ಇಲ್ಲಿಗೆ ನೂರನೇ ವರ್ಷಕ್ಕೆ ಹಿಂದೆ ಭಾರತೀಯ ನೆಲದಲ್ಲಿ ಮೊತ್ತಮೊದಲ ಸಿನಿಮಾ ಚಿತ್ರೀಕರಣ ಆರಂಭಗೊಂಡಿತ್ತು. ದಾದಾ ಸಾಹೇಬ್ ಫಾಲ್ಕೆ ನಿರ್ದೇಶನದ ಆ ರಾಜಾ ಹರಿಶ್ಚಂದ್ರ ಸಿನಿಮಾ ತೆರೆಕಂಡ ಈ 99 ವರ್ಷಗಳಲ್ಲಿ ಭಾರತೀಯ ಸಿನಿಮಾ ಇಂದು ಬಹು ಎತ್ತರಕ್ಕೆ ಬೆಳೆದು ನಿಂತಿದೆ. ಹಿಂದಿ ಚಿತ್ರರಂಗದ ಬಾಲಿವುಡ್ ಅಲ್ಲದೇ ಎಲ್ಲಾ ರಾಜ್ಯಗಳ ಮುಖ್ಯಭಾಷೆ ಹಾಗೂ ಹಲವಾರು ಉಪಭಾಷೆಗಳ ಸಿನಿಮಾ ರಂಗಗಳೂ ಏಳಿಗೆ ಕಂಡಿವೆ. ಈ ಹಿನ್ನೆಲೆಯಲ್ಲಿ ಕನ್ನಡ ಚಿತ್ರರಂಗ ಇಡೀ ದೇಶದ ಚಿತ್ರರಂಗಕ್ಕೆ ನೀಡಿರುವ ಕೊಡುಗೆಯೂ ಅಪಾರವಾದದ್ದು. ಅದರಲ್ಲೂ ಕನ್ನಡದ ನಟಸಾರ್ವಭೌಮ ದಿ. ಡಾ. ರಾಜ್‌ಕುಮಾರ್ ಅವರು ಕನ್ನಡಚಿತ್ರರಂಗವನ್ನು ರಾಷ್ಟ್ರಮಟ್ಟದಲ್ಲೂ ಪ್ರತಿನಿಧಿಸಬಲ್ಲ ಮೇರುನಟ. "ಡಾ. ರಾಜ್‌ಕುಮಾರ್‌ನಂತಹ ನಟ ಏನಾದರೂ ಬಾಲಿವುಡ್‌ನಲ್ಲಿದ್ದಿದ್ದರೆ ನಮ್ಮಂವರು ಯಾವ ಕಡೆಗೂ ಇರುತ್ತಿರಲಿಲ್ಲ" ಎಂದು ಬಾಲಿವುಡ್ ಸಾಮ್ರಾಟ ಅಮಿತಾಬ್ ಬಚನ್ ಅವರೇ ಹಿಂದೊಮ್ಮೆ ಆಡಿದ್ದ ಮಾತನ್ನು ಗಮನಿಸಿದರೆ ರಾಜ್‌ಕುಮಾರ್ ಅವರ ಸ್ಥಾನವನ್ನು ಅರಿಯಬಹುದು. ಕರ್ನಾಟಕದಲ್ಲಿ 1921ರಿಂದಲೇ ಮೂಕಿಚಿತ್ರಗಳು ಆರಂಭಗೊಂಡಿದ್ದವು. 1934ರಲ್ಲಿ ಮೊತ್ತಮೊದಲ ಟಾಕಿ ಚಿತ್ರ ’ಸತಿ ಸುಲೋಚನ’ ಬಿಡುಗಡೆಗೊಂಡಿತ್ತು. ಆದರೆ ಆರಂಭ ಕಾಲದಲ್ಲಿ ಕನ್ನಡ ಚಿತ್ರಗಳು ಮದ್ರಾಸಿನ ಸಿನಿಮಾ ನಿರ್ಮಾಪಕರನ್ನೇ ಅವಲಂಬಿಸಬೇಕಾಗಿತ್ತು. ಅದೇ ಸಂದರ್ಭದಲ್ಲಿ ಪರಭಾಷಾ ಚಿತ್ರಗಳ ಡಬ್ಬಿಂಗ್ ಕೂಡಾ ಅಲ್ಪಸ್ವಲ್ಪ ಪ್ರಮಾಣದ ಕನ್ನಡ ಚಿತ್ರಗಳ ಅಸ್ತಿತ್ವವನ್ನೇ ಅಲುಗಾಡಿಸುವ ಪರಿಸ್ಥಿತಿ ಅದು. ಇಂತಹ ಸಂದರ್ಭದಲ್ಲಿ ಕನ್ನಡ ಸಿನಿಮಾಗಳಿಗೆ ಭದ್ರ ಬುನಾದಿ ಹಾಕಿದ ಹಲವಾರು ಮೇರು ಕಲಾವಿದರಲ್ಲಿ ಡಾ.ರಾಜ್‌ಕುಮಾರ್ ಕೂಡಾ ಪ್ರಮುಖರಾಗಿ ನಿಲ್ಲುತ್ತಾರೆ.
ಗುಬ್ಬಿ ವೀರಣ್ಣನವರ ನಾಟಕ ಕಂಪನಿಯಲ್ಲಿ ನಟಿಸುತ್ತಿದ್ದ ಸಿಂಗನೆಲ್ಲೂರು ಪುಟ್ಟಸ್ವಾಮಯ್ಯನಯವರ ಪುತ್ರ ಮುತ್ತುರಾಜ್ ತಾನೂ ಕೂಡ ಆಗಾಗ ನಾಟಕದ ಪಾತ್ರಗಳಲ್ಲಿ ಬಣ್ಣ ಹಾಕುತ್ತಿದ್ದರು. ಹೀಗೆ ರಂಗನಟನಾಗಿದ್ದ ಮುತ್ತುರಾಜ ಸಿನಿಮಾ ನಿರ್ದೆಶಕ ಎಚ್.ಎಲ್.ಎನ್.ಸ್ವಾಮಿಯವರ ಕಣ್ಣಿಗೆ ಬಿದ್ದಿದ್ದೇ ಬಿದ್ದಿದ್ದು ರಾತ್ರೋರಾತ್ರಿ ’ರಾಜಕುಮಾರ’ನಾಗಿ ಬಿಟ್ಟರು. ಓದಿದ್ದು ಮೂರೋ ನಾಲ್ಕೋ ನೆನಪಿರದಿದ್ದರೂ ಮೈಸೂರು ವಿದ್ಯಾನಿಲಯ ನೀಡಿದ ಡಾಕ್ಟರೇಟ್ ಪದವಿಯನ್ನೂ ಮುಡಿಗೇರಿಸಿಕೊಂಡು ಡಾ.ರಾಜ್‌ಕುಮಾರ್ ಆದರು. ರಾಜ್ ಅಭಿನಯದ ಚೊಚ್ಚಲ ಚಿತ್ರ ಬೇಡರ ಕಣ್ಣಪ್ಪ ರಾಷ್ಟ್ರಪ್ರಶಸ್ತಿಯನ್ನೂ ಗಳಿಸಿ ದೊಡ್ಡ ಹೆಸರು ಮಾಡಿತ್ತು. ಅದರಲ್ಲಿನ ಶಿವಭಕ್ತ ಕಣ್ಣಪ್ಪನಿಂದ ಶುರುವಾದ ’ಅಣ್ಣಾವ್ರ’ ಸಿನಿಯಾನವು ಕೊನೆಗೆ ’ಶಬ್ದವೇದಿ’ಯ ಪೋಲೀಸ್ ಅಧಿಕಾರಿಯವರಗೂ ನಡೆಯಿತು. ತಮ್ಮ ಅಭಿನಯದ ಒಟ್ಟು ೨೦೫ ಸಿನಿಮಾಗಳಲ್ಲಿ ನೂರಾರು ಬಗೆಯ ಪಾತ್ರಗಳಿಗೆ ಜೀವ ನೀಡಿದ ರಾಜ್‌ಕುಮಾರ್‌ಗೆ ಅಭಿನಯದಲ್ಲಿ ಸರಿಸಾಟಿಯಾಗುವವರು ಯಾರೂ ಇಲ್ಲವೆಂದೇ ಹೇಳಬೇಕು.
ಡಾ.ರಾಜ್ ತಮ್ಮ ಚಿತ್ರಗಳಲ್ಲಿ ಶೃಂಗಾರ ರಸದ, ರಸಿಕತೆಯ ಪಾತ್ರಗಳಿಗೆ ಜೀವ ತುಂಬುತ್ತಿದ್ದ ರೀತಿ ಅನನ್ಯ. ಅದೇ ರೀತಿ ಭಕ್ತಿಪ್ರಧಾನ ಪಾತ್ರಗಳಲ್ಲಿರಲಿ ಅಥವಾ ದುಃಖಪ್ರಧಾನ ಪಾತ್ರಗಳಲ್ಲಿರಲಿ ಅವರು ಆ ಪಾತ್ರವೇ ತಾವಾಗಿ ಅಭಿನಯಿಸುತ್ತಿದ್ದರು. ಭಕ್ತಕುಂಬಾರ ಸಿನಿಮಾದ ’ಗೋರ’ ಪಾತ್ರದ ತಲ್ಲೀನತೆಯನ್ನು ಯಾರಿಗಾದರೂ ಮರೆಯಲು ಸಾಧ್ಯವೇ? ಅಂತೆಯೇ ಪುರಣಾ ಕತೆಗಳ ಶೌರ್ಯಪ್ರಧಾನ ಪಾತ್ರಗಳಲ್ಲಿನ ಅವರ ಅಭಿನಯವು ಒಂದು ಅದ್ಭುತ ಅನುಭೂತಿಯನ್ನು ನೋಡುಗರಿಗೆ ಒದಗಿಸುವಂತದ್ದು. ಇಂದಿನ ಬಹುತೇಕ ನಟರಿಗೆ ಡಾ.ರಾಜ್ ಎಂದಿಗೂ ಒಂದು ಸರಿಗಟ್ಟಲಾಗದ ಪ್ರತಿಮೆ ಮಾತ್ರವಾಗಿ ನಿಲ್ಲಬಹುದೇ ವಿನಃ ಇತರರಿಗೆ ರಾಜ್‌ರನ್ನು ಪ್ರತಿಸ್ಪರ್ಧಿಯಾಗಿಸಿಕೊಳ್ಳಲು ಎಂದಿಗೂ ಸಾಧ್ಯವಿಲ್ಲ. ಅಭಿನಯದಲ್ಲಿ ಅವರು ಮೌಂಟ್ ಎವರೆಷ್ಟ್‌ನಂತೆ.
ಗಾಯನದಲ್ಲಾದರೂ ಅಷ್ಟೆ. ಮೂಲತಃ ಗಾಯಕರಲ್ಲದಿದ್ದರೂ ತಮ್ಮ ಬಹುತೇಕ ಸಿನಿಮಾಗಳಿಗೆ ತಾವೇ ಹಾಡುತ್ತಿದ್ದ ರಾಜ್ ನಂತರದಲ್ಲಿ ಕರ್ನಾಟಕ ಸಂಗೀತವನ್ನು ಅಭ್ಯಸಿಸಿದ್ದರು. ಜೀವನ ಚೈತ್ರ ಚಿತ್ರದ 'ನಾದಮಯ ಲೋಕವೆಲ್ಲಾ’ ಗೀತಗಾಯನ ನಂತರ ರಾಷ್ಟ್ರಪ್ರಶಸ್ತಿಗೂ ಭಾಜನವಾಗಿದ್ದು ಅವರ ಹಾಡುಗಾರಿಕೆಯ ಶಕ್ತಿಗೆ ಸಾಕ್ಷಿಯಾಗಿ ನಿಲ್ಲುತ್ತದೆ.
ತಮ್ಮ ಒಂದೇ ಒಂದು ಸಿನಿಮಾದಲ್ಲಿ ಸಿಗರೇಟು ಸೇದುವ ಅಥವಾ ಕುಡಿಯುವ ಚಟವುಳ್ಳ ಪಾತ್ರಗಳಲ್ಲಿ ರಾಜ್ ಅಭಿನಯಿಸದಿರಲು ಕಾರಣ ಸಿನಿಮಾಗಳು ಯುವಜನತೆಯ ಮನಸ್ಸಿನ ಮೇಲೆ ಬೀರಬಹುದಾದ ಪರಿಣಾಮದ ಬಗ್ಗೆ ಅವರಿಗಿದ್ದ ಕಳವಳ. ತರುಣರು ದಾರಿತಪ್ಪಬಾರದೆಂಬ ಕಾಳಜಿ. ಅಂತೆಯೇ ಅವರ ಅತ್ಯುತ್ತಮ ಚಿತ್ರಗಳ ಸಾಲಿನಲ್ಲಿ ನಿಲ್ಲುವ ಸಾಕ್ಷಾತ್ಕಾರ, ಕಸ್ತೂರಿ ನಿವಾಸ, ಬಂಗಾರದ ಮನುಷ್ಯ ಇಂದಿಗೂ ಪ್ರತಿಯೊಬ್ಬರ ಹೃದಯವನ್ನೂ ಕಲಕಿಬಿಡುವಂತಹ ಕಥಾವಸ್ತುವನ್ನುಳ್ಳ ಚಿತ್ರಗಳು. ಬಂಗಾರದ ಮನುಷ್ಯದ ರಾಜೀವಪ್ಪ ಇಂದಿಗೂ ಸಾಧನೆಯ ಕೆಚ್ಚು ಮತ್ತು ತ್ಯಾಗದ ಪ್ರತೀಕವಾಗಿ ತರುಣರಿಗೆ ಮಾದರಿಯಾಗಬಲ್ಲ ಪಾತ್ರ. ಸ್ವತಃ ಯೋಗಪಟುವಾಗಿದ್ದ ಅವರು ತಮ್ಮ ಯೋಗಸಾಮರ್ಥ್ಯವನ್ನು ಕಾಮನಬಿಲ್ಲು ಸಿನಿಮಾದ ಮೂಲದ ಪ್ರದರ್ಶಿಸಿ ತರುಣರಲ್ಲಿ ಯೋಗಾಭ್ಯಾಸದ ಸಂದೇಶವನ್ನೂ ನೀಡಿದ್ದರು ರಾಜ್. ಕೇವಲ ಪಾತ್ರಗಳಲ್ಲಿ ಮಾತ್ರವಲ್ಲದೇ ನಿಜಜೀವನದಲ್ಲೂ ಹಲವಾರು ಸಂಸ್ಕಾರಗಳನ್ನು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಪ್ರತಿಯೊಬ್ಬರಲ್ಲಿರಬೇಕಾದ ಆದರೆ ಬಹಳ ವಿರಳವಾಗಿ ಕಾಣುವಂತಹ ವಿನೀತತೆಯನ್ನು ರಾಜ್‌ಕುಮಾರ್ ಅಳವಡಿಸಿಕೊಂಡಿದ್ದರು. ತಮ್ಮೆಲ್ಲ ಒಳ್ಳೆಯತನಗಳ ಶ್ರೇಯಸ್ಸು ತಮ್ಮ ತಂದೆ ಪುಟ್ಟಸ್ವಾಮಯ್ಯನವರಿಗೇ ಸಲ್ಲುತ್ತದೆಂದು ಅವರು ಅಷ್ಟೇ ವಿನೀತರಾಗಿ ಹೇಳುತ್ತಿದ್ದರು.
ಕನ್ನಡತನ, ಕನ್ನಡಭಾಷೆಗಳೊಂದಿಗೆ ಡಾ.ರಾಜ್ ಎಂದಿಗೂ ಒಂದರೊಳಗೊಂದು ಬಿಡಿಸಲಾಗದಂತೆ ಬೆರೆತು ಹೋಗಿರುವಂತವು. ೮೦ರ ದಶಕದಲ್ಲಿ ಕನ್ನಡದ ಶ್ರೇಷ್ಠ ಚಿಂತಕ ಶಂ.ಭಾ.ಜೋಷಿಯವರ ನೇತೃತ್ವದಲ್ಲಿ ಆರಂಭಗೊಂಡ ಭಾಷಾಷಳವಳಿಗೆ ಬೆಂಬಲ ನೀಡಲು ದೊಡ್ಡ ಸಾಹಿತಿವರೇಣ್ಯರೇ ಹಿಂದೇಟು ಹಾಕುತ್ತಿದ್ದರೂ ಡಾ.ರಾಜ್‌ಕುಮಾರ್ ಹಿಂದೆಮುಂದೆ ನೋಡದೇ ಮದ್ರಾಸಿನಲ್ಲಿ ಚಿತ್ರೀಕರಣ ಸ್ಥಳದಿಂದಲೇ ಬೆಂಬಲ ಘೋಷಿಸಿ ನಂತರದಲ್ಲಿ ನೇರವಾಗಿ ಪಾಲ್ಗೊಂಡು ಚಳವಳಿಗೂ ಒಂದು ರಭಸ ತುಂಬಿದ್ದರು. "ಸಾಹಿತಿಗಳು, ಶಿಕ್ಷಕರು ಆರಂಭಿಸಿದ್ದ ಗೋಕಾಕ್ ಚಳವಣಿಗೆ ಕಸುವು ಬಂದದ್ದು ರಾಜ್‌ಕುಮಾರ್ ಅವರು ಸ್ವಯಂ ಪ್ರೇರಣೆಯಿಂದ ಚಳವಳಿಗೆ ಧುಮುಕಿದ ಮೆಲೆ. ನಂತರದಲ್ಲಿ ಚಳವಳಿಗೆ ಒಂದು ಸಾಂಸ್ಕೃತಿಕ ಆಯಾವಮ ದೊರಕಿತ್ತು ಮಾತ್ರವಲ್ಲದೇ ಎಲ್ಲಾ ಕಡೆಗಳಿಂದ ಬೆಂಬ ಬಂತು. ಕೊನೆ ಸರ್ಕಾರವು ಚಳವಳಿಕಾರರನ್ನು ಮಾತುಕತೆಗೆ ಆಮಂತ್ರಿಸಿ ಗೋಕಾಕ್ ಸೂತ್ರವನ್ನೂ ಒಪ್ಪಿಕೊಂಡಿತು" ಎನ್ನುತ್ತಾರೆ ಈ ಕುರಿತು ಟಿಎಸ್‌ಐನೊಂದಿಗೆ ಮಾತನಾಡಿದ ಸಾಹಿತಿ ಚಂದ್ರಶೇಖರ್ ಪಾಟೀಲ್ (ಚಂಪಾ).
ರಾಜ್‌ಕುಮಾರ್ ಇಲ್ಲಿ ಕರ್ನಾಟಕದಲ್ಲಿ ತಮ್ಮ ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗಲೇ ನಮ್ಮ ಅಕ್ಕಪಕ್ಕದ ರಾಜ್ಯಗಳಾದ ಆಂಧ್ರ ಮತ್ತು ತಮಿಳುನಾಡುಗಳಲ್ಲಿ ಎನ್‌ಟಿಆರ್ ಮತ್ತು ಎಂಜಿಆರ್ ಕೂಡಾ ಜನಪ್ರಿಯತೆಹೊಂದಿದ್ದರು. ಇವರಿಬ್ಬರೂ ರಾಜಕೀಯಕ್ಕೆ ಧುಮುಕಿ ತಮಗಿದ್ದ ಜನಪ್ರಿಯತೆಯನ್ನು ಮತಗಳಾಗಿ ಪರಿವರ್ತಿಸಿಕೊಂಡು ಅಧಿಕಾರದ ಗದ್ದುಗೆಯೇರಿ ತಾವು ಒಂದು ಮಟ್ಟಕ್ಕೆ ಜನವಿರೋಧಿಯಾಗಿ ಪರಿವರ್ತನೆಗೊಂಡವರು. ರಾಜ್ಯದ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರೊಂದಿಗೆ ಬೀಗತನ ಹೊಂದಿದ್ದರೂ ಸಹ ತಾವು ಮಾತ್ರ ರಾಜಕೀಯದಿಂದ ಬಹುದೂರವುಳಿದು ಪಕ್ಷ, ಜಾತಿ, ಮತಗಳೆಲ್ಲದರಾಚೆ ಜನಪ್ರೀತಿಯನ್ನು ಇಂದಿನವರೆಗೂ ಕಾಯ್ದುಕೊಂಡವರು ರಾಜ್.
ಕನ್ನಡದ ಮತ್ತು ಕರ್ನಾಟಕದ ಮೇಲಿನ ಡಾ.ರಾಜ್ ಅವರ ಅಭಿಮಾನಕ್ಕೆ ಪ್ರತಿಯಾಗಿ ಕನ್ನಡಿಗರಿಗೆ ರಾಜ್ ಮೇಲಿದ್ದ ಅಭಿಮಾನವೆಂತಾದ್ದು ಎಂಬುದು ಎರಡು ಸಲ ಅನಾವರಣಗೊಂಡಿದೆ. ಒಂದು 2000ನೇ ಇಸವಿಯ ಜೂನ್ 30ರಂದು ವೀರಪ್ಪನ್ ರಾಜ್ ಅವರನ್ನು ಅಪಹರಿಸಿದ್ದ ಒಂದು ಸಂದರ್ಭ ಮತ್ತು 2006ರ ಏಪ್ರಿಲ್ 12ರಂದು ರಾಜ್ ತೀರಿಕೊಂಡ ದಿನ. ಎರಡೂ ಸಂದರ್ಭಗಳಲ್ಲಿ ರಾಜ್ ಮೇಲಿನ ಅಭಿಮಾನ ಹಿಂಸೆಯ ರೂಪವನ್ನೇ ಪಡೆದುಕೊಂಡಿದ್ದು ನಮ್ಮ ಆಡಳಿತ ಅವ್ಯವಸ್ಥೆಗೆ ಹಿಡಿದ ಕನ್ನಡಿಯಾದರೂ ಅದು ಭಾವುಕ ಕನ್ನಡಿಗರ ಮನಸ್ಸಿಗೆ ಹಿಡಿದ ಕನ್ನಡಿಯೂ ಹೌದು. ರಾಜ್‌ರನ್ನು ಕಳೆದುಕೊಂಡಾಗ ಸಹಸ್ರ ಸಹಸ್ರ 'ಅಭಿಮಾನಿ ದೇವರು’ ಬೀದಿಗಿಳಿದರು. ನಟನೊಬ್ಬ ತೀರಿಕೊಂಡಾದ ಈ ಮಟ್ಟದಲ್ಲಿ ಜನರ ದುಃಖದ ಕಟ್ಟೆಯೊಡೆದು ಬೀದಿಯ ಮೇಲೆ ಪ್ರದರ್ಶನಗೊಂಡ ಉದಾಹರಣೆ ಪ್ರಾಯಶಃ ಇಡೀ ಭಾರತದ ಚಿತ್ರರಂಗದ ಚರಿತ್ರೆಯಲ್ಲೇ ಇರಲಿಲ್ಲ. ಆದರೆ ರಾಜ್ ಮತ್ತು ಕನ್ನಡಿಗರ ಸಂಬಂಧ ಅಂತದ್ದು.
ನಾಡಿನ ತೀರಾ ಹಿಂದುಳಿದಿದ್ದ ಸಮುದಾಯವೊಂದರ ಸಾಮಾನ್ಯ ಕುಟುಂಬದಿಂದ ಬಂದು ಹತ್ತಿಪ್ಪತ್ತು ವರ್ಷಗಳಲ್ಲಿ ಮೇರು ಕಲಾವಿದನಾಗಿ ಬೆಳೆದು ನಿಂತ ಅಪ್ಪಟ ಪ್ರತಿಭೆ ಡಾ.ರಾಜ್. ಶಿವಾಜಿ ಗಣೇಶ್‌ರಂತಹ, ನಾಗಿರೆಡ್ಡಿಯವರಂತಹ ಸಿನಿಮಾ ಲೋಕದ ಘಟಾನುಘಟಿಗಳೇ ಒಂದು ಸಂದರ್ಭದಲ್ಲಿ ಡಾ.ರಾಜ್‌ರನ್ನು ಕುರಿತು 'ರಾಜ್‌ಕುಮಾರ್ ಇರೋ ಸ್ಥಾನವೇ ಬೇರೆ. ಯಾರಿಗೂ ಅಲ್ಲಿಗೆ ತಲುಪಲಾಗುವುದಿಲ್ಲ' ಎಂದು ಹೇಳಿದ್ದರೆಂದರೆ ನಾವು ಹೆಮ್ಮೆಪಡಲಾಗದಿದ್ದೀತೆ? ಭಾರತೀಯ ಸಿನಿಮಾ ಶತಮಾನೋತ್ಸವಕ್ಕೆ ಸಜ್ಜಾಗುತ್ತಿರುವ ಹೊತ್ತಿನಲ್ಲಿ ಡಾ.ರಾಜ್‌ನಂತಹ ಕಲಾವಿದರ ಕೊಡುಗೆಯನ್ನು ಬರೀ ನೆನೆಸಿಕೊಂಡರಷ್ಟೇ ಸಾಲದು. ಬರೀ 'ಎರವಲು’ಕತೆಗಳಿಗೇ ತೃಪ್ತಿಪಟ್ಟುಕೊಂಡಿರಬೇಕಾಗಿ ಬಂದಂತಹ ಇಂದಿನ ಕನ್ನಡ ಚಿತ್ರರಂಗವನ್ನು ಮತ್ತಿ ಮೌಲಿಕವಾಗಿ ಮುನ್ನಡೆಸಲು ರಾಜ್ ಅವರ ಕೊಡುಗೆಯನ್ನು ನೋಡುವ ಹೊಸದೊಂದು ದೃಷ್ಟಿ ನಮಗೆ ಪ್ರಾಪ್ತವಾಗಬೇಕಿದೆ.
(ದ ಸಂಡೆ ಇಂಡಿಯನ್ ಜುಲೈ 22, 2012ರ ಸಂಚಿಕೆಯಲ್ಲಿ ಪ್ರಕಟಿತ)