ಡಿಸೆಂಬರ್ 22, 2011

ಇಂದು ನಾವು ಮರೆತಿರುವುದು ಮನುಷ್ಯತ್ವವನ್ನು- ಡಾ.ನಾ.ಡಿಸೋಜಾ(ಚಿಕ್ಕಂದಿನಿಂದಲೂ ನಾಡಿ ಸರ್ ಬಗ್ಗೆ ಅತೀವ ಅಭಿಮಾನ ಮತ್ತು ಪ್ರೀತಿ ನನಗೆ. ಸಾಗರದ ಸ್ಥಳಿಯು ಪತ್ರಿಕೆಗಳಲ್ಲಿ ಆಗಾಗ ಓದುತ್ತಿದ್ದ ಅವರ ಕತೆಗಳು ನನ್ನನ್ನು ವಿಶಿಷ್ಟ ಪ್ರಪಂಚಕ್ಕೆ ಒಯ್ಯುತ್ತಿದ್ದವು. ನಾನು ಪಿಯುಸಿಯಲ್ಲಿದ್ದಾಗ ಓದಿದ ಅವರ ಕಾದಂಬರಿಕೊಳಗಮತ್ತುಮುಳುಗಡೆಬಹಳ ಪ್ರಭಾವಿಸಿದ್ದವು. ನಾನು ಹುಟ್ಟಿ ಬೆಳೆದದೀವರುಸಮುದಾಯದ ಶ್ರೀಮಂತ ಸಾಂಸ್ಕೃತಿಕ ಹಿನ್ನೆಲೆ, ಸಮುದಾಯ ಗೇಣಿದಾರರಾಗಿ ಬದುಕಿದ ದಾರುಣ ಇತಿಹಾಸ ಹಾಗೂ ಶತಮಾನಗಳ ದೌರ್ಜನ್ಯವನ್ನು ಎದುರಿಸಿ ಅದು ನಡೆಸಿದಕಾಗೋಡು ಸತ್ಯಾಗ್ರಹ ಸಂಘರ್ಷವನ್ನು ಕಣ್ಣಿಗೆ ಕಟ್ಟಿದಂತೆ ವರ್ಣಿಸಿತ್ತುಕೊಳಗಕಾದಂಬರಿ. ನಾಡಿಯವರ ಅನೇಕ ಕತೆಗಳೂ ಅಷ್ಟೇ ಪರಿಣಾಮಕಾರಿಯಾಗಿರುವಂತವು. ಜಾತಿ-ಮತಗಳ ಚೌಕಟ್ಟಿನಿಂದ ನಮ್ಮನ್ನು ಮನುಷ್ಯರಾಗುವತ್ತ ನಮ್ಮನ್ನು ಕೊಂಡೊಯ್ಯುವ ಶಕ್ತಿ ಅವಕ್ಕಿದೆ. ಕೆಲವು ವರ್ಷಗಳ ಹಿಂದೆ ಶಿವಮೊಗ್ಗದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ನಾಡಿಯವರ ಬಗ್ಗೆ ವಿಶೇಷ ಮೆಚ್ಚಿಗೆ ಉಂಟಾಗಿತ್ತು. ಆಗ ಸಮ್ಮೇಳನ ಅಧ್ಯಕ್ಷರಾಗಿ ಅವರು ಮಾಡಿದ್ದ ಅಧ್ಯಕ್ಷೀಯ ಭಾಷಣ ಅದ್ಭುತವಾದದ್ದು. ಯಾವ ರಾಜಕಾರಣಿಗೂ ಮುಲಾಜು ನೋಡದೇ ಸತ್ಯದ ಪರವಾಗಿ ನಿಂತಿದ್ದರು. ಹಾಗೆಯೇ ಮಲೆನಾಡಿನ ಪರಿಸರಕ್ಕೆ ಕುತ್ತು ಬಂದಾಗ ಜನರೊಂದಿಗೆ ಒಂದಾಗಿ ಸರ್ಕಾರಕ್ಕೆ ಸೆಡ್ಡು ಹೊಡೆದು ನಿಂತವರು ನಾಡಿ. ಮಾಜಿ ಪ್ರಧಾನಿ ದೇವೇಗೌಡರ ಕೃಪೆಯಿಂದಾಗಿ ಮಲೆನಾಡಿನ ಲಕ್ಷಾಂತರ ಎಕರೆ ಕಾಡು, ಗುಟ್ಟ, ಬೆಟ್ಟಗಳು ಆಸ್ಷ್ರೇಲಿಯಾದ ಗಣಿಕಾರಿಕೆ ಕಂಪನಿಗಳ ಪಾಲಾಗುವುದರಲ್ಲಿತ್ತು. ಆಗ ಸಾಗರ ಸೀಮೆಯ ಜನರು ದಂಗೆಯೆದ್ದಿದ್ದಾಗ ನಾಡಿಇಕ್ಕೇರಿಯ ಮೇಲೆ ವಿಮಾನ ಹಾರಿದ್ದುಎಂಬ ಕತೆ ಬರೆದಿದ್ದು ವ್ಯಾಪಕ ಪ್ರಭಾವ ಬೀರಿತ್ತು. ಮಲೆನಾಡಿನ ಸಾಗರದಂತಹ ಸಣ್ಣ ಪಟ್ಟಣದಲ್ಲಿದ್ದುಕೊಂಡೇ ೪೦೦ಕ್ಕೂ ಹೆಚ್ಚು ಸಣ್ಣಕತೆಗಳನ್ನೂ, ೬೦ ಕ್ಕೂ ಹೆಚ್ಚು ಕಾದಂಬರಿಗಳನ್ನೂ, ಅದರಲ್ಲಿ ೨೫ಕ್ಕೂ ಹೆಚ್ಚು ಮಕ್ಕಳ ಕಿರುಕಾದಂಬರಿಗಳನ್ನೂ, ೩೦೦ಕ್ಕೂ ಹೆಚ್ಚು ಬಿಡಿಲೇಖನಗಳನ್ನೂ ಬರೆದು ಕನ್ನಡ ಸಾರಸ್ವತ ಲೋಕಕ್ಕೆ ಗಣನೀಯ ಸೇವೆ ಸಲ್ಲಿಸಿರುವ ಸಾಹಿತಿ, ಚಿಂತಕ ಹಾಗೂ ಮಾನವತವಾದಿ ಡಾ.ನಾ.ಡಿಸೋಜಾ ಅವರನ್ನು ಸಂಡೆ ಇಂಡಿಯನ್ಪತ್ರಿಕೆಯ ಸಾಕ್ಷಿಪ್ರಜ್ಞೆಅಂಕಣಕ್ಕಾಗಿ ಸಂದರ್ಶಿಸುವ ಸುಸಂದರ್ಭ ನನಗೆ ಒದಗಿ ಬಂದಿತು. ಸಾಗರದ ಯುವ ಪತ್ರಕರ್ತ ಮಿತ್ರ ವಿಶ್ವಾಸ್ ಭಾರದ್ವಾಜ್‌ನನ್ನು ಜೊತೆ ಮಾಡಿಕೊಂಡು ಪ್ರಸಕ್ತ ರಾಜಕೀಯ, ಸಾಹಿತ್ಯ, ಸಿನಿಮಾ ಇತ್ಯಾದಿಗಳ ಬಗ್ಗೆ ನಾಡಿಯವರೊಂದಿಗೆ ನಡೆಸಿದ ಮಾತುಕತೆ ಇಲ್ಲಿದೆ.)
ಇತ್ತೀಚೆಗೆ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಸಚಿವ ಗೋವಿಂದ ಕಾರಜೋಳ ಅವರು ಸಾಹಿತಿಗಳಿಗೆ ಹಣವನ್ನೂ ಕೊಡಬೇಕು, ಅವರಿಂದ ಬೈಸಿಕೊಳ್ಳಲೂಬೇಕಾಗಿದೆ ಎಂದು ವ್ಯಂಗ್ಯವಾಡಿದರು. ನಾಡಿನ ಒಬ್ಬ ಪ್ರಮುಖ ಸಾಹಿತಿಯಾಗಿ ಏನು ಪ್ರತಿಕ್ರಿಯಿಸುತ್ತೀರಿ?
ಗೋವಿಂದ ಕಾರಜೋಳ ಹೇಳಿದ್ದು ತಪ್ಪು. ಸರ್ಕಾರದ ಹಣ ಎಂದರೆ ಅದು ಜನರ ಹಣ. ಸಾಹಿತಿಗಳು ಯಾವತ್ತೂ ವಾಸ್ತವವನ್ನು ಮಾತನಾಡಿದ್ದಾರೆಯೇ ಹೊರತು ಟೀಕೆ ಮಾಡಿಲ್ಲ. ಸಾಹಿತಿಯಾದವನಿಗೆ ಸಮಾಜದಲ್ಲಿ ಒಂದು ಬದ್ಧತೆಯಿರುತ್ತದೆ. ನಾಡಿನಲ್ಲಿ, ದೇಶದಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ಆತ ಗಮನಿಸುತ್ತಾ ಹೋಗುತ್ತಾನೆ. ಅದರ ಬಗ್ಗೆ ಅವನು ಹೇಳಲೇಬೇಕು. ಇಲ್ಲವಾದರೆ ಅವನಿಗೆ ಬದ್ಧತೆಯಿಲ್ಲ ಎಂದಾಗುತ್ತದೆ. ಸಾಹಿತಿಗಳು ರಾಜಕಾರಣಿಗಳ ಬಗ್ಗೆ ಮಾತನಾಡುತ್ತಾರೆ ಎಂದರೆ ಅದಕ್ಕೆ ರಾಜಕಾರಣಿಗಳ ಕಾರ್ಯವೈಖರಿಯೇ ಕಾರಣ. ಇಂದಿನ ರಾಜಕಾರಣದ ಬಗ್ಗೆ ಪ್ರತಿಯೊಬ್ಬರಿಗೂ ಅತೃಪ್ತಿ ಇದೆ.

ಶಿವಮೊಗ್ಗ ಜಿಲ್ಲೆಯವರೇ ಆದ ಯಡಿಯೂರಪ್ಪನವರು ಮೂರು ವರ್ಷ ಅಧಿಕಾರ ನಡೆಸಿದ್ದಾರೆ. ಸಂದರ್ಭದ ರಾಜಕೀಯ ಸ್ಥಿತ್ಯಂತರಗಳ ಬಗ್ಗೆ ಜಿಲ್ಲೆಯವರೇ ಅಗಿ ನೀವೆನು ಹೇಳುತ್ತೀರಿ?
ಮುಖ್ಯಮಂತ್ರಿಗಳಿಂದ ಕೆಲವು ಒಳ್ಳೆ ಕೆಲಸಗಳಾಗಿವೆ. ಉದಾಹರಣೆಗೆ ಸಾಗರ ರೈಲು ಮಾರ್ಗಕ್ಕೆ ೧೫೦ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದು. ಅದನ್ನು ಮಾಡದಿದ್ದರೆ ಕೇಂದ್ರವೂ ಹಣ ಮಂಜೂರು ಮಾಡುತ್ತಿರಲಿಲ್ಲ. ಅವರು ಬಹಳ ಪ್ರಗತಿಯ ಕೆಲಸಗಳನ್ನು ಮಾಡಿದ್ದಾರೆ. ಆದರೆ ಪ್ರಗತಿಯಾವುದು ಎಂಬ ಬಗ್ಗೆ ಬಹಳ ಅನುಮಾನಗಳಿವೆ. ಯಡಿಯೂರಪ್ಪನವರು ಹೇಳುವಪ್ರಗತಿಖಂಡಿತ ಪ್ರಗತಿಯಲ್ಲ. ಪ್ರಗತಿ ಶುರುವಾಗಬೇಕಾದದ್ದು ಸಮಾಜದ ಕೆಳವರ್ಗಗಳಿಂದ. ಕೆಳವರ್ಗದ ಸಮುದಾಯಗಳಿಗೆ ಇವರು ಏನು ಕೊಟ್ಟಿದ್ದಾರೆ? ಇಂದು ರೈತರಿರಬಹುದು, ಕೂಲಿಕಾರ್ಮಿಕರಿರಬಹುದು ಬಹಳ ಕಷ್ಟದಲ್ಲಿದ್ದಾರೆ. ಆದರೆ ಕೆಳವರ್ಗಗಳಿಗೆ ಯಡಿಯೂರಪ್ಪನವರಪ್ರಗತಿಏನು ಮಾಡಿದೆ. ಭ್ರಷ್ಟಾಚಾರದ ಆರೋಪದಲ್ಲಿ ಅವರು ಜೈಲಿಗೂ ಹೋಗಿ ಬಂದರು. ಜೈಲಿಗೆ ಹೋಗುವುದೇ ಒಂದು ಅಪರಾಧ ಅಲ್ಲ. ನ್ಯಾಯಾಲಯ ಏನು ನಿರ್ಣಯ ನೀಡುತ್ತದೆ ಎನ್ನುವುದು ಬಹಳ ಮುಖ್ಯ. ಆದರೆ ಇನ್ನೂ ತೀರ್ಪು ಬರುವುದರೊಳಗೇ ಯಡಿಯೂರಪ್ಪನವರು ನಾನೇ ಮತ್ತೆ ಮುಂದಿನ ಮುಖ್ಯಮಂತ್ರಿ ಎಂದು ಹೇಳುತ್ತಿರುವುದು ನಿಜಕ್ಕೂ ನಾಚಿಕೆಗೇಡಿನ ವಿಷಯ. ಜೈಲಿಗೆ ಹೋಗಿ ಬಂದ ಮೇಲೆ ಸ್ವಲ್ಪವಾದರೂ ಅವರು ಸ್ವಲ್ಪವಾದರೂ ವಿನೀತರಾಗಿರಬೇಕಿತ್ತು. ಇಂದು ನಡೆಯುತ್ತಿರುವುದು ನಿಜಕ್ಕೂ ಬಹಳ ಹೊಲಸು ರಾಜಕೀಯ.

ಬೆಳಗಾವಿಯಲ್ಲಿ ಇತ್ತೀಚೆಗೆ ನಡೆದ ಬೆಳವಣಿಗೆ ಬಗ್ಗೆ ಏನು ಹೇಳುತ್ತೀರಿ?
ಬೆಳವಣಿಗೆ ಅಗಬೇಕಿತ್ತು. ಕರ್ನಾಟಕ ಸರ್ಕಾರಕ್ಕೂ ಗಡಸುತನ ಇದೆ ಎನ್ನುವುದು ತೋರಬೇಕಿತ್ತು. ಬೆಳಗಾವಿ ಎಂದೆಂದಿಗೂ ನಮ್ಮದೇ ಆಗಿತ್ತು, ಆಗಿಯೇ ಇರುತ್ತದೆ. ಇದೇ ಹೊತ್ತಿಗೆ ಗಡಿ ಭಾಗದಲ್ಲಿ ಸರ್ಕಾರ ಅಭಿವೃದ್ಧಿ ಕೆಲಸಗಳನ್ನೂ ಹೆಚ್ಚಿನ ಪ್ರಮಾಣದಲ್ಲಿ ಹಮ್ಮಿಕೊಳ್ಳಬೇಕಿದೆ. ಗಡಿಯ ರೈತರ, ಕಾರ್ಮಿಕರ ಜೀವನ ಮಟ್ಟ ಸುಧಾರಿಸಬೇಕು. ಬರೀ ಘೋಷಣೆಗಳಿಂದ ಬೆಳಗಾವಿಯನ್ನು ಉಳಿಸಿಕೊಳ್ಳಲು ಆಗುವುದಿಲ್ಲ.

ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸುವ ಕೆಲಸಕ್ಕೆ ಸರ್ಕಾರ ಮುಂದಾಗಿರುವ ಕುರಿತು?
ಮೊದಲನೆಯದಾಗಿ ಕನ್ನಡಿಗರ ಹೆದರಿಕೆ ಕರ್ನಾಟಕ ಸರ್ಕಾರಕ್ಕಿಲ್ಲ. ಏನು ಬೇಕಾದರೂ ಮಾಡಿಕೊಂಡು ಹೋಗುತ್ತೇವೆ ಎನ್ನುವ ಧೈರ್ಯಅದೇ ಕೇರಳ, ಮಹಾರಾಷ್ಟ್ರ, ತಮಿಳುನಾಡುಗಳಲ್ಲಿ ಜನರು ಕೊಳ್‌ಪಟ್ಟಿ ಹಿಡಿದು ಕೇಳುತ್ತಾರೆ. ಶಾಲೆಯಲ್ಲಿ ಕಡಿಮೆ ಮಕ್ಕಳಿರುವುದು ಒಂದು ತಾಂತ್ರಿಕ ಸಮಸ್ಯೆಯಾಗಿ ಇರಬಹುದು. ಆದರೆ ಯಾರನ್ನೂ ಕೇಳದೇ ಏಕಾಏಕಿ ತರದ ಒಂದು ನಿರ್ಣಯವನ್ನು ತೆಗೆದುಕೊಳ್ಳುವುದು ಸರಿಯಲ್ಲ. ಮತ್ತೊಂದು ಕಡೆಯಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಸರ್ಕಾರ ಹಿಡಿತದಲ್ಲಿಟ್ಟುಕೊಳ್ಳದೇ ಅವು ಇಂದು ರಾಕ್ಷಸಾಕಾರದಲ್ಲಿ ಬೆಳೆದು ನಿಂತಿವೆ. ದೊಡ್ಡ ನಗರಗಳ ಕೆಲ ಕಾನ್ವೆಂಟುಗಳಿಲ್ಲಿ ಪ್ರತಿ ಮಗು ದಿನಕ್ಕೆ ನೂರು ರೂಪಾಯಿ ಪಾಕೆಟ್ ಮನಿ ತರಬೇಕು ಎಂಬ ನಿಯಮವೂ ಇದೆಯಂತೆ. ಶಾಲೆಗಳಲ್ಲಿ ಕೊಕೊ ಕೊಲಾ, ವಿದೇಶೀ ಪಾನೀಯಗಳೆಲ್ಲಾ ಸಿಗುತ್ತದಂತೆ. ಹೀಗಾದರೆ ನಾವು ಎಲ್ಲಿಗೆ ಕರೆದುಕೊಂಡು ಹೋಗ್ತಿದೀವಿ ಮಕ್ಕಳನ್ನು? ಹಳ್ಳಿಗಳಲ್ಲಿ ಸಹ ಈಗ ಕಾನ್ವೆಂಟು ವ್ಯಾಮೋಹ ಇದೆ. ಅದನ್ನು ಮೊದಲು ತೆಗೆಯಬೇಕು. ಆದರೆ ಇದು ಬಹಳ ಕಷ್ಟದ ಕೆಲಸ.

ಮೂರು ವರ್ಷಗಳ ಬಿಜೆಪಿ ಸರ್ಕಾರದ ಆಡಳಿತಕ್ಕೆ ನೂರಕ್ಕೆ ಎಷ್ಟು ಅಂಕ ನೀಡುತ್ತೀರಿ?
ಇಪ್ಪತ್ತೈದು.
 
ಮೊನ್ನೆ ನಡೆದ ಸಮ್ಮೇಳನದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಾಹಿತಿಗಳನ್ನೇ ನೇಮಿಸಬೇಕು ಎಂಬ ಸಮ್ಮೇಳನಾಧ್ಯಕ್ಷರ ಅಭಿಪ್ರಾಯವನ್ನು ಒಪ್ಪುತ್ತೀರಾ?
೧೯೫೯ರಲ್ಲಿ  ಜಿ.ನಾರಾಯಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದರು. ಅವರು ಅದ್ಭುತವಾಗಿ ಸಮ್ಮೇಳನ, ಮೆರವಣಿಗೆಗಳನ್ನು ನಡೆಸಿದ್ದರು. ಆದರೆ ಅವರು ಒಂದು ಪತ್ರಿಕೆಗೆ ಸಂಪಾದಕರಾಗಿದ್ದು ಬಿಟ್ಟರೆ ಏನೂ ಬರೆದಿಲ್ಲ. ಅವರು ಸಾಹಿತಿ ಅಲ್ಲ. ಹರಿಕೃಷ್ಣ ಪುನರೂರು ಏನು ಬರೆದಿದ್ದಾರೆ? ಸಾಹಿತಿ ಅಲ್ಲದಿದ್ದವರೂ ಸಾಕಷ್ಟು ಕೆಲಸ ಮಾಡಲು ಸಾಧ್ಯವಿದೆ. ಹೀಗಾಗಿ ರೀತಿ ಒಂದು ಕಾನೂನು ಎಂದು ಮಾಡುವ ಅಗತ್ಯ ಇಲ್ಲ. ಕನ್ನಡಕ್ಕಾಗಿ ಕೆಲಸ ಮಾಡಬೇಕು. ಅದನ್ನು ಸಾಹಿತಿಗಳು ಮಾಡಲು ಸಾಧ್ಯವಿದೆಯೇ ಎಂಬುದು ಮೊದಲು ನೋಡಬೇಕು. ಆಡಳಿತದ ಕೆಲಸದ ರೀತಿ ಬಹಳ ಕಷ್ಟದ ಅದು. ಸಾಹಿತಿಗಳ ಕೈಯಲ್ಲಿ ಅದು ಆಗುವುದಿಲ್ಲ. ಅವರು ಎಲ್ಲೋ ತಮ್ಮ ಕೆಲಸ ಮಾಡಿಕೊಂಡು ಬರೆದುಕೊಂಡಷ್ಟೇ ಇರಬಲ್ಲರು.

ಹೊಸತಲೆಮಾರಿನವರ ಸಾಹಿತ್ಯ ಸೃಷ್ಟಿಯನ್ನು ನೋಡಿದಾಗ ನಿಮಗೇನನ್ನಿಸುತ್ತಿದೆ?
ನಿಜಕ್ಕೂ ಇಂದಿನ ಹೊಸ ತಲೆಮಾರಿನ ಅನೇಕ ಲೇಖಕರು ಬಹಳ ಜವಾಬ್ದಾರಿಯಿಂದ ಬರೆಯುತ್ತಿದ್ದಾರೆ. ಅವರಿಗೆ ಸಾಹಿತ್ಯವನ್ನು ದಿಕ್ಕೆಗೇ ತೆಗೆದುಕೊಂಡು ಹೋಗಬೇಕು ಎಂಬ ನಿಲುವಿದೆ. ಹಾಗೆಯೇ ಬರೆಯುತ್ತಿದ್ದಾರೆ ಕೂಡ. ನಮಗಿಂತ ಕಿರಿಯರಾದ ದೇವನೂರ ಮಹಾದೇವ ಇರಬಹುದು, ಜಯಂತ ಕಾಯ್ಕಿಣಿ ಇರಬಹುದು, ವಸುಧೇಂದ್ರ ಮತ್ತಿತರರು ಉತ್ತಮ ರೀತಿಯಲ್ಲಿ ಸಾಹಿತ್ಯ ರಚನೆ ಮಾಡುತ್ತಿದ್ದಾರೆ. ಆದರೆ ನಮಗೆ ಅಂದು ಇದ್ದಂತಹ ಓದುಗ ಸಮೂಹ ಇಂದು ಇವರಿಗಿಲ್ಲ. ಎಲ್ಲೋ ಕಾಲೇಜುಗಳಲ್ಲಿ ಕೆಲವರು ಮಾತ್ರ ಇವರು ಬರೆದಿದ್ದನ್ನು ಓದಿ ಹೊಗಳುತ್ತಾರೆ ಬಿಟ್ಟರೆ ಮಟ್ಟದಲ್ಲಿ ಜನರು ಓದುತ್ತಿಲ್ಲ. ನಮಗಾದರೆ ಒಂದು ಕೃತಿ ಪ್ರಕಟವಾದರೆ ಸಾಕು ಅದಕ್ಕೆ ಓದುಗಗರು ಪತ್ರ ಬರೆಯುತ್ತಿದ್ದರು.

ಒಂದು ಕಡೆ ಸಾಹಿತ್ಯ ಪುಸ್ತಕಗಳ ಮಾರಾಟ ಚೆನ್ನಾಗಿಯೇ ನಡೆಯುತ್ತಿದೆಯಲ್ಲ?
ನಮ್ಮ ಜನರಿಗೆ ಒಂದು ಬಗೆಯ ಪುಸ್ತಕದ ವ್ಯಾಮೋಹವಿದೆ. ಅಂಗಡಿಗಳಲ್ಲಿ ಕೊಂಡು ಚೆನ್ನಾಗಿ ಪ್ಯಾಕ್ ಮಾಡಿಕೊಂಡು ಮನೆಗೆ ಒಯ್ಯುತ್ತಾರೆ. ಆದರೆ ಅದರಲ್ಲಿ ಎಷ್ಟು ಓದುತ್ತಾರೆ? ಹೀಗೆ ಜನರು ಓದದಿರುವುದಕ್ಕೆ ಮಾಧ್ಯಮಗಳೇ ಕಾರಣ. ಪ್ರತಿ ಪಾತ್ರವನ್ನೂ, ಪ್ರತಿ ದೃಶ್ಯವನ್ನೂ ವರ್ಣರಂಜಿತವಾಗಿ ತೋರಿಸುತ್ತ ಇರುವುದರಿಂದ ಸುಲಭವಾಗಿ ಜನರು ಕಡೆ ವಾಲುತ್ತಿದ್ದಾರೆ. ಈಗ ಟಿಆರ್‌ಪಿ ಎನ್ನುವುದು ಬೇರೆ ಬಂದಿದೆ. ಒಬ್ಬ ಒಳ್ಳೆಯ ಲೇಖಕ ಜನಕ್ಕೆ ಏನು ಬೇಕು ಅಂತ ನೋಡಿ ಬರೆಯುವುದಿಲ್ಲ. ಆದರೆ ಒಬ್ಬ ಕೆಟ್ಟ ಲೇಖಕ ಜನರು ಏನು ಬಯಸುತ್ತಾರೆ ನೋಡಿ ಅದರಂತೆ ಬರೆಯುತ್ತಾನೆ. ಅದು  ಸಾಹಿತ್ಯಕ್ಕೆ ಮಾಡುವ ದೊಡ್ಡ ದ್ರೋಹ. ನಮ್ಮ ಹಳೆಯ ಲೇಖಕರೆಲ್ಲಾ ತಮಗೆ ಏನು ಬೇಕೋ ಅದನ್ನು ಬರೆಯುತ್ತಿದ್ದರು. ಶಿವರಾಮ ಕಾರಂತ, ಇತ್ಯಾದಿ ಲೇಖಕರು ನಮಗೇನನ್ನಿಸುತ್ತದೆ, ಸಮಾಜ ತಮಗೆ ಹೇಗೆ ಕಂಡಿದೆ, ತಾನು ಸಮಾಜಕ್ಕೆ ಏನನ್ನು ಹೇಳಬೇಕು ಎಂಬುದನ್ನು  ಗಮನದಲ್ಲಿಟ್ಟುಕೊಂಡು ಬರೆಯುತ್ತಿದ್ದರುಇಂದು ಅಂತವರ ಸಂಖ್ಯೆ ಕಡಿಮೆಯಾಗಿರುವುದು ದುರಂತ.
ಒಂದು ಭಾಷೆಯಾಗಿ ಕನ್ನಡದ ಬೆಳವಣಿಗೆಯನ್ನು ಹೇಗೆ ಗ್ರಹಿಸುತ್ತೀರಿ?
ಭಾಷೆಯೊಂದು ತಾನು ಚಲಿಸುವ ಸಮಯ, ಸಂದರ್ಭ ಮತ್ತು ತನ್ನ ಕಾಲದ ನಿರಂತರತೆಯಿಂದಾಗಿ ಬೆಳವಣಿಗೆ ಹೋಂದುತ್ತದೆ. ೧೨ನೇ ಶತಮಾನದಲ್ಲಿ ಹುಟ್ಟಿದ ಇಂಗ್ಲಿಷ್ ಭಾಷೆಗೆ ಯಾವ ಹಿನ್ನೆಲೆಗಳೂ ಇಲ್ಲ. ಯಾವುದೇ ಶ್ರೀಮಂತ ಪರಂಪರೆಯನ್ನು ಹೊಂದದಿದ್ದರೂ ಇಂಗ್ಲಿಷ್ ಬೆಳೆದಿರುವ ಕಾರಣ ಅದು ಪ್ರಪಂಚ ಓಡುತ್ತಿರುವ ದಿಕ್ಕಿನಲ್ಲಿ ಓಡುತ್ತಿದೆ ಎನ್ನುವುದಷ್ಟೆ. ಕನ್ನಡದ ಚಟ್ನಿ ಎನ್ನುವ ಪದ ಇಂಗ್ಲಿಷ್ ಭಾಷೆಯಲ್ಲಿದೆ. ಆದರೆ ಕನ್ನಡ ಭಾಷೆ ಕಾಲದ ಜೊತೆಗೆ ಓಡಲಾರದೆ ನಿಂತುಬಿಟ್ಟಿದೆ. ನಮ್ಮಲ್ಲಿ ವೈದಿಕ ಭಾಷೆಯಾಗಲೀ, ವೈಜ್ಞಾನಿಕ ಭಾಷೆಯಾಗಲೀ ಮುಂದುವರೆಯಲೇ ಇಲ್ಲ. ನಾವು ಭಾಷೆಯನ್ನು ಬೆಳೆಸುವತ್ತ ಆಸಕ್ತಿ ವಹಿಸುತ್ತಿಲ್ಲ. ತಮಿಳು ಭಾಷಿಕರು ಪ್ರಯತ್ನ ಮಾಡುತ್ತಿದ್ದಾರೆ. ಅಮೆರಿಕನ್ನರು ಹೊಸ ಪದಗಳನ್ನು ಸೃಷ್ಠಿಸುತ್ತಾರೆ. ಅವರು ಸೃಷ್ಠಿಸುವ ಪದಗಳು ಪದಕೋಶದಲ್ಲೇ ಇರುವುದಿಲ್ಲ. ಹೊಟೆಲ್‌ನಲ್ಲಿ ವಾಹನ ನಿಲುಗಡೆಗೆ ಅವಕಾಶವಿದ್ದರೆ ಅದನ್ನುಮೊಟೆಲ್ಎನ್ನುತ್ತಾರೆ. ಯಾವುದಾದರೂ ಬುಕ್ ಮ್ಯಾಗಝೀನ್‌ನಲ್ಲಿ ಪ್ರಕಟವಾದರೆ ಅದನ್ನು ಬುಕ್‌ಝಿನ್ ಎನ್ನುತ್ತಾರೆ. ಅಮೆರಿಕಾದ ಒಂದು ಸ್ಥಳಕ್ಕೆ ತಿಂಗಳ ನಂತರ ಹೋದರೆ ಬದಲಾದ ಭಾಷೆ ಗೊಂದಲ ಹುಟ್ಟಿಸುತ್ತದೆ. ಕನ್ನಡದಲ್ಲಿ ಇದಾಗುತ್ತಿಲ್ಲವೆನ್ನುವುದು ವಿಷಾದಕರ ಸಂಗತಿ. ಮಡಿವಂತಿಕೆಯಿರುವ ಕನ್ನಡಿಗರಲ್ಲಿ ಸೃಜನಶೀಲತೆಯ ಕೊರತೆಯಿದೆ. ಕಂಪ್ಯೂಟರ್ ಬಂದ ಮೇಲೆ ಚಾಲ್ತಿಯಲ್ಲಿರುವ ಬ್ರೌಸಿಂಗ್, ಚಾಟಿಂಗ್ ಮುಂತಾದವುಗಳಿಗೆ ಹೊಸ ಕನ್ನಡ ಪದಗಳನ್ನು ತರಲು ಸಾಧ್ಯವಾಗೇ ಇಲ್ಲ. ನಾವು ಪ್ರತಿಯೊಂದಕ್ಕೂ ಇಂಗ್ಲಿಷ್ ಮೊರೆಹೋಗುತ್ತಿದ್ದೇವೆ. ಐಟಿ,ಬಿಟಿಗಳಲ್ಲಿ ಕೆಲಸ ಮಾಡುವ ನಮ್ಮ ಯುವಕ ಯುವತಿಯರು ತಾವು ಕೆಲಸ ಮಾಡುವ ಅಷ್ಟು ಭಾಷೆಗಳನ್ನು ಇಂಗ್ಲಿಷ್‌ನಲ್ಲಿಯೇ ಬಳಸುತ್ತಾರೆಯೇ ವಿನಃ ಕನ್ನಡದಲ್ಲಿ ಪ್ರಯತ್ನಿಸುವುದಿಲ್ಲ. ಹಾಗೆ ಪ್ರಯತ್ನಿಸಿದ್ದರೆ ಕನ್ನಡ ಪದಕೋಶ ಅಭಿವೃದ್ಧಿಯಾಗುತ್ತಿತ್ತು.

ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ಸಾಹಿತ್ಯ ಸೃಷ್ಟಿಯ ಅವಕಾಶಗಳೂ ವಿಸ್ತಾರಗೊಂಡಿವೆ. ಬೆಳವಣಿಗೆಯನ್ನು ಹೇಗೆ ಗ್ರಹಿಸುತ್ತೀರಿ?
ಬದುಕು ಬದಲಾವಣೆಯಾಗುತ್ತಾ ಹೋಗುತ್ತದೆ. ಬದಲಾವಣೆಯ ಜೊತೆಯಲ್ಲಿ ನಾವೂ ಸೇರಿಕೊಳ್ಳಲಿಲ್ಲ ಎಂತಾದರೆ ನಾವು ಮೂಲೆಗುಂಪಾಗುತ್ತೇವೆ. ಇಂದಿರುವ ತಂತ್ರಜ್ಞಾನದ ಸೌಲಭ್ಯಗಳು ನಮಗೆ ಅಂದಿರಲಿಲ್ಲ. ಹಿಂದಾದರೆ ಒಂದು ಕತೆ ಬರೆದಾಗ ಸ್ವಲ್ಪ ಬದಲಾವಣೆ ಮಾಡಬೇಕಿದ್ದರೆ ಇಡೀ ಹಾಳೆಯನ್ನು ಹರಿದಾಕಿ ಮತ್ತೆ ಬರೆಯಬೇಕಿತ್ತು. ಈಗಾದರೆ ಅದನ್ನು ಎರಡು ನಿಮಿಷದಲ್ಲಿ ಬದಲಿಸಬಹುದು. ಕೆಲವರು ಕಂಪ್ಯೂಟರ್ ಬಳಸುವುದಿಲ್ಲ ಎನ್ನುತ್ತಾರೆ. ನನಗೆ ಅದು ಸರಿ ಎನ್ನಿಸುವುದಿಲ್ಲ. ಇಂದಿನ ಎಲ್ಲಾ ಸೌಲಭ್ಯಗಳನ್ನೂ ಇಟ್ಟುಕೊಂಡೇ ನಾನು ಮನುಷ್ಯನಾಗಿರುವುದು ಹೇಗೆ? ಎಂಬುದನ್ನು ಕಂಡುಕೊಳ್ಳಬೇಕು. ಅದು ಬಹಳ ಮುಖ್ಯ. ಇಂದು ನಾವು ಮರೆತಿರುವುದೇ ಅದನ್ನು. ಇಂದು ಲಕ್ಷಾಂತರ ರೂಪಾಯಿ ಸಂಬಳ ತೆಗೆದುಕೊಳ್ಳುವವರಿಗೂ ಸಮಾಧಾನ, ನೆಮ್ಮದಿ ಇರುವುದಿಲ್ಲ ಯಾಕೆ? ಆಧುನಿಕತೆಯನ್ನು ಅಪಾರ್ಥ ಮಾಡಿಕೊಂಡ ಪರಿಣಾಮ ಇದಲ್ಲವಾ?

ಸಾಹಿತ್ಯ ಚಳವಳಿ ಇಂದು ಸ್ಥಗಿತಗೊಂಡಿದೆ ಎಂಬ ಮಾತಿದೆ. ಹಿಂದೆ ಯಾವುದೇ ಚಳವಳಿಯ ಭಾಗವಾಗದೇ ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡ ನೀವು ಬೆಳವಣಿಗೆಯನ್ನು ಗುರುತಿಸುವುದು ಹೇಗೆ?
ಯಾವುದೇ ಚಳವಳಿ ಕೆಲವು ತಿಂಗಳು ಅಥವಾ ಕೆಲವು ವರ್ಷ ಇರುತ್ತದೆ. ಅದು ಪ್ರಗತಿಶೀಲವಿರಲಿ, ನವ್ಯ, ಬಂಡಾಯ, ದಲಿತ ಯಾವುದೇ ಇರಲಿ. ಎಲ್ಲವೂ ಕೆಲ ದಿನಗಳವರೆಗೆ ಮಾತ್ರ ನಡೆದು ಕೊನೆಕೊನೆಗೆ ಸೊರಗಿ ಬಿಡುತ್ತಿದ್ದವು. ಬಂಡಾಯದ ಆರಂಭದಲ್ಲಿ ಅನೇಕರು ಬಹಳ ಒಳ್ಳೆ ಸಾಹಿತ್ಯ ಬರೆದರು. ಆದರೆ ಬರಬರುತ್ತಾ ಅವರು ಸುಸ್ತಾದರು. ಒಂದು ದಡ ಮುಟ್ಟುವ ಒಳಗೇ ಎಲ್ಲಾ ಚಳವಳಿಗಳು ನಿಂತು ಹೋಗುತ್ತಿವೆ. ನಾನು ಕಾರ್ಗಲ್‌ನಂತಹ ಒಂದು ಮೂಲೆಯಲ್ಲಿದ್ದು ನನ್ನ ಪಾಡಿಗೆ ಎಲ್ಲರೂ ಬರೆದಿದ್ದನ್ನೂ ಓದುತ್ತಿದ್ದೆ. ಆದರೆ ಅವ್ಯಾವುದರ ಪ್ರಭಾವಕ್ಕೂ ಒಳಗಾಗದೇ ನನ್ನದೇ ಒಂದು ಶೈಲಿಯನ್ನು ರೂಢಿಸಿಕೊಂಡೆ.

 
ಮೊದಲಿನಿಂದಲೂ ಶ್ರದ್ಧೆಯಿಂದ ಬಾಲಸಾಹಿತ್ಯವನ್ನು ರಚಿಸಿಕೊಂಡು ಬರುತ್ತಿದ್ದೀರಿ. ಸಾಹಿತ್ಯ ವಲಯದಲ್ಲಿ ಪ್ರಕಾರ ಇಂದು ಇಂದು ಯಾವ ಬಗೆಯ ಪ್ರತಿಕ್ರಿಯೆ ಪಡೆಯುತ್ತಿದೆ?
ಬಾಲ ಸಾಹಿತ್ಯಕ್ಕೆ ಇಂದು ಬಹಳ ಶಿಥಿಲವಾದ ಪ್ರತಿಕ್ರಿಯೆ ಇದೆ. ಇದು ಬಹಳ ಬೇಸರದ ವಿಷಯ. ಒಂದು ಕಾಲಕ್ಕೆ ಪಂಜೆ ಮಂಗೇಶರಾಯರು, ನಾ.ಕಸ್ತೂರಿ, ಜಿ.ಪಿ.ರಾಜರತ್ನಂ, ಕುವೆಂಪು, ಹೀಗೆ ಎಲ್ಲರೂ ಮಕ್ಕಳ ಸಾಹಿತ್ಯವನ್ನು ಅದ್ಭುತ ರೀತಿಯಲ್ಲಿ ರಚಿಸುತ್ತಿದ್ದವರೇ. ಇತ್ತೀಚೆಗೆ ಕೆಲವೇ ಜನರನ್ನು ಬಿಟ್ಟರೆ ಉಳಿದವ್ಯಾರೂ ಮಕ್ಕಳಿಗಾಗಿ ಬರೆಯುತ್ತಲೇ ಇಲ್ಲ. ಇದು ಏನೂ ಸಾಲದು. ಬಂಗಾಳದಲ್ಲಿ ಯಾವ ಲೇಖಕ ಮಕ್ಕಳಿಗಾಗಿ ಬರೆಯುವುದಿಲ್ಲವೋ ಆತನನ್ನು ನಾವು ಲೇಖಕ ಎಂದು ಪರಿಗಣಿಸುವದೇ ಇಲ್ಲ ಎಂಬ ಒಂದು ಅಲಿಖಿತ ನಿಯಮ ಇದೆ. ಪ್ರತಿಯೊಬ್ಬರೂ ಬರೆಯುತ್ತಾರೆ ಕೂಡಾ. ಮಹರಾಷ್ಟ್ರದಲ್ಲಿ ಸಹ ಬಹಳ ಜನರು ಬಾಲ ಸಾಹಿತ್ಯ ರಚಿಸುತ್ತಾರೆ. ಕಿಶೋರಿ ಕಾದಂಬರಿ ಎಂಬ ಪ್ರಾಕಾರವೇ ಅಲ್ಲಿದೆ. ಅದರಿಂದ ಪ್ರಭಾವಿತನಾಗಿ ನಾನು ಸುಮಾರು ೨೫ ಮಕ್ಕಳ ಮಿನಿ ಕಾದಂಬರಿಗಳನ್ನು ಬರೆದಿದ್ದೇನೆ. ನಾವು ಮಕ್ಕಳನ್ನು ಓದುವ ಹಾಗೆ ಮಾಡಬೇಕಾಗಿದೆ. ಅವರಿಗೂ ಸಾಹಿತ್ಯದ ಅಭಿರುಚಿ ಬೆಳೆಸುವ ಜವಾಬ್ದಾರಿ ಸಾಹಿತಿಗಳಿಗಿದೆ.

ನಿಮ್ಮ ಕತೆ ಕಾದಂಬರಿಗಳಲ್ಲಿ ದೀವರು, ಹಸಲರಂತಹ ಹಿಂದುಳಿದ ಸಮುದಾಯಗಳನ್ನು ಪ್ರತಿಬಿಂಬಿಸಿದ್ದೀರಿ. ಇವರ ಬದುಕಿನಲ್ಲಿ ಇಂದು ಯಾವ ರೀತಿ ಬದಲಾವಣೆಗಳಾಗಿವೆ?
ನಾನು ೧೯೫೯ ರಲ್ಲಿ ಮಂಜಿನಕಾನು, ಕಡೆ ಹೋದಾಗ ಹಸಲರಾಗಲೀ ದೀವರಾಗಲೀ ಎದುರಿಗೆ ಬಂತು ನಿಂತುಕೊಳ್ಳಲೂ ಹೆದರುತ್ತಿದ್ದರು. ದೀವರ ಹೆಂಗಸರು ಪೇಟೆಗೆ ಬಂದರೂ ಗಂಡಸರು ಬರಲು ನಾಚಿಕೊಳ್ಳುತ್ತಿದ್ದರು. ಇಲ್ಲಿ ಪೇಟೆಯಲ್ಲಿ ಅವರನ್ನು ಅವಮಾನಿಸುತ್ತಿದ್ದರು. ’ಏಯ್ ಗೌಡ ಬಾ ಇಲ್ಲಿ. ಚೀಲ ತೊಗೊಎಂದು ದಬಾಯಿಸುತ್ತಿದ್ದರು. ಅವರು ಕೈಗೆ ವಾಚು ಕಟ್ಟುವಂತಿರಲಿಲ್ಲ. ಹಳ್ಳಿಯಲ್ಲಿ ಅನುಕೂಲ ಇದ್ದವರನ್ನೂ ಪೇಟೆಯಲ್ಲಿ ಹಾಗೆ ಅವಮಾನಿಸಲಾಗುತ್ತಿತ್ತು. ಕಾಮನ ಹಬ್ಬದ ದಿನ ಗಾಡಿಗಳನ್ನು ತಡೆಯುತ್ತಿದ್ದರು. ಗಾಡಿಯ ಕೀಲುಗಳನ್ನು ತೆಗೆದುಬಿಡುತ್ತಿದ್ದರು. ಎಷ್ಟೋ ಕಡೆ ಗಾಡಿಗಳು ಕೆಳಗೆ ಬಿದ್ದ ಉದಾಹರಣೆಗಳೂ ಇವೆ. ಕೊನೆಕೊನೆಗೆ ಕಾಮನ ಹಬ್ಬಕ್ಕೆ ಹಳ್ಳೀಜನ ಗಾಡಿ ಕಟ್ಟಿಕೊಂಡು ಬರುವುದನ್ನೇ ಬಿಟ್ಟಿದ್ದರು. ಆದರೆ ಇಂದು ನನಗೆ ಬಹಳ ಸಂತೋಷ ಆಗುವುದೇನೆಂದರೆ ಹಸಲರೇ ಆಗಲೀ ದೀವರೇ ಆಗಲಿ ಸ್ವಾಭಿಮಾನದಿಂದ ಬದುಕುತ್ತಿದ್ದಾರೆ. ಆದರೆ ಸ್ವಲ್ಪ ಅಡ್ಡ ದಾರಿ ಹಿಡಿಯುತ್ತಿರುವವರೂ ಇದ್ದಾರೆ. ಸ್ಪಷ್ಟವಾಗಿ ಹೇಳಬೇಕೆಂದರೆ ಸಾಂಸ್ಕೃತಿಕವಾಗಿ ದೀವರು ಮತ್ತು ಹಸಲರು ಬೆಳೆಯುತ್ತಿಲ್ಲ. ಇದು ವಿಷಾದನೀಯ. ಆರ್ಥಿಕವಾಗಿ ಹಾಗೂ ಅಧಿಕಾರಯುತವಾಗಿ ಮಾತ್ರವೇ ಅವರ ಬೆಳವಣಿಗೆ ಇದೆ. ದೀವರಂತೂ ಸಾಂಸ್ಕೃತಿಕವಾಗಿ ಬಹಳ ಶ್ರೀಮಂತ ಪರಂಪರೆ ಇರುವ ಜನ. ದೀವರ ಹಸೆ ಚಿತ್ತಾರವನ್ನೇ ಹೋಲುವ ಮಹಾರಾಷ್ಟ್ರದ ವೋರ್ಲಿ ಪ್ರಕಾರವನ್ನು ಹೇಗೆ ಬೆಳೆಸಿದ್ದಾರೆ ಎಂದು ನೀವು ನೋಡಿಒಂದು ಸರ್ಕಾರಿ ಸಂಸ್ಥೆ, ಒಂದು ಖಾಸಗಿ ಸಂಸ್ಥೆ ಮತ್ತು ಬಹಳಷ್ಟು ಕಲಾವಿದರು ಸೇರಿ ವಾರ್ಲಿಯನ್ನು ಹಾಗೆ ಬೆಳೆಸಿದ್ದಾರೆ. ಆದರೆ ಚಿತ್ತಾರಕ್ಕೆ ಯೋಗ ಬರಲಿಲ್ಲ. ಚಿತ್ರಕಲಾ ಪರಿಷತ್ತಿನ ಒಬ್ಬ ಕಲಾವಿದ ಇದನ್ನು ತನ್ನ ಮಾಧ್ಯಮವಾಗಿ ಬಳಸಿಕೊಂಡರೂ ಸಾಕು. ಆಗ ಚಿತ್ತಾರಕ್ಕೆ ಒಳ್ಳೆಯದಾಗಬಹುದು. ಈಗೇನಾಗಿದೆ ಎಂದರೆ ಹಾಯಧನ ಪಡೆದು ಮನೆಗಳಲ್ಲಿ ಚಿತ್ತಾರ ತರಗತಿಗಳನ್ನು ನಡೆಸುತ್ತಾರೆ. ಆದರೆ ಎಲ್ಲಾ ಚಿತ್ತಾರಗಳೂ ಲೈನ್ ಹಾಕಿ ಮೊದಲಿಂದ ಕೊನೆಯವರೆಗೂ ಒಂದೇ ರೀತಿ ಬರೆಯುತ್ತಾರೆ. ಆದರೆ ನಾನು ಚಿತ್ತಾರ ಬರೆಯುವ ಬಹಳಷ್ಟು ಹಳೆಯ ಹೆಂಗಸರನ್ನು ನೋಡಿದ್ದೇನೆ. ಅವರು ಚಿತ್ತಾರಕ್ಕೆ ತಮ್ಮತನವನ್ನು ತುಂಬುತ್ತಿದ್ದರು. ತಮ್ಮ ದಿನನಿತ್ಯದ ಅನುಭವಗಳನ್ನು ಅದರಲ್ಲಿ ಸೇರಿಸುತ್ತಿದ್ದರು. ಇಂದು ಹಾಗೆ ಆಗುತ್ತಿಲ್ಲ. ತರಬೇತಿ ನೀಡಿದ ಮೇಲೆ ಚಿತ್ತಾರ ಸಾಯುತ್ತಿದೆ.

ಸಮುದಾಯಗಳಿಗೆ ಸೇರದೆಯೂ ಅಷ್ಟು ಸಲೀಸಾಗಿ ನೀವು ನಿಮ್ಮ ಬರೆಹದಲ್ಲಿ ತರಲು ಹೇಗೆ ಸಾಧ್ಯವಾಯಿತು?
ಮೊದಲನೆಯದಾಗಿ ಹುಚ್ಚಪ್ಪ ಮಾಸ್ತರ ಸ್ನೇಹ. ಅವರ ಜೊತೆಯಲ್ಲಿ ನಾನು ಸಿಕ್ಕಾಪಟ್ಟೆ ಹಳ್ಳಿಗಳನ್ನು ತಿರುಗಾಡಿದ್ದೇನೆ. ದೀವರ ಮನೆಗಳಲ್ಲಿ, ಹಸಲರ ಮನೆಗಳಲ್ಲಿ ಜನರ ಜೊತೆ ಬಹಳ ದಿನ ಒಡನಾಡಿದ್ದೇನೆ. ದೀವರ ಹೆಂಗಸರು ಚಿತ್ತಾರ ಬರೆಯುವುದನ್ನು ಹದಿನೈದು ದಿನಗಳವರೆಗೆ ಕುಳಿತು ಗಮನಿಸಿದ್ದೇನೆ. ಜನರ ಮಾತು, ಕತೆ, ವ್ಯವಹಾರ, ಅವರ ಉಡಿಗೆ, ತೊಡಿಗೆ, ಅವರ ಗಟ್ಟಿತನ ಇವೆಲ್ಲಾ ನನ್ನಲ್ಲಿ ಆಕರ್ಷಣೆ ಉಂಟುಮಾಡಿತ್ತು. ಕುಗ್ವೆ ಊರಿನ ಓಲೆಕಾರ ಪುಟ್ಟಪ್ಪ ಎಂಬಾತ ನಮ್ಮ ಮನೆಕೆಲಸಕ್ಕೆ ಕರೆಸಿಕೊಂಡಿದ್ದೆ. ಅದ್ಭುತವಾದ ವ್ಯಕ್ತಿ. ಭಾರೀ ಧೈರ್ಯಶಾಲಿ. ಆತನಿಗೆ ಯಾವ ಮರದ ಹೆಸರು ಗೊತ್ತಿಲ್ಲ ಎಂದಿರಲಿಲ್ಲ. ಹಕ್ಕಿ, ಮೀನು, ಮರ, ಗಿಡ ಎಲ್ಲವುಗಳ ಹೆಸರನ್ನೂ ಸಟಸಟ ಅಂತ ಹೇಳುತ್ತಿದ್ದ. ಅದೆಲ್ಲಾ ಬರೆದುಕೊಂಡು ಆಕಾಶವಾಣಿಯಲ್ಲಿ ಒಂದು ಭಾಷಣವನ್ನೂ ಮಾಡಿದ್ದೆ. ಇಂತವರು ಬಹಳ ಜನ ಇದ್ದರು. ಜನರ ಜೀವನ ಶ್ರದ್ಧೆಯನ್ನು ನಾನು ಪ್ರೀತಿಸುತ್ತಿದ್ದೆ.
ಸಾಹಿತ್ಯ ಕ್ಷೇತ್ರಕ್ಕೆ ತಮ್ಮ ಪ್ರವೇಶವಾದ ಹಿನ್ನೆಲೆಯೇನು? ಹೇಗೆ ಬರವಣಿಗೆಯ ಗೀಳು ಹತ್ತಿಸಿಕೊಂಡಿರಿ?
ಮನೆಯಲ್ಲಿ ಓದುವ ವಾತಾವರಣವಿತ್ತು. ನಮ್ಮ ತಂದೆ ಸ್ಕೂಲಿನ ಮಾಸ್ತರರಾಗಿದ್ದರು. ಅವರು ತಮ್ಮ ಪುಸ್ತಕಗಳಲ್ಲಿ ಮಕ್ಕಳಿಗಾಗಿ ಸಣ್ಣ ಸಣ್ಣ ಪದ್ಯಗಳನ್ನು ಬರೆದಿಟ್ಟುಕೊಳ್ಳುತ್ತಿದ್ದರು. ದೋಣಿ ಸಾಗಲಿ, ಮುಂದೆ ಹೋಗಲಿ, ನಾ ಕಸ್ತೂರಿ ನೀ ಹೊಯ್ಸಳ ಹೀಗೆ. ನಾನು ೬ನೇ ವಯಸ್ಸಿನಲ್ಲಿ ಮೊದಲು ಓದಿದ ಪುಸತಕ ಅದೇ. ನನ್ನ ತಾಯಿ ನನಗೆ ಕೊಂಕಳಿ ಪದ್ಯಗಳನ್ನು ಹೇಳುತ್ತಿದ್ದರು. ತಂದೆ ಕಥೆಗಳನ್ನು ಹೇಳುತ್ತಿದ್ದರು. ನಾನು ಬೆಳೆಯುವ ಪೂರ್ವದಲ್ಲಿಯೇ ಅಕ್ಕ-ಅಣ್ಣಂದಿರ ಎಲ್ಲಾ ಪುಸ್ತಕಗಳನ್ನೂ ಓದಿಬಿಟ್ಟಿದ್ದೆ. ಸಂಧ್ಯಾರಾಗ, ಇಜ್ಜೋಡು, ಮರಳಿ ಮಣ್ಣಿಗೆ ಮುಂತಾದವನ್ನು ಪ್ರಾಥಮಿಕ ತರಗತಿಗಳಲ್ಲೇ ತಿರುವಿಹಾಕಿದ್ದೆ. ಓದುತ್ತಾ, ಓದುತ್ತಾ ಬರೆಯಬೇಕೆನ್ನಿಸಿತು. ಬರಹಗಾರನಾದೆ. ಅತ್ಯುತ್ತಮ ಶಿಕ್ಷಕರು ಸಿಕ್ಕಿದರು. ಗೊರೂರು ರಾಮಸ್ವಾಮಿ ಅಯ್ಯಂಗಾರರ ಅಣ್ಣ ಗೊರೂರು ನರಸಿಂಹಾಚಾರ್ ಎನ್ನುವವರು ಸಾಗರದ ಹೈಸ್ಕೂಲಿನಲ್ಲಿ ನನಗೆ ಶಿಕ್ಷಕರಾಗಿದ್ದರು. ಕಾಲೇಜಿನಲ್ಲಿ ಜಿ.ಎಸ್.ಶಿವರುದ್ರಪ್ಪ ನನಗೆ ಉಪನ್ಯಾಸಕರಾಗಿದ್ದರು. ಹಾಗೇ ಸಾಹಿತ್ಯದ ಬಗ್ಗೆ ಆಸಕ್ತಿ ಬೆಳೆಯಿತು.

ಕ್ರೈಸ್ತ ಸಮುದಾಯದಿಂದ ಬಂದ ನೀವು ಹಲವು ಕೃತಿಗಳಲ್ಲಿ ಕ್ರೈಸ್ತರ ಕೆಲ ವರ್ತನೆಗಳನ್ನು ಟೀಕಿಸಿದ್ದೀರಿ. ಸಂದರ್ಭದಲ್ಲಿ ಕ್ರೈಸ್ತ ಸಮುದಾಯ ನಿಮ್ಮ ಬಗ್ಗೆ ಯಾವ ರೀತಿ ಪ್ರತಿಕ್ರಿಯಿಸಿದೆ?
ಕ್ರೈಸ್ತ ಸಮುದಾಯದವರಿಗೆ ನನ್ನ ಮೇಲಿರುವ ಆಪಾದನೆ ಎಂದರೆಈತ ಬೈಯುತ್ತಾನೆಎನ್ನುವುದು. ಆದರೆ ಒಬ್ಬ ಲೇಖಕ ಬರೆಯಲಿಕ್ಕೆ ಕುಳಿತಾಗ ಕೆಲವರನ್ನು ಬೈಯುವುದು, ಕೆಲವರನ್ನು ನಮ್ಮವರು ಎಂಬ ಕಾರಣಕ್ಕೆ ರಕ್ಷಣೆ ಮಡುವುದು, ಇವೆಲ್ಲಾ ಮಾಡಬಾರದು. ಲೇಖಕ ಯಾವತ್ತೂ ಸತ್ಯವನ್ನು ಹೇಳಬೇಕು. ಸ್ಪಷ್ಟತೆ ಲೇಖಕನ ಗುಣ. ಮತಪ್ರಚಾರದಲ್ಲಿ ನನಗೆ ನಂಬಿಕೆಯಿಲ್ಲ. ಹಾಗಂತ ಹೇಳಿ ನಾನು ಚರ್ಚಿಗೂ ಹೋಗುವುದಿಲ್ಲ. ನಂಬಿಕೆಗಳ ವಿಚಾರಕ್ಕೆ ಬಂದರೆ ಕೆಲವು ಇವೆ, ಕೆಲವು ಇಲ್ಲ. ಹಾಗೆಯೇ ಕೆಲವು ಕೃತಿಗಳನ್ನು ಬರೆದಾಗ ಬಹಳಷ್ಟು ಕ್ರೈಸ್ತರು ಬಹಳ ಮೆಚ್ಚಿಕೊಂಡಿರುವದೂ ಇದೆ. ’ಇಗರ್ಜಿಯ ಸುತ್ತಲಿನ ಹತ್ತು ಮನೆಗಳು೫೦ ವರ್ಷಗಳ ಹಿಂದೆ ಮುರುಡೇಶ್ವರದಿಂದ ಸಾಗರಕ್ಕೆ ಬಂದ ಹತ್ತು ಕುಟುಂಬಗಳ ಕತೆ. ಹಾಗೆ ಬಂದವರ ಮೊಮ್ಮೊಕ್ಕಳೆಲ್ಲಾ ಇಲ್ಲಿ  ನಮ್ಮ ಮನೆಯ ಸುತ್ತಲಿರುವವರು. ಅವರೆಲ್ಲಾ ಅದನ್ನು ಓದಿ ಬಹಳ ಮೆಚ್ಚಿಕೊಂಡರು. ಕಾದಂಬರಿ ನನಗೆ ಬಹಳ ಹೆಸರನ್ನೂ ತಂದುಕೊಟ್ಟಿತು. ಹಾಗೆಯೇ ಕೆಲವನ್ನು ಓದಿ ಅನೇಕರು ಅಸಮಾಧಾನ ವ್ಯಕ್ತಪಡಿಸುತ್ತಾರೆ. ಆದರೆ ಒಬ್ಬ ಲೇಖಕನಾದವನು ತನಗೆ ಕಂಡ ಸತ್ಯವನ್ನು ಬರೆಯದೇ ಇರಲಿಕ್ಕಾಗುವುದಿಲ್ಲ. ಸತ್ಯಕ್ಕೆ ಅವಮಾನ ಮಾಡಲಿಕ್ಕಾಗುವುದಿಲ್ಲ. ಕ್ರೈಸ್ತರಲ್ಲಿನ ಒಂದು ಸಮಸ್ಯೆಯೆಂದರೆ ಅವರು ತಮ್ಮ ಚರ್ಚ್ ಕಾಂಪೌಂಡಿನಾಚೆ ಹೋಗುವುದಿಲ್ಲ. ಇತರರೊಡನೆ ಬೆರೆಯುವುದಿಲ್ಲ. ಒಳ್ಳೆಯ ಹಾಡುಗಾರರು, ನೃತ್ಯ ಮಾಡುವವರು ಇಲ್ಲಿದ್ದಾರೆ. ಆದರೆ ಅವರು ತಮ್ಮ ಪ್ರತಿಭೆಯನ್ನು ಹೊರಗೆ ಕೊಂಡೊಯ್ಯಲು ಹಿಂಜರಿಯುತ್ತಾರೆ. ಇದಕ್ಕಾಗಿ ನಾನೇ ಪ್ರಯತ್ನಿಸಿದ್ದರೂ ಆಗಿಲ್ಲ. ಪಾದ್ರಿಗಳಾದವರೂ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಎಷ್ಟೊಂದು ಕ್ರೈಸ್ತ ಶಿಕ್ಷಣ ಸಂಸ್ಥೆಗಳಿದ್ದರೂ ಅವರು ಕ್ರೈಸ್ತ ಮಕ್ಕಳಿಗೆ ಶಿಕ್ಷಣ ನೀಡುವ ಕೆಲಸ ಮಾಡುತ್ತಿಲ್ಲ. ಮತ್ತೊಂದೆಡೆ ಕ್ರೈಸ್ತರನ್ನು ಅನುಮಾನಿಸುವುದೂ ಹೊರಗಿನಿಂದ ಆಗುತ್ತಿದೆ. ಇಲ್ಲಿ ಮತಾಂತರದ ರಾಜಕೀಯವೂ ನಡೆಯುತ್ತಿದೆ.

ನೀವು ಆರೆಸ್ಸೆಸ್ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದ ಬಗ್ಗೆ ಒಂದು ವರ್ಗದಿಂದ ಬಗ್ಗೆ ಟೀಕೆ ವ್ಯಕ್ತವಾಗುತ್ತಿತ್ತು. ಕುರಿತು ಏನು ಹೇಳುತ್ತೀರಿ?
ಸಂಘ ಪರಿವಾರ ನಮ್ಮ ದೇಶದ ಸಂಸ್ಕೃತಿ ಪರಂಪರೆಯ ಕೆಲವು ಒಳ್ಳೆಯ ಅಂಶಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತದೆ ಎಂದು ಆಗ ನನಗನ್ನಿಸಿತ್ತು. ಅದು ಸರಿ ಎಂದೂ ಅನ್ನಿಸಿತ್ತು. ಹಾಗಾಗಿ ನಾನು ಅವರ ಕಾರ್ಯಕ್ರಮಗಳಿಗೆ ಕರೆದಾಗ ಭಾಗವಹಿಸಿದ್ದೆ ಆದರೆ ಇತ್ತೀಚೆಗೆ ನನಗೆ ಬಹಳ ನಿರಾಸೆಯೆನ್ನಿಸಿದೆ. ಅದು ಸ್ವಾಮಿ ವಿವೇಕಾನಂದರನ್ನು ಕೆಟ್ಟದ್ದಾಗಿ ತೋರಿಸಿದ್ದಾಗ ಇರಬಹುದು ಅಥವಾ ಇನ್ನಿತರ ಸಂದರ್ಭವಿರಬಹುದು. ವಿವೇಕಾನಂದರು ನಿಜಕ್ಕೂ ಹೇಳಿದ ಒಳ್ಳೆಯ ಮಾತುಗಳನ್ನು ಮುಚ್ಚಿಹಾಕಿ ಅವರು ಹೇಳದಿದ್ದ ಮಾತುಗಳನ್ನೆಲ್ಲಾ ಅವರ ಬಾಯಿಂದ ಆಡಿಸಿದ್ದರು. ಇದೆಲ್ಲಾ ಬಹಳ ಬೇಸರವೆನ್ನಿಸಿದೆ.

ನಿಮ್ಮ ಎರಡು ಕೃತಿಗಳು ಸಿನಿಮಾಗಳಾಗಿವೆ. ಹೀಗೆ ಒಂದು ಸಾಹಿತ್ಯ ಕೃತಿ ಜನಪ್ರಿಯ ಮಾಧ್ಯಮವಾದ ಸಿನಿಮಾವಾದಾಗ ಆಗುವ ಮಾರ್ಪಾಡುಗಳ ಬಗ್ಗೆ ಏನು ಹೇಳುತ್ತೀರಿ?
ಸಾಹಿತ್ಯ ಕೃತಿಗಳನ್ನಾಧರಿಸಿ ಹಾಲಿವುಡ್‌ನಲ್ಲಿ ಕೆಲವು ಸಿನೆಮಾಗಳಾಗಿವೆ. ಗಾನ್ ವಿದ್ ವಿಂಡ್, ಓಲ್ಡ್ ಮ್ಯಾನ್ ಅಂಡ್ ಸೀ ಇತ್ಯಾದಿ. ಅಲ್ಲಿ ಕಾದಂಬರಿಯಲ್ಲಿ ಮೊದಲಿನಿಂದ ಕೊನೆಯವರೆಗೆ ಹೇಗಿರುತ್ತದೆಯೋ ಸಿನೆಮಾದಲ್ಲೂ ಹಾಗೇ ಇರುತ್ತದೆ. ಆದರೆ ಕನ್ನಡದಲ್ಲಿ ಗಿರೀಶ್ ಕಾಸರವಳ್ಳಿಯಂತಹ ನಿರ್ದೇಶಕರು ಒಂದು ಕೃತಿಯನ್ನು ಆರಿಸಿಕೊಂಡು ಅದಕ್ಕೆ ತಮ್ಮದೇ ಆದಂತಹ ವ್ಯಾಖ್ಯಾನವನ್ನು ನೀಡಿ ಅದನ್ನಾಧರಿಸಿ ಸಿನಿಮಾ ಮಾಡುತ್ತಾರೆ. ಅವರ ಸಿನಿಮಾದಲ್ಲಿ ಮೂಲ ಕತೆ ಇರೋದೇ ಇಲ್ಲ ಎಂಬ ಮಾತು ಚಾಲ್ತಿಯಲ್ಲಿದೆ. ಆದರೆ ನನಗನ್ನಿಸಿದ್ದೇನೆಂದರೆ ಸಿನಿಮಾದಲ್ಲಿ ಕಾದಂಬರಿಗೆ ನ್ಯಾಯವನ್ನು ಒದಗಿಸುವ ಕೆಲಸವನ್ನಂತೂ ಕಾಸರವಳ್ಳಿಯವರು ಖಂಡಿತಾ ಮಾಡುತ್ತಾರೆ. ನೀನಾಸಂನ ಶಿಬಿರವೊಂದರಲ್ಲಿ ದ್ವೀಪ ಸಿನಿಮಾ ನೋಡಿದಾಗ ಕಾಸರವಳ್ಳಿಯವರ ದ್ವೀಪ ಸಿನಿಮಾಕ್ಕಿಂತ ನನ್ನ ಕಾದಂಬರಿಯೇ ಚೆನ್ನಾಗಿದೆ ಎಂಬ ಅಭಿಪ್ರಾಯವನ್ನು ಬಹಳ ಜನ ವ್ಯಕ್ತಪಡಿಸಿದರು. ಒಂದು ಕಾದಂಬರಿಯನ್ನು ಬರೆಯುವಾಗ ಲೇಖಕನ ಮನಸ್ಸಿನಲ್ಲಿ ಓದುಗ ಇರುವುದಿಲ್ಲ. ಆದರೆ ಸಿನೆಮಾ ಮಾಡುವಾಗ ಪ್ರತಿಯೊಂದು ದೃಶ್ಯವನ್ನೂ ನೋಡುಗನ ದೃಷ್ಟಿಯಿಂದ ಮಾಡಬೇಕಾದ ಮಿತಿಯಿರುತ್ತದೆ.

ಅಗಾಧ ಪ್ರಮಾಣದಲ್ಲಿ ಸಾಹಿತ್ಯ ರಚನೆ ಮಾಡಿರುವ ನಿಮಗೆ ಒಂದು ಸಣ್ಣ ಪಟ್ಟಣದಲ್ಲಿದ್ದುಕೊಂಡು ಬರವಣಿಗೆ ನಡೆಸಿದ್ದೇ  ನಿಮ್ಮನ್ನು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಪ್ರಶಸ್ತಿಗಳಿಂದ ವಂಚಿಸಿದೆ ಎನ್ನಿಸುವುದಿಲ್ಲವೇ?
ಕುರಿತು ನಾನೆಂದೂ ಯೋಚಿಸಿಯೇ ಇಲ್ಲ. ಒಂದು ಮೂಲೆಯನ್ನಿದ್ದುಕೊಂಡು ನನ್ನ ಪಾಡಿಗೆ ನಾನು ಬರೆದುಕೊಂಡು ಬಂದಿದ್ದೀನೆ ಅಷ್ಟೆ


2 ಕಾಮೆಂಟ್‌ಗಳು:

v.santhosh kumar kargal ಹೇಳಿದರು...

ನಾಡಿಯವರು ಮೂಲತಃ ನಮ್ಮ ಜೋಗದವರು ಅವರ ಕಥೆ ಕಾದಂಬರಿಗಳಲ್ಲಿ ಸದಾ ಮುಳುಗಡೆಯ ಬದುಕು ಬಿಮ್ಬಿಸುತದೆ . ಅವರನ್ನು ಹಸಿರೆಲೆಯಲ್ಲಿ ಪರಿಚಯಿಸಿದ ರೀತಿ ಅದ್ಭುತ .. ನಿಜವಾದ ಸಾಗರ ತಾಲ್ಲುಕಿನ ಮಾನವಥವಾದಿಗಳಲ್ಲಿ ನಾಡಿಯವರು ಮತ್ತು ಕಾತಿ ಯವರು ಎಂದು ನನ್ನ ಅನಿಸಿಕೆ. ನಿಮ್ಮ ಲೇಖನಕ್ಕೆ ಧನ್ಯವಾದಗಳು ..

Harshakumar Kugwe ಹೇಳಿದರು...

thank u Vasanth Sir