ಕೆಲವು ಸಿನೆಮಾಗಳು ನಮ್ಮ ಮನಸ್ಸಿಗೆ ಮುದ ನೀಡಿದರೆ ಮತ್ತೆ ಕೆಲವು ಸೀದಾ ಹೃದಯಕ್ಕೇ ಲಗ್ಗೆ ಇಟ್ಟು ಬಿಡುತ್ತವೆ. ಮೊನ್ನೆ ನೋಡಿದ 'ಐ ಆ್ಯಮ್ ಕಲಾಂ ಈ ಎರಡನೆಯ ಬಗೆಯ ಚಿತ್ರ.
‘ಇರಾನಿನ ಮಜೀದ್ ಮಜೀದಿಯ ಸಿನೆಮಾಗಳನ್ನು ನೋಡುವಾಗಲೆಲ್ಲಾ ಅನಿಸುತ್ತಲ್ಲ, ‘ವಾವ್, ಇಷ್ಟೊಂದು ಸರಳವಾಗಿ ಇಷ್ಟು ಅದ್ಭುತವಾಗಿ ಸಿನೆಮಾ ಮಾಡಬಹುದಾ?!’ ಅಂತ... ಐ ಯಾಮ್ ಕಲಾಂ ಸಿನೆಮಾ ನೋಡುವಾಗ ಅನ್ನಿಸಿದ್ದೂ ಹೀಗೇನೇ.
ಈ ಸಿನೆಮಾ ನೆನೆಸಿಕೊಂಡಾಗಲೆಲ್ಲಾ ಕಥಾನಾಯಕ ಚೋಟು ಪಾತ್ರದಲ್ಲಿ ನಟಿಸಿರುವ ದೆಹಲಿಯ ಸ್ಲಂ ಬಾಲಕ ಹರ್ಷ ಮಯಾರ್ನ ‘ಕಲಾಂ’ ಮುಖವೇ ಕಣ್ಣ ಮುಂದೆ ಬರುತ್ತಿದ್ದರೆ ರಾಜಕುಮಾರ್ ರಣವಿಜಯನ ಪಾತ್ರ ಮಾಡಿರುವ ಹಸನ್ ಸಾದ್‌ನ ಮುಗ್ಧ ಮೊಗ ಹಾಗೂ ಸಿಹಿಮಾತುಗಳು ಕಿವೆಯಲ್ಲಿ ಅನುರಣನೆಗೊಳ್ಳುತ್ತವೆ. ಅದೆಷ್ಟು ಮುದ್‌ಮುದ್ದಾಗಿ ನಟಿಸಿವೆ ಈ ಮಕ್ಕಳು..ವಾಹ್!
ಇಡೀ ಚಿತ್ರದ ಕತೆ ನಡೆಯುವುದು ರಾಜಾಸ್ತಾನದ ಮರುಭೂಮಿಯಲ್ಲಿರುವ ಪ್ರವಾಸಿಗರು ಭೇಟಿ ಮಾಡುವ ಹೊಟೆಲ್ ಒಂದರ ಸುತ್ತ. ಮನೆಯಲ್ಲಿ ಕಷ್ಟವಿರುವ ಕಾರಣಕ್ಕೆ ಚೋಟುನ ತಾಯಿ ಅವನನ್ನು ಹೊಟೆಲ್ ಮಾಲಿಕ ಭಾಟಿಯ ಸುಪರ್ದಿಗಿಪ್ಪಿಸಿಬಿಡುತ್ತಾಳೆ. ಚೋಟು ಅದೆಂತಹ ಚೂಟಿ ಹುಡುಗ ಎಂದರೆ ಬಂದ ಮೊದಲ ದಿನದಿಂದಲೇ ಭಾಟಿಯ ಮೆಚ್ಚುಗೆಗಳಿಸುವಂತೆ ಕೆಲಸ ಮಾಡತೊಡಗುತ್ತಾನೆ. ಪಾಪ ಅಲ್ಲಿ ಬಹಳ ದಿನಗಳಿಂದ ಕೆಲಸ ಮಾಡುತ್ತಿರುವ ಲಪ್ಟನ್ (ಪಿತೋಬಾಶ್)ಗೆ ಈ ಚೋಟುವಿನಿಂದಾಗಿ ಅವಮಾನವಾಗತೊಡಗುತ್ತದೆ. ಆದರೆ ತನ್ನ ತರ್ಲೆ ಬುದ್ದಿಯಿಂದ ಲಪ್ಟನ್‌ಗೆ ಭೂತಚೇಷ್ಟೆ ಮಾಡಿ ಹೆದರಿಸಿಟ್ಟುಕೊಂಡುಬಿಡುತ್ತಾನೆ ಚೋಟು. ಚೋಟುಗೆ ಓದಿ ಬರೆಯುವ ಹುಚ್ಚು ಬಹಳ. ಹೋಟೆಲ್‌ನ ಟೀವಿಯಲ್ಲಿ ದೆಹಲಿಯಲ್ಲಿ ಗಣರಾಜ್ಯದಿನದ ಪೆರೇಡ್‌ನಲ್ಲಿ ಎಲ್ಲರಿಂದ ಸೆಲ್ಯೂಟ್ ಹೊಡೆಸಿಕೊಳ್ಳುವ ವ್ಯಕ್ತಿಯ ಹೆಸರು ಕಲಾಂ ಎಂದು ತಿಳಿಯುತ್ತದೆ. ಅಲ್ಲಿಂದ ಶುರುವಾಗುತ್ತದೆ ಚೋಟುನ ಕಲಾಂ ಕನಸು. ತಾನೂ ಓದಿ ಇಂಗ್ಲಿಷ್ ಕಲಿತು ಸೂಟು, ಬೂಟು ಹಾಕಿಕೊಂಡು ಕಲಾಂನಂತೆ ಎಲ್ಲರಿಂದ ಸೆಲ್ಯೂಟ್ ಹೊಡೆಸಿಕೊಳ್ಳಬೇಕು.... ಆಹಾ ಎಂತಹ ಕನಸು! ಮಾತ್ರವಲ್ಲ ಇನ್ನು ಮುಂದೆ ತಾನು ಕಲಾಂನಂತೆಯೇ ಕಾಣಿಸಬೇಕು. ಅದಕ್ಕಾಗಿ ತಲೆಗೆ ಎಣ್ಣೆ ಹಚ್ಚಿಕೊಂಡು ಎದುರಿಗೆ ಕಲಾಂ ಅವರ ಫೋಟೋ ಇಟ್ಟುಕೊಂಡು ಅದರಂತೆಯೇ ಬೈತಲೆ ತೆಗೆದುಕೊಳ್ಳುತ್ತಾರೆ ನಮ್ಮ ಚೋಟು!
ಇದೇ ಹೊತ್ತಿಗೆ ಮತ್ತೊಂದು ಕಡೆ ಅಲ್ಲಿ ರಾಜವಂಶದ ಕುಟುಂಬವೊಂದು ಅರಮನೆಯಂತಹ ಭವ್ಯ ಹೋಟೆಲ್ ಒಂದನ್ನು ನಡೆಸುತ್ತಾ ಅದರ ಒಂದು ಭಾಗದಲ್ಲಿ ವಾಸಿಸಿರುತ್ತದೆ. ಆ ರಾಜವಂಶದ ಕುವರ ರಣವಿಜಯ್‌ನಿಗೆ ಆಟ ಆಡಲಿಕ್ಕೆ ಗೆಣೆಕಾರರೇ ಇಲ್ಲ. ದೊಡ್ಡ ಕೊಠಡಿಯ ನಿರ್ಜೀವ ಆಟಿಕೆಗಳು ಇವನಿಗೆ ಯಾವ ಉತ್ಸಾಹವನ್ನೂ ನೀಡುತ್ತಿಲ್ಲ. ಹೀಗಿರುವಾಗ ಅಚಾನಕ್ ಆಗಿ ಆ ಅರಮನೆಯೊಳಕ್ಕೆ ಬರುವ ಚೋಟುನೊಂದಿಗೆ ಪರಿಚಯವಾಗುತ್ತದೆ. ಆಗ ಚೋಟು ತನ್ನನ್ನು ಪರಿಚಯ ಮಾಡಿಕೊಳ್ಳುವುದು ’ಐ ಆಮ್ಯ್ ಕಲಾಂ’ ಎಂದೇ.
ಹೀಗೆ ’ಕಲಾಂ’ ಮತ್ತು ರಣವಿಜಯ್ ಪರಮಾಪ್ತರಾಗುತ್ತಾರೆ. ಚೋಟುಗೆ ರಣವಿಜಯ್ ಇಂಗ್ಲಿಷ್ ಕಲಿಸಿದರೆ, ಚೋಟು ’ಕಲಾಂ’ಗೆ ಹಿಂದಿ, ಮರ ಹತ್ತುವುದು, ಇತ್ಯಾದಿ ಕಲಿಸುವುದು ನಡೆಯುತ್ತದೆ.
ಈ ನಡುವೆ ಬಹಳ ದಿನಗಳ ನಂತರ ಭಾಟಿಯ ಹೋಟೆಲ್‌ಗೆ ಫ್ರೆಂಚ್ ಮಹಿಳೆ ಲೂಸಿಯ ಆಗಮನವಾಗುತ್ತದೆ. ಆಕೆ ಇಲ್ಲಿ ಸ್ಥಲೀಯ ಸಂಸ್ಕೃತಿಯನ್ನು ಅಧ್ಯಯನ ನಡೆಸಲು ಬಂದವಳು. ಭಾಟಿ ಮಹಾರಾಜರಿಗೆ ಲೂಸಿ ಮೇಲೆ ಹೇಳಿಕೊಳ್ಳಲಾರದ ಮೋಹ. ಅದಕ್ಕಾಗಿ ಆಕೆಯನ್ನು ಒಲಿಸಿಕೊಳ್ಳಲು ಬಹಳಾ ಕಷ್ಟಪಡುತ್ತಿರುತ್ತಾರೆ ಪಾಪ. ಆದರೆ ಲೂಸಿ ಮೇಡಂ ಚೋಟುಗೆ ಎರಡು ದಿನ ರಜೆ ಹಾಕಿಸಿ ತನ್ನೊಂದಿಗೆ ಕರೆದುಕೊಂಡು ಹೋಗಿಬಿಟ್ಟಾಗ ಭಾಟಿಯವರಿಗೆ ಬಹಳ ಕಷ್ಟವಾಗುತ್ತದೆ ಪಾಪ.
ಚೋಟು ಮತ್ತು ರಾಜಕುಮಾರನ ಒಡನಾಟ ಒಂದು ದಿನವೂ ತಪ್ಪುವುದಿಲ್ಲ. ಚೋಟು ಮೂಲಕ ಲೂಸಿಯ ಸಹಾಯದಿಂದ ರಾಜಕುಮಾರ ಫ್ರಂಚ್ ಪರೀಕ್ಷೆಯಲ್ಲಿ ಎ ಪ್ಲಸ್ ಗಿಟ್ಟಿಸಿಕೊಳ್ಳುತ್ತಾನೆ. ಚೋಟು ಬರೆದ ಹಿಂದಿ ಭಾಷಣವನ್ನು ಹೇಳಿ ಪ್ರಶಸ್ತಿಯೂ ಗಿಟ್ಟುತ್ತದೆ. ಅತ್ತ ಚೋಟು ಎಲ್ಲರಿಗಿಂತ ಚೆನ್ನಾಗಿ ಇಂಗ್ಲಿಷ್ ಮಾತನಾಡುತ್ತಾನೆ. ಆದರೆ ರಾಯಲ್ ಹೋಟೆಲಿನ ಮ್ಯಾನೇಜರ್‌ಗೆ ಈ ಗೆಳೆತನ ತಿಳಿದು ಚೋಟು ಇರುವ ಹೊಟೆಲ್‌ಗೆ ಬಂದು ನೋಡಿದರೆ ಅಲ್ಲಿ ರಾಜಕುಮಾರ ನೀಡಿದ ಬಟ್ಟೆಬರೆಗಳೆಲ್ಲಾ ಸಿಕ್ಕಿ ತನ್ನ ತಾಯಿತೆದುರೇ ’ಕಳ್ಳ’ ಎನ್ನಿಸಿಕೊಳ್ಳಬೇಕಾಗಿ ಬಂದರೂ ಸತ್ಯವನ್ನು ಬಿಟ್ಟುಕೊಡುವುದಿಲ್ಲ ಚೋಟು. ಆದರೆ ತನಗಾದ ಅವಮಾನ ತಾಳದೇ ತನ್ನ ಬಹುದಿನದ ಕನಸಿನಂತೆ ಟ್ರಕ್ ಒಂದನ್ನು ಹತ್ತಿ ಡೆಲ್ಲಿಗೆ ಕಲಾಂ ಭೇಟಿ ಮಾಡಲು ಹೊರಟೇಬಿಡುತ್ತಾನೆ. ಇದೆಲ್ಲಾ ಕೊನೆಗೆ ರಾಜಕುಮಾರನಿಗೆ ತಿಳಿಸು ಅವನ ಹೃದಯ ಕಳೆದ ಪ್ರಾಣಮಿತ್ರನಿಗಾಗಿ ಬಿಕ್ಕತೊಡಗುತ್ತದೆ. ಎಲ್ಲರೆದುರು ಆತನೇ ಇದುವರೆಗೆ ನಡೆದ ಸತ್ಯವನ್ನು ಹೇಳಿ ತನ್ನ ಎಲ್ಲಾ ಸಾಧನೆಯ ಹಿಂದಿರುವುದು ’ಕಲಾಂ’ ಎಂದೂ ತನಗೆ ಕಲಾಂ ಬೇಕೇ ಬೇಕು ಎಂದು ಹಠ ಹಿಡಿಯುತ್ತಾನೆ. ಹೀಗೆ ಅಲ್ಲಿ ಎಪಿಜೆ ಅಬ್ದುಲ್ ಕಲಾಂ ಹುಡುಕುತ್ತಾ ಚೋಟು ಹೊರಟರೆ, ಈ ಕಲಾಂನನ್ನು ಹುಡುಕಿಕೊಂಡು ರಾಜಕುಮಾರನ ಕುಟುಂಬ ಹಾಗೂ ಲೂಸಿ ಎಲ್ಲರೂ ಹುಡುಕುತ್ತಾರೆ.....
ವಾಸ್ತವದಲ್ಲಿ ಸತ್ಯಘಟನೆಯೊಂದರ ಎಳೆಯನ್ನಿಟ್ಟುಕೊಂಡು ಇದನ್ನೊಂದು ಸಾಕ್ಷ್ಯಚಿತ್ರವಾಗಿಸಹೊರಟಿದ್ದರು ಇದರ ನಿರ್ದೇಶಕ ನೀಲಾ ಮಾಧವ್ ಪಾಂಡಾ. ಆದರೆ ಕೊನೆಗೆ ಮನಸ್ಸು ಬದಲಾಯಿಸಿ ಇದನ್ನು ಒಂದು ಬಾಲಿವುಡ್ ಸಿನಿಮಾ ಮಾಡಿದಾಗ ಇಂತಹ ಒಂದು ಅಭೂತಪೂರ್ವ ಅನುಭವ ನೀಡುವ ‘ಐ ಯಾಮ್ ಕಲಾಂ ಚಿತ್ರ ರೂಪುಗೊಂಡಿದೆ! ಲಪ್ಟನ್, ಭಾಟಿ ಎಲ್ಲರ ಅಭಿನಯಗಳೂ ಚೆನ್ನಾಗಿಯೇ ಇವೆ. ಆದರೆ ’ಚೋಟು’ ಮತ್ತು ರಣವಿಜಯ್ ಮಾತ್ರ ಹೃದಯದಲ್ಲುಳಿದುಬಿಡುತ್ತಾರೆ. ಸ್ಥಳೀಯ ಜಾನಪದ ರಾಗಗಳ ಹಾಡು ಮತ್ತು ಒಂದು ನೃತ್ಯ ಸಹ ಮುದನೀಡುತ್ತವೆ. ಈ ಚಿತ್ರ ಮನಸನ್ನು ರಂಜಿಸುತ್ತದೆ, ನಗಿಸುತ್ತದೆ, ಸ್ಪೂರ್ತಿ ಉಕ್ಕಿಸುತ್ತದೆ, ಬೇಸರ ಮೂಡಿಸುತ್ತದೆ ಕೊನೆಗೆ ಕಣ್ಣಂಚಲ್ಲಿ ನೀರನ್ನೂ ಹನಿಕಿಸುತ್ತದೆ. ಇನ್ನೇನು ಬೇಕು ಹೇಳಿ ಒಂದು ಅತ್ಯುತ್ತಮ ಸಿನಿಮಾ ಎನ್ನಲಿಕ್ಕೆ??