ಅಲ್ಲೊಬ್ಬ ತಾಯಿಯಿದ್ದಾಳೆ. ಆಕೆಯ ವಯಸ್ಕ ಮಗನಿದ್ದಾನೆ. ಜೊತೆಗೆ ಅಲ್ಲೊಂದು ತಾಯ ಮೇಲಿನ ಉತ್ಕಟವಾದ ಪ್ರೀತಿ, ಅದರ ಬೆನ್ನಹಿಂದೆಯೇ ಹೊಂಚು ಹಾಕಿ ಕುಳಿತಿರುವ ಸಾವು! ಇವೆಲ್ಲಕ್ಕೂ ಸಾಕ್ಷಿಯಾಗುವ ನಿಸರ್ಗವಿದೆ. ಆ ತಾಯಿ ಅದ್ಯಾವುದೋ ಹೆಸರಿಲ್ಲದ ರೋಗಕ್ಕೆ ತುತ್ತಾಗಿದ್ದಾಳೆ. ಅಕ್ಷರಶಃ ಮೃತ್ಯು ಶಯ್ಯೆಯಲ್ಲಿದ್ದಾಳೆ. ಹೇಳುವುದೇ ಬೇಡ. ತನ್ನ ಬದುಕಿನ ಕಟ್ಟ ಕಡೆಯ ಕ್ಷಣಗಳನ್ನೆಣಿಸುತ್ತಿದ್ದಾಳಾಕೆ. ಅದೇ ತಾಯಿ ಈ ಮಗನನ್ನು ಹಿಂದೊಮ್ಮೆ ಆತ ಆಗಷ್ಟೇ ಕಣ್ಣು ಬಿಟ್ಟಿದ್ದ ಶಿಶುವಾಗಿದ್ದಾಗ ಹೇಗೆ ಮೈಯೆಲ್ಲಾ ಕಣ್ಣಾಗಿ ಆರೈಕೆ ಮಾಡಿದ್ದಳೋ ಅದೇ ರೀತಿಯ ಆರೈಕೆಯಲ್ಲಿ ಆ ಮಗ ಈಗ ತೊಡಗಿದ್ದಾನೆ.
''ನನ್ನನ್ನ ಹೊರಗೆ ವಾಕ್ ಕರೆದುಕೊಂಡು ಹೋಗು'' ಎಂಬ ಬೇಡಿಕೆ ಆಕೆಯದು. ಸರಿ ಎವಳನ್ನು ಎತ್ತಿಕೊಂಡು ಹೊರಡುವ ಮಗ......... ಹೀಗೆ ಸಾಗುತ್ತದೆ ಮೊನ್ನೆ ನಾನು ನೋಡಿದ ರಷಿಯನ್ ಚಿತ್ರ ಮದರ್ ಅಂಡ್ ಸನ್ ಚಿತ್ರದ ಕಥಾ ವಸ್ತು. ಚಿತ್ರದ ನಿರ್ದೇಶಕ ಅಲೆಕ್ಷಾಂಡರ್ ಸೊಕುರೋವ್.
ಸಿನಿಮಾ ಕೇವಲ ಎಪ್ಪತ್ತಾರು ನಿಮಿಷಗಳಲ್ಲಿ ಏನು ಹೇಳಬೇಕೋ, ಹೇಗೆ ಹೇಳಬೇಕೋ ಎಲ್ಲವನ್ನೂ ಹೇಳುತ್ತದೆ. ತಾಯಿಯನ್ನು ಮಗನು ಎತ್ತಿಕೊಂಡು ಹೊರಡುವ ದೃಶ್ಯದ ಪ್ರತಿಯೊಂದು ಫ್ರೇಂಗಳೂ ಅದ್ಭುತ. ಅಲ್ಲಿ ಬೇರಾರಿಲ್ಲ. ಅವರಿಬ್ಬರೇ. ಹೊರಜಗತ್ತಿನ ಮನುಷ್ಯರೊಂದಿಗೆ ಸಂಪರ್ಕವನ್ನು ತಿಳಿಸುವ ಮತ್ತೇನಾದರೂ ಇದ್ದರೆ ಅದು ಅಲ್ಲಿಗೆ ಸನಿಹದಲ್ಲಿ ಹಾದು ಹೋಗುವ ಒಂದು ರೈಲು ಬಂಡಿ ಮತ್ತದರ ಶಿಳ್ಳೆ ಮಾತ್ರ. ಹಿಮಪಾತ, ಸುಂಯ್ ಎಂದು ಬೀಸುವ ಗಾಳಿ, ಗಾಳಿ ಬಂದಂತೆ ತೊನೆವ ಹುಲ್ಲುಹಾಸು, ಗುಡ್ಡ ಬೆಟ್ಟಗಳ ಇಳಿಜಾರು, ಹಸಿರು ಬಯಲು..... ಪೃಕೃತಿಯ ಈ ಅದ್ಭುತ ರಮ್ಯತೆಯ ಹಿಂದೇ ಅಲೆವ ವಿಷಾದದ ಛಾಯೆ.
ಮತ್ತೆ ಹೋಗಿ ಹಾಸಿಗೆಯ ಮೇಲೆ ಮಲಗಿಸುತ್ತಾನೆ. ಅದು ಆಕೆಯ ಪಾಲಿನ ಮರಣದ ಹಾಸಿಗೆ.
ಹಾಗೇ ಮಲಗಿಸಿ, ''ಏನಾದರೂ ತಿನ್ನಲು ತರುತ್ತೇನೆ ಅಮ್ಮಾ.....''ಎನ್ನುವಾಗ ಆಕೆ,
''ನಂಗೆ ಭಯವಾಗ್ತಿದೆ. ಸಾವಿನ ಬಗ್ಗೆ'' ಎನ್ನುತ್ತಾಳೆ.
''ಸರಿ ಹಾಗಾದರೆ. ಸಾಯೋದೇ ಬೇಡ ಬಿಡು. ಬದುಕಮ್ಮ. ಅಮ್ಮಾ ನಿನಗೆ ಎಲ್ಲಿಯವರೆಗೆ ಬದುಕಬೇಕು ಎನ್ನಿಸತ್ತೋ ಅಲ್ಲಿಯವರೆಗೂ ಬದುಕು.....''
ಯಾಕಾಗಿ? ಯಾಕಾಗಿ? ಅವಳ ಮರುಪ್ರಶ್ನೆ,
''ಯಾಕೆ ಎಂದರೆ? ನನಗೇನು ಗೊತ್ತು? ನನಗನ್ನಿಸುವಂತೆ ಜನರು ಬದುಕಲಿಕ್ಕೆ ನಿರ್ದಿಷ್ಟ ಕಾರಣ ಅಂತ ಇರೋದಿಲ್ಲ. ಆದರೆ ಅವರು ಒಂದು ನಿರ್ದಿಷ್ಟ ಕಾರಣದಿಂದ ಸಾಯೋದಂತೂ ಖರೆ''
'ಹಾಗಾದರೆ ನನಗಿರುವ ಕಾರಣ? ತಾಯಿಯ ಪ್ರಶ್ನೆ.
''ನಿನಗೆ ಕಾರಣವಿಲ್ಲ. ಏನೂ ಕಾರಣ ಇಲ್ಲ. ಹಾಗಾಗಿ ನೀನು ಬದುಕ್ತೀಯ. ಖುಷಿಯಿಂದ ಬದುಕನ್ನು ಕಳೆ ಅಮ್ಮ''
'ಇಲ್ಲ. ನನಗೆ ಕಾರಣವಿದೆ'
''ಏನು? ಹಾಗೇನೂ ಆಗಲ್ಲ. ಈ ರೀತೀ ಏನೋನೋ ಯೋಚಿಸಿ ನನ್ನ ಮನಸ್ಸು ನೋಯಿಸಬೇಡ'' ಎಂದು ಧೈರ್ಯ ಹೇಳುವ ಆ ಮಗನಿಗೂ ತಿಳಿದಿರುತ್ತದೆ. ತನ್ನ ತಾಯಿಯ ಸಾವು ಇಲ್ಲೇ ಎಲ್ಲೋ ಹತ್ತಿರದಲ್ಲಿದೆ ಎಂದು.
ಹೀಗೇ ಅಮ್ಮನನ್ನು ತನ್ನೆಡೆಗೆ ಮಗುವಿನಣತೆ ಒರಗಿಸಿಕೊಂಡು ಆಕೆಯ ಮೈದಡವುತ್ತಾ, ''ನೀನು ಅದೆಷ್ಟು ಸಣ್ಣಕಿದ್ದೀಯ ಅಮ್ಮ. ನನ್ನ ಪುಟಾಣಿ ನೀನು. ನಾವಿಬ್ಬರೂ ತುಂಬಾ ಪ್ರೀತಿಸ್ತೀವಿ. ನಿನಗೇನೂ ಆಗಲ್ಲ ಕಣಮ್ಮ. ನಾನು ನಿನ್ನ ಜೊತೆಯಲ್ಲೇ ಇರುತ್ತೇನೆ...'' ಎಂದು ಧೈರ್ಯ ತುಂಬುವ ಮಗನೆದುರು ತನ್ನ ವಿಷಾದವನ್ನು ವ್ಯಕ್ತಪಡಿಸುತ್ತಾಳೆ.
''ನನಗೆ ಅತ್ತೂ ಅತ್ತೂ ಸಾಕಾಗಿದೆ ಮಗು, ನನಗೆ ಬಹಳ ನೋವಾಗತ್ತೆ ಕಣೋ..''
'ನಂಗೊತ್ತಮ್ಮ ನಿನಗೇಕೆ ಇಷ್ಟೊಂದು ದುಃಖ ಅಂತ. ನನ್ನ ಒಂಟಿಯಾಗಿ ಬಿಟ್ಟು ಹೋಗ್ತೀಯ ಅಂತಾ ತಾನೆ? ಅಂತಾದ್ದೇನೂ ಆಗಲ್ಲಮ್ಮ.....ನೀನು ನನ್ನ ಬಿಟ್ಟು ಹೋಗಲ್ಲ. ಚಿಂ ತೆ ಮಾಡಬೇಡ. ಎಂದಾಗ ಆಕೆ ''ಹಾಗಲ್ಲ ಮಗು. ಅದಕ್ಕಲ್ಲ. ಒಂಟಿಯಾಗಿ ಬದುಕೋದೇನೂ ಕಷ್ಟ ಅಲ್ಲ. ಅಸಹಜವೂ ಅಲ್ಲ. ಆದರೆ ನಾನೇನು ಅನುಭವಿಸಿದ್ದೀನೋ ಅದೆಲ್ಲವನ್ನೂ ಮುಂದೆ ನೀನೂ ಸಹ ಅನುಭವಿಸಬೇಕಲ್ಲಾ... ಅದು .. ಅದು ನನಗೆ ಹೇಳಲಾರದ ದುಖಃ ತರಿಸುತ್ತೆ. ಇದು ತುಂಬಾ ಅನ್ಯಾಯ...'' 'ತಾಯ್ಗರುಳು’ ಏನು ಎನ್ನುವುದನ್ನು ಸುಕೊರೊವ್ ತೋರಿಸುವ ಬಗೆ ಇದು.
ಸಿನೆಮಾದಲ್ಲಿ ಸಂಭಾಷಣೆಗಳಿಗೆ ಹೆಚ್ಚು ಪ್ರಾಮುಖ್ಯತೆಯಿಲ್ಲ. ಇದರಲ್ಲ್ಲಿ ಭಾವನೆಗಳಿಗೇ ಪ್ರಾಶಸ್ತ್ಯತೆ. ಆದರೆ ಪಾತ್ರಗಳ ನಡುವಿನ ಮಿತವಾದ ಸಂಭಾಷಣೆ ಕೂಡಾ ಅಷ್ಟೇ ಶಕ್ತವಾಗಿದೆ ಎನ್ನುವುದನ್ನು ಮರೆಯುವಂತಿಲ್ಲ.
**
ಅಮ್ಮನ ಮಲಗಿಸಿ ಒಬ್ಬನೇ ಹೊರ ಹೋಗುವ ಮಗ ಕಾಡಿನಲಿ ಎಲ್ಲೋ ಎಂದೆಡೆ ಬಿಸಿಲ ಝಳಕ್ಕೆ ಮುಖಕೊಟ್ಟು ಕೊಂಚ ಹೊತ್ತು ಒರಗುತ್ತಾನೆ. ಮತ್ತೆ ಎದ್ದು ಬೆಟ್ಟ ತಪ್ಪಲಲ್ಲಿ ನಿಂತಾಗ ಮತ್ತದೇ ರೈಲುಬಂಡಿಯ ಸದ್ದು. ಹಿಂತಿರುಗಿ ದಿಟ್ಟಿಸುತ್ತಾನೆ. ಅದು ಶಿಳ್ಳೆ ಹಾಕಿ ಮರೆಯಾಗುತ್ತದೆ. ದೊಡ್ಡ ಮರಗಳ ನಡುವೆ ನಿಂತು ದೂರದ ಸಾಗರವನ್ನು ದಿಟ್ಟಿಸುತ್ತಾನೆ. ಮರವೊಂದಕ್ಕೆ ಮುಖವಾನಿಸಿ ಬಿಕ್ಕಿ ಬಿಕ್ಕಿ ಅಳುತ್ತಾನೆ.
ಮರಳಿ ಬಂದು ತಾಯ ಕೈಯ ಮೇಲೆ ಮುಖವಾನಿಸಿ ಕೈಹಿಡಿದರೆ ಆಕೆಯ ಕೈ ತಣ್ಣಗಾಗಿ, ನಾಡಿಮಿಡಿತ ನಿಂತಿರುತ್ತದೆ. ಉಮ್ಮಳಿಸಿ ಬಂದ ದುಃಖಕ್ಕೆ ಮಗನ ಗಂಟಲು ಬಿಗಿದುಕೊಳ್ಳುತ್ತದೆ.
ಅಮ್ಮನ ಮುಖವನ್ನೇ ದಿಟ್ಟಿಸುತ್ತಾ ಆಕೆಯಿನ್ನೂ ಬದುಕಿಯೇ ಇದ್ದಾಳೆಂಬಂತೆ ''ಅಮ್ಮ..... ನಿನಗೆ ಕೇಳಿಸುತ್ತೆ. ನಂಗೊತ್ತು. ಒಂದು ವಿಷಯ ಹೇಳುತ್ತೇನೆ ಕೇಳು. ನಾವಿಬ್ಬರೂ ಅಂದುಕೊಂಡಿರುವ ಜಾಗದಲ್ಲಿ ಮತ್ತೆ ಭೇಟಿಯಾಗೋಣ. ಸರೀನಾ? ನೀನು ನನಗಾಗಿ ಅಲ್ಲಿ ಕಾಯ್ತಾ ಇರು. ಸ್ವಲ್ಪ ತಾಳ್ಮೆಯಿಂದ ಕಾಯ್ತಿರು ನನ್ನ ಮುದ್ದು ಅಮ್ಮ. ಕಾಯ್ತಾ ಇರು ''
ಇಷ್ಟಕ್ಕೆ ಚಿತ್ರ ಮುಗಿಯುತ್ತದೆ. ಅಷ್ಟೂ ಹೊತ್ತು ಅಮ್ಮನನ್ನೇ ಮಗುವಾಗಿಸಿ ಮಗನನ್ನೇ ತಾಯಿಯನ್ನಾಗಿಸಿ ಎಪ್ಪತ್ತಾರು ನಿಮಿಷಗಳ ಕಾಲ ಪ್ರತಿ ಕ್ಷಣವೂ ವಿಪರೀತ ಭಾವತೀವ್ರತೆಯನ್ನುಂಟು ಮಾಡಿ ಮುಗಿದ ನಂತರವೂ ಕಾಡುವ ಅಪರೂಪದ ಚಿತ್ರ ಮದರ್ ಅಂಡ್ ಸನ್. ಮೊದಲ ದೃಶ್ಯದಿಂದ ಕಡೆಯ ದೃಶ್ಯದವರೆಗೂ ಒಂದೇ ಓಘವನ್ನು ಸಿನೆಮಾ ಕಾಪಾಡಿಕೊಂಡು ಹೋಗುವುದರಿಂದ ನಮಗೆ ಅಮ್ಮ-ಮಗ ಇಬ್ಬರ ಪ್ರತಿ ಭಾವನೆಗಳನ್ನೂ ಅನುಭವಿಸಲು ಸಾಧ್ಯವಾಗುತ್ತದೆ.
ರೋಗಗ್ರಸ್ತ ತಾಯಿಯಾಗಿ ಗುದ್ರುನ್ ಗಯರ್ ಮತ್ತು ಮಗನಾಗಿ ಅಲೆಕ್ಷಿ ಅನಾನಿಶೋವ್ರ ನಟನೆ ಅಬ್ಬ..! ಎನ್ನಿಸುವಂತಿದ್ದರೆ ಕ್ಯಾಮೆರಾ ಕೈಚಳಕವಂತೂ ಚಿತ್ರದ ಒಂದೊಂದು ಫ್ರೇಮ್ಗಳನ್ನೂ ಕಣ್ಣಿಗೆ ಕಟ್ಟಿದಂತೆ ನಿಲ್ಲ್ಲಿಸುತ್ತವೆ.
ನಿರ್ದೇಶಕ ಅಲೆಕ್ಸಾಂಡರ್ ಸುಕೊರೋವ್ |
ಸಾಮಾನ್ಯವಾಗಿ ಸಿನೆಮಾಗಳಲ್ಲಿ ಅಲ್ಲಲ್ಲಿ ಒಂದೊಂದು ದೃಶ್ಯ ನಮ್ಮನ್ನು ತೀವ್ರವಾಗಿ ತಟ್ಟುತ್ತವೆ. ಆದರೆ ಮೊದಲಿಂದ ತುದಿಯವರೆಗೂ ಒಂದೇ ಬಗೆಯಲ್ಲಿ ನಮ್ಮೊಳಗೆ ಭಾವತರಂಗಗಳನ್ನು ಹುಟ್ಟಿಸಿ ಮನಸ್ಸನ್ನು ಕಲಕಿಬಿಡುವ ಅಪರೂಪದ ಚಿತ್ರ ಇದೆನ್ನಿಸಿತು.