ಅದು
2008ನೇ ಇಸವಿ. ಶಿವಮೊಗ್ಗದಲ್ಲಿ ವಿದ್ಯಾರ್ಥಿ
ಸಂಘಟನೆಯಲ್ಲಿ ಪೂರ್ಣಾವಧಿ ಹೋರಾಟಗಾರನಾಗಿ ಕೆಲಸ ಮಾಡುತ್ತಿದ್ದ ನನಗೆ
ಜೀವನದಲ್ಲಿ ದೊಡ್ಡ ಆಘಾತವೊಂದು ಎದುರಾಗಿತ್ತು.
ನನ್ನ ಅವ್ವನಿಗೆ ದಿಢೀರ್ ಅನಾರೋಗ್ಯ ಕಾಣಿಸಿಕೊಂಡಿತ್ತು.
ಅದುವರೆಗೆ ಸುಮಾರು ಹತ್ತು ಹನ್ನೆರಡು
ವರ್ಷಗಳಿಂದ ಮನೆ, ಮಠ, ತಮ್ಮ,
ತಂಗಿ, ಅಪ್ಪ, ಅಮ್ಮ ಎಲ್ಲರನ್ನೂ
ಬಹುತೇಕ ತೊರೆದು ಸಮಾಜದಲ್ಲಿ ಬದಲಾವಣೆ
ತರಬೇಕು ಎಂದುಕೊಂಡು ಕೆಲಸ ಮಾಡುತ್ತಿದ್ದ ನನ್ನ
ಜಂಘಾಬಲ ಉಡುಗಿಸಿತ್ತು ಈ ಘಟನೆ. ಅವ್ವನನ್ನು
ಆಸ್ಪತ್ರೆಗೆ ಸೇರಿಸಿ ಒಂದು ವಾರ
ಅಡ್ಮಿಟ್ ಮಾಡಿಕೊಂಡರೆ ಡಿಸ್ಚಾರ್ಜ್ ಮಾಡಿಸುವಾಗ ಕೈಯಲ್ಲಿ ನಯಾಪೈಸೆ ಕಾಸಿಲ್ಲ.
ಮನೆಯಲ್ಲಿ ಸಹ ಇದೇ ಸ್ಥಿತಿ.
ಅವ್ವನ ಅನಾರೋಗ್ಯಕ್ಕೂ ಒಂದು ರೀತಿಯಲ್ಲಿ ನಾನೇ
ಕಾರಣನಾಗಿದ್ದೆ. ನನ್ನ ಬಗ್ಗೆ ದೊಡ್ಡ
ಕನಸುಗಳಿಟ್ಟುಕೊಂಡಿದ್ದ ಅವ್ವ ಒಂದು ರೀತಿ
ಭ್ರಮನಿರಸನಳಾಗಿ ಮಾನಸಿಕ ಆಘಾತಕ್ಕೊಳಗಾಗಿದ್ದಳು. ಕೊನೆಗೆ
ಆಸ್ಪತ್ರೆಗೆ ಕಟ್ಟಲು ಬೇಕಾಗಿದ್ದ 12 ಸಾವಿರ
ರೂಪಾಯಿಗೆ ಶಿವಮೊಗ್ಗದ ಹಿರಿಯ ಕಿರಿಯ ಗೆಳೆಯರ
ಬಳಿ ನಾಲ್ಕೈದು ದಿನ ಸೈಕಲ್ ಹೊಡೆದು
ಸಾಲ ಮಾಡಿ ಆಸ್ಪತ್ರಗೆ ಕಟ್ಟಿ
ಮನೆಗೆ ಕರೆದುಕೊಂಡು ಹೋಗಿದ್ದೆ. ಅಮ್ಮ ಪೂರ್ತಿ ಹುಷಾರಾಗಬೇಕಾದರೆ
ತಂಗಿ ಮದುವೆಯ ಜವಾಬ್ದಾರಿಯನ್ನು ನಾನೇ
ಹೊತ್ತು ನೆರವೇರಿಸುವುದು ಒಂದೇ ದಾರಿ ಎಂದು
ತೋರಿತು. ಆಗಲೇ ನನಗೆ ಹೋರಾಟದ
ದಾರಿಯನ್ನು ಸ್ವಲ್ಪ ಮಟ್ಟಿಗೆ ಕೈ
ಬಿಟ್ಟು “ಸಂಬಳ”ಕ್ಕಾಗಿ ಕೆಲಸವೊಂದನ್ನು
ಮಾಡುವ ಅನಿವಾರ್ಯತೆ ಉಂಟಾಗಿದ್ದು.
ಆದರೆ ನನಗೆ ಕೆಲಸ ಯಾರು
ಕೊಡುತ್ತಾರೆ? ನೆಟ್ಟಗೆ ಡಿಗ್ರಿ ಮುಗಿಸಿರಲಿಲ್ಲ,
ಕಾನೂನು ಓದು ಪೂರ್ಣವಾಗಿರಲಿಲ್ಲ, ಏನು
ಮಾಡುವುದು?
ಆಗ, ನನಗೂ ಒಂದು ದಾರಿ
ಇದೆ ಎಂದು ಕೈ ಹಿಡಿದಿದ್ದು
ಬೇರೆ ಯಾರೂ ಅಲ್ಲ, ಗೌರಿ
ಲಂಕೇಶ್. ಗೌರಿ ಲಂಕೇಶ್ ಪತ್ರಿಕೆಯಲ್ಲಿ
ಅಂಕಣಕಾರರೂ, ಹಿರಿಯ ಸಂಗಾತಿಯೂ ಆದ
ಶಿವಸುಂದರ್ ಅವರು ನನ್ನನ್ನು ಲಂಕೇಶ್
ಕಚೇರಿಗೆ ಬರಲು ತಿಳಿಸಿದರು. ಮರುದಿನ
ಹೋದೆ. ಮತ್ತೊಬ್ಬ ಹಿರಿಯ ಮಿತ್ರರಾದ ಪಾರ್ವತೀಶ್
ಮತ್ತು ಗೌರಿ ಮೇಡಂ ನನ್ನನ್ನು
ಕೂರಿಸಿಕೊಂಡು ನೀನು ನಮ್ಮ “ಗೈಡ್”
ಪತ್ರಿಕೆಗೆ 15 ದಿನ ಇಲ್ಲಿದ್ದುಕೊಂಡು ಕೆಲಸ
ಮಾಡು, ಉಳಿದ 15 ದಿನ ಶಿವಮೊಗ್ಗದಲ್ಲಿ
ನಿನ್ನ ಇತರೆ ಕೆಲಸಗಳ ಜೊತೆಯಲ್ಲಿ
ಲಂಕೇಶ್ ಪತ್ರಿಕೆಗೆ ಏನಾದರೂ ಬರಿ” ಎಂದರು.
ಹೀಗೆ ಶುರುವಾದದ್ದು ನನ್ನ ಪತ್ರಿಕೋದ್ಯಮದ ಜೀವನ.
ನಂತರ ಒಂದೂವರೆ ವರ್ಷ ಈ
ರೀತಿ ಕೆಲಸ ಮಾಡಿದೆ. ಈ
ನಡುವೆ ಶಿವಮೊಗ್ಗದಲ್ಲಿದ್ದುಕೊಂಡೇ ಒಂದಷ್ಟು ಅನುವಾದ ಮತ್ತಿತರ
ಕೆಲಸಗಳನ್ನು ಮಾಡಬಹುದು ಎಂದುಕೊಂಡು ಒಂದು ಕಂಪ್ಯೂಟರ್ ತರಲು
ಯೋಚಿಸಿದೆ. ಆದರೆ ಅದಕ್ಕೂ ಸಾಕಷ್ಟು
ಹಣವಿರಲಿಲ್ಲ. ಆಗ ಗೌರಿ ಮೇಡಂ
ತಾವೇ ಒಂದು ಸಲಹೆ ನೀಡಿದರು.
ಇದಕ್ಕೆ ಅರ್ಧದಷ್ಟು ಹಣ ನಾನು ಕೊಡುತ್ತೇನೆ,
ಮಿಕ್ಕ ಅರ್ಧ ಹಣ ಹೊಂದಿಸಿಕೋ.
ನಾವು ಕೊಟ್ಟ ಹಣವನ್ನು ತೀರಿಸಲು
ತಿಂಗಳಿಗೆ ಒಂದು ಸಾವಿರ ರೂಪಾಯಿಯನ್ನು
ನಿನ್ನ ಸಂಬಳದಲ್ಲಿ ಕಟ್ ಮಾಡಿಕೊಳ್ಳುತ್ತೇವೆ' ಎಂದರು.
ಇದು ನನಗೆ ಬಹಳ ಸಹಕಾರಿಯಾದ
ದಾರಿಯಾಗಿದ್ದರಿಂದ “ಆಯ್ತು ಮೇಡಂ” ಎಂದೆ.
ಅದರಂತೆ ಮರುದಿನವೇ ಲಂಕೇಶ್ ಕಚೇರಿಯಲ್ಲಿ ನನ್ನ
ಸಹೋದ್ಯೋಗಿಯಾಗಿದ್ದ ಕುಮಾರ್ ಬುರಡಿಕಟ್ಟಿ ಜೊತೆಗೆ
ಎಸ್ಪಿ ರೋಡಿಗೆ ಹೋಗಿ ಒಂದು
ಕಂಪ್ಯೂಟರ್ ಖರೀದಿಸಿಕೊಂಡು ಶಿವಮೊಗ್ಗಕ್ಕೆ ತಂದೆ.
ಇದು ನನ್ನಂತಹ ಒಬ್ಬ ಕಾರ್ಯಕರ್ತನಿಗೆ
ಗೌರಿ ಮೇಡಂ ಬದುಕು ಕಟ್ಟಿಕೊಳ್ಳಲು
ನೆರವಾದ ರೀತಿ.
ಎರಡು ವರ್ಷಗಳ ನಂತರ ಒಂದು
ದಿನ ನನಗೆ ಅನಿರೀಕ್ಷಿತವಾಗಿ ಮತ್ತೊಂದು
ಪತ್ರಿಕೆಯಲ್ಲಿ ಕೆಲಸ ಅವಕಾಶವೊಂದು ಹುಡುಕಿಕೊಂಡು
ಬಂತು. ಸ್ವಲ್ಪ ಹೆಚ್ಚಿಗೆ ಸಂಬಳಕ್ಕಾಗಿ
ಆ ಪೂರ್ಣಾವಧಿ ಕೆಲಸ
ಮಾಡುವುದು ನನಗೆ ಅನಿವಾರ್ಯವೂ ಅನಿಸಿ
“ಗೌರಿ ಲಂಕೇಶ್” ಮತ್ತು ಗೈಡ್
ತಂಡವನ್ನು ಬಿಟ್ಟು ಹೊರಡಬೇಕಾಯಿತು. ಇದನ್ನು
ಗೌರಿ ಮೇಡಂಗೆ ತಿಳಿಸಿದಾಗ ಅವರು
ಕೊಂಚವೂ ಬೇಸರ ಮಾಡಿಕೊಳ್ಳಲಿಲ್ಲ. “ಏಯ್
ಮರಿ, ಅಲ್ಲಿ ಆ ಪತ್ರಿಕೆ
ಇನ್ಚಾರ್ಜ್ ಆಗಿರೋದು ನನ್ನ ಫ್ರೆಂಡೇ,
ಬೇಕಾದರೆ ನಿನ್ನ ಬಗ್ಗೆ ನಾನೂ
ರೆಕಮೆಂಡ್ ಮಾಡ್ತೀನಿ” ಅಂದರು. ಮಾತ್ರವಲ್ಲ ನನಗೆ
ಲಂಕೇಶ್ ಪತ್ರಿಕೆಯಿಂದ ಒಂದು ಬಹಳ ಪಾಸಿಟಿವ್
ಆದ “ಅನುಭವ ಪತ್ರ”ವನ್ನೂ
ಬರೆದು ಕೊಟ್ಟರು. ನನ್ನ ಹೃದಯ ತುಂಬಿ
ಬಂತು. ಒಂದು ಕಡೆ ಅವರಿಗೆ
ಕೈಕೊಟ್ಟು ಹೋಗುತ್ತಿದ್ದೇನೆ ಎಂಬ ಗಿಲ್ಟ್ ನನ್ನನ್ನು
ಕಾಡುತ್ತಿತ್ತು. ಆದರೂ ಅನಿವಾರ್ಯ ಎನಿಸಿತ್ತು.
ಕೆಲವು ದಿನಗಳ ನಂತರ ಗೌರಿ
ಮೇಡಂಗೆ ಒಂದು ಪರ್ಸನಲ್ ಪತ್ರ
ಬರೆದೆ. ಸಾರಾಂಶದಲ್ಲಿ ಅವರಿಗೆ ಕೃತಜ್ಞತೆ ತಿಳಿಸಿ,
ನಾನು ಲಂಕೇಶ್ ಪತ್ರಿಕೆಯ ಜೊತೆ
ಕೆಲಸ ಮಾಡುವ ಅವಕಾಶ ಸಿಕ್ಕಿದ
ಕಾರಣಕ್ಕಾಗಿ ಲಂಕೇಶ್ ಅವರನ್ನೂ ಓದಿಕೊಳ್ಳುವ
ಅವಕಾಶ ಬಂತು. ಮತ್ತು ನಾನು
ಇದುವರೆಗೆ ನನ್ನ ಸಾಮಾಜಿಕ ಜೀವನದಲ್ಲಿ
ಕಲಿಯದ ಕೆಲವು ಸಂಗತಿಗಳನ್ನೂ ಲಂಕೇಶ್
ಅವರ ಓದಿನಿಂದ ತಿಳಿದಂತಾಗಿದೆ, ಎಲ್ಲದಕ್ಕೂ
ನಿಮಗೆ ಋಣಿಯಾಗಿದ್ದೇನೆ ಎಂದು ಬರೆದೆ. ಆದರೆ
ಗೌರಿ ಮೇಡಂ ಹತ್ರ ಪರ್ಸನಲ್
ಅನ್ನೋದೇನೂ ಇರಲಿಲ್ಲ. ಅವರದನ್ನು ಸಹೋದ್ಯೋಗಿಗಳಿಗೂ ತೋರಿಸಿದ್ದರು. ಇದು ಯಾವ ಬಗೆಯಲ್ಲಿ
ವ್ಯಾಖ್ಯಾನಿಸಲ್ಪಟ್ಟಿತ್ತು ಎಂದರೆ ನಾನು “ಕಾರ್ಲ್
ಮಾರ್ಕ್ಸ್ ಗಿಂತಲೂ ಲಂಕೇಶ್
ಅವರನ್ನು ಹೆಚ್ಚೆಂದು ನೋಡಿದ್ದೀನೆಂದು! ಯಾವಾಗ ಈ ಪತ್ರ
ನನಗೆ ಬೂಮರ್ಯಾಂಗ್ ಆಯ್ತೋ ಅಂದಿನಿಂದ “ಸಾವಾಸ
ಸಾಕಪ್ಪಾ” ಅಂತ ದೂರ ಇದ್ದುಬಿಟ್ಟೆ.
ಇದಾದ ಕೆಲವು ಒಂದೆರಡು ವರ್ಷಗಳ
ಕಾಲ ಮತ್ತೆ ನಾನು ಆ
ಕಡೆ ಹೋದದ್ದೇ ಕಡಿಮೆ.
2016ರ ಜನವರಿ ತಿಂಗಳಲ್ಲಿ ಹೈದ್ರಾಬಾದ್
ವಿಶ್ವವಿದ್ಯಾಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ದಲಿತ ಸಂಶೋಧನಾ ವಿದ್ಯಾರ್ಥಿ
ರೋಹಿತ್ ವೇಮುಲನ ಡೆತ್ ನೋಟ್
ಒಂದು ವೈರಲ್ ಆಯಿತು.. ಅದು
ಒಂದು ಬಗೆಯಲ್ಲಿ ಇಡೀ ದೇಶದ ಪ್ರಜ್ಞಾವಂತರಲ್ಲಿ
ಒಂದು ಬಗೆಯ ವಿಷಾದ ಮತ್ತು
ಸಂಚಲನವನ್ನು ಮೂಡಿಸಿತು. ಇದು ದೇಶದಾದ್ಯಂತ ಆಕ್ರೋಶದ
ಕಟ್ಟೆಯೊಡೆಯಲು ಕಾರಣವಾಯಿತು. ಎಲ್ಲೆಡೆ ಪ್ರತಿಭಟನೆಗಳು ಜರುಗಿದವು.
ಇದೇ ಹೊತ್ತಿಗೆ ಜೆ ಎನ್ ಯು
ನಲ್ಲಿ ವಿದ್ಯಾರ್ಥಿ ಮುಖಂಡ ಕನ್ಹಯ್ಯ ಕುಮಾರ್
ಮೇಲೆ “ದೇಶದ್ರೋಹಿ” ಆರೋಪ ಮಾಡಿ, ದಾಳಿ
ನಡೆಸಿದ ಘಟನೆ ನಡೀತು.. ಈ
ಹೊತ್ತಿನಲ್ಲಿ ನಾನು ಬೇರೊಂದು ವೃತ್ತಿಯಲ್ಲಿ
ತೊಡಗಿದ್ದರೂ ನನ್ನೊಳಗಿನ ಆಕ್ಟಿವಿಸ್ಟ್ ಬರೆಹಗಾರ ಚಡಪಡಿಸುತ್ತಿದ್ದ. ಆಗ
ಒಂದು ದಿನ ಗೌರಿ ಮೇಡಂ
ಫೋನು ಬಂತು. “ರೋಹಿತ್ ವೇಮುಲ
ಮತ್ತು ಕನ್ನಯ್ಯ ಬಗ್ಗೆ ಒಂದು
ಪುಸ್ತಕ ಮಾಡೋಣ, ನೀನೇ ಅದಕ್ಕೆ
ಏನೇನು ಬೇಕೋ ರೆಡಿ ಮಾಡು,
ಪ್ರಿಂಟ್ ಹಾಕಿಸುವ ಜವಾಬ್ದಾರಿ ನನ್ನದು”
ಎಂದರು. ನಾನೂ ಮರು ಮಾತಿಲ್ಲದೇ
“ಓಕೆ ಮೇಡಂ” ಅಂದೆ. ಹೀಗೆ
ನನ್ನ ಸಂಪಾದಕತ್ವದಲ್ಲಿ ಗೌರಿ ಮೇಡಂ ಪ್ರಕಟಿಸಿದ
ಪುಸ್ತಕ “ದೇಶ ಅಂದರೆ ಮನುಷ್ಯರು”.
ಹೀಗೆ ಸಾಮಾಜಿಕ-ರಾಜಕಿಯ ಸಂದರ್ಭಗಳು
ಮತ್ತೆ ನಮ್ಮನ್ನು ಹತ್ತಿರ ತಂದಿದ್ದವು.
ನಂತರ ಸೆಪ್ಟೆಂಬರ್-ಅಕ್ಟೋಬರ್ ಹೊತ್ತಿಗೆ ಚಲೋ ಉಡುಪಿ ಆಂದೋಲನ
ನಡೀತು, ಇದಾದ ನಂತರ ಚಲೋ
ತುಮಕೂರು, ಚಲೋ ಗುಡಿಬಂಡೆ, ಚಲೋ
ಮಡಿಕೇರಿ ಹೀಗೆ ಸಾಲು ಸಾಲು
ಚಲೋಗಳು ನಡೆದವು. ಈ ಅವಧಿಯುದ್ದಕ್ಕೂ
ನನಗೆ ಗೌರಿ ಮೇಡಂ ಅವರಲ್ಲಿ
ಕಂಡಿದ್ದು ನನಗಿಂತಲೂ ಹೆಚ್ಚಿನ ಬದ್ಧತೆ ಹೊಂದಿ
ಒಬ್ಬ ಸಾಮಾಜಿಕ ಕಾರ್ಯಕರ್ತೆಯಾಗಿದ್ದ ಗೌರಿ
ಲಂಕೇಶ್ ಅವರನ್ನು. ಅವರು ಜಿಗ್ನೇಶ್, ಕನ್ಹಯ್ಯ,
ಉಮರ್ ಖಾಲೀದ್, ಭೀಮ್ ಆರ್ಮಿಯ
ಚಂದ್ರಶೇಖರ್ ಆಜಾದ್, ಶೆಹ್ಲಾ, ಇವರನ್ನೆಲ್ಲಾ
ತನ್ನ ದತ್ತು ಮಕ್ಕಳು ಎಂದು
ಕರೆದುಕೊಂಡು ಅವರಿಗೆಲ್ಲಾ ಪ್ರೀತಿ ಹಂಚುತ್ತಿದ್ದಾಗ ಬಹಳ
ಖುಶಿಯಾಗುತ್ತಿತ್ತು.
ಒಮ್ಮೆ ಜಿಗ್ನೇಶ್ ಬಂದಿದ್ದಾಗ ಅವರನ್ನು ಬೀಳ್ಕೊಡುವ ಸಂದರ್ಭದಲ್ಲಿ
ನಾನು ಮತ್ತು ಗೌರಿ ಮೇಡಂ
ವಿಮಾನ ನಿಲ್ದಾಣದ ವರೆಗೆ ಹೋಗಿ ಬಿಟ್ಟು
ಬಂದಿದ್ದೆವು. ಇದಕ್ಕೂ ಮೊದಲು ಗಾಂಧಿ
ಬಜಾರಿನ ಒಂದು ಬಟ್ಟೆ ಅಂಗಡಿಗೆ
ಇಬ್ಬರೂ ಹೋಗಿ ಜಿಗ್ನೇಶ್ ಗೆ
ಬೇಕಾದ ಹೊಸ ಬಟ್ಟೆಗಳನ್ನು ಕೊಂಡು
ತಂದಿದ್ದೆವು. ಆ ದಿನ ‘ಗೌರಿ’
ಅವ್ವನ ಪ್ರೀತಿಯಲ್ಲಿ ಜಿಗ್ನೇಶ್ ಚಿಕ್ಕ ಮಗುವಾಗಿಬಿಟ್ಟಿದ್ದರು. ಈ
ಸಂದರ್ಭದಲ್ಲಿ ಹೊಟೆಲ್ ಒಂದರಲ್ಲಿ ಊಟ
ಮಾಡುವಾಗ ತೆಗೆದುಕೊಂಡಿದ್ದ ಒಂದು ಫೋಟೋ ನೋಡಿದಾಗಲೆಲ್ಲಾ
ದುಃಖವಾಗುತ್ತದೆ.
ಒಮ್ಮೆ ನಾನು ಫೇಸ್ಬುಕ್ಕಿನಲ್ಲಿ ನಮ್ಮೂರಿನ
ವಿಶೇಷ ಅಡುಗೆಯಾದ ಕೋಳಿ-ಕಜ್ಜಾಯದ ಫೋಟೋ
ಹಾಕಿದ್ದೆ. ಆಗ ಗೌರಿ ಮೇಡಂ
ಮೆಸೇಜ್ ಮಾಡಿ, "ಇದು ಒಂದು ದೊಡ್ಡ
ಕತೆ ಆಯಿತು! ಹಲವು ದಿನಗಳ
ಹಿಂದೆ ಹರ್ಷಕುಮಾರ್ ಎಂಬುವವನು ಅದ್ಯಾವುದೋ ಕೋಳಿ ಕಜ್ಜಾಯ ಅಂತ
ಹೊಟ್ಟೆ ಉರಿಸಿದ. ಈಗ ಈ
ಪ್ರಗತ್ ಅನ್ನುವವನು ಮಲೆನಾಡಿಗರ ಫೇವರೆಟ್ ಕಡುಬು ಚಿಕನ್
ಅಂತ ಶೇರ್ ಮಾಡಿದ್ದಾನೆ. ಈ
ಹರ್ಷ, ಪ್ರಗತ್ ತರಹದ ಯುವಕರು
ಸುಖಾಸುಮ್ಮನೆ ನನ್ನನ್ನು ಅಮ್ಮ, ಅಕ್ಕಾ ಅಂತ
ಫೇಸ್ಬುಕ್ನಲ್ಲಿ ಕರೆಯುತ್ತಾರೆ. ಒಂದಾದರು ದಿನ “ಬಾರಕ್ಕ,
ಬಾರಮ್ಮ ನಮ್ಮ ಮನೆಗೆ ನಿನಗೆ
ಈ ಕೋಳಿ ಕಜ್ಜಾಯ
ಕೊಡ್ತೀನಿ, ಈ ಕಡುಬು ಚಿಕನ್
ಕೊಡ್ತೀನಿ” ಅಂದಿದ್ದಾರ? ವೇಸ್ಟ್ ಬಾಡೀಸ್ ನೀವೆಲ್ಲ.
ಇದನ್ನು ಪ್ರೀತಿಯಿಂದ ಹೇಳುತ್ತಿದ್ದೇನೆ. ವೇಸ್ಟ್ ಬಾಡೀಸ್!!!!!!!!" ಎಂದು ಪ್ರೀತಿಯಿಂದ
ಮುನಿಸಿಕೊಂಡಿದ್ದರು.ಇದಾದ ಕೆಲವು ತಿಂಗಳ
ನಂತರ ಒಂದು ಕೇಸಿಗಾಗಿ ಗೌರಿ
ಮೇಡಂ ಶಿವಮೊಗ್ಗಕ್ಕೆ ಬರುತ್ತಾರೆಂದು ಅವರ ವಕೀಲರಾಗಿದ್ದ ಶ್ರೀಪಾಲ್
ತಿಳಿಸಿದರು. ಆ ದಿನ ನಾನು
ಊರಿನಲ್ಲಿದ್ದೆ. ಕೋಳಿ ಕಜ್ಜಾಯ ರೆಡಿ
ಮಾಡುವುದು ಎಂದು ಮನೆಯಲ್ಲಿ ಹೇಳಿ
ಗೌರಿ ಮೇಡಂಗೆ ಫೋನ್ ಮಾಡಿದರೆ
ಅವರು ಆ ದಿನ ಕೇಸಿಗೆ
ಬಂದಿರಲೇ ಇಲ್ಲ. ನನಗೆ ತುಂಬಾನೇ
ನಿರಾಸೆಯಾಗಿತ್ತು. “ಇಲ್ಲ ಮರಿ, ಸಾರಿ,
ಬೇರೊಂದು ಕೆಲಸ ತುರ್ತಾಗಿ ಬಂದು
ಬರಲಾಗಲಿಲ್ಲ, ಮುಂದಿನ ಡೇಟಿಗೆ ಖಂಡಿತಾ
ಬರುತ್ತೇನೆ, ಆಗ ಕೊಳಿ-ಕಜ್ಜಾಯ
ಮಾಡಿಸುವಿಯಂತೆ” ಅಂದಿದ್ದರು. “ಆಯ್ತು ಮೇಡಂ” ಅಂದೆ.
ಆದರೆ ಆ ಮತ್ತೊಂದು ಡೇಟ್
ಎಂದೂ ಬರಲೇ ಇಲ್ಲ!
2017ರ ಮಾರ್ಚ್ –ಏಪ್ರಿಲ್ ತಿಂಗಳು
ಎಂದು ಕಾಣುತ್ತದೆ. ಡಾ.ಸಿ.ಎಸ್,ದ್ವಾರಕಾನಾಥ್ ಅವರ ಮಾರ್ಗದರ್ಶನದಲ್ಲಿ ಸಮಾಜ
ಕಲ್ಯಾಣ ಇಲಾಖೆಯ ಅಡಿ ಕೆಲಸ
ಮಾಡುವ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಸಂಸ್ಥೆಗಾಗಿ ಅಲೆಮಾರಿ
ಸಮುದಾಯಗಳ ಕುರಿತು ಒಂದು ಸಂಶೋಧನೆ
ಮಾಡುವ ಅವಕಾಶ ಬಂದಿತ್ತು. ಇದು
ನಡೆಯುತ್ತಿದ್ದ ಸಮಯದಲ್ಲಿ ಒಂದು ರಾತ್ರಿ 11 ಗಂಟೆಗೆ
ಗೌರಿ ಮೇಡಂ ಒಂದು ದೊಡ್ಡ
ಮೆಸೇಜ್ ಕಳಿಸಿದರು. ಅದರಲ್ಲಿ ನನ್ನ ಕುರಿತು
ಕೆಲವು ಆರೋಪಗಳಿದ್ದವು. ಆ ಸಂಶೋಧನೆ ಯೋಜನೆಯ
ಕುರಿತು ಕೆಲವು ತಪ್ಪು ಮಾಹಿತಿಗಳಿಂದ
ಕೂಡಿದ ಆರೋಪಗಳೂ ಇದ್ದವು. ನನಗೆ
ಅದನ್ನು ನೋಡಿ ಮೇಡಂ ಹೀಗೆಲ್ಲಾ
ಯೋಚಿಸುವುದಾ ಅನಿಸಿದರೂ, ಅವುಗಳಿಗೆ ಉತ್ತರಿಸುವುದು ನನ್ನ ಜವಾಬ್ದಾರಿ ಎಂದೆಣಿಸಿ
ಅವರು ಬರೆದಿದ್ದ ಪ್ರತಿಯೊಂದು ಅಂಶಕ್ಕೂ ವಿವರಣೆಯನ್ನು ಬರೆದು
ರಾತ್ರಿ 2 ಗಂಟೆಯ ಸುಮಾರಿಗೆ ಕಳಿಸಿದೆ.
ಅದನ್ನು ಓದಿದ ಮೇಡಂ ನಿಜಕ್ಕೂ
ಕನ್ವಿನ್ಸ್ ಆಗಿದ್ದರು. ಮೊದಲು ಬಹಳ ಬಿರುಸಿನಿಂದ
ಶುರುವಾಗಿದ್ದ ಆ ಮೆಸೆಂಜರ್ ಮಾತುಕತೆ
ಮುಗಿಯುವಾಗ ಪರಸ್ಪರ ಸಾರಿ ಕೇಳಿಕೊಳ್ಳುವಲ್ಲಿಗೆ
ಸುಖಾಂತ್ಯ ಕಂಡಿತ್ತು.
ಗೌರಿ ಮೇಡಂ ಹತ್ಯೆಯಾಗುವ ಕೆಲವು
ದಿನಗಳ ಮೊದಲು ಗೌರಿಯವರು ಇಷ್ಟಪಡುತ್ತಿದ್ದ
ಕೆಲವಾರು ಪ್ರಗತಿಪರ ಶಕ್ತಿಗಳು ತಮ್ಮ ತಮ್ಮೊಳಗೆ ಕಚ್ಚಾಡುತ್ತಿದ್ದುದನ್ನು
ಕಂಡು ತುಂಬಾ ಮನಸಿಗೆ ಹಚ್ಚಿಕೊಂಡಿದ್ದರು.
ಆಗಷ್ಟೇ ಅವರು ಟ್ವಿಟರ್ ಅಕೌಂಟ್
ಮಾಡಿಕೊಂಡು ಟ್ವೀಟ್ ಮಾಡುತ್ತಿದ್ದರು. ಅದರಲ್ಲೂ
ನಾವೆಲ್ಲಾ ಒಂದು ಉದ್ದೇಶಕ್ಕಾಗಿ ಕೆಲಸ
ಮಾಡೋಣ, ನಮ್ಮ ನಮ್ಮಲ್ಲೇ ಕಚ್ಚಾಟ
ಬೇಡ ಎಂದು ಕೋರಿಕೊಂಡಿದ್ದರು. ಇದು
ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದ್ದ
ಜಗಳಗಳ ಹಿನ್ನೆಲೆಯಲ್ಲೇ ಅವರು ಮಾಡಿದ್ದ ಟ್ವೀಟ್
ಆಗಿತ್ತು. ಆದರೆ ಇದನ್ನು ವಿಕೃತ
ರೀತಿಯಲ್ಲಿ ಬಳಸಿಕೊಂಡಿದ್ದು ಕೆಲ ಬಲಪಂಥೀಯ ಪತ್ರಕರ್ತರಾಗಿದ್ದರು.
ಈ ಸಂದರ್ಭದಲ್ಲಿ ನಾವು
ಯಾರಾದರೂ ಸಿದ್ದರಾಮಯ್ಯ ಅವರ ಕುರಿತು ಏನಾದರೂ
ವಿಮರ್ಶೆ ಬರೆದರೆ ಗೌರಿ ಮೇಡಂ
ತುಂಬಾ ಸಿಡಿಮಿಡಿಯಾಗುತ್ತಿದ್ದರು. ಬಿಜೆಪಿ-ಸಂಘಪರಿವಾರವನ್ನು ಎದುರಿಸಲು
ನಮಗೆ ಅನಿವಾರ್ಯವಾದ ಆಯ್ಕೆ ಸಿದ್ದರಾಮಯ್ಯ ಮತ್ತು
ಕಾಂಗ್ರೆಸ್ ಎಂಬುದು ಅವರ ಗಟ್ಟಿ
ನಂಬಿಕೆಯಾಗಿತ್ತು. ಈ ಕುರಿತು ಒಂದೆರಡು
ಸಲ ನನಗೂ ಗೌರಿ ಮೇಡಂಗೂ
ಫೇಸ್ಬುಕ್ಕಿನಲ್ಲಿ ಸಣ್ಣ ಮಾತಿನ ತಿಕ್ಕಾಟವೂ
ಆಗಿತ್ತು. ಆದರೆ ಅದು ವೈಯಕ್ತಿಕ
ಮಟ್ಟದಲ್ಲಂತೂ ಇರಲಿಲ್ಲ.
2017ರ ಸೆಪ್ಟೆಂಬರ್ 05ರಂದು ಗೌರಿ ಮೇಡಂ
ಹತ್ಯೆ ಕನ್ಪರ್ಮ್ ಆದ ಕ್ಷಣದಲ್ಲಿ ಕುಸಿದು
ಬಿದ್ದಂತಾಯಿತು. “ನಾನು ಗೌರಿ” ಎಂದು
ಫೇಸ್ಬುಕ್ಕಿನಲ್ಲಿ ಒಂದು ವಾಕ್ಯವನ್ನು ಬರೆದು
ಕೆಲವು ಗಂಟೆಗಳ ಕಾಲ ಸುಮ್ಮನೇ
ಕುಳಿತುಬಿಟ್ಟೆ.
ತಾನಿರುವ
ಕಾಲವನ್ನು, ಕಾಲದ ಬಿಕ್ಕಟ್ಟುಗಳನ್ನು ಸರಿಯಾಗಿ
ಗ್ರಹಿಸಿಕೊಂಡು ಅದಕ್ಕೆ ತಕ್ಕಂತೆ ಪಕ್ಷ
ಸಿದ್ಧಾಂತಗಳ ಗಡಿಗಳನ್ನು ಮೀರಿ ಎಲ್ಲರೂ ಒಂದಾಗಿ
ಕೆಲಸ ಮಾಡಬೇಕು ಎಂಬ ನಿಟ್ಟಿನಲ್ಲಿ
ತನ್ನನ್ನು ತಾನು ತೇಯ್ದುಕೊಳ್ಳುತ್ತಿದ್ದರು ಗೌರಿ ಲಂಕೇಶ್.
ತಾನೊಬ್ಬ ಹೈಫೈ ಪತ್ರಕರ್ತೆಯಾಗುವ ಎಲ್ಲಾ
ಅವಕಾಶಗಳನ್ನು ಬಿಟ್ಟು ತನಗೆ ಆತ್ಮತೃಪ್ತಿಯಾಗುವ
ರೀತಿಯಲ್ಲಿ ಕನ್ನಡ ಪತ್ರಿಕೋದ್ಯಮವನ್ನೇ ಆರಿಸಿಕೊಂಡು,
ಕೆಲವೇ ವರ್ಷಗಳಲ್ಲಿ ಅದ್ಭುತವಾಗಿ ವಿಶ್ಲೇಷಣೆ ನಡೆಸಿ ಬರೆಯುವ ಮಟ್ಟಿಗೆ
ಒಬ್ಬ ಧೀಮಂತ ಪತ್ರಕರ್ತೆಯಾಗಿ ಬೆಳೆದಿದ್ದು
ಗೌರಿ ಲಂಕೇಶ್. ಹೇಗೆ ಅವರಪ್ಪ
ಲಂಕೇಶ್ ‘ಪ್ರಗತಿ ರಂಗ” ಕಟ್ಟಿಕೊಂಡು
ರಾಜ್ಯವನ್ನೆಲ್ಲಾ ಸುತ್ತಿದ್ದರೋ ಹಾಗೆಯೇ ಗೌರಿ ಲಂಕೇಶ್
ಕೂಡಾ ನಾಡಿನ ಎಲ್ಲಾ ಜನಪರ
ಶಕ್ತಿಗಳ ಕಣ್ಮಣಿಯಾಗಿ ಕೆಲಸ ಮಾಡುತ್ತಿದ್ದರು. ಅವರೆಷ್ಟು
ಸರಳತೆಯನ್ನು ಮೈಗೂಡಿಸಿಕೊಂಡಿದ್ದರು ಎಂದರೆ ಆಶ್ಚರ್ಯವಾಗುತ್ತದೆ.
ಗೌರಿ ಮೇಡಂ ಅವರು ಕೆಲಸ
ಮಾಡುತ್ತಿದ್ದ ರೀತಿಯನ್ನು ಹತ್ತಿರದಿಂದ ನೋಡಿರುವ ನಾನು ಎಷ್ಟೋ
ಸಲ ದಂಗಾಗಿದ್ದೇನೆ. ಗೈಡ್, ಲಂಕೇಶ್ ಪತ್ರಿಕೆ,
ಹಲವಾರು ಪುಸ್ತಕಗಳ ಪ್ರಕಾಶನ ಇತ್ಯಾದಿ ಕೆಲಸಗಳನ್ನು
ಅವರು ಅದ್ಯಾವ ಪರಿ ಮಾಡುತ್ತಿದ್ದರೆಂದರೆ
ಕೆಲವೊಮ್ಮೆ ಹತ್ತಾರು ಗಂಟೆಗಳ ಕಾಲ
ಎಡೆಬಿಡದೇ ಕೆಲಸ ಮಾಡುತ್ತಿದ್ದರು. ಕೆಲವೊಮ್ಮೆ
ಎಲ್ಲಾ ಕೆಲಸವನ್ನೂ ಅವರೊಬ್ಬರೇ ಮಾಡಬೇಕಾದ ಪರಿಸ್ಥಿತಿ ಎದುರಾದಾಗಲೂ ತಾಳ್ಮೆಯಿಂದಲೇ ಎಲ್ಲವನ್ನೂ ನಿರ್ವಹಿಸುತ್ತಿದ್ದರು. ಬಹುಶಃ ನಾನಾಗಲೀ, ಕುಮಾರ್
ಬುರಡಿಕಟ್ಟಿಯಾಗಲೀ ಲಂಕೇಶ್ ತೊರೆದು ಬೇರೆ
ಕೆಲಸ ನೋಡಿಕೊಳ್ಳದೇ ಹೋಗಿದ್ದರೆ ಅವರ ಹೊರೆಯಲ್ಲಿ ಒಂದಷ್ಟು
ನಾವೂ ಹೊತ್ತು ಅವರಿಗೆ ಒಂದಷ್ಟು
ಹಗರುವಾಗುತ್ತಿತ್ತು ಎನಿಸುತ್ತದೆ. ಆದರೆ ಈಗ ಹಳಹಳಿಸಿ
ಏನೂ ಪ್ರಯೋಜನವಿಲ್ಲ. ಅಂದಿನ ನನ್ನ ಪರಿಸ್ಥಿತಿಯೂ
ಹಾಗಿರಲಿಲ್ಲ.
ಒಟ್ಟಿಗೇ
ಕೆಲಸ ಮಾಡಿದ, ಒಟ್ಟಿಗೇ ಊಟ
ಮಾಡಿದ, ಬಸವನಗುಡಿಯ ಬುಲ್ ಟೆಂಪಲ್ ಪಾರ್ಕಿನಲ್ಲಿ
ಒಟ್ಟಿಗೇ ಶಟಲ್ ಆಡಿದ, ಒಟ್ಟಿಗೇ
ಹೋರಾಟಗಳಲ್ಲಿ ಭಾಗಿಯಾದ ಗೌರಿ ಮೇಡಂ
ಈಗ ನಮ್ಮೊಂದಿಗೆ ಇರಬೇಕಿತ್ತು ಎಂದು ಅನಿಸುತ್ತಲೇ ಇರುತ್ತದೆ.
ನನಗೆ ಜೀವ ಕೊಟ್ಟ ಅವ್ವನ
ಹೆಸರು ಪಾರ್ವತಿ. ಬದುಕು ಕಟ್ಟಿಕೊಳ್ಳಲು ನೆರವಾದ
ಮತ್ತೊಬ್ಬ “ಅವ್ವ” ಗೌರಿ. ಜೀವನದಲ್ಲಿ
ನನಗೆ ಹೊಸ ವೃತ್ತಿ ಬದುಕಿಗೆ
ಅಡಿಪಾಯ ಹಾಕಿಕೊಟ್ಟ ಈ “ಅವ್ವ” ಗೌರಿಯನ್ನು
ನೆನೆಯದೇ ಇದ್ದರೆ ನನ್ನಷ್ಟು ಕೃತಘ್ನ
ಯಾರೂ ಇರುವುದಿಲ್ಲ.
#ನಾನು_ಗೌರಿ_ನಾವೆಲ್ಲ_ಗೌರಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ