ಡಿಸೆಂಬರ್ 03, 2013

ಆರೋಗ್ಯ ಕ್ಷೇತ್ರದ ಅನಾರೋಗ್ಯಕ್ಕೆ ಮದ್ದೇನು? : ಅಮೀರ್ ಖಾನ್ ಅಂಕಣ ಬರಹ

(ದ ಹಿಂದೂ ಪತ್ರಿಕೆಯಲ್ಲಿ ಈ ಬರಹ ಪ್ರಕಟವಾಗಿತ್ತು.)

ನಾನೊಂಥರಾ ಕನಸುಗಾರ. ನಾವೆಲ್ಲರೂ ಸಹ ಬಡವರು, ಶ್ರೀಮಂತರೆಂಬ ಭೇಧವಿಲ್ಲದೆ ಎಲ್ಲರೂ ಒಂದೇ ಬಗೆಯ ಆರೋಗ್ಯ ಸೌಲಭ್ಯಗಳನ್ನು ಪಡೆಯುವಂತಹ ದಿನ ನಮ್ಮ ದೇಶದಲ್ಲಿ ಬರುತ್ತದೆ ಎನ್ನುವುದು ನನ್ನ ಕನಸು. ಅನೇಕರಿಗೆ ಇದೊಂದು ಬಗೆಯಲ್ಲಿ ಅವಾಸ್ತವವಾದ ಹಾಗೂ ಅಸಾಧ್ಯವಾದಂತಹ ಹುಚ್ಚುಕನಸು ಎನ್ನಿಸಬಹದು. ಆದರೆ ಇದು ಖಂಡಿತವಾಗಿಯೂ ಕಾಣಬೇಕಾದಂತಹ ಕನಸು ಹಾಗೂ ಇಂತಹ ಕನಸೊಂದು ನನಸಾಗಲೇಬೇಕೆನ್ನಲು ಕಾರಣಗಳಿವೆ ಎನ್ನುವುದು ನನ್ನ ನಂಬುಗೆ.
ನೀವು ಬಡವರಿರಲಿ, ಶ್ರೀಮಂತರಿರಲಿ, ನಿಮ್ಮ ಪ್ರೀತಿಪಾತ್ರೊಬ್ಬರನ್ನು ಕಳೆದುಕೊಂಡಾಗ ಉಂಟಾಗುವ ದು:ಖ ದುಮ್ಮಾನಗಳಿಗೆ ಭಿನ್ನಭೇಧವಿರುವುದಿಲ್ಲ. ನನ್ನ ಮಗು ವಾಸಿಯಾಗದ ಖಾಯಿಲೆಗೆ  ತುತ್ತಾಗಿ ನರಳಿ ನರಳಿ ತೀರಿಕೊಳ್ಳುವಾಗ, ಆಗ ನನಗೇನೂ ಮಾಡಲು ಸಾಧ್ಯವಾಗದಿರುವಾಗ ನಿಜಕ್ಕೂ ದು:ಖವಾಗುತ್ತದೆ. ಆದರೆ ಆ ಮಗುವಿನ ಖಾಯಿಲೆಯನ್ನು ಗುಣಪಡಿಸಬಹದಾದ ಔಷಧವೊಂದಿದೆ ಎಂದು ತಿಳಿದೂ ನನಗೆ ಆ ಔಷಧಿಯನ್ನು ಕೊಳ್ಳಲಾಗದಿರುವ ಕಾರಣಕ್ಕೆ ನನ್ನ ಮಗುವು ನರಳಿ ಸಾಯುತ್ತದೆ ಎಂದಾದಾಗ, ಅದನ್ನು ನಾನು ನೋಡಿ ಸುಮ್ಮನಿರಬೇಕಾಗಿ ಬಂದಾಗ - ಅಂತಹ ಒಂದು ಸ್ಥಿತಿ ನಿಜಕ್ಕೂ ದುರಂತಮಯ.
ಒಂದು ಒಳ್ಳೆಯ ಆರೋಗ್ಯ ಆರೈಕೆ ವ್ಯವಸ್ಥೆಯೊಂದು ನಮ್ಮಲ್ಲಿಲ್ಲದಿರುವಂತೆ ಮಾಡಿರುವ ಕಾರಣವಾದರೂ ಏನು?
ನಾವು ಅಸಂಖ್ಯ ಜನರು ತೆರಿಗೆ ಕಟ್ಟುತ್ತೇವೆ. ಕೆಲವರು ಕಟ್ಟುವುದಿಲ್ಲ. ಹಾಗೆಯೇ ಬಹುತೇಕ ಜನರಿಗೆ ಪ್ರತ್ಯಕ್ಷ ತೆರಿಗೆ ಕಟ್ಟುವಷ್ಟು ಆದಾಯವೇ ಇರುವುದಿಲ್ಲ. ಆದರೆ,  ಪ್ರತಿ ರಾಜ್ಯವೂ ವಿವಿಧ ಬಗೆಯಲ್ಲಿ ಪರೋಕ್ಷ ತೆರಿಗೆಯನ್ನು ಸಂಗ್ರಹಿಸುತ್ತದೆ. ಅದು ಸಣ್ಣಮೊತ್ತವಿರಲಿ, ದೊಡ್ಡಮೊತ್ತವಿರಲಿ, ಪ್ರತಿ ಸಲ ನಾವೇನಾದರೂ ಕೊಂಡುಕೊಳ್ಳುವಾಗಲೂ ಒಂದಲ್ಲಾ ಒಂದು ಬಗೆಯ ತೆರಿಗೆಯನ್ನು ಕಟ್ಟುತ್ತಲೇ ಇರುತ್ತೇವೆ. ಅಂದರೆ, ಅದರರ್ಥ ಅಗ್ದಿ ಬಡವರೂ ಸಹ ತೆರಿಗೆ ನೀಡುತ್ತಿರುತ್ತಾರಲ್ಲದೆ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗಾಗಿ ಅವರ ಪಾಲೂ ಸಂದಾಯವಾಗುತ್ತಿರುತ್ತದೆ. ಆದರೆ ಅದಕ್ಕೆ ತಕ್ಕಂತೆ ಅವರಿಗೆ ಪ್ರತಿಫಲವೆಂಬುದು ದಕ್ಕುವುದಿಲ್ಲ ಅಷ್ಟೆ. ನಮ್ಮ ಒಟ್ಟು ರಾಷ್ಟ್ರೀಯ ಉತ್ಪನ್ನದ (ಜಿಡಿಪಿ) ಶೇಕಡಾ ೧.೪ ರಷ್ಟನ್ನು ಮಾತ್ರ ಈ ದೇಶದಲ್ಲಿ ಸಾರ್ವಜನಿಕ ಆರೋಗ್ಯ ಕ್ಷೇತ್ರಕ್ಕೆ ವಿನಿಯೋಗಿಸಲಾಗುತ್ತದೆ.

ಯಾಕೆ ಹೀಗೆ?
ಈ ಕ್ಷೇತ್ರದಲ್ಲಿ ಪರಿಣಿತರಾದವರು ಹೇಳುವ ಪ್ರಕಾರ ನಮ್ಮ ದೇಶದಲ್ಲಿ ಮೂಲಭೂತ ಸಾರ್ವಜನಿಕ ಆರೋಗ್ಯ ಸೌಲಭ್ಯಗಳಿಗೆಗೆಂದೇ ಕನಿಷ್ಠ ಶೇಕಡ ೬ ರಷ್ಟನ್ನಾದರೂ ಮೀಸಲಿಡಬೇಕು. ನಾನು ಅರ್ಥಶಾಸ್ತ್ರಜ್ಞನೂ ಅಲ್ಲ ವೈದ್ಯನೂ ಅಲ್ಲ. ಆದರೂ ಸ್ವಲ್ಪ ಸೇಫರ್ ಸೈಡ್‌ನಲ್ಲಿದ್ದುಕೊಂಡೇ ಮಾತನಾಡುವುದಾದರೆ ನನ್ನ ಪ್ರಕಾರ ಇದು ಶೇಕಡ ೮ ರಿಂದ ೧೦ ರಷ್ಟಂತೂ ಇರಬೇಕು.
ಒಂದು ಸಮಾಜದ ಆರೋಗ್ಯವೇ ಸರಿಯಿಲ್ಲ ಅಂದ ಮೇಲೆ ಅಲ್ಲಿ ಸಾಧಿಸುವ ಭಾರೀ ಜಿಡಿಪಿ ಕಟ್ಟಿಕೊಂಡು  ಆಗಬೇಕಾಗಿದ್ದಾದರೂ ಏನು ಹೇಳೀ? ನಾವು ಆರೋಗ್ಯವಾಗಿದ್ದು, ನಾವು ಸಾಧಿಸುವ ಆರ್ಥಿಕ ಸಾಮರ್ಥ್ಯವನ್ನು ಅನುಭವಿಸಲು ನಮಗೆ ಶಕ್ಯವಿದ್ದಾಗ ಮಾತ್ರವೇ ಆರ್ಥಿಕ ಸಾಮರ್ಥ್ಯ ಬರಲು ಸಾಧ್ಯ ಎಂಭುದನ್ನು ನಾವು ಅರಿಯಬೇಕು.
ಮುಖ್ಯವಾಗಿ, ಆರೋಗ್ಯ ಕೂಡಾ ರಾಜ್ಯವೊಂದರ ವಿಷಯ. ನಮ್ಮ ಹಣದಲ್ಲಿ ಹೆಚ್ಚೆಚ್ಚು ಪ್ರಮಾಣ ಸಾರ್ವಜನಿಕ ಆಸ್ಪತ್ರೆಗಳನ್ನು ಸ್ಥಾಪಿಸುವುದಕ್ಕೆ, ಮುಖ್ಯವಾಗಿ ಸರ್ಕಾರಿ ಮೆಡಿಕಲ್ ಕಾಲೇಜುಗಳನ್ನು ಸ್ಥಾಪಿಸಲು ಯಾಕೆ ಬಳಕೆಯಾಗುತ್ತಿಲ್ಲ? ಸಾರ್ವತ್ರಿಕ ಆಸ್ಪತ್ರೆಗಳಿಗೆ ಹೊಂದಿಕೊಂಡಂತೆ ಇಲ್ಲಿ ಯಾಕೆ ಹೆಚ್ಚು ಪ್ರಮಾಣದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳಿಲ್ಲ?

ಹುಮ್ಮಸ್ಸಿನ ಯುವಕರರನ್ನು ಹೊಂದಿರುವ ನಮ್ಮ ದೇಶದಲ್ಲಿ ಹೆಚ್ಚೆಚ್ಚು ವೈದ್ಯಕೀಯ ಕಾಲೇಜುಗಳನ್ನು ತೆರೆಯಬೇಕಾಗಿರುವುದು ಈ ಕ್ಷಣದ ತುರ್ತು. ಆದರೆ ಕೇಂದ್ರದಲ್ಲಿರುವ ಮತ್ತು ಎಲ್ಲಾ ರಾಜ್ಯಗಳಲ್ಲಿರುವ ಸರ್ಕಾರಗಳು ವೈದ್ಯಕೀಯ ಕಾಲೇಜುಗಳನ್ನು ತೆರೆಯುವ ಬಗ್ಗೆ ಯಾವ ಉತ್ಸಾಹವನ್ನೂ ಹೊಂದಿಲ್ಲ. ಹೀಗಾಗಿ ವೈದ್ಯರಾಗಬೇಕೆಂದು ಬಯಸುವ ತರುಣರ ಅಗತ್ಯತೆಗಳನ್ನು ಪೂರೈಸುತ್ತಿರುವವರು ಬೇರಾರೂ ಅಲ್ಲ. ನೀವು ಸರಿಯಾಗಿ ಊಹಿಸಿದಂತೆಯೇ ಖಾಸಗಿ ವೈದ್ಯಕೀಯ ಕಾಲೇಜುಗಳು. ಅಲ್ಲಿ ತಲಾ ವಿದ್ಯಾರ್ಥಿಗೆ ೫೦ ರಿಂದ ೬೦ ಲಕ್ಷ ರೂಪಾಯಿಗಳಷ್ಟು ಹಣವನ್ನು ಅನಧಿಕೃತವಾಗಿ ವಸೂಲಿ ಮಾಡಲಾಗುತ್ತಿದೆ ಎಂದು ನಾನು ಕೇಳಿದ್ದೇನೆ.
ಹೆಚ್ಚಿನ ಪ್ರಕರಣಗಳಲ್ಲಿ ಖಾಸಗಿ ವೈದ್ಯಕೀಯ ಕಾಲೇಜುಗಳನ್ನು ಒಂದು ಉದ್ದಿಮೆ ಎಂದು ಪರಿಗಣಿಸಿ ಬೆಳೆಸಲಾಗುತ್ತದೆ. ಅದರಲ್ಲಿ ಬಹಳಷ್ಟಕ್ಕೆ ಕಾರ್ಯನಿರತ ಆಸ್ಪತ್ರೆಗಳೊಂದಿಗೆ ಸಂಬಂಧವೇ ಇರುವುದಿಲ್ಲ. ಆದರೆ ವೈದ್ಯಕೀಯ ಕಾಲೇಜುಗಳಿಗೆ ಇದು  ಬಹಳ ಮುಖ್ಯವಾಗಿ ಇರಬೇಕಾಗಿರುತ್ತದೆ. ಇಂತಹ ಖಾಸಗಿ ಕಾಲೇಜುಗಳಿಂದ ಹೊರ ಬರುವ ವೈದ್ಯರು ಎಷ್ಟರ ಮಟ್ಟಿಗೆ ಸ್ಪರ್ಧಾಸಮರ್ಥರಾಗಿರಬಲ್ಲರು ಎಂಬ ಕುರಿತು ನನಗೆ ಆಗಾಗ ಪ್ರಶ್ನೆಯುಂಟಾಗುತ್ತದೆ.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವೈದ್ಯಕೀಯ ಕಾಲೇಜುಗಳಿಗೆ ಹೊಂದಿಕೊಂಡಿರುವ ಹೆಚ್ಚೆಚ್ಚು ಸಾರ್ವಜನಿಕ ಆಸ್ಪತ್ರೆಗಳನ್ನು ತೆರೆಯಬೇಕಿದೆ ಎಂಬುದನ್ನು ನಾವೀಗ ದೃಢವಾಗಿ ಹೇಳುವ ಅಗತ್ಯವಿದೆ.
ಖಾಸಗಿ ಆಸ್ಪತ್ರೆಗಳನ್ನೂ ಸ್ವಾಗತಿಸೋಣ. ಆದರೆ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಕುರಿತು ಗಮನ ಕೇಂದ್ರೀಕರಿಸೋಣ ಹಾಗೂ ಖಾಸಗಿ ಆಸ್ಪತ್ರೆಗಳು ಅವುಗಳೊಂದಿಗೆ ಸ್ಪರ್ಧಿಸಲು ಹೆಣಗಾಡುವಂತೆ ಮಾಡೋಣ. ಆಗ ಸಮಾಜಕ್ಕೆ ಉತ್ತಮ ಗುಣಮಟ್ಟದ ಸೇವೆಗಳು ಲಭ್ಯವಾಗುತ್ತವೆ.
ಒಬ್ಬ ಎಂಬಿಬಿಎಸ್ ಪರೀಕ್ಷೆ ಬರೆಯಲು ಕುಳಿತ ವಿದ್ಯಾರ್ಥಿ/ ವಿದ್ಯಾರ್ಥಿನಿಗೆ ಮಧುಮೇಹಕ್ಕೆ ನೀಡಬೇಕಾದ ಔಷಧಿ ಯಾವುದು ಎಂಬ  ಪ್ರಶ್ನೆ ಕೇಳಿದರೆ ಆತ/ ಆಕೆ ’ಗ್ಲಿಮೆಪಿರೈಡ್’ ಎಂದು ಉತ್ತರ ನೀಡಬಹುದು. ಮಧುಮೇಹಕ್ಕೆ ಚಿಕಿತ್ಸೆ ನೀಡುವ ಲವಣ ಇದು. ಆದರೆ ಅದೇ ವಿದ್ಯಾರ್ಥಿ ವೈದ್ಯನಾದ/ಳಾದ ಮೇಲೆ ಮಧುಮೇಹಿ ರೋಗಿಯೊಬ್ಬ ಆತನ/ಆಕೆಯ ಬಳಿ ಹೋದಾಗ ಬರೆದುಕೊಡುವ ಔಷಧಿ ’ಅಮಾರಿಲ್’ ಎಂದು. ಹಾಗಾದರೆ, ಆ ಯುವ ವೈದ್ಯ/ ವೈದ್ಯೆ ತಪ್ಪಾದ ಔಷಧಿ ಬರೆದುಕೊಟ್ಟರಾ? ಇಲ್ಲ. ’ಗ್ಲಿಮೆಪಿರೈಡ್’ ಲವಣವನ್ನು ಮಾರುವ ಹಲವು ಬ್ರಾಂಡ್‌ಗಳಲ್ಲಿ ಅಮಾರಿಲ್ ಕೂಡ ಒಂದು. ಹೀಗಾದಾಗ ಇವೆರಡರ ನಡುವಿನ ವ್ಯತ್ಯಾಸವಾದರೂ ಏನು? ಇಲ್ಲಿ ನೋಡಿ, ಅಮಾರಿಲ್‌ನ ೧೦ ಮಾತ್ರೆಗಳಿರುವ ಒಂದು ಪಟ್ಟಿಗೆ ಸುಮಾರು ೧೨೫ ರೂಪಾಯಿ. ಅದೇ ’ಗ್ಲಿಮೆಪಿರೈಡ್’ ಲವಣದ ಹತ್ತು ಮಾತ್ರೆಗಳ ಪಟ್ಟಿಗೆ ಕೇವಲ ೨ ರೂಪಾಯಿ. ಎರಡೂ ಸಾರದಲ್ಲಿ ಒಂದೇ. ಆದರೆ ಕೇವಲ ಬ್ರಾಂಡ್ ಹೆಸರಿಗೇ ನಾವು ೧೨೩ ರೂಪಾಯಿಗಳ ಅಧಿಕ ಹಣವನ್ನು ತೆರಬೇಕಾಗಿದೆ.
 ಅಂಥವೇ ಮತ್ತೊಂದಷ್ಟು ಉದಾಹರಣೆಗಳು ಇಲ್ಲಿವೆ.
ಶೀತ ನೆಗಡಿ ಸರ್ವಸಾಮಾನ್ಯ ಖಾಯಿಲೆ. ಇದಕ್ಕೆ ನೀಡಲಾಗುವ ಲವಣದ ಹೆಸರು ಸಿಟ್ರಿಜೈನ್ ಅಂತ. ಈ ಜನರಿಕ್ ಔಷಧಿಯ ತಯಾರಿ, ಪ್ಯಾಕೇಜಿಂಗ್, ಸಾಗಾಣಿಕೆ, ಮತ್ತು ಒಂದಷ್ಟು ಮಾರ್ಜಿನ್ ಕೂಡಾ ಸೇರಿ ಹತ್ತು ಮಾತ್ರೆಗಳಿಗೆ ೧ ರೂಪಾಯಿ ೨೦ ಪೈಸೆ ತಗುತ್ತದೆ. ಆದರೆ ಇದನ್ನೇ ನಾವು ಸೆಟ್‌ಜೈನ್‌ನಂತಹ ಬ್ರಾಂಡ್ ಹೆಸರಲ್ಲಿ ಕೊಂಡಾಗ ಹತ್ತು ಗುಳಿಗೆಗಳಿಗೆ ೩೫ ರೂಪಾಯಿ ನೀಡುತ್ತೇವೆ.
ಹೃದಯಾಘಾತವುಂಟುವ ಬ್ಲಾಕೇಜ್‌ಗಳಿಗೆ ಚಿಕಿತ್ಸೆ ನೀಡಲು ಉಪಯೋಗಿಸುವ ಇಂಜೆಕ್ಷನ್ ಹೆಸರು ಸ್ಟೆಪ್ಟೋಕಿನೇಸ್ ಅಥವಾ ’ಯುರೋಕಿನೇಸ್’. ಇವಕ್ಕೆ ತಲಾ ೧೦೦೦ ರೂಪಾಯಿ ವೆಚ್ಚವಾಗುತ್ತದೆ. ಆದರೆ ಅವುಗಳ ಬ್ರಾಂಡ್ ಹೆಸರುಗಳಿಗೆ ನಾವು ಔಷಧಿ ಅಂಗಡಿಗಳಲ್ಲಿ ತಲಾ ೫೦೦೦ ರೂಪಾಯಿ ನೀಡುಬೇಕು.
ಭಾರತದಲ್ಲಿ ಮಲೇರಿಯಾ ಬಹಳ ಜನರನ್ನು ಅದರಲ್ಲೂ ಮಕ್ಕಳನ್ನು ಕೊಲ್ಲುತ್ತದೆ. ಈ ಮಲೇರಿಯಾ ಪ್ರತಿಬಂಧಕ ಚಿಕಿತ್ಸೆಗೆ ಉಪಯೋಗಿಸುವ ಮೂರು ಇಂಜೆಕ್ಷನ್‌ಗಳ ಒಂದು ಪ್ಯಾಕ್‌ಗೆ ೨೫ ರೂಪಾಯಿ ತಗುಲುತ್ತದೆ. ಆದರೆ ಬ್ರಾಂಡ್ ಹೆಸರುಗಳು ೩೦೦ ರೂಪಾಯಿಯಿಂದ ೪೦೦ ರೂಪಾಯಿಗಳನ್ನು ಸುಲಿಯುತ್ತವೆ.
ಅತಿಸಾರ ಕೂಡಾ ಭಾರತದ ಬಹಳಷ್ಟು ಮಕ್ಕಳನ್ನು ಬಲಿತೆಗೆದುಕೊಳ್ಳುತ್ತದೆ. ದೇಹದ ನೀರಿನಂಶವನ್ನು ಕಡಿಮೆ ಮಾಡುವ ವಾಂತಿಯನ್ನು ನಿಯಂತ್ರಿಸಲು ಡಾಂಪೆರಿಡೋನ್ ಎಂಬ ಲವಣವನ್ನು ಉಪಯೋಗಿಸಲಾಗುತ್ತದೆ. ಅದರ ಬೆಲೆ ಹತ್ತು ಮಾತ್ರೆಗಳಿಗೆ ೧.೨೦ ರೂಪಾಯಿ. ಡಾಮ್‌ಸ್ಟಾಲ್ ಎಂಬ ಅದರ ಬ್ರಾಂಡ್ ಹೆಸರಿಗೆ ೩೩ ರೂಪಾಯಿ
ನಮ್ಮ ಬಡಜನತೆ, ಅಥವಾ ಮಧ್ಯಮವರ್ಗದಳು ಚಿಕಿತ್ಸೆ ಪಡೆಯಲು ಹೇಗೆ ಸಾಧ್ಯ?
ಇದಕ್ಕಿರುವ ಒಂದೇ ಉತ್ತರ ಜನೆರಿಕ್ ಔಷಧಗಳು
ಈ ವಿಚಾರದಲ್ಲಿ ನಾವು ರಾಜಾಸ್ತಾನ ಸರ್ಕಾರದ ಪ್ರಯತ್ನಗಳನ್ನು ಮೆಚ್ಚಿಕೊಳ್ಳಬೇಕು. ಅಲ್ಲಿ ಸರ್ಕಾರವೇ ಜನೆರಿಕ್ ಔಷಧಿಗಳನ್ನು ಮಾರುವ ಅಂಗಡಿಗಳನ್ನು ರಾಜ್ಯದಾದ್ಯಂತ ಸ್ಥಾಪಿಸಿದೆ. ಜನತೆಗೆ ಸಾಧ್ಯವಾದಷ್ಟು ಕಡಿಮೆ ಬೆಲೆಯಲ್ಲಿ ಔಷಧಿ ಚಿಕಿತ್ಸೆ ದೊರೆಯುವಂತೆ ಮಾಡುವ ನಿಟ್ಟಿನಲ್ಲಿ ಸರ್ಕಾರ ನಡೆಸುತ್ತಿರುವ ಪ್ರಯತ್ನ ಇದು.
ಔಷಧಿಗಳ ದುಬಾರಿ ಬೆಲೆಯನ್ನು ಭರಿಸಲಾಗದೆ ಭಾರತದಲ್ಲಿ ಶೇಕಡ ೨೫ರಷ್ಟು ಖಾಯಿಲೆಗಳಿಗೆ ಚಿಕಿತ್ಸೆಯೇ ದೊರೆಯುವುದಿಲ್ಲ. ಪ್ರತಿ ಭಾರತೀಯನಿಗೆ ಈ ಜನೆರಿಕ್ ಔಷಧಗಳು ಮಾಡಬಹುದಾದ ಸಹಾಯವನ್ನು ಯೋಚಿಸಿ. ಇಂತಹ ಒಂದು ಕೆಲಸವನ್ನು ರಾಜಸ್ತಾನ ಸರ್ಕಾರ ಮಾಡುತ್ತಿದೆಯೆಂದಾದರೆ ಉಳಿದ ಸರ್ಕಾರಗಳು ಮಾಡಲಿಕ್ಕೆ ಏನಡ್ಡಿ?
ಒಂದು ಕುತೂಹಲಕಾರಿ ಮಾಹಿತಿ: ರಾಸಾಯನಿಕಗಳು ಹಾಗೂ ಗೊಬ್ಬರಗಳ ಸಚಿವಾಲಯವು ಯಾರೆಲ್ಲಾ ಜನೆರಿಕ್ ಔಷಧಗಳನ್ನು ಮಾರಲು ಮುಂದೆ ಬರುತ್ತಾರೋ ಅಂತವರಿಗೆ ೫೦,೦೦೦ ರೂಪಾಯಿ ಕೊಡುಗೆ ನೀಡುತ್ತೇವೆಂದು ಘೋಷಿಸಿದೆಯಲ್ಲದೆ ಅಂತಹ ಅಂಗಡಿಗೆ ಜಾಗವನ್ನೂ ನೀಡುತ್ತದೆ.
ಒಳ್ಳೆಯ, ಗುಣಮಟ್ಟದ ಸಾರ್ವಜನಿಕ ಆರೋಗ್ಯ ಆರೈಕೆ ಬಡವಶ್ರೀಮಂತರೆನ್ನದೆ ಎಲ್ಲರಿಗೂ ಒಂದೇ ರೀತಿಯಲ್ಲಿ ಲಭ್ಯವಾಗುತ್ತದೆ ಎಂಬ ನನ್ನ ಕನಸು ನನಸಾಗುವಂತೆ ತೋರುತ್ತದೆ.
ವಿ.ಸೂ. ನಮ್ಮ ವೈದ್ಯರು ಔಷಧಿಗಳನ್ನು ಸೂಚಿಸುವಾಗ ಜನೆರಿಕ್ ಔಷಧಿಗಳ ಹೆಸರನ್ನ ಬರೆದು ಬ್ರಾಂಡ್ ಔಷಧಿಗಳು ಬೇಕೇ ಬೇಡವೇ ಎಂದು ನಾವೇ ಆಯ್ಕೆ ಮಾಡಿಕೊಳ್ಳಲು ಅವಕಾಶ ಮಾಡಿಕೊಬಲ್ಲರಾ?
ಜೈ ಹಿಂದ್. ಸತ್ಯ ಮೇವ ಜಯತೇ
(ಅಮಿರ್‌ಖಾನ್ ಒಬ್ಬ ನಟ. ಅವರ ಅಂಕಣ ದ ಹಿಂದೂ ಪತ್ರಿಕೆಯಲ್ಲಿ ಪ್ರತಿ ಸೋಮವಾರ ಪ್ರಕಟವಾಗುತ್ತದೆ)ಕಾಮೆಂಟ್‌ಗಳಿಲ್ಲ: