ಅವು 2001ರ ದಿನಗಳು. ನನ್ನೂರು ಶಿವಮೊಗ್ಗೆಯಲ್ಲಿ ತುಂಗ-ಭದ್ರ ನದಿಗಳ ಮೂಲದ ಉದ್ದೇಶಿತ ಕುದುರೆಮುಖ ಗಣಿಗಾರಿಕೆಯನ್ನು ವಿರೋಧಿಸುವ ಜನಾಂದೋಲನ ಮತ್ತೊಮ್ಮೆ ಗರಿಗೆದರಿತ್ತು. ನಾವು ಒಂದಷ್ಟು ವಿದ್ಯಾರ್ಥಿಗಳು ಈ ಚಳವಳಿಯ ಕಾರ್ಯಕರ್ತರಾಗಿ ಕಲ್ಕುಳಿ ವಿಠ್ಠಲ ಹೆಗ್ಡೆಯವರ ನೇತ್ರುತ್ವದಲ್ಲಿ ಹಗಲು ರಾತ್ರಿಯೆನ್ನದೆ ಕೆಲಸ ಮಾಡುತ್ತಿದ್ದೆವು. ಕುದುರೆಮುಖದ ಪಕ್ಕದಲ್ಲಿರುವ ಗಂಗಡಿಕಲ್ಲು ಮತ್ತು ನೆಲ್ಲಿಬೀಡು ಕ್ರಮವಾಗಿ ತುಂಗೆ ಮತ್ತು ಭದ್ರೆಯರ ಮೂಲಸ್ಥಳಗಳು. ಆ ಎರಡೂ ಗುಡ್ಡಗಳಲ್ಲಿ ಗಣಿಗಾರಿಕೆಯನ್ನು ವಿಸ್ತರಿಸುವುದಾಗಿ ಮತ್ತು ಮುಂದಿನ 20 ವರ್ಷಗಳ ಕಾಲ ಜಪಾನಿನ ನಿಪ್ಪಾನ್ ಕಂಪನಿಗೆ ಹಂತಹಂತವಾಗಿ ಗಣಿಗಾರಿಕೆಯನ್ನು ವಿಸ್ತರಿಸುವುದಾಗಿ ರಾಜ್ಯ ಮತ್ತು ಕೆಂದ್ರ ಸರ್ಕಾರ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದವು. ಇದರ ವಿರುದ್ಧವಾಗಿ ತುಂಗಭದ್ರಾ ನದಿಗಳ ದಂಡೆಯ ಮೇಲಿನ ಎಂಟೂ ಜಿಲ್ಲೆಗಳಲ್ಲಿ ಹತ್ತು ವರ್ಷಗಳ ನಂತರ ಎರಡನೇ ಹಂತದ ಹೋರಾಟ ಆರಂಭವಾಗಿತ್ತು. ಇಡೀ ಆಂದೋಲನಕ್ಕೆ ನಿಜವಾದ ಕಸುವು - ತೀವ್ರತೆ ಬಂದಿದ್ದು ಮಾತ್ರ ಹೋರಾಟಕ್ಕೆ ಅನಂತಮೂರ್ತಿಯವರ ಪ್ರವೇಶದಿಂದ. ನೂರಾರು ಜನ ಸೇರುತ್ತಿದ್ದಲ್ಲಿ ಸಹಸ್ರಾರು ಜನರು ಭಾಗವಹಿಸತೊಡಗಿದರು. 2001ರ ಜುಲೈ 24ರಂದು ಶಿವಮೊಗ್ಗದಲ್ಲಿ ನಡೆದ ಮೆರವಣಿಗೆ ಮತ್ತು ಸಭೆಗಳಲ್ಲಿ ಅನಂತಮೂರ್ತಿಯವರು ಪಾಲ್ಗೊಳ್ಳುವವರಿದ್ದರು. ಇದಕ್ಕೆ ಪೂರ್ವಭಾವಿಯಾಗಿ 10-15ದಿನ ಮುಂಚಿತವಾಗಿ ಹಳ್ಳಿ ಹಳ್ಳಿ- ಬೀದಿಬೀದಿಗಳಲ್ಲಿ ಪ್ರಚಾರಾಂದೋಲನವನ್ನು ಕೈಗೊಂಡಿದ್ದೆವು. ಆದರೆ ನಮಗೆ ಆ ಮೆರವಣಿಗೆಗೆ ಎಷ್ಟು ಜನ ಸೇರಬಹುದೆಂಬ ಅಂದಾಜಿರಲಿಲ್ಲ. ನಮ್ಮೆಲ್ಲರ ನಿರೀಕ್ಷೆಗೂ ಮೀರಿ ಜನಪ್ರವಾಹವೇ ಅಂದು ಹರಿದು ಬಂದಿತ್ತು. ಅನಂತಮೂರ್ತಿಯವರು ಭಾಗವಹಿಸಿದ್ದ ಆ ಬೃಹತ್ ಮೆರವಣಿಗೆಯಲ್ಲಿ ಸುಮಾರು 25 ಸಾವಿರ ಜನರು ಭಾಗವಹಿಸಿದ್ದರಲ್ಲದೆ ಇಡೀ ಶಿವಮೊಗ್ಗದ ಬೀದಿಗಳಿಗೆಲ್ಲಾ ಹೊಸ ಕಳೆ ಬಂದುಬಿಟ್ಟಿತ್ತು. ಆ ಮೆರವಣಿಗೆ ಸರ್ಕಾರಕ್ಕೆ ಸ್ಪಷ್ಟ ಸಂದೇಶವನ್ನೂ ನಮ್ಮಂತಹ ಕಾರ್ಯಕರ್ತರಿಗೆ ತೀವ್ರ ಹುಮ್ಮಸ್ಸನ್ನೂ ನೀಡಿತ್ತು. ನಂತರದ ಕೆಲವು ತಿಂಗಳವರೆಗೂ ಆ ಹೋರಾಟಕ್ಕೆ ಅನಂತಮೂರ್ತಿಯವರು ಭಾಗವಹಿಸಿದ್ದರು. ನದೀ ತೀರದ ಜಿಲ್ಲೆಗಳಲ್ಲಿ ಯಶಸ್ವೀ ಬಂದ್ ಆಚರಿಸಲಾಗಿತ್ತು. ದಿನ ನಿತ್ಯ ಒಂದಲ್ಲ ಒಂದು ಚಟುವಟಿಕೆಗಳು ನಡೆಯುತ್ತಲೇ ಇದ್ದವು. ಅದೇ ಉತ್ಸಾಹದಲ್ಲಿ ನಾವುಗಳೂ ಕಾಲೇಜುಗಳನ್ನು ತೊರೆದು ಬೀದಿ ಬೀದಿ ಸುತ್ತುತ್ತ ಜನರನ್ನು ಗಣಿಗಾರಿಕೆ ವಿರುದ್ಧದ ಆಂದೋಲನಕ್ಕೆ ಸಂಘಟಿಸುತ್ತಿದ್ದೆವು.
ಹೀಗೆ ಜನ ಹೋರಾಟದ ಜೊತೆ ಜೊತೆಗೇ ನಡೆದಿದ್ದ ಕಾನೂನು ಹೋರಾಟದಲ್ಲಿ ಆ ಕುದುರೆಮುಖ ಗಣಿಗಾರಿಕೆಯನ್ನು ನಿಲ್ಲಿಸುವಂತೆ ಸುಪ್ರೀಂಕೋರ್ಟು ತೀರ್ಪು ನೀಡಿದ್ದು ಪ್ರಾಯಶಃ ಇಡೀ ದೇಶದ ಪರಿಸರ ಚಳವಳಿಯ ಇತಿಹಾಸದಲ್ಲೇ ಹೊಸ ಮೈಲಿಗಲ್ಲು.
**
ಇದೇ ಸಂದರ್ಭದಲ್ಲಿ ಗಣಿಗಾರಿಕೆಯ ವಿರುದ್ಧವಾಗಿ ಶಿವಮೊಗ್ಗದ ಗೋಪಿ ಸರ್ಕಲ್ನಲ್ಲಿ ಉಪವಾಸ ಸತ್ಯಾಗ್ರಹ ನಡೆಯುತ್ತಿತ್ತು. ಒಂದು ದಿನ ಅನಂತಮೂರ್ತಿಯವರೂ ಪಾಲ್ಗೊಂಡಿದ್ದರು. ಹೋರಾಟ ಒಕ್ಕೂಟದ ಅಧ್ಯಕ್ಷರಾಗಿದ್ದ ಕಲ್ಕುಳಿ ವಿಠ್ಠಲ ಹೆಗ್ಡೆ, ನಮ್ಮೆಲ್ಲರ ಸ್ಪೂರ್ತಿಯಾಗಿದ್ದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ್ತಿ ಪೊನ್ನಮ್ಮಾಳ್ ಮುಂತಾದವರೆಲ್ಲ ಪಾಲ್ಗೊಂಡಿದ್ದರು. ನಾವೊಂದಿಷ್ಟು ವಿದ್ಯಾರ್ಥಿಗಳು ಸೇರಿಕೊಂಡು ಒಂದು ವಿನೂತನ ಪ್ರತಿಭಟನೆಗೆ ಸಿದ್ಧತೆ ನಡೆಸಿಕೊಂಡು ಬಂದಿದ್ದೆವು. ಕುದುರೆಮುಖದಲ್ಲಿ ಗಣಿಗಾರಿಕೆ ನಡೆಸಲು ಬಂಡವಾಳ ಹೂಡಿಕೆ ನಡೆಸಲಿದ್ದ ಜಪಾನಿನ ನಿಪ್ಪಾನ್ ಕಂಪನಿಯ ಪ್ರತಿಕ್ರುತಿಯೊಂದನ್ನು ತಯಾರು ಮಾಡಿ ಗೋಪಿ ಸರ್ಕಲ್ನಲ್ಲಿ ಅದಕ್ಕೆ ನೇಣು ಹಾಕುವ ಪ್ರತಿಭಟನೆ ಅದು! ಇನ್ನೇನು ನಾವು ಅದಕ್ಕೆ ಸಜ್ಜಾಗಬೇಕು ಅಷ್ಟರಲ್ಲಿ ಅನಂತಮೂರ್ತಿಯವರು, "ಇದನ್ನೆಲ್ಲಾ ನೀವು ಮಾಡುವುದಾದರೆ ನಾನು ಇಲ್ಲಿರುವುದೇ ಇಲ್ಲ, ಈಗಲೇ ಹೊರಟು ಹೋಗುತ್ತೇನೆ" ಎಂದು ನಮ್ಮ ಮೇಲೆ ಸಿಟ್ಟಿಗೆದ್ದರು. "ನಾನು ಹಿಂಸೆಯನ್ನು ಬಿಂಬಿಸುವಂತಹ ಇಂತಹ ಪ್ರತಿಭಟನಾ ರೂಪಗಳನ್ನು ಖಂಡಿತಾ ಒಪ್ಪುವುದಿಲ್ಲ. ನಾನು ಕ್ಯಾಪಿಟಲ್ ಪನಿಶ್ಮೆಂಟನ್ನು ಒಪ್ಪುವವನಲ್ಲ. ಅಂತಹ ಅಣಕು ಪ್ರದರ್ಶನಗಳನ್ನೂ ಸಹ. ಹೀಗೆಲ್ಲಾ ಮಾಡುವುದಾದರೆ ನನ್ನನ್ನು ಕರೆಯಲೇಬೇಡಿ ಎಂದರು". ಆಗ ಅವರಿಗೆ ಬುದ್ಧಿಹೇಳಿ ಸಮಾಧಾನ ಮಾಡಿ ಶಾಂತಗೊಳಿಸಿದ್ದು ಪೊನ್ನಮ್ಮಾಳ್. ಆದರೆ ಇಡೀ ತುಂಗಭದ್ರಾ ನದಿಗಳ ದಂಡೆಯಲ್ಲಿರುವ ೨ ಕೋಟಿ ಜನರ ಬದುಕುಗಳನ್ನೇ ನಾಶಮಾಡಲು ಬರುತ್ತಿರುವ ನಿಪ್ಪಾನ್ ಕಂಪನಿಗೆ ಅದೇ ಸರಿಯಾದ ಶಿಕ್ಷೆಯೆಂಬುದು ಬಿಸಿರಕ್ತದ ಹುಡುಗರಾದ ನಮ್ಮ ಅಭಿಪ್ರಾಯವಾಗಿತ್ತು. ಅಷ್ಟಕ್ಕೂ ನಾವು ಯಾವುದೇ ವ್ಯಕ್ತಿಯ ಪ್ರತಿಕ್ರುತಿಯನ್ನು ಮಾಡಿರಲಿಲ್ಲ. ಅದು ಕಂಪನಿಯ ಪ್ರತಿಕ್ರುತಿಯಷ್ಟೆ. ಹೀಗೆಲ್ಲಾ ನಮ್ಮ ಸಮರ್ಥನೆ ಇತ್ತು. ಅನಂತಮೂರ್ತಿಯವರ ಮುನಿಸಿನ ನಡುವೆಯೂ ನಮ್ಮ ಪ್ರತಿಭಟನೆ ನಡೆಸಿದೆವು. ಗಾಂಧೀಜಿಯವರ ಅನುಯಾಯಿಯಾಗಿ ಒಂದಿಡೀ ಬದುಕನ್ನೇ ಸಮಾಜಮುಖಿ ಚಟುವಟಿಕಗೆಳಿಗೆ ಅರ್ಪಿಸಿಕೊಂಡಿದ್ದ ಪೊನ್ನಮ್ಮಾಳ್ ಅಂದು ನಮ್ಮೊಂದಿಗೆ ಇರದೆ ಇದ್ದಲ್ಲಿ ಬಹುಶಃ ಅನಂತಮೂರ್ತಿಯವರು ಹೊರಟೇ ಹೋಗಿಬಿಡುತ್ತಿದ್ದರೇನೋ. ಅದೇನೇ ಇರಲಿ. ಅನಂತಮೂರ್ತಿಯವರು ತಾವು ನಂಬಿಕೊಂಡಿದ್ದ ತತ್ವಕ್ಕೆ ಬದ್ಧರಾಗಿ ನೀಡಿದ್ದ ಪ್ರತಿಕ್ರಿಯೆಯ ಸ್ವರೂಪ ಅದು. ಆ ಇಡೀ ಹೋರಾಟದ ಸಂದರ್ಭದಲ್ಲಿ ಅನಂತಮೂರ್ತಿಯವರೊಂದಿಗಿನ ಒಡನಾಟದಲ್ಲಿ, ಅವರ ಪ್ರಖರ ಚಿಂತನೆಯ ಮಾತುಗಳನ್ನು ಮೊದಲ ಬಾರಿಗೆ ಕೇಳಲು, ನದಿ-ನೆಲ-ಜಲ ಮತ್ತು ಜನರ ಬಗೆಗಿನ ಅವರ ಆತಂಕ- ಕಾಳಜಿಗಳನ್ನು ಬಹು ಹತ್ತಿರದಿಂದ ನೋಡಲು ನಮಗೆ ಸಾಧ್ಯವಾಗಿತ್ತು.
**
ಹೆಗ್ಗೋಡಿನಲ್ಲಿ ಪ್ರತಿವರ್ಷ ನಡೆಯುವ ಸಂಸ್ಕ್ರುತಿ ಶಿಬಿರದಲ್ಲಿ ಅನಂತಮೂರ್ತಿಯವರು ತಪ್ಪದೇ ಭಾಗವಹಿಸುತ್ತಿದ್ದರು. ಬಹುಶಃ 2005 ಎಂದು ಕಾಣುತ್ತದೆ. ಆ ವರ್ಷ 'ಹಿಂಸೆಯ ಎಡ - ಬಲ' ಎಂಬ ವಿಷಯವಾಗಿ ಚರ್ಚೆಗಳು ನಡೆಯುತ್ತಿತ್ತು. ನಾನೂ ಭಾಗವಹಿಸಿದ್ದೆ. ಆ ಕಾರ್ಯಕ್ರಮವನ್ನು ನಾಡಿನ ಧೀಮಂತ ಚೇತನ ಚಿರಂಜೀವಿ ಸಿಂಗ್ ತಮ್ಮ ಅದ್ಭುತ ಭಾಷಣದೊಂದಿಗೆ ಉದ್ಘಾಟಿಸಿದ್ದರು. ಅನಂತಮೂರ್ತಿಯವರು ಚರ್ಚೆಗಳನ್ನು ನಿರ್ವಹಿಸುತ್ತಿದ್ದರು. ಎಡಪಂಥ - ಬಲಪಂಥಗಳ ಹಿಂಸೆಗಳ ಕುರಿತಾಗಿ ನಾನಾ ನಮೂನೆಯ ಅಭಿಪ್ರಾಯಗಳು, ಪ್ರಶ್ನೆಗಳು, ವಿಚಾರಗಳು ವ್ಯಕ್ತವಾಗುತ್ತಿದ್ದವು. ಬುದ್ಧಿಜೀವಿಗಳೆನಿಸಿಕೊಂಡವರ ಎದುರಲ್ಲಿ ಕೇಳಲೇಬೇಕಾದ ಒಂದಷ್ಟು ಪ್ರಶ್ನೆಗಳು; ಹಂಚಿಕೊಳ್ಳಬೇಕಾದ ವಿಚಾರಗಳು ನನಗೂ ಇವೆಯೆನಿಸಿ ಹೋಗಿ ಒಂದಷ್ಟು ಅಭಿಪ್ರಾಯ ಮತ್ತು ಪ್ರಶ್ನೆಗಳನ್ನು ಎಲ್ಲರ ಮುಂದಿಟ್ಟಿದ್ದೆ. ಮಲೆನಾಡಿನ ಹಸಿರಿನ ಮರೆಯಲ್ಲಿ ಅಡಕವಾಗಿರುವ, ನನ್ನ ಅನುಭವಕ್ಕೆ ಬಂದಂತಹ ಒಂದಷ್ಟು ಹಿಂಸಾಸ್ವರೂಪಗಳನ್ನು ಅರುಹಿ ಹಿರಿಯರ ಪ್ರತಿಕ್ರಿಯೆಗಾಗಿ ಎದುರು ನೋಡುತ್ತಿದ್ದೆ. ನಂತರ ಪ್ರತಿಕ್ರಿಯಿಸಿದ್ದ ಜಿ.ಕೆ.ಗೋವಿಂದರಾವ್ ಅವರು ಒಂದಷ್ಟು ಒಣಉಪದೇಶಗಳನ್ನು ನೀಡಿದರೆನಿಸಿತ್ತು ಬಿಟ್ಟರೆ ಆ ಸಭೆಯಲ್ಲಿ ನನ್ನಂತವರು ವ್ಯಕ್ತಪಡಿಸಿದ್ದ ಅಭಿಪ್ರಾಯಗಳನ್ನು ಗ್ರಹಿಸಿ ಅವುಗಳನ್ನು ಸ್ಪರ್ಶಿಸುವ ಪ್ರಯತ್ನವನ್ನೇ ಮಾಡಿರಲಿಲ್ಲ. ಆದರೆ ಅನಂತಮೂರ್ತಿಯವರ ಪ್ರತಿಕ್ರಿಯೆ ಭಿನ್ನವಾಗಿತ್ತು. ಅನಂತಮೂರ್ತಿಯವರು ನನ್ನ ಪ್ರಶ್ನೆಗಳನ್ನು ಗಂಭೀರವಾಗಿಯೇ ಪರಿಗಣಿಸಿ ನನ್ನ ಬಳಿಯೇ ಬಂದು ಮಾತನಾಡಿದ್ದು ಕೊಂಚ ಸಮಾಧಾನ ತಂದಿತ್ತು. ಇಂತಹ ಪ್ರಶ್ನೆಗಳಿಗೆ ನಾವೆಲ್ಲಾ ಒಟ್ಟಾಗಿ ಸೇರಿ ಉತ್ತರ ಕಂಡು ಹಿಡಿಯಬೇಕು ಎನ್ನುವ ಮಾತನ್ನಾದರೂ ಅವರು ಆಡಿದ್ದರು. ಮಹಾನ್ ಸಿದ್ಧಾಂತಿಯಾಗಿ ಅವರು 'ಇದಮಿತ್ತಂ' ಎಂಬಂತೆ ಉತ್ತರಿಸಿರಲಿಲ್ಲ.
ಆನಂತರದಲ್ಲಿಯೂ ನಾನು ಗಮನಿಸಿರುವಂತೆ ಅನೇಕರಲ್ಲಿ ಇರದ ಒಂದು ಗುಣ ಅನಂತಮೂರ್ತಿಯವರಲ್ಲಿ ಇತ್ತು. ಅದೆಂದರೆ ಪ್ರತಿಯೊಬ್ಬರ ಪ್ರತಿಯೊಂದು ಅಭಿಪ್ರಾಯ ವಿಚಾರಕ್ಕೂ ಮುಕ್ತವಾಗಿರುತ್ತಿದ್ದುದು. ಯಾವುದೇ ಪೂರ್ವಗ್ರಹಗಳನ್ನು ಅವರು ತೋರುತ್ತಿರಲಿಲ್ಲ. ಇಂತಹ ಒಂದು ಮುಕ್ತತೆಯನ್ನು ಅವರು ವ್ಯಕ್ತ ಪಡಿಸುವಾಗ ಅವರಲ್ಲಿ ಗೊಂದಲವಿರಬಹುದೇ ಎಂಬಂತೆ ಭಾಸವಾಗುತ್ತಿದ್ದರೂ ಸಹ ಆ ಗೊಂದಲದ ಸ್ಥಿತಿ ಎನ್ನುವುದು ಅನಂತಮೂರ್ತಿಯವರ ಪ್ರಜ್ಞಾಪೂರ್ವಕ ಆಯ್ಕೆಯೇ ಆಗುತ್ತೆನ್ನಿಸುತ್ತದೆ. ಸಿದ್ಧಾಂತಗಳ ವಿಷಯದಲ್ಲಿ ಮಿಸ್ಟರ್ ಪರ್ಫೆಕ್ಟ್ ಆಗುವುದರ ಸಮಸ್ಯೆಯ ಆಳಅರಿವಿನಿಂದಲೇ ಅವರು ತಮ್ಮ ಈ ಆಯ್ಕೆಯನ್ನು ಕೊನೆಯವರೆಗೂ ಉಳಿಸಿಕೊಂಡಿದ್ದರು. ಈ ಕಾರಣಕ್ಕಾಗಿಯೇ ಅನಂತಮೂರ್ತಿಯವರ ಕೆಲವು ವಿಚಾರಗಳ ಬಗ್ಗೆ ಭಿನ್ನಾಭಿಯವಿದ್ದವರೂ ಸಹ ಅವರನ್ನು ಎಲ್ಲರೂ ಇಷ್ಟಪಡಲು ಸಾಧ್ಯವಾಗುತ್ತಿತ್ತು.
ಇಂದು ಅನಂತಮೂರ್ತಿಯವರನ್ನು ನಾಡು ಕಳೆದುಕೊಂಡಿರುವ ಸಂದರ್ಭದಲ್ಲಿ ನಾಡಿನ ಸಂಕಟಗಳಿಗೆ, ಸಂದಿಗ್ಧಗಳಿಗೆ ಯಾವತ್ತೂ ಸ್ಪಂದಿಸುತ್ತಿದ್ದಂತಹ ಒಂದು ಕರುಳ ದನಿ ಇಲ್ಲವಾಗಿದೆ. ತಮ್ಮ ತೀವ್ರ ಅನಾರೋಗ್ಯದ ಸ್ಥಿತಿಯಲ್ಲಿಯೂ ಅವರು ಮಾತುಕಳೆದುಕೊಂಡಿರಲಿಲ್ಲ. 'ಮಾತು ಸೋತ ಭಾರತ'ದ ಕನ್ನಡದ ನೆಲದಲ್ಲಿ ತಮ್ಮ ಕಂಠವನ್ನು ಸದಾ ಎತ್ತಿಕೊಂಡಿದ್ದವರು ಅನಂತಮೂರ್ತಿ. ಅದರಲ್ಲೂ ಜಾಗತೀಕರಣ ಎನ್ನುವುದು ಅಮೆರಿಕೀಕರಣವಲ್ಲದೆ ಬೇರೇನಲ್ಲ ಎಂದು ಗುರುತಿಸಿ ಅದಕ್ಕೆ ದೇಸೀವಾದದ ಪರಿಹಾರವನ್ನು ಶೋಧಿಸುವ ನಿಟ್ಟಿನಲ್ಲಿ ತಮ್ಮ ಚಿಂತನೆಗಳನ್ನು ನಾಡಿನ ಮುಂದಿಟ್ಟಿದ್ದರು. ಅವರ 'ಸೂರ್ಯನ ಕುದುರೆ' ಕತೆಯ ಹಡೆ ವೆಂಕ್ಟ ಈ ದೇಸೀವಾದದ ಪ್ರತಿನಿಧಿಯಾಗಿರುವುದನ್ನು ಗಮನಿಸಬಹುದು. ಇತ್ತಿಚಿನ ಕೆಲ ದಶಕಗಳಲ್ಲಿ ಧರ್ಮದ ಅಮಲು ಮಾನವೀಯತೆಯನ್ನು ಆಪೋಷಣ ತೆಗೆದುಕೊಳ್ಳುವುದನ್ನು ಗಮನಿಸಿ ಅವರಾಡುತ್ತಿದ್ದ ಮಾತುಗಳಲ್ಲಿ ನೋವಿನ ಗೆರೆಗಳನ್ನು ಗಮನಿಸಬಹುದಿತ್ತು. ತಮ್ಮ ಬದುಕು - ಸಾಹಿತ್ಯಗಳಲ್ಲಿ ಪರಂಪರೆ ಮತ್ತು ಆಧುನಿಕತೆಗಳ ಕುರಿತಾಗಿ ಸಾಕಷ್ಟು ಚಿಂತನೆಗಳನ್ನು ನಡೆಸಿರುವ ಅನಂತಮೂರ್ತಿಯವರು ಎಂದೂ ಏಕರೂಪಿ ಚಿಂತನೆಯನ್ನು ಇಟ್ಟುಕೊಂಡಿದ್ದವರಲ್ಲ. ಅವರ ಮೊದಮೊದಲಿನ ಚಿಂತನೆಗಳಿಗೂ ಕಡೆಗಿನ ಚಿಂತನೆಗಳಿಗೂ ಸಾಕಷ್ಟು ಅಂತರವಿದೆ ಹಾಗೂ ಅವರ ಎಲ್ಲಾ ಕಾಲದ ಚಿಂತನೆಗಳನ್ನೂ ಸತ್ಯದ ಎಡೆಬಿಡದ ಹುಡುಕಾಟ ಎನ್ನುವುದು ಸ್ಥಾಯಿಸ್ವರೂಪವಾಗಿತ್ತು. ಈ ಕಾಲದ ಸಂದಿಗ್ಧಗಳ ಕಾರಣ - ಪರಿಹಾರಗಳ ಸತ್ಯಾಸತ್ಯತೆಯನ್ನು ಹುಡುಕುವ ನಿಟ್ಟಿನಲ್ಲಿ ಅವರು ಬರೆದ ಹಲವಾರು ಬರೆಹಗಳಲ್ಲಿ 'ಯುಗಪಲ್ಲಟ' ಲೇಖನ ನನ್ನನ್ನು ಬಹುವಾಗಿ ಚಿಂತನೆಗೀಡುಮಾಡಿರುವಂತದ್ದು. ಅವರ ಚಿಂತನೆಗಳ ಪ್ರಾತಿನಿಧಿಕ ಲೇಖನ ಅದೆಂದರೂ ಸರಿಯೆನಿಸಬಹುದು.
ನಾಡಿನಲ್ಲಿ ಅನಂತಮೂರ್ತಿಯವರನ್ನು ಒಬ್ಬ ಲೇಖಕ-ಸಾಹಿತಿ-ವಿಚಾರವಾದಿಯಾಗಿ
ನಾಡಿನ ಜನರ ಬದುಕಿನ ಬಗ್ಗೆ ಕಳಕಳಿ ತುಡಿತ ಉಳ್ಳ ಒಬ್ಬ ಧೀಮಂತ ಚೇತನವಾಗಿ ಗುರುತಿಸಿ ಅವರನ್ನು ಅಪಾರವಾಗಿ ಇಷ್ಟಪಡುವ, ಪ್ರೀತಿಸುವ ಅಸಂಖ್ಯ ಕನ್ನಡ ಮನಸುಗಳಿವೆ. ಅಂತೆಯೇ ಅವರನ್ನು ಒಂದು ಕೇಡಾಗಿ ಪರಿಗಣಿರುವವರೂ ಇದ್ದಾರೆ. ಇತ್ತೀಚಿನ ದಿನಗಳಲ್ಲಿ ಅಂತಹ ಅಲ್ಪಮತಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿತ್ತೆಂದೇ ಹೇಳಬಹುದು. ಅನಂತಮೂರ್ತಿಯವರ ವ್ಯಕ್ತಿತ್ವ ಮತ್ತು ವಿಚಾರಗಳ ಸತ್ವವೇನೆಂಬ ಅರಿವೇ ಇಲ್ಲದ ಕೆಲವರು ಪತ್ರಿಕೆಗಳಲ್ಲಿ ಬರೆದ ಪೂರ್ವಾಗ್ರಹಪೀಡಿತ, ಅರೆಬರೆ ಅರಿವಿನ ಲೇಖನಗಳು ಇದಕ್ಕೆ ಕಾರಣ. ಅನಂತಮೂರ್ತಿಯವರ ಒಂದೇ ಒಂದು ಬರಹವನ್ನು ಓದದೆಯೂ, ಅವರ ಒಂದೇ ಭಾಷಣವನ್ನೂ ಕೇಳದೆಯೂ ಅವರನ್ನು 'ಎಡಪಂಥೀಯ; 'ಕಮ್ಯುನಿಸ್ಟ್ ' ಎಂದು ಬಾಲಿಶವಾಗಿ ಟೀಕಿಸಿ ಬೆತ್ತಲಾದವರಿದ್ದಾರೆ, ಅವರ ಬಗ್ಗೆ ಕಪೋಲಕಲ್ಪಿತ ಆರೋಪಗಳನ್ನು ಮಾಡಿ ದ್ವೇಶ ಕಾರಿಕೊಂಡವರಿದ್ದಾರೆ. ಹಾಗೆಯೇ ಬ್ರಾಹ್ಮಣರಾಗಿ ಹುಟ್ಟಿ ಜಾತಿಯ ಬಂಧದಿಂದ ಹೊರಬರುವ ಅನಂತಮೂರ್ತಿಯವರ ಪ್ರಯತ್ನ ಹಲವರಿಗೆ ಕೇಡಾಗಿ ಕಂಡು ಅವರನ್ನು ದ್ವೇಷಿಸಿದವರಿದ್ದಾರೆ.
ಯಾರು ಅವರನ್ನು ಪ್ರೀತಿಸಲಿ, ದ್ವೇಶಿಸಲಿ. ಆದರೆ ದೇಶ, ನಾಡು, ನುಡಿ, ಜನರ ಬದುಕು, ಪರಿಸರ, ರಾಜಕಾರಣ, ಇತಾದಿಗಳ ಕುರಿತಾಗಿ ತಾವೂ ಸದಾ ಚಿಂತನೆಯಲ್ಲಿ ತೊಡಗಿಕೊಂಡು ನಮ್ಮೆಲ್ಲರನ್ನೂ ಒಂದಿಲ್ಲೊಂದು ರೀತಿಯಲ್ಲಿ ಚಿಂತನೆಗೆ ತೊಡಗಲು ಪ್ರೇರೇಪಿಸುತ್ತಿದ್ದ ಅನಂತಮೂರ್ತಿಯವರು ತಮ್ಮ ವಿರೋಧಿಗಳನ್ನೂ ಎಂದೂ ದ್ವೇಷಿಸಿದವರಲ್ಲ. ಅಂತಹ ಉದಾತ್ತ ವ್ಯಕ್ತಿತ್ವ ಅವರದು. ನಮ್ಮೆಲ್ಲರ ಹೃದಯಗಳಲ್ಲಿ ಅಚ್ಚಳಿಯದೆ ಉಳಿದಿರುವ ಮೇಸ್ಟ್ರ ವ್ಯಕ್ತಿತ್ವದ ಸಕಾರಾತ್ಮಕ ಅಂಶಗಳು ಮತ್ತು ಅವರ ಚಿಂತನೆಗಳ ಸದಾಶಯಗಳು ನಮ್ಮನ್ನು ಅವರಂತೆಯೇ ಎಚ್ಚರದಲ್ಲಿಟ್ಟಿರಲಿ.
2 ಕಾಮೆಂಟ್‌ಗಳು:
ಶ್ರೀ ಅನಂತಮೂರ್ತಿಯವರ ಬಗ್ಗೆ ಪೂರ್ವಾಗ್ರಹ ಪೀಡಿತರಾಗಿರುವವರು ಓದಲೇ ಬೇಕಾದಂತಹ ಲೇಖನ. ಉತ್ತಮ ಬರಹ ಹರ್ಷ.
----ಪ್ರತಿಮಾ
ನಿಜವಾಗಿಯೂ ಅವರೊಬ್ಬ ಧ್ಯಾನಿ.. ಮಾತನಾಡುತ್ತಿರುವಾಗಲು ಅದನ್ನು ಧ್ಯಾನದ ರೀತಿಯೇ ಸಂವಹನ ಮಾಡುತ್ತಿದ್ದರು. ಮೌನ ಮತ್ತು ಮಾತಿನ ನಡುವಿನ ಗೆರೆಯನ್ನು ಸಮಕಾಲೀನರಲ್ಲಿ ಅವರಷ್ಟು ಗುರುತಿಸಿದವರು ಮತ್ತೊಬ್ಬರಿಲ್ಲ ಅಂತ ನನ್ನ ಅನಿಸಿಕೆ. ಅವರ ಮಾತು ಸೋತ ಭಾರತ ನಿಜಕ್ಕೂ ನನ್ನಂತಹ ಅಸಂಖ್ಯ ಜನರು ಹೇಳಲು ತೋಚದೆ ಉಳಿದುಕೊಂಡಿದ್ದ ಭಾವಕ್ಕೆ ಭಾಷ್ಯೆ ನೀಡಿತ್ತು. ಅವರು ನಮ್ಮನ್ನು ಅಗಲುವಾಗಲು ಭಾರತ ಮಾತು ಪಡೆಯದಿರುವುದು ದುಖಃದ ವಿಚಾರ.
ಕಾಮೆಂಟ್ ಪೋಸ್ಟ್ ಮಾಡಿ