ಸೆಪ್ಟೆಂಬರ್ 03, 2012

ವಿಶ್ವದ ಸಕಲ ಸಮಸ್ಯೆಗಳಿಗೂ ಉತ್ತರ ಬುದ್ಧನ ಚಿಂತನೆಯಲ್ಲಿದೆ- ಪ್ರೊ. ಕಾಳೇಗೌಡ ನಾಗವಾರ





ಬಂಡಾಯ ಸಾಹಿತ್ಯದಲ್ಲಿ ಗುರುತಿಸಿಕೊಂಡು ಅತ್ಯಂತ ಮೌಲ್ಯಯುತವಾದ ಸಾಹಿತ್ಯವನ್ನು ರಚಿಸಿರುವ ಪ್ರೊ. ಕಾಳೇಔಡ ನಾಡಿನ ಪ್ರಮುಖ ಸಾಹಿತಿ, ವಿಚಾರವಾದಿ ಮತ್ತು ಹೋರಾಟಗಾರರು. ಟಿಎಸ್‌ಐಗಾಗಿ ಹರ್ಷಕುಮಾರ್ ಕುಗ್ವೆ ಅವರೊಂದಿಗೆ ನಡೆಸಿದ ಸಂದರ್ಶನ ಇಲ್ಲಿದೆ. 


ಜಗತ್ತಿನ ಮೊದಲ ಜಾನಪದ ವಿಶ್ವವಿದ್ಯಾಲಯವನ್ನು ಸ್ಥಾಪಿಸಿಕೊಂಡಿರುವ ನಾವು ಜಾನಪದ ಅಧ್ಯಯನದ ವಿಷಯದಲ್ಲಿ ಏನನ್ನು ನಿರೀಕ್ಷಿಸಬಹುದು?

ಜಾನಪದ ಅಧ್ಯಯನ ಅನ್ನುವುದು ವಾಸ್ತವವಾಗಿ ಇಡೀ ಜನಸಮುದಾಯದ ಅನುಭವದ ಇತಿಹಾಸವನ್ನೇ ಹೇಳುತ್ತದೆ. ಅಲ್ಲಿ ಅಪರೂಪದ ಪ್ರಯೋಗಗಳಿವೆ; ಅಲ್ಲಿ ವ್ಯಕ್ತಿಗಿಂತ ಹೆಚ್ಚಾಗಿ ಸಮುದಾಯದ ಅನುಭವಗಳಿರುತ್ತವೆ. ನಮ್ಮ ಸಾಂಸ್ಕೃತಿಕ ಇತಿಹಾಸ, ಆಚರಣೆ, ಸಂಗೀತ ಇತ್ಯಾದಿ ಸಕಲ ವೈವಿಧ್ಯಗಳ ಆಗರವೇ ಜಾನಪದ. ಹೀಗಾಗಿಯೇ ಆಯಾಯಾ ದೇಶಗಳಲ್ಲಿ ವಿವಿಧ ಕಾಲಮಾನ, ಹವಾಗುಣಕ್ಕನುಗುಣವಾಗಿ, ಆಹಾರ ಪದ್ಧತಿ, ನಡೆನುಡಿ ವಿಚಾರಗಳಲ್ಲಿ ಪ್ರಯೋಗಶೀಲವಾಗಿ ಯಾವುದು ಹೆಚ್ಚು ಅರ್ಥಪೂರ್ಣ ಎಂದು ಮನುಷ್ಯ ಸದಾ ಹುಡುಕುತ್ತಿರುತ್ತಾನೆ. ಅದು ಅಕ್ಷರಸ್ತರ ಲೋಕಕ್ಕಿಂತ ಭಿನ್ನವಾದ ಪ್ರಾಮಾಣಿಕವಾದ ಅನುಭವ ಲೋಕ. ಆ ದೃಷ್ಟಿಯಿಂದ ಆಯಾ ದೇಶಗಳಲ್ಲಿ ತಜ್ಞರಾದವರು ಆ ಸಮಾಜವನ್ನು ಅರ್ಥಮಾಡಿಕೊಳ್ಳಲಿಕ್ಕಾಗಿ, ಜಾನಪದವನ್ನು ಜ್ಞಾನದ ಕಾರಣಕ್ಕಾಗಿ ಅಧ್ಯಯನಮಾಡುತ್ತಾರೆ. ಹಾಗೆಯೇ ನಮ್ಮ ಭಾರತದ ಸಂದರ್ಭದಲ್ಲಿ ಅಕ್ಷರಜ್ಞಾನ ಇರದಿದ್ದಾಗಲೂ ಸಮಾಜದ ಏಳಿಗೆಯನ್ನು ನಿರಂತರವಾಗಿ ಬಯಸುತ್ತಿದ್ದ ದೊಡ್ಡ ಸಮೂಹವನ್ನು ನಾವು ಕಾಣುತ್ತೇವೆ. ’ವೇದ ಸುಳ್ಳಾಗಬಹುದು’ ಎಂಬ ಮಾತಿದೆ ನೋಡಿ. ಯಾವುದೇ ಜ್ಞಾನ ಮುಕ್ತವಾಗಿ ತೆರೆದುಕೊಂಡಿರಬೇಕು. ಚಿಂತನೆ ಮರುಚಿಂತನೆ ಬೇಕೇಬೇಕು. ಅನುಭವದ ಒರೆಗಲ್ಲಿಗೆ ಹಚ್ಚಿದಾಗ ಅದು ಸತ್ಯವಾದರೆ ಉಳಿಯುತ್ತದೆ. ಇಲ್ಲವಾದರೆ ನಾಶವಾಗುತ್ತದೆ ಎನ್ನುವ ದಿಟ್ಟತನದಿಂದ ಬಂದಿರುವಂತದ್ದು ಜಾನಪದ ಜ್ಞಾನಪ್ರವಾಹ. ಇದನ್ನು ಹೇಗೆ ಉಳಿಸಿಕೊಳ್ಳಬೇಕು, ಹೇಗೆ ಬಳಸಿಕೊಳ್ಳಬೇಕು ಮತ್ತು ಹೊಸ ಸಮಾಜವನ್ನು ಕಟ್ಟುವಾಗ ಏನಾದರೂ ಉಪಯುಕ್ತ ಸಾಮಗ್ರಿ ಸಿಗುತ್ತಾ ಎಂದು ನೋಡುವ ನಿಟ್ಟಿನಲ್ಲಿ ಸಂಶೋಧನೆಗಳಾಗಬೇಕಿದೆ. 

ಇದುವರೆಗೆ ಜಾನಪದ ಅಧ್ಯಯನ  ಎಂದರೆ ’ದಾಖಲೀಕರಣ’ ಮಾತ್ರ ಎಂಬಷ್ಟಕ್ಕೇ ಸೀಮಿತವಾಗಿದೆಯಲ್ಲವೇ?  
ಜಾನಪದ ವೈವಿಧ್ಯವನ್ನು ದಾಖಲಿಸುವ ಜೊತೆಗೇ ಇಡೀ ಸಮುದಾಯವಾಗಿ ನಮ್ಮ ಜನಪದರು ಹೇಗೆಲ್ಲಾ  ಅಲೋಚಿಸಿದ್ದಾರೆ, ಏನು ಮಾಡಿದ್ದಾರೆ ಎಂದು ನೋಡಬೇಕು. ಹೊಸ ಸಮಾಜಕ್ಕೆ ಪೂರಕವಾಗಿ ಅಲ್ಲಿ ಏನಾದರೂ ಇದೆಯೇ ಎಂಬ ದೃಷ್ಟಿಯಿಂದಲೂ ನಮ್ಮ ಅಧ್ಯಯನ ಸಾಧ್ಯವಾಗಬೇಕು. ಅದರಲ್ಲಿ ಯಾವುದನ್ನು ಒಳಗೊಳ್ಳಬೇಕು, ಯಾವುದನ್ನು ಬಿಡಬೇಕು, ಜಾಗತೀಕರಣದ ಹಿನ್ನೆಲೆಯಲ್ಲಿ ಈ ವೈಶಿಷ್ಟ್ಯಗಳನ್ನು ಕಾಪಾಡುವುದು ಹೇಗೆ ಇಂತಹ ವಿಷಯಗಳೆಡೆ ಚಿಂತಿಸಬೇಕು. ನಮ್ಮ ಮೌಖಿಕ ಕಾವ್ಯಗಳಾದ ಮಂಟೇಸ್ವಾಮಿ, ಮಲೆಮಾದೇಶ್ವರ, ಜುಂಜಪ್ಪ ಕಾವ್ಯಗಳಲ್ಲಿ ಮೌಲ್ಯಗಳ ಹುಡುಕಾಟ ನಡೆದಿರುವುದನ್ನು ಕಾಣುತ್ತೇವೆ. ಸರ್ವರ ಏಳಿಗೆಗಾಗಿ ಎಲ್ಲರೂ ದುಡಿಯಬೇಕು ಎನ್ನುವುದು ಪ್ರಧಾನವಾಗಿ ನಮ್ಮ ಜನಪದದಲ್ಲಿ ಕಾಣುತ್ತದೆ. 

ಬಂಡಾಯ ಸಾಹಿತ್ಯ ಚಳವಳಿಯ ಭಾಗವಾಗಿ ಕೆಲಸ ಮಾಡಿದವರು ನೀವು. ಒಂದು ಸಾಹಿತ್ಯ ಚಳವಳಿಯಾಗಿ ಬಂಡಾಯದ ಹೆಗ್ಗಳಿಕೆಯೇನು?

ಹಾಗೆ ನೋಡುವುದಾದರೆ ಸಾವಿರ ವರ್ಷಗಳ ಕನ್ನಡ ಸಾಹಿತ್ಯದಲ್ಲಿ ಯಾರೆಲ್ಲಾ ದೊಡ್ಡ ಕವಿಗಳಿದ್ದಾರೋ ಅವರೆಲ್ಲರಲ್ಲಿ ಅಸಾಧಾರಣವಾದ ಮಾನವೀಯ ತುಡಿತಗಳನ್ನೇ ಕಾಣುತ್ತೇವೆ. ಲಿಂಗಭೇದ, ಜಾತಿಭೇದ ಮುಂತಾದ ಎಲ್ಲಾ ಕ್ರೌರ್ಯಗಳ, ಅಸಮಾನತೆಗಳ ವಿರುದ್ಧ ನಮ್ಮ ಕವಿಗಳು ಕಾಲಕಾಲಕ್ಕೆ ಹೋರಾಡಿದ್ದಾರೆ. ನಮ್ಮ ಕವಿರಾಜಮಾರ್ಗಕಾರ, ಪಂಪ, ಕುಮಾರವ್ಯಾಸರಲ್ಲಿ ಇದನ್ನೆಲ್ಲ ನೋಡಬಹುದು. ವಚನಕಾರರಲ್ಲಿ ಅದು ದೊಡ್ಡ ಮಟ್ಟದಲ್ಲಿ ಕಾಣುತ್ತದೆ. ಹರಿಹರ ರಾಘವಾಂಕ ಹಾಗೂ ಕುವೆಂಪು, ಶಿವರಾಮ ಕಾರಂತರವರೆಗೂ ಈ ಪರಂಪರೆ ಇದೆ. ನಂತರದ ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ಹೊಸಕಾಲದಲ್ಲಿ ದೊಡ್ಡ ಪ್ರಮಾಣದಲ್ಲಿ ಬಂಡಾಯ ಚಳವಳಿ ಈ ಬಗೆಯ ಕೊಡುಗೆ ನೀಡಿದೆ. ಪ್ರಜಾಪ್ರಭುತ್ವ ಕಾಲದ ಉಳಿದ ಚಳವಳಿಗಳಿಗೆ ಹೋಲಿಸಿದಾಗ ಬಹಳ ಕಾಲ ಕ್ರಿಯಾಶೀಲವಾಗಿ ಕೆಲಸ ಮಾಡಿದ್ದು ಬಂಡಾಯ ಸಾಹಿತ್ಯ ಚಳವಳಿ. ಒಂದು ವಿಶಾಲ ಮಾನಸಿಕ ತಳಹದಿಯನ್ನೂ ಅದು ಹೊಂದಿತ್ತು. ಸಾಮಾಜಿಕ ಬದಲಾವಣೆಯನ್ನು ಬಯಸುವ ಗೆಳೆಯರು ಶುರು ಮಾಡಿದ್ದು ಅದು. ಏಳುಬೀಳುಗಳ ಹೊರತಾಗಿಯೂ ಕೆಲವು ದಶಕಗಳವರಗೆ ಸಾಮಾಜಿಕ ಎಚ್ಚರವನ್ನು ಕಾಯ್ದಿಡುವ ಕೆಲಸವನ್ನು ಬಂಡಾಯ ಸಾಹಿತ್ಯ ಮಾಡಿದ್ದನ್ನು ನಾವು ನೋಡಬಹುದು. 

’ಬೂಸಾ’ ವಿರೋಧಿ ಹೋರಾಟಗಾರ, ಚಿಂತಕ, ರಾಜಕಾರಣಿಯಾಗಿದ್ದ ಬಸವಲಿಂಗಪ್ಪರೊಂದಿಗೆ ನಿಮ್ಮ ಒಡನಾಟ ಮತ್ತು ಬಸವಲಿಂಗಪ್ಪನವರ ವ್ಯಕ್ತಿತ್ವವನ್ನು ಕುರಿತು ನಮ್ಮ ಓದುಗರಿಗೆ ತಿಳಿಸಿಕೊಡಿ. 
ಬಸವಲಿಂಗಪ್ಪ ವಾಸ್ತವದಲ್ಲಿ ಬಹಳ ಆಶ್ಚರ್ಯಕರವಾದ ಒಬ್ಬ ರಾಜಕಾರಣಿ. ಅವರು ಅಂಬೇಡ್ಕರ್, ಬುದ್ಧ, ವZನಕಾರರೂ ಸೇರಿದಂತೆ ಮತ್ತೆಲ್ಲ ಪ್ರಗತಿಪರವಾದ ಸಾಹಿತ್ಯ ಮತ್ತು ವೈಚಾರಿಕ ಗ್ರಂಥಗಳನ್ನು ಆಳವಾಗಿ ಅಧ್ಯಯನ ಮಾಡಿದ್ದವರು. ಹಾಗೆಯೇ ಹುಟ್ಟಿನಿಂದ ದಲಿತನಾದ ಕಾರಣಕ್ಕೆ ಆ ತುಡಿತವೂ ಹೆಚ್ಚಾಗಿ ಅವರಲ್ಲಿತ್ತು. ನಾವೆಲ್ಲ ಬಸವಣ್ಣ, ಕುವೆಂಪು ಇತ್ಯಾದಿ ವಿಚಾರಧಾರೆಗಳನ್ನು ಚಿಕ್ಕವಯಸ್ಸಿನಲ್ಲೇ ಓದಿಕೊಂಡ ಪರಿಣಾಮವಾಗಿ ಮತ್ತು ನಂತರದಲ್ಲಿ ಅಂಬೇಡ್ಕರ್, ಲೋಹಿಯಾರವರನ್ನು ಅಧ್ಯಯನ ಮಾಡಿದ ತರುವಾಯ ಮತ್ತಷ್ಟು ಸ್ಪಷ್ಟತೆ ಸಿಕ್ಕಿತ್ತು. ಆದರೆ, ಬಸವಲಿಂಗಪ್ಪ ಅಷ್ಟೊತ್ತಿಗಾಗಲೇ ಪ್ರಯೋಗಶೀಲರಾಗಿದ್ದರು. ನನಗೆ ೨೪ ವಯಸ್ಸಾಗಿದ್ದಾಗ ಅವರು ನನ್ನ ಎರಡರಷ್ಟು ವಯಸ್ಸಿನವರು. ನಮ್ಮ ಹಳ್ಳಿಗಾಡಿನಲ್ಲಿ ನಮ್ಮ ಇತಿಮಿತಿಗಳಲ್ಲೇ ನಾವು ಒಂದಷ್ಟು ಹೋರಾಟಗಳನ್ನು ನಡೆಸುತ್ತಿದ್ದುದು ಅವರ ಗಮನಕ್ಕೆ ಬಂದಿತ್ತು. ಆಗ ಅವರೇ ನನ್ನನ್ನು ಹುಡುಕಿಕೊಂಡು ಬಂದರು. ನಾನು, ಡಾ. ಬೆಸಗರಹಳ್ಳಿ ರಾಮಣ್ಣ ಮುಂತಾದವರು ಆಗಿನ ಅನ್ಯಾಯ ಮತ್ತು ಸಮಾಜದಲ್ಲಿನ ಅಕ್ರಮಗಳ ವಿರುದ್ಧ ವಾಚಕರವಾಣಿಗೆ ಪತ್ರಗಳನ್ನು ಬರೆಯುತ್ತಿದ್ದೆವು. ಲೋಹಿಯಾರಿಂದ ಪ್ರಭಾವಿತಗೊಂಡು ಈ ಕಾಂಗ್ರೆಸ್‌ನಲ್ಲಿದ್ದವರೆನ್ನೆಲ್ಲ ನಂಬಲೇಬಾರದೆಂದು ತಿಳಿದುಕೊಂಡಿದ್ದವರು ನಾವು. ಹಾಗಾಗಿ ಒಂದೆರಡು ವರ್ಷ ನಾವವರನ್ನು ಭೇಟಿಯಾಗಿರಲೇ ಇಲ್ಲ. ಆ ನಂತರ ಅವರನ್ನು ಭೇಟಿ ಮಾಡಿದ ಮೇಲೆ ತಿಳಿಯಿತು ಅವರು ಬೇರೆಯದೇ ರೀತಿಯ ಹೃದಯವಂತ ವ್ಯಕ್ತಿ ಅಂತ. ಎಂತಹ ತೊಂದರೆಯನ್ನೂ ತೆಗೆದುಕೊಳ್ಳಲು ಅವರು ತಯಾರಿದ್ದರು. ಪ್ರಖರಸತ್ಯಗಳನ್ನು ಹೇಳಲು ತಯಾರಿಲ್ಲದಿದ್ದರೆ ನಮ್ಮ ಜನರು ಬಿಡುಗಡೆಯಿಲ್ಲದೆ ಹೀಗೇ ಇರಬೇಕಾಗುತ್ತದೆ- ಎಂದು ಅವರು ನಂಬಿದ್ದರು. ಯಾಕೆಂದರೆ ಆ ಕಾಲದಲ್ಲಿ ಅಸ್ಪೃಶ್ಯತೆಯನ್ನು ಬಹಿರಂಗವಾಗಿ ಸಮರ್ಥಿಸುವ ಪುರಿ ಪೀಠದ ಜಗದ್ಗುರುಗಳೇ ಇದ್ದರು. ಸಮಾಜದಲ್ಲಿ ವೈಚಾರಿಕ ಚಿಂತನೆಗಳು ಬರಬೇಕು ಎಂದು ಶ್ರಮಪಡುತ್ತಿದ್ದ ಬಸವಲಿಂಗಪ್ಪ ’ಇಷ್ಟು ದಿನ ದೇವರನ್ನು ಪೂಜಿಸಿದರೂ ನಿಮ್ಮ ಬದುಕಲ್ಲಿ ಬದಲಾವಣೆಯಾಗಿಲ್ಲ’ ಎಂದು ’ದೇವರ ಪಟಗಳನ್ನು ಚರಂಡಿಗೆಸೆಯಿರಿ’ ಎಂದರು. ಆಮೇಲೆ ಸಾಹಿತ್ಯದಲ್ಲಿ ಬೂಸಾ ಸಹ ಇರಲು ಸಾಧ್ಯವೆಂದರವರು. ಇದು ಬಹಳ ಇಂಟರೆಸ್ಟಿಂಗ್ ನೋಡಿ. ಬಸವಣ್ಣ, ಅಕ್ಕಮಹಾದೇವಿ ಕೂಡಾ ಇದನ್ನೇ ಹೇಳಿದ್ದು. ವೇದ ಶಾಸ್ತ್ರ ಪುರಾಣ ಆಗಮಂಗಳು/ ಕೊಟ್ಟಣವ ಕುಟ್ಟುತ್ತ ನುಚ್ಚು ತೌಡು ಕಾಣಿಭೋ/ ಬರಿದೇ ಕುಟ್ಟಲೇಕೆ ಎಂದು. ’ವೇದಕ್ಕೆ ಒರೆಯ ಕಟ್ಟುವೆ’ ಎಂದೇ ಸಿಟ್ಟಿನಿಂದ ಬಸವಣ್ಣ ಹೇಳಿಲ್ಲವೇ? ಬುದ್ಧನಂತೂ ’ದೇವರು ಅಗಣ್ಯ’  ಎಂದು ಹೇಳಿದ. ಹೀಗೆ ಇವರೆಲ್ಲರ ಚಿಂತನೆಗಳ ಪ್ರಯೋಗಶೀಲತೆಯ ರೀತಿಯಲ್ಲಿ ಬಸವಲಿಂಗಪ್ಪ ಮಾತನಾಡಿದರು. ಆಗ ನಮ್ಮಂತಹ ಬಹಳ ಜನರಿಗೆ ಸಂತೋಷವಾಯಿತು. ಈ ಬಗೆಯ ಬದಲಾವಣೆ ಬಯಸುವ ಮನೋಭಾವದವರು ಕಾಂಗ್ರೆಸ್‌ನಲ್ಲಿದ್ದುದು ಕಡಿಮೆ. ಬಸವಲಿಂಗಪ್ಪ ಕಾಂಗೆಸ್ಸನ್ನು ಬಿಡುತ್ತಲೂ ಇರಲಿಲ್ಲ. ಆಳುವ ಕಾಂಗ್ರೆಸ್ ಸರ್ಕಾರದಲ್ಲೇ ಇದ್ದು ಏನಾದರೂ ಮಾಡಲು ಸಾಧ್ಯ ಎನ್ನುವ ಅಭಿಪ್ರಾಯ ಅವರದ್ದಾಗಿತ್ತು. ಆದರೆ ಅವರ ಬಗ್ಗೆ ಬಹಳ ಅಪಪ್ರಚಾರ ನಡಯಿತು. ಮುಗ್ಧ ವಿದ್ಯಾರ್ಥಿಗಳನ್ನು ಅವರ ವಿರುದ್ಧ ಎತ್ತಿಕಟ್ಟಲಾಯಿತು. ಹೀಗಾಗಿ ಅವರು ರಾಜೀನಾಮೆ ಕೊಡುವ ಪರಿಸ್ಥಿತಿ ಸೃಷ್ಟಿಯಾಯಿತು.

ಮಲಹೊರುವ ಪದ್ಧತಿಯನ್ನು ನಿಷೇಧಿಸುವ ಕಾಯ್ದೆ ದೇಶದಲ್ಲೇ ಮೊಟ್ಟಮೊದಲು ಆದದ್ದು ಅವರಿಂದಲೇ ಅಲ್ಲವೇ?

ಹೌದು. ಮಲಹೊರುವ ಪದ್ಧತಿಯನ್ನು ಇಲ್ಲವಾಗಿಸಲು ಅವರು ನಡೆಸಿದ ಪ್ರಯತ್ನಗಳಂತೂ ಶ್ಲಾಘನೀಯ. ಮಂತ್ರಿಯಾಗಿದ್ದ ಬಸವಲಿಂಗಪ್ಪ ಶಿಷ್ಟಾಚಾರವನ್ನೂ ಮೀರಿ ನನ್ನನ್ನು ಪತ್ರಿಕಾಗೋಷ್ಠಿಗಳಿಗೆ ಕೊಂಡೊಯ್ಯುತ್ತಿದ್ದರು.  ಅಲ್ಲಿ ಮಲ ಮೂತ್ರ ಎಂದು ಹೇಳದೇ ಹೇಲು ಉಚ್ಚೆ ಎಂದು ಬಳಸುತ್ತಿದ್ದರು. ಇದನ್ನು ಕೇಳಿ ಪತ್ರಕರ್ತರು ಕಿವಿಮುಚ್ಚಿಕೊಳ್ಳುತ್ತಿದ್ದರು. ಆಗ ಅವರು ಹೇಳುತ್ತಿದ್ದರು. ’ನೋಡಿ ಆ ಶಬ್ದಗಳನ್ನು ಕಿವಿಯಲ್ಲಿ ಕೇಳಲಿಕ್ಕೇ ನಿಮಗಾಗುವುದಿಲ್ಲ. ಆದರೆ ನನ್ನ ಜನ ಅದನ್ನು ಹೊರುವಾಗ ಕಣ್ಣು ಮೂಗು ಮುಖದ ಮೇಲೆಲ್ಲಾ  ಅವೆಲ್ಲಾ ಪ್ರತಿಕ್ಷಣವೂ ಸುರಿಯುತ್ತಿರುತ್ತವೆ’ ಎನ್ನುತ್ತಿದ್ದರು. ಬಸವಲಿಂಗಪ್ಪ ಅನುಕೂಲಸ್ಥ ಕುಟುಂಬದಿಂದ ಬಂದಿದ್ದರೂ ಆ ಜನರ ಅವಮಾನ, ಕಷ್ಟಗಳನ್ನು ಅರ್ಥಮಾಡಿಕೊಳ್ಳುತ್ತಿದ್ದರು ಎಂಬುದು ಮುಖ್ಯ. ಮಲಹೊರುವ ಪದ್ಧತಿಯನ್ನು ನಿರ್ಮೂಲನೆ ಮಾಡಲು ಇವರು ತೀರ್ಮಾನ ತೆಗೆದುಕೊಂಡ ೨೫ ವರ್ಷಗಳ ನಂತರ ಕೇಂದ್ರ ಸರ್ಕಾರ ಅದನ್ನು ಅನುಸರಿಸಿತು ಎಂಬುದನ್ನು ನೋಡಿದರೆ ಬಸವಲಿಂಗಪ್ಪ ಎಂತಹ ಹೊಣೆಗಾರಿಕೆಯ ಮನುಷ್ಯ ಎಂದು ಅರ್ಥವಾಗುತ್ತದೆ.  ಈ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನ ಮಾಡಲು ಖಂಡಿತಾ ಸಾಧ್ಯವಿದೆ. ಆದರೆ ಇಂದಿನ ಆಳುವ ವರ್ಗದಿಂದ ಅಂತಹ ಸಂವೇದನಾಶೀಲತೆಯನ್ನು ನಿರೀಕ್ಷಿಸಲಾಗದಂತಹ ಪರಿಸ್ಥಿತಿ ಇದೆ. 

ನೀವು ಚಳವಳಿಗಳಲ್ಲಿ ಭಾಗವಹಿಸಿದವರು. ಕಳೆದ ಒಂದೆರಡು ದಶಕಗಳಲ್ಲಿ ಎಲ್ಲಾ ಚಳವಳಿಗಳು ಛಿದ್ರಗೊಂಡಿದ್ದಕ್ಕೆ ಕಾರಣಗಳೇನು ಎಂದು ನಿಮಗನಿಸುತ್ತದೆ?
ನಮ್ಮಲ್ಲಿ ದೊಡ್ಡ ಪ್ರಮಾಣದ ವೈಚಾರಿಕ ಭಿನ್ನಾಭಿಪ್ರಾಯಗಳಿಗಿಂತ ವ್ಯಕ್ತಿತ್ವದ ಅಹಂಕಾರಗಳು, ಅಸಹನೆ ಇವೇ ಕಾರಣವಾಗಿವೆ ಎಂದೆನಿಸುತ್ತದೆ. ಆದರೆ ನಿಜವಾದ ಸ್ನೇಹಭಾವದಿಂದ ಹೋರಾಟಗಳನ್ನು ನಡೆಸಬೇಕು. ಕಾಮ್ರೇಡರಿ ಗುಣ ಎನ್ನುತ್ತಾರಲ್ಲ ಅದು. ಆದರೆ ಅದು ಮನುಷ್ಯ ಮಾತ್ರರಿಗೆ ಸುಲಭವೂ ಅಲ್ಲ. ಹೇಳುವುದು ಸುಲಭ. ಮಾಡುವುದು ಕಷ್ಟ. ಈಗ ನೋಡಿ. ನಮ್ಮ ನಂಜುಂಡ ಸ್ವಾಮಿಯವರು ಬಹಳ ದೊಡ್ಡ ತ್ಯಾಗ ಮಾಡಿದರು. ಆದರೂ ನಮ್ಮ ದಲಿತರಿಗೆ, ಕೃಷಿ ಕೂಲಿ ಕಾರ್ಮಿಕರಿಗೆ ಹೋರಾಟದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ಹಲವಾರು ಸಮಸ್ಯೆಗಳಿವೆ ಇಲ್ಲಿ. ಇವಕ್ಕೆಲ್ಲಾ ಒಂದು ಸಿದ್ಧೌಷದ ಎಂಬುದಿಲ್ಲ. ಸಮಾನ ಮನಸ್ಕರೆಲ್ಲಾ ಒಗ್ಗಟ್ಟಾಗಿ ಸಮಾಜಿಕ ಸಮಸ್ಯೆಗಳ ಸಂದರ್ಭದಲ್ಲಿ ಸರ್ಕಾರಗಳ ಅವಿವೇಕದ ವಿರುದ್ಧ ಪ್ರತಿಭಟನೆ ಮಾಡುವ ಒಗಟ್ಟನ್ನು ಇನ್ನಾದರೂ ಪ್ರದರ್ಶಿಸಬೇಕು. ಪ್ರತಿಯೊಂದು ಚಳವಳಿಗಳ ಸಂದರ್ಭದಲ್ಲಿ ಸೈದ್ಧಾಂತಿಕ ತಾಕಲಾಟಗಳಿದ್ದವು ಎಂಬುದನ್ನು ನೋಡುತ್ತೇವೆ. ವೈಚಾರಿಕ ಭಿನ್ನಾಭಿಪ್ರಾಯಗಳನ್ನೆಲ್ಲಾ ಗೌರವದಿಂದಲೇ ಕಾಣಬೇಕಾಗಿದೆ. ಇಂದು ಕಮ್ಯುನಿಸ್ಟರು, ಸಮಾಜವಾದಿಗಳು, ದಲಿತ ಹೋರಾಟಗಾರರು ಇತ್ಯಾದಿ ಎಲ್ಲಾ ಪ್ರಗತಿಪರರು ಸೇರಿ ಹೋರಾಟ ಮಾಡಲು ಕೈತುಂಬಾ ಕೆಲಸಗಳಿವೆ. ಒಂದು ಹಂತ ದಾಟಿದ ಮೇಲಷ್ಟೇ ಭಿನ್ನಾಭಿಪ್ರಾಯಗಳು ಮುಂದೆ ಬಂದರೆ ಸಮಸ್ಯೆ ಇಲ್ಲ. ಸಾಮಾನ್ಯ ಮನುಷ್ಯನಿಗೆ ಮೂಲಭೂತ ಅವಶ್ಯಕತೆಗಳೇ ಈಡೇರದಿರುವ ಸಂದರ್ಭದಲ್ಲಿ ಎಲ್ಲರೂ ಸೇರಿ ಒಂದು ಸಮಾನ ಹೋರಾಟದ ವೇದಿಕೆಯನ್ನು ನಿರ್ಮಿಸುವ ಅಗತ್ಯತೆ ಇದೆ.  ಇಂದು ಕೆಲವು ದೊಡ್ಡ ಸಾಹಿತಿಗಳು ಮತ್ತು ಚಿಂತಕರಾದವರು ಕೋಮುವಾದಿಗಳಂತೆ ಕೆಲಸ ಮಾಡುತ್ತಿರುವುದನ್ನು ನೋಡಿದ್ದೇವೆ. ಭೈರಪ್ಪನವರೇನೋ ಮೊದಲಿನಿಂದಲೂ ವರ್ಣವ್ಯವಸ್ಥೆಯ ಪರವಾಗಿರುವವರು. ಆದರೆ ಮೂಲತಃ ಒಳ್ಳೆಯ ವ್ಯಕ್ತಿಯಾಗಿರುವ ಚಿದಾನಂದ ಮೂರ್ತಿ ಕೋಮುವಾದಿಯಂತೆ ಮಾತನಾಡುವುದನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ಇಂದು ಒಳ್ಳೆಯ ಆಶಯಗಳನ್ನಿಟ್ಟುಕೊಂಡ ಅನೇಕರಿದ್ದಾರೆ. ಅರ್ಪಣಾ ಮನೋಭಾವದ ತರುಣರೂ ಇದ್ದಾರೆ. ಆದರೆ ಎಲ್ಲರೂ ಒಗ್ಗೂಡಿ ಕೆಲಸ ಮಾಡಲಾಗದಿರುವುದು ವಿಷಾದನೀಯ ಸಂಗತಿ. 

ಮತ್ತೊಂದು ಕಡೆಗೆ ಸಮಾಜದಲ್ಲಿ ಮತಭ್ರಾಂತಿ ಹೆಚ್ಚುತ್ತಿರುವುದಕ್ಕೆ ನಿರ್ದಿಷ್ಟ ಕಾರಣಗಳಿರಬಹುದೇ? 
ಹೌದು. ಅಕ್ಷರ ಜ್ಞಾನ ಬಂದ ಮೇಲೆ ಇಂತಹ ವಿಚಾರಗಳು ಕಡಿಮೆಯಾಗುತ್ತವೆ ಎಂದುಕೊಂಡಿದ್ದೆವು. ಆದರೆ ಈಗಲೂ ಅಂತಹ ಕೋಮುಭಾವನೆ, ಜಾತೀಯತೆಯ ಭಾವನೆಗಳು ಹೆಚ್ಚಾಗುತ್ತಿರುವುದನ್ನು ಕಾಣುತ್ತೇವೆ. ಎಲ್ಲಾ ಧರ್ಮಗಳಲ್ಲಿಯೂ ಮೂಲಭೂತವಾದಿಗಳಿದ್ದಾರೆ. ಇದೆಲ್ಲಾ ಭಾರತದ ಅನಾದಿಕಾಲದ ಜಾಡ್ಯ. ಎಷ್ಟೊಂದು ಜನ ಸಮಾಜ ಸುಧಾರಕರು, ಧಾರ್ಮಿಕ ಚಿಂತಕರು ಬಂದೂ ಈ ಜಾಡ್ಯವನ್ನು ತೊಲಗಿಸಲಾಗಿಲ್ಲ. ಕೋಮುಗಲಭೆಗಳನ್ನು ಹಬ್ಬಿಸುವುದು, ಹಿಂಸೆ ನಡೆಸುವುದು, ಕೊಲ್ಲುವುದು- ಇವೆಲ್ಲಾ ಯಾವ ಕಾಲಕ್ಕೂ ಒಳ್ಳೆಯ ಮೌಲ್ಯಗಳಲ್ಲ. ಅದಕ್ಕಿಂತ ಭಿನ್ನವಾಗಿ ನಾವು ಒಟ್ಟಿಗಿರುವ ಆಲೋಚನೆಗಳೇ ಬಂದಿಲ್ಲ. ಹಾಗೆಯೇ ಮುಸಲ್ಮಾನರಲ್ಲಿಯೂ ದೊಡ್ಡ ಪ್ರಮಾಣದ ಅವಿವೇಕವಿದೆ. ಅವರಲ್ಲಿ ಅನಕ್ಷರತೆ, ಮೂಲಭೂತವಾದಿ ಧೋರಣೆಗಳು ಹೆಚ್ಚಿವೆ. ಹಿಂದೂಗಳಲ್ಲಿ ಅಂತಹವುಗಳನ್ನೆಲ್ಲಾ  ತೋರಿಸಿ ಇಲ್ಲಿನ ಬಡವರನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇಂದು ನೋಡಿ. ಮುಸ್ಲಿಮರ ಮೇಲೆ ದಾಳಿ, ಹಲ್ಲೆ ನಡೆಸಲು ಬಳಸುತ್ತಿರುವುದು ಶೂದ್ರರನ್ನೇ ಅಲ್ಲವೇ? ಅದಕ್ಕಾಗಿಯೇ ಭಜರಂಗದಳಗಳಂತ ಸಂಘಟನೆಗಳನ್ನು ರಚಿಸಿದ್ದಾರೆ. ಈ ವ್ಯೂಹ ಅರ್ಥವಾಗಬೇಕಿದೆ. ಉಳಿದಂತೆ ಸೆನ್ಸಿಬಲ್ ಆದ ದೊಡ್ಡ ಜನವರ್ಗವಿದ್ದರೂ ನಾವು ಯೋಚನೆ ಮಾಡುವುದು ದಂತಗೋಪುರಗಳಲ್ಲಿ ಕುಳಿತುಕೊಂಡೇ. ತೊಂದರೆ ತೆಗೆದುಕೊಳ್ಳಲಿಕ್ಕೆ ನಾವು ತಯಾರಿಲ್ಲದಿರುವುದು ಈ ಹೊತ್ತಿನ ನಿಜವಾದ  ಸಮಸ್ಯೆ. ಎಲ್ಲ ಕ್ಷೇತ್ರಗಳಲ್ಲಿ ಸಂವೇದನಾಶೀಲರಾಗಿರುವ ಜನರು ಈ ಮೈಚಳಿಯನ್ನು ಬಿಟ್ಟು ಹೋರಾಟ ಮಾಡುವುದೊಂದೇ ದಾರಿ. ಇಲ್ಲವಾದರೆ ಕೋಮುವೈಷಮ್ಯಗಳು ಹೆಚ್ಚುತ್ತಲೇ ಹೋಗುತ್ತವೆ. ಹಿಂದೂಧರ್ಮವೂ ಉದ್ಧಾರವಾಗುವುದಿಲ್ಲ. ಇಲ್ಲಿ ಸಮಾನತೆಯೂ ಸಾಧ್ಯವಾಗುವುದಿಲ್ಲ. ಆಶ್ಚರ್ಯವೆಂದರೆ ಶ್ರಮಜೀವಿಗಳ ಕೋಟಿಗಟ್ಟಲೆ ಹಣ ದೇವಸ್ಥಾನಗಳಲ್ಲಿ ಕೊಳೆಯುತ್ತಿದೆ. ಅದನ್ನು ಜನರ ಅಭಿವೃದ್ಧಿಗೆ ಬಳಸುವ ನಿರ್ಧಾರ ಕೈಗೊಳ್ಳಲೂ ನಮ್ಮ ಸರ್ಕಾರಗಳಿಗೆ ಆಗುತ್ತಿಲ್ಲ. ಕೆರೆಯ ನೀರನು ಕೆರೆಗೆ ಚೆಲ್ಲುವಂತಾಗಬೇಕಲ್ಲವೇ? ಮತ್ತೆ ಆ ಹಣಕ್ಕೆ ಲೆಕ್ಕವೂ ಇಲ್ಲ. ಮತ್ತೂ ದುರಂತವೆಂದರೆ ಇಂದು ಭ್ರಷ್ಟತೆ ಬುದ್ಧಿಜೀವಿಗಳನ್ನೂ ಬಿಟ್ಟಿಲ್ಲ. ಲೋಕಾಯುಕ್ತ ತನಿಖಾ ವರದಿಯಲ್ಲಿ ಪತ್ರಕರ್ತರ ಹೆಸರುಗಳೂ ಇರುತ್ತವೆ. ಸೋಕಾಲ್ಡ್ ಬುದ್ಧಿಜೀವಿಗಳು ಆ ಹಣದ ಹಿಂದೂ ಹೋಗುತ್ತಿರುವುದು ಇನ್ನೂ ಅನ್ಯಾಯ. ಅಲ್ಲದೇ ತಮ್ಮ ಈ  ಅವಕಾಶವಾದವನ್ನು ಕೆಲವರು ಸಮರ್ಥಿಸಿಕೊಳ್ಳುತ್ತಿದ್ದಾರೆ. 

ನಮ್ಮ ಸಾಮಾಜಿಕ ವಿಷಮತೆಗಳಿಗೆ ಬುದ್ಧನ ಚಿಂತನೆಗಳು ಉತ್ತರವಾಗುತ್ತವೆ ಎಂದು ನಂಬುತ್ತೀರಾ? 

ವಿಶ್ವದ ಸಕಲ ಸಮಸ್ಯೆಗಳಿಗೂ ಬುದ್ಧನೇ ಉತ್ತರವಾಗುತ್ತಾನೆ ಎಂದು ಸಾವಿರ ಸಲ ನನಗೆ ಅನ್ನಿಸಿಬಿಟ್ಟಿದೆ. ಬುದ್ಧ ಮತ್ತು ಬಸವಣ್ಣ ಯಾಕೆ ಮುಖ್ಯರಾಗುತ್ತಾರೆಂದರೆ ಅವರು ಈ ರಾಜಶಾಹಿ ಮತ್ತು ಪುರೋಹಿತಶಾಹಿಯನ್ನು ದೂರಮಾಡಿದವರು. ವಿಶ್ವದ ಚರಿತ್ರೆಯಲ್ಲಿ ರಾಜಶಾಹಿ ಮತ್ತು ಪುರೋಹಿತಶಾಹಿ ಸೇರಿ ಶ್ರಮಜೀವಿಗಳ ಗಳಿಕೆಯ ಲಾಭವನ್ನು ಸೂರೆಹೊಡೆದಿದ್ದಾರೆ. ಬುದ್ಧನ ’ಕರತಲ ಭಿಕ್ಷೆ - ತರುಲತೆ ವಾಸ’ವನ್ನು ಆಶ್ರಯಿಸಿ ಅರಮನೆಯನ್ನು ಬಿಟ್ಟು ಸಂತನಾದವನು. ಬಸವಣ್ಣನೂ ಅಷ್ಟೆ. ಜನಿವಾರವು ಅಸಮಾನತೆಯ ಸಂಕೇತ ಎಂದು ಕಿತ್ತೆಸೆದುಬಿಟ್ಟ. ಮನಸ್ಸಿನ ಪರಿಶುದ್ಧತೆಯ ಬಗ್ಗೆ ಹೇಳಿದ. ಎರಡೂವರೆ ಸಾವಿರ ವರ್ಷಗಳ ಹಿಂದೆ ಕ್ರೈಸ್ತ ಧರ್ಮವಾಗಲೀ, ಇಸ್ಲಾಂ ಧರ್ಮವಾಗಲೀ ಇರಲಿಲ್ಲ. ಆಗಲೇ ಮಹಾನ್ ಚಿಂತನೆಗಳನ್ನು ಮಂಡಿಸಿದ ಬುದ್ಧ ಸಕಾರಾತ್ಮಕ ಚಿಂತನೆ ಕುರಿತು ಮಾತನಾಡಿದ. ಹಾಗೆಯೇ ನಾನು ಹೇಳುವುದೇ ಅಂತಿಮವಲ್ಲ: ಯಾವುದು ಅತ್ಯುತ್ತಮವೋ ಅದರ ಕಡೆಗೆ ಹೋಗೋಣ ಎಂದು ಮರು ಆಲೋಚನೆಗೆ ಒತ್ತು ಕೊಟ್ಟ. ಗೌತಮ ಬುದ್ಧ ಪ್ರಜಾಪ್ರಭುತ್ವವಾದಿ, ಅಹಿಂಸಾವಾದಿ, ಸಮತಾವಾದಿ, ಮತ್ತು ಮೂಢನಂಬಿಕೆಗಳ ಕಡುವಿರೋಧಿ. ಎಲ್ಲಾ ಬಗೆಯ ತಾರತಮ್ಯಗಳಿಗೂ ಅಂತ್ಯ ಹಾಡುವ ಚಿಂತನೆಗಳು ಆತನಲ್ಲಿವೆ. ಸರಳತೆ, ಪ್ರಬುದ್ಧತೆಗಳು ಆತನ ತತ್ವಗಳಲ್ಲಿವೆ. ಆತನ ಚಿಂತನೆಗಳಿಗೆ ಸರಿಸಾಟಿಯಾದವರು ಯಾರೂ ಇಲ್ಲ. ನಮ್ಮ ನೆಲದಲ್ಲಿ ಬುದ್ಧ ಚಿಂತನೆಯಿದೆ. ಲೋಕಾಯತ ಚಿಂತನೆಯಿದೆ, ವಚನಕಾರರ ಚಿಂತನೆಯಿದೆ, ಹಾಗೆಯೇ ಸ್ವಾಮಿ ವಿವೇಕಾನಂದ, ಟ್ಯಾಗೋರ್, ಕುವೆಂಪು, ಶಿವರಾಮ ಕಾರಂತ- ಹೀಗೆ ಎಲ್ಲರೂ ದೊಡ್ಡ ಹೋರಾಟದ ಗಟ್ಟಿ ದಾರಿಯನ್ನು ತೋರಿಸಿಕೊಟ್ಟಿದ್ದರು. ಅವರೆಲ್ಲರ ದಾರಿಯಲ್ಲಿ ನಾವು ನಮ್ಮ ಬದ್ಧತೆಯನ್ನು ಪ್ರದರ್ಶಿಸಲು ವಿಫಲರಾಗಿದ್ದೇವೆ. 

ನೀವು ಹೇಳುವುದು ಸರಿ. ಆದರೆ ಬೌದ್ಧ ಧರ್ಮ ಎಲ್ಲೆಲ್ಲಿ ಆಳುವ ವರ್ಗಗಳ ಕೈ ಸೇರಿದೆಯೋ ಅಲ್ಲಿಯೂ ಸಹ ವ್ಯಾಪಕ ಹಿಂಸಾಚಾರಗಳು ನಡೆದಿವೆಯಲ್ಲ. ಟಿಬೆಟ್ ಮತ್ತು ಶ್ರೀಲಂಕಾಗಳಂತಹ ಉದಾಹರಣೆಗಳು ನಮ್ಮ ಮುಂದಿವೆ?
ಹೌದು ನಿಜ. ಇದೂ ಬಹಳ ಕುತೂಹಲಕರವಾದದ್ದು. ಇದಕ್ಕೆ ಕಾರಣ ಬೇರೇನೂ ಅಲ್ಲ- ಜಡತ್ವ. ಅಕ್ಕಮಹಾದೇವಿ ಹೇಳುವುದು ಅದನ್ನೇ. ನೀವು ತತ್ವ ಹೇಳುತ್ತೀರಾದರೂ ಹೃದಯ ಪರಿಶುದ್ಧತೆ ಇಲ್ಲ ಎಂದು ಹೇಳುತ್ತಾಳಾಕೆ. ಇಂದು ಹಿಂಸೆಯ ಗಲಭೆಗಳಾಗುವ ರಾಷ್ಟ್ರಗಳಿಗೆ ಹೋಲಿಸಿದರೆ ನಮ್ಮ ದೇಶ ಎಷ್ಟೋ ವಾಸಿ. ಗುಜರಾತ್‌ನಂತಹ ಹಿಂಸಾತ್ಮಕ ಘಟನೆಗಳಾಗುತ್ತವೆ. ಅದೂ ಮೂಲಭೂತವಾದಿಗಳಿಂದಲೇ. ಇಂತಹವನ್ನು ಹೊರತುಪಡಿಸಿ ನೋಡಿದರೆ ಇಂದು ವ್ಯಾಪಕ ಹಿಂಸಾಚಾರ ನಡೆಯುವ ಕೆಲವು ನೆರೆಹೊರೆಯ ರಾಷ್ಟ್ರಗಳನ್ನೇ ನೋಡಿದರೆ ಭಾರತ ಎಷ್ಟೋ ಉತ್ತಮವೆಂದು ತೋರುತ್ತದೆ. 

ನೀವು ಸಾಹಿತ್ಯ ಲೋಕಕ್ಕೆ ಪ್ರವೇಶಿಸಿದ್ದು ಹೇಗೆ?
ಯಾವುದೇ ಸಾಹಿತ್ಯ ಬದುಕನ್ನು ಹೇಗೆ ರೂಪಿಸಿಕೊಳ್ಳಬೇಕೆಂಬುದರ ಮತ್ತು ಅರ್ಥಪೂರ್ಣಗೊಳಿಸಿಕೊಳ್ಳುವ ಕುರಿತಾದ ಚಿಂತನೆ ಎಂದೇ ನಾನಂದುಕೊಂಡಿರುವುದು. ನಮಗೆ ಸಾಹಿತ್ಯದ ಅಧ್ಯಯನದ ಮೂಲಕ ಇದು ಸಿಕ್ಕಿತು. ದೇವನೂರು, ಶ್ರೀ ಕೃಷ್ಣ ಆಲನಹಳ್ಳಿ, ಮುಂತಾದ ಒಂದೇ ವಯಸ್ಸಿನ ನಾವು ಚಳವಳಿ ಮತ್ತು ಬರಹಗಳನ್ನು ಒಟ್ಟೊಟ್ಟಿಗೇ ಮಾಡಲು ಆರಂಭಿಸಿದೆವು. ಆಗ ಅನಂತಮೂರ್ತಿ, ಲಂಕೇಶ್, ತೇಜಸ್ವಿಯಂತಹ ಸಮಾಜವಾದಿಗಳ ಪ್ರಭಾವವೂ ನಮ್ಮ ಮೇಲಿತ್ತು. ಲೋಹಿಯಾ ಅವರ ಬರಹಗಳು ಕನ್ನಡದಲ್ಲಿ ಬಂದದ್ದೂ ನಮಗೆ ನಮ್ಮ ತಿಳಿವಳಿಕೆ ಹೆಚ್ಚಿಸಿಕೊಳ್ಳಲು ಅನುಕೂಲವಾಯಿತು. ಇವೆಲ್ಲದರ ಜೊತೆಗೆ ಚಳವಗಳಲ್ಲಿ ನೇರವಾಗಿ ಭಾಗವಹಿಸಲು ತೊಡಗಿದ್ದೆವು. ನಮ್ಮ ಸಂಶೋಧನೆ, ಆಧ್ಯಾಪನ, ಚಳವಳಿ ಎಲ್ಲವೂ ಒಂದಕ್ಕೊಂದು ಪೂರಕವಾದವು. ಈಗ ಕೆಲವರು ಮಾಡುತ್ತಾರಲ್ಲ. ಕಾರ್ಖಾನೆ ತರಹ ಒಂದೇಸಮನೆ ಬರೆಯುವುದು. ಆ ತರಹದ ಅತಿಸಂತಾನದಲ್ಲೇನೂ ನನಗೆ ನಂಬಿಕೆಯಿರಲಿಲ್ಲ. ಕನ್ನಡದಲ್ಲಿ ಒಂದು ಸದಭಿರುಚಿಯಿದೆ. ನೀವು ಕಡಿಮೆ ಬರೆದರೂ ಅದರಲ್ಲಿ ಮೌಲ್ಯವಿದ್ದರೆ ಅದು ಗುರುತಿಸಲ್ಪಡುತ್ತದೆ. ಈಗ ನೋಡಿ. ರಾಘವೇಂದ್ರ ಖಾಸನೀಸ ಒಬ್ಬ ಸಂಪ್ರದಾಯವಾದಿ ಮಾಧ್ವ ಬ್ರಾಹ್ಮಣ. ಆದರೆ ಬಹಳ ಸಂವೇದನಾಪೂರಿತ ಕತೆಗಳನ್ನು ಬರೆದಿದ್ದಾರೆ. ಮತ್ತೊಂದು ಕಡೆ ಭೈರಪ್ಪ ಸಮಾನತೆಯ ತತ್ವಗಳನ್ನು ಒಪ್ಪದೆ ಹೆಣ್ಣುಮಕ್ಕಳಿಗೆ ವಿದ್ಯಾಭ್ಯಾಸ ನೀಡಿದರೆ ಸಮಾಜ ಹಾಳಾಗುತ್ತದೆ ಎನ್ನುತ್ತಿದ್ದಾರೆ. ಈ ಅವಿವೇಕಕ್ಕೆ ನಾವೆಲ್ಲ ಮಂಗಳ ಹಾಡುವುದು ಯಾವಾಗ?  

ಹೊಸತಲೆಮಾರಿನ ಯುವ ಲೇಖಕರ ಬಗ್ಗೆ?
ಇಂದಿನ ಹೊಸ ತಲೆಮಾರಿನ ಲೇಖಕರು ನಿಜವಾಗಿಯೂ ವೈವಿದ್ಯಮಯವಾದದ್ದನ್ನು ಕೊಡುತ್ತಿದ್ದಾರೆ. ಶ್ರಮಜೀವಿಗಳ ಮಕ್ಕಳಾದ ವೀರಣ್ಣ ಮಡಿವಾಳರ, ವಿ.ಆರ್. ಕಾರ್ಪೆಂಟರ್ ಅಂತಹ ಇನ್ನೂ ಹಲವಾರು ತರುಣ ಲೇಖಕರು ಈ ಬದುಕಿನ ಎಲ್ಲಾ ಬಗೆಯ ನಿಸ್ಸಹಾಯಕತೆಯ ಸೂಕ್ಷ್ಮಗಳನ್ನು ನೀಡುತ್ತಿದ್ದಾರೆ. ಅದರಲ್ಲಿ ಅಂತರಂಗದ ಒಂದು ಗೀತೆಯಿರುತ್ತದೆ. ಹಾಗೆಯೇ ಮೇಲ್ಜಾತಿಯಿಂದ ಬಂದವರೂ ಕರುಳಿನಿಂದ ಬರೆದಾಗ ಅಲ್ಲೂ ಸತ್ವ ತುಂಬಿರುತ್ತದೆ. ಹೆಣ್ಣುಮಕ್ಕಳಲ್ಲೂ ಅಷ್ಟೆ. ಆ ಲೋಕ ಇನ್ನೂ ಚೆನ್ನಾಗಿ ದಾಖಲಾಗಬೇಕು. ನಮ್ಮ ಸಾಹಿತ್ಯ ಚರಿತ್ರೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಮಹಿಳಾ ಅನುಭವ ದಾಖಲಾಗಿಯೇ ಇಲ್ಲ. ಡಾ. ಎಚ್.ಎಸ್. ಅನುಪಮಾ ಎಂಬ ಹೆಣ್ಣುಮಗಳು ಎಷ್ಟು ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ ಎಂದು ನೋಡಿದರೆ ನಿಜಕ್ಕೂ ಸಂತೋಷವಾಗುತ್ತದೆ. ಅಂಬೇಡ್ಕರ್ ಚಿಂತನೆ, ಪ್ರಗತಿಪರತೆ ಎಲ್ಲವನ್ನೂ ತುಂಬಾ ಚೆನ್ನಾಗಿ ಅರಿತು ಕೆಲಸಮಾಡುತ್ತಿದ್ದಾರೆ. ಒಂದು ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ ಹೆಣ್ಣುಮಗಳು ಬಹಳ ದಿಟ್ಟತನದಿಂದ ಅಂತರಂಗಪೂರ್ವಕವಾಗಿ ಮಾತನಾಡುವುದಿದೆಯಲ್ಲ- ಅದು ಸೊಗಸಾದದ್ದು. ಉಳಿದೆಲ್ಲ ಪ್ರಗತಿಪರರಿಗಿಂತ ಹೆಚ್ಚು ಪ್ರಗತಿಪರವಾಗಿ ಆಕೆ ಕೆಲಸ ಮಾಡುತ್ತಿದ್ದಾರೆ- ಅಧ್ಯಯನ ಮಾಡುತ್ತಿದ್ದಾರೆ. ಇದೂ ಸಾಧ್ಯ ನೋಡಿ. ಪ್ರಾಮಾಣಿಕತೆಗೆ ಎಲ್ಲೆಡೆ ಬೆಲೆಯಿರುತ್ತದೆ. ನಾನು ಗೌಪಾಲಗೌಡರ ಕುರಿತು ಅಧ್ಯಯನ ಮಾಡಿದ್ದೇನೆ. ಅವರ ಹೆಸರು ಕೇಳಿದೊಡನೆ ಅವರನ್ನು ಕಂಡಿರುವವರೆಲ್ಲ ಬ್ರಾಹ್ಮಣರಿಂದ ದಲಿತರವರೆಗೆ ಎಲ್ಲರೂ ಕಣ್ಣೀರು ಸುರಿಸುತ್ತಾರೆ. ಅವರೊಬ್ಬ ಗೇಣಿದಾರನ ಮಗ. ಭಾರತೀಯ ರಾಜಕೀಯ ಚರಿತ್ರೆಯಲ್ಲಿ ಅಚ್ಚರಿ ತರುವಂತಹ ವಿಷಯಗಳಿವು. ತಮಿಳುನಾಡಿನ ಕಾಮರಾಜ ನಾಡಾರ್ ಸಹ ಅಷ್ಟೆ. ಇವರಿಬ್ಬರ ತಾಯಂದಿರೂ ಒಂದು ಪುಟ್ಟ ಗುಡಿಸಲಲ್ಲಿದ್ದವರೇ. ಈಗ ನೋಡಿ. ಗೋಪಾಲಗೌಡರಂತಹ ಧೀರರ ಊರಲ್ಲಿ ಕಳ್ಳರ ಸಂತೆಯೇ ನಡೆಯುತ್ತಿದೆ. ಜನರಿಗೂ ಸಿಟ್ಟೇ ಬರುತ್ತಿಲ್ಲವಲ್ಲ? ಮತ್ತೆ ಐದು ವರ್ಷ ಅವರೇ ಚುನಾಯುತರಾದರೂ ಆಶ್ಚರ್ಯವಿಲ್ಲ. 

ಮೈಸೂರು ದಸರಾಕ್ಕೆ ಎಸ್.ಎಲ್. ಭೈರಪ್ಪ ಅವರನ್ನು ಆಹ್ವಾನಿಸುತ್ತಿರುವ ಕುರಿತು ಎರಡು ಬಗೆಯ ಅಭಿಪ್ರಾಯಗಳು ಬರುತ್ತಿವೆ. ಒಂದು ಅವರು ಕೋಮುವಾದಿ ಲೇಖಕ ಅವರನ್ನು ಕರೆಸಬಾರದು. ಮತ್ತೊಂದು ದಸರಾ ಒಂದು ರಾಜಶಾಹಿ, ಪುರೋಹಿತಶಾಹಿ ಆಚರಣೆ. ಅದಕ್ಕೆ ಭೈರಪ್ಪನವರೇ ಸೂಕ್ತ ಎಂದು. ನೀವೆನು ಹೇಳುತ್ತೀರಿ? 
ಇದನ್ನು ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ಯೋಚಿಸಬೇಕು. ದೇವರನ್ನು, ಚಾಮುಂಡೇಶ್ವರಿಯನ್ನು, ನಾನು ನಂಬದಿದ್ದರೂ ಜನರು ನಂಬಿದ್ದಾರೆ. ಹಾಗೆಯೇ ದಸರಾ ನಿಜವಾದ ನಾಡಹಬ್ಬವಾಗುವುದರಲ್ಲಿ ಇನ್ನೂ ಸಾಧ್ಯವಾಗಿಲ್ಲ. ನಿಜ. ಆದರೆ ಇಂದು ಸರ್ವಾಧಿಕಾರವಂತೂ ಇಲ್ಲ. ಸಾಂಸ್ಕೃತಿಕ ವೈವಿಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ. ಹಾಗಂತ ಈ ಬಗೆಯ  ಉದ್ಘಾಟಕರ ಆಯ್ಕೆ ಅದು ಆಯ್ಕೆ ಮಾಡುವವರ ಅಭಿರುಚಿಗೆ ಸಂಬಂಧಿಸಿದ್ದು. ಅಂಥವರು ಅಧಿಕಾರದಲ್ಲಿದ್ದಾರೆ. ತಮಗೆ ಬೇಕಾದವರನ್ನೇ ತರುತ್ತಾರೆ. ಪೇಜಾವರರನ್ನು ಈ ಹಿಂದೆ ಇವರೇ ಆಯ್ಕೆ ಮಾಡಿದ್ದರು. ತಾವೇ ಸಹಪಂಕ್ತಿ ಭೋಜನಕ್ಕೆ ಒಪ್ಪದ ಪೇಜಾವರ ಪ್ರಗತಿಪರರಂತೆ ಮಾತನಾಡುತ್ತಾರೆ. ಮನುಷ್ಯರೆಲ್ಲಾ ಒಂದೇ ಎಂದು ಹೇಳುವುದಿರಲಿ ಹಿಂದೂಗಳೆಲ್ಲಾ ಒಂದು ಎಂದೂ ಹೇಳುವುದಿಲ್ಲ ಅವರು. ಅಷ್ಟೇ ಅಲ್ಲ ಕನಿಷ್ಟಪಕ್ಷ ಬ್ರಾಹ್ಮಣರೆಲ್ಲಾ ಒಂದು ಎಂದೂ ಹೇಳಲಿಲ್ಲ. ಗೌಡಸಾರಸ್ವತ ಬ್ರಾಹ್ಮಣರನ್ನು ತಮ್ಮ ಮಠದಲ್ಲೇ ಕೂರಿಸದೇ ನೀವು ನಮ್ಮವರಲ್ಲ ಹೋಗಿ ಎಂದು ಎಬ್ಬಿಸಿ ಕಳಿಸಿದವರು ಅವರು. ದಲಿತರನ್ನು ಬಿಡಿ ದಕ್ಷಿಣ ಕನ್ನಡದಲ್ಲಿ ಇಂದಿಗೂ ಬಿಲ್ಲವರನ್ನು ಇವತ್ತಿಗೂ ಯಕ್ಷಗಾನ ಮಂಡಳಿಗಳಿಗೆ ಸೇರಿಸುವುದಿಲ್ಲ. ನಾನು ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಅಧ್ಯಕ್ಷನಾಗಿದ್ದಾಗ ನನಗೇ ಈ ಬಗ್ಗೆ ಎಷ್ಟೋ ದೂರುಗಳು ಬಂದಿದ್ದವು. ಮತ್ತೆ ಅದೆಲ್ಲಾ ಇಂದೂ ಮುಂದುವರೆದಿದೆ. ಕನಕರನ್ನೂ ಈ ಹಿಂದೆ ಒಳಗೆ ಬಿಟ್ಟಿರಲಿಲ್ಲ. ೧೯೩೪ರಲ್ಲಿ ಗಾಂಧೀಜಿ ಉಡುಪಿ ಗುಡಿಗೆ ಬಂದಿದ್ದಾಗ ಇವರಿಗೆಲ್ಲ ಛೀಮಾರಿ ಹಾಕಿ ಹೋಗಿದ್ದರು. ಅವರು ದೇವಸ್ಥಾನಕ್ಕೆ ಕಾಲಿಡಲಿಲ್ಲ್ಲ. ಎಲ್ಲರಿಗೂ ಪ್ರವೇಶವಿದ್ದರೆ ಮಾತ್ರ ನಾನೂ ಹೋಗುತ್ತೇನೆ ಎಂದು ಹೇಳಿ ಎಂದು ಕನಕನ ಕಿಂಡಿಯಲ್ಲೇ ಕೃಷ್ಣದರ್ಶನ ಪಡೆದರು. 

ಯುವ ಬರಹಗಾರರಿಗೆ ನಿಮ್ಮ ಸಲಹೆಗಳೇನು? 
ನಮ್ಮ ಸಂವೇದನಾಶೀಲತೆ ಮತ್ತು ಪ್ರಾಮಾಣಿಕತೆಗಳು ನಮ್ಮನ್ನು ಕಾಪಾಡುತ್ತವೆ. ಪ್ರಾಮಾಣಿಕತೆ ಮತ್ತು ಸತ್ಯದ ಪರವಾದ ಕಾಳಜಿಗಳಿದ್ದಲ್ಲಿ ಲೇಖಕನೇ ಬೆಳೆಯುತ್ತಾ ಹೋಗುತ್ತಾನೆ. ಹಾಗೆಯೇ ನಮ್ಮ ಉತ್ತಮ ಪ್ರಯತ್ನಗಳು ಮಾತ್ರ ಅತ್ಯುತ್ತಮವಾದದ್ದನ್ನು ಕೊಡಲು ಸಾಧ್ಯ. ಪಾರದರ್ಶಕವಾಕವಾಗಿದ್ದುಕೊಂಡು, ನೈತಿಕಧೈರ್ಯದಿಂದ ಇದ್ದು, ಪಕ್ಷಪಾತವಿಲ್ಲದೇ ಸಮಾಜವನ್ನು ಗಮನಿಸಿ ನಾವೇನನ್ನು ಗ್ರಹಿಸುತ್ತೇವೆಯೋ ಅದನ್ನು ಕೊಡುತ್ತಾ ಹೋದರೆ ಆ ಮೂಲಕ ಒಳ್ಳೆಯ ಸೃಜನಶೀಲ ಸಾಹಿತ್ಯ ಬರುತ್ತದೆ; ಮತ್ತದರ ಸತ್ಪರಿಣಾಮ ಸಮಾಜದ ಮೇಲೆ ಆಗುತ್ತದೆ. ಅದೊಂದು ಸವಾಲು ಸಹ ಅಗಿದೆ. ಒಬ್ಬರಿಗಿಂತ ಒಬ್ಬರು ಭಿನ್ನವಾಗಿರುತ್ತಾರೆ. ಆದರೆ ಎಲ್ಲರೂ ಸೇರಿ ಆರೋಗ್ಯಕರವಾದದ್ದನ್ನು ಸೃಷ್ಟಿಸಲು, ಹೆಮ್ಮೆಯ ಸಾಂಸ್ಕೃತಿಕಲೋಕವನ್ನು ಕಟ್ಟಲು ಸಾಧ್ಯ. ಅವಕಾಶವಾದಿಗಳಿಗೆ, ಹೇಡಿಗಳಿಗೆ ಮತ್ತು ಸೋಮಾರಿಗಳಿಗೆ ಇದು ಸಾಧ್ಯವಾಗುವುದಿಲ್ಲ. ಆ ಬದ್ಧತೆ, ಕಾಳಜಿಗಳಿರಬೇಕಷ್ಟೆ. ದುಃಖಿತರ, ಕಷ್ಟದಲ್ಲಿರವವರ ಪರವಾದ ಅಂತರಂಗದ ದನಿ ಸದಾ ಇರಬೇಕು. ಮತ್ತೆ ಈ ಬಗೆಯ ಕಾಳಜಿ ಹೊಂದಿರುವವರು ಯಾವಾಗಲೂ ಕೂಡಿ ಪರಸ್ಪರ ವಿಚಾರ ವಿನಿಮಯದ ಮೂಲಕ ಒಟ್ಟಾಗಿ ಕೆಲಸ ಮಾಡಬೇಕು. ನಮ್ಮಲ್ಲಿ ಯಾವ ಕಾರಣಕ್ಕೂ ಅವಕಾಶವಾದಿತನ ಇರಬಾರದು, ಅಷ್ಟೆ. 

ಕಾಮೆಂಟ್‌ಗಳಿಲ್ಲ:

 ಧರ್ಮ V/s ರಿಲಿಜನ್ ಧರ್ಮ ಎಂತರೆ ಒಳಿತು ಮಾಡುವುದು, ನೀತಿ ಮಾರ್ಗದಲ್ಲಿ ನಡೆಯುವುದು ಎಂದು ನೀವು ಭಾವಿಸುವುದಾದರೆ ಅಂತಹ ತತ್ವ ಹೇಳಿದ ಧರ್ಮಗಳು ಮೂರು. -  1. ಬೌದ್ಧ ಧರ್...

ಮರದೊಂದು ಎಲೆ ನಾನು..

ನನ್ನ ಫೋಟೋ
A Writer, Researcher, Journalist and Activist. Born and brought up from Kugwe a village near Sagara, Shimoga district of Karnataka state. Presently working as the Editor In Chief of PEEPAL MEDIA /PEEPAL TV.