ಮನಸ್ಸನ್ನು ತೇವಗೊಳಿಸುವ ”ನಡುವೆ ಸುಳಿವಾತ್ಮನ ಬದುಕು-ಬಯಲು’
"ಅಮ್ಮಾ ನನಗ್ಯಾಕೆ ಈ ಸಂಕಟ? ಯಾಕೆ ಇಂತ ಪರೀಕ್ಷೆಗೆ ನನ್ನ ಒಳಪಡಿಸ್ತಿದೀಯ? ನಿನ್ನ ನಂಬಿದವರಿಗೆ ಎಲ್ಲವನ್ನೂ ನೀನು ಕೊಡ್ತೀಯ ಅಂತಾರೆ. ಆದರೆ ನನಗೆ ನೀನು ಕೊಟ್ಟಿರೋದು ನೀನು ಬರೀ ನೋವನ್ನಷ್ಟೆ. ನಾನು ಮಾಡಿರೋ ತಪ್ಪಾದರೂ ಏನು? ಗಂಡಸಿನ ರೂಪದಲ್ಲಿ ಹೆಣ್ಣಿನ್ ಭಾವನೆ ತುಂಬಿ ಸೃಷ್ಟಿ ಮಾಡಿರೋಳು ನೀನೇ. ನಿನ್ನ ತಪ್ಪಿಗೆ ನಿನ್ನದೇ ದೇವಸ್ಥಾನದಲ್ಲಿ ನನಗೆ ಶಿಕ್ಷೆಯಾಗುತ್ತಿದೆ. ನೀನು ಹೆಣ್ಣಲ್ವ? ಇನ್ನೊಂದು ಹೆಣ್ಣಿನ ಭಾವನೆ ನಿನಗೆ ಅರ್ಥ ಆಗಲ್ವ? ನಿನಗೆ ಕನಿಕರ ಇಲ್ವಾ? ಮುಂದಿನ ವರ್ಷ ಇದೇ ದಿನದ ಹೊತ್ತಿಗೆ ನಿನ್ನ ಹಾಗೆ ನನ್ನನ್ನೂ ಹೆಣ್ಣಾಗಿ ಮಾಡ್ಬೇಕು. ಆಗಲಿಲ್ಲ ಆಂದ್ರೆ ಪೂರ‍್ತಿ ಗಂಡಸಾಗಿಯಾದ್ರೂ ಮಾಡೇ....." ಎಂದು ದೊರೈಸ್ವಾಮಿಯನ್ನು ಸಮಯಾಪುರದ ದೇವಸ್ಥನದಲ್ಲಿ ಆತನ ತಲೆಗೂದಲನ್ನು ಬೋಳಿಸುವಾಗ ನೋವು, ಹತಾಶೆ, ಸಿಟ್ಟಿನಿಂದ ಹೇಳಿಕೊಂಡ ಮಾತುಗಳನ್ನು ರಂಗದ ಮೇಲೆ ಕೇಳಿದ ನಮಗೆಲ್ಲಾ ಇಷ್ಟು ದಿನದ ನಮ್ಮ ಅರಿವಿನ ಮೂಲಗಳೆಲ್ಲಾ ಪತರಗುಟ್ಟಿದಂತಹ ಅನುಭವ. ಕಿಕ್ಕಿರಿದ ಪ್ರೇಕ್ಷಕರ ಎದುರು ನೆನ್ನೆ ಶಿವಮೊಗ್ಗದ ಡಿ.ವಿ.ಎಸ್. ರಂಗಮಂದಿರಲ್ಲಿ ಪ್ರದರ್ಶನವಾದ ’ನಡುವೆ ಸುಳಿವಾತ್ಮನ ಬದುಕು-ಬಯಲು’ ನಾಟಕದ ಒಂದು ದೃಶ್ಯ ಇದು. ಶಿವಮೊಗ್ಗದ ಕ್ರಿಯಾಶೀಲ ರಂಗ ಸಂಘಟನೆಯಾದ ’ರಂಗ ಬೆಳಕು’ ತಂಡವು ಆಯೋಜಿಸಿದ್ದ ಹೆಗ್ಗೋಡಿನ ’ಜನಮನದಾಟ’ ತಂಡದ ಈ ನಾಟಕ ಎ.ರೇವತಿಯವರ ಟ್ರೂತ್ ಎಬೌಟ್ ಮಿ- ಎ ಹಿಜ್ರಾ ಲೈಫ್’ ಕೃತಿಯ ಅನುವಾದಿತ ಕೃತಿಯಾದ...