ವೀರಣ್ಣ ಮಡಿವಾಳರ ಸಂದರ್ಶನ

ಕನ್ನಡದ ಹೊಸತಲೆಮಾರಿನ ಸಂವೇದನಾಶೀಲ ಬರೆಹಗಾರರಲ್ಲಿ ಒಬ್ಬರಾದ ವೀರಣ್ಣ ಮಡಿವಾಳರ ಅವರ 'ನೆಲದ ಕರುಣೆಯ ದನಿ' ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದ ಸಂದರ್ಭದಲ್ಲಿ 'ದ ಸಂಡೆ ಇಂಡಿಯನ್' ಗಾಗಿ ನಡೆಸಿದ ಸಂದರ್ಶನ. ನಿಮ್ಮ 'ನೆಲದ ಕರುಣೆಯ ದನಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪ್ರಶಸ್ತಿ ಲಭಿಸಿರುವುದು ಏನೆನ್ನಿಸುತ್ತದೆ? ಇದು ನನ್ನ ಮತ್ತು ನನ್ನ ತಲೆಮಾರಿನ ಅಭಿವ್ಯಕ್ತಿಗೆ ಸಂದ ಗೌರವವೆಂದು ಭಾವಿಸುತ್ತೇನೆ. ಈ ಕ್ಷಣ ಅಪ್ಪನ ಬೆವರು, ಅವ್ವನ ಕನಸು ನೆನಪಾಗುತ್ತಿವೆ. ಈ ಪುರಸ್ಕಾರವನ್ನು ಕನ್ನಡ ಕಾವ್ಯವನ್ನು ಮತ್ತಷ್ಟು ಜೀವಪರವಾಗಿಸಿದ ಕವಿ ಎನ್.ಕೆ.ಹನುಮಂತಯ್ಯ, ವಿಭಾ ತಿರಕಪಡಿ, ಹಾಗೂ ನಾನು ಎಷ್ಟು ಓದಿದರೂ ಮತ್ತೆ ಮತ್ತೆ ಓದಬೇಕೆನಿಸುವ ಪುಟ್ಟ ಪುಸ್ತಕಗಳೇ ಆಗಿರುವ ನನ್ನ ಗಾವಡ್ಯಾನವಾಡಿ ಶಾಲೆಯ ಮಕ್ಕಳಿಗೆ ಅರ್ಪಿಸುತ್ತೇನೆ. ವರ್ತಮಾನದ ಈ ಅವಘಡದ ಕಾಲದಲ್ಲಿ ಯಾವುದೇ ಸಂವೇದನಾಶೀಲ ಮನಸ್ಸು , ಯಾವುದೇ ಪುರಸ್ಕಾರವನ್ನು ಆನಂದಿಸುವ ಸ್ಥಿತಿಯಲ್ಲಿಲ್ಲ. ಈ ಕ್ಷಣ ನನ್ನ ಶಿಕ್ಷಕ ತರಬೇತಿಯ ಖಾಲಿ ಹೊಟ್ಟೆಯ ದಿನಗಳು ನೆನಪಾಗುತ್ತಿವೆ. ಈಗ ನನ್ನ ತುತ್ತಿಗೆ ದಾರಿಯಾಗಿರಬಹುದು, ಆದರೆ ಅದೆಷ್ಟು ಎಣಿಸಲಾಗದ ಹಸಿದ ಹೊಟ್ಟೆ ಚೀಲಗಳು ಕಣ್ಣಮುಂದೆಯೇ ಇವೆ. ಇಂದು ಕೇವಲ ಅನ್ನಕ್ಕಾಗಿ ಪರದಾಟ ಮಾತ್ರವಲ್ಲ, ಅದರಾಚೆಗೆ ಬದುಕಿಗೆ ಬೆಳಕಾಗುವ ವಿದ್ಯಾದೀಪದ ಹುಡುಕಾಟದ ದುರಂತವೂ ಇದೆ. ತೀರಾ ಹೊಟ್ಟೆ ಹಸಿದರೆ ಸೊಪ್ಪ...