ಮೂಲಭೂತವಾಗಿ ಸಿನಿಮಾ, ಸಾಹಿತ್ಯದ ನಡುವೆ ಒಂದು ಸೃಜನಶೀಲ ಸಂಬಂಧ ಇದ್ದೇ ಇರುತ್ತದೆ. ಸಾಹಿತ್ಯ ಕೃತಿ ಒಂದು ಸಿನಿಮಾ ಆದಾಗಲೇ ಸಂಬಂಧ ಉಂಟಾಗುತ್ತದೆ ಎಂದು ನಾವು ನೋಡಬೇಕಾಗಿಲ್ಲ. ಅದೊಂದು ರೀತಿ ನೇರ ಸಂಬಂಧವಾದರೂ ಎರಡೂ ಕೂಡ ಪಠ್ಯಕೃತಿಗಳೇ ಎಂದು ನೋಡಬೇಕು. ಎರಡರಲ್ಲೂ ಒಂದೇ ರೀತಿಯಲ್ಲಿ ಪ್ರತಿಮೆಗಳಿರುತ್ತವೆ. ಸಿನಿಮಾವನ್ನು ಕೂಡ ಓದಬೇಕು ಎನ್ನುತ್ತೇನೆ.
ಆದರೆ, ಸಾಮಾನ್ಯ ಜನರಿಗೆ ’ಓದುವ’ ಪರಿಕಲ್ಪನೆ ಬರುವುದು ಹೇಗೆ?
ಒಂದು ಪಠ್ಯವನ್ನು ಮೊದಲ ಬಾರಿ ಓದುವಾಗ ಎಲ್ಲರೂ ಸಮಾನ್ಯ ಓದುಗರೇ. ಅಸಾಮಾನ್ಯ ಓದುಗರು ಎಂಬುದು ಇರುವುದಿಲ್ಲ. ಈ ಅರ್ಥದಲ್ಲಿ ಸಿನಿಮಾ ನೋಡುಗರೂ ಅದನ್ನು ಓದುತ್ತಿರುತ್ತಾರೆ. ಸಿನಿಮಾ ನೋಡುತ್ತಾ,ಸಿನಿಮಾ ಮೀಮಾಂಸೆ ಓದುತ್ತಾ, ಫಿಲಂ ಥಿಯರಿ ಓದುತ್ತಿರುವವರಿಗೆ ಕೆಲವೊಮ್ಮೆ ಕೆಲ ಸಂಗತಿಗಳು ಅರ್ಥವೇ ಆಗಿರುವುದಿಲ್ಲ. ಅನೇಕ ಶಿಬಿರಗಳಲ್ಲಿ ನನಗೆ ಅನುಭವವಾಗಿರುವುದೆಂದರೆ ಹಳ್ಳಿಯ ಜನರು, ಕಾರ್ಪೋರೇಷನ್ ಕೆಲಸ ಮಾಡುವವಂತವರೇ ಎಷ್ಟೋ ಸಲ ಬೌದ್ಧಿಕ ಎನ್ನುವ ಸಂಪ್ರದಾಯದಿಂದ ಬಂದವರಿಗಿಂತಲೂ ಚೆನ್ನಾಗಿ ಸಿನಿಮಾವನ್ನು ಅನಾವರಣ ಮಾಡಿಬಿಡುತ್ತಾರೆ. ಕೆ.ವಿ. ಸುಬ್ಬಣ್ಣ ಅವರಿದ್ದಾಗ ಹೆಗ್ಗೋಡಿನಲ್ಲಿ ಬರ್ಗ್ಮನ್ರ’ಸೆವೆನ್ ಸೀಲ್’ ತೋರಿಸಿದ್ದರು. ಹಳ್ಳಿಯವರು ಅಂದರೆ ನಾವು ಯಾರಿಗೆ ಇಲ್ಲಿಟರೇಟ್, ಅನಕ್ಷರಸ್ತರು, ಫಿಲಂ ಥಿಯರಿ ಗೊತ್ತಿಲ್ಲದವರು ಅಂತೀವೋ ಅವರು ’ಇದು ಬದುಕು ಸಾವಿನ ಮಧ್ಯೆ ನಡೆಯುತ್ತಿರುವ ಘರ್ಷಣೆ. ಇದನ್ನು ಬರ್ಗ್‌ಮನ್ ಸೆವೆನ್ ಸೀಲ್ ನಲ್ಲಿ ಚಿತ್ರಿರಿಸಿದ್ದಾರೆ ಎಂದು ವ್ಯಾಖ್ಯಾನ ಮಾಡಿದ್ರಂತೆ. ನಮ್ಮ ಲಾವಣಿ, ಕತೆಗಳು, ಹಾಡುಗಳನ್ನು ನೋಡಿ. ಅದು ನಿಜವಾದ ಜೀವಂತ ಪರಂಪರೆಯಾದ್ದರಿಂದ ಅದೆಷ್ಟು ರೂಪಕ, ಪ್ರತಿಮೆಗಳಿರುತ್ತವೆ ಅದರಲ್ಲಿ. ನನ್ನ ಇನ್ನೊಂದು ವಾದ ಏನೆಂದರೆ ಈ ಮೌಖಿಕ ಸಂಪ್ರದಾಯದಲ್ಲಿ ಸಿನಿಮಾ ಎನ್ನುವುದು ಮೊದಲು ಅಭಿವ್ಯಕ್ತಿಗೊಳ್ಳುತ್ತೆ. ಸ್ವೀಕಾರ ಮಾಡಲ್ಪಡುತ್ತೆ. ಹೀಗಾಗಿ ನಮ್ಮಂತವರು, ವಿಶೇಷವಾಗಿ ಸಿನಿಮಾ ವಿಮರ್ಷೆ ಬರೆಯುವವರು ನಾವೇನೋ ಬಹಳ ಅಸಾಮಾನ್ಯ ವರ್ಗಕ್ಕೆ ಸೇರಿದವರು ಎಂದುಕೊಳ್ಳುವುದು ದುರಹಂಕಾರ, ಮೂರ್ಖತನ.
ಸಿನಿಮಾ ನೋಡುಗರಲ್ಲಿ ಅಥವಾ ಸಾಹಿತ್ಯ ಓದುಗರಲ್ಲಿ ’ದೃಷ್ಟಿಕೋನ’ದ ಪಾತ್ರವೇನು?
ಒಂದು ದೃಷ್ಟಿಕೋನದಿಂದ ಎಲ್ಲರೂ ನೋಡುವುದಿಲ್ಲ. ಒಂದು ವೀಕ್ಷನೆಯಲ್ಲಿ ಹಲವಾರು ಜನರಿದ್ದರೆ ನಾನಾ ರೀತಿಯ ದೃಷ್ಟಿಕೋನಗಳು ಹುಟ್ಟುತ್ತವೆ. ನೋಡುವವರ ನೆಲೆಗಳು ತಮ್ಮಲ್ಲೇ ಮೌಲ್ಯಮಾಪನ ನಡೆಸುತ್ತವೆ. ಉದಾಹರಣೆಗೆ ಪುನೀತ್ ರಾಜ್‌ಕುಮಾರ್‌ರ ’ಪೃಥಿ’ ಬಂತು. ಪುನೀತ್‌ರ ಫ್ಯಾನ್‌ಗಳೇ ಇದ್ಯಾಕೋ ಸರಿ ಇಲ್ಲ ಎಂದು ತಿರಸ್ಕರಿಸಿದರು. ವಾಸ್ತವದಲ್ಲಿ ಜನಪ್ರಿಯ ಸಿನಿಮಾಗಳಲ್ಲಿ ಇದು ಅತ್ಯಂತ ಒಳ್ಳೆಯ ಸಿನಿಮಾವಾಗಿತ್ತು. ವ್ಯವಸ್ಥೆಯನ್ನು, ರೆಡ್ಡಿಗಳನ್ನು ಧೈರ್ಯವಾಗಿ ಎದುರು ಹಾಕಿಕೊಂಡ ಸಿನಿಮಾ ಅದು. ಸಿನಿಮಾದ ಉತ್ಪ್ರೇಕ್ಷಿತ ನುಡಿಗಟ್ಟನ್ನು ಆದಷ್ಟು ಕಡಿಮೆ ಮಾಡಿಕೊಂಡ ಹೊಸ ಶೈಲಿಯ ಸಿನೆಮಾ ಅದು. ಆದರೆ ಪ್ರೇಕ್ಷಕರು ಅದನ್ನು ಏಕೆ ತಿರಸ್ಕರಿಸಿದರು? ಅವರಲ್ಲೂ ಒಂದು ಮೌಲ್ಯಮಾಪನ ಇರುತ್ತೆ, ಚಿಕಿತ್ಸಕ ವಿಶ್ಲೇಷಣೆಯ ಪ್ರಜ್ಞೆ ಕೆಲಸ ಮಾಡುತ್ತಿರುತ್ತವೆ. ಸರಿ ತಪ್ಪು ವಿಷಯ ಬೇರೆ. ಹೀಗೆ ಒಂದು ದೃಷ್ಟಿಕೋನ ಅಂತ ಇರಲ್ಲ. ದೃಷ್ಟಿಕೋನಗಳಿರುತ್ತೆ. ಇವರನ್ನು ನಾವು ಅಧ್ಯಯನ ಮಾಡಬೇಕು.
ಮತ್ತೆ ಏಕೆ ವಿಫಲವಾಯತು ಅಂತೀರಿ?
ಏಕೆಂದರೆ ಒಬ್ಬ ಸೂಪರ್ ಸ್ಟಾರ್‌ನ ಜನಪ್ರಿಯ ಇಮೇಜಿಗೆ ವಿರುದ್ಧವಾಗಿತ್ತು ಅದು. ಪೃಥ್ವಿಯಲ್ಲಿ ಪುನೀತ್‌ರ ಪಾತ್ರ ಅದನ್ನು ಪಲ್ಲಟಗೊಳಿಸಿದಾಗ ಅಭಿಮಾನಿಗಳು ಬಯಸುವ ರಂಜನೆಯ ಅಂಶ ಅವರಿಗೆ ಸಿಗಲಿಲ್ಲ. ಅವರ ಕನಸುಗಳನ್ನು ನುಚ್ಚುನೂರು ಮಾಡಿದ ಸಿನಿಮಾ ಅದು. ಹೀಗೆ ಒಂದೆಡೆ ಕನಸುಗಳೂ ಕೆಲಸ ಮಾಡುತ್ತಿರುತ್ತವೆ, ಅವೂ ಒಂದು ದೃಷ್ಟಿಕೋನ ರೂಪಿಸುತ್ತಿರುತ್ತವೆ, ಹಾಗಾಗಿ ಆ ಕನಸುಗಳನ್ನು ಮಾರುವವರೂ ಇರುತ್ತಾರೆ. ನನ್ನ ಪ್ರಕಾರ ಪೃಥ್ವಿಯ ಯಶಸ್ಸೇನೆಂದರೆ ಅದು ಹಾಗೆ ಕನಸ್ಸುಗಳನ್ನು ಮಾರದೇ ಇದ್ದ ಸಿನಿಮಾ ಆಗಿದ್ದು. ಹೀಗೆ ಕನಸುಗಳನ್ನು ಮಾರುತ್ತಾ ಸುಳ್ಳು ಹೇಳುತ್ತಾ ಒಂದು ದೃಷ್ಟಿಕೋನ ಬೆಳೆಸುವುದಿದೆಯಲ್ಲಾ ಅದನ್ನು ಮುರಿಯುವಂತಹ ದೃಷ್ಟಿಕೋನ ಹುಟ್ಟಿಸುವ ಸಿನಿಮಾ ಬರುತ್ತಲ್ಲಾ ಅದನ್ನು ನಾವು ಬೆಳೆಸಬೇಕು. ಕನ್ನಡ ಸಿನೆಮಾ ಉದ್ಧಾರ ಆಗುವುದಿದ್ದರೆ ಅದರಿಂದ ಮಾತ್ರ.
ಕಳೆದ ಎರಡು ದಶಕಗಳಲ್ಲಿ ವ್ಯಾಪಕವಾಗಿರುವ ಗ್ರಾಹಕ ಸಂಸ್ಕೃತಿ ಸಿನಿಮಾಗಳ ಮೇಲೆ ಬೀರಿರುವ ಪರಿಣಾಮ ಏನು?
ಕನ್ನಡವಿರಲಿ ಇನ್ನಾವುದೇ ಸಿನಿಮಾ ರಂಗವಿರಲಿ ಅಲ್ಲಿ ಜಾಗತೀಕರಣ ಬರುವವರೆಗೆ ಸ್ಥಳೀಯ ವಿಷಯಗಳು ಮುಖ್ಯವಾಗುತ್ತಿತ್ತು. ಸಿನಿಮಾಗಳು ಮಧ್ಯಮ ವರ್ಗದ ಸಮುದಾಯದ ಪ್ರಜ್ಞೆಯ ಚೌಕಟ್ಟಿನಲ್ಲಿರುತ್ತಿದ್ದವು. ಅವು ಸೂಪರ್ ಬಡ್ಜೆಟ್ ಸಿನಿಮಾಗಳಾಗಿರುತ್ತಿರಲಿಲ್ಲ. ತಂತ್ರಜ್ಞಾನ ಸಹ ಈ ಮಟ್ಟದಲ್ಲಿರಲಿಲ್ಲ. ಆದರೆ ಜಾಗತೀಕರಣ ಛಿದ್ರಗೊಂಡ ಸುಳ್ಳು ಸುಳ್ಳು ಬಿಡಿ ಬಿಡಿ ಪ್ರತಿಮೆಗಳನ್ನು ನಿರ್ಮಿಸತೊಡಗಿತು. ಸ್ಥಳೀಯತೆ ಮಾಯವಾಯಿತು. ಒಂದು ಹಂತದ ನಂತರ ಸ್ಥಳ ಕಾಲಕ್ಕೆ ಸಂಬಂಧಪಟ್ಟಂತೆ ಛಿದ್ರೀಕರಣ ಆರಂಭವಾಯಿತು. ಸಿನಿಮಾ ಒಂದು ನಿಧಾನಗತಿಯಲ್ಲಿ ನಮ್ಮ ಕತೆ ಹೇಳಿದರೆ ಅದು ನಮ್ಮದಲ್ಲ ಎನ್ನಿಸತೊಡಗಿತು. ಅವಾಸ್ತವಿಕವಾದುದನ್ನು ಸೂಪರ್‌ಸ್ಪೀಡ್‌ನಲ್ಲಿ ಹೇಳಿದಾಗ ಅದರ ಜೊತೆಗೆ ನಾವು ಗುರುತಿಸಿಕೊಳ್ಳತೊಡಗಿದೆವು. ಸಿನಿಮಾದಲ್ಲಾದ ಈ ಬದಲಾವಣೆ ಮಧ್ಯಮ ವರ್ಗವನ್ನೂ ಅಳಿಸಿಹಾಕಿತು, ಬಡವರನ್ನೂ ಶೋಷಿತರನ್ನೂ ಅಳಿಸಿ ಹಾಕಲು ಶುರು ಮಾಡಿತು. ಹೀಗೆ ನಿಜವಲ್ಲದ ಜಗತ್ತೇ ಜಗತ್ತು ಎಂಬುದನ್ನು ಹಾಗೂ ಅಲ್ಲಿ ತೋರಲ್ಪಡುವ ಪ್ರತಿಮೆಗಳು ನಮ್ಮ ಜೀವನದಲ್ಲಿ ಯಾವತ್ತೂ ಬರಲು ಸಾಧ್ಯವಿಲ್ಲವಾದರೂ ಅದೇ ನಿಜ ಎಂಬ ಭ್ರಮಾತ್ಮಕ ಒತ್ತಡವನ್ನು ಸೃಷ್ಟಿಮಾಡಲಾರಂಭಿಸಿತು. ಇದೆಲ್ಲದರ ಮೂಲವನ್ನು ಹುಡುಕಲು ನಾವು ತೊಡಗಬೆಕು. ಸಮಾಜದಲ್ಲಿ ಹೇಗೆ ಸಣ್ಣ ಪುಟ್ಟ ಅಂಗಡಿಗಳು ನಾಶವಾಗಿ ಮಾಲ್ ಸಂಸ್ಕೃತಿ ಶುರುವಾಯಿತೋ ಹಾಗೇ ಸಿನಿಮಾ ಪ್ರಪಂಚವೂ ಅದೇ ಬೆಳವಳಿಗೆಯನ್ನು ಸೂಚಿಸುತ್ತದೆ. ಇದನ್ನು ಚಿತ್ರರಂಗದ ತರ್ಕದೊಳಗೇ ಅರ್ಥೈಸಲಾಗುವುದಿಲ್ಲ.
ಈ ಸಾಂಸಕೃತಿಕ ಬದಲಾವಣೆಗೆ ಯಾವುದೇ ಪ್ರತಿರೋಧ ಸಿನಿಮಾ ರಂಗದಲ್ಲಿ ವ್ಯಕ್ತಗೊಂಡಿಲ್ಲವೇ? ಖಂಡಿತಾ ಅಂತಹ ಪ್ರತಿರೋಧ ವ್ಯಕ್ತವಾಗಿದೆ. ಪೃಥ್ವಿ ಕೂಡಾ ಆ ಬಗೆಯದೇ. ಗಿರೀಶ್ ಕಾಸರವಳ್ಳಿ,ಪಿ.ಶೇಷಾದ್ರಿಯವರಂತವರು ಆ ನಿಟ್ಟಿನಲ್ಲಿ ನಿರಂತರ ಪ್ರಯತ್ನದಲ್ಲಿದ್ದಾರೆ. ಹಾಗೆಯೇ ಮರಾಠಿಯಲ್ಲಿ, ಭೋಜ್ಪುರಿ, ಪಂಜಾಬಿಯಲ್ಲಿ ಇಂತಹ ಪ್ರಯತ್ನಗಳು ನಡೆಯುತ್ತಿವೆ. ಹಿಂದಿ ಸಿನಿಮಾರಂಗದಲ್ಲೂ ಕೂಡಾ ಇಂತಹ ದನಿಗಳು ಬರುತ್ತಿವೆ. ಇವೆಲ್ಲಾ ತಮ್ಮ ಭಾಷೆ, ಸಂಸ್ಕೃತಿಗಳ ಪರವಾದ ಆಂದೋಲನಗಳ ಸೂಚನೆಯಾಗಿಯೂ ಬರುತ್ತಿವೆ.
ಇಂದು ಕಲಾತ್ಮಕ ಸಿನಿಮಾ ಕಮರ್ಷಿಯಲ್ ಸಿನಿಮಾ ಎಂದು ವಿಂಗಡನೆ ಮಾಡಿ ನೋಡಲಾಗುತ್ತಿದೆ. ಇದು ಎಷ್ಟು ಸರಿ?
ಈ ಪ್ರಶ್ನೆಯನ್ನು ಕೇಳಬೇಕಾದ ಕಾಲ ಬಂದಿದೆ. ಹೀಗೆ ವರ್ಗೀಕರಣ ಮಾಡಿದವರು ಯಾರು? ಹಾಗೆ ಮಾಡಬೇಕಾದ ಅನಿವಾರ್ಯತೆ ಯಾರಿಗೆ ಬಂತು ಯಾಕೆ ಬಂತು? ಸೊಕಾಲ್ಡ್ ಕಲಾತ್ಮಕ ಸಿನಿಮಾಗಳನ್ನು ಜನಗಳು ನೋಡುವುದಿಲ್ಲ ಎನ್ನುವ ಮಾತಿನ ಬದಲಾಗಿ ಅವು ರಿಲೀಸ್ ಆಗದೇನೇ ಜನಗಳ ಹತ್ತಿರ ಹೋಗದೇ ಇರುವಂತೆ ಮಾಡಿಬಿಡುವ ಶಕ್ತಿಗಳಾವುವು ಎಂದು ನೋಡಬೇಕು? ಕಾಸರವಳ್ಳಿ ಮಾಡಿದ್ದು ಒಳ್ಳೇ ಸಿನಿಮಾನೋ ಕೆಟ್ಟ ಸಿನಿಮಾನೋ ಎಂದು ಮಾತನಾಡಬೇಕೇ ಹೊರತು ಇದು ಆರ್ಟ್ ಸಿನಿಮಾ, ಜನ ನೋಡಲ್ಲ ಎಂದು ಹೇಳುವುದರ ಮೂಲವನ್ನು ನೋಡದೇ ಒಪ್ಪಿಕೊಂಡುಬಿಡುವುದು ಸರಿಯಲ್ಲ. ಅಂತಹ ಮಾತುಗಳಲ್ಲಿ ಸಹ ಬಂಡವಾಳದ ಲಾಭಿ ಇದೆ. ನಿಜವಾಗಿಯೂ ಈ ಸಿನಿಮಾಗಳನ್ನು ಒಂದಕ್ಕೊಂದು ವಿರೋಧಿನೆಲೆಯಲ್ಲಿ ನೋಡಬೇಕಾದುದಿಲ್ಲ. ಜನಪ್ರಿಯ ಸಿನಿಮಾಗಳ ಅನೇಕ ಅಂಶಗಳನ್ನು ಒಪ್ಪಿಕೊಳ್ಳುವ ನೆಲೆಯಲ್ಲಿ ಗಿರೀಶ್ ಅಂಹವರಿದ್ದಾರೆ. ಹಾಗೆಯೇ ಜನಪ್ರಿಯ ಸಿನಿಮಾ ಮಾಡುವವರು ಕಾಸರವಳ್ಳಿಯಂತವರು ಮಾಡುವ ಸಿನಿಮಾಗಳಿಗೆ ತೆರೆದುಕೊಂಡರೆ ಅವರಿಗೆ ಕಲಿಯಲು ಬೇಕಾದಷ್ಟಿದೆ. ಹೀಗೆ ಎರಡರ ನಡುವೆ ಕೊಡುಕೊಳೆ ಸಂಬಂಧವನ್ನು ನಾವು ಕಟ್ಟಬೇಕಿದೆ.
ಹೀಗೆಲ್ಲಾ ನಡೆಯುತ್ತಿರುವಾಗ ನಮ್ಮ ಚುನಾಯಿತ ಸರ್ಕಾರಗಳ ಹೊಣೆಗಾರಿಕೆ ಎನು?
ನಿಜವಾದ, ಗಟ್ಟಿಯಾದ ರಾಜಕೀಯ ಪ್ರಜ್ಞೆಯ ಕೊರತೆ ನಮ್ಮ ಎಲ್ಲಾ ರಾಜಕೀಯ ಪಕ್ಷಗಳಿಗಿರುವುದರಿಂದ ಇಲ್ಲಿ ಸರ್ಕಾರಗಳಿವೆಯೇ ಹೊರತು ನಿಜವಾದ ಪ್ರಜಾಪ್ರಭುತ್ವವಾದಿ ನೆಲೆಯನ್ನಿಟ್ಟುಕೊಂಡು ಘನವಾದ ರಾಜಕೀಯ ನಡೆಸುವ ಪ್ರಭುತ್ವವೇ ನಾಶವಾಗಿದೆ. ಸೈದ್ಧಾಂತಿಕ ನೆಲೆಯ ರಾಜಕೀಯ ಇಲ್ಲಿಲ್ಲ. ರಾಜಕೀಯ ಪ್ರಜ್ಞೆ ಕುಸಿದಿದೆ. ಇದರಿಂದಾಗಿ ಇಲ್ಲಿ ಇಂದು ಶತ್ರು, ನಾಳೆ ಸ್ನೇಹಿತ, ಹಣ, ಲಾಭಿ, ಲಿಕರ್ ಲಾಭಿ, ಪವರ್ ಲಾಭಿ, ಗ್ರಾನೈಟ್ ಲಾಭಿ,ಇವೆಲ್ಲದರಿಂದ ಸರ್ಕಾರದ ಅಧಿಕಾರ ಹಿಡಿದಿಡುವ ರಾಜಕೀಯ ಪಕ್ಷ ಮಾತ್ರವೆ ಇಲ್ಲಿದೆ. ಹಾಗೇನೇ ವಿರೋಧ ಪಕ್ಷಕ್ಕೂ ಕೂಡ ಪ್ರಗತಿ, ಜನರ ಅಭಿವೃದ್ಧಿ ಇವ್ಯಾವೂ ಕಾಳಜಿಗಳಲ್ಲ. ಅವರ ಒಂದೇ ಕಾಳಜಿ ಆಳುತ್ತಿರುವ ಪಕ್ಷವನ್ನು ಉರುಳಿಸುವುದು ಅಷ್ಟೆ. ಹೀಗಾಗಿ ಇವರಿಂದ ಏನನ್ನೂ ನಿರೀಕ್ಷೆ ಮಾಡಲು ಆಗಲ್ಲ.
ತತ್ವಬದ್ಧ ರಾಜಕೀಯ ತಮ್ಮದು ಎಂದುಕೊಳ್ಳುತ್ತಿದ್ದ ಎಡಪಂಥೀಯರು ಬಂಗಾಳದಲ್ಲಿ ಸೋತಿರುವ ಬಗ್ಗೆ ಏನಂತೀರಿ?
ನಿಜವಾಗಿಯೂ ಸತ್ಯ ಬಯಲಿಗೆ ಬಂತು. ಅವರಿಗೆ ರಾಜಕೀಯವೂ ಇರಲಿಲ್ಲ. ಎಡಪಂಥೀಯತೆನೂ ಇಲ್ಲ, ಸಮಾಜವಾದದ ಕಲ್ಪನೇನೂ ಇಲ್ಲ್ಲ. ಇದ್ದ ಕಾಲ ಒಂದಿತ್ತು. ಕಳೆದ ಮೂವತ್ತೈದು ವರ್ಷಗಳಲ್ಲಿ ನಾನಾ ರೀತಿಯ ಕುತಂತ್ರಗಳನ್ನು, ಷಡ್ಯಂತ್ರಗಳನ್ನು ಮಾಡಿಕೊಂಡು ಬಂದಿದ್ದೇ ಸಿಪಿಎಂ. ನೈಜ ರಾಜಕೀಯ ಅವರದ್ದಾಗಿದ್ದರೆ ಕೇರಳದಲ್ಲಿ ಅಚ್ಯುತಾನಂದನ್‌ನ್ನು ಇಳಿಸಲು ಹೊರಟಿದ್ದೇಕೆ?. ಸೋಕಾಲ್ಡ್ ಎಡಪಂಥೀಯ ಪಕ್ಷದೊಳಗೇ ಒಂದು ರೀತಿಯ ಸ್ಟಾಲಿನ್‌ವಾದವಿದೆ. ಪ್ರಕಾಶ್ ಕಾರಟ್ ಪ್ರತಿನಿಧಿಸುವುದು ಪ್ರಜಾತಾಂತ್ರಿಕ ರಾಜಕೀಯವನ್ನಲ್ಲ. ಬಲಪಕ್ಷಗಳು ಹೇಗಿವೆಯೋ ಹಾಗೇ ಇವೆ ಎಡಪಕ್ಷಗಳು.
ಕನ್ನಡವನ್ನು ಗಮನದಲ್ಲಿಟ್ಟುಕೊಂಡು ನೋಡುವುದಾದರೆ ಹೊಸ ಪೀಳಿಗೆಯ ಬರಹಗಾರರಲ್ಲಿ ಆಧುನಿಕತೆ, ಪರಂಪರ, ಸಂಪ್ರದಯಗಳ ಬಗೆಗೆ ದರ ಬಗ್ಗೆ ಗಂಬೀರವಾಗಿ ಯೋಚನೆ ಮಾಡುವ ಬೆಳವಣಿಗೆ ಇದೆ. ಜಗತ್ತಿನ ವಿದ್ಯಮಾನಗಳನ್ನು ಅರ್ಥ ಮಾಡಿಕೊಳ್ಳುತ್ತಲೇ ಕನ್ನಡದಲ್ಲಿ ತಮ್ಮ ಸಂವೇದನೆಯನ್ನು ರೂಪಿಸಿ ಅಭಿವ್ಯಕ್ತಿಗೊಳಿಸುವಲ್ಲಿ ಪ್ರಯತ್ನಿಸುತ್ತಿದ್ದಾರೆ. ಜಯಂತ್ ಕಯ್ಕಿಣಿ ಇರಬಹುದು, ವಿವೇಕ್ ಶಾನಭಾಗ್, ಮೊಗಳ್ಳಿ ಗಣೇಶ್,ವಸುದೇಂದ್ರ ಇರಬಹುದು, ಲೇಖಕಿಯರಿರಬಹುದು ಎಲ್ಲರಲ್ಲೂ ಆ ಪ್ರಯತ್ನ ಇದೆ. ಮೊಗಳ್ಳಿ ಗಣೇಶ್ ಅವರನ್ನೇ ನೋಡಿ. ಅವರು ಮೊದಲು ಜಾಗತೀಕರಣದ ಪರವಾಗಿದ್ದವರು. ಆದರೆ ಇಂದು ಅದರಲ್ಲೇನೋ ಕೆಟ್ಟದಿದೆ ಎಂದು ಅದರ ವಿರುದ್ಧ ತಿರುಗುತ್ತಿದ್ದಾರೆ.
ನವ್ಯ, ಬಂಡಾಯಗಳ ನಂತರದಲ್ಲಿ ಇಂದಿನ ಸಾಹಿತ್ಯ ಚಳವಳಿಯ ದಿಕ್ಕುದೆಸೆ ಏನಾಗಿದೆ?
ಒಂದು ಅನುಕೂಲಕ್ಕಾಗಿ ಮಾತ್ರ ಆ ಬಗೆ ಮಾಡಿಕೊಂಡ ಚೌಕಟ್ಟುಗಳಷ್ಟೇ. ಹೊರತು ಒಂದು ಮಟ್ಟದ ನಂತರ ಅವೆಲ್ಲಾ ಕೃತಕವಾದವು. ನವ್ಯ ಎನ್ನುವವರಲ್ಲೇ ಹಲವಾರು ಭಿನ್ನತೆಗಳಿರಲಿಲ್ಲವೇ? ಎಂದು ಯಾವುದರಲ್ಲೂ ಏಕರೂಪತೆ ಇರಲಿಲ್ಲ. ಇಂದಿನ ಕಾಲ ಅನೇಕ ಸ್ಥಿತ್ಯಂತರಗಳನ್ನು, ತವಕ ತಲ್ಲಣಗಳನ್ನು ಅಭಿವ್ಯಕ್ತಿಸುವ, ಪ್ರತಿನಿಧಿಸುವ, ವಿರೋಧಿಸುವ ಕಾಲ ಇದು ಎನ್ನಬಹದು. ಸಂಸ್ಕಾರದ ಅನಂತಮೂರ್ತಿಯವರಿಗೂ ದಿವ್ಯದ ಅನಂತಮೂರ್ತಿಯವರಿಗೂ ಬಹಳ ಪಲ್ಲಟವಾಗಿದೆ ಎನ್ನುವುದನ್ನು ನೋಡಬೇಕು. ಇಂದಿನ ಕನ್ನಡದ ಮನಸ್ಸು ವಿರೋಧಾಭಾಸ, ವಿಪರ್ಯಾಸ ದ್ವಂದ್ವ, ವಿರೋಧಿ ನೆಲೆಗಳನ್ನು ಪ್ರತಿನಿಧಿಸುತ್ತಿದೆ. ಇದು ಕನ್ನಡದ ನಿಜವಾದ ಗುಣ ಕೂಡಾ. ಒಂದೇ ಸಿದ್ಧಾಂತ ಸರಿ ಎಂದು ಹೇಳದಿರುವಂತದ್ದು ಇದು.
ಕನ್ನಡ ಸಾಹಿತ್ಯ ರಚನೆಯಲ್ಲಿ ಮಹಿಳೆಯರ ತೊಡಗುವಿಕೆ ಹೆಚ್ಚುತ್ತಿರುವಿಕೆ ಅದು ಸಾಹಿತ್ಯದಲ್ಲಿ ಬೀರುತ್ತಿರುವ ಗುಣಾತ್ಮಕ ಪರಿಣಾಮ ಏನು?
ಇದನ್ನು ನಾವು ಎಂ.ಕೆ. ಇಂದಿರಾ, ತ್ರಿವೇಣಿ ಅವರಿಂದಲೂ ನೋಡುವುದಾದರೆ ಇಂದು ಬರೆಯುತ್ತಿರುವವರು ಹೊಸ ನುಡಿಗಟ್ಟು ಕಂಡಿಕೊಂಡವರು ಎಂದು ನಾನು ಹೇಳುವುದಿಲ್ಲ. ಇಲ್ಲಿ ವಿಮರ್ಷೆಯಲ್ಲೇ ಒಂದು ಲೋಪವಾಗಿರುವುದೇನೆಂದರೆ ಸ್ತ್ರೀ ಕೃತಿಗಳನ್ನು ಸ್ತ್ರೀವಾದಿ ವಿಮರ್ಷೆ, ಸ್ತ್ರೀವಾದಿ ಮೀಮಾಂಸೆ ಬರುವ ತನಕವೂ ಗಂಭೀರವಾಗಿ ಓದುವ ಪರಂಪರೆಯೇ ಇಲ್ಲಲ್ಲೊತ್ತಡ ಸುರುವಾದ ಮೇಲೆಯೇ ಅದು ಶುರುವಾಗಿದ್ದು. ದೊಡ್ಡ ದೊಡ್ಡ ವಿಮರ್ಶಕರೂ ಕೂಡ ಸ್ತ್ರೀಯರ ಬರಹವನ್ನು ಗೌಣಗೊಳಿಸಿದ್ದಾರೆ. ಹೀಗಾಗಿ ನಮ್ಮ ಮಹಿಳೆಯರ ಕೃತಿಗಳ ಅಧ್ಯಯನ ಇಂದಿನಿಂದ ಆರಂಭವಾಗಬಾರದು. ಇದೇ ಕಾಲೇಜಿನಲ್ಲೇ ಆವಿಷ್ಕಾರಗೊಂಡ ೨೦ ನೇ ಶತಮಾನದ ಪ್ರಪ್ರಥಮ ಬರಹಗಾರ್ತಿ ನಂಜನಗೂಡು ತಿರುಮಲಾಂಬ ಕಾಲದಿಂದಲೂ ಬಂದ ಪರಂಪರೆಯನ್ನು ಗುರುತಿಸಬೇಕು. ಹೊಸ ಅಧ್ಯಯನ ಶುರುವಾಗಬೇಕು. ಗಟ್ಟಿಯಾಗಿ ಆಗಬೇಕು.
ದಲಿತ ಚಳವಳಿಯ ಛಿದ್ರಗೊಂಡ ನಂತರದಲ್ಲಿ ಕನ್ನಡ ಸಾಹಿತ್ಯದಲ್ಲಿ ದಲಿತ ಸಂವೇದನೆ ಯಾವ ಗತಿ ಪಡೆದುಕೊಂಡಿದೆ?
ಇಂತು ಚಳವಳಿಗಳ ಸ್ವರೂಪವೇ ಅನೇಕ ಒಳಪದರುಗಳನ್ನು ಹುಟ್ಟಿಸಿಕೊಂಡಿದೆ. ಅದೇ ರೀತಿ ದಲಿತ ಚಳವಳಿಯ ಒಳಗೆನೇ ಕವಲುಗಳು ಒಳದಾರಿಯನ್ನು ಕಂಡುಕೊಳ್ತಾ ಇದೆ. ಅದರಲ್ಲಿ ಸಂಕುಚಿತ ಸಣ್ಣ ಪುಟ್ಟ ಒಳಜಗಳಗಳಿರಬಹುದಾದರೂ ಅದನ್ನು ಮುಖ್ಯವಾಗಿ ನೋಡಬೇಕೆನ್ನಿಸುವುದಿಲ್ಲ. ಆದರೆ ಅಲ್ಲಿ ಪ್ರಾಮಾಣಿಕವಾಗಿಯೇ ಜಾತಿಗೆ ಸಂಬಂಧ ಪಟ್ಟಂತೆ, ಜಾಗತೀಕರಣ, ಒಳಮೀಸಲಾತಿ, ದಲಿತ ಆದಿಮ ಪ್ರಜ್ಞೆ, ಇತ್ಯಾದಿಗಳಿಗೆ ಸಂಬಂಧಿಸಿದಂತೆ ತಾತ್ವಿಕ ಜಗಳಗಳಿವೆ. ದೇವನೂರು, ಸಿದ್ದಲಿಂಗಯ್ಯ, ಕೋಟಕಾನ ಹಳ್ಳಿ ರಾಮಯ್ಯ, ಕೆ.ಬಿ.ಸಿದ್ದಯ್ಯ ಮುಂತಾರವರು ಇಂತಹ ತಾತ್ವಿಕ ಜಗಳಗಳ ನಾಯಕರು. ದಲಿತ ಚಳವಳಿಯನ್ನು ಛಿದ್ರವಾಯ್ತು, ಮುಗಿದು ಹೋಯ್ತು ಎಂದೆಲ್ಲಾ ಸುಲಭವಾಗಿ ಹೇಳಿಬಿಡುವುದು ಅದರ ಬಗ್ಗೆ ಗೌರವ ಇಲ್ಲದವರು ಹೇಳುವ ಮಾತು. ಎಲ್ಲಾ ಕಡೆ ಆಗುವುದು ಅಲ್ಲಿಯೂ ಆಗ್ತಿದೆ. ಆದರೆ ಯಾಕೆ ಹೀಗೆ ಅನೇಕ ಪದರುಗಳಾಯ್ತು ಎಂದು ಅಧ್ಯಯನ ಮಾಡಬೇಕು. ಹೊರಗೆ ನಿಂತವರು ನಾವು ಅದಕ್ಕಿರುವ ತಾತ್ವಿಕ ಆಯಾಮವನ್ನೇ ಮುನ್ನೆಲೆಗೆ ತರಬೇಕು. ಒಳಜಗಳೇನೇ ಇರಲಿ ಅಲ್ಲಿರುವ ತಾತ್ವಿಕ, ಸೈದ್ಧಾಂತಿಕ ನೆಲೆಯನ್ನೇ ಕಟ್ಟಿಕೊಡುವುದು ನಮ್ಮ ನೈತಿಕ ಜವಾಬ್ದಾರಿ. ದಲಿತ ಸಾಹಿತ್ಯದ ಬಗ್ಗೆ ಮಾತಾಡುವುದಾದರೆ ಅದರೊಳಗೆನೇ ಸಾಕಷ್ಟು ಒಳವಿಮರ್ಷೆ ಇದೆ. ದೇವನೂರರ ಕುಸುಮಬಾಲೆ ದಲಿತ ಚಳುವಳಿಗೆ ಪೂರಕವಾಗಿರದ ಕೃತಿ ಎಂಬ ವ್ಯಾಖ್ಯಾನವೂ ಹುಟ್ತಾ ಇದೆ.
ಜಾಗತೀಕರಣವನ್ನು ಕೇವಲ ದೇಸೀ ನೆಲೆಯಲ್ಲಿ ಬರೀ ಸಾಂಸಕೃತಿಕ ಪರಿಕರಗಳಿಂದ ಎದುರಿಸಬಹುದೆನ್ನುವ ಒಂದು ವಾದ ಇದೆಯಲ್ಲಾ, ಇದು ಕಾರ್ಯ ಸಾದುವೇ?
ಇಲ್ಲ. ಇಂದು ಯಾವ ಪ್ರಶ್ನೆಯೂ ಅದು ಹುಟ್ಟುವ ಸೀಮಿತ ಮಟ್ಟಕ್ಕೆ ಇರುವುದಿಲ್ಲ. ಶುರುವಾಗುವಾಗ ಒಂದು ನೆಲೆಯಲ್ಲಿ ಶುರುವಾಗುವ ಒಂದು ಆಂದೋಲನ, ಸಂಘರ್ಷ ಅದೇ ನೆಲೆಯಲ್ಲೇ ಸ್ಥಲೀಯವಾಗೇ ಇರುವುದಿಲ್ಲ. ಅಂತಹ ಜಾಗತಿಕ ಪ್ರಪಂಚಕ್ಕೆ ಬೇಕೋ ಬೇಡವೋ ನಾವು ನುಗ್ಗಿಯಾಗಿದೆ. ಸ್ಥಲೀಯ ಪ್ರಶ್ನೆ ಸ್ಥಳೀಯವಾಗಿ ಇತ್ಯರ್ಥವಾಗಲ್ಲ.ದೀ ರೀತಿ ಪ್ರಜ್ಞೆ ಮೂಎಉವ ಅನಿವಾರ್ಯತೆ ಎದುರಾಗಿದೆ. ಇದು ಸಾಧ್ಯವಾಗುವಂತಹ ಅನೇಕ ಚಿಕ್ಕಪುಟ್ಟ ಆಂದೋಲನಗಳು ಆಗುತ್ತಿವೆ. ಪರಿಸರ ಚಳವಳಿ ಇರಬಹುದು, ಡ್ಯಾಂ ವಿರೋಧ ಚಳವಳಿ ಇರಬುದು, ಕಾರ್ಪೊರೇಟ್ ಕ್ಷೇತ್ರದ ವಿರುದ್ಧದ ಚಳುವಳಿಗಳು ಹರಿದು ಹಂಚಿಹೋದ ನೂರಾರು ಆಂದೋಲನಗಳಾಗುತ್ತಿವೆ. ಜಗತ್ತಿನ ಎಲ್ಲಾ ಕಡೆಯೂ ಇಂತವು ಆಗುತ್ತಿವೆ. ಇವೆಲ್ಲಾ ಹೇಗೆ ಕೂಡಿಕೊಳ್ಳುತ್ತವೆ, ಎನು ಸಕ್ತಿ ಪಡೆದುಕೊಳ್ಳುತ್ತಿವೆ ಎಂದು ನೋಡಬೇಕಿದೆ. ಒಂದು ಸಿದ್ಧಾಂತದ ಮೂಲಕ ಉತ್ತರ ಹುಡುಕುತ್ತೇವೆ ಎಂದರೆ ಅಕ್ಕಿಂತ ದೊಡ್ಡ ಭ್ರಮೆ ಯಾವುದೂ ಇರಲ್ಲ. ಅದು ಇನ್ನು ಸಾಧ್ಯವಿಲ್ಲ.
ನವ ಶಿಕ್ಷಣ ನೀತಿ ಜಾರಿಯಾದ ನಂತರ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಾಗಿರುವ ಬದಲಾವಣೆಗಳನ್ನು ನೀವು ಹೇಗೆ ಗ್ರಹಿಸುತ್ತೀರಿ? ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಬಂದ ಪ್ರೊ.ಯಶ್‌ಪಾಲ್ ವರದಿಗಿರುವ ಪ್ರಾಮುಖ್ಯತೆ ಏನು?
ಖಾಸಗೀಕರಣದ ನೀತಿಯನ್ನು ವರೋಧಿಸಲೇ ಬೇಕು. ಅದು ಬಂಡವಾಳಶಾಹಿಯ ನೀತಿ. ಶ್ರೇಷ್ಠತೆಯ ಹೆಸರಿನಲ್ಲಿ ಬಂಡವಾಳಶಾಹಿ ನೀತಿಯನ್ನು ತಂದಿಡುತ್ತಿದ್ದಿವಿ. ಸರ್ಕಾರ ತನ್ನ ಜವಾಬ್ದಾರಿ ಕಳಚಿಕೊಂಡಿದೆ. ಅಲ್ಲಿ ನಿಜವಾಗಿಯೂ ಸಾಮಾಜಿಕ ನ್ಯಾಯವೂ ಇರಲ್ಲ, ಜ್ಞಾನದ ಶ್ರೇಷ್ಠತೆಯೂ ಇರಲ್ಲ. ಈ ನಿಟ್ಟಿನಲ್ಲಿ ಯಶಪಾಲ್ ವರದಿ ಪ್ರಗತಿಪರವಾದದ್ದು, ಆಶಾದಾಯಕವಾದದ್ದು. ಇದರಲ್ಲಿ ಪ್ರಭುತ್ವ ಎಷ್ಟು ಹಣ ನೀಡಬೇಕು, ಪ್ರಭುತ್ವದ ಪಾತ್ರ,ಖಾಸಗಿ ಸಂಸ್ಥೆಗಳ ಪಾತ್ರವೇನು ಎನ್ನುವುದರೀಮದ ಹಿಡಿದು ಪರೀಕ್ಷಾ ಯೋಜನೆಗಳವರೆಗೂ ಚರ್ಚೆಯಾದಮತಹ ವರದಿ ಇದು. ಪರೀಕ್ಷೆಗಳನ್ನು ತೆಗೆಯಬೆಕು ಎನ್ನುತ್ತದೆ ಅದು. ನಾವು ಶಿಕ್ಷಣ, ಕೃಷಿ, ಆರೋಗ್ಯಗಳಲ್ಲಿ ಖಾಸಗೀಕರಣಗಳನ್ನು ವಿರೋಧಿಸಲೇಬೇಕು. ಐಐಟಿ, ಐಐಎಂಗಳ ಸ್ಥಾನಮಾನ, ಅಂತರರಾಷ್ಟ್ರೀಯ ಸ್ಟಾಂಡರ್ಡ್‌ಗಳ ಬಗ್ಗೆ ಮಾತನಾಡುತ್ತಿದ್ದೇವೆ. ಆದರೆ ನಾವು ನಿಜಕ್ಕೂ ಯಾವ ಸ್ಟಾಂಡರ್ಡ್‌ಗಳ ಬಗ್ಗೆ ಮಾತನಾಡುತ್ತಿದ್ದೇವೆ. ಇಲ್ಲಿ ನ್ಯಾಯದ ಪರಿಕಲ್ಪನೆ ಏನು?, ಶ್ರೇಷ್ಠತೆಯ ಅಂದರೆ ಏನೆಂದುಕೊಳ್ತಿದೀವಿ? ಇಲ್ಲಿ ಮಾರುಕಟ್ಟೆಯ ರೇಸ್‌ನಲ್ಲಿ ಯಾವುದು ಓಡುತ್ತದೆಯೋ ಅದು ಮಾತ್ರವೇ ಮಾರಾಟವಾಗುವಂತ ಕೋರ್ಸು. ಬಯೋಟೆಕ್ನಾಲಜಿ, ಮೂಲ ವಿಜ್ಞಾನದ ಕೋರ್ಸುಗಳು, ಮಾನವಿಕ ಶಾಸ್ತ್ರಗಳು ಯಾಕೆ ಮುಚ್ಚುತಿವೆ? ಕೇವಲ ಬಿಬಿಎಂ, ಎಂಬಿಎಗಳು ಮಾತ್ರ ಓಡುತ್ತಿವೆ ಏಕೆ?. ಈ ಎಲ್ಲಾ ವಿಧ್ಯಾಕ್ಷೇತ್ರದ ಸಮಸ್ಯೆಗಳಿಗೆ ಹಿನ್ನೆಲೆಯಲ್ಲಿರುವ ಆರ್ಥಿಕ, ಸಾಮಾಜಿಕ ವಿಷಯಗಳ ಅಧ್ಯಯನ ಆಗಬೇಕಿದೆ. ನಡೆಯುತ್ತಿದೆ ಕೂಡಾ. ಇದಾವುದೂ ಹೊಸ ವಿಷಯವಲ್ಲ.
ನಮ್ಮ ಸಮಾಜವನ್ನು ತೀವ್ರವಾದಿ ಬಾಧಿಸುತ್ತಿರುವ ಪ್ರಮುಖ ಸಮಸ್ಯೆ ಯಾವುದು ಎಂದು ನಿಮ್ಮ ಅನಿಸಿಕೆ? ಮತ್ತು ಅದರಿಂದ ಮುಕ್ತಿ ಹೇಗೆ?
ಆರೋಗ್ಯ, ವಿದಾಭ್ಯಾಸ, ಅನ್ನಾಹಾರ ಸಂಬಂಧಿಸಿದ್ದು. ಮತ್ತು ಅಷ್ಟೇ ಮುಖ್ಯವಾದದ್ದಯ ಮಾನವ ಹಕ್ಕುಗಳ ಉಲ್ಲಂಘನೆ. ಯಾವುದೇ ಪ್ರತಿರೋಧದ ದಮನವಾಗುತ್ತಿದರುವುದು ಇಂದಿನ ಪ್ರವೃತ್ತಿ ಇದೆ. ಅದು ಪರಿಸರ ಹೋರಾಟ ವಿರಲಿ, ಬಿನಯಕ್ ಸೇನ್ ವಿಷಯವಿರಲಿ, ಈಶಾನ್ಯಭಾರತವಿರಲಿ, ಕಾಶ್ಮೀರವಿರಲಿ ನಡೆಯುತ್ತಿರುವುದಿ ಇದೇ. ಕಳೆದ ಹತ್ತು ಹದಿನೈದು ವರ್ಷಗಳಲ್ಲಿ ಬಂದಿರುವ ಕರಾಳ ಕಾನೂನುಗಳ ಮೂಲಕ ಸಂವಿಧಾನ ಹಕ್ಕುಗಳನ್ನೇ ನಮ್ಮ ನ್ಯಾಯಾಂಗ ಎತ್ತಿ ಹಿಡಿಯದಿರುವಂತಹ ವ್ಯವಸ್ಥೇ ಕಟ್ಟುತ್ತಿರುವುದು ಅತ್ಯಂತ ಅಪಾಯ. ನಮ್ಮ ಸಮಾಜದ ಪ್ರಗತಿಗೆ ತೊಡಕಾಗಿರುವ ದೊಡ್ಡ ಸಮಸ್ಯೆ ಯಾವುದೆಂದರೆ ಎಲ್ಲಾ ವರ್ಗಗಳಲ್ಲಿ ಮಧ್ಯಮ ವರ್ಗವಾಗುವ ಕನಸು. ಅದನ್ನು ಅಳಿಸಿ ಹಾಕಿ ನ್ಯಾಯ ಸಮಾನತೆಯ ಪ್ರಶ್ನೆಯನ್ನು ಎದುರು ಹಾಕಿಕೊಳ್ಳದಿದ್ದರೆ ಎಲ್ಲರೂ ತಂತಮ್ಮ ಜಾತಿಗಳ, ಕೋಮುಗಳ, ಸಮುದಾಯಗಳ ಮಧ್ಯಮವರ್ಗದ ಅವಕಾಶವಾದಿತನವನ್ನೇ ಸೃಷ್ಟಿಸಿ ಪೋಷಿಸುತ್ತಿರುತ್ತಾರೆ. ಜಗತ್ತಿನ ಯಾವುದೇ ಕ್ರಾಂತಿಗಳು ಮಧ್ಯಮವರ್ಗದಿಂದ ಹುಟ್ಟಿದ ಪ್ರಜ್ಞೆಯೇ. ಅನುಷ್ಠಾನಕ್ಕೆ ತಂದಿರುವುದು ಬೇರೆಯವರಿರಬಹುದು, ಇಂದು ಮಧ್ಯಮ ವರ್ಗದ ಕನಸು ಎನ್ನುವುದು ಕೆಟ್ಟ ಕಾರ್ಪೊರೇಟ್ ಕ್ಷೇತ್ರದ ಕೆಟ್ಟ ಆಳ್ವಿಕೆಯನ್ನು ಪೋಷಿಸುವಂತದು. ಒಂದಕ್ಕೊಂದುಪೂರಕವಾಗಿದೆ. ಇಂದು ಅಣ್ಣಾ ಹಜಾರೆ, ರಾಮದೇವರ ಪ್ರತಿಭಟನೆಗೆ ಸರ್ಕಾರ ಹೆದರುತ್ತಿರುವುದು ಯಾಕೆ ನೋಡಿ. ಸಮಗ್ರವಾಗಿ ನೋಡುವುದಾದರೆ ಮಧ್ಯಮ ವರ್ಗ ಭಾಗವಹಿಸುವಂತಿದ್ದರೆ ಇನ್ನೂ ಪ್ರಭುತ್ವಗಳು ಹೆದರಿಕೊಳ್ಳುವಂತಹ ರಜಕೀಯ ಪ್ರಜ್ಞೆಯಂತೂ ಇದೆ. ಇದನ್ನು ಪುನಶ್ಚೇತನಗೊಳಿಸಬೇಕು. ಎಲ್ಲರೂ ಅಣ್ಣಾ ಹಜಾರೆಯನ್ನು ಮೆರೆಸುತ್ತಿರಬಹುದು. ನನಗೆ ಅವರು ಬಹಳ ದೊಡ್ಡ ಸಂಕೇತ ಅನ್ನಿಸುತ್ತಿಲ್ಲ. ಅಣ್ಣಾ ಹಜಾರೆ ಮೂಲಕ ನಾನು ನೋಡುತ್ತಿರುವುದೇನೆಂದರೆ ಅವರ ಮೂಲಕ ನಾಗರೀಕ ಸಮಾಜ ಎಚ್ಚೆತ್ತುಇಕೊಂಡು ಬಾಗವಹಿಸುತ್ತದೆ ಎಂದರೆ ಇನ್ನೂ ಕೂಡ ವ್ಯವಸ್ಥೇ ಹೆದರುತ್ತದೆ ಎನ್ನುವುದು. ಒಂದು ಅಣ್ಣಾ ಹಜಾರೆ ಏನೂ ಮಾಡಲು ಸಾಧ್ಯವಿಲ್ಲ. ಅದು ದೊಡ್ಡ ಪರ್ಯಾಯವನ್ನೇನೋ ನೀಡಿದೆ ಎಂದು ನೋಡುವುದು ಮತ್ತೊಂದು ಭ್ರಮೆ. ಆದರೆ ಅಂತಹ ಸೂಚನೆ ಇದೆ. ಅದರಲ್ಲಿ ಸಕಾರಾತ್ಮಕ ಎಳೆಯನ್ನು ಕಾಣದಿರುವುದು ಸಿನಿಕತನ. ಆಶಯಗಳ ನಾಡಿಯನ್ನು ಹಿಡಿದುಕೊಳ್ಳಬೇಕು. ಇದರ ಬಗ್ಗೆ ನಮಗೆ ಅನುಮಾನಗಳಿರಲಿ ಆದರೆ ಸಿನಿಕತನ ಇರಬಾರದು.
ಬಿ.ಜೆ.ಪಿ. ಸರ್ಕಾರ ಮೂರು ವರ್ಷ ಪೂರೈಸಿದ ಸಂದರ್ಭದಲ್ಲಿ ಹೆಗೆ ಮೌಲೀಕರಣ ಮಾಡುತ್ತೀರಿ?
ಅಧಿಕಾರಕ್ಕಾಗಿ ತನ್ನ ಘನತೆ ಮಾನವನ್ನೇ ಕಳೆದುಕೊಂಡಿರುವ ಸರ್ಕಾರ ಇದು. ಬೇರೆ ಎನೇಕ ವಿಷಯಗಳಿದ್ದರೂ ಶೋಭಾ ಕರಂದ್ಲಾಜೆಯ ಸಚಿವ ಸ್ಥಾನ ಕಳೆಯಲು ಪಕ್ಷದೊಳಗೆಯೇ ಬಂದ ಒತ್ತಡಗಳನ್ನು ಯಡಿಯೂರಪ್ಪ ನಿಭಾಯಿಸಿದ ರೀತಿ ಅವರ ಅಧಪತನವನ್ನಷ್ಟೇ ಸೂಚಿಸುತ್ತದೆ. ಈ ಕುರಿತು ನನಗಂತೂ ತೀರಾ ಬೇಸರವಿದೆ. ಮುಂದಿನ ಎರಡಯ ವರ್ಷಗಳಲ್ಲಿ ಕೆಲವಾದರೂ ಪ್ರಾಥಮಿಕ ಸತ್ಯಗಳನ್ನು ಹೇಳಲು ಸುರುಮಾಡಬೇಕು. ಕುರ್ಚಿ ಹೋದರೂ ಚಿಂತೆ ಇಲ್ಲ ಯಾವುದೇ ರೀತಿ ಹಣದ ಬಲೆಯೊಳಗೆ ಸಿಲುಕುವುದಿಲ್ಲ ಎಂದು ಅವರು ಪ್ರಮಾಣ ಮಾಡಬೇಕು. ಕುರ್ಚಿ ಉಳಿಸಲು ಮಠಗಳಿಗೆ ದುದ್ದುಕೊಟ್ಟು ಓಲೈಸುವುದನ್ನು ಬಿಡಬೇಕು. ನರಹಂತಕ ಮೋದಿಯನ್ನು ಮಾದರಿ ಎನ್ನುವ ಮಾದರಿ ಎನ್ನುವ ಬಿಡಬೇಕು. ರಜ್ಯದ ಜನತೆ ನಿಜಕ್ಕೂ ಸಹಿಸಿಕೊಂಡಿದಾರೆ. ಜನರ ಸಹಾನುಭೂತಿಯನ್ನು ಸದುಪಯೋಗಪಟಿಸಿಕೊಂಡು ಜನಕಲ್ಯಾಣದ ಕಾರ್ಯಕ್ರಮಗಳಿಗೆ ಮುಂದಿನ ದಿನಗಳನ್ನು ಅವರು ಬಳಸಿಕೊಳ್ಳಲಿ. ಬೇರೆಯವರಿಗೆ ಹೋಲಿಸಿಕೊಂಡು ತಮ್ಮ ಭ್ರಷ್ಟಾಚಾರ‍್ನೂ ಸಮರ್ಥಿಸಿಕೊಳ್ಳುವುದಕ್ಕಿಮತ ದುರಂತ ಇಲ್ಲ. ಇದು ಯಡಿಯೂರಪ್ಪನವರ ದುರಂತ ಹಾಗೂ ನಮ್ಮೆಲ್ಲರ ದುರಂತವೂ ಸಹ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ