ಬ್ರಹ್ಮಶ್ರೀ ನಾರಾಯಣ ಗುರುಗಳ ಬದುಕು ಮತ್ತು ಸೋಶಿಯಲ್ ಫಿಲಾಸಫಿ
ಬ್ರಹ್ಮಶ್ರೀ ನಾರಾಯಣ ಗುರುಗಳ ಬದುಕು ಮತ್ತು ಸೋಶಿಯಲ್ ಫಿಲಾಸಫಿ - ಹರ್ಷಕುಮಾರ್ ಕುಗ್ವೆ ಭರತ ಖಂಡವು ಕಂಡ ಮಹಾನ್ ದಾರ್ಶನಿಕರಾದ ಶ್ರೀ ನಾರಾಯಣ ಗುರುಗಳ ಜಯಂತಿಯನ್ನು ಸರ್ಕಾರಿ ಆಚರಣೆಯಾಗಿ ಸರ್ಕಾರವು ಆಚರಿಸುತ್ತಿರುವುದು ನಿಜಕ್ಕೂ ಸಂತೋಷದ ಸಂಗತಿ. ಈ ಮಹಾನ್ ಧಾರ್ಮಿಕ ಚಿಂತಕ, ಸಮಾಜ ಸುಧಾರಕರಿಗೆ ಖಂಡಿತವಾಗಿಯೂ ಇದು ಗೌರವ ಸಲ್ಲಿಸುವ ಕೆಲಸ. ಆದರೆ ದುರದೃಷ್ಟವಶಾತ್ ಪರಿಸ್ಥಿತಿ ಹೇಗಾಗಿದೆಯೆಂದರೆ ಸರ್ಕಾರಗಳು ಜಯಂತಿಗಳನ್ನು ಆಚರಿಸುವುದು ಎಂದರೆ ಆಯಾ ಮಹಾನ್ ವ್ಯಕ್ತಿಗಳು ಹುಟ್ಟಿದ ಜಾತಿಗಳನ್ನು ತುಷ್ಟೀಕರಣ ಮಾಡಲು ಮಾತ್ರ ಎಂಬಂತಾಗಿದೆ. ಬಸವ ಜಯಂತಿ ಲಿಂಗಾಯತರಿಗೆ, ವಾಲ್ಮೀಕಿ ಜಯಂತಿ ವಾಲ್ಮೀಕಿ ನಾಯಕರಿಗೆ, ಕನಕ ಜಯಂತಿ ಕುರುಬರಿಗೆ, ಕೆಂಪೇಗೌಡ ಜಯಂತಿ ಒಕ್ಕಲಿಗ ಗೌಡರಿಗೆ, ಅಂಬೇಡ್ಕರ್ ಜಯಂತಿ ದಲಿತರಿಗೆ, ಟಿಪ್ಪೂ ಜಯಂತಿ ಮುಸ್ಲಿಮರಿಗೆ ಹಾಗೂ ನಾರಾಯಣ ಗುರುಗಳ ಜಯಂತಿ ಈಡಿಗ, ಬಿಲ್ಲವ ದೀವರಿಗೆ... ಹೀಗೆ ಜಯಂತಿಗಳು ಜಾತಿಗಳಿಗೆ ಸೀಮಿತಗೊಂಡಿರುವುದು ನಾವಿರುವ ಕಾಲದ ವಿಪರ‍್ಯಾಸವೂ ಹೌದು ನಮ್ಮ ಸಮಾಜದ ಅನಾರೋಗ್ಯದ ಸ್ಥಿತಿಯೂ ಹೌದು. ಯಾಕೆ ಈ ಮಾತನ್ನು ಹೇಳಬೇಕಾಯಿತೆಂದರೆ ಮೇಲೆ ಹೇಳಿದ ಮಹಾನ್ ವ್ಯಕ್ತಿಗಳೆಲ್ಲರೂ ತಮ್ಮ ಬದುಕಿನಲ್ಲಿ ಶ್ರಮಿಸಿದ್ದು ಜಾತಿ-ಮತ-ಲಿಂಗ ಬೇಧಗಳನ್ನು ದೂರ ಮಾಡಿ ಮನುಷ್ಯರೆಲ್ಲರೂ ಒಂದೇ ಆಗಿ ಬಾಳಬೇಕಾದ ಒಂದು ಸಮಾಜದ ಸಾಕಾರಕ್ಕಾಗಿ ಎಂಬುದು ಎಲ್ಲರೂ ಬಲ್ಲ ಸಂಗತಿ. ಇದಕ್ಕೆ ನಾರಾಯಣ ಗುರ...