ಇದು ಸಿದ್ಧ ವೈಚಾರಿಕ ಚೌಕಟ್ಟುಗಳನ್ನು ಮೀರುವ ಕಾಲ : ಸಿಎನ್ನಾರ್
ಡಾ. ಸಿ.ಎನ್.ರಾಮಚಂದ್ರನ್ ಅವರು ನಾಡಿನ ಪ್ರಮುಖ ಸಂಸ್ಕೃತಿ ಚಿಂತಕರು. ಇವರ ಅಧ್ಯಯನದ ಕ್ಷೇತ್ರಗಳು ಬಹು ವಿಸ್ತಾರವಾದಂತವು. ಸೃಜನ ಸಾಹಿತ್ಯ, ವಿಮರ್ಷಾ ಸಾಹಿತ್ಯ, ಜಾನಪದ ಅಧ್ಯಯನ, ಅನುವಾದ ಹೀಗೆ ಹಲವಾರು ಕ್ಷೇತ್ರಗಳಲ್ಲಿ ತಮ್ಮ ಕೊಡುಗೆ ಸಲ್ಲಿಸಿರುವ ಸಿಎನ್ನಾರ್ ಹರ್ಷಕುಮಾರ್ ಕುಗ್ವೆಯೊಂದಿಗೆ ಸಂಸ್ಕ್ಕೃತಿ ವಿಮರ್ಷೆ, ಜಾನಪದ ಅಧ್ಯಯನ, ಮುಂತಾದುವುಗಳ ಕುರಿತಾಗಿ ಹಲವಾರು ಒಳನೋಟಗಳನ್ನು ಹಂಚಿಕೊಂಡಿದ್ದಾರೆ. 'ಸಂಸ್ಕೃತಿ’ಯನ್ನು ನೀವು ಹೇಗೆ ಪರಿಭಾವಿಸುತ್ತೀರಿ? ಸಂಸ್ಕೃತಿ ಎಂಬ ಪದವನ್ನು ನಾವು ಅನೇಕ ನೆಲೆಗಳಲ್ಲಿ ಅರ್ಥೈಸಬಹುದು. ಸ್ವಾತಂತ್ರ್ಯ ಪೂರ್ವದಲ್ಲಿ ನೋಡಿದರೆ ಡಿವಿಜಿ, ಅನಕೃ ಮುಂತಾದವರೆಲ್ಲಾ ಸಂಸ್ಕೃತಿಯನ್ನು ಒಂದು ರೀತಿಯಲ್ಲಿ ಅರ್ಥೈಸುತ್ತಿದ್ದರು. ಸಾಹಿತ್ಯ, ಸಂಗೀತ, ಶಿಲ್ಪಕಲೆ, ಚಿತ್ರಕಲೆ, ಇತ್ಯಾದಿ ಲಲಿತ ಕಲೆಗಳೇನಿವೆ ಅವುಗಳಲ್ಲಿರುವ ಪ್ರೌಢಿಮೆಯನ್ನು ಸಂಸ್ಕೃತಿ ಎಂದು ಅರ್ಥೈಸುತ್ತಿದ್ದರು. ಅದು ಎಷ್ಟು ಹೆಚ್ಚಿದಷ್ಟೂ ಅಷ್ಟು ನಮ್ಮ ಸಂಸ್ಕೃತಿ ಶ್ರೇಷ್ಠವಾಗಿದೆ ಎನ್ನುವ ನಿಲುವು ಅದು. ಅದೇ ಕಾಲಘಟ್ಟದಲ್ಲಿ ಇನ್ನೊಂದು ನೆಲೆಯಲ್ಲಿ ಆಧ್ಯಾತ್ಮಿಕತೆಯೊಂದಿಗೆ ಸಂಸ್ಕೃತಿಯನ್ನು ಸಮೀಕರಿಸಿ ನೋಡುವ ಪರಂಪರೆಯೂ ಇತ್ತು. ಈ ಎರಡು ನೆಲೆಯಲ್ಲಿ ಮಾತ್ರ ಸಂಸ್ಕೃತಿಯ ವ್ಯಾಖ್ಯಾನ ನಡೆಯುತ್ತಿತ್ತು. ಆದರೆ ಸುಮಾರು ೭೦ - ೮೦ರ ದಶಕದ ನಂತರ ಭಾರತದಲ್ಲಿ; ಅದಕ್ಕಿಂತ ಎರಡು ಮೂರು ದಶಕಗಳ ಹಿಂದೆ ಅಮೆರಿಕ, ಬ್ರಿಟನ್‌ಗಳಲ್ಲಿ, ಸಂಸ್ಕೃ...