ನಮ್ಮಲ್ಲಿ ಹಿಂದೆಂದಿಗಿಂತ ಅಪಾರ ಪ್ರಮಾಣದ ಸಾಹಿತ್ಯ ಸೃಷ್ಟಿಯಾಗುತ್ತಿದೆ. ಇದರಲ್ಲಿ ಮೌಲ್ಯಯುತ ಸಾಹಿತ್ಯ ಎಷ್ಟರ ಮಟ್ಟಿಗೆ ಬರುತ್ತಿದೆ?
ಇದಕ್ಕೆ ನಾಲ್ಕೇ ಪುಸ್ತಕಗಳು ಪ್ರಕಟವಾಗುತ್ತಿದ್ದಾಗ ಸುಲಭವಾಗಿ ಹೇಳಬಹುದಿತ್ತು. ಆದರೆ ನಾನ್ನೂರು ಪುಸ್ತಕಗಳು ಬರುತ್ತಿರುವಾಗ ಕಷ್ಟ. ಅನೇಕ ಸಲ ಓದದೆಯೇ ತೀರ್ಮಾನ ಕೊಡುತ್ತೇವೆ. ವಯಸ್ಸಾಗುತ್ತಾ ಹೋದ ಹಾಗೆ ಇತ್ತೀಚಿನ ಬರೆಹಗಳ ಬಗ್ಗೆ ಒಂದು ಬಗೆಯ ಅಸಹನೆಯನ್ನು ಕೆಲವರು ವ್ಯಕ್ತಪಡಿಸುತ್ತಾರೆ. 70ರ ದಶಕದಲ್ಲಿ ವಿಮರ್ಶೆ ಬರೆಯಲು ಆರಂಭಿಸಿದ್ದವರಿಗೆ ೨೦೧೦ರಲ್ಲಿ ಬಂದ ಸಾಹಿತ್ಯವೂ ಅಷ್ಟೇ ಮುಖ್ಯ ಎಂಬ ಮುಕ್ತ ಮನಸ್ಸು ಇರದಿದ್ದರೆ ಈಗಿನದೇನನ್ನೂ ಓದದೇ ಆದೇ ಕುವೆಂಪು ಅದೇ ಬೆಂದ್ರೆ ಎಂದುಕೊಂಡು ಕೂತಿರಬೇಕಾಗುತ್ತದೆ. ಬದಲಿಗೆ ನಮ್ಮ ಕಾಲದಲ್ಲಿ ಬರುತ್ತಿರುವುದರಲ್ಲಿಯೂ ಒಳ್ಳೆಯದಿರುತ್ತದೆ ಎಂಬ ತಿಳುವಳಿಕೆ ಬೇಕು. ಕಸಕಡ್ಡಿ ಎನ್ನುವುದು ಎಲ್ಲಾ ಕಾಲದಲ್ಲಿಯೂ ಇದ್ದೇ ಇರುತ್ತದೆ. ಹಿಂದೆಯೂ ಇತ್ತು. ನಾಗವೇಣಿಯವರ ’ಗಾಂಧಿ ಬಂದ’, ಮೊಗಳ್ಳಿಯವರ ಬುಗುರಿ ಇಂತವೆಲ್ಲ ಎಷ್ಟೊಂದು ಶ್ರೇಷ್ಟವಾದವುಗಳಿವೆಯಲ್ಲ. ಅಮರೇಶ ನುಗಡೋಣಿ, ಎಚ್.ಎಸ್.ಶಿವಪ್ರಕಾಶ್, ನಾರಾಯಣಸ್ವಾಮಿ ಮುಂತಾದವರು ಅದ್ಭುತವಾಗಿ ಬರೆಯುತ್ತಿದ್ದಾರೆ. ಇದೇ ಹೊತ್ತಿಗೆ ಬರೆದಿದ್ದೆಲ್ಲವೂ ಸಾಹಿತ್ಯ ಎಂದು ಹೇಳಲೂ ಬರುವುದಿಲ್ಲ. ಇಂದು ಇರುವ ಒಂದು ದೊಡ್ಡ ಅಪಾಯ ಎಂದರೆ ಕೀರ್ತಿ ಅಥವಾ ಗುರುತಿಸುವಿಕೆ ಬಹಳ ಬೇಗ ಸಿಗುತ್ತಿರುವುದು. ಇದಕ್ಕೆ ಸಮಾಜದ ಯುವಕರಿಗೆ ಪ್ರೋತ್ಸಾಹ ನೀಡಬೇಕೆನ್ನುವ ಮಾದ್ಯಮಗಳ ಪ್ರವೃತ್ತಿ ಕಾರನವಿರಬಹುದು. ಆದರೆ ಇದು ಅವರ ಬರವಣಿಗೆಯನ್ನು ನೋಡಬಹುದಾದಷ್ಟು ದೂರದಿಂದ ನೋಡುವ ಅವಕಾಶ ಅವರಿಗೇ ತಪ್ಪಿಸುತ್ತಿದೆ. ಬರೆವಣಿಗೆಯಲ್ಲಿ ತೊಡಗುವವರ ಬೆಳವಣಿಗೆಯನ್ನು ಮೊಟಕು ಮಾಡಿಬಿಡಬಲ್ಲ ಅಪಾಯ ಇಲ್ಲಿದೆ ಎಂಬುದು ನನ್ನ ಭಾವನೆ.
ಇಂದಿನ ಪ್ರಮುಖ ಸಾಹಿತ್ಯಕ ನೆಲೆ ಯಾವುದೆಂದು ಗುರುತಿಸಬಹುದೆನ್ನಿಸುತ್ತದೆ?
ಇಂದಿನ ಆಲೋಚನಾ ಕ್ರಮವನ್ನು ನೋಡುವುದಾದರೆ ನನಗನ್ನಿಸುವಂತೆ ಮಹಿಳೆಯರ ದೃಷ್ಟಿಯಿಂದ ಎಲ್ಲವನ್ನೂ ನೋಡುವ ಪ್ರಯತ್ನಗಳಾಗಿವೆ. ಹಿಂದೆ ವರ್ಣ ವರ್ಗಕ್ಕೆ ಕೊಡುವ ಪ್ರಾಮುಖ್ಯತೆಯನ್ನು ಲಿಂಗಕ್ಕೆ ಕೊಡುತ್ತಿರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಬೇರೆ ಚಳವಳಿಗಳು ಸ್ಥಗಿತಗೊಂಡಿದ್ದರೂ ಸಹ ಹೆಣ್ಣುಗಳ ಬೆಳವಣಿಗೆಯ ಹುಡುಕಾಟ ಹಿಂದೆಂದಿಗಿಂತ ಹೆಚ್ಚು. ಇದಕ್ಕೆ ಕಾರಣ ಮಹಿಳೆಯರು ಹೆಚ್ಚು ಬರೆಯುವುದು ಒಂದಾದರೆ ಇತರರು ಬರೆದಾಗಲೂ ಸ್ತ್ರೀಕೇಂದ್ರಿತವಾಗಿ ಬರೆಯುತ್ತಿರುವುದು ಇನ್ನೊಂದು. ಕೆಲವೊಮ್ಮೆ ಸ್ರೀವಾದಿ ಚಿಂತನೆಗಳ ನೆರಳೂ ಇರುತ್ತದೆ.
ಕನ್ನಡದಲ್ಲಿ ಸ್ತ್ರೀವಾದಿ ಚಿಂತನೆಗಳ ಸ್ವರೂಪವೇನು?
ಸ್ತ್ರೀವಾದ ಎನ್ನುವುದು ಎಲ್ಲೆಡೆ ಒಂದೇ ತರ ಅಲ್ಲ. ಬಹಳಷ್ಟು ಕವಲುಗಳಿವೆ. ಉದಾಹರಣೆಗೆ ಸ್ತ್ರೀತ್ವ ಎಂದರೆ ಏನು ಎಂಬುದರ ಬಗ್ಗಯೇ ಬಹಳ ವ್ಯಾಖ್ಯಾನಗಳಿವೆ. ಅದೊಂದು ಬಿಡಿಸಿಕೊಳ್ಳಲಾಗದ ಬಂಧನ ಎನ್ನುವಂತೆಯೇ ಅದು ಹೊರಗಿನಿಂದ ಹೇರಿರುವ ರಚನೆ ಎಂಬಂತಹ; ಹುಟ್ಟಿನಿಂದ ಮಹಿಳೆಯಾಗಿರುವುದಿಲ್ಲ, ಬದಲಾಗಿ ಆಕೆಯನ್ನು ಮಾಡಲಾಗುತ್ತದೆ ಎಂಬ ವಾದವಿರುವಂತೆಯೇ ’ಹುಟ್ಟಿನಿಂದಲೇ ಆಕೆ ಮಹಿಳೆ’ ಎಂಬ ವಾದವೂ ಇದೆ. ನಮ್ಮಲ್ಲಿ ನೋಡಿದರೆ ಹಳ್ಳಿಯ ಹೆಣ್ಣುಮಕ್ಕಳು ರೂಪಿಸಿಕೊಳ್ಳುವ ಸ್ತ್ರೀವಾದಕ್ಕೂ ನಗರ ಮಧ್ಯಮ ವರ್ಗದ ಹೆಣ್ಣುಮಕ್ಕಳು ರೂಪಿಸಿಕೊಳ್ಳುವ ಸ್ತ್ರೀವಾದಕ್ಕೂ ವ್ಯತ್ಯಾಸಗಳಿರುತ್ತವೆ. ಹಳ್ಳಿಯೊಳಗೆಯೇ ಇರುವ ಜಮೀನ್ದಾರರ ಮನೆಯ ಹೆಣ್ಣುಮಕ್ಕಳು ರೂಪಿಸಿಕೊಳ್ಳುವ ಸ್ತ್ರೀವಾದಕ್ಕೂ ದಲಿತ ಭೂರಹಿತ ಕೂಲಿಕಾರ್ಮಿಕರ ಹೆಣ್ಣು ಮಕ್ಕಳು ರೂಪಿಸಿಕೊಳ್ಳುವ ಸ್ತ್ರೀವಾದಕ್ಕೂ ಭಿನ್ನತೆಗಳಿವೆ. ಲಿಂಗದ ಪ್ರಶ್ನೆ ತೆಗೆದುಕೊಂಡಾಗ ವರ್ಗ ವರ್ಣಗಳಿಗನುಸಾರವಾಗಿ ಭಿನ್ನತೆಯೆದುರಾಗುತ್ತದೆ. ಜಾತಿ ಕುರಿತು ಮಾತನಾಡುವಾಗ ವರ್ಗ, ಲಿಂಗಗಳನ್ನು ಮರೆಯಲಾಗುವುದಿಲ್ಲ. ಹಾಗೆಯೇ ವರ್ಗದ ಪ್ರಶ್ನೆ ತೆಗೆದುಕೊಂಡಾಗ ಜಾತಿ, ಲಿಂಗಗಳನ್ನು ಮರೆಯುವಂತಿಲ್ಲ. ಈ ಎಲ್ಲವನ್ನೂ ಸೇರಿಕೊಂಡೇ ಇರುತ್ತದೆ.
ಸಾಹಿತ್ಯದಲ್ಲಿ ಇಂದು ಭಿನ್ನ ಬಗೆಯ ತಾತ್ವಿಕತೆಗಳು ಕೆಲಸ ಮಾಡುತ್ತಿರುವ ಸ್ವರೂಪವೇನು?
ನಮ್ಮ ಚಿಂತನೆಗಳಲ್ಲಿ ಹಳ್ಳಿಗಳಿಂದ ಬಂದವರು ಮತ್ತು ಹಳ್ಳಿಗಳಲ್ಲೇ ಇರುವವರು ನೋಡುವುದಕ್ಕೂ ಪಟ್ಟಣಗಳಲ್ಲೇ ಇರುವವರು ನೊಡುವುದಕ್ಕೂ ವ್ಯತ್ಯಾಸಗಳಿರುವುದನ್ನು ಕಾಣಬಹುದು. ಅದನ್ನು ಯಥಾಸ್ಥಿತಿವಾದ ಮತ್ತು ಸುಧಾರಣಾವಾದ ಎನ್ನಬಹುದು. ಪರಿಭಾಷೆಯಲ್ಲಿ ಪೋಸ್ಟ್ ಮಾಡರ್ನಿಸಂ ಅಥವಾ ನವ್ಯೋತ್ತರವಾದ ಎನ್ನುತ್ತೇವಲ್ಲ. ’ಶೋಷಣೆ ಎಂಬುದೇ ಇಲ್ಲ. ಶೋಷಣೆ ಅದನ್ನು ನೋಡುವುದರ ಮೇಲೆ ನಿಂತಿರುತ್ತದೆ’; ಒಂದು ಕಡೆಯಿಂದ ಶೋಷಣೆ ಎಂದು ಕಾಣುತ್ತದೆ, ಮತ್ತೊಂದು ಕಡೆ ಶೋಷಣೆ ಎಂದು ಕಾಣುವುದಿಲ್ಲ’, ಇತ್ಯಾದಿ ವಾದಗಳು ಮೊದಲು ಹುಟ್ಟಿಕೊಂಡಿದ್ದು ಅಮೆರಿಕದಲ್ಲಿ. ಯಾಕಂದರೆ ಅಮೆರಿಕದವರಿಗೆ ತಾವು ಬದುಕುತ್ತಿರುವ ಬಂಡವಾಳಶಾಹಿ ಕ್ರಮವನ್ನು ನಾಚಿಕೆಯಿಲ್ಲದೆ ಸಮರ್ಥಿಸಿಕೊಳ್ಳಲು ಒಂದು ಥಿಯರಿ ಬೇಕಾಗಿತ್ತು. ಅವರು ಆ ಥಿಯರಿಯನ್ನು ಹುಟ್ಟಿಸಿಕೊಂಡೊಡನೇ ಇಲ್ಲಿನವರೂ ಅದೇ ಬಗೆಯ ವಾದಗಳನ್ನು ಅನುಕರಿಸಲು ಶುರುಮಾಡಿದರು. ಈ ನವ್ಯೋತ್ತರವಾದದ ತಾತ್ವಿಕತೆಯೇ ಯಥಾಸ್ಥಿತಿಯನ್ನು ಮುಂದುವರೆಸಿಕೊಂಡು ಹೋಗುವುದು ಎಂದು ನನ್ನ ಅಭಿಪ್ರಾಯ. ವ್ಯವಸ್ಥೆಯಿಂದ ಯಾರು ಪ್ರಯೋಜನ ಪಡೆಯುತ್ತಿರುತ್ತಾರೆ ಅಂತವರು ವ್ಯವಸ್ಥೆಯ ಸಮರ್ಥನೆಯ ಪರವಾಗಿಯೇ ಇರುತ್ತಾರೆ. ಅನ್ಯಾಯಕ್ಕೊಳಗಾದವರು ವ್ಯವಸ್ಥೆಯನ್ನು ವಿರೋಧಿಸುತ್ತಾರೆ. ''ನಾವೆಲ್ಲರೂ ಶೋಷಕರೇ, ನಾವೆಲ್ಲರೂ ಶೋಷಿತರೇ'' ಎಂಬ ಮಾತು ಮೇಲ್ನೋಟಕ್ಕೆ ಸಮಂಜಸ ಎನಿಸಿದರೂ ನಮಗಿಂತ ಹೆಚ್ಚಿನ ಶೋಷಣೆಗೊಳಗಾದ ಹೆಚ್ಚಿನ ಜನರಿರುತ್ತಾರೆ ಎಂಬ ತಿಳುವಳಿಕೆ ನಮಗಿರಬೇಕಾಗುತ್ತದೆ. ಹಾಗಿಲ್ಲದಿದ್ದಾಗ ''ನಾನೂ ಶೋಷಿತನೇ, ಭಿಕ್ಷೆ ಬೇಡುವವನೂ ಶೋಷಿತನೇ'' ಎಂದುಕೊಳ್ಳಬೇಕಾಗುತ್ತದೆ. ಮಡೆಸ್ನಾನ, ಬೆತ್ತಲೆ ಪೂಜೆಯಂತವನ್ನು ಮಾನವೀಯ ನೆಲೆಯಲ್ಲಿ ತಪ್ಪು ಎಂದು ಹೇಳಲು ಸಾಧ್ಯವಾಗುವುದಿಲ್ಲವಾದರೆ ಅತ್ಯಂತ ಕ್ರೂರ ಮನಸ್ಥಿತಿ ಅದು. ಅದಕ್ಕೆ ಸೈದ್ಧಾಂತಿಕ ವಾಗ್ವಾದಗಳೇನೂ ಬೇಕಿಲ್ಲ.
ವಿಮರ್ಶಾ ಸಾಹಿತ್ಯದ ಪ್ರ್ರಾಮುಖ್ಯತೆ, ಪ್ರಯೋಜನ ಮತ್ತದು ಇಂದು ಪಡೆದಿರುವ ಸ್ವರೂಪದ ಕುರಿತು ಹೇಳಿ. ವಿಮರ್ಶಾ ಸಾಹಿತ್ಯದಲ್ಲಿ ತೊಡಗಿಸಿಕೊಳ್ಳುವವರ ಸಂಖ್ಯೆ ಇಂದು ಹಿಂದಿಗಿಂತ ಕಡಿಮೆಯಾಗಿದೆ ಯಾಕೆ?
ವಿಮರ್ಶೆಯಿಂದ ಯಾವ ರೀತಿಯ ಪ್ರಯೋಜನ ಎನ್ನುವುದು ಅನೇಕ ಸಲ ಓದುವವರ ಪೂರ್ವಸಿದ್ಧತೆಯನ್ನೂ ಅವಲಂಬಿಸಿರುತ್ತದೆ. ಅನೇಕ ಸಲ ನಾವು ಸಾಹಿತ್ಯ ಓದಿದರೆ ಸಾಕು ಎನ್ನುವ ಅಭಿಪ್ರ್ರಾಯ ಓದುಗರಲ್ಲಿರುತ್ತದೆ. ಮತ್ತದು ತನ್ನಷ್ಟಕ್ಕೆ ತಾನು ತಪ್ಪಲ್ಲ. ವಿಮರ್ಶೆ ಓದಿಯೇ ಎಲ್ಲರೂ ತಯಾರಾಗಬೇಕೆಂದಲ್ಲ. ನಾವು ಸಾಹಿತ್ಯ ವಿದ್ಯಾರ್ಥಿಗಳಾದದ್ದು ಸಾಹಿತ್ಯ ಅಧ್ಯಾಪನದಿಂದಲೇ ಹೊರತು ವಿಮರ್ಶೆಯ ಓದಿನಿಂದಲ್ಲ. ತರಗತಿಯ ಪಾಠದ ಒಂದು ವಿಸ್ತರಣೆಯಾಗಿ ಸಹ ನಾನು ಬರೆಯುವ ವಿಮರ್ಶೆ ಇರುತ್ತದೆ ಎಂದು ಭಾವಿಸುತ್ತೇನೆ. ಅಂದರೆ ತರಗತಿಯ ವಿದ್ಯಾರ್ಥಿಗಳಿಗೆ ಅರ್ಥವಾಗದಿರುವುದನ್ನು ಬರೆಯುವುದು ತಪ್ಪು. ವಿಮರ್ಶೆಯ ಓದುಗ ಮತ್ತು ಬರೆಯುವವನಿಗೆ ಪರಿಭಾಷೆಯ ಗೋಡೆಯುಂಟಾಗಿದೆ. ವಿಮರ್ಷೆ ಜನಕ್ಕೆ ತಲುಪಬೇಕು ಎಂಬ ಉದ್ದೇಶವಿಲ್ಲದಿದ್ದರೆ ಅದು ಸೀಮಿತ ಮಟ್ಟದಲ್ಲಿ ತನ್ನ ಕೆಲಸ ಮಾಡುತ್ತದೆ. ಹಿಂದೆಲ್ಲಾ ವಿಮರ್ಶೆ ಎಂದರೆ ಸಾಹಿತಿ ಬರೆದ ಸಾಹಿತ್ಯದ ಕುರಿತು ಬರೆದದ್ದು ಎಂದು ಪರಿಭಾವಿಸಲಾಗುತ್ತಿತ್ತು. ಆದರೆ ಈಗ ವಿಮರ್ಷೆ ಕೂಡ ಸಂಸ್ಕೃತಿ ಸಮಾಜಗಳನ್ನು ಅರ್ಥ ಮಾಡಿಕೊಳ್ಳಲು ಬೇಕಾದ ಒಂದು ಉಪಕರಣ ಎಂದು ಅರ್ಥ ಪಡೆದುಕೊಂಡಿದೆ. ಹಿಂದೆ ಯಾವುದೋ ಒಬ್ಬ ಸಾಹಿತಿಯ ಕೃತಿಯನ್ನು ಒಬ್ಬರು ಶ್ರೇಷ್ಠವಾದದ್ದು ಎಂದು ಕರೆದರೆ ಇಡೀ ಸಾಹಿತ್ಯಕ ಸಮುದಾಯ ಅದನ್ನು ಒಪ್ಪಿಕೊಂಡು ಬಿಡುತ್ತಿತ್ತು. ಯಾಕೆಂದರೆ ಎಲ್ಲಾ ಒಂದೇ ಹಿನ್ನೆಲೆಯಿಂದ ಬಂದವರಾಗಿರುತ್ತಿದ್ದರು. ಇಂದು ಬಹುಮುಖಿ ಹಿನ್ನೆಲೆಯ ಓದುಗರು, ವಿಮರ್ಶಕರಿರುವಾಗ ಒಂದೇ ಕೃತಿಯ ಬಗ್ಗೆ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗಬಹುದು. ಈ ಭಿನ್ನಮತ ಎನ್ನುವುದು ಸಂಸ್ಕೃತಿ-ಸಮಾಜಗಳಲ್ಲಿ ಈಗಾಗಲೇ ಇರುವ ಭಿನ್ನಮತಕ್ಕೆ ಹಿಡಿದ ಕನ್ನಡಿಯೇ ಹೊರತು ವಿಮರ್ಶಕನಾದವನು ಹೊಸದಾಗಿ ಸೃಷ್ಟಿಸುವಂತದ್ದಲ್ಲ. ಹೀಗಾಗಿ ಸಾಹಿತ್ಯ ಕೃತಿಯ ಯೋಗ್ಯತೆಯ ಬಗ್ಗೆ ಸರ್ವಾನುಮತವಿರಬೇಕೆಂಬ ತಿಳುವಳಿಕೆ ಕಡಿಮೆಯಾಗಿದೆ. ಓದುಗರಾದವರು ತಮ್ಮ ಹಿನ್ನೆಲೆ ಅಭಿಪ್ರಾಯಗಳಿಗೆ ಅನುಗುಣವಾದ ವಿಮರ್ಶೆಯನ್ನೇ ಓದುತ್ತಾ ಹೋದಾಗ ವಿಮರ್ಶೆಗಳ ನಡುವೆಯೇ ಗೋಡೆ ಸೃಷ್ಟಿಯಾಗುತ್ತದೆ. ವಿಮರ್ಶಕನಾದವನೂ ತಾನೂ ವರ್ಣ ವರ್ಗದ ಲಿಂಗದ ಹಿನ್ನೆಲೆಯಿಂದ ಬಂದವನಾದ್ದರಿಂದ ಅದರಿಂದ ಬಿಡಿಸಿಕೊಳ್ಳುವುದು ಕಷ್ಟ. ಆದರೆ ಅವನ್ನು ಮೀರುವ ಪ್ರಯತ್ನ ಆತನಿಂದ ನಡೆದರೆ ಆತನಿಂದ ಆರೋಗ್ಯಕರವಾದ ಬರವಣಿಗೆ ಸಾಧ್ಯ. ಆದರೆ ಸಾಹಿತ್ಯದ ಬಗೆಗಿನ ತಿಳುವಳಿಕೆಯನ್ನು ಪರಿಭಾಷೆಯ ಆಚೆಗೆ ಓದುತ್ತಿರುವವರು ಬರೆಯುತ್ತಿರುವವರು ಬಹಳಷ್ಟು ಜನ ಇದ್ದಾರೆ. ಇಂದು ಬೌದ್ಧಿಕತೆಯ ಬಗ್ಗೆಯೇ ಒಂದು ವಿಚಿತ್ರವಾದ ವಿರೋಧವಿದೆ. ನನಗೆ ಭಾವನೆ, ಅನುಭವ ಮತ್ತು ಸ್ವಂತ ವಿಚಾರಗಳಲ್ಲಿ ಆಸಕ್ತಿ ಇದೆಯೇ ಹೊರತು ಹೊರಗೆ ಇರಬಹುದಾದ ತಿಳಿವಳಿಕೆಯಿಂದ ಬೆಳಕನ್ನು ಪಡೆಯಲು ತಯಾರಾಗಿಲ್ಲ ಎನ್ನುವ ಪ್ರವೃತ್ತಿ ಇದು. ಇಷ್ಟರ ನಡುವೆಯೂ ನಮ್ಮ ಕಾಲದ ಸಮಾಜ ಚಿಂತನೆ, ಸಂಸ್ಕೃತಿ ಚಿಂತನೆ ಹಿಂದೆಂದಿಗಿಂತ ಹೆಚ್ಚು ಆರೋಗ್ಯಕರವಾಗಿ ಇದೆ ಎಂದು ಖಂಡಿತಾ ಹೇಳಬಹದು. ಹಿಂದಿನಂತೆ ಏಕಮುಖಿ ಚಿಂತನೆಯ ಬದಲಾಗಿ ಇಂದು ಬಹುಮುಖಿ ಚಿಂತನೆ ಇದೆ.
ಸಂಸ್ಕೃತಿ ಕುರಿತ ಚರ್ಚೆಗಳು ನಿರ್ವಾತದಲ್ಲಿ ಹುಟ್ಟುವುದಿಲ್ಲ. ಪ್ರತಿಯೊಂದು ಚಿಂತನೆಗೂ ವರ್ಗ ವರ್ಣ ಲಿಂಗಗಳ ಹಿನ್ನಲೆ ಇದ್ದೇ ಇರುತ್ತದೆ. ಸಂಸ್ಕೃತಿಯ ಬಗ್ಗೆ ಸರ್ವಾನುಮತ ಸಹಮತ ಇರುವ ಕಾಲ ಇದಲ್ಲ. ಇರಬೇಕಾಗಿಯೂ ಇಲ್ಲ. ಹಿಂದೆಲ್ಲ ಎಲ್ಲರೂ ಒಂದೇ ಹಿನ್ನೆಲೆಯಿಂದ ಬಂದವರಾಗಿರುತ್ತಿದ್ದರಿಂದ ಒಬ್ಬರ ಚಿಂತನೆಗಳೇ ಮತ್ತೊಬ್ಬರದಾಗಿರುತ್ತಿತ್ತು. ಮಂಟೇಸ್ವಾಮಿ ಕಾವ್ಯ, ಮಲೆಮಹದೇಶ್ವರ ಕಾವ್ಯವನ್ನು ನಮ್ಮ ಸಂಸ್ಕೃತಿ ಚಿಂತನೆ ಯಾವತ್ತೂ ಒಳಗಿಟ್ಟಿರಲಿಲ್ಲ. ಜಾನಪದ ಸಾಹಿತ್ಯ ಊರಿಗೆ ಬಂದರೂ ಕೇರಿಗೆ ಬಂದಿರಲಿಲ್ಲ. ಮೌಖಿಕ ಸಾಹಿತ್ಯ ಎಂದೊಡನೆ ಕೆರೆಗೆ ಹಾರ, ಗೋವಿನ ಹಾಡು ಇಂತಹ ನಿರಪಾಯಕಾರಿಯಾದವನ್ನು ಇಟ್ಟುಕೊಂಡು ಮಾತನಾಡುತ್ತಿದ್ದರು. ದೊಡ್ಡ ಸಂಸ್ಕೃತಿಯ ಭಾಗವನ್ನೇ ಹೊರಗಿಟ್ಟು ಇದೇ ಸಂಸ್ಕೃತಿಯ ಸಾರ ಎಂದು ಮಂಡಿಸಲಾಗುತ್ತಿತ್ತು. ಇದನ್ನು ಸುಳ್ಳುಮಾಡುವ ನಿಟ್ಟಿನಲ್ಲಿ ಪ್ರಯತ್ನಗಳಾಗಿದ್ದು ಇತ್ತೀಚೆಗೆ ಎನ್ನಬಹುದು.
ಈ ಪರಿವರ್ತನೆ ಉಂಟಾದದ್ದು ಹೇಗೆನ್ನುತ್ತೀರಿ?
ಸಮಾಜದ ವಿಷಮತೆಗಳನ್ನು ಪ್ರಶ್ನಿಸಿದಾಗಷ್ಟೇ ಸಾಹಿತ್ಯ-ಸಂಸ್ಕೃತಿ ಚಿಂತನೆಗಳು ಶಕ್ತಿ ಪಡೆದುಕೊಂಡಿದ್ದು ಎಂಬುದನ್ನು ನೋಡಬಹುದು. ಸಿದ್ದಲಿಂಗಯ್ಯ ಅವರ 'ಇಕ್ರಲಾ ವದೀರ್ಲಾ'ದಂತಹ ಸಾಹಿತ್ಯ ಬಂದಾಗ, ಮತ್ತೊಬ್ಬ ಲೇಖಕಿ 'ನಿಮ್ಮ ಚರಿತ್ರೆಯಲ್ಲಿ ನಮಗೆ ಸ್ಥಾನವಿಲ್ಲ’ ಎಂದಾಗ, 'ಒಲೆ ಬದಲಾದರೂ ಉರಿ ಬದಲಾಗಲಿಲ್ಲ’ ಎಂದಾಗ ಸಮಾಜ ಆಘಾತಕ್ಕೊಳಗಾಗುತ್ತದೆ. ಬಹುದೀರ್ಘ ಕಾಲದಿಂದ ಕುವೆಂಪು ಬರೆದಿದ್ದರೂ ಅವರ ಸಾಹಿತ್ಯ ಕಳೆದ ಇಪ್ಪತ್ತೈದು ಮೂವತ್ತು ವರ್ಷಗಳಲ್ಲೇ ಯಾಕೆ ಹೆಚ್ಚು ಮುನ್ನೆಲೆಗೆ ಬಂದಿತೆಂದರೆ ಸಮಾಜ ಬದಲಾಯಿತೆಂಬ ಕಾರಣಕ್ಕೆ. ಅವರ ಶೂದ್ರತಪಸ್ವಿ, ಬೆರಳ್ಗೆ ಕೊರಳ್, ಜಲಗಾರದಂತಹ ಕೃತಿಗಳು ಈ ದಿನಗಳಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿರುವುದನ್ನು ಈ ಹಿನ್ನೆಲೆಯಲ್ಲಿ ನೋಡಬಹುದು. ವಚನಕಾರರ ವಚನಗಳನ್ನು ನವ್ಯರು, ನವೋದಯದವರು, ಬಂಡಾಯದವರು ನೋಡಿದ ರೀತಿಗಳಲ್ಲಿ ಭಿನ್ನತೆಯಿದೆ. ಇಂದಿನವರು ನೋಡುತ್ತಿರುವ ರೀತಿಯೂ ಭಿನ್ನ. ಒಂದು ಸಾಹಿತ್ಯಕೃತಿಯನ್ನು ಸ್ವೀಕರಿಸುವ ಸಮಾಜದ ಒಳಗಡೆ ಆಗುವ ಬದಲಾವಣೆಗಳೂ ಸಹ ಆ ಕೃತಿಯನ್ನು ನೋಡುವ ನೋಟದಲ್ಲಿ ಬದಲಾವಣೆಯುಂಟು ಮಾಡುತ್ತವೆ ಎಂಬುದು ಮುಖ್ಯ. ಅಂಬೇಡ್ಕರ್ ಅವರಿಗೆ ಇಂದು ಇರುವ ಪ್ರಾಮುಖ್ಯತೆಯೇ ಬೇರೆ. ಮಹಾತ್ಮಾ ಗಾಂಧಿಯ ನಂತರ ಅತ್ಯಂತ ಮುಖ್ಯರಾದ ಅಥವಾ ಅಷ್ಟೇ ಮುಖ್ಯರಾದ ಚಿಂತಕರು ಎಂದು ಅವರನ್ನು ಗುರುತಿಸುವ ಈ ಬದಲಾವಣೆಯನ್ನು ನೋಡಿ. ಅದೇ ರೀತಿ ಆಕೃತಿ-ಆಶಯಗಳೊಂದಿಗೆ ಅದರ ಭಾಷೆಯೂ ಮುಖ್ಯವಾಗುತ್ತದೆ. ಸಂಸ್ಕೃತಿ ಚಿಂತನೆ ಕಲಾತ್ಮಕ ಆಕೃತಿಗಳೆಡೆಯೂ ಗಮನ ನೀಡಬೇಕು.
ಸಾಹಿತಿಗಳಿಗಳಾದವರು ಯಾವುದಕ್ಕೆ ನಿಷ್ಟರಾಗಿರಬೇಕು? ಸಮಾಜಕ್ಕೋ, ಅನುಭವಕ್ಕೋ?
ಸಮಾಜಕ್ಕೆ ಬದ್ಧವಾಗಿ ಬರೆಯುವುದು ಮತ್ತು ಅನುಭವಕ್ಕೆ ಅನುಭವಕ್ಕೆ ಬರೆಯುವುದು ಪರಸ್ಪರ ವಿರೋಧವಾಗಬೇಕಿಲ್ಲ. ಎಲ್ಲ ಅನುಭವಗಳಿಗೂ ಸಾಮಾಜಿಕ ನೆಲೆಗಟ್ಟಿರರುತ್ತದೆ. ಅನುಭವ ಎನ್ನುವುದು ಸಮಾಜದ ತಿಳಿವಳಿಕೆ ಎಷ್ಟೆಷ್ಟು ವಿಸ್ತಾರವಾಗಿರುತ್ತದೆ ಅದನ್ನು ಅವಲಂಬಿಸಿರುತ್ತದೆ. ಅನುಭವ ಎನ್ನುವುದು ನಮ್ಮ ಹಿಂದಿನ ಮುಖ್ಯಮಂತ್ರಿಗಳ ಗ್ರಾಮವಾಸದ ತರದ್ದಲ್ಲ. ಅದು ನಮ್ಮ ಸಂವೇದನೆಯ ಕ್ರಮದ ಪ್ರಶ್ನೆ. ಸಾಹಿತ್ಯ ರಚನೆಯ ಕಾಲದಲ್ಲಿರಬಹುದಾದ ತಿಳಿವಳಿಕೆಗೂ ಸಾಹಿತಿಯಾದವನು ಹೊರಗಡೆ ನಡೆಸುವ ಜೀವನಕ್ಕೂ ಡಿಕ್ಕಿಯಾಗದಂತೆ ನಡೆಯಬೇಕಾದ ಎಚ್ಚರ ಇರುತ್ತದೆ. ಪಾಬ್ಲೋ ನೆರೂಡ ದೊಡ್ಡ ಹೋರಾಟಗಾರ ಮತ್ತು ದೊಡ್ಡ ಸಾಹಿತಿ. ಇಲ್ಲೂ ಬುದ್ಧಿಪೂರ್ವಕವಾಗಿ ಆ ಬಗೆಯ ಬದ್ಧತೆಯನ್ನು ಹುಡುಕಿಕೊಂಡು ಹೋದ ಲಂಕೇಶ್‌ರಂತವರಿದ್ದಾರೆ. ಅವರು ಹಾಗೆ ಹೋಗದಿದ್ದರೆ ಉಲ್ಲಂಘನೆಯಂತಹ ಕೃತಿ ಬರುತ್ತಿತ್ತೇ? ಅದೇ ರೀತಿ ಕೆಲವು ನಮ್ಮಲ್ಲಿರುವ ಸಂವೇದನೆಯೇ ಅದ್ಭುತವಾದುದನ್ನು ಸೃಷ್ಟಿಸಬಹುದು. ಕುವೆಂಪು ಅವರಲ್ಲಿರುವ ಸಂವೇದನೆಯೇ ಗುತ್ತಿ, ಐತ, ತಿಮ್ಮಿಯನ್ನೂ ಬಾಡುಗಳ್ಳ ಸೋಮನನ್ನು ಸೃಷ್ಟಿಸಿತ್ತಲ್ಲವೇ?
ನಮ್ಮ ಸಾಹಿತಿ ಬುದ್ಧಿಜೀವಿಗಳಿಗೆ ಇಂದಿರುವ ರಾಜಕೀಯ ಆಯ್ಕೆಗಳೇನು?
ಇಂದು ಖಚಿತವಾದ ಸಾಮಾಜಿಕ ನಿಲುವುಗಳಿರುವಂತೆಯೇ ಖಚಿತವಾದ ರಾಜಕೀಯ ನಿಲುವುಗಳಿವೆಯೇ ಎಂದು ಒಂದು ಪ್ರಶ್ನೆ. ರಾಜಕೀಯ ಆಯ್ಕೆಗಳಲ್ಲಿ ಗೊಂದಲವಿರುವ ಹಾಗೆ ಕಾಣುತ್ತಿದೆ. ನಮ್ಮ ಕಾಲದ ಬುದ್ಧಿಜೀವಿ ಕಲಾವಿದರಿಗೆ ಇರುವ ದೊಡ್ಡ ಗೊಂದಲವೇನೆಂದರೆ ಸಾಮಾಜಿಕ ನಿಲುವುಗಳಿಗೆ ಸರಿಸಮಾನದ ರಾಜಕೀಯ ನಿಲುವುಗಳನ್ನು ರೂಪಿಸಿಕೊಳ್ಳುವಲ್ಲಿನ ಅಸಹಾಯಕತೆ. ಜನಪರ ಎಂದು ಸಾಮಾನ್ಯವಾಗಿ ಹೇಳುತ್ತೇವೆ. ಜನಪರ ಮತ್ತು ಜನವಿರೋಧಿಯಾದದ್ದನ್ನು ಗುರುತಿಸುವುದು ಸುಲಭ. ಆದರೆ ಆ ಸನ್ನಿವೇಶವನ್ನು ಸರಿಪಡಿಸಬೇಕಾದ ದಾರಿಗಳ ಪ್ರಶ್ನೆ ಬಂದಾಗ ಯಾವಾಗಲೂ ರಾಜಕೀಯ ಆಯ್ಕೆಯೇ ಮುಖ್ಯವಾಗಿರುತ್ತದೆ. ಈ ರಾಜಕೀಯ ಆಯ್ಕೆಗಳ ಬಗ್ಗೆ ಗೊಂದಲ ನಮ್ಮ ಕಾಲದ ಅನೇಕ ಬುದ್ಧಿಜೀವಿಗಳಲ್ಲಿ ಕಾಣುತ್ತಿದೆ. ಗೊಂದಲ ಎನ್ನುವುದಕ್ಕಿಂತ ಎಷ್ಟೋ ಸಲ ಅಸಹನೆ. ಸಮಾಜವಾದದ ಬಗ್ಗೆ ಪದೇ ಪದೇ ಮಾತನಾಡುವವರಿಗೆ ಕಮ್ಯುನಿಸಂ ಬಗ್ಗೆ ಅನಾಸಕ್ತಿ, ಕೋಪ. ಹಾಗೆಯೇ ಕಮ್ಯುನಿಷ್ಟರಲ್ಲಿ ಸಿಪಿಐನವರಿಗೆ ಸಿಪಿಎಂನವರ ಮೇಲಿರುವ ಕೋಪ ಕಾಂಗ್ರೆಸ್‌ನವರ ಮೇಲಿರುವುದಿಲ್ಲ. ಈಗ ತಾನೇ ಸಾಮಾಜಿಕ ಚಿಂತನೆಯಲ್ಲಿ ತೊಡಗಿರುವ ಯುವಕನೊಬ್ಬನಿಗೆ ತನ್ನ ರಾಜಕೀಯ ಆಯ್ಕೆಯ ಬಗ್ಗೆ ದೊಡ್ಡ ಗೊಂದಲ ಎದುರಾಗುತ್ತದೆ.
ಹಲವಾರು ಜನಪರ ಚಳವಳಿಗಳಿವೆಯಲ್ಲ?
ಹೌದು ಬಹಳ ಚಳವಳಿಗಳಿವೆ. ಯಾವ ಚಳವಳಿಯಲ್ಲಿ ಆತ ಗುರುತಿಸಿಕೊಳ್ಳಬೇಕು ಎಂಬ ಬಗ್ಗೆಯೂ ಗೊಂದಲವಾಗುತ್ತದೆ. ಇಂದಿನ ಸಾಮಾನ್ಯ ಯುವಕರಿಗೆ ಚಳವಳಿಗಳ ಬಗ್ಗೆ ಸಹಮತವೂ ಇರುತ್ತದೆ ಭಿನ್ನಮತವೂ ಇರುತ್ತದೆ. ಆದರೆ ಚಳವಳಿಗಳಲ್ಲಿರುವವರು ಮಾತ್ರ ತಮ್ಮ ಕುರಿತ ಸಣ್ಣ ಭಿನ್ನಮತವನ್ನೂ ಸಹಿಸಲು ಸಿದ್ಧರಿರುವುದಿಲ್ಲ. ಭಿನ್ನಮತದ ಬಗ್ಗೆ ಆರೋಗ್ಯಕರವಾದ ಗೌರವ ಇಲ್ಲದಿದ್ದಾಗ ಪಕ್ಷವಾಗಲೀ ಚಳವಳಿಯಾಲೀ ಸೆರೆಮನೆಯಗುತ್ತದೆ. ನಮ್ಮ ಹಳ್ಳಿಗಳ ವಾಸ್ತವತೆಯಲ್ಲಿ ರೈತಚಳವಳಿ ಮತ್ತು ದಲಿತ ಚಳವಳಿಗಳ ನಡುವೆ ಸಂಘರ್ಷ ಸಾಧ್ಯವೇ ಹೊರತು ಸಮಾನತೆ ಸಾಧ್ಯವಿಲ್ಲ. ರೈತ ಚಳವಳಿ ಈ ಪ್ರಶ್ನೆಯನ್ನು ಸರಿಯಾದ ರೀತಿಯಲ್ಲಿ ಎದುರುಗೊಳ್ಳಲಿಲ್ಲ. ದಲಿತ ರೈತಚಳವಳಿಗಳನ್ನು ಒಟ್ಟಿಗೆ ತರುವ ಪ್ರಯತ್ನ ಮೂರ್ಖತನದ್ದಾಗಿತ್ತೆನಿಸುತ್ತದೆ. ಶೋಷಿತರು ಶೋಷಕರ ನಡುವೆ ಅದು ಸಾಧ್ಯವಾಗುವುದಾದರೂ ಹೇಗೆ? ಇತ್ತೀಚಿನ ವರ್ಷಗಳ ಮತ್ತೊಂದು ಚರ್ಚೆ ಗಮನಿಸಿ. ದೊಡ್ಡ ದೊಡ್ಡ ಬುದ್ಧಿಜೀವಿಗಳು ’ಹಿಂಸೆ ಬೇಡ’ ಎಂದು ಹೇಳುತ್ತಿದ್ದಾರೆ. ಹಿಂಸೆ ಎಂದಾಕ್ಷಣ ಅವರ ಮನಸ್ಸಿನಲ್ಲಿರುವುದು ಯಾವ ಹಿಂಸೆ? ಅದು ನಕ್ಸಲೀಯರ ಹಿಂಸೆ ಅಥವಾ ಟೆರರಿಸ್ಟ್‌ಗಳ ಹಿಂಸೆ. ಪ್ರಭುತ್ವ ನಡೆಸುವ ಹಿಂಸೆಯನ್ನು ಹಿಂಸೆ ಎಂದು ನೋಡುತ್ತೇವಾ? ಹಿಂಸೆ ಎಂದಾಕ್ಷಣ ರಕ್ತಪಾತವೇ ಆಗಬೇಕಾ? ರಕ್ತಪಾತವಾಗದಿರುವ ಹಿಂಸೆ ಹಿಂಸೆಯಲ್ಲವೋ? ಕಾನೂನುಗಳಿಂದಲೇ ಮಾಡಲಾಗಿರುವ ಹಿಂಸೆಯ ಕುರಿತು ಯಾವಾಗ ಎಲ್ಲಿ ಮಾತನಾಡಿದ್ದೇವೆ? ಕಾನೂನುಗಳನ್ನು ಮುರಿಯುವುದಕ್ಕೆ ಅವಕಾಶಮಾಡಿಕೊಡುವ ಒಂದು ವ್ಯವಸ್ಥೆಯೇ ಕಾನೂನು ಭಂಗ ಮಾಡುವವರನ್ನು ರಕ್ಷಿಸುವ ಮೂಲಕ ಹಿಂಸೆಗೆ ಅವಕಾಶ ಮಾಡುತ್ತದೆ. ಹೀಗಿರುವಾಗ ಹಿಂಸೆ ಎಂದರೆ ಯಾವುದು ಎಂಬುದೇ ನಿಜವಾದ ಪ್ರಶ್ನೆ. ಇನ್ನೂರು ರೂಪಾಯಿ ಕೊಡಲಾಗಲಿಲ್ಲವೆಂದು ತಂದೆಯೊಬ್ಬ ಮಗುವನ್ನು ಐಸಿಯುನಲ್ಲೇ ಬಿಟ್ಟು ಅದು ಪ್ರಾಣ ಕಳೆದುಕೊಂಡಿತು. ಒಬ್ಬ ವ್ಯಕ್ತಿ ಇನ್ನೂರು ರೂಪಾಯಿ ಹೊಂದಿಸಲಾರದ ಸ್ಥಿತಿಯನ್ನು ವ್ಯವಸ್ಥೆ ನಿರ್ಮಿಸಿದೆ ಎಂದರೆ ಅದು ಹಿಂಸೆಯಲ್ಲವೇ? ಹೀಗಾಗಿ ಹಿಂಸೆಯ ಕುರಿತ ತಾತ್ವಿಕತೆಯಲ್ಲೇ ಭಿನ್ನಾಭಿಪ್ರಾಯಗಳಿವೆ.
ಪಶ್ಚಿಮದ ತಾತ್ವಿಕತೆ, ಚಿಂತನೆಗಳೊಂದಿಗೆ ನಮ್ಮ ಮುಖಾಮುಖಿ ಹೇಗಿದೆ ಎನ್ನುತ್ತೀರಿ?
ಇದು ಅರಗಿಸಿಕೊಳ್ಳುವಿಕೆ ಹಾಗೂ ಅನುಕರಣೆ ಎಂಬ ಎರಡು ಬಗೆಯಲ್ಲಿದೆ. ಅನುಕರಣೆ ಕುರುಡಾಗಿರುತ್ತದೆ. ಅರಗಿಸಿಕೊಳ್ಳುವುದು ಎಂದರೆ ಹೊರಗಿನ ಸರಿಯಾದುದನ್ನು ನಮ್ಮದಾಗಿಸಿಕೊಳ್ಳುವುದು. ಹಾಗೆಯೇ ಪಾಶ್ಚಾತ್ಯ ಚಿಂತನೆ ಕೇವಲ ಸಾಹಿತ್ಯ ಕೃತಿಯಲ್ಲಿರುವುದಿಲ್ಲ. ಪಾಶ್ಚಾತ್ಯ ಎನ್ನುವುದು ನಮ್ಮ ಬದುಕಿನಲ್ಲಿ ಹಾಸುಹೊಕ್ಕಾಗಿದೆ. ಮೊಬೈಲು, ವಾಚು, ಹೊಟೆಲ್, ಆಸ್ಪತ್ರೆ, ಔಷಧಿ ಎಲ್ಲವೂ ಪಶ್ಚಿಮದ್ದೇ ಅಲ್ಲವೇ? ಆಲೋಚನೆಯಲ್ಲಿ ನಮ್ಮ ಸಂಸ್ಕೃತಿಗಳನ್ನು ಉಳಿಸಿ ಬೆಳೆಸುವ ಚಿಂತನೆಯಿರಬೇಕೆನ್ನುವುದು ನಿಜ. ಹಾಗೆಂದು ಪಾಶ್ಚಾತ್ಯವನ್ನು ಕಣ್ಣುಮುಚ್ಚಿಕೊಂಡು ಹೊರಗಿಡುವುದಾಗಲೀ ಹಾಗೇಯೇ ಕುರುಡಾಗಿ ಅನುಕರಣೆ ಮಾಡುವುದಾಗಲೀ ತಪ್ಪು. ಇಂದು ತಂತ್ರಜ್ಞಾನ ಮತ್ತು ವೈಜ್ಞಾನಿಕತೆಗಳು ಓದು ಬರಹದಾಚೆಗೂ ನಮ್ಮನ್ನು ಆವರಿಸಿರುವಂತವು. ಮೊಬೈಲ್ ಇಂಟರ್‌ನೆಟ್‌ಗಳು ನಮ್ಮ ಸ್ವಭಾವವನ್ನು ಬದಲಾವಣೆ ಮಾಡುತ್ತಿಲ್ಲವೇ. ಇಂದು ವ್ಯಾಪಾರವು ನಮ್ಮ ಬಹಿರಂಗವನ್ನು ಮಾತ್ರವಲ್ಲದೇ ಅಂತರಂಗವನ್ನೂ ಸಹ ’ಕರಪ್ಟ್’ ಮಾಡುತ್ತಿದೆ.
ಒಂದೆಡೆ ಪ್ರಭುತ್ವದ ನೀತಿಗಳು ಆಕ್ರಮಣಕಾರಿಯಾಗುತ್ತಿರುವ ಹೊತ್ತಿಗೆ ಅದಕ್ಕೆ ಸರಿಸಮನಾದ ಪ್ರತಿಕ್ರಿಯೆ ಬರುತ್ತಿಲ್ಲವಲ್ಲ?
ನಿಸ್ಸಂದೇಹವಾಗಿ ಇಂದು ಪ್ರಭುತ್ವದ ಸ್ವರೂಪ ಆಕ್ರಮಣಕಾರಿಯಾಗಿದೆ. ತಂತ್ರಜ್ಞಾನ ಹಣದ ಮೂಲಕ ಮತ್ತು ಇಡೀ ದೇಶವನ್ನು ನಿಯಂತ್ರಿಸಬಲ್ಲ ಶಕ್ತಿ ಅದರ ಬಳಿ ಇದೆ. ಇಂದು ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಯಾರು ಯಾವುದಕ್ಕೆ ಬಳಸಿಕೊಳ್ಳುತ್ತಿದ್ದಾರೆ? ಸರ್ಕಾರ ಎಂದರೆ ಅದೇ ಹುಲಿಯಲ್ಲ. ನಿಜವಾದ ಹುಲಿ ಸರ್ಕಾರದ ಹಿಂದಿನ ಬಂಡವಾಳಶಾಹಿಗಳು. ಸರ್ಕಾರವನ್ನು ಉಗುರಿನಂತೆ ಬಳಸಿಕೊಳ್ಳುತ್ತಿದದಾರಷ್ಟೆ. ಹೀಗಾಗಿಯೇ ಎಲ್ಲಾ ಚಳವಳಿಗಳನ್ನು ಬಗ್ಗುಬಡಿಯಲು ಇಂದು ಪ್ರಭುತ್ವಕ್ಕೆ ಸಾದ್ಯವಾಗಿದೆ. ವಿಚಿತ್ರವೆಂದರೆ ಇಂದು ಪ್ರಭುತ್ವದ ವಿರುದ್ಧ ಪ್ರತಿಭಟನೆ ಮಾಡಬೇಕಾದವರೂ ಅದರ ಕೈಯಲ್ಲೇ ಇರುವುದನ್ನು ನೊಡುತಿದ್ದೇವೆ. ಇಂದಿಗೂ ಅಂದಿಗೂ ನೂರಕ್ಕೆ ೯೦ಜನ ಪ್ರಭುತ್ವ ಸಾಕಿದ ಸಾಕುನಾಯಿಗಳಾಗಿಯೇ ಇರುತ್ತಾರೆ. ಇಂದು ಹೋರಾಟದ ಹಾಡುಗಳಿವೆ. ಅವನ್ನು ಸಾಹಿತ್ಯ ಎಂದು ಯಾರಾದರೂ ಪರಿಗಣಿಸಿದ್ದಾರಾ? ಲಕ್ಷಾಂತರ ಜನರನ್ನು ಮುಟ್ಟಿರುವ ಗದ್ದರ್ ಹಾಡುಗಳಿವೆ. ಅದನ್ನು ಸಾಹಿತ್ಯ ಎಂದು ಏಕೆ ಪರಿಗಣಿಸಲಾಗುವುದಿಲ್ಲ?
ಹಿಂದೆಲ್ಲಾ ಚಳವಳಿಗಳಿಗೆ ತಾತ್ವಿಕ ಶಕ್ತಿಯನ್ನು ನೀಡುತ್ತಿದ್ದ ವಿಶ್ವವಿದ್ಯಾನಿಲಯಗಳು ಇಂದು ಭ್ರಷ್ಟತೆಯ ಕೂಪಗಳಾಗಿವೆ. ಕಾರಣಗಳೇನಿರಬಹುದು?
ಇದಕ್ಕೆ ಸಾಮಾಜಿಕ ನ್ಯಾಯದ ಕಾರಣದಿಂದ ಹೀಗಾಗುತ್ತಿದೆ ಎಂಬ ಪ್ರತಿಗಾಮಿ ಉತ್ತರವೊಂದಿದೆ. ಮೀಸಲಾತಿಯಿಂದ ಎಲ್ಲರೂ ಬಂದು ಹೀಗಾಗಿದೆ ಎಂಬ ವಾದ. ಇದು ಖಂಡಿತ ಸರಿಯಲ್ಲ. ಸಾಮಾಜಿಕ ನ್ಯಾಯ ಮತ್ತು ಸ್ವಜನ ಪಕ್ಷಪಾತ ಎರಡೂ ಬೇರೆ ಬೇರೆ. ಒಂದು ಪ್ರಾಧ್ಯಾಪಕ ಸ್ಥಾನ ದಲಿತನಿಗೆ ಕೊಡಬೇಕೆನ್ನುವಾಗ ಅತ್ಯುತ್ತಮ ದಲಿತನಿಗೆ ಸಿಗುತ್ತದೆಯೋ ಬಾಲಬಡುಕ ದಲಿತನಿಗೆ ಸಿಗುತ್ತದೆಯೋ ಎಂಬ ಪ್ರಶ್ನೆಯಿದೆ. ಸಾಮಾಜಿಕ ನ್ಯಾಯದ ನೀತಿಯ ಪರವಾಗಿ ನೂರಕ್ಕೆ ಇನ್ನೂರು ನಾವಿರಬೇಕು. ಸಾಮಾಜಿಕ ನ್ಯಾಯವನ್ನು ಪರಿಪಾಲಿಸುವ ಹೊತ್ತಿನಲ್ಲಿಯೇ ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತಗಳನ್ನು ತಪ್ಪಿಸಬೇಕಾಗಿದೆ. ಒಬ್ಬ ಪ್ರೊಫೆಸರ್ ಆಯ್ಕೆ ಮಾಡುವಾಗ ಕೇವಲ ಮೂರು ನಿಮಿಷ ಸಮಯಾವಕಾಶ ಇರುತ್ತದೆ. ಹೀಗಾಗಿ ಸಮಸ್ಯೆ ಮೀಸಲಾತಿಯದಲ್ಲ. ಇಂದು ಸಾಮಾಜಿಕ ನ್ಯಾಯವನ್ನು ಬಲಿಪಶು ಮಾಡುವ ಕೆಲಸ ನಡೆಯುತ್ತಿರುವುದು ಸರಿಯಲ್ಲ.
ಒಟ್ಟಾರೆ ಸಮಾಜದಲ್ಲಿ ಒಂದು ಬಗೆಯ ಸಂವೇನೆದನಾರಾಹಿತ್ಯತೆ ಎದುರಾಗಿದೆಯಲ್ಲ. ಇದಕ್ಕೆ ಕಾರಣಗಳೇನಿರಬಹುದು?
ಕಳೆದ ಮೂವತ್ತು ನಲವತ್ತು ವರ್ಷಗಳಲ್ಲಿ ಆದ ಜೀವನ ಕ್ರಮದಲ್ಲಿನ ಬದಲಾವಣೆಗಳು ಇದಕ್ಕೆ ಕಾರಣ ಇರಬಹುದು. ಇಂದು ವ್ಯಕ್ತಿವಾದ ಬಲವಾಗಿದೆ. ವ್ಯಕ್ತಿವಾದ ಅಂದರೆ ಕುಟುಂಬದಲ್ಲಿ ನಾನು ಮುಖ್ಯ. ಊರಿನಲ್ಲಿ ನನ್ನ ಕುಟುಂಬ ಮುಖ್ಯ. ಸಮಾಜದಲ್ಲಿ ನನ್ನ ಜಾತಿ ಮುಖ್ಯ ಎಂಬಂತಹ ರೀತಿಯಲ್ಲಿ ಇದು ಪ್ರತಿಫಲನವಾಗುತ್ತಿದೆ. ನೀವು ಹೇಳುತ್ತಿರುವ ಪ್ರಕ್ರಿಯೆ ನಿಜವಾದರೂ ಅದಕ್ಕೆ ಕಾರಣ ಪರಿಹಾರಗಳನ್ನು ಸುಲಭವಾಗಿ ಹೇಳಲು ಕಷ್ಟ. ನಮ್ಮ ಶಿಕ್ಷಣವೂ ಹಾಗೇ ಇದೆ. ನಮ್ಮ ಪಕ್ಕದಲ್ಲೇ ನಡೆಯುತ್ತಿರುವುದಕ್ಕೂ ಕುರುಡಾಗಿದ್ದೇವೆ. ನಾನು ಮಾಡುವ ಅನ್ಯಾಯಕ್ಕಿಂತ ನನಗೆ ಆಗುವ ಅನ್ಯಾಯ ಮುಖ್ಯ ಎಂದು ಯೋಚಿಸುತ್ತೇವೆ. ಯಾವಾಗ ’ನಾವು ಮಾಡುವ ಅನ್ಯಾಯವೇ ಮುಖ್ಯ’ ಎಂದು ಯೋಚಿಸಲು ತೊಡಗುತ್ತೇವೆಯೇ ಆಗ ಮಾತ್ರ ನಾವು ಇಂತಹ ಮಾನಸಿಕ ಜಾಡ್ಯತೆಯಿಂದ ಹೊರಬರಬಹುದೆನ್ನಿಸುತ್ತದೆ.
ಆಧುನಿಕತೆ ಜಾತಿಯನ್ನು ಹೋಗಲಾಡಿಸುತ್ತದೆ ಎಂಬ ತಿಳುವಳಿಕೆಯಿತ್ತು. ಆದರೆ ಇದಕ್ಕೆ ವ್ಯತಿರಿಕ್ತ ಬೆಳವಣಿಗೆಗಳೂ ಆಗುತ್ತಿವೆಯಲ್ಲ?
ಇದು ತುಂಬ ಸೂಕ್ಷ್ಮದ ಪ್ರಶ್ನೆ. ಜಾತ್ಯತೀತವಾಗಿ ಇರಬೇಕು ಎನ್ನುವ ದೃಷ್ಟಿಕೋನ ಜಾತಿಯ ಏಣಿಯಲ್ಲಿ ಮೇಲಿರುವವರಿಗೆ ಮಾತ್ರ ಅನುಕೂಲವಾಗಿ ಕೆಳಗಿರುವವರಿಗೆ ಆಗುವ ಅನ್ಯಾಯವನ್ನು ಸರಿಪಡಿಸಲಾಗದಿದ್ದರೆ ಆ ಜಾತ್ಯತೀತತೆ ಅಪಾಯಕಾರಿಯೇ. ಜಾತಿಗಳಿರುವವರೆಗೆ ಜಾತಿಯ ಆಧಾರದಲ್ಲಿ ಗುರುತಿಸುವಿಕೆ ಆಗಲೇಬೇಕಾಗುತ್ತದೆ. ಜಾತ್ಯತೀತ ಸಮಾಜ ಕಟ್ಟುತ್ತೇವೆಂದು ಹೇಳುತ್ತಾ ಜಾತಿ ಹೆಸರಿನಲ್ಲಿ ನಡೆಯುವ ಅನ್ಯಾಯಗಳನ್ನು ಮುಚ್ಚಿಡುವುದೂ ತಪ್ಪು. ಕಾನೂನಿನ ಮೂಲಕ ಜಾತಿಯನ್ನು ನಿಯಂತ್ರಿಸಲು ಸಾಧ್ಯ. ಆದರೆ ಅದಕ್ಕೆ ಮನಸ್ಸು ಮಾಡುವುದಿಲ್ಲ. ಜಾತಿ ಹೋಗಲಾಡಿಸುವುದಕ್ಕೆ ಅಂತರ್ಜಾತಿ ಒಂದು ಉಪಕರಣವಾಗುವುದಾದರೆ ಅದನ್ನು ಪ್ರೋತ್ಸಾಹಿಸಲು ಕಾನೂನಿನಲ್ಲಿ ಏಕೆ ಕ್ರಮ ಕೈಗೊಂಡಿಲ್ಲ? ಇಂದು ವಿಜ್ಞಾನ ಎಂದರೆ ಇ = ಒಅ೨ ಎಂಬ ಸೂತ್ರ ಮಾತ್ರವಾಗಿಬಿಟ್ಟರೆ ಅದು ಜಾತಿ ಧರ್ಮ ಏನನ್ನೂ ಮುಟ್ಟುವುದಿಲ್ಲ. ಆದರೆ ಅದು ವೈಜ್ಞಾನಿಕ ಚಿಂತನೆಯ ಮಟ್ಟಕ್ಕೇರಿದರೆ ಮಾತ್ರ ಪರಿಣಾಮಕಾರಿಯಾದೀತು. ವಾಸ್ತವದಲ್ಲಿ ಇಂದು ಜಾತಿವಾದ ಸೂಕ್ಷವಾಗುತ್ತಿದೆ ಎಂಬುದನ್ನು ನೋಡಬೇಕು.
ಮಾಧ್ಯಮ ಕ್ಷೇತ್ರ ಇಂದಿನ ಪಲ್ಲಟದ ಕುರಿತು ನಿಮ್ಮ ಅವಗಾಹನೆ ಏನು?
ಕಳೆದ ೨೦-೨೫ ವರ್ಷಗಳಲ್ಲಿ ದೃಶ್ಯ ಮಾಧ್ಯಮ ಮತ್ತು ಪ್ರಿಂಟ್ ಮಾದ್ಯಮದ ನಡುವೆ ಬಂದ ವಿಭಜನೆ ಮುಖ್ಯವಾದುದು. ದೃಶ್ಯ ಮಾಧ್ಯಮ ಬಹಳ ಪ್ರಭಾವಶಾಲಿಯಾಗಿದೆ. ಇಂದು ಪ್ರಭುತ್ವ ಮಾಧ್ಯಮವನ್ನು ಒಂದು ರೀತಿ ನಿಯಂತ್ರಿಸಿದರೆ ಕಾರ್ಪೊರೇಟ್ ಕ್ಷೇತ್ರ ಇನ್ನೊಂದು ಬಗೆಯಲ್ಲಿ ನಿಯಂತ್ರಿಸುತ್ತವೆ. ದಿನಪತ್ರಿಕೆಗಳು ಎದುರಿಸಿದ ಸಮಸ್ಯೆ ಏನೆಂದರೆ ಸುದ್ದಿ ಕೊಡಬೇಕೇ ವಿಶ್ಲೇಷಣೆ ನೀಡಬೇಕೇ ಎನ್ನುವುದು. ಇಂಗ್ಲಿಷ್ ಪತ್ರಿಕೆಗಳು ಈ ಸಮಸ್ಯೆಯನ್ನು ಒಂದು ಮಟ್ಟಿಗೆ ಇದನ್ನು ನಿಭಾಯಿಸಿವೆ. ಸುದ್ದಿ ಈಗಾಗಲೇ ದೃಶ್ಯ ಮಾದ್ಯಮಗಳಲ್ಲಿ ಬರುವುದರಿಂದ ಇಂದು ಪತ್ರಿಕೆಗಳು ಸುದ್ದಿಯನ್ನೂ ರೋಚಕವಾಗಿ ಹೇಳುವ ಧಾವಂತಕ್ಕೆ ಬಿದ್ದು ತಮ್ಮ ಭಾಷೆಯನ್ನೇ ಬದಲಿಸಿಕೊಂಡಿರುವುದನ್ನು ನೋಡುತ್ತೇವೆ. ನಮ್ಮಲ್ಲಿ ಪ್ರಾಯಶಃ ಲಂಕೇಶ್ ಮಾಡಿದ ಕೆಲಸವನ್ನು ಬೇರೆ ಯಾರೂ ಮಾಡಲು ಸಾಧ್ಯ ಇಲ್ಲ ಎನ್ನಿಸುತ್ತದೆ. ಜನರನ್ನು ತಲುಪಲು ಅವರು ಮಾಡಿರುವ ಪ್ರಯೋಗ ಅದ್ಭುತವಾದುದು. ಲಂಕೇಶ್ ಪತ್ರಿಕೆ ಇರುವಷ್ಟು ದಿನ ಅದು ನಾಡಿನ ಸಾಕ್ಷಿಪ್ರಜ್ಞೆಯಾಗಿ ಕೆಲಸ ಮಾಡಿದ್ದರು. ಇಂದು ’ಸಂವಾದ’ ಪತ್ರಿಕೆಯೂ ಉತ್ತಮ ರೀತಿಯಲ್ಲಿ ಕೆಲಸಮಾಡುತ್ತಿದೆ. ಇಂದಿನ ಮಾಧ್ಯಮಗಳಿಗೆ ಸಾಕಷ್ಟು ಮಿತಿಗಳಿದ್ದರೂ ಮಾಧ್ಯಮಗಳಿಲ್ಲದ ಜಗತ್ತನ್ನು ಊಹಿಸಿಕೊಳ್ಳುವುದೂ ಕಷ್ಟ. ಖಾಯಿಲೆ ಇಡೀ ಸಮಾಜಕ್ಕೆ ಬಂದಿರುವಾಗ ಮಾಧ್ಯಮಗಳನ್ನು ಮಾತ್ರ ಹೊರಗಿಡಲು ಸಾಧ್ಯವಿಲ್ಲವಲ್ಲ?
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ