ವಿಶ್ವದ ಸಕಲ ಸಮಸ್ಯೆಗಳಿಗೂ ಉತ್ತರ ಬುದ್ಧನ ಚಿಂತನೆಯಲ್ಲಿದೆ- ಪ್ರೊ. ಕಾಳೇಗೌಡ ನಾಗವಾರ
ಬಂಡಾಯ ಸಾಹಿತ್ಯದಲ್ಲಿ ಗುರುತಿಸಿಕೊಂಡು ಅತ್ಯಂತ ಮೌಲ್ಯಯುತವಾದ ಸಾಹಿತ್ಯವನ್ನು ರಚಿಸಿರುವ ಪ್ರೊ. ಕಾಳೇಔಡ ನಾಡಿನ ಪ್ರಮುಖ ಸಾಹಿತಿ, ವಿಚಾರವಾದಿ ಮತ್ತು ಹೋರಾಟಗಾರರು. ಟಿಎಸ್‌ಐಗಾಗಿ ಹರ್ಷಕುಮಾರ್ ಕುಗ್ವೆ ಅವರೊಂದಿಗೆ ನಡೆಸಿದ ಸಂದರ್ಶನ ಇಲ್ಲಿದೆ. ಜಗತ್ತಿನ ಮೊದಲ ಜಾನಪದ ವಿಶ್ವವಿದ್ಯಾಲಯವನ್ನು ಸ್ಥಾಪಿಸಿಕೊಂಡಿರುವ ನಾವು ಜಾನಪದ ಅಧ್ಯಯನದ ವಿಷಯದಲ್ಲಿ ಏನನ್ನು ನಿರೀಕ್ಷಿಸಬಹುದು? ಜಾನಪದ ಅಧ್ಯಯನ ಅನ್ನುವುದು ವಾಸ್ತವವಾಗಿ ಇಡೀ ಜನಸಮುದಾಯದ ಅನುಭವದ ಇತಿಹಾಸವನ್ನೇ ಹೇಳುತ್ತದೆ. ಅಲ್ಲಿ ಅಪರೂಪದ ಪ್ರಯೋಗಗಳಿವೆ; ಅಲ್ಲಿ ವ್ಯಕ್ತಿಗಿಂತ ಹೆಚ್ಚಾಗಿ ಸಮುದಾಯದ ಅನುಭವಗಳಿರುತ್ತವೆ. ನಮ್ಮ ಸಾಂಸ್ಕೃತಿಕ ಇತಿಹಾಸ, ಆಚರಣೆ, ಸಂಗೀತ ಇತ್ಯಾದಿ ಸಕಲ ವೈವಿಧ್ಯಗಳ ಆಗರವೇ ಜಾನಪದ. ಹೀಗಾಗಿಯೇ ಆಯಾಯಾ ದೇಶಗಳಲ್ಲಿ ವಿವಿಧ ಕಾಲಮಾನ, ಹವಾಗುಣಕ್ಕನುಗುಣವಾಗಿ, ಆಹಾರ ಪದ್ಧತಿ, ನಡೆನುಡಿ ವಿಚಾರಗಳಲ್ಲಿ ಪ್ರಯೋಗಶೀಲವಾಗಿ ಯಾವುದು ಹೆಚ್ಚು ಅರ್ಥಪೂರ್ಣ ಎಂದು ಮನುಷ್ಯ ಸದಾ ಹುಡುಕುತ್ತಿರುತ್ತಾನೆ. ಅದು ಅಕ್ಷರಸ್ತರ ಲೋಕಕ್ಕಿಂತ ಭಿನ್ನವಾದ ಪ್ರಾಮಾಣಿಕವಾದ ಅನುಭವ ಲೋಕ. ಆ ದೃಷ್ಟಿಯಿಂದ ಆಯಾ ದೇಶಗಳಲ್ಲಿ ತಜ್ಞರಾದವರು ಆ ಸಮಾಜವನ್ನು ಅರ್ಥಮಾಡಿಕೊಳ್ಳಲಿಕ್ಕಾಗಿ, ಜಾನಪದವನ್ನು ಜ್ಞಾನದ ಕಾರಣಕ್ಕಾಗಿ ಅಧ್ಯಯನಮಾಡುತ್ತಾರೆ. ಹಾಗೆಯೇ ನಮ್ಮ ಭಾರತದ ಸಂದರ್ಭದಲ್ಲಿ ಅಕ್ಷರಜ್ಞಾನ ಇರದಿದ್ದಾಗಲೂ ಸಮಾಜದ ಏಳಿಗೆಯನ್ನು ನಿರಂತರವಾಗಿ ಬಯಸುತ್ತಿದ್ದ ದೊಡ್ಡ...