ಅಕ್ಟೋಬರ್ 26, 2011

ಸಹಜ ಕೃಷಿಯಿಂದ ನಮ್ಮನ್ನು ನಾವು ಉಳಿಸಿಕೊಳ್ಳಬಹುದು- ಕಡಿದಾಳು ಶಾಮಣ್ಣ


ಕಡಿದಾಳು ಶಾಮಣ್ಣನವರನ್ನು ಹತ್ತಿರದಿಂದ ನೋಡಿದ್ದು ಹತ್ತು ವರ್ಷದ ಹಿಂದೆಕುದುರೆಮುಖ ಗಣಿಗಾರಿಕೆಯ ವಿರುದ್ಧ ನಡೆಯುತ್ತಿದ್ದ ಜನಾಂದೋಲನದ ಸಂದರ್ಭದಲ್ಲಿ. ನಮ್ಮಂತಹ ಯುವಕರನ್ನು ತಮ್ಮ ನಡೆನುಡಿಗಳಿಂದ  ಪ್ರಭಾವಿಸಿ ಪ್ರೇರೇಪಿಸುತ್ತಿದ್ದ ಶಾಮಣ್ಣನವರನ್ನು  ಸಂಡೆ ಇಂಡಿಯನ್ ಗಾಗಿ ಒಂದೆರಡು ಗಂಟೆಗಳ ಕಾಲ ಭಗವತಿಕೆರೆಯ ಮನೆಯಲ್ಲಿ ಸಂದರ್ಶಿಸುವ ಸಂದರ್ಭ ಒದಗಿ ಬಂದಾಗ ಸಹಜವಾಗಿ ಸಂತೋಷವಾಗಿತ್ತು. ನಾನು ಮತ್ತು ಗೆಳೆಯ ಕಿರಣ್ ಮಾರಶೆಟ್ಟಿಹಳ್ಳಿ ಜೊತೆಗೂಡಿ ಹೋದೆವು. ನಿಜಕ್ಕೂ ಅದೊಂದು ಆಪ್ಯಾಯ ಮಾನವಾದ ಮಾತುಕತೆ. ಶ್ರೀದೇವಿ ಅಕ್ಕ ತೋರಿದ ಅಕ್ಕರೆ ಮರೆಯಲಾರದ್ದು. ಹೊತ್ತು ಸರಿದದ್ದೇ ತಿಳಿಯಯಲಿಲ್ಲಕೊನೆಗೆ ತಮ್ಮ ಸರೋದ್ ಹಾಗೂ ಹಾರ್ಮೋನಿಯಂ ನುಡಿಸಿ ನಮ್ಮ ಮನಸ್ಸನ್ನು ಮುದಗೊಳಿಸಿದರು ಶಾಮಣ್ಣಮತ್ತಷ್ಟು ಹೊತ್ತು ಅವರೊಂದಿಗೆ ಕಳೆಯುವ ಮನಸ್ಸಾಗುತ್ತಿದ್ದರೂ ಕತ್ತಲುಗೂಡಿದ್ದರಿಂದ ಅವರಿಂದ ಬೀಳ್ಕೊಂಡೆವು. ಮರುದಿನ ಶ್ರೀದೇವಿ ಅಕ್ಕನಿಂದ ಒಂದು ಕರೆ ಬಂದಿತು. "ಹರ್ಷಾ, ನೆನ್ನೆ ತುಂಬಾ ಬೇಸರವಾಗಿಬಿಟ್ಟಿತು. ಎಷ್ಟೊಂದು  ಹಣ್ಣುಗಳಿದ್ದವು ಮನೆಯಲ್ಲಿ. ಗಡಿಬಿಡಿಯಲ್ಲಿ ನಿಮಗೆ ಕೊಡಲು ನೆನಪೇ ಆಗಲಿಲ್ಲ. ನೀವು ಹೋದ ಮೇಲೆ ನೆನಪಾಗಿ  ಇಬ್ಬರಿಗೂ ಬಹಳ ನೋವಾಯಿತು. ಮತ್ತೊಮ್ಮೆ ಮನಗೆ ನೀವು ಬರಲೇ ಬೇಕು". ನನಗೂ ಹೃದಯ ತುಂಬಿ ಬಂತು. ’ಖಂಡಿತಾ ಬರ್ತೀವಕ್ಕಾ" ಎಂದೆ.

ಸಹಜ ಕೃಷಿಯಿಂದ ನಮ್ಮನ್ನು ನಾವು ಉಳಿಸಿಕೊಳ್ಳಬಹುದು- ಕಡಿದಾಳು ಶಾಮಣ್ಣ

ನಾಡಿನ ರೈತ ಹಾಗೂ ಸಮಾಜವಾದಿ ಚಳವಳಿಯಲ್ಲಿ ಕಡಿದಾಳು ಶಾಮಣ್ಣ ದೊಡ್ಡ ಹೆಸರು. ಕಳೆದ ನಾಲ್ಕೈದು ದಶಕಗಳಿಂದಲೂ ನಾನಾ ಬಗೆಯ ಕ್ರಿಯಾಶೀಲತೆಯಲ್ಲಿ ತಮ್ಮನ್ನು ಹಾಗೂ ತಮ್ಮ ಸುತ್ತಲ ಪರಿಸರವನ್ನು ಆರೋಗ್ಯವಾಗಿಟ್ಟಿರುವ ಶಾಮಣ್ಣ ಹಲವಾರು ಪ್ರಸ್ತುತ ವಿಷಯಗಳ  ಕುರಿತು ಇಲ್ಲಿ ಮಾತಾಡಿದ್ದಾರೆ.

ನಮ್ಮ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಜೈಲು ಸೇರಿದ್ದಾರೆ. ಈ ಕುರಿತು ಏನು ಪ್ರತಿಕ್ರಿಯೆ ನೀಡುತ್ತೀರಿ? 
ಇದು ನ್ಯಾಯಾಲಯದ ವಿಚಾರ.ಶಿವಮೊಗ್ಗದಲ್ಲಿ ನಡೆಯುತ್ತಿದ್ದ ಚಟುವಟಿಕೆಗಳನ್ನು ನೋಡಿ ಬಹಳ ಬೇಸರವಾಗಿತ್ತು. ಕಡಿದಾಳು ಮಂಜಪ್ಪ, ಶಾಂತವೇವೇರಿ ಗೋಪಾಲಗೌಡರಂತವರು ಇದ್ದ ಜಿಲ್ಲೆಯಲ್ಲಿ ಇವರು ಹೀಗೆ ಮಾಡಬಾರದಿತ್ತು. ಇಲ್ಲಿ ಅಭಿವೃದ್ಧಿ ಅಂತ ರಸ್ತೆ ಅಗಲೀಕರಣ ಮಾಡಿದಾರೆ. ಅದೇನೋ ಸರಿ. ಆದರೆ ಮುಖ್ಯರಸ್ತೆ ಬಿಟ್ಟು ಸ್ವಲ್ಪ ಒಳಗೆ ನೋಡಿದರೆ ಯಾವ ಅಭಿವೃದ್ಧಿಯೂ ಇಲ್ಲ. ಆದರೆ ಇವರು ಸ್ವಂತಕ್ಕೆ ತಡೆ ಇಲ್ಲದೆ ಆಸ್ತಿ ಮಾಡಿಕೊಂಡಿದ್ದು ಸರಿ ಅಂತ ನನಗೆ ಅನ್ನಿಸಿಲ್ಲ. ಯಡಿಯೂರಪ್ಪ ಹೋರಾಟದ ಹಿನ್ನೆಲೆಯಿಂದ ಬಂದವರು, ದಕ್ಷಿಣ ಭಾರತದಲ್ಲಿ ಬಿಜೆಪಿ ಮೊದಲ ಬಾರಿಗೆ ಅಧಿಕಾರವನ್ನು ಪಡೆಯುವಂತೆ ಮಾಡಿದವರು. ಎಲ್ಲಾ ಸರಿ. ಆದರೆ ಈಗ ಹೀಗೆ ಗಂಭೀರ ಅಪವಾದಗಳನ್ನು ಹೊತ್ತು ಜೈಲಿಗೆ ಹೋಗುವಂತಾಗಿದ್ದು ಮಾತ್ರ ಅವಮಾನಕರ.

ರಾಜ್ಯದ ಇನ್ನೂ ಕೆಲವಾರು ರಾಜಕೀಯ ನಾಯಕರು ಜೈಲು ಸೇರಿದ್ದಾರೆ. ಇದು ನಮ್ಮ ನ್ಯಾಯಾಂಗದ ಬಗ್ಗೆ ವಿಶ್ವಾಸವಿಡಲು ಕಾರಣವಾಗಿದೆಯಲ್ಲವಾ?
ಹೌದ. ಜೊತೆಗೆ ಅಣ್ಣಾ ಹಜಾರೆಯವರ ಚಳವಳಿ ಕೂಡಾ ಒಂದು ವಿಶ್ವಾಸ ತರಿಸಿದೆ. ಇಂತವೆಲ್ಲಾ ಆಗಲಿಲ್ಲ ಅಂದಿದ್ದರೆ ಈ ಆಯೋಗಗಳ ವರದಿಗೆ ಯಾವ ಬೆಲೆಯೂ ಇರುತ್ತಿರಲಿಲ್ಲ. ಲೋಕಾಯುಕ್ತ ಆಯೋಗ ನಿಜಕ್ಕೂ ಪ್ರಾಮಾಣಿಕವಾಗಿ ವರದಿಯನ್ನು ನೀಡದ್ದು. ಗೆದ್ದು ಹೋದವನು ಸರಿ ಇಲ್ಲ ಎಂದರೆ ವಾಪಾಸು ಕರೆಸಿಕೊಳ್ಳುವ ಹಕ್ಕು ಇರಬೇಕು ಎಂದು ಲೋಹಿಯಾ ಬಹಳ ಹಿಂದೆಯೇ ಹೇಳಿದ್ದರು. ಇಂತಹ ವಿಚಾರಗಳಿಗೆಲ್ಲಾ  ಇಂದು ಬೆಲೆ ಬರುತ್ತಿರುವುದು ಸಂತೋಷದ ವಿಷಯ.
ನೀವು ರೈತ ಚಳವಳಿಯಲ್ಲಿ ಸಕ್ರಿಯವಾಗಿರುವವರು. ಇಂದು ರಾಜ್ಯದಲ್ಲಿ ರೈತರ ಸ್ಥಿತಿಗತಿ ಹೇಗಿದೆ?
ಈಗಿರುವ ಸರ್ಕಾರ ರೈತರ ಹೆಸರು ಹೇಳಿಕೊಂಡೇ ಸರ್ಕಾರ ಅಧಿಕಾರವಹಿಸಿಕೊಂಡಿತ್ತು. ಆದರೆ ರೈತರಿಗೆ ಶೇಕಡಾ ಒಂದು ದರದಲ್ಲಿ ಸಾಲ ಕೋಡುತ್ತೇವೆ ಎಂದದ್ದು, ಕೃಷಿ ಕಾರ್ಮಿಕರಿಗೆ ಮೂರು ರೂಪಾಯಿ ಕೆಜಿ ಅಕ್ಕಿ ಕೊಡುತ್ತೇವೆ ಎಂದದ್ದು, ಇಂತಹ ಆಶ್ವ್ವಾಸನೆಗಳೆಲ್ಲಾ ಅಂದು ಹೇಳಿದ್ದಷ್ಟೇ. ಮತ್ತೆ ಅನುಷ್ಟಾನಕ್ಕೆ ಬರಲೇ ಇಲ್ಲ. ರೈತರಿಗೆ ಯಾವುವೂ ತಲುಪಲೇ ಇಲ್ಲ. ವ್ಯವಸಾಯ ಇಲಾಖೆ, ಕೃಷಿ ಸಚಿವಾಲಯ ಇದೆ. ಅವರೆಲ್ಲಾ ಕೆಲಸ ಮಾಡಬೇಕಿತ್ತು. ರೆಡ್ಡಿಯವರನ್ನು ಕೃಷಿ ಮಂತ್ರಿಯಾಗಿ ಮಾಡಿದಾರೆ. ಕೃಷಿ ಬಗ್ಗೆ ಅವರಿಗೇನು ಗೊತ್ತು ಹೇಳಿ. ಮದ್ಯಾಹ್ನ ಊಟಕ್ಕೆ ಸಂಡೂರಿಗೆ ಹೆಲಿಕ್ಯಾಪ್ಟರಿನಲ್ಲಿ ಹೋಗಿ ಬರುತ್ತಾರಂತೆ ಆ ಅಸಾಮಿ. ಈಗ ನೋಡಿ ಬಗರ್ ಹುಕುಂ ಸಾಗುವಳಿ ಮಾಡುವ ರೈತರ ಜಮೀನು ಕಿತ್ತುಕೊಳ್ಳೂವ ಪ್ರಯತ್ನ ನಡೆಯುತ್ತಿದೆ. ೫೨ ಶೇಕಡಾ ಅರಣ್ಯವನ್ನು ತೋರಿಸಬೇಕು ಎಂದು ಸುಪ್ರೀಂ ಕೋರ್ಟು ಹೇಳಿದೆ ಅದಕ್ಕಾಗಿ ಹೀಗೆ ಮಾಡುತ್ತೇವೆ ಎನ್ನುತ್ತಿದೆ ಸರ್ಕಾರ. ಹಾವೇರಿಯಲ್ಲಿ ಗೋಲಿಬಾರ್‌ಗೆ ಸಿಕ್ಕಿ ರೈತರು ಸತ್ತರಲ್ಲಾ. ಅವರಿಗೆ ಇನ್ನೂ ಪರಿಹಾರ ಕೊಟ್ಟಿಲ್ಲ. ಇಂದು ಅವರು ರೈತರೇ ಅಲ್ಲ ಎಂದು ವಾದಿಸುತ್ತಿದ್ದಾರೆ. ಇದೆಲ್ಲಾ ಸರಿಯಲ್ಲ. ಈ ಹಿಂದೆ ಸಾಲ ಕೊಟ್ಟರೆ ವಸೂಲಿಗೆ ಬರುತ್ತಿದ್ದರು. ಹರಾಜು ಮಾಡುತ್ತಿದ್ದರು. ಆದರೆ ಈಗ ಏನು ಮಾಡುತ್ತಿದ್ದಾರೆಂದರೆ ಅವರು ಕಂತು ಕಟ್ಟಲಿಲ್ಲ ಎಂದಾಕ್ಷಣ ಕೋರ್ಟಿಗೆ ಹಾಕಿಬಿಡುತ್ತಿದ್ದಾರೆ. ರೈತರು ಹೊಲ ಮನೆ ಬಿಟ್ಟು ಕೋರ್ಟಿಗೆ ಅಲೆದಾಡಬೇಕಾಗಿದೆ. ಇದು ಯಾರ ಕಾಲದಲ್ಲಿತ್ತು ಹೇಳಿ? ಬಗರ್ ಹುಕುಂ ರೈತರನ್ನು ತೆಗೆದುಕೊಂಡು ಮೊದಲು ಹೋರಾಟ ಮಾಡಿದ್ದು ಮೊದಲು ಯಡಿಯೂರಪ್ಪನವರೇ. ಅವರಿಗೆ ಸಮಸ್ಯೆಗಳೇನೂ ಗೊತ್ತಿಲ್ಲ ಎಂದಲ್ಲ. ಆದರೆ ಮೂರು ವರ್ಷಗಳಿಂದ ರೈತರಿಗೆ ಏನೂ ಮಾಡಿಲ್ಲ. ಮಾತೆತ್ತಿದರೆ ಗುಜರಾತ್ ಮಾದರಿ ಎನ್ನುತ್ತಾರೆ. ಇಲ್ಲಿ ಗುಜರಾತ್ ಮಾದರಿ ನಡೆಯುವುದಿಲ್ಲ. ಗುಜರಾತ್ ಆದರೆ ವ್ಯಾಪಾರಿ ರಾಜ್ಯ. ಇಲ್ಲಿ ಅಂತಹ ಗುಜರಾತ್ ಅಳತೆಗೋಲಾಗಿಟ್ಟುಕೊಂಡು ಇಲ್ಲಿ ಅಭಿವೃದ್ಧಿಗೆ ಹೋಗಬಾರದು. ಇಲ್ಲಿ ಕೈಗಾರಿಕೆ ಎಂದರೆ ಕೃಷಿಯೊಂದಿಗೆ ಸಂಬಂಧವಿರುವ ಸಣ್ಣ, ಗೃಹ ಕೈಗಾರಿಕೆಗಳಿಕೆ ಪ್ರಮುಖ ಪಾಶಸ್ತ್ಯ ನೀಡಬೇಕು. ಇಲ್ಲಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಕೈಗಾರಿಕೆಗಳು ಬರಬೇಕು. ಆಯಾ ವ್ಯಾಪ್ತಿಯಲ್ಲಿ ಯಾವ ಸಂಪನ್ಮೂಲ ಸಿಗುತ್ತೋ ಅದಕ್ಕೆ ಸಂಬಂಧಿಸಿದ ಕೈಗಾರಿಕೆ ಬೆಳೆಯಬೇಕು. ಗುಡಿ ಕೈಗಾರಿಕೆಗಳು ಹೆಚ್ಚಬೇಕು. ಕೂಲಿಗಾಗಿ ಕಾಳು ಯೋಜನೆ ಇದೆ. ಆದರೆ ಇಲ್ಲಿ ನೋಡಿ ರಸ್ತೆ ಕೆಲಸ ಟ್ರಾಕ್ಟರ್, ಯಂತ್ರಗಳಿಂದಲೇ ನಡೆಯುತ್ತಿದೆ. ಇದನ್ನೆಲ್ಲಾ ಕೂಲಿ ಜನರಿಂದಲೇ ಮಾಡಬಹುದಲ್ಲಾ. ಇಂತಹ ಯಾವ ವಿಚಾರಗಳನ್ನೂ ಚರ್ಚಿಸಲು ಇಲ್ಲಿ ಆಸ್ಪದವೇ ಇಲ್ಲ. ಮಾತೆತ್ತಿದರೆ ಬರೀ ಹಗರಣಗಳು. ತಾವು ಹೇಳಿದ್ದ ಯಾವ ಕಾರ್ಯಕ್ರಮವನ್ನೂ ಕಾರ್ಯಗತಗೊಳಿಸಿಲ್ಲ.
ಗ್ರಾಮೀಣ ಬದುಕಿನಲ್ಲಿ ಬದಲಾವಣೆಗಳು ಯಾವ ದಿಸೆಯಲ್ಲಿವೆ.

ಹಳ್ಳಿಗಳಲ್ಲಿ ನಮ್ಮ ಕೈಗಾರಿಕಾಕರಣ, ಖಾಸಗೀಕರಣ, ಜಾಗತೀಕರಣದ ಪರಿಣಾಮ ಎಷ್ಟಾಗದೆ ಎಂದರೆ ಗ್ರಾಮಗಳಲ್ಲಿ ಜನರು ವ್ಯವಸಾಯ ಮಾಡಲು ಜನರೇ ಸಿಗುವುದಿಲ್ಲ. ಈಗ ಅಡಿಕೆ ಸುಲಿಯಲು, ನಾಟಿ ಮಾಡಲು, ಒಕ್ಕಲು ಕೆಲಸಕ್ಕೆ ಎಲ್ಲದಕ್ಕೂ ಯಂತ್ರಗಳು ಬಂದಿವೆ. ರೈತರು ನಗರಗಳಗೆ ಗುಳೇ ಹೋಗುತ್ತಿದ್ದಾರೆ. ಇದೆಲ್ಲದರಿಂದ ಕೃಷಿಯ ಮೇಲೆ ಹೊಡೆತ ಬೀಳುತ್ತಿದೆ. ಗುಳೇ ಹೋಗಲಿಕ್ಕೆ ಬೇರೆ ಕಾರಣಗಳನ್ನು ಕೊಡುತ್ತೀವಿ. ಇಂದು ಬಂದಿರುವ ಹಲವಾರು ಸೌಲತ್ತುಗಳು ಸಹ ಇಂತವಕ್ಕೆ ಕಾರಣವಾಗಿವೆ. ಇವನ್ನೆಲ್ಲಾ ತಪ್ಪು ಎನ್ನಲಾಗುವುದಿಲ್ಲ. ಎಲ್ಲರೂ ಶಿಕ್ಷಣ ಪಡೆಯುತ್ತಿದ್ದಾರೆ. ಕೆಲಸ ಹುಡುಕಿಕೊಂಡು ನಗರಗಳಿಗೆ ಹೋಗುತ್ತಿದ್ದಾರೆ. ಇಲ್ಲಿ ಬೇರೆ ಜನರ ಕೂಲಿ ಕೆಲಸಗಳನ್ನು ಯಂತ್ರಗಳು ಆವರಿಸಿಕೊಳ್ಳುತ್ತಿವೆ.  ಹೀಗಾಗಿ ಬದಲಾದ ಸನ್ನಿವೇಶಕ್ಕೆ ನಾವು ಹೊಂದಿಕೊಳ್ಳಲೇ ಬೇಕಾಗಿದೆ. ಆದರೆ ನಾವು ಯಾಂತ್ರೀಕರಣ ಎನ್ನುವಾಗ ಕುರುಡಾಗಿ ಪಾಶ್ಚಿಮಾತ್ಯರನ್ನು ಅನುಸರಿಸುತ್ತೇವೆ. ಅವರ ಯಂತ್ರಗಳನ್ನು ಇಲ್ಲಿ ಉಪಯೋಗಿಸಿತ್ತಿದ್ದೇವೆ. ಇದು ನಮಗೇನೂ ಒಳ್ಳೆಯದು ಮಾಡುವುದಿಲ್ಲ. ನಮ್ಮ ಗ್ರಾಮಕ್ಕೆ ಯಾವ ಬಗೆಯ ಯಂತ್ರಗಳು ಬೇಕೆಂದು ಸರ್ಕಾರ ತಲೆ ಓಡಿಸಬೇಕು. ಇದರ ಜೊತೆಗೆ ಹಳ್ಳಿಗಳಲ್ಲೂ ಹೆಂಗಸರಿಗೆ ಸಮಾನ ವೇತನವನ್ನೂ ಕೊಡುವಂತಾಬೇಕು.

ಸರ್ಕಾರ ಹೇಳುವ ಸಾವಯವ ಕೃಷಿ ಬಗ್ಗೆ ನಿಮ್ಮ ತಕರಾರು ಏನು?
ಸಾವಯವ ಎನ್ನುವುದು ಒಂದು ಕೃಷಿ ವಿಧಾನವಲ್ಲ. ಅದು ಗೊಬ್ಬರದ ಒಂದು ವಿಧ ಅಷ್ಟೆ. ಸಾವಯವ ಗೊಬ್ಬರ ಹಾಕಿ ಮಾಡುವ ಕೃಷಿಗೆ ನೈಸರ್ಗಿಕ ಕೃಷಿ ಅಥವಾ ಸಹಜ ಕೃಷಿ ಎಂದು ಕರೆಯಬೇಕು. ನನ್ನ ತಕರಾರು ಇರುವುದು ಅಷ್ಟೆ. ಇದನ್ನು ಸಾವಯವ ಕೃಷಿ ಎನ್ನುವುದು ಸರಿ ಬರುವುದಿಲ್ಲ. ಇದಕ್ಕಾಗಿ ೨೦- ೨೫ ಕೋಟಿ ಬಜೆಟ್ಟಿನಲ್ಲಿ ತೆಗೆದಿಟ್ಟಿದ್ದಾರೆ. ಆದರೆ ಅದರ ಸಂಪೂರ್ಣ ಲಾಭ ಪಡೆಯುತ್ತಿರುವುದು ಅವರ ಪಾರ್ಟಿಯ ಕಾರ್ಯಕರ್ತರು ಮಾತ್ರ. ಇದರ ಬಗ್ಗೆಯೆಲ್ಲಾ ನಮ್ಮೊಂದಿಗೆ ಮಾತಾಡುತ್ತೇವೆ ಎಂದ ಶಂಕರಮೂರ್ತಿಯವರು ಎರಡು ಸಲ ನಮ್ಮನ್ನು ಕಾಯಿಸಿದರು. ಆದರೆ ಬರಲಿಲ್ಲ. ರಸಗೊಬ್ಬರ, ಕೀಟನಾಶಕಗಳಿಲ್ಲದೆ ಸಹಜ ಕೃಷಿಯನ್ನು ಉತ್ತೇಜಿಸುವ ಸರ್ಕಾರದ ಕ್ರಮವನ್ನು ನಾನು ಬೆಂಬಲಿಸುತ್ತೇನೆ. ಇಲ್ಲಿ ನೋಡಿ, ನಮ್ಮ ಹೊಲಗದ್ದೆಗಳಲ್ಲಿ ನಾವು ಉಪಯೋಗಿಸುವ ರಸಗೊಬ್ಬರಗಳಿಂದಾಗಿ ಎರೆಹುಳುಗಳು ಆಳಕ್ಕೆ ಹೋಗಿವೆ. ಆದರೆ ಇಲ್ಲಿ ಸಾಮಯವ ಕೃಷಿ ಹೆಸರಲ್ಲಿ ಆಫ್ರಿಕಾದಿಂದ ದೊಡ್ಡ ಎರೆಹುಳುಗಳನ್ನು ಆಮದು ಮಾಡಿಕೊಂಡು ಅದೇ ಒಂದು ದೊಡ್ಡ ದಂದೆಯಾಗಿದೆ. ಇದರ ಪರಿಣಾಮ ಏನಾಗುತ್ತದೆಯೋ ಗೊತ್ತಿಲ್ಲ. ಇಂತಹ ನೈಸರ್ಗಿಕ ಕೃಷಿಯ ಉಳಿಕೆ ಕೇವಲ ಸರ್ಕಾರದ ಮೇಲೆ ಅವಲಂಬಿಸಿಲ್ಲ. ಸಹಜ ಕೃಷಿಯ ಪದ್ಧತಿಯಿಂದ ಬೆಳೆದ ಧಾನ್ಯಗಳಿಗೆ ಬೇಡಿಕೆ ಸಿಗುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಮುಂದಾಗಬೇಕು. ನಾವು ಅದನ್ನೇ ಮಾಡುತ್ತಿದ್ದೇವೆ. ನಾವೆಲ್ಲಾ ಉಪಯೋಗಿಸುತ್ತಿರುವುದು ಸ್ಥಳೀಯವಾಗಿ ಕೆಲವು ರೈತರು ನೈಸರ್ಗಿಕ ಕೃಷಿಯಲ್ಲಿ ಬೆಳೆದಿದ್ದನ್ನೇ.
ರೈತರ ಕಷ್ಟಗಳು ಹೆಚ್ಚುತ್ತಿವೆ. ಆದರೆ ರೈತ ಚಳವಳಿ ಅಗತ್ಯ ಪ್ರಮಾಣದಲ್ಲಿ ಶ್ವನಿ ಹೊರಡಿಸುತ್ತಿಲ್ಲ. ಏಕೆ?
ಇಲ್ಲಿ ಇನ್ನು ಚುನಾವಣೆಯ ಆಶೆಗಳು ಉಳಿಸುಕೊಂಡಿವೆ. ಚುನಾವಣೆ ತಂಟೆಗೇ ಹೋಗಬಾರದು. ಅದರಲ್ಲಿ ಭಾಗವಹಿಸಬೇಕು ಎಂದಾಗಲೆಲ್ಲಾ ಮತ್ತೆ ದುಡ್ಡು ಖರ್ಚು ಮಾಡಬೇಕಾಗುತ್ತದೆ. ಯಾವ ಉಪಯೋಗವೂ ರೈತರಿಗಾಗುವುದಿಲ್ಲ. ಈ ಹಿಂದೆ ನಾವು ಹೀಗೆ ವಾದಿಸಿದಾಗ ನಂಜುಂಡಸ್ವಾಮಿಯವರು ನಾವು ಚುನಾವಣೆಗೆ ಹೋಗಲಿಲ್ಲ ಎಂದರೆ ಭ್ರಷ್ಟರಿಗೆ ಒಳ್ಳೇಯದೇ ಆಗುತ್ತದೆ ಎನ್ನುತ್ತಿದ್ದರು. ಆದರೆ ಅವರು ಹೇಳುತ್ತಿದ್ದುದು ಒಂದೊಮ್ಮೆ ನಾವು ಚುನಾವಣೆಗೆ ಹೋಗುವುದಾದರೂ ರೈತ ಸಂಘದ ಪ್ರಣಾಳಿಕೆಯನ್ನಾಧರಿಸಿ ಹೋಗಬೇಕು ಎಂದು. ಇಂದು ಯಾರೂ ಅದನ್ನು ಪಾಲಿಸುತ್ತಿಲ್ಲ. ಒಂದೊಮ್ಮೆ ಪಾಲಿಸಿದರೂ ಜನರೇ ಅದನ್ನು ಕೇಳುವುದಿಲ್ಲ. ತಮ್ಮ ಕೊನೆಯ ದಿನಗಳಲ್ಲಿ ನಂಜುಂಡಸ್ವಾಮಿಯವರಿಗೂ ಇದು ಕಾರ್ಯಸಾಧು ಅಲ್ಲ ಎಂದು ಮನವರಿಕೆಯಾಗಿತ್ತು. ಚುನಾವಣೆಗಳನ್ನು ಬಿಟ್ಟೇ ಬಿಡಬೇಕು ಎಂದು ತೀರ್ಮಾನಿಸಿದ್ದರು.
ಇಬ್ಬಾಗವಾಗಿದ್ದ ರೈತಸಂಘವನ್ನು ವಿಲೀನಗೊಳಿಸುವ ನಿಮ್ಮ ಪ್ರಯತ್ನ ಎಲ್ಲಿಯವರೆಗೆ ಕೈಗೂಡಿದೆ?
ಎರಡೂ ಗುಂಪುಗಳನ್ನು ಒಂದು ಮಾಡಲು ಎರಡು ವರ್ಷ ಕಾಲ ಮುಕ್ಕಾಲು ಕರ್ನಾಟಕವನ್ನು ಸುತ್ತಾಡಿದ್ದೆವು. ಈಗ ಕೆಲವರನ್ನು ಬಿಟ್ಟರೆ ಎಲ್ಲರೂ ಒಂದಾಗಿದ್ದಾರೆ. ಉನ್ನತ ಹುದ್ದೆಗಳ ವಿಚಾರದಲ್ಲಿ ಭಿನ್ನಾಭಿಪ್ರಾಯ ಹೊಂದಿ ಕೆಲವರು ದೂರವಿದ್ದಾರೆ. ಬರುವ ದಿನಗಳಲ್ಲಿ ಕೆಲವು ಬದಲಾವಣೆಗಳೊಂದಿಗೆ ಉಳಿದ ಎಲ್ಲರನ್ನೂ ಒಂದು ಮಾಡುವ ಪ್ರಯತ್ನ ಮಾಡುತ್ತೇವೆ.
ನಮ್ಮ ಬರಹಗಾರ, ಬುದ್ಧಿಜೀವಿ ವರ್ಗ ಎಷ್ಟರ ಮಟ್ಟಿಗೆ ಕ್ರಿಯಾಶೀಲವಾಗಿದೆ ಎನ್ನಿಸುತ್ತದೆ?
ಲಂಕೇಶ್, ರಾಮದಾಸ್ ರಂತವರು ಎಲ್ಲರನ್ನೂ ಒಳಗೊಳಿಸಿಕೊಂಡು ಏನಾದರೂ ಮಾಡಬೇಕೆಂದು ಹೊರಡುತ್ತಿದ್ದರು ಇಂದು ಅಂತಹ ಪ್ರಯತ್ನಗಳನ್ನು ಯಾರೂ ಮಾಡುತ್ತಿಲ್ಲ. ದೇವನೂರು ಮಹಾದೇವ ಅವರು ಒಂದು ಹಂತದಲ್ಲಿ ಸ್ವಲ್ಪ ಉತ್ಸಾಹ ತೋರಿದರು. ಇಂದು ಶಿಕ್ಷಕರಿಗೆ, ಸಾಫ್ಟ್ ವೇರ್ ಇಂಜಿನಿಯರ್‌ಗಳಿಗೆ ಒಂದು ಲಕ್ಷ ರೂಪಾಯಿವರೆಗೆ ಸಂಬಳ. ರೈತರಿಗೆ, ಕೃಷಿ ಕೂಲಿ ಕಾರ್ಮಿಕರಿಗೆ ದಿನಕ್ಕೆ ನೂರು ನೂರೈವತ್ತು ರೂಪಾಯಿ ಸಿಗುವುದೂ ಕಷ್ಟ. ಇದರ ಬಗ್ಗೆ ಶಿಕ್ಷಕ, ಬುದ್ಧಿಜೀವಿ  ವಲಯದಿಂದ ಯಾರಾದರೂ ಪ್ರತಿರೋಧಿಸಿದ್ದಾರಾ? ಶಿಕ್ಷಕರೇ ಇದನ್ನು ವಿರೋಧೀಸಬೇಕಿತ್ತು. ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಇರುವಾಗ ತಮಗೆ ಈ ಪ್ರಮಾಣದಲ್ಲಿ ಸಂಬಳ ಬೇಡ ಎನ್ನಬೇಕಿತ್ತು. ಆ ಬಗೆಯ ರಾಜಕೀಯ ಚಿಂತನೆಗಳಿಗೇ ಇಲ್ಲಿ ಬರವಾಗಿದೆ. ಹಿಂದಾದರೆ ಸಮಾಜವಾದಿ ಪಕ್ಷಗಳಂತವು ಇದ್ದವು. ಹೀಗೆ ಸಂಬಳ ಹೆಚ್ಚಿಸುವುದರ ಹಿಂದೆ ಸರ್ಕಾರದ ತರ್ಕ ಬಹಳ ಸರಳವಾದದ್ದು. ಕಂಪನಿಗಳು ಉತ್ಪಾದಿಸುವ ಕಾರು, ವಾಹನ, ದುಬಾರಿ ಉಪಭೋಗಿ ಸರಕುಗಳನ್ನು ಕೊಳ್ಳಲು ಈ ದೇಶದಲ್ಲಿ ಒಂದು ವರ್ಗ ಸೃಷ್ಟಿಯಾಗಬೇಕು, ಒಂದು ಮಾರುಕಟ್ಟೆ ಬೇಕು ಎನ್ನುವುದಷ್ಟೆ ಅದರ ಒಳಗುಟ್ಟು.
ನೇಕ ಅಂತರ್ಜಾತಿ ವಿವಾಹಗಳನ್ನು ತಾವು ಮುಂದೆ ನಿಂತು ನಡೆಸಿದ್ದೀರಿ. ಇಂತಹ ಪ್ರಯತ್ನಗಳು ಸಮಾಜದಲ್ಲಿ ಜಾತಿ ತಾರತಮ್ಯವನ್ನು ಹೋಗಲಾಡಿಸುವುದಕ್ಕೆ ಎಷ್ಟರ ಮಟ್ಟಿಗೆ ಸಹಕಾರಿಯಾಗಿವೆ? 

ಉದಾಹರಣೆಗೆ ನಮ್ಮ ಭಗವತಿಕೆರೆ. ಇಲ್ಲಿ ನಾವು ಬಂದಾಗ ೫೮ ಮನೆಗಳಷ್ಟೇ ಇದ್ದವು. ನಾವು ಜಮೀನಿನಲ್ಲೇ ಮನೆ ಮಾಡಿಕೊಂಡಿದ್ದೇವೆ. ಲಂಕೇಶ್, ರಾಮದಾಸ್ ಅಂತವರು ಬಂದು ಹೋಗುತ್ತಿದ್ದರು. ಅಂದಿನ ದಿನದಲ್ಲಿ ಕೃಷಿಕೂಲಿಕಾರರ ಒಂದು ಕ್ಯಾಂಪ್ ಇತ್ತು. ಅವೆಲ್ಲಾ ಸೋಗೆಮನೆಗಳಾಗಿದ್ದವು. ಆದರೆ ಒಂದು ದಿನ ಕೆಲಸ ಮಾಡುವಾಗ ಬೆಂಕಿ ಬಿದ್ದು ಗುಡಿಸಲುಗಳೆಲ್ಲಾ ಸುಟ್ಟು ಹೋದವು. ಒಂದು ಮಗು ಕೂಡಾ ಸುಟ್ಟು ಹೋಗಿತ್ತು. ಆಗ ಒಂದಷ್ಟು ಜನತಾ ಮನೆಗಳು ಮಂಜೂರು ಮಾಡಿಸಿದೆವು. ಅವೆಲ್ಲಾ ೪೦*೬೦ ಸೈಟುಗಳು. ಆದರೆ ಮನೆಗಳನ್ನು ನೀಡುವಾಗ ನಾವು ಮಾಡಿದ ಒಂದೇ ತಂತ್ರ ಎಂದರೆ ಅವುಗಳನ್ನು ಚೀಟಿ ಮೂಲಕ ಹಂಚಿದ್ದು. ಅದರಂದ ಜಾತಿ ಆಧಾರದಲ್ಲಿ ಕೇರಿಗಳಾಗಲಿಲ್ಲ. ಲಂಬಾಣಿಗಳು, ದೊಂಬರು, ಜೋಗಿಗಳು ಮೂಂತಾದ ಐದಾರು ಜಾತಿ ಜನರು ಒಟ್ಟಿಗೇ ಜೀವನ ಶುರು ಮಾಡಿದರು. ಇಂದು ನಮ್ಮಲ್ಲಾಗಿರುವ ಮದುವೆಗಳಲ್ಲಿ ನೂರಕ್ಕೆ ಎಪ್ಪತ್ತು ಭಾಗ ಅಂತರ್ಜಾತಿ ಮದುವೆಗಳೇ. ನಾವೂ ನಮ್ಮ ಹಿರೇ ಮಗಳನ್ನು ಕೊಟ್ಟಿದ್ದು ಬೇರೆ ಜಾತಿ ಹುಡುಗನಿಗೆ. ನಮ್ಮ ಮನೆ ಬಾಗಿಲಲ್ಲೇ ನಾಲ್ಕಾರು ಮದುವೆಗಳನ್ನು ನಾನು ಮಾಡಿಸಿದ್ದೇನೆ. ಇತ್ತೀಚೆಗೆ ಶಿವಮೊಗ್ಗದಲ್ಲಿ ನಡೆದ ಅಂತರ್ಜಾತಿ ವಿವಾಹಿತರ ಸಮ್ಮೇಳನ ಬಹಳ ಚೆನ್ನಾಗಿ ನಡೆಯಿತು. ನಮ್ಮ ನಮ್ಮ ಊರುಗಳಲ್ಲಿ ಈ ಬಗೆಯ ಸಣ್ಣ ಪ್ರಯತ್ನಗಳನ್ನಾದರೂ ಮಾಡಿದಾಗ ಜಾತಿ ಭೇಧಗಳು ಅಷ್ಟು ಕಾಡುವುದಿಲ್ಲ.


ನೀವು ಸಮಾಜವಾದಿ ತತ್ವಗಳಲ್ಲಿ ನಂಬಿಕೆ ಇಟ್ಟವರು. ಇಂದಿನ ಸಂದರ್ಭದಲ್ಲಿ ಸಮಾಜವಾದಿ ಸಿದ್ದಾಂತದ ಭವಿಷ್ಯವೇನು?
ಹಿಂದೆ ಲೋಹಿಯಾ, ಕಿಶನ್ ಪಾಟ್ನಾಯಕ್ ಅಂತವರಿದ್ದರು. ಗೌಪಾಲ ಗೌಡರಿದ್ದರು. ಅಂತವರು ಇಂದು ಇಲ್ಲ. ಹೀಗಾಗಿ ಸಮಾಜವಾದಿ ತತ್ವಗಳ ಪ್ರಚಾರ ಆ ಪ್ರಮಾಣದಲ್ಲಿ ಇಂದು ಇಲ್ಲ. ಹಾಗಂತ ತೀರಾ ನಿರಾಶೆಯೇನೂ ಇಲ್ಲ. ಅಲ್ಲಲ್ಲಿ ಸಣ್ಣ ಪ್ರಮಾಣದಲ್ಲಿಯಾದರೂ ಸಮಾಜವಾದಿ ಚಿಂತನೆಗಳನ್ನು ಜೀವಂತವಾಗಿಟ್ಟುಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ. ಕಳೆದ ಸಲ ಹೆಗ್ಗೋಡಿನಲ್ಲಿ ಈ ಸಲ ಕುಪ್ಪಳಿಯಲ್ಲಿ ಶಿಬಿರ ನಡೆಯುತ್ತಿವೆ. ಅಂದು ನಡೆಯುತ್ತಿದ್ದ ಅನೇಕ ಶಿಬಿರಗಳಲ್ಲಿ ನಾನು ಮತ್ತು ನಮ್ಮ ಕೆ.ವಿ.ಸುಬ್ಬಣ್ಣನವರು ಭಾಗವಹಿಸುತ್ತಿದ್ದೆವು. ಅವರಂತೂ ಎಲ್ಲೇ ಶಿಬಿರಗಳಿರಲಿ ಅಲ್ಲಿಗೆ ಖಾಯಂ ಗಿರಾಕಿ. ಇಂದು ಸಹ ಸಣ್ಣ ಪ್ರಮಾಣದಲ್ಲಿ ನಡೆಯುತ್ತಿವೆ. ಹಿಂದೆ ನಮ್ಮ ವೀರಶೈವ ಮಠಗಳೂ ಬಹಳ ಒಳ್ಳೆಯ ಕೆಲಸ ಮಾಡುತ್ತಿದ್ದವು. ಆದರೆ ಇಂದು ನೋಡಿ ಏನಾಗಿದೆ. ಅವೆಲ್ಲಾ ಭ್ರಷ್ಟರ ಬೆಂಬಲಕ್ಕೆ ನಿಂತುಬಿಟ್ಟಿವೆ. ಯಡಿಯೂರಪ್ಪ ಮಠಗಳಿಗೆ ಕೋಟಿ ಕೋಟಿ ನೀಟಿ ಅವುಗಳನ್ನೂ ಭ್ರಷ್ಟಗೊಳಿಸಿದರು. ಈಗ ಅವು ಇವರಿಗೆ ಬೆಂಬಲಿಸಿವೆ. ಸರ್ಕಾರದ ಖಜಾನೆಯಿದ ಯಾವತ್ತೂ ಮಠಗಳಿಗೆ ಹಣ ಕೊಡಬಾರದು.

ನಮ್ಮ ಸಮಾಜವನ್ನು ಕಾಡುತ್ತಿರುವ ಸಮಸ್ಯೆಗಳಲ್ಲಿ ಯಾವುದು ಪ್ರಧಾನ ಎನ್ನಿಸುತ್ತದೆ?  

ಸಮಾಜದಲ್ಲಿರುವ ಆರ್ಥಿಕ ತಾರತಮ್ಯವೇ ಬಹಳ ಪ್ರಮುಖವಾದುದು. ದುಡ್ಡಿದವನೇ ದೊಡ್ಡಪ್ಪ ಎನ್ನುವ ನೀತಿ ಇಲ್ಲಿದೆ. ಇಲ್ಲಿ ಯಾವುದೇ ಒಂದು ಸಮಸ್ಯೆಯನ್ನು ಪ್ರತ್ಯೇಕವಾಗಿ ಬಗೆಹರಿಸಲಾಗಲ್ಲ. ಎಲ್ಲವೂ ಒಂದಕ್ಕೊಂದು ತಳುಕು ಹಾಕಿಕೊಂಡಿದಾವೆ.
ನಮ್ಮ ಯುವಕರಿಗೆ ಏನು ಸಂದೇಶ ನೀಡಬಯಸುತ್ತೀರಿ?
ಯುವಕರು ಗ್ರಾಮೀಣ ಜನರಿಗೆ ಅನುಕೂಲವಾಗುವಂತಹ ಸಂಶೋಧನೆಗಳಲ್ಲಿ ತೊಡಗಬೇಕು. ಇಂತಹ ಪ್ರಯತ್ನ ನಡೆಸುವ ಯುವಜನರೇ ಈ ಸಮಾಜಕ್ಕೆ ಆಸ್ತಿಯಾಗುತ್ತಾರೆ ಎನ್ನುವುದು ನನ್ನ ಭಾವನೆ.

ಕಾಮೆಂಟ್‌ಗಳಿಲ್ಲ:

ಮಾನ್ಯ ಸಬಾದ್ಯಕ್ಷರಿಗೆ ಒಂದು ಬಹಿರಂಗ ಪತ್ರ

  ಮಾನ್ಯ ವಿದಾನಸಬೆಯ ಸಬಾದ್ಯಕ್ಷರಾದ ಯು ಟಿ ಕಾದರ್ ಅವರೆ, ಶಾಸಕರ ಶಿಬಿರಕ್ಕೆ ಕೆಲವರು ಆಗಮಿಸುವುದು ದೃಡಪಟ್ಟಿಲ್ಲ ಎಂದು ತಿಳಿಸಿದ್ದೀರಿ. ಸಂತೋಷ. ದೃಡಪಡುವುದೇ ಬೇಡ ಎಂದ...

ಮರದೊಂದು ಎಲೆ ನಾನು..

ನನ್ನ ಫೋಟೋ
A Writer, Researcher, Journalist and Activist. Born and brought up from Kugwe a village near Sagara, Shimoga district of Karnataka state. Presently working as the Editor In Chief of PEEPAL MEDIA /PEEPAL TV.