ಡಿಸೆಂಬರ್ 04, 2013

ಲೇಖಕ ಯಾವತ್ತೂ ಸತ್ಯವನ್ನು ಹೇಳಬೇಕು: ನಾ. ಡಿಸೋಜಾ.





 (ಹಿರಿಯ ಸಾಹಿತಿ ನಾ. ಡಿಸೋಜಾ ಅವರೊಂದಿಗೆ ನಡೆಸಿರುವ ಸಂದರ್ಶನದ ಆಯ್ದ ಭಾಗ)

ನೀವು ಸಾಹಿತ್ಯ ಕ್ಷೇತ್ರಕ್ಕೆ ಪ್ರವೇಶಿಸಿದ ಹಿನ್ನೆಲೆಯೇನು? ಹೇಗೆ ಬರವಣಿಗೆಯ ಗೀಳು ಹತ್ತಿಸಿಕೊಂಡಿರಿ?
ಮೂಲತಃ ಕೊಂಕಣಿ ಭಾಷಿಕನಾದ ನನಗೆ ಮನೆಯಲ್ಲಿ ಓದುವ ವಾತಾವರಣವಿತ್ತು. ನಮ್ಮ ತಂದೆ ಸ್ಕೂಲಿನ ಮಾಸ್ತರರಾಗಿದ್ದರು. ಅವರು ತಮ್ಮ ಪುಸ್ತಕಗಳಲ್ಲಿ ಮಕ್ಕಳಿಗಾಗಿ ಸಣ್ಣ ಸಣ್ಣ ಪದ್ಯಗಳನ್ನು ಬರೆದಿಟ್ಟುಕೊಳ್ಳುತ್ತಿದ್ದರು. ದೋಣಿ ಸಾಗಲಿ, ಮುಂದೆ ಹೋಗಲಿ, ನಾ ಕಸ್ತೂರಿ ನೀ ಹೊಯ್ಸಳ ಹೀಗೆ. ನಾನು 6ನೇ ವಯಸ್ಸಿನಲ್ಲಿ ಮೊದಲು ಓದಿದ ಪುಸತಕ ಅದೇ. ನನ್ನ ತಾಯಿ ನನಗೆ ಕೊಂಕಣಿ ಪದ್ಯಗಳನ್ನು ಹೇಳುತ್ತಿದ್ದರು. ತಂದೆ ಕಥೆಗಳನ್ನು ಹೇಳುತ್ತಿದ್ದರು. ನಾನು ಬೆಳೆಯುವ ಪೂರ್ವದಲ್ಲಿಯೇ ಅಕ್ಕ-ಅಣ್ಣಂದಿರ ಎಲ್ಲಾ ಪುಸ್ತಕಗಳನ್ನೂ ಓದಿ ಬಿಟ್ಟಿದ್ದೆ. ಸಂಧ್ಯಾರಾಗ, ಇಜ್ಜೋಡು, ಮರಳಿ ಮಣ್ಣಿಗೆ ಮುಂತಾದವನ್ನು ಪ್ರಾಥಮಿಕ ತರಗತಿಗಳಲ್ಲೇ ತಿರುವಿಹಾಕಿದ್ದೆ. ಓದುತ್ತಾ, ಓದುತ್ತಾ ಬರೆಯಬೇಕೆನ್ನಿಸಿತು. ಬರಹಗಾರನಾದೆ. ಅತ್ಯುತ್ತಮ ಶಿಕ್ಷಕರು ಸಿಕ್ಕಿದರು. ಗೊರೂರು ರಾಮಸ್ವಾಮಿ ಅಯ್ಯಂಗಾರರ ಅಣ್ಣ ಗೊರೂರು ನರಸಿಂಹಾಚಾರ್ ಎನ್ನುವವರು ಸಾಗರದ ಹೈಸ್ಕೂಲಿನಲ್ಲಿ ನನಗೆ ಶಿಕ್ಷಕರಾಗಿದ್ದರು.ಕಾಲೇಜಿನಲ್ಲಿ ಜಿ.ಎಸ್.ಶಿವರುದ್ರಪ್ಪ ನನಗೆ ಉಪನ್ಯಾಸಕರಾಗಿದ್ದರು. ಹಾಗೇ ಸಾಹಿತ್ಯದ ಬಗ್ಗೆ ಆಸಕ್ತಿ ಬೆಳೆಯಿತು.
ಹೊಸ ತಲೆಮಾರಿನವರ ಸಾಹಿತ್ಯ ಸೃಷ್ಟಿಯನ್ನು ನೋಡಿದಾಗ ನಿಮಗೇನನ್ನಿಸುತ್ತಿದೆ?
ನಿಜಕ್ಕೂ ಇಂದಿನ ಹೊಸ ತಲೆಮಾರಿನ ಅನೇಕ ಲೇಖಕರು ಬಹಳ ಜವಾಬ್ದಾರಿಯಿಂದ ಬರೆಯುತ್ತಿದ್ದಾರೆ. ಅವರಿಗೆ ಸಾಹಿತ್ಯವನ್ನು ಈ ದಿಕ್ಕೆಗೇತೆಗೆದುಕೊಂಡು ಹೋಗಬೇಕು ಎಂಬ ನಿಲುವಿದೆ. ಹಾಗೆಯೇ ಬರೆಯುತ್ತಿದ್ದಾರೆ ಕೂಡ. ನಮಗಿಂತ ಕಿರಿಯರಾದ ದೇವನೂರ ಮಹಾದೇವ ಇರಬಹುದು, ಜಯಂತ ಕಾಯ್ಕಿಣಿ ಇರಬಹುದು, ವಸುಧೇಂದ್ರ ಮತ್ತಿತರರು ಉತ್ತಮ ರೀತಿಯಲ್ಲಿ ಸಾಹಿತ್ಯ ರಚನೆ ಮಾಡುತ್ತಿದ್ದಾರೆ. ಆದರೆ ನಮಗೆಅಂದು ಇದ್ದಂತಹ ಓದುಗ ಸಮೂಹ ಇಂದು ಇವರಿಗಿಲ್ಲ. ಎಲ್ಲೋ ಕಾಲೇಜುಗಳಲ್ಲಿ ಕೆಲವರು ಮಾತ್ರ ಇವರು ಬರೆದಿದ್ದನ್ನು ಓದಿ ಹೊಗಳುತ್ತಾರೆ ಬಿಟ್ಟರೆ ಆ ಮಟ್ಟದಲ್ಲಿ ಜನರು ಓದುತ್ತಿಲ್ಲ. ನಮಗಾದರೆ ಒಂದು ಕೃತಿ ಪ್ರಕಟವಾದರೆ ಸಾಕು ಅದಕ್ಕೆ ಓದುಗಗರು ಪತ್ರ ಬರೆಯುತ್ತಿದ್ದರು.
ಸಾಹಿತ್ಯ ಪುಸ್ತಕಗಳ ಮಾರಾಟ ಚೆನ್ನಾಗಿಯೇ ನಡೆಯುತ್ತಿದೆಯಲ್ಲ?
ನಮ್ಮ ಜನರಿಗೆ ಒಂದು ಬಗೆಯ ಪುಸ್ತಕದ ವ್ಯಾಮೋಹವಿದೆ. ಅಂಗಡಿಗಳಲ್ಲಿ ಕೊಂಡುಚೆನ್ನಾಗಿ ಪ್ಯಾಕ್ ಮಾಡಿಕೊಂಡು ಮನೆಗೆ ಒಯ್ಯುತ್ತಾರೆ. ಆದರೆ ಅದರಲ್ಲಿ ಎಷ್ಟುಓದುತ್ತಾರೆ? ಹೀಗೆ ಜನರು ಓದದಿರುವುದಕ್ಕೆ ಮಾಧ್ಯಮಗಳೇ ಕಾರಣ. ಪ್ರತಿಪಾತ್ರವನ್ನೂ, ಪ್ರತಿ ದೃಶ್ಯವನ್ನೂ ವರ್ಣರಂಜಿತವಾಗಿ ತೋರಿಸುತ್ತ ಇರುವುದರಿಂದ ಸುಲಭವಾಗಿ ಜನರು ಆ ಕಡೆ ವಾಲುತ್ತಿದ್ದಾರೆ. ಈಗ ಟಿಆರ್ಪಿ ಎನ್ನುವುದು ಬೇರೆಬಂದಿದೆ. ಒಬ್ಬ ಒಳ್ಳೆಯ ಲೇಖಕ ಜನಕ್ಕೆ ಏನು ಬೇಕು ಅಂತ ನೋಡಿ ಬರೆಯುವುದಿಲ್ಲ. ಆದರೆ ಒಬ್ಬ ಕೆಟ್ಟ ಲೇಖಕ ಜನರು ಏನು ಬಯಸುತ್ತಾರೆ ನೋಡಿಅದರಂತೆ ಬರೆಯುತ್ತಾನೆ. ಅದು  ಸಾಹಿತ್ಯಕ್ಕೆ ಮಾಡುವ ದೊಡ್ಡ ದ್ರೋಹ. ನಮ್ಮಹಳೆಯ ಲೇಖಕರೆಲ್ಲಾ ತಮಗೆ ಏನು ಬೇಕೋ ಅದನ್ನು ಬರೆಯುತ್ತಿದ್ದರು. ಶಿವರಾಮಕಾರಂತ, ಇತ್ಯಾದಿ ಲೇಖಕರು ನಮಗೇನನ್ನಿಸುತ್ತದೆ, ಸಮಾಜ ತಮಗೆ ಹೇಗೆಕಂಡಿದೆ, ತಾನು ಸಮಾಜಕ್ಕೆ ಏನನ್ನು ಹೇಳಬೇಕು ಎಂಬುದನ್ನು ಗಮನದಲ್ಲಿಟ್ಟುಕೊಂಡು ಬರೆಯುತ್ತಿದ್ದರು. ಇಂದು ಅಂತವರ ಸಂಖ್ಯೆ ಕಡಿಮೆಯಾಗಿರುವುದು ದುರಂತ.
 
ಮೊದಲಿನಿಂದಲೂ ಶ್ರದ್ಧೆಯಿಂದ ಬಾಲಸಾಹಿತ್ಯವನ್ನು ರಚಿಸಿಕೊಂಡುಬರುತ್ತಿದ್ದೀರಿ.  ಈ ಪ್ರಕಾರ ಇಂದು ಇಂದು ಯಾವಬಗೆಯ ಪ್ರತಿಕ್ರಿಯೆ ಪಡೆಯುತ್ತಿದೆ?
ಬಾಲ ಸಾಹಿತ್ಯಕ್ಕೆ ಇಂದು ಬಹಳ ಶಿಥಿಲವಾದ ಪ್ರತಿಕ್ರಿಯೆ ಇದೆ. ಇದು ಬಹಳಬೇಸರದ ವಿಷಯ. ಒಂದು ಕಾಲಕ್ಕೆ ಪಂಜೆ ಮಂಗೇಶರಾಯರು, ನಾ.ಕಸ್ತೂರಿ, ಜಿ.ಪಿ.ರಾಜರತ್ನಂ, ಕುವೆಂಪು, ಹೀಗೆ ಎಲ್ಲರೂ ಮಕ್ಕಳ ಸಾಹಿತ್ಯವನ್ನು ಅದ್ಭುತರೀತಿಯಲ್ಲಿ ರಚಿಸುತ್ತಿದ್ದವರೇ. ಇತ್ತೀಚೆಗೆ ಕೆಲವೇ ಜನರನ್ನು ಬಿಟ್ಟರೆ ಉಳಿದವ್ಯಾರೂಮಕ್ಕಳಿಗಾಗಿ ಬರೆಯುತ್ತಲೇ ಇಲ್ಲ. ಇದು ಏನೂ ಸಾಲದು. ನಾವು ಮಕ್ಕಳನ್ನು ಓದುವ ಹಾಗೆ ಮಾಡಬೇಕಾಗಿದೆ.ಅವರಿಗೂ ಸಾಹಿತ್ಯದ ಅಭಿರುಚಿ ಬೆಳೆಸುವ ಜವಾಬ್ದಾರಿ ಸಾಹಿತಿಗಳಿಗಿದೆ.
ನಿಮ್ಮ ಕತೆ ಕಾದಂಬರಿಗಳಲ್ಲಿ ದೀವರು, ಹಸಲರಂತಹ ಹಿಂದುಳಿದ ಸಮುದಾಯಗಳನ್ನು ಪ್ರತಿಬಿಂಬಿಸಿದ್ದೀರಿ. ಇವರ ಬದುಕಿನಲ್ಲಿ ಇಂದುಯಾವ ರೀತಿ ಬದಲಾವಣೆಗಳಾಗಿವೆ?
ನಾನು 1959 ರಲ್ಲಿ ಮಂಜಿನಕಾನು, ಆ ಕಡೆ ಹೋದಾಗ ಹಸಲರಾಗಲೀ ದೀವರಾಗಲೀ ಎದುರಿಗೆ ಬಂತು ನಿಂತುಕೊಳ್ಳಲೂ ಹೆದರುತ್ತಿದ್ದರು.ದೀವರ ಹೆಂಗಸರು ಪೇಟೆಗೆ ಬಂದರೂ ಗಂಡಸರು ಬರಲು ನಾಚಿಕೊಳ್ಳುತ್ತಿದ್ದರು. ಇಲ್ಲಿ ಪೇಟೆಯಲ್ಲಿ ಅವರನ್ನು ಅವಮಾನಿಸುತ್ತಿದ್ದರು. ಏಯ್ ಗೌಡ ಬಾ ಇಲ್ಲಿ. ಆ ಚೀಲ ತೊಗೊ ಎಂದು ದಬಾಯಿಸುತ್ತಿದ್ದರು. ಅವರು ಕೈಗೆ ವಾಚು ಕಟ್ಟುವಂತಿರಲಿಲ್ಲ. ಹಳ್ಳಿಯಲ್ಲಿ ಅನುಕೂಲ ಇದ್ದವರನ್ನೂಪೇೆಯಲ್ಲಿ ಹಾಗೆ ಅವಮಾನಿಸಲಾಗುತ್ತಿತ್ತು. ಕಾಮನ ಹಬ್ಬದ ದಿನ ಗಾಡಿಗಳನ್ನು ತಡೆಯುತ್ತಿದ್ದರು. ಗಾಡಿಯ ಕೀಲುಗಳನ್ನು ತೆಗೆದುಬಿಡುತ್ತಿದ್ದರು. ಎಷ್ಟೋ ಕಡೆ ಗಾಡಿಗಳು ಕೆಳಗೆ ಬಿದ್ದ ಉದಾಹರಣೆಗಳೂ ಇವೆ. ಕೊನೆಕೊನೆಗೆ ಕಾಮನ ಹಬ್ಬಕ್ಕೆ ಹಳ್ಳೀ ಜನ ಗಾಡಿ ಕಟ್ಟಿಕೊಂಡು ಬರುವುದನ್ನೇಬಿಟ್ಟಿದ್ದರು. ಆದರೆ ಇಂದು ನನಗೆ ಬಹಳ ಸಂತೋಷ ಆಗುವುದೇನೆಂದರೆ ಹಸಲರೇ ಆಗಲೀ ದೀವರೇ ಆಗಲಿ ಸ್ವಾಭಿಮಾನದಿಂದ ಬದುಕುತ್ತಿದ್ದಾರೆ.ಆದರೆ ಸ್ವಲ್ಪ ಅಡ್ಡ ದಾರಿ ಹಿಡಿಯುತ್ತಿರುವವರೂ ಇದ್ದಾರೆ. ಸ್ಪಷ್ಟವಾಗಿ ಹೇಳಬೇಕೆಂದರೆ ಸಾಂಸ್ಕೃತಿಕವಾಗಿ ಈ ದೀವರು ಮತ್ತು ಹಸಲರು ಬೆಳೆಯುತ್ತಿಲ್ಲ. ಇದು ವಿಷಾದನೀಯ. ಆರ್ಥಿಕವಾಗಿ ಹಾಗೂ ಅಧಿಕಾರಯುತವಾಗಿ ಮಾತ್ರವೇ ಅವರ ಬೆಳವಣಿಗೆ ಇದೆ.
ಈ ಸಮುದಾಯಗಳಿಗೆ ಸೇರದೆಯೂ ಅಷ್ಟು ಸಲೀಸಾಗಿ ನೀವು ನಿಮ್ಮ ಬರೆಹದಲ್ಲಿ ತರಲು ಹೇಗೆ ಸಾಧ್ಯವಾಯಿತು?
ಮೊದಲನೆಯದಾಗಿ ಹುಚ್ಚಪ್ಪ ಮಾಸ್ತರ ಸ್ನೇಹ. ಅವರ ಜೊತೆಯಲ್ಲಿ ನಾನುಸಿಕ್ಕಾಪ್ಟೆ ಹಳ್ಳಿಗಳನ್ನು ತಿರುಗಾಡಿದ್ದೇನೆ. ದೀವರ ಮನೆಗಳಲ್ಲಿ, ಹಸಲರ ಮನೆಗಳಲ್ಲಿ ಆ ಜನರ ಜೊತೆ ಬಹಳ ದಿನ ಒಡನಾಡಿದ್ದೇನೆ. ದೀವರ ಹೆಂಗಸರುಚಿತ್ತಾರ ಬರೆಯುವುದನ್ನು ಹದಿನೈದು ದಿನಗಳವರೆಗೆ ಕುಳಿತು ಗಮನಿಸಿದ್ದೇನೆ. ಈಜನರ ಮಾತು, ಕತೆ, ವ್ಯವಹಾರ, ಅವರ ಉಡಿಗೆ, ತೊಡಿಗೆ, ಅವರ ಗಟ್ಟಿತನ ಇವೆಲ್ಲಾ ನನ್ನಲ್ಲಿ ಆಕರ್ಷಣೆ ಉಂಟುಮಾಡಿತ್ತು. ಕುಗ್ವೆ ಊರಿನ ಓಲೆಕಾರ ಪುಟ್ಟಪ್ಪ ಎಂಬಾತ ನಮ್ಮ ಮನೆಕೆಲಸಕ್ಕೆ ಕರೆಸಿಕೊಂಡಿದ್ದೆ. ಅದ್ಭುತವಾದ ವ್ಯಕ್ತಿ. ಭಾರೀಧೈರ್ಯಶಾಲಿ. ಆತನಿಗೆ ಯಾವ ಮರದ ಹೆಸರು ಗೊತ್ತಿಲ್ಲ ಎಂದಿರಲಿಲ್ಲ. ಹಕ್ಕಿ,ಮೀನು, ಮರ, ಗಿಡ ಎಲ್ಲವುಗಳ ಹೆಸರನ್ನೂ ಸಟಸಟ ಅಂತ ಹೇಳುತ್ತಿದ್ದ. ಅದೆಲ್ಲಾಬರೆದುಕೊಂಡು ಆಕಾಶವಾಣಿಯಲ್ಲಿ ಒಂದು ಭಾಷಣವನ್ನೂ ಮಾಡಿದ್ದೆ. ಇಂತವರು ಬಹಳ ಜನ ಇದ್ದರು. ಆ ಜನರ ಜೀವನ ಶ್ರದ್ಧೆಯನ್ನು ನಾನು ಪ್ರೀತಿಸುತ್ತಿದ್ದೆ.
ಕ್ರೈಸ್ತ ಸಮುದಾಯದಿಂದ ಬಂದ ನೀವು ಹಲವು ಕೃತಿಗಳಲ್ಲಿ ಕ್ರೈಸ್ತರ ಕೆಲ ವರ್ತನೆಗಳನ್ನು ಟೀಕಿಸಿದ್ದೀರಿ. ಆ ಸಂದರ್ಭದಲ್ಲಿ ಕ್ರೈಸ್ತ ಸಮುದಾಯ ನಿಮ್ಮ ಬಗ್ಗೆ ಯಾವ ರೀತಿ ಪ್ರತಿಕ್ರಿಯಿಸಿದೆ?
ಕ್ರೈಸ್ತ ಸಮುದಾಯದವರಿಗೆ ನನ್ನ ಮೇಲಿರುವ ಆಪಾದನೆ ಎಂದರೆ ಈತ ಬೈಯುತ್ತಾನೆ ಎನ್ನುವುದು. ಆದರೆ ಒಬ್ಬ ಲೇಖಕ ಬರೆಯಲಿಕ್ಕೆ ಕುಳಿತಾಗ ಕೆಲವರನ್ನು ಬೈಯುವುದು, ಕೆಲವರನ್ನು ನಮ್ಮವರು ಎಂಬ ಕಾರಣಕ್ಕೆ ರಕ್ಷಣೆ ಮಡುವುದು, ಇವೆಲ್ಲಾ ಮಾಡಬಾರದು. ಲೇಖಕ ಯಾವತ್ತೂ ಸತ್ಯವನ್ನುಹೇಳಬೇಕು. ಸ್ಪಷ್ಟತೆ ಲೇಖಕನ ಗುಣ. ಮತಪ್ರಚಾರದಲ್ಲಿ ನನಗೆ ನಂಬಿಕೆಯಿಲ್ಲ. ಹಾಗಂತ ಹೇಳಿ ನಾನು ಚರ್ಚಿಗೂ ಹೋಗುವುದಿಲ್ಲ. ನಂಬಿಕೆಗಳ ವಿಚಾರಕ್ಕೆ ಬಂದರೆ ಕೆಲವು ಇವೆ, ಕೆಲವು ಇಲ್ಲ. ಹಾಗೆಯೇ ಕೆಲವು ಕೃತಿಗಳನ್ನು ಬರೆದಾಗ ಬಹಳಷ್ಟು ಕ್ರೈಸ್ತರು ಬಹಳ ಮೆಚ್ಚಿಕೊಂಡಿರುವದೂ ಇದೆ. ಇಗರ್ಜಿಯ ಸುತ್ತಲಿನ ಹತ್ತು ಮನೆಗಳು 50 ವರ್ಷಗಳ ಹಿಂದೆ ಮುರುಡೇಶ್ವರದಿಂದ ಸಾಗರಕ್ಕೆ ಬಂದ ಹತ್ತು ಕುಟುಂಬಗಳ ಕತೆ. ಹಾಗೆ ಬಂದವರ ಮೊಮ್ಮೊಕ್ಕಳೆಲ್ಲಾ ಇಲ್ಲಿ  ನಮ್ಮ ಮನೆಯ ಸುತ್ತಲಿರುವವರು. ಅವರೆಲ್ಲಾ ಅದನ್ನು ಓದಿ ಬಹಳ ಮೆಚ್ಚಿಕೊಂಡರು. ಆ ಕಾದಂಬರಿ ನನಗೆ ಬಹಳಹೆಸರನ್ನೂ ತಂದುಕೊಟ್ಟಿತು. ಒಬ್ಬ ಲೇಖಕನಾದವನು ತನಗೆಕಂಡ ಸತ್ಯವನ್ನು ಬರೆಯದೇ ಇರಲಿಕ್ಕಾಗುವುದಿಲ್ಲ. ಸತ್ಯಕ್ಕೆ ಅವಮಾನ ಮಾಡಲಿಕ್ಕಾಗುವುದಿಲ್ಲ. ಕ್ರೈಸ್ತರಲ್ಲಿನ ಒಂದು ಸಮಸ್ಯೆಯೆಂದರೆ ಅವರು ತಮ್ಮಚರ್ಚ ಕಾಂಪೌಂಡಿನಾಚೆ ಹೋಗುವುದಿಲ್ಲ. ಇತರರೊಡನೆ ಬೆರೆಯುವುದಿಲ್ಲ. ಒಳ್ಳೆಯ ಹಾಡುಗಾರರು, ನೃತ್ಯ ಮಾಡುವವರು ಇಲ್ಲಿದ್ದಾರೆ. ಆದರೆ ಅವರು ತಮ್ಮ ಪ್ರತಿಭೆಯನ್ನು ಹೊರಗೆ ಕೊಂಡೊಯ್ಯಲು ಹಿಂಜರಿಯುತ್ತಾರೆ.
ಒಂದು ಭಾಷೆಯಾಗಿ ಕನ್ನಡದ ಬೆಳೆಯುತ್ತಿದೆಯೇ?
ನಾವು ಭಾಷೆಯನ್ನು ಬೆಳೆಸುವತ್ತ ಆಸಕ್ತಿ ವಹಿಸುತ್ತಿಲ್ಲ. ತಮಿಳು ಭಾಷಿಕರು ಈ ಪ್ರಯತ್ನ ಮಾಡುತ್ತಿದ್ದಾರೆ. ಅಮೆರಿಕನ್ನರು ಹೊಸ ಪದಗಳನ್ನು ಸೃಷ್ಠಿಸುತ್ತಾರೆ. ಅವರು ಸೃಷ್ಠಿಸುವ ಪದಗಳು ಪದಕೋಶದಲ್ಲೇ ಇರುವುದಿಲ್ಲ. ಹೊಟೆಲ್ನಲ್ಲಿ ವಾಹನ ನಿಲುಗಡೆಗೆ ಅವಕಾಶವಿದ್ದರೆ ಅದನ್ನು ಮೊೆಲ್ ಎನ್ನುತ್ತಾರೆ. ಯಾವುದಾದರೂ ಬುಕ್ ಮ್ಯಾಗಝೀನ್‌ನಲ್ಲಿ ಪ್ರಕಟವಾದರೆ ಅದನ್ನು ಬುಕ್‌ಜಿನ್ ಎನ್ನುತ್ತಾರೆ. ಅಮೆರಿಕಾದ ಒಂದು ಸ್ಥಳಕ್ಕೆ 3 ತಿಂಗಳನಂತರ ಹೋದರೆ ಬದಲಾದ ಭಾಷೆ ಗೊಂದಲ ಹುಟ್ಟಿಸುತ್ತದೆ. ಕನ್ನಡದಲ್ಲಿ ಇದಾಗುತ್ತಿಲ್ಲವೆನ್ನುವುದು ವಿಷಾದಕರ ಸಂಗತಿ. ಮಡಿವಂತಿಕೆಯಿರುವ ಕನ್ನಡಿಗರಲ್ಲಿ ಸೃಜನಶೀಲತೆಯ ಕೊರತೆಯಿದೆ. ಕಂಪ್ಯೂಟರ್ ಬಂದ ಮೇಲೆ ಚಾಲ್ತಿಯಲ್ಲಿರುವ ಬ್ರೌಸಿಂಗ್, ಚಾಟಿಂಗ್ ಮುಂತಾದವುಗಳಿಗೆ ಹೊಸಕನ್ನಡ ಪದಗಳನ್ನು ತರಲು ಸಾಧ್ಯವಾಗೇ ಇಲ್ಲ. ನಾವು ಪ್ರತಿಯೊಂದಕ್ಕೂ ಇಂಗ್ಲಿಷ್ ಮೊರೆಹೋಗುತ್ತಿದ್ದೇವೆ. ಐಟಿ, ಬಿಟಿಗಳಲ್ಲಿ ಕೆಲಸ ಮಾಡುವ ನಮ್ಮಯುವಕ ಯುವತಿಯರು ತಾವು ಕೆಲಸ ಮಾಡುವ ಅಷ್ಟು ಭಾಷೆಗಳನ್ನು ಇಂಗ್ಲಿಷ್‌ನಲ್ಲಿಯೇ ಬಳಸುತ್ತಾರೆಯೇ ವಿನಃ ಕನ್ನಡದಲ್ಲಿ ಪ್ರಯತ್ನಿಸುವುದಿಲ್ಲ. ಹಾಗೆ ಪ್ರಯತ್ನಿಸಿದ್ದರೆ ಕನ್ನಡ ಪದಕೋಶ ಅಭಿವೃದ್ಧಿಯಾಗುತ್ತಿತ್ತು.
ಅಗಾಧ ಪ್ರಮಾಣದಲ್ಲಿ ಸಾಹಿತ್ಯ ರಚನೆ ಮಾಡಿರುವ ನಿಮಗೆ ಒಂದು ಸಣ್ಣ ಪಟ್ಟಣದಲ್ಲಿದ್ದುಕೊಂಡು ಬರವಣಿಗೆ ನಡೆಸಿದ್ದೇ  ನಿಮ್ಮನ್ನುರಾಜ್ಯ ಹಾಗೂ ರಾಷ್ಟ್ರ ಮಟ್ಟದ ಪ್ರಶಸ್ತಿಗಳಿಂದ ವಂಚಿಸಿದೆ ಎನ್ನಿಸುವುದಿಲ್ಲವೇ?

ಈ ಕುರಿತು ನಾನೆಂದೂ ಯೋಚಿಸಿಯೇ ಇಲ್ಲ. ಒಂದು ಮೂಲೆಯನ್ನಿದ್ದುಕೊಂಡು ನನ್ನ ಪಾಡಿಗೆ ನಾನು ಬರೆದುಕೊಂಡು ಬಂದಿದ್ದೀನೆ ಅಷ್ಟೆ.


ಡಿಸೆಂಬರ್ 03, 2013

ಆರೋಗ್ಯ ಕ್ಷೇತ್ರದ ಅನಾರೋಗ್ಯಕ್ಕೆ ಮದ್ದೇನು? : ಅಮೀರ್ ಖಾನ್ ಅಂಕಣ ಬರಹ

(ದ ಹಿಂದೂ ಪತ್ರಿಕೆಯಲ್ಲಿ ಈ ಬರಹ ಪ್ರಕಟವಾಗಿತ್ತು.)

ನಾನೊಂಥರಾ ಕನಸುಗಾರ. ನಾವೆಲ್ಲರೂ ಸಹ ಬಡವರು, ಶ್ರೀಮಂತರೆಂಬ ಭೇಧವಿಲ್ಲದೆ ಎಲ್ಲರೂ ಒಂದೇ ಬಗೆಯ ಆರೋಗ್ಯ ಸೌಲಭ್ಯಗಳನ್ನು ಪಡೆಯುವಂತಹ ದಿನ ನಮ್ಮ ದೇಶದಲ್ಲಿ ಬರುತ್ತದೆ ಎನ್ನುವುದು ನನ್ನ ಕನಸು. ಅನೇಕರಿಗೆ ಇದೊಂದು ಬಗೆಯಲ್ಲಿ ಅವಾಸ್ತವವಾದ ಹಾಗೂ ಅಸಾಧ್ಯವಾದಂತಹ ಹುಚ್ಚುಕನಸು ಎನ್ನಿಸಬಹದು. ಆದರೆ ಇದು ಖಂಡಿತವಾಗಿಯೂ ಕಾಣಬೇಕಾದಂತಹ ಕನಸು ಹಾಗೂ ಇಂತಹ ಕನಸೊಂದು ನನಸಾಗಲೇಬೇಕೆನ್ನಲು ಕಾರಣಗಳಿವೆ ಎನ್ನುವುದು ನನ್ನ ನಂಬುಗೆ.
ನೀವು ಬಡವರಿರಲಿ, ಶ್ರೀಮಂತರಿರಲಿ, ನಿಮ್ಮ ಪ್ರೀತಿಪಾತ್ರೊಬ್ಬರನ್ನು ಕಳೆದುಕೊಂಡಾಗ ಉಂಟಾಗುವ ದು:ಖ ದುಮ್ಮಾನಗಳಿಗೆ ಭಿನ್ನಭೇಧವಿರುವುದಿಲ್ಲ. ನನ್ನ ಮಗು ವಾಸಿಯಾಗದ ಖಾಯಿಲೆಗೆ  ತುತ್ತಾಗಿ ನರಳಿ ನರಳಿ ತೀರಿಕೊಳ್ಳುವಾಗ, ಆಗ ನನಗೇನೂ ಮಾಡಲು ಸಾಧ್ಯವಾಗದಿರುವಾಗ ನಿಜಕ್ಕೂ ದು:ಖವಾಗುತ್ತದೆ. ಆದರೆ ಆ ಮಗುವಿನ ಖಾಯಿಲೆಯನ್ನು ಗುಣಪಡಿಸಬಹದಾದ ಔಷಧವೊಂದಿದೆ ಎಂದು ತಿಳಿದೂ ನನಗೆ ಆ ಔಷಧಿಯನ್ನು ಕೊಳ್ಳಲಾಗದಿರುವ ಕಾರಣಕ್ಕೆ ನನ್ನ ಮಗುವು ನರಳಿ ಸಾಯುತ್ತದೆ ಎಂದಾದಾಗ, ಅದನ್ನು ನಾನು ನೋಡಿ ಸುಮ್ಮನಿರಬೇಕಾಗಿ ಬಂದಾಗ - ಅಂತಹ ಒಂದು ಸ್ಥಿತಿ ನಿಜಕ್ಕೂ ದುರಂತಮಯ.
ಒಂದು ಒಳ್ಳೆಯ ಆರೋಗ್ಯ ಆರೈಕೆ ವ್ಯವಸ್ಥೆಯೊಂದು ನಮ್ಮಲ್ಲಿಲ್ಲದಿರುವಂತೆ ಮಾಡಿರುವ ಕಾರಣವಾದರೂ ಏನು?
ನಾವು ಅಸಂಖ್ಯ ಜನರು ತೆರಿಗೆ ಕಟ್ಟುತ್ತೇವೆ. ಕೆಲವರು ಕಟ್ಟುವುದಿಲ್ಲ. ಹಾಗೆಯೇ ಬಹುತೇಕ ಜನರಿಗೆ ಪ್ರತ್ಯಕ್ಷ ತೆರಿಗೆ ಕಟ್ಟುವಷ್ಟು ಆದಾಯವೇ ಇರುವುದಿಲ್ಲ. ಆದರೆ,  ಪ್ರತಿ ರಾಜ್ಯವೂ ವಿವಿಧ ಬಗೆಯಲ್ಲಿ ಪರೋಕ್ಷ ತೆರಿಗೆಯನ್ನು ಸಂಗ್ರಹಿಸುತ್ತದೆ. ಅದು ಸಣ್ಣಮೊತ್ತವಿರಲಿ, ದೊಡ್ಡಮೊತ್ತವಿರಲಿ, ಪ್ರತಿ ಸಲ ನಾವೇನಾದರೂ ಕೊಂಡುಕೊಳ್ಳುವಾಗಲೂ ಒಂದಲ್ಲಾ ಒಂದು ಬಗೆಯ ತೆರಿಗೆಯನ್ನು ಕಟ್ಟುತ್ತಲೇ ಇರುತ್ತೇವೆ. ಅಂದರೆ, ಅದರರ್ಥ ಅಗ್ದಿ ಬಡವರೂ ಸಹ ತೆರಿಗೆ ನೀಡುತ್ತಿರುತ್ತಾರಲ್ಲದೆ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗಾಗಿ ಅವರ ಪಾಲೂ ಸಂದಾಯವಾಗುತ್ತಿರುತ್ತದೆ. ಆದರೆ ಅದಕ್ಕೆ ತಕ್ಕಂತೆ ಅವರಿಗೆ ಪ್ರತಿಫಲವೆಂಬುದು ದಕ್ಕುವುದಿಲ್ಲ ಅಷ್ಟೆ. ನಮ್ಮ ಒಟ್ಟು ರಾಷ್ಟ್ರೀಯ ಉತ್ಪನ್ನದ (ಜಿಡಿಪಿ) ಶೇಕಡಾ ೧.೪ ರಷ್ಟನ್ನು ಮಾತ್ರ ಈ ದೇಶದಲ್ಲಿ ಸಾರ್ವಜನಿಕ ಆರೋಗ್ಯ ಕ್ಷೇತ್ರಕ್ಕೆ ವಿನಿಯೋಗಿಸಲಾಗುತ್ತದೆ.

ಯಾಕೆ ಹೀಗೆ?
ಈ ಕ್ಷೇತ್ರದಲ್ಲಿ ಪರಿಣಿತರಾದವರು ಹೇಳುವ ಪ್ರಕಾರ ನಮ್ಮ ದೇಶದಲ್ಲಿ ಮೂಲಭೂತ ಸಾರ್ವಜನಿಕ ಆರೋಗ್ಯ ಸೌಲಭ್ಯಗಳಿಗೆಗೆಂದೇ ಕನಿಷ್ಠ ಶೇಕಡ ೬ ರಷ್ಟನ್ನಾದರೂ ಮೀಸಲಿಡಬೇಕು. ನಾನು ಅರ್ಥಶಾಸ್ತ್ರಜ್ಞನೂ ಅಲ್ಲ ವೈದ್ಯನೂ ಅಲ್ಲ. ಆದರೂ ಸ್ವಲ್ಪ ಸೇಫರ್ ಸೈಡ್‌ನಲ್ಲಿದ್ದುಕೊಂಡೇ ಮಾತನಾಡುವುದಾದರೆ ನನ್ನ ಪ್ರಕಾರ ಇದು ಶೇಕಡ ೮ ರಿಂದ ೧೦ ರಷ್ಟಂತೂ ಇರಬೇಕು.
ಒಂದು ಸಮಾಜದ ಆರೋಗ್ಯವೇ ಸರಿಯಿಲ್ಲ ಅಂದ ಮೇಲೆ ಅಲ್ಲಿ ಸಾಧಿಸುವ ಭಾರೀ ಜಿಡಿಪಿ ಕಟ್ಟಿಕೊಂಡು  ಆಗಬೇಕಾಗಿದ್ದಾದರೂ ಏನು ಹೇಳೀ? ನಾವು ಆರೋಗ್ಯವಾಗಿದ್ದು, ನಾವು ಸಾಧಿಸುವ ಆರ್ಥಿಕ ಸಾಮರ್ಥ್ಯವನ್ನು ಅನುಭವಿಸಲು ನಮಗೆ ಶಕ್ಯವಿದ್ದಾಗ ಮಾತ್ರವೇ ಆರ್ಥಿಕ ಸಾಮರ್ಥ್ಯ ಬರಲು ಸಾಧ್ಯ ಎಂಭುದನ್ನು ನಾವು ಅರಿಯಬೇಕು.
ಮುಖ್ಯವಾಗಿ, ಆರೋಗ್ಯ ಕೂಡಾ ರಾಜ್ಯವೊಂದರ ವಿಷಯ. ನಮ್ಮ ಹಣದಲ್ಲಿ ಹೆಚ್ಚೆಚ್ಚು ಪ್ರಮಾಣ ಸಾರ್ವಜನಿಕ ಆಸ್ಪತ್ರೆಗಳನ್ನು ಸ್ಥಾಪಿಸುವುದಕ್ಕೆ, ಮುಖ್ಯವಾಗಿ ಸರ್ಕಾರಿ ಮೆಡಿಕಲ್ ಕಾಲೇಜುಗಳನ್ನು ಸ್ಥಾಪಿಸಲು ಯಾಕೆ ಬಳಕೆಯಾಗುತ್ತಿಲ್ಲ? ಸಾರ್ವತ್ರಿಕ ಆಸ್ಪತ್ರೆಗಳಿಗೆ ಹೊಂದಿಕೊಂಡಂತೆ ಇಲ್ಲಿ ಯಾಕೆ ಹೆಚ್ಚು ಪ್ರಮಾಣದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳಿಲ್ಲ?

ಹುಮ್ಮಸ್ಸಿನ ಯುವಕರರನ್ನು ಹೊಂದಿರುವ ನಮ್ಮ ದೇಶದಲ್ಲಿ ಹೆಚ್ಚೆಚ್ಚು ವೈದ್ಯಕೀಯ ಕಾಲೇಜುಗಳನ್ನು ತೆರೆಯಬೇಕಾಗಿರುವುದು ಈ ಕ್ಷಣದ ತುರ್ತು. ಆದರೆ ಕೇಂದ್ರದಲ್ಲಿರುವ ಮತ್ತು ಎಲ್ಲಾ ರಾಜ್ಯಗಳಲ್ಲಿರುವ ಸರ್ಕಾರಗಳು ವೈದ್ಯಕೀಯ ಕಾಲೇಜುಗಳನ್ನು ತೆರೆಯುವ ಬಗ್ಗೆ ಯಾವ ಉತ್ಸಾಹವನ್ನೂ ಹೊಂದಿಲ್ಲ. ಹೀಗಾಗಿ ವೈದ್ಯರಾಗಬೇಕೆಂದು ಬಯಸುವ ತರುಣರ ಅಗತ್ಯತೆಗಳನ್ನು ಪೂರೈಸುತ್ತಿರುವವರು ಬೇರಾರೂ ಅಲ್ಲ. ನೀವು ಸರಿಯಾಗಿ ಊಹಿಸಿದಂತೆಯೇ ಖಾಸಗಿ ವೈದ್ಯಕೀಯ ಕಾಲೇಜುಗಳು. ಅಲ್ಲಿ ತಲಾ ವಿದ್ಯಾರ್ಥಿಗೆ ೫೦ ರಿಂದ ೬೦ ಲಕ್ಷ ರೂಪಾಯಿಗಳಷ್ಟು ಹಣವನ್ನು ಅನಧಿಕೃತವಾಗಿ ವಸೂಲಿ ಮಾಡಲಾಗುತ್ತಿದೆ ಎಂದು ನಾನು ಕೇಳಿದ್ದೇನೆ.
ಹೆಚ್ಚಿನ ಪ್ರಕರಣಗಳಲ್ಲಿ ಖಾಸಗಿ ವೈದ್ಯಕೀಯ ಕಾಲೇಜುಗಳನ್ನು ಒಂದು ಉದ್ದಿಮೆ ಎಂದು ಪರಿಗಣಿಸಿ ಬೆಳೆಸಲಾಗುತ್ತದೆ. ಅದರಲ್ಲಿ ಬಹಳಷ್ಟಕ್ಕೆ ಕಾರ್ಯನಿರತ ಆಸ್ಪತ್ರೆಗಳೊಂದಿಗೆ ಸಂಬಂಧವೇ ಇರುವುದಿಲ್ಲ. ಆದರೆ ವೈದ್ಯಕೀಯ ಕಾಲೇಜುಗಳಿಗೆ ಇದು  ಬಹಳ ಮುಖ್ಯವಾಗಿ ಇರಬೇಕಾಗಿರುತ್ತದೆ. ಇಂತಹ ಖಾಸಗಿ ಕಾಲೇಜುಗಳಿಂದ ಹೊರ ಬರುವ ವೈದ್ಯರು ಎಷ್ಟರ ಮಟ್ಟಿಗೆ ಸ್ಪರ್ಧಾಸಮರ್ಥರಾಗಿರಬಲ್ಲರು ಎಂಬ ಕುರಿತು ನನಗೆ ಆಗಾಗ ಪ್ರಶ್ನೆಯುಂಟಾಗುತ್ತದೆ.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವೈದ್ಯಕೀಯ ಕಾಲೇಜುಗಳಿಗೆ ಹೊಂದಿಕೊಂಡಿರುವ ಹೆಚ್ಚೆಚ್ಚು ಸಾರ್ವಜನಿಕ ಆಸ್ಪತ್ರೆಗಳನ್ನು ತೆರೆಯಬೇಕಿದೆ ಎಂಬುದನ್ನು ನಾವೀಗ ದೃಢವಾಗಿ ಹೇಳುವ ಅಗತ್ಯವಿದೆ.
ಖಾಸಗಿ ಆಸ್ಪತ್ರೆಗಳನ್ನೂ ಸ್ವಾಗತಿಸೋಣ. ಆದರೆ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಕುರಿತು ಗಮನ ಕೇಂದ್ರೀಕರಿಸೋಣ ಹಾಗೂ ಖಾಸಗಿ ಆಸ್ಪತ್ರೆಗಳು ಅವುಗಳೊಂದಿಗೆ ಸ್ಪರ್ಧಿಸಲು ಹೆಣಗಾಡುವಂತೆ ಮಾಡೋಣ. ಆಗ ಸಮಾಜಕ್ಕೆ ಉತ್ತಮ ಗುಣಮಟ್ಟದ ಸೇವೆಗಳು ಲಭ್ಯವಾಗುತ್ತವೆ.
ಒಬ್ಬ ಎಂಬಿಬಿಎಸ್ ಪರೀಕ್ಷೆ ಬರೆಯಲು ಕುಳಿತ ವಿದ್ಯಾರ್ಥಿ/ ವಿದ್ಯಾರ್ಥಿನಿಗೆ ಮಧುಮೇಹಕ್ಕೆ ನೀಡಬೇಕಾದ ಔಷಧಿ ಯಾವುದು ಎಂಬ  ಪ್ರಶ್ನೆ ಕೇಳಿದರೆ ಆತ/ ಆಕೆ ’ಗ್ಲಿಮೆಪಿರೈಡ್’ ಎಂದು ಉತ್ತರ ನೀಡಬಹುದು. ಮಧುಮೇಹಕ್ಕೆ ಚಿಕಿತ್ಸೆ ನೀಡುವ ಲವಣ ಇದು. ಆದರೆ ಅದೇ ವಿದ್ಯಾರ್ಥಿ ವೈದ್ಯನಾದ/ಳಾದ ಮೇಲೆ ಮಧುಮೇಹಿ ರೋಗಿಯೊಬ್ಬ ಆತನ/ಆಕೆಯ ಬಳಿ ಹೋದಾಗ ಬರೆದುಕೊಡುವ ಔಷಧಿ ’ಅಮಾರಿಲ್’ ಎಂದು. ಹಾಗಾದರೆ, ಆ ಯುವ ವೈದ್ಯ/ ವೈದ್ಯೆ ತಪ್ಪಾದ ಔಷಧಿ ಬರೆದುಕೊಟ್ಟರಾ? ಇಲ್ಲ. ’ಗ್ಲಿಮೆಪಿರೈಡ್’ ಲವಣವನ್ನು ಮಾರುವ ಹಲವು ಬ್ರಾಂಡ್‌ಗಳಲ್ಲಿ ಅಮಾರಿಲ್ ಕೂಡ ಒಂದು. ಹೀಗಾದಾಗ ಇವೆರಡರ ನಡುವಿನ ವ್ಯತ್ಯಾಸವಾದರೂ ಏನು? ಇಲ್ಲಿ ನೋಡಿ, ಅಮಾರಿಲ್‌ನ ೧೦ ಮಾತ್ರೆಗಳಿರುವ ಒಂದು ಪಟ್ಟಿಗೆ ಸುಮಾರು ೧೨೫ ರೂಪಾಯಿ. ಅದೇ ’ಗ್ಲಿಮೆಪಿರೈಡ್’ ಲವಣದ ಹತ್ತು ಮಾತ್ರೆಗಳ ಪಟ್ಟಿಗೆ ಕೇವಲ ೨ ರೂಪಾಯಿ. ಎರಡೂ ಸಾರದಲ್ಲಿ ಒಂದೇ. ಆದರೆ ಕೇವಲ ಬ್ರಾಂಡ್ ಹೆಸರಿಗೇ ನಾವು ೧೨೩ ರೂಪಾಯಿಗಳ ಅಧಿಕ ಹಣವನ್ನು ತೆರಬೇಕಾಗಿದೆ.
 ಅಂಥವೇ ಮತ್ತೊಂದಷ್ಟು ಉದಾಹರಣೆಗಳು ಇಲ್ಲಿವೆ.
ಶೀತ ನೆಗಡಿ ಸರ್ವಸಾಮಾನ್ಯ ಖಾಯಿಲೆ. ಇದಕ್ಕೆ ನೀಡಲಾಗುವ ಲವಣದ ಹೆಸರು ಸಿಟ್ರಿಜೈನ್ ಅಂತ. ಈ ಜನರಿಕ್ ಔಷಧಿಯ ತಯಾರಿ, ಪ್ಯಾಕೇಜಿಂಗ್, ಸಾಗಾಣಿಕೆ, ಮತ್ತು ಒಂದಷ್ಟು ಮಾರ್ಜಿನ್ ಕೂಡಾ ಸೇರಿ ಹತ್ತು ಮಾತ್ರೆಗಳಿಗೆ ೧ ರೂಪಾಯಿ ೨೦ ಪೈಸೆ ತಗುತ್ತದೆ. ಆದರೆ ಇದನ್ನೇ ನಾವು ಸೆಟ್‌ಜೈನ್‌ನಂತಹ ಬ್ರಾಂಡ್ ಹೆಸರಲ್ಲಿ ಕೊಂಡಾಗ ಹತ್ತು ಗುಳಿಗೆಗಳಿಗೆ ೩೫ ರೂಪಾಯಿ ನೀಡುತ್ತೇವೆ.
ಹೃದಯಾಘಾತವುಂಟುವ ಬ್ಲಾಕೇಜ್‌ಗಳಿಗೆ ಚಿಕಿತ್ಸೆ ನೀಡಲು ಉಪಯೋಗಿಸುವ ಇಂಜೆಕ್ಷನ್ ಹೆಸರು ಸ್ಟೆಪ್ಟೋಕಿನೇಸ್ ಅಥವಾ ’ಯುರೋಕಿನೇಸ್’. ಇವಕ್ಕೆ ತಲಾ ೧೦೦೦ ರೂಪಾಯಿ ವೆಚ್ಚವಾಗುತ್ತದೆ. ಆದರೆ ಅವುಗಳ ಬ್ರಾಂಡ್ ಹೆಸರುಗಳಿಗೆ ನಾವು ಔಷಧಿ ಅಂಗಡಿಗಳಲ್ಲಿ ತಲಾ ೫೦೦೦ ರೂಪಾಯಿ ನೀಡುಬೇಕು.
ಭಾರತದಲ್ಲಿ ಮಲೇರಿಯಾ ಬಹಳ ಜನರನ್ನು ಅದರಲ್ಲೂ ಮಕ್ಕಳನ್ನು ಕೊಲ್ಲುತ್ತದೆ. ಈ ಮಲೇರಿಯಾ ಪ್ರತಿಬಂಧಕ ಚಿಕಿತ್ಸೆಗೆ ಉಪಯೋಗಿಸುವ ಮೂರು ಇಂಜೆಕ್ಷನ್‌ಗಳ ಒಂದು ಪ್ಯಾಕ್‌ಗೆ ೨೫ ರೂಪಾಯಿ ತಗುಲುತ್ತದೆ. ಆದರೆ ಬ್ರಾಂಡ್ ಹೆಸರುಗಳು ೩೦೦ ರೂಪಾಯಿಯಿಂದ ೪೦೦ ರೂಪಾಯಿಗಳನ್ನು ಸುಲಿಯುತ್ತವೆ.
ಅತಿಸಾರ ಕೂಡಾ ಭಾರತದ ಬಹಳಷ್ಟು ಮಕ್ಕಳನ್ನು ಬಲಿತೆಗೆದುಕೊಳ್ಳುತ್ತದೆ. ದೇಹದ ನೀರಿನಂಶವನ್ನು ಕಡಿಮೆ ಮಾಡುವ ವಾಂತಿಯನ್ನು ನಿಯಂತ್ರಿಸಲು ಡಾಂಪೆರಿಡೋನ್ ಎಂಬ ಲವಣವನ್ನು ಉಪಯೋಗಿಸಲಾಗುತ್ತದೆ. ಅದರ ಬೆಲೆ ಹತ್ತು ಮಾತ್ರೆಗಳಿಗೆ ೧.೨೦ ರೂಪಾಯಿ. ಡಾಮ್‌ಸ್ಟಾಲ್ ಎಂಬ ಅದರ ಬ್ರಾಂಡ್ ಹೆಸರಿಗೆ ೩೩ ರೂಪಾಯಿ
ನಮ್ಮ ಬಡಜನತೆ, ಅಥವಾ ಮಧ್ಯಮವರ್ಗದಳು ಚಿಕಿತ್ಸೆ ಪಡೆಯಲು ಹೇಗೆ ಸಾಧ್ಯ?
ಇದಕ್ಕಿರುವ ಒಂದೇ ಉತ್ತರ ಜನೆರಿಕ್ ಔಷಧಗಳು
ಈ ವಿಚಾರದಲ್ಲಿ ನಾವು ರಾಜಾಸ್ತಾನ ಸರ್ಕಾರದ ಪ್ರಯತ್ನಗಳನ್ನು ಮೆಚ್ಚಿಕೊಳ್ಳಬೇಕು. ಅಲ್ಲಿ ಸರ್ಕಾರವೇ ಜನೆರಿಕ್ ಔಷಧಿಗಳನ್ನು ಮಾರುವ ಅಂಗಡಿಗಳನ್ನು ರಾಜ್ಯದಾದ್ಯಂತ ಸ್ಥಾಪಿಸಿದೆ. ಜನತೆಗೆ ಸಾಧ್ಯವಾದಷ್ಟು ಕಡಿಮೆ ಬೆಲೆಯಲ್ಲಿ ಔಷಧಿ ಚಿಕಿತ್ಸೆ ದೊರೆಯುವಂತೆ ಮಾಡುವ ನಿಟ್ಟಿನಲ್ಲಿ ಸರ್ಕಾರ ನಡೆಸುತ್ತಿರುವ ಪ್ರಯತ್ನ ಇದು.
ಔಷಧಿಗಳ ದುಬಾರಿ ಬೆಲೆಯನ್ನು ಭರಿಸಲಾಗದೆ ಭಾರತದಲ್ಲಿ ಶೇಕಡ ೨೫ರಷ್ಟು ಖಾಯಿಲೆಗಳಿಗೆ ಚಿಕಿತ್ಸೆಯೇ ದೊರೆಯುವುದಿಲ್ಲ. ಪ್ರತಿ ಭಾರತೀಯನಿಗೆ ಈ ಜನೆರಿಕ್ ಔಷಧಗಳು ಮಾಡಬಹುದಾದ ಸಹಾಯವನ್ನು ಯೋಚಿಸಿ. ಇಂತಹ ಒಂದು ಕೆಲಸವನ್ನು ರಾಜಸ್ತಾನ ಸರ್ಕಾರ ಮಾಡುತ್ತಿದೆಯೆಂದಾದರೆ ಉಳಿದ ಸರ್ಕಾರಗಳು ಮಾಡಲಿಕ್ಕೆ ಏನಡ್ಡಿ?
ಒಂದು ಕುತೂಹಲಕಾರಿ ಮಾಹಿತಿ: ರಾಸಾಯನಿಕಗಳು ಹಾಗೂ ಗೊಬ್ಬರಗಳ ಸಚಿವಾಲಯವು ಯಾರೆಲ್ಲಾ ಜನೆರಿಕ್ ಔಷಧಗಳನ್ನು ಮಾರಲು ಮುಂದೆ ಬರುತ್ತಾರೋ ಅಂತವರಿಗೆ ೫೦,೦೦೦ ರೂಪಾಯಿ ಕೊಡುಗೆ ನೀಡುತ್ತೇವೆಂದು ಘೋಷಿಸಿದೆಯಲ್ಲದೆ ಅಂತಹ ಅಂಗಡಿಗೆ ಜಾಗವನ್ನೂ ನೀಡುತ್ತದೆ.
ಒಳ್ಳೆಯ, ಗುಣಮಟ್ಟದ ಸಾರ್ವಜನಿಕ ಆರೋಗ್ಯ ಆರೈಕೆ ಬಡವಶ್ರೀಮಂತರೆನ್ನದೆ ಎಲ್ಲರಿಗೂ ಒಂದೇ ರೀತಿಯಲ್ಲಿ ಲಭ್ಯವಾಗುತ್ತದೆ ಎಂಬ ನನ್ನ ಕನಸು ನನಸಾಗುವಂತೆ ತೋರುತ್ತದೆ.
ವಿ.ಸೂ. ನಮ್ಮ ವೈದ್ಯರು ಔಷಧಿಗಳನ್ನು ಸೂಚಿಸುವಾಗ ಜನೆರಿಕ್ ಔಷಧಿಗಳ ಹೆಸರನ್ನ ಬರೆದು ಬ್ರಾಂಡ್ ಔಷಧಿಗಳು ಬೇಕೇ ಬೇಡವೇ ಎಂದು ನಾವೇ ಆಯ್ಕೆ ಮಾಡಿಕೊಳ್ಳಲು ಅವಕಾಶ ಮಾಡಿಕೊಬಲ್ಲರಾ?
ಜೈ ಹಿಂದ್. ಸತ್ಯ ಮೇವ ಜಯತೇ
(ಅಮಿರ್‌ಖಾನ್ ಒಬ್ಬ ನಟ. ಅವರ ಅಂಕಣ ದ ಹಿಂದೂ ಪತ್ರಿಕೆಯಲ್ಲಿ ಪ್ರತಿ ಸೋಮವಾರ ಪ್ರಕಟವಾಗುತ್ತದೆ)



ಜನವರಿ 28, 2013

"ಭ್ರಷ್ಟಾಚಾರಕ್ಕಿಂತಲೂ ದೊಡ್ಡ ವ್ಯಾಧಿ ಮತಾಂಧತೆ " -ಕೋ. ಚೆನ್ನಬಸಪ್ಪ










 ಕೋ.ಚೆ ಎಂದೇ ನಾಡಿನಲ್ಲಿ ಜನಜನಿತವಾಗಿರುವ ಕೋ. ಚೆನ್ನಬಸಪ್ಪ ಅವರು ವೃತ್ತಿಯಲ್ಲಿ ನ್ಯಾಯಾಧೀಶರಾಗಿ, ವಕೀಲರಾಗಿ ಕೆಲಸ ಮಾಡಿದ್ದರೂ ತಮ್ಮ ಲೇಖನಿಯ ಮೂಲಕ ನಿಜವಾದ ನ್ಯಾಯವಾದಿಗಳಾಗಿ ನಾಡಿನ ಸಾಕ್ಷಿಪ್ರಜ್ಞೆಯಾಗಿ ಬದುಕಿರುವಂತಹವರು. ಅವರು ಬರೆದ ಪ್ರತಿಯೊಂದು ಬರಹವೂ ಸಮಾಜದ ಒಳಿತಿನ ಆಶಯವನ್ನೇ ಹೊಂದಿರುವಂತಹುದು. ತಮ್ಮ ಬದುಕಿನ ೯೦ರ ಹರೆಯದಲ್ಲಿರುವ ಅವರನ್ನು ೭೯ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ ಮಾಡಿರುವುದು  ಸಹೃದಯರೆಲ್ಲರ ಪಾಲಿಗೆ ಸಂತಸದ ವಿಷಯ. ದ ಸಂಡೆ ಇಂಡಿಯನ್ ಗಾಗಿ ಹಲವಾರು ವಿದ್ಯಮಾನಗಳ ಕುರಿತು  ಕೋ.ಚೆ.ಯವರೊಂದಿಗೆ ನಡೆಸಿದ ಮಾತುಕತೆ ಇಲ್ಲಿದೆ. 

೭೯ನೆಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಕುರಿತು ಏನನ್ನಿಸುತ್ತಿದೆ?

ನನ್ನ ಆಯ್ಕೆಯ ಕುರಿತು ಹೇಳುವುದಾದರೆ ಬಹುಶಃ ನನ್ನನ್ನು ಹೊರತುಪಡಿಸಿದ ಪಟ್ಟಿಯಲ್ಲಿದ್ದ ಇತರರಿಗೂ ನನ್ನ ಆಯ್ಕೆಯ ವಿಷಯದಲ್ಲಿ ತಕರಾರಿಲಿಲ್ಲ ಎಂದೆನಿಸುತ್ತದೆ. ಇದರಿಂದಾಗಿ ಪರಿಷತ್ತಿನ ಅಧ್ಯಕ್ಷರಿಗೂ ಸುಲಭವಾಯಿತು ಎಂದುಕೊಳ್ಳುತ್ತೇನೆ. ನಿಜಹೇಳಬೇಕೆಂದರೆ ನಾನು ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗಿ ಆಯ್ಕೆಯಾಗುತ್ತೇನೆ ಎಂದು ಕನಸು ಮನಸಿನಲ್ಲಿಯೂ ಯೋಚಿಸಿರಲಿಲ್ಲ. ಈ ಸ್ಥಾನವನ್ನು ಪಡೆಯಬಹುದು ಎಂದು ನನಗೆ ಎಂದೂ ಅನಿಸಿರಲಿಲ್ಲ. ಅದಕ್ಕಾಗಿ ನಾನು ಬರೆದೂ ಇಲ್ಲ. ಮತ್ತೆ ಈ ಸ್ಥಾನ ಬಹುತೇಕ ಶಿಕ್ಷಕ ಕ್ಷೇತ್ರದಿಂದ ಬಂದವರಿಗೇ ಮೀಸಲಾಗಿ ಬಂದಿರುವಂತದ್ದು. ಕೊನೇ ಪಕ್ಷ ಪ್ರೈಮರಿ ಶಾಲೆ ಮೇಸ್ಟರಾಗಿದ್ದರೂ ನಡೆಯುತ್ತದೆ. ಆದರೆ ಈ ವಿಷಯದಲ್ಲಿ ಈ ಸಲ ಉದಾರ ಮನಸ್ಸನ್ನು ತೋರಿಸಿದ್ದಾರೆ. ನನ್ನನ್ನು ಅಧ್ಯಕ್ಷನ್ನನಾಗಿ ಆಯ್ಕೆ ಮಾಡಿರುವುದು ಸಹಜವಾಗಿ ನನಗೆ ಖುಷಿ ತಂದಿದೆ. 

ಜಾತ್ರೆಯೋಪಾದಿಯ ಈ ಪ್ರತಿವರ್ಷದ ಸಮ್ಮೇಳನಗಳಿಂದ ಪ್ರಯೋಜನವಿದೆಯೇ? 

ಕೇವಲ ಜಾತ್ರೆಯಂತೆ ಮೂರು ದಿನಗಳ ಸಮ್ಮೇಳನ ನಡೆಸಿ ಅದನ್ನು ಕೇವಲ ವಿಲಾಸದ, ಸಡಗರದ ಕೆಲಸ ಎಂದು ಭಾವಿಸಿದರೆ ಯಾವ ಪ್ರಯೋಜನವೂ ಇಲ್ಲ. ಹಾಗೆಯೇ ಈ ಅದ್ದೂರಿ ಆಡಂಬರ ಉತ್ಸವಗಳು ಸರ್ವಥಾ ಇರಬಾರದು. ಮೂರು ದಿನ ಜನ ಸೇರಿ ಸಾಹಿತ್ಯದ ವಿಚಾರಗಳು ಕಿವಿಗೆ ಬಿದ್ದರೆ ಒಳ್ಳೆ ವಾತಾವರಣ ಕಾಣುತ್ತದೆ. ಅಲ್ಲಿಗೆ ಬಂದವರೆಲ್ಲರಿಗೂ ಸಾಹಿತ್ಯದ ಬಗ್ಗೆ ಆಸಕ್ತಿ ಇರುತ್ತದೆ ಎಂದಲ್ಲ. ಸಾಹಿತ್ಯ ಸಮ್ಮೇಳನ  ಎಂದರೆ ನಾಟಕ ನೋಡಿದಂತೆ. ಮೂರು ಗಂಟೆ, ಐದು ಗಂಟೆ ನಾಟಕ ನೋಡಿದ ನಂತರ ಮನಸ್ಸಿಗೆ ಸಂತೋಷವಾಗುತ್ತದೆ. ಹರಿಶ್ಚಂದ್ರ, ರಾಮಾಯಣ ನಾಟಕ ನೋಡಿದಂತೆ. ರಂಗಮಂದಿರದಿಂದ ಹೊರಬಂದ ಮೇಲೂ ಅದೇ ಗುಂಗಿನಲ್ಲಿ ಇರುತ್ತೇವಲ್ಲಾ ಹಾಗೆ. ಹೀಗೆ ಸಾಹಿತ್ಯ ಸಮ್ಮೇಳಗಳು ಕನ್ನಡದ ಗುಂಗನ್ನು ರಿಚಾರ್ಜ್ ಮಾಡುವ ಕೆಲಸ ಮಾಡಬೇಕು. ಜನರು ಕನ್ನಡ ವಿಷಯದಲ್ಲಿ ಜಾಗೃತರಾಗಲಿ ಎಂಬ ಕಾರಣದಿಂದ ಸಮ್ಮೇಳನಗಳು ಆರಂಭವಾಗಿದ್ದವು. ನಾಡಿನ ಜನರು ಒಂದಾಗಬೇಕು, ನಮ್ಮ ಸಂಪತ್ತನ್ನು ನಾವೇ ಸದುಪಯೋಗಪಡಿಸಿಕೊಳ್ಳಬೇಕು. ನಮ್ಮ ಸಂಪತ್ತು ವಿದೇಶಕ್ಕೆ ಪರಭಾರೆಯಾಗುತ್ತಿರುವುದನ್ನು ತಡೆಯಬೇಕು, ಇಂತಹವುಗಳನ್ನೆಲ್ಲಾ ಮನಸ್ಸಿನಲ್ಲಿ ಬರಲು ಸಮ್ಮೇಳನ ಸಹಾಯವಾಗಬೇಕು. 

ನೀವು ಸಾಹಿತ್ಯ ರಚನೆಗೆ ಮುಂದಾಗಲು ಕಾರಣವೇನಿತ್ತು

ನಾನು ಹೈಸ್ಕೂಲಿನಲ್ಲಿದ್ದಾಗ ಗಾಂಧೀವಾದಿ ಹರ್ಡೀಕರ್ ಮಂಜಪ್ಪನವರ ಪತ್ರಿಕೆಯಲ್ಲಿ ವೀರ ಸಾವರ್ಕರ್ ಅವರ ಜೀವನ ಚರಿತ್ರೆ ಪ್ರಕಟವಾಗಿತ್ತು. ಅದನ್ನು ಓದಿದ ನನಗೆ ಬಹಳ ಸ್ಪೂರ್ತಿ ಬಂದುಬಿಟ್ಟಿತು. ಅಂದೇ ನಾನು ನನ್ನ ಮೊದಲ ಕವಿತೆ ವೀರ ಸಾವರ್ಕರ್‌ಗೆ ಎಂದು ಬರೆದು ಕಳಿಸಿದೆ. ಅದು ಅಚ್ಚಾಗಿಬಿಟ್ಟಿತ್ತು. ಇದರಿಂದ ನನಗೆ ಬಹಳ ಹುರುಪು ಬಂದುಬಿಟ್ಟಿತು. ನನ್ನ ಹೆಸರು ಅಚ್ಚಾಯಿತಲ್ಲಾ ಎಂಬ ಕಾರಣಕ್ಕೆ. ಹಾಗೆಯೇ ನಾನು ಬರೆದ ಕೆಲವು ಬರೆಹಗಳು ಕರ್ಮವೀರದಲ್ಲೂ ಪ್ರಕಟವಾಗತೊಡಗಿದವು. ಅದರಿಂದ ಸ್ಪೂರ್ತಿಗೊಂಡು ಮತ್ತೂ ಬರೆಯತೊಡಗಿದೆ ಅಷ್ಟೆ.  

ನೀವು ಬರೆದಿದ್ದರಲ್ಲಿ ನಿಮಗೆ ಬಹಳ ತೃಪ್ತಿ ನೀಡಿದ ಕೃತಿ ಯಾವುದು?

ಒಂದೊಂದು ದೃಷ್ಟಿಯಿಂದ ಒಂದೊಂದು. ಕುವೆಂಪು ಅವರ ರಾಮಾಯಣ ದರ್ಶನಂ ಮಹಾಕಾವ್ಯ ವಿಮರ್ಶೆ ನನಗೆ ಉತ್ತಮವೆನಿಸಿದೆ. ಕಾದಂಬರಿಗಳಲ್ಲಿ ’ಹಿಂದಿರುಗಿ ಬರಲಿಲ್ಲ’, ’ಬೇಡಿ ಕಳಚಿತು ದೇಶ ಒಡೆಯಿತು’, ’ರಕ್ತ ತರ್ಪಣ’ ಇವು ಖುಷಿ ನೀಡಿವೆ. ಕವಿತೆಗಳನ್ನು ಹೆಚ್ಚು ಬರೆಯದಿದ್ದರೂ, ವ್ಯಾಕರಣ ಛಂದಸ್ಸು ದೃಷ್ಟಿಯಿಂದ ಇವು ಶ್ರೇಷ್ಠವಲ್ಲದಿದ್ದರೂ ಸಮಾಜಮುಖಿಯಾಗಿ ಬರೆದಿದ್ದೇನೆ. 

ಶಿಕ್ಷಣ ಮಾದ್ಯಮದ ಭಾಷೆ ಏನಾಗಿರಬೇಕು? 

ಕರ್ನಾಟಕದಲ್ಲಿ ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡವೇ ಶಿಕ್ಷಣ ಮಾಧ್ಯಮವಾಗಬೇಕೆಂದು ಹೇಳುವುದಲ್ಲ. ಶಿಕ್ಷಣ ತಜ್ಞರು ಹೇಳುವ ಪ್ರಕಾರ ಮಗುವಿನ ಬೆಳವಣಿಗೆಗೆ ಮಾತೃಭಾಷೆಯ ಅಥವಾ ತಾಯಿನುಡಿಯ ಶಿಕ್ಷಣ ಅಗತ್ಯ. ತಾಯಿನುಡಿಯಲ್ಲಿ ಕಲಿಸುವುದು ಹೃದಯಕ್ಕೆ ತಟ್ಟುತ್ತದೆ. ಮೆದುಳಿಗೆ ತಲುಪುತ್ತದೆ. ಇಂದು ಇಂಗ್ಲಿಷ್ ಕಲಿತರೆ ಉದ್ಯೋಗ ಸಿಗುತ್ತದೆ ಎಂದು ಜನರು ನಂಬಿದ್ದಾರೆ. ಆದರೆ ಇದು ಪೂರ್ತಿ ಸತ್ಯವಲ್ಲ ಎನ್ನುವುದನ್ನು ಅರಿಯಬೇಕಾಗಿದೆ. ಇಂಗ್ಲಿಷ್ ಓದಿದವರಿಗೆಲ್ಲರಿಗೂ ನೌಕರಿ ಸಿಗುವುದಿಲ್ಲ. ಹೊಟ್ಟೆ ತುಂಬಿಸಿಕೊಳ್ಳಲು ಇಂಗ್ಲಿಷನ್ನೇ ಕಲಿಯಬೇಕು ಎಂಬ ಭಾವನೆಯಿಂದ ನಾವು ಹೊರಬರಬೇಕು. ಅಂದ ಮಾತ್ರಕ್ಕೆ ಇಂಗ್ಲಿಷನ್ನು ನಾವು ತ್ಯಜಿಸಬೇಕೆಂದು ಅಲ್ಲ. ೨೦೦ ವರ್ಷಗಳಿಂದ ಇಂಗ್ಲಿಷಿನಿಂದ ನಾವು ಸಾಕಷ್ಟು ಪ್ರಯೋಜನವನ್ನೂ ಪಡೆದುಕೊಂಡಿದ್ದೇವೆ. ಒಂದು ಭಾಷೆಯಾಗಿ ಅದನ್ನು ಕಲಿಯುವುದರಲ್ಲಿ ಯಾವ ಸಮಸ್ಯೆಯೂ ಇಲ್ಲ. ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲಿರಲಿ. ಹಾಗೆಯೇ ಮತ್ತೊಂದು ಭಾಷೆಯಿಂದ ಪಡೆಯುವುದರಿಂದಲೇ ನಮ್ಮ ಭಾಷೆ ಬೆಳೆಯಲು ಸಾಧ್ಯ ಎನ್ನುವುದನ್ನೂ ನಾವು ಅರ್ಥಮಾಡಿಕೊಳ್ಳಬೇಕು. ನಮ್ಮ ಸಾಹಿತ್ಯದಲ್ಲಿ ಎಷ್ಟೊಂದು ಸಂಪತ್ತು ತುಂಬಿದೆ. ಇದನ್ನೆಲ್ಲಾ ಇಂಗ್ಲಿಷಿಗೆ ಅನುವಾದ ಮಾಡಿಕೊಂಡೇ ಓದಬೇಕೇ? 

ನಮ್ಮ ಸಾಹಿತ್ಯ ಚಳವಳಿಗಳನ್ನು ಹೇಗೆ ನೋಡುತ್ತೀರಿ?

ನಮ್ಮಲ್ಲಿ ಇಂಗ್ಲಿಷನ್ನು ಅಧ್ಯಯನ ಮಾಡಿ ಅದರಂತೆ ನವ್ಯರು ಕಾವ್ಯ ರಚನೆಗೆ ಶುರು ಮಾಡಿಕೊಂಡರು. ಭಾವಗೀತೆಗಳು ಬಂದಿದ್ದು ಹಾಗೆ. ನಮ್ಮಲ್ಲಿ ಕತೆಗಳು ಇದ್ದವು. ಮಹಾಕಾವ್ಯಗಳಂತವು. ಆದರೆ ಪಾಶ್ಚಾತ್ಯರನ್ನು ಓದಿದ ಮೇಲೆ ಅಂತಹ ಕತೆಗಳನ್ನು ಬರೆಯಲು ಶುರು ಮಾಡಿದ ನವೋದಯ ಪಂಥ ಬಂದಿತು. ನವೋದಯಯದಲ್ಲಿ ಇದ್ದ ಒತ್ತು ಮಧ್ಯಮವರ್ಗದ ಜೀವನ ಶೈಲಿಯಾಗಿತ್ತು. ಆ ಸಂದರ್ಭದಲ್ಲಿ ಹೆಚ್ಚು ವಿದ್ಯಾವಂತರಾಗಿದ್ದ ಮೇಲುಜಾತಿ, ಮೇಲುಮಧ್ಯಮವರ್ಗದ ಜನರು ಬರೆದಿದ್ದರಲ್ಲಿ ಕೆಳವರ್ಗ, ಕೆಳಜಾತಿಗಳ ಜನರ ಬದುಕಿಗೆ ಸಂಬಂಧಿಸಿದ್ದು ಇರುತ್ತಿರಲಿಲ್ಲ. ಈ ವಿಷಯವನ್ನು ಒಮ್ಮೆ ಮಾಸ್ತಿಯವರಲ್ಲಿ ನಾನು ಪ್ರಸ್ತಾಪಿಸಿ ನೀವು ಬರೆದಿದ್ದೆಲ್ಲವನ್ನೂ ಒಂದಕ್ಷರ ಬಿಡದೇ ಓದಿದ್ದೀನಿ. ನಮ್ಮ ಭಾಷೆಯಲ್ಲಿ ಸತ್ವ ಏನಾದರೂ ಇದ್ದರೆ ಅದು ನಿಮ್ಮಂಥವರು ಬರೆದಿದ್ದಿರಿಂದಲೇ. ಆದರೆ ಕೆಲವೇ ಸೀಮಿತ ಪಾತ್ರಗಳು ಮತ್ತು ಹೊಟ್ಟೆ ಬಟ್ಟೆಗೆ ಇದ್ದು ನೆಮ್ಮದಿಯಾಗಿರುವವರ ವಿಚಾರ ಮಾತ್ರ ಬರೆಯುತ್ತೀರಿ. ಕಷ್ಟದಲ್ಲಿರುವವರು, ಗುಡಿಸಲಲ್ಲಿರುವವರ ಬಗ್ಗೆ ನೀವು ಬರೆಯುವುದಿಲ್ಲವಲ್ಲ? ಎಂದಿದ್ದಕ್ಕೆ ಅವರು ನಕ್ಕು, ಚೆನ್ನಬಸಪ್ಪ, ನನಗೆ ತಿಳಿದಿದ್ದು ನನಗೆ ತಿಳಿದಿದ್ದು ಕಂಡಿದ್ದು ನಾನು ಬರೀತೇನೆ. ಕಾಣದ್ದನ್ನು ಬರೆಯಲು ಸಾಧ್ಯವಿಲ್ಲವಲ್ಲ? ನೀನು ಕಾಣು, ಬರಿ. ಚೆನ್ನಾಗಿದ್ದರೆ ನಾನೂ ಓದುತ್ತೇನೆ, ಓದಿ ಎಂದು ’ಭಾವ’ ಪತ್ರಿಕೆಯಲ್ಲೂ ಹಾಕ್ತೇನೆ. ಎಂದರು. ಎಷ್ಟು ಸರಳವಾದ ಮಾತು! ಹಾಗೆ ಅವರು ಕಂಡಿದ್ದನ್ನು ಅವರು ಬರೆದರು. ಹಾಗೆ ನಾವು ಕಂಡಂತಹ ದುಸ್ಥಿತಿ, ಅನಾರೋಗ್ಯ, ಜೀತದಾಳು ಪದ್ಧತಿ, ಮಹಿಳೆಯರನ್ನು ಕಾಣುವ ಕಠೋರ ರೀತಿ, ಇದನ್ನೆಲ್ಲ ನೋಡಿ ನಮ್ಮ ಮನಸ್ಸು ವಿಚಲಿತವಾಗುತ್ತಿತ್ತು. ಪ್ರಗತಿಶೀಲರಾದ ಕಟ್ಟೀಮನಿ, ನಿರಂಜನ, ನನ್ನಂತವರೆಲ್ಲಾ ಆರ್ಥಿಕವಾಗಿ ದುರ್ಬಲರೇ. ತರಾಸು ಇದಕ್ಕೆ ಮಾತ್ರ ಹೊರತಾಗಿದ್ದರು. ಇವರೆಲ್ಲಾ ಬರೆದಾಗ ಹಿಂದಿನವರೆಲ್ಲ ಅದನ್ನು ಸಾಹಿತ್ಯವೇ ಅಲ್ಲವೆಂಬತೆ ನೋಡಿದರು. ಅದು ಸರಿಯಲ್ಲ. ಜನಜೀವನಕ್ಕೆ ಸಂಬಂಧವಿರದ ಸಾಹಿತ್ಯ, ಜನರ ಬಾಳು ಉತ್ತಮವಾಗುವುದಕ್ಕೆ ಸಹಾಯಕವಾಗದ ಸಾಹಿತ್ಯ ಸಾಹಿತ್ಯವೇ ಅಲ್ಲ ಎಂಬುದು ನಮ್ಮ ನಿಲುವಾಗಿತ್ತು. ೪೦ ರಿಂದ ೬೦ರ ದಶಕದಲ್ಲಿ ಪ್ರಗತಿಶೀಲರ ಉಪಠಳವಗಿಬಿಟ್ಟಿತ್ತು. ನಾನು, ಪಾಟೀಲ ಪುಟ್ಟಪ್ಪ ವೇದಿಕೆಯೇರಿದರೆ ಸಾಕು ನಮ್ಮನ್ನು ರಾಹು- ಕೇತು ಎಂಬಂತೆ ನೋಡುತ್ತಿದ್ದರು. ಅವರಿಗೆ ಬೇಕಾದ್ದು ಅವರು ಬರೆದುಕೊಳ್ಳಲಿ, ಓದಲಿ. ನಮ್ಮದೇನೂ ಹರಕತ್ತಿಲ್ಲ. ಆದರೆ ತಾವು ಬರೆದಿದ್ದೇ ಸಾಹಿತ್ಯ ಎಂದರೆ ನಾವು "ಬರ್ರಿ ಕುಸ್ತಿಗೆ" ಎಂದು ಹೊರಡುತ್ತಿದ್ದೆವು. ಶುದ್ಧ ಸಾಹಿತಿಗಳ ಕಣ್ಣಲ್ಲಿ ನಾನು ಎಂದೂ ಸಾಹಿತಿಯೇ ಆಗಿರಲಿಲ್ಲ. ದೇಶದ ಸ್ವಾತಂತ್ರ್ಯ ಚಳವಳಿ ವಸ್ತುವಿಷಯವಾಗುಳ್ಳ ಬೇಡಿ ಕಳಚಿತು ದೇಶ ಒಡೆಯಿತು ಎಂಬ ಒಂಬೈನೂರು ಪುಟದ ಬೃಹತ್ ಕಾದಂಬರಿ ನಾನು ಬರೆದಾಗ ಎಲ್.ಎಸ್. ಶೇಷಗಿರಿರಾವ್, ಮತ್ತೂರು ಕೃಷ್ಣಮೂರ್ತಿ ಮುಂತಾದ ಕೆಲವರು ಉತ್ತಮ ವಿಮರ್ಷೆ ಬರೆದರು. ಆದರೆ ದೊಡ್ಡ ಸಾಹಿತಿಗಳ್ಯಾರೂ ಮಾತೇ ಆಡಲಿಲ್ಲ. ನಾನು ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ ಅತ್ಯಂತ ಸಾಮಾನ್ಯರ ದೃಷ್ಟಿಯಿಂದ ಆ ಕಾದಂಬರಿಯನ್ನು ಬರೆದೆ. ಆದರೆ ನಮ್ಮ ದೊಡ್ಡವರ ಸ್ಕೇಲಿಗೆ ನಾವು ಬರೆದಿದ್ದು ಸರಿಹೊಂದುತ್ತಿರಲಿಲ್ಲ. ನಂತರ ಬಂಡಾಯ, ದಲಿತ, ಸ್ತ್ರೀವಾದಿ ಮುಂತಾಗಿ ಸಾಹಿತ್ಯಕ ಚಳವಳಿಗಳು ನಡೆದವು. ನನ್ನ ಮೂಲ ಸಿದ್ಧಾಂತ ಎಂದರೆ ಸಾಹಿತಿಗಳಾಗಿ ನಾವು ಸಮಾಜದ ಸ್ಥಿತಿಗತಿಯನ್ನು ಗಮನಿಸಬೇಕು. ಅದನ್ನು ನಮ್ಮ ಸಾಹಿತ್ಯದಲ್ಲಿ ಕಾಣಿಸಬೇಕು. ಇಂದು ಸಮಾಜದಲ್ಲಿ ಇರುವ ಅಸಮಾನತೆ ಅದರಲ್ಲೂ ಜಾತಿಆಧಾರಿತ ಪೂರ್ವಾಗ್ರಹ ನಮ್ಮ ದೇಶದ ಜಾಡ್ಯ. ಈ ಜಾಡ್ಯನಿವಾರಣೆಗೆ ನಮ್ಮ ಸಾಹಿತ್ಯ ಪ್ರೇರೇಪಿಸಬೇಕು. ಸಮಾನತೆಯೆಡೆ ಸಾಹಿತ್ಯ ತುಡಿಯಬೇಕು. 

ಹಲವು ವರ್ಷಗಳ ಕಾಲ ನ್ಯಾಯಾಧೀಶರಾಗಿ ಕೆಲಸ ಮಾಡಿದ್ದೀರಿ. ನ್ಯಾಯಾಂಗದ ಸುಧಾರಣೆ ನಮ್ಮ ದೇಶದಲ್ಲಿ ಯಾವ ನಿಟ್ಟಿನಲ್ಲಿ ನಡೆಯಬೇಕಿದೆ?

ನಮ್ಮಲ್ಲಿರುವ ಆಂಗ್ಲೋ ಸ್ಯಾಕ್ಸನ್ ನ್ಯಾಯಾಡಳಿತ ನಮ್ಮ ದೇಶಕ್ಕೆ ಅನುಗುಣವಾಗಿಲ್ಲ. ನಮ್ಮ ಜನರ ಜಾಯಮಾನಕ್ಕೆ ಒಗ್ಗುವಂತದಲ್ಲ. ಎಲ್ಲೋ ಕುಳಿತ ಜಡ್ಜು ಏನು ನ್ಯಾಯಾದಾನ ನೀಡಲು ಸಾಧ್ಯ? ಅದರಿಂದ ವಿಳಂಬ ಮತ್ತು ವಿಪರೀತ ಖರ್ಚಾಗುತ್ತದೆ. ಅಲ್ಲಿ ನ್ಯಾಯದಾನ ಅಗುವ ಖಾತ್ರಿಯೂ ಇಲ್ಲ. ಇದಕ್ಕೆ ಪರ್ಯಾಯವಾಗಿ ನಮ್ಮ ಪರಂಪರೆಯಲ್ಲಿ ಬಂದ ಪಂಚಾಯತಿ ನ್ಯಾಯ ವ್ಯವಸ್ಥೆಯೇ ಸೂಕ್ತ. ಇದನ್ನು ಗುರುತಿಸುವ ಅಂಶ ನಮ್ಮ ಮಂಡಲ ಪಂಚಾಯ್ತಿ ಕಾನೂನಿನಲ್ಲಿ ಮೊದಲಿಗೆ ಇತ್ತು.  ಸಣ್ಣ ಪುಟ್ಟ ಅಪರಾಧಗಳನ್ನು ಅಲ್ಲಿಯೇ ತೀರ್ಮಾನಿಸಿಬಿಡಲು ಸಾಧ್ಯ. ಉನ್ನತ ನ್ಯಾಯಾಲಯಗಳಿಗೆ ಎಷ್ಟೋ ಹೊರೆ ತಪ್ಪುತ್ತದೆ. ಗ್ರಾಮ ಮಟ್ಟದಲ್ಲೇ ಅವು ಪರಿಹಾರವಾಗಿಬಿಡುತ್ತವೆ. ಆದರೆ ಅದರಲ್ಲಿದ್ದ ಒಂದು ಲೋಪವೆಂದರೆ ಗ್ರಾಮಮಟ್ಟದ ನ್ಯಾಯಾಧೀಶರನ್ನು ಚುನಾವಣೆಯ ಮೂಲಕ ಆಯ್ಕೆ ಮಾಡಬೇಕು ಎಂದಿದ್ದುದು. ಇದರಿಂದ ದಲಿತರು ನ್ಯಾಯಾಧಿಪತಿಗಳಾಗಿ ಆಯ್ಕೆಯಾಗುವ ಸಂಭವ ಇರುವುದಿಲ್ಲವಾದ್ದರಿಂದ ಅದಕ್ಕೆ ಪ್ರತಿರೋಧ ಬಂತು. ಅಲ್ಲಿ ಕೇವಲ ಅಪ್ಪ, ಗೌಡ, ರಾವ್‌ಗಳೇ ನ್ಯಾಯಾಧಿಪತಿಗಳಾಗುತ್ತಾರೆ ಎಂಬುದು ಅವರ ತಕರಾರು. ಅದು ವಾಸ್ತವವೂ ಹೌದು. ಇದಕ್ಕೆ ನಾನು ಹೇಳುವುದೇನೆಂದರೆ ನಿವೃತ್ತ ಸರ್ಕಾರಿ ನೌಕರರನ್ನು ಗೌರವಪೂರ್ವಕ ಮ್ಯಾಜಿಸ್ಟ್ರೇಟ್, ಗೌರವಪೂರ್ವಕ ಮುನ್ಸೀಫ್‌ಗಳಾಗಿ ನೇಮಿಸಬೇಕು. ತೀವ್ರತರದ ಪ್ರಕರಣಗಳನ್ನು ಮಾತ್ರವೇ ಮ್ಯಾಜಿಸ್ಟ್ರೇಟ್ ಕೋರ್ಟಿಗೆ ಕಳುಹಿಸಬಹುದು. ಆಗ ನ್ಯಾಯದಾನ ಪದ್ದತಿ ಸರಳೀತಗೊಳ್ಳುತ್ತದೆ. 

ನ್ಯಾಯಾಂಗದಲ್ಲಿನ ಭ್ರಷ್ಟಾಚಾರಕ್ಕೆ ಪರಿಹಾರವೇನು?

ನ್ಯಾಯಾಧೀಶರ ನೇಮಕದಲ್ಲಿ ಸಾಕಷ್ಟು ಸುಧಾರಣೆಗಳಾಗಬೇಕಿದೆ. ಪ್ರಾಮಾಣಿಕತೆ, ನಿಷ್ಪಕ್ಷಪಾತಗಳಿಲ್ಲದಿದ್ದರೆ ಉತ್ತಮ ನ್ಯಾಯದಾನ ಅಸಾಧ್ಯ. ನ್ಯಾಯಾಧೀಶನಾದವನು ಕರೀಕೋಟಿನೊಳಗಿನ ಸನ್ಯಾಸಿಯಾಗಿರಬೇಕಾಗುತ್ತದೆ. 

ನಮ್ಮ ಅರ್ಥನೀತಿಗಳು ನಾಡು ನುಡಿ ಸಂಸ್ಕೃತಿಯ ಮೇಲೆ ಉಂಟು ಮಾಡುತ್ತಿರುವ ಪರಿಣಾಮಗಳ ಬಗ್ಗೆ ನಿಮ್ಮ ಅವಗಾಹನೆ ಏನು? 

ಆರ್ಥಿಕ ಧೋರಣೆ ಯಾವಾಗಲೂ ನಮ್ಮ ಸಾಂಸ್ಕೃತಿಕ ಜೀವನದ ಮೇಲೆ ಪರಿಣಾಮ ಬೀರಿಯೇ ಬೀರುತ್ತದೆ. ಒಂದು ಸಣ್ಣ ಉದಾಹರಣೆ ನೀಡುತ್ತೇನೆ. ಇಂದಿನ ಐಟಿ-ಬಿಟಿ ಯುಗದಲ್ಲಿ ಗಂಡ ಹೆಂಡಿ ಇಬ್ಬರೂ ಆಫೀಸಿಗೆ ಹೋಗುತ್ತಾರೆ. ಅಡುಗೆ ಮಾಡಲೂ ಸಮಯ ಇರುವುದಿಲ್ಲ. ಹೀಗಾಗಿ ಅವರ ಬಹುಪಾಲು ಉಪಹಾರ ಹೋಟೆಲ್‌ನಲ್ಲಿಯೇ ಆಗುತ್ತದೆ. ನಲವತ್ತು ಸಾವಿರ ಸಂಬಳ ಬಂದರೆ ಊಟಕ್ಕಾಗಿಯೇ ಹತ್ತು ಸಾವಿರ ಹೋದರೆ ಏನು ಅಲ್ಲವೇ? ಇದರ ಪರಿಣಾಮ ಎಂದರೆ ಇನ್ನು ಹತ್ತು ಇಪ್ಪತ್ತು ವರ್ಷದಲ್ಲಿ ನಮ್ಮ ರೊಟ್ಟಿ, ನಮ್ಮ ಹೋಳಿಗೆ, ನಮ್ಮ ಮುದ್ದೆ ಇರುವುದಿಲ್ಲ. ನಮ್ಮ ಅಡುಗೆ ಮನೆಯಲ್ಲಿ ರೊಟ್ಟಿ ಬಡಿಯುವ ಸದ್ದು ಕೇಳಲು ಇರುವುದಿಲ್ಲ. ಹಿಂದೆ ನಮ್ಮ ಊರುಗಳಲ್ಲಿ ರಸ್ತೆಯಲ್ಲಿ ನಡೆದಾಡುತ್ತಿದ್ದರೇ ಸಜ್ಜೆ ರೊಟ್ಟಿ ಪರಿಮಳ ಬರುತ್ತಿತ್ತು. ಆದರೆ ಇಂದು ಅದಿಲ್ಲ. ಕೃತಕ ಗೊಬ್ಬರಗಳು ನಮ್ಮ ರುಚಿಯನ್ನೇ ಕೆಡಿಸಿ ಹಾಕಿವೆ. ಶ್ಯಾವಿಗೆ ಬದಲು ನೂಡಲ್ ಬಂದಿದೆ. ಪಿಜ್ಜಾ, ಬರ್ಗರ್ ಇತ್ಯಾದಿ ಜಂಕ್ ಫುಡ್ ಬಂದಿದೆ. ಸಾವಿರಾರು ವರ್ಷಗಳಿಂದ ನಮ್ಮ ಮಹಿಳೆಯರು ಪ್ರಯೋಗಗಳ ಮೂಲಕ ಅಭಿವೃದ್ಧಿಪಡಿಸಿದ್ದ ಸಾವಿರಾರು ಬಗೆಯ ತಿನಿಸುಗಳು ಕಣ್ಮರೆಯಾಗುತ್ತಿವೆ. ಇದಕ್ಕೆ ಪರಿಹಾರ ಎಂದರೆ ವಿದೇಶಿ ವಸ್ತುಗಳನ್ನು ಬಹಿಷ್ಕರಿಸಿ ಎಂದಲ್ಲ. ಆದರೆ ನಮ್ಮದಕ್ಕೆ ನಾವು ಅಂಟಿಕೊಳ್ಳುವುದರಲ್ಲೇ ಪರಿಹಾರವಿದೆ. 

118ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯ ಮೂಲಕ ಜಾರಿಯಾಗುತ್ತಿರುವ 371 ಜೆ ವಿಧಿ ಹೈದರಾಬಾದ್ ಕರ್ನಾಟಕದ ಬವಣೆಗಳಿಗೆ ಪರಿಹಾರವಾಗಬಲ್ಲುದೇ? 

ಶಾಸನದಿಂದಲೇ ಎಲ್ಲವೂ ಪರಿಹಾರವಿಲ್ಲ. ಅದನ್ನು ಸರಿಯಾಗಿ ಜಾರಿಗೆ ತುರುವುದರಿಂದ ಅಭಿವೃದ್ಧಿ ಸಾಧ್ಯ. ಈಗ ನೋಡಿ. ಗೂರ್ಖಾಲ್ಯಾಂಡ್‌ನ ಒಂದೊಂದು ಜಿಲ್ಲೆಗೆ ಕೊಡುವ ನೂರು ಕೋಟಿಗಳಲ್ಲಿ ಜನರಿಗೆ ತಲುಪಿರುವುದು ಅತ್ಯಲ್ಪ ಮಾತ್ರ. ಹೀಗಾಗಿ ಜನರಿಗೆ ಅನುಕೂಲವಾಗುವಂತೆ ಸಮರ್ಪಕ ಅನುಷ್ಠಾನವಿಲ್ಲದಿದ್ದರೆ 371 ಜೆ ಮಾತ್ರ ಅಲ್ಲ 371 ಝಡ್ ವರೆಗೆ ಮಾಡಿದರೂ ಉಪಯೋಗವಿಲ್ಲ. ಈ ಕಾಯ್ದೆ ಅಸಮಾನತೆಯ ನಿರ್ಮೂಲನೆಗೆ ಅನುಕೂಲವಾಗಬೇಕು. ಮಧ್ಯವರ್ತಿಗಳ ಪಾಲಾಗದೇ ಜನರಿಗೆ ಅದರ ಫಲ ಸಿಗಬೇಕು. ಇಲ್ಲವಾದರೆ ಉತ್ತರ ಕರ್ನಾಟಕದ ಜನ  ಬಡಿಗೆ ತೆಗೆದುಕೊಳ್ಳುತ್ತಾರಷ್ಟೆ. ಕುವೆಂಪು ಒಮ್ಮೆ ನನಗೆ ಕೇಳಿದ್ದರು. 'ಉತ್ತರ ಕರ್ನಾಟಕದಲ್ಲಿ ಅಷ್ಟೊಂದು ಕೇಸುಗಳು ಯಾಕಿರುತ್ತವೆ?’ ಅಂತ. ಅದಕ್ಕೆ ನಾನು 'ಉತ್ತರ ಕರ್ನಾಟಕದವರು ಬಹಳ ಒಳ್ಳೆಯವರು. ಅದಕ್ಕೆ’ ಅಂದಿದ್ದೆ. ಆಶ್ಚರ್ಯ ಚಕಿತರಾಗಿ ಅವರು 'ಜನ ಒಳ್ಳೆಯವರಾದರೆ ಅದು ಹೇಗೆ ಅಷ್ಟೊಂದು ಕೇಸುಗಳಿರಲು ಸಾಧ್ಯ? ಎಂದು ಮರುಪ್ರಶ್ನೆ ಹಾಕಿದ್ದರು.  ಅದಕ್ಕೆ ನಾನು "ಹೌದು. ಅವರಿಗೆ ಅನ್ಯಾಯ ಆಯ್ತು ಅಂತ ಕಂಡು ಬಂದರೆ ಅವರು ಸಹಿಸೋದಿಲ್ಲ. ಅದಕ್ಕೆ" ಅಂದೆ. ಅದಕ್ಕೆ ಪುಟ್ಟಪ್ಪನವರು ಬಹಳ ನಕ್ಕಿದ್ದರು. 

ಟಿಪ್ಪೂ ವಿಷಯದಲ್ಲಿ ಆಗಾಗ ನಡೆಯುವ ವಿವಾದದ ಕುರಿತು ನಿಮ್ಮ ಅಭಿಪ್ರಾಯವೇನು?

ಟಿಪ್ಪೂ ಬ್ರಿಟಿಷರ ಪರಮ ಶತ್ರುವಾಗಿದ್ದ. ಆ ಕಾರಣ ಅವನನ್ನು ದುರ್ಬಲಗೊಳಿಸಲು ಅವರು ಮಾಡಿದ ಪ್ರಯತ್ನಗಳು ಯಶಸ್ವಿಯಾಗಲಿಲ್ಲ. ಆತನಿಗೆ ಅಷ್ಟು ಮಟ್ಟದ ಜನಬೆಂಬಲವಿತ್ತು. ಆ ಜನಬೆಂಬಲವನ್ನು ಇಲ್ಲವಾಗಿಸಲು ಬ್ರಿಟಿಷರು ಇಂತಹ ಸಾಕಷ್ಟು ಅಪಪ್ರಚಾರಗಳನ್ನು ನಡೆಸಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಒಬ್ಬ ಹಿಂದೂ ಆಗಿದ್ದ ಪೂರ್ಣಯ್ಯ ಟಿಪ್ಪೂನ ಪ್ರಧಾನ ಮಂತ್ರಿಯಾಗಿರಲಿಲ್ಲವೇ? ಇಂದಿಗೂ ಸಾಮಾನ್ಯ ಹಿಂದೂಗಳು ಟಿಪ್ಪೂ ಕುರಿತು ಲಾವಣಿಗಳನ್ನು ಹಾಡಿ ಗೆಜ್ಜೆ ಕಟ್ಟಿಕೊಂಡು ಕುಣಿಯುತ್ತಾರಲ್ಲವೇ? ಟಿಪ್ಪೂ ಅಷ್ಟೊಂದು ಕ್ರೂರಿಯಾಗಿದ್ದರೆ ಇದೆಲ್ಲಾ ಹೇಗೆ ಸಾಧ್ಯವಿತ್ತು? ಟಿಪ್ಪೂ ಸೋತಿದ್ದು ನಮ್ಮವರ ದ್ರೋಹದಿಂದಲೇ. ಟಿಪ್ಪೂ ವಿರುದ್ಧ ಮಾತನಾಡುವವರು ಪೂರ್ವಗ್ರಹಪೀಡಿತರಾಗಿದ್ದಾರೆ. ಅವರು ಯಾವಾಗಲೂ ಗತವನ್ನು ವೈಭವೀಕರಿಸುವುದರಲೇ ಸಂತೋಷಪಡುತ್ತಾರೆ. ಅಂತವರು ಪ್ರತಿಪಾದಿಸುವುದು ಧರ್ಮವನ್ನಲ್ಲ. ಅದು ಮತಾಂಧತೆ. 

ನಿಮ್ಮ ಪ್ರಕಾರ ಧರ್ಮ ಎಂದರೆ?

ಧರ್ಮ ಎನ್ನುವುದು ಎಂದಿಗೂ ಬೇರೆ ಬೇರೆ ಅಲ್ಲ. ಬೇರೆ ಇರುವುದು ಮತಗಳಷ್ಟೆ. ಏಕ ದೇವೋಪಾಸನೆ ಒಂದು ಮತವಾದರೆ ಬಹದೇವೋಪಾಸನೆ ಒಂದು ಮತ. ಅವರವರು ತಮ್ಮತಮ್ಮ ಮತವನ್ನು ಪಾಲಿಸಲಿ. ನಂಬಿಕೆಯನ್ನು ಯಾರೂ ಪ್ರಶ್ನಿಸುವ ಹಕ್ಕಿಲ್ಲ. ಆದರೆ ಇದೇ ಸರಿ ಎಂದು ಬೇರೆಯವರ ಮೇಲೆ ಹೇರುವುದಿದೆಯಲ್ಲ ಅದ ಸಮಸ್ಯಾತ್ಮಕ. ಧರ್ಮದ ಮೂಲಸೂತ್ರ ಎಂದರೆ ಋಗ್ವೇದದಲ್ಲಿ ಬರುವ ’ಏಕಂಸತ್ ವಿಪ್ರಾ ಬಹುದಾ ವದಂತಿ ಅಂದರೆ ಇರುವ ಸತ್ಯ ಒಂದೇ. ಬೇರೆ ಬೇರೆಯವರು ಅದನ್ನು ಬೇರೆ ಬೇರೆಯಾಗಿ ಗ್ರಹಿಸುತ್ತಾರೆ. ಅಷ್ಟೆ. ಹಾಗೆಯೇ ’ಸರ್ವ ಕಲ್ವಿದಂ ಬ್ರಹ್ಮ’. ಇದೇ ಧರ್ಮ. ಹೀಗಿರುವಾಗ ಜಾತಿ ಭೇದ ಯಾಕೆ? ಒಂದು ಸೃಷ್ಟಿ ಇದೆ. ಸೃಷ್ಟಿಕರ್ತ ಅಲ್ಲ. ಸೃಷ್ಟಿ ಹೇಗೆ ಎಂದು ಯಾರೂ ಹೇಳಲು ಆಗಿಲ್ಲ. ಅಂತಹ ಒಂದು ಸತ್ಯವನ್ನು ನಾನು ನಂಬುತ್ತೇನೆ. ಆದರೆ ಈ ’ದೇವರು’ ಎಂಬ ಕಲ್ಪನೆಯನ್ನು ನಾನು ನಂಬುವುದಿಲ್ಲ. ದೈವ ಎನ್ನುವುದು ನಾವು ಮಾಡಿಕೊಂಡ ಕಲ್ಪನೆ. ಬಸವಣ್ಣ ಹೇಳಿದ್ದೂ ಅದನ್ನೇ ಅಲ್ಲವೇ? ನೀನೇ ದೇವರು. ನಮ್ಮನ್ನು ನಾವು ಅರಿತುಕೊಳ್ಳುವುದರಲ್ಲೇ ಎಲ್ಲವೂ ಇದೆ. ನನ್ನ ದೃಷ್ಟಿಯಿಂದ ದೇವರು ಎಂದರೆ ಒಂದು ಶಕ್ತಿ. ಮತ್ತು ಆ ಶಕ್ತಿಯೇ ತನ್ನ ವಿಸ್ತಾರ ರೂಪದಲ್ಲಿ ನಮಗೆ ಕಾಣುತ್ತದೆ. 

ಯುವ ಲೇಖಕರಿಗೆ ನಿಮ್ಮ ಸಂದೇಶವೇನು?

ತಮ್ಮ ಶಿಕ್ಷಣದಿಂದ ಹಿಡಿದು, ಸಮಾಜ ಅಧ್ಯಯನದಿಂದ ಹಿಡಿದು ಪ್ರತಿಯೊಂದರಲ್ಲೂ ಅವರು ಸಮದರ್ಶಿಯಾಗಿರಬೇಕು. ಪೂರ್ವಗ್ರಹಗಳಿಂದ ದೂರವಿರಬೇಕು. ಅದರಲ್ಲೂ ಮತದ ವಿಚಾರದಲ್ಲಿ ಬಹಳ ಸಮದರ್ಶಿತ್ವವನ್ನು ನಮ್ಮ ಯುವ ಲೇಖಕರು ತೋರಬೇಕು. ನನ್ನ ಪ್ರಕಾರ ಭ್ರಷ್ಟಾಚಾರಕ್ಕಿಂತಲೂ ದೊಡ್ಡ ವ್ಯಾಧಿ ಮತಾಂಧತೆ ಅಥವಾ ಕೋಮುವಾದ. ಭ್ರಷ್ಟಾಚಾರವಾದರೆ ಮಾಡಿದವರಿಗೇ ಸೀಮಿತವಾಗಿರುತ್ತದೆ. ಮತಾಂಧತೆ ಹಾಗಲ್ಲ. ಇಂದು ಮತಾಂಧತೆ ಪ್ರತಿಯೊಬ್ಬರ ಮನಸ್ಸಿನಲ್ಲಿದೆ. ಬರಹಗಾರನಾದವರಿಗೆ ಮತಾಂಧ ಧೋರಣೆಯಿರಬಾರದು. ವಿಷಪೂರಿತ ಬರವಣೆಗೆಯಿಂದ ನೀವು ಸಾಧಿಸುವುದಾದರೂ ಏನು? ಹಾಗೆಯೇ ಆತ ಭ್ರಷ್ಟನಾಗಿರಬಾರದು. ಇಂದು ನೋಡಿ ಬರಹಗಾರರು, ಪತ್ರಕರ್ತರು ಏನಾಗಿದ್ದಾರೆ?. ಹೊಸಕೋಟೆಯಲ್ಲಿ ಸ್ಥಳೀಯ ವರದಿಗಾರನಾಗಿದ್ದವನು ಬೆಂಗಳೂರಿಗೆ ಬಂದು ಹತ್ತು ವರ್ಷದಲ್ಲಿ ಏಳು ಮನೆಗಳಿರುವ ಸಾಲು ಕಟ್ಟಿಸುತ್ತಾನೆ. ಹಲವು ವಾಹನಗಳನ್ನು ಖರೀದಿಸುತ್ತಾನೆ. ಬಿಳಿ ಬೋರ್ಡು ಹಾಕಿಕೊಂಡೇ ಹಳದಿ ಬೋರ್ಡಿನ ಕೆಲಸ ಮಾಡುತ್ತಾನೆ. ಅವನು ನಮ್ಮ ಜನಗಳ ಪ್ರತಿನಿಧಿ! ಇಂದು ಭ್ರಷ್ಟ ಬರಹಗಾರರಲ್ಲಿ ಪತ್ರಕರ್ತರೂ ಸೇರಿದ್ದಾರೆ. ಅಂತಹವರು ಖಜಾನೆಯನ್ನು ಲೂಟಿಮಾಡುವ ಐಎಎಸ್ ಆಫೀಸರ್‌ಗಳಿಗಿಂತಲೂ ಅಪಾಯಕಾರಿ ಎನ್ನುತ್ತೇನೆ ನಾನು. ಬರಹಗಾರರಿಗೆ ನಾನು ಹೇಳುವುದಿಷ್ಟೆ. ನೀವು ಅಮೆರಿಕ, ಇಂಗ್ಲೆಂಡಿನ ಪುಸ್ತಕಗಳನ್ನು ಓದಬೇಕಾಗಿಲ್ಲ. ಮೊದಲು ಒಳ್ಳೆಯವರಾಗಿ. ಸಮಾಜದ ಜನರ ದುಃಖ ನಿವಾರಣೆಗಾಗಿ ನಿಮ್ಮನ್ನು ಅರ್ಪಿಸಿಕೊಳ್ಳಿ. ಅದಕ್ಕೆ ಪ್ರಾಮಾಣಿಕತೆ, ನಿಸ್ವಾರ್ಥತೆ ಬೇಕಾಗುತ್ತದೆ. ನಿಮ್ಮ ಮನಸ್ಸು ನಿರ್ಮಲವಾಗಿರಲಿ.    
 ಚಿತ್ರಗಳು:ಹರ್ಷ

 ಧರ್ಮ V/s ರಿಲಿಜನ್ ಧರ್ಮ ಎಂತರೆ ಒಳಿತು ಮಾಡುವುದು, ನೀತಿ ಮಾರ್ಗದಲ್ಲಿ ನಡೆಯುವುದು ಎಂದು ನೀವು ಭಾವಿಸುವುದಾದರೆ ಅಂತಹ ತತ್ವ ಹೇಳಿದ ಧರ್ಮಗಳು ಮೂರು. -  1. ಬೌದ್ಧ ಧರ್...

ಮರದೊಂದು ಎಲೆ ನಾನು..

ನನ್ನ ಫೋಟೋ
A Writer, Researcher, Journalist and Activist. Born and brought up from Kugwe a village near Sagara, Shimoga district of Karnataka state. Presently working as the Editor In Chief of PEEPAL MEDIA /PEEPAL TV.