ಹಲವಾರು ದಿನಗಳಿಂದ ನನಗೆ ಒಂದು ಬಯಕೆಯಿತ್ತು. ಅದೇನೆಂದರೆ ಅಮೆರಿಕವೇ ಅಮೆರಿಕದ ವಿರುದ್ದ ಬಂಡೆದ್ದು ನಿಲ್ಲಬೇಕು ಎನ್ನುವ ಬಯಕೆ ಅದು. ಕಳೆದ ಸೆಪ್ಟೆಂಬರ್ ೧೭ರಿಂದ ಅಮೆರಿಕದಲ್ಲಿ ನಡೆಯುತ್ತಿರುವ ಘಟನಾವಳಿಗಳನ್ನು ನೋಡಿ ಕೊಂಚ ಥ್ರಿಲ್ ಆಗುತ್ತಿದೆ. ಜಗತ್ತಿನೆಲ್ಲೆಡೆ ನಡೆಯುತ್ತಿರುವ ಜನಾಂದೋಲನಗಳ ಸಾಲಿನಲ್ಲಿ ಈಗ ಅಮೆರಿಕದ ಜನರೂ ಹೊಸ ಹೆಜ್ಜೆ ಇಟ್ಟಿರುವುದು ನೋಡಿ ಖುಷಿಯಾಗಿದೆ. ಈ ಬಂಡಾಯ ಎಲ್ಲಿಯವರಗೆ ನಡೆಯುತ್ತದೆ, ಏನು ಸಾಧಿಸುತ್ತದೆ, ಯಾವುದೂ ಖಾತ್ರಿಯಿಲ್ಲ. ಆದರೆ ಜಗತ್ತಿನ ಪ್ರತಿಯೊಬ್ಬ ಪ್ರಜಾಪ್ರಭುತ್ವವಾದಿಯೂ ಮುಕ್ತ ಮನಸ್ಸಿನಿಂದ ಬೆಂಬಲಿಸಬೇಕಾದ ಚಳವಳಿ ಇದು ಎಂದು ಮಾತ್ರ ಹೇಳಬಹುದು. ಇದಕ್ಕೆ ಕಾರಣಗಳನ್ನು ಸ್ವಲ್ಪ ವಿವರವಾಗಿ ಗಮನಿಸುವ ಮುನ್ನ ಇಲ್ಲಿ ಏನೇನಾಗುತ್ತಿದೆ ಎಂದು ನೋಡೋಣ.
ನಿಜಕ್ಕೂ ಅಚ್ಚರಿಯ ಹಾಗೂ ಬೇಸರದ ಸಂಗತಿಯಿಂದರೆ ಅಲ್ಲಿ ನಡೆಯುತ್ತಿರುವ ಇಂತಹ ಒಂದು ಅದ್ಭುತ ಬೆಳವಣಿಗೆಗ ನಮ್ಮ ಮಾಧ್ಯಮಗಳ ಪ್ರತಿಕ್ರಿಯೆ ಏನೂ ಇಲ್ಲವೆನ್ನುವಷ್ಟರ ಮಟ್ಟಿಗಿರುವುದು. ಇದು ಮಾಧ್ಯಮಗಳ ಜಾಣಮೌನವಾ? ಇದು ಇಲ್ಲಿನ ಮಾಧ್ಯಮಗಳ ಪರಿಸ್ಥಿತಿ ಮಾತ್ರವಲ್ಲ. ಅಮೆರಿಕದ ಮುಖ್ಯವಾಹಿನಿ ಮಾಧ್ಯಮಗಳೂ ಬೇಕೆಂದೇ ಈ ಚಳವಳಿಯ ಕುರಿತು ಉಪೇಕ್ಷೆಯನ್ನೂ ಹಾಗೂ ಅಪಪ್ರಚಾರವನ್ನೂ ನಡೆಸುತ್ತಿವೆ. ಈಜಿಪ್ಟಿನ, ಲಿಬಿಯಾದ, ಆಥವಾ ನಮ್ಮದೇ ಅಣ್ಣಾ ಚಳವಳಿಗಳನ್ನು ಮುಖಪುಟದಲ್ಲಿ ವಾರಗಟ್ಟಲೆ ವರದಿ ಮಾಡಿದ ಪತ್ರಿಕೆಗಳಿಗೆ, ಟೀವಿ ಚಾನಲ್‌ಗಳಿಗೆ ಈಗ ಕನಿಷ್ಟ ಒಂದು ವರದಿಯನ್ನೂ ಮಾಡದಿರುವಂತದ್ದು ಏನಾಗಿದೆ?!
ಈಗ ಅಮೆರಿಕದಲ್ಲಿ ಆರಂಭಗೊಂಡಿರುವ ಚಳವಳಿ ‘ವಾಲ್ ಸ್ಟ್ರೀಟ್ ವಶಪಡಿಸಿಕೊಳ್ಳಿ’ ಚಳವಳಿ. ಮೊದಲಿಗೆ ಹತ್ತಾರು ಸಂಖ್ಯೆಯಲ್ಲಿ ಚಳವಳಿಗಾರರು ಆರಂಭಿಸಿದ ಈ ಚಳವಳಿಯಲ್ಲಿ ದಿನಕಳೆದಂತೆ ಸಾವಿರ ಸಾವಿರ ಸಂಖ್ಯೆಯಲ್ಲಿ ಜನರನ್ನು ಸೇರಿಸಿಕೊಂಡು ಕಾಳ್ಗಿಚ್ಚಿನಂತೆ ಅಮೆರಿಕಾದಾದ್ಯಂತ ವ್ಯಾಪಿಸುತ್ತಿದೆ. ಅದರಲ್ಲೂ ಮುಖ್ಯವಾಗಿ ಹೊಸಪೀಳಿಗೆಯ ವಿದ್ಯಾರ್ಥಿಗಳು, ಯುವಕರು, ಕಾರ್ಮಿಕರು ಸೇರಿಕೊಳ್ಳುತ್ತಿದ್ದಾರೆ. ಮಾತ್ರವಲ್ಲ ’ವಾಲ್‌ಸ್ಟ್ರೀಟ್ ವಶಪಡಿಸಿಕೊಳ್ಳಿ’ ಚಳವಳಿಯನ್ನು ಬೆಬಂಬಲಿಸಿ ವಾಷಿಂಗ್ಟನ್ ಡಿಸಿ, ಬೋಸ್ಟನ್, ಚಿಕಾಗೋ, ಫಿಲಡೆಲ್ಫಿಯಾ, ಹೂಸ್ಟನ್, ಪೋರ್ಟ್‌ಲೆಂಟ್, ಓರೆಗಾಂವ್, ಸಿಯಾಟಲ್, ಹೂಸ್ಟನ್, ಟೆಕ್ಸಾಸ್, ಮುಂತಾದ ಹತ್ತಾರು ಕಡೆಗಳಲ್ಲಿ ಅದೇ ಮಾದರಿಯ ಚಳವಳಿಗಳೂ ಆರಂಭಗೊಳ್ಳುತ್ತಿವೆ. ದೊಡ್ಡ ಮತ್ತು ಸಣ್ಣ ಸುಮಾರು ಇನ್ನೂರು ನಗರಗಳಲ್ಲಿ ಪ್ರತಿಭಟನೆಗಳಾಗಿವೆ. ಮೊದಮೊದಲು ಇದನ್ನು ಬರೀ ಪಡ್ಡೆ ಹುಡುಗರ ಬಂಡಾಯ ಎಂದು ಉಪೇಕ್ಷೆ ಮಾಡಿದ್ದವರಿಗೆ ಈಗ ಆಘಾತವಾಗಿದೆ. ಅಮೆರಿಕದ ಹಲವಾರು ದೊಡ್ಡ ಕಾರ್ಮಿಕ ಸಂಘಟನೆಗಳೂ ನೆನ್ನೆಯಷ್ಟೇ ತಮ್ಮ ಬಹಿರಂಗ ಬೆಂಬಲವನ್ನು ಘೋಷಿಸಿವೆ. ವಾಲ್‌ಸ್ಟ್ರೀಟ್ ಬಳಿ ಇರುವ ಝುಕ್ಕೊಟ್ಟಿ ಪಾರ್ಕ್‌ನಲ್ಲಿ ನೂರಾರು ಕಾರ್ಯಕರ್ತರು ಕಾರ್ಡ್‌ಬೋರ್ಡ್ ಜೋಪಡಿ ಕಟ್ಟಿಕೊಂಡು ಕಳೆದ ಹದಿನೈದು ಇಪ್ಪತ್ತು ದಿನಗಳಂದ ಜಾಂಡಾ ಹೂಡಿದ್ದರೆ ಇವರಿಗೆ ಬಂಬಲವಾಗಿ ಅಮೆರಿಕದಾದ್ಯಂತ ಸಾವಿರಾರು ಜನರು ಕೇರಾಫ್ ‘ಆಕ್ಯುಪೈ ವಾಲ್‌ಸ್ಟ್ರೀಟ್’ ವಿಳಾಸಕ್ಕೆ ತಮ್ಮ ಕೈಲಾಗುವಂತಾದ್ದನ್ನೆಲ್ಲಾ ಸಹಾಯ ಮಾಡುತ್ತಿದ್ದಾರೆ. ಊಟ, ಬಟ್ಟೆ, ಬರೆ, ಮೊಬೈಲ್ ಫೋನ್‌ಗಳಿಗೆ ಬೇಕಾದ ಬ್ಯಾಟರಿಗಳು, ಬ್ಯಾಕಪ್ ಸರಕುಗಳು, ಬಾರಿಸಲು ಡ್ರಮ್‌ಗಳು, ಪೀಪಿಗಳು, ಹೀಗೆ ಏನೇನು ಸಾಧ್ಯವೋ ಎಲ್ಲಾ ಅಂಚೆಯ ಮೂಲಕ ಹರಿದು ಬರುತ್ತವೆ. ಗ್ರೀನ್ ಪೀಸ್ ಸಂಘಟನೆ ಈಗ ಪ್ರತಿಭಟನೆಯ ಸ್ಥಳದಲ್ಲಿ ಸೌರ ವಿದ್ಯುತ್ತನ್ನು ಅಳವಡಿಸುವ ಹೊಣೆ ಹೊತ್ತುಕೊಂಡಿದೆ. ಮಾತ್ರವಲ್ಲದೆ ಈಗ ಈ ಚಳುವಳಿ ‘ಸಾಮಾನ್ಯ ಶಾಸನಸಭೆ’ಗಳನ್ನೂ (General assembly) ಸಂಘಟಿಸುತ್ತಿದೆ.
ಒಟ್ಟಾರೆಯಾಗಿ ನಿಧಾನಕ್ಕೆ ಈ ಬಂಡಾಯ ಒಂದು ಬೃಹತ್ ಜನಾಂದೋಲನವಾಗಿ ಚಳವಳಿಯಾಗುವ. ಕಳೆದ ಒಂದು ದಶಕದಲ್ಲಿ ಅಮೆರಿಕದಲ್ಲಿ ವ್ಯವಸ್ಥೆಯ ವಿರುದ್ಧ ಜನಸಾಮಾನ್ಯರಲ್ಲಿ ಮಡುಗಟ್ಟಿರುವ ಆಕ್ರೋಶವನ್ನು ಗಮನಿಸಿದರೆ ಈ ಸೂಚನೆ ತೋರುತ್ತದೆ.
ನೀವೆಲ್ಲಾ ೧೯೮೪ರಲ್ಲಿ ತಥಾಕಥಿತ ಕಮ್ಯುನಿಸ್ಟ್ ಚೀನಾ ಸರ್ಕಾರದ ಸರ್ವಾಧಿಕಾರದ ವಿರುದ್ಧ ನಡೆಸಿದ್ದ ದಂಗೆಯ ಕುರಿತು ಕೇಳಿರಬಹುದು. ಇಂದು ಅಮೆರಿಕದಲ್ಲಿ ನಡೆಯುತ್ತಿರುವ ಈ ಚಳವಳಿಯನ್ನು ಗಮನಿಸಿದರೆ ಬಹುತೇಕ ಅದೇ ಮಾದರಿಯಲ್ಲಿ ನಡೆಯುತ್ತಿರುವುದು ತಿಳಿಯುತ್ತಿದೆ. ಆದರೆ ಇಲ್ಲಿ ನಡೆಯುತ್ತಿರುವುದು ಭಾರತದಲ್ಲಿ ಅಣ್ಣಾ ಹಜಾರೆ ಕೇವಲ ಕಾಂಗ್ರೆಸ್ ವಿರುದ್ಧ ನಡೆಸಿದಂತೆ ಬರೀ ಒಬಾಮಾ ಸರ್ಕಾರದ ನೀತಿಗಳ ವಿರುದ್ಧ ಮಾತ್ರವಲ್ಲ. ಇಡೀ ಜಗತ್ತಿನ ಹಣಕಾಸು ಮಾರುಕಟ್ಟೆಯನ್ನು ತನ್ನ ಬೆರಳ ತುದಿಯಲ್ಲಿ ಕುಣಿಸುತ್ತಿರುವ ‘ವಾಲ್‌ಸ್ಟ್ರೀಟ್’ನ ಹಣಕಾಸು ಸರ್ವಾಧಿಕಾರದ ವಿರುದ್ಧ ನಡೆಯುತ್ತಿರುವ ಚಳವಳಿ ಇದು.
ಈಗ ನಡೆಯುತ್ತಿರುವ ಚಳವಳಿಯ ರೂಪುರೇಷೆಯನ್ನು ಮೊದಲು ನೀಡಿದ್ದು ಕೆನಡಾದಲ್ಲಿರುವ ‘ಅಡ್ಬಸ್ಟರ್’ ಎಂಬ ಗುಂಪು. ಈ ಗುಂಪಿನ ಸಲಹೆ ಮೇರೆಗೆ ಹೋರಾಟದ ರೂಪುರೇಷೆಯನ್ನು ಸಿದ್ಧಪಡಿಸಿ ಸೆಪ್ಟೆಂಬರ್ ೧೭ರಂದು ಆರಂಭವಾಯಿತು. ಈ ಚಳವಳಿಯವರು ತಮ್ಮ ಹೋರಾಟವನ್ನು ಘೋಷಿಸಿಕೊಂಡಿರುವುದು ಹೀಗೆ- “ಈಜಿಪ್ಟ್, ಗ್ರೀಸ್, ಸ್ಪೇನ್ ಹಾಗೂ ಐಸ್‌ಲ್ಯಾಂಡ್‌ಗಳಲ್ಲಿನ ನಮ್ಮ ಸಹೋದರಂತೆಯೇ ನಾವು ಕ್ರಾಂತಿಕಾರಿ ಅರಬ್ ಬಂಡಾಯವನ್ನು ಅಮೆರಿಕದಲ್ಲಿ ಪ್ರಜಾಪ್ರಭುತ್ವವನ್ನು ಪುನರ್‌ಸ್ಥಾಪಿಸಲು ಬಳಸುತ್ತಿದ್ದೇವೆ. ಇದರಲ್ಲಿ ಭಾಗವಹಿಸುವ ಪ್ರತಿಯಿಬ್ಬರ ಸುರಕ್ಷತರೆಯನ್ನು ಕಾಪಾಡುವ ನಿಟ್ಟಿನಲ್ಲಿ ನಾವು ಅಹಿಂಸಾ ಮಾರ್ಗವನ್ನು ಬಳಸುತ್ತಿದ್ದೇವೆ. ... ‘ವಾಲ್‌ಸ್ಟ್ರೀಟ್ ವಶಪಡಿಸಿಕೊಳ್ಳಿ’ ಒಂದು ನಾಯಕರಹಿತ ಚಳವಳಿ. ಇದರಲ್ಲಿ ಬೇರೆ ಬೇರೆ ವರ್ಣ, ಲಿಂಗ, ರಾಜಕೀಯ ದೃಷ್ಟಿಕೋನಗಳ ಜನರು ಭಾಗವಹಿಸುತ್ತಿದ್ದಾರೆ. ನಮ್ಮೆಲ್ಲರಲ್ಲಿರುವ ಸಮಾನ ಅಂಶವೆಂದರೆ ೧% ಜನರ ದುರಾಸೆ ಹಾಗೂ ಭ್ರಷ್ಟಾಚಾರವನ್ನು ೯೯%ಜನರಾದ ನಾವು ಇನ್ನು ಮುಂದೆ ಸಹಿಸಲು ಸಾಧ್ಯವೇ ಇಲ್ಲ”.
ಇಲ್ಲಿ ಮೊಳಗುತ್ತಿರುವ ಘೋಷಣೆಗಳನ್ನೂ ನೋಡಿ-
“ನಾವು ಬಹಳ ಮಂದಿ, ಅವರು ಕೆಲವೇ ಮಂದಿ, ನಾವು ಎದ್ದು ನಿಂತರೆ ಅವರೇನು ಮಾಡ್ತಾರೆ?”; “ಅವರು ಎಷ್ಟು ಅಂತ ಶ್ರೀಮಂತರಾಗುತ್ತಲೇ ಹೋಗುತ್ತಾರೆ? ಮೊದಲು ವಿದ್ಯಾರ್ಥಿಗಳ ಎಲ್ಲಾ ಸಾಲ ಮನ್ನಾ ಮಾಡಿ”; “ಅವರು ಹೇಳ್ತಾರೆ ಕಟ್ ಬ್ಯಾಕ್, ನಾವು ಹೇಳ್ತೀವಿ- ಫೈಟ್ ಬ್ಯಾಕ್”; “ಸಾಲಪಾವತಿಗೆ ಒಂದೇ ದಾರಿ- ಯುದ್ಧ ನಿಲ್ಲಿಸಿ, ಶ್ರೀಮಂತರ ಮೇಲೆ ತೆರಿಗೆ ಹೆಚ್ಚಿಸಿ”, ಹೀಗೆ ಇಂತಹ ಹಲವಾರು ಘೋಷಣೆಗಳನ್ನು ಹಾಕುತ್ತಾ ಹುಮ್ಮಸ್ಸಿನಿಂದ ಪಾಲ್ಗೊಳ್ಳುತ್ತಿರುವ ಕಾರ್ಯಕರ್ತರ ಚಳುವಳಿಗೆ ಇಂದಿನ ಸಂದರ್ಭದಲ್ಲಿ ಜಾಗತಿಕ ಮಟ್ಟದ ಪ್ರಾಮುಖ್ಯತೆ ಇದೆ.
ಈ ಚಳವಳಿಯ ಹಲವಾರು ಬೇಡಿಕೆಗಳಲ್ಲಿ ಪ್ರಮುಖವಾದವೆಂದರೆ,
* ಜನರ ಎಲ್ಲಾ ಬಗೆಯ ಸಾಲಗಳನ್ನು ಮನ್ನಾ ಮಾಡಬೇಕು.
* ಸರ್ಕಾರ ಜನರ ತೆರಿಗೆ ಹಣದಲ್ಲಿ ಬೇಲೌಟ್ ನೀಡುವುದನ್ನು ನಿಲ್ಲಿಸಬೇಕು.
* ಉದ್ಯೋಗ ಭದ್ರತೆ ಹಾಗೂ ಉತ್ತಮ ವೇತನ ಖಾತ್ರಿಗೊಳಿಸಬೇಕು.
* ಸಾಮಾಜಿಕ ಭದ್ರತಾ ಕ್ರಮಗಳನ್ನು ಕಡಿತಗೊಳಿಸದೇ ಹೆಚ್ಚಿಸಬೇಕು.
* ಸರ್ವರಿಗೂ ಹೆಲ್ತ್ ಕೇರ್ ವ್ಯವಸ್ಥೆ ಜಾರಿಗೊಳಿಸುವುದು.
* ಸರ್ಕಾರದ ಆದಾಯ ಹೆಚ್ಚಿಸಲಿಕ್ಕಾಗಿ ಶೇಕಡಾ ೧೦ಷ್ಟು ಶ್ರೀಮಂತರ ಮೇಲೆ ತೆರಿಗೆ ಹೆಚ್ಚಿಸಬೇಕು
* ದೊಡ್ಡ ಕಾರ್ಪೊರೇಟ್ ಸಂಸ್ಥೆಗಳು ಜನತೆಯ ಭಾಗ ಅಲ್ಲ ಎಂದು ಸಂವಿಧಾನದಲ್ಲಿ ತಿದ್ದುಪಡಿ ತರಬೇಕು.
* ಉಚಿತ ಕಾಲೇಜು ಶಿಕ್ಷಣ ನೀಡಬೇಕು.
* ಮೂಲಸೌಕರ್ಯಗಳಿಗಾಗಿ (ನೀರು, ಒಳಚರಂಡಿ, ರೈಲ್ವೆ, ರಸ್ತೆ, ಸೇತುವೆ, ವಿದ್ಯುತ್) ಒಂದು ಲಕ್ಷಕೋಟಿ ಡಾಲರ್ ಮೀಸಲಿಡಬೇಕು.
* ಪರಿಸರ ಸಂರಕ್ಷಣೆಗಾಗಿ ಒಂಟು ಲಕ್ಷ ಕೋಟಿ ಡಾಲರ್ ಮೀಸಲಿಡಬೇಕು.
* ತೈಲ ಇಂಧನಾಧಾರಿತ ವಿದ್ಯುತ್ ಮೇಲಿನ ಅವಲಂಬನೆ ಕೊನೆಗೊಳಿಸಿ ಪರ್ಯಾಯ ಮಾರ್ಗಗಳನ್ನು ಅಭಿವೃದ್ಧಿಪಡಿಸಬೇಕು.
* ಲಿಂಗ ಹಾಗೂ ಜನಾಂಗೀಯ ಭೇಧಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಸಮಾನಹಕ್ಕು ತಿದ್ದು ಪಡಿ ತರಬೇಕು, ಇತ್ಯಾದಿ.
‘ವಾಲ್‌ಸ್ಟ್ರೀಟ್ ವಶಪಡಿಸಿಕೊಳ್ಳಿ’ ಚಳವಳಿಯ ಲೋಗೋ ನೋಡಿ. ’ಗೂಳಿ’ಯ ಮೇಲೆ ನೃತ್ಯಗೈಯುತ್ತಿರುವ ಯುವತಿಯ ಚಿತ್ರ! ಈ ಚಳವಳಿ ತನ್ನ ಕೇಂದ್ರವನ್ನು ವಾಲ್‌ಸ್ಟ್ರೀಟನ್ನೇ ಕೇಂದ್ರಮಾಡಿಕೊಂಡಿರುವುದಕ್ಕೆ ಕಾರಣವಿದೆ. ಇಂದು ಅಮೆರಿಕದ ಇಡೀ ಹಣಕಾಸು ವ್ಯವಹಾರ ನಡೆಯುವುದು ವಾಲ್‌ಸ್ಟ್ರೀಟ್‌ನಲ್ಲಿ. ಜಗತ್ತಿನ ಅತಿದೊಡ್ಡ ಶೇರು ಮಾರುಕಟ್ಟೆಯಾದ ನ್ಯೂಯಾರ್ಕ್ ಸ್ಟಾಕ್ ಎಕ್ಸ್‌ಚೇಂಜ್ ಹಾಗೂ ನಾಸ್ಡಾಕ್, ಅಮೆರಿಕನ್ ಸ್ಟಾಕ್ ಎಕ್ಸ್ ಚೇಂಜ್, ಎಲ್ಲಾ ಇರುವುದು ಇಲ್ಲೇ.
ತಮ್ಮ ಚಳವಳಿಗೆ ಮುಖ್ಯವಾಹಿನಿ ಮಾಧ್ಯಮಗಳು ಬೆಂಬಲ ನೀಡಲಾರವು ಎಂಬ ಸಂಶಯವಿಟ್ಟುಕೊಂಡೇ ಚಳವಳಿಗಾರರು ಸಾಧ್ಯವಿರುವ ಎಲ್ಲಾ ಪರ್ಯಾಯ ಮಾಧ್ಯಮಗಳನ್ನೂ ಬಳಸಿಕೊಳ್ಳುತ್ತಿದ್ದಾರೆ. ‘ಆಕ್ಯುಪೈ ವಾಲ್‌ಸ್ಟ್ರೀಟ್ ಜರ್ನಲ್ ಎಂಬ ಪತ್ರಿಕೆಯನ್ನೂ’ ಹೊರತರುತ್ತಿದ್ದಾರೆ. ಅದರ ಮೊದಲ ಸಂಚಿಕೆಯ ಮುಖಪುಟದಲ್ಲೇ “ಕ್ರಾಂತಿ ಈಗ ತಾಯ್ನಾಡಿನಲ್ಲೇ ಭುಗಿಲೆದ್ದಿದೆ” ಎಂಬ ಒಕ್ಕಣೆಯಿತ್ತು. ಇದರೊಂದಿಗೆ ಫೇಸ್‌ಬುಕ್, ಟಿಟರ್‌ಗಳು, ಯೂಟ್ಯೂಬ್, ವೆಬ್‌ಸೈಟ್ ಹೀಗೆ ಎಲ್ಲವೂ ನಿರಂತರವಾಗಿ ಜನಸಾಮಾನ್ಯರಿಗೆ ಸುದ್ದಿವಾಹಿನಿಗಳಾಗಿ, ಚರ್ಚಾ ವೇದಿಕೆಗಳಾಗಿ ಕೆಲಸ ಮಾಡುತ್ತಿದೆ. ಇದೀಗ ಆನ್‌ಲೈನ್ ಚರ್ಚೆಗಳನ್ನು ಆರಂಭಿಸಿದ್ದಾರೆ. ಜನರು ವ್ಯಾಪಕವಾಗಿ ಬಳಸುವ ವಿಕಿಪಿಡಿಯಾ ಕೂಡಾ ಚಳವಳಿಯ ಬೆಳವಣಿಗೆಯನ್ನು ದಾಖಲಿಸುತ್ತಿದೆ. ಅರಬ್ ಹಾಗೂ ಭಾರತದಲ್ಲೇ ಸಾಕಷ್ಟು ಕೆಲಸ ಮಾಡಿರುವ ಇವುಗಳೆಲ್ಲಾ ಅಮೆರಿಕದಲ್ಲಿ ಮಾಡದಿರುತ್ತವೆಯೆ?
ಸೆಪ್ಟೆಂಬರ್ ೧೭ರಿಂದ ಆರಂಭವಾದ ಈ ಚಳವಳಿಯ ಮೊದಲ ದಿನ ಸುಮಾರು ಒಂದು ಸಾವಿರ ಕಾರ್ಯಕರ್ತರು ಬೀದಿಗಳಲ್ಲಿ ಜಮಾಯಿಸಿ ಝುಕ್ಕೊಟ್ಟಿ ಪಾರ್ಕ್‌ನಲ್ಲಿ ಕಾರ್ಡ್‌ಬೋರ್ಡ್‌ಗಳ ಸಹಾಯದಿಂದ ಜೋಪಡಿ ಹಾಕಿಕೊಂಡು ತಂಗಿದ್ದರು, (ನ್ಯೂಯಾರ್ಕ್ ಪೋಲೀಸ್ ಇಲಾಖೆ ಟೆಂಟ್ ಬಳಕೆಯನ್ನು ನಿಷೇಧಿಸಿದ ಕಾರಣ). ಆ ವಾರ ಪೋಲೀಸರು ನಾಲ್ಕು ಜನರನ್ನು ಬಂಧಿಸಿದ್ದರು. ಸೆ.24ರಂದು ಕನಿಷ್ಟ 80 ಜನರನ್ನು ಬಂಧಿಸಲಾಗಿತ್ತು. ಅಂದು ನಡೆದ ಜಟಾಪಟಿಯಲ್ಲಿ ಮೂವರು ಮಹಿಳೆಯರ ಮೇಲೆ ಪೋಲೀಸರು ಬಲೆಯನ್ನು ಬೀಸಿ ’ಪೆಪ್ಪರ್’ (ಮೆಣಸು ಕಾಳಿನ ದ್ರವ) ಸಿಂಪಡಿಸಿ ಹಲ್ಲೆ ನಡೆಸಿದ್ದರು. ಇದನ್ನು ಕೂಡಲೇ ಯೂಟ್ಯೂಬ್‌ನಲ್ಲಿ ಬಹಿರಂಗಪಡಿಸಿದ ಪ್ರತಿಭಟನಾಕಾರರು ಆ ಪೋಲೀಸ್ ಅಧಿಕಾರಿಯ ಸಂಪೂರ್ಣ ವಿವರ, ಫೋನ್ ನಂಬರ್‌ಗಳನ್ನೂ ಪ್ರಕಟಿದ್ದರು. ಯಾವುದೇ ಪೊಲೀಸ್ ಅಧಿಕಾರಿ ಕೆಟ್ಟದಾಗಿ ವರ್ತಿಸಿದ ಮರುಕ್ಷಣವೇ ಆತನ ಎಲ್ಲಾ ವರ್ತನೆಯನ್ನೂ ವಿಡಿಯೋ ಸಮೇತ ಜಗತ್ತಿನ ವೀಕ್ಷಣೆಗೆ ಬಿಡಲಾಗುತ್ತಿದೆ!
ಅಕ್ಟೋಬರ್ 1ರಂದು ಬ್ರೂಕ್‌ಲಿನ್ ಸೇತುವೆ ಮೇಲೆ ಪ್ರತಿಭಟಿಸಿದ ಸುಮಾರು 700 ಜನರನ್ನು ಪೋಲೀಸರು ಬಂಧಿಸಿದ್ದರು. ಇಲ್ಲಿ ಹೀಗೆ ಬಂಧಿಸುವಾಗ ಪೋಲೀಸರು ‘ಕೆಟ್ಲಿಂಗ್’ ಎಂಬ ತಂತ್ರವನ್ನು ಪ್ರಯೋಗಿಸುತ್ತಿದ್ದಾರೆ. ನಮ್ಮ ದೇಶದಲ್ಲಿ ನಡೆಸುವಂತೆ ಹಠಾತ್ ಲಾಠಿ ಚಾರ್ಜು, ಗೋಲಿಬಾರ್‌ಗಳನ್ನು, ಹಲ್ಲೆಗಳನ್ನು ಅಮೆರಿಕದಲ್ಲಿ ನಡೆಸಿ ಸುಲಭವಾಗಿ ದಕ್ಕಿಸಿಕೊಳ್ಳಲು ಸಾಧ್ಯವಾಗುಗುವುದಿಲ್ಲ. ಮಾನವ ಹಕ್ಕು, ಪ್ರಜಾತಂತ್ರಗಳ ಕುರಿತ ಮುಂದುವರಿದ ದೇಶಗಳ ಜನರ ಜನರ ಪ್ರಜ್ಞಾಮಟ್ಟ ಹೆಚ್ಚಿರುವುದರಿಂದ ಪೋಲೀಸ್ ಅಧಿಕಾರಿಗಳು ಮನಬಂದಂತೆ ವರ್ತಿಸಲು ಬರುವುದಿಲ್ಲ. ಹೀಗಾಗಿ ಪ್ರತಿಭಟನಾಕಾರರನ್ನು ಆದಷ್ಟು ಚದುರಿಸಿ, ದಿಕ್ಕು ತಪ್ಪಿಸಿ ಗುಂಪು ಗುಂಪಾಗಿ ಬಂದಿಸುವ ತಂತ್ರ ಹೂಡುವ ಕೆಟ್ಲಿಂಗ್ ಕೂಡಾ ಬಹಳಷ್ಟು ಸಲ ಟೀಕೆಗೊಳಗಾಗಿದೆ. ನಂತರ ಅಕ್ಟೋಬರ್ 5 ರಂದು ನ್ಯೂಯಾರ್ಕ್ ನಗರದ ಹತ್ತಾರು ಶಾಲಾಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆಯಲ್ಲಿ ಸೇರಿಕೊಂಡರು. ಅಂದು ನಡೆದ ಮೆರವಣಿಗೆಯಲ್ಲಿ ಸುಮಾರು 15,000 ಜನರು ಪಾಲ್ಗೊಂಡಿದ್ದರು. ಹೀಗೆ ದಿನೇ ದಿನೇ ಆಂದೋಲನದಲ್ಲಿ ಹೆಚ್ಚೆಚ್ಚು ಜನರು ಭಾಗವಹಿಸುತ್ತಲೇ ಇದ್ದಾರೆ.
1999ರಲ್ಲಿ ಸಿಯಾಟಲ್‌ನಲ್ಲಿ ನಡೆದ ಡಬ್ಲ್ಯೂಟಿಓ ಸಮ್ಮೇಳನದ ವಿರುದ್ಧ ಹಾಗೂ ನಂತರ ಇರಾಕ್ ಯುದ್ಧದ ವಿರುದ್ಧ ಬೃಹತ್ ಚಳವಳಿ ನಡೆದಿದ್ದವು ಅವುಗಳಲ್ಲಿ ಲಕ್ಷಾಂತರ ಜನರು ಸೇರಿದ್ದರಾದರೂ ಅವು ನಿರ್ದಿಷ್ಟ ದಿನಗಳಂದು ನಡೆದ ಸೀಮಿತ ಪ್ರದರ್ಶನಗಳು. ಆದರೆ ಈಗ ನಡೆಯುತ್ತಿರುವುದು ಬೇರೆಯದೇ ಸ್ವರೂಪದ್ದು.
ಹಾಗಾದರೆ ಇಡೀ ಜಗತ್ತಿಗೇ ಬುದ್ಧಿ ಹೇಳುವ ಅಮೆರಿಕದಂತ ಅಮೆರಿಕದಲ್ಲಿ ಇಂತಹ ಒಂದು ಬಂಡಾಯ ಹುಟ್ಟಿಕೊಂಡಿರುವುದು ಯಾಕೆ? ಈಗ ಹುಟ್ಟಿರುವ ಚಳವಳಿಯ ವ್ಯಾಪ್ತಿಯೇನು? ಇದರ ಶಕ್ತಿ ಏನು? ದೌರ್ಬಲ್ಯಗಳೇನು? ಈ ಕುರಿತು ಕೊಂಚ ತಲೆಕೆಡಿಸಿಕೊಳ್ಳುವ ಅಗತ್ಯ ಭಾರತೀಯರಿಗೂ ಇದೆ. ಯಾಕೆ ಇದರ ಅಗತ್ಯ ನಮಗಿದೆ ಎಂದರೆ ಎರಡನೆಯ ವಿಶ್ವ ಮಹಾಯುದ್ಧದ ನಂತರದಲ್ಲಿ ಅದರಲ್ಲೂ ಸೋವಿಯತ್ ಒಕ್ಕೂಟ ಕುಸಿದ ಮೇಲೆ ಇಡೀ ಜಗತ್ತನ್ನು ತನ್ನ ಅಂಕೆಯಲ್ಲಿಟ್ಟುಕೊಂಡಿರುವುದು ಅಮೆರಿಕ. ನೂರಾರು ದೇಶಗಳಲ್ಲಿ ಬುಡಮೇಲು ಕೃತ್ಯಗಳನ್ನು, ಸಾವಿರಾರು ಪ್ರಾಕ್ಸಿ ಯುದ್ಧಗಳನ್ನು ನಡೆಸುತ್ತಾ ಇಡೀ ಜಗತ್ತಿನ ಬಹುಪಾಲು ದೇಶಗಳನ್ನು ತನ್ನ ಪದತಲದಲ್ಲಿ ಬೀಳುವಂತೆ ಮಾಡಿಕೊಂಡು ಕೇಕೆ ಹಾಕುತ್ತಿರುವುದು ಅಮೆರಿಕ. ಒಂದು ಕಡೆ ಮುಕ್ತ ಆರ್ಥಿಕತೆಯ ನೀತಿಗಳನ್ನು ಎಲ್ಲರ ಮೇಲೆ ಹೇರುತ್ತಲೇ ತಾನು ಮಾತ್ರ ರಕ್ಷಣಾತ್ಮಕ ನೀತಿಗಳನ್ನು ಪಾಲಿಸಿಕೊಂಡು ಇಬ್ಬಗೆಯ ನೀತಿಯನ್ನು ಪಾಲಿಸುತ್ತಿರುವುದು ಇದೇ ಅಮೆರಿಕ. ಜಗತ್ತಿನ ತೈಲಸಂಪನ್ಮೂಲಗಳ ಮೇಲಿನ ಹಿಡಿತಕ್ಕಾಗಿ ಲಕ್ಷಾಂತರ ಜನರ ಮಾರಣ ಹೋಮನಡೆಸಿರುವುದೂ ಇದೇ ಅಮೆರಿಕ. ಇಂದು ಇಡೀ ಜಗತ್ತನ್ನು ಕಾಡುತ್ತಿರುವ ‘ಇಸ್ಲಾಂ ಭಯೋತ್ಪಾದನೆಗೆ’ ಬೀಜ ನೆಟ್ಟು, ನೀರು ಗೊಬ್ಬರ ಹಾಕಿ ಈಗ ಮತ್ತೆ ಭಯೋತ್ಪಾದನೆಯ ವಿರುದ್ಧದ ಹೋರಾಟದ ಹೆಸರಿನಲ್ಲಿ ತನ್ನ ಅಜೆಂಡಾಗಳನ್ನು ಜಗತ್ತಿನ ಮೇಲೆ ಹೇರುತ್ತಿರುವುದೂ ಇದೇ ಅಮೆರಿಕ. ಇಂದು ಜಗತ್ತಿನ ಪ್ರತಿಯೊಬ್ಬ ಮನುಷ್ಯನೂ ಕೂಡ ಅಮೆರಿಕ ತನ್ನ ಹಿತಾಸಕ್ತಿಗಾಗಿ ಹಾಕಿಕೊಟ್ಟ ಅಜೆಂಡಾಗಳನ್ನು ಒಂದಲ್ಲಾ ಒಂದು ರೀತಿಯಲ್ಲಿ ಪಾಲಿಸುತ್ತಲೇ ಇದ್ದಾನೆ ಎಂದರೆ ಅತಿಶಯೋಕ್ತಿಯಲ್ಲ. ಆದರೆ ಇದೆಲ್ಲಾ ಜಾಗತೀಕರಣ ಮುಸುಕಿನಲ್ಲಿ ನಡೆಯುತ್ತಿರುವುದರಿಂದ ಅದನ್ನೆಲ್ಲಾ ನಮ್ಮದೇ ಎಂಬಂತೆ ನಾವು ಒಪ್ಪಿಕೊಂಡು ಹೋಗುತ್ತಿದ್ದೇವಷ್ಟೆ.
‘ಜಾಗತೀಕರಣ’ ಎಂದರೆ ’ಅಮೇರಿಕೀಕರಣ’ ಎಂದು ಬಣ್ಣಿಸುವ ನಮ್ಮ ಡಾ. ಯು. ಆರ್. ಅನಂತಮೂರ್ತಿಯಂತಹವರ ಅಭಿಪ್ರಾಯ ಮುಖ್ಯವಾಗುವುದು ಈ ಕಾರಣದಿಂದಲೇ.
ಇಂತಿಪ್ಪ ಅಮೆರಿಕದ ಪ್ರಭುತ್ವದ ವಿರುದ್ಧ ಅಮೆರಿಕದ ಪ್ರಜೆಗಳೇ ದಂಗೆಯೇಳುವ ಸ್ಥಿತಿ ಉಂಟಾಗಿದೆ ಎಂದರೆ ನಾವು ಕಂಡಿತಾ ಇದನ್ನು ಕೊಂಚ ಹತ್ತಿರದಿಂದ ಗಮನಿಸುವ ಅಗತ್ಯವಿದೆ. ಇದಕ್ಕಾಗಿ ಈ ಚಳವಳಿಗೆ ಕಾರಣವಾಗಿರುವ ಅಮೆರಿಕ ಆರ್ಥಿಕತೆಯನ್ನು ಸಂಕ್ಷಿಪ್ತವಾಗಿಯಾದರೂ ಅರಿಯಬೇಕಾಗುತ್ತದೆ.
ಕಳೆದ ಆಗಸ್ಟ್ ತಿಂಗಳಲ್ಲಿ ಅಮೆರಿಕ ಅಮೆರಿಕ ಸರ್ಕಾರದ ಋಣಾರ್ಹತೆ ಮಟ್ಟವನ್ನು ಅಲ್ಲಿನ ಪ್ರಮುಖ ಮೌಲ್ಯಮಾಪನಾ ಸಂಸ್ಥೆಗಳಲ್ಲೊಂದಾದ ಎಸ್ & ಪಿ AAA ಯಿಂದ AA+ಗೆ ಇಳಿಸಿತ್ತು. ತಾನು ಸುಸ್ತಿದಾರನಾಗುವ (Defaulter) ಹಂತಕ್ಕೆ ಹೋಗುವುದನ್ನು ತಪ್ಪಿಸಲು ಒಬಾಮಾ ಸರ್ಕಾರವು ಸಾಲ ಒಪ್ಪಂದ ಕಾಯ್ದೆಯನ್ನು (Debt ceiling Act) ಜಾರಿ ಮಾಡಿತು.
ಇನ್ನೂ ಸ್ವಲ್ಪ ಹಿಂದಕ್ಕೆ ಹೋಗೋಣ. 2008ರ ಸೆಪ್ಟೆಂಬರ್ ತಿಂಗಳಲ್ಲಿ ಅಮೆರಿಕದ ಸಬ್‌ಪ್ರೈಂ ಗೃಹಸಾಲ ಬಿಕ್ಕಟ್ಟು ಸ್ಪೋಟಗೊಂಡಿತ್ತು. ಅಮೆರಿಕಾದ ವಾಣಿಜ್ಯ ಬ್ಯಾಂಕುಗಳು, ವಿಮಾ ಕಂಪನಿಗಳು ಹಾಗೂ ಎಲ್ಲಾ ಹಣಕಾಸು ಉದ್ದಿಮೆಗಳೂ ಸಹ ಒಂದಲ್ಲಾ ಒಂದು ರೀತಿಯಲ್ಲಿ ಈ ಸಬ್‌ಪ್ರೈಮ್ ಗೃಹಸಾಲ ಮಾರುಕಟ್ಟೆಯೊಳಗೆ ಕಾಲಿಟ್ಟಿದ್ದವು. ಅಗ್ಗದ ಬಡ್ಡಿ ದರದಲ್ಲಿ ನೀಡತೊಡಗಿದ್ದ ಗೃಹಸಾಲ ಉದ್ದಿಮೆಗೆ ಕಾಲಿಟ್ಟ ಹಣಕಾಸು ಸಂಸ್ಥೆಗಳು ಬೃಹತ್ ಮಟ್ಟದಲ್ಲಿ ರಿಯಲ್ ಎಸ್ಟೇಟ್ ದಂಧೆ ನಡೆಸತೊಡಗಿದ್ದೇ ಬೃಹತ್ ಪ್ರಮಾಣದ ಬಂಡವಾಳ ಸಂಚಯವಾಗತೊಡಗಿತ್ತು. ಆದರೆ ಯಾವಾಗ ಇದ್ದಕ್ಕಿದ್ದಂತೆ ಹೆಚ್ಚೆಚ್ಚು ಜನರು ಗೃಹಸಾಲದ ಕಂತುಕಟ್ಟಲಾರದೆ ಡಿಫಾಲ್ಟರ್ ಆಗತೊಡಗಿದ್ದರೋ ಆಗ ಈ ಉದ್ದಿಮೆಯನ್ನವಲಂಭಿಸಿ ಬಹುದೂರ ಹೋಗಿಬಿಟ್ಟದ್ದ ಆರ್ಥಿಕತೆಯೆಲ್ಲವೂ ಕುಸಿಯತೊಡಗಿತ್ತು. ಎಂತಹ ಪರಿಸ್ಥಿತಿ ಸೃಷ್ಟಿಯಾಗಿತ್ತೆಂದರೆ 2007ರ ಡಿಸೆಂಬರ್‌ನಲ್ಲಿ ಅಮೆರಿಕಾದಲ್ಲಿ ಬ್ಯಾಂಕುಗಳಿಗೆ ಬಾಕಿ ಬರಬೇಕಿದ್ದ ಈ ಸಬ್‌ಫ್ರೈಮ್ ಗೃಹಸಾಲದ ಒಟ್ಟು ಮೊತ್ತ 70 ಲಕ್ಷ ಕೋಟಿ ರೂಗಳು! ಅದೇ ವರ್ಷ 12 ಲಕ್ಷ ಮನೆಗಳು ಜಪ್ತಿಯಾದವು. ಹೀಗೆ ಜಪ್ತಿಯಾಗಿ ಅಕ್ಷರಶಃ ಬೀದಿಗೆ ಬಿದ್ದವರ ಸಂಖ್ಯೆ 45 ಲಕ್ಷ ದಾಟಿತ್ತು!. ಮನೆಗಳ ಬೆಲೆಗಳು ಶೇಕಡಾ 40 ರಷ್ಟು ಕುಸಿದಿದ್ದರೂ ಕೊಳ್ಳುವವರೇ ಗತಿ ಇರಲಿಲ್ಲ. 1.86 ಕೋಟಿ ಮನೆಗಳು ಹೀಗೆ ದೂಳು ಹಿಡಿದು ಕೂತಿದ್ದವು. ಆದರೆ ಆ ಮನೆಗಳಲ್ಲಿರಬೇಕಾದವರು ಬೀದಿ ಮೂಲೆಗಳಲ್ಲಿ, ತಮ್ಮ ಕಾರುಗಳೊಳಗೆ, ರೈಲು ಬೋಗಿಗಳಲ್ಲಿ, ಪಾರ್ಕ್‌ಗಳಲ್ಲಿ ರಾತ್ರಿಗಳನ್ನು ಕಳೆಯುವ ಪರಿಸ್ಥಿತಿ ಬಂದೊದಗಿತ್ತು!
ಮತ್ತೊಂದೆಡೆ ಲೀಮಾನ್ ಬ್ರದರ್‍ಸ್‌ನಂತಹ ಅತಿದೊಡ್ಡ ಹೂಡಿಕೆ ಬ್ಯಾಂಕುಗಳು ದಿವಾಳಿಯಾದವು. ಕೆಲವು ಬ್ಯಾಂಕುಗಳನ್ನು ಸರ್ಕಾರ ರಾಷ್ಟ್ರೀಕರಣ ಮಾಡಿ ಉಳಿಸಿಕೊಂಡಿತು. ಅಮೆರಿಕ ಸರ್ಕಾರ ಕೂಡಲೇ ಸುಮಾರು 700 ಶತಕೋಟಿ ಡಾಲರುಗಳ ಬೇಲೌಟ್ ನೀಡಿತ್ತು. ಹಣಕಾಸು ಸಂಸ್ಥೆಗಳಿಗೆ ತತ್ಕಾಲಿಕ ಸಾಲ ನೀಡುವ ಕಮರ್ಷಿಯಲ್ ಪೇಪರ್ ಕೂಡಾ ಕುಸಿದು ಬಿದ್ದಿದ್ದು ಈ ದಿಢೀರ್ ಅವಘಟಗಳೀಗೆ ಕಾರಣವಾಗಿತ್ತು. ಆರ್ಥಿಕತೆಯ ಈ ಬಿಕ್ಕಟ್ಟಿನಿಂದಾಗಿ ಅಂದು ಅಮೆರಿಕ ಒಂದರಲ್ಲಿ ಕೆಲಸ ಕಳೆದುಕೊಂಡವರು 12 ಲಕ್ಷಕ್ಕಿಂತ ಹೆಚ್ಚು ಮಂದಿ! ಈ ಬಿಕ್ಕಟ್ಟು ಅಂದು ಇತರ ದೇಶಗಳಿಗೂ ಹರಡಿ ಎಲ್ಲೆಡೆ ಇದೇ ಬೆಳವಣಿಗೆಗಳಾದವು.
1930ರಲ್ಲಾದಂತೆಯೇ ಮತ್ತೊಂದು ಆರ್ಥಿಕ ಮಹಾಕುಸಿತದ (The Great Deppression) ಮುನ್ಸೂಚನೆ ದೊರೆತು ಜಗತ್ತು ತಲ್ಲಣಗೊಂಡಿತ್ತು. ಇದು ಅಮೆರಿಕದಲ್ಲಿ ಡಬಲ್ ಡಿಪ್ ರಿಶೆಷನ್ ಸ್ಥಿತಿ. ಅಂದರೆ ಈಗಾಗಲೇ ಒಂದು ಬಿಕ್ಕಟ್ಟಿನಿಂದ ಪೂರ್ತಿ ಚೇತರಿಸಿಕೊಳ್ಳುವಷ್ಟರಲ್ಲೇ ಮತ್ತೊಂದು ಆರ್ಥಿಕ ಕುಸಿತದ ಭಯ!
2008ರಲ್ಲಿ ಈ ಕುಸಿತವಾದಾಗ ಅಮೆರಿಕ ಸರ್ಕಾರ ಹಾಗೂ ಅನೇಕ ಆರ್ಥಿಕ ಪಂಡಿತರು ಗೃಹಸಾಲ ಮಾರುಕಟ್ಟೆಯನ್ನು ದೂರಿದರಾಗಲೀ ಈ ಸಮಸ್ಯೆಯ ಕಾರಣವನ್ನು ಗುರುತಿಸಿ ಅದಕ್ಕೆ ಪರಿಹಾರ ಕಂಡು ಹಿಡಿಯುವ ಪ್ರಯತ್ನ ಮಾಡಲಿಲ್ಲ.
ಇಷ್ಟಕ್ಕೆಲ್ಲ ಇರುವ ಮೂಲ ಕಾರಣವನ್ನು ಹೆಚ್ಚಿನ ವಿವರಗಳನ್ನೂ ಅಂಕಿ ಅಂಶಗಳನ್ನು ನೀಡುವ ಗೊಡವೆಗೆ ಹೋಗದೇ ಅತ್ಯಂತ ಸರಳವಾಗಿ ಹೀಗೆ ಹೇಳಬಹುದು - ಅದು ಅಮೆರಿಕ ಕೇಂದ್ರಿತ ಜಾಗತಿಕ ಮಾರುಕಟ್ಟೆ ವ್ಯವಸ್ಥೆ ನೈಜವಾದ ಆರ್ಥಿಕತೆಯಿಂದ (ಅಂದರೆ ಉತ್ಪಾದನೆಯನ್ನು, ಉದ್ಯೋಗಬೆಳವಣಿಗೆಯನ್ನು ಆಧರಿಸಿದ ಆರ್ಥಿಕತೆ) ವಿಮುಖಗೊಂಡು ಹಣಕಾಸು ಬಂಡವಾಳವನ್ನು ಅಗಾಧವಾಗಿ ಸಂಚಯಿಸಿಕೊಳ್ಳುತ್ತಾ ಹೋದದ್ದು. (financialization of economy) ಕೊನೆಗೆ ಇಡೀ ಆರ್ಥಿಕತೆಯೇ ಸಾಲದ ವ್ಯಸನಕ್ಕೊಳಗಾಗಿ ಈಗ ದಿವಾಳಿ ಹಂತಕ್ಕೆ ತಲುಪಿದ್ದು. ಉತ್ಪಾದನೆ ಆಧಾರಿತ ಕೈಗಾರಿಕೆ ಮತ್ತು ಸೇವಾಕ್ಷೇತ್ರಗಳು ಒಂದು ಹಂತದಲ್ಲಿ ಸ್ಥಗಿತಗೊಂಡು ಸಾಲಾಧಾರಿತ ಸಟ್ಟಾ ವ್ಯಾಪಾರದ (speculative business) ಪ್ರಾಬಲ್ಯ ತೀವ್ರಗೊಂಡಿದ್ದು. ಇದು ಬೇರೇನೂ ಆಗಿರದೇ ಹಣಕಾಸು ಮಾರುಕಟ್ಟೆಯೊಳಗಿನ ಜೂಜು ಮಾತ್ರವಾಗಿದ್ದದ್ದು.
ಅಮೆರಿಕದಲ್ಲಿ ಎಲ್ಲಾ ಕ್ಷೇತ್ರಗಳನ್ನೂ ಗಣನೆಗೆ ತೆಗೆದುಕೊಂಡರೆ 1954ರಲ್ಲಿ ಒಟ್ಟು ಜಿಡಿಪಿಗೆ ಹೋಲಿಸಿ ನೋಡಿದಾಗ ಅಲ್ಲಿನ ಸಾಲ ಶೇಕಡಾ 153ರಷ್ಟಿದ್ದರೆ 2007ರಲ್ಲಿ ಶೇಕಡಾ 373ರಷ್ಟಿತ್ತೆಂದರೆ ಸಾಲದ ಪಾತ್ರವನ್ನು ಊಹಿಸಬಹುದು. ಪ್ರಪಂಚದ ಅತಿದೊಡ್ಡ ಸಾಲಗಾರನಾಗಿರುವ ಅಮೆರಿಕದ ಈಗಿನ 14 ಲಕ್ಷ ಕೋಟಿ ಡಾಲರ್‌ಗಳು!. ಮಾತ್ರವಲ್ಲ ಅತ್ತ ನೈಜ ಆರ್ಥಿಕತೆ ಯಾವ ಬೆಳವಣಿಗೆಯನ್ನೂ ಕಾಣದೇ ಬಡತನ, ನಿರುದ್ಯೋಗಗಳು ಕ್ರಮೇಣ ಹೆಚ್ಚತೊಡಗಿದ್ದರೆ ಆರ್ಥಿಕತೆಯನ್ನು ಹೀಗೆ ಬರೀ ಪೇಪರ್ ಮೇಲಿನ ಹಣದ (ಕಂಪ್ಯೂಟರ್ ಎಂದು ಓದಿಕೊಳ್ಳಿ) ಮೇಲೆಯೇ ನಿಲ್ಲಿಸಿದ ಪರಿಣಾಮವಾಗಿ ದೊಡ್ಡ ಕಾರ್ಪೊರೇಷನ್‌ಗಳು ವಿಪರೀತ ಲಾಭ ಮಾಡತೊಡಗಿದವು. ಮಧ್ಯಮ ವರ್ಗದವರ ಆದಾಯದಲ್ಲಿ ಅಂತಹ ಏರಿಕೆ ಇಲ್ಲದಿದ್ದರೂ ಈ ಹಣಕಾಸು ಸಂಸ್ಥೆಗಳು ಸಾವಿರ ಸಾವಿರ ಪಟ್ಟು ಲಾಭ ಮಾಡಿಕೊಂಡವು. ಅಮೇರಿಕಾದಲ್ಲಿ 2001ರಲ್ಲಿ ಹಣಕಾಸು ವ್ಯವಸ್ಥೆಯ ತುತ್ತತುದಿಯಲ್ಲಿದ್ದ ಶೇಕಡಾ 1ರಷ್ಟು ಹಣಕಾಸು ಬಂಡವಾಳವು ಅಲ್ಲಿನ ಕೆಳಹಂತದ ಶೇಕಡಾ 80ರಷ್ಟು ಜನರ ಒಟ್ಟು ಆದಾಯದ ನಾಲ್ಕು ಪಟ್ಟು ಇತ್ತು. 2006ರಲ್ಲಿ ಅಮೆರಿಕಾದ ಕೇವಲ 60 ಅತಿದೊಡ್ಡ ಶ್ರೀಮಂತರ ಬಳಿ ಶೇಖರಣೆಗೊಂಡಿದ್ದ ಸಂಪತ್ತು 630 ಶತಕೋಟಿ ಡಾಲರುಗಳಷ್ಟು ಎಂದರೆ ಯೋಚಿಸಿ!. ಆರ್ಥಿಕತೆ ಎಂದರೇ ಹಣಕಾಸು ಆರ್ಥಿಕತೆ ಎಂದು ಆದ ಪರಿಣಾಮವಾಗಿ ಇಡೀ ವ್ಯವಸ್ಥೆಯನ್ನು ನಿಯಂತ್ರಿಸುವವರೇ ಈ ಕಾರ್ಪೊರೇಟರ್‌ಗಳಾದರು. ಹೀಗೆ ಪ್ರಜಾಪ್ರಭುತ್ವ ವ್ಯವಸ್ಥೆಗಳು ಕಾರ್ಪೊರೇಟ್ ಪ್ರಭುತ್ವಗಳಾಗಿ ಪರಿವರ್ತನೆಯಗಿದ್ದವು.
ಆದರೆ ಒಳಗೆ ಯಾವ ಹೂರಣವೂ ಇಲ್ಲದೇ ಹೀಗೆ ಬಲೂನಿನಂತೆ ಊದಿಕೊಳ್ಳುತ್ತಲೇ ಹೋದ ಆರ್ಥಿಕತೆ ಭಾರೀ ಸದ್ದಿನೊಂದಿಗೆ ಒಡೆದು ಜಗತ್ತಿನ ಆರ್ಥಿಕ ವ್ಯವಸ್ಥೆಯನ್ನು ಅಲ್ಲೋಲ ಕಲ್ಲೋಲ ಮಾಡುವ ಸೂಚನೆ 2008ರಲ್ಲಿ ಸಿಕ್ಕಿತ್ತು. ಆದರೆ ತಾವು ಆರ್ಥಿಕತೆಯಲ್ಲಿ ಸೃಷ್ಟಿಸಿದ್ದ ನಿಜವಾದ ಸಮಸ್ಯೆಯನ್ನು ಸರಿಪಡಿಸಲು ಬಂಡವಾಳದ ನೇತಾರರು ತಯಾರಿಲ್ಲ.
ಹೀಗೆ ಆರ್ಥಿಕತೆಯನ್ನು ಹಣಕಾಸಿನ ನೀರುಗುಳ್ಳೆಯ ಮಟ್ಟಕ್ಕೆ ಸೀಮಿತಗೊಳಿಸುವುದರ ಅಪಾಯವನ್ನು 1930ರ ದಶಕದಲ್ಲೇ ಪ್ರಸಿದ್ಧ ಆರ್ಥಸಾಸ್ತ್ರಜ್ಞ ಕೀನ್ಸ್ ವಿವರಿಸಿದ್ದರು. ಕೀನ್ಸ್ ಒಬ್ಬ ಬಂಡವಾಳವಾದಿ ವ್ಯವಸ್ಥೆಯ ಪರವಾದ ಅರ್ಥಜ್ಞನೇ ಆಗಿದ್ದರೂ ಅವರು ಪ್ರತಿಪಾದಿಸಿದ್ದು ವಿವೇಚನಾಶೀಲ ಬಂಡವಾಳವಾದವನ್ನು. ಬದಲಾಗಿ ಇಂದು ಬೆಳೆದಿರುವ ದುರಾಸೆಯ ವಿಕೃತ ಬಂಡವಾಳವಾದವನ್ನು ಖಂಡಿತಾ ಆಗಿರಲಿಲ್ಲ. 1930ರ ದಶಕದಲ್ಲಿ ಅಮೆರಿಕ ಕೇಂದ್ರಿತ ಜಾಗತಿಕ ಹಣಕಾಸು ವ್ಯವಸ್ಥೆಯ ಜಾಡು ಹಿಡಿದ ಪೌಲ್ ಸ್ವೀಜಿಯಂತಹ ಎಡಪಂಥೀಯ ಅರ್ಥಶಾಸ್ತ್ರಜ್ಞರೂ ಸಹ ಸನಿಹದಲ್ಲೇ ಬಂದೆರಗಲಿರುವ ಭಾರೀ ಅಪಾಯವನ್ನು ತಿಳಿಸಿದ್ದರು. ಇದು ಇಡೀ ಜಗತ್ತನ್ನು ಮತ್ತೊಂದು ಮಹಾನ್ ಆರ್ಥಿಕ ಕುಸಿತಕ್ಕೆ ಕೊಂಡೊಯ್ಯಲಿದೆ ಎಂದೂ ಅಂಕಿ ಅಂಶಗಳ ಸಮೇತ ತಿಳಿಸಿದ್ದರು. ಅವರು ಹೇಳಿದ್ದೆಲ್ಲಾ ಈಗ ಸಾಕ್ಷಾತ್ಕಾರವಾಗಿತ್ತಿದೆ.
ಇಂತಹ ಒಂದು ಸಂದರ್ಭದಲ್ಲಿ ಹುಟ್ಟಿಕೊಂಡಿರುವ ಅಮೆರಿಕದ ಈ ಚಳವಳಿ ‘ವಾಲ್‌ಸ್ಟ್ರೀಟ್ ವಶಪಡಿಸಿ’ಕೊಳ್ಳುವ ಕರೆನೀಡಿ ಹೊರಟಿರುವುದು ಅರ್ಥಪೂರ್ಣವಾಗಿದೆ. ಪ್ರಪಂಚದ ಪ್ರಜಾಪ್ರಭುತ್ವವಾದಿಗಳೆಲ್ಲರೂ ಸ್ವಾಗತಿಸಬೇಕಾದ ಬೆಳವಣಿಗೆ ಇದು. ಜಗತ್ತಿನ ಜನಸಾಮಾನ್ಯರ ಸಾಕ್ಷಿಪ್ರಜ್ಞೆ ಎಂದೇ ಕರೆಯಬಹುದಾದ ನೋಮ್ ಚಾಮ್‌ಸ್ಕಿ ಕೂಡಾ ಈ ಚಳವಳಿಯ ಕುರಿತು ಪ್ರತಿಕ್ರಿಯಿಸಿ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.
ಈ ಚಳವಳಿ ತನ್ನನ್ನು ತಾನು ‘ನಾಯಕರಹಿತ’ ಎಂದು ಘೋಷಿಸಿಕೊಂಡಿದೆ. ಆದರೆ ಇದರಲ್ಲಿ ಒಳಿತೂ ಉಂಟು, ಕೆಡುಕೂ ಉಂಟು. ಒಬ್ಬ ನಾಯಕ ಅಥವಾ ಇಲ್ಲದೇ ಪ್ರತಿಯೊಂದು ನಿರ್ಧಾರವನ್ನೂ ಸಾಮೂಹಿಕವಾಗಿ ತೆಗೆದುಕೊಳ್ಳುತ್ತಿರುವ ಕಾರಣ ಸರ್ಕಾರಕ್ಕೆ ಈ ಚಳವಳಿಯನ್ನು ಹತ್ತಿಕ್ಕಲು ಸುಲಭ ಸಾಧ್ಯವಾಗಲಾರದು. ಮತ್ತು ಒಬ್ಬನ ಅಭಿಪ್ರಾಯವನ್ನು ಇಡೀ ಚಳವಳಿಯ ಮೇಲೆ ಹೇರಲು ಸಾಧ್ಯವಾಗಲಾರದು. ಆದರೆ ಇಡೀ ಜಗತ್ತಿನ ಚಳವಳಿಗಳನ್ನು ನೋಡಿದರೆ ಅಲ್ಲಿ ಒಬ್ಬ ನಾಯಕನಿರುತ್ತಾನೆ ಎಂದರೆ ಆತನ ಬೆನ್ನಿಗೆ ಒಂದು ಸಿದ್ದಾಂತವೂ ಇರುತ್ತದೆ. ಆ ಸಿದ್ಧಾಂತ ಎಷ್ಟು ಮಾನವೀಯವಾಗಿರುತ್ತದೆಯೋ ಅಷ್ಟು ಗಟ್ಟಿತನ ಆ ಚಳವಳಿಗಿರುತ್ತದೆ. ಒಂದೊಮ್ಮೆ ಆ ನಾಯಕ ‘ಸಾಮೂಹಿಕ ಪ್ರಜ್ಞೆ’ಯನ್ನು ಸಮರ್ಥವಾಗಿ ಪ್ರತಿಬಿಂಬಿಸುವಂತಾದಾಗ ಆ ಚಳುವಳಿ ಇನ್ನಷ್ಟು ಬಲಗೊಳ್ಳುವ ಸಾಧಱಯತೆಯಿರುತ್ತದೆ. ಅಮೆರಿಕದಲ್ಲೇ ನೋಡುವುದಾದರೆ ಈ ಹಿಂದೆ ಸಮಾನತೆಗಾಗಿ ಚಳವಳಿ ನಡೆಸಿದ ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ ಹಾಗೂ ರೋಸಾ ಪಾರ್ಕ್‌ರಂತದ ಉದಾತ್ತ ವ್ಯಕ್ತಿಗಳ ಉದಾಹರಣೆಗಳಿವೆ. ಈಗಿನ ಚಳವಳಿ ಪ್ರಮುಖವಾಗಿ ಅಲ್ಲಿನ ಮಧ್ಯಮ ವರ್ಗದ ಕೈಯಲ್ಲಿರುವುದರಿಂದ ಅದು ಎಷ್ಟರ ಮಟ್ಟಿಗೆ ಯಶಸ್ಸು ಸಾಧಿಸುತ್ತದೆ ಎನ್ನುವುದೂ ಸಂಶಯಕ್ಕೆಡೆ ಮಾಡಿದೆ. ಸಧ್ಯಕ್ಕೆ ಈ ಚಳವಳಿ ಹಲವಾರು ವಿಚಾರಧಾರೆಗಳ ಕಾಕ್‌ಟೇಲ್ ಆಗಿದೆ. ಇಲ್ಲಿ ಎನ್ ಜಿ ಒಗಳು ಟ್ರೇಡ್ ಯೂನಿಯನ್ ಕಾರ್ಯಕರ್ತರು, ಪೈಲಟ್ ಗಳು, ಶಿಕ್ಷಕರ ಸಂಘಗಳು, ಬಲಪಂಥೀಯರು, ಎಡಪಂಥೀಯರು, ಅನಾರ್ಕಿಸ್ಟರು, ಒಂದೆರಡು ಮಾವೋವಾದಿ ಗುಂಪುಗಳ ಕಾರ್ಯಕರ್ತರು ಹೀಗೆ ಎಲ್ಲಾ ಬಗೆಯವರೂ ಒಂದಲ್ಲಾ ಒಂದು ಮಟ್ಟದಲ್ಲಿ ಭಾಗವಹಿಸುತ್ತಿದ್ದಾರೆ. ಇಲ್ಲಿ ಕೂಡಾ ಚಳವಳಿಯ ನೀತಿ ನಿರೂಪಣೆಗಳ ಮೇಲೆ, ಕಾರ್ಯಕರ್ತರ ಮೇಲೆ ತಂತಮ್ಮ ಸಿದ್ದಾಂತಗಳನ್ನು ಹೇರುವ ಪ್ರಯತ್ನಗಳು ನಡೆಯುತ್ತಿವೆ. ಇಂತಹ ಪರಿಸ್ಥಿತಿ ಗೊಂದಲ ಮೂಡಿಸುವುವ ಸಾಧ್ಯತೆಯೂ ಇರುತ್ತದೆ. ಈ ಚಳವಳಿಗೆ ಬೆಂಬಲಿಸುತ್ತಲೇ ಇದನ್ನು ಹಲವಾರು ಬಗೆಯಲ್ಲಿ ದಿಕ್ಕುತಪ್ಪಿಸುವ ಪ್ರಯತ್ನವನ್ನೂ ಡೆಮಾಕ್ರಾಟರು, ರಿಪಬ್ಲಿಕನ್ನರು ಮಾಡುತ್ತಿರುವುದೂ ಗೋಚರಿಸುತ್ತಿದೆ.
ಅಮೆರಿಕದ ಪ್ರಭುತ್ವಕ್ಕೆ ಚಳವಳಿಗಳನ್ನು ಎಲ್ಲಾ ರೀತಿಯಲ್ಲೂ ಬಗ್ಗು ಬಡಿಯುವ ವಿಧಾನಗಳೂ ಗೊತ್ತಿವೆ. ಸೈನಿಕವಾಗಿಯೂ, ರಾಜಕೀಯವಾಗಿಯೂ ನೂರಾರು ಚಳವಳಿಗಳನ್ನು ಹುಟ್ಟು ಹಾಕಿದ ಹಾಗೂ ಬಗ್ಗುಬಡಿದ ಚರಿತ್ರೆಯೇ ಅಮೆರಿಕದ ‘ಪೆಂಟಗನ್’ಗೆ ಇದೆ. ಈಗ ಭುಗಿಲೆದ್ದ ಚಳವಳಿಯನ್ನು ಅಗತ್ಯ ಬಂದರೆ ಅತ್ಯಂತ ತೀವ್ರವಾಗಿ ಸರ್ಕಾರ ಹತ್ತಿಕ್ಕಬಹುದು. ಈಗ ಅಮೆರಿಕದಲ್ಲಿ ಮತ್ತೊಂದು ‘ತಿಯನನ್ಮನ್ ಚೌಕ’ ಮರುಕಳಿಸಬಹುದು. ಆದರೆ ಇಂದಿನ ಅಮೆರಿಕದ ಟೆಕ್ ಸ್ಯಾವಿ ಪೀಳಿಗೆಯ ಮುಂದೆ ಅಂತದ್ದೊಂದನ್ನು ನಡೆಸುವುದೇನೂ ಸುಲಭಸಾಧ್ಯವಲ್ಲ. ಎಚ್ಚೆತ್ತ ಜನಶಕ್ತಿಯ ಮುಂದೆ ಎಲ್ಲಾ ಬಗೆಯ ಸರ್ವಾಧಿಕಾರಗಳೂ ಮಂಡಿಯೂರಿರುವುದೂ ಇತಿಹಾಸವೇ ಅಲ್ಲವೇ?
ಇದೇ ಸಂದರ್ಭ ಅಮೆರಿಕನ್ನರಿಗೆ ಮತ್ತೊಂದು ಅವಕಾಶವನ್ನೂ ಸೃಷ್ಟಿಸಿದೆ. ಅದೇನೆಂದರೆ ಅವರು ನಿಜವಾದ ಅರ್ಥದಲ್ಲಿ ಮನುಷ್ಯರಾಗುವ ಅವಕಾಶ!. ವಾಸ್ತವದಲ್ಲಿ ಇಂದು ಅಮೆರಿಕದ ಶ್ರೀಮಂತಿಕೆ ನಿಂತಿರುವುದೇ ತೃತೀಯ ಜಗತ್ತಿನ ಸಂಪತ್ತಿನ ಲೂಟಿಯನ್ನಾಧರಿಸಿ ಹಾಗೂ ಬಡದೇಶಗಳ ಜನರ ಅಗ್ಗದ ಶ್ರಮವನ್ನು ದೋಚಿದ್ದರ ಪರಿಣಾಮವಾಗಿ. ಯಾವ ಸರ್ಕಾರಗಳು ಬಂಡವಾಳಿಗರ ಲಾಭಕ್ಕಾಗಿ ಸರಕು ಸಂಸ್ಕೃತಿಯನ್ನು, ಕೊಳ್ಳುಬಾಕ ಸಂಸ್ಕೃತಿಯನ್ನು ಪ್ರೇರೇಪಿಸಿ ತಾವು ಸಾಲದ ಬಲೆಯಲ್ಲಿ ಬೀಳುವ ಜೊತೆಗೆ ಜನರನ್ನೂ ಸಾಲದ ವ್ಯಸನಕ್ಕೆ ಗುರಿಮಾಡಿದ್ದರೋ ಆ ಎಲ್ಲಾ ಸರ್ಕಾರಗಳನ್ನೂ ಅಮೆರಿಕನ್ನರು ಚುನಾವಣೆಯಿಂದ ಚುನಾವಣೆಗೆ ಗೆಲ್ಲಿಸಿಕೊಂಡೇ ಬಂದಿದ್ದಾರೆ. ತಮ್ಮ ಸರ್ಕಾರಗಳ ಇಂತಹ ನೀತಿಗಳನ್ನು ಹಾಗೂ ತಮ್ಮ ಅನುಭೋಗೀ ಸಂಸ್ಕೃತಿಯ ಕುರಿತ ದೊಡ್ಡ ಮಟ್ಟದಲ್ಲಿ ಮರುಚಿಂತನೆ ನಡೆಸಿ ಇದುವರೆಗೆ ಕಾರ್ಪೊರೇಟ್ ಪ್ರಭುತ್ವಗಳು ಪ್ರೇರೇಪಿಸುತ್ತಾ ಬಂದಿರುವ ಲ್ಯಾವಿಶ್ ಬದುಕಿನ ರೀತಿ ರಿವಾಜುಗಳನ್ನು ಧಿಕ್ಕರಿಸಿ ಆದಷ್ಟು ಸರಳ ಹಾಗೂ ಪರಿಸರ ಸ್ನೇಹಿ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆಯಿಡುವ ಅವಕಾಶವನ್ನಾದರೂ ಈಗಿನ ಚಳವಳಿ ಸೃಷ್ಟಿಸಿದರೆ ಅದೇ ಚಳವಳಿಯ ಅತಿದೊಡ್ಡ ಯಶಸ್ಸಾಗಲಿದೆ. ಈ ಜಗತ್ತನ್ನು ಎಲ್ಲಾ ಬಗೆಯ ಬಿಕ್ಕಟ್ಟುಗಳಿಂದಲೂ ರಕ್ಷಿಸಬಹುದಾದ ಏಕೈಕ ದಾರಿಯಿದು.
2 ಕಾಮೆಂಟ್‌ಗಳು:
gUliya mele nrutya gayyuttiruva yuvatiya logo sogasagide. lekhana kooda.. adu howdu namma madhyamagalu yake mounavagiveyo! article is informative:)
idondu adbhuta lekana, Americadalliyagali& Indiadallagali Eee prajne jaagrutavagilla; Adare ninna legana ondu divyavada krantianne maadabahudu, wait maadu. Idu Aguttade. kaadu nodabeku.
ಕಾಮೆಂಟ್ ಪೋಸ್ಟ್ ಮಾಡಿ