'ಆಧುನಿಕ' ಬಿಕ್ಕಟ್ಟುಗಳಿಗೆ ಹಿಡಿದ ಕನ್ನಡಿ- 'ದ್ವೀಪವ ಬಯಸಿ'
ನಾನು ಪುಸ್ತಕವೊಂದನ್ನು ಓದಲು ಹಿಡಿದು ಅದು ಮುಗಿದ ಮೇಲೆಯೇ ಏಳುವಂತೆ ಮಾಡಿದ್ದು ಇತ್ತೀಚೆಗೆ ಈ ಕಾದಂಬರಿಯೇ. ಓದಲು ಆರಂಭಿಸುವವಾಗ ಅದು ಹೀಗಾಗಬಹದೆಂಬ ನಿರೀಕ್ಷೆಯೂ ನನಗಿರಲಿಲ್ಲ.
'ದ್ವೀಪವ ಬಯಸಿ' ಕಾದಂಬರಿ ಚಿಕ್ಕಮಗಳೂರು ಸೀಮೆಯ ಗೊಲ್ಲರಹಳ್ಳಿಯಲ್ಲಿ ಹುಟ್ಟಿ ಬೆಳೆದ ಜೋಯಿಸರ ಹುಡುಗ ಶ್ರೀಕಾಂತ್ ರಾವ್ ಊರು ಬಿಟ್ಟು ಬೆಂಗಳೂರು ಅಮೆರಿಕಾ ಸೇರಿ ಬದುಕು ರೂಪಿಸಿಕೊಳ್ಳುವ ಕತೆ. ಚಿಕ್ಕವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡು ತಂದೆಯ ಆರೈಕೆಯಲ್ಲಿ ಕಿರಿಯ ಸಹೋದರ ಕೃಷ್ಣನೊಂದಿಗೆ ಬೆಳೆದ ಶ್ರೀಕಾಂತನ ಆತ್ಮಕಥೆಯ ರೂಪದಲ್ಲಿರುವ ಇದು ಪ್ರಾಯಶಃ ಇತ್ತೀಚಿನ ಮಹತ್ವದ ಕಾದಂಬರಿಗಳಲ್ಲೊಂದು ಎಂದು ನನ್ನ ಭಾವನೆ.
ಗೊಲ್ಲರಹಳ್ಳಿಗೆ ಸಮೀಪದ ಯಗಚಿ ನದಿಗೆ ಡ್ಯಾಂ ಕಟ್ಟುವ ಸಲುವಾಗಿ ಒಕ್ಕಲೆಬಿಸುವ ಕಾರ್ಯ ಆರಂಭವಾದಾಗ ಇವರ ಮನೆಯೇನೂ ಮುಳುಗಡೆಯಾಗದಿದ್ದರೂ ಊರಿನ ಜನರೆಲ್ಲಾ ಬಂದಷ್ಟು ಪರಿಹಾರ ಪಡೆದು ಗುಳೇ ಹೊರಡುತ್ತಾರೆ. ಶ್ರೀಕಾಂತನ ಅಪ್ಪ ಮಾತ್ರ ಹೊರಡುವುದಿಲ್ಲ. ಬೆಂಗಳೂರಿಗೆ ಬಂದು ಹಾಸ್ಟೆಲ್ನಲ್ಲುಳಿದು, ಇಂಜಿನಿಯರಿಂಗ್ ಓದುವ ಶ್ರೀಕಾಂತ ರಜೆಗೊಮ್ಮೆ ಮನೆಗೆ ಬಂದಾಗ ಶಾಲೆಯಲ್ಲಿ ಶತದಡ್ಡಾಗಿದ್ದ ಕೃಷ್ಣ ತನ್ನನ್ನೂ ನಗರಕ್ಕೆ ಕರೆದುಕೊಂಡು ಹೋಗಲು ಕಾಡಿ ಬೇಡುತ್ತಾನೆ. ಆದರೆ ಅದು ಕಷ್ಟವೆಂದು ತಳ್ಳಿಹಾಕಿಬಿಡುತ್ತಾನೆ ಶ್ರೀಕಾಂತ್. ಕೊನೆಗೆಂದು ದಿನ ಕೃಷ್ಣ ಮನೆಬಿಟ್ಟು ಎಲ್ಲೋ ಓಡಿಹೋದ ಸುದ್ದಿ ಬರುತ್ತದೆ. ಕೃಷ್ಣನಿಗಾಗಿ ನಡೆಸಿದ ಹುಡುಕಾಟ ವಿಫಲವಾಗುತ್ತದೆ.
ಓದು ಮುಗಿಸಿ ಖಾಸಗಿ ಕಂಪನಿ ಸೇರಿದಮೇಲೆ ಸಹೋದ್ಯೋಗಿ ವಾಣಿ ಪರಿಚಯವಾಗಿ ಅದು ಪ್ರೇಮಕ್ಕೂ ತಿರುಗಿ ಮದುವೆಯಾಗುತ್ತಾರೆ. ಇಂತಿಪ್ಪ ದಂಪತಿಗಳು ಇದ್ದ ಕಂಪನಿಯ ಮಾಲೀಕ ದಿಢೀರ್ ಲಾಭಕ್ಕಾಗಿ ಅದನ್ನು ಅಮೆರಿಕದ ಕಂಪನಿಯ ಉಡಿಗೆ ಹಾಕಿಬಿಡುತ್ತಾನೆ. ಅಮೆರಿಕದ ಕಂಪನಿಯ ಹಿಡತಕ್ಕೊಳಗಾಗಿ ಅಂತಿಮವಾಗಿ ಲಾಸ್ ಏಂಜಲೀಸ್ಗೆ ಹಾರುವ ಶ್ರೀಕಾಂತ್ ಮತ್ತು ವೀಣಾ ಅಲ್ಲಿ ನೆಲೆಯೂರುತ್ತಾರೆ. ಚಿಕ್ಕಂದಿನಿಂದಿನಲ್ಲೇ ತಾಯಿಯನ್ನೂ ನಂತರ ಮನೆ ಬಿಟ್ಟು ಹೋಗಿದ್ದ ಚಿಕ್ಕಪ್ಪನನ್ನೂ, ಬುದ್ಧಿ ಬಂದ ಮೇಲೆ ಒಡಹುಟ್ಟಿದ ಕೃಷ್ಣನನ್ನೂ ಕಳೆದುಕೊಂಡ ಶ್ರೀಕಾಂತ್ ಒಮ್ಮೊಮ್ಮೆ ಮನೋವ್ಯಾಕುಲತೆಗೂ ಗುರಿಯಾಗುತ್ತಾನೆ. ಇದ್ದಕ್ಕಿಂತಂತೆ ತನ್ನ ಸಹೋದ್ಯೋಗಿ ಫ್ರಾಂಕ್ನಲ್ಲಿ ಸಹೋದರ ಕೃಷ್ಣನನ್ನೂ, ಅದೇ ಅದೇ ಕಂಪನಿಯಲ್ಲಿರುವ ಭೂಷಣ್ರಾವ್ನಲ್ಲಿ ಎಂದೋ ಮನೆಬಿಟ್ಟ ಚಿಕ್ಕಪ್ಪನನ್ನು ಹುಡುಕುವ ದೈನೇಸಿ ಸ್ಥಿತಿ ತಲುಪುತ್ತಾನೆ.
ಇನ್ಫೋವಾಯೇಜ್ ಕಂಪನಿ ಮಹತ್ತರ ಬೆಳವಣಿಗೆಯೊಂದರಲ್ಲಿ ಜೈವಿಕ ಅನಿಲ ಉತ್ಪಾದಿಸುವ ಮತ್ತೊಂದು ಕಂಪನಿಯೊಂದಿಗೆ ಒಪ್ಪಂದ ಆರಂಭದಲ್ಲಿ ಭಾರೀ ಲಾಭಗಳಿಸಿದರೂ ನಂತರದ ಬೆಳವಣಿಗೆಯಲ್ಲಿ ಆ ಜೈವಿಕ ಅನಿಲ ಕಂಪನಿ ಬಾಗಿಲು ಮುಚ್ಚಿದ ಪರಿಣಾಮವಾಗಿ ಇನ್ಫೋವಾಯೇಜ್ ಕೂಡಾ ಲೇಆಫ್ ಘೊಷಿಸಿ ಅನೇಕರನ್ನು ಮನೆಗೆ ಕಳಿಸಿಬಿಡುತ್ತದೆ. ಆದರೆ ಶ್ರೀಕಾಂತ್ ಕೆಲಸ ಮಾತ್ರ ಅಬಾಧಿತವಾಗಿ ಉಳಿಯುತ್ತದೆ. ಕೊಂಚ ಕಾಲ ಶ್ರೀಕಾಂತ್ ಸೇವೆಯಲ್ಲಿ ಉಳಿದರೂ ಒಂದು ದಿನ ಎಲ್ಲಾ ಬಿಟ್ಟು ಊರಿಗೆ ಹೊರಟು ಬಿಡಬೇಕೆನ್ನುವ ಯೋಚನೆಯಾಗುತ್ತದೆ. ಅದಕ್ಕೆ ಪತ್ನಿಯ ಒಪ್ಪಿಗೆಯೂ ದೊರೆತಯು ಅಂತಿಮವಾಗಿ ಲಾಸ್ ಏಂಜಲೀಸ್ ಬಿಡುತ್ತಾರೆ.
ಈ ಚೌಕಟ್ಟಿನಲ್ಲಿ ಸಾಗುವ 'ದ್ವೀಪವ ಬಯಸಿ' ಕಾದಂಬರಿ ದಿಕ್ಕುಗೆಟ್ಟ ಆರ್ಥಿಕ ಸಾಮಾಜಿಕ ವ್ಯವಸ್ಥೆಯೊಂದು ನಮ್ಮನ್ನೂ ದಿಕ್ಕುಗೆಡಿಸಿ ನಾವೆಲ್ಲಿದ್ದೇವೆಂಬುದೂ ನಮ್ಮ ಅರಿವಿಗೆ ನಿಲುಕದಂತೆ ಮಾಡಿ ತನ್ನೊಂದಿಗೇ ಎಲ್ಲರನ್ನೂ ಎಲ್ಲವನ್ನೂ ಕಬಳಿಸುತ್ತಾ ಸಾಗುವ ಪರಿಯನ್ನು ಈ ಕಾದಂಬರಿ ಅದ್ಭುತವಾಗಿ ಚಿತ್ರಿಸಿದೆ ಎನ್ನಬಹುದು. ಬಹುಮುಖ್ಯವಾಗಿ ಈ ಕೃತಿ ಇಂದು ಈ ಜಗತ್ತು ಕಾಣುತ್ತಿರುವ ಪ್ರಮುಖ ಬಿಕ್ಕಟ್ಟುಗಳೆಲ್ಲವನ್ನೂ ಶ್ರೀಕಾಂತನ ಜೀವನ ಹಾಗೂ ಪ್ರಜ್ಞಾಲೋಕದೊಂದಿಗೆ ತಳುಕು ಹಾಕುತ್ತಾ ಸಾಗುತ್ತದೆ.
ಅದು ಆಧುನಿಕತೆಯ ಜೊತೆಜೊತೆಗೆ ಅಭಿವೃದ್ಧಿ ಹೆಸರಿನಲ್ಲಿ ಜನರನ್ನು ಹುಟ್ಟಿ ಬೆಳೆದ ನೆಲದಿಂದ, ನಂಬಿಕೆಯಿಂದ ದೂರಗೊಳಿಸುವಾಗಿನ ಅನುಭವಿಸುವ ಇಕ್ಕಟ್ಟು; ಹೊಟ್ಟೆಪಾಡಿಗಾಗಿ ನಗರಗಳೆಡೆ ಮುಖ ಮಾಡಿ ನಮ್ಮವರು ತಮ್ಮವರಿಂದ ದೂರವಾದಾಗಿನ ಸಂದಿಗ್ಧತೆ; ಮಾಹಿತಿ ತಂತ್ರಜ್ಞಾನದ ಬೂಮ್ ಬೆಂಗಳೂರನ್ನು ಇನ್ನಿಲ್ಲದಂತೆ ಭ್ರಾಮಕಗೊಳಿಸಿ ಕನಸಿನಲ್ಲೂ ನಿರೀಕ್ಷಿಸಿದ ಸಂಬಳ ಕೈಗೆ ಬಂದಾಗ, ಕೆಲಸ ಬಿಡುವಾಗ ಎದುರಾಗುವ ನೈತಿಕ ಬಿಕ್ಕಟ್ಟು; ಜಾಗತಿಕ ಮಟ್ಟದಲ್ಲಿ ಬಂಡವಾಳಶಾಹಿ ವ್ಯವಸ್ಥೆಯಲ್ಲಾಗುವ ಪ್ರತಿ ಬೆಳವಣಿಗೆ ನಮ್ಮ ಕುಟುಂಬ, ಸಂಬಂಧಗಳನ್ನೆಲ್ಲಾ ಇನ್ನಿಲ್ಲದಂತೆ ಪ್ರಭಾವಿಸಿಬಿಡುವ ಬಗೆ ಶ್ರೀಕಾಂತನ ಜೊತೆ ನಮ್ಮನ್ನೂ ನಾಟುತ್ತವೆ. ಅನಿರೀಕ್ಷಿತವಾದ ಒಂದು ಸಂದರ್ಭದಲ್ಲಿ ವಾಣಿಯ ಸಹಪಾಠಿ ಕ್ರಿಸ್ ಭಾಷಣವೊಂದು ಮಾರುಕಟ್ಟೆ ಪ್ರೇರಿತ ಬಂಡವಾಳಶಾಹಿ ಹಾಗೂ ಕಮ್ಯುನಿಸ್ಟ್ ವ್ಯವಸ್ಥೆಗಳ ವಿರುದ್ಧದ ಬಂಡಾಯವಾಗಿಯೂ ಮಾನವವತಾವಾದದ ಪ್ರತಿಪಾದನೆಯಾಗಿಯೂ ಭಾಸವಾಗುತ್ತದೆ. ಸಂಪೂರ್ಣ ಸಂಕೀರ್ಣಗೊಂಡ ಫ್ರಾಂಕ್ನ ಬದುಕು ಇನ್ನೇನೋ ಸಂದೇಶ ನೀಡುತ್ತದೆ. ಕಂಪನಿ ನಡೆಸುವ ಲೇಆಫ್ ಶ್ರೀಕಾಂತನ ಪಾಲಿಗೆ ಯುದ್ಧದಂತೆಯೇ ಪರಿಣಮಿಸಿ ಸರ್ವೈವರ್ ಸಿಂಡ್ರೋಮ್ ಗೆ ಒಳಗಾಗುತ್ತಾನೆ. ಸಂಮೀಂದ ಮದುರಸಿಂಘೆಯ ಮಗ ಮಹೀಂದನ ಬದುಕು ಮತ್ತು ಸಾವು ಹಾಗೂ ವಾರ್ ಜರ್ನಲಿಸ್ಟ್ ಆಗಿ ಅವನು ಬರೆದ ಡೈರಿಯ ಪುಟಗಳು ಶ್ರೀಕಾಂತನ ಚಿಂತನೆ ಹಾಗೂ ಬದುಕಿಗೆ ಹೊಸ ತಿರುವನ್ನೇ ನೀಡುತ್ತವೆ.
ಹೀಗೆ ಅಮೆರಿಕ ಕೇಂದ್ರಿತ ಜಗತ್ತಿನಲ್ಲಿ ಏನೇನೆಲ್ಲಾ ನಡೆದಿವೆಯೋ ಎಲ್ಲದಕ್ಕೂ ಶ್ರೀಕಾಂತ ಒಂದಲ್ಲಾ ಒಂದು ರೀತಿ ಎಡತಾಕುತ್ತಾ ಹೋಗುತ್ತಾನೆ. ಕಾದಂಬರಿಯಲ್ಲಿ ಅಂತರ್ವಾಹಿನಿಯೆಂಬಂತೆ ಬದುಕಿಗೆ ಅರ್ಥವನ್ನು ಶೋಧಿಸುವ ಪ್ರಯತ್ನವೂ ಸಾಗುತ್ತದೆ. ಘಟನೆಗಳು ಒಂದೊಂದಾಗಿ ಅನಿರೀಕ್ಷಿತವಾಗಿ ಸಂಭವಿಸುತ್ತಿದ್ದಂತೆ ಬದುಕು - ಉದ್ಯೋಗಗಳ ನಡುವಿನ ಅರ್ಥ ಉದ್ದೇಶಗಳು, ಮನಸ್ಸಿನ ಪ್ರಶ್ನೆಗಳಿಗೆ ಉತ್ತರಗಳೂ ಶ್ರೀಕಾಂತನಿಗೆ ನಿಚ್ಚಳವಾಗುತ್ತಾ ಹೋಗುತ್ತದೆ. ಬುದ್ಧನ ಮುಗುಳ್ನಗು ಕಾಣಿಸುತ್ತದೆ.
ಕಾದಂಬರಿಯ ಕರ್ತ್ರು ಎಂ.ಆರ್. ದತ್ತಾತ್ರಿ ತಮ್ಮ ಕಾದಂಬರಿಯ ಪಾತ್ರಗಳಲ್ಲಿ ಪರಕಾಯಪ್ರವೇಶ ಮಾಡಿಯೇ ಇದನ್ನು ಬರೆದಿದ್ದಾರೆ. ಕನ್ನಡ ಸಾಹಿತ್ಯ ಓದುಗರಿಗೆ ಸಾಫ್ಟ್ವೇರ್ ಜಗತ್ತಿನೊಳಗಿನ ಪಾತ್ರಗಳು, ಕತೆ ರೂಪದ ವಾಸ್ತವಗಳು ಹೆಚ್ಚಾಗಿ ಪರಿಚಯವಾದದ್ದು ವಸುದೇಂಧ್ರರ ಬರಹಗಳ ಮೂಲಕ. ಒಂದು ಕಾದಂಬರಿಯಾಗಿ 'ದ್ವೀಪವ ಬಯಸಿ' ಕಾದಂಬರಿ ಕೂಡಾ ಅದನ್ನು ಅತ್ಯಂತ ಪರಿಣಾಮಕಾರಿಯಾಗಿ ಮಾಡಿದೆ ಎನ್ನಹುದು. ಮುಖ್ಯವಾಗಿ ತನ್ನ ನಿರೂಪಣೆಯ ಶೈಲಿಯಿಂದ ಒಂದು ಆತ್ಮಕತೆೆಯೋಪಾದಿಯಲ್ಲಿ ಸಾಗುತ್ತಾ ಅದು ಕಡೆಯವರೆಗೂ ಕುತೂಹಲವನ್ನುಳಿಸಿಕೊಂಡು ಹೋಗುತ್ತದೆ. ಇಡೀ ಕಾದಂಬರಿ ಶ್ರೀಕಾಂತ್ ರಾವ್ನ ಆತ್ಮಕಥೆಯಾಗುವ ಹೊತ್ತಿಗೇ ಈ ಕಾಲದ ನಮ್ಮೆಲ್ಲರ ಆತ್ಮಗಳ ಕತೆಯೂ ಆಗಿ ಪರಿಣಮಿಸುತ್ತದೆ. ಇಟಲಿಯ ಜಾನಪದ ಕತೆ, ಶ್ರೀಲಂಕಾ ಯೋಧನ ಭಾವ ಚಿತ್ರ, ಯೋಸಿಮಿತಿಯಲ್ಲಿ ದಂಪತಿಳು ಪಡೆವ ಅಲೌಕಿಕ ದಿವ್ಯಾನುಭವ, ಲೈಫ್ ಆಫ್ ಪೈ ಕತೆ, ಕಾಡು ಬೆಂಕಿಗಳನ್ನೊಳಗೊಂಡ ಕಾದಂಬರಿ ನಮ್ಮನ್ನು ತಲ್ಲಣಗೊಳಿಸುತ್ತದೆ.
ಕೆಲವೊಮ್ಮೆ ಓದಿನ ಓಘಕ್ಕೆ ಧಕ್ಕೆಯಾದಂತೆಯೂ ಅನ್ನಿಸುತ್ತದೆ. ಜೈವಿಕ ಅನಿಲಕ್ಕೆ ಸಂಬಂಧಿಸಿದ ಪತ್ರಿಕಾ ವರದಿಗಳ ವಿವರಗಳನ್ನು ನೀಡುವಾಗ ಕೆಲಹೊತ್ತು ವಾಚ್ಯವಾದಂತೆನಿಸಿಬಿಡುತ್ತದೆ. ಕತೆಗೆ ಒಂದು ತಿರುವು ನೀಡುವ ಆ ವಿವರಗಳು ಅಲ್ಲಿ ಅಗತ್ಯವಿದ್ದರೂ ಅಷ್ಟು ದೀರ್ಘವಾಗಿರಬೇಕಿರಲಿಲ್ಲ. ಹಾಗೆಯೇ ಶ್ರೀಕಾಂತನ ನತದೃಷ್ಟ ತಂದೆಯ ಚಿತ್ರಣ ಮೊದಲಿಗೆ ಮಾತ್ರ ಸಿಗುತ್ತದೆ ಬಿಟ್ಟರೆ ಮತ್ತೆ ಕಾದಂಬರಿಯ ಕೊನೆಯವರೆಗೂ ಕಾಣಿಸಿಕೊಳ್ಳುವುದೇ ಇಲ್ಲ. ಕಳೆದು ಹೋದ ತಮ್ಮನಿಗಾಗಿ ಹಗಲಿರುಳೂ ಹಂಬಲಿಸುವ ಶ್ರೀಕಾಂತ್ ದೂರದಲ್ಲಿ ಏಕಾಂಗಿಯಾಗಿರುವ ತಂದೆಗಾಗಿ (ಶ್ರೀಕಾಂತ್ ಪಾಲಿನ ತಾಯಿಯೂ ಹೌದು) ಒಮ್ಮೆಯೂ ಹಂಬಲಿಸುವುದಿಲ್ಲವೇಕೆ ಎಂಬ ಪ್ರಶ್ನೆ ಮೂಡುತ್ತದೆ.
ಈ ಕೊರತೆಗಳಾಚೆಗೂ 'ದ್ವೀಪವ ಬಯಸಿ' ಕಾದಂಬರಿ ಸಮಕಾಲೀನ ಜಾಗತಿಕ ಸಂದರ್ಭದಲ್ಲಿ ಮಹತ್ವಾಕಾಂಕ್ಷೆಯಿಟ್ಟುಕೊಂಡು ಬದುಕ ಹೊರಡುವವರ ಬದುಕಿನ ಸಂದಿಗ್ಧತೆಗಳನ್ನು, ನಾವಿರುವ ಸಂದರ್ಭದ, ವ್ಯವಸ್ಥೆಯ ವೈರುಧ್ಯಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಬಿಂಬಿಸುವ ಮಹತ್ವದ ಕಾದಂಬರಿ. ಇಲ್ಲಿ ಕಥಾಕೇಂದ್ರದಲ್ಲಿರುವುದು ಟೆಕ್ಕಿಗಳೆಂಬುದು ಒಂದು ನೆಪವಷ್ಟೇ. ಪ್ರತಿಯೊಬ್ಬನ ಬದುಕಿಗೂ ಸಂಬಂಧಿಸುವ ಪ್ರಶ್ನೆಗಳೇ ಇಲ್ಲಿ ಮೇಳೈಸಿವೆ. ಪ್ರತಿಯೊಬ್ಬರೂ ಓದಬೇಕಾದ ಕೃತಿ ಇದು ಎಂದು ಖಂಡಿತವಾಗಿ ಹೇಳಬಹುದು.
1 ಕಾಮೆಂಟ್:
ಹರ್ಷ ಅವರೆ ನೀವು suggest ಮಾಡಿರುವ ಈ ಕಾದ೦ಬರಿ ಬಹಳ ಆಸಕ್ತಿಕರವಾಗಿದೆ. ಈಗಲೇ ಕೊ೦ಡು ಓದಬೇಕೆನಿಸಿದೆ. ಕನ್ನಡ.ಕಾಮ್ ನಲ್ಲಿ ಹುಡುಕುತ್ತಿರುವೆ ಆದರೆ ಸಿಗುತ್ತಿಲ್ಲಾ.. :(
ಕಾಮೆಂಟ್ ಪೋಸ್ಟ್ ಮಾಡಿ