ಅನಂತಮೂರ್ತಿಯವರ ಚಿಂತನೆ - ಆಶಯಗಳು ನಮ್ಮನ್ನು ಎಚ್ಚರವಾಗಿಟ್ಟಿರಲಿ.

ತುಂಗ-ಭದ್ರೆಯರ ಉಳಿವಿಗಾಗಿನ ಆಂದೋಲನದಲ್ಲಿ ಶಿವಮೊಗ್ಗದ ಗೋಪಿ ಸರ್ಕಲ್ ನಲ್ಲಿ ಮಾನವ ಸರಪಳಿ ರಚಿಸಿದ್ದ ಸಂದರ್ಭ. ಮಾತನಾಡಲು ನನ್ನ ಕೈಯಿಂದ ಮೈಕು ತೆಗೆದುಕೊಳ್ಳುತ್ತಿರುವ ಡಾ. ಯು. ಆರ್. ಅನಂತಮೂರ್ತಿಯವರು. ಚಿತ್ರದಲ್ಲಿ ನಾಡಿನ ಪ್ರಖರ ಆರ್ಥಿಕ ಚಿಂತಕರಾಗಿದ್ದ ದಿ. ಡಾ. ನಿ.ಮುರಾರಿ ಬಲ್ಲಾಳರನ್ನೂ ಕಾಣಬಹುದು. ಅವು 2001ರ ದಿನಗಳು . ನನ್ನೂರು ಶಿವಮೊಗ್ಗೆಯಲ್ಲಿ ತುಂಗ - ಭದ್ರ ನದಿಗಳ ಮೂಲದ ಉದ್ದೇಶಿತ ಕುದುರೆಮುಖ ಗಣಿಗಾರಿಕೆಯನ್ನು ವಿರೋಧಿಸುವ ಜನಾಂದೋಲನ ಮತ್ತೊಮ್ಮೆ ಗರಿಗೆದರಿತ್ತು . ನಾವು ಒಂದಷ್ಟು ವಿದ್ಯಾರ್ಥಿಗಳು ಈ ಚಳವಳಿಯ ಕಾರ್ಯಕರ್ತರಾಗಿ ಕಲ್ಕುಳಿ ವಿಠ್ಠಲ ಹೆಗ್ಡೆಯವರ ನೇತ್ರುತ್ವದಲ್ಲಿ ಹಗಲು ರಾತ್ರಿಯೆನ್ನದೆ ಕೆಲಸ ಮಾಡುತ್ತಿದ್ದೆವು . ಕುದುರೆಮುಖದ ಪಕ್ಕದಲ್ಲಿರುವ ಗಂಗಡಿಕಲ್ಲು ಮತ್ತು ನೆಲ್ಲಿಬೀಡು ಕ್ರಮವಾಗಿ ತುಂಗೆ ಮತ್ತು ಭದ್ರೆಯರ ಮೂಲಸ್ಥಳಗಳು . ಆ ಎರಡೂ ಗುಡ್ಡಗಳಲ್ಲಿ ಗಣಿಗಾರಿಕೆಯನ್ನು ವಿಸ್ತರಿಸುವುದಾಗಿ ಮತ್ತು ಮುಂದಿನ 20 ವರ್ಷಗಳ ಕಾಲ ಜಪಾನಿನ ನಿಪ್ಪಾನ್ ಕಂಪನಿಗೆ ಹಂತಹಂತವಾಗಿ ಗಣಿಗಾರಿಕೆಯನ್ನು ವಿಸ್ತರಿಸುವುದಾಗಿ ರಾಜ್ಯ ಮತ್ತು ಕೆಂದ್ರ ಸರ್ಕಾರ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದವು . ಇದರ ವಿರುದ್ಧವಾಗಿ ತುಂಗಭದ್ರಾ ನದಿಗಳ ದಂಡೆಯ ಮೇಲಿನ ಎಂಟೂ ಜಿಲ್ಲೆಗಳಲ್ಲಿ ಹತ್ತು ವರ್ಷಗಳ ನಂ...