ಜುಲೈ 23, 2012

"ನಮ್ಮ ಸಾಹಿತ್ಯ ವಿಮರ್ಶೆಯ ಮಾನದಂಡಗಳೇ ಪ್ರಶ್ನಾರ್ಹವಾಗಿವೆ": ಲಕ್ಷ್ಮಣ ಕೊಡಸೆ

ಪ್ರಜಾವಾಣಿಯಂತಹ ಪತ್ರಿಕೆಯಲ್ಲಿ ವರದಿಗಾರನ ಹುದ್ದೆಯಿಂದ ಮೊದಲುಗೊಂಡು ಸಹ ಸಂಪಾದಕ ಹುದ್ದೆಯವರಗೆ ಹಲವಾರು ಜವಾಬ್ದಾರಿಗಳನ್ನು ನಿರ್ವಹಿಸಿ ಅಪಾರ ಅನುಭವ ಪಡೆದವರು ಲಕ್ಷ್ಮಣ ಕೊಡಸೆಯವರು. ಮೂರು ದಶಕಗಳಿಗೂ ಹೆಚ್ಚು ಕಾಲ ಪತ್ರಕರ್ತರಾಗಿ ಸೇವೆ ಸಲ್ಲಿಸಿ ಕತೆ, ಕಾದಂಬರಿ ಮುಂತಾದ ಪ್ರಕಾರಗಳಲ್ಲಿಯೂ ನಿರಂತರವಾಗಿ ತೊಡಗಿಸಿಕೊಂಡಿರುವ ಅವರು ಇದೀಗ ನಿವೃತ್ತ ಜೀವನ ನಡೆಸುತ್ತಿದ್ದಾರೆ. ಇಂದಿನ ಪತ್ರಿಕೋದ್ಯಮ, ಸಮಾಜ, ಸಾಹಿತ್ಯ, ರಾಜಕೀಯ ಇತ್ಯಾದಿಗಳ ಕುರಿತು ಹರ್ಷಕುಮಾರ್ ಕುಗ್ವೆ  ದ ಸಂಡೆ ಇಂಡಿಯನ್ ಗಾಗಿ ನಡೆಸಿದ ಸಂದರ್ಶನ  ಇಲ್ಲಿದೆ.ಸುದೀರ್ಘ ಅವಧಿಯ ಪತ್ರಕರ್ತ ವೃತ್ತಿಯ ನಂತರದಲ್ಲಿ ನಿವೃತ್ತಿ ಹೊಂದಿರುವುದು ಏನನ್ನಿಸುತ್ತಿದೆ? 
ಆರ್ಥಿಕ ದೃಷ್ಟಿಯಿಂದ ಕೆಲಸ ಮುಂದುವರೆಸಲೇ ಬೇಕಾದ ಅಗತ್ಯ ನನಗೆ ಇನ್ನು ಇರಲಿಲ್ಲ. ಪತ್ರಿಕೋದ್ಯಮವೂ ಇತರ ವೃತ್ತಿಗಳಂತೆ ಒಂದು ವೃತ್ತಿಯಾದ್ದರಿಂದ ಅದನ್ನು ಮುಗಿಸಿ ಬೇರೆ ಜೀವನವನ್ನು ನಾವು ರೂಪಿಸಿಕೊಳ್ಳಬೇಕಾಗುತ್ತದೆ. ಪತ್ರ್ರಕರ್ತನಾದವನು  ಸಾಯುವವರೆಗೂ ಪತ್ರಕರ್ತನೇ ಎಂಬ ಭಾವನೆ ಜನರಲ್ಲಿಯೂ, ಕೆಲ ಪತ್ರಕರ್ತರಲ್ಲಿಯೂ ಇದೆ. ಹಾಗಿರಬೇಕಾಗಿಲ್ಲ. ಕಳೆದ 30-35 ವರ್ಷ ಪೂರ್ತಿ ಪತ್ರಿಕೋದ್ಯಮದಲ್ಲೇ ಮುಳುಗಿ ಹೋಗಿರುವುದರಿಂದ ಓದುವುದು ಸಾಕಷ್ಟು ಉಳಿದುಕೊಂದಿದೆ. ಸಾಕಷ್ಟು ಓದಲಿಕ್ಕಾಗದೇ ಅಪ್‌ಡೇಟ್ ಆಗಲಿಕ್ಕಾಗಲಿಲ್ಲ ಎಂಬ ಭಾವನೆ ನನಗಿದೆ. ಇಷ್ಟು ವರ್ಷಗಳ ಅನುಭವಗಳನ್ನು ಒಂದೆಡೆ ದಾಖಲಿಸುವ ಯೋಚನೆಯೂ ಇರುವುದರಿಂದ ಸದ್ಯ ಸಾಕು. 

ಪತ್ರಿಕೋದ್ಯಮದೊಂದಿಗೆ ನಿಮ್ಮ ಒಡನಾಟ ಹೇಗೆ ಶುರುವಾದದ್ದು?
ನಾನು ಓದಿದ್ದು ಸೆಂಟ್ರಲ್ ಕಾಲೇಜಿನಲ್ಲಿ. ಎಂಎ ಮಾಡುವ ಹೊತ್ತಿಗೆ ನಮಗೆ ಕೆಲಸ ಸುಲಭವಾಗಿ ಸಿಗುವುದಿಲ್ಲ ಎಂದು ಗೊತ್ತಾಯ್ತು. ನನಗೆ ಕತೆ ಬರೆಯುವ ಗೀಳು ಇತ್ತು. 1972 ರಿಂದ 78ರ ನಡುವೆ 15 ಕತೆಗಳು ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದವು. ಇದ್ದ ಪತ್ರಿಕೆಗಳಲ್ಲಿ ಪ್ರಜಾವಾಣಿ ಸೇರಿಕೊಳ್ಳುವುದು ಗುರಿಯಾಗಿತ್ತು. ಆರಂಭದಲ್ಲಿ ಮೊದಲು ಸೇರಿಕೊಂಡಿದ್ದು ಬಿ.ಎನ್ ಗುಪ್ತ ಎಂಬ ಸ್ವಾತಂತ್ರ್ಯ ಹೋರಾಟಗಾರರು ತರುತ್ತಿದ್ದ ’ಜನಪ್ರಗತಿ’ಯಲ್ಲಿ ಸಹಾಯಕನಾಗಿ. ಅಗ ನಮಗೆ ಜಾತ್ಯತೀತತೆಯ ಧೋರಣೆಗಳಿದ್ದವು. ಅದೇ ಹೊತ್ತಲ್ಲಿ ಪ್ರೀತಿ ಪ್ರೇಮ ಎಂದು ಶುರುವಾಗಿತ್ತು. ಮದುವೆ ಆದಾಗ ಕೆಲಸವೂ ಇರಲಿಲ್ಲ. ನಂತರದಲ್ಲಿ ಮೊದಲು ನನ್ನ ಪತ್ನಿಗೆ ಕೆಲಸ ಸಿಕ್ಕಿತು. ಆಗ ನಮಗೆ ಬದುಕುವ ಧೈರ್ಯ ಬಂದಿತು. 1976ರ ಹೊತ್ತಿಗೆ ಎಂ.ಲಿಂಗಯ್ಯ ಅವರ ಉದಯರವಿ ಪತ್ರಿಕೆಗೆ ಮಂಡ್ಯದಲ್ಲಿ ಸಹಾಯಕನಾಗಿ ಕೆಲಸಕ್ಕೆ ಸೇರಿಕೊಂಡು ಬೆಂಗಳೂರಿನಿಂದ ಮಂಡ್ಯಕ್ಕೆ ವಾರದಲ್ಲಿ ಮೂರುದಿನ ಓಡಾಡುತ್ತಿದ್ದೆ. ಎರಡರಿಂದಲೂ ತಿಂಗಳಿಗೆ ೫೦೦ ರೂಪಾಯಿ ದೊರೆಯುತ್ತಿತ್ತು.  1977ರಲ್ಲಿ ಪ್ರಜಾವಾಣಿಯಲ್ಲಿ ಕೆಲಸವಾಯ್ತು. ಅಲ್ಲಿಂದ 2012ರವರೆಗೂ ನಿರಂತರವಾಗಿ ಕೆಲಸ ಮಾಡಿದ್ದೇನೆ. 12 ವರ್ಷ ಉಪಸಂಪಾದಕನಾಗಿ, ನಂತರ ಎರಡು ವರ್ಷ ಹಿರಿಯ ಉಪಸಂಪಾದಕನಾಗಿ, ನಂತರ ಐದಾರು ವರ್ಷ ಮುಖ್ಯ ಉಪಸಂಪಾದಕನಾಗಿ, ಮುಖ್ಯ ವರದಿಗಾರನಾಗಿ ಕೊನೆಗೆ ಸಹಾಯಕ ಸಂಪಾದಕನಾಗಿ ಕೆಲಸ ನಿರ್ವಹಿಸುತ್ತ ಬಂದೆ. ಈ ಪ್ರಕ್ರಿಯೆಯಲ್ಲಿ ಬೆಂಗಳೂರು, ಹುಬ್ಬಳ್ಳಿ, ಮಂಗಳೂರು, ಮೈಸೂರುಗಳಲ್ಲಿ ಕೆಲಸ. ನಾಲ್ಕು ವರ್ಷಕಾಲ ನಾಲ್ಕು ಪುರವಣಿಗಳ ನಿರ್ವಹಣೆ ಏಕಕಾಲಕ್ಕೆ ನನ್ನ ಹೆಗಲ ಮೇಲಿತ್ತು.  ಅಂದರೆ ವಾರಕ್ಕೆ 18 ಪುಟಗಳ ಉಸ್ತುವಾರಿ. ಕೊನೆಯ ಎರಡು ಮೂರು ವರ್ಷ ಸಂಪಾದಕೀಯ ಪುಟದ ಉಸ್ತುವಾರಿಯನ್ನು ನಿರ್ವಹಿಸುತ್ತಿದ್ದೆ. 

ಈ ಹೊತ್ತಿನ ಪತ್ರಿಕೋದ್ಯಮದ ಕುರಿತು?
ಪತ್ರಿಕೋದ್ಯಮದಲ್ಲಿ ಆದರ್ಶ ಇಲ್ಲ. ಅಲ್ಲಿರುವ ಶೇಕಡ 75ರಷ್ಟು ಭಾಗ ವಾಸ್ತವ ಆಗಿರುವುದಿಲ್ಲ. ಆದರೆ ಅದು ತುಂಬ ಪರಿಣಾಮಕಾರಿಯಾದ ಯಶಸ್ವೀ ಮಾಧ್ಯಮ. ಎಲ್ಲ ಕ್ಷೇತ್ರಗಳಂತೆ ಇಂದು ಪತ್ರಿಕೋದ್ಯಮದಲ್ಲಿ ಸಹ ಮೌಲ್ಯಗಳ ಅಧಃಪತನವಾಗಿದೆ. ಅದರಲ್ಲೂ ಬಿಜೆಪಿ ಸರ್ಕಾರ ಬಂದಮೇಲೆ ಪತ್ರಿಕೋದ್ಯಮ ಎಷ್ಟು ಭ್ರಷ್ಟಗೊಂಡಿದೆ ಎಂಬುದನ್ನು ನೋಡಿದರೆ ನಾವು ಪತ್ರಕರ್ತರು ಎಂದು ಹೇಳಿಕೊಳ್ಳಲಿಕ್ಕೇ ನಾಚಿಕೆಯಾಗುತ್ತದೆ. ಎಲೆಕ್ಟ್ರಾನಿಕ್ ಮಾಧ್ಯಮ ಬಂದಮೇಲೆ ಮತ್ತಷ್ಟು ಆದ್ವಾನವಾಗಿದೆ. ವಾಸ್ತವದಲ್ಲಿ ಪತ್ರಿಕೋದ್ಯಮ ಸತ್ಯಾನ್ವೇಷಣೆಗೆ ತೊಡಗಿರಬೇಕು. ಪ್ರಜಾಪ್ರಭುತ್ವದ ಎಲ್ಲ ಅಂಗಗಳೂ ಭ್ರಷ್ಟಗೊಂಡಾಗ ಪತ್ರಿಕಾರಂಗದ ಹೊಣೆ ಹೆಚ್ಚಿದೆ. ಪತ್ರಿಕಾರಂಗಕ್ಕೆ ಬರುವವರಿಗೆ  ಸಾಮಾಜಿಕ ಜವಾಬ್ದಾರಿಯೂ ಇದೆ ಎಂಬುದರೆ ಬಗ್ಗೆ ಅರಿವಿರಬೇಕು. ಆದರೆ ಇಂದು ಪತ್ರಿಕಾರಂಗಕ್ಕೆ ಬರುತ್ತಿರುವವರಲ್ಲಿ ಆ ಬಗೆಯ ಯಾವ ತಿಳುವಳಿಕೆಯನ್ನೂ ನೋಡಲು ಸಾಧ್ಯವಿಲ್ಲ. ಈಗ ಪತ್ರಿಕೋದ್ಯಮ ಶಿಕ್ಷಣದಲ್ಲಿ ತಾಂತ್ರಿಕ ಅಂಶಗಳ ಪರಿಚಯವಾಗುತ್ತದೆಯೇ ವಿನಃ ನೈತಿಕತೆಯ ವಿಷಯಗಳು ಅಲ್ಲಿ ಇರುವುದಿಲ್ಲ. ಇಂದು ಪತ್ರಕರ್ತರಾದವರು ತಾವು ಪ್ರಾಮಾಣಿಕರಾಗಿದ್ದುಕೊಂಡು ಬರೆದರೆ ಮಾತ್ರ ಅದಕ್ಕೆ ಬೆಲೆ ಇರುತ್ತದೆ. ಭ್ರಷ್ಟಾಚಾರದ ಬಗ್ಗೆ ಭ್ರಷ್ಟರು ಬರೆದರೆ ಏನು ಬೆಲೆ ಇರುತ್ತದೆ ಹೇಳಿ? ಪತ್ರಿಕೋದ್ಯಮವ ಆಚಾರ್ಯರಾಗಿ  ಬಿಂಬಿಸಿಕೊಂಡ ಒಬ್ಬಿಬ್ಬರಿಗೆ ಬಿಜೆಪಿ ಸರ್ಕಾರ ಬಂದ ಮೇಲೆ ಒಂದು ವಾರಕ್ಕೆ ಒಂದರಿಂದ ಏಳು ಲಕ್ಷ ರೂಪಾಯಿವರೆಗೆ ಸಂದಾಯವಾಗುತ್ತಿತ್ತು ಎಂಬ ವರದಿಗಳಿವೆ. ಇಂತಹ ವರದಿಗಳ ಬಗ್ಗೆ ತನಿಖೆಯಾಗಬೇಕಿದೆ. ಇದು ಸಾಬೀತಾದರೆ ಅದು ಪತ್ರಿಕೋದ್ಯಮಕ್ಕೇ ದೊಡ್ಡ ಕಪ್ಪುಚುಕ್ಕೆ ಎಂಬುದರಲ್ಲಿ ಸಂದೇಹವಿಲ್ಲ.  

ಎಲೆಕ್ಟ್ರಾನಿಕ್ ಮಾಧ್ಯಮ ಬಂದ ಮೇಲೆ ಪತ್ರಿಕೆಗಳ ಮೇಲೆ ಆಗಿರುವ ಪರಿಣಾಮ ಎಂಥದ್ದು? 
ಎಲೆಕ್ಟ್ರಾನಿಕ್ ಮಾಧ್ಯಮ ಬಂದ ಮೇಲೆ ಪ್ರಿಂಟ್ ಮಾಧ್ಯಮದ ಮೇಲೆ ಓದುಗರ ಅವಲಂಬನೆ ಮತ್ತಷ್ಟು ಹೆಚ್ಚಿದೆಯೇ ವಿನಃ ಕಡಿಮೆಯಾಗಿಲ್ಲ.  ಹಾಗೆ ನೋಡಿದರೆ ನಮಗೆ ಪತ್ರಿಕಾ ಪ್ರಸಾರವನ್ನು ಇನ್ನೂ ವಿಸ್ತರಿಸುವ ಸಾಕಷ್ಟು ಸಾಧ್ಯತೆಗಳಿವೆ. ಕೆಲವೊಮ್ಮೆ ನಮಗೆ ತಲುಪಲಾಗುವುದಿಲ್ಲ. ಕೆಲವೊಮ್ಮೆ ಪತ್ರಿಕೆ ತರಿಸಿಕೊಳ್ಳುವ ಸಾಧ್ಯತೆಯಿರುವವರಲ್ಲಿ ಕೊಳ್ಳುವ ಮನಸ್ಥಿತಿ ಇರುವುದಿಲ್ಲ. ಮಲೆನಾಡಿನ ಒಂದು ಕುಗ್ರಾಮದಲ್ಲಿ ಕೂಡ ಏಜೆಂಟ್ ಒಬ್ಬ ಮನಸ್ಸು ಮಾಡಿದರೆ ತೀರಾ ಒಳಭಾಗಗಳಿಗೂ ಪತ್ರಿಕೆ ತಲುಪಲು ಸಾಧ್ಯವಿದೆ ಎಂಬುದಕ್ಕೆ ರಿಪ್ಪನ್‌ಪೇಟೆಯ ಟಿ.ಆರ್.ಕೃಷ್ಣಪ್ಪ ಮಾಡಿದ ಸಾಧನೆಯೇ ಉದಾಹರಣೆ. ಆತ ೨೦೦೪ರಲ್ಲಿ ಒಂದು ಸಣ್ಣ ಹಳ್ಳಿಯಲ್ಲಿ ೧೦ ಪೇಪರ್‌ಗಳಿಗೆ ಏಜೆನ್ಸಿ ತಗೆದುಕೊಂಡಿದ್ದ. ಆತ ಒಂದೇ ವರ್ಷದಲ್ಲಿ ತೀರಾ ಒಳಭಾಗಗಳಿಗೆ ಹೋಗಿ ಒಂದು ವರ್ಷದಲ್ಲಿ ೧೧೦ ಪತ್ರಿಕೆಗಳಿಗೆ ಪ್ರಸಾರ ಹೆಚ್ಚಿಸಿದ್ದ. ಪ್ರತಿದಿನ ಬೆಳಿಗ್ಗೆ ತಾನೇ ಪತ್ರಿಕೆಗಳನ್ನು ಆ ಒಳಹಳ್ಳಿಗಳಿಗೆ ತಲುಪಿಸುತ್ತಿದ್ದ. 

ನಾಡಿನ ಎಲ್ಲಾ ಪತ್ರಿಕೆಗಳಲ್ಲಿ ’ಪ್ರಜಾವಾಣಿ’ ಹೆಚ್ಚು ಜಾತ್ಯತೀತವಾದ ಮತ್ತು ಎಲ್ಲಾ ಜನವರ್ಗಗಳ ಪತ್ರಿಕೆಯೆನಿಸುತ್ತದೆ. ಇದು ಸಾಧ್ಯವಾದದ್ದು ಹೇಗೆ?
ಕೆ.ಎನ್ ಹರಿಕುಮಾರ್ ಅವರು ಬರುವವರೆಗೆ ಪ್ರಜಾವಾಣಿಯು ಒಂದು ವರ್ಗದ ಪತ್ರಿಕೆಯಾಗಿಯೇ ಇತ್ತು. ನಾನೂ ಸೇರಿದಂತೆ ಮೊದಲ ಬಾರಿಗೆ ಅಲ್ಲಿ ಆರು ಜನ ಇತರ ವರ್ಗದವರು ಸೇರಿಕೊಂಡಾಗ ಕೆಲವರು ಪತ್ರಿಕೆಯ ಗುಣಮಟ್ಟ ಹೊರಟುಹೋಗಿ ಬಿಡುತ್ತದೆ ಎಂದು ನಿಯೋಗ ಹೋಗಿದ್ದರು. ಕೆ.ಎನ್. ಗುರುಸ್ವಾಮಿಯವರು ಆಗ ಹೇಳಿದ್ದರಂತೆ "ನೀವೂ ಇಲ್ಲಿಗೆ ಸೇರುವಾಗ ಕತ್ತೆಗಳೇ ಆಗಿದ್ರಿ, ನಂತರ ಕುದುರೆಗಳಾದ್ರಿ. ಅವರೂ ಬರ್ತಾರೆ, ಕಲಿತುಕೊಳ್ಳುತ್ತಾರೆ. ಕುದುರೆಗಳಾಗ್ತಾರೆ" ಅಂತ. ಹಾಗಿತ್ತು ಪರಿಸ್ಥಿತಿ ಆಗ. ಕಾಲಕ್ರಮೇಣ ಬದಲಾವಣೆಯಾಗುತ್ತಿದೆ. ಶೂದ್ರ ದಲಿತವರ್ಗದ ಹಲವು ಜನರು ಪ್ರಜಾವಾಣಿಗೆ ಸೇರಿದ್ದಾರೆ. ಇದರ ಜೊತೆಗೆ ಜಾತ್ಯತೀತ ಮನೋಭಾವದ ಹಲವರು ಸೇರಿಕೊಂಡಿದ್ದರಿಂದ ಸಮಾಜದ ಎಲ್ಲ ಜನವರ್ಗಗಳೂ ಇದು ನಮ್ಮ ಪತ್ರಿಕೆ ಎಂದು ಹೇಳಿಕೊಳ್ಳುವಂತಾಯಿತು. ಹಾಗಂತ ಈಗ ಪೂರ್ತಿ ಸುಧಾರಣೆಯಾಗಿದೆ ಎಂದೇನಲ್ಲ.  ಇತ್ತೀಚೆಗೆ ವಿಜಯ ಕರ್ನಾಟಕವೂ ಒಂದಷ್ಟು ಒಳ್ಳೆ ರೀತಿಯ ಬೆಳವಣಿಗೆ ಕಾಣುತ್ತಿದೆ.  

ಒಬ್ಬ ಪತ್ರಕರ್ತನಾಗಿ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಳ್ಳುವುದು ಅನುಕೂಲವೋ ಅನಾನುಕೂಲವೋ?
ಪತ್ರಕರ್ತನಾಗಿದ್ದದ್ದು ಸಾಹಿತ್ಯ ರಚಿಸಲು ನನಗೆ ತುಂಬ ಸಹಾಯಕವಾಗಿದೆ. ಪತ್ರಕರ್ತನಾದವನಿಗೆ ಆತನ ಓದುಗ ಸರಳ ಬರೆಹವನ್ನು ಅರ್ಥಮಾಡಿಕೊಳ್ಳಬಲ್ಲ ಓದುಗನಾಗಿರುತ್ತಾನೆ. ಆತನಿಗೆ ಸರಳವಾಗಿ ಬರೆಯುವುದು ಆತನ ಉದ್ದೇಶವಾಗಿರುತ್ತದೆ. ಇದು ಪದಗಳನ್ನು ದುಂದು ಮಾಡಲು ಅವಕಾಶ ನೀಡುವುದಿಲ್ಲ. ಕಿರಿದುದರಲ್ಲಿ ಪಿರಿದರ್ಥವನ್ನು ಹೇಳುವ ವಿಧಾನ ಅಲ್ಲಿರುತ್ತದೆ. ಇದು ಸಾಹಿತ್ಯ ಕೃಷಿಯಲ್ಲೂ ಬಹಳ ಸಹಾಯ ಮಾಡಿದೆ. ಯಾವುದೇ ಬರಹ ಓದಿಸಿಕೊಳ್ಳಬಲ್ಲದ್ದಾಗಿರಬೇಕು. 

ಸಾಹಿತ್ಯ ರಚನೆಗೆ ತೊಡಗಿಕೊಳ್ಳಲು ಏನು ಪ್ರೇರಣೆಗಳು ನಿಮಗಿದ್ದವು? 
ನಾನಿದನ್ನು ದೈವದತ್ತ ಅಥವಾ ಪ್ರತಿಭೆ ಎಂದು ಹೇಳುವುದಿಲ್ಲ. ಇದು ಆಸಕ್ತಿಯ ಕಾರಣವಷ್ಟೆ. ನಾನು ಚಿಕ್ಕವನಿದ್ದಾಗ ನಮ್ಮ ಮನೆಯಲ್ಲಿ  ಅಡಿಕೆ ಸುಲಿಯುವಾಗ ರಾಮಾಯಣದ ಪಾರಾಯಣ ನಡೆಯುತ್ತಿತ್ತು. ಅದೇ ಸಮಯದಲ್ಲಿ ಕತೆಯ ಸ್ವಾರಸ್ಯಕ್ಕಾಗಿ ’ಕಾನೂರು ಹೆಗ್ಗಡತಿ’ಯನ್ನು ಕುಟುಂಬದ ಯಾರಾದರೊಬ್ಬರು ರಾತ್ರಿ ಓದುತ್ತಿದ್ದರು. ಅದನ್ನು ಕೇಳಿಸಿಕೊಳ್ಳುತ್ತಿದ್ದ ನನಗೆ ಓದುವ ಬಗ್ಗೆ ಗೀಳು ಹುಟ್ಟಿಕೊಂಡಿತ್ತು. ನನ್ನ ಅಣ್ಣಂದಿರ ಪ್ರಭಾವವೂ ನನ್ನ ಮೇಲಿತ್ತು. ಆ ನಂತರ ಆನರ್ಸ್ ಸೇರಿದ ಮೇಲೆ ಬರೆಯುವ ಆಸಕ್ತಿಯುಂಟಾಗಿ ಒಂದು ಕತೆ ಬರೆದು ಕಳಿಸಿದ್ದೆ. ಅದಕ್ಕೆ ಬಹುಮಾನವೂ ಬಂದಿತ್ತು. ನಂತರ ನಿರಂತರವಾಗಿ ಬರೆಯುವ ಗೀಳಾಯಿತು. ಪತ್ರಿಕೆಗಳಿಂದ ಬಹಳ ಉತ್ತೇಜನವೂ ಸಿಕ್ಕಿತು. ಹಾಗೆಯೇ ಸಂವಹನದ ದೃಷ್ಟಿಯಿಂದ ನನಗೆ ಪದ್ಯಕ್ಕಿಂತ ಗದ್ಯವೇ ಪ್ರಿಯವಾಗುತ್ತ ಹೋಯಿತು. 

ನಿಮ್ಮ ಹೆಚ್ಚಿನ ಕೃತಿಗಳು ಅನುಭವ ನಿಷ್ಠವಾಗಿರುವಂತರುವಂತದ್ದು. ಹೀಗೆ ಸಾಹಿತ್ಯ ರಚಿಸುವುದು ಸಮಾಜದ ಬೇರೆ ನೆಲೆಗಳನ್ನು ಗುರುತಿಸುವಲ್ಲಿ ಮಿತಿಯೊಡ್ಡಿಲ್ಲವೇ? 
ಅದು ನಿಜ. ನಾನು ಇಲ್ಲಿವರೆಗೆ ಇಷ್ಟು ಬರೆದಿದ್ದರೂ ನಾನು ಲೇಖಕ ಎಂದುಕೊಂಡಿಲ್ಲ. ಇದುವರೆಗೆ ಬರೆದಿರುವುದು ನನ್ನ ಪತ್ರಿಕಾವರದಿಗಳ ವಿಸ್ತೃತ ರೂಪ ಎಂದು ಹೇಳಬಹುದೇನೋ. ಹಾಗೆಯೇ ಅಲ್ಲಿ ನನ್ನ ಅಭಿಪ್ರಾಯಗಳನ್ನು ಹೇಳಲು ಹೋಗಿರುವುದು ಕಡಿಮೆ. ನನ್ನ ಗಮನ ವಸ್ತುಸ್ಥಿತಿಯ ಅನಾವರಣ ಅಷ್ಟೆ. ವಾಸ್ತವವನ್ನು ಯಥಾವತ್ತಾಗಿ ಇಡುವುದರಿಂದಲೂ ಒಂದು ಸಂದೇಶ ಬರುತ್ತದೆ. ಒಂದು ವಿಶೇಷ ವರದಿ ಬರೆಯುವಾಗ ನಮಗೆ ಹೇಗೆ ಒಂದು ಉದ್ದೇಶವಿರುತ್ತದೆಯೋ ಹಾಗೆ. ಉದಾಹರಣೆಗೆ ನನ್ನ ’ಪಾಡು’ ಕಾದಂಬರಿ ಇಬ್ಬರು ಗಂಡಹೆಂಡತಿಯರ ಸಂಬಂಧವನ್ನು ಚಿತ್ರಿಸುತ್ತಲೇ ಅಂತಿಮವಾಗಿ ಹೊಂದಾಣಿಕೆಯೇ ಸಾಮರಸ್ಯದ ಮೂಲದ್ರವ್ಯ ಎನ್ನುವುದನ್ನೂ ಹೇಳುತ್ತದೆ. ಬದುಕಿನ ಲೌಕಿಕ ವಿಷಯಗಳನ್ನು ಹೇಳುವಾಗಲೇ ಭಾವನಾತ್ಮಕ ವಿಷಯಗಳೂ ಸ್ಥಾನ ಪಡೆಯುತ್ತವೆ. ಮತ್ತೊಂದೆಡೆ ನಮ್ಮ ಸಮುದಾಯಗಳ ಮತ್ತು ನಮ್ಮ ಅನುಭವಗಳ ಬಗ್ಗೆ ಬಗ್ಗೆ ನಾವು ಹೇಳದೇ ಹೋದರೆ ಬೇರೆಯವರು ಹೇಳಲು ಸಾಧ್ಯವಿಲ್ಲ ಎನ್ನುವ ಯೋಚನೆಯಿಂದ ನಾನು ಬರೆದಿದ್ದು ಹೆಚ್ಚು.  

ನಮ್ಮ ಸಮಾಜ ಮತ್ತು ಸಾಹಿತ್ಯದ ಸಂಬಂಧಗಳು ಹೇಗಿವೆಯೆನ್ನುತ್ತೀರಿ?  
ನಮ್ಮ ಸಾಮಾಜಿಕ ಪರಿಸ್ಥಿತಿಯನ್ನು ನೋಡಿದಾಗ ನನಗೆ ಕಂಡುಬರುವುದೇನೆಂದರೆ ಕರ್ನಾಟಕದಲ್ಲಿ ಪ್ರಬಲವಾದ ಮೂರು ಜಾತಿಗಳಿವೆ. ಲಿಂಗಾಯತ, ಒಕ್ಕಲಿಗ ಮತ್ತು ಬ್ರಾಹ್ಮಣ. ಬ್ರಾಹ್ಮಣರು ಅಲ್ಪಸಂಖ್ಯಾತರು ಎನ್ನಬಹುದು. ಆದರೆ ಅವರು ಕಾರ್ಯಾಂಗದಲ್ಲಿ ಪ್ರಬಲರಾಗಿದ್ದಾರೆ. ಶಾಸಕಾಂಗದಲ್ಲಿ ಪ್ರಬಲರಿಲ್ಲದಿದ್ದರೂ ಅವರ ಹಿತಕ್ಕೆ ವಿರುದ್ಧವಾಗಿ ಏನೂ ಆಗದಿರುವ ಹಾಗೆ ನೋಡಿಕೊಳ್ಳುವ ವ್ಯವಸ್ಥೆ ಅವರಿಗಿದೆ. ನ್ಯಾಯಾಂಗದಲ್ಲಿ ಪ್ರಬಲರಾಗಿದ್ದಾರೆ. ಆಡಳಿತ ಮತ್ತು ಸಾಮಾಜಿಕ ಧಾರ್ಮಿಕ ಕ್ಷೇತ್ರಗಳಲ್ಲಿ ತಮ್ಮ ಹಿತಕ್ಕೆ ಮಾರಕವಾಗುವ ಯಾವುದಕ್ಕೂ ಅವಕಾಶ ನೀಡದ ರೀತಿ ಅವರ ಹಿಡಿತವಿದ್ದು ಅವರ ಪಾಡಿಗೆ ಅವರು ಚೆನ್ನಾಗಿದ್ದಾರೆ. ಈ ಮೂರು ಜಾತಿಗಳು ಸಂಖ್ಯಾದೃಷ್ಟಿಯಿಂದ ಉಳಿದವರಿಗೆ ಎಣೆಯಲ್ಲ. ಶೇಕಡ ೬೫ರಷ್ಟು ಜನರಲ್ಲಿ ಐಕ್ಯತೆಯೇ ಸಾಧ್ಯವಾಗದ ರೀತಿಯಲ್ಲಿ ಈ ವ್ಯವಸ್ಥೆಯನ್ನು ಮೂರೂ ಪ್ರಬಲ ಜಾತಿಗಳು ಕಾಪಾಡಿಕೊಂಡು ಬಂದಿವೆ. ಇದು ಎಲ್ಲ ಕ್ಷೇತ್ರಗಳಲ್ಲಿಯೂ ಯಶಸ್ವಿಯಾಗಿ ಜಾರಿಗೆ ಬರುತ್ತಿದೆ. ಮೀಸಲಾತಿಯ ವಿರುದ್ಧವಾಗಿ ಇವರೆಲ್ಲ ಇದ್ದಾರೆ. ಹೀಗಾಗಿ ಉಳಿದ ಸಮುದಾಯಗಳು ರಾಜಕೀಯವಾಗಿ ಅವಕಾಶವಾದಿಗಳಾಗುವ ಪರಿಸ್ಥಿತಿ ಇಲ್ಲಿದೆ. ಕುರುಬರಿಗೆ ಅವರು ಒಂದೋ ಲಿಂಗಾಯತರೊಂದಿಗೆ ಸೇರಿಕೊಳ್ಳಬೇಕು ಇಲ್ಲವೇ ಒಕ್ಕಲಿಗರೊಂದಿಗೆ ಸೇರಿಕೊಳ್ಳಬೇಕು. ಒಬ್ಬ ಈಡಿಗರು ಲಿಂಗಾಯತರೊಂದಿಗೆ ಸೇರಿಕೊಳ್ಳಬಹುದೇ ಹೊರತು ಕುರುಬರೊಂದಿಗೆ ಸೇರಲು ಹೋಗುವುದಿಲ್ಲ. ಇಂತಹ ಮನಸ್ಥಿತಿ ಬದಲಾವಣೆಯಾಗಬೇಕಿದೆ. ಸಾಹಿತ್ಯ ಚಳವಳಿಯಲ್ಲಿಯೂ ಹೀಗೆಯೇ ಇದೆ. ಸ್ವಾತಂತ್ರ್ಯಾನಂತರದಲ್ಲಿ ಹಿಂದುಳಿದ ಬ್ರಾಹ್ಮಣೇತರ ವರ್ಗದ ಸಾಹಿತಿಗಳಿಗೆ ತಮ್ಮ ಸಾಹಿತ್ಯ ಮಾನ್ಯವಾಗಬೇಕೆಂದರೆ ಅದನ್ನು ಕುರ್ತುಕೋಟಿ, ಅಡಿಗರಂತವರೇ ಗುರುತಿಸಿ ಹೇಳಬೇಕಾಗಿತ್ತು. ಯಾಕೆಂದರೆ ವಿಮರ್ಷೆಯ ಮಾನದಂಡಗಳನ್ನು ಅವರೇ ಸೃಷ್ಟಿಸಿ ರೂಪಿಸುವಂತವರು. ಅವರು ಹೇಳಿದರೆ ಮಾತ್ರ ಇವರದ್ದು ಸಾಹಿತ್ಯ. ?ವರು ಹೇಳಲಿಲ್ಲವೆಂದಾದರೆ ಇವರದ್ದು ಸಾಹಿತ್ಯವಲ್ಲ. ಇದು ನವೋದಯ, ನವ್ಯ, ದಲಿತ ಬಂಡಾಯದಲ್ಲೂ ಆಯಿತು. ’ಬಂಡಾಯ’ ಎನ್ನುವುದು ಮತ್ತೊಂದು ದೊಡ್ಡ ಸಮಯ ಸಾಧಕ ಸಾಹಿತ್ಯ ಚಳವಳಿಯಂತಾಯಿತು. ಯಾರು ಬೇಕಾದರೂ ಬಂಡಾಯ ಸಾಹಿತಿಯಾಗಿಬಿಡಬಹುದಿತ್ತು. ಜಾಳು ಜಾಳು ಬರೆಹಗಳನ್ನಿಟ್ಟುಕೊಂಡು ಸಮಯಸಾಧಕರಾದವರೂ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾದರು. ಸಾಹಿತ್ಯಕ ಚಳವಳಿಗಳೂ ಹೇಗೆ ಹೈಜಾಕ್ ಆಗುತ್ತವೆ ಎನ್ನುವುದಕ್ಕೆ ಇದು ಉದಾಹರಣೆ. ತಳಸಮುದಾಯಗಳ ಅನೇಕರು ಸಾಹಿತ್ಯ ರಚನೆಗೆ ತೊಡಗಿದರೂ ಅವರು ತಮ್ಮ ಸ್ವಂತ ಬದುಕಿನ ಅನುಭವಗಳನ್ನು ಸಾಹಿತ್ಯದಲ್ಲಿ ದಾಖಲಿಸುವುದನ್ನು ಬಿಟ್ಟು ಬೇರೆಯವರನ್ನು ಅನುಕರಿಸುವಂತಾಯಿತು. ತಾವು ಮಾನ್ಯತೆ ಪಡೆಯುವ ಏಕೈಕ ಕಾರಣಕ್ಕಾಗಿ ಹೀಗೆ ಮಾಡಿದರು. ನಿಜವಾಗಿಯೂ ಸತ್ವ ಇಟ್ಟುಕೊಂಡು ಬರೆದವರಿಗೆ ಯಾವ ಮಾನ್ಯತೆಯೂ ಸಿಗಲಿಲ್ಲ. ಪತ್ರಿಕೋದ್ಯಮದಲ್ಲೂ ಹೀಗೇ ಆಗಿದೆ. ಪ್ರಜಾವಾಣಿಯಲ್ಲೇ ನೋಡಿ. ಇತರ ವರ್ಗದವರಿಗೆ ಬೈಲೈನ್‌ಗಳು ಸಿಗಲು ಶುರುವಾದದ್ದೇ ಶಾಂತಕುಮಾರ್ ಅವರು ಸಂಪಾದಕರಾಗಿ ಬಂದ ಮೇಲೆ. ರಂಗನಾಥರಾವ್ ಅವಧಿಯಲ್ಲಿ ಇದು ಆಗುತ್ತಲೇ ಇರಲಿಲ್ಲ. ಹೀಗಾಗಿ ಇತರರು ಯಾವ ಪತ್ರಿಕೋದ್ಯಮ ಪ್ರಶಸ್ತಿಗಳಿಗೂ ಅರ್ಹರಾಗುತ್ತಿರಲಿಲ್ಲ. 

ಅಂದರೆ ನಮ್ಮ ಸಾಹಿತ್ಯ ವಿಮರ್ಶೆಯ ಮಾನದಂಡಗಳಲ್ಲೇ ದೋಷವಿತ್ತು ಎನ್ನುತ್ತೀರಾ? 
ಹೌದು. ಅಕ್ಷರ ಲೋಕಕ್ಕೆ ತೆರೆದುಕೊಂಡ ಸಾಹಿತಿಗಳ ಸಾಹಿತ್ಯವನ್ನೆಲ್ಲಾ ಪುನರಾವಲೋಕನ ಮಾಡಬೇಕಾದ ಅವಶ್ಯಕತೆ ಈಗಲೂ ಇದೆ ಎಂದು ನನ್ನ ಅನಿಸಿಕೆ. ಅದು ಎಷ್ಟರ ಮಟ್ಟಿಗೆ ಜನಪರವಾಗಿದೆ ಮತ್ತು ಅನುಭವ ನಿಷ್ಠವಾಗಿದೆ ಎಂದು ಅವಲೋಕಿಸಬೇಕು. ಉದಾಹರಣೆಗೆ ನೇಕಾರರ ಸಮುದಾಯದಿಂದ ಬಂದು ಬರೆದವರು ತಮ್ಮ ಸಮುದಾಯದ ವೃತ್ತಿ ಬದುಕಿನ ಬಗ್ಗೆ ಒಂದು ಸಾಲನ್ನೂ ಬರೆಯದೆಯೂ ಬೇರೆಯವರನ್ನು ಅನುಕರಣೆ ಮಾಡಿಯೇ ಸಾಹಿತಿ ಎನ್ನಿಸಿಕೊಂಡವರಿದ್ದಾರೆ. ಈ ಅರ್ಥದಲ್ಲಿ ಕರ್ನಾಟಕದಲ್ಲಿ ಸಾಹಿತ್ಯಕ ಚಳವಳಿ ಆರಂಭವೇ ಆಗಿಲ್ಲ ಎನ್ನಿಸುತ್ತದೆ. ದಲಿತ ಲೋಕದಲ್ಲಿ ಈ ದೃಷ್ಟಿಯಿಂದ ಒಂದಷ್ಟು ಬರವಣಿಗೆ ಬಂದಿದೆ. ಆದರೆ ಅಲ್ಲಿಯೂ ಕೆಲ ಅತಿರೇಕಗಳಿವೆ. ಅಲ್ಲಿ ಸಹ ವೈದಿಕ ವಿಮರ್ಶಕರು ಬಹಳಷ್ಟು ಮಂದಿ ಬರಹಗಾರರನ್ನು ಕಡೆಗಣಿಸಿ ಒಬ್ಬ ಸಿದ್ದಲಿಂಗಯ್ಯ, ಒಬ್ಬ ದೇವನೂರು ಮಹಾದೇವರನ್ನು ಮಾತ್ರ ಮಾನ್ಯ ಮಾಡಿಬಿಟ್ಟಿದ್ದಾರೆ. ಇನ್ನುಳಿದ ಕೆಲ ದಲಿತ ಲೇಖಕರು ತಮಗೆ ತಾವೆ ಒಂದೊಂದು ದ್ವೀಪವಾಗುಳಿದು ತಮ್ಮ ತಮ್ಮದೇ ಶ್ರೇಷ್ಠ ಸಾಹಿತ್ಯ, ನಮಗೆ ಮಾನ್ಯತೆ ಇಲ್ಲ ಎಂದು ಸ್ವಅನುಕಂಪದ ಆತ್ಮರತಿಯಲ್ಲಿ ಮುಳುಗಿಕೊಂಡಿದ್ದಾರೆ. ಅಲ್ಲಿಯೂ ಎಡ-ಬಲ ಎಂದು ವಿಭಾಗವಾಗಿದೆ. ಒಬ್ಬ ಎಡಗೈ. ಮತ್ತೊಬ್ಬ ಬಲಗೈ. ಬಲಗೈಗೆ ಮತ್ತೆ ಪ್ರಾಧಾನ್ಯತೆ. ಅವರು ಮತ್ತೆ ಮುಖ್ಯವಾಹಿನಿಯ ಸಾಹಿತ್ಯ ಭಜನೆ ಮಾಡದಿದ್ದರೆ ಪರಿಗಣನೆಯೇ ಇಲ್ಲ. ನಿಜವಾಗಿಯೂ ಸಾಹಿತ್ಯದ ನಿಜವಾದ ಮೌಲ್ಯೀಕರಣ ಇಲ್ಲಿ ಆಗುತ್ತಿಲ್ಲ ಎಂದೆನಿಸುತ್ತದೆ. ಇಡೀ ಸಾಹಿತ್ಯದಲ್ಲಿ ಬೇರೆ ಬೇರೆ ಸಮುದಾಯಗಳ ಬದುಕಿನ ಅನುಭವಗಳ ಚಿತ್ರಣಕ್ಕೆ ಮಾನ್ಯತೆ ಸಿಗಬೇಕಿದೆ.  

ನೀವು ಬಂದಂತಹ ದೀವರ ಸಮುದಾಯ ಸಾಹಿತ್ಯಕ ಕ್ಷೇತ್ರದಲ್ಲಿ ಹಿಂದುಳಿದಿದೆಯಲ್ಲ? 
ದೀವರಲ್ಲಿ ಬಹಳ ಜನರಿಗೆ ಒಳ್ಳೆಯ ಅನುಭವ ಇದೆ. ಆದರೆ ಅಂತವರು ಸಾಹಿತ್ಯ ರಚಿಸುವುದಿಲ್ಲ. ಸಾಹಿತ್ಯ ರಚಿಸಿದವರು ಜಾತ್ಯತೀತವಾಗಿ ಯೋಚಿಸುವುದಿಲ್ಲ. ಹಾಗೆ ಬದುಕುವುದೂ ಇಲ್ಲ. ಸಮಸ್ಯೆಯೇನೆಂದರೆ ಅಲ್ಲಿ ಒಬ್ಬೊಬ್ಬರೂ ಒಂದೊಂದು ದ್ವೀಪಗಳಾಗಿದ್ದಾರೆ. ಈಡಿಗರ 26 ಗುಂಪುಗಳನ್ನು ಸೇರಿಸಿ ಮಠ ಕಟ್ಟಿದಾರೆ. ಆದರೆ ಅವರಲ್ಲಿ ಕೆಲವರು ಮಂತ್ರಾಲಯಕ್ಕೆ ಲಕ್ಷಗಟ್ಟಲೆ  ದಾನ ಕೊಡುತ್ತಾರೆ. ಇವರನ್ನು ಹೇಗೆ ಸುಧಾರಣೆ ಮಾಡ್ತೀರಾ? ನಮ್ಮೂರಲ್ಲಿ ನನ್ನನ್ನೂ ಸೇರಿ ನಾಲ್ಕು ಅಂತರ್ಜಾತಿ ವಿವಾಹಗಳಾಗಿವೆ. ಎಲ್ಲರೂ ಬಹಳ ಚೆನ್ನಾಗಿದ್ದಾರೆ. ಈ ಬಗೆಯ ಮಾನಸಿಕ, ಸಾಮಾಜಿಕ ಬದಲಾವಣೆಗಳು ಇಂದು ಬೇಕಾಗಿದೆ. ಇಂದಿನ ಕಾಲಕ್ಕೆ ಬೇಕಾದ ವೈಚಾರಿಕ ಮಾರ್ಪಾಡುಗಳು ಬರಬೇಕು. ಕುವೆಂಪು ಅವರು ಅರ್ಥಪೂರ್ಣವಾಗಿ ಹೇಳಿರುವುದು ಇದನ್ನೇ. ನಿಮ್ಮಲ್ಲಿರುವ ಅರ್ಥವಾಗದ ಆಚರಣೆಗಳನ್ನು ಒಂದೋ ಬಿಟ್ಟುಬಿಡಿ. ಇಲ್ಲವೇ ಇಂದಿಗನುಗುಣವಾಗಿ ಸುಧಾರಣೆ ಮಾಡಿಕೊಳ್ಳಿ. ತಿರುಪತಿಗೆ ಹೋಗುವುದು, ಧರ್ಮಸ್ಥಳಕ್ಕೆ ಹೋಗುವುದು, ಅನ್ನಪ್ರಾಶನ, ಮುಡಿಕೊಡುವುದು ಇಂತವೆಲ್ಲಾ ಹೆಚ್ಚಾಗಿವೆ. ಎಲ್ಲಿ ಗೌರವ ಸಿಗುವುದಿಲ್ಲವೋ ಅಲ್ಲೇ ಹೋಗಿ ಬೀಳುತ್ತಾರಲ್ಲ? ಈ ಮೌಢ್ಯ, ಅವೈಜ್ಞಾನಿಕ ಆಚರಣೆಗಳನ್ನು ಹಿಂದುಳಿದವರು ಬಿಡದಿದ್ದರೆ ಅವರೆಂದೂ ಉದ್ಧಾರವಾಗುವುದಿಲ್ಲ.

ಉದ್ಯೋಗಕ್ಕಾಗಿ ಹಳ್ಳಿಗಳಿಂದ ನಗರಗಳಿಗೆ ವಲಸೆ ಹೋಗುತ್ತಿರುವ ಪ್ರಕ್ರಿಯೆ ಹಳ್ಳಿಗಳ ಮೇಲೆ ಯಾವ ಪರಿಣಾಮ ಬೀರುತ್ತಿದೆ ಎನಿಸುತ್ತಿದೆ?
ನಮ್ಮ ಮನೆಯಲ್ಲೇ ನೋಡಿ. ಒಂದು ಕಾಲದಲ್ಲಿ ೨೫-೩೦ ಜನರಿದ್ದ ಮನೆಯಲ್ಲಿ ಈಗ ಕೇವಲ ನಾಲ್ಕು ಜನರಿದ್ದಾರೆ. ಎಲ್ಲಾ ಹುಡುಗರೂ ನಗರಗಳಿಗೆ ಬಂದಿದ್ದಾರೆ. ಹಳ್ಳಿಯಲ್ಲಿ ಯಾವ ಕೆಲಸಕ್ಕೂ ಜನ ಇಲ್ಲ ಎನ್ನುವ ಸ್ಥಿತಿ ಇದೆ. ಇದು ಅಲ್ಲಿ ಯಾಂತ್ರೀಕರಣಕ್ಕೆ ಕಾರಣವಾಗಿದೆ. ಈಗ ಮಲೆನಾಡಿನಲ್ಲಿ ಭತ್ತ ಬೆಳೆದರೆ ಕೂಲಿಯೂ ಸಿಗುವುದಿಲ್ಲ. ಈಗ ಹಿಂದೆ ಹಳ್ಳಿಯಲ್ಲಿದ್ದ ಮೈಯಾಳು ಪದ್ಧತಿಯನ್ನೇ ಧರ್ಮಸ್ಥಳದ ಸಂಸ್ಥೆ ’ಪ್ರಗತಿ ಬಂಧು’ ಹೆಸರಲ್ಲಿ ಸಾಮೂಹಿಕ ಕೆಲಸ ಮಾಡಿಸುತ್ತಿರುವುದನ್ನು ನೋಡುತ್ತೇವೆ. 

ಪ್ರಸಕ್ತ ರಾಜಕೀಯ ರಾಜಕೀಯ ವಿದ್ಯಮಾನಗಳ ಕುರಿತು?
ಇಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಬೆಲೆಯೇ ಇಲ್ಲ ಎನ್ನಬಹುದು. ಸಂವಿಧಾ??ಕ ಸಂಸ್ಥೆಗಳೆಲ್ಲಾ ದುರ್ಬಲವಾಗಿ ಅಧಿಕಾರ ನಿರಂಕುಶವಾಗಿದೆ. ಸರ್ಕಾರ ನಮ್ಮದು ಎಂಬ ಭಾವನೆ ಜನರಿಗೆ ಬರುವ ಮಟ್ಟಿಗೆ ಆಗಿರಲು ಜನರೇ ಕಾರಣ. ವಿಧಾನಸಭೆಯನ್ನು ನಿಯಂತ್ರಿಸುವ ಜನಪ್ರತಿನಿಧಿಗಳು ದಲ್ಲಾಳಿಗಳಂತೆ ಆಗಿದ್ದಾರೆ. ಸರ್ಕಾರವನ್ನು ಹಾದಿಗೆ ತರಬೇಕಿದ್ದ ವಿಧಾನಸಭೆ ಜನವಿರೋಧಿಯಾಗಿದೆ. 

ಶ್ರೀರಾಮುಲು ತಮ್ಮನ್ನು ಹೊಸ ರೀತಿಯಲ್ಲಿ ಬಿಂಬಿಸಿಕೊಂಡು ಹೊರಟಿದ್ದಾರಲ್ಲ?
ಶ್ರೀರಾಮುಲು ಗಣಿರೆಡ್ಡಿಗಳ ಜೊತೆ ಸೇರಿಕೊಂಡು ನಾಡನ್ನು ಲೂಟಿ ಮಾಡಿರುವಾತ. ನಾಡಿನ ಸಂಪತ್ತಿನ ಲೂಟಿಯಲ್ಲಿ ಆತ ಪ್ರಮುಖ ಪಾಲುದಾರ. ಈಗ ಬೇರೆ ಕಡೆ ಅವಕಾಶ ಇಲ್ಲ ಎನ್ನುವ ಕಾರಣಕ್ಕೆ ಹೊಸ ವೇಷ ಹಾಕಿದ್ದಾರೆ. ಇದು ಅವಕಾಶವಾದಿ ರಾಜಕಾರಣವಲ್ಲದೇ ಬೇರೇನೂ ಅಲ್ಲ. ರಾಮುಲು ದೊಡ್ಡ ಕ್ರಾಂತಿಕಾರಿ ಪುರುಷ ಎಂದು ಈ ಕಡೆ ಯಾರೂ ನಂಬಿಕೊಂಡಿಲ್ಲ. ಯಾವುದೇ ಮಹಾ ಉದ್ದೇಶ ಇಟ್ಟುಕೊಂಡವರು ಶ್ರೀರಾಮುಲು ಜೊತೆ ಕೈಜೋಡಿಸಿದರೆ ಅದರಿಂದ ಇನ್ನೇನೂ ಆಗುವುದಿಲ್ಲ. ಚುನಾವಣೆ ಸಮಯದಲ್ಲಿ ಜನ ಯೋಚಿಸುವುದೇ ಬೇರೆ. ಇಂದು ಬೆಜೆಪಿ ಜನತೆ ಮೇಲೆ ಮಾಡಿರುವ ಮಾನಸಿಕ ದೌರ್ಜನ್ಯಕ್ಕೆ ಜನರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಊಹಿಸುವುದೂ ಕಷ್ಟ. ಜನರು ಮತಗಟ್ಟೆಗಳ ಕಡೆ ಬರದೆಯೂ ಇರಬಹುದು. ಜನರನ್ನು ಪೂರ್ತಿ ಭ್ರಷ್ಟಗೊಳಿಸಿ ಎಲ್ಲಾ ಕಾಲದಲ್ಲೂ ಜನರನ್ನು ಹಿಡಿತದಲ್ಲಿಟ್ಟುಕೊಳ್ಳಬಹುದಾ ಎಂಬ ಪ್ರಶ್ನೆ ಇದೆ. 

ಭ್ರಷ್ಟಾಚಾರಕ್ಕೆ ಕಡಿವಾಣ ಹೇಗೆ ಎನ್ನುತ್ತೀರಿ? 
ಕ್ಲೀಷೆಯಾಗಿ ಹೇಳುವುದಾದರೆ ಜನಜಾಗೃತಿಯಾಗಬೇಕು. ನಾವು ಭ್ರಷ್ಟರಾಗದಿದ್ದರೆ ಸಾಕು. ಭ್ರಷ್ಟಾಚಾರ ಎನ್ನುವುದು ಒಂದು ಪಾತಕ ಕೃತ್ಯ ಎಂಬ ಭಾವನೆ ಜನರಲ್ಲಿ ಬರದಿದ್ದರೆ ಕಷ್ಟ. ಈ ಆರು ದಶಕಗಳಲ್ಲಿ ಜನರು ಪ್ರಬುದ್ಧರಾಗಿಬೇಕಿತ್ತು. ಎಲ್ಲಾ ಶಿಕ್ಷಣ, ವಿಜ್ಞಾನವನ್ನು ತಿಳಿದೂ ಅದನ್ನು ಅನುಸರಿಸುವುದಿಲ್ಲ. ಈ ಸಮುದಾಯದ ಅಂತಃಸತ್ವವನ್ನೇ ಪ್ರಶ್ನಿಸಬೇಕಾ? ಸ್ಥಿತಿ ಇದೆ ಎಂದು ನನಗನ್ನಿಸುತ್ತದೆ. ಗ್ರಹಣ ಯಾಕೆ ಆಗುತ್ತದೆ ಎಂದು ನಮಗೆಲ್ಲಾ ಗೊತ್ತು. ಆದರೂ ಅಂದು ಸ್ನಾನ ಮಾಡಿ ಅಡುಗೆ ಮಾಡದಿರುವಂತೆ ಇರುತ್ತೇವೆ. ರಾಹುಕಾಲ, ಗುಳಿಕ ಕಾಲಗಳೆಲ್ಲಾ ಕಾಲ್ಪನಿಕ, ಅವೆಲ್ಲಾ ಯಾವುದೋ ವರ್ಗದ ಹಿತಕ್ಕಾಗಿ ಸೃಷ್ಟಿಯಾದದ್ದು ಎಂಬುದು ಗೊತ್ತು. ಈಗಲೂ ಅಂತಹ ನಂಬಿಕೆಗಳನ್ನು ನಾವು ಬಿಡುವುದಿಲ್ಲವಲ್ಲ. ಸುಧಾರಣೆಗಳಿಗೆ ಮತ್ಯಾರೋ ಪ್ರವಾದಿಯೋ, ನಿರಂಕುಶಾಧಿಕಾರಿಯೋ ಬರಬೇಕಾ? ಒಂದು ಬಗೆಯ ಭ್ರಮನಿರಸನವಾಗುವ ಪರಿಸ್ಥಿತಿ ಇದು. ಪತ್ರಿಕೆಯಲ್ಲಿ ಪ್ರತಿ ದಿನ ಸುಭಾಷಿತ ಇರಬೇಕೆಂದು ಅಪೇಕ್ಷಿಸುತ್ತೇವೆ. ಯಾಕೆ ನಿನ್ನೆ ಹೇಳಿದ್ದು ಇಂದು ಅನ್ವಯವಾಗುವುದಿಲ್ಲವಾ? ಬಸವಣ್ಣನವರ ಒಂದು ವಚನವಿದೆಯಲ್ಲ. "ಕಳಬೇಡ, ಕೊಲಬೇಡ, ಹುಸಿಯ ನುಡುಯಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ, ಇದೇ ಅಂತರಂಗಶುದ್ಧಿ, ಇದೇ ಬಹಿರಂಗ ಶುದ್ಧಿ"- ಇದನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಇದಕ್ಕಿಂತ ದೊಡ್ಡ ವೇದಾಂತ, ಆಧ್ಯಾತ್ಮ, ಮಾರ್ಗದರ್ಶನ ಯಾವುದೂ ಇಲ್ಲ.  ಇದೊಂದೇ ಸಾಕು ನಾವು ಒಳ್ಳೆಯ ರೀತಿ ಬದುಕಲಿಕ್ಕೆ. ಆದರೆ ದಿನಾ ಇದನ್ನೇ ಭಜನೆ ಮಾಡುವ 
ಕೆಲವು ಮಠಾಧಿಪತಿಗಳು ದೊಡ್ಡ ಡಾನ್‌ಗಳಾಗಿ ಬಿಟ್ಟಿದ್ದಾರೆ ನೋಡಿ. ದಾವೂದ್ ಇಬ್ರಾಹಿಂ, ಚೋಟಾರಾಜನ್‌ಗಿಂತ ಕುಲಗೆಟ್ಟು ಹೋಗಿದ್ದಾರೆ ಈ ಕೆಲವು ಮಠಾಧಿಪತಿಗಳು 'ಹೇಳುವುದು ಮಾತ್ರ ನನ್ನ ಕೆಲಸ. ಪಾಲಿಸುವುದಲ್ಲ’ ಎಂಬ ನಡವಳಿಕೆ ಹೊಂದಿದ್ದಾರೆ. ಇದು ಒಟ್ಟಾರೆ ಸಮುದಾಯದ ಅಧಃಪತನದ ಸೂಚನೆ ಮಾತ್ರ. ಅನೇಕ ಸಲ ಭರವಸೆಗಳೇ ಕುಸಿದರೂ ಎಲ್ಲೋ ಕೆಲವು ಘಟನೆಗಳನ್ನು ನೋಡಿದಾಗ ಒಂದಷ್ಟು ಆಶಾವಾದವೂ ಬರುತ್ತದೆ.  

ಇಂದಿನ ಯುವ ಪತ್ರಕರ್ತರಿಗೆ ಏನು ಹೇಳಬಯಸುತ್ತೀರಿ? 
ಪ್ರಾಮಾಣಿಕವಾಗಿರಿ. ಜಾಸ್ತಿ ಓದಿಕೊಳ್ಳಿ. ದುಸ್ಸಾಹಸ ಬೇಡ. ಇಲ್ಲಿ ಯಾವುದೇ ಸಂಸ್ಥೆ ಸುರಕ್ಷಿತ ಎಂದಲ್ಲ. ಇರುವ ಅವಕಾಶಗಳನ್ನು ಎಚ್ಚರಿಕೆಯಿಂದ ಶ್ರದ್ಧೆ, ಪ್ರಾಮಾಣಿಕತೆಗಳ ಮೂಲಕ ಬಳಸಿಕೊಂಡರೆ ನಿಮ್ಮನ್ನು ಏನೂ ಮಾಡಲಾಗುವುದಿಲ್ಲ. ಮಿಗಿಲಾಗಿ ಬರವಣಿಗೆಯಲ್ಲಿ ನಿಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಿ ಎಂದು ಹೇಳಬಹುದಷ್ಟೆ. 

(ದ ಸಂಡೆ ಇಂಡಿಯನ್ ಪತ್ರಿಕೆಯಲ್ಲಿ ಪ್ರಕಟಿತ)2 ಕಾಮೆಂಟ್‌ಗಳು:

antarala ಹೇಳಿದರು...

nimma sandasrana bahala arthapooravaagide. nimma abiprayagala bagge yochisabeku,

antarala ಹೇಳಿದರು...

nimma sandasrana bahala arthapooravaagide. nimma abiprayagala bagge yochisabeku,