"ಭೂಮಿ ಮತ್ತು ರಂಗಭೂಮಿ ಎರಡೂ ಅತಂಕದಲ್ಲಿವೆ"- ಚಿದಂಬರರಾವ್ ಜಂಬೆ
ನಾಡಿನ ರಂಗಭೂಮಿಯಲ್ಲಿ ಚಿದಂಬರರಾವ್ ಜಂಬೆಯವರ ಕೊಡುಗೆ ಅಪಾರವಾದದ್ದು. ಹೆಗ್ಗೋಡಿನ ನೀನಾಸಂ, ಮೈಸೂರಿನ ರಂಗಾಯಣ ಮತ್ತು ಸಾಣೆಹಳ್ಳಿಯ ಶಿವಸಂಚಾರ ಈ ಮೂರೂ ಪ್ರಮುಖ ರಂಗಶಾಲೆಗಳಲ್ಲಿ ಅತ್ಯಮೂಲ್ಯ ಕೊಡುಗೆ ನೀಡಿರುವ ರಂಗನಿರ್ದೇಶಕ ಮತ್ತು ಚಿಂತಕ ಚಿದಂಬರರಾವ್ ಜಂಬೆಯವರೊಂದಿಗೆ ನಡೆಸಿದ ಮಾತುಕತೆ ಇಲ್ಲಿದೆ. (ಚಿತ್ರಗಳು-ಹರ್ಷಕುಮಾರ್ ಕುಗ್ವೆ) ಆಧುನಿಕ ರಂಗಭೂಮಿಯ ಇಂದಿನ ಟ್ರೆಂಡ್ ಏನಾಗಿದೆ? ಈ ’ಆಧುನಿಕತೆ’ ಎನ್ನುವುದನ್ನೇ ಆಲೋಚನೆ ಮಾಡಬೇಕಾಗಿದೆ. ಏಕೆಂದರೆ ಇಂದು ಆಧುನಿಕತೆ ಎಂದು ಕರೆಯುವುದು ಕೇವಲ ತಾಂತ್ರಿಕವಾಗಿಯೇ ವಿನಃ ವಸ್ತುಸಂವಿಧಾನದಲ್ಲಿ ಆದಂತಹ ಬದಲಾವಣೆಗಳನ್ನು ಇಟ್ಟುಕೊಂಡು ನಾವು ಆಧುನಿಕತೆಯನ್ನು ನೋಡುತ್ತಿಲ್ಲ. ಈಗ ತಾಂತ್ರಿಕವಾಗಿ ಅಷ್ಟೇನು ಬದಲಾವಣೆಗಳು ಆಗಿಲ್ಲ ಎಂಬುದು ನನ್ನ ಅಭಿಪ್ರಾಯ. ವಸ್ತು ಸಂವಿಧಾನದಲ್ಲಿ ಕೂಡ ಹೇಳಿಕೊಳ್ಳುವಂತಹಾ ಬಹಳಷ್ಟು ಏನೂ ಬಂದಿಲ್ಲ. ಇಂದು ಆಧುನಿಕ ಅಂದರೆ ಜಾಗತಿಕರಣದ ವೇಗದಲ್ಲಿ ಹೋಗುತ್ತಿರುವುದರಿಂದ ಅದನ್ನೇ ಆಧುನಿಕತೆ ಎನ್ನುವ ಸ್ಥಿತಿಗೆ ನಾವು ಬಂದು ಬಿಟ್ಟಿದ್ದೇವೆ. ವಾಸ್ತವದಲ್ಲಿ ಅದು ಆಧುನಿಕತೆಯಲ್ಲ. ಅದರ ಹೊರತಾಗಿ ಜಾಗತಿಕರಣವನ್ನು ನಿರಾಕರಣೆ ಮಾಡುವಂತಾದ್ದು ಅಥವಾ ಆ ವೇಗಕ್ಕೆ ಸಿಲುಕಿಕೊಳ್ಳದೇ ಇರುವ ಯಾವುದಾದರೂ ಒಂದು ಮಾರ್ಗವಿದ್ದರೆ ಅದನ್ನ ನಾವು ಆಧುನಿಕತೆ ಎಂದು ಕರೆಯಬಹುದು. ನಮ್ಮ ಪಾರಂಪರಿಕವಾದ ರಂಗಭೂಮಿಗೂ ಇಂದಿನ ರಂಗಭೂಮಿಗೂ ಭಿನ್ನತೆಗ...