ಲೇಖಕ ಯಾವತ್ತೂ ಸತ್ಯವನ್ನು ಹೇಳಬೇಕು: ನಾ. ಡಿಸೋಜಾ.

( ಹಿರಿಯ ಸಾಹಿತಿ ನಾ. ಡಿಸೋಜಾ ಅವರೊಂದಿಗೆ ನಡೆಸಿರುವ ಸಂದರ್ಶನದ ಆಯ್ದ ಭಾಗ) ನೀವು ಸಾಹಿತ್ಯ ಕ್ಷೇತ್ರಕ್ಕೆ ಪ್ರವೇಶಿಸಿದ ಹಿನ್ನೆಲೆಯೇನು? ಹೇಗೆ ಬರವಣಿಗೆಯ ಗೀಳು ಹತ್ತಿಸಿಕೊಂಡಿರಿ? ಮೂಲತಃ ಕೊಂಕಣಿ ಭಾಷಿಕನಾದ ನನಗೆ ಮನೆಯಲ್ಲಿ ಓದುವ ವಾತಾವರಣವಿತ್ತು. ನಮ್ಮ ತಂದೆ ಸ್ಕೂಲಿನ ಮಾಸ್ತರರಾಗಿದ್ದರು. ಅವರು ತಮ್ಮ ಪುಸ್ತಕಗಳಲ್ಲಿ ಮಕ್ಕಳಿಗಾಗಿ ಸಣ್ಣ ಸಣ್ಣ ಪದ್ಯಗಳನ್ನು ಬರೆದಿಟ್ಟುಕೊಳ್ಳುತ್ತಿದ್ದರು. ದೋಣಿ ಸಾಗಲಿ, ಮುಂದೆ ಹೋಗಲಿ, ನಾ ಕಸ್ತೂರಿ ನೀ ಹೊಯ್ಸಳ ಹೀಗೆ. ನಾನು 6ನೇ ವಯಸ್ಸಿನಲ್ಲಿ ಮೊದಲು ಓದಿದ ಪುಸತಕ ಅದೇ. ನನ್ನ ತಾಯಿ ನನಗೆ ಕೊಂಕಣಿ ಪದ್ಯಗಳನ್ನು ಹೇಳುತ್ತಿದ್ದರು. ತಂದೆ ಕಥೆಗಳನ್ನು ಹೇಳುತ್ತಿದ್ದರು. ನಾನು ಬೆಳೆಯುವ ಪೂರ್ವದಲ್ಲಿಯೇ ಅಕ್ಕ-ಅಣ್ಣಂದಿರ ಎಲ್ಲಾ ಪುಸ್ತಕಗಳನ್ನೂ ಓದಿ ಬಿಟ್ಟಿದ್ದೆ. ಸಂಧ್ಯಾರಾಗ, ಇಜ್ಜೋಡು, ಮರಳಿ ಮಣ್ಣಿಗೆ ಮುಂತಾದವನ್ನು ಪ್ರಾಥಮಿಕ ತರಗತಿಗಳಲ್ಲೇ ತಿರುವಿಹಾಕಿದ್ದೆ. ಓದುತ್ತಾ, ಓದುತ್ತಾ ಬರೆಯಬೇಕೆನ್ನಿಸಿತು. ಬರಹಗಾರನಾದೆ. ಅತ್ಯುತ್ತಮ ಶಿಕ್ಷಕರು ಸಿಕ್ಕಿದರು. ಗೊರೂರು ರಾಮಸ್ವಾಮಿ ಅಯ್ಯಂಗಾರರ ಅಣ್ಣ ಗೊರೂರು ನರಸಿಂಹಾಚಾರ್ ಎನ್ನುವವರು ಸಾಗರದ ಹೈಸ್ಕೂಲಿನಲ್ಲಿ ನನಗೆ ಶಿಕ್ಷಕರಾಗಿದ್ದರು.ಕಾಲೇಜಿನಲ್ಲಿ ಜಿ.ಎಸ್.ಶಿವರುದ್ರಪ್ಪ ನನಗೆ ಉಪನ್ಯಾಸಕರಾಗಿದ್ದರು. ಹಾಗೇ ಸಾಹಿತ್ಯದ ಬಗ್ಗೆ ಆಸಕ್ತಿ ಬೆಳೆಯಿತು. ಹೊಸ ತಲೆಮಾರಿನವರ ಸಾಹಿತ್ಯ ಸೃಷ್ಟಿಯನ್ನು ನೋಡಿದಾಗ ನಿಮಗೇನನ್ನಿಸು...