ಆಗಸ್ಟ್ 19, 2011

ಅಣ್ಣಾ ಹಜಾರೆಗೆ ಜಯವಾಗಲಿ! ಆದರೆ..............................


ಅಣ್ಣಾ ಹಜಾರೆ ಪ್ರಾಮಾಣಿಕರು, ಭ್ರಷ್ಟಾಚಾರದ ವಿರುದ್ಧದ ಹೋರಾಟದ ಕುರಿತ ಅವರ ಬದ್ಧತೆ ಪ್ರಶ್ನಾತೀತ. ಕಾಂಗ್ರೆಸ್ ನಾಯಕರು ಮತ್ತು ಯುಪಿಎ ಸರ್ಕಾರ ಏನೇ ಹೇಳಲಿ, ಟೀಂ ಅಣ್ಣಾ ಮೇಲೆ ಏನೇ ಗೂಬೆ ಕೂರಿಸಲಿ ಅದು ಅಣ್ಣಾ ಹಜಾರೆಯವರ ನ್ಯಾಯನಿಷ್ಠೆಗೆ ಧಕ್ಕೆಯುಂಟು ಮಾಡಲಾರದು. ಆದರೆ ಈ ಸಂದರ್ಭದಲ್ಲಿ ನಾವೆಲ್ಲರೂ ಕೇಳಿಕೊಳ್ಳಲೇಬೇಕಾದ ಬಹುಮುಖ್ಯ ಪ್ರಶ್ನೆಯೊಂದಿದೆ.
 ಪ್ರಾಮಾಣಿಕತೆ, ಬದ್ಧತೆ ಹಾಗೂ ನ್ಯಾಯನಿಷ್ಠೆಗಳು ಮಾತ್ರ ಒಂದು ಚಳವಳಿಯನ್ನು ಯಶಸ್ವಿಗೊಳಿಸುತ್ತವಾ?ಈ ಕುರಿತು ನನ್ನ ಅಭಿಪ್ರಾಯ ಹಂಚಿಕೊಳ್ಳುವ ಮುನ್ನ ಹೇಳಿಬಿಡುತ್ತೇನೆ. ಜನಲೋಕಪಾಲ ಜಾರಿಗಾಗಿ ಬೆಂಗಳೂರಿನಲ್ಲಿ ಚಳವಳಿ ಆರಂಭಗೊಂಡ ಸಂದರ್ಭದಲ್ಲಿ ನಡೆದ ರ‍್ಯಾಲಿಯಲ್ಲಿ, ನಂತರ ಫ್ರೀಡಂ ಪಾರ್ಕಿನಲ್ಲಿ ನಡೆದ ಧರಣಿಯಲ್ಲಿ ನಾನು ಪಾಲ್ಗೊಂಡಿದ್ದೆ. ಸಮಾಜದ ವಿವಿದ ಜನವರ್ಗಗಳು ಸ್ಟ್ರೈಕು, ಧರಣಿ ಅಂತೆಲ್ಲಾ ನಡೆಸುವಾಗ ಮುಖ ಸಿಂಡರಿಸಿಕೊಂಡು ಹೋಗುತ್ತಿದ್ದ ಐಟಿ ಗಯ್‌ಗಳು ಅಲ್ಲಿ ಅಂದು ಹೋರಾಟದ ಹುಮ್ಮಸ್ಸಿನಲ್ಲಿ ಕುಳಿತದ್ದು ಕಂಡು ಬಹಳ ಖುಷಿಗೊಂಡಿದ್ದೆ. ನಂತರ ಇತ್ತೀಚೆಗೆ ಅಣ್ಣಾ, ಕಿರಣ್ ಬೇಡಿ, ಕೇಜ್ರಿವಾಲ್ ತಂಡ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಸಿದ ಸಭೆಯಲ್ಲಿ ಪಾಲ್ಗೊಂಡಿದ್ದೆ. ಕೇಜ್ರಿವಾಲ್ ಅವರು ತಮ್ಮ ಕರಡಿನ ಪರವಾಗಿ ಮಂಡಿಸಿದ ಪ್ರತಿಯೊಂದಕ್ಕೂ ಅಲ್ಲಿದ್ದ ಎಲ್ಲರಂತೆ ನಾನೂ ಬೆಂಬಲ ಸೂಚಿಸಿದ್ದೆ. ಸರ್ಕಾರಿ ಲೋಕಪಾಲ ಮಸೂದೆಯನ್ನು ಎಲ್ಲರಂತೆ ನಾನೂ ಖಂಡಿಸಿದೆ. ಅರವಿಂದ ಕೇಜ್ರಿವಾಲ್ ಕರಡು ರಚಿಸಿ ಪ್ರಶಾಂತ್ ಭೂಷಣ್ ಹಾಗೂ ಶಾಂತಿ ಭೂಷಣ್ ತಿದ್ದುಪಡಿ ಮಾಡಿರುವ ಜನಲೋಕಪಾಲ ಕರಡನ್ನು ಪೂರ್ತಿ ಓದಿ ಅರ್ಥಮಾಡಿಕೊಂಡ ಮೇಲೆ ನನಗೆ ಪ್ರಾಮಾಣಿಕವಾಗಿ ಅನ್ನಿಸಿರುವುದೇನೆಂದರೆ ಅದು ಜಾರಿಯಾಗಲೇಬೇಕು ಎನ್ನುವುದು. ಅದು ಭ್ರಷ್ಟಾಚಾರವನ್ನು ಪೂರ್ತಿ ನಿರ್ಮೂಲಿಸುವುದಿಲ್ಲ ಎನ್ನುವುದು ನಿಜವಾದರೂ ಭ್ರಷ್ಟರಿಗೆ ಮೂಗುದಾಣವನ್ನಂತೂ ಹಾಕುವುದರಲ್ಲಿ ಸಂಶಯವಿಲ್ಲ.  ಈ ದೇಶದಲ್ಲಿ ತಾಂಡವವಾಡುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಕಂಡು ಸಹಜವಾದ ಸಿಟ್ಟು ಆಕ್ರೋಶ ಎಲ್ಲರಿಗಿರುವಂತೆ ನನಗೂ ಇರುವುದು ವಿಶೇಷವೇನಲ್ಲ. ಅದಕ್ಕಾಗಿ ಏನಾದರೂ ಪರಿಹಾರ ಬೇಕೆಂದು ಪರಿತಪಿಸುತ್ತಿರುವ ಕೋಟ್ಯಾಂತರ ಜನರಲ್ಲಿ ನಾನೂ ಒಬ್ಬ. ಭ್ರಷ್ಟಾಚಾರದ ಕಾರ್ಗತ್ತಲಿನಲ್ಲಿ ಜನಲೋಕಪಾಲವು ಒಂದು ಸಣ್ಣ ಬೆಳಕಿಂಡಿ ಎನ್ನುವುದು ನನ್ನ ಅಭಿಪ್ರಾಯ.
ಇದಿಷ್ಟು ನನ್ನ ಆಂಟಿಸಿಪೇಟರಿ ಬೇಲ್.

ಈಗ ವಿಷಯಕ್ಕೆ ಬರೋಣ. ಬರೀ ಪ್ರಾಮಾಣಿಕತೆ, ಬದ್ಧತೆಗಳು ಯಾವ ಹೋರಾಟವನ್ನೂ ಯಶಸ್ವಿಗೊಳಿಸಲು ಸಾಧ್ಯವಿಲ್ಲ. ಚಳವಳಿಯ ಯಶಸ್ಸಿಗೆ ಅತ್ಯವಶ್ಯಕವಾಗಿ ಬೇಕಾದದ್ದು ವ್ಯವಸ್ಥಿತ ಸಂಘಟನೆ ಹಾಗೂ ದೂರದೃಷ್ಟಿ. ಅಣ್ಣಾ ಹಜಾರೆಯವರು ಬಂಧಿತರಾದ ನಂತರದಲ್ಲಿ ಇಡೀ ಚಳವಳಿ ಒಂದು ನೆಗೆತವನ್ನು  ಸಾಧಿಸಿರುವ ಹೊತ್ತಿನಲ್ಲಿ ಕೊಂಚ ಹಿಂತಿರುಗಿ ನೋಡಿದರೆ ಸ್ಪಷ್ಟವಾಗಿ ತೋರುವುದೆಂದರೆ ಈ ಚಳವಳಿಗೆ ವ್ಯವಸ್ಥಿತ ಸಂಘಟನೆಯಾಗಲೀ ದೂರದೃಷ್ಟಿಯಾಗಲೀ ಇಲ್ಲ ಎನ್ನುವುದು. ಈ ಸಂಘಟನೆ ಎಷ್ಟೊಂದು ಜಾಳುಜಾಳಾಗಿದೆ ಎಂದರೆ ಅಣ್ಣಾ ಹಜಾರೆಗೆ ಬಿಡಿ ಸ್ವತಃ ಕೇಜ್ರೀವಾಲ್, ಕಿರಣ್ ಬೇಡಿಯವರಿಗೇ ಅದರ ಮೇಲೆ ಹಿಡಿತ ಇಲ್ಲ. ಉದಾಹರಣೆಗೆ, ಬೆಂಗಳೂರಿನಲ್ಲಿ ಚಳವಳಿಯ ಮೇಲೆ ಸಂಪೂರ್ಣ ಹಿಡಿತ ಸಾಧಿಸಿರುವವರು ಲೋಕಸತ್ತಾ ಪಾರ್ಟಿ ಹಾಗೂ ರವಿಶಂಕರ್ ಗುರೂಜಿಸಿಷ್ಯರು. ಇವರಿಬ್ಬರಿಗೂ ಪ್ರತ್ಯೇಕ ಅಜೆಂಡಾಗಳಿವೆ. ಬಿಜೆಪಿ ಹಾಗೂ ಅಬ್ಬರಿಸಿ ಬೊಬ್ಬಿಡುವ ವಿದೂಷಕರ ಪರಿಷತ್ತಿನವರು ಹೋರಾಟವನ್ನು ಬೆಂಬಲಿಸಿ ಪ್ರತಿಭಟನೆ ಮಾಡಿದ್ದಾರೆ. ಆದರೆ ಅಣ್ಣಾ ಅವರ ಜನಲೋಕಪಾಲದ ಬಗೆಗೆ ಅವರಿಗೆ ಸಂಪೂರ್ಣ ಭಿನ್ನಾಭಿಪ್ರಾಯವಿದೆ. ಅಂದರೆ ಅವರಿಗೆ ಈ ದೇಶದಲ್ಲಿ ಭ್ರಷ್ಟಾಚಾರ ನಿಯಮತ್ರಣವಾಗುವುದು ಬೇಕಾಗೇ ಇಲ್ಲ. ಅವರ ಹಿಡನ್ ಅಜೆಂಡಾ ಏನಿದ್ದರೂ ಕಾಂಗ್ರೆಸ್ ಬೀಳಿಸುವುದು. ಮೊನ್ನೆ ಸಂತೋಷ್ ಹೆಗಡೆ ವರದಿ ನೀಡಿದ್ದ ದಿನವೇ ಎಬಿವಿಪಿ ಕೇಂದ್ರದ ಭ್ರಷ್ಟಾಚಾರದ ವಿರುದ್ಧ ಪ್ರತಿಭಟನೆ ನಡೆಸಿತ್ತು. ಯಡಿಯೂರಪ್ಪನವರ ಭ್ರಷ್ಟಾಚಾರವನ್ನು  ಖಂಡಿಸುವ ಕನಿಷ್ಠ ಪ್ರಾಮಾಣಿಕತೆಯನ್ನು ಎಬಿವಿಪಿ ತೋರಲಿಲ್ಲ ಎನ್ನುವುದೇ ಅದರ ಇಬ್ಬಂದಿತನವನ್ನು ತೋರಿಸುತ್ತದೆ. ಇದೆಲ್ಲಾ ಟೀಂ ಅಣ್ಣಾಗೆ ತಿಳಿದಿಲ್ಲವೇ?. ತಿಳಿದೂ ಇಂತಹವರನ್ನು ದೂರ ಇಟ್ಟು ಚಳವಳಿಯ ಪರಿಶುದ್ಧತೆಯನ್ನು ಕಾಪಾಡಿಕೊಳ್ಳದಿದ್ದರೆ ಅಂತಿಮವಾಗಿ ದುರ್ಬಲಗೊಳ್ಳುವುದು ಇಡೀ ಚಳವಳಿಯೇ ಅಲ್ಲವೇ? ಬೆಂಗಳೂರಿನಲ್ಲಿ ಭಾಷಣ ಮಾಡಿದ ಅಣ್ಣಾ ರಾಜ್ಯಸರ್ಕಾರದ ಬ್ರಷ್ಟಾಚಾರದ ಬಗ್ಗೆ ಒಂದೇ ಒಂದು ಮಾತಾಡಿದ್ದರೂ ಸಮಾಧಾನವಾಗುತ್ತಿತ್ತು. ಆದರೆ ಅವರಿಗ್ಯಾಕೆ ಜಾಣಕುರುಡು ಎಂದು ತಿಳಿಯಲಿಲ್ಲ.
ನಿಜ. ಇಂದು ಇಡೀ ದೇಶದಲ್ಲಿ ಒಂದು ಗಣನೀಯ ಮಟ್ಟದ ಜನರನ್ನು ಕದಲಿಸುವ ಶಕ್ತಿ ಇದ್ದರೆ ಅದು ಅಣ್ಣಾ ಹಜಾರೆಗೆ ಮಾತ್ರ. ಅದು ಮಾದ್ಯಮಗಳ ಹೈಪ್ ಇರಲಿ ಮತ್ತೇನೇ ಇರಲಿ. ಇಂದು ಸಹಸ್ರಾರು ಯುವಕರು, ವಿದ್ಯಾರ್ಥಿಗಳು, ನಾಗರಿಕರಿಗೆ ಅಣ್ಣಾ ಒಂದು ಆಶಯ. ಹೀಗಾಗಿಯೇ ಅಣ್ಣಾ ಅವರ ಮೇಲೆ ಇರುವ ಹೊಣೆಗಾರಿಕೆಯೂ ಹೆಚ್ಚಿನದ್ದು. ತಮ್ಮ ಪ್ರತಿಯೊಂದು ಹೆಜ್ಜೆಯನ್ನೂ ದೇಶದ ಹಿತದಿಂದ ಹುಷಾರಾಗಿ ಇಡಬೇಕಾದ ಜವಾಬ್ದಾರಿ ಅವರದ್ದಾಗಿದೆ. ಆದರೆ ಇಲ್ಲಿ ಅಂತಹ ತಾಳ್ಮೆಯ, ಹುಷಾರಿತನದಲ್ಲಿ ಅವರು ಹೋಗುತ್ತಿಲ್ಲ. ಬರೀ ಭಾವೋನ್ಮಾದದಲ್ಲೇ ಚಳವಳಿಯನ್ನು ಕೊಂಡೊಯ್ಯುತ್ತಿರುವುದು ನಿಚ್ಚಳವಾಗಿದೆ.
ಈ ಚಳವಳಿ ಮಧ್ಯಮವರ್ಗದ ಜೊತೆ ಸಮಾಜದ ಬಹುದೊಡ್ಡ ವರ್ಗವಾದ ರೈತಾಪಿ, ಕಾರ್ಮಿಕರು, ಆದಿವಾಸಿಗಳನ್ನು, ಹಾಗೂ  ಇಂತಹ ಹೋರಾಟದಲ್ಲಿ ಅತ್ಯಂತ ಸಮರ್ಥವಾಗಿ ನಿಲ್ಲಬಲ್ಲ ದಲಿತ ವರ್ಗವನ್ನು ಒಳಗೊಳ್ಳಲು ಏನು ಮಾಡುತ್ತಿದೆ?. ಕೇಜ್ರಿವಾಲ್‌ರ ಸಂಘಟನೆಗೆ ಅದರ ಅಗತ್ಯವೇ ಕಾಣುತ್ತಿಲ್ಲ.
ಈಗ ಈ ಚಳವಳಿಯ ತಾಂತ್ರಿಕ ಅಂಶವನ್ನು ನೋಡೋಣ. ಜನಲೋಕಪಾಲವು ಜಾರಿಯಾಗಬೇಕು ನಿಜ. ಟೀಂ ಅಣ್ಣಾ ಹೇಳುವ ಒಂದು ಬಲವಾದ ಲೋಕಪಾಲ್ ಕಾಯ್ದೆಯನ್ನು ಜಾರಿಗೆ ತರಲು ಯಾವೊಂದು ಸಂಸದೀಯ ಪಕ್ಷಕ್ಕೂ ಇಚ್ಛೆಯಿಲ್ಲ. ಯಾಕೆಂದರೆ ಅಂತ ಒಂದು ಕಾಯ್ದೆ ಅವರ ಭ್ರಷ್ಟಾಚಾರದ ಉದ್ಯ,ಕ್ಕೆ ದೊಡ್ಡ ಬ್ರೇಕ್ ಹಾಕುತ್ತದೆ. ಹೀಗಾಗಿ ಅವರು ಒಪ್ಪಿಗೆ ಕೊಡುವುದಿಲ್ಲ. ಆದರೆ ಅಂತಹ ಕಾಯ್ದೆ ಜಾರಿಯಾಗಬೇಕಾದರೆ ಸಂವಿಧಾನಬದ್ಧವಾಗಿ ಸಂಸತ್ತಿನ ಮೂಲಕವೇ ಜಾರಿಯಾಗಬೇಕು. ಹೀಗಿರುವಾಗ ಇಲ್ಲಿ ಎರಡೇ ದಾರಿ. ಒಂದೋ ಅಣ್ಣಾ ಚಳವಳಿ ಎಲ್ಲಾ ಕ್ಯಾಬಿನೆಟ್ ಸದಸ್ಯರ ಮನವೊಲಿಸಿ ಅದು ಮಂಡನೆಯಾಗುವಂತೆ ನೋಡಿಕೊಳ್ಳುವುದು. ನಂತರ ಸಂಸತ್ ಸದಸ್ಯರ (ಸರಳ ಬಹಮತಕ್ಕೆ ಬೇಕಾದಷ್ಟು) ಮನವೊಲಿಸುವುದು. ಒಂದಿಲ್ಲೊಂದು ಕಾರಣ ಹೇಳಿ ಕಳೆದ 40 ವರ್ಷಗಳಿಂದ ಒಂದು ದುರ್ಬಲ ಲೋಕಪಾಲವನ್ನೇ ಜಾರಿಗೊಳಿಸದ ರಾಜಕೀಯ ಪಕ್ಷಗಳೂ ಕೊನೆಗೂ ಇದನ್ನು ಜಾರಿಗೊಳಿಸುವ ಸಾಧ್ಯತೆ ತೀರಾ ಕಡಿಮೆ. ಇದು ಸಾಧ್ಯವಾಗದ ಕಾಲಕ್ಕೆ ಸ್ವತಃ ಟೀಂ ಅಣ್ಣಾ ಒಂದು ರಾಜಕೀಯ ಪಕ್ಷ ರಚಿಸಿ ಸಂಸತ್ತಿನೊಳಗೆ ಪ್ರವೇಶಿಸಿ ಇದಕ್ಕಾಗಿ ಹೋರಾಟ ನಡೆಸುವುದು. ಈ ಎರಡು ದಾರಿಗಳನ್ನು ಬಿಟ್ಟು ಬೇರೆ ದಾರಿ ಎಲ್ಲಿದೆ?? ಇದರ ಕುರಿತು ಸುಪ್ರೀಂ ಕೋರ್ಟೂ ಕೂಡಾ ಬೆಂಬಲ ಸೂಚಿಸುವ ಸಾಧ್ಯತೆ ಕಡಿಮೆ. ಯಾಕಂದರೆ ನ್ಯಾಯಾಂಗ ಕೂಡಾ ಲೋಕಪಾಲದ ಸುಪರ್ದಿಯಲ್ಲಿ ಇರಬೇಕು ಎನ್ನುವ ಬೇಡಿಕೆಯನ್ನು ಇಂದು ಬಹುಮಟ್ಟಿಗೆ ಭ್ರಷ್ಟಗೊಂಡಿರುವ ನ್ಯಾಯಾಧೀಶರೇ ಬೆಂಬಲಿಸಲಾರರು.

ಹೀಗಿರುವಾಗ ಈ ಚಳವಳಿಯ ಗುರಿಯಾದರೂ ಏನು? ಅಂಧಕನ ಕೈಯ ಅಂಧಕ ಹಿಡಿದಂತೆ ಹಜಾರೆಯ ಕೈಯನ್ನು ನಾವುಗಳು ಹಿಡಿಯುತ್ತಿದ್ದೇವೆ ಅನ್ನಿಸುವುದಿಲ್ಲವೇ. ಮಾತ್ರವಲ್ಲಾ 'ಅಣ್ಣಾ ನಿಮ್ಮ ಹಿಂದೆ ನಾವಿದ್ದೇವೆ. ನೀವು ಪ್ರಾಣ ತ್ಯಾಗಮಾಡಿದರೂ ಅಡ್ಡಿ ಇಲ್ಲ 'ಎನ್ನುವ ಧೋರಣೆ ತೋರುತ್ತಿರುವ ನಮಗೆ ಯಾವ ಮಟ್ಟಿಗಿನ ಸಿದ್ಧತೆ ಇದೆ?. ಹೆಚ್ಚೆಂದರೆ ಫೇಸ್‌ಬುಕ್ ಟ್ವಿಟ್ಟರ್‌ಗಳಲ್ಲಿ ನಮ್ಮ ಆಕ್ರೋಶ ತೋರಿಸಬಹುದಷ್ಟೇ?.

ಚಳವಳಿ ಯಾವ ದಿಕ್ಕಿನಲ್ಲಿ ಹೋಗಬೇಕು ಎನ್ನುವ ಕುರಿತು ಯಾವ ಸ್ಪಷ್ಟತೆಯೂ ಇಲ್ಲದೇ ಹೀಗೆ ಭಾವೋನ್ಮಾದದಿಂದ ಮುನ್ನುಗ್ಗುವುದು ಈ ದೇಶಕ್ಕೆ ಒಳ್ಳೆಯದು ಮಾಡುತ್ತದೆಯಾ?

ಇಲ್ಲಿ ನಡೆಯುತ್ತಿರುವ ಚಳವಳಿಯ ಉದ್ದೇಶ ಕೇವಲ ಒಂದು ಕಾಯ್ದೆಯನ್ನು ಜಾರಿ ಮಾಡುವುದು. ಆದರೆ ಅದು ಪಡೆದುಕೊಳ್ಳುತ್ತಿರುವ ಪ್ರಚಾರವ್ಯಾಪ್ತಿ ಮಾತ್ರ ಇಡೀ ವ್ಯವಸ್ಥೆಯನ್ನು ಬುಡಮೇಲು ಮಾಡುವುದು. ಅಣ್ಣಾ ಇನ್ನೂ  ಹೆಚ್ಚೆಚ್ಚು ದಿನ ಉಪವಾಸ ಮಾಡಿದಂತೆ ಇಡೀ ದೇಶದಲ್ಲಿ (ಮಾಧ್ಯಮ ತಲುಪುವ ದೇಶ) ಇನ್ನಷ್ಟು ಆತಂಕ ಹೆಚ್ಚುತ್ತದೆ. ಆದರೆ ಆಳುವ ಪಕ್ಷ ಹಾಗೂ ವಿರೋಧ ಪಕ್ಷಗಳು ಬಗ್ಗುವುದು ಕಡಿಮೆ.
ಇಂತಹ ಭಾವೋನ್ಮಾದದ ಹಾಗೂ ಆತಂಕಪೂರಿತ ವಾತಾವರಣದಲ್ಲಿ ಏನಾಗಬಹುದು ಎಂಬ ಆಲೋಚನೆ ನಮ್ಮಲ್ಲಿದೆಯೆ? ಇಲ್ಲಿ ಚಳವಳಿಯಲ್ಲಿ ಅಪ್ರಾಮಾಣಿಕವಾಗಿ ಭಾಗವಹಿಸುತ್ತಿರುವ ಸಂವಿಧಾನ ವಿರೋಧಿ ಶಕ್ತಿಗಳು ದೇಶದಾದ್ಯಂತ ಒಂದು ಪ್ರಕ್ಷೋಬೆ ಸೃಷ್ಟಿಸಲು ಅದನ್ನು ಬಳಸಿಕೊಳ್ಳ ಬಹುದು. ಸರ್ಕಾರ ಹೋರಾಟವನ್ನು ಬಗ್ಗುಬಡಿಯಲು ಇನ್ನಷ್ಟು ಆಕ್ರಮಣ ಕಾರಿಯಾಗಬಹುದು. ಲಾಟಿ ಚಾರ್ಜು, ಗೋಲೀಬಾರ್‌ಗಳು ಟೀವಿಗಳಲ್ಲಿ ಮತ್ತಷ್ಟು ರಂಜಕವಾಗಿ ಪ್ರಸಾರವಾಗಬಹುದು. ಟಿಆರ್‌ಪಿ ರೇಟ್ ಹೆಚ್ಚಬಹುದು. ಆದರೆ ಜನಲೋಕಪಾಲ ಜಾರಿಯಾಗುವುದಿಲ್ಲ! ನೆನಪಿರಲಿ.

ಇಲ್ಲವಾದರೆ ಅಣ್ಣಾ ಹಜಾರೆ ಮತ್ತು ತಂಡ ಇಡೀ ಸಂಸದೀಯ ಪ್ರಜಾಪ್ರಭುತ್ವವನ್ನು ಬದಲಾಯಿಸಿ ಇನ್ನೂ ಉತ್ತಮ ವ್ಯವಸ್ಥೆ ಜಾರಿಗೊಳಿಸುವ ಪರ್ಯಾಯ ಸೂಚಿಸಲಿ. ಒಪ್ಪುವುದು ಬಿಡುವುದು ಜನರಿಗೆ ಬಿಟ್ಟದ್ದು. ಆದರೆ ಈಗ ಮಾಡುತ್ತಿರುವಂತೆ ಈ ಚಳವಳಿ ಎಲ್ಲಿಗೆ ತಲುಪುತ್ತದೆ ಎಂಬ ಕನಿಷ್ಠ ದೂರದೃಷ್ಟಿಯಿಲ್ಲದೇ ವಿಚ್ಚಿದ್ರಕಾರಿಗಳಿಗೆ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಅವಕಾಶ ನೀಡುವುದು ಬೇಡ. ಇತ್ತೀಚೆಗೆ ಮಧ್ಯಪ್ರಾಚ್ಯದಲ್ಲಿ ಈಜಿಪ್ಟ್‌ನಲ್ಲಿ, ಟುನಿಷಿಯಾದಲ್ಲಿ ಹೀಗೇ ಸ್ವಪ್ರೇರಿತ ದಂಗೆಗಳಾದವು. ಅಧಿಕಾರ ಹಸ್ತಾಂತರವಾಯಿತು. ಆದರೆ ಇಂದು ಈ ದೇಶಗಳಲ್ಲಿ ಅಧಿಕಾರ ವಹಿಸಿಕೊಂಡಿರುವ ಈ ಹಿಂದಿನ 'ಕ್ರಾಂತಿಕಾರಿ'ಗಳು ಹೊಸ ವ್ಯವಸ್ಥೆಯನ್ನು ತಾವೇ ನಡೆಸಬೇಕಾಗಿ ಬಂದಿರುವಾಗ ಎಂಥಾ ಗಂಭೀರ ಪಡಿಪಾಟಲುಗಳನ್ನು ಎದುರಿಸುತ್ತಿದ್ದಾರೆ ನೋಡಿ. ಇದೇ ಪರಿಸ್ಥತಿ ಕಳೆದೆರಡು ಮೂರು ವರ್ಷಗಳಲ್ಲಿ ಪಕ್ಕದ ನೇಪಾಳದಲ್ಲೂ ಏರ್ಪಟ್ಟಿದೆ.


ಒಂದು ವಿಷಯವನ್ನು ಮರೆಯದಿರೋಣ. ಚಳವಳಿಯ ಸಂಘಟನೆ, ದಾರಿ ಸರಿಯಿರದಿದ್ದರೆ ಅದು ಸಫಲಗೊಳ್ಳುವ ಸಾಧ್ಯತೆಯೂ ಕಡಿಮೆ. ಒಂದೊಮ್ಮೆ ಈ ಚಳವಳಿ ಕೆಟ್ಟ ರೀತಿಯಲ್ಲಿ ಪರ್ಯಾವಸಾನವಾದರೆ, ವಿಫಲವಾದರೆ ಏನಾಗುತ್ತದೆ? ಆಗುವುದಿಷ್ಟೆ- ಮುಂದಿನ ೫೦ ವರ್ಷ ಬ್ರಷ್ಟಾಚಾರದ ವಿರುದ್ಧ ಮಾತನಾಡುವ ಒಬ್ಬನೇ ಒಬ್ಬ ಈ ದೇಶದಲ್ಲಿರುವುದಿಲ್ಲ. ಅಂತಹ ಹತಾಷೆ, ನಿರಾಸೆ ಎಲ್ಲೆಡೆ ಆವರಿಸಿಕೊಳ್ಳುತ್ತೆ. ಟೀಂ ಅಣ್ಣಾ ಈ ವಿಷಯವನ್ನು ಪರಿಗಣಿಸಿದೆಯಾ? ಇಲ್ಲವೇ ಇಲ್ಲ. ಇದ್ದಿದ್ದರೆ ಅಣ್ಣಾ ಈಗ ಮಾಡುತ್ತಿರುವಂತೆ ಮಾಡುವ ಬದಲು ಮೊದಲು ದೇಶದಾದ್ಯಂತ ಉತ್ತಮ ಸಂಘಟನೆಗೆ ಮುಂದಾಗುತ್ತಿದ್ದರು. ಈಗ ವ್ಯಕ್ತವಾಗುತ್ತಿರುವ ಬೆಂಬಲದ ಮಹಾಪೂರವನ್ನು ಸಾಂಘಿಕ ಶಕ್ತಿಯಾಗಿ ಮಾರ್ಪಡಿಸುತ್ತಿದ್ದರು. ನಿಜವಾದ ದೇಶನಾಯಕವಾಗುತ್ತಿದ್ದರು. ಬೇಕಾದರೆ ಇನ್ನೂ ನಾಲ್ಕು ವರ್ಷ ತಯಾರಿ ನಡೆಸಿ ನಿಜವಾದ ಬದಲಾವಣೆಯ ಹರಿಕಾರನಾಗುತ್ತಿದ್ದರು. ಆದರೆ ಇಲ್ಲಿ ಅಂತಹ ಯಾವ ಲಕ್ಷಣಗಳೂ ಇಲ್ಲ.
ಹೀಗಾಗಿ ಈ ಹಿಂದೆ ಉತ್ಸಹಾದಿಂದಲೇ ಅಣ್ಣಾ ಚಳವಳಿಯನ್ನು ಒಂದು ಆಶಯವಾಗಿ ನೋಡಿದ ನನ್ನಂತವರಿಗೆ ಇಂದು ನಿರಾಸೆಯಾಗುತ್ತಿದೆ.
ಇವೆಲ್ಲವನ್ನೂ ಹೊರತು ಪಡಿಸಿದ ಮತ್ತೊಂದು ಮುಖ್ಯವಾದ ವಿಷಯವಿದೆ.
 ಇಂದು ಅಣ್ಣಾ ಚಳವಳಿಯಲ್ಲಿ ಭಾಗವಹಿಸುತ್ತಿರುವವರು ಒಂದು ಭ್ರಮೆಯಲ್ಲಿರುವುದಂತೂ ಸತ್ಯ. ಅಣ್ಣಾ ಗೆದ್ದರೆ ಭ್ರಷ್ಟಾಚಾರ ಸಂಪೂರ್ಣ ನಿಯಂತ್ರಣವಾಗಿಬಿಡುತ್ತದೆ ಎಂಬ 'ಫೂಲ್ಸ್ ಪ್ಯಾರಡೈಸ್' ಅದು. ನಾವು ಅರ್ಥ ಮಾಡಿಕೊಳ್ಳಬೇಕಿರುವುದಿಷ್ಟೆ. ಈ ದೇಶದಲ್ಲಿ ನೂರು ಜನಲೋಕಪಾಲಗಳು ಬಂದರೂ ಭ್ರಷ್ಟಾಚಾರ ಪೂರ್ತಿ ನಿರ್ಮೂಲನೆಯಾಗುವುದಿಲ್ಲ.  ಎಲ್ಲಿಯವರೆಗೆ? ಭ್ರಷ್ಟಾಚಾರಕ್ಕೆ ಮೂಲವಾಗಿರುವ ಒಂದು ಆರ್ಥಿಕ ಸಾಮಾಜಿಕ ವ್ಯವಸ್ಥೆ ಇರುವವರೆಗೆ.
ಅಷ್ಟಕ್ಕೂ ಭಾರತದಲ್ಲಿ ಭ್ರಷ್ಟಾಚಾರ ವ್ಯಾಪಕಗೊಂಡಿದ್ದು ಯಾವಾಗ? ಮತ್ತು ಹೇಗೆ? ಸಂಶಯವೆ ಇಲ್ಲ. ಯಾವಾಗ ನವ ಉದಾರವಾದಿ ನೀತಿಗಳು (Neo Liberal Policies)ಇಲ್ಲಿ ಜಾರಿಯಾದವೋ, ಯಾವಾಗ ಬಹುರಾಷ್ಟ್ರೀಯ ಕಂಪನಿಗಳ ಬಂಎವಾಳ ನಿದೇಶಿ ನೇರ ಹೂಡಿಕೆ (FDI) ಹಾಗೂ ವಿದೇಶಿ ಸಾಂಸ್ಥಿಕ ಹೂಡಿಕೆಗಳ (FII)ಹೆಸರಲ್ಲಿ ಬಂಡವಾಳ ಬಂಡವಾಳ ೆನ್ದುನುವುದು ದಂಡಿದಂಡಿಯಾಗಿ ನುಗ್ಗತೊಡಗಿತೋ? ಯಾವಾಗ ಖಾಸಗೀಕರಣ ಈ ದೇಶದ ಸಾರ್ವಜನಿಕ ಕ್ಷೇತ್ರವನ್ನು ನುಂಗಿ ಹಾಕತೋಡಗಿತೋ, ಯಾವಾಗ ಸರ್ಕಾರ ನಡೆಸುವವರಿಗೆ ಕೈಗಾರಿಕೆಗಳನ್ನು ನಡೆಸುವ ಕೆಲಸ ತಪ್ಪಿ ಬರೀ ಎಂಒಯುಗಳಿಗೆ (Memorandum Of Understanding) ಸಹಿ ಹಾಕುವ, ಹೂಡಿಕೆ ಅಪಹೂಡಿಕೆಗಳನ್ನು ಮ್ಯಾನೇಜ್ ಮಾಡುವ ಕೆಲಸ ಮಾತ್ರ ಉಳಿಯಿತೋ, ಭ್ರಷ್ಟಾಚಾರಕ್ಕೆ ಇನ್ನಿಲ್ಲದ ಅವಕಾಶ ದೊರೆತು ಯಾವಾಗ ದೊಡ್ಡ ದೊಡ್ಡ ಖಾಸಗಿ ಕಾರ್ಪೊರೇಷನ್‌ಗಳು, ಕಂಪನಿಗಳು ದೊಡ್ಡ ಮೊತ್ತದ ಆಮಿಷಗಳನ್ನು ಒಟ್ಟತೊಡಗಿದರೋ ಆಗಲೇ ತಾನೆ ಬ್ರಷ್ಟಾಚಾರ ಎನ್ನುವುದು ಸರ್ವಾಂತರ್ಯಾಮಿಯೂ, ಸರ್ವಶಕ್ತವೂ, ಸರ್ವವ್ಯಾಪಿಯೂ ಆದದ್ದು? ಈ ದೇಶದ ಆರ್ಥಿಕ ನೀತಿಗಳಲ್ಲೇ ಭ್ರಷ್ಟಾಚಾರದ ಮೂಲವಡಗಿರುವ ಅದರ ಕುರಿತು ಏನೂ ಮಾತನಾಡದ ಜನಲೋಕಪಾಲವಾಗಲೀ ಲೋಕಪಾಲವಾಗಲೀ ಭ್ರಷ್ಟಾಚಾರವನ್ನು ಹೇಗೆ ನಿಯಂತ್ರಿಸುತ್ತದೆ ಹೇಳಿ? ಹೆಚ್ಚೆಂದರೆ ಈಗ ನಾವು ಕರ್ನಾಟಕದಲ್ಲಿ ಹೇಗೆ 'ಲೋಕಾಯುಕ್ತ ಬಲೆಗೆ ಬಿದ್ದ ಹೆಗ್ಗಣ'ಗಳನ್ನು ದಿನನಿತ್ಯ ನೋಡುತ್ತಿದ್ದೇವೆಯೋ ಹಾಗೆ ದೇಶದಾದ್ಯಂತ ಹೆಗ್ಗಣಗಳ ಪಟ್ಟಿ ಬೆಳೆಯುತ್ತಾ ಹೋಗಬಹುದು. ಇಂದು ರಾಜಕಾರಣಿಗಳು ಭಾಗಿಯಾಗಿರುವ ಯಾವುದೇ ಹಗರಣಗಳನ್ನು ನೋಡಿ. ಅಲ್ಲಿ ಬ್ರಷ್ಟರು ರಾಜಕಾರಣಿಗಳು ಮಾತ್ರವಲ್ಲ. ಅವರಿಗೆ ಲಕ್ಷಾಂತರ ಕೋಟಿ ರೂಪಾಯಿಗಳನ್ನು ನೀಡುವ ಕಾರ್ಪೊರೇಷನ್‌ಗಳೂ ಇವೆ. ಆದರೆ ಜನಲೋಕಪಾಲ ಅವುಗಳ ಬಗ್ಗೆ ಎಲ್ಲೂ ಮಾತನಾಡುವುದಿಲ್ಲವಲ್ಲ?. ಭ್ರಷ್ಟಾಚಾರ ಒಂದು ಬೃಹತ್ ಆಲದ ಮರವಿದ್ದಂತೆ. ಜನಲೋಕಪಾಲದ ಶಕ್ತಿ ಇರುವುದು ಒಂದು ಕೊಂಬೆಯನ್ನು ಅಲ್ಲಾಡಿಸುವುದು ಮಾತ್ರ. ಅದರಿಂದಾಗಿ ಅಕ್ಕ ಪಕ್ಕದ ಇನ್ನಷ್ಟು ಕೊಂಬೆಗಳು ಅಲ್ಲಾಡಬಹುದೇ ವಿನಃ ಮರದ ಬುಡ ಅಲ್ಲಾಡುವುದಿಲ್ಲ. ಇನ್ನು ಆ ಮರವನ್ನು ಉರುಳಿಸುವ ಮಾತು ಬಹಳ ದೂರದ್ದು.
ಫೋಟೋಗಳು- ಹರ್ಷ

7 ಕಾಮೆಂಟ್‌ಗಳು:

ರಾಜೇಂದ್ರ ಪ್ರಸಾದ್ ಹೇಳಿದರು...

nimma vishleshane sariyaagide.... shubha haaraikegalu...

ಪತ್ರೇಶ್ ಹಿರೇಮಠ್ ಹೇಳಿದರು...

ಹರ್ಷಣ್ಣ ನೀವು ಹೇಳುವಂತೆ ಜನಲೋಕಪಾಲ ಮಸೂದೆ ಜಾರಿ ಯಾವ ಪಕ್ಷದವರಿಗೂ ಇಷ್ಟವಿಲ್ಲ.ಇವತ್ತು ಜನಲೋಕಪಾಲ ಬಗ್ಗೆ ಮಾತನಾಡುವ ಬಿಜೆಪಿ ಕೂಡಾ ಅಧಿಕಾರಕ್ಕೆ ಬಂದರೆ ಈ ಮಸೂದೆ ಜಾರಿಗೆ ಹಿಂದೇಟು ಹಾಕುತ್ತೆ. ಒಟ್ಟಾರೆ ನಮ್ಮನ್ನಾಳುವವರು ಮೊದಲು ಸ್ವಚ್ಚವಾಗಿರಬೇಕು ಅನ್ನೋ ಅಣ್ಣಾ ಹಜಾರೆ ವಾದ ಮತ್ತು ಹೋರಾಟ ತೀವ್ರಗೊಳ್ಳಲೇಬೇಕು....

ಪತ್ರೇಶ್ ಹಿರೇಮಠ್
ಹಗರಿಬೊಮ್ಮನಹಳ್ಳಿ
ಬಳ್ಳಾರಿ (ಜಿ)

ಅನಾಮಧೇಯ ಹೇಳಿದರು...

Dear Shri Kugwe:
Your article on the 'Anna Hazare movement' going on at present is very timely, bold, and meanigful. To the points you have mentioned, add this too: if the centre bows down to him today, there will be another person/s going on hunger-strike with a demand on renaming this country 'Hindu Rashtra'; or with a demand that there should be an Islamic corridor in India which includes Tajmahal? (At the time of partition, this was one of the demands.) What do we do then? Or, think of some one with a large following going on hunger-strike, with the demand that Hindi alone should be the language of communication between the centre and states (not using English as is done now); should the Centre bow down or not?
Shri Hazare is a great man, well-meaning, and honest. What he should do is to lobby with some senior and honest parliament members and see that they pass the Lokpal bill with many suitable amendments ( not to include the PM, the Chief of the Armed Forces, and the Chief Justice; you cannot have multiple power-centres); no one individual should give the parliament a ready-made bill and force it to pass it.
With warm regards,
Ramachandran

ಅನಾಮಧೇಯ ಹೇಳಿದರು...

I respect ur thoughts harsha... Annage jayavagali...

bhavanishankar ಹೇಳಿದರು...

ನಮ್ಮ ವಿಚಾರ ಸರಿಯಾಗಿದೆ. ಆದರೆ ಇಷ್ಟೊಂದು ಜನರು ಒಬ್ಬ ವ್ಯಕ್ತಿಯ ಹಿಂದೆ ಹೋಗುವ ಅವಕಾಶ ಇತಿಹಾಸದಲ್ಲಿ ಎಷ್ಟು ಬಾರಿ ಬರುತ್ತದೆ. ಅಣ್ಣಾ ಹಜಾರೆಯಂತಹವರು ಇತಿಹಾಸದಲ್ಲಿ ಎಷ್ಟು ಬಾರಿ ಬರುತ್ತಾರೆ. ಬಂದಂತಹ ಅವಕಾಶಗಳನ್ನು ಎಲ್ಲರೂ ಸರಿಯಾಗಿ ಬಳಸಿಕೊಳ್ಳಬೇಕು. ಸಂಘಪರಿವಾರದವರು ಅಣ್ಣಾ ಹಜಾರೆಯವರ ಹಿಂದೆ ಇರಬಹುದು. ಇಲ್ಲಿ ನಾವು ಯೋಚಿಸಬೇಕಾದುದೇನೆಂದರೆ ಇದೇ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ, ಲಯನ್ಸ್, ರೋಟರಿ ಇಂತಹ ಸಾವಿರಾರು ವೇದಿಕೆಗಳು ತಮ್ಮ ಹೆಸರಿನಲ್ಲಿ ಚಳವಳಿಯನ್ನು ಏಕೆ ಬೆಂಬಲಿಸಬಾರದು. ಸಂಘಪರಿವಾರದವರು ಬುದ್ಧಿವಂತರು. ನಾವೂ ಏಕೆ ಹಾಗೆ ಬುದ್ಧಿವಂತರಾಗಬಾರದು. ನಮ್ಮ ಐಡೆಂಟೆಟಿಯನ್ನು ಏಕೆ ಸ್ಥಾಪಿಸಬಾರದು.
ಅಣ್ಣಾ ಚಳವಳಿಯನ್ನು ನಿಯಂತ್ರಿಸುವವರು ಕಡಿಮೆ ಜನ. ಇದು ಕ್ರಮೇಣ ಸರಿಯಾಗುತ್ತದೆ.
ಅಣ್ಣಾ ದೇಶದುದ್ಧಕ್ಖೂ ಓಡಾಡಲಿಲ್ಲ. ಅವರು ಓಡಾಡಿ ಸಂಘಟನೆ ಮಾಡಿದರೂ ಇಂತಹ ಬೆಂಬಲ ಒದಗಿ ಬರುತ್ತದೆಂದು ಹೇಳಲು ಸಾಧ್ಯವಿಲ್ಲ. ಇದು ಅಕಸ್ಮಾತ್ತಾಗಿ ನಡೆದುಹೋಗಿದೆ. ಇದಕ್ಕೆ ಜನರ ಒಳಗೆ ಇರುವ ಕುದಿ ಕಾರಣ. ಸಂದರ್ಭ ಬಂದಿದೆ. ಎಲ್ಲರೂ ಬಳಸಿಕೊಳ್ಳಿ. ಭ್ರಷ್ಟಾಚಾರವೆಂಬ ರಾಕ್ಷಸನಿಗೆ ಬಡಿಯಲು ಅವಕಾಶ ಸಿಕ್ಕಿದೆ. ಇಷ್ಟವಿದ್ದವರೆಲ್ಲ ಮುಂದೆ ಬನ್ನಿ. ನಿಮ್ಮದೇ ರೀತಿಯಲ್ಲಿ ಹೊಡೆತ ಹಾಕಿ. ನಾನು ಕಾಲೇಜಿನಲ್ಲಿ ಕ್ಲಾಸಿನಲ್ಲಿ ಪಾಠ ಮಾಡುತ್ತೇನೆ. ಇದು ಹಳ್ಳಿ. ನಾನು ಗಾಂಧಿ ಟೋಪಿ ಹಾಕಿಕೊಂಡು ಪಾಠ ಮಾಡುತ್ತೇನೆ. ನನ್ನನ್ನೂ ನೋಡಿ ಮಕ್ಕಳೂ ಹಾಕಿಕೊಳ್ಳುತ್ತಿದ್ದಾರೆ. ಹಳ್ಳಿಯಲ್ಲಿ ಪ್ರಚಾರ ಆಗ್ತಾ ಇದೆ. ಏಕೆ ಟೋಪಿ ಹಾಕ್ಕೋಂಡಿದ್ದಾರೆ ಅಂತ. ವಿಚಾರ ಹರಡುತ್ತಿದೆ. ಇದು ನನ್ನ ಸಂದರ್ಭದಲ್ಲಿ ನಾನು ಮಾಡಬಹುದಾದ ಕೆಲಸ. ನೀವು ಒಬ್ಬರೆ ಏನು ಮಾಡಬಹುದು ಆಲೋಚಿಸಿ. ಮಾಡಿ.
ನಿಮ್ಮ ನಿಮ್ಮ ಕಾಣಿಕೆ ಸಲ್ಲಿಸಿ. ತೋಳ ಹೊಂಡಕ್ಕೆ ಬಿದ್ದರೆ ಆಳಿಗೊಂದು ಕಲ್ಲು. ನಿಮ್ಮ ಕಲ್ಲನ್ನು ಹಾಕಿ. ಐಡೆಂಟಿಫೈ ಯುವರ್ಸೆಲ್ಫ್ ಇನ್ ದಿಸ್ ಕಾಂಟೆಕ್ಸಟ್.

ಎನ್.ಭವಾನಿಶಂಕರ್, ಸಂತ ಮೇರಿ ಕಾಲೇಜು, ಶಿರ್ವ, ಉಡುಪಿ.

Kiran.m Gajanur ಹೇಳಿದರು...

ಸುಪ್ರೀಂ ಕೋರ್ಟೂ ಕೂಡಾ ಬೆಂಬಲ ಸೂಚಿಸುವ ಸಾಧ್ಯತೆ ಕಡಿಮೆ. ಯಾಕಂದರೆ ನ್ಯಾಯಾಂಗ ಕೂಡಾ ಲೋಕಪಾಲದ ಸುಪರ್ದಿಯಲ್ಲಿ ಇರಬೇಕು ಎನ್ನುವ ಬೇಡಿಕೆಯನ್ನು ಇಂದು ಬಹುಮಟ್ಟಿಗೆ ಭ್ರಷ್ಟಗೊಂಡಿರುವ ನ್ಯಾಯಾಧೀಶರೇ ಬೆಂಬಲಿಸಲಾರರು.
ನಿಮ್ಮ ಮೇಲಿನ ಉಹೆ ಅಷ್ಟು ಸಮಂಜಸವದುದಲ್ಲ ನ್ಯಾಯಾಂಗ ಒಂದು ಅಭಿಪ್ರಾಯಕ್ಕೆ ಖಂಡಿತ ಬರುತ್ತದೆ ಅದೆಂದರೆ ಸಂವಿದನಿಕವಾಗಿ ಕಾನೂನು ರಚಿಸುವ ಹಕ್ಕು ಸಂಸತ್ತಿಗೆ ಇದೆ ನಾಗರೀಕ ಸಮುದಾಯ ಸಂಸತ್ತಿನಲ್ಲಿ ರಚಿಸುವ ಕಾನೂನಿನ ಕುರಿತು ಸಲಹೆ ನೀಡಲಿ ಎಂಬುದು, ಅಲ್ಲದೆ ಅಣ್ಣ ಅವರ ಹೋರಾಟ ಸಂವಿದಾನಿಕವು ಅಲ್ಲ ಅದನ್ನು ಬಹಳಷ್ಟು ಜನ ಪ್ರತಿಭಟನೆ ಎಂದು ಕರೆಯುತ್ತಿದ್ದಾರೆ ಆದರೆ ಅದು ಪ್ರತಿಭಟನೆಯ ರೋಪದಲ್ಲಿಲ್ಲ ಬದಲಾಗಿ ಬೇಡಿಕೆಯ ರೋಪದಲ್ಲಿದೆ ಜನಲೋಕಪಾಲ್ ಜಾರಿಗೆ ಬರದಿದ್ದರೆ ಸಾಯುತ್ತೇನೆ ಎನ್ನುವುದು ಪ್ರತಿಭಟನೆ ಎನ್ನಲು ಸದ್ಯವೇ ?

ಅನಾಮಧೇಯ ಹೇಳಿದರು...

ಉತ್ತಮ ಬರಹ. ಹೋರಾಟ ಉದ್ದೇಶ ಈಡೇರಿದರೆ ಸಾರ್ಥಕ. ಇಲ್ಲದಿದ್ದರೆ ಇದೊಂದು ಮೀಡಿಯಾಗಳು ಹುಟ್ಟುಹಾಕಿದ ಮೇನಿಯಾ ಆಗುತ್ತದೆ. ಭ್ರಷ್ಟತೆ ಯಾರನ್ನೂ ಬಿಟ್ಟಿಲ್ಲ. ಮೀಡಿಯಾಗಳು ಕೆಸರಿನೊಳಗಿನ ಕಮಲಗಳೇ..... ಈ ಹೋರಾಟ ಕೇವಲ ಒಂದು ಪಕ್ಷದ ವಿರೋಧಿಯಾಗುವುದಕ್ಕಿಂತ ಭ್ರಷ್ಟಾಚಾರದ ವಿರೋದಿಯಾಗಲಿ ಎಂಬುದೇ ನನ್ನ ಕಳಕಳಿ.