ಮತ್ತೊಂದು ವಿಶ್ವ ಹೂಡಿಕೆದಾರರ ಸಮ್ಮೇಳನ ನಡೆಯುತ್ತಿದೆ. ಸರ್ಕಾರದ ಭಾರೀ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿಯವರು ಈಗ ಮತ್ತೊಮ್ಮೆ ದೇಶ ವಿದೇಶಗಳಲ್ಲೆಲ್ಲ ಸುತ್ತಿ ಬಂದು ರಾಜ್ಯದಲ್ಲಿ ಬಂಡವಾಳ ಹೂಡಲು ವಿದೇಶಿ ಬಂಡವಾಳಿಗರಿಗೆ ರತ್ನಗಂಬಳಿ ಹಾಸಿದ್ದಾರೆ. ಈ ಸಲ ೫ ಲಕ್ಷ ಕೋಟಿ ಬಂಡವಾಳ, ೧೦ ಲಕ್ಷ ಉದ್ಯೋಗ ಮತ್ತು ೨೦೨೦ರೊಳಗೆ ರಾಜ್ಯದ ಒಟ್ಟು ಉತ್ಪನ್ನ ದ್ವಿಗುಣಗೊಳ್ಳಬೇಕೆನ್ನುವ ಮಹತ್ವಕಾಂಕ್ಷೆಯನ್ನು ಕೈಗಾರಿಕಾ ಸಚಿವರು ಮತ್ತು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರು ವ್ಯಕ್ತಪಡಿಸಿದ್ದಾರೆ. ಅಮೆರಿಕದ ಭಾರೀ ಉದ್ದಿಮೆಪತಿ ವಾರನ್ ಬಫೆಟ್ ಅವರನ್ನೇ ಈ ಸಲ ಕರೆದು ಕೂರಿಸಲಾಗುವುದು ಎಂದು ಹೇಳಿಕೆ ನೀಡಿದ್ದರೂ ಅವರು ಒಪ್ಪಲಿಲ್ಲವೋ ಏನು ಕತೆಯೋ ಕೊನೆಗೆ ಜಪಾನು ಜರ್ಮನಿಗಳ ಉಪಸಚಿವ, ಉಪಪ್ರಧಾನಿಗಳ ಉಪಸ್ಥಿತಿಗೇ ತೃಪ್ತಿಪಟ್ಟುಕೊಳ್ಳಬೇಕಾಗಿದೆ. ನಮ್ಮ ಸರ್ಕಾರಗಳು ಕಳೆದ ೧೨ ವರ್ಷಗಳಿಂದ ಈ ವಿಶ್ವ ಹೂಡಿಕೆದಾರರ ಸಮ್ಮೇಳನಗಳನ್ನು (ಜಿಮ್) ಸಂಘಟಿಸುತ್ತಲೇ ಬಂದಿವೆ. ಮೊದಲ ಜಿಮ್ ೨೦೦೦ರ ಜೂನ್ ತಿಂಗಳಿನಲ್ಲಿ ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರವರ ನಾಯಕತ್ವದಲ್ಲಿ ಆಯೋಜನೆಗೊಂಡು ಆಗ ೧೩,೦೦೦ ಕೋಟಿ ರೂಪಾಯಿಗಳ ಬಂಡವಾಳ ಹೂಡಿಕೆ ಒಪ್ಪಂದಗಳಾಗಿದ್ದರೆ ಯಡಿಯೂರಪ್ಪನವರು ಹಾಗೂ ಮುರುಗೇಶ್ ನಿರಾಣಿಯವರು ಆಯೋಜಿಸಿದ್ದ ಕಡೆಯ ೨೦೧೦ರ ಜಿಮ್ ನಲ್ಲಿ ಸುಮಾರು ೫ ಲಕ್ಷ ಕೋಟಿ ರೂಪಾಯಿಗಳ ಹೂಡಿಕೆ ಒಪ್ಪಂದಗಳಾಗಿತ್ತು. ಹೀಗೆ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಇಂತಹ ಬೃಹತ್ ಬಂಡವಾಳ ಹೂಡಿಕೆದಾರರ ಸಮ್ಮೇಳನದಿಂದ ರಾಜ್ಯ ಮುಂದೆ ಚಲಿಸುತ್ತಿದೆಯೇ ಅಥವಾ ಅಭಿವೃದ್ಧಿಯ ಚಕ್ರ ನಿಂತಲ್ಲೇ ನಿಂತೆದೇಯೇ, ನಿಜಕ್ಕೂ ಇಲ್ಲಿ ಅಭಿವೃದ್ಧಿಯಾಗಬೇಕಾದ ಕ್ಷೇತ್ರಗಳು ಯಾವುದು ಮತ್ತು ಹಿಂದುಳಿಯುತ್ತಿರುವ ಕ್ಷೇತ್ರಗಳು ಯಾವುದು, ಇತ್ಯಾದಿ ಯಾವೊಂದು ಪ್ರಶ್ನೆಗಳನ್ನು ಗಂಭೀರವಾಗಿ ಹಾಕಿಕೊಳ್ಳದೇ ನಮ್ಮ ಸರ್ಕಾರ ನಡೆಸುವವರು ಕೇವಲ ಬಂಡವಾಳದ ಬೆನ್ನುಬಿದ್ದಿರುವ ಲಕ್ಷಣಗಳು ನಿಚ್ಚಳವಾಗಿ ಕಾಣುತ್ತಿವೆ.
ಕೇವಲ ಪ್ರಚಾರಕ್ಕೇ ಹತ್ತಾರು ಕೋಟಿ ರೂಪಾಯಿಗಳನ್ನು ಈ ಜಿಮ್ ಸಂದರ್ಭದಲ್ಲಿ ಖರ್ಚು ಮಾಡಲಾಗುತ್ತಿದೆ. ಎರಡು ದಿನಗಳ ಅವಧಿಯಲ್ಲಿ ಈ ಸಮಾವೆಶದಲ್ಲಿ ಭಾಗವಹಿಸುವ ಅತಿಥಿಗಳಿಗೆ ಸ್ಟಾರ್ ಹೋಟೆಲ್‌ಗಳಲ್ಲಿ ಅದ್ದೂರಿ ವ್ಯವಸ್ಥೆಗೆಂದೂ ಕೋಟ್ಯಂತರ ರೂಪಾಯಿಗಳ ವೆಚ್ಚವಾಗುತ್ತದೆ. ಇಷ್ಟೆಲ್ಲಾ ಆದರೂ ಅಂತಿಮವಾಗಿ ರಾಜ್ಯ ಪಡೆದುಕೊಳ್ಳುವುದೇನು ಎಂಬ ಪ್ರಶ್ನೆಗೆ ಉತ್ತರ ಕೇಳಿದರೆ ನಿರಾಸೆಯಾಗುತ್ತದೆ. ಯಾಕೆಂದರೆ ಕಳೆದ ೨೦೧೦ರ ಜಿಮ್‌ನ ಉದಾಹರಣೆಯನ್ನೇ ನೋಡಿ. ಆಗಲೂ ಇನ್ನಿಲ್ಲದ ನಿರೀಕ್ಷೆಗಳನ್ನು ಹುಟ್ಟಿಸಲಾಗಿತ್ತು. ಎರಡು ದಿನಗಳ ಸಮಾವೇಶದಲ್ಲಿ ಸುಮಾರು ೩.೯೨ ಲಕ್ಷ ಕೋಟಿ ರೂಪಾಯಿಗಳ ೩೮೯ ಒಡಂಬಡಿಕೆಗಳಿಗೆ ಸಹಿ ಬಿದ್ದಿದ್ದವು. ಆದರೆ ಇವುಗಳಲ್ಲಿ ಇದುವರೆಗೆ ಜಾರಿಯಾಗಿರುವವು ಕೇವಲ ೩೮ ಯೋಜನೆಗಳು. ೬೮ ಯೋಜನೆಗಳು ಇನ್ನೂ ಅನುಷ್ಠಾನ ಹಂತದಲ್ಲಿವೆ. ಎಸ್.ಎಂ.ಕೃಷ್ಣ ಕಾಲದಿಂದ ಲೆಕ್ಕ ಹಿಡಿದರೂ ಇದುವರೆಗಿನ ಒಟ್ಟು ಒಡಂಬಡಿಕೆಗಳಲ್ಲಿ ಜಾರಿಯಾಗಿರುವುದು ಕೇವಲ ಶೇಕಡ ೪೦ರಷ್ಟು ಮಾತ್ರ. ಆಗ ಅತಿ ಹೆಚ್ಚು ಬಂಡವಾಳ ಹೂಡಿಕೆ ಆಗಿದ್ದು ಬಳ್ಳಾರಿ ಜಿಲ್ಲೆಯಲ್ಲಿ. ಆದರೆ ಅಲ್ಲಿ ೩೫ ಕಂಪನಿಗಳು ಒಟ್ಟು ೧.೩೯ ಲಕ್ಷ ಕೋಟಿ ರೂಪಾಯಿ ಹೂಡಿಕೆ ಒಪ್ಪಂದ ಮಾಡಿಕೊಂಡಿದ್ದರಲ್ಲಿ ಅಂತಿಮವಾಗಿ ಬಂದದ್ದು ಕೇವಲ ೫ ಕಂಪನಿಗಳು ಮಾತ್ರ.
ಹಾಗಾದರೆ ಯಾಕೆ ಹೀಗೆ? ಈ ಸಲವೂ ಹೀಗೇ ಆಗುವುದಿಲ್ಲವೇ ಅಂದರೆ ಖಂಡಿತಾ ಈ ಸಲ ಆಗುವುದೂ ಹೀಗೆ ಎಂದು ಯಾವ ಅಳುಕಿಲ್ಲದೇ ಉತ್ತರಿಸಬಹುದು. ಯಾಕೆಂದರೆ ನಮ್ಮ ಸರ್ಕಾರದ ದೂರದೃಷ್ಟಿಯ ಕೊರತೆಯೇ ಪ್ರಮುಖ ಕಾರಣ. ಮುಖ್ಯವಾಗಿ ಕೈಗಾರಿಕಾ ಮತ್ತು ಸೇವಾ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆ ನಡೆಸ ಬಯಸುವ ಯಾವುದೇ ಕಂಪನಿಗೆ ಮೂಲಭೂತ ಸೌಕರ್ಯ ಎನ್ನುವುದು ಪೂರ್ವಶರತ್ತಾಗಿರುತ್ತದೆ. ಭೂಮಿ, ವಿದ್ಯುತ್ ಮತು ನೀರಿನ ಸೌಕರ್ಯಗಳು ಸಮರ್ಪಕವಾಗಿದ್ದರೇನೇ ಇದು ಸಾಧ್ಯ. ಆದರೆ ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಏನು ಏನೂ ಮಾಡದೇ ಕೇವಲ ಮಾತಿನಲ್ಲಿ ಎಲ್ಲವನ್ನೂ ಸಾಧಿಸುತ್ತದೆ.
ಕಳೆದ ಜಿಮ್‌ಗೆ ಮುನ್ನ ಕರ್ನಾಟಕ ಸಾರ್ಕಾರವು ಕೈಗಾರಿಕೆಗಳ ಸ್ಥಾಪನೆಗಾಗಿ ರಾಜ್ಯದಾದ್ಯಂತ ಒಟ್ಟು ೧.೧೯ ಲಕ್ಷ ಎಕರೆಗಳಷ್ಟು ಜಮೀನಿ ಸ್ವಾದೀನಪಡಿಸಿಕೊಳ್ಳುವ ಲ್ಯಾಂಡ್ ಬ್ಯಾಂಕ್ ಯೀಜನೆಯನ್ನು ಘೋಷಿಸಿತ್ತು. ಆದರೆ ಇದೊಂದು ಅತ್ಯಂತ ಮೂರ್ಖತನದ ಯೋಜನೆ ಎಂಬುದು ಸರ್ಕಾರಕ್ಕೆ ಅರಿವಾಗಲೇ ಇಲ್ಲ. ೨೦೧೦ರ ಜಿಮ್‌ನಲ್ಲಿ ಕೊರಿಯಾ ದೇಶದ ಪೋಸ್ಕೋ ಕಂಪನಿಯೊಂದಿಗೆ ಮಾಡಿಕೊಂಡ ಒಪ್ಪಂದಕ್ಕೆ ಪೂರಕವಾಗಿ ಉಕ್ಕು ತಯಾರಿಕಾ ಘಟಕ ಸ್ಥಾಪಿಸಲಿಕ್ಕಾಗಿ ಗದಗ ಜಿಲ್ಲೆಯ ಹಳ್ಳಿಗುಡಿಯ ೩೨೦೦ ಎಕರೆ ಜಮೀನನ್ನು ಸ್ವಾದೀನ ಮಾಡಿಕೊಳ್ಳಲು ಸರ್ಕಾರ ಹೊರಟೊಡನೆ ಈ ಪ್ರದೇಶದ ರೈತ ಸಮೂಹ ಎದ್ದು ನಿಂತು ಹೋರಾಟಕ್ಕಿಳಿಯಿತು. ಪ್ರಾಣ ಕೊಟ್ಟೇವು ಭೂಮಿ ಬಿಡೆವು ಎಂಬ ಘೋಷಣೆಯ ಈ ಹೋರಾಟಕ್ಕೆ ತೋಂಟದ ಸಿದ್ದಲಿಂಗ ಸ್ವಾಮೀಜಿಗಳು ನೇತ್ರತ್ವ ವಹಿಸಿದರು. ಮೇಧಾ ಪಾಟ್ಕರ್ ಅವರೂ ಬಂದರು. ಅಲ್ಲಿಗೆ ಸರ್ಕಾರ ಹಿಂದಡಿ ಇಡಲೇ ಬೇಕಾಯಿತು. ಇದೇ ರೀತಿ ಹೊಸಪೇಟೆ ತಾಲ್ಲೂಕಿನ ಗಾದಿಗನೂರು ಬಳಿ ಬೃಹತ್ ಉಕ್ಕಿನ ಕಾರ್ಖಾನೆ ಸ್ಥಾಪಿಸಲು ಮುಂದೆ ಬಂದಿದ್ದ ಭೂಷಣ್ ಸ್ಟೀಲ್ ಕಂಪನಿಗೆ ದರೋಜಿ ಕರಡಿಧಾಮದ ವನ್ಯಜೀವಿಗಳಿಗೆ ಅಪಾಯವಾಗುವ ಹಿನ್ನೆಲೆಯಲ್ಲಿ ಅನುಮತಿ ನಿರಾಕರಿಸಲಾಯಿತು. ಇಂತಹ ಉದಾಹರಣೆಗಳು ಒಂದೆಡೆ ಅನ್ನ ಬೆಳೆವ ರೈತನ ಹಿತಾಸಕ್ತಿಯನ್ನೇ ಬಲಿಕೊಡುವ ಸರ್ಕಾರದ ನೀತಿಗಳನ್ನು ತೋರಿಸಿದರೆ ಕೈಗಾರಿಕಗಳನ್ನು ಸ್ಥಾಪಿಸುವಾಗ ಬೇಕಾದ ಮುನ್ನೆಚ್ಚರಿಕೆಗಳಿಲ್ಲದಿಲ್ಲದಿರುವುದನ್ನು ತೋರಿಸುತ್ತದೆ.
ಜಿಮ್‌ನಂತಹ ದೊಡ್ಡ ಬಂಡವಾಳ ಹೂಡಿಕೆ ಸಮಾವೇಶದಲ್ಲಿ ಬಂಡವಾಳ ತೊಡಗಿಸಲು ಹೂಡಿಕೆದಾರರು ಹೆದರುವುದು ನಮ್ಮ ರಾಜಕಾರಣಿಗಳ ಭೂದಾಹವನ್ನು ನೋಡಿ. ಇದಕ್ಕೆ ಇಲ್ಲೊಂದು ಉದಾಹರಣೆ ನೋಡಿ. ೨೦೧೦ರ ಜಿಮ್‌ನಲ್ಲಿ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಇರುವ ದೇವನಹಳ್ಳಿಯ ಸುತ್ತಮುತ್ತ ಸುಮಾರು ೬೦೦೦ ಎಕರೆಗಳನ್ನು ಉದ್ಯಮಿಗಳಿಗೆ ಕೊಡುವ ಸಲುವಾಗಿ ಸರ್ಕಾರವು ಭೂಸ್ವಾಧೀನ ನಡೆಸಿದೆ ಎಂದು ಘೋಷಿಸಲಾಗಿತ್ತು. ಅಂದು ಸಮ್ಮೇಳನದಲ್ಲಿ ಭಾಗವಹಿಸಿದ ಹಲವಾರು ಕಂಪನಿಗಳಲ್ಲಿ ‘ಪಾಶ್ ಸ್ಪೇಸ್ ಇಂಟರ್ನ್ಯಾಷನಲ್ ಪ್ರೈವೇಟ್ ಲಿಮಿಟೆಡ್’ ಕೂಡಾ ಒಂದು. ಹೀಗೆ ಅಂದು ಉತ್ಸಾಹದಿಂದ ಭಾಗವಹಿಸಿದ್ದ ಈ ಕಂಪನಿಯ ಒಡೆಯ ಪಾಶ್ ಅವರಿಗೆ ಕೊನೆಗೆ ಗುಂಡಿಗೆ ಬಿದ್ದ ಅನುಭವವಾಗಿ ಮುರುಗೇಶ್ ನಿರಾಣಿಯವರ ವಿರುದ್ಧವೇ ನ್ಯಾಯಾಲಯದ ಮೆಟ್ಟಿಲನ್ನೂ ಏರಿದ್ದರು. ಯಾಕೆಂದರೆ ಅವರಿಗೆ ನೀಡಲಾದ ಜಮೀನನ್ನು ಅವರದ್ದಲ್ಲವೆಂದು ಅವರೇ ಒಪ್ಪಿಕೊಂಡಿರುವ ಅವರ ಸಹಿಯಿರುವ ಪತ್ರವೊಂದನ್ನು ಕೆಐಎಡಿಬಿ ಅಧಿಕಾರಿಗಳು ಆಲಂ ಅವರಿಗೆ ನೀಡಲಾಗಿತ್ತು. ಆಗ ಆಲಂ ಪಾಶ ಬೇಸ್ತು ಬಿದ್ದಿದರು. ಅದು ಅವರ ಫೋರ್ಜರಿ ಸಹಿಯಾಗಿತ್ತು ಎನ್ನುವುದು ಅವರ ವಾದ.
ಈಗ ರಾಜ್ಯದ ಸಣ್ಣ ಕೈಗಾರಿಗೆಗಳ ಒಕ್ಕೂಟವಾದ ಕಾಸಿಯಾವು ರಾಜ್ಯದಲ್ಲಿರುವ ಸುಮಾರು ೬.೫ ಲಕ್ಷ ಸಣ್ಣ ಕೈಗಾರಿಕೆಗಳಿಗೆ ಕಳೆದ ಎರಡು ವರ್ಷಗಳಲ್ಲಿ ಮೂರು ಪಟ್ಟು ಆಸ್ತಿ ತೆರಿಗೆ ಹೆಚ್ಚಿಸಲಾಗಿದ್ದರೆ ನಾನಾ ವಿನಾಯ್ತಿಗಳನ್ನು ನೀಡಿ ವಿದೇಸಿ ಹೂಡಿಕೆದಾರರಿಗೆ ರತ್ನಗಂಬಳಿಹಾಸುತ್ತಿರುವುದನ್ನು ವಿರೋಧಿಸುವುದಾಗಿ ಹೇಳಿದೆ.
ನಮ್ಮ ಕೈಗಾರಿಕಾ ಸಚಿವರಿಗೆ ಜಪಾನಿಗೆ ಹೋದಾಗ ಅಲ್ಲಿ ಓಡಾಡುವ ಅತಿವೇಗದ ರೈಲನ್ನು ನೋಡಿ ಅಂತದೇ ರೈಲನ್ನು ನಮ್ಮ ರಾಜ್ಯದಲ್ಲಿಯೂ ಓಡಿಸುವ ಮನಸ್ಸಾಗಿದೆಯಂತೆ. ಆದರೆ ನಮ್ಮ ಸಚಿವರಿಗೆ ಇದು ಮಾತ್ರ ಮಾದರಿಯಾಗುತ್ತದೆಯೇ ವಿನಃ ಸಂಪೂರ್ಣ ನೆಲಕ್ಕೆ ಬಿದ್ದಂತಹ ಸಂದರ್ಭದಲ್ಲಿಯೂ ಮತ್ತೆ ಜಗತ್ತಿನಲ್ಲಿ ಜಪಾನ್ ದೇಶಕ್ಕೆ ತಲೆ ಎತ್ತಿ ನಿಲ್ಲಲು ಕಾರಣವಾದ ಅದರ ಸ್ವಾಭಿಮಾನಿ ಆರ್ಥಿಕ ನೀತಿ ಗೋಚರವಾಗದಿರುವುದು ದುರಂತ. ನಮ್ಮ ಪರಾವಲಂಬಿ ನೀತಿಯಿಂದಲೇ ನಮ್ಮ ಜಿಮ್‌ನಲ್ಲಿ ಜಪಾನಿನ ಅತಿಥಿಗಳಿರುತ್ತಾರೆಯೇ ವಿನಃ ಅವರ ದೇಶಗಳ ಸಮಾವೇಶಗಳಲ್ಲಿ ನಮ್ಮರಿರುವುದಿಲ್ಲ.
ನಿಜಕ್ಕೂ ನಮ್ಮ ಸರ್ಕಾರಗಳಿಗೆ ರಾಜ್ಯವನ್ನು ಪ್ರಗತಿಯ ಪಥದಲ್ಲಿ ನಡೆಸುವ ಇಚ್ಛೆಯಿರುವುದಾದರೆ ಇಂತಹ ಜಿಮ್‌ಗಳು ಉಪಯೋಗಕ್ಕೆ ಬರುವುದಿಲ್ಲ ಎಂಬುದನ್ನು ಮೊದಲು ಅರಿಯಬೇಕು. ನಮ್ಮ ರಾಜ್ಯದ ಆರ್ಥಿಕತೆ ಎಂಬುದು ಎಷ್ಟೊಂದು ಅಸಮಾನವಾಗಿಬಿಟ್ಟಿದೆ ಎಂಬುದನ್ನಿ ಇತ್ತೀಚಿನ ಆರ್ಥಿಕ ಸಮೀಕ್ಷೆಯೇ ಹೇಳುತ್ತದೆ. ೨೦೧೧-೧೨ರ ಸಾಲಿನಲ್ಲಿ ನಮ್ಮ ಒಟ್ಟು ರಾಜ್ಯ ಉತ್ಪನ್ನ (ಜಿಎಸ್‌ಡಿಪಿ)ಯಲ್ಲಿ ಶೇಕಡ ೫೫ ರಷ್ಟು ಪಾಲು ಕೇವಲ ಸೇವಾ ಕ್ಷೇತ್ರ ಹೊಂದಿದ್ದರೆ, ಪ್ರಾಥಮಿಕ ಕ್ಷೇತ್ರವಾದ ಕೃಷಿ ಕ್ಷೇತ್ರದ ಪಾಲು ಕೇವಲ ಶೇಕಡ ೧೬.೨೨ ಮತ್ತು ಕೈಗಾರಿಕಾ ಕ್ಷೇತ್ರದ ಪಾಲು ಶೇಕಡ ೨೮.೬ ಮಾತ್ರ. ಹಾಗೆಯೇ ೨೦೧೨ ಮಾರ್ಚ್ ಅವಧಿಯ ಅಧಿಕೃತ ಅಂಕಿಅಂಶಗಳ ಪ್ರಕಾರ ರಾಜ್ಯದ ಕೃಷಿ ಕ್ಷೇತ್ರದ ಬೆಳವಣಿಗೆ ಕೇವಲ ಶೇ.೨.೯ರ ದರದಲ್ಲಿದ್ದರೆ ಕೈಗಾರಿಕೆಯ ಬೆಳವಣಿಗೆ ದರ ಕೇವಲ ಕೇವಲ ಶೇ.೩.೬. ಅದೇ ಸೇವಾ ಕ್ಷೇತ್ರದ ಬೆಳವಣಿಗೆ ಶೇಕಡ ೧೦.೬ ರಷ್ಟಿದೆ.
ನಮ್ಮ ಆರ್ಥಿಕ ಅಭಿವೃದ್ಧಿಯ ದುರಂತವೇ ಇದು. ಸೇವಾಕ್ಷೇತ್ರ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನಗಳೆಲ್ಲಾ ಅಭಿವೃದ್ದಿ ಹೊಂದುವುದು ಒಳ್ಳೇಯದೇ. ಬೆಂಗಲೂರು ಜಗತ್ತಿನಲ್ಲೇ ನಾಲ್ಕನೇ ದೊಡ್ಡ ತಂತ್ರಜ್ಞಾನ ಕೇಂದ್ರವಾಗಿರುವುದೂ ನಮಗೆ ಹೆಮ್ಮೆ ತರುವ ವಿಷಯ. ಆದರೆ ಇದೆಲ್ಲಾ ನಮ್ಮ ಕೃಷಿ ಮತ್ತು ಕೈಗಾರಿಕೆಗಳನ್ನು ಬಲಿ ಕೊಟ್ಟೇ ಆಗಬೇಕೆ? ಕೃಷಿ ಕೈಗಾರಿಕೆ ಮತ್ತು ಸೇವಾಕ್ಷೇತ್ರ ಮೂರರ ಬೆಳವಣಿಗೆಯನ್ನೂ ಸಮತೋಲನದಿಂದ ಕೊಂಡಿಯ್ದಾಗ ಮಾತ್ರ ನಿಜವಾದ ಸರ್ವತೋಮುಖ ಪ್ರಗತಿ ಸಾಧ್ಯವಲ್ಲವೇ? ಅದೇ ರೀತಿಯಲ್ಲಿ ಬಂಡವಾಳ ಹೂಡಿಕೆಯ ಪ್ರಧಾನ ಭಾಗ ಬೆಂಗಳೂರಿನ ಸುತ್ತ ಮುತ್ತಲೇ ಇರುತ್ತದೆ. ಈಗಾಗಲೇ ಎಲಾ ರೀತಿಯಲ್ಲೂ ಹೊರಲಾರದ ಭಾರ ಹೊತ್ತಿರುವ ಬೆಂಗಳೂರಿಗೆ ಇನ್ನೂ ಎಷ್ಟು ಭಾರ ಹೊರಿಸುತ್ತಾ ಹೋಗಬೇಕು? ಹೀಗೇ ಹೋದರ ಬೆಂಗಳೂರಿನ ನೀರಿನ ಸಮಸ್ಯೆ ಮತ್ತು ಟ್ರಾಫಿಕ್ ಸಮಸ್ಯೆಗಳೆರಡೂ ಅಪಾರ ಪ್ರಮಾಣಕ್ಕೆ ಉಲ್ಬಣಗೊಂಡಾಗ ನಮಗಿರುವ ಪರಿಹಾರವಾದರೂ ಏನು? ಈ ನಿಟ್ಟಿನಲ್ಲಿ ನಿವೃತ್ತ ಐಎಎಸ್ ಅಧಿಕಾರಿಯಾಗಿದ್ದ ಚಿರಂಜೀವಿ ಸೀಂಗ್ ಅವರು ತಾವು ನಗರಾಭಿವೃದ್ಧಿ ಕಾರ್ಯದರ್ಶಿಯಾಗಿದ್ದಾಗ ಹರಿಹರ-ರಾಣೇಬೆನ್ನೂರಿನಲ್ಲಿ ಎರಡನೇ ಹೊದ ರಾಜಧಾನಿಯೊಂದನ್ನು ಸ್ಥಾಪಿಸಲು ಸರ್ಕಾರದ ಮುಂದೆ ಸಲಹೆ ನೀಡಿದ್ದರು. ನಮ್ಮ ಇಂದಿನ ಪರಿಸ್ಥತಿಯಲ್ಲಿ ಅದು ರಾಜ್ಯದ ನಿಜವಾದ ಪ್ರಗತಿಗೆ ಸಹಾಕಾರಿಯಾಗಬಲ್ಲದು.
ಹೀಗಾಗಿ ಈ ದುಂದು ವೆಚ್ಚ ಮತ್ತು ಪೊಳ್ಳು ಒಡಂಬಡಿಕೆಗಳ ಜಿಮ್‌ಗಳ ಅನಿವಾರ್ಯತೆ ಇಂದು ಕರ್ನಾಟಕಕ್ಕಿಲ್ಲ ಎಂದಷ್ಟೆ ಹೇಳಬಹುದು.
(ದ ಸಂಡೆ ಇಂಡಿಯನ್ ಪತ್ರಿಕೆಯಲ್ಲಿ ಪ್ರಕಟಿತ ಲೇಖನ)
3 ಕಾಮೆಂಟ್‌ಗಳು:
ಹರ್ಷ ಅವರೇ, ಈ ಲೇಖನ ಉತ್ತಮ ಮಾಹಿತಿಯಿಂದ ಕೂಡಿದೆ.ನೀವು ಕೊಟ್ಟಿರುವ ಅನೇಕ ಅಂಕಿ,ಅಂಶಗಳು ನಿಮ್ಮ home work ಗೆ ಸಾಕ್ಷಿಯಾಗಿವೆ ಅನ್ನಬಹುದು.
ಆದರೆ ಒಂದು ಚಿಕ್ಕ ತಕರಾರಿದೆ. GIM ವೈಫಲ್ಯವಾಗುವದಕ್ಕೆ ರಾಜಕೀಯ ಇಚ್ಚಾಶಕ್ತಿ ಕೊರತೆಯೇ ಹೊರತು ಬೇರೆ ಯಾವ ಘನಂದಾರಿ ಕಾರಣಗಳೂ ಇಲ್ಲ.ಹಾಗಂತ GIM ನಂಥ ಚಟುವಟಿಕೆಗಳು
ನಿರರ್ಥಕವೆಂದು ಹೇಳಲಾಗದು.ಯಾಕಂದರೆ 'ಜಿಮ್' ಅನ್ನುವದು ಒಂದು exposure ಅಷ್ಟೇ!
ದೊಡ್ಡ ದೊಡ್ಡ ಕಂಪೆನಿಗಳು 'ಕ್ಯಾಂಪಸ್' ಕಡೆ ಯಾಕೆ ದೌಡಾಯಿಸುತ್ತವೆ ಹೇಳಿ? ಅಲ್ಲಿ ತಮಗೆ ಬೇಕಾದ ಅಭ್ಯರ್ಥಿಗಳು ಒಂದೇ ಕಡೆ ಸಿಗುತ್ತಾರೆ ಮತ್ತು ಅಲ್ಲಿ ಜಾಸ್ತಿ option ಗಳಿವೆ ಎಂಬ ಕಾರಣಕ್ಕೆ ತಾನೇ?
ಇಲ್ಲೂ ಅಷ್ಟೇ."ನೋಡಿ,ನಮ್ಮಲ್ಲಿ ಇಂತಿಂಥ ಕಡೆ ಇಂತಿಂಥ ಅವಕಾಶಗಳಿವೆ.." ಅಂತ ತೋರಿಸುವ ಕೆಲಸವನ್ನು 'ಜಿಮ್' ಮಾಡುತ್ತದೆ.ಆದರೆ ನಿಜವಾದ ಸಮಸ್ಯೆಯಿರುವದು ಉದ್ಯಮಿಯೊಬ್ಬ ಇಂಥದೊಂದು ಅವಕಾಶವನ್ನು ಬಳಸಿಕೊಳ್ಳಲು ಮುಂದಾದಾಗ-ಅಲ್ಲಿ ಏಳುವ ಸಮಸ್ಯೆಗಳು ಮತ್ತು ಅದನ್ನು ಬಗೆ ಹರಿಸುವ ನಿಟ್ಟಿನಲ್ಲಿ ಸರಕಾರಕ್ಕೆ vision ಇಲ್ಲದಿರುವದು.ನೀವು ಹೇಳಿದಂತೆ,ಹೋದಸಲದ ಜಿಮ್ ನಲ್ಲಿ ಬಂದಂಥ 'ಪೋಸ್ಕೋ' ಗದುಗಿನ ಬಳಿ ಭೂಮಿ ಕೇಳಿತು.ಸರಕಾರಕ್ಕೆ ಭೂಮಿ ಒದಗಿಸಲು ಸಾಧ್ಯವಾಗಲಿಲ್ಲ.ಮೂಲತಃ ಗದುಗಿನವನಾದ ನಾನು ಅಲ್ಲಿ ನಡೆದ ವಿಚಾರಗಳನ್ನೂ ಹೇಳುತ್ತಿದ್ದೇನೆ.ನಿಜ ಹೇಳಬೇಕೆಂದರೆ,ಶೇಕಡಾ ತೊಂಭತ್ತು ರೈತರು ತಮ್ಮ ಭೂಮಿಯನ್ನು ಕೊಡಲು ತಯಾರಾಗಿದ್ದರು.ಆದರೆ ಯೋಜನೆಗೆ ಅಡ್ಡ ಬಂದಿದ್ದು ಕೆಲವೇ ಕೆಲವು ಶಕ್ತಿಗಳು.ಆದರೆ ಸರ್ಕಾರಕ್ಕೆ ಇವೆಲ್ಲ ಅಡೆತಡೆಗಳನ್ನು ನಿವಾರಿಸುವ ಇಚ್ಚಾಶಕ್ತಿ ಇರಲಿಲ್ಲ.ಹೀಗಾಗಿ ಇಡೀ ಯೋಜನೆ ನಿಂತು ಹೋಯಿತು.ಇವತ್ತಿಗೂ ಅಲ್ಲಿನ ನನ್ನ ಗೆಳೆಯರು 'ಪೋಸ್ಕೋ' ವಿವಾದದ ಬಗ್ಗೆ ಬೇಜಾರಿನಿಂದ ಹೇಳುತ್ತಾರೆ.ತಮಾಷೆಯೆಂದರೆ,ಅವರಿಗೆ 'ಪೋಸ್ಕೊ'ದಿಂದ ಆಗುವ ಬೆಳವಣಿಗೆಗಳ ಬಗ್ಗೆ ಅಷ್ಟೊಂದು ಆಸೆ ಇರಲಿಲ್ಲ.ಅವರಿಗೆ ಇದ್ದಿದ್ದು ಬೇರೆ ತೆರನಾದ ಆಸೆ:'ಪೋಸ್ಕೊ'ಬಂದರೆ ಸರ್ಕಾರ ಆ ಕಂಪೆನಿಗೆ ನೀರು ಸರಿಯಾಗಿ ಒದಗಿಸಲೇಬೇಕು.ಹಾಗೇನಾದರೂ ಆದರೆ ಗದುಗಿನ ನೀರಿನ ಸಮಸ್ಯೆ ತೀರುತ್ತದೆ.ವಿದ್ಯುತ್ ಸಮಸ್ಯೆ ಕೂಡ ಹೀಗೇ ಸರಿಹೋದೀತು ಅಂತೆಲ್ಲ ಆಸೆಯಿದ್ದವು..
ನನ್ನ ಪ್ರಶ್ನೆ ಏನಂದರೆ,'ಪೋಸ್ಕೋ'ದಂಥ ಯೋಜನೆ ಯಾವ ಕ್ಷೇತ್ರಕ್ಕೆ ಹೋದರೂ ಅದನ್ನು ತಡೆಯಲು ಆಯಾ ಕ್ಷೇತ್ರಗಳಲ್ಲಿ obstacles ಇದ್ದೇ ಇರುತ್ತವೆ.ಬಂದೇ ಬರುತ್ತವೆ.ಹಾಗಂತ ಯೋಜನೆಯನ್ನು ನಿಲ್ಲಿಸಲು ಆಗುತ್ತದೆಯೇ?ಹೀಗೇ ಮಾಡುತ್ತಾ ಹೋದರೆ ನಮ್ಮಲ್ಲಿ ಯಾವ ದೊಡ್ಡ ಯೋಜನೆಗಳೂ ಬರುವದಿಲ್ಲ.ಸ್ವಲ್ಪ ಯೋಚಿಸೋಣ:ಒಂದು ದೊಡ್ಡ ಯೋಜನೆ ಬಂದರೆ ಅಲ್ಲಿ ಸಾವಿರಾರು ಉದ್ಯೋಗಗಳು ಹುಟ್ಟುತ್ತವೆ.ಅಷ್ಟೇ ಅಲ್ಲ,ಆ ಯೋಜನೆಗೆ ಪೂರಕವಾಗಿ ನೂರಾರು ಸಣ್ಣ ಸಣ್ಣ subcontractor ಹುಟ್ಟುತ್ತವೆ.ಆ ನೂರು ಸಣ್ಣ ಸಣ್ಣ ಉದ್ದಿಮೆಗಳನ್ನು ನಂಬಿಕೊಂಡು ಮತ್ತೊಂದಿಷ್ಟು ಪೂರಕ ಉದ್ಯೋಗಗಳು ಹುಟ್ಟುತ್ತವೆ.ಬೆಂಗಳೂರಿನಲ್ಲಿ ಹೌಸ್ ಕೀಪಿಂಗ್ ಉದ್ಯಮ ಹ್ಯಾಗೆ ಬಂತು?ಸೆಕ್ಯೂರಿಟಿ ಉದ್ಯಮ ಹ್ಯಾಗೆ ಬೆಳೀತು?ಹೀಗೇ ಪೂರಕ ವಾತಾವರಣದಿಂದ ಅಲ್ಲವೇ?
so,GIM ನಂಥ ಚಟುವಟಿಕೆಗಳು ಅವಶ್ಯಕ.ಜೊತೆಗೆ ಅದಕ್ಕೆ ಪೂರಕವಾದ ವಿಶನ್ ತೀರ ಅವಶ್ಯಕ..
ಪ್ರಿಯ ರಾಘವೇಂದ್ರ ಸರ್, ಬಹಳ ಮೂಲಭೂತವಾಗಿ ನನ್ನ ಸಮಸ್ಯೆಯೇನೆಂದರೆ ಹೀಗೆ ಪೋಸ್ಕೋ, ಮಿತ್ತಲ್ ನಂತಹ ದೊಡ್ಡ ದೊಡ್ಡ ಕಂಪನಿಗಳು ಹೂಡುವ ಬಂಡವಾಳ ನಿಜಕ್ಕೂ ನಮ್ಮನ್ನು ಉದ್ದಾರ ಮಾಡುತ್ತದೆಯಾ ಅನ್ನುವುದರ ಬಗ್ಗೆ ಗುಮಾನಿಯಿರುವುದು. ಜಾಗತೀಕರಣದ ಲಾಭಗಳ ಉಮೇದಿನಲ್ಲಿ ನಾವು ನಿಜಕ್ಕೂ ಕಳೆದುಕೊಳ್ಳುತ್ತಿರುವುದರ ಅರಿವೇ ಇಲ್ಲದಂತಿದ್ದೇವಲ್ಲವೇ? ಅಗಾಧವಾದ ನಮ್ಮ ಸಂಪನ್ಮೂಲಗಳು, ಖನಿಜ ಸಂಪತ್ತು, ಮಾನವ ಸಂಪತ್ತು ಅಗ್ಗದ ಕೂಲಿ, ಸಿಕ್ಕಾಪಟ್ಟೆ ವಿನಾಯತಿಗಳ ಕಾರಣಕ್ಕೆ ಬರುವ ಕಂಪನಿಳ ಲಾಭವನ್ನು ಮಾತ್ರ ಹೆಚ್ಚಿಸುತ್ತಿಲ್ಲವಾ? ನಾವು ನಮ್ಮಲ್ಲಿ ಉದ್ಯೋಗ ಸೃಷ್ಟಿಗೆ ನಮ್ಮ ಎಲ್ಲಾ ತಾಲ್ಲೂಕುಗಳಲ್ಲಿ, ಜಿಲ್ಲೆಗಳಲ್ಲಿ ಸಣ್ಣ ಮಟ್ಟದ ಸಾವಿರಾರು ಫ್ಯಾಕ್ಟರಿಗಳನ್ನು ಸ್ಥಾಪಿಸುವುದೇ ಆದರೆ, ನಮ್ಮ ಖನಿಜ ಸಂಪತ್ತುಗಳಿಂದ ನಾವೇ ಸಿದ್ಧ ವಸ್ತುಗಳನ್ನು ತಯಾರಿಸಿ ರಫ್ತುಮಾಡುವ ಹಾಗೆ ಆದರೆ, ಕೃಷಿ ಬದುಕು ರೈತರಾದವರಿಗೆ ನಿಜಕ್ಕೂ ಲಾಭದಾಯಕವಾಗುವಂತೆ ಮಾಡಿದರೆ, ಕೃಷಿಯನ್ನಾಧರಿಸಿದ ಕೈಗಾರಿಕೆ ಮತ್ತು ಇವುಗಳೀಗೆ ಪೂರವಾದ ಸೇವಾಕ್ಷೇತ್ರ ಬೆಳವಣಿಗೆಯಾದರೆ, ಯಾಕೆ ಉದ್ಯೋಗಗಳ ಸೃಷ್ಟಿಯಾಗುವುದಿಲ್ಲ? 'What is important is not Mass production but production by Masses' ಎಂಬ ಗಾಂಧೀಜಿಯವರ ಸೂತ್ರವನ್ನು ಒಂದು ಮಟ್ಟಕ್ಕಾದರೂ ಪಾಲಿಸಿಕೊಂಡು ಹೋದರೆ ಪ್ರಗತಿ ಆಗುವುದಿಲ್ಲವಾ? ದೊಡ್ಡ ಪ್ರಮುಖ ಉದ್ದಿಮೆಗಳ ಅನಿವಾರ್ಯತೆ ಖಂಡಿತಾ ಇದೆ. ಆದರೆ ದೊಡ್ಡ ಕಂಪನಿಳು ಸಾಮಾನ್ಯವಾಗಿ ತಮ್ಮ ಲಾಭದ ದರ ಹೆಚ್ಚಿಸಿಕೊಳ್ಳುವುದಕ್ಕಾಗಿ ಹೆಚ್ಚೆಚ್ಚು ಯಂತ್ರೀಕರಣದ ಮೊರೆಹೋಗುತ್ತವೆಯೇ ವಿನಃ ಉದ್ಯೋಗಿಗಳ ಮೊರೆಯನ್ನಲ್ಲ. ಬಹುಶಃ 60-70ರ ದಶಕದಲ್ಲಿ ಚೀನಾ ಯಾವ ಮಾನದಂಡಗಳ ಮೂಲಕ ಅಭೂತಪೂರ್ವ ಕೈಗಾರಿಕಾ ಪ್ರಗತಿಯನ್ನು ಸಾಧಿಸಿತೋ ಅಂತಹ ನೀತಿ ಇವತ್ತು ನಮಗೆ ಬೇಕಿದೆ. ಹಾಗೆ ಮಾಡಿದಾಗ ಮಾತ್ರ ಇಂದು ಚೀನಾ ಸಾಧಿಸಿರುವ ಪ್ರಗತಿಯನ್ನು ನಾವು ಇನ್ನು 20-30 ವರ್ಷಗಳಲ್ಲಿ ಸಾಧಿಸಬಹುದು ಅನ್ನಿಸುತ್ತೆ.. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ ಸರ್.
Dear Harsha,
I fully agree with your view point, but it has been a huge asking from the present Industry Minister, who openly confessed that he happens to be an industrialist first and then being a representative of the Government as a Minister. He has a fantastic vision of creating huge personal wealth out of this portfolio. When it comes to state interest, I am sorry this article does not convey anything to him.
Obscene capitalism is the bane of the current century and any vision through this prism would be total harmful to the society we live in. It is high time that the Government should limit itself to Govern ably and desist from acting as a real estate agent. Why is the Government interested in creating land bank? At best it should facilitate the process of land sale between the land owners and to the land buyers through single window agency to ensure the prospective industrialists are supported duly and in time. Well this does not fetch anything to the personal pockets of people governing. Why do not the state try to learn something from its own political party run Gujarat administration, particularly the land acquisition part??
Regards,
Maiya
ಕಾಮೆಂಟ್ ಪೋಸ್ಟ್ ಮಾಡಿ