ಇಂದು ಜಾತಿ ಎನ್ನುವುದೇ ಆಧುನಿಕತೆಯ ಒಂದು ಶಾಪ - ಡಾ. ಎಂ.ಎಸ್.ಆಶಾದೇವಿ
ಕನ್ನಡ ಸಾಹಿತ್ಯದಲ್ಲಿ ಮಹಿಳೆಯರ ಸಾಹಿತ್ಯ ರಚನೆ ಇಂದು ಯಾವ ಘಟ್ಟವನ್ನು ತಲುಪಿದೆ ಎಂದು ನಿಮ್ಮ ಅನಿಸಿಕೆ?
ಎಲ್ಲ ಬಗೆಯ ಶೋಷಿತವರ್ಗಗಳ ಸಂಕಥನದಲ್ಲಿ ಗುರುತಿಸಬಹುದಾದ ಸಾಮಾನ್ಯ ಲಕ್ಷಣಗಳು ಇಲ್ಲೂ ಇವೆ. ಮೊದಲನೆಯದ್ದು ಆತ್ಮ ಮರುಕದ ಘಟ್ಟವಾದರೆ ಎರಡನೆಯದ್ದು ಸ್ವ - ಅರಿವಿನ ಘಟ್ಟ. ಮೂರನೆಯದ್ದು ಅಧಿಕೃತೆಯನ್ನು ದಾಖಲಿಸುವ ಘಟ್ಟ. ಹೀಗೆ ಇಂದು ಲೇಖಕಿಯರು ತಮ್ಮ ಅನುಭವಕ್ಕೂ ತಮ್ಮ ಬರವಣಿಗೆಗೂ ಒಟ್ಟಾರೆ ತಮ್ಮ ಅಭಿವ್ಯಕ್ತಿಗೆ ಅಧಿಕೃತತೆಯನ್ನು ಪಡೆದುಕೊಳ್ಳುವ ಒಂದು ಘಟ್ಟದಲ್ಲಿದ್ದಾರೆ. ನಮ್ಮ ಎದುರಿಗಿರುವ ಸವಾಲೆಂದರೆ ಲೋಕದೃಷ್ಟಿಯಿಂದ ಪಡೆದುಕೊಳ್ಳಬೇಕಾದ ಬಿಡುಗಡೆಗಿಂತ ಸ್ವ ಬಿಡುಗಡೆ ತುಂಬ ಮೂಲಭೂತವಾದದ್ದು ಅನ್ನಿಸುತ್ತೆ. ಇವತ್ತಿನ ಲೇಖಕಿಯರು ಅವರವರ ಬದುಕಿನ ಸಣ್ಣ ಪುಟ್ಟ ಸುಖ ಸಂತೋಷಗಳನ್ನು ತುಂಬ ಮುಖ್ಯವಾದದ್ದೆನ್ನುವ ಹಾಗೆ, ಅದೇ ಅವರ ಅನುಭವ ಲೋಕ ಎನ್ನುವ ಹಾಗೆ ಬರೆಯುತ್ತಿದ್ದಾರೆ. ಹಾಗೆ ಬರೆಯುವಾಗ ಅವರಿಗಿರುವ ಆತ್ಮವಿಶ್ವಾಸ ಒಂದು ಗುರುತರವಾದ ಬದಲಾವಣೆಯನ್ನು ತಂದುಕೊಡುತ್ತಿದೆ.
ಮಹಿಳೆಯರ ಸಾಹಿತ್ಯ ಸೃಷ್ಟಿಗೆ ಯಾವ ಪ್ರತಿಸ್ಪಂದನೆ ಸಿಗುತ್ತಿದೆ?
ಇಂದು ಮಹಿಳೆಯ ಸಾಹಿತ್ಯಕ್ಕೆ ಸಿಗ್ತಾ ಇರೋ ಸ್ಥಾನ ಬೇರೆ. ಮಹಿಳೆಯ ಸಾಹಿತ್ಯ ಮತ್ತು ಸಾಹಿತ್ಯದ ಸ್ವರೂಪ ಎರಡಕ್ಕೂ ಹತ್ತಿರದ ಸಂಬಂಧವಿದೆ. ಮಹಿಳೆಯ ಸಾಹಿತ್ಯವನ್ನು ಸಾಹಿತ್ಯ ಅಂತ ಮಾತ್ರ ನೋಡಬೇಕು ಎನ್ನುವುದು ನಮ್ಮ ಹಂಬಲ. ಸಾಹಿತ್ಯದಲ್ಲಿ ಒಳ್ಳೆ ಸಾಹಿತ್ಯ, ಕೆಟ್ಟ ಸಾಹಿತ್ಯ ಎಂದು ಮಾತ್ರ ಇರಬೇಕು ಎಂಬುದರ ಕಡೆಗೆ ನಮ್ಮ ಚಲನೆ ಇರಬೇಕು. ಅದು ತುಂಬ ದೂರದ ದಾರಿ ನಿಜ. ಆದರೆ ಸಮಾಧಾನದ ಸಂಗತಿ ಏನೆಂದರೆ ಮಹಿಳೆಯ ಸಾಹಿತ್ಯವನ್ನು ನೋಡುವ ವಿಚಾರದಲ್ಲಿ ತುಂಬಾ ಖಚಿತ ಹಾಗೂ ಗುಣಾತ್ಮಕ ಬದಲಾವಣೆಗಳಾಗುತ್ತಿರುವುದು. ಇಂದು ಹಿಂದೆ ನಿರ್ಲಕ್ಷಿಸಲ್ಪಟ್ಟ ಲೇಖಕಿಯರನ್ನೂ ಮುಂದೆ ಇಟ್ಟುಕೊಂಡು ಚರ್ಚಿಸುತ್ತಿದ್ದೇವೆ ಎಂಬುದು ಮೊದಲನೆಯದು. ಎರಡನೆಯದಾಗಿ ಲೇಖಕಿಯರನ್ನು ಬೇರೆ ಬೇರೆ ನೆಲೆಗಳಲ್ಲಿ ಅಂದರೆ ಲೇಖಕಿ ಎನ್ನುವ ನಿರ್ದಿಷ್ಟತೆಯನ್ನು ಬಿಟ್ಟು ಚರ್ಚಿಸುವ ನೆಲೆಗಳನ್ನು ಕಟ್ಟಿಕೊಡುವುದರಲ್ಲಿ ಇವತ್ತಿನ ಕನ್ನಡ ವಿದ್ವತ್ ಲೋಕಕ್ಕೆ ಆಸಕ್ತಿ ಇದೆ. ತುಂಬಾ ಮೂಲಭೂತ ಸವಾಲುಗಳು ಇನ್ನೂ ಹಾಗೇ ಉಳಿಸುಕೊಂಡಿವೆ ಎಂಬುದೇನೋ ನಿಜ.
ನಾನು ಇತ್ತಿಚೆಗೆ ನಾನು ಕಟ್ಟಲು ಯತ್ನಿಸುತ್ತಿರುವ ಪ್ರಮೇಯ ಏನು ಎಂದರೆ ಕನ್ನಡ ವಿಮರ್ಷೆಯಲ್ಲಿ ಯಾವಾಗಲೂ ಸ್ತ್ರೀ ದೃಷ್ಟಿಕೋನವಿದೆ. ಆದರೆ ಸ್ತ್ರೀ ಸಂವೇದನೆ ಇಲ್ಲ ಎಂಬುದು. ನಮ್ಮ ಎಷ್ಟೋ ಮಹತ್ವದ ಲೇಖಕಿಯರನ್ನು ಅವರ ನಿಜವಾದ ನೆಲೆ ಮತ್ತು ಬೆಲೆಯಲ್ಲಿ ಗುರುತಿಸಲು ಏಕೆ ಸಾಧ್ಯವಾಗಲಿಲ್ಲ ಎಂದರೆ ದೃಷ್ಟಿಕೋನ ಸಾಧ್ಯವಾಗಿ ಸಂವೇದನೆ ಸಾಧ್ಯವಾಗದಿರುವುದರಿಂದಾಗಿ.
ಇಂದು ಕನ್ನಡ ಸಾಹಿತ್ಯದ ಪುನರ್‌ಮೌಲ್ಯೀಕರಣ ಮಾಡುತ್ತಿರುವ ಈ ದಿನಗಳಲ್ಲಿ ಲೇಖಕಿಯರಿಗೆ ಬಹುಶಃ ಇಲ್ಲಿಯವರೆಗೆ ಸಿಗದೇ ಹೋದ ಸ್ಥಾನ ಇನ್ನು ಸಿಗುತ್ತೆ ಅಂತ ನನಗನ್ನಿಸುತ್ತಿದೆ.
ಇಂದು ಮಹಿಳೆಯರ ದೃಷ್ಟಿಕೋನದಲ್ಲಿ ಯಾವ ರೀತಿಯ ಬದಲಾವಣೆ ಕಂಡು ಬರುತ್ತಿದೆ? ಅದು ಕೇಲವ ವ್ಯಕ್ತಿನಿಷ್ಟವಾಗಿಯೇನಾದರೂ ಆಗಿದೆಯೇ?
ಸಾಹಿತ್ಯ ಸೃಷ್ಟಿಗೆ ತೊಡಗಿಕೊಂಡಿರುವವರಲ್ಲಿ ಹಲವರು ಸಮಷ್ಟಿ ನೆಲೆಯಲ್ಲೂ ಬರೆಯುತ್ತಿದ್ದಾರೆ. ಅದಕ್ಕೇ ನಾನು ಹೇಳಿದ್ದು. ಇಂದು ಬರೆಹ ಸ್ತ್ರೀ ಕೇಂದ್ರಿತಕ್ಕಿಂತ ಬದುಕಿನ ಕೇಂದ್ರಿತ ಸಾಹಿತ್ಯವಾಗಿದೆ. ಇದೇ ಒಂದು ಬದಲಾವಣೆ. ಆತ್ಮ ಮರುಕ ಮತ್ತು ಸ್ವ ಗ್ರಹಿಕೆಯಿಂದ ಹೊರಟು ಅಧಿಕೃತತೆಯೆಡೆ ಬಂದಿರುವುದೇ ಒಂದು ಬದಲಾವಣೆ. ಇಂದು ತುಂಬ ದೊಡ್ಡದಾಗಿರುವುದು ಯಾವುದೆಂದರೆ ಬದುಕು. ತಾನುಂಟೋ ಮೂರು ಲೋಕವುಂಟೋ ನೋಡುತ್ತಿದ್ದವರಿಗೆ ಇಂದು ಕಣ್ಣು ಹೊರಳಿಸಿ ಹೊರಳಿಸಿ ನೋಡಲಿಕ್ಕಾಗುತ್ತಿದೆ. ಹಾಗೆ ನೋಡಲಿಕ್ಕೆ ಬೇಕಾಗಿರುವ ಆತ್ಮಸಮ್ಮಾನ ಇಂದು ಸಾಧ್ಯವಾಗಿದೆ. ಕಟ್ಟಿಕೊಳ್ಳುತ್ತಿರುವ ಬದುಕಿನ ಬಗ್ಗೆ ಯಾವ ಕೀಳರಿಮೆಯೂ ಇಲ್ಲದ ವಿಶ್ವಾಸ ಇಂದು ಸಾಧ್ಯವಾಗಿದೆ. ಹೀಗಾಗಿ ಇಂದು ಹೆಣ್ಣು ಕಂಡುಕೊಳ್ಳುತ್ತಿರುವುದು ಹೊರಗಿನದ್ದೂ ಹೌದು ಒಳಗಿನದ್ದೂ ಹೌದು. ಆದರೆ ಕೆಲವೊಮ್ಮೆ ಬಿಡುಗಡೆಯ ದಾರಿಗಳಾಗಿ ಕಂಡಿರುವುದು ಎಷ್ಟೋ ಸಲ ಬಿಡುಗಡೆಯ ದಾರಿಗಳಾಗಿರುವುದಿಲ್ಲ. ಅವು ನಮ್ಮನ್ನು ಇನ್ನೂ ಹೆಚ್ಚೆಚ್ಚು ಆಳವಾಗಿ ಹುಗಿಯುವ (ಪುರುಷ ಪ್ರಧಾನತೆಯೊಳಗೆ) ಹುನ್ನಾರಗಳಾಗಿರುತ್ತವೆ. ಆದರೆ ಸಮಾಧಾನದ ಸಂಗತಿ ಎಂದರೆ ಇಂದು ಇದು ಪುರುಷ ಪ್ರಾಧಾನ್ಯತೆಯ ಈ ಛದ್ಮವೇಷ ಅದು ಛದ್ಮವೇಷವೆ ಎನ್ನುವುದಾದರೂ ತಿಳಿಯುತ್ತಿದೆ. ಒಂದು ಕಾಲದಲ್ಲಿ ಅದು ಅರಿವಿಗೇ ಬರುತ್ತಿಲ್ಲ.
ನಮ್ಮ ಸಮಾಜದಲ್ಲಿ ಸ್ತ್ರೀವಾದ ಇಂದು ಯಾವ ಹಂತದಲ್ಲಿದೆ? ಸ್ತ್ರೀವಾದಕ್ಕೆ ನಿಮ್ಮ ವ್ಯಾಖ್ಯಾನವೇನು?
ಸ್ತ್ರೀವಾದ ಎನ್ನುವುದು ಒಂದು ಬದುಕಿನ ಕ್ರಮ ಅಷ್ಟೆ. ನಾವು ಸಮಾನತೆ, ಸ್ವಾತಂತ್ರ್ಯ ಯಾವುದೂ ಇಲ್ಲದ, ಬದಲಿಗೆ ಪರಸ್ಪರ ಸ್ವಾಯತ್ತತೆಯಿಂದ ಒಪ್ಪಿ ಗೌರವಿಸುವ ಒಂದು ಜೀವನ ವಿಧಾನ ಎನ್ನುವುದು ನನ್ನ ಗ್ರಹಿಕೆ. ಆದರೆ ಸ್ತ್ರೀವಾದ ಎನ್ನುವುದು ಮಹಿಳೆಯರಿಗೇ ಸಂಬಂಧಿಸಿದ್ದಲ್ಲ. ಆ ಬದುಕಿನ ಕ್ರಮವನ್ನು ಗಂಡು ಮತ್ತು ಹೆಣ್ಣು ಇಬ್ಬರೂ ಬಹಳ ಶ್ರಮ ಹಾಗೂ ಪ್ರೀತಿಯಲ್ಲಿ ಮಾತ್ರ ಕಟ್ಟಿಕೊಳ್ಳಲು ಆಗುತ್ತೆ.
ಸ್ತ್ರೀವಾದದಲ್ಲಿ ಖಂಡಿತವಾಗಿಯೂ ಒಂದು ಬೆಳವಣಿಗೆ ಇದೆ. ಸ್ತ್ರೀವಾದಿ ಚಳವಳಿಯನ್ನು ಪ್ರತ್ಯೇಕವಾಗಿ ನೋಡಬೇಕಿಲ್ಲ ಎನ್ನುವುದೇ ನನಗನ್ನಿಸಿದ್ದು. ಒಂದು ಕಾಲದಲ್ಲಿ ಸ್ತ್ರೀವಾದ ಭಾರತಕ್ಕೆ ಪ್ರವೇಶ ಮಾಡಿದಾಗ ಅದು ಒಂದು ಎಲ್ಲಾ ಸೌಲಭ್ಯ ಪಡೆದ ವರ್ಗದ ಪ್ರಯತ್ನವಾಗಿ ಮಾತ್ರ ಕಾಣಿಸಿಕೊಳ್ಳುತ್ತಿತ್ತು. ಆದರೆ ಇಂದು ಬೇರೆ ಬೇರೆ ಸ್ಥರಗಳಲ್ಲಿರುವವರಿಗೂ ಅದು ತಲುಪಿದೆ. ವಿದ್ಯಾವಂತರು, ಅವಿದ್ಯಾವಂತರು, ಗಾರ್ಮೆಂಟ್ ಕಾರ್ಮಿಕರು, ಹೀಗೆ ಎಲ್ಲರಲ್ಲಿ ಒಂದು ಜಾಗೃತಿ ಕಾಣಿಸುತ್ತಿದೆ. ಅದೇ ಹೊತ್ತಿಗೆ ಈ ಜಾಗೃತಿ ಅಥವಾ ಅರಿವು ಎನ್ನುವುದು ಆಧುನಿಕ ಹೆಣ್ಣಿನ ಹಿಂಸೆಯನ್ನು ಹಿಂದೆಂದೂ ಇರದಷ್ಟು ಹೆಚ್ಚಿಸಿದೆ ಎನ್ನುವುದೂ ಅಷ್ಟೇ ವಾಸ್ತವ. ಅರಿವಿನ ಹಿಂಸೆಯ ಘಟ್ಟವನ್ನು ದಾಟುವುದು ಯಾವ ಶೋಷಿತ ವರ್ಗಕ್ಕೂ ತುಂಬ ನಿರ್ಣಾಯಕವಾಕ ಘಟ್ಟ. ಬಹಳ ಕಷ್ಟದ ಕಾಲ ಅದು. ಆದರೆ ಹೆಣ್ಣಿನದು ಅಸಾಧಾರಣವಾದ ಆತ್ಮ ಸ್ಥೈರ್ಯದ ವ್ಯಕ್ತಿತ್ವವಾದ್ದರಿಂದ ಈ ಹಿಂಸೆಗೂ ಆಕೆ ತನ್ನನ್ನು ತಾನು ಒಡ್ಡಿಕೊಂಡಿದ್ದಾಳೆ.
ಪುರುಷ ಲೇಖಕರಲ್ಲಿ ಸ್ತ್ರೀ ಸಂವೇದನೆ ಎಷ್ಟರ ಮಟ್ಟಕ್ಕೆ ವ್ಯಕ್ತಗೊಂಡಿದೆ?
ಹೆಣ್ಣನ್ನು ತನ್ನ ನಿಜದಲ್ಲಿ ಗುರುತಿಸಲು ಪ್ರಯತ್ನಿಸಿದವರಲ್ಲಿ ಮೊದಲಿಗನಾಗಿ ನನಗೆ ಕಾಣುವುದು ಅಲ್ಲಮ. ದಾಸಿಮಯ್ಯ ಕೂಡಾ ಅದೇ ಪ್ರಯತ್ನ ನಡೆಸಿದವನು. ಆಧಿನಿಕ ಕನ್ನಡ ಸಾಹಿತ್ಯದಲ್ಲಿ ಕಾರಂತರಿದ್ದಾರೆ. ಅದೆಷ್ಟೇ ಬೌದ್ಧಿಕ ನೆಲೆಯದ್ದಾಗಿರಬಹುದಾದರೂ ಕಾರಂತರು ತುಂಬಾ ಪ್ರಮಾಣಿಕವಾಗಿ ಪ್ರಯತ್ನಿಸಿದ್ದಾರೆ. ಕುವೆಂಪು ಅವರಲ್ಲಿ ಕೆಲವೊಮ್ಮೆ ಅಪ್ರಯತ್ನಪೂರ್ವಕವಾಗಿ ಸ್ತ್ರೀ ಸಂವೇದನೆ ಕಾಣಿಸುತ್ತದೆ. ಸ್ತ್ರೀ ಸಂವೇದನೆಯನ್ನು ತುಂಬಾ ಚೆನ್ನಾಗಿ ಅಭಿವ್ಯಕ್ತಿಗೊಳಿಸಿದ ಲೇಖಕ ಎಂದರೆ ಲಂಕೇಶ್ ಅನ್ನಿಸುತ್ತೆ.
ಮಹಿಳಾ ಸಂವೇದನೆ ಎಲ್ಲಿ ಕೊರತೆ ಅನುಭವಿಸುತ್ತಿದೆ?
ನೀವು ಈ ಥರದ ಪ್ರಶ್ನೆಗಳನ್ನು ಬೇರೆಯವರಿಗೂ ಕೇಳಬೇಕು. ಇದಿಷ್ಟೂ ಪ್ರಶ್ನೆಗಳನ್ನು ರಹಮತ್‌ರವರಿಗೂ ಕೇಳಿಬೇಕೆಂದು ಬಯಸುತ್ತೇನೆ. ನನಗೆ ರಹಮತ್‌ರೊಂದಿಗೂ ಸಮಸ್ಯೆ ಇದೆ. ಅವರು ಅಷ್ಟು ಪ್ರಾಮಾಣಿಕವಾಗಿದ್ದೂ,ಸ್ತ್ರೀಯರ ಬಗ್ಗೆ ಆಳವಾದ ಗೌರವ ವಿಶ್ವಾಸ ಎಲ್ಲಾ ಇದ್ದರೂ ಯಾಕೆ ಅವರು ಕನ್ನಡದ ಯಾವೊಬ್ಬ ಮಹತ್ವದ ಲೇಖಕಿಯ ಬಗ್ಗೆ ಬರೆದಿಲ್ಲ. ಬರೆದೇ ಇಲ್ಲವೆಂದಲ್ಲ. ಆದರೆ ಬೇರೆ ವಿಷಯಗಳ ಬಗ್ಗೆ ಅಷ್ಟಷ್ಟು ಬರೆದವರು ಈ ಬಗ್ಗೆ ಎಷ್ಟು ಬರೆಯಲು ಸಾಧ್ಯವಾಗಿದೆ ಎನ್ನುವುದು ನನ್ನ ತಕರಾರು. ಇದೇ ಪ್ರಶ್ನೆಯನ್ನು ನಾನು ಬಸವಣ್ಣನವರ ಬಗ್ಗೆಯೂ ಎತ್ತಿದಾಗ ’ಇವಳನ್ನು ಕೆಲಸದಿಂದ ತೆಗೀರಿ’ ಎಂದು ಹೇಳಿದರು. ಯಾಕೆಂದರೆ ದಲಿತರ ಸಣ್ಣಸಣ್ಣ ನೋವುಗಳನ್ನೂ ಅಷ್ಟು ಸೂಕ್ಷ್ಮವಾಗಿ ಆವಾಹಿಸಿಕೊಳ್ಳಲು ಬಸವಣ್ಣ ಪ್ರಯತ್ನಿಸುತ್ತಾರೆ. ’ಚೆನ್ನಯ್ಯನ ಮನೆಯ ದಾಸಿಯ ಮಗ’ ಎಂದಾಗ ಅವರು ತಮ್ಮನ್ನು ತಾವು ದಲಿತರೊಂದಿಗೆ ಸಮೀಕರಿಸಿಕೊಳ್ಳಲು ಯತ್ನಿಸುತ್ತಾರೆ. ಆದರೆ,ಹೆಣ್ಣನ್ನು ನೂರು ಸಲ ’ನಾಯಿ’ ಎಂದು ಕರೆಯುತ್ತಾರೆ. ನಮ್ಮ ವಿಮರ್ಷೆಯಲ್ಲೂ ಅಷ್ಟೆ. ಸಂಸ್ಕಾರಕ್ಕೆ ಸಿಗಬೇಕಾದ ಸ್ಥಾನಮಾನ ಫಣಿಯಮ್ಮಗೆ ಸಿಗಲಿಲ್ಲ?. ’ಫಣಿಯಮ’ನನ್ನು ಹೇಗೆ ಚರ್ಚೆ ಮಾಡಬೇಕಿತ್ತೋ ಹಾಗೆ ಮಾಡಿದ್ದಿದ್ದರೆ ಇಂದು ’ಫಣಿಯಮ್ಮ’ದ ಸ್ಥಾನ ಎಲ್ಲಿರುತ್ತಿತ್ತು? ಹೆಚ್ಚೂಕಡಿಮೆ ಸಂಸ್ಕಾರ ಎತ್ತಿದಷ್ಟೇ ಮೂಲಭೂತ ಪ್ರಶ್ನೆಗಳನ್ನು ಹೆಣ್ಣಿನ ವಿಷಯದಲ್ಲಿ ಫಣಿಯಮ್ಮ ಎತ್ತಿರಲಿಲ್ಲವೇ?.
ನಾನು ಎಷ್ಟೋ ಸೆಮಿನಾರುಗಳನ್ನು ಈ ಕಾರಣಕ್ಕೆ ತಿರಸ್ಕರಿಸಿದೀನಿ. ಯಾಕೆಂದರೆ ನಮಗೆ ಅದೇ ವಿಷಯ ಮೀಸಲಿಟ್ಟಿರುತ್ತಾರೆ. ಈಗ ಪಂಪನ ಬಗ್ಗೆ ವಿಚಾರ ಸಂಕಿರಣದಲ್ಲಿ ’ಒಂದು ಮಂಡನೆ. ಸ್ತ್ರೀವಾದಿ ’ದೃಷ್ಟಿಕೋನದಲ್ಲಿ ಪಂಪ’ ಎಂದು ಒಂದು ವಿಷಯ ಮಂಡನೆ ಇರಬೇಕಪ್ಪ. ಇಲ್ಲ ಅಂದರೆ ಯಾಕೆ ರಂಪ ಎಂದು ಸುಮಿತ್ರಾಬಾಯಿನೋ, ಆಶಾದೇವಿನೋ, ಗಾಯತ್ರಿನೋ ಯಾರನ್ನೋ ಒಬ್ಬರನ್ನು ಕರೆಯೋದು. ಈ ವಿಷಯದ ಬಗ್ಗೆ ಪುರುಷರೂ ಮಾತನಾಡುವಂತಾಗಬೇಕು ಎಂದು ನನ್ನ ಒತ್ತಾಯ.
ಆಧುನಿಕ ತಂತ್ರಜ್ಞಾನದ ಜಗತ್ತು ತಂದಿರುವ ಬದಲಾವಣೆ ಯಾವ ಬಗೆಯದ್ದು ಎಂದು ನಿಮ್ಮ ಭಾವನೆ?
ಇಂದು ಕಾರ್ಪೊರೇಟ್ ಪ್ರಪಂಚ ಹೆಣ್ಣಿಗೆ ಎಲ್ಲದನ್ನೂ ಕೊಟ್ಟುಬಿಟ್ಟಿರುವಂತೆ ಕಾಣಿಸುತ್ತದೆ. ಆದರೆ ಇದು ಜೆಂಡರ್ ಪಾಲಿಟಿಕ್ಸ್‌ಗಿಂತ ಹೆಚ್ಚಿನ ಕ್ರೌರ್ಯವನ್ನು ಹೆಣ್ಣುಮಕ್ಕಳ ವಿಷಯದಲ್ಲಿ ಈ ಕಾರ್ಪೊರೇಟ್ ಲೋಕ ತೋರಿಸುತ್ತಿರುವುದನ್ನು ಕಾಣುತ್ತೇವೆ. ಅಲ್ಲಿ ಒಂದು ಡಿಜೆಂಡರೈಜೇಷನ್ (ಲಿಂಗಸೂಕ್ಷ್ಮರಾಹಿತ್ಯತೆ-ಸಂ) ಕಾಣಿಸುತ್ತಿದೆ. ಗಂಡು ಹೆಣ್ಣು ಯಾವುದೂ ಅಲ್ಲ. ನೀನು ಕೆಲಸ ಮಾಡಿದೆಯೋ ಉಳಿದುಕೊಳ್ತೀಯ ಇಲ್ಲವೇ ತೆಗೆದು ಹಾಕೋದಷ್ಟೇ. ಇದು ಅಲ್ಲಿನ ಮೂಲಭೂತ ಪರಿಕಲ್ಪನೆ. ತನ್ನ ತಾಯಿತನದ ಮೂಲಭೂತ ಪ್ರಶ್ನೆಯನ್ನು ಇಟ್ಟುಕೊಂಡು ಆಕೆ ಕೆಲಸದಲ್ಲಿ ಗಂಡಿನ ಜೊತೆ ತನ್ನ ಸಮಾನ ಸ್ಪರ್ಧೆ ನಡೆಸಬೇಕಾಗಿದೆ. ಕೆಲಸ ಹಾಗೂ ತಾಯ್ತನಗಳಲ್ಲಿ ಆಯ್ಕೆಯ ಗೊಂದಲವೇ ಇಲ್ಲದ, ಸವಾಲೂ ಇಲ್ಲದ, ಹಾಗೂ ಆ ಎರಡರಲ್ಲಿ ಯಾವುದು ಒಂದನ್ನು ಆರಿಸಿಕೊಂಡರೂ ಅದು ತುಂಬ ನೋವಿನ ಅಯ್ಕೆಯಾಗಿರುತ್ತದೆ. ಯಾವುದನ್ನು ಆರಿಸಿಕೊಂಡರೂ ಅದರಲ್ಲಿ ಅವಳಿಗೆ ಸಂತೋಷ ಸಿಗುತ್ತಾದರೂ ಇನ್ನೊಂದು ಕಳೆದುಕೊಂಡ ದುಃಖ ಅವಳಿಗಿರುತ್ತದೆ. ಇದನ್ನು ಒಂದು ಮಾನವೀಯ ಹಿನ್ನೆಲೆಯಲ್ಲಿ ಈ ಕಾರ್ಪೊರೇಟ್ ವ್ಯವಸ್ಥೆ ನೋಡೋದೇ ಇಲ್ಲ. ತನ್ನ ಆತ್ಮ ಸ್ಥೈರ್ಯ ಉಳಿಸಿಕೊಂಡು, vನ್ನ ಅನನ್ಯತೆಯನ್ನು ಉಳಿಸಿಕೊಂಡು, ತನ್ನ ಸುಖದ ಮೂಲಗಳನ್ನುಳಿಸಿಕೊಂಡು ಹೋಗೋದು ಆಕೆಯ ಪಾಲಿಗೆ ದೊಡ್ಡ ಸವಾಲಾಗಿದೆ. ಇದರಿಂದ ಆಧುನಿಕತೆಯಲ್ಲಿ ಯಾವುದು ಬಿಡುಗಡೆ ಎಂದು ಹೇಳುವುದು ಕಷ್ಟದ್ದು. ಹೀಗಿರುವಾಗ ತಾಯ್ತನದ ಸುಖ ಏನೂ ಅಲ್ಲ, ಅದನ್ನು ಬಿಟ್ಟುಕೊಟ್ಟು ಬಿಡ್ತೀನಿ ಎಂದುಕೊಳ್ಳುವುದು ಆಕೆಗೆ ಸಾಧ್ಯವಾಗ್ತಾನೇ ಇಲ್ವಲ್ಲ. ಸಾಧ್ಯವಾಗಿಬಿಟ್ಟರೆ ಎಲ್ಲ ಸರಿಹೋಗಿಬಿಡುತ್ತೆ ಎಂದಲ್ಲ. ಆದರೆ, ಅವಕಾಶ ಸಿಕ್ಕರೆ ಅದು ಎಲ್ಲರಿಗೂ ಬೇಕು, ಜಗತ್ತಿನ ಅಪೂರ್ವ ಸುಖ ಅದು ಎಂದು ಕಾಣುತ್ತೆ. ಅದು ಒಂದು ರೀತಿ ನಿಜವೂ ಹೌದು. ಮುಖ್ಯವಾಗಿ ಇಲ್ಲಿ ಆಕೆಯ ಎದುರಿಗಿರುವ ಸವಾಲೆಂದರೆ ಯಾವಾಗಲೂ ಕೆಲಸ ಮಾಡುವ ಮಹಿಳೆ ತನ್ನ ಮೇಲೆ ತಾನೇ ಒಂದು ಕೀಳರಿಮೆಯನ್ನು ಹೇರಿಕೊಳ್ತಾಳೆ. ತಾನೆಲ್ಲೋ ಇದನ್ನು ಸರಿಯಾಗಿ ನಿಭಾಯಿಸಲಿಲ್ಲವೇನೋ, ಅದನ್ನು ಸರಿಯಾಗಿ ನಿಭಾಯಿಸಲಿಲ್ವೇನೋ, ಎಂದು. ಯಾಕೆಂದರೆ ಈಗಾಗಲೇ ಸ್ಥಾಪಿತ ಪರಿಕಲ್ಪನೆಗಳು ನಮ್ಮ ಮನಸ್ಥಿತಿಯನ್ನು ಹಾಗೆ ರೂಪಿಸಿರುತ್ತವೆ. ಮಹಿಳೆ ಎಲ್ಲವನ್ನೂ ಸರಿಯಾಗಿ ತೂಗಿಸೋದಕ್ಕೆ ನೋಡುತ್ತಾಳೆ. ಆಕೆಗೆ ಧಾರಣ ಶಕ್ತಿ ಅಸಾಧಾರಣವಾಗಿರತ್ತೆ ಎನ್ನುವುದು ಬೇರೆ ವಿಷಯ. ಆದರೆ ಆ ಧಾರಣ ಶಕ್ತಿಗೆ ಸರಿಯಾದ ಬೆಂಬಲರಚನೆಯಿಲ್ಲದೇ ಹೋದಾಗ ಒಂದು ಸಮಯದಲ್ಲಿ ಆಕೆ ಕುಸಿದು ಹೋಗುತ್ತಾಳೆ.
ಇಂದು ಭ್ರಷ್ಟಾಚಾರದ ವಿಷಯ ಚರ್ಚೆಗೊಳಗಾಗುತ್ತಿದೆ. ಈ ಬಗ್ಗೆ ಏನು ಹೇಳುತ್ತೀರಿ?
ಇಂದು ಅತ್ಯಂತ ಭ್ರಷ್ಟ ಎಂದು ಹೇಳಲು ಒಂದು ವ್ಯಾಖ್ಯಾನ ಇದೆಯಾ? ಇಂದು ಭ್ರಷ್ಟಾಚಾರವನ್ನು ಒಂದು ವ್ಯವಸ್ಥೆಯಾಗಿ ಒಪ್ಪಿಕೊಂಡುಬಿಟ್ಟಿರುವ ದುರಂತ ನಮ್ಮೆದುರಿಗಿದೆ. ಅಣ್ಣಾ ಹಜಾರೆಯಂತವರು ಆರಂಭಿಸಿರುವ ಚಳವಳಿ ಒಂದು ಆಶಾಕಿರಣವಾಗಿ ಕಾಣುತ್ತಿರುವುದು ನಿಜ. ಎಲ್ಲೋ ಜೆಪಿ ಶುರು ಮಾಡಿದ ತರದ ಚಳವಳಿ ಭವಿಷ್ಯದಲ್ಲಿ ಇದೆ ಎಂದೇ ನನ್ನ ಅನಿಸಿಕೆ. ನಾವು ಆಶಾವಾದಿಯಾಗಿರಲು ಎಲ್ಲೋ ಸಣ್ಣ ಅವಕಾಶವಿದೆ.
ಜಾತಿ ಸಮಾವೇಶಗಳು ಜರುಗುತ್ತಿವೆ. ಒಂದು ಜಾತಿ ಮಠಾಧೀಶರು ನೇರವಾಗಿ ಸರ್ಕಾರದ ರಕ್ಷಣೆಯಲ್ಲಿ ತೊಡಗಿದ್ದಾರಲ್ಲಾ?
ಇಂದು ಜಾತಿ ಎನ್ನುವುದು ಆಧುನಿಕತೆಯ ಒಂದು ಶಾಪವೇ ಅಲ್ಲವೇ?. ಆಧುನಿಕತೆಯ ಹಲವು ಶಾಪಗಳಲ್ಲಿ ಜಾತಿಯನ್ನು ವ್ಯವಸ್ಥೆಯ ಭದ್ರ ಭಾಗವಾಗಿಸಿದ್ದೂ ಒಂದು. ಹೇಗೆ ಕೋಮುವಾದ ಸಹ ಆಧುನಿಕತೆ ಮತ್ತು ವಿಜ್ಞಾನದ ನೆರವಿನಿಂದ ತನ್ನ ಬಲವನ್ನು ಹೆಚ್ಚಿಸಿಕೊಂಡಿದೆಯೋ ಹಾಗೆ ಜಾತಿ ವಿಷಯದಲ್ಲೂ ಸಹ ಅದರ ಉಪ ಉತ್ಪನ್ನವಾಗಿದೆ. ನಾವು ಮತ್ತೆ ಮತ್ತೆ ಜಾತಿ ವಿಷಯಕ್ಕೆ ಬರುತ್ತೇವೆಂದರೆ ಭಾರತದ ಮಟ್ಟಿಗೆ ಅದು ತೇಜಸ್ವಿ ಹೇಳುವ ರೀತಿ’ಚರ್ಮ’ವೇ ಆಗಿದೆ. ಅದು ಅಷ್ಟು ಸುಲಭವಾಗಿ ಹೋಗುವಂತಾದ್ದಲ್ಲ.
ಯಾವುದೇ ಒಂದು ಸಾಮಾಜಿಕ ಚಳವಳಿಯ ಅನುಪಸ್ಥಿತಿ ಸಾಹಿತ್ಯದ ಮೇಲೆ ಬೀರಿರುವ ಪರಿಣಾಮ ಎಂಥದು?
ಇಂದು ಒಂದು ಮೂರ್ತವಾದ ಚಳವಳಿ ಇಲ್ಲ. ಎಲ್ಲ ಚಳವಳಿಗಳನ್ನು ರೂಪಿಸುವುದು ಒಂದು ತಾತ್ವಿಕ ಆಕೃತಿಯೇ ಅಲ್ಲವೇ?. ಆದರೆ ಇಂದು ನಾವಿರುವ ಸ್ಥಿತಿಯಲ್ಲಿ ಜಾಗತಿಕ ಮಟ್ಟದಲ್ಲೇ ಯಾವುದೇ ಒಂದು ನಿರ್ದಿಷ್ಟ ತಾತ್ವಿಕ ಆಕೃತಿ ಮೆಲಿನ ನಂಬಿಕೆ ಎನ್ನುವುದು ಹೊರಟುಹೋಗಿದೆ. ಎಲ್ಲ ತಾತ್ವಿಕ ಆಕೃತಿಗಳು ಒಡೆದು ಹೋಗಿರುವ ಅಥವಾ ಎಲ್ಲವೂ ಸೇರಿ ಬೆರೆಯುತ್ತಿರುವ ಸನ್ನಿವೇಶ ಇದು. ಹೀಗೆ ಎಲ್ಲ ತಾತ್ವಿಕ ಆಕೃತಿಗಳು ಬೆರೆತು ಅಖಂಡವಾದ ಮಾನವೀಯ ನೆಲಯನ್ನು ಕಟ್ಟಿಕೊಳ್ಳಲು ಪ್ರಯತ್ನ ಪಡುತ್ತಿರುವುದನ್ನು ಕಾಣುತ್ತಿದ್ದೇವೆ. ಹೀಗಾಗಿ ಒಂದು ಚಳವಳಿ ಎನ್ನುವುದು ಸ್ಪಷ್ಟ ರೂಪದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಆದರೆ, ಚಳವಳಿಗಳು ಇಲ್ಲದ ಕಾಲ ಒಂದು ಬರವಣಿಗೆಯಲ್ಲಿ ಯಾವತ್ತಾದರೂ ಇರುತ್ತೆ ಎಂದು ನನಗೆ ತೋರಿಬಂದಿಲ್ಲ. ಉದಾಹರಣೆಗೆ ತೇಜಸ್ವಿಯವರು ಒಮ್ಮೆ ಮಾತನಾಡುತ್ತಾ ಈ ಥಿಯರಿಗಳಿಗೆಲ್ಲಾ ನನಗೆ ಪ್ರವೇಶವೇ ಇಲ್ಲ ಎಂದರು. ಅದಕ್ಕೆ ನಾನು ಹೇಳಿದ್ದೆ, ಹಾಗಿಲ್ಲವಾದರೆ ನಿಮ್ಮ ಕಿರಗೂರಿನ ಗಯ್ಯಾಳಿಗಳು ಓದಿ ಸ್ತ್ರೀವಾದಿ ಚರ್ಚೆ ಕಟ್ಟಿಕೋತೇನೆ ಬಿಡಿ ಎಂದಿದ್ದೆ. ಕೃತಿಯನ್ನು ಅವರು ಅರ್ಪಿಸಿರುವುದೂ ಸಹ ’ತಮ್ಮ ಆತ್ಮಗೌರವಕ್ಕಾಗಿ ಅವಿರತವಾಗಿ ಹೋರಾಡುತ್ತಿರುವ ಮಹಿಳೆಯರಿಗೆ’. ಅಲ್ಲಿ ಒಂದು ತತ್ವಶಾಸ್ತ್ರೀಯ ಮಂಡನೆ ಇಲ್ಲವೇ? ಅವರು ಒಪ್ಪಿಕೊಳ್ಳದಿರಬಹುದು. ಲಂಕೇಶ್‌ಗೆ ಕೇಳಿದ್ದಿದ್ರೆ ನನಗೂ ಸಿದ್ಧಾಂತಕ್ಕೂ ಸಂಬಂಧವಿಲ್ಲ ಎಂತಲೇ ಅವರೂ ಹೇಳುತ್ತಿದ್ದರೇನೋ?
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ