ಹೊಸತು - ಹಳತು : ಬುದ್ದ ತತ್ವ




ಲೋಕದ ಪ್ರತಿಯೊಂದೂ ಎಡೆಬಿಡದ ಚಲನೆಯಲ್ಲಿದೆ. ಕೆಲವೊಮ್ಮೆ ಬರಿಗಣ್ಣಿಗೆ ಚಲಿಸದೇ ಜಡವಾಗಿವೆ ಎಂದು ತೋರುವ ಪ್ರತಿಯೊಂದೂ ಚಲನೆಯಲ್ಲಿದೆ. ಒಂದು ಮರದ ತುಂಡು, ಕಬ್ಬಿಣದ ಬಿಲ್ಲೆ, ಕಲ್ಲಿನ ಗುಂಡು ಎಲ್ಲದರಲ್ಲಿ ಆಂತಕರಿಕ ಚಲನೆಯಿದೆ. ಹಾಗೆಯೇ ನಮ್ಮ ದೇಹ ಮನಸ್ಸುಗಳೂ ಚಲನೆಯ ರೂಪಗಳು. ಈ ಚಲನೆಯ ಸ್ವರೂಪವಾದರೂ ಎಂತಹದು? ಇದನ್ನು ಬುದ್ದಗುರು ಎರಡು ಪರಿಕಲ್ಪನೆಗಳ ಮೂಲಕ ತಿಳಿಸಿದ. ಒಂದು ಅನಿತ್ತ/ಅನಿತ್ಯ. (Impermanence) ಮತ್ತೊಂದು ಪತಿಚ್ಚ ಸಮುಪ್ಪಾದ (law of dependent origination).

ಅನಿತ್ತ (ಅನಿಚ್ಚ)
ʼಅನಿತ್ತʼ ನಿಯಮದ ಪ್ರಕಾರ ಲೋಕದಲ್ಲಿ ಚಲನೆಯಲ್ಲಿರುವ ಯಾವದೂ ಈ ಕ್ಷಣದಲ್ಲಿದ್ದಂತೆ ಮುಂದಿನ ಕ್ಷಣದಲ್ಲಿ ಇರುವುದಿಲ್ಲ. ಯಾವುದಕ್ಕೂ ಶಾಶ್ವತ ಗುಣ ಎಂಬುದಿಲ್ಲ. ಯಾವ ವಸ್ತುವೂ ʼಇರುʼವುದಿಲ್ಲ, ಎಲ್ಲವೂ ʼಆಗುʼತ್ತಿರುತ್ತದೆ. ಅಲ್ಲಿ ಇದೆ ಎಂದು ಮೇಲುನೋಟಕ್ಕೆ ಕಾಣುತ್ತಿರುವುದೂ ಆಗುತ್ತಿರುತ್ತದೆ. ಹೀಗಾಗಿ ಪ್ರತಿಯೊಂದೂ ಅಶಾಶ್ವತವಾದದ್ದು ಅತವಾ ಕ್ಷಣಿಕವಾದದ್ದು. ಹೀಗಾಗಿ ಪ್ರತಿ ವಸ್ತು ಪ್ರತಿ ಜೀವಿಯೂ ಪ್ರತಿ ಜೀವಿಯೊಳಗಿನ ಚಿಂತನೆಯೂ ಪ್ರತಿಕ್ಷಣವೂ ಹಳತರಿಂದ ಹೊಸದಾಗುತ್ತಿರುತ್ತಲೇ ಇರುತ್ತದೆ. ಇಂದು ಕ್ವಾಂಟಂ ವಿಜ್ಞಾನದ ತತ್ವಗಳು ಹೇಳುತ್ತಿರುವುದೂ ಇದನ್ನೇ. ಈ ಜಗತ್ತನ್ನು ನಿರ್ಮಿಸಿರುವ ಕಣ್ಣಿಗೆ ಕಾಣದ, ಅತಿ ಚಿಕ್ಕ ʼಪಾರ್ಟಿಕಲ್‌ʼ (ಕಣ)ಗಳ ಅನಿಶ್ಚಿತ ಗುಣಸ್ವಭಾವವೇ ಈ ಪ್ರಪಂಚನ್ನು ಆಗುಮಾಡುತ್ತಿರುವುದು. ಜಗತ್ತಿನ ಈ ವಾಸ್ತವತೆಯನ್ನು ಎರಡೂವರೆ ಸಾವಿರ ವರ್ಷಗಳ ಹಿಂದೆಯೇ ತಿಳಿಸಿದ ಬುದ್ಧಗುರು ತತ್ವಜ್ಞಾನಿಯಾಗುವ ಜೊತೆಗೆ ಮಹಾ ವಿಜ್ಞಾನಿಯೂ ಆಗಿದ್ದನಲ್ಲವೆ?

ಅನತ್ತ (ಅನಾತ್ಮ)
ಬುದ್ದನ ಕಾಲದಲ್ಲಿ ವೇದಾಂತಕಾರರು ಆತ್ಮ -ಪರಮಾತ್ಮ ಸಂಬಂದದಲ್ಲಿ ಆತ್ಮದ ಶಾಶ್ವತತೆಯನ್ನು ಪ್ರತಿಪಾದಿಸುತ್ತಿದ್ದರು. ಜಗತ್ತು ಮಿಥ್ಯೆ, ಬ್ರಹ್ಮನ್‌ ಎಂಬುದು ಸತ್ಯ, ಆತ್ಮವು ಬ್ರಹ್ಮನ ಒಂದು ಭಾಗ, ಬ್ರಹ್ಮನ್‌ ಎಂದರೆ ಪರಮಾತ್ಮ, ಜ್ಞಾನವು ಪರಮಾತ್ಮನ ರೂಪ, ದೇಹ ಅಳಿಯುತ್ತದೆ- ಆತ್ಮ ಹಾಗೂ ಪರಮಾತ್ಮ ಶಾಶ್ವತ ಎಂಬೆಲ್ಲಾ ಕಟ್ಟುಕತೆಗಳನ್ನು ಹೆಣೆದಿದ್ದರು. ಆದರೆ ಜಗತ್ತಿನ ಇರುವಿಕೆಯ ಸ್ವರೂಪವೇ ಚಲನ ಶೀಲತೆಯಾಗಿದ್ದು, ಅಂತಹ ಶಾಶ್ವತವಾದುದು ಯಾವದೂ ಇಲ್ಲದಿರುವುದರಿಂದ ಜಗತ್ತು ಅನಿತ್ಯವಾಗಿದೆ ಮತ್ತು ಈ ಕಾರಣದಿಂದಲೇ ಇದರಲ್ಲಿ ಅಂತಹ ಶಾಶ್ವತವಾದ ಆತ್ಮವೂ ಇರಲು ಸಾದ್ಯವಿಲ್ಲ (ಅನತ್ತ). ಆತ್ಮ ಇಲ್ಲವೆಂದ ಮೇಲೆ ಶಾಶ್ವತ ಪರಮಾತ್ಮ ಅತವಾ ದೇವರು ಇರಲೂ ಅವಕಾಶವಿಲ್ಲ ಎಂದು ಬುದ್ದಗುರು ಬಲವಾಗಿ ಪ್ರತಿಪಾದಿಸಿದ. ಹೀಗಾಗಿ ಬುದ್ದಗುರು ಆತ್ಮವಾದಿಗಳನ್ನು ತನ್ನ ಬಲವಾದ ಅನಿತ್ಯ- ಅನತ್ತ ತತ್ವದ ಬಲದಿಂದ ಸಮರ್ತವಾಗಿ ಎದುರಿಸಿದ ಎನ್ನಬಹುದು.
ಆತ್ಮ ಎಂಬ ಪರಿಕಲ್ಪನೆಯನ್ನು ಬುದ್ದಿನಿಗಿಂತ ಮೊದಲಿನ ತತ್ವಜ್ಞಾನಿಗಳಾಗಿದ್ದ ಸಾಂಖ್ಯರು ಪ್ರತಿಪಾದಿಸಿದ್ದರೂ ʼದೇಹ ನಶಿಸುತ್ತಿದ್ದಂತೆ ಆತ್ಮವೂ ನಶಿಸುತ್ತದೆʼ ಎಂದು ಹೇಳುವ ಮೂಲಕ ವೈದಿಕರು ಹೇಳುವ ಆತ್ಮ-ಪರಮಾತ್ಮಗಳ ಕಲ್ಪನೆಯನ್ನು ಅವರೂ ನಿರಾಕರಿಸಿದ್ದರು. ಆದರೆ ಬುದ್ದ ಗುರು ಒಂದು ಹೆಜ್ಜೆ ಮುಂದೆ ಹೋಗಿ ಸಾರಾಸಗಟಾಗಿ ʼಆತ್ಮʼದ ಪರಿಕಲ್ಪನೆಯನ್ನೇ ನಿರಾಕರಿಸಿ ಅದು ಒಂದು ಕಣ್ಕಟ್ಟು ಎಂದು ತೋರಿಸಿದ.

ಪತಿಚ್ಚ ಸಮುಪ್ಪಾದ
ಇನ್ನು ಹೀಗೆ ಬದಲಾಗುವ ಪ್ರಕ್ರಿಯೆ ಯಾವಾಗಲೂ ಹಳತನ್ನು ಮುರಿದು ಹೊಸದು ಹುಟ್ಟುವ ರೀತಿಯಲ್ಲಿ ಇರುತ್ತದೆ. ಇದನ್ನು ಬುದ್ದಗುರು ಪತಿಚ್ಚ ಸಮುಪ್ಪಾದದ ತತ್ವದಲ್ಲಿ ಹೇಳಿದ‌. ಇದರ ಪ್ರಕಾರ ಪ್ರತಿಕ್ಷಣ ಹೊಸದಾಗಿ ಹುಟ್ಟುವ ಪ್ರತಿಯೊಂದರ ಕಾರಣ ಹಳತರಲ್ಲಿರುತ್ತದೆ. ಒಂದು ಹೊಸ ಹುಟ್ಟಿಗೆ ಯಾವುದೇ ಒಂದು ಕಾರಣ ಇರದೇ ಹಲವಾರು ಕಾರಣಗಳಿರುತ್ತವೆ. ಉದಾಹರಣೆಗೆ ಒಂದು ಹೊಸ ಮಡಕೆ ತಯಾರಾಗುತ್ತದೆ ಅಂದರೆ ಅದಕ್ಕೆ ಮಣ್ಣು, ನೀರು, ಅವುಗಳನ್ನು ತಿರುಗಿಸುವ ಯಂತ್ರ, ಅದನ್ನು ತಿರುಗಿಸುವ ವ್ಯಕ್ತಿ, ಅದನ್ನು ಸುಡಲು ಬಳಸುವ ಬೆಂಕಿ ಹೀಗೆ ಹಲಾವಾರು ಅಂಶಗಳು ಕಾರವಾಗಿರುತ್ತವೆ. ಹೀಗಾಗಿ ಮಡಕೆಯ ಹುಟ್ಟು ಈ ಎಲ್ಲವುಗಳಲ್ಲಿರುತ್ತದೆ. ಆದರೆ ಪತಿಚ್ಚ ಸಮುಪ್ಪಾದ ಏನು ಹೇಳುತ್ತದೆ ಎಂದರೆ ಹೊಸದು ಹುಟ್ಟುವಾಗ ಹಳೆಯದು ಅಸ್ತಿತ್ವ ಕಳೆದುಕೊಂಡಿರುತ್ತದೆ. ಒಂದು ಮತ್ತೊಂದಾಗುತ್ತದೆ.‌ ಆದರೆ ಹೊಸ ಹುಟ್ಟಿನ ಕಾರಣ ಮಾತ್ರ ಅದರಲ್ಲಿ ಕಾಣುವುದಿಲ್ಲ. ಕಾರಣವು ಅದರ ಕಾರ್ಯ ಅತವಾ ಪರಿಣಾಮದಲ್ಲಿ ಇರುವುದಿಲ್ಲ . ಹಾಗೇ ಕಾರಣ ಇರುವಾಗ ಪರಿಣಾಮ ಇರುವುದಿಲ್ಲ. ಮುಂದುವರಿದು ಒಂದು ಪರಿಣಾಮ (ಕಾರ್ಯ) ಮತ್ತೊಂದರ ಕಾರಣವೂ ಆಗಿರುತ್ತದೆ. ಅಂದರೆ ಹಳೆಯದರಿಂದ ಹುಟ್ಟಿದ ಹೊಸತು ಅದರ ಮುಂದಿನ ಹೊಸದಕ್ಕೆ ಹಳೆಯದಾಗಿರುತ್ತದೆ. ಆ ಹೊಸತು ಬರುವಾಗ ಈ ಹೊಸತು ಇರುವುದಿಲ್ಲ. ಇದೊಂದು ಮುಂದು ಮುಂದಕ್ಕೆ ಹರಿಯುವ ಎಡೆಬಿಡದ ಹರಿವು (eternal flux). ಇದು ಮನುಷ್ಯನ ಪ್ರಜ್ಞೆಗೂ ಅನ್ವಯವಾಗುತ್ತದೆ- ಪ್ರಜ್ಞಾ ಪ್ರವಾಹದ ರೂಪದಲ್ಲಿ. ಇದು ಮನುಕುಲದ ಇತಿಹಾಸಕ್ಕೂ ಅನ್ವಯವಾಗುತ್ತದೆ. ಲೋಕದ ಎಲ್ಲದಕ್ಕೂ ಅನ್ವಯವಾಗುತ್ತದೆ.
ಇದೆಲ್ಲಾ ತಿಳಿದುಕೊಂಡು ನಾವೇನು ಮಾಡಬೇಕು? ನಮ್ಮ ಜೀವನಕ್ಕೆ ಏನು ಪ್ರಯೋಜನ?
ಉತ್ತರ ಸರಳ. ಬುದ್ದ ಹೇಳಿದ ಈ ತತ್ವಗಳು ಹೇಳುವ ಸಾರವೆಂದರೆ ಲೋಕದಲ್ಲಿ ಹುಟ್ಟಿದ ಪ್ರತಿಯೊಂದು ಸಹ ಆ ವಸ್ತು/ಜೀವಿಯ ಆಂತರಿಕ ನಿಯಮಕ್ಕೆ ಒಳಪಟ್ಟಿರುತ್ತದೆಯೇ ಹೊರತು ಹೊರಗಿನ ಯಾವದರ ನಿಯಂತ್ರಣಕ್ಕೂ ಅಲ್ಲ. ಹೀಗಾಗಿ ನಮ್ಮನ್ನು ಯಾರೋ ಉಳಿಸುತ್ತಾರೆ, ಯಾರೋ ಬದುಕಿಸುತ್ತಾರೆ, ಯಾರೋ ಸಾಯಿಸುತ್ತಾರೆ, ನಮ್ಮ ಹಣೆಬರಹ ಇನ್ನಾರೋ ಬರೆದಿರುತ್ತಾರೆ, ಯಾವುದೋ ಪೂರ್ವಜನ್ಮ ಕರ್ಮದ ಪಲ, ಗ್ರಹಚಾರ ನಮಗೆ ಅಂಟಿಕೊಂಡಿರುತ್ತದೆ, ಯಾವುದೋ ಹೋಮ, ಹವನ, ಯಾಗಗಳು ನಮ್ಮ ಗ್ರಹಗತಿ ಹಣೆಬರಹ ಬದಲಿಸುತ್ತವೆ, ಇನ್ನಾವುದೋ ನಮಗೆ ಮೋಕ್ಷ ಕರುಣಿಸುತ್ತದೆ, ಪುಣ್ಯ ಸಿಗುತ್ತದೆ, ಸ್ವರ್ಗ ನರಕ ಸಿಗುತ್ತದೆ ಎಂಬುದೆಲ್ಲಾ ಸುಳ್ಳು ವಂಚನೆ ಮೋಸದ ಮಹಾಜಾಲ. ಇಂತಹವುಗಳನ್ನು ಕಟ್ಟಿ ಹರಡುವುದರಲ್ಲಿ, ಇವುಗಳನ್ನು ಸಮಾಜದಲ್ಲಿ ಪ್ರಚುತಪಡಿಸುವಲ್ಲಿ ಕೆಲವರ ಸ್ವಾರ್ತವಿದೆ. ಹಲವರ ವಿನಾಶವಿದೆ.

ಈ ಯಾವುದನ್ನೂ ನಂಬದೇ ಯಾವುದೇ ಸಮಸ್ಯೆಗೆ ಕಣ್ಣೆದುರಿನ ಕಾರಣಗಳನ್ನು ಕಂಡುಕೊಳ್ಳುವುದೇ ಪರಿಹಾರದ ಮೊದಲ ಮೆಟ್ಟಿಲಾಗಿರುತ್ತದೆ. ನಂತರ ನಡೆಸುವ ಪ್ರಜ್ಞಾಪೂರ್ವಕ ಪ್ರಯತ್ನ ನಮ್ಮನ್ನು ಗೆಲುವಿಗೆ ಕೊಂಡೊಯ್ಯುತ್ತದೆ. ಈ ಪ್ರಯತ್ನದಲ್ಲಿ ಎಡವಿ ಬಿದ್ದಾಗ ಆಗುವ ಸೋಲು ಕೂಡಾ ಅಗತ್ಯ ಅನಿವಾರ್ಯವಾಗಿರುತ್ತದೆ. ಯಾಕೆಂದರೆ ಅದರ ಕಾರಣ ಅದರ ಹಿಂದಿನ ಹಲವಾರು ಅಂಶಗಳಲ್ಲಿ ಇರುತ್ತದೆ.
ಗೆಳೆಯ ಗೆಳತಿಯರೆ,
ಹಳೆಯ 2024 ಕಳೆದು ಅದರ ಒಡಲೊಳಗಿಂದ 2025 ಬಂದಿದೆ. ಈ ಹೊಸ ವರುಷ ನಿಮ್ಮನ್ನು ಹೊಸ ಬಗೆಯಲ್ಲಿ ಹೊಸ ಚಿಂತನೆಗೆ ತೊಡಗಿಸಲಿ. ಹೊಸ ಹೊಸ ಅನುಬವಗಳೊಂದಿಗೆ ಹೊಸ ಸೋಲು ಗೆಲವುಗಳೊಂದಿಗೆ ನಿಮ್ಮ ಬಾಳು ಉನ್ನತಿಗೆ ಏರಲಿ. ನಿಮ್ಮ ಹಳೆಯ ಕನಸುಗಳು ಈಡೇರುವ ದಾರಿಯಲ್ಲಿ ಹೊಸ ಕನಸುಗಳು ಹುಟ್ಟಲಿ.
ಎಲ್ಲರಿಗೂ ಹೊಸ ವರುಷದ ಶುಬಾಶಯಗಳು ‌


(ಈ ಬರಹ ಮಹಾಪ್ರಾಣ ಬಳಸದ ಎಲ್ಲರ ಕನ್ನಡದಲ್ಲಿದೆ)

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮೇಘಾನೆಯಿಂದ ಬೆಳ್ಳಿಗುಂಡಿಯವರೆಗೆ....- ಒಂದು ಚಾರಣದ ಅನುಭವ

ಆದರೇನಂತೆ, ನಾನೆದ್ದು ಬರುವೆ

ಮತ್ತೆ ಕಾಡಿದ ರಶೋಮನ್