲ್ಲಿದ್ದಾಗ ಓದಿದ ಅವರ ಕಾದಂಬರಿ ‘ ಕೊಳಗ ’ ಮತ್ತು ‘ ಮುಳುಗಡೆ ’ ಬಹಳ ಪ್ರಭಾವಿಸಿದ್ದವು . ನಾನು ಹುಟ್ಟಿ ಬೆಳೆದ ‘ ದೀವರು ’ ಸಮುದಾಯದ ಶ್ರೀಮಂತ ಸಾಂಸ್ಕೃತಿಕ ಹಿನ್ನೆಲೆ , ಈ ಸಮುದಾಯ ಗೇಣಿದಾರರಾಗಿ ಬದುಕಿದ ದಾರುಣ ಇತಿಹಾಸ ಹಾಗೂ ಶತಮಾನಗಳ ದೌರ್ಜನ್ಯವನ್ನು ಎದುರಿಸಿ ಅದು ನಡೆಸಿದ ’ ಕಾಗೋಡು ಸತ್ಯಾಗ್ರಹ ’ ದ ಸಂಘರ್ಷವನ್ನು ಕಣ್ಣಿಗೆ ಕಟ್ಟಿದಂತೆ ವರ್ಣಿಸಿತ್ತು ‘ ಕೊಳಗ ’ ಕಾದಂಬರಿ . ನಾಡಿಯವರ ಅನೇಕ ಕತೆಗಳೂ ಅಷ್ಟೇ ಪರಿಣಾಮಕಾರಿಯಾಗಿರುವಂತವು . ಜಾತಿ - ಮತಗಳ ಚೌಕಟ್ಟಿನಿಂದ ನಮ್ಮನ್ನು ಮನುಷ್ಯರಾಗುವತ್ತ ನಮ್ಮನ್ನು ಕೊಂಡೊಯ್ಯುವ ಶಕ್ತಿ ಅವಕ್ಕಿದೆ . ಕೆಲವು ವರ್ಷಗಳ ಹಿಂದೆ ಶಿವಮೊಗ್ಗದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ನಾಡಿಯವರ ಬಗ್ಗೆ ವಿಶೇಷ ಮೆಚ್ಚಿಗೆ ಉಂಟಾಗಿತ್ತು . ಆಗ ಸಮ್ಮೇಳನ ಅಧ್ಯಕ್ಷರಾಗಿ ಅವರು ಮಾಡಿದ್ದ ಅಧ್ಯಕ್ಷೀಯ ಭಾಷಣ ಅದ್ಭುತವಾದದ್ದು . ಯಾವ ರಾಜಕಾರಣಿಗೂ ಮುಲಾಜು ನೋಡದೇ ಸತ್ಯದ ಪರವಾಗಿ ನಿಂತಿದ್ದರು . ಹಾಗೆಯೇ ಮಲೆನಾಡಿನ ಪರಿಸರಕ್ಕೆ ಕುತ್ತು ಬಂದಾಗ ಜನರೊಂದಿಗೆ ಒ...