ಜನವರಿ 21, 2016

ರೋಹಿತ್ ವೇಮುಲನಿಗೆ ಒಂದು ಪತ್ರ


ಪ್ರೀತಿಯ ರೋಹಿತ್ ವೇಮುಲ,
ನಿನ್ನ ಒಂದು ಡೆತ್ ನೋಟ್ ಇಂದು ಸಾಮಾಜಿಕ ಮಾದ್ಯಮದಲ್ಲಿ ಕಾಣಿಸಿಕೊಳ್ಳುವವರೆಗೆ ನಿನ್ನ ಅರುಹೂ-ಕುರುಹೂ ತಿಳಿದಿರಲಿಲ್ಲ. ಆದರೆ ನೀನು ಬರೆದ ಅದೊಂದು ಪತ್ರ ನಿನ್ನನ್ನು ಅಪಾರವಾಗಿ ಹಾಗೂ ಅನಂತವಾಗಿ ಪ್ರೀತಿಸುವಂತೆ ಮಾಡಿದೆ. ಹಾಗೆಂದೇ ಈ ಪತ್ರದ ಮೊದಲಿಗೆ 'ಪ್ರೀತಿಯ' ಎಂದೇ ಸಂಬೋಧಿಸಿರುವೆ. ನಿಜ ಹೇಳಬೇಕೆಂದರೆ ನೀ ಬರೆದ ಅಕ್ಷರಗಳನ್ನು ಓದಿದಾಗಿನಿಂದಲೂ ಮನಸ್ಸಿಗೆ ಸಮಾಧಾನವೆನ್ನುವುದೇ ಇಲ್ಲವಾಗಿದೆ. 
ನಿನ್ನ ಪತ್ರ ಓದಿದ ನಂತರ ನೀನು 'ಆತ್ಮಹತ್ಯೆ' ಮಾಡಿಕೊಳ್ಳುವ ಸನ್ನಿವೇಶ ಸೃಷ್ಠಿಯಾದ ಕುರಿತು ತಿಳಿದುಕೊಳ್ಳಲು ಯತ್ನಿಸಿದೆ. ನಿನ್ನ ಶವವನ್ನು ಅದೇ ಕೊಠಡಿಯಲ್ಲಿಟ್ಟು ನಿನ್ನ ಸಂಗಾತಿಗಳು ಪ್ರತಿಭಟನೆ ನಡೆಸುತ್ತಿದ್ದರೆ ಅಲ್ಲಿ ಸೆಕ್ಷನ್ 144 ಜಾರಿಗೊಳಿಸಿ ನಿನ್ನ ಮೃತ ದೇಹವನ್ನು ಕಸಿದುಕೊಂಡು ಹೋಗಿ ಮರಣೋತ್ತರ ಪರೀಕ್ಷೆ ನಡೆಸಿದ ಸನ್ನಿವೇಶ ಮತ್ತಷ್ಟು ಸಂಕಟ ತರಿಸಿತು. 
ನನ್ನ ಹತ್ತಾರು ವರ್ಷಗಳ ಸಾಮಾಜಿಕ ಪ್ರಜ್ಞೆ ಮತ್ತು ಕ್ರಿಯೆಯ ಭಾಗವಾಗಿ ಎಷ್ಟೋ ಜನರು ಆತ್ಮೀಯರಾಗಿದ್ದಾರೆ. ಒಡನಾಟದಲ್ಲಿದ್ದಾರೆ. ಎಲ್ಲರೂ ಪರಸ್ಪರರ 'ಬದುಕಿನ' ಹಾದಿಯಲ್ಲಿ ಸಿಕ್ಕಿದವರು, ದಕ್ಕಿದವರು. ಆದರೆ ಪ್ರಾಣವೇ ಹೋದ ನಂತರ ಸಿಕ್ಕಿದ ಸಂಗಾತಿ ನೀನು ಮಾತ್ರ ನೋಡು. ನಿನ್ನ ಆ ಪತ್ರದಲ್ಲಿ ನೀನೇನೂ ಸಿದ್ದಾಂತ ಬರೆದಿಲ್ಲ, ಯಾರೊಂದಿಗೋ ಸಂಘರ್ಷ ನಡೆಸಿಲ್ಲ. ಯಾರ ಬಗ್ಗೆ ದೂರಿಲ್ಲ, ದ್ವೇಷ ಕಾರಿಲ್ಲ. ಆದರೆ ನಿನ್ನ ಕನಸು, ನೀ ನಡೆದ ದಾರಿ, ನಿನ್ನ ಹತಾಶೆ ಎಲ್ಲವನ್ನೂ ಅಷ್ಟು ಪದಗಳಲ್ಲಿ ತೆರೆದಿಟ್ಟಿದ್ದೀಯ. ಗೆಳೆಯಾ, ಒಂದಂತೂ ಸತ್ಯ. ಅದರಲ್ಲಿ ಕಾಣುವ ನಿನ್ನ ನಿಷ್ಕಲ್ಮಷ ಮನಸ್ಸು, ಪ್ರೀತಿ ತುಂಬಿದ ಹೃದಯ ಈಗ ನಮ್ಮೆದೆಗಳನ್ನು ತೇವಗೊಳಿಸಿವೆ. 
ನಿಜ. ನೀ ಹೇಳಿದಂತೆ ಇಲ್ಲಿ ಮನುಷ್ಯರು ಮನುಷ್ಯರಾಗಿ ಉಳಿಯುವುದು ಅಷ್ಟು ಸುಲಭವಾಗಿಲ್ಲ. ನಮ್ಮತನಗಳನ್ನು ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ಜಾತಿ-ಮತಗಳು ಇಂಚಿಂಚನ್ನೂ ಸುಡುತ್ತಿರುವಾಗ ನೀ ಕನಸಿದಂತೆ ಒಬ್ಬ ಮನುಷ್ಯ ಮತ್ತೊಬ್ಬ ಮನುಷ್ಯನನ್ನು ತಾರಕೆಗಳ ಧೂಳಿನ ಕಣ ಎಂದು ಭಾವಿಸಿಕೊಂಡು ಆ ಸಾಂಗತ್ಯದ ಅತ್ಯದ್ಭುತ ಅನುಭವವನ್ನು ಹೊಂದುವುದು ಸಾವಿರ ಸಾವಿರ ಬೆಳಕಿನ ವರ್ಷಗಳಷ್ಟು ದೂರದ ಸಾದ್ಯತೆಯಾಗಿದೆ. ಅದಕ್ಕಿಂತ ಮೊದಲು ನೀ ಹೇಳಿದಂತೆ ಮನುಷ್ಯನನ್ನು 'ಮನಸ್ಸಾಗಿ' 'ಭಾವವಾಗಿ' 'ಬುದ್ಧಿ'ಯಾಗಿ ನೋಡುವುದೇ ದುಸ್ತರವಾಗಿದೆ. ನೀನು ನಿನ್ನ ಬಾಲ್ಯದಲ್ಲಿ, ಬದುಕಿನಲ್ಲಿ ಅನುಭವಿಸಿದಷ್ಟು ಅಪಮಾನ, ಯಾತನೆಗಳನ್ನು ನಾನು ಅನುಭವಿಸಿರಲಾರೆ ಎಂದು ಬಲ್ಲೆ. ಆದರೆ ಅದರ ಆಳವನ್ನು ಗ್ರಹಿಸುವಷ್ಟು ಅರಿವು ನನ್ನಂತವರಿಗೆ ಬಂದಿದೆಯಾದರೆ ಅದಕ್ಕೆ ಬಾಬಾಸಾಹೇಬ್.ಅಂಬೇಡ್ಕರ್ ನೀಡಿದ ಪ್ರಜ್ಞೆ ಮುಖ್ಯ ಕಾರಣ. 
ರೋಹಿತ್, ಸಮಾಜ, ಮನುಷ್ಯ, ಪ್ರಕೃತಿ, ನಕ್ಷತ್ರ, ಕಾಲ, ದೇಶ ಪ್ರತಿಯೊಂದನ್ನೂ ಸೂಕ್ಷ್ಮವಾಗಿ ಗ್ರಹಿಸಬಲ್ಲವನಾಗಿದ್ದ ನೀನು ಅಂಬೇಡ್ಕರ್ ವಿದ್ಯಾರ್ಥಿ ಸಂಘಟನೆ ಮಾಡಿಕೊಂಡು ಹೋರಾಟ ನಡೆಸಿದ್ದೇಕೆ ಹೇಳು? ನಿನ್ನ ಮತ್ತು ನಿನ್ನ ಸಂಗಾತಿಗಳ ಕನಸುಗಳನ್ನು ಒಂದು ಹೆಜ್ಜೆಯಾದರೂ ಮುಂದೆ ಕೊಂಡೊಯ್ಯಬೇಕೆಂದಲ್ಲವೇ? ಆ ದಾರಿಯಲ್ಲೇ ಅಲ್ಲವೇ ನೀನು ಸಾಗುತ್ತಿದ್ದದ್ದು? ಆದರೆ ಹೀಗೆ ಹಠಾತ್ತನೆ ಎಲ್ಲವನ್ನೂ ನಿರಾಕರಿಸಿ ಮತ್ತೆ ಏಕಾಂಗಿಯಾಗಿ ನಡೆದುಬಿಡುವ ದಾರಿಯನ್ನೇಕೆ ಆರಿಸಿಕೊಂಡೆ? ಅದಕ್ಕಾಗಿ ನೀನು ಸ್ವಾರ್ಥಿ ಎಂದೋ, ಮೂರ್ಖನೆಂದೋ ಹೇಳಿಬಿಡುವ ಮೂರ್ಖರು ನಾವಲ್ಲ. ಆದರೆ, ಈ ಭರತಭೂಮಿಯಲ್ಲಿ ಮುಂಚಲನೆ ಎಂದರೇನೇ ಸಂಘರ್ಷ ಎಂಬುದನ್ನು ಬಾಬಾಸಾಹೇಬರು ಕಲಿಸಿಕೊಟ್ಟಿರುವರಲ್ಲವೇ? ಮತ್ತೇಕೆ ದುಡುಕಿಬಿಟ್ಟೆ? 
ಈ ಸತ್ಯ ತಿಳಿದೂ ಮಾಡಿಕೊಂಡಿರುವ ನಿನ್ನ 'ಆತ್ಮಹತ್ಯೆ' ಸಹ ಒಂದು ಹೋರಾಟ ಎಂದು ನಾನು ಸಮಾಧಾನ ಪಟ್ಟುಕೊಂಡುಬಿಡಬಲ್ಲೆ. ಬೇಕಾದರೆ ನಿನ್ನ ಆಶಯಗಳು ಚಿರಾಯುವಾಗಲಿ ಎಂಬ ಘೋಷಣೆಯನ್ನೂ ಕೊಟ್ಟು ಬಿಡಬಲ್ಲೆ. ಆದರೆ ಈ ಬದುಕು ಅಷ್ಟು ನಿಕೃಷ್ಟವಲ್ಲ ಎಂದು ನಂಬುವ ನನಗೆ ನೀ ಆರಿಸಿಕೊಂಡ ಪ್ರತಿರೋಧದ ದಾರಿಯ ಬಗ್ಗೆ ಸುತಾರಾಂ ಒಪ್ಪಿಗೆಯಿಲ್ಲ. ನೀ ಎದುರುಗೊಂಡಂತ ಹತಾಶೆ, ಸೋಲು, ನೋವುಗಳೆಲ್ಲವೂ ನನಗೂ ಅನುಭವವಾಗಿವೆ. ನಿಜ. ಆ ಕ್ಷಣ 'ಆತ್ಹಹತ್ಯೆ'ಯನ್ನು ಸಹ ಒಂದು ಆಯ್ಕೆಯಾಗಿ ನೋಡಿದ ಸಂದರ್ಭಗಳೆಷ್ಟೋ. ಆದರೆ ಅಂತಹ ಸಂದರ್ಭದಲ್ಲೆಲ್ಲಾ ನಾನು ಧೈರ್ಯ ಮತ್ತು ಹುಮ್ಮಸ್ಸು ತೆಗೆದುಕೊಳ್ಳುವುದು ಹೇಗೆ ಗೊತ್ತೇ? 
ಈ ಭೂಮಿಯ ಮೇಲೆ ಅವತರಿಸಿರುವ ನನ್ನ ಜೀವದ ಬಗ್ಗೆ ವಿಪರೀತ ಹೆಮ್ಮೆ ಪಡುವ ಮೂಲಕ. ನಿನ್ನ ಮೆಚ್ಚಿನ ಖಗೋಳಜ್ಞಾನವೇ ನನಗೆ ಬದುಕಿನಲ್ಲಿ ಹುರುಪು, ಹುಮ್ಮಸ್ಸು ನೀಡುವುದು.
ನಮ್ಮ ಅನುಭವಕ್ಕೆ ಬಂದಿರುವ ವಿಶ್ವ ಇದೊಂದೇ. ಬೇರೆಯ ವಿಶ್ವಗಳೂ ಇರಲೂ ಬಹುದೇನೋ. ಈ ವಿಶ್ವ ಒಂದು ಕಣರೂಪದಿಂದ ಈ ಅಗಾಧ, ಅನಂತ ರೂಪಕ್ಕೆ ವಿಕಾಸ ಹೊಂದಿ; ಲಕ್ಷಲಕ್ಷ ಕೋಟಿ ಆಕಾಶಗಂಗೆಗಳು ಉಗಮವಾಗಿ ಆ ಒಂದೊಂದು ಆಕಾಶಗಂಗೆಯಲ್ಲಿ ಲಕ್ಷಲಕ್ಷ ಕೋಟಿ ಸೂರ್ಯರು, ಆ ಸೂರ್ಯರಲ್ಲೆಲ್ಲ ನಮಗೆ ವಿಶಿಷ್ಟವಾದದ್ದು ನಮ್ಮ ಸೌರಮಂಡಲದ ಸೂರ್ಯ. ನಮ್ಮ ಸೌರಮಂಡಲದಲ್ಲೇ ಮತ್ತೆ ಅತ್ತ ಹಿಮಗಡ್ಡೆಯೂ ಆಗದೇ, ಇತ್ತ ಆವಿಯೂ ಆಗದೇ ಕಲ್ಲುಮಣ್ಣುಲೋಹಗಳ ಸ್ವರೂಪದಲ್ಲಿ ರೂಪುಗೊಂಡ ಈ ಅತ್ಯದ್ಭುತ ಭೂಮಿ! ಅಷ್ಟಕ್ಕೇ ಮುಗಿಯಲಿಲ್ಲ. ಈ ಭೂಮಿಯಲ್ಲಿ ರೂಪಗೊಂಡ ಅಮೈನೋ ಆಸಿಡ್ ಗಳ ಸಂಯೋಜನೆಯಲ್ಲಿ ಉಂಟಾದ ಜೀವಸೃಷ್ಟಿ- ಆ ಜೀವ ಸೃಷ್ಟಿ ವಿಕಾಸಗೊಂಡು ಉಂಟಾದ ಸಕಲ ಜೀವರಾಶಿ! ಲಕ್ಷಾಂತರ ವರ್ಷಗಳಲ್ಲಿ ತಲುಪಿದ ಈ ಮನುಷ್ಯ ರೂಪ. ಮತ್ತು ಈ ರೂಪದಲ್ಲಿ ಈ ಕಾಲದಲ್ಲಿ, ಈ ದೇಶದಲ್ಲಿ ಹುಟ್ಟಿದ -ನಾನು ಮತ್ತು ನೀನು! 
ಈ 'ನಾನು' ಬದುಕುತ್ತಿರುವುದೇ ಇಡೀ ವಿಶ್ವಸೃಷ್ಟಿಯಲ್ಲಿ 'ಯಕಶ್ಚಿತ್' ಎಂದೆನಿಸುವ ದೇಶಕಾಲದಲ್ಲಿ.
ಹೀಗಿರುವಾಗ ನಮ್ಮೆಲ್ಲರ ಹುಟ್ಟು, ಬದುಕು ಅತ್ಯಂತ ಅದ್ಭುತ ಮತ್ತು ಅಪರೂಪದ್ದು. ಆದ್ದರಿಂದಲೇ ನಾನು ಯಾವತ್ತೂ ಕೈಯಾರೆ ಪ್ರಾಣತೆಗೆದುಕೊಳ್ಳುವುದನ್ನು ಒಪ್ಪುವುದಿಲ್ಲ. ದ್ವೇಷಿಸುತ್ತೇನೆ. ಆದರೆ ಈ ಭೂಮಿಯ ಮೇಲೆ ಬದುಕನ್ನು ಇಲ್ಲಿ ಅದರ ಸೌಂದರ್ಯವನ್ನೆಲ್ಲಾ ವಿರೂಪಗೊಳಿಸಿ ಕುರೂಪಿಯಾಗಿಸಲಾಗಿದೆ. ಹೀಗಾಗಿಯೇ ನಮ್ಮೆಲ್ಲರ ಈ ಹೋರಾಟಗಳು, ವಿಚಾರ ಸಂಘರ್ಷಗಳೆಲ್ಲಾ ಮತ್ತಷ್ಟೂ ಅಂದಗೆಡುತ್ತಲೇ ಹೋಗುತ್ತಿರುವ ಈ ಬದುಕಿನ ಸೌಂದರ್ಯವನ್ನು ಉಳಿಸುವ ಹೋರಾಟಗಳೇ ಆಗಿವೆ ಎನ್ನುವುದು ನನ್ನ ದೃಢವಾದ ನಂಬಿಕೆ. ನೀನು ವಿಶ್ವವಿದ್ಯಾಲಯದಲ್ಲಿ ನಡೆಸುತ್ತಿದ್ದ ಹೋರಾಟವೂ ಅದರ ಭಾಗವಾಗಿಯೇ ಇತ್ತಲ್ಲವೇ? ಆದರೂ ನೀನು ತಾಳ್ಮೆಗೆಟ್ಟಿದ್ದು ಯಾಕೆ ಗೆಳೆಯ?
ನೀನು ಬದುಕಬೇಕಿತ್ತು. ಹೋರಾಟ ಸಂಘರ್ಷಗಳು ಬೇಕಾದರೆ ಬದಿಗಿರಲಿ. ಖಗೋಳ ವಿಜ್ಞಾನಿ ಕಾರ್ಲ್ ಸಗಾನ್ ನಂತೆ ಬರೆಯಲಿಚ್ಛಿಸಿದ್ದ ನೀನು ಈ ವಿಶ್ವದ ಅದ್ಭುತಗಳನ್ನು, ತಾರಾಲೋಕದ ವಿಸ್ಮಯಗಳನ್ನು, ಇವೆಲ್ಲವುಗಳೊಂದಿಗೆ ನಮ್ಮೆದುರಿನ ಸಕಲ ಜೀವಸಂಕುಲದ ಸಂಬಂಧ, ಮನುಷ್ಯ ಜೀವಿಯ ಹೆಚ್ಚುಗಾರಿಕೆ ಮತ್ತು ಅದೇ ವೇಳೆಗೆ ಮನುಷ್ಯ ಬದುಕಿನ ನಶ್ವರತೆಯನ್ನು, ನಿನ್ನ ಜನರಿಗೆ ದಾಟಿಸಲಾದರೂ ನೀನು ಬದುಕಬೇಕಿತ್ತು. ನೀನು ಅರಿಯಲು ಸಾದ್ಯವಾದ ಈ ವಿಶ್ವದ ಸತ್ಯಗಳನ್ನು ಅರಿಯಲಾಗದೇ ಇನ್ನೂ ಅಜ್ಞಾನದ ಬಂಧನದಲ್ಲಿರುವವರಿಗೆ ಅರುಹಿ ಅವರನ್ನು ಸ್ವತಂತ್ರಗೊಳಿಸಲಾದರೂ ನೀನು ಬದುಕಬೇಕಿತ್ತು.
ಕೊನೆಯದಾಗಿ, 
ನಮ್ಮೊಡನೆ ಜೊತೆಗಿದ್ದು ಹೀಗೆ ಅಕಾಲಿಕವಾಗಿ ಮರೆಯಾದ ಕೆಲವು ದೂರದ ಮತ್ತು ಹತ್ತಿರದ ಸಂಗಾತಿಗಳಿದ್ದಾರೆ. ಅವರ ಸಾವಿನಿಂದ ಒಬ್ಬ ಸಂಗಾತಿಯನ್ನು ಕಳೆದುಕೊಂಡೆನಲ್ಲಾ ಎಂದು ಪರತಪಿಸಿದ್ದಿದೆ. ಆದರೆ ನಿನ್ನ ವಿಷಯದಲ್ಲಿ ಅದು ಉಲ್ಟಾ ಆಗಿ ಬಿಟ್ಟಿದೆ. ನಿನ್ನ ಸಾವಿನಲ್ಲಿಯೇ ಒಬ್ಬ ಸಂಗಾತಿಯನ್ನು ಪಡೆದುಕೊಂಡಿದ್ದೇನೆ. ಈ ಯೋಚನೆಯೇ ನನಗೆ ಈ ಪತ್ರವನ್ನು ಬರೆಯಲು ಪ್ರೇರೇಪಿಸಿದ್ದು. ಇನ್ನು ಮುಂದೆ ನಮ್ಮ ಬದುಕಿನ ಭಾಗವಾಗಿ, ಭಾವವಾಗಿ, ಪ್ರಜ್ಞೆಯಾಗಿ ಎಂದಿಗೂ ಜತೆಗಿರುತ್ತೀಯ. ತಾರೆಗಳ ಲೋಕಕ್ಕೆ ಪಯಣ ಬೆಳೆಸಿದ ನೀನು ಈ ರಾತ್ರಿಯಲ್ಲಿ ನಾನು ನೋಡುತ್ತಿರುವ ಒಂದು ತಾರೆಯೇ ಆಗಿರುವೆ ರೋಹಿತ್. ಅಲ್ಲಿಗೆ ತಲುಪಿಬಿಟ್ಟಿರುವ ನಿನಗೆ ಇಲ್ಲಿನ ಬದುಕು, ಹೋರಾಟ, ಹೊಡೆದಾಟ, ದ್ವೇಷ, ಅಸೂಯೆ, ಸ್ವಾರ್ಥ ಇವೆಲ್ಲಾ ತೀರಾ ಕ್ಷುಲ್ಲಕವಾಗಿ ತೋರುತ್ತಿರಲೂಬಹುದು. ಇವುಗಳೆಡೆಗೆ ನೀನು ಒಂದು ಮುಗುಳ್ನಗು ಸೂಸುತ್ತಿರಬಹುದೆಂದುಕೊಳ್ಳುವೆ. ಆದರೆ ಅಲ್ಲಿಯೂ ಏಕಾಂಗಿಯಾಗಿರದೇ ನಿನ್ನ ನಗುವಿನ ಹೊಳಪು ನಮ್ಮೆಲ್ಲರ ಎದೆಗಳಲ್ಲಿ ಕಸುವು ತುಂಬಲಿ


ಕಾಮೆಂಟ್‌ಗಳಿಲ್ಲ: