ಮತ್ತೊಂದು ವಿಶ್ವ ಹೂಡಿಕೆದಾರರ ಸಮ್ಮೇಳನ ನಡೆಯುತ್ತಿದೆ. ಸರ್ಕಾರದ ಭಾರೀ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿಯವರು ಈಗ ಮತ್ತೊಮ್ಮೆ ದೇಶ ವಿದೇಶಗಳಲ್ಲೆಲ್ಲ ಸುತ್ತಿ ಬಂದು ರಾಜ್ಯದಲ್ಲಿ ಬಂಡವಾಳ ಹೂಡಲು ವಿದೇಶಿ ಬಂಡವಾಳಿಗರಿಗೆ ರತ್ನಗಂಬಳಿ ಹಾಸಿದ್ದಾರೆ. ಈ ಸಲ ೫ ಲಕ್ಷ ಕೋಟಿ ಬಂಡವಾಳ, ೧೦ ಲಕ್ಷ ಉದ್ಯೋಗ ಮತ್ತು ೨೦೨೦ರೊಳಗೆ ರಾಜ್ಯದ ಒಟ್ಟು ಉತ್ಪನ್ನ ದ್ವಿಗುಣಗೊಳ್ಳಬೇಕೆನ್ನುವ ಮಹತ್ವಕಾಂಕ್ಷೆಯನ್ನು ಕೈಗಾರಿಕಾ ಸಚಿವರು ಮತ್ತು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರು ವ್ಯಕ್ತಪಡಿಸಿದ್ದಾರೆ. ಅಮೆರಿಕದ ಭಾರೀ ಉದ್ದಿಮೆಪತಿ ವಾರನ್ ಬಫೆಟ್ ಅವರನ್ನೇ ಈ ಸಲ ಕರೆದು ಕೂರಿಸಲಾಗುವುದು ಎಂದು ಹೇಳಿಕೆ ನೀಡಿದ್ದರೂ ಅವರು ಒಪ್ಪಲಿಲ್ಲವೋ ಏನು ಕತೆಯೋ ಕೊನೆಗೆ ಜಪಾನು ಜರ್ಮನಿಗಳ ಉಪಸಚಿವ, ಉಪಪ್ರಧಾನಿಗಳ ಉಪಸ್ಥಿತಿಗೇ ತೃಪ್ತಿಪಟ್ಟುಕೊಳ್ಳಬೇಕಾಗಿದೆ. ನಮ್ಮ ಸರ್ಕಾರಗಳು ಕಳೆದ ೧೨ ವರ್ಷಗಳಿಂದ ಈ ವಿಶ್ವ ಹೂಡಿಕೆದಾರರ ಸಮ್ಮೇಳನಗಳನ್ನು (ಜಿಮ್) ಸಂಘಟಿಸುತ್ತಲೇ ಬಂದಿವೆ. ಮೊದಲ ಜಿಮ್ ೨೦೦೦ರ ಜೂನ್ ತಿಂಗಳಿನಲ್ಲಿ ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರವರ ನಾಯಕತ್ವದಲ್ಲಿ ಆಯೋಜನೆಗೊಂಡು ಆಗ ೧೩,೦೦೦ ಕೋಟಿ ರೂಪಾಯಿಗಳ ಬಂಡವಾಳ ಹೂಡಿಕೆ ಒಪ್ಪಂದಗಳಾಗಿದ್ದರೆ ಯಡಿಯೂರಪ್ಪನವರು ಹಾಗೂ ಮುರುಗೇಶ್ ನಿರಾಣಿಯವರು ಆಯೋಜಿಸಿದ್ದ ಕಡೆಯ ೨೦೧೦ರ ಜಿಮ್ ನಲ್ಲಿ ಸುಮಾರು ೫ ಲಕ್ಷ ಕೋಟಿ ರೂಪಾಯಿಗಳ ಹೂಡಿಕೆ ಒಪ್ಪಂದಗಳಾಗಿತ್ತು. ಹೀಗೆ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಇಂತಹ ಬೃಹತ್ ಬಂಡವಾಳ ಹೂಡಿಕೆದಾರರ ಸಮ್ಮೇಳನದಿಂದ ರಾಜ್ಯ ಮುಂದೆ ಚಲಿಸುತ್ತಿದೆಯೇ ಅಥವಾ ಅಭಿವೃದ್ಧಿಯ ಚಕ್ರ ನಿಂತಲ್ಲೇ ನಿಂತೆದೇಯೇ, ನಿಜಕ್ಕೂ ಇಲ್ಲಿ ಅಭಿವೃದ್ಧಿಯಾಗಬೇಕಾದ ಕ್ಷೇತ್ರಗಳು ಯಾವುದು ಮತ್ತು ಹಿಂದುಳಿಯುತ್ತಿರುವ ಕ್ಷೇತ್ರಗಳು ಯಾವುದು, ಇತ್ಯಾದಿ ಯಾವೊಂದು ಪ್ರಶ್ನೆಗಳನ್ನು ಗಂಭೀರವಾಗಿ ಹಾಕಿಕೊಳ್ಳದೇ ನಮ್ಮ ಸರ್ಕಾರ ನಡೆಸುವವರು ಕೇವಲ ಬಂಡವಾಳದ ಬೆನ್ನುಬಿದ್ದಿರುವ ಲಕ್ಷಣಗಳು ನಿಚ್ಚಳವಾಗಿ ಕಾಣುತ್ತಿವೆ.
ಕೇವಲ ಪ್ರಚಾರಕ್ಕೇ ಹತ್ತಾರು ಕೋಟಿ ರೂಪಾಯಿಗಳನ್ನು ಈ ಜಿಮ್ ಸಂದರ್ಭದಲ್ಲಿ ಖರ್ಚು ಮಾಡಲಾಗುತ್ತಿದೆ. ಎರಡು ದಿನಗಳ ಅವಧಿಯಲ್ಲಿ ಈ ಸಮಾವೆಶದಲ್ಲಿ ಭಾಗವಹಿಸುವ ಅತಿಥಿಗಳಿಗೆ ಸ್ಟಾರ್ ಹೋಟೆಲ್‌ಗಳಲ್ಲಿ ಅದ್ದೂರಿ ವ್ಯವಸ್ಥೆಗೆಂದೂ ಕೋಟ್ಯಂತರ ರೂಪಾಯಿಗಳ ವೆಚ್ಚವಾಗುತ್ತದೆ. ಇಷ್ಟೆಲ್ಲಾ ಆದರೂ ಅಂತಿಮವಾಗಿ ರಾಜ್ಯ ಪಡೆದುಕೊಳ್ಳುವುದೇನು ಎಂಬ ಪ್ರಶ್ನೆಗೆ ಉತ್ತರ ಕೇಳಿದರೆ ನಿರಾಸೆಯಾಗುತ್ತದೆ. ಯಾಕೆಂದರೆ ಕಳೆದ ೨೦೧೦ರ ಜಿಮ್‌ನ ಉದಾಹರಣೆಯನ್ನೇ ನೋಡಿ. ಆಗಲೂ ಇನ್ನಿಲ್ಲದ ನಿರೀಕ್ಷೆಗಳನ್ನು ಹುಟ್ಟಿಸಲಾಗಿತ್ತು. ಎರಡು ದಿನಗಳ ಸಮಾವೇಶದಲ್ಲಿ ಸುಮಾರು ೩.೯೨ ಲಕ್ಷ ಕೋಟಿ ರೂಪಾಯಿಗಳ ೩೮೯ ಒಡಂಬಡಿಕೆಗಳಿಗೆ ಸಹಿ ಬಿದ್ದಿದ್ದವು. ಆದರೆ ಇವುಗಳಲ್ಲಿ ಇದುವರೆಗೆ ಜಾರಿಯಾಗಿರುವವು ಕೇವಲ ೩೮ ಯೋಜನೆಗಳು. ೬೮ ಯೋಜನೆಗಳು ಇನ್ನೂ ಅನುಷ್ಠಾನ ಹಂತದಲ್ಲಿವೆ. ಎಸ್.ಎಂ.ಕೃಷ್ಣ ಕಾಲದಿಂದ ಲೆಕ್ಕ ಹಿಡಿದರೂ ಇದುವರೆಗಿನ ಒಟ್ಟು ಒಡಂಬಡಿಕೆಗಳಲ್ಲಿ ಜಾರಿಯಾಗಿರುವುದು ಕೇವಲ ಶೇಕಡ ೪೦ರಷ್ಟು ಮಾತ್ರ. ಆಗ ಅತಿ ಹೆಚ್ಚು ಬಂಡವಾಳ ಹೂಡಿಕೆ ಆಗಿದ್ದು ಬಳ್ಳಾರಿ ಜಿಲ್ಲೆಯಲ್ಲಿ. ಆದರೆ ಅಲ್ಲಿ ೩೫ ಕಂಪನಿಗಳು ಒಟ್ಟು ೧.೩೯ ಲಕ್ಷ ಕೋಟಿ ರೂಪಾಯಿ ಹೂಡಿಕೆ ಒಪ್ಪಂದ ಮಾಡಿಕೊಂಡಿದ್ದರಲ್ಲಿ ಅಂತಿಮವಾಗಿ ಬಂದದ್ದು ಕೇವಲ ೫ ಕಂಪನಿಗಳು ಮಾತ್ರ.
ಹಾಗಾದರೆ ಯಾಕೆ ಹೀಗೆ? ಈ ಸಲವೂ ಹೀಗೇ ಆಗುವುದಿಲ್ಲವೇ ಅಂದರೆ ಖಂಡಿತಾ ಈ ಸಲ ಆಗುವುದೂ ಹೀಗೆ ಎಂದು ಯಾವ ಅಳುಕಿಲ್ಲದೇ ಉತ್ತರಿಸಬಹುದು. ಯಾಕೆಂದರೆ ನಮ್ಮ ಸರ್ಕಾರದ ದೂರದೃಷ್ಟಿಯ ಕೊರತೆಯೇ ಪ್ರಮುಖ ಕಾರಣ. ಮುಖ್ಯವಾಗಿ ಕೈಗಾರಿಕಾ ಮತ್ತು ಸೇವಾ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆ ನಡೆಸ ಬಯಸುವ ಯಾವುದೇ ಕಂಪನಿಗೆ ಮೂಲಭೂತ ಸೌಕರ್ಯ ಎನ್ನುವುದು ಪೂರ್ವಶರತ್ತಾಗಿರುತ್ತದೆ. ಭೂಮಿ, ವಿದ್ಯುತ್ ಮತು ನೀರಿನ ಸೌಕರ್ಯಗಳು ಸಮರ್ಪಕವಾಗಿದ್ದರೇನೇ ಇದು ಸಾಧ್ಯ. ಆದರೆ ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಏನು ಏನೂ ಮಾಡದೇ ಕೇವಲ ಮಾತಿನಲ್ಲಿ ಎಲ್ಲವನ್ನೂ ಸಾಧಿಸುತ್ತದೆ.
ಕಳೆದ ಜಿಮ್‌ಗೆ ಮುನ್ನ ಕರ್ನಾಟಕ ಸಾರ್ಕಾರವು ಕೈಗಾರಿಕೆಗಳ ಸ್ಥಾಪನೆಗಾಗಿ ರಾಜ್ಯದಾದ್ಯಂತ ಒಟ್ಟು ೧.೧೯ ಲಕ್ಷ ಎಕರೆಗಳಷ್ಟು ಜಮೀನಿ ಸ್ವಾದೀನಪಡಿಸಿಕೊಳ್ಳುವ ಲ್ಯಾಂಡ್ ಬ್ಯಾಂಕ್ ಯೀಜನೆಯನ್ನು ಘೋಷಿಸಿತ್ತು. ಆದರೆ ಇದೊಂದು ಅತ್ಯಂತ ಮೂರ್ಖತನದ ಯೋಜನೆ ಎಂಬುದು ಸರ್ಕಾರಕ್ಕೆ ಅರಿವಾಗಲೇ ಇಲ್ಲ. ೨೦೧೦ರ ಜಿಮ್‌ನಲ್ಲಿ ಕೊರಿಯಾ ದೇಶದ ಪೋಸ್ಕೋ ಕಂಪನಿಯೊಂದಿಗೆ ಮಾಡಿಕೊಂಡ ಒಪ್ಪಂದಕ್ಕೆ ಪೂರಕವಾಗಿ ಉಕ್ಕು ತಯಾರಿಕಾ ಘಟಕ ಸ್ಥಾಪಿಸಲಿಕ್ಕಾಗಿ ಗದಗ ಜಿಲ್ಲೆಯ ಹಳ್ಳಿಗುಡಿಯ ೩೨೦೦ ಎಕರೆ ಜಮೀನನ್ನು ಸ್ವಾದೀನ ಮಾಡಿಕೊಳ್ಳಲು ಸರ್ಕಾರ ಹೊರಟೊಡನೆ ಈ ಪ್ರದೇಶದ ರೈತ ಸಮೂಹ ಎದ್ದು ನಿಂತು ಹೋರಾಟಕ್ಕಿಳಿಯಿತು. ಪ್ರಾಣ ಕೊಟ್ಟೇವು ಭೂಮಿ ಬಿಡೆವು ಎಂಬ ಘೋಷಣೆಯ ಈ ಹೋರಾಟಕ್ಕೆ ತೋಂಟದ ಸಿದ್ದಲಿಂಗ ಸ್ವಾಮೀಜಿಗಳು ನೇತ್ರತ್ವ ವಹಿಸಿದರು. ಮೇಧಾ ಪಾಟ್ಕರ್ ಅವರೂ ಬಂದರು. ಅಲ್ಲಿಗೆ ಸರ್ಕಾರ ಹಿಂದಡಿ ಇಡಲೇ ಬೇಕಾಯಿತು. ಇದೇ ರೀತಿ ಹೊಸಪೇಟೆ ತಾಲ್ಲೂಕಿನ ಗಾದಿಗನೂರು ಬಳಿ ಬೃಹತ್ ಉಕ್ಕಿನ ಕಾರ್ಖಾನೆ ಸ್ಥಾಪಿಸಲು ಮುಂದೆ ಬಂದಿದ್ದ ಭೂಷಣ್ ಸ್ಟೀಲ್ ಕಂಪನಿಗೆ ದರೋಜಿ ಕರಡಿಧಾಮದ ವನ್ಯಜೀವಿಗಳಿಗೆ ಅಪಾಯವಾಗುವ ಹಿನ್ನೆಲೆಯಲ್ಲಿ ಅನುಮತಿ ನಿರಾಕರಿಸಲಾಯಿತು. ಇಂತಹ ಉದಾಹರಣೆಗಳು ಒಂದೆಡೆ ಅನ್ನ ಬೆಳೆವ ರೈತನ ಹಿತಾಸಕ್ತಿಯನ್ನೇ ಬಲಿಕೊಡುವ ಸರ್ಕಾರದ ನೀತಿಗಳನ್ನು ತೋರಿಸಿದರೆ ಕೈಗಾರಿಕಗಳನ್ನು ಸ್ಥಾಪಿಸುವಾಗ ಬೇಕಾದ ಮುನ್ನೆಚ್ಚರಿಕೆಗಳಿಲ್ಲದಿಲ್ಲದಿರುವುದನ್ನು ತೋರಿಸುತ್ತದೆ.
ಜಿಮ್‌ನಂತಹ ದೊಡ್ಡ ಬಂಡವಾಳ ಹೂಡಿಕೆ ಸಮಾವೇಶದಲ್ಲಿ ಬಂಡವಾಳ ತೊಡಗಿಸಲು ಹೂಡಿಕೆದಾರರು ಹೆದರುವುದು ನಮ್ಮ ರಾಜಕಾರಣಿಗಳ ಭೂದಾಹವನ್ನು ನೋಡಿ. ಇದಕ್ಕೆ ಇಲ್ಲೊಂದು ಉದಾಹರಣೆ ನೋಡಿ. ೨೦೧೦ರ ಜಿಮ್‌ನಲ್ಲಿ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಇರುವ ದೇವನಹಳ್ಳಿಯ ಸುತ್ತಮುತ್ತ ಸುಮಾರು ೬೦೦೦ ಎಕರೆಗಳನ್ನು ಉದ್ಯಮಿಗಳಿಗೆ ಕೊಡುವ ಸಲುವಾಗಿ ಸರ್ಕಾರವು ಭೂಸ್ವಾಧೀನ ನಡೆಸಿದೆ ಎಂದು ಘೋಷಿಸಲಾಗಿತ್ತು. ಅಂದು ಸಮ್ಮೇಳನದಲ್ಲಿ ಭಾಗವಹಿಸಿದ ಹಲವಾರು ಕಂಪನಿಗಳಲ್ಲಿ ‘ಪಾಶ್ ಸ್ಪೇಸ್ ಇಂಟರ್ನ್ಯಾಷನಲ್ ಪ್ರೈವೇಟ್ ಲಿಮಿಟೆಡ್’ ಕೂಡಾ ಒಂದು. ಹೀಗೆ ಅಂದು ಉತ್ಸಾಹದಿಂದ ಭಾಗವಹಿಸಿದ್ದ ಈ ಕಂಪನಿಯ ಒಡೆಯ ಪಾಶ್ ಅವರಿಗೆ ಕೊನೆಗೆ ಗುಂಡಿಗೆ ಬಿದ್ದ ಅನುಭವವಾಗಿ ಮುರುಗೇಶ್ ನಿರಾಣಿಯವರ ವಿರುದ್ಧವೇ ನ್ಯಾಯಾಲಯದ ಮೆಟ್ಟಿಲನ್ನೂ ಏರಿದ್ದರು. ಯಾಕೆಂದರೆ ಅವರಿಗೆ ನೀಡಲಾದ ಜಮೀನನ್ನು ಅವರದ್ದಲ್ಲವೆಂದು ಅವರೇ ಒಪ್ಪಿಕೊಂಡಿರುವ ಅವರ ಸಹಿಯಿರುವ ಪತ್ರವೊಂದನ್ನು ಕೆಐಎಡಿಬಿ ಅಧಿಕಾರಿಗಳು ಆಲಂ ಅವರಿಗೆ ನೀಡಲಾಗಿತ್ತು. ಆಗ ಆಲಂ ಪಾಶ ಬೇಸ್ತು ಬಿದ್ದಿದರು. ಅದು ಅವರ ಫೋರ್ಜರಿ ಸಹಿಯಾಗಿತ್ತು ಎನ್ನುವುದು ಅವರ ವಾದ.
ಈಗ ರಾಜ್ಯದ ಸಣ್ಣ ಕೈಗಾರಿಗೆಗಳ ಒಕ್ಕೂಟವಾದ ಕಾಸಿಯಾವು ರಾಜ್ಯದಲ್ಲಿರುವ ಸುಮಾರು ೬.೫ ಲಕ್ಷ ಸಣ್ಣ ಕೈಗಾರಿಕೆಗಳಿಗೆ ಕಳೆದ ಎರಡು ವರ್ಷಗಳಲ್ಲಿ ಮೂರು ಪಟ್ಟು ಆಸ್ತಿ ತೆರಿಗೆ ಹೆಚ್ಚಿಸಲಾಗಿದ್ದರೆ ನಾನಾ ವಿನಾಯ್ತಿಗಳನ್ನು ನೀಡಿ ವಿದೇಸಿ ಹೂಡಿಕೆದಾರರಿಗೆ ರತ್ನಗಂಬಳಿಹಾಸುತ್ತಿರುವುದನ್ನು ವಿರೋಧಿಸುವುದಾಗಿ ಹೇಳಿದೆ.
ನಮ್ಮ ಕೈಗಾರಿಕಾ ಸಚಿವರಿಗೆ ಜಪಾನಿಗೆ ಹೋದಾಗ ಅಲ್ಲಿ ಓಡಾಡುವ ಅತಿವೇಗದ ರೈಲನ್ನು ನೋಡಿ ಅಂತದೇ ರೈಲನ್ನು ನಮ್ಮ ರಾಜ್ಯದಲ್ಲಿಯೂ ಓಡಿಸುವ ಮನಸ್ಸಾಗಿದೆಯಂತೆ. ಆದರೆ ನಮ್ಮ ಸಚಿವರಿಗೆ ಇದು ಮಾತ್ರ ಮಾದರಿಯಾಗುತ್ತದೆಯೇ ವಿನಃ ಸಂಪೂರ್ಣ ನೆಲಕ್ಕೆ ಬಿದ್ದಂತಹ ಸಂದರ್ಭದಲ್ಲಿಯೂ ಮತ್ತೆ ಜಗತ್ತಿನಲ್ಲಿ ಜಪಾನ್ ದೇಶಕ್ಕೆ ತಲೆ ಎತ್ತಿ ನಿಲ್ಲಲು ಕಾರಣವಾದ ಅದರ ಸ್ವಾಭಿಮಾನಿ ಆರ್ಥಿಕ ನೀತಿ ಗೋಚರವಾಗದಿರುವುದು ದುರಂತ. ನಮ್ಮ ಪರಾವಲಂಬಿ ನೀತಿಯಿಂದಲೇ ನಮ್ಮ ಜಿಮ್‌ನಲ್ಲಿ ಜಪಾನಿನ ಅತಿಥಿಗಳಿರುತ್ತಾರೆಯೇ ವಿನಃ ಅವರ ದೇಶಗಳ ಸಮಾವೇಶಗಳಲ್ಲಿ ನಮ್ಮರಿರುವುದಿಲ್ಲ.
ನಿಜಕ್ಕೂ ನಮ್ಮ ಸರ್ಕಾರಗಳಿಗೆ ರಾಜ್ಯವನ್ನು ಪ್ರಗತಿಯ ಪಥದಲ್ಲಿ ನಡೆಸುವ ಇಚ್ಛೆಯಿರುವುದಾದರೆ ಇಂತಹ ಜಿಮ್‌ಗಳು ಉಪಯೋಗಕ್ಕೆ ಬರುವುದಿಲ್ಲ ಎಂಬುದನ್ನು ಮೊದಲು ಅರಿಯಬೇಕು. ನಮ್ಮ ರಾಜ್ಯದ ಆರ್ಥಿಕತೆ ಎಂಬುದು ಎಷ್ಟೊಂದು ಅಸಮಾನವಾಗಿಬಿಟ್ಟಿದೆ ಎಂಬುದನ್ನಿ ಇತ್ತೀಚಿನ ಆರ್ಥಿಕ ಸಮೀಕ್ಷೆಯೇ ಹೇಳುತ್ತದೆ. ೨೦೧೧-೧೨ರ ಸಾಲಿನಲ್ಲಿ ನಮ್ಮ ಒಟ್ಟು ರಾಜ್ಯ ಉತ್ಪನ್ನ (ಜಿಎಸ್‌ಡಿಪಿ)ಯಲ್ಲಿ ಶೇಕಡ ೫೫ ರಷ್ಟು ಪಾಲು ಕೇವಲ ಸೇವಾ ಕ್ಷೇತ್ರ ಹೊಂದಿದ್ದರೆ, ಪ್ರಾಥಮಿಕ ಕ್ಷೇತ್ರವಾದ ಕೃಷಿ ಕ್ಷೇತ್ರದ ಪಾಲು ಕೇವಲ ಶೇಕಡ ೧೬.೨೨ ಮತ್ತು ಕೈಗಾರಿಕಾ ಕ್ಷೇತ್ರದ ಪಾಲು ಶೇಕಡ ೨೮.೬ ಮಾತ್ರ. ಹಾಗೆಯೇ ೨೦೧೨ ಮಾರ್ಚ್ ಅವಧಿಯ ಅಧಿಕೃತ ಅಂಕಿಅಂಶಗಳ ಪ್ರಕಾರ ರಾಜ್ಯದ ಕೃಷಿ ಕ್ಷೇತ್ರದ ಬೆಳವಣಿಗೆ ಕೇವಲ ಶೇ.೨.೯ರ ದರದಲ್ಲಿದ್ದರೆ ಕೈಗಾರಿಕೆಯ ಬೆಳವಣಿಗೆ ದರ ಕೇವಲ ಕೇವಲ ಶೇ.೩.೬. ಅದೇ ಸೇವಾ ಕ್ಷೇತ್ರದ ಬೆಳವಣಿಗೆ ಶೇಕಡ ೧೦.೬ ರಷ್ಟಿದೆ.
ನಮ್ಮ ಆರ್ಥಿಕ ಅಭಿವೃದ್ಧಿಯ ದುರಂತವೇ ಇದು. ಸೇವಾಕ್ಷೇತ್ರ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನಗಳೆಲ್ಲಾ ಅಭಿವೃದ್ದಿ ಹೊಂದುವುದು ಒಳ್ಳೇಯದೇ. ಬೆಂಗಲೂರು ಜಗತ್ತಿನಲ್ಲೇ ನಾಲ್ಕನೇ ದೊಡ್ಡ ತಂತ್ರಜ್ಞಾನ ಕೇಂದ್ರವಾಗಿರುವುದೂ ನಮಗೆ ಹೆಮ್ಮೆ ತರುವ ವಿಷಯ. ಆದರೆ ಇದೆಲ್ಲಾ ನಮ್ಮ ಕೃಷಿ ಮತ್ತು ಕೈಗಾರಿಕೆಗಳನ್ನು ಬಲಿ ಕೊಟ್ಟೇ ಆಗಬೇಕೆ? ಕೃಷಿ ಕೈಗಾರಿಕೆ ಮತ್ತು ಸೇವಾಕ್ಷೇತ್ರ ಮೂರರ ಬೆಳವಣಿಗೆಯನ್ನೂ ಸಮತೋಲನದಿಂದ ಕೊಂಡಿಯ್ದಾಗ ಮಾತ್ರ ನಿಜವಾದ ಸರ್ವತೋಮುಖ ಪ್ರಗತಿ ಸಾಧ್ಯವಲ್ಲವೇ? ಅದೇ ರೀತಿಯಲ್ಲಿ ಬಂಡವಾಳ ಹೂಡಿಕೆಯ ಪ್ರಧಾನ ಭಾಗ ಬೆಂಗಳೂರಿನ ಸುತ್ತ ಮುತ್ತಲೇ ಇರುತ್ತದೆ. ಈಗಾಗಲೇ ಎಲಾ ರೀತಿಯಲ್ಲೂ ಹೊರಲಾರದ ಭಾರ ಹೊತ್ತಿರುವ ಬೆಂಗಳೂರಿಗೆ ಇನ್ನೂ ಎಷ್ಟು ಭಾರ ಹೊರಿಸುತ್ತಾ ಹೋಗಬೇಕು? ಹೀಗೇ ಹೋದರ ಬೆಂಗಳೂರಿನ ನೀರಿನ ಸಮಸ್ಯೆ ಮತ್ತು ಟ್ರಾಫಿಕ್ ಸಮಸ್ಯೆಗಳೆರಡೂ ಅಪಾರ ಪ್ರಮಾಣಕ್ಕೆ ಉಲ್ಬಣಗೊಂಡಾಗ ನಮಗಿರುವ ಪರಿಹಾರವಾದರೂ ಏನು? ಈ ನಿಟ್ಟಿನಲ್ಲಿ ನಿವೃತ್ತ ಐಎಎಸ್ ಅಧಿಕಾರಿಯಾಗಿದ್ದ ಚಿರಂಜೀವಿ ಸೀಂಗ್ ಅವರು ತಾವು ನಗರಾಭಿವೃದ್ಧಿ ಕಾರ್ಯದರ್ಶಿಯಾಗಿದ್ದಾಗ ಹರಿಹರ-ರಾಣೇಬೆನ್ನೂರಿನಲ್ಲಿ ಎರಡನೇ ಹೊದ ರಾಜಧಾನಿಯೊಂದನ್ನು ಸ್ಥಾಪಿಸಲು ಸರ್ಕಾರದ ಮುಂದೆ ಸಲಹೆ ನೀಡಿದ್ದರು. ನಮ್ಮ ಇಂದಿನ ಪರಿಸ್ಥತಿಯಲ್ಲಿ ಅದು ರಾಜ್ಯದ ನಿಜವಾದ ಪ್ರಗತಿಗೆ ಸಹಾಕಾರಿಯಾಗಬಲ್ಲದು.
ಹೀಗಾಗಿ ಈ ದುಂದು ವೆಚ್ಚ ಮತ್ತು ಪೊಳ್ಳು ಒಡಂಬಡಿಕೆಗಳ ಜಿಮ್‌ಗಳ ಅನಿವಾರ್ಯತೆ ಇಂದು ಕರ್ನಾಟಕಕ್ಕಿಲ್ಲ ಎಂದಷ್ಟೆ ಹೇಳಬಹುದು.
(ದ ಸಂಡೆ ಇಂಡಿಯನ್ ಪತ್ರಿಕೆಯಲ್ಲಿ ಪ್ರಕಟಿತ ಲೇಖನ)