ಮಾನ್ಯ ಸಬಾದ್ಯಕ್ಷರಿಗೆ ಒಂದು ಬಹಿರಂಗ ಪತ್ರ
ಮಾನ್ಯ ವಿದಾನಸಬೆಯ ಸಬಾದ್ಯಕ್ಷರಾದ ಯು ಟಿ ಕಾದರ್ ಅವರೆ, ಶಾಸಕರ ಶಿಬಿರಕ್ಕೆ ಕೆಲವರು ಆಗಮಿಸುವುದು ದೃಡಪಟ್ಟಿಲ್ಲ ಎಂದು ತಿಳಿಸಿದ್ದೀರಿ. ಸಂತೋಷ. ದೃಡಪಡುವುದೇ ಬೇಡ ಎಂದು ನಮ್ಮಾಸೆ. ಮಾನ್ಯ ಸ್ಪೀಕರ್ ಅವರೆ, ಶಾಸಕರಿಗಾಗಿ ಶಿಬಿರ ನಡೆಸುವುದು ಬೇಡ ಎಂದು ಯಾರೂ ಹೇಳಿಲ್ಲ. ಶಾಸಕರಿಗೆ ಕಲಾಪ ನಡೆಯುವ ರೀತಿ ರಿವಾಜುಗಳ ಕುರಿತು, ಪ್ರಜಾಪ್ರಬುತ್ವದ ತತ್ವಗಳ ಕುರಿತು ಶಿಬಿರ ಪ್ರತಿ ಸಲ ನಡೆಯುತ್ತದೆ. ಅದು ಅಗತ್ಯ ಕೂಡಾ. ಈ ಬಗ್ಗೆ ಯಾವ ತಕರಾರೂ ಯಾರಿಗೂ ಇಲ್ಲ. ಸಮಸ್ಯೆ ಆಗಿದ್ದು ಈ ಸಲ ನೀವು ಹೊಸದಾಗಿ ಅದೇನೋ ಮೋಟಿವೇಶನ್ ಕೊಡಿಸೋಕೆ ಅಂತ ಕೆಲವರು ಮಹಾಮಹಿಮರ ಹೆಸರು ಹೇಳಿದ್ರಲ್ಲ... ಅದು. ನಿಮ್ಮ ಹೇಳಿಕೆಯಿಂದ ಎಲ್ಲರಿಗೂ ಸಿಕ್ಕಿದ ಸ್ಪಷ್ಟತೆ ಏನು ಎಂದರೆ ವೀರೇಂದ್ರ ಹೆಗ್ಗಡೆ, ರವಿಶಂಕರ ಗುರೂಜಿ, ಗುರುರಾಜ ಕರ್ಜಗಿ ಇವರ ಬಗ್ಗೆ ನಿಮಗೆ ಯಾವ ಸ್ಪಷ್ಟತೆ ಇಲ್ಲ ಎನ್ನುವುದು. ಅದೇನೋ ಒತ್ತಡ ರಹಿತ ಕೆಲಸದ ನಿರ್ವಹಣೆ ಬಗ್ಗೆ ಆದ್ಯಾತ್ಮ ತರಬೇತಿ ಎಂದಿದ್ದೀರಿ. ನಿಮ್ಮ ಮಾತು ಹೇಗಿದೆ ಎಂದರೆ ಹೆಬ್ಬಾವನ್ನ ಕರೆದು ಕೋಳಿಮರಿಗಳಿಗೆ ಒತ್ತಡ ನಿರ್ವಹಣೆ ಹೇಗೆ ಎಂದು ತರಬೇತಿ ಕೊಡಿಸಿದಂತೆ. ನೀವು ಕರಾವಳಿಯ ಒಬ್ಬ ಶಾಸಕರಾಗಿ ಆತ್ಮಸಾಕ್ಷಿ ಇಟ್ಟುಕೊಂಡು ಹೇಳಿ. ಒಬ್ಬ ಶಾಸಕ ಯಾವಾಗ ಒತ್ತಡವಿಲ್ಲದೆ ಶಾಂತಿ ಸಮಾದಾನದಿಂದ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತದೆ? ಇಡೀ ರಾಜ್ಯದಲ್ಲಿ, ದೇಶದಲ್ಲಿ ಮತ್ತು ನಿಮ್ಮ ಕ್ಷೇತ್ರದಲ್ಲಿ ವಿವಿದ ದರ್ಮಗಳ ಜನರ ನಡುವೆ ಶಾಂತಿ ಸ...