ಸೆಪ್ಟೆಂಬರ್ 12, 2014

ISIS ಭಯೋತ್ಪಾದನೆ ಮತ್ತು ಮದ್ಯಪ್ರಾಚ್ಯದ ರಕ್ತಚರಿತ್ರೆ!


ಕಳೆದೆರಡು ತಿಂಗಳ ಹಿಂದೆ ಇರಾಕಿನ ಪಟ್ಟಣಗಳಲ್ಲಿ ಧರ್ಮಾಂಧರು ನಡೆಸಿರುವ ಕ್ರೌರ್ಯವನ್ನು ನೋಡಿ ಜಗತ್ತು ಹೌಹಾರಿದೆ. ಒಂದೇ ಧರ್ಮದ ಆದರೆ ಬೇರೆಯ ಪಥದವರೆಂಬ ಕಾರಣಕ್ಕಾಗಿ ಜನರನ್ನು ಕೈಕಟ್ಟಿ ಸಾಲಾಗಿ ನಿಲ್ಲಿಸಿ ತಲೆಗೇ ಗುಂಡಿಟ್ಟು ಹೊಡೆದು ಕೊಲ್ಲುವ ದೃಶ್ಯಗಳನ್ನು ಜಗತ್ತಿನ ವೀಕ್ಷಣೆಗೆ ಬಿಡುಗಡೆಗೊಳಿಸಿದ ಆ ಕ್ರೂರಿ ಧರ್ಮಾಂಧ ಪಡೆಯ ಹೆಸರು ISIS (ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯಾ). ಇರಾಕಿನಲ್ಲಿರುವ ಶಿಯಾ ಮುಸ್ಲಿಮರಿಗೆ ಸಂಬಂಧಿಸಿದ ಪುರಾತನ ಐತಿಹಾಸಿಕ ಸ್ಮಾರಕಗಳನ್ನೂ, ಕ್ರೈಸ್ತ ದೇಗುಲಗಳನ್ನೂ ಪುಡಿಗಟ್ಟುತ್ತಾ ಚರಿತ್ರೆಯ ನೆನಪನ್ನೇ ಧ್ವಂಸಗೊಳಿಸುತ್ತ ನಡೆದಿದೆ ಈ ವಿಧ್ವಂಸಕ ಜಿಹಾದಿ ಪಡೆ. ಇರಾಕ್‌ನ ಮುಖ್ಯ ನಗರವಾದ ಮೋಸುಲ್‌ನ್ನು ವಶಪಡಿಸಿಕೊಂಡು ಅಲ್ಲಿನ ಕೇಂದ್ರ ಬ್ಯಾಂಕ್‌ನಲ್ಲಿನ ಸು.500 ದಶಲಕ್ಷ ಡಾಲರ್ ಹಣ ಮತ್ತು ಬೃಹತ್ ಪ್ರಮಾಣದ ಬಂಗಾರವನ್ನು ವಶಪಡಿಸಿಕೊಂಡಿದೆ. ಈಗ ಅದು ಕಡಿಮೆಯೆಂದರೂ 1200 ಕೋಟಿರೂಗಳ ಆಸ್ತಿ ಹೊಂದಿದೆಯೆಂದು ಹೇಳಲಾಗುತ್ತಿದೆ. ಈ ಧರ್ಮಾಂಧ ಪಡೆಯ ನಾಯಕ ಅಬು ಬಕ್ರಲ್ ಬಾಗ್ದಾದಿ ಕ್ರೂರತೆ ಮತ್ತು ಸಂಘಟನೆಯಲ್ಲಿ ಒಸಾಮಾ ಬಿನ್ ಲಾಡೆನ್ನನನ್ನೂ ಮೀರಿಸುವವಂತಹ ಕಟುಕ. ಈ ಹಿಂದೆ  ಆಲ್ ಖೈದಾದಲ್ಲೇ ಇದ್ದು ಅದರಿಂದ ಸಿಡಿದು ಬಂದವನು. ಇದೀಗ ಆಲ್‌ಖೈದಾವನ್ನೇ ಟೀಕಿಸುತ್ತ ಅದು ಹಾದಿ ತಪ್ಪಿದೆ ಎಂದೂ ತಾನೇ ನಿಜವಾದ ಜಿಹಾದ್ ನಡೆಸುತ್ತಿರುವೆನೆಂದೂ ತಿಳಿಸುತ್ತಾ ಬಂದಿರುವ ಈತ ಇರಾಕ್ ಮೇಲೆ ನಡೆಸಿದ ದಾಳಿಯಿಂದಾಗಿ ಕೆಲವೇ ದಿನಗಳಲ್ಲಿ ತಾನು ಒಸಾಮಾ ಬಿನ್ ಲಾಡೆನ್‌ಗಿಂತಲೂ ಅಪಾಯಕಾರಿಯಾಗಬಲ್ಲೆ ಎಂಬುದನ್ನು ಪ್ರದರ್ಶಿಸುತ್ತಿದ್ದಾನೆ. ತನ್ನ ಗುರಿ ನೂರು ವರ್ಷಗಳ ಹಿಂದೆ ಇದ್ದ ಇಸ್ಲಾಮಿ ರಾಜ್ಯವಾದ ಕ್ಯಾಲಿಫೇಟ್‌ನ್ನು ಪುನರ್‌ಸ್ಥಾಪಿಸಿ ಇಸ್ಲಾಮಿಗೆ ಒಬ್ಬನೇ ಖಲೀಫನನ್ನು ನೇಮಿಸುವುದು ಎಂದು ಘೋಷಿಸಿದ್ದ ISIS ಬಹುಸಂಖ್ಯಾತ ಮುಸ್ಲಿಮರ ಬೆಂಬಲವನ್ನು ಪಡೆಯಲು ಯತ್ನಿಸಿದೆ. ಮಾತ್ರವಲ್ಲ 2014, ಜೂನ್ 29ರಂದು ತಾವು ತಮ್ಮ ಗುರಿಯನ್ನು ಸಾಧಿಸಿರುವುದಾಗಿಯೂ ಘೋಷಿಸಿಕೊಂಡಿದೆ. "ಸಿರಿಯಾದ ಅಲೆಪ್ಪೋದಿಂದ ಇರಾಕಿನ ದಿಯಾಲಾದವರೆಗೆ ನಮ್ಮ ಕ್ಯಾಲಿಫೇಟ್ (ಖಿಲಾಫತ್) ವಿಸ್ತರಿಸಿದ್ದು ಈ ನಡುವೆ ಯಾವುದೇ ಗಡಿಗಳಿರುವುದಿಲ್ಲ. ಇಸ್ಲಾಮ್ ರಾಜ್ಯದ ಶುರಾ (ಮಂಡಳಿ) ಸಭೆ ಸೇರಿದ್ದು ಇದನ್ನು ನಿರ್ಧರಿಸಿದೆಯಲ್ಲದೆ ಇಸ್ಲಾಂ ಸಾಮ್ರಾಜ್ಯದ ಹೊಸ ಖಲೀಫನನ್ನಾಗಿ ಬಕ್ರಲ್ ಬಾಗ್ದಾದಿ ಇರುತ್ತಾರೆ" ಎಂದು ISIS ಘೋಷಿಸಿದೆ. ಇರಾಕ್‌ನ ಮೊಸುಲ್, ಟಿರ್ಕಿತ್, ಮತ್ತಿತರ ನಗರಗಳನ್ನು ವಶಪಡಿಸಿಕೊಂಡು ರಾಜಧಾನಿ ಬಾಗ್ದಾದ್ ಕಡೆಗೇ ನುಗ್ಗುತ್ತಿರುವ ISISನ ಆಕ್ರಮಣವನ್ನು ಹಿಮ್ಮೆಟ್ಟಲು ಇರಾಕ್ ಅಧ್ಯಕ್ಷ ನೌರಿ ಅಲ್- ಮಲೀಕಿಯ ಸೇನೆ ಇನ್ನೂ ಮೀನಮೇಷ ಎಣಿಸುತ್ತಿದ್ದರೆ ಅತ್ತ ಅಮೆರಿಕ ಈ ನಾಗರಿಕ ಯುದ್ಧದಲ್ಲಿ ನೇರವಾಗಿ ಭಾಗವಹಿಸಲು ಹಿಂದೇಟು ಹಾಕಿದೆ. 
ಈ ವಿದ್ಯಮಾನಗಳು ಜಗತ್ತಿನ ಭೂಪಟವನ್ನು ಮತ್ತು ಭೂರಾಜಕೀಯವನ್ನು ಯಾರೂ ನಿರೀಕ್ಷಿದಿದ್ದ ಬೇರೊಂದು ದಿಕ್ಕಿಗೆ ಕೊಂಡೊಯ್ಯುವ ಎಲ್ಲಾ ಲಕ್ಷಣಗಳು ನಿಚ್ಚಳವಾಗಿ ತೋರುತ್ತಿವೆ. ಸುನ್ನಿ-ಶಿಯಾ ಧಾರ್ಮಿಕ ಕಲಹದ ಸ್ವರೂಪ ಹೊಂದಿರುವ ಈ ರಕ್ತಸಿಕ್ತ ಸಂರ್ಘರ್ಷ ನಿರ್ದಿಷ್ಟ ರಾಜಕೀಯ - ಆರ್ಥಿಕ ಆಯಾಮವನ್ನು ಪಡೆದು ನೂರು ವರ್ಷಗಳಾಗಿವೆ. ಕೆಲವೇ ಭೂಪ್ರದೇಶಗಳಿಗೆ ಸೀಮಿತವಾಗಿರುತ್ತಿದ್ದ ಅಂತರ್‌ಧರ್ಮೀಯ ಕಲಹಗಳು ಈ ನೂರು ವರ್ಷಗಳಲ್ಲಿ ಜಾಗತಿಕ ಮಟ್ಟದಲ್ಲಿ ಆತಂಕ ಸೃಷ್ಟಿಸುವಂತಾದುದು ಮಾತ್ರ ಮನುಕುಲ ಪ್ರಗತಿಗೆ ಬಂದೊದಗಿರುವ ದೊಡ್ಡ ತಡೆಯೆಂಬುದರಲ್ಲಿ ಸಂಶಯವಿಲ್ಲ. ಇದಕ್ಕೆ ಯಾರು ಯಾರು ಎಷ್ಟೆಷ್ಟು ಕಾರಣ ಎಂಬುದನ್ನೂ ಶೋಧಿಸುವ ಅಗತ್ಯವಿದೆ. 

ಮೊದಲ ಮಹಾಯುದ್ಧದ ಸಂದರ್ಭ!
ಇಂದಿಗೆ ಸರಿಯಾಗಿ ನೂರು ವರ್ಷಗಳ ಹಿಂದೆ ಪ್ರಪಂಚದ ಮಾರುಕಟ್ಟೆಯ ಮೇಲೆ ಹಿಡಿತವನ್ನು ಸಾಧಿಸಿ ನಿಯಂತ್ರಿಸುತ್ತಿದ್ದ ಪ್ರಮುಖ ಶಕ್ತಿಗಳೆಂದರೆ ಬ್ರಿಟನ್ ಮತ್ತು ಫ್ರಾನ್ಸ್. ರಷ್ಯಾವೂ ತನ್ನ ಸಾಮ್ರಾಜ್ಯ ವಿಸ್ತರಣೆಯ ಯತ್ನದಲ್ಲಿತ್ತು. ಇವುಗಳ ಅಧಿಪತ್ಯಕ್ಕೆ ಸವಾಲೆಸೆದು ತನ್ನ ಛಾಪನ್ನು ಮೂಡಿಸಲು ಯತ್ನಿಸುತ್ತಿದ್ದುದು ಜರ್ಮನಿ. ಈ ಬಲಶಾಲಿ ಶಕ್ತಿಗಳ ಮಾರುಕಟ್ಟೆ ವಿಸ್ತರಣೆಯ ಹಿತಾಸಕ್ತಿಯಿಂದಾಗಿಯೇ ಮೊದಲ ಮಹಾಯುದ್ಧ ನಡೆಯಿತು. ಈ ಮಹಾಯುದ್ಧಕ್ಕೆ 1914ರಲ್ಲಿ ಶುರುವಾಗಿ 1918ರಲ್ಲಿ ಮುಗಿಯುವ ಹೊತ್ತಿಗೆ ಇಡೀ ಜಗತ್ತಿನ ಭೂಗೋಳಿಕ-ರಾಜಕೀಯ ಸಂರಚನೆಯೇ ಬದಲಾಗಿ ಹೋಗಿತ್ತು. ಯುದ್ಧದ ಪರಿಣಾಮಗಳೂ ಅಷ್ಟೇ ಭೀಕರವಾಗಿದ್ದವು. ಸುಮಾರು ಒಂದೂವರೆ ಕೋಟಿ ಜನರು ಪ್ರಾಣಗಳನ್ನು ಕಳೆದುಕೊಂಡರು. ಅದಕ್ಕಿಂತ ಅಧಿಕ ಜನರು ಗಾಯಾಳುಗಳಾದರು. ಇಡೀ ಪ್ರಪಂಚದ ಜನಜೀವನ ಯುದ್ಧದ ಭೀಕರ ಪರಿಣಾಮಗಳನ್ನೆದುರಿಸಿತ್ತು. 
ಇಂದು ಮದ್ಯಪ್ರಾಚ್ಯ ದೇಶಗಳು ಎಂದು ಕರೆಯಲ್ಪಡುವ ಇರಾನ್, ಸಿರಿಯಾ, ಇರಾಕ್, ಟರ್ಕಿ, ಲಿಬಿಯಾ, ಜೊರ್ಡಾನ್, ಸೌದಿ ಅರೇಬಿಯಾ, ಕತಾರ್, ಮುಂತಾದ ಭೂಪ್ರದೇಶಗಳೆಲ್ಲ ಸೇರಿಕೊಂಡು ಅಟ್ಟೊಮಾನ್ ಟರ್ಕರ ಸಾಮ್ರಾಜ್ಯ ಅಸ್ತಿತ್ವದಲ್ಲಿತ್ತು. ಈ ಸಾಮ್ರಾಜ್ಯದಲ್ಲಿ ಇಸ್ಲಾಮಿನ ಶರಿಯಾ ಕಾನೂನಿನ ಆಳ್ವಿಕೆಯಿತ್ತು. ಇದನ್ನೇ ಕ್ಯಾಲಿಫೇಟ್ ಅಥವಾ ಖಿಲಾಫತ್ ಎನ್ನಲಾಗುತ್ತಿತ್ತು. ಹಾಗೆಯೇ ಈ ಖಿಲಾಫತ್ ಮುಖಂಡನಿಗೆ ಖಲೀಫ ಎನ್ನಲಾಗುತ್ತಿತ್ತು. ಭಾರತವೂ ಸೇರಿದಂತೆ ಜಗತ್ತಿನ ಬಹುತೇಕ ಮುಸ್ಲಿಮರಿಗೆ ಈ ಖಲೀಫನೇ ಪ್ರವಾದಿ ಮಹಮ್ಮದರ ನಿಜವಾದ ವಾರಸುದಾರ. ಈ ಧಾರ್ಮಿಕ ಮುಖಂಡ ಹೇಳಿದ್ದೇ ಕುರಾನ್‌ವಾಕ್ಯ! 1908ರ ಹೊತ್ತಿಗೆ ಕೊನೆಯ ಖಲೀಫ ಎರಡನೇ ಅಬ್ದುಲ್ ಹಮೀದ್‌ನನ್ನು ಪದಚ್ಯುತಗೊಳಿಸಿ ಅವನ ಸ್ಥಾನದಲ್ಲಿ ಮೂವರು ಪಾಶಾಗಳೆನ್ನುವ ಟರ್ಕರು ಅಧಿಕಾರ ನಡೆಸುತ್ತಿದ್ದರು. ಆದರೆ ಇವರು ಐರೋಪ್ಯ ದೇಶಗಳ ಬಳಿ ಸಾಕಷ್ಟು ಸಾಲ ಮಾಡಿಕೊಂಡಿದ್ದರು. ಮೊದಲ ಮಹಾಯುದ್ಧದಲ್ಲಿ ಮಿತ್ರದೇಶಗಳ ಜೊತೆಗೆ ಸೇರಲು ನಿರಾಕರಿಸಲ್ಪಟ್ಟ ಅಟ್ಟೋಮನ್ ಸಾಮ್ರಾಜ್ಯ ಜರ್ಮನಿಯ ಪರವಾಗಿ ನಿಂತಿತ್ತು. ಆಗ ಬ್ರಿಟನ್ ಇಡೀ ಅಟೋಮನ್ ಸಾಮ್ರಾಜ್ಯವನ್ನು ಇಲ್ಲವಾಗಿಸುವ ತಂತ್ರ ಹೆಣೆಯಿತು. 
ಈ ತಂತ್ರದ  ಭಾಗವಾಗಿ ಅಟ್ಟೋಮನ್ ಟರ್ಕರ ಆಳ್ವಿಕೆಯ ವಿರುದ್ಧ ಅರಬ್ ಜನರನ್ನು ದಂಗೆಯೆಬ್ಬಿಸುವ ’ಅರಬ್ ಬಂಡಾಯ’ವನ್ನು ಬ್ರಿಟನ್ ಹುಟ್ಟುಹಾಕಿತು. ಮಕ್ಕಾದ ಅಮೀರನಾಗಿದ್ದ ಶರೀಫ್ ಹುಸೇನ್ ಬಿನ್ ಅಲಿ ಇದರ ನಾಯಕನಾದ. ಆಧುನಿಕ ಶಸ್ತ್ರಾಸ್ತ್ರಗಳನ್ನೂ ಒದಗಿಸುವ, ಗೆದ್ದ ನಂತರ ಅರಬ್ ಪ್ರದೇಶದ ಹಲವಾರು ಭೂಪ್ರದೇಶಗಳಿಗೆ ಅಧಿಪತಿ ಮಾಡುವ ಹಲವು ಆಮಿಷಗಳನ್ನು ಆತನಿಗೆ ಒಡ್ಡಲಾಯಿತು. ಬ್ರಿಟಿಷ್ ಹೈಕಮೀಷನರ್ ಮಕ್‌ಮಹೋನ್ ಮತ್ತು ಶರೀಫ್ ಹುಸೇನರ ನಡುವೆ ಒಪ್ಪಂದವೊಂದು ಏರ್ಪಟ್ಟಿತ್ತು. ಅಟ್ಟೋಮನ್ ಸಾಮ್ರಾಜ್ಯದ ವಿರುದ್ಧ ಬ್ರಿಟನ್ ಪ್ರೇರಿತ ’ಅರಬ್ ದಂಗೆಯ ಬಾವುಟ’ ಹಾರಿತು. ಬ್ರಿಟನ್ ಬೆಂಬಲಿತ ಶರೀಫನ ಸಶಸ್ತ್ರ ಗುಂಪುಗಳು ಎಲ್ಲೆಡೆ ದಾಳಿ ನಡೆಸುತ್ತ ಹೋದಂತೆ ಅಂತಿಮವಾಗಿ ಅಟ್ಟೊಮಾನ್ ಸಾಮ್ರಾಜ್ಯ ಕುಸಿಯಿತು. 
ಸೈಕ್-ಪಿಕಾಟ್ ರಹಸ್ಯ ಒಪ್ಪಂದ
ಈ ಬ್ರಿಟನ್ ಪ್ರೇರಿತ ಅರಬ್ ದಂಗೆಗೂ ಮುನ್ನ 1914-15ರ ಹೊತ್ತಿಗೆ ಮಹಾಯುದ್ಧ ನಡೆಯುವ ಸಂದರ್ಭದಲ್ಲಿಯೇ ಯುದ್ಧದ ಮುಂದಾಳುಗಳಾದ ಬ್ರಿಟನ್ ಮತ್ತು ಫ್ರಾನ್ಸ್‌ಗಳು ಒಂದು ರಹಸ್ಯ ಒಪ್ಪಂದ ಮಾಡಿಕೊಂಡುಬಿಟ್ಟಿದ್ದವು. ಇದು ಪ್ರಖ್ಯಾತ ಸೈಕ್-ಪಿಕಾಟ್ ಒಪ್ಪಂದ. ಬ್ರಿಟನ್‌ನ ಸರ್ ಮಾರ್ಕ್ ಸೈಕ್ಸ್ ಮತ್ತು ಫ್ರ್ರಾನ್ಸ್‌ನ ಕಾರ್ಯದರ್ಶಿ ಫ್ರಾಂಕಾಯಿಸ್ ಜಾರ್ಜಸ್ ಪಿಕಾಟ್ ಅಟ್ಟೊಮನ್ ಸಾಮ್ರಾಜ್ಯವನ್ನು ಲಯಗೊಳಿಸಿದ ನಂತರ ಅರಬ್ ಜಗತ್ತನ್ನು ಹೇಗೆ ಹಂಚಿಕೊಳ್ಳುವುದು ಎಂಬ ಕುರಿತು ಒಂದು ನೀಲನಕ್ಷೆ ತಯಾರಿಸಿದರು.  ಇದರ ಪ್ರಕಾರ ಇಂದಿನ ಇರಾಕ್, ಕುವೈತ್ ಮತ್ತು ಜೋರ್ಡಾನ್‌ಗಳು ಬ್ರಿಟಿಷರ ತೆಕ್ಕೆಗೂ ಇಂದಿನ ಸಿರಿಯಾ, ಲೆಬನಾನ್ ಮತ್ತು ದಕ್ಷಿಣದ ಟರ್ಕಿ ಫ್ರೆಂಚರ ತೆಕ್ಕೆಗೂ ಹೋಗುವುದು ಎಂದು ಗಡಿರೇಖೆಗಳನ್ನು ತೀರ್ಮಾನಿಸಿದರು. 1884ರಲ್ಲಿ ಯೂರೋಪಿನ ನಾಯಕರೆಲ್ಲ ಬರ್ಲಿನ್‌ನಲ್ಲಿ ಕುಳಿತುಕೊಂಡು ಆಫ್ರಿಕದ ಭೂಪಟವನ್ನು ಇಟ್ಟುಕೊಂಡು ಅಡ್ಡ ಉದ್ದ ಗೆರೆಗಳನ್ನು ಹಾಕಿ ಹೇಗೆ ಆಫ್ರಿಕವನ್ನು ಹಂಚಿಕೊಂಡಿದ್ದರೋ ಅದೇ ರೀತಿ ಬ್ರಿಟನ್ ಮತ್ತು ಫ್ರಾನ್ಸ್‌ಗಳು ಅಟ್ಟೊಮನ್ ಸಾಮ್ರಾಜ್ಯದ ಭೂಪ್ರದೇಶಗಳನ್ನು ಹಂಚಿಕೊಂಡವು. ಈ ರಹಸ್ಯ ಹಂಚಿಕೆಯನ್ನು ರಷ್ಯ 1917ರಲ್ಲಿ ಹೊರಗೆಡಹಿತ್ತು. ಇದನ್ನು ತಿಳಿದ ಅರಬ್ ಜನತೆ ಬ್ರಿಟನ್ ಮತ್ತು ಫ್ರಾನ್ಸ್‌ಗಳ ಒಂದಷ್ಟು ಅಸಮಧಾನ ಬೆಳೆಸಿಕೊಂಡರು. (ಈ ಸೈಕ್ - ಪಿಕಾಟ್ ಒಪ್ಪಂದದ ಗಡಿರೇಖೆಯನ್ನು ತಾನು ಅಳಿಸಿ ಹಾಕಿರುವುದಾಗಿ  ಮೊನ್ನೆ ISIS ಘೋಷಿಸಿದ್ದನ್ನು ಗಮನಿಸಬಹುದು) (ಅಟೋಮನ್ ಸಾಮ್ರಾಜ್ಯವನ್ನು ಇಲ್ಲವಾಗಿಸುವ ಪ್ರಯತ್ನದ ವಿರುದ್ಧ ಭಾರತದಲ್ಲಿಯೂ ಖಿಲಾಫತ್ ಚಳವಳಿ ನಡೆದು ಗಾಂಧೀಜಿಯವರ ಬೆಂಬಲದೊಂದಿಗೆ ಅದು ಬ್ರಿಟಿಷ್ ವಿರೋಧಿ ಸ್ವಾತಂತ್ರ್ಯ ಹೋರಾಟದ ಭಾಗವಾಗಿದ್ದುದನ್ನು ಸ್ಮರಿಸಬಹುದು.)  
ಪ್ಯಾಲೆಸ್ತೀನ್ ಮಾತ್ರ ಈ ಸೈಕ್-ಪಿಕಾಟ್ ಹಂಚಿಕೆ ಯೋಜನೆಯಲ್ಲಿ ಬರಲಿಲ್ಲ. 1800ರಿಂದ ಪ್ಯಾಲೆಸ್ತೀನಿನಲ್ಲಿ ಯಹೂದಿಯರ ಸಾಮ್ರಾಜ್ಯ ಸ್ಥಾಪಿಸಬೇಕು ಎಂಬ ಜಿಯೋನಿಸ್ಟ್ ಚಳವಳಿ ಕಾವು ಪಡೆದುಕೊಂಡಿತ್ತು. ಇದಕ್ಕೆ ಪೂರಕವಾಗಿ 1917ರಲ್ಲಿ ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿ ಅರ್ಥರ್ ಬಲ್‌ಫೋರ್ ಎಂಬಾತ ಯಹೂದಿ ರಾಜ್ಯ ಸ್ಥಾಪನೆಗೆ ಬ್ರಿಟನ್ ಸಮ್ಮಿತಿಸುತ್ತದೆ ಎಂದು ತಿಳಿಸುವ ಮೂಲಕ ಯಹೂದಿ ದೇಶವಾದ ಇಸ್ರೇಲ್ ಸ್ಥಾಪನೆಗೆ ಪಶ್ಚಿಮದ ಅಂಕಿತ ದೊರಕಿಸಿದ್ದ. ಹೀಗೆ ಟರ್ಕರ ಅಧಿಪತ್ಯದಲ್ಲಿದ್ದ ಅಟ್ಟೋಮನ್ ಸಾಮ್ರಾಜ್ಯ ಯುದ್ಧಾನಂತರದಲ್ಲಿ ಬ್ರಿಟಿಷ್, ಫ್ರೆಂಚ್ ಮತ್ತು ಜಿಯೋನಿಷ್ಟರ ನಡುವೆ ಹಂಚಿಕೆಯಾಗುವ ಹಂತಕ್ಕೆ ಬಂದಿತ್ತು. 
ಮೊದಲ ಮಹಾಯುದ್ಧಾನಂತರದಲ್ಲಿ ಹುಟ್ಟಿಕೊಂಡ ಲೀಗ್ ಆಫ್ ನೇಶನ್ಸ್ ಸಂಘಟನೆಯ ಹಲವು ಅಜೆಂಡಾಗಳಲ್ಲಿ ಅಟ್ಟೋಮನ್ ಸಾಮ್ರಾಜ್ಯವನ್ನು ಮರುವಿಂಗಡಿಸುವ ಕೆಲಸವೂ ಇತ್ತು. ಪರಿಣಾಮವಾಗಿಯೇ ಮಧ್ಯಪ್ರಾಚ್ಯ ದೇಶಗಳ ಗಡಿಗಳು ಹುಟ್ಟಿಕೊಂಡಿದ್ದು. ಸೈಕ್- ಪಿಕಾಟ್ ಒಪ್ಪಂದಕ್ಕೆ ಪೂರಕವಾಗಿ ಹೊಸದಾಗಿ ಸೃಷ್ಟಿಯಾದ ಅರಬ್ ದೇಶಗಳು ಒಂದು ಹಂತಕ್ಕೆ ಪ್ರಬಲಗೊಳ್ಳುವವರೆಗೂ ಬ್ರಿಟನ್ ಇಲ್ಲವೇ ಫ್ರಾನ್ಸಿನ ಹಿಡಿತದಲ್ಲಿರತಕ್ಕದ್ದು ಎಂದು ಲೀಗ್ ಆಫ್ ನೇಶನ್ಸ್ ತೀರ್ಪು ನೀಡಿತ್ತು. ಅರಬ್ ದೇಶಗಳ ಗಡಿಗಳನ್ನು ಅಲ್ಲಿನ ಜನರ ಸಂಸ್ಕೃತಿ, ಪರಂಪರೆ, ಜನಾಂಗೀಯ ಭಿನ್ನತೆ, ಭೂಗೋಳಿಕತೆ, ಧಾರ್ಮಿಕ ಗಡಿ ಯಾವೊಂದನ್ನೂ ಪರಿಗಣಿಸದೇ ಗೆರೆಗಳನ್ನು ಎಳೆದು ದೇಶಗಳನ್ನು ಸೃಷ್ಟಿಸಿದ ಪರಿಣಾಮವಾಗಿ ಕ್ರಮೇಣ ದೇಶಗಳ ಜನರ ನಡುವೆ, ಪ್ರಭುತ್ವಗಳ ಕಚ್ಚಾಟಗಳು ಹೆಚ್ಚಿದವು. ಇರಾಕಿಗಳಿಗಳಲ್ಲಿ, ಸಿರಿಯನ್ನರಲ್ಲ, ಜೋರ್ಡಾನಿಯನ್ನರಲ್ಲಿ ಅಂತಃಕಲಹಗಳಿಗೆ ಪ್ರಧಾನ ಕಾರಣವೇ ಈ ಕೃತಕ ವಿಭಜನೆ ಎಂಬುದನ್ನು ನಾವು ಮರೆಯುವಂತಿಲ್ಲ. 

ಕಚ್ಚಾತೈಲ ಸಂಪತ್ತಿನ ನಿಯಂತ್ರಣಕ್ಕಾಗಿ
ಮೊದಲ ಮಹಾಯುದ್ಧದ ನಂತರ ಬ್ರಿಟನ್ ಹಾಗೂ ಎರಡನೆಯ ಮಹಾಯುದ್ಧದ ನಂತರ ಅಮೆರಿಕಗಳು ಮಧ್ಯಪ್ರಾಚ್ಯದ ದೇಶಗಳ ಪ್ರಭುತ್ವದ ಮೇಲೆ ನಿಯಂತ್ರಣಕ್ಕಾಗಿ ಬಡಿದಾಡುತ್ತ ಬಂದ ಪ್ರಮುಖ ಕಾರಣವೆಂದರೆ ಈ ಭೂಪ್ರದೇಶಗಳಲ್ಲಿ ಅಪಾರವಾಗಿರುವ ತೈಲಸಂಪತ್ತು. ಕಲ್ಲಿದ್ದಲ ಜಾಗವನ್ನು ಕಚ್ಛಾತೈಲ ಆಕ್ರಮಿಸಿತ್ತು. ಕಚ್ಚಾತೈಲಸಂಪತ್ತಿನ ಮೇಲೆ ಯಾರು ನಿಯಂತ್ರಣ ಹೊಂದುತ್ತಾರೋ ಅವರು ಜಗತ್ತನ್ನು ಆಳುತ್ತಾರೆ ಎಂಬುದು ಅಲಿಖಿತ ನಿಯಮವಾಯಿತು. 20ನೇ ಶತಮಾನದ ಆದಿಯಲ್ಲಿ ತೈಲರಾಜಕೀಯ ಬಲವಾಗತೊಡಗಿದಾಗಿನಿಂದ ಎಲ್ಲಾ ಐರೋಪ್ಯ ಶಕ್ತಿಗಳು, ಅಮೆರಿಕ ಮತ್ತು ರಷ್ಯಗಳು ಮತ್ತೊಮ್ಮೆ ಮದ್ಯಪ್ರಾಚ್ಯ ದೇಶಗಳ ಮೇಲಿನ ಹಿಡಿತ ಮತ್ತು ಪ್ರಭಾವದ ವಿಷಯದಲ್ಲಿ ಜಿದ್ದಿಗೆ ಬಿದ್ದವು. ಎರಡನೇ ಮಹಾಯುದ್ಧದ ನಂತರವಂತೂ ಇಲ್ಲಿನ ಪ್ರಭುತ್ವಗಳನ್ನು ತಮ್ಮ ಅಣತಿಯಲ್ಲಿಡಲು ಹಾಗೂ ತನ್ನ ಮಾತು ಕೇಳದ ಪ್ರಭುತ್ವಗಳನ್ನು ಬುಡಮೇಲು ಮಾಡಲು ಅಮೆರಿಕ ಮತ್ತದರ ಬೇಹುಗಾರಿಕೆ ಸಂಸ್ಥೆಯಾದ CIA ನಡೆಸಿರುವ ಹುನ್ನಾರಗಳು ಒಂದಲ್ಲ ಎರಡಲ್ಲ. ಈ ಮಧ್ಯಪ್ರಾಚ್ಯ ದೇಶಗಳಲ್ಲಿ ಯಾರೆಲ್ಲ ಪಶ್ಚಿಮ ದೇಶಗಳ ಮಾತು ಕೇಳುತ್ತಾರೋ ಅವರನ್ನು ಆಡಳಿತ ನಡೆಸಲು ಬಿಡುವುದು, ಯಾರು ಅಣತಿಯನ್ನು ಪಾಲಿಸುವುದಿಲ್ಲವೋ ಅವರ ಮೇಲೆ ಮತ್ತೊಬ್ಬರನ್ನು ಎತ್ತಿಕಟ್ಟಿ ಹೊಡೆದಾಟಕ್ಕೆ (ಪ್ರಾಕ್ಸಿವಾರ್) ಹಚ್ಚುವುದು ಇಲ್ಲವೇ ಆ ದೇಶದ ನಾಯಕನನ್ನೇ ಇಲ್ಲವಾಗಿಸಿಬಿಡುವುದು, ಇಂತಹ ಹಲವು ಬುಡಮೇಲು ಕೃತ್ಯಗಳನ್ನು ಪ್ರಬಲ ಶಕ್ತಿಗಳು ಮಾಡಿಕೊಂಡು ಬಂದಿವೆ.
1970ರ ದಶಕದಲ್ಲಿ ಅಫ್ಘಾನಿಸ್ತಾನ ಸರ್ಕಾರದೊಂದಿಗೆ ಅತ್ಯಂತ ನಿಕಟ ಸಂಬಂಧ ಹೊಂದಿದ್ದು ಸೋವಿಯತ್ ರಷ್ಯ. ಅದು ಅಮೆರಿಕ ಮತ್ತು ಸೋವಿಯತ್ ಒಕ್ಕೂಟಗಳ ನಡುವೆ ಶೀತಲ ಸಮರ ತೀವ್ರವಾಗಿ ನಡೆಯುತ್ತಿದ್ದ ಸಂದರ್ಭ. ಕಮ್ಯುನಿಸ್ಟ್ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದ ಅಫ್ಘಾನಿಸ್ತಾನ ಸರ್ಕಾರದ ವಿರುದ್ಧ ಅಲ್ಲಲ್ಲಿ ದಂಗೆಗಳು ಆರಂಭವಾಗಿದ್ದವು. ಈ ದಂಗೆಗಳನ್ನು ಬಗ್ಗುಬಡಿಯಲು ಯಾವಾಗ ಸೋವಿಯತ್ ರಷ್ಯ ನೇರವಾಗಿ ತನ್ನ ಸೇನೆಯನ್ನು ರವಾನಿಸಿತ್ತೋ ಆಗ ಎಲ್ಲ ಮುಸ್ಲಿಂ ದೇಶಗಳ ಬೆಂಬಲ ಅಲ್ಲಿನ ಮುಜಾಹಿದೀನ್ ಮತ್ತು ತಾಲಿಬಾನ್‌ಗಳಿಗೆ ಸಿಕ್ಕಿತು. ಇದೇ ಅವಕಾಶವನ್ನು ಬಳಸಿಕೊಂಡು ಅಮೆರಿಕ ಈ ಮುಜಾಹಿದೀನ್ ಮತ್ತು ತಾಲಿಬಾನ್‌ಗಳಿಗೆ ಪಾಕಿಸ್ತಾನದ ಮೂಲಕ ಸಕಲ ಬೆಂಬಲವನ್ನೂ ಶಸ್ತ್ರಾಸ್ತ್ರಗಳನ್ನೂ ನೀಡಿ ರಷ್ಯದ ವಿರುದ್ಧದ ಹೋರಾಟಕ್ಕೆ ಮತ್ತಷ್ಟು ಕುಮ್ಮಕ್ಕು ನೀಡಿತು. ಹತ್ತುವರ್ಷಗಳ ಈ ಸಂಘರ್ಷದಲ್ಲಿ ಸಹಸ್ರಾರು ಜನರು ಬಲಿಯಾದರು. ಅಂತಿಮವಾಗಿ ಹತ್ತು ವರ್ಷಗಳ ಬಳಿಕ 1989ರಲ್ಲಿ ಸೋವಿಯತ್ ಹಿಂದೆ ಸರಿಯಿತು. ಆದರೆ ಇಷ್ಟರಲ್ಲಿ ಮಜಾಹಿದೀನ್ ಮತ್ತು ತಾಲಿಬಾನ್ ಬಲಿಷ್ಟಗೊಂಡಿದ್ದವು. ’ಜಿಹಾದ್’ನಲ್ಲಿ ಪಳಗಿದ್ದವು. ನಂತರ ತಾಲಿಬಾನ್ ತಾನೇ ಸರ್ಕಾರ ರಚಿಸಿ ಶರೀಯತ್ ಪ್ರಕಾರ ಸರ್ಕಾರ ನಡೆಸಿ ಅತ್ಯಂತ ಅಮಾನವೀಯವಾಗಿ ಆಳಿದ್ದನ್ನು ಕಂಡಿದ್ದೇವೆ. ಕೊನೆಗೆ ಈ ತಾಲಿಬಾನ್ ವಿರುದ್ಧ ಕಾರ್ಯಾಚರಣೆಗೆ ಅಮೆರಿಕವೇ ಮುಂದಾಗಿ ತನ್ನ ಸಹಸ್ರಾರು ಸೈನಿಕರನ್ನೂ, ಅಪಾರ ಹಣವನ್ನೂ ಕಳೆದುಕೊಂಡಿದ್ದನ್ನೂ ಕಂಡಿದ್ದೇವೆ.
 ಈ ಸಂದರ್ಭದಲ್ಲಿ ಮುಜಾಹಿದೀನ್ ಸಂಘಟನೆಯಲ್ಲಿ ಕ್ರಿಯಾಶೀಲನಾಗಿದ್ದವನು ಒಸಾಮ ಬಿನ್ ಲಾಡೆನ್. ಸೋವಿಯತ್‌ನ್ನು ಮಣಿಸಿದ ಹೀರೋ ಗೆಟಪ್ಪಿನಲ್ಲಿ ಸೌದಿ ಅರೇಬಿಯಕ್ಕೆ ವಾಪಾಸಾದ ಒಸಾಮ ಬಿನ್ ಲಾಡೆನ್‌ಗೆ ಭಾರೀ ಸ್ವಾಗತ ಲಭಿಸಿತ್ತು . ಇದೇ ಜೋಶ್‌ನಲ್ಲಿ ಅವನು ಇಸ್ಲಾಂ ಜಿಹಾದನ್ನು ವಿಸ್ತರಿಸುವ ಆಲ್‌ಖೈದಾವನ್ನು ಕಟ್ಟಿದ. ವಿಪರ್‍ಯಾಸವೆಂದರೆ ಅಮೆರಿಕದಿಂದ ಈ ಮೊದಲು ಸಕಲರೀತಿಯ ಬೆಂಬಲ ಪಡೆದಿದ್ದ ಒಸಾಮಾ ನಂತರ ಅದೇ ಅಮೆರಿಕದ ವಿರುದ್ಧ ಭಯೋತ್ಪಾದಕ ದಾಳಿಗಳನ್ನು ಯೋಜಿಸತೊಡಗಿದ್ದ. ಅಮೆರಿಕ ಪ್ಯಾಲೆಸ್ತೀನಿಯರ ನೆಲದಲ್ಲಿ ಸ್ಥಾಪನೆಗೆ ಕುಮ್ಮಕ್ಕು ನೀಡಿದ್ದು ಮತ್ತು ಇಸ್ರೇಲ್ ನಿರಂತರವಾಗಿ ಪ್ಯಾಲೆಸ್ತೀನಿಯರ ಮೇಲೆ ಆಕ್ರಮಣ ನಡೆಸುತ್ತಾ ಬಂದಿದ್ದು ಇದಕ್ಕೆ ಒಂದು ಕಾರಣವಾಗಿತ್ತು.  ಸೌದಿ ಸರ್ಕಾರ ಅಮೆರಿಕದ ಪರವಿದ್ದುದರಿಂದ ಅದರ ವಿರುದ್ಧ ಕೆಲಸ ಮಾಡಿ ಅಲ್ಲಿಂದ ಓಡಿಹೋಗಿ ಸೂಡಾನ್‌ನಲ್ಲಿ ತಲೆಮರೆಸಿಕೊಂಡಿದ್ದ ಲಾಡೆನ್ ತನ್ನ ಕಡೆಗಾಲದಲ್ಲಿ ಪಾಕಿಸ್ತಾನದಲ್ಲಿ ಅಡಗಿದ್ದ. 

ಅತ್ತ ಇರಾನಿನಲ್ಲಿ 70ರ ದಶಕದ ಕೊನೆಯ ಭಾಗದಲ್ಲಿ ಇರಾನ್‌ನ ಶಾ ಅಧಿಕಾರವನ್ನು ಬೀಳಿಸಿ ಶಿಯಾ ಪಂಥದ ಕಟ್ಟರ್‌ಪಂಥೀಯ ಕೊಮೇನಿ ಅಧಿಕಾರ ವಹಿಸಿಕೊಂಡಿದ್ದ . ಇರಾನ್‌ನೊಂದಿಗೆ ಯುದ್ಧ ನಡೆಸಿ ಅದು ತಿರುಗೇಟು ನೀಡಿದ ಬಳಿಕ ತಣ್ಣಗಾಗಿದ್ದ ಸದ್ದಾಂ ಹುಸೇನ್ ಮತ್ತೊಂದು ಪ್ರಮುಖ ತೈಲ ಉತ್ಪಾದಕ ರಾಷ್ಟ್ರವಾದ ಕುವೈತ್ ಮೇಲೆ 1990ರಲ್ಲಿ ದಾಳಿ ನಡೆಸಿದ. ಅಲ್ಲಿಯವರೆಗೆ ಇರಾನ್ ಮೇಲಿನ ಯುದ್ಧಕ್ಕೆ ಸದ್ದಾಂ ಹುಸೇನ್‌ಗೆ ಎಲ್ಲಾ ರೀತಿಯ ನೆರವನ್ನೂ ನೀಡಿ ಕುಮ್ಮಕ್ಕು ನೀಡಿ ಸದ್ದಾಂನನ್ನು ಕೊಂಡಾಡುತ್ತಿದ್ದ ಅಮೆರಿಕ ಮತ್ತು ಪಶ್ಚಿಮ ದೇಶಗಳು  ಈಗ ಉಲ್ಟಾಹೊಡೆದು ಸದ್ದಾಂನನ್ನು ಹದ್ದುಬಸ್ತಿನಲ್ಲಿಡಲು ಯತ್ನಿಸತೊಡಗಿದವು. 

 ಕುವೈತ್ ಮೇಲಿನ ಇರಾಕ್ ದಾಳಿಯನ್ನು ನೆಪವಾಗಿಸಿಕೊಂಡು ಅಮೆರಿಕ ಇರಾಕ್ ಮೇಲೆ ನಡೆಸಿದ ಭೀಕರ ದಾಳಿಯಲ್ಲಿ ಲಕ್ಷಾಂತರ ಇರಾಕಿಯನ್ನರು ಪ್ರಾಣ ಕಳೆದುಕೊಂಡರು. ಅಮೆರಿಕದ ಕ್ಷಿಪಣಿ ದಾಳಿಗಳಿಗೆ ಜನರು ಹುಳುಗಳಂತೆ ಬಲಿಯಾದರು. ಸದ್ದಾಂ ಅಡಗಿ ಪ್ರಾಣ ಉಳಿಸಿಕೊಂಡಿದ್ದ. ಅಮೆರಿಕಕ್ಕೆ ಮದ್ಯಪ್ರಾಚ್ಯದಲ್ಲಿ ತೈಲಸಂಪತ್ತಿನ ಮೇಲಿನ ನಿಯಂತ್ರಣಕ್ಕೆ ಅಡ್ಡಗಾಲು ಹಾಕುತ್ತಿದ್ದ ಸದ್ದಾಂನನ್ನು ಮಣಿಸುವ ನೆಪದಲ್ಲಿ ಅಮೆರಿಕ ಇರಾಕಿನ ಮೇಲೆ ವಿಧಿಸಿದ ಆರ್ಥಿಕ ದಿಗ್ಬಂಧನಗಳ ಪರಿಣಾಮವಾಗಿ ಔಷದಿ, ಆಹಾರಗಳಂತಹ ಮೂಲಸೌಕರ್ಯಗಳ ಕೊರತೆಯಿಂದಾಗಿ ಲಕ್ಷಗಟ್ಟಲೆ ಇರಾಕಿಯನ್ನರು ಪ್ರಾಣ ಕಳೆದುಕೊಂಡರು. ಅಮೆರಿಕ ಹಾಕಿದ ಬಾಂಬುಗಳು ಇರಾಕಿ ಜನರ ಬದುಕನ್ನು ನರಕಸದೃಶಗೊಳಿಸಿತ್ತು.  ಇದರ ನಂತರದಲ್ಲಿ ಯಾವ ತಾಲಿಬಾನ್ ಮತ್ತು ಆಲ್‌ಖೈದಾಗಳಿಗೆ ಅಮೆರಿಕ ಕುಮ್ಮಕ್ಕು ನೀಡಿತ್ತೋ ಅವೇ ಈಗ ಅಮೆರಿಕದ ವಿರುದ್ಧ ತಿರುಗಿ ಬಿದ್ದಿದ್ದವು. ಈ ಹೊತ್ತಿಗೆ ಸದ್ದಾಂ ಪ್ಯಾಲಿಸ್ತೀನಿಯರ ಪರವಾಗಿ ಇಸ್ರೇಲ್ ಮೇಲೆಯೂ ದಾಳಿ ಮಾಡಿದ್ದರಿಂದ ಮುಸ್ಲಿಂ ಸಮುದಾಯ ಸದ್ದಾಂ ಪರವಾಗಿ ಅನುಕಂಪ ಬೆಳೆಸಿಕೊಂಡಿತ್ತು.  ಸದ್ದಾಂ ಹುಸೇನ್ ಮತ್ತು ಇರಾಕ್ ಮೇಲೆ ನಡೆದ ಪಶ್ಚಿಮದ ದಾಳಿ ಇಸ್ಲಾಮಿನ ಮೇಲಿನ ದಾಳಿ ಎಂದು ಮುಸ್ಲಿಂ ಜಗತ್ತು ಭಾವಿಸಿದ್ದರಿಂದ ಸದ್ದಾಂ ಮತ್ತು ಇತರೆಲ್ಲ ಜಿಹಾದಿ ಪಡೆಗಳ ಕಾರ್ಯಚಟುವಟಿಕೆಗಳನ್ನು ಮುಸ್ಲಿಮರು ಬೆಂಬಲಿಸುವ ಮನಸ್ಥಿತಿ ರೂಪುಗೊಂಡಿತ್ತು. 

2001ರಲ್ಲಿ ಒಸಾಮ ಬಿನ್ ಲಾಡೆನ್‌ನ ಆಲ್‌ಖೈದಾ ನಡೆಸಿದ ಸೆಪ್ಟೆಂಬರ್ 11ರ WTC (ವಿಶ್ವ ವಾಣಿಜ್ಯ ಕೇಂದ್ರ)  ಮತ್ತು ಪೆಂಟಗನ್ ಮೇಲಿನ ಭೀಕರ ಹೆಲಿಕಾಪ್ಟರ್ ದಾಳಿಯ ನಂತರ ಅಮೆರಿಕ 'ಭಯೋತ್ಪಾದನೆಯ ವಿರುದ್ಧ ಸಮರ’ ಸಾರಿತು. ಇದೇ ನೆಪದಲ್ಲಿ ಇರಾಕ್‌ನ ತೈಲಸಂಪತ್ತಿನ ಮೇಲೆ ತನ್ನ ಒಡೆತನಕ್ಕೆ ತಡೆಯಾಗಿದ್ದ ಸದ್ದಾಂ ಹುಸೇನನ್ನು ಬೇಟೆಯಾಡಲು ನಿರ್ಧರಿಸಿ ಅಮೆರಿಕ 2003ರಲ್ಲಿ  ಸಾವಿರಾರು ಸಂಖ್ಯೆಯಲ್ಲಿ ತನ್ನ ಸೈನಿಕರನ್ನು ಮತ್ತು ಯುದ್ಧವಿಮಾನಗಳನ್ನು, ಇರಾಕ್ ನೆಲಕ್ಕಿಳಿಸಿ, ಕ್ಷಿಪಣಿ ದಾಳಿ ನಡೆಸಿ ಮತ್ತೊಂದು ಸುತ್ತಿನ ನರಮೇಧವನ್ನೇ ನಡೆಸಿತು. ನಂತರ 2006ರ  ಡಿಸೆಂಬರ್‌ನಲ್ಲಿ ಸದ್ದಾಂ ಹುಸೇನನನ್ನು ಅಡಗುತಾಣದಿಂದ ಎಳೆತಂದು ಮರಣ ದಂಡನೆ ವಿಧಿಸಿ ತನ್ನ ಮಾತು ಮೀರದ ನೌರಿ ಅಲ್-ಮಲೀಕಿಯನ್ನು ಕೂರಿಸಿ ’ಪ್ರಜಾಪ್ರಭುತ್ವ’ವನ್ನು ಸ್ಥಾಪಿಸಿತ್ತು. 2003ರಲ್ಲಿ ಅಮೆರಿಕ ನೇರವಾಗಿ ಇರಾಕಿನಲ್ಲಿ ಪ್ರವೇಶ ಮಾಡಿದ ನಂತರ ಅದು ಇರಾಕಿಗಳಲ್ಲಿರುವ ಶಿಯಾಗಳನ್ನು ಸುನ್ನಿಗಳ ವಿರುದ್ಧ ಎತ್ತಿ ಕಟ್ಟತೊಡಗಿತು.  ಸುನ್ನಿಯಾಗಿದ್ದುಕೊಂಡೂ ಇರಾಕಿನ ಬಹುಸಂಖ್ಯಾತರ ಬೆಂಬಲ ಪಡೆದಿದ್ದ ಸದ್ದಾಂ ಹುಸೇನ್ ವಿರುದ್ಧ ಶಿಯಾಗಳನ್ನು ಮೊದಲು ಎತ್ತಿಕಟ್ಟಿ ನಂತರ ಶಿಯಾ ನೌರಿ ಮಲಿಕಿಯನ್ನು ಅಧಿಕಾರಕ್ಕೇರಿಸಿದರು. ಇಷ್ಟರಲ್ಲಿಯೇ ಶಿಯಾ-ಸುನ್ನಿ ಹಿಂಸಾತ್ಮಕ ಸಂಘರ್ಷ ತಾರಕಕ್ಕೇರಿತು.       
ಅಮೆರಿಕ ಇರಾಕಿನಲ್ಲಿ ಯುದ್ಧ ನಡೆಸುತ್ತಿದ್ದ ಸಂದರ್ಭದಲ್ಲಿ ಇರಾಕಿನಲ್ಲಿ ಅಮೆರಿಕದ ಪಡೆಗಳ ವಿರುದ್ಧ ಇರಾಕಿ ಜನರು ಸಂಘರ್ಷ ನಡೆಸುತ್ತಿದ್ದಾಗ ಸ್ಥಳೀಯ ಸುನ್ನಿ ಮುಸ್ಲಿಂ ಸಮುದಾಯವೊಂದರ ಧಾರ್ಮಿಕ ಮುಖಂಡವಾಗಿದ್ದವನು ಅಬು ಬಕ್ರಲ್- ಬಾಗ್ದಾದಿ. ಆಗ ಅಮೆರಿಕದ ದಾಳಿಯನ್ನು ತಮ್ಮ ಧರ್ಮದ ಮೇಲಿನ ದಾಳಿ ಎಂದು ಬಗೆದ ಅನೇಕ ಮುಸ್ಲಿಮ್ ಯುವಕರು ಜಿಹಾದ್‌ನಲ್ಲಿ ಪಾಲ್ಗೊಳ್ಳುತ್ತಿದ್ದರು. ಹೀಗೆ ಇರಾಕಿನಲ್ಲಿ ಆಲ್‌ಖೈದಾ ಇನ್ ಇರಾಕ್ ಎಂಬ ಪಡೆಯನ್ನು ಕಟ್ಟಿದ ಝರ್ಖಾವಿಯ ಪಡೆಯಲ್ಲಿ ಈ ಬಾಗ್ದಾದಿ ಸೇರಿಕೊಂಡು 2006ರಲ್ಲಿ ಅಮೆರಿಕದ ಪಡೆಗಳ ಕೈಗೆ ಸೆರೆಸಿಕ್ಕಿ ಕ್ಯಾಂಪ್ ಬಕ್ಕಾದಲ್ಲಿ ಬಂಧಿಸಿಡಲ್ಪಟ್ಟಿದ್ದ. ಅಲ್ಲಿ ಅವನು ಅನುಭವಿಸಿದ ಚಿತ್ರಹಿಂಸೆ ಮತ್ತು ಜೊತೆಗಿದ್ದ ಜಿಹಾದಿ ಕಾರ್ಯಕರ್ತರ ಸಂಪರ್ಕವೇ ಮುಂದೆ ಬಾಗ್ದಾದಿಯನ್ನು ದೊಡ್ಡ ಜಿಹಾದಿ ನಾಯಕನನ್ನಾಗಿ ಮಾಡಿತು. ಜೈಲಿನಿಂದ ಹೊರಬಿದ್ದೊಡನೆ ಬಾಗ್ದಾದಿ ಆಲ್‌ಖೈದಾದಿಂದ ಹೊರಬಂದು ಜಿಹಾದ್ ಆರಂಭಿಸಿದ್ದ ಹೊಸ ಪಡೆ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್‌ನಲ್ಲಿ (ISI) ಸೇರಿಕೊಂಡ. 

ಸಿರಿಯಾ ದಂಗೆಯ ಪರಿಣಾಮ
2011ರ ಮೇ ತಿಂಗಳಲ್ಲಿ ಪಾಕಿಸ್ತಾನದಲ್ಲಿ ಆಲ್‌ಖೈದಾದ ನಾಯಕ ಒಸಾಮ ಬಿನ್ ಲಾಡೆನ್‌ನನ್ನು ಅಮೆರಿಕ ಭೇಟೆಯಾಡಿತ್ತು. ಆಲ್ ಖೈದಾದ ನಾಯಕತ್ವವನ್ನು ಜವಾರ್‌ಹಿರಿ ಎಂಬಾತ ವಹಿಸಿಕೊಂಡಿದ್ದ. ಈ ಹೊತ್ತಿಗೆ 2011ರಲ್ಲಿ ಅರಬ್ ರಾಷ್ಟ್ರಗಳಲ್ಲಿ ಸರ್ವಾಧಿಕಾರಿ ಪ್ರಭುತ್ವಗಳ ವಿರುದ್ಧ ದಂಗೆಯೆದ್ದಿತು. ಟ್ಯುನಿಷಿಯಾದಲ್ಲಿ ಮೊದಲಿಗೆ ಶುರುವಾದ ಇದನ್ನು ಅರಬ್ ಸ್ಪ್ರಿಂಗ್ ಅಥವಾ ಅರಬ್ ಕಾರಂಜಿ ಎನ್ನಲಾಗುತ್ತದೆ. ಈಜಿಪ್ಟಿಗೂ ಈ ಚಳವಳಿ ಹಬ್ಬಿ ರೋಸಿ ಹೋಗಿದ್ದ ಜನತೆಯ ನಿರ್ಣಾಯಕ ಹೋರಾಟದಲ್ಲಿ ಈಜಿಪ್ಟಿನ ಹೊಸ್ನಿ ಮುಬಾರಕ್ ಪದಚ್ಯುತಗೊಂಡ. ನಂತರ ಅದೇ ವರ್ಷದ ಮಾರ್ಚ್ ತಿಂಗಳಲ್ಲಿ ಸಿರಿಯಾದಲ್ಲಿ ನಾಲ್ಕು ದಶಕಗಳಿಂದ ಅಧಿಕಾರ ನಡೆಸುತ್ತಿತುವ ಬ ಆಥ್ ಪಕ್ಷದ ಸರ್ವಾಧಿಕಾರಿ ಅದ್ಯಕ್ಷ ಬಷರ್ ಅಲ್ ಅಸ್ಸಾದ್‌ನ ರಾಜೀನಾಮೆಗೆ ಆಗ್ರಹಿಸಿ ಹೋರಾಟಗಳು ಆರಂಭಗೊಂಡವು. ಆದರೆ ಸಿರಿಯಾದ ದಂಗೆ ಮತ್ತು ಪ್ರತಿದಂಗೆಗಳು ಈಜಿಪ್ಟಿನಷ್ಟು ಸುಲಭವಾಗಲಿಲ್ಲ. ಅಸ್ಸಾದ್ ವಿರುದ್ಧದ ದಂಗೆಗೆ ಅಮೆರಿಕ ಮತ್ತು ಪಶ್ಚಿಮ ದೇಶಗಳೂ ಕುಮ್ಮಕ್ಕು ನೀಡಿದವು. ಇದಕ್ಕೆ ಬೇರೊಂದು ಕಾರಣವಿತ್ತು. 
ಇರಾಕ್‌ನಲ್ಲಿ ಕೈಗೊಂಬೆ ಸರ್ಕಾರವನ್ನು ಸ್ಥಾಪಿಸಿದ ನಂತರ ಅಮೆರಿಕ ಗುರಿಪಡಿಸಿಕೊಂಡಿದ್ದು ನೆರೆಯ ಇರಾನನ್ನು. ಇರಾನಿನಲ್ಲಿ ಸಮೂಹವಿನಾಶಿ ಆಯುಧಗಳಿವೆ ಎಂಬ ನೆಪವೊಡ್ಡಿ ಇರಾನ್ ಮೇಲೆ ಇನ್ನೇನು ಅಮೆರಿಕ ದಾಳಿ ನಡೆಸುತ್ತದೆ ಎನ್ನುವ ಹೊತ್ತಿಗೆ ಸಿರಿಯಾದಲ್ಲಿ ಬೆಂಕಿ ಬಿದ್ದಿತ್ತು. ಸಿರಿಯಾ ಪ್ರಬಲ ದೇಶವಲ್ಲದಿದ್ದರೂ ಮೊದಲಿನಿಂದಲೂ ಇರಾನ್ ಜೊತೆಗಿದ್ದು ಅಮೆರಿಕಕ್ಕೆ ಸೊಪ್ಪು ಹಾಕಿರಲಿಲ್ಲ. ಹೀಗಾಗಿ ಅಮೆರಿಕವು ಸಿರಿಯಾದಲ್ಲಿ ಪ್ರಭುತ್ವ ವಿರೋಧಿ ದಂಗೆಗಳಿಗೆ ಎಲ್ಲ ಬಗೆಯ ಬೆಂಬಲವೊದಗಿಸಿತು. ಸಿರಿಯಾವನ್ನು ಬಗ್ಗು ಬಡಿದರೆ ಇರಾನನ್ನು ಮಣಿಸುವುದು ಸುಲಭ ಎಂಬುದು ಅಮೆರಿಕದ ಲೆಕ್ಕಾಚಾರವಾಗಿತ್ತು. 
ಈ ಹೊತ್ತಿಗೆ ಅರಬ್ ಜಗತ್ತಿನಲ್ಲಿ ನಡೆಯುತ್ತಿರುವ ಮತ್ತೊಂದು ವಿದ್ಯಮಾನ ಸುನ್ನಿ-ಶಿಯಾ ಸಂಘರ್ಷ. ಇದಕ್ಕೆ ಬಹುಕಾಲದ ಚರಿತ್ರೆಯಿದ್ದರೂ ಇದು ಆಧುನಿಕ ಪ್ರಸಕ್ತ ಸಂದರ್ಭದಲ್ಲಿ ರಾಜಕೀಯ-ಆರ್ಥಿಕ ಆಯಾಮವನ್ನೂ ಪಡೆದಿದೆ. ಸಂಖ್ಯೆಯಲ್ಲಿ ಬಹುತೇಕರು ಸುನ್ನಿ ಮುಸ್ಲಿಮರಾದರೂ ರಾಜಕೀಯ ಹಿಡಿದ ಮತ್ತು ಕಚ್ಚಾತೈಲದ ಮೇಲೆ ಗಮಮಾರ್ಹ ನಿಯಂತ್ರಣ ಹೊಂದಿರುವುದು ಶಿಯಾ ನೇತೃತ್ವದ ಸರ್ಕಾರಗಳು. ಸದ್ದಾಂ ನಂತರದಲ್ಲಿ ಇರಾಕ್ ಅಧ್ಯಕ್ಷನಾದ ನೌರಿ ಮಲೀಕಿ ಒಮ್ಮೆ ತನ್ನದೇ ಪಂಗಡದ ಶಿಯಾಗಳ ವಿರೋಧ ಕಟ್ಟಿಕೊಂಡರೆ ನಂತರ ಸುನ್ನಿಗಳ ದ್ವೇಷವನ್ನೂ ಕಟ್ಟಿಕೊಂಡಿದ್ದ. ಇರಾನಿನಲ್ಲಿರುವುದು ಶಿಯಾ ಸರ್ಕಾರ. ಹಾಗೆಯೇ ಸಿರಿಯಾ ಮತ್ತು ಲೆಬನಾನ್‌ನಲ್ಲಿರುವುದೂ ಶಿಯಾ ಸರ್ಕಾರಗಳು. ಸಿರಿಯಾದಲ್ಲಿ ಬಸ್ಸಾದ್ ವಿರುದ್ಧ ದಂಗೆಯಲ್ಲಿ ಪ್ರಮುಖ ಪಾತ್ರ ಸುನ್ನಿ ಪಂಗಡಗಳದ್ದು. ಈ ಹೊತ್ತಿಗೆ ಇರಾಕ್‌ನಲ್ಲಿ ಜಿಹಾದ್ ನಡೆಸುತ್ತಿದ್ದ ಅಲ್- ಬಾಗ್ದಾದಿಯ ನೇತೃತ್ವದ ಪಡೆ ಸಿರಿಯಾಕ್ಕೂ ಅಲ್ಲಿನ ಮೂಲಭೂತವಾದಿ ಉಗ್ರ ಸಂಘಟನೆ ನುಸ್ರಾ ಫ್ರಂಟ್‌ನೊಂದಿಗೆ ಸಖ್ಯ ಬೆಳೆಸಿಕೊಂಡು ಸಿರಿಯಾಕ್ಕೆ ಪ್ರವೇಶ ಪಡೆದು ಅದೇ ಕ್ರಮೇಣ ISIS ಆಯಿತು. ಆಲ್‌ಖೈದಾ ನಾಯಕ ಅಲ್-ಜವಾರ್‌ಹಿರಿಗೆ ಇದು ಇಷ್ಟವಾಗಿರಲಿಲ್ಲ. ತನ್ನನ್ನೂ ಮೀರಿ ಹೋಗುತ್ತಿರುವ ಅಲ್- ಬಾಗ್ದಾದಿಯ ನಡೆಯನ್ನು ಆಲ್‌ಖೈದಾ ಖಂಡಿಸಿತು. ಆದರೆ ಬಾಗ್ದಾದಿ ಜವಾರ್‌ಹಿರಿಗೆ ತಿರುಗೇಟು ನೀಡಿ ಆಲ್‌ಖೈದಾ ಇಸ್ಲಾಂ ರಾಜ್ಯ ಸ್ಥಾಪಿಸುವ ಸಾಮರ್ಥ್ಯ ಕಳೆದುಕೊಂಡಿದೆ ಎಂದುಬಿಟ್ಟ.
  
ಅಮೆರಿಕವು ಅಸ್ಸಾದ್ ಕೂಡಲೇ ಕೆಳಕ್ಕಿಳಿಯಬೇಕೆಂದು ತಾಕೀತು ಮಾಡಿ ಸಿರಿಯಾದ ಮೇಲೆ ಹಲವು ರೀತಿಯ ದಿಗ್ಭಂಧನ ವಿಧಿಸಿತು. ಡಮಾಸ್ಕಸ್‌ನಲ್ಲಿದ್ದ ತನ್ನ ರಾಯಭಾರ ಕಛೇರಿಗೆ ಬೀಗ ಜಡಿಯಿತು. ಸಿರಿಯಾದ ತೈಲ ಆಮದನ್ನು ನಿಲ್ಲಿಸಿತು. ಹೆಚ್ಚಾಗಿ ಅಸಾದ್ ವಿರೋಧಿ ತೀವ್ರಗಾಮಿ ಗುಂಪುಗಳಾದ ನುಸ್ರಾಫ್ರಂಟ್‌ನಂತಹ ಗುಂಪುಗಳಿಗೆ ಸೈನಿಕವಾಗಿ ಸಹಾಯಹಸ್ತ ಚಾಚತೊಡಗಿತು. ಯೂರೋಪ್ ಒಕ್ಕೂಟವೂ ಅಮೆರಿಕವನ್ನು ಅನುಸರಿಸಿತು. ಇಷ್ಟಾದ ಮೇಲೆ ಇಡೀ ದಂಗೆಗೆ ಅಂತರರಾಷ್ಟ್ರೀಯ ಆಯಾಮ ಬಂದುಬಿಟ್ಟಿತು. ಅತ್ತ ಇರಾನ್ ಸಿರಿಯಾದ ಬೆಂಬಲಕ್ಕೆ ನಿಂತಿತಲ್ಲದೆ ವಿಶ್ವಸಂಸ್ಥೆಯ ಮಟ್ಟದಲ್ಲಿ ಸಿರಿಯಾದ ಪರವಾಗಿ ರಷ್ಯಾ ಮತ್ತು ಚೀನಾ ವಿಟೋ ಚಲಾಯಿಸಿ ಪಶ್ಚಿಮದ ಶಕ್ತಿಗಳ ಹಿತಕ್ಕೆ ವಿರುದ್ಧವಾಗಿ ನಿಂತವು. ಸಿರಿಯಾದಲ್ಲಿ ದಂಗೆಯನ್ನು ಹತ್ತಿಕ್ಕಲು ಲೆಬನಾನ್‌ನ ಹೆಜ್ಬೊಲ್ಲಾ ಶಿಯಾ ಸಂಘಟನೆ ಅಧ್ಯಕ್ಷ ಅಸ್ಸಾದ್ ಬೆಂಬಲಕ್ಕೆ ನಿಂತಿತು. ಪರಿಣಾಮವಾಗಿ ಸಿರಿಯಾದಲ್ಲಿ ದಿನನಿತ್ಯ ರಕ್ತದೋಕುಳಿ ಹರಿಯಿತು.
ಎರಡೇ ವರ್ಷದಲ್ಲಿ ಏನಿಲ್ಲವೆಂದರೂ ಒಂದು ಲಕ್ಷ ಜನರು ಈ ಕಲಹದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವಿಶ್ವಸಂಸ್ಥೆ ವರದಿ ನೀಡಿದೆ. ಆಡಳಿತದ ವಿರೋಧಿ ಗುಂಪುಗಳು ಮತ್ತು ಆಡಳಿತದ ಪರವಿರುವ ಗುಂಪುಗಳು ಪರಸ್ಪರ ಬಂದೂಕು, ಫಿರಂಗಿ, ಬಾಂಬುಗಳ ಮೂಲಕ ದಾಳಿ ನಡೆಸುತ್ತಿದ್ದಾರೆ. ಒಂದೇ ದೇಶದ ನಾಗರೀಕರು ಹೊಡೆಬಡಿದುಕೊಂಡು ಹುಳುಗಳಂತೆ ಸತ್ತಿದ್ದಾರೆ. ಇಡೀ ದೇಶದ ಆರೋಗ್ಯ ವ್ಯವಸ್ಥೆ, ಶಿಕ್ಷಣ ವ್ಯವಸ್ಥೆಗಳು ಕುಸಿದು ಬಿದ್ದಿವೆ. ಅಧಿಕೃತ ಅಂಕಿ ಅಂಶಗಳ ಪ್ರಕಾರ ಈ ಎರಡು ವರ್ಷಗಳಲ್ಲಿ ಸಿರಿಯಾದಲ್ಲಿ 67 ಲಕ್ಷ ಜನರು ಹೊಸದಾಗಿ ಬಡತನಕ್ಕೆ ತಳ್ಳಲ್ಪಟ್ಟಿದ್ದಾರೆ. ಮಾನವ ಅಭಿವೃದ್ಧಿ ಸೂಚ್ಯಂಕವು 35 ವರ್ಷಗಳಷ್ಟು ಹಿಂದಕ್ಕೆ ಕುಸಿದಿದೆ. 23 ಲಕ್ಷ ಉದ್ಯೋಗಗಳು ನಷ್ಟವಾಗಿವೆ. ಇದು ನಿರುದ್ಯೋಗ ಮಟ್ಟವನ್ನು ಶೇಕಡಾ 48.8ಕ್ಕೆ ಹೆಚ್ಚಿಸಿದೆ! ಇನ್ನು ಸಿರಿಯಾದ ಹಣದುಬ್ಬರವಂತೂ ಕೇಳಿದರೇ ಎದೆ ನಡುಗುತ್ತದೆ. ಶೇಕಡಾ 84.4! ಸಿರಿಯಾದ ಪೌಂಡ್ ಅಮೆರಿಕದ ಡಾಲರಿನೆದುರು ಶೇಕಡಾ 300ರಷ್ಟು ಕುಸಿದಿದೆ ಎಂದರೆ ಅಲ್ಲಿನ ಆರ್ಥಿಕ ಪರಿಸ್ಥಿತಿಯನ್ನು ಊಹಿಸಬಹುದು. ಅಮೆರಿಕ, ಯೂರೋಪ್ ಒಕ್ಕೂಟ, ಫ್ರಾನ್ಸ್ ಮತ್ತಿತರ ದೇಶಗಳು ಪದೇಪದೇ ಹೇರಿರುವ ಆರ್ಥಿಕ ದಿಗ್ಭಂಧನದಿಂದಾಗ ಸಿರಿಯಾವು ಅನೇಕ ಜೀವನಾವಶ್ಯಕ ವಸ್ತುಗಳನ್ನು ಆಮದು ಮಾಡಿಕೊಳ್ಳಲಾಗದಂತಾಗಿದೆ. ಕನಿಷ್ಠ ಮಟ್ಟದ ಔಷಧ ಮಾತ್ರೆಗಳು ದೊರೆಯುವುದೂ ದುಸ್ತರವಾಗಿದೆ. ದೇಶದ ಜಿಡಿಪಿ 2011ರಲ್ಲಿ ಶೇ.3.9 ರಷ್ಟು ಕುಸಿದಿದ್ದರೆ 2012ರಲ್ಲಿ ಶೇ.28.9ರಷ್ಟು ಕುಸಿದಿತ್ತು. ಕೈಗಾರಿಕೆಗಳೆಲ್ಲ ಕುಸಿದುಬಿದ್ದು ಸಿರಿಯಾ ಅಪಕೈಗಾರಿಕೀಕರಣದ ಹಾದಿ ಹಿಡಿದಿದೆ.
ಹೀಗೆ ಭೀಕರ ಪರಿಣಾಮಗಳನ್ನು ಬೀರುತ್ತಿರುವ ಸಿರಿಯಾದ ಅಂತಹಕಲಹದಲ್ಲಿ ಮೊದಲಿಗೆ ಅಮೆರಿಕದ ಬೆಂಬಲವನ್ನೂ ಪಡೆದುಕೊಂಡ ISIS ಮಾತ್ರ ಬಲಗೊಳ್ಳುತ್ತಲೇ ಹೋಗಿ ತನ್ನ ಜಿಹಾದನ್ನು 2014ರ ಜನವರಿಯಿಂದ ಇರಾಕಿನತ್ತ ತಿರುಗಿಸಿತ್ತು. ಮೊದಲಿಗೆ ನುಸ್ರಾಫ್ರಂಟ್‌ನೊಂದಿಗೆ ಸೇರಿ ಬಸ್ಸಾದ್ ವಿರುದ್ಧ ಹಿಂಸೆಯಲ್ಲಿ ತೊಡಗಿದ್ದ ಅದು ಕ್ರಮೇಣ ಸಿರಿಯಾದ ಕೆಲವು ಪ್ರದೇಶಗಳನ್ನು ವಶಪಡಿಸಿಕೊಂಡಿತ್ತು. ಸಾಕಷ್ಟು ಸಂಖ್ಯೆಯ ಹತಾರಗಳನ್ನು ಹಾಗೂ ಸೇನಾಶಕ್ತಿಯನ್ನು ಒಗ್ಗೂಡಿಸಿಕೊಂಡು ಇರಾಕ್‌ನ ಪ್ರಮುಖ ನಗರಗಳ ಮೇಲೆ 2014ರ ಜೂನ್ ತಿಂಗಳಲ್ಲಿ ದಾಳಿ ನಡೆಸಿತು. 
ಇದೀಗ ಅಮೆರಿಕ ಮತ್ತು ಪಶ್ಚಿಮದ ದೇಶಗಳು ಈಗ ಬೊಬ್ಬೆ ಹೊಡೆದುಕೊಳ್ಳತೊಡಗಿವೆ. ಸಿರಿಯಾದಲ್ಲಿ ತಾವೇ ಕುಮ್ಮಕ್ಕು ನೀಡಿದ ISIS ಈಗ ಮದ್ಯಪ್ರಾಚ್ಯದಲ್ಲಿ ತಮ್ಮ ಹಿತಾಸಕ್ತಿಗಳಿಗೇ ಮಾರಕವಾಗಿ ಪರಿಣಮಿಸುವ ಸಾಧ್ಯತೆಗಳನ್ನು ಕಂಡು ಆತಂಕಗೊಂಡಿವೆ. ISISನ್ನು ಇರಾಕ್ ಮತ್ತು ಇರಾನ್‌ಗಳು ಹಿಮ್ಮೆಟ್ಟಿಸಲು ಸಜ್ಜಾಗುತ್ತಿರುವಂತೆ ಇವುಗಳಿಗೆ ತಾನೂ ಬೆಂಬಲ ನೀಡುವುದಾಗಿ ಅಮೆರಿಕ ತಿಳಿಸಿದೆ. ಆದರೆ ಇರಾಕ್ ಮತ್ತು ಅಫ್ಘಾನಿಸ್ತಾನ ಯುದ್ಧಗಳಲ್ಲಿ ಲಕ್ಷಾಂತರ ಡಾಲರುಗಳನ್ನು, ಸಾವಿರಾರು ಸೈನಿಕರನ್ನು ಕಳೆದುಕೊಂಡು ಬಸವಳಿದಿರುವ ಅಮೆರಿಕ ಈಗ ಉಲ್ಬಣಿಸಿರುವ ಅಂತಹಕಲಹದಲ್ಲಿ ನೇರವಾಗಿ ಕಾಲಿರಿಸಲು ಹಿಂದೇಟು ಹಾಕತೊಡಗಿದೆ. ಅಮೆರಿಕದ ಜನತೆ ಸಹ ಯುದ್ಧಗಳಲ್ಲಿ ಅಮೆರಿಕ ಭಾಗವಹಿಸದಂತೆ ಒತ್ತಡ ಹೇರುತ್ತಿದ್ದಾರೆ. ಎರಡನೇ ಮಹಾಯುದ್ಧದ ನಂತರ ಮೊಟ್ಟಮೊದಲಿಗೆ ಈಗ ಅಮೆರಿಕದ ಯುದ್ಧ ನೀತಿಯಲ್ಲಿ ಬದಲಾವಣೆ ಕಾಣುತ್ತಿದೆ. ಈ ಅವಕಾಶವನ್ನು ಬಳಸಿಕೊಂಡ ರಷ್ಯಾ ಇರಾಕ್‌ಗೆ ಯುದ್ಧ ವಿಮಾನಗಳನ್ನು ನೀಡಿದೆ. ಅತ್ತ ಯುಕ್ರೇನಿನಲ್ಲಿಯೂ ಕ್ರಿಮಿಯಾವನ್ನು ನೆವವಾಗಿಸಿಕೊಂಡು ರಷ್ಯ ಮತ್ತು ಪಶ್ಚಿಮದ ದೇಶಗಳ ನಡುವೆ ಉಲ್ಬಣಿಸಿರುವ ಸಂಘರ್ಷಗಳು ಶೀತಲ ಸಮರವನ್ನು ನೆನಪಿಸುತ್ತಿವೆ.  ರಷ್ಯಾ ಈಗ ಜಿ8 ದೇಶಗಳ ಗುಂಪಿನಿಂದಲೇ ಹೊರಗುಳಿಯಬೇಕಾಗಿ ಬಂದಿದೆ.
ಈಗ ಸಿರಿಯಾದಿಂದ ಇರಾಕ್‌ವರೆಗಿನ ಗಡಿಭಾಗಗಳನ್ನು ಅಮಾನ್ಯಗೊಳಿಸಿ ಕ್ಯಾಲಿಫೇಟ್‌ನ್ನು ಸ್ಥಾಪಿಸಿರುವುದಾಗಿ ಘೋಷಿಸಿರುವ ISISನ ಬೆಳವಣಿಗೆ ಯಾವ ಅರಬ್ ದೇಶಗಳಿಗೂ ಬೇಡವಾಗಿದೆ. ಒಂದೊಮ್ಮೆ ಅಲ್- ಬಾಗ್ದಾದಿಯ ಪಡೆಗಳು ಬಾಗ್ದಾದನ್ನು ವಶಪಡಿಸಿಕೊಳ್ಳಲು ಯಶಸ್ವಿಯಾದರೆ ಅವು ತಮ್ಮ ಖಿಲಾಫತ್/ಕ್ಯಾಲಿಫೇಟ್ ವಿಸ್ತರಣೆಯ ಭಾಗವಾಗಿ ದೋಹಾ (ಕತಾರ್), ರಿಯಾದ್ (ಸೌದಿ ಅರೇಬಿಯಾ), ಮತ್ತು ಅಮ್ಮಾನ್ (ಜೋರ್ಡಾನ್)ಗಳನ್ನೂ ವಶಪಡಿಸಿಕೊಳ್ಳಲಾರವು ಎನ್ನುವಂತಿಲ್ಲ. 
ಈ ಕಾರಣದಿಂದ ಮುಂದಿನ ದಿನಗಳಲ್ಲಿ ISIS ವಿರುದ್ಧ ಎಲ್ಲಾ ಶಿಯಾ ಪ್ರಭುತ್ವಗಳು ಹಾಗೂ ಪಶ್ಚಿಮದ ಪರವಿರುವ ಸುನ್ನಿ ಸರ್ಕಾರಗಳೂ ತಮ್ಮದೇ ಹಿತಾಸಕ್ತಿಯಿಂದ ಮುನ್ನುಗ್ಗಬಹುದು. ಈಗ ಇದುವರೆಗೆ ಅಮೆರಿಕ ಮತ್ತು ಪಶ್ಚಿಮ ದೇಶಗಳು ವಿರೋಧಿಸುತ್ತ ಬಂದಿರುವ ಸಿರಿಯಾ, ಇರಾನ್, ಕತಾರ್, ಜೋರ್ಡಾನ್, ಲೆಬನಾನ್ ಎಲ್ಲ ದೇಶಗಳ ಪ್ರಭುತ್ವಗಳೂ ಹಾಗೂ ಸೌದಿ ಅರೇಬಿಯಾ ಮತ್ತು ಈಜಿಪ್ಟಿನ ಪ್ರಭುತ್ವಗಳೂ ಇರಾಕ್‌ಗೆ ಜೊತೆಗೂಡಿ ನಿಲ್ಲಬೇಕಾಗಿ ಬಂದಿದೆ. ಆದರೆ ಖಿಲಾಫತ್ ಮತ್ತು ಖಲೀಫ, ಮತ್ತು ಅಟ್ಟೋಮನ್ ಸಾಮ್ರಾಜ್ಯದ ಮರುಸ್ಥಾಪನೆ ಇಂಥವೆಲ್ಲ ಮುಸ್ಲಿಮರಲ್ಲಿ ಶೇಕಡಾ 80ರಷ್ಟಿರುವ ಮದ್ಯಪ್ರಾಚ್ಯದ ಬಹುಸಂಖ್ಯಾತ ಸುನ್ನಿ ಮುಸ್ಲಿಮರನ್ನು ಭಾವನಾತ್ಮಕವಾಗಿ ಬಡಿದೆಬ್ಬಿಸುವ ಸಾಧ್ಯತೆಯಿದೆ. ಚರಿತ್ರೆ ಮರುಕಳಿಸಿ ಇದು ಮತ್ತೊಂದು ’ಅರಬ್ ಜಿಹಾದಿ ದಂಗೆಯಾದರೆ ಅದರ ಪರಿಣಾಮವನ್ನು ಊಹಿಸಲೂ ಸಾದ್ಯವಿಲ್ಲ. ಕೇವಲ ಮದ್ಯಪ್ರಾಚ್ಯವೇ ಅಲ್ಲ ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಭಾರತಗಳ ಮೇಲೂ ಈ ಜಿಹಾದ್‌ನ ಕರಾಳ ಛಾಯೆಗಳು ವ್ಯಾಪಿಸುವ ಪರಿಣಾಮ ಬೀರದಿರುವ ಸಾದ್ಯತೆ ಇಲ್ಲದಿಲ್ಲ. ಆದರೆ ಯಾವುದೇ ಅಂತರರಾಷ್ಟ್ರೀಯ ಜಿಹಾದಿ ಪಡೆಗಳು ಭಾರತದ ಮುಸ್ಲಿಂಮರಲ್ಲಿನ ಬೆರಳೆಣಿಕೆಯ ಮತಾಂಧ ವ್ಯಕ್ತಿಗಳನ್ನು ಮಾತ್ರ ಪ್ರಭಾವಿಸಲು ಯಶಸ್ವಿಯಾಗಬಹುದೇ ವಿನಃ ಇಡೀ ಮುಸ್ಲಿಂ ಸಮುದಾಯ ಎಂದೂ ಇಂತಹ ಪ್ರಯತ್ನಗಳಿಗೆ ಸೊಪ್ಪು ಹಾಕಿಲ್ಲ ಎಂಬುದನ್ನು ಗಮನಿಸಬೇಕು.  
ಮತ್ತೆ ಮೊದಲಿಗೆ ಬರುವುದಾದರೆ 100 ವರ್ಷಗಳ ಹಿಂದೆ ಬ್ರಿಟನ್ ತಾನೇ ನಿಂತು ನಡೆಸಿದ ಅರಬ್ ದಂಗೆಯ ಮಾರ್ದನಿ ಇದೀಗ ಶತಮಾನದ ನಂತರ ಮತ್ತೆ ಮೊಳಗುತ್ತಿದೆ. ಆದರೆ ಈ ಸಲ ಹಿಂದೆಂದಿಗಿಂತ ಬೀಭತ್ಸವನ್ನು ಸೃಷ್ಟಿಸಬಲ್ಲಂತಹ ರಕ್ತಪಿಪಾಸುಗಳ ಪೈಶಾಚಿಕ ಆರ್ಭಟವಾಗಿ ಕೇಳಿಸುತ್ತಿದೆ. ನೂರುವರ್ಷಗಳ ಹಿಂದೆ ಯಾವ ಕ್ಯಾಲಿಫೇಟ್ ಮತ್ತು ಖಲೀಫರ ಆಡಳಿತವನ್ನು ಛಿದ್ರಗೊಳಿಸಲು ಬ್ರಿಟನ್ ಅರಬ್ ದಂಗೆಯನ್ನು ಹುಟ್ಟುಹಾಕಿತ್ತೋ ಅದೇ ಕ್ಯಾಲಿಫೇಟ್ ಮತ್ತು ಖಲೀಫರ ಆಳ್ವಿಕೆಯನ್ನು ಪುನರ್‌ಸ್ಥಾಪಿಸಿ ಮುನ್ನಡೆಸಲು ಅಲ್ ಬಾಗ್ದಾದಿ ಮತ್ತವನ ISIS ಮತ್ತೊಂದು ಅರಬ್ ದಂಗೆಯನ್ನು ಸಂಘಟಿಸಲು ಪ್ರಯತ್ನಿಸಬಹುದು. 
ಪ್ರಬಲ ಆರ್ಥಿಕ ಮತ್ತು ರಾಜಕೀಯ ಶಕ್ತಿಗಳ, ಯುದ್ಧೋನ್ಮಾದಿಗಳ ಮತ್ತು ಧರ್ಮಾಂಧರ ಸ್ವಾರ್ಥದ ಮೇಲಾಟದಲ್ಲಿ ಜಗತ್ತಿನ ಶಾಂತಿ ತೀವ್ರ ಅಪಾಯದಲ್ಲಿದೆ. ಇದಕ್ಕೆ ಪರಿಹಾರ ಇದುವರೆಗೆ ಈ ಅಶಾಂತಿಗೆ ಕಾರಣವಾದ ಅಂಶಗಳಿಗೆ ಪೂರಕವಾಗಿ ನಿಲ್ಲುವುದಲ್ಲ. ಅಥವಾ ಒಂದು ಧರ್ಮಾಂಧತೆಗೆ ಮತ್ತೊಂದು ಧರ್ಮಾಂಧತೆಯನ್ನು ಎದುರು ಮಾಡುವುದೂ ಆಲ್ಲ. ಬದಲು ಶಾಶ್ವತ ಪರಿಹಾರವಿರುವುದು ಇಂತಹ ಮತಾಂಧತೆ, ಭಯೋತ್ಪಾದನೆಗಳಿಗೆ ಮೂಲ ಕಾರಣವಾದ ಎಲ್ಲಾ ಬಗೆಯ ಆರ್ಥಿಕ, ರಾಜಕೀಯ ಪ್ರಾಬಲ್ಯಗಳ ವಿರುದ್ಧ ನಿಲ್ಲುವುದು ಮತ್ತು ಧರ್ಮಾಂಧತೆಗೆ ವಿರುದ್ಧವಾಗಿ ಎಲ್ಲಾ ದೇಶಗಳ ಸರ್ಕಾರಗಳು ಮತ್ತು ಜನಸಮುದಾಯಗಳು ಸರ್ವಮತಧರ್ಮ ಸಮನ್ವಯ ತತ್ವವನ್ನು ಒಪ್ಪಿಕೊಂಡು, ಅಪ್ಪಿಕೊಂಡು ಹೋಗುವುದರಲ್ಲಿ ಮಾತ್ರ. ಇದೇ ಹೊತ್ತಿನಲ್ಲಿ ಭಾರತದ ಪ್ರಭುತ್ವ, ಇಲ್ಲಿನ ಕೋಮುವಾದಿಗಳು ಮತ್ತು ಮಾಧ್ಯಮಗಳಲ್ಲಿರುವ ಕೋಮುವಾದಿಗಳು ಸುಖಾಸುಮ್ಮನೇ  ಮುಸ್ಲಿಂ ಯುವಕರಿಗೂ ISISಗೂ ಜೊತೆ ಸಂಬಂಧ ಕಲ್ಪಿಸಿ, ಬಂಧಿಸಿ ಇಲ್ಲದ ಭಯಹುಟ್ಟಿಸಿ, ಪ್ರಜೆಗಳಲ್ಲಿನ ಸೌಹಾರ್ಧ ಸಂಬಂಧಗಳನ್ನು ಹಾಳುಮಾಡಿ ಮನಸುಗಳನ್ನು ಒಡೆಯುವ ಕೆಲಸ ಮಾಡುವುದರ ಕುರಿತು ನಾವು ಎಚ್ಚರವಾಗಿರಬೇಕು. 

ಸುನ್ನಿ ಶಿಯಾ ಸಂಘರ್ಷದ ಹಿನ್ನೆಲೆ
ಇಸ್ಲಾಮಿನಲ್ಲಿ ಸುನ್ನಿ ಮತ್ತು ಶಿಯಾಗಳೆಂಬ ಪರಸ್ಪರ ವಿರೋಧಿ ಗುಂಪುಗಳಾಗಿದ್ದು ಪ್ರವಾದಿ ಮಹಮದರ ನಿಧನದ ತರುವಾಯದಲ್ಲಿ. ಪ್ರವಾದಿ ಮಹಮ್ಮದರ ನಂತರ ಇಸ್ಲಾಂ ಸಮುದಾಯವನ್ನು ಮುನ್ನಡೆಸುವುದು ಯಾರು ಎಂಬ ವಿಷಯದಲ್ಲಿ ಉಂಟಾದ ಕಲವವೆ ಈ ಸುನ್ನಿ-ಶಿಯಾ ಸಂಘರ್ಷಕ್ಕೆ ಕಾರಣ. ಸುನ್ನಿಗಳು ಅಹ್ಲ್ ಅಲ್-ಸುನ್ನಾ ಎಂದರೆ ಸಂಪ್ರದಾಯವಾದಿಗಳು ಎಂಬಂರ್ಥದ ಪದದಿಂದ ತಮ್ಮನ್ನು ಗುರುತಿಸಿಕೊಳ್ಳುತ್ತಾರೆ. ಕುರಾನಿನಲ್ಲಿ ಉಲ್ಲೇಖವಾಗುವ ಎಲ್ಲ ಪ್ರವಾದಿಗಳನ್ನೂ ಒಪ್ಪಿಕೊಳ್ಳುತ್ತಾರಾದರೂ ಮಹಮ್ಮದರಿಗೇ ಪರಮ ಪ್ರಾಶಸ್ತ್ಯ ಎಂದು ಪ್ರತಿಪಾದಿಸುವ ಸುನ್ನಿಮುಸ್ಲ್ಲಿಮರೇ ಮುಸ್ಲಿಮರಲ್ಲಿನ ಮುಕ್ಕಾಲು ಪಾಲು ಜನಸಂಖ್ಯೆ. ಸುನ್ನಿಪಥಿಕರ ಪ್ರಕಾರ ಇಸ್ಲಾಂ ಸಮುದಾಯವನ್ನು ಮುನ್ನಡೆಸುವವರು ಖಲೀಫರು.  
ಶಿಯಾಗಳೆಂದರೆ ಶಿಯಾತ್ ಅಲಿಯ ಪಂಗಡವನ್ನು ಪ್ರತಿನಿಧಿಸುವವರು. ಅಲಿ ಪ್ರವಾದಿ ಮಹಮ್ಮದರ ಅಳಿಯ. ಅವನ ಮಕ್ಕಳು ಹಸನ್ ಹುಸೇನ್. ಇಸ್ಲಾಂ ಸಮುದಾಯವನ್ನು ಮುನ್ನಡೆಸುವುದು ಅಲಿಯ ಉತ್ತರಾಧಿಕಾರಿಗಳೇ ಎಂಬುದು ಈ ಗುಂಪಿನವರ ಪ್ರತಿಪಾದನೆ. ಅಲಿಯನ್ನು ನಂತರ ಅವನ ಮಕ್ಕಳೂ ಧಾರ್ಮಿಕ ಕಲಹದಲ್ಲಿಯೇ ಅಸುನೀಗಿದರು ಎಂದು ಹೇಳಲಾಗುತ್ತದೆ. ಇರಾನ್, ಇರಾಕ್, ಬಹ್ರೇನ್, ಅಜರ್‌ಬೈಜಾನ್‌ಗಳಲ್ಲಿ ಶಿಯಾಗಳು ಬಹುಸಂಖ್ಯಾತರು. ಅಫ್ಗಾನಿಸ್ತಾನ, ಪಾಕಿಸ್ತಾನ, ಭಾರತ, ಕುವೈತ್, ಲೆಬನಾನ್, ಕತಾರ್, ಸಿರಿಯಾ, ಟರ್ಕಿ, ಸೌದಿ ಅರೇಬಿಯಾ ಮತ್ತು ಅರಬ್ ಎಮಿರೇಟ್ಸ್‌ಗಳಲ್ಲಿಯೂ ಶಿಯಾಗಳು ಗಣನೀಯ ಸಂಖ್ಯೆಯಲ್ಲಿದ್ದಾರೆ. ಇಸ್ಲಾಂ ಜಗತ್ತಿನಲ್ಲಿ ಸುನ್ನಿ ಶಿಯಾ ಆಗಾಗ ವ್ಯಕ್ತಗೊಳ್ಳುತ್ತಿತ್ತಾದರೂ ಅದು ತೀವ್ರ ಸ್ವರೂಪವನ್ನು ಪಡೆದಿದ್ದು ಇರಾಕಿನ ಬೆಳವಣಿಗೆಗಳ ಹಿನ್ನೆಲೆಯಲ್ಲ್ಲಿಯೇ ಅದೂ 2000ನೇ ಇಸವಿಯಲ್ಲಿ ಅಮೆರಿಕ ಅಲ್ಲಿ ಪ್ರವೇಶ ಮಾಡಿದ ನಂತರ. 


ಕಾಮೆಂಟ್‌ಗಳಿಲ್ಲ: