ಕೃಪೆ: ದ ಸಂಡೆ ಇಂಡಿಯನ್, ಕನ್ನಡ
ಇಷ್ಟೆಲ್ಲಾ ಅನಾಹುತಗಳು ನಡೆಯುವುದನ್ನು ಕಂಡು ಈ ಊರುಗಳ ಜನರು ಸತತವಾಗಿ ಹೋರಾಟ, ಪ್ರತಿಭಟನೆಗಳನ್ನು ನಡೆಸುತ್ತಲೇ ಬಂದಿದ್ದಾರೆ. ಕಸದ ವಿಲೇವಾರಿಯನ್ನು ನಿಲ್ಲಿಸುವಂತೆ ಅಧಿಕಾರಿಗಳಿಗೆ ಇದುವರೆಗೆ ಏನಿಲ್ಲೆಂದರೂ 230 ಮನವಿಪತ್ರಗಳನ್ನು ಕೊಟ್ಟಿರುವುದಾಗಿ ದಲಿತ ಸಂಘರ್ಷ ಸಮಿತಿಯ (ಸಂಯೋಜಕ) ಸ್ಥಳೀಯ ಮುಖಂಡರು ತಿಳಿಸುತ್ತಾರೆ! ಆದರೆ ಇದುವರಗೆ ಬಿಬಿಎಂಪಿ ಅಧಿಕಾರಿಗಳಾಗಲೀ, ರಾಜಕಾರಣಿಗಳಾಗಲೀ ಯಾವುದೇ ಸಕಾರಾತ್ಮಕ ಪ್ರತಿಸ್ಪಂದನೆ ತೋರಿದ್ದಿಲ್ಲ. ಬದಲಿಗೆ, ನ್ಯಾಯಯುತವಾಗಿ ಹೋರಾಡುತ್ತಿದ್ದ ಆ ಅಮಾಯಕ ಹಳ್ಳಿಗರನ್ನು ನಾನಾ ಬಗೆಯಲ್ಲಿ ಬಗ್ಗಿಸಲು ಯತ್ನಿಸಿದ್ದಾರೆಯೇ ವಿನಃ ಅವರ ಆಕ್ರಂದನವನ್ನು ಆಲಿಸುವ ಆಲಿಸುವ ಗೋಜಿಗೇ ಹೋಗಿಲ್ಲ.
ಮಂಡೂರಿನಲ್ಲಿ ಶ್ರೀನಿವಾಸ ಗಾಯತ್ರಿ ಸೋರ್ಸಸ್ ಕಂಪನಿ ಸಂಸ್ಕರಣೆ ಮತ್ತು ವಿದ್ಯುಚ್ಛಕ್ತಿ ತಯಾರಿಕೆಯ ಪ್ರದರ್ಶನ ನೀಡುತ್ತಿದೆ. ಆದರೆ ಇದಕ್ಕೂ ಮಾವಳ್ಳಿಪುರದ ರಾಮ್‌ಕಿಗೂ ವ್ಯತ್ಯಾಸವೇನಿಲ್ಲ. ಮತ್ತೊಂದು ಕಡೆ ಇಲ್ಲಿ ಬಿಬಿಎಂಪಿಯೇ ನೇರವಾಗಿ ಕಸವನ್ನು ಸುರಿದು ಮತ್ತೆ ಇಲ್ಲಿಂದ ದೊಡ್ಡಬಳ್ಳಾಪುರದ ಬಳಿಯ ಟೆರ್ರಾಫಾರ್ಮ ಸಂಸ್ಕರರಣಾ ಘಟಕಕ್ಕೆ ಕೊಂಡೊಯ್ಯುತ್ತದೆ. ಈ ಕಸಸುರಿಯುವ ಗುಡ್ಡಗಳ ಸನಿಹದಲ್ಲಿ ಲ್ಯಾಂಡ್ ಫಿಲ್‌ಗಳಲ್ಲಿ ಸೇರುತ್ತಿರುವ ಲೀಚೆಟ್ (ಕಸದಿದ ಸೃಷ್ಟಿಯಾದ ರಾಸಾಯನಿಕ ವಿಷದ್ರವ) ಸೀದಾ ಭೂಮಿಯೊಳಗೇ ಇಂಗಿಹೋಗುವಂತೆ ಏರ್ಪಾಡು ಮಾಡಲಾಗಿದೆ! ಇದು ಎಂಎಸ್‌ಡಬ್ಲ್ಯೂ ನಿಯಮಗಳಿಗೆ ವಿರುದ್ಧವಾದುದೆಂದ ಕ್ರಮ. ಲೀಚೆಟ್ ಭೂಮಿಯೊಳಗೆ ಇಂಗಿ ಜಲದ ಮೂಲಗಳೊಂದಿಗೆ ಬೆರೆಯಲು ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಎಂಎಸ್‌ಡಬ್ಲ್ಯೂ ನಿಯಮ -2000ಹೇಳುತ್ತದೆ. ಅಂತಹ ಯಾವ ಮುನ್ನೆಚ್ಚರಿಕೆಯೂ ಇಲ್ಲಿ ಇಲ್ಲದ ಪರಿಣಾಮವಾಗಿ ಮಂಡೂರಿನ ಪಕ್ಕದ ಬೈಯಪ್ಪನಹಳ್ಳಿ ಕೆರೆಯ ನೀರು ವಿಷಕಾರಿಯಾಗಿದೆಯಲ್ಲದೆ ಪಕ್ಕದ ಗುಂಡೂರು, ಕಮ್ಮಸಂದ್ರ, ಬಿದರಹಳ್ಳಿ ಗ್ರಾಮಗಳ ಜನಜಾನುವಾರುಗಳು ತೋದರೆಗಳನ್ನನುಭವಿಸುವಂತಾಗಿದೆ. ಒಂದೆಡೆ ಜನರು ನಾನಾ ಖಾಲೆಗಳಿಗೊಳಗಾಗುತ್ತಿದ್ದರೆ ಈ ಊರುಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳೂ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಒಬ್ಬನೇ ಒಬ್ಬ ಖಾಯಂ ವೈದ್ಯರೂ ಇಲ್ಲಿಲ್ಲ. ಯಾವುದೇ ರೋಗಕ್ಕೂ ಒಂದೇ ಗುಳಿಗೆ! ವಿಶೇಷ ಏನು ಗೊತ್ತೆ? ಮಂಡೂರು ರಾಜ್ಯಕ್ಕೇ ಆರೋಗ್ಯ ಸಚಿವರಾಗಿರುವ ಮಾನ್ಯ ಶ್ರೀ ಅರವಿಂದ ಲಿಂಬಾವಳಿಯವರ ಸ್ವಕ್ಷೇತ್ರದಲ್ಲಿ ಬರುತ್ತದೆ. ಇಂತಹ ಸಚಿವರಿಂದ ರಾಜ್ಯದ ಆರೋಗ್ಯವನ್ನು ನಿರೀಕ್ಷಿಸುವುದು ಹೇಗೆ?
ಮೊತ್ತಮೊದಲನೆಯದಾಗಿ ಪರಿಸರ ಸಂರಕ್ಷಣಾ ಕಾಯ್ದೆ ಮತ್ತು ಎಂಎಸ್‌ಡಬ್ಲ್ಯೂ ನಿಯಮಗಳನ್ನೆಲ್ಲಾ ಗಾಳಿಗೆ ತೂರಿ ಸಾವಿರಾರು ಜನರ ಪ್ರಾಣಗಳೊಂದಿಗೆ ಚೆಲ್ಲಾಟವಾಡುತ್ತಿರುವ ಅಧಿಕಾರಿಗಳು ಮತ್ತು ಗುತ್ತಿಗೆ ಪಡೆದ ರಾಮ್‌ಕಿ ಹಾಗೂ ಶ್ರೀನಿವಾಸ ಗಾಯತ್ರಿ ಸೋರ್ಸಸ್ ಕಂಪನಿಗಳ ಮಾಲೀಕರ ಮೇಲೆ ಕಾನೂನು ಪ್ರಕಾರ ಕ್ರಮಕೈಗೊಳ್ಳಬೇಕು. ಈಗಾಗಲೇ ಈ ಅವೈಜ್ಞಾನಿಕ ಮತ್ತು ಹೊಣೆಗೇಡಿಯಾದ ಕಸದ ವಿಲೇವಾರಿಂದ ಜನರಿಗೆ, ಜಾನುವಾರುಗಳಿಗೆ ಮತ್ತು ಪರಿಸರಕ್ಕೆ ಆಗಿರುವ ನಷ್ಟವನ್ನು ತುಂಬಿಕೊಡಲು ತಪ್ಪಿತ್ಥಸ್ಥರಿಗೆ ತಾಕೀತು ಮಾಡಬೇಕು. 'ಮಲಿನಗೊಳಿಸಿದವನೇ ನಷ್ಟ ತುಂಬಬೇಕು' (Polluter Pays principle) ಎಂಬ ತತ್ವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಆಗ ಮುಂದೆ ಗುತ್ತಿಗೆ ಪಡೆಯುವ ಸಂಸ್ಥೆಗಳು ಎಚ್ಚರಿಕೆಂದ ಕೆಲಸಮಾಡಲು ಸಾಧ್ಯವಾಗುತ್ತದೆ.
ಕಳೆದ ಆಗಸ್ಟ್ ೨೩ ರಂದು ಬೆಂಗಳೂರಿನ ಉತ್ತರ ಭಾಗದಲ್ಲಿರುವ ಹೆಸರಘಟ್ಟ ಹೋಬಳಿಯ ಮಾವಳ್ಳಿಪುರದಲ್ಲಿ ಏಕಾಏಕಿ ಸುಮಾರು ೬೦೦ ಪೊಲೀಸರು ಜಮಾಸಿದ್ದರು. ಯಾರೋ ಉಗ್ರಗಾ"ಗಳು ಆ ಹಳ್ಳಿಯಲ್ಲಿ ಅಡಗಿಕೊಂಡಿದ್ದರು ಎಂದಲ್ಲ. ಬದಲಾಗಿ ಹಾಗೆ ಜಮಾಸಿದ್ದ ಪೊಲೀಸರೇ ಎರಡು ದಿನಗಳ ಕಾಲ ಹಳ್ಳಿಯಲ್ಲಿ ಉಗ್ರ ವಾತಾವರಣ ಸೃಷ್ಟಿಸಿಬಿಟ್ಟಿದ್ದರು. ಅಂದು ಬೆಳಿಗ್ಗೆ ಊರಿನ ಮುಖಂಡರಿಗೆ ಕರೆಮಾಡಿದ ಡಿವೈಎಸ್‌ಪಿ ಶ್ರೀಧರ್ ಮಾವಳ್ಳಿಪುರ ಕಸದ ಗುಡ್ಡೆಯ ಬಳಿ ಬರಲು ತಿಳಿಸಿದ್ದರು. ಮಾವಳ್ಳಿಪುರದ ಮೂರು ನಾಲ್ಕು ಜನರು ಅಲ್ಲಿಗೆ ಹೋದೊಡನೆ ಆ ಪೊಲೀಸ್ ಅಧಿಕಾರಿ ಊರಿಗೆ ಬರುವ ಕಸದ ಲಾರಿಗಳನ್ನು ತಡೆಯುವುದೇಕೆ ಎಂದು ಧಮಕಿ ಹಾಕಿದರು. ಆಗ ಊರಿನವರು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯು ಒಂದು ತಿಂಗಳ ಹಿಂದೆಯೇ ಅಲ್ಲಿ ಕಸವನ್ನು ಹಾಕುವುದನ್ನು ನಿಲ್ಲಿಸಲು ತಿಳಿಸಿದೆ ಎಂದು ಆದೇಶ ಪತ್ರ ತೋರಿಸಿದರು. ಆದರೆ ಅದಕ್ಕೆ ಗಮನ ನೀಡದ ಪೊಲೀಸರು ಬಲವಂತವಾಗಿ ಕಸ ತುಂಬಿದ ಲಾರಿಗಳಿಗೆ ಅವಕಾಶ ನೀಡಿದಾಗ ತಕ್ಷಣಕ್ಕೆ 25-30 ಜನರು ನೆರೆದು ಪೊಲೀಸರೊಂದಿಗೆ ಮಾತಿಗಿಳಿದರು. ಇಷ್ಟರಲ್ಲಿ ಏಕಾಏಕಿ ವಾಹನಗಳಲ್ಲಿ ಬಂದ ೬೦೦ ರಷ್ಟು ಪೊಲೀಸರು ಭಯಭೀತ ವಾತಾವರಣವನ್ನೇ ಹುಟ್ಟಿಸಿಬಿಟ್ಟರು.
ಆದರೆ ಕಳೆದೊಂದು ದಶಕದಿಂದಲೂ ಬೆಂಗಳೂರು ಬಿಸಾಡಿ ಕಳಿಸಿದ ಕಸವನ್ನು ಸುರಿಸಿಕೊಂಡು ಇನ್ನಿಲ್ಲದ ತೊಂದರೆಗಳನ್ನನುಭವಿಸಿರುವ ಗ್ರಾಮಸ್ಥರು ಸೋಲೊಪ್ಪಲು ಸಿದ್ಧರಿರದೇ ಗಟ್ಟಿಯಾಗಿ ನಿಂತುಬಿಟ್ಟರು. ಅಷ್ಟರಲ್ಲಿ ಮಾಧ್ಯಮಗಳೂ, ಹಲವು ಸಂಘಸಂಸ್ಥೆಗಳ ಮುಖಂಡರೂ ಅಲ್ಲಿಗೆ ಧಾವಿಸಿದ್ದರಿಂದ ಅಂದು ಹಳ್ಳಿಗರ ಮೇಲೆ ನಡೆದುಹೋಗಬಹುದಾಗಿದ್ದ ದೊಡ್ಡ ಮಟ್ಟದ ದೌರ್ಜನ್ಯವೊಂದು ತಪ್ಪಿತೆಂದೇ ಹೇಳಬೇಕು. ಆದರೆ ಆ ಪ್ರತಿಭಟನೆಯಲ್ಲಿ ಉದ್ವೇಗಕ್ಕೊಳಗಾದ ಎಲ್. ಶ್ರೀನಿವಾಸ ಎಂಬ 37 ವಯಸ್ಸಿನ ಯುವಕ ಹೃದಯಾಘಾತವಾಗಿ ಕುಸಿದು ಬಿದ್ದ. ಕೂಡಲೇ ಆತನನು ದೇಹವನ್ನು ಯಲಹಂಕ ಆಸ್ಪತ್ರೆಗೆ ಸೇರಿಸಲಾತಾದರೂ ಚಿಕಿತ್ಸೆ ಫಲಕಾರಿಯಾಗದೇ ಆತ ಅಸುನೀಗಿದ. ಇದರಿಂದ ಜನರು ಮತ್ತುಷ್ಟು ರೊಚ್ಚಿಗೆದ್ದರು. ಬಿಬಿಎಂಪಿ ಮತ್ತು ಪೊಲೀಸ್ ಅಧಿಕಾರಿಗಳ ಉದ್ಧಟತನದಿಂದಾಗಿ ಪ್ರಾಣಕಳೆದುಕೊಂಡ ಯುವಕನ ಶವವನ್ನಿಟ್ಟುಕೊಂಡು ಪ್ರತಿಭಟನೆ ನಡೆಸಲು ಗ್ರಾಮಸ್ಥರು ಸಜ್ಜಾಗುತ್ತಿದ್ದಂತೆಯೇ ಮರುದಿನ ಬೆಳಕು ಹರಿಯುವುದರೊಳಗಾಗಿ ಯಾರಿಗೂ ಗೊತ್ತಿಲ್ಲದಂತೆ ಆ ಯುವಕನ ಶವವನ್ನು ಆಸ್ಪತ್ರೆಂದ ಪೊಲೀಸರು ಕದ್ದು ಸಾಗಿಸಿದ್ದರು. ದ್ವಾರದಲ್ಲಿ ತಡೆದ ಆಸ್ಪತ್ರೆಯ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ ಶವವನ್ನು ಆ ಯುವಕನ ಊರಾದ ಕುರುಬರಹಳ್ಳಿಯಲ್ಲಿ ಅನಾಥವಾಗಿ ಇಟ್ಟು ಹೋದರು. ಆಗಲೂ ಊರಿಗೆ 400-500 ಜನ ಪೊಲೀಸರು ಶವದ ವಾಹನದೊಂದಿಗೆ ಬಂದಿದ್ದನ್ನು ಬೆಳಬೆಳಗ್ಗೆಯೇ ನೋಡಿದ ಗ್ರಾಮಸ್ಥರು ಹೌಹಾರಿದ್ದರು. ಆ ಬಡ ರೈತಾಪಿ ಯುವಕ ಕುರುಬರಹಳ್ಳಿಯ ಶ್ರೀನಿವಾಸನ ಸಾವಿಗೆ ಕಾರಣವಾದ ಬಿಬಿಎಂಪಿಯಾಗಲೀ ಸರ್ಕಾರವಾಗಲೀ ಆತನ ಅನಾಥ ಕುಟುಂಬಕ್ಕೆ ಈ ಕ್ಷಣದವರೆಗೂ ಬಿಡಿಗಾಸಿನ ಪರಿಹಾರವನ್ನೂ ನೀಡಿಲ್ಲ.
ಬೆಂಗಳೂರೆಂಬ ಮಹಾನಗರಕ್ಕೆ ಸನಿಹದಲ್ಲಿರುವ ಮಾವಳ್ಳಿಪುರವೆಂಬ ಒಂದು ಹಳ್ಳಿಯಲ್ಲಿ ಮೇಲೆ ಹೇಳಿದ ಒಂದು ವಿಚಿತ್ರ ಸನ್ನಿವೆಶ ಸ್ಟೃಯಾಗಿದ್ದಾದರೂ ಯಾಕೆ ಎಂದು ಕಾರಣಗಳನ್ನು ಹುಡುಕುತ್ತಾ ಹೊರಟರೆ ದಿಗ್ಭ್ರಮೆ ಹುಟ್ಟಿಸುವ ವಿಚಾರಗಳು ಎದುರಾಗುತ್ತವೆ; ಆಡಳಿತ ಚುಕ್ಕಾಣಿ ಹಿಡಿದವರು, ಬೃಹತ್ ಮಹಾನಗರ ಪಾಲಿಕೆಯಂತಹ ಸ್ಥಳೀಯ ಆಡಳಿತ ಸಂಸ್ಥೆಗಳನ್ನು ನಡೆಸುವರು ಮಾವಳ್ಳಿಪುರದಂತಹ ಹಳ್ಳಿಗಳ ಜನರ ಬಗ್ಗೆ ತೋರಿದ ಅಸಡ್ಡೆಗಳು, ಹೃದಯ ಹೀನ ಮನಸ್ಥಿತಿಗಳು, ಸಾರ್ವಜನಿಕ ದುಡ್ಡಿನ ಮೇಲಿನ ಅವರ ಹಪಹಪಿಕೆ ಮತ್ತು ಇದೆಲ್ಲದ್ದಕ್ಕೆ ಅಧಿಕಾರದ ದುರುಪಯೋಗಗಳ ಬ್ರಹ್ಮಾಂಡ ದರ್ಶನವಾಗುತ್ತದೆ. ಮಾತ್ರವಲ್ಲ ಇವೆಲ್ಲ ಇಲ್ಲಿಗೇ ಮುಂದುವರೆದರೆ ಮುಂಬರುವ ವರ್ಷಗಳಲ್ಲಿ ಬೆಂಗಳೂರು ಮತ್ತು ಇನ್ನಿತರ ದೊಡ್ಡ ನಗರಗಳ ಸಮಾನ್ಯ ಜನರಿಗೆ, ಮಾವಳ್ಳಿಪುರದಂತಹ ನೂರಾರು ಹಳ್ಳಿಗಳ ಜನರಿಗೆ ಬಂದೊದಗಲಿರುವ ದುರ್ದಿನಗಳ ಮುನ್ಸೂಚನೆಯೂ ಸಿಗುತ್ತದೆ.
ಕಸದ ವಿಷವನ್ನು ಹಳ್ಳಿಗಳಿಗೆ ಉಣಿಸುತ್ತಿರುವ ಈ ವ್ಯವಸ್ಥೆಯೇ ಒಂದು ವಿಷಚಕ್ರವಾಗಿ ಪರಿಣಮಿಸಿದ ರೀತಿಯನ್ನು ಮಾವಳಿಪುರದ ಉದಾಹರಣೆಂದಲೇ ನೋಡುವುದೊಳಿತು.
ಈಗ್ಗೆ ಹತ್ತು ವರ್ಷಗಳ ಹಿಂದೆ ಬೆಂಗಳೂರು ನಗರದಲ್ಲಿ ಪ್ರತಿದಿನ ಸಂಗ್ರಹವಾಗುವ ಕಸವನ್ನು ಸುರಿಯಲು ನಗರ ಪಾಲಿಕೆ ಒಂದು ಕಾನೂನುಬಾಹಿರ ದಾರಿಯನ್ನು ಕಂಡುಕೊಂಡಿತ್ತು. ಅದೇನೆಂದರೆ, ಯಲಹಂಕ ಹೋಬಳಿಯ ಸುಬೇದಾರ್ ಪಾಳ್ಯದ ಬೈಲಪ್ಪ ಎಂಬುವವರ ಜಮೀನಿನಲ್ಲಿ ಆ ಕಸವನ್ನು ಸುರಿಯಲು ಅದು ಕರಾರು ಪತ್ರ ಮಾಡಿಕೊಂಡಿತ್ತು. ಅದು ಕೂಡ ಕಾವಲ್‌ಬಂಡೆ ಅರಣ್ಯಪ್ರದೇಶದ ಜಾಗವನ್ನು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಯಾಮಾರಿಸಿಯೋ ಅಥವಾ ಅವರ ಕೈಬಿಸಿಮಾಡಿಯೋ ಸುಳ್ಳುದಾಖಲೆಗಳ ಮೂಲಕ ಬೈಲಪ್ಪ ತನ್ನ ಹೆಸರಿಗೆ ಮಾಡಿಕೊಂಡಿದ್ದ ಜಮೀನಾಗಿತ್ತು. ದಿನನಿತ್ಯ ನೂರಾರು ಲಾರಿಗಳು ಕಸತುಂಬಿಕೊಂಡು ಬಂದು ಸುರಿದು ಬೆಂಕಿ ಹಚ್ಚಿಹೋಗುವ ಪರಿಪಾಠ ಶುರುಮಾಡಿಕೊಂಡಿದ್ದರು. ಪರಿಣಾಮವಾಗಿ ಈ ಪ್ರದೇಶದ ಸುತ್ತಲಿನ ಗಾಳಿ, ನೀರು ಮಲಿನಗೊಂಡು ಜನರ ಆರೋಗ್ಯದ ಮೇಲೆ ವಿಪರೀತ ಆರೋಗ್ಯ ಸಮಸ್ಯೆಗಳು ಆರಂಭವಾದವು. ಜನರ ಪ್ರತಿರೋಧವೂ ಎದುರಾತು. ಆ ಪ್ರತಿರೋಧಕ್ಕೆ ಬೈಲಪ್ಪ ಜನರ ಮೇಲೆ ಗೂಂಡಾಗಿರಿಯನ್ನು ನಡೆಸಿದ್ದ. ಕೊನೆಗಂತೂ ಆತನ ದೌರ್ಜನ್ಯ ಕೊನೆಗೊಂಡು ೨೦೦೪ರಲ್ಲಿ ಬಿಬಿಎಂಪಿಯು ಪಕ್ಕದ ಮಾವಳಿಪುರದ ಸರ್ವೆ ನಂ ೮ರ ೧೦೦ ಎಕರೆ ಜಮೀನಿನಲ್ಲಿ ಅಧಿಕೃತವಾಗಿ ಕಸವಿಲೇವಾರಿ ಘಟಕವೊಂದನ್ನು ಸ್ಥಾಪಿಸಲು ಹೈದರಾಬಾದ್ ಮೂಲದ ರಾಮ್‌ಕಿ ಎಂಬ ಖಾಸಗಿ ಕಂಪನಿಗೆ ಗುತ್ತಿಗೆ ನೀಡಿತು. ಅಲ್ಲಿಂದಾಚೆಗೆ ಸುತ್ತಮುತ್ತಲ ಹಳ್ಳಿಯ ಜನರಿಗೆ ಬೆಂಕಿಂದ ಬಾಣಲೆಗೆ ಹಾರಿದ ಅನುಭವವಾಗುತ್ತಾ ಹೋತು. ಈ ರಾಮ್‌ಕಿ ಕಂಪನಿಯು ನೆಪಮಾತ್ರಕ್ಕೆ ಒಂದು ಕಸಸಂಸ್ಕರಣಾ ಘಟಕವನ್ನು ಸ್ಥಾಪಿಸಿ ಪ್ರತಿ ಲೋಡು ಲಾರಿಗೆ ಬಿಬಿಎಂಪಿಂದ ೩೦೦ ರೂಪಾಗಳಂತೆ ಇದುವರೆಗೆ ನೂರಾರು ಕೋಟಿ ರೂಪಾಗಳನ್ನು ನುಂಗಿ ನೀರುಕುಡಿದಿದೆ. ಈಗ ಮಾವಳ್ಳಿಪುರದ ಈ ಜಾಗದಲ್ಲಿ ಇದುವರೆಗೆ ಸಂಗ್ರಹವಾಗಿರುವ ಒಟ್ಟು ಕಸ 22,00,000 ಟನ್ ಎಂದು ಅದಾಜಿಸಲಾಗಿದೆ! ಈ ಕಸದ ಬೆಟ್ಟದ ಮೇಲೆ ನಿಂತರೆ ಅಲ್ಲಿಂದ ಬಹುದೂರದ ಬೆಂಗಳೂರಿನ ಪ್ರದೇಶಗಳೂ ಕಾಣುತ್ತವೆ! ಒಟ್ಟು ಕಸದಲ್ಲಿ ರಾಮ್‌ಕಿ ಕಂಪನಿ ಸಂಸ್ಕರಣೆ ಮಾಡಿ ಹಾಕಿರುವುದು ಕೇವಲ 15,000 ಟನ್‌ಗಳಷ್ಟು ಮಾತ್ರ!
ಅಕ್ಷರಶಃ ಬೆಟ್ಟದಂತಿರುವ ಈ ಕಸ ಅಂದಿನಿಂದಲೂ ಅನೇಕ ವಿಷಕಾರಿ ಅನಿಲ-ದ್ರವಗಳನ್ನು ಸ್ಟೃಸುತ್ತಾ ಸುತ್ತಮುತ್ತಲ ಪ್ರದೇಶವನ್ನು ಮಲಿನಗೊಳಿಸುತ್ತಾ ಬಂದಿದೆ! ಸುತ್ತಮುತ್ತಲಿನ ಶಿವಕೋಟೆ, ಕುರುಬರಹಳ್ಳಿ, ರಾಮಗೊಂಡನಹಳ್ಳಿ ಮುಂತಾದ ಹತ್ತಾರು ಹಳ್ಳಿಗಳ ಕೃಕರ ಬದುಕು ಇನ್ನಿಲ್ಲಂತೆ ಘಾಸಿಗೊಂಡಿದೆ. ಬೆಂಗಳೂರಿನ ಗಲ್ಲಿಗಲ್ಲಿಗಳ ತರಹೇವಾರಿ ತ್ಯಾಜ್ಯಗಳು ಈ ಊರಿನಲ್ಲಿ ಪರ್ವತದೋಪಾದಿಯಲ್ಲಿ ಪೇರಿಸುತ್ತಾ ಹೋದಂತೆ ಸೊಳ್ಳೆ, ನೊಣಗಳು, ಕ್ರಿಮಿಕೀಟಗಳ ಕಾಟ ವಿಪರೀತ ಹೆಚ್ಚಿ ನಾನಾ ಖಾಲೆಗಳಿಗೆ ಜನರು ಈಡಾಗಿದ್ದಾರೆ. ಅಲ್ಲಿಂದ ಹತ್ತಾರು ಕಿಲೋಮೀಟರ್ ದೂರದ ಊರುಗಳಲ್ಲಿಯೂ ದುರ್ವಾಸನೆ ಜನಜೀವನವನ್ನು ಅಸಹನೀಯಗೊಳಿಸಿದೆ. ಕಸದ ಗುಡ್ಡದಡಿಂದ ಸೋರಿದ ವಿಷಕಾರಿ ದ್ರವ (ಅದನ್ನು ಲೀಚೆಟ್ ಎನ್ನಲಾಗುತ್ತದೆ) ಅಂತರ್ಜಲದಲ್ಲಿ ಸೇರಿಕೊಂಡು ಕೆಳಭಾಗದ ಹಳ್ಳಿಗಳ ಕೊಳವೆಬಾವಿಗಳಲ್ಲಿ, ನೀರಿನ ಕಾಲುವೆಗಳಲ್ಲಿ ಮತ್ತು ಶಿವಕೋಟೆಯ ಕೆರೆಯಲ್ಲಿ ಸೇರಿಕೊಂಡು ಜನರು ತೀವ್ರ ಅಸ್ವಸ್ಥರಾದರು. ಈ ದ್ರವವೆಲ್ಲವೂ ಮುಂದೆ ಹರಿದು ಅರ್ಕಾವತಿ ನದಿಯ ಅಚ್ಚುಕಟ್ಟನ್ನು ಸೇರುವುದರಿಂದ ವಿಷವು ಅಲ್ಲಿಗೂ ಮುಂದುವರೆಯುತ್ತ್ತಿದೆ. ಈಗಾಗಲೇ ಡೆಂಘಿ, ಕ್ಯಾನ್ಸರ್, ಕಿಡ್ನಿ ಖಾಲೆ, ವೈರಲ್ ಫಿವರ್‌ನಂತಹ ಖಾಲೆಗಳಿಗೀಡಾಗಿ ಎಂಟು ಜನರು ಜೀವಕಳೆದುಕೊಂಡಿದ್ದಾರೆ. ಇಡೀ ಪ್ರದೇಶದ ಕೃಯ ಮೇಲೆಯೂ ಈ ಕಸದ ವಿಷ ಅನಾಹುತಕಾರಿ ಪರಿಣಾಮವನ್ನುಂಟುಮಾಡಿದೆ. ರೈತರ ಹೊಲಗಳಲ್ಲಿ ರಾಗಿಯೊಂದನ್ನು ಹೊರತುಪಡಿಸಿ ಮತ್ತಿನ್ನಾವ ಬೆಳೆಯೂ ಉತ್ತಮ ಇಳುವರಿ ನೀಡುತ್ತಿಲ್ಲ. ದ್ರಾಕ್ಷಿ ತೋಟಗಳ ದ್ರಾಕ್ಷಿ ಗೊಂಚಲೊಂದರಲ್ಲಿ ಒಂದೇ ಬಾರಿಗೆ ಹಣ್ಣುಗಳಾಗುವುದಿಲ್ಲ. ಚೆಂಡುಹೂವಿನ ಬೆಳೆಗೂ ಸಾವಿರಾರು ತರದ ಕ್ರಿಮಿಕೀಟಗಳು ದಾಳಿಮಾಡಿ ತೀವ್ರ ನಷ್ಟವನ್ನುಂಟುಮಾಡುತ್ತಿವೆ ಎಂದರೆ ಪರಿಸ್ಥಿತಿಯ ಭೀಕರತೆಯನ್ನು ಯಾರು ಬೇಕಾದರೂ ಊಹಿಸಬಹುದು.
ಬೆಂಗಳೂರಿನ ಕಸವೆಲ್ಲ ಹೋಗಿ ಸೇರುತ್ತಿರುವುದು ಹೀಗೆ... |
ಇಲ್ಲಿ ಗಮನಿಸಬೇಕಾದ ವಿಷಯವೊಂದಿದೆ. ಸುಬೇದಾರ್ ಪಾಳ್ಯದ ಬೈಲಪ್ಪನ ಹೊಲದಲ್ಲಿ ಮತ್ತು ಮಾವಳ್ಳಿಪುರದ ಈ ಕಸ ವಿಲೇವಾರಿ ಘಟಕದಲ್ಲಿ ಕಸವನ್ನು ಬಿಬಿಎಂಪಿ ಸುರಿಯಲು ಆರಂಭಿಸುವುದಕ್ಕೆ ಎರಡು ವರ್ಷ ಮೊದಲೇ ಈ ದೇಶದಲ್ಲಿ ಕಸ ವಿಲೇವಾರಿಯ ಕುರಿತು ನಿಯಮಗಳು ರಚನೆಯಾಗಿದ್ದವು. 2000ನೇ ಇಸವಿಯಲ್ಲಿ ಕೇಂದ್ರ ಸರ್ಕಾರವು ಮುನಿಸಿಪಲ್ ಘನತ್ಯಾಜ್ಯ (ನಿರ್ವಹಣೆ) ನಿಯಮಗಳು 2000ನ್ನು (ಎಂಎಸ್‌ಡಬ್ಲ್ಯೂ ನಿಯಮಗಳು) ರಚಿಸಿ ಅವನ್ನು ಪಾಲಿಸಲು ರಾಜ್ಯಸರ್ಕಾರಗಳಿಗೆ ಆದೇಶ ನೀಡಿತ್ತು. ವಾಸ್ತವದಲ್ಲಿ ಈ ನಿಯಮಗಳ ಯಾವ ಅಂಶವನ್ನೂ ಈ ಕಸ"ಲೇವಾರಿ ಘಟನಗಳಲ್ಲಿ ಪಾಲಿಸಲಾಗಿಲ್ಲ ಎನ್ನುವುದು ಮೇಲ್ನೋಟಕ್ಕೇ ತಿಳಿಯುತ್ತದೆ.
ಅಂತಿಮವಾಗಿ ಮಾವಳ್ಳಿಪುರದ ಜನರ ಹೋರಾಟಕ್ಕೆ ಬೆಲೆ ಬಂದಿದ್ದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಚೇರ್ಮನ್ ಆದ ಸದಾಶಿವಯ್ಯನವರು 2012ರ ಜುಲೈ 11ರಂದು, ಬಿಬಿಎಂಪಿಯ ಆಯುಕ್ತ, ಬಿಬಿಎಂಪಿ ಆರೋಗ್ಯ "ಭಾಗದ ಡೆಪ್ಯೂಟಿ ಕಮಿಷನರ್ ಮತ್ತು ರಾಮ್‌ಕಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಿಗೆ ನೋಟೀಸು ನೀಡಿ ಮಾವಳ್ಳಿಪುರದಲ್ಲಿ ಕೂಡಲೇ ಕಸ ಸುರಿಯುವುದನ್ನು ನಿಲ್ಲಿಸಬೇಕೆಂದು ಕಟ್ಟುನಿಟ್ಟಾಗಿ ಹೇಳಿದ ಮೇಲೆಯೇ. ಇಲ್ಲವಾದಲ್ಲಿ ಎಲ್ಲರ ಮೇಲೆ ಕಾಯ್ದೆಯನ್ವಯ ಕ್ರಿಮಿನಲ್ ಕೇಸುಗಳನ್ನು ದಾಖಲಿಸುವ ಎಚ್ಚರಿಕೆಯನ್ನೂ ಅವರು ನೀಡಿದ್ದರು. ತಕ್ಷಣ ಉಚ್ಛ ನ್ಯಾಯಾಲವೂ ಬಿಬಿಎಂಪಿಗೆ ಛೀಮಾರಿ ಹಾಕಿತು. ಈಗ ಸ್ಥಳೀಯರ ಪ್ರತಿಭಟನೆಯ ನಂತರದಲ್ಲಿ ಮತ್ತು ಜನರ ಪ್ರತಿಭಟನೆ ಮಾಧ್ಯಮಗಳಲ್ಲಿ ಪ್ರಚಾರವಾದೊಡನೆ ರಾಮ್‌ಕಿ ತನ್ನ ಕೆಸಲವನ್ನು ನಿಲ್ಲಿಸಿತಲ್ಲದೇ ಬಿಬಿಎಂಪಿಯ ಕಸದ ಲಾರಿಗಳೂ ಅಲ್ಲಿ ಕಸಸುರಿಯುವುದನ್ನು ನಿಲ್ಲಿಸಿದವು. ಕೆಲವಾರು ವರ್ಷಗಳ ಇಡೀ ಹೋರಾಟದಲ್ಲಿ ಮಹತ್ತರ ಪಾತ್ರವಹಿಸಿದ ಹಾಲಿ ಗ್ರಾಮ ಪಂಚಾಯತಿ ಸದಸ್ಯ ಮತ್ತು ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತ ಶ್ರೀನಿವಾಸ ಎಂಬ ಯುವ ನಾಯಕ ವಹಿಸುತ್ತಿರುವ ಪರಿಶ್ರಮ ಮತ್ತು ತೋರಿದ ಧೈರ್ಯದ ಕುರಿತು ಮಾವಳ್ಳಿಪುರ ಮತ್ತು ಸುತ್ತಮುತ್ತಲ ಹಳ್ಳಿಗಳ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಇವರೆಲ್ಲರ ಹೋರಾಟಕ್ಕೆ ಬೆಂಬಲವಾಗಿ ಎನ್ವಿರಾನ್‌ಮೆಂಟ್ ಸಪೋರ್ಟ್ ಗ್ರೂಪ್ ಎಂಬ ಪರಿಸರ ಸಂಘಟನೆಯೂ ಸಾಕಷ್ಟು ಶ್ರಮವಹಿಸಿದೆ.
ಕಸ ಸುರಿಯುವುದು ನಿಂತಿರುವ ಮಾತ್ರಕ್ಕೆ ಅಲ್ಲೀಗ ಸಮಸ್ಯೆಯೇನೂ ಸಂಪೂರ್ಣವಾಗಿ ಪರಿಹಾರವಾಗಿಲ್ಲ. ಕಸವನ್ನು ಸಂಸ್ಕರಿಸದೇ ಹತ್ತಾರು ವರ್ಷಗಳ ಕಾಲ ಸುರಿದು ಕಸದ ಬೆಟ್ಟವನ್ನೇ ನಿರ್ಮಿಸಲಾಗಿದ್ದು ಅದು ಮುಂದೆಯೂ ಅನಾಹುತಗಳನ್ನು ಸ್ಟೃಸುತ್ತಲೇ ಹೋಗಲಿದೆ. ಈಗ ಸಮಸ್ಯೆಗೆ ತೇಪೆ ಹಾಕುವ ಕ್ರಮವೆಂಬಂತೆ ಬಿಬಿಎಂಪಿ ಆ ಕಸದ ಗುಡ್ಡೆಯ ಮೇಲೆ ಮಣ್ಣನ್ನು ಹಾಕಿಸುತ್ತಿದೆ. ಒಂದು ಸರಿಯಾದ ಮಳೆ ಬಂತೆಂದರೆ ಮುಗಿತು. ಆ ಮಣ್ಣೆಲ್ಲಾ ಕೆಸರಾಗಿ ಹರಿದು, ಕಸದ ರಾಶಿ ಬಿರುಕು ಬಿಟ್ಟು ಒಳಗಡೆಯ ಕಸವೂ ಮೇಲೇಳತೊಡಗುತ್ತದೆ. ಎಲ್ಲಿಯವರೆಗೆ ಸಂಪೂರ್ಣ ಕಸವನ್ನು ತೆಗೆದು ಹಾಕುವುದಿಲ್ಲವೋ ಅಲ್ಲಿಯವರೆಗೂ ಜನರು ನಾನಾ ತೊಂದರೆಗೊಳಗಾಗುವುದು ತಪ್ಪುವುದಿಲ್ಲ. ಒಮ್ಮೆ ಈ ಕಸದ ಗುಡ್ಡೆಯನ್ನು ನೋಡಿದರೆ ಇಡೀ ಬೆಂಗಳೂರಿಗೆ ನಾನಾ ರೋಗಗಳನ್ನು ಯಥೇಚ್ಛವಾಗಿ ಹರಡಬಲ್ಲ ಗಂಗೋತ್ರಿಯೇ ಆಗಿದೆ ಎಂಬ ಭಾವನೆ ಬರುವುದು ಖಂಡಿತ.
ಬೆಂಗಳೂರಿನ ಕಸದ ಕೂಪಕ್ಕೆ ಬಲಿಯಾಗಿ ಹೆಚ್ಚೂಕಡಿಮೆ ಮಾವಳ್ಳಿಪುರದಂತಹ ಸ್ಫೋಟಕ ಪರಿಸ್ಥಿತಿಯನ್ನು ಎದುರಿಸುತ್ತಿರುವ ಮತ್ತೊಂದು ಹಳ್ಳಿ ಮಂಡೂರು. ಬೆಂಗಳೂರು ಪೂರ್ವ ತಾಲ್ಲೂಕಿನ ಬಿದರಹಳ್ಳಿ ಹೋಬಳಿಯ ಮಂಡೂರು ಮತ್ತು ಸುತ್ತಮುತ್ತಲಿನ ಹಳ್ಳಿಗಳ ಕಥೆ ಮತ್ತೂ ದುರಂತಮಯ. ಇಲ್ಲಿ ಸಾಗರದೋಪಾದಿಯಲ್ಲಿ ಅನಾಥವಾಗಿ ಬಿದ್ದುಕೊಂಡಿರುವ ಕಸದ ರಾಶಿಯಿಂದಾಗಿ ಜನರು ಸಹ ಇನ್ನಿಲ್ಲದ ಅನಾರೋಗ್ಯದ ತೊಂದರೆಗಳಿಗೆ ಈಡಗುತ್ತಿದ್ದಾರೆ. ಸುತ್ತಲ ಗ್ರಾಮಸ್ಥರು ನಾನಾ ರೀತಿಯ ಚರ್ಮರೋಗಗಳಿಂದ ತತ್ತರಿಸಿಹೋಗಿದ್ದಾರೆ. ತೆರೆದ ವಾಹನಗಳು ದಾರಿಯುದ್ದಕ್ಕೂ ಚೆಲ್ಲುವ ಕಸದಿಂದಾಗಿ ಸೊಳ್ಳೆ, ನೊಣಗಳು ಜನರ ನೆಮ್ಮದಿ ಕೆಡಿಸಿವೆ. ಊರಿನ ಮೂರು ಶಾಲೆಗಳಲ್ಲಿ ವಿದ್ಯಾರ್ಥಿಗಳು ನೆಮ್ಮದಿಂದ ಪಾಠವನ್ನೂ ಕೇಳಲಾರದಷ್ಟು ದುರ್ವಾಸನೆ ಮೂಗಿಗೆ ಬಡಿಯುತ್ತಿದೆ. ಇಲ್ಲಿ ಸುರಿಯುವ ಕಸದಲ್ಲಿಲ್ಲಿ ಏನೇನಿರುತ್ತದೆ ಎಂದು ಊಹಿಸಬೇಕಾದರೆ ಆ ಕಸದ ಗುಡ್ಡೆಯ ಮೇಲಿರುವ ಸಾವಿರಾರು ಬೀದಿನಾಗಳನ್ನೂ, ರಣಹದ್ದು, ಗಿಡುಗ, ಬೆಳ್ಳಕ್ಕಿಗಳ ಹಿಂಡುಗಳನ್ನು ನೀವು ನೋಡಿಕೊಂಡು ಬರಬೇಕು. ಸುತ್ತಲಿನ ಹಳ್ಳಿಗಳಲ್ಲಿಯೂ ಬೀದಿನಾಗಳ ಹಾವಳಿ ಅಷ್ಟಲ್ಲ. ಕಾನೂನಿನ ಪ್ರಕಾರ ಬೀದಿನಾಗಳು ಕಸ ವಿಲೇವಾರಿ ಸುತ್ತಮುತ್ತಲು ಸ್ಥಳದಲ್ಲಿ ಕಾಣಿಸಕೂಡದು! ಆದರೆ ಇಲ್ಲಿ ತದ್ವಿರುದ್ಧ ಸ್ಥಿತಿ.
ಮಾವಳ್ಳಿಪುರ-ಕುರುಬರಹಳ್ಳಿಗಳಲ್ಲಿ ಪೊಲೀಸರು |
ವಿಪರ್‍ಯಾಸದ ಸಂಗತಿಯೊಂದಿದೆ. ಪಂಚಾಯತ್ ರಾಜ್ಯ ಕಾಯ್ದೆಯ ಪ್ರಕಾರ ಅಧಿಕಾರವು ವಿಕೇಂದ್ರೀಕರಣಗೊಂಡು ಸ್ಥಳೀಯ ಆಡಳಿತ ಅಂಗಗಳಿಗೆ ಹೆಚ್ಚು ಅಧಿಕಾರವಿರಬೇಕು. ಆದರೆ, ಮಂಡೂರಿನ ಗ್ರಾಮಪಂಚಾಯ ವಿಷಯದಲ್ಲಿ ಅಂತಹ ಮಾತುಗಳು ಅರ್ಥ ಕಳೆದುಕೊಂಡಿವೆ. ಅದೆಷ್ಟು ಸಲ ಇಲ್ಲಿನ ಗ್ರಾಮಪಂಚಾಯತಿಯು ಸರ್ವಾನುಮತದಿಂದ ಇಲ್ಲಿ ಕಸದ ವಿಲೇವಾರಿಯನ್ನು ರದ್ದುಗೊಳಿಸಬೇಕೆಂದು ನಿರ್ಣಯ ಕೈಗೊಂಡು, ಶ್ರೀನಿವಾಸ ಗಾಯತ್ರಿ ಸೋರ್ಸಸ್ ಕಂಪನಿಯ ಸಂಸ್ಕರಣಾ ಘಟಕಕ್ಕೆ ಪರವಾನಿಗೆ ನಿರಾಕರಿಸುತ್ತಾ ಬಂದಿದ್ದರೂ ಗ್ರಾಮಸಭೆಯ ನಿರ್ಣಯಕ್ಕೆ ಕವಡೆಕಾಸಿನಷ್ಟೂ ಬೆಲೆಲ್ಲದಂತಾಗಿದೆ. 2006ರಲ್ಲೇ ಶ್ರೀನಿವಾಸ ಗಾಯತ್ರಿ ರಿಸೋರ್ಸ್ ಸಂಸ್ಥೆಯ ಗುತ್ತಿಗೆ ಮುಗಿದಿದಿದ್ದರೂ ಅದು ಪರವಾನಗಿ ನವೀಕರಣ"ಲ್ಲದೆಯೂ ಇನ್ನೂ ತನ್ನ ಕೆಲಸ ಮಾಡುತ್ತಲೇ ಮುಂದುವರೆದಿದೆ!
ಮಾವಳ್ಳಿಪುರದ ಜನರು ಬೀದಿಗಿಳಿದು ಹೋರಾಡಿ ಯುಶಸ್ಸು ಕಾಣತೊಡಗಿದಂತೆಯೇ ಈಗ ಮಂಡೂರಿನ ಜನರೂ ಬೀದಿಗಿಳಿದಿದ್ದಾರೆ. ಆದರೆ ಇಲ್ಲಿನ ಸಮಸ್ಯೆ ಆಡಳಿತ ಪಕ್ಷದ್ದು. "ನಮಗೆ ಊರಿನ ಹಿತವೂ ಮುಖ್ಯವಾಗಿರುವ ಸಂದರ್ಭದಲ್ಲಿಯೇ ಪಕ್ಷದ ಮತ್ತು ನಮ್ಮ ಶಾಸಕರ ಹಿತವನ್ನೂ ನೋಡಿಕೊಂಡು ತಾತ್ಕಾಲಿಕವಾಗಿ ತಡೆದುಕೊಂಡಿರಬೇಕಾಗಿದೆ" ಎನ್ನುತ್ತಾರೆ ಗ್ರಾಮಪಂಚಾಯ್ತಿ ಸದಸ್ಯ ತಮ್ಮಣ್ಣ. ಮೊದಲು ಜೇಡಿಎಸ್‌ನಲ್ಲಿದ್ದ ತಮ್ಮಣ್ಣನವರು ಈಗ ಬಿಜೆಪಿಯಲ್ಲಿದ್ದಾರೆ. ತಮ್ಮ ಪಕ್ಷವೇ ಅಧಿಕಾರದಲ್ಲಿರುವಾಗ, ಅದರಲ್ಲೂ ತಮ್ಮ ಕ್ಷೇತ್ರದ ಶಾಸಕರೇ ರಾಜ್ಯದ ಆರೋಗ್ಯ ಸಚಿವರೂ ಆಗಿರುವಾಗ ತಮ್ಮ ಹಳ್ಳಿಯ ಮತ್ತು ಇತರ ಸುತ್ತಮುತ್ತಲ ಹಳ್ಳಿಗಳ ಆರೋಗ್ಯಕ್ಕೋಸ್ಕರ ಪಕ್ಷ ಮತ್ತು ಶಾಸಕರ ಹಿತವನ್ನು ಬಲಿಕೊಡುವುದಕ್ಕೆ ಅವರಿಗೆ ಕಷ್ಟವಾಗುತ್ತಿದೆ. ಆದರೂ, ಶಾಸಕರೊಂದಿಗೆ ತಮ್ಮ ಹಕ್ಕೊತ್ತಾಯವನ್ನು ತಿಳಿಸಿ ಅವರಿಂದಲೂ ಶಾಸಕರಿಂದಲೂ ಒಂದಿಷ್ಟು ಭರವಸೆಗಳನ್ನು ಪಡೆದುಕೊಂಡಿದ್ದಾರೆ. ಅವು ಒಂದು ರೀತಿಯಲ್ಲಿ ರಾಜಕಾರಣಿಗಳು ಚುನಾವಣೆಯ ಸಂದರ್ಭದಲ್ಲಿ ನೀಡಿ ಮರೆತಬಿಡುವ ಆಸ್ವಾಸನೆಗಳಂತೆಯೇ ಇವೆ! "ಕಸ ಸುರಿಯುವುದಕ್ಕೆ ಬೇರೆ ಕಡೆ ವ್ಯವಸ್ಥೆಯಾಗುವ ತನಕ ಒಂದು ತಿಂಗಳು ಮಾತ್ರ ಇಲ್ಲಿ ಕಸ ಸುರಿಯುವುದಾಗಿಯೂ ಹಾಗೂ ಇನ್ನೊಂದು ವರ್ಷದೊಳಗೆ ಈಗಾಗಲೇ ಸುರಿದಿರುವ ಕಸವನ್ನೆಲ್ಲಾ ಬೇರೆ ಕಡೆ ಸಾಗಹಾಕುವುದಾಗಿಯೂ ಶಾಶಕರು ಭರವಸೆ ನೀಡಿದ್ದಾರೆ" ಎನ್ನುತ್ತಾರೆ ಪಂಚಾಯ್ತಿ ಕಾರ್ಯದರ್ಶಿ ವೀರೇಗೌಡ. 2006ರಿಂದಲೂ ಇಲ್ಲಿ ಕಸ ಸುರಿಯುತ್ತಾ ಬರಲಾಗಿದೆ. ಪರಿಣಾಮವಾಗಿ ಮಾವಳ್ಳಿಪುರದಂತೆ ಇಲ್ಲಿಯೂ ಹತ್ತಾರು ಮೈಲಿ ದೂರದವರೆಗೂ ದುರ್ವಾಸನೆ ಬೀರುವ ಕಸದ ಬೃಹತ್ ಬೆಟ್ಟಗಳೇ ನಿರ್ಮಾಣವಾಗಿವೆ. ನೂರಾರು ಜನ ವಿವಿಧ ರೀತಿಯ ಖಾಯಿಲೆಕಸಾಲೆಗಳಿಗೆ ಬಲಿಯಾಗಿದ್ದಾರೆ. ಅವರ ಸಹನೆಯ ಕಟ್ಟೆಯೂ ಈಗ ಒಡೆದುಹೋಗಿದೆ. ಪರಿಣಾಮವಾಗಿ ಮಂಡೂರು ಮತ್ತು ಸುತ್ತಲಿನ ಹಳ್ಳಿಗಳು ಬಿಬಿಎಂಪಿಯ ವಿರುದ್ಧ ಸ್ಫೋಟಗೊಳ್ಳಲು ಸಜ್ಜಾಗಿ ನಿಂತಿವೆ. ಆಡಳಿತ ನಡೆಸುವವರು ಸಮಸ್ಯೆಯನ್ನು ಸರಿಯಾದ ರೀತಿಯಲ್ಲಿ ನಿರ್ವ"ಸದೇ ಹೋದರೆ ಪರಿಸ್ಥಿತಿ ಕೈಮೀರಬಹುದು. ಅದನ್ನು 'ನಿಯಂತ್ರಿಸುವುದಕ್ಕೆ' ಖಾಕಿಪಡೆ ಅಮಾಯಕ ರೈತರ ಮೇಲೆ ಹಲ್ಲೆ ನಡೆಸಬಹುದು.
ಈಗ ಸಮಸ್ಯೆ ತೀವ್ರಗೊಂಡು ಸ್ಥಳೀಯರಿಂದ ಒತ್ತಡ ಹೆಚ್ಚಾಗತೊಡಗಿದಂತೆ, ಸುಂದರ ನಗರಿ ಬೆಂಗಳೂರಿನ ರಸ್ತೆಗಳಲ್ಲಿ ಕಸದ ದೊಡ್ಡ ದೊಡ್ಡ ರಾಶಿಗಳು ನಾಗರೀಕರ ಕಣ್ಣುಕುಕ್ಕಿ, ವಾಸನೆ ಮೂಗಿಗೆ ಬಡಿದು ಜನರ ಆಕ್ರೋಶಕ್ಕೆ ಕಾರಣವಾಗತೊಡಗಿದಂತೆ ಕಕ್ಕಾಬಿಕ್ಕಿಯಾಗಿರುವ ಬಿಬಿಎಂಪಿ ಮತ್ತು ಸರ್ಕಾರ ತರಹೇವಾರಿಯ ಯೋಜನೆಗಳನ್ನು ಪ್ರಕಟಿಸಿವೆ. ಇನ್ನಷ್ಟು ಕಸವಿಲೇವಾರಿ ಜಾಗಗಳನ್ನು ಗುರುತಿಸಿರುವುದಾಗಿ ಹೇಳುತ್ತಿದ್ದಾರೆ. ಆದರೆ ಕಸ ವಿಲೇವಾರಿ ಸಮಸ್ಯೆಯ ಮೂಲವನ್ನು ಬಗೆಹರಿಸದಿದ್ದರೆ ಇದು ಸಮಸ್ಯೆಯ ಸ್ಥಳಾಂತರವಾಗಬಹುದಷ್ಟೇ ವಿನಃ ಸಮಸ್ಯೆಯ ಪರಿಹಾರವಲ್ಲ. ಕಸವನ್ನು ಸಂಸ್ಕರಣೆಯ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ವೈಜ್ಞಾನಿಕ ದೃಷ್ಟಿಕೋನದಿಂದ ವಿಲೇವಾರಿ ಮಾಡದೇ ಹೋದರೆ ಬೆಂಗಳೂರಿನ ಕಸ ಇನ್ನಷ್ಟು ಮಾವಳ್ಳಿಪುರ, ಮಂಡೂರುಗಳನ್ನು ಸೃಷ್ಟಿಸುತ್ತದಷ್ಟೆ.
ಹಾಗೆ ನೋಡಿದರೆ ಬೆಂಗಳೂರನ್ನು ಆವರಿಸಿಕೊಂಡಿರುವ ಕಸದ ವಿಷವರ್ತುಲದಿಂದ ಮನಸ್ಸು ಮಾಡಿದರೆ ಹೊರಬರಲಾರದ್ದೇನಲ್ಲ. ಇಡೀ ಪ್ರಪಂಚದಲ್ಲಿ ಇಷ್ಟು ದೊಡ್ಡ ನಗರ ಅಂತ ಇರುವುದು ಬೆಂಗಳೂರು ಮಾತ್ರವಲ್ಲ. ಇದಕ್ಕಿಂತಲೂ ದೊಡ್ಡದಾದ ನಗರಗಳೂ ಇವೆ, ಚಿಕ್ಕದಾದ ನಗರಗಳೂ ಇವೆ. ಅಲ್ಲಿಯೂ ಪ್ರತಿದಿನ ಸಾವಿರಾರು ಮೆಟ್ರಿಕ್ ಟನ್ ಕಸ ಸ್ಟೃಯಾಗುತ್ತಲೇ ಇದೆ. ಆದರೆ, ಇಲ್ಲಿಯಂತೆಯೇ ಅಲ್ಲಿ ಸಮಸ್ಯೆ ಯಾಕೆ ಉಲ್ಬಣಿಸಿಲ್ಲ ಎಂದರೆ ಆ ನಗರಗಳ ಆಡಳಿತ ಅಂಗಗಳು ಕಸ"ಲೇವಾರಿಯನ್ನು ವೈಜ್ಞಾನಿಕವಾಗಿ ಮಾಡುತ್ತವೆ. ಅದೇ ರೀತಿ ಬೆಂಗಳೂರಿನಲ್ಲಿ ಮಾಡಲು ಏನು ಕೊರತೆ?
ರಾಜಕೀಯ ಇಚ್ಛಾಶಕ್ತಿ ಕೊರತೆ ಬಿಟ್ಟರೆ ಇನ್ನೇನಿಲ್ಲ. ಬೆಂಗಳೂರಿನಲ್ಲಿ ಕಸದ ವಿಲೇವಾರಿಗೆಂದು ರಚಿಸಿರುವ 60 ಬ್ಲಾಕ್‌ಗಳಲ್ಲಿ ಸ್ಥಳೀಯ ಕಾರ್ಪೊರೇಟರ್ ಮತ್ತು ಗುತ್ತಿಗೆದಾರರು, ಉಪಗುತ್ತಿಗೆದಾರರಿಗೆ ಸುಲಭವಾಗಿ ಕಾಸು ಸಂಪಾದಿಸಿಕೊಡುವ ಮೂಲವೇ ನಗರದ ಈ ಕಸ. ಈ ಸಮಸ್ಯೆ ಅಷ್ಟು ಸುಲಭವಾಗಿ ಬಗೆಹರಿದುಬಿಟ್ಟರೆ ಕಸದ ಲಾಭದ ರುಚಿಯುಂಡವರ ಆದಾಯಕ್ಕೆ ಕತ್ತರಿ ಬೀಳುತ್ತದೆ! ದುರಾದೃಷ್ಟವಶಾತ್ ನಮ್ಮ ಉಚ್ಛನ್ಯಾಯಾಲಯವೂ ಇದನ್ನು ಗುರುತಿಸುವಲ್ಲಿ "ಫಲಗೊಂಡು ಸಮಸ್ಯೆಯನ್ನು ಕೇವಲ ನಾಗರಿಕರ ಮೇಲೆಯೇ ಹಾಕುವ ಪ್ರಯತ್ನ ಮಾಡಿದ್ದು ವಿಷಾದನೀಯ. ಇದನ್ನೇ ನೆಪ ಮಾಡಿಕೊಂಡು ಸಚಿವ ಸುರೇಶ್ ಕುಮಾರ್ ಅವರೂ ನಾಗರಿಕರ ಮೇಲೆ ಕ್ರಮಕೈಗೊಳ್ಳುವ ಮಾತನ್ನೂ ಆಡಿದ್ದಾರೆ. ಅಂದಮಾತ್ರಕ್ಕೆ ನಾಗರಿಕರ ಪಾತ್ರ ಇಲ್ಲವೇ ಎಂಬುದು ಇದರರ್ಥವಲ್ಲ. ಸಮಸ್ಯೆಯಲ್ಲಿ ಅವರದ್ದೂ ಪಾಲಿದೆ. ಆದರೆ, ಪ್ರಧಾನ ಹೊಣೆಗಾರ ಮಾತ್ರ ಬಿಬಿಎಂಪಿ ಎಂಬುದನ್ನು ನಾವು ಮರೆಯಬಾರದು. ಕಸದ ವಿಲೇವಾರಿಯ ಕಾನೂನನ್ನೂ ಸಹ ಕಾರ್ಪೊರೇಷನ್ ಕಸದಂತೆಯೇ ಕೀಳಾಗಿ ಕಾಣುವ ಆಡಳಿತದ ಲಾಭಿಗಳೇ ಈ ಸಮಸ್ಯೆಯ ಸೂತ್ರದಾರರಾಗಿದ್ದು ಅವೇ ಸಮಸ್ಯೆಯ ಪರಿಹಾರಕ್ಕೆ ನಿಜವಾದ ತಡೆಗೋಲಾಗಿವೆ ಎಂಬ ವಾಸ್ತವ ಅಂಶವನ್ನು ಗುರುತಿಸದೇ ಹೋದರೆ ಸಮಸ್ಯೆಯ ಪರಿಹಾರ ಅಸಾಧ್ಯ.
ಸಮಸ್ಯೆಯ ಪರಿಹಾರಕ್ಕೆ ಹೊಸದಾದ ನೀತಿಗಳಾಗಲೀ, ಕಾನೂನುಗಳಾಗಲೀ ಬೇಕಿಲ್ಲ. ಈಗ ಚಾಲ್ತಿಯಲ್ಲಿರುವ ಕಾಯ್ದೆ, ನಿಯಮಗಳನ್ನೇ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತಂದರೆ ಸಮಸ್ಯೆ ತನ್ನಿಂದ ತಾನೇ ಬಗೆಹರಿದುಬಿಡುತ್ತದೆ. ಇದಕ್ಕಾಗಿ ೨೦೦೦ದಲ್ಲಿ ಬಂದ ನಿಯಮಗಳಿವೆ, ಸುಪ್ರೀಕೋರ್ಟ್ ನೇಮಿಸಿದ ಆಯೋಗದ ವರದಿದೆ, 2004ರಲ್ಲಿ ಸಾರ್ಕ್ ದೇಶಗಳು ಇದೇ ವಿಷಯದ ಕುರಿತು ಚರ್ಚಿಸಿ ತೆಗೆದುಕೊಂಡ ನಿರ್ಣಯಗಳಿವೆ. ಅದನ್ನೆಲ್ಲಾ ಈಗಾಗಲೇ ಹೇಳಿದಂತೆ ಅನುಷ್ಠಾನಗೊಳಿಸುವುದಕ್ಕೆ ಮನಸ್ಸಿರಬೇಕಷ್ಟೆ.
ಒಂದು ಉದಾಹರಣೆಯನ್ನು ನೋಡಿ. 2000ನೇ ಸಾಲಿನ ಮುನಿಸಿಪಲ್ ಘನತ್ಯಾಜ್ಯ ನಿಯಮವು ಕಸ ವಿಲೇವಾರಿಗೆ ಅನೇಕ ಕಟ್ಟುನಿಟ್ಟಿನ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವುದಕ್ಕೆ ಹೇಳುತ್ತದೆ. ಅದರ ಪ್ರಕಾರ ಕಸವನ್ನು ಸಂಗ್ರಹಿಸುವಾಗಲೇ ಜೈವಿಕ-ವೈದ್ಯಕೀಯ ಕಸ ಮತ್ತು ಕೈಗಾರಿಕಾ ಕಸಗಳನ್ನು ನಗರದ ಇನ್ನಿತರ ಕಸದೊಂದಿಗೆ ಬೆರೆಸುವಂತಿಲ್ಲ. ಹಸಿಕಸ ಮತ್ತು ಒಣಕಸವನ್ನು ಪ್ರತ್ಯೇಕವಾಗಿಯೇ ಸಂಗ್ರಹಿಸಬೇಕು. ಕಸವನ್ನು ಸುಡುವಂತಿಲ್ಲ. ಕಸ ಸಂಗ್ರಹಿಸಿಡುವ ಜಾಗದಲ್ಲಿ ಯಾವುದೇ ಅನಾರೋಗ್ಯಕರ ಪರಿಸ್ಥಿತಿ ಉಂಟಾಗಕೂಡದಂತೆ ಸಂಗ್ರಹಿಸಿಡಬೇಕು. ಕಸವನ್ನು ತೆರೆದ ವಾತಾವರಣಕ್ಕೆ ಮುಕ್ತವಾಗಿ ಇಡಕೂಡದು. ಕಸವನ್ನು ನೇರವಾಗಿ ಕೈಂದ ಮುಟ್ಟುವುದನ್ನು ನಿಷೇಧಿಸತಕ್ಕದ್ದು. ಅನಿವಾರ್ಯ ಸಂದರ್ಭಗಲ್ಲಿ ಸೂಕ್ತ ಮುನ್ನೆಚ್ಚರಿಕೆಗಳೊಂದಿಗೆ ನಡೆಸತಕ್ಕದ್ದು. ಸಂಸ್ಕರಿಸಿದ ಕಸವನ್ನು ಗುಂಡಿಗಳಲ್ಲಿ ಮುಚ್ಚಿಡಬೇಕು. ಅದಕ್ಕಾಗಿ ಅತಿಯಾದ ಪ್ರಮಾಣದ ಕಸವನ್ನು ಒಂದೇ ಕಡೆ ಸುರಿಯುವಂತಿಲ್ಲ. ಹಸಿಕಸವನ್ನು ಗೊಬ್ಬರ ಅಥವಾ ವಿದ್ಯುತ್ ತಯಾರಿಕೆಗೆ ಸೂಕ್ತ ತಂತ್ರಜ್ಞನದ ಮೂಲಕ ಬಳಸಬೇಕು. ಒಣಕಸವನ್ನು ಮರುಬಳಕೆಗೆ ಕಳು"ಸಬೇಕು. ಮರುಬಳಕೆಗೆ ಒಗ್ಗದ ಕಸವನ್ನು ಮಾತ್ರವೇ ಗುಂಡಿಗಳಲ್ಲಿ ಮುಚ್ಚಬೇಕು. ನೀರಿನ ಮೂಲಗಳಿರುವೆಡೆ, ಜನವಸತಿಗಳಿರುವೆಡೆ ಇಂತಹ ಗುಂಡಿಗಳನ್ನು ನಿರ್ಮಿಸುವಂತಿಲ್ಲ; ಸುತ್ತಮುತ್ತಲ ಪ್ರದೇಶಗಳಿಗೆ ಕಸದ ದುರ್ವಾಸನೆ ಹರಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು... ಇತ್ಯಾದಿ, ಇತ್ಯಾದಿ. ಈ ನಿಯಮಗಳನ್ನು ಬಿಬಿಎಂಪಿ ಎಷ್ಟರ ಮಟ್ಟಿಗೆ ಪರಿಪಾಲನೆ ಮಾಡಿದೆ ಎಂಬುದನ್ನು ಅರಿಯಬೇಕೆಂದರೆ ನೀವೊಮ್ಮೆ ಮಾವಳ್ಳಿಪುರ-ಮಂಡೂರುಗಳಿಗೆ ಹೋಗಿ ನೋಡಿ ಬರಬೇಕು. ವಿಷಗಾಳಿ ಸೇವಿಸಿ ಭೀಕರ ರೋಗಗಳಿಗೆ, ಕೊನೆಗೆ ಸಾಯುವುದಕ್ಕೂ ಸಿದ್ಧವಾದರೆ, ಆ ಎರಡೂ ಊರುಗಳಲ್ಲಿ ಅಕ್ಷರಶಃ ಬೃಹತ್ ಬೆಟ್ಟದಂತೆ ನಿಂತಿರುವ ಕಸದ ಗುಡ್ಡೆಗಳನ್ನು ಹತ್ತಿಬರಬೇಕು. ಈ ನಿಯಮಗಳಲ್ಲಿ ಒಂದನ್ನೂ ಬಿಬಿಎಂಪಿ ಪಾಲಿಸಿಲ್ಲ ಎಂಬ ಆಘಾತಕಾರಿ ಅಂಶ ನಿಮಗೆ ಮನವರಿಕೆಯಾಗದಿದ್ದರೆ ಕೇಳಿ. ಎರಡೂಕಡೆ ಇರುವ ಕಸದ ರಾಶಿಗಳ ಮೇಲೆ ಹಾರಾಡುವ ರಣಹದ್ದುಗಳು ಇಲ್ಲಿಗೆ ಸಮೀಪದ ಯಲಹಂಕ ಅಂತರರ್‍ಟ್ರಾಯ ವಿಮಾನನಿಲ್ದಾಣದಿಂದ ಹಾರುವ ವಿಮಾನಗಳಿಗೆ ಬಡಿದು ಈಗಾಗಲೇ ಅನಾಹುತಗಲೂ ಸಂಭವಿಸಿವೆ ಎಂದರೆ ಎಲ್ಲಿನ ಹೊಣೆಗೇಡಿತನ ಎಷ್ಟು ಎಂಬುದು ತಿಳಿಯುತ್ತದೆ.
ಬಿಬಿಎಂಪಿ ಮತ್ತು ಕಸ ಸಂಸ್ಕರಣೆಯ ಗುತ್ತಿಗೆ ಪಡೆದ ಸಂಸ್ಥೆಗಳು ಇದುವರೆಗೆ ಮಾಡಿದ್ದೆಲ್ಲವೂ ಈ ನಿಯಮಗಳ ಉಲ್ಲಂಘನೆ ಮಾತ್ರ. ಈ ನಿಯಮಗಳನ್ನು ರಚಿಸಿದ ಸಮಯದಿಂದಲೇ ಅದರ ಪ್ರಕಾರ ನಡೆದುಕೊಂಡಿದ್ದರೆ ಇಂದು ಕಸದ ರಾಸಿಯೊಂದಿಗೆ ಬೆಟ್ಟವಾಗಿ ಬೆಳೆದಿರುವ ಕಸದ ಸಮಸ್ಯೆಯೂ ಇರುತ್ತಿರಲಿಲ್ಲ. ಆದರೆ ಸರ್ಕಾರಗಳು, ಅಧಿಕಾರಿಗಳು ಆಯ್ದುಕೊಂಡಿದ್ದು ಸುಲಭದ ಅಡ್ಡದಾರಿಯನ್ನು. ಕಾರ್ಪೊರೇಟರ್‌ಗಳ ಸುಪರ್ದಿಯಲ್ಲಿ ಬರುವ ಗುತ್ತಿಗೆದಾರರು ನಗರಪಾಲಿಕೆಂದ ಪ್ರತಿ ಲೋಡಿಗೆ ೫೦೦-೬೦೦ ರೂಪಾಗಳಂತೆ ವರ್ಷಕ್ಕೆ ಸಾವಿರಾರು ಕೋಟ್ಯಂತರ ರೂಪಾಗಳನ್ನು ಪಡೆದು ಕಸವಿಲೇವಾರಿಯ ಗುತ್ತಿಗೆ ಪಡೆದರು. ಪ್ರತಿನಿತ್ಯ ಬಿಬಿಎಂಪಿ ಗುರುತಿಸಿದ ರಾಮ್‌ಕಿಯಂತಹ ಹೊಣೆಗೇಡಿ ಸಂಸ್ಥೆಗಳಿಗೆ ನಿಗದಿಪಡಿಸಿದ ಜಾಗದಲ್ಲಿ ಕಸ ಸುರಿದು ಬರುವುದಷ್ಟೇ ಅವರ ಕೆಲಸವಾತು. ಸಂಸ್ಕರಣೆ ನಡೆಸುತ್ತೇವೆಂದು ಹಳಿಕೊಂಡ ಈ ಸಂಸ್ಥೆಗಳು ನೆಪಮಾತ್ರಕ್ಕೆ ಯಂತ್ರಗಳನ್ನು ಸ್ಥಾಪಿಸಿದರು. ಎಷ್ಟು ಸಾಧವೋ ಅಷ್ಟು ಲಾಭ ಮಾಡಿಕೊಂಡರು. ಕಸವೆಂದರೆ ಕಾಸು ಎಂಬುದಷ್ಟೇ ಎಲ್ಲರ ಮಂತ್ರವಾಗಿತ್ತು. ಪರಿಣಾಮವಾಗಿ ಅತ್ತ ಹಳ್ಳಿ ಜನರ ಬದುಕು ನರಕಸದೃಶವಾಯಿತು.
ಸಮಸ್ಯೆಗೆ ವೈಜ್ಞಾನಿಕ ಪರಿಹಾರ ಕಂಡುಕೊಳ್ಳದಿದ್ದರೆ ನಿಜಕ್ಕೂ ಇದು ಕಸದ ವಿಷಚಕ್ರವೆ. ಬಿಬಿಎಂಪಿ ಬೆಂಗಳೂರಿನ ಸುತ್ತಮುತ್ತ ಹೊಸ ಹೊಸ ಜಾಗಗಳನ್ನು ಹುಡುಕಿ ವೈಜ್ಞಾನಿಕವಾಗಿ ಸಂಸ್ಕರಿಸದ ಕಸವನ್ನು ಸುರಿದು ಬರುತ್ತದೆ. ಆ ಪ್ರದೇಶದ ಪರಿಸರವೇ ನಾಶವಾಗಿ ಹಳ್ಳಿಗರ ಕೃಷಿ, ಆರೋಗ್ಯ, ಬದುಕು ನರಕವಾಗುತ್ತದೆ. ಮುಂದೊಂದು ದಿನ ಅವರ ಸಹನೆಯ ಕಟ್ಟೆಯೊಡೆದು ಪ್ರತಿಭಟನೆಯ ಹಾದಿ ಹಿಡಿಯುತ್ತಾರೆ. ಬೆಂಗಳೂರಿನ ಕಸಹೊತ್ತು ತರುವ ಲಾರಿಗಳನ್ನು ತಡೆದು ನಿಲ್ಲಿಸುತ್ತಾರೆ. ಪರಿಣಾಮವಾಗಿ ಇತ್ತ ಬೆಂಗಳೂರು ಗಬ್ಬೆದ್ದು ನಾರುತ್ತಿದ್ದಂತೆಯೇ ಕೋಲಾಹಲ ಸ್ಟೃಯಾಗುತ್ತದೆ. ಬಿಬಿಎಂಪಿ ಮತ್ತೆ ಕಕ್ಕಾಬಿಕ್ಕಿಯಾಗಿ ಮತ್ತೆ ಹಳ್ಳ್ಳಿಯವರನ್ನು ಓಲೈಸಿ ರಾತ್ರಿ ಮಾತ್ರ ಕಸವಿಲೇವಾರಿ ಮಾಡಲು ಹೇಳುತ್ತದೆ. ನಿದ್ದೆಗೆಟ್ಟು ಆ ಇಕ್ಕಟ್ಟಾದ ದಾರಿಗಳಲ್ಲಿ ಲಾರಿಗಳನ್ನು ಓಡಿಸುವ ಪೌರಕಾರ್ಮಿಕರು ಅಪಘಾತಗಳಲ್ಲಿ ಮರಣಹೊಂದುತ್ತಾರೆ. ಆಗ ಅವರನ್ನು ಸಂತೈಸಲು ಮತ್ತೆ ಇನ್ನಿಲ್ಲದ ಹರಸಾಹಸವಾಗುತ್ತದೆ. ಮತ್ತೆ ಬಿಬಿಎಂಪಿ ಹೊಸ ಜಾಗಗಳನ್ನು ಹುಡುಕುತ್ತಾ ಈ ಕಸದ ವಿಷಚಕ್ರದಲ್ಲಿ ಒದ್ದಾಡುತ್ತಲೇ ಇರುತ್ತದೆ. ಇದಕ್ಕೆ ಕೊನೆಯಿಲ್ಲವೆ?
ಮಾಡಬೇಕಾದುದೇನು?
ಮಾವಳ್ಳಿಪುರದ ಕಸದ ಬೆಟ್ಟ! |
ಈಗ ಮಾವಳ್ಳಿಪುರ, ಮಂಡೂರುಗಳಂತೆಯೇ ಕಸದಗುಡ್ಡಗಳನ್ನು ನಿರ್ಮಿಸಲು ಇದೀಗ ಚಿಂತಾಮಣಿ. ಕೊರಟಗೆರೆ ಮುಂತಾದ ಕಡೆಗಳಲ್ಲಿಯೂ ಜಾಗಗಳನ್ನು ಗುರುತಿಸಲಾಗಿದೆ ಎಂದು ಮಹಾಪೌರರಾದ ವೆಂಕಟೇಶಮೂರ್ತಿಯವರು ಹೇಳುತ್ತಿದ್ದಾರೆ. ಮತ್ತೊಂದೆಡೆ ಉಚ್ಛನ್ಯಾಯಾಲಯವು ಮೂಲದಲ್ಲಿಯೇ ಕಸವನ್ನು ವಿಂಗಗಡಿಸಬೇಕೆಂದು ನಾಗರಿಕರಿಗೆ ಆದೇಶ ನೀಡಿದೆ. ಕಸದಿಂದ ಗೊಬ್ಬರ ತಯಾರಿಸುವ, ವಿದ್ಯುತ್ ತಯಾರಿಸುವ ಮತ್ತಷ್ಟು ಖಾಸಗಿ ಕಂಪನಿಗಳು ನಾಮುಂದು ತಾಮುಂದು ಎಂದು ಬಂದಿವೆ. ಕಸದ ವಿಲೇವಾರಿ ಬಗ್ಗೆ ಜನರಿಗೆ ಜಾಗೃತಿ ನೀಡುವ ಕುರಿತು ಹೇಳಲಾಗುತ್ತದೆ.
ವಾಸ್ತವದಲ್ಲಿ ಇಂದು ಕಸದ ವಿಲೇವಾರಿ ಸಮಸ್ಯೆ ಎಂಬುದು ಕೇವಲ ಬೆಂಗಳೂರಿನ ಸಮಸ್ಯೆಯಲ್ಲ. ಮತ್ತು ಕೇವಲ ನಾಗರಿಕರು ಅಥವಾ ಕೇವಲ ಬಿಬಿಎಂಪಿ, ಸರ್ಕಾರ ನಿಭಾಸುವಂತಹ ಸಮಸ್ಯೆಯಲ್ಲ. ರಾಜ್ಯದ ಅನೇಕ ನಗರಗಳಲ್ಲಿ ಇದು ಚಿಕ್ಕ ದೊಡ್ಡ ಪ್ರಮಾಣದಲ್ಲಿ ಒಂದು ಮುಖ್ಯ ಸಮಸ್ಯೆಯೇ. ನಗರಗಳು ಬೆಳೆದಂತೆಲ್ಲಾ ಸಮಸ್ಯೆಯ ವ್ಯಾಪ್ತಿಯೂ ಸಿಗ್ಗುತ್ತದೆ. ಆದರೆ ಮುಂದೆಂದೋ ಸ್ಫೋಟಗೊಂಡೇ ತೀರುವ ಸಮಸ್ಯೆಯನ್ನು ಆರಂಭದಲ್ಲೇ ಸರಿಪಡಿಸಿಕೊಳ್ಳುವುದು 'ನಾಗರಿಕತೆ'ಯ ಲಕ್ಷಣ. ಇದಕ್ಕಾಗಿ ಹಲವು ಹಂತದ ಕಾರ್ಯಗಳನ್ನು ಸಮರೋಪಾದಿಯಲ್ಲಿ ಹಮ್ಮಿಕೊಳ್ಳಬೇಕಿದೆ.
ಈ ನಿಟ್ಟಿನಲ್ಲಿ ಮೊತ್ತಮೊದಲು ಆಗಬೇಕಾದ ಕೆಲಸ ಕಾರ್ಪೊರೇಟರ್‌ಗಳನ್ನು ಮತ್ತು ಗುತ್ತಿಗೆದಾರರನ್ನು ನಿಯಂತ್ರಣಕ್ಕೊಳಪಡಿಸುವುದು. ಅವರ ದುರಾಸೆಯ ಪರಿಣಾಮವಾಗಿ ಜನರಿಗಾಗುವ ತೊಂದರೆಯ ಕುರಿತು ಅವರಲ್ಲಿ ಮೊದಲು ಜಾಗೃತಿ ಮೂಡಿಸುವುದು. ನಂತರ ಮೂಲದಲ್ಲೇ (ಮನೆ, ಮಾಲ್, ಫ್ಲ್ಯಾಟ್, ಸ್ಲಂ, ಸತ್ಕಾರ ಉದ್ಯಮ, ಹೋಟೆಲ್, ಆಸ್ಪತ್ರೆ, ಕೈಗಾರಿಕೆ, ಇತ್ಯಾದಿ) ಕಸ ವಿಂಗಡಿಸುವ ಕೆಲಸವನ್ನು ಗುತ್ತಿಗೆದಾರರು, ನಾಗರಿಕರು ಎಲ್ಲರೂ ಕೂಡಿ ನಡೆಸಲು ಕ್ರಮಗಳನ್ನು ಕೈಗೊಳ್ಳುವುದು. ಕಸ ವಿಂಗಡಿಸುವ ಬಿಬಿಎಂಪಿಯ ಕೆಲಸವನ್ನು ಇಂದು ಹತ್ತಾರು ಸಾವಿರ ಸಂಖ್ಯೆಯಲ್ಲಿ ಚಿಂದಿ ಆಯುವವರು ಮಾಡುತ್ತಿದ್ದಾರೆ. ಅವರ ನೆರವಿನಿಂದಲೇ ಈ ಕೆಲಸವನ್ನು ಅಧಿಕೃತವಾಗಿ ಮಾಡಿದರೆ ಆರ್ಥಿಕವಾಗಿ ಅವರಿಗೂ ಅನುಕೂಲವಾಗುತ್ತದೆ. ಆದರೆ ಅವರಿಗೆ ಸೂಕ್ತ ಸಾಧನ, ಸಲಕರಣೆ ಗೌರವ ಮತ್ತು ರಕ್ಷಣೆಗಳನ್ನು, ಅವರ ಕುಟುಂಬಗಳಿಗೆ ಅನುಕೂಲತೆಗಳನ್ನು ಮಾಡಿಕೊಡಬೇಕು. ಇದಕ್ಕಾಗಿ ಗುಜರಿ ಅಂಗಡಿ ಮಾಲೀಕರನ್ನೂ ಸೇರಿಸಿಕೊಳ್ಳುವುದು. ನಂತರ ಹಸಿಕಸದಿಂದ ಜೈ"ಕ ಗೊಬ್ಬರ, ವಿದ್ಯುತ್ ತಯಾರಿಸುವ ಚಿಕ್ಕ ಚಿಕ್ಕ ಘಟಕಗಳನ್ನು ನಗರದ ಹಲವಾರು ಕಡೆಗಳಲ್ಲಿ ಸ್ಥಾಪಿಸುವುದು. ಇದನ್ನು ಖಾಸಗಿಯವರಿಗೆ ಬಿಡದೆ ಸರ್ಕಾರವೇ ನಡೆಸಿದರೆ ಒಳಿತು. ಬೆಂಗಳೂರಿನ ದಶದಿಕ್ಕುಗಳಲ್ಲಿ ಸಂಸ್ಕರಣ ಘಟಕಗಳನ್ನು ತೆರೆಯುವುದು ಮತ್ತು ಮರುಬಳಕೆಗೆ ಸಾಧ್ಯವಾಗದ ತ್ಯಾಜ್ಯಗಳನ್ನು ಮಾತ್ರ ಗುಂಡಿಗಳಲ್ಲಿ (ಲ್ಯಾಂಡ್‌ಫಿಲ್) ತುಂಬಿಸಿ ಮುಚ್ಚಿಹಾಕುವ ವ್ಯವಸ್ಥೆಗಳನ್ನು ಅತ್ಯಂತ ವೈಜ್ಞಾನಿಕ ರೀತಿಯಲ್ಲಿ ಮಾಡುವುದು. ಹಾಗೆಯೇ ಮುಖ್ಯವಾಗಿ ಈಗಾಗಲೇ ಮಾವಳ್ಳಿಪುರ, ಮಂಡೂರು ಮತ್ತು ಟೆರ್ರಾಫಾರ್ಮ್‌ಗಳಲ್ಲಿ ರಾಶಿಬಿದ್ದಿರುವ ಕಸದ ಬೆಟ್ಟಕ್ಕೆ ಮತ್ತಷ್ಟು ಕಸವನ್ನು ಸೇರಿಸದೇ ಸಂಪೂರ್ಣ ಕಸವನ್ನು ಸಂಸ್ಕರಿಸಿ ಸರಿಯಾಗಿ ಲ್ಯಾಂಡ್‌ಫಿಲ್‌ಗಳನ್ನು ನಿ"ಸುವ ದೀರ್ಘಕಾಲಿಕವಾದ ಯೋಜನೆಯೊಂದನ್ನು ರಚಿಸಿ ಹತ್ತಾರು ಹಳ್ಳಿಗಳ ಜನರ, ಜಾನುವಾರುಗಳ ಮತ್ತು ಕೃಷಿ ಚಟುವಟಿಕೆಗಳಿಗೆ ಸೂಕ್ತ ರಕ್ಷಣೆ ನೀಡುವುದು. ಬೆಂಗಳೂರನ್ನು ಹೊರತುಪಡಿಸಿದ ನಗರಗಳಲ್ಲಿಯೂ ಸಹ ಇದೇ ಮಾದರಿಗಳ ಮೂಲಕ ಮುಂದೆ ಎದುರಾಗುವ ಸಮಸ್ಯೆಯನ್ನು ಸಶಕ್ತವಾಗಿ ತಡೆಯಲು ಸಾಧ್ಯವಿದೆ.
ಇತ್ತೀಚೆಗಷ್ಟೆ ಬಿಬಿಎಂಪಿ ಆಯುಕ್ತರ ಸ್ಥಾನವನ್ನು ಅಲಂಕರಿಸಿರುವ ರಜನೀಶ್ ಗೋಯಲ್ ಅವರು ಅತ್ಯಂತ ನೀಟಾಗಿ ಬೆಳೆಸಲ್ಪಟ್ಟ ಚಂಡೀಗಢದಿಂದ ಬಂದವರಾದ್ದರಿಂದ ಅವರೇನಾದರೂ ಸಮಸ್ಯೆಯ ಪ್ರಾಮಾಣಿಕ ಪರಿಹಾರಕ್ಕಾಗಿ ಪ್ರಯತ್ನಿಸುವ ಧೈರ್ಯ ತೋರಿದರೆ, ಅದಕ್ಕೆ ಜನಪ್ರತಿನಿಧಿಗಳೂ ಸಹಕರಿಸಿದರೆ ಅದು ನಾಗರಿಕರ ಅದೃಷ್ಟ.
ಮಾವಳ್ಳಿಪುರ ಪ್ರತಿಭಟನೆಯಲ್ಲಿ ಮೃತನಾದ ಯುವಕ ಶ್ರೀನಿವಾಸ ಅವರ ನತದೃಷ್ಟ ಪತ್ನಿ |