ಜುಲೈ 23, 2012

"ನಮ್ಮ ಸಾಹಿತ್ಯ ವಿಮರ್ಶೆಯ ಮಾನದಂಡಗಳೇ ಪ್ರಶ್ನಾರ್ಹವಾಗಿವೆ": ಲಕ್ಷ್ಮಣ ಕೊಡಸೆ





ಪ್ರಜಾವಾಣಿಯಂತಹ ಪತ್ರಿಕೆಯಲ್ಲಿ ವರದಿಗಾರನ ಹುದ್ದೆಯಿಂದ ಮೊದಲುಗೊಂಡು ಸಹ ಸಂಪಾದಕ ಹುದ್ದೆಯವರಗೆ ಹಲವಾರು ಜವಾಬ್ದಾರಿಗಳನ್ನು ನಿರ್ವಹಿಸಿ ಅಪಾರ ಅನುಭವ ಪಡೆದವರು ಲಕ್ಷ್ಮಣ ಕೊಡಸೆಯವರು. ಮೂರು ದಶಕಗಳಿಗೂ ಹೆಚ್ಚು ಕಾಲ ಪತ್ರಕರ್ತರಾಗಿ ಸೇವೆ ಸಲ್ಲಿಸಿ ಕತೆ, ಕಾದಂಬರಿ ಮುಂತಾದ ಪ್ರಕಾರಗಳಲ್ಲಿಯೂ ನಿರಂತರವಾಗಿ ತೊಡಗಿಸಿಕೊಂಡಿರುವ ಅವರು ಇದೀಗ ನಿವೃತ್ತ ಜೀವನ ನಡೆಸುತ್ತಿದ್ದಾರೆ. ಇಂದಿನ ಪತ್ರಿಕೋದ್ಯಮ, ಸಮಾಜ, ಸಾಹಿತ್ಯ, ರಾಜಕೀಯ ಇತ್ಯಾದಿಗಳ ಕುರಿತು ಹರ್ಷಕುಮಾರ್ ಕುಗ್ವೆ  ದ ಸಂಡೆ ಇಂಡಿಯನ್ ಗಾಗಿ ನಡೆಸಿದ ಸಂದರ್ಶನ  ಇಲ್ಲಿದೆ.



ಸುದೀರ್ಘ ಅವಧಿಯ ಪತ್ರಕರ್ತ ವೃತ್ತಿಯ ನಂತರದಲ್ಲಿ ನಿವೃತ್ತಿ ಹೊಂದಿರುವುದು ಏನನ್ನಿಸುತ್ತಿದೆ? 
ಆರ್ಥಿಕ ದೃಷ್ಟಿಯಿಂದ ಕೆಲಸ ಮುಂದುವರೆಸಲೇ ಬೇಕಾದ ಅಗತ್ಯ ನನಗೆ ಇನ್ನು ಇರಲಿಲ್ಲ. ಪತ್ರಿಕೋದ್ಯಮವೂ ಇತರ ವೃತ್ತಿಗಳಂತೆ ಒಂದು ವೃತ್ತಿಯಾದ್ದರಿಂದ ಅದನ್ನು ಮುಗಿಸಿ ಬೇರೆ ಜೀವನವನ್ನು ನಾವು ರೂಪಿಸಿಕೊಳ್ಳಬೇಕಾಗುತ್ತದೆ. ಪತ್ರ್ರಕರ್ತನಾದವನು  ಸಾಯುವವರೆಗೂ ಪತ್ರಕರ್ತನೇ ಎಂಬ ಭಾವನೆ ಜನರಲ್ಲಿಯೂ, ಕೆಲ ಪತ್ರಕರ್ತರಲ್ಲಿಯೂ ಇದೆ. ಹಾಗಿರಬೇಕಾಗಿಲ್ಲ. ಕಳೆದ 30-35 ವರ್ಷ ಪೂರ್ತಿ ಪತ್ರಿಕೋದ್ಯಮದಲ್ಲೇ ಮುಳುಗಿ ಹೋಗಿರುವುದರಿಂದ ಓದುವುದು ಸಾಕಷ್ಟು ಉಳಿದುಕೊಂದಿದೆ. ಸಾಕಷ್ಟು ಓದಲಿಕ್ಕಾಗದೇ ಅಪ್‌ಡೇಟ್ ಆಗಲಿಕ್ಕಾಗಲಿಲ್ಲ ಎಂಬ ಭಾವನೆ ನನಗಿದೆ. ಇಷ್ಟು ವರ್ಷಗಳ ಅನುಭವಗಳನ್ನು ಒಂದೆಡೆ ದಾಖಲಿಸುವ ಯೋಚನೆಯೂ ಇರುವುದರಿಂದ ಸದ್ಯ ಸಾಕು. 

ಪತ್ರಿಕೋದ್ಯಮದೊಂದಿಗೆ ನಿಮ್ಮ ಒಡನಾಟ ಹೇಗೆ ಶುರುವಾದದ್ದು?
ನಾನು ಓದಿದ್ದು ಸೆಂಟ್ರಲ್ ಕಾಲೇಜಿನಲ್ಲಿ. ಎಂಎ ಮಾಡುವ ಹೊತ್ತಿಗೆ ನಮಗೆ ಕೆಲಸ ಸುಲಭವಾಗಿ ಸಿಗುವುದಿಲ್ಲ ಎಂದು ಗೊತ್ತಾಯ್ತು. ನನಗೆ ಕತೆ ಬರೆಯುವ ಗೀಳು ಇತ್ತು. 1972 ರಿಂದ 78ರ ನಡುವೆ 15 ಕತೆಗಳು ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದವು. ಇದ್ದ ಪತ್ರಿಕೆಗಳಲ್ಲಿ ಪ್ರಜಾವಾಣಿ ಸೇರಿಕೊಳ್ಳುವುದು ಗುರಿಯಾಗಿತ್ತು. ಆರಂಭದಲ್ಲಿ ಮೊದಲು ಸೇರಿಕೊಂಡಿದ್ದು ಬಿ.ಎನ್ ಗುಪ್ತ ಎಂಬ ಸ್ವಾತಂತ್ರ್ಯ ಹೋರಾಟಗಾರರು ತರುತ್ತಿದ್ದ ’ಜನಪ್ರಗತಿ’ಯಲ್ಲಿ ಸಹಾಯಕನಾಗಿ. ಅಗ ನಮಗೆ ಜಾತ್ಯತೀತತೆಯ ಧೋರಣೆಗಳಿದ್ದವು. ಅದೇ ಹೊತ್ತಲ್ಲಿ ಪ್ರೀತಿ ಪ್ರೇಮ ಎಂದು ಶುರುವಾಗಿತ್ತು. ಮದುವೆ ಆದಾಗ ಕೆಲಸವೂ ಇರಲಿಲ್ಲ. ನಂತರದಲ್ಲಿ ಮೊದಲು ನನ್ನ ಪತ್ನಿಗೆ ಕೆಲಸ ಸಿಕ್ಕಿತು. ಆಗ ನಮಗೆ ಬದುಕುವ ಧೈರ್ಯ ಬಂದಿತು. 1976ರ ಹೊತ್ತಿಗೆ ಎಂ.ಲಿಂಗಯ್ಯ ಅವರ ಉದಯರವಿ ಪತ್ರಿಕೆಗೆ ಮಂಡ್ಯದಲ್ಲಿ ಸಹಾಯಕನಾಗಿ ಕೆಲಸಕ್ಕೆ ಸೇರಿಕೊಂಡು ಬೆಂಗಳೂರಿನಿಂದ ಮಂಡ್ಯಕ್ಕೆ ವಾರದಲ್ಲಿ ಮೂರುದಿನ ಓಡಾಡುತ್ತಿದ್ದೆ. ಎರಡರಿಂದಲೂ ತಿಂಗಳಿಗೆ ೫೦೦ ರೂಪಾಯಿ ದೊರೆಯುತ್ತಿತ್ತು.  1977ರಲ್ಲಿ ಪ್ರಜಾವಾಣಿಯಲ್ಲಿ ಕೆಲಸವಾಯ್ತು. ಅಲ್ಲಿಂದ 2012ರವರೆಗೂ ನಿರಂತರವಾಗಿ ಕೆಲಸ ಮಾಡಿದ್ದೇನೆ. 12 ವರ್ಷ ಉಪಸಂಪಾದಕನಾಗಿ, ನಂತರ ಎರಡು ವರ್ಷ ಹಿರಿಯ ಉಪಸಂಪಾದಕನಾಗಿ, ನಂತರ ಐದಾರು ವರ್ಷ ಮುಖ್ಯ ಉಪಸಂಪಾದಕನಾಗಿ, ಮುಖ್ಯ ವರದಿಗಾರನಾಗಿ ಕೊನೆಗೆ ಸಹಾಯಕ ಸಂಪಾದಕನಾಗಿ ಕೆಲಸ ನಿರ್ವಹಿಸುತ್ತ ಬಂದೆ. ಈ ಪ್ರಕ್ರಿಯೆಯಲ್ಲಿ ಬೆಂಗಳೂರು, ಹುಬ್ಬಳ್ಳಿ, ಮಂಗಳೂರು, ಮೈಸೂರುಗಳಲ್ಲಿ ಕೆಲಸ. ನಾಲ್ಕು ವರ್ಷಕಾಲ ನಾಲ್ಕು ಪುರವಣಿಗಳ ನಿರ್ವಹಣೆ ಏಕಕಾಲಕ್ಕೆ ನನ್ನ ಹೆಗಲ ಮೇಲಿತ್ತು.  ಅಂದರೆ ವಾರಕ್ಕೆ 18 ಪುಟಗಳ ಉಸ್ತುವಾರಿ. ಕೊನೆಯ ಎರಡು ಮೂರು ವರ್ಷ ಸಂಪಾದಕೀಯ ಪುಟದ ಉಸ್ತುವಾರಿಯನ್ನು ನಿರ್ವಹಿಸುತ್ತಿದ್ದೆ. 

ಈ ಹೊತ್ತಿನ ಪತ್ರಿಕೋದ್ಯಮದ ಕುರಿತು?
ಪತ್ರಿಕೋದ್ಯಮದಲ್ಲಿ ಆದರ್ಶ ಇಲ್ಲ. ಅಲ್ಲಿರುವ ಶೇಕಡ 75ರಷ್ಟು ಭಾಗ ವಾಸ್ತವ ಆಗಿರುವುದಿಲ್ಲ. ಆದರೆ ಅದು ತುಂಬ ಪರಿಣಾಮಕಾರಿಯಾದ ಯಶಸ್ವೀ ಮಾಧ್ಯಮ. ಎಲ್ಲ ಕ್ಷೇತ್ರಗಳಂತೆ ಇಂದು ಪತ್ರಿಕೋದ್ಯಮದಲ್ಲಿ ಸಹ ಮೌಲ್ಯಗಳ ಅಧಃಪತನವಾಗಿದೆ. ಅದರಲ್ಲೂ ಬಿಜೆಪಿ ಸರ್ಕಾರ ಬಂದಮೇಲೆ ಪತ್ರಿಕೋದ್ಯಮ ಎಷ್ಟು ಭ್ರಷ್ಟಗೊಂಡಿದೆ ಎಂಬುದನ್ನು ನೋಡಿದರೆ ನಾವು ಪತ್ರಕರ್ತರು ಎಂದು ಹೇಳಿಕೊಳ್ಳಲಿಕ್ಕೇ ನಾಚಿಕೆಯಾಗುತ್ತದೆ. ಎಲೆಕ್ಟ್ರಾನಿಕ್ ಮಾಧ್ಯಮ ಬಂದಮೇಲೆ ಮತ್ತಷ್ಟು ಆದ್ವಾನವಾಗಿದೆ. ವಾಸ್ತವದಲ್ಲಿ ಪತ್ರಿಕೋದ್ಯಮ ಸತ್ಯಾನ್ವೇಷಣೆಗೆ ತೊಡಗಿರಬೇಕು. ಪ್ರಜಾಪ್ರಭುತ್ವದ ಎಲ್ಲ ಅಂಗಗಳೂ ಭ್ರಷ್ಟಗೊಂಡಾಗ ಪತ್ರಿಕಾರಂಗದ ಹೊಣೆ ಹೆಚ್ಚಿದೆ. ಪತ್ರಿಕಾರಂಗಕ್ಕೆ ಬರುವವರಿಗೆ  ಸಾಮಾಜಿಕ ಜವಾಬ್ದಾರಿಯೂ ಇದೆ ಎಂಬುದರೆ ಬಗ್ಗೆ ಅರಿವಿರಬೇಕು. ಆದರೆ ಇಂದು ಪತ್ರಿಕಾರಂಗಕ್ಕೆ ಬರುತ್ತಿರುವವರಲ್ಲಿ ಆ ಬಗೆಯ ಯಾವ ತಿಳುವಳಿಕೆಯನ್ನೂ ನೋಡಲು ಸಾಧ್ಯವಿಲ್ಲ. ಈಗ ಪತ್ರಿಕೋದ್ಯಮ ಶಿಕ್ಷಣದಲ್ಲಿ ತಾಂತ್ರಿಕ ಅಂಶಗಳ ಪರಿಚಯವಾಗುತ್ತದೆಯೇ ವಿನಃ ನೈತಿಕತೆಯ ವಿಷಯಗಳು ಅಲ್ಲಿ ಇರುವುದಿಲ್ಲ. ಇಂದು ಪತ್ರಕರ್ತರಾದವರು ತಾವು ಪ್ರಾಮಾಣಿಕರಾಗಿದ್ದುಕೊಂಡು ಬರೆದರೆ ಮಾತ್ರ ಅದಕ್ಕೆ ಬೆಲೆ ಇರುತ್ತದೆ. ಭ್ರಷ್ಟಾಚಾರದ ಬಗ್ಗೆ ಭ್ರಷ್ಟರು ಬರೆದರೆ ಏನು ಬೆಲೆ ಇರುತ್ತದೆ ಹೇಳಿ? ಪತ್ರಿಕೋದ್ಯಮವ ಆಚಾರ್ಯರಾಗಿ  ಬಿಂಬಿಸಿಕೊಂಡ ಒಬ್ಬಿಬ್ಬರಿಗೆ ಬಿಜೆಪಿ ಸರ್ಕಾರ ಬಂದ ಮೇಲೆ ಒಂದು ವಾರಕ್ಕೆ ಒಂದರಿಂದ ಏಳು ಲಕ್ಷ ರೂಪಾಯಿವರೆಗೆ ಸಂದಾಯವಾಗುತ್ತಿತ್ತು ಎಂಬ ವರದಿಗಳಿವೆ. ಇಂತಹ ವರದಿಗಳ ಬಗ್ಗೆ ತನಿಖೆಯಾಗಬೇಕಿದೆ. ಇದು ಸಾಬೀತಾದರೆ ಅದು ಪತ್ರಿಕೋದ್ಯಮಕ್ಕೇ ದೊಡ್ಡ ಕಪ್ಪುಚುಕ್ಕೆ ಎಂಬುದರಲ್ಲಿ ಸಂದೇಹವಿಲ್ಲ.  

ಎಲೆಕ್ಟ್ರಾನಿಕ್ ಮಾಧ್ಯಮ ಬಂದ ಮೇಲೆ ಪತ್ರಿಕೆಗಳ ಮೇಲೆ ಆಗಿರುವ ಪರಿಣಾಮ ಎಂಥದ್ದು? 
ಎಲೆಕ್ಟ್ರಾನಿಕ್ ಮಾಧ್ಯಮ ಬಂದ ಮೇಲೆ ಪ್ರಿಂಟ್ ಮಾಧ್ಯಮದ ಮೇಲೆ ಓದುಗರ ಅವಲಂಬನೆ ಮತ್ತಷ್ಟು ಹೆಚ್ಚಿದೆಯೇ ವಿನಃ ಕಡಿಮೆಯಾಗಿಲ್ಲ.  ಹಾಗೆ ನೋಡಿದರೆ ನಮಗೆ ಪತ್ರಿಕಾ ಪ್ರಸಾರವನ್ನು ಇನ್ನೂ ವಿಸ್ತರಿಸುವ ಸಾಕಷ್ಟು ಸಾಧ್ಯತೆಗಳಿವೆ. ಕೆಲವೊಮ್ಮೆ ನಮಗೆ ತಲುಪಲಾಗುವುದಿಲ್ಲ. ಕೆಲವೊಮ್ಮೆ ಪತ್ರಿಕೆ ತರಿಸಿಕೊಳ್ಳುವ ಸಾಧ್ಯತೆಯಿರುವವರಲ್ಲಿ ಕೊಳ್ಳುವ ಮನಸ್ಥಿತಿ ಇರುವುದಿಲ್ಲ. ಮಲೆನಾಡಿನ ಒಂದು ಕುಗ್ರಾಮದಲ್ಲಿ ಕೂಡ ಏಜೆಂಟ್ ಒಬ್ಬ ಮನಸ್ಸು ಮಾಡಿದರೆ ತೀರಾ ಒಳಭಾಗಗಳಿಗೂ ಪತ್ರಿಕೆ ತಲುಪಲು ಸಾಧ್ಯವಿದೆ ಎಂಬುದಕ್ಕೆ ರಿಪ್ಪನ್‌ಪೇಟೆಯ ಟಿ.ಆರ್.ಕೃಷ್ಣಪ್ಪ ಮಾಡಿದ ಸಾಧನೆಯೇ ಉದಾಹರಣೆ. ಆತ ೨೦೦೪ರಲ್ಲಿ ಒಂದು ಸಣ್ಣ ಹಳ್ಳಿಯಲ್ಲಿ ೧೦ ಪೇಪರ್‌ಗಳಿಗೆ ಏಜೆನ್ಸಿ ತಗೆದುಕೊಂಡಿದ್ದ. ಆತ ಒಂದೇ ವರ್ಷದಲ್ಲಿ ತೀರಾ ಒಳಭಾಗಗಳಿಗೆ ಹೋಗಿ ಒಂದು ವರ್ಷದಲ್ಲಿ ೧೧೦ ಪತ್ರಿಕೆಗಳಿಗೆ ಪ್ರಸಾರ ಹೆಚ್ಚಿಸಿದ್ದ. ಪ್ರತಿದಿನ ಬೆಳಿಗ್ಗೆ ತಾನೇ ಪತ್ರಿಕೆಗಳನ್ನು ಆ ಒಳಹಳ್ಳಿಗಳಿಗೆ ತಲುಪಿಸುತ್ತಿದ್ದ. 

ನಾಡಿನ ಎಲ್ಲಾ ಪತ್ರಿಕೆಗಳಲ್ಲಿ ’ಪ್ರಜಾವಾಣಿ’ ಹೆಚ್ಚು ಜಾತ್ಯತೀತವಾದ ಮತ್ತು ಎಲ್ಲಾ ಜನವರ್ಗಗಳ ಪತ್ರಿಕೆಯೆನಿಸುತ್ತದೆ. ಇದು ಸಾಧ್ಯವಾದದ್ದು ಹೇಗೆ?
ಕೆ.ಎನ್ ಹರಿಕುಮಾರ್ ಅವರು ಬರುವವರೆಗೆ ಪ್ರಜಾವಾಣಿಯು ಒಂದು ವರ್ಗದ ಪತ್ರಿಕೆಯಾಗಿಯೇ ಇತ್ತು. ನಾನೂ ಸೇರಿದಂತೆ ಮೊದಲ ಬಾರಿಗೆ ಅಲ್ಲಿ ಆರು ಜನ ಇತರ ವರ್ಗದವರು ಸೇರಿಕೊಂಡಾಗ ಕೆಲವರು ಪತ್ರಿಕೆಯ ಗುಣಮಟ್ಟ ಹೊರಟುಹೋಗಿ ಬಿಡುತ್ತದೆ ಎಂದು ನಿಯೋಗ ಹೋಗಿದ್ದರು. ಕೆ.ಎನ್. ಗುರುಸ್ವಾಮಿಯವರು ಆಗ ಹೇಳಿದ್ದರಂತೆ "ನೀವೂ ಇಲ್ಲಿಗೆ ಸೇರುವಾಗ ಕತ್ತೆಗಳೇ ಆಗಿದ್ರಿ, ನಂತರ ಕುದುರೆಗಳಾದ್ರಿ. ಅವರೂ ಬರ್ತಾರೆ, ಕಲಿತುಕೊಳ್ಳುತ್ತಾರೆ. ಕುದುರೆಗಳಾಗ್ತಾರೆ" ಅಂತ. ಹಾಗಿತ್ತು ಪರಿಸ್ಥಿತಿ ಆಗ. ಕಾಲಕ್ರಮೇಣ ಬದಲಾವಣೆಯಾಗುತ್ತಿದೆ. ಶೂದ್ರ ದಲಿತವರ್ಗದ ಹಲವು ಜನರು ಪ್ರಜಾವಾಣಿಗೆ ಸೇರಿದ್ದಾರೆ. ಇದರ ಜೊತೆಗೆ ಜಾತ್ಯತೀತ ಮನೋಭಾವದ ಹಲವರು ಸೇರಿಕೊಂಡಿದ್ದರಿಂದ ಸಮಾಜದ ಎಲ್ಲ ಜನವರ್ಗಗಳೂ ಇದು ನಮ್ಮ ಪತ್ರಿಕೆ ಎಂದು ಹೇಳಿಕೊಳ್ಳುವಂತಾಯಿತು. ಹಾಗಂತ ಈಗ ಪೂರ್ತಿ ಸುಧಾರಣೆಯಾಗಿದೆ ಎಂದೇನಲ್ಲ.  ಇತ್ತೀಚೆಗೆ ವಿಜಯ ಕರ್ನಾಟಕವೂ ಒಂದಷ್ಟು ಒಳ್ಳೆ ರೀತಿಯ ಬೆಳವಣಿಗೆ ಕಾಣುತ್ತಿದೆ.  

ಒಬ್ಬ ಪತ್ರಕರ್ತನಾಗಿ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಳ್ಳುವುದು ಅನುಕೂಲವೋ ಅನಾನುಕೂಲವೋ?
ಪತ್ರಕರ್ತನಾಗಿದ್ದದ್ದು ಸಾಹಿತ್ಯ ರಚಿಸಲು ನನಗೆ ತುಂಬ ಸಹಾಯಕವಾಗಿದೆ. ಪತ್ರಕರ್ತನಾದವನಿಗೆ ಆತನ ಓದುಗ ಸರಳ ಬರೆಹವನ್ನು ಅರ್ಥಮಾಡಿಕೊಳ್ಳಬಲ್ಲ ಓದುಗನಾಗಿರುತ್ತಾನೆ. ಆತನಿಗೆ ಸರಳವಾಗಿ ಬರೆಯುವುದು ಆತನ ಉದ್ದೇಶವಾಗಿರುತ್ತದೆ. ಇದು ಪದಗಳನ್ನು ದುಂದು ಮಾಡಲು ಅವಕಾಶ ನೀಡುವುದಿಲ್ಲ. ಕಿರಿದುದರಲ್ಲಿ ಪಿರಿದರ್ಥವನ್ನು ಹೇಳುವ ವಿಧಾನ ಅಲ್ಲಿರುತ್ತದೆ. ಇದು ಸಾಹಿತ್ಯ ಕೃಷಿಯಲ್ಲೂ ಬಹಳ ಸಹಾಯ ಮಾಡಿದೆ. ಯಾವುದೇ ಬರಹ ಓದಿಸಿಕೊಳ್ಳಬಲ್ಲದ್ದಾಗಿರಬೇಕು. 

ಸಾಹಿತ್ಯ ರಚನೆಗೆ ತೊಡಗಿಕೊಳ್ಳಲು ಏನು ಪ್ರೇರಣೆಗಳು ನಿಮಗಿದ್ದವು? 
ನಾನಿದನ್ನು ದೈವದತ್ತ ಅಥವಾ ಪ್ರತಿಭೆ ಎಂದು ಹೇಳುವುದಿಲ್ಲ. ಇದು ಆಸಕ್ತಿಯ ಕಾರಣವಷ್ಟೆ. ನಾನು ಚಿಕ್ಕವನಿದ್ದಾಗ ನಮ್ಮ ಮನೆಯಲ್ಲಿ  ಅಡಿಕೆ ಸುಲಿಯುವಾಗ ರಾಮಾಯಣದ ಪಾರಾಯಣ ನಡೆಯುತ್ತಿತ್ತು. ಅದೇ ಸಮಯದಲ್ಲಿ ಕತೆಯ ಸ್ವಾರಸ್ಯಕ್ಕಾಗಿ ’ಕಾನೂರು ಹೆಗ್ಗಡತಿ’ಯನ್ನು ಕುಟುಂಬದ ಯಾರಾದರೊಬ್ಬರು ರಾತ್ರಿ ಓದುತ್ತಿದ್ದರು. ಅದನ್ನು ಕೇಳಿಸಿಕೊಳ್ಳುತ್ತಿದ್ದ ನನಗೆ ಓದುವ ಬಗ್ಗೆ ಗೀಳು ಹುಟ್ಟಿಕೊಂಡಿತ್ತು. ನನ್ನ ಅಣ್ಣಂದಿರ ಪ್ರಭಾವವೂ ನನ್ನ ಮೇಲಿತ್ತು. ಆ ನಂತರ ಆನರ್ಸ್ ಸೇರಿದ ಮೇಲೆ ಬರೆಯುವ ಆಸಕ್ತಿಯುಂಟಾಗಿ ಒಂದು ಕತೆ ಬರೆದು ಕಳಿಸಿದ್ದೆ. ಅದಕ್ಕೆ ಬಹುಮಾನವೂ ಬಂದಿತ್ತು. ನಂತರ ನಿರಂತರವಾಗಿ ಬರೆಯುವ ಗೀಳಾಯಿತು. ಪತ್ರಿಕೆಗಳಿಂದ ಬಹಳ ಉತ್ತೇಜನವೂ ಸಿಕ್ಕಿತು. ಹಾಗೆಯೇ ಸಂವಹನದ ದೃಷ್ಟಿಯಿಂದ ನನಗೆ ಪದ್ಯಕ್ಕಿಂತ ಗದ್ಯವೇ ಪ್ರಿಯವಾಗುತ್ತ ಹೋಯಿತು. 

ನಿಮ್ಮ ಹೆಚ್ಚಿನ ಕೃತಿಗಳು ಅನುಭವ ನಿಷ್ಠವಾಗಿರುವಂತರುವಂತದ್ದು. ಹೀಗೆ ಸಾಹಿತ್ಯ ರಚಿಸುವುದು ಸಮಾಜದ ಬೇರೆ ನೆಲೆಗಳನ್ನು ಗುರುತಿಸುವಲ್ಲಿ ಮಿತಿಯೊಡ್ಡಿಲ್ಲವೇ? 
ಅದು ನಿಜ. ನಾನು ಇಲ್ಲಿವರೆಗೆ ಇಷ್ಟು ಬರೆದಿದ್ದರೂ ನಾನು ಲೇಖಕ ಎಂದುಕೊಂಡಿಲ್ಲ. ಇದುವರೆಗೆ ಬರೆದಿರುವುದು ನನ್ನ ಪತ್ರಿಕಾವರದಿಗಳ ವಿಸ್ತೃತ ರೂಪ ಎಂದು ಹೇಳಬಹುದೇನೋ. ಹಾಗೆಯೇ ಅಲ್ಲಿ ನನ್ನ ಅಭಿಪ್ರಾಯಗಳನ್ನು ಹೇಳಲು ಹೋಗಿರುವುದು ಕಡಿಮೆ. ನನ್ನ ಗಮನ ವಸ್ತುಸ್ಥಿತಿಯ ಅನಾವರಣ ಅಷ್ಟೆ. ವಾಸ್ತವವನ್ನು ಯಥಾವತ್ತಾಗಿ ಇಡುವುದರಿಂದಲೂ ಒಂದು ಸಂದೇಶ ಬರುತ್ತದೆ. ಒಂದು ವಿಶೇಷ ವರದಿ ಬರೆಯುವಾಗ ನಮಗೆ ಹೇಗೆ ಒಂದು ಉದ್ದೇಶವಿರುತ್ತದೆಯೋ ಹಾಗೆ. ಉದಾಹರಣೆಗೆ ನನ್ನ ’ಪಾಡು’ ಕಾದಂಬರಿ ಇಬ್ಬರು ಗಂಡಹೆಂಡತಿಯರ ಸಂಬಂಧವನ್ನು ಚಿತ್ರಿಸುತ್ತಲೇ ಅಂತಿಮವಾಗಿ ಹೊಂದಾಣಿಕೆಯೇ ಸಾಮರಸ್ಯದ ಮೂಲದ್ರವ್ಯ ಎನ್ನುವುದನ್ನೂ ಹೇಳುತ್ತದೆ. ಬದುಕಿನ ಲೌಕಿಕ ವಿಷಯಗಳನ್ನು ಹೇಳುವಾಗಲೇ ಭಾವನಾತ್ಮಕ ವಿಷಯಗಳೂ ಸ್ಥಾನ ಪಡೆಯುತ್ತವೆ. ಮತ್ತೊಂದೆಡೆ ನಮ್ಮ ಸಮುದಾಯಗಳ ಮತ್ತು ನಮ್ಮ ಅನುಭವಗಳ ಬಗ್ಗೆ ಬಗ್ಗೆ ನಾವು ಹೇಳದೇ ಹೋದರೆ ಬೇರೆಯವರು ಹೇಳಲು ಸಾಧ್ಯವಿಲ್ಲ ಎನ್ನುವ ಯೋಚನೆಯಿಂದ ನಾನು ಬರೆದಿದ್ದು ಹೆಚ್ಚು.  

ನಮ್ಮ ಸಮಾಜ ಮತ್ತು ಸಾಹಿತ್ಯದ ಸಂಬಂಧಗಳು ಹೇಗಿವೆಯೆನ್ನುತ್ತೀರಿ?  
ನಮ್ಮ ಸಾಮಾಜಿಕ ಪರಿಸ್ಥಿತಿಯನ್ನು ನೋಡಿದಾಗ ನನಗೆ ಕಂಡುಬರುವುದೇನೆಂದರೆ ಕರ್ನಾಟಕದಲ್ಲಿ ಪ್ರಬಲವಾದ ಮೂರು ಜಾತಿಗಳಿವೆ. ಲಿಂಗಾಯತ, ಒಕ್ಕಲಿಗ ಮತ್ತು ಬ್ರಾಹ್ಮಣ. ಬ್ರಾಹ್ಮಣರು ಅಲ್ಪಸಂಖ್ಯಾತರು ಎನ್ನಬಹುದು. ಆದರೆ ಅವರು ಕಾರ್ಯಾಂಗದಲ್ಲಿ ಪ್ರಬಲರಾಗಿದ್ದಾರೆ. ಶಾಸಕಾಂಗದಲ್ಲಿ ಪ್ರಬಲರಿಲ್ಲದಿದ್ದರೂ ಅವರ ಹಿತಕ್ಕೆ ವಿರುದ್ಧವಾಗಿ ಏನೂ ಆಗದಿರುವ ಹಾಗೆ ನೋಡಿಕೊಳ್ಳುವ ವ್ಯವಸ್ಥೆ ಅವರಿಗಿದೆ. ನ್ಯಾಯಾಂಗದಲ್ಲಿ ಪ್ರಬಲರಾಗಿದ್ದಾರೆ. ಆಡಳಿತ ಮತ್ತು ಸಾಮಾಜಿಕ ಧಾರ್ಮಿಕ ಕ್ಷೇತ್ರಗಳಲ್ಲಿ ತಮ್ಮ ಹಿತಕ್ಕೆ ಮಾರಕವಾಗುವ ಯಾವುದಕ್ಕೂ ಅವಕಾಶ ನೀಡದ ರೀತಿ ಅವರ ಹಿಡಿತವಿದ್ದು ಅವರ ಪಾಡಿಗೆ ಅವರು ಚೆನ್ನಾಗಿದ್ದಾರೆ. ಈ ಮೂರು ಜಾತಿಗಳು ಸಂಖ್ಯಾದೃಷ್ಟಿಯಿಂದ ಉಳಿದವರಿಗೆ ಎಣೆಯಲ್ಲ. ಶೇಕಡ ೬೫ರಷ್ಟು ಜನರಲ್ಲಿ ಐಕ್ಯತೆಯೇ ಸಾಧ್ಯವಾಗದ ರೀತಿಯಲ್ಲಿ ಈ ವ್ಯವಸ್ಥೆಯನ್ನು ಮೂರೂ ಪ್ರಬಲ ಜಾತಿಗಳು ಕಾಪಾಡಿಕೊಂಡು ಬಂದಿವೆ. ಇದು ಎಲ್ಲ ಕ್ಷೇತ್ರಗಳಲ್ಲಿಯೂ ಯಶಸ್ವಿಯಾಗಿ ಜಾರಿಗೆ ಬರುತ್ತಿದೆ. ಮೀಸಲಾತಿಯ ವಿರುದ್ಧವಾಗಿ ಇವರೆಲ್ಲ ಇದ್ದಾರೆ. ಹೀಗಾಗಿ ಉಳಿದ ಸಮುದಾಯಗಳು ರಾಜಕೀಯವಾಗಿ ಅವಕಾಶವಾದಿಗಳಾಗುವ ಪರಿಸ್ಥಿತಿ ಇಲ್ಲಿದೆ. ಕುರುಬರಿಗೆ ಅವರು ಒಂದೋ ಲಿಂಗಾಯತರೊಂದಿಗೆ ಸೇರಿಕೊಳ್ಳಬೇಕು ಇಲ್ಲವೇ ಒಕ್ಕಲಿಗರೊಂದಿಗೆ ಸೇರಿಕೊಳ್ಳಬೇಕು. ಒಬ್ಬ ಈಡಿಗರು ಲಿಂಗಾಯತರೊಂದಿಗೆ ಸೇರಿಕೊಳ್ಳಬಹುದೇ ಹೊರತು ಕುರುಬರೊಂದಿಗೆ ಸೇರಲು ಹೋಗುವುದಿಲ್ಲ. ಇಂತಹ ಮನಸ್ಥಿತಿ ಬದಲಾವಣೆಯಾಗಬೇಕಿದೆ. ಸಾಹಿತ್ಯ ಚಳವಳಿಯಲ್ಲಿಯೂ ಹೀಗೆಯೇ ಇದೆ. ಸ್ವಾತಂತ್ರ್ಯಾನಂತರದಲ್ಲಿ ಹಿಂದುಳಿದ ಬ್ರಾಹ್ಮಣೇತರ ವರ್ಗದ ಸಾಹಿತಿಗಳಿಗೆ ತಮ್ಮ ಸಾಹಿತ್ಯ ಮಾನ್ಯವಾಗಬೇಕೆಂದರೆ ಅದನ್ನು ಕುರ್ತುಕೋಟಿ, ಅಡಿಗರಂತವರೇ ಗುರುತಿಸಿ ಹೇಳಬೇಕಾಗಿತ್ತು. ಯಾಕೆಂದರೆ ವಿಮರ್ಷೆಯ ಮಾನದಂಡಗಳನ್ನು ಅವರೇ ಸೃಷ್ಟಿಸಿ ರೂಪಿಸುವಂತವರು. ಅವರು ಹೇಳಿದರೆ ಮಾತ್ರ ಇವರದ್ದು ಸಾಹಿತ್ಯ. ?ವರು ಹೇಳಲಿಲ್ಲವೆಂದಾದರೆ ಇವರದ್ದು ಸಾಹಿತ್ಯವಲ್ಲ. ಇದು ನವೋದಯ, ನವ್ಯ, ದಲಿತ ಬಂಡಾಯದಲ್ಲೂ ಆಯಿತು. ’ಬಂಡಾಯ’ ಎನ್ನುವುದು ಮತ್ತೊಂದು ದೊಡ್ಡ ಸಮಯ ಸಾಧಕ ಸಾಹಿತ್ಯ ಚಳವಳಿಯಂತಾಯಿತು. ಯಾರು ಬೇಕಾದರೂ ಬಂಡಾಯ ಸಾಹಿತಿಯಾಗಿಬಿಡಬಹುದಿತ್ತು. ಜಾಳು ಜಾಳು ಬರೆಹಗಳನ್ನಿಟ್ಟುಕೊಂಡು ಸಮಯಸಾಧಕರಾದವರೂ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾದರು. ಸಾಹಿತ್ಯಕ ಚಳವಳಿಗಳೂ ಹೇಗೆ ಹೈಜಾಕ್ ಆಗುತ್ತವೆ ಎನ್ನುವುದಕ್ಕೆ ಇದು ಉದಾಹರಣೆ. ತಳಸಮುದಾಯಗಳ ಅನೇಕರು ಸಾಹಿತ್ಯ ರಚನೆಗೆ ತೊಡಗಿದರೂ ಅವರು ತಮ್ಮ ಸ್ವಂತ ಬದುಕಿನ ಅನುಭವಗಳನ್ನು ಸಾಹಿತ್ಯದಲ್ಲಿ ದಾಖಲಿಸುವುದನ್ನು ಬಿಟ್ಟು ಬೇರೆಯವರನ್ನು ಅನುಕರಿಸುವಂತಾಯಿತು. ತಾವು ಮಾನ್ಯತೆ ಪಡೆಯುವ ಏಕೈಕ ಕಾರಣಕ್ಕಾಗಿ ಹೀಗೆ ಮಾಡಿದರು. ನಿಜವಾಗಿಯೂ ಸತ್ವ ಇಟ್ಟುಕೊಂಡು ಬರೆದವರಿಗೆ ಯಾವ ಮಾನ್ಯತೆಯೂ ಸಿಗಲಿಲ್ಲ. ಪತ್ರಿಕೋದ್ಯಮದಲ್ಲೂ ಹೀಗೇ ಆಗಿದೆ. ಪ್ರಜಾವಾಣಿಯಲ್ಲೇ ನೋಡಿ. ಇತರ ವರ್ಗದವರಿಗೆ ಬೈಲೈನ್‌ಗಳು ಸಿಗಲು ಶುರುವಾದದ್ದೇ ಶಾಂತಕುಮಾರ್ ಅವರು ಸಂಪಾದಕರಾಗಿ ಬಂದ ಮೇಲೆ. ರಂಗನಾಥರಾವ್ ಅವಧಿಯಲ್ಲಿ ಇದು ಆಗುತ್ತಲೇ ಇರಲಿಲ್ಲ. ಹೀಗಾಗಿ ಇತರರು ಯಾವ ಪತ್ರಿಕೋದ್ಯಮ ಪ್ರಶಸ್ತಿಗಳಿಗೂ ಅರ್ಹರಾಗುತ್ತಿರಲಿಲ್ಲ. 

ಅಂದರೆ ನಮ್ಮ ಸಾಹಿತ್ಯ ವಿಮರ್ಶೆಯ ಮಾನದಂಡಗಳಲ್ಲೇ ದೋಷವಿತ್ತು ಎನ್ನುತ್ತೀರಾ? 
ಹೌದು. ಅಕ್ಷರ ಲೋಕಕ್ಕೆ ತೆರೆದುಕೊಂಡ ಸಾಹಿತಿಗಳ ಸಾಹಿತ್ಯವನ್ನೆಲ್ಲಾ ಪುನರಾವಲೋಕನ ಮಾಡಬೇಕಾದ ಅವಶ್ಯಕತೆ ಈಗಲೂ ಇದೆ ಎಂದು ನನ್ನ ಅನಿಸಿಕೆ. ಅದು ಎಷ್ಟರ ಮಟ್ಟಿಗೆ ಜನಪರವಾಗಿದೆ ಮತ್ತು ಅನುಭವ ನಿಷ್ಠವಾಗಿದೆ ಎಂದು ಅವಲೋಕಿಸಬೇಕು. ಉದಾಹರಣೆಗೆ ನೇಕಾರರ ಸಮುದಾಯದಿಂದ ಬಂದು ಬರೆದವರು ತಮ್ಮ ಸಮುದಾಯದ ವೃತ್ತಿ ಬದುಕಿನ ಬಗ್ಗೆ ಒಂದು ಸಾಲನ್ನೂ ಬರೆಯದೆಯೂ ಬೇರೆಯವರನ್ನು ಅನುಕರಣೆ ಮಾಡಿಯೇ ಸಾಹಿತಿ ಎನ್ನಿಸಿಕೊಂಡವರಿದ್ದಾರೆ. ಈ ಅರ್ಥದಲ್ಲಿ ಕರ್ನಾಟಕದಲ್ಲಿ ಸಾಹಿತ್ಯಕ ಚಳವಳಿ ಆರಂಭವೇ ಆಗಿಲ್ಲ ಎನ್ನಿಸುತ್ತದೆ. ದಲಿತ ಲೋಕದಲ್ಲಿ ಈ ದೃಷ್ಟಿಯಿಂದ ಒಂದಷ್ಟು ಬರವಣಿಗೆ ಬಂದಿದೆ. ಆದರೆ ಅಲ್ಲಿಯೂ ಕೆಲ ಅತಿರೇಕಗಳಿವೆ. ಅಲ್ಲಿ ಸಹ ವೈದಿಕ ವಿಮರ್ಶಕರು ಬಹಳಷ್ಟು ಮಂದಿ ಬರಹಗಾರರನ್ನು ಕಡೆಗಣಿಸಿ ಒಬ್ಬ ಸಿದ್ದಲಿಂಗಯ್ಯ, ಒಬ್ಬ ದೇವನೂರು ಮಹಾದೇವರನ್ನು ಮಾತ್ರ ಮಾನ್ಯ ಮಾಡಿಬಿಟ್ಟಿದ್ದಾರೆ. ಇನ್ನುಳಿದ ಕೆಲ ದಲಿತ ಲೇಖಕರು ತಮಗೆ ತಾವೆ ಒಂದೊಂದು ದ್ವೀಪವಾಗುಳಿದು ತಮ್ಮ ತಮ್ಮದೇ ಶ್ರೇಷ್ಠ ಸಾಹಿತ್ಯ, ನಮಗೆ ಮಾನ್ಯತೆ ಇಲ್ಲ ಎಂದು ಸ್ವಅನುಕಂಪದ ಆತ್ಮರತಿಯಲ್ಲಿ ಮುಳುಗಿಕೊಂಡಿದ್ದಾರೆ. ಅಲ್ಲಿಯೂ ಎಡ-ಬಲ ಎಂದು ವಿಭಾಗವಾಗಿದೆ. ಒಬ್ಬ ಎಡಗೈ. ಮತ್ತೊಬ್ಬ ಬಲಗೈ. ಬಲಗೈಗೆ ಮತ್ತೆ ಪ್ರಾಧಾನ್ಯತೆ. ಅವರು ಮತ್ತೆ ಮುಖ್ಯವಾಹಿನಿಯ ಸಾಹಿತ್ಯ ಭಜನೆ ಮಾಡದಿದ್ದರೆ ಪರಿಗಣನೆಯೇ ಇಲ್ಲ. ನಿಜವಾಗಿಯೂ ಸಾಹಿತ್ಯದ ನಿಜವಾದ ಮೌಲ್ಯೀಕರಣ ಇಲ್ಲಿ ಆಗುತ್ತಿಲ್ಲ ಎಂದೆನಿಸುತ್ತದೆ. ಇಡೀ ಸಾಹಿತ್ಯದಲ್ಲಿ ಬೇರೆ ಬೇರೆ ಸಮುದಾಯಗಳ ಬದುಕಿನ ಅನುಭವಗಳ ಚಿತ್ರಣಕ್ಕೆ ಮಾನ್ಯತೆ ಸಿಗಬೇಕಿದೆ.  

ನೀವು ಬಂದಂತಹ ದೀವರ ಸಮುದಾಯ ಸಾಹಿತ್ಯಕ ಕ್ಷೇತ್ರದಲ್ಲಿ ಹಿಂದುಳಿದಿದೆಯಲ್ಲ? 
ದೀವರಲ್ಲಿ ಬಹಳ ಜನರಿಗೆ ಒಳ್ಳೆಯ ಅನುಭವ ಇದೆ. ಆದರೆ ಅಂತವರು ಸಾಹಿತ್ಯ ರಚಿಸುವುದಿಲ್ಲ. ಸಾಹಿತ್ಯ ರಚಿಸಿದವರು ಜಾತ್ಯತೀತವಾಗಿ ಯೋಚಿಸುವುದಿಲ್ಲ. ಹಾಗೆ ಬದುಕುವುದೂ ಇಲ್ಲ. ಸಮಸ್ಯೆಯೇನೆಂದರೆ ಅಲ್ಲಿ ಒಬ್ಬೊಬ್ಬರೂ ಒಂದೊಂದು ದ್ವೀಪಗಳಾಗಿದ್ದಾರೆ. ಈಡಿಗರ 26 ಗುಂಪುಗಳನ್ನು ಸೇರಿಸಿ ಮಠ ಕಟ್ಟಿದಾರೆ. ಆದರೆ ಅವರಲ್ಲಿ ಕೆಲವರು ಮಂತ್ರಾಲಯಕ್ಕೆ ಲಕ್ಷಗಟ್ಟಲೆ  ದಾನ ಕೊಡುತ್ತಾರೆ. ಇವರನ್ನು ಹೇಗೆ ಸುಧಾರಣೆ ಮಾಡ್ತೀರಾ? ನಮ್ಮೂರಲ್ಲಿ ನನ್ನನ್ನೂ ಸೇರಿ ನಾಲ್ಕು ಅಂತರ್ಜಾತಿ ವಿವಾಹಗಳಾಗಿವೆ. ಎಲ್ಲರೂ ಬಹಳ ಚೆನ್ನಾಗಿದ್ದಾರೆ. ಈ ಬಗೆಯ ಮಾನಸಿಕ, ಸಾಮಾಜಿಕ ಬದಲಾವಣೆಗಳು ಇಂದು ಬೇಕಾಗಿದೆ. ಇಂದಿನ ಕಾಲಕ್ಕೆ ಬೇಕಾದ ವೈಚಾರಿಕ ಮಾರ್ಪಾಡುಗಳು ಬರಬೇಕು. ಕುವೆಂಪು ಅವರು ಅರ್ಥಪೂರ್ಣವಾಗಿ ಹೇಳಿರುವುದು ಇದನ್ನೇ. ನಿಮ್ಮಲ್ಲಿರುವ ಅರ್ಥವಾಗದ ಆಚರಣೆಗಳನ್ನು ಒಂದೋ ಬಿಟ್ಟುಬಿಡಿ. ಇಲ್ಲವೇ ಇಂದಿಗನುಗುಣವಾಗಿ ಸುಧಾರಣೆ ಮಾಡಿಕೊಳ್ಳಿ. ತಿರುಪತಿಗೆ ಹೋಗುವುದು, ಧರ್ಮಸ್ಥಳಕ್ಕೆ ಹೋಗುವುದು, ಅನ್ನಪ್ರಾಶನ, ಮುಡಿಕೊಡುವುದು ಇಂತವೆಲ್ಲಾ ಹೆಚ್ಚಾಗಿವೆ. ಎಲ್ಲಿ ಗೌರವ ಸಿಗುವುದಿಲ್ಲವೋ ಅಲ್ಲೇ ಹೋಗಿ ಬೀಳುತ್ತಾರಲ್ಲ? ಈ ಮೌಢ್ಯ, ಅವೈಜ್ಞಾನಿಕ ಆಚರಣೆಗಳನ್ನು ಹಿಂದುಳಿದವರು ಬಿಡದಿದ್ದರೆ ಅವರೆಂದೂ ಉದ್ಧಾರವಾಗುವುದಿಲ್ಲ.

ಉದ್ಯೋಗಕ್ಕಾಗಿ ಹಳ್ಳಿಗಳಿಂದ ನಗರಗಳಿಗೆ ವಲಸೆ ಹೋಗುತ್ತಿರುವ ಪ್ರಕ್ರಿಯೆ ಹಳ್ಳಿಗಳ ಮೇಲೆ ಯಾವ ಪರಿಣಾಮ ಬೀರುತ್ತಿದೆ ಎನಿಸುತ್ತಿದೆ?
ನಮ್ಮ ಮನೆಯಲ್ಲೇ ನೋಡಿ. ಒಂದು ಕಾಲದಲ್ಲಿ ೨೫-೩೦ ಜನರಿದ್ದ ಮನೆಯಲ್ಲಿ ಈಗ ಕೇವಲ ನಾಲ್ಕು ಜನರಿದ್ದಾರೆ. ಎಲ್ಲಾ ಹುಡುಗರೂ ನಗರಗಳಿಗೆ ಬಂದಿದ್ದಾರೆ. ಹಳ್ಳಿಯಲ್ಲಿ ಯಾವ ಕೆಲಸಕ್ಕೂ ಜನ ಇಲ್ಲ ಎನ್ನುವ ಸ್ಥಿತಿ ಇದೆ. ಇದು ಅಲ್ಲಿ ಯಾಂತ್ರೀಕರಣಕ್ಕೆ ಕಾರಣವಾಗಿದೆ. ಈಗ ಮಲೆನಾಡಿನಲ್ಲಿ ಭತ್ತ ಬೆಳೆದರೆ ಕೂಲಿಯೂ ಸಿಗುವುದಿಲ್ಲ. ಈಗ ಹಿಂದೆ ಹಳ್ಳಿಯಲ್ಲಿದ್ದ ಮೈಯಾಳು ಪದ್ಧತಿಯನ್ನೇ ಧರ್ಮಸ್ಥಳದ ಸಂಸ್ಥೆ ’ಪ್ರಗತಿ ಬಂಧು’ ಹೆಸರಲ್ಲಿ ಸಾಮೂಹಿಕ ಕೆಲಸ ಮಾಡಿಸುತ್ತಿರುವುದನ್ನು ನೋಡುತ್ತೇವೆ. 

ಪ್ರಸಕ್ತ ರಾಜಕೀಯ ರಾಜಕೀಯ ವಿದ್ಯಮಾನಗಳ ಕುರಿತು?
ಇಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಬೆಲೆಯೇ ಇಲ್ಲ ಎನ್ನಬಹುದು. ಸಂವಿಧಾ??ಕ ಸಂಸ್ಥೆಗಳೆಲ್ಲಾ ದುರ್ಬಲವಾಗಿ ಅಧಿಕಾರ ನಿರಂಕುಶವಾಗಿದೆ. ಸರ್ಕಾರ ನಮ್ಮದು ಎಂಬ ಭಾವನೆ ಜನರಿಗೆ ಬರುವ ಮಟ್ಟಿಗೆ ಆಗಿರಲು ಜನರೇ ಕಾರಣ. ವಿಧಾನಸಭೆಯನ್ನು ನಿಯಂತ್ರಿಸುವ ಜನಪ್ರತಿನಿಧಿಗಳು ದಲ್ಲಾಳಿಗಳಂತೆ ಆಗಿದ್ದಾರೆ. ಸರ್ಕಾರವನ್ನು ಹಾದಿಗೆ ತರಬೇಕಿದ್ದ ವಿಧಾನಸಭೆ ಜನವಿರೋಧಿಯಾಗಿದೆ. 

ಶ್ರೀರಾಮುಲು ತಮ್ಮನ್ನು ಹೊಸ ರೀತಿಯಲ್ಲಿ ಬಿಂಬಿಸಿಕೊಂಡು ಹೊರಟಿದ್ದಾರಲ್ಲ?
ಶ್ರೀರಾಮುಲು ಗಣಿರೆಡ್ಡಿಗಳ ಜೊತೆ ಸೇರಿಕೊಂಡು ನಾಡನ್ನು ಲೂಟಿ ಮಾಡಿರುವಾತ. ನಾಡಿನ ಸಂಪತ್ತಿನ ಲೂಟಿಯಲ್ಲಿ ಆತ ಪ್ರಮುಖ ಪಾಲುದಾರ. ಈಗ ಬೇರೆ ಕಡೆ ಅವಕಾಶ ಇಲ್ಲ ಎನ್ನುವ ಕಾರಣಕ್ಕೆ ಹೊಸ ವೇಷ ಹಾಕಿದ್ದಾರೆ. ಇದು ಅವಕಾಶವಾದಿ ರಾಜಕಾರಣವಲ್ಲದೇ ಬೇರೇನೂ ಅಲ್ಲ. ರಾಮುಲು ದೊಡ್ಡ ಕ್ರಾಂತಿಕಾರಿ ಪುರುಷ ಎಂದು ಈ ಕಡೆ ಯಾರೂ ನಂಬಿಕೊಂಡಿಲ್ಲ. ಯಾವುದೇ ಮಹಾ ಉದ್ದೇಶ ಇಟ್ಟುಕೊಂಡವರು ಶ್ರೀರಾಮುಲು ಜೊತೆ ಕೈಜೋಡಿಸಿದರೆ ಅದರಿಂದ ಇನ್ನೇನೂ ಆಗುವುದಿಲ್ಲ. ಚುನಾವಣೆ ಸಮಯದಲ್ಲಿ ಜನ ಯೋಚಿಸುವುದೇ ಬೇರೆ. ಇಂದು ಬೆಜೆಪಿ ಜನತೆ ಮೇಲೆ ಮಾಡಿರುವ ಮಾನಸಿಕ ದೌರ್ಜನ್ಯಕ್ಕೆ ಜನರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಊಹಿಸುವುದೂ ಕಷ್ಟ. ಜನರು ಮತಗಟ್ಟೆಗಳ ಕಡೆ ಬರದೆಯೂ ಇರಬಹುದು. ಜನರನ್ನು ಪೂರ್ತಿ ಭ್ರಷ್ಟಗೊಳಿಸಿ ಎಲ್ಲಾ ಕಾಲದಲ್ಲೂ ಜನರನ್ನು ಹಿಡಿತದಲ್ಲಿಟ್ಟುಕೊಳ್ಳಬಹುದಾ ಎಂಬ ಪ್ರಶ್ನೆ ಇದೆ. 

ಭ್ರಷ್ಟಾಚಾರಕ್ಕೆ ಕಡಿವಾಣ ಹೇಗೆ ಎನ್ನುತ್ತೀರಿ? 
ಕ್ಲೀಷೆಯಾಗಿ ಹೇಳುವುದಾದರೆ ಜನಜಾಗೃತಿಯಾಗಬೇಕು. ನಾವು ಭ್ರಷ್ಟರಾಗದಿದ್ದರೆ ಸಾಕು. ಭ್ರಷ್ಟಾಚಾರ ಎನ್ನುವುದು ಒಂದು ಪಾತಕ ಕೃತ್ಯ ಎಂಬ ಭಾವನೆ ಜನರಲ್ಲಿ ಬರದಿದ್ದರೆ ಕಷ್ಟ. ಈ ಆರು ದಶಕಗಳಲ್ಲಿ ಜನರು ಪ್ರಬುದ್ಧರಾಗಿಬೇಕಿತ್ತು. ಎಲ್ಲಾ ಶಿಕ್ಷಣ, ವಿಜ್ಞಾನವನ್ನು ತಿಳಿದೂ ಅದನ್ನು ಅನುಸರಿಸುವುದಿಲ್ಲ. ಈ ಸಮುದಾಯದ ಅಂತಃಸತ್ವವನ್ನೇ ಪ್ರಶ್ನಿಸಬೇಕಾ? ಸ್ಥಿತಿ ಇದೆ ಎಂದು ನನಗನ್ನಿಸುತ್ತದೆ. ಗ್ರಹಣ ಯಾಕೆ ಆಗುತ್ತದೆ ಎಂದು ನಮಗೆಲ್ಲಾ ಗೊತ್ತು. ಆದರೂ ಅಂದು ಸ್ನಾನ ಮಾಡಿ ಅಡುಗೆ ಮಾಡದಿರುವಂತೆ ಇರುತ್ತೇವೆ. ರಾಹುಕಾಲ, ಗುಳಿಕ ಕಾಲಗಳೆಲ್ಲಾ ಕಾಲ್ಪನಿಕ, ಅವೆಲ್ಲಾ ಯಾವುದೋ ವರ್ಗದ ಹಿತಕ್ಕಾಗಿ ಸೃಷ್ಟಿಯಾದದ್ದು ಎಂಬುದು ಗೊತ್ತು. ಈಗಲೂ ಅಂತಹ ನಂಬಿಕೆಗಳನ್ನು ನಾವು ಬಿಡುವುದಿಲ್ಲವಲ್ಲ. ಸುಧಾರಣೆಗಳಿಗೆ ಮತ್ಯಾರೋ ಪ್ರವಾದಿಯೋ, ನಿರಂಕುಶಾಧಿಕಾರಿಯೋ ಬರಬೇಕಾ? ಒಂದು ಬಗೆಯ ಭ್ರಮನಿರಸನವಾಗುವ ಪರಿಸ್ಥಿತಿ ಇದು. ಪತ್ರಿಕೆಯಲ್ಲಿ ಪ್ರತಿ ದಿನ ಸುಭಾಷಿತ ಇರಬೇಕೆಂದು ಅಪೇಕ್ಷಿಸುತ್ತೇವೆ. ಯಾಕೆ ನಿನ್ನೆ ಹೇಳಿದ್ದು ಇಂದು ಅನ್ವಯವಾಗುವುದಿಲ್ಲವಾ? ಬಸವಣ್ಣನವರ ಒಂದು ವಚನವಿದೆಯಲ್ಲ. "ಕಳಬೇಡ, ಕೊಲಬೇಡ, ಹುಸಿಯ ನುಡುಯಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ, ಇದೇ ಅಂತರಂಗಶುದ್ಧಿ, ಇದೇ ಬಹಿರಂಗ ಶುದ್ಧಿ"- ಇದನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಇದಕ್ಕಿಂತ ದೊಡ್ಡ ವೇದಾಂತ, ಆಧ್ಯಾತ್ಮ, ಮಾರ್ಗದರ್ಶನ ಯಾವುದೂ ಇಲ್ಲ.  ಇದೊಂದೇ ಸಾಕು ನಾವು ಒಳ್ಳೆಯ ರೀತಿ ಬದುಕಲಿಕ್ಕೆ. ಆದರೆ ದಿನಾ ಇದನ್ನೇ ಭಜನೆ ಮಾಡುವ 
ಕೆಲವು ಮಠಾಧಿಪತಿಗಳು ದೊಡ್ಡ ಡಾನ್‌ಗಳಾಗಿ ಬಿಟ್ಟಿದ್ದಾರೆ ನೋಡಿ. ದಾವೂದ್ ಇಬ್ರಾಹಿಂ, ಚೋಟಾರಾಜನ್‌ಗಿಂತ ಕುಲಗೆಟ್ಟು ಹೋಗಿದ್ದಾರೆ ಈ ಕೆಲವು ಮಠಾಧಿಪತಿಗಳು 'ಹೇಳುವುದು ಮಾತ್ರ ನನ್ನ ಕೆಲಸ. ಪಾಲಿಸುವುದಲ್ಲ’ ಎಂಬ ನಡವಳಿಕೆ ಹೊಂದಿದ್ದಾರೆ. ಇದು ಒಟ್ಟಾರೆ ಸಮುದಾಯದ ಅಧಃಪತನದ ಸೂಚನೆ ಮಾತ್ರ. ಅನೇಕ ಸಲ ಭರವಸೆಗಳೇ ಕುಸಿದರೂ ಎಲ್ಲೋ ಕೆಲವು ಘಟನೆಗಳನ್ನು ನೋಡಿದಾಗ ಒಂದಷ್ಟು ಆಶಾವಾದವೂ ಬರುತ್ತದೆ.  

ಇಂದಿನ ಯುವ ಪತ್ರಕರ್ತರಿಗೆ ಏನು ಹೇಳಬಯಸುತ್ತೀರಿ? 
ಪ್ರಾಮಾಣಿಕವಾಗಿರಿ. ಜಾಸ್ತಿ ಓದಿಕೊಳ್ಳಿ. ದುಸ್ಸಾಹಸ ಬೇಡ. ಇಲ್ಲಿ ಯಾವುದೇ ಸಂಸ್ಥೆ ಸುರಕ್ಷಿತ ಎಂದಲ್ಲ. ಇರುವ ಅವಕಾಶಗಳನ್ನು ಎಚ್ಚರಿಕೆಯಿಂದ ಶ್ರದ್ಧೆ, ಪ್ರಾಮಾಣಿಕತೆಗಳ ಮೂಲಕ ಬಳಸಿಕೊಂಡರೆ ನಿಮ್ಮನ್ನು ಏನೂ ಮಾಡಲಾಗುವುದಿಲ್ಲ. ಮಿಗಿಲಾಗಿ ಬರವಣಿಗೆಯಲ್ಲಿ ನಿಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಿ ಎಂದು ಹೇಳಬಹುದಷ್ಟೆ. 

(ದ ಸಂಡೆ ಇಂಡಿಯನ್ ಪತ್ರಿಕೆಯಲ್ಲಿ ಪ್ರಕಟಿತ)



ಜುಲೈ 20, 2012

ಹಳ್ಳಿ ಹೈದನ ತಲೆಕೆಡಿಸಿದವರಾರು?




ಮೈಸೂರು- ಮಾನಂತವಾಡಿ ಮಾರ್ಗದಲ್ಲಿ ನಾಗರಹೊಳೆ ಅಭಯಾರಣ್ಯದ ಕಾಕನಕೋಟೆ ಕಾಡಿನ ನಡುವೆ ಇರುವ ಆ ಜೇನುಕುರುಬರ ಹಾಡಿಯ ಹೆಸರು ಬಳ್ಳೇ ಹಾಡಿ. ಈ ಹಾಡಿಯ ಕೃಷ್ಣಪ್ಪ ಮತ್ತು ಲಕ್ಷ್ಮಿ ದಂಪತಿಗಳಿಗೆ ಇಬ್ಬರು ಹೆಣ್ಣುಮಕ್ಕಳು. ಒಬ್ಬ ಗಂಡುಮಗ. ಆತ ರಾಜೇಶ. ಇಂದು ಸುವರ್ಣ ವಾಹಿನಿಯ ಹಳ್ಳಿ ಹೈದ ಪ್ಯಾಟೆಗ್ ಬಂದ ರಿಯಾಲಿಟಿ ಶೋನಲ್ಲಿ ಗ್ರಾಂಡ್ ಫಿನಾಲೆವರೆಗೂ ಹೋಗಿ ವಿಜಯಿಯಾಗಿ ಬಂದು ನಂತರದಲ್ಲಿ ಇನ್ನೂ ಬಿಡುಗಡೆಯಾಗದ 'ಜಂಗಲ್ ಜಾಕಿ’ ಸಿನಿಮಾದಲ್ಲಿ ಐಶ್ವರ್ಯಳೊಂದಿಗೆ ನಟಿಸಿ, ಇದೀಗ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಮಾನಸಿಕ ಅನಾರೋಗ್ಯಕ್ಕೀಡಾಗಿ ಚಿಕಿತ್ಸೆ ಪಡೆಯುತ್ತಿರುವ ’ಹಳ್ಳಿ ಹೈದ’ನೇ ಈ ರಾಜೇಶ. ಕೆ.ಆರ್. ಆಸ್ಪತ್ರೆಯ ವೈದ್ಯರಾದ ಸುಧೀರ್ ಅವರು ಟಿಎಸ್‌ಐಗೆ ನೀಡಿದ ಮಾಹಿತಿಯ ಪ್ರಕಾರ ರಾಜೇಶ್‌ಗೆ ’ಅಕ್ಯೂಟ್ ಮೇನಿಯಾ’ ಅಟ್ಯಾಕ್ ಅಗಿದೆ. ಇದೊಂದು ರೋಗವೇನಲ್ಲ. ಆದರೆ ಮನಸ್ಸಿನಲ್ಲಿ ಉಂಟಾದ ತೀವ್ರ ಮಾನಸಿಕ ತಳಮಳ, ಹೊಯ್ದಾಟಗಳು ಒಬ್ಬ ವ್ಯಕ್ತಿಗೆ ಈ ಮಾನಸಿಕ ಅಸ್ವಸ್ಥತೆಯ್ನನು ಉಂಟು ಮಾಡುತ್ತದೆ ಎನ್ನುತ್ತಾರವರು. ಕಾಡಿನ ಹಾಡಿಯಲ್ಲಿ ತನ್ನ ಗೆಣೆಕಾರರೊಂದಿಗೆ ಸ್ವಚ್ಛಂದವಾಗಿ ಆಡಿಕೊಂಡಿದ್ದ ಜೇನುಕುರುಬರ ಹುಡುಗನೊಬ್ಬನಿಗೆ ಇಂತಹ ಪರಿಸ್ಥಿತಿ ಬರಲು ಕಾರಣಗಳೇನು? ಯಾರು ರಾಜೇಶನ ಇಂದಿನ ಈ ಸ್ಥಿತಿಗೆ ಕಾರಣರಾರು? 

ಅದು ೨೦೧೦ನೇ ಇಸವಿಯ ಮೇ ತಿಂಗಳಿನಲ್ಲಿ ಸುವರ್ಣ ವಾಹಿನಿಯು ’ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು’ ಎಂಬ ರಿಯಾಲಿಟಿ ಶೋ ಸಾಕಷ್ಟು ಟಿಆರ್‌ಪಿ ಗಳಿಸಿಕೊಟ್ಟಿತ್ತು. ಅದರ ಹುರುಪಿನಲ್ಲೇ ’ಹಳ್ಳಿ ಹೈದ ಪ್ಯಾಟೆಗ್ ಬಂದ’ ಕಾರ್ಯಕ್ರಮವನ್ನು ಅಯೋಜಿಸಿದ ವಾಹಿನಿಯವರು ಅದಕ್ಕಾಗಿ ರಾಜ್ಯದ ನಾನಾ ಕಡೆಗಳ ಬುಡಕಟ್ಟು ಯುವಕ ಶಿಕಾರಿಗೆ ತೊಡಗಿಕೊಂಡರು. ಇದಕ್ಕಾಗಿ ಸೋಲಿಗ, ಸಿದ್ಧಿ, ಜೇನುಕುರುಬ ಆದಿವಾಸಿಗಳ ಸಂಘಟನೆಗಳ ಮುಖಂಡರನ್ನು ಸಂಪರ್ಕಿಸಿದರು. ಈ ಕಾರ್ಯಕ್ರಮದ ಮೂಲಕ ಆ ಬುಡಕಟ್ಟುಗಳ ಯುವಕರು ವಿಶ್ವಪ್ರಸಿದ್ಧರಾಗುತ್ತಾರೆಂದೂ, ಅವರ ಸಮಸ್ಯೆಗಳ ಬಗ್ಗೆಯೂ ಗಮನ ಸೆಳೆಯುತ್ತೇವೆಂದೂ ಹುರಿದುಂಬಿಸಲಾಯಿತು. ಇದನ್ನು ನಂಬಿದ ಬುಡಕಟ್ಟು ನಾಯಕರೂ ಸಹ ಸುವರ್ಣ ವಾಹಿನಿಗೆ ಬೇಕಾದ ಹುಡುಗರನ್ನು ಹುಡುಕಲು ನೆರವು ನೀಡಿದ್ದರು. ಈ ಪ್ರಕ್ರಿಯೆಯಲ್ಲೇ ಬುಡಕಟ್ಟು ಸಂಘದ ಸೋಮಣ್ಣ ಮತ್ತಿತರರೊಂದಿಗೆ ರಾಜೇಶ್ ಇರುವ ಹಾಡಿಗೂ ಈ ಪ್ಯಾಟೆ ಮಂದಿ ದಾಳಿ ನಡೆಸಿದ್ದರು.

ರಾಜೇಶ ಬಹಳ ನಾಚಿಕೆ ಸ್ವಭಾವದವನಾಗಿದ್ದನಲ್ಲದೆ ಹಾಡಿಯ ಇತರ ಹುಡಗರಂತೆಯೇ ಅತ್ಯಂತ ಮುಗ್ಧನೂ, ಗಟ್ಟಿಗನೂ ಆಗಿದ್ದ. ನಮಗೆ ಮೊಬೈಲ್ ಆಪರೇಟ್ ಮಾಡಲೂ ಗೊತ್ತಿರದ, ದಷ್ಟಪುಷ್ಟನಾಗಿರುವ ಅತ್ಯಂತ ಮುಗ್ಧ ಹುಡುಗ ಬೇಕು ಎಂದು ಹೇಳಿದ್ದರು ರಿಯಾಲಿಟಿ ಶೋ ಮುಖ್ಯಸ್ಥರು.. ಹೀಗಿರುವಾಗ ಇವರಿಗೆ ರಾಜೇಶನೇ ಒಳ್ಳೆಯ ಆಯ್ಕೆ ಎನ್ನಿಸಿದೆ. ಆದರೆ ಸಿಟಿ ಎಂದೊಡನೆ ಬೆಚ್ಚಿ ಬೀಳುತ್ತಿದ್ದ ರಾಜೇಶನನ್ನು ಅದು ಹೆಗೋ ಮುಖಂಡರೆಲ್ಲಾ ಸೇರಿ ’ಇಡೀ ಸಮುದಾಯಕ್ಕೇ ಒಳಿತಾಗುವ’ ಬಣ್ಣದ ಮಾತನಾಡಿ ಪುಸಲಾಯಿಸಿ ಒಪ್ಪಿಸಿದ್ದಾರು. ಕರೆದೊಯ್ಯುವ ದಿನ ಹರಕೆಯ ಕುರಿಗೆ ಸಿಂಗರಿಸುವಂತೆ ಹೂವಿನ ಹಾರ ಹಾಕಿ, ಹಾಡಿಯ ದೇವತೆ ಮಾಸ್ತ್ಯಮ್ಮನಿಗೆ ಪೂಜೆ ಮಾಡಿಸಿ ಜೀಪು ಹತ್ತಿಸಿದ್ದಾರೆ. ಇನ್ನೇನು ಜೀಪು ರಾಜೇಶನನ್ನು ಕೂರಿಸಿಕೊಂಡು ಹೊರಡಬೇಕು. ಅಷ್ಟರಲ್ಲಿ ಜೀಪಿನಿಂದ ಹಾರಿಬಿದ್ದ ರಾಜೇಶ್ ಸೀದಾ ಕಾಡಿನೊಳಕ್ಕೆ ಓಟಕಿತ್ತಿದ್ದಾನೆ! ಮತ್ತೆ ಅವನನ್ನು ಕರೆದುಕೊಂಡು ಬಂದು ಒಪ್ಪಿಸುವಲ್ಲಿ ಎಲ್ಲರಿಗೂ ಸುಸ್ತೋ ಸುಸ್ತು.


ಮುಂದಿನ ಎಪಿಸೋಡು ಎಲ್ಲರಿಗೂ ಗೊತ್ತಿರುವಂತದ್ದೇ. ರಾಜೇಶ ತಾನು ಹಿಂದೆಂದೂ ನೋಡಿರದ ಬೆಂಗಳೂರು ಪ್ಯಾಟೆಗೆ ತಂದು ರಿಯಾಲಿಟಿ ಶೋನಡೆಸುವವರ ಮನಸ್ಸಿನ ವಿಕೃತ ಟಾಸ್ಕ್‌ಗಳಿಗೆ ಆತನೊಂದಿಗೆ ಇತರ ಬುಡಕಟ್ಟು ಹುಡಗರನ್ನೂ ಗುರಿಪಡಿಸಲಾಗಿತ್ತು. ಪ್ರತಿ ಆದಿವಾಸಿ ಹುಡುಗನಿಗೆ ಒಬ್ಬೊಬ್ಬ ಪ್ಯಾಟೆ ಹುಡುಗಿಯರನ್ನು ಜೊತೆಯಾಗಿ (ಎಜೆ) ಬಿಡಲಾಗಿತ್ತು.. ’ಆಧುನಿಕತೆ’ಯನ್ನೇ ಉಸಿರಾಡುವ ಈ ಹುಡುಗಿಯರು ಹಾಕುವ ತುಂಡು ಚಡ್ಡಿಗಳು, ವೇಷಭೂಷಣ ಎಲ್ಲವೂ ರಾಜೇಶನಂತ ಈ ಹಾಡಿಯ ಬಾಲಕರಲ್ಲಿ ಇನ್ನೆಂತಹ ಇರುಸುಮುರುಸು ಹುಟ್ಟುಹಾಕಿರಬಹುದು? ನಾಲಗೆಯ ಮೇಲೆ ಹಿಡತವೆ ಇರದ ಆ ಹುಡುಗಿಯರಿಗೆ ಈ ನಗರ ಜೀವನದ ’ನಾಗರೀಕತೆ’ ಗೊತ್ತಿಲ್ಲದವರಿಗೆ ಮಾರ್ಗದರ್ಶನ ನೀಡಲು ಹೇಳಲಾಗಿತ್ತು. ಕಾಡನ್ನು ಬಿಟ್ಟು ಬಂದಿರುವ ಈ ಹುಡುಗರನ್ನು ಬ್ಯೂಟಿ ಪಾರ್ಲರುಗಳಿಗೆ ಕರೆದೊಯ್ದು ಅವರ ಮೈಮೇಲಿನ ಕೂದಲುಗಳನ್ನು (ವ್ಯಾಕ್ಸ್ ಮೂಲಕ) ಕೀಳಿಸಿ, ಫೇಷಿಯಲ್ ಮಾಡಿಸಿ, ತಲೆಗೂದಲಿಗೆ ಬಣ್ಣ ಬಳಿಸಿ ಅವರನ್ನು ವಿಚಿತ್ರವಾಗಿ ಕಾಣುವಂತೆ ಮಾಡಲಾಗಿದೆ.
ಯಾರೋ ಅಪರಿಚಿತ ಹುಡುಕಿಯರ ಬಳಿ ಮೊಬೈಲ್ ನಂಬರ್ ಕೇಳುವ, (ಹೀಗೆ ನಗರವಾಸಿ ಹುಡುಗರು ಯಾರಾದರೂ ಮಾಡುತ್ತಾರಾ?!) ಬಾಡಿಗೆ ಮನೆ ಹುಡುಕಲು ಬಿಡುವ, ಭೇಧಿ ಮಾತ್ರೆಯೊಂದಿಗೆ ಹೊಟ್ಟೆ ತುಂಬ ತಿನ್ನಿಸಿ ಟಾಯ್ಲೆಟಿಗೆ ನುಗ್ಗದಂತೆ ತಡೆದು ಹಿಡಿದುಕೊಳ್ಳುವ, ಲೀಟರ್‌ಗಟ್ಟಲೆ ಬಾಳೆಹಣ್ಣಿನ ಜ್ಯೂಸ್ ಕುಡಿಸಿ ವಾಂತಿಯಾಗದಂತೆ ತಡೆಗಟ್ಟುವ, ಎಷ್ಟೋ ವಿದ್ಯಾವಂತ ನಗರವಾಸಿಗಳೇ ಹೋಗಲು ಮುಜುಗರವಾಗುವ ದೊಡ್ಡ ಮಾಲ್‌ಗಳಿಗೆ ಹೋಗುವ ಚಿತ್ರವಿಚಿತ್ರ ಟಾಸ್ಕ್ ನೀಡಲಾಗಿತ್ತು. ಈ ಮುಗ್ಧ ರಾಜೇಶ್‌ನಿಗೂ ಆಕೆಯ ಜೊತೆಗಿದ್ದ ಎಜೆ ಐಶ್ವರ್ಯಳಿಗೂ ಒಂದು ಹಂತದಲ್ಲಿ ಹೊಡೆದಾಟವಾಗುವಂತೆ ಮಾಡಿ ಅದನ್ನು ತೋರಿಸಿ ಟಿಆರ್‌ಪಿ ಹೆಚ್ಚಿಸಿಕೊಂಡಿದ್ದರು. ರೂಮಿನೊಳಗೆ ಹುಡುಗಿಯೊಂದಿಗೆ ಬಿಟ್ಟು ಶೌಚಾಲಯದೊಳಗೂ ರಹಸ್ಯ ಕ್ಯಾಮೆರಾಗಳನ್ನಿಟ್ಟು ಇವರ ವರ್ತನೆಗಳನ್ನು ಚಿತ್ರೀಕರಿಸಿಕೊಂಡು ನಂತರ ಎಡಿಟ್ ಮಾಡಿ ಪ್ರದರ್ಶಿಸಲಾಗಿತ್ತು. ಈ ಸಂದರ್ಭದಲ್ಲಿ ಪ್ರಜ್ಞಾವಂತರಾದ ಎಷ್ಟೋ ಜನರಿಗೆ ಪಿಚ್ಚೆನಿಸಿತ್ತಲ್ಲದೆ ಆದಿವಾಸಿ ಹುಡುಗರನ್ನು ಈ ರೀತಿ ಅವಮಾನಿಸುತ್ತಿರುವ ಕುರಿತು ಅಲ್ಲಲ್ಲಿ ಅಸಮಾಧಾನವೂ ಕೇಳಿಬಂದಿತ್ತು.

ಕೊನೆಹಂತದಲ್ಲಿ ವೀಕ್ಷಕರ ಮತದ ಸಹಾಯದಿಂದ ಅಂತಿಮವಾಗಿ ವಿಜೇತರಾದದ್ದು ರಾಜೇಶ್ ಮತ್ತು ಐಶ್ವರ್ಯ. ಹಾಂ, ವಾಹಿನಿಯವರು ಬುಡಕಟ್ಟಿನ ಜನರ ಸಮಸ್ಯೆಗಳ ಕುರಿತು ಗಮನ ಸೆಳೆಯುತ್ತೇವೆ ಎಂದೂ ಮಾತುಕೊಟ್ಟಿದ್ದರಲ್ಲ. ಹಾಗಾಗಿ ಜೇನುಕುರುಬರ ಸಮಸ್ಯೆಗಳ ಬಗ್ಗೆಯೂ ಅಲ್ಲಲ್ಲಿ ಮಾತನಾಡುವಂತೆ ನೋಡಿಕೊಂಡಿದ್ದರು. ರಾಜೇಶನಿಗೆ ಪ್ರಶಸ್ತಿ ಪ್ರಧಾನ ಮಾಡಿದ್ದ ಪುನೀತ್ ರಾಜ್‌ಕುಮಾರ್ ತುಂಬಾ ಕಾಳಜಿಯಿಂದಲೇ ಮಾತನಾಡಿದ್ದರಾದರೂ ಇಡೀ ಕಾರ್ಯಕ್ರಮದ ಮುಗ್ಧ ಆದಿವಾಸಿಗಳ ಬದುಕಿನಲ್ಲಿ ಬೀರಬಹುದಾದ ಪರಿಣಾಮವನ್ನು ಗ್ರಹಿಸುವಲ್ಲಿ ಅವರೂ ಸೋತಿದ್ದರು.

ಇತ್ತ ರಿಯಾಲಿಟಿ ಶೋನಲ್ಲಿ ರಾಜೇಶ ಪ್ರಖ್ಯಾತನಾಗುತ್ತಿದ್ದಂತೆ ಗಾಂಧಿನಗರದಲ್ಲಿ ರಾಜೇಶ್-ಐಶ್ವರ್ಯ ಜೋಡಿಯನ್ನು ಇಟ್ಟುಕೊಂಡು ಒಂದು ಸಿನಿಮಾ ಮಾಡಿದರೆ ಹೇಗೆ ಎಂಬ ಆಲೋಚನೆ ಬಂದಿತ್ತು. ಅದರಂತೆ ರಾಜೇಶ ಮನೆ ಸೇರಿದ 20 ದಿನಗಳಲ್ಲಿ ನಿರ್ದೇಶಕ ರವಿ ಕಡೂರು ಬಳ್ಳೇಹಾಡಿಗೆ ಹೋಗಿ ರಾಜೇಶನನ್ನು ಸಿನಿಮಾ ’ಹೀರೋ’ಮಾಡುವೆನೆಂದು ಹೇಳಿ ತಮ್ಮ ಮನೆಗೆ ಕರೆದುಕೊಂಡು ಹೋಗಿ’ಕಾಡುಗಲ್ಲನ್ನು’ ಶಿಲೆಯಾಗಿಸಲು ಅವರು ಪ್ರಯತ್ನಿಸಿದ್ದರು!. ಈ ನಡುವೆ ಒಮ್ಮೆ ಸುವರ್ಣ ವಾಹಿನಿಯ ಕಛೇರಿಗೆ ರಾಜೇಶನನ್ನು ತಮ್ಮ ಮನೆಯಿಂದ ರವಿ  ಕರೆದುಕೊಂಡು ಹೋದ ಸಂದರ್ಭದಲ್ಲಿ ಸಿನಿಮಾ ವಿಷಯ ವಾಹಿನಿಯವರ ಕಿವಿಗೆ ಬಿದ್ದು ಅಲ್ಲಿ ತಮ್ಮ ಅರಿವಿಗೇ ಬರದ ಕಾರಣ ವಾಹಿನಿಯವರು ನಿರ್ದೇಶಕರ ಮೇಲೆ ಮುನಿಸಿಕೊಂಡು ತಾವು ಬೆಳಕಿಗೆ ತಂದ ’ಹುಡುಗನ್ನು ಇವರು ಬಳಸಿಕೊಳ್ಳುತ್ತಿರುವ ಕುರಿತು  ಅಸಮಧಾನ ವ್ಯಕ್ತಪಡಿಸಿದ್ದರು. ಆದರೆ ರಾಜೇಶ ’ಡೈರೆಕ್ಟರ್’ ರವಿಯವರ ಬಳಿಯೇ ಇರುತ್ತೇನೆ ಎಂದುಬಿಟ್ಟಿದ್ದರಿಂದ ವಾಹಿನಿಯವರು ಸುಮ್ಮನಾಗಿದ್ದರು.  ರಾಜೇಶನಿಗೆ ಹತ್ತು ಲಕ್ಷ ರೂಪಾಯಿ ಕೊಡುವ ಭರವಸೆಯನ್ನು ಚಿತ್ರ ನಿರ್ಮಾಪಕ-ನಿರ್ದೇಶಕರು ಮಾತನಾಡಿ ಕೊನೆಗೆ 2011ರ ಜನವರಿ 24 ರಂದು ’ಜಂಗಲ್ ಜಾಕಿ’ ಸಿನಿಮಾದ ಚಿತ್ರೀಕರಣವೂ ಆರಂಭವಾಗಿತ್ತು. ನಂತರದಲ್ಲಿ. ಹೆಚ್ಚೂ ಕಡಿಮೆ 6 ತಿಂಗಳವರೆಗೆ ಆಗಾಗ ನಡೆದ ಚಿತ್ರೀಕರಣ ನಡೆದಿತ್ತು. ಅದಾದ ನಂತರ ಹಾಡಿ ಸೇರಿಕೊಂಡ ರಾಜೇಶನ ತಲೆಯಲ್ಲಿ ನಿಂತರೂ, ಕುಂತರೂ,  ಮಲಗಿದರೂ ಎದ್ದರೂ  'ಜಂಗಲ್ ಜಾಕಿ' ಸಿನಿಮಾದಲ್ಲಿ ತಾನು ಹೀರೋ ಆಗಿ ತೆರೆಯ ಮೇಲೆ ಅದ್ಭುತವಾಗಿ ಕಾಣಿಸಿಕೊಳ್ಳುವ ರಂಗುರಂಗಿನ ದೃಶ್ಯಗಳೇ. ಈ ಸಿನಿಮಾಕ್ಕಾಗಿ ’ಅಭಿಮಾನಿಗಳು’ ತನ್ನ ಸಿನಿಮಾಕ್ಕಾಗಿ ತುಗಿಗಾಲಲ್ಲಿ ಕಾದುಕೊಂಡು ನಿಂತಿರುವ ದೃಶ್ಯವನ್ನು ಮನಸ್ಸಿಗೆ ತಂದುಕೊಂಡು ಅವನಿಗೆ ಮನಸ್ಸಿಗೆ ಸಮಾಧಾನವೇ ಇಲ್ಲದಂತಾಗಿಬಿಟ್ಟಿತ್ತು.

ಈ ನಡುವೆ ಬಳ್ಳೇಹಾಡಿಗೆ ಸಮೀಪದ ಅಂತರಸಂತೆಯ ಜಾತ್ರೆಯಲ್ಲಿ ತನ್ನದೇ ಜೇನುಕುರುಬ ಸಮುದಾಯದ ಹುಡುಗಿಯೊಬ್ಬಳು ರಾಜೇಶನ ಕಣ್ಣಿಗೆ ಬಿದ್ದಳು.  ಅವಳು ಬೆಳ್ಳಗಿದ್ದ ಹುಡುಗಿ. ಹೇಗೂ ರಾಜೇಶನ ’ಪ್ಯಾಟೆ ಲೈಫು ಇಷ್ಟರಲ್ಲಾಗಲೇ ’ಸೌಂದರ್ಯ’ ಎಂದರೆ ನಾಡಿನ ಬಹುಸಂಖ್ಯಾತರ ಬಣ್ಣವಾದ ಕಪ್ಪು ಅಲ್ಲ, ಬೆಳ್ಳಗಿರುವುದು ಮಾತ್ರ ಎಂಬುದನ್ನು ತಿಳಿಸಿಕೊಟ್ಟಿತ್ತು. ಉಳಿದ ಜೇನುಕುರುಬ ಹುಡುಗಿಯರೆಲ್ಲ ಕಪ್ಪು ಇರುವಾಗ ಈ ಹುಡುಗಿ ಬೆಳ್ಳಗಿದ್ದದ್ದು ರಾಜೇಶನಿಗೆ ಆ ಹುಡುಗಿಯ ಮೇಲೆ ಮನಸ್ಸಾಗಿತ್ತು. ಮದುವೆಯಾಗಲೂ ನಿರ್ಧರಿಸಿಕೊಂಡುಬಿಟ್ಟ.

 ಮದುವೆಯೂ ಆಯಿತು. ಆದರೆ ಹುಡುಗಿ ಬೆಳ್ಳಗಿದ್ದ ಮಾತ್ರಕ್ಕೆ ಪ್ಯಾಟೆ ಹುಡುಗಿಯರಂತೆ ಇರಲು ಸಾಧ್ಯವೇ? ರಿಯಾಲಿಟಿ ಶೋ ಮತ್ತು ಸಿನಿಮಾಗಳ ಹುಡುಗಿಯರು ’ಹುಡುಗಿಯರೆಂದರೆ ಹಿಂಗಿಂಗೆ ಇರಬೇಕು’ ಎಂದು ಹೇಳಿಕೊಟ್ಟಾಗಿತ್ತು. ಅದನ್ನೆಲ್ಲಾ ಈ ಹುಡುಗಿಯಿಂದ ನಿರೀಕ್ಷಿಸಲು ಹೇಗೆ ಸಾಧ್ಯ? ಪಾಪ ಆ ಹುಡುಗಿ ಕಾವ್ಯ ತೀರಾ ಮುಗ್ಧೆ. ರಾಜೇಶನ ಈ ಹೊತ್ತಿನ ಬದಲಾಗಿದ್ದ ಲೈಫ್‌ಸ್ಟೈಲ್‌ಗೆ ಹೊಂದಿಕೊಳ್ಳಲು ಆಕೆಗಾಗಲೇ ಇಲ್ಲ. ಆಗ ಆಕೆಯೊಂದಿಗೆ ತೀರಾ ಒರಟಾಗಿ ನಡೆದುಕೊಳ್ಳಲಾರಂಭಿಸಿದ್ದ.  ಹೀರೋ ರಾಜೇಶ. ಆಕೆಯೊಂದಿಗೆ ಹೊಂದಿಕೊಳ್ಳದೇ ಹುಡುಗಿಯನ್ನು ಒಂದೂವರೆ ತಿಂಗಳಲ್ಲೇ ಮನೆಗೆ ಕಳಿಸಿಬಿಟ್ಟ. ಆತಂಕಗೊಂಡ ಹುಡುಗಿಯ ಅಪ್ಪ ಅಮ್ಮ ರಾಜೇಶನಿಗೆ ಬುದ್ಧಿ ಹೇಳಿದರು.  ಪೋಲೀಸರಿಗೆ ದೂರು ನೀಡುತ್ತೇವೆಂದೂ ಹೇಳಿದರು. . 
ಅಮ್ಮನೊಂದಿಗೆ ಆಸ್ಪತ್ರೆಯಲ್ಲಿ
ಒಂದೆಡೆ ಹದಗೆಟ್ಟ ಸಂಸಾರ, ಕಾಡಿನ ರಿಯಾಲಿಟಿಗೆ ಮತ್ತೆ ಒಗ್ಗಿಕೊಳ್ಳಲಾಗದ ’ರಿಯಾಲಿಟಿ ಶೋ ಕಲಿಸಿದ್ದ’ ಪ್ಯಾಟೆ ಲೈಫು, ಮತ್ತೊಂದೆಡೆ ತನ್ನ ಸಿನಿಮಾ ಬಿಡುಗಡೆಗೆ ಕಾಯುತ್ತಿರುವ ’ಅಭಿಮಾನಿಗಳು’. ದಿನಕಳೆದಂತೆಯೂ ರಾಜೇಶ ಸುತ್ತಲಿನ ಜನರಿಗೆ ಮುಖತೋರಿಸಲಾಗದ ಮಾನಸಿಕ ವಿಹ್ವಲತೆಗೊಳಗಾಗಿದ್ದಾನೆ. ದೂರದಿಂದ ಯಾರಾದರೂ ಕಂಡ  ಕೂಡಲೇ ಕಾಡಿನ ಕಡೆ ಓಟ ಕೀಳತೊಡಗಿದ್ದಾನೆ. ಏಕೆಂದು ಅಮ್ಮ ಕೇಳಿದರೆ ’ಅಭಿಮಾನಿಗಳು’ ಸಿನಿಮಾದ ಬಗ್ಗೆ ಕೇಳುತ್ತಾರೆ. ಅದಕ್ಕೆ ಏನು ಹೇಳಲಿ? ಎಂಬ ಮರುಪ್ರಶ್ನೆ. ನಾಚಿಕೆ ಸ್ವಭಾವದ ಜೊತೆಗೇ ತೀವ್ರ ಮುಂಗೋಪಿತನವೂ ಆತನ ಸ್ವಭಾವದಲ್ಲಿದ್ದುರಿಂದ ರಾಜೇಶನ ಮಾನಸಿಕ ನಿಯಂತ್ರಣ ತಪ್ಪಿದ್ದಾನೆ. ಹುಚ್ಚನಂತೆ ವರ್ತಿಸುವುದು, ನಿಂತಲ್ಲಿ ನಿಲ್ಲದಂತಿರುವುದು, ಜೋರಾಗಿ ಕಿರುಚುವುದು ಇತ್ಯಾದಿ ಹೆಚ್ಚಾಗಿದೆ. ಮನೆಯವರೆಲ್ಲ ದೇವರ ಮೊರೆಹೋದರೂ ಉಪಯೋಗವಾಗಿಲ್ಲ. ಒಂದು ದಿನ ಕಾಡಿನಲ್ಲಿ ಹತ್ತಾರು ಮೈಲು ಓಡಿ ಕೈಕಾಲು ಮುಖವೆಲ್ಲಾ ಮುಳ್ಳು ತರಿದು ರಕ್ತ ಹರಿದಿದೆ. ಅಂದು ನಾಲ್ಕಾರು ಜನರು ಸೇರಿ ಹಿಡಿದುಕೊಂಡರೂ ಎಲ್ಲರನ್ನೂ ಎತ್ತಿ ಬಿಸಾಕುವಷ್ಟು ಉಗ್ರಗೊಂಡಿದ್ದಾನೆ. ಅಂತಿಮವಾಗಿ ಹಾಡಿಯ ಜನರು, ಅಲ್ಲಿದ್ದ ಅರಣ್ಯ ಪಾಲಕರು ಕೈಕಾಲುಗಳಿಗೆ ಅಕ್ಷರಶಃ ಹೆಡೆಮುರಿ ಕಟ್ಟಿ ಸರಗೂರಿನ ವಿವೇಕಾನಂದ ಸ್ಮಾರಕ ಆಸ್ಪತ್ರೆಗೆ ಸಾಗಿಸಿದ್ದಾರೆ. ಅಲ್ಲಿ ಅವನ ಆರ್ಭಟ ನೋಡಿ ವಿಶೇಷ ಕೊಠಡಿಯಲ್ಲಿ ಎರಡು ದಿನ ಇಡಲಾಗಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಸಾಗಿಸಲಾಗಿದೆ.

ರಾಜೇಶನ ಈಗಿನ ಮಾನಸಿಕ ಸ್ಥಿತಿ ಇರುವ ಶುಷ್ರೂಶೆ ನೀಡಲು ತೀರಾ ಅಗತ್ಯವಾಗಿರುವುದು ಪ್ರಶಾಂತ ವಾತಾವರಣ ಮತ್ತು ಅಲ್ಲಿ ನಡೆಸುವ ತೀವ್ರವಾದ ಕೌನ್ಸೆಲಿಂಗ್‌ಗಳು. ಆದರೆ ರಾಜೇಶ ಆಸ್ಪತ್ರೆ ಸೇರಿದ ಬಗ್ಗೆಯೂ ಇನ್ನಿಲ್ಲದ ವಿವಾದಗಳನ್ನು ಹುಟ್ಟುಹಾಕಿ, ಅತಿರಂಜಕಗೊಳಿಸಿ ಟಿಆರ್‌ಪಿ ಹೆಚ್ಚಸಿಕೊಳ್ಳಲು ಬಯಸುವ ಟೀವಿ ಮಾಧ್ಯಮಗಳು ಅವನನ್ನು ಬಿಡುತ್ತಿಲ್ಲ. ತನ್ನ ಕಾಡಿನಲ್ಲಂತೂ ನೆಮ್ಮದಿಯಿಂದರಲು ಜೇನುಕುರುಬ ರಾಜೇಶನಿಗೆ ಬಿಡದ ನಮ್ಮ ಪ್ಯಾಟೆಯ ನಾಗರಿಕ ಸಮಾಜ ಮತ್ತು ಮಾಧ್ಯಮಗಳು ಕನಿಷ್ಠ ಈ ಮಾನಸಿಕ ಆಸ್ಪತ್ರೆಯಲ್ಲಾದರೂ ನೆಮ್ಮದಿ ನೀಡಬಾರದೇ?  

ಹಣವೊಂದು ಕೆಡಿಸಿತ್ತು ಹಾಡಿಯನ್ನು!

೧೯೮೦ರಲ್ಲಿ ದಕ್ಷಿಣ ಆಫ್ರಿಕದ ಸಿನಿಮಾ ನಿರ್ದೇಶಕ ಜೇಮಿ ಉಯಿಸ್ ಎಂಬುವವರು ನಿರ್ದೇಶಿಸಿದ್ದ ’ದ ಗಾಡ್ಸ್ ಮಸ್ಟ್ ಬಿ ಕ್ರೇಝಿ ಸಿನಿಮಾದಲ್ಲಿ ಕಲಹರಿ ಮರುಭೂಮಿಯ ಬುಷ್‌ಮನ್ ಎಂಬ ಬುಡಕಟ್ಟು ಸಮುದಾಯವು ನಾಗರಿಕತೆಯೊಂದಿಗೆ ಎದುರುಗೊಳ್ಳುವ ಕತೆಯನ್ನು ಅದ್ಭುತವಾಗಿ ಚಿತ್ರ್ರಿಸಿದ್ದರು. ವಿಮಾನದಿಂದ ಕುಡಿದು ಎಸೆದ ಕೋಕೊಕೋಲಾ ಬಾಟಲಿಯೊಂದು ಬುಡಕಟ್ಟು  ಜನರ ಹಾಡಿಗೆ ಬಂದು ಬಿದ್ದದ್ದೇ ಅವರ ನಡುವೆ ಇನ್ನಿಲ್ಲದ ಸ್ವಾರ್ಥ-ಹೊಡದಾಟ ಶುರುವಾಗಿಬಿಡುತ್ತದೆ. ತಮ್ಮ ನಡುವೆ ಕಲಹ ಸೃಷ್ಟಿಸಿದ ಅದು ಭೂತವೆಂದುಕೊಂಡು ಭೂಮಿಯ ಮತ್ತೊಂದು ತುದಿಯಲ್ಲಿ ಎಸೆದು ಬರಲು ಹೋಗುವ ಬುಡಕಟ್ಟು ಮನುಷ್ಯನೊಬ್ಬ ’ಆಧುನಿಕ’ಜಗತ್ತಿನೊಳಗೆ ಪಜೀತಿಗೆ ಸಿಕ್ಕಿಹಾಕಿಕೊಳ್ಳುವ ಕತೆ ಅದು. ಇದೇ ವೇಳೆಗೆ ಈ ಸಿನಿಮಾ ಬುಡಕಟ್ಟು ಜನರ ನಿಜವಾದ ’ನಾಗರಿಕ’ಬದುಕನ್ನು ಹಾಗೂ ಮಾನವೀಯತೆಯನ್ನೂ ಮನಮುಟ್ಟುವಂತೆ ಹೇಳಿತ್ತು. ನಮ್ಮ ನಾಗರಿಕ ಜಗತ್ತಿನ ಈ ಕಾಲದ ಐಲುಗಳಾದ ರಿಯಾಲಿಟಿ ಶೋಗಳು ಮತ್ತು ಹುಚ್ಚು ಭ್ರಮೆಗಳಲ್ಲಿ ಮುಳುಗಿಸುವ ಸಿನಿಮಾಗಳೂ, ಅವುಗಳನ್ನು ತಯಾರಿಸುವವರೂ, ನೋಡುವವರೂ ಎಲ್ಲಾ ಸೇರಿ ರಾಜೇಶನ ’ಜೇನು ಕುರುಬರ’ ಹಾಡಿಯಲ್ಲಿ ಸೃಷ್ಟಿಸಿರುವ ತಳಮಳ ಕೂಡ ಇದೇ ತೆರನಾದದ್ದು. ಅಲ್ಲಿ ಏನಾಗಿದೆ ನೋಡಿ.

ರಾಜೇಶನ ಮನೆ
’ಹಳ್ಳಿ ಹೈದ ಪ್ಯಾಟೆಗ್ ಬಂದ’ ರಿಯಾಲಿಟಿ ಶೋದಲ್ಲಿ ತಮ್ಮ ಮಗನನ್ನು ನೋಡಲು ರಾಜೇಶನ ತಂದೆ ಟೀವಿಯೊಂದನ್ನು ತಂದರು. ಆದರೆ ಅಲ್ಲಿ ಕರೆಂಟಿಲ್ಲ. ಹೀಗಾಗಿ ನಾಲ್ಕಾರು ಸೋಲಾರ್ ಬ್ಯಾಟರಿಗಳನ್ನು ಹಾಕಿ ಕಾರ್ಯಕ್ರಮ ವೀಕ್ಷಿಸುವ ಪ್ರಯತ್ನ ಹಾಡಿಯಲ್ಲಿ ನಡೆಯುತ್ತದೆ. ಆದರೆ ಆ ಬ್ಯಾಟರಿ ಸುಟ್ಟು ಹೋಗುತ್ತದೆ. ಕೊನೆಗೆ ದೂರದ ಮನೆಗಳಿಗೆ ಹೋಗಿ ಟೀವಿ ನೋಡಿ ಅಲ್ಲಿ ಬಲವಂತವಾಗಿ ಖುಷಿಪಡುತ್ತಾರೆ. ನಂತರ ಮನೆಗೆ ಬಂದ ರಾಜೇಶ ಮನೆಯಲ್ಲೇ ಟೀವಿ ನೋಡುವಂತಾಗಲು ಒಂದು ಜನರೇಟರ್ ಖರೀದಿಸುತ್ತಾನೆ. ಅದಕ್ಕೆ ಇದುವರೆಗೆ ಏನಿಲ್ಲೆಂದರೂ ಲೀಟರ್‌ಗೆ ೪೦ ರೂಪಾಯಿಯಂತೆ ೩೦೦-೪೦೦ ಲೀಟರ್ ಸೀಮೆ ಎಣ್ಣೇ ಖರೀದಿಸಲಾಗಿದೆ. ರಿಯಾಲಿಟಿ ಶೋದಲ್ಲಿ ಗೆದ್ದರೆ ಊರಿನ ದೇವರಿಗೆ ದೇವಸ್ಥಾನ ಕಟ್ಟಿಸುತ್ತೇನೆಂದಿದ್ದ ರಾಜೇಶ. ವಾಹಿನಿಯವರು ಶೋ ಮುಗಿದ ಮೇಲೆ ಕೊಡಬೇಕಿದ್ದ ಹಣಕ್ಕಾಗಿ ಪಾನ್ ಕಾರ್ಡ್ ತರಲು ಮತ್ತು ಅಕೌಂಟ್ ತೆರೆಯಲು ಹೇಳೀದ್ದಾರೆ. ಆದರೆ ಪಾನ್‌ಕಾರ್ಡ್ ಬರಲು ತಿಂಗಳಾನುಗಟ್ಟಲೆಯಗಿದೆ. ಕೊನೆಗೂ ಹೆಚ್.ಡಿ.ಕೋಟೆಯ ಬ್ಯಾಂಕೊಂದರಲ್ಲಿ ೪,೯೦,೦೦೦ ರೂಪಾಯಿ ಫಿಕ್ಸೆಡ್ ಡೆಪಾಸಿಟ್ ಇಡಲಾಗಿದೆ. ಇಷ್ಟರ ಹೊತ್ತಿಗೆ ರಾಜೇಶನನ್ನು ಆರಂಭದಲ್ಲಿ ಶೋಗೆ ಹೋಗಲು ಒಪ್ಪಿಸಿದ್ದ ಬುಡಕಟ್ಟು ಮುಖಂಡರನ್ನು ಕಂಡರೂ ಮಾತಾಡಿಸದಂತಾಗಿದ್ದ ರಾಜೇಶ. ರಾಜೇಶನನ್ನು ಸನ್ಮಾನ ಮಾಡಲು ಕೆಲವು ಸ್ಥಳೀಯ ಹಾಡಿಯ ಜನರು ಪ್ರಯತ್ನಿಸಿದ್ದಾರೆ. ಅದಕ್ಕಾಗಿ ಆತನನ್ನು ಕರೆತರಲು ನಿರ್ದೇಶಕ ರವಿ ಕಡೂರು ಮನೆಗೆ ಹೋದವರಿಗೆ ’ಅವರು ಹಾಕುವ ಹಾರ ತೊಗೊಂಡು ನಾನೇನು ಮಾಡಲಿ? ಎಷ್ಟು ದುಡ್ಡು ಕೊಡ್ತಾರೆ ಹೇಳಿ ಬರ‍್ತೇನೆ’ ಎಂದು ಮುಖಕ್ಕೆ ಹೊಡೆದಂತೆ ಹೇಳಿ ವಾಪಸ್ಸು ಕಳಿಸಿಬಿಟ್ಟ. ಸಿನೆಮಾದವರು ಕೊಟ್ಟ ಹಣದಿಂದ ಪಲ್ಸಾರ್ ಬೈಕ್ ರಾಜೇಶನ ಗುಡಿಸಲು ನುಗ್ಗಿದೆ. ಟ್ಯಾಂಕ್ ಪೂರ್ತಿ ಭರ್ತಿ ಮಾಡಿಕೊಂಡು ಸಾಲದಾದರೆ ಎಂದು ಬೈಕಿನ ಹಿಂದುಗಡೆ ಒಂದು ಕ್ಯಾನ್ ಭರ್ತಿ ಪೆಟ್ರೋಲಿಟ್ಟುಕೊಂಡು ಬಳ್ಳೇ ಹಾಡಿ ಟು ಕಡೂರು ವಯಾ ಬೆಂಗಳೂರು ಹಲವಾರು ಸಲ ಸವಾರಿ ಮಾಡಿದ್ದಾನೆ.

ಹಾಡಿಯಲ್ಲಿ ಮೊದಮೊದಲು ರಾಜೇಶನ ಕುರಿತು ಸಂತಸಗೊಂಡಿದ್ದ ಜೊತೆಗಾರ ಹುಡುಗರನ್ನು ಈಗ ಮಾತಾಡಿಸದಂತಾಗಿಬಿಟ್ಟಿದ್ದ. ಹಾಡಿಗೆ ಬಂದರೂ ರಾಜೇಶನ ಲೋಕವೇ ಬೇರೆ ಆಗಿತ್ತು. ಈಗ ಅವನ ’ಅಭಿಮಾನಿಗಳೇ’ ಬೇರೆಯಾಗಿದ್ದರು. ಹೊಸ ಸೂಟು, ಬೂಟಿನ ರಾಜೇಶನಿಗೆ ಆ ಹಾಡಿಯ ತಲೆಗೆ ಎಣ್ಣೆ ಕಾಣದ, ದುಡಿಮೆ ಮಾಡುವ, ಕೂಲಿಕಾರ ಬಡವರು ’ಯಕಶ್ಚಿತ್’ ಎನಿಸಿದ್ದಾರೆ. ಇಷ್ಟೊತ್ತಿಗೆ ರಾಜೇಶ ಹಾಡಿಯ ಇತರರಂತೆ ಲೋಕಲ್ ಸಾರಾಯಿ ಕುಡಿಯುತ್ತಿರಲಿಲ್ಲ. ಬ್ರಾಂಡೆಡ್ ಕುಡುಕನಾಗಿದ್ದ!  ರಾಜೇಶನ ಮದುವೆಗೆ ಹ್ಯಾಂಡ್ ಪೋಸ್ಟ್‌ನ ಕಲ್ಯಾಣಮಂಟಪವೊಂದರಲ್ಲಿ ಅರೇಂಜಾಗಿದೆ. ಅಲ್ಲಿನ ’ಇವೆಂಟ್ ಮ್ಯಾನೇಜ್‌ಮೆಂಟ್’ನವರು ಮದುವೆಯನ್ನು ವಹಿಸಿಕೊಂಡಿದ್ದಾರೆ. ರಾಜೇಶನ ಅಭಿಮಾನಿಗಳು ನೂರಾರು ಜನ ಮದುವೆಗೆ ಸಾಕ್ಷಿಯಾಗಿದ್ದಾರೆ. ರಾಜೇಶನ ಹಾಡಿಯ ಜನರನ್ನು ಹೊರತುಪಡಿಸಿ! ನಿಜ. ರಾಜೇಶನ ಕುಟುಂಬದ ಸಂಬಂಧಿಕರೂ ಒಳಗೊಂಡಂತೆ ಊರಿನ ಯಾರಿಗೂ ಮದುವೆಗೆ ಆಹ್ವಾನಿಸಿಯೇ ಇರಲಿಲ್ಲ!. ಇದರಿಂದಾಗಿ ಇಡೀ ಹಾಡಿಯ ಜನರು ಬೇಸರಗೊಂಡಿದ್ದಾರೆ. ಇನ್ನು ಸಿನಿಮಾದವರು ನೀಡಿದ ಐದು ಲಕ್ಷ ರೂಪಾಯಿಗಳಲ್ಲಿ ಒಂದು ಲಕ್ಷ ರೂಪಾಯಿಯನ್ನು ಅಮ್ಮನ ಹೆಸರಿಗೆ ಫಿಕ್ಸೆಡ್ ಮಾಡಿಸಿಡಲಾಗಿದೆ. ಉಳಿದ ಹಣವು ನೀರಿನಂತೆ ಖರ್ಚಾಗಿದೆ. ಅದು ಖಾಲಿಯಾದಾಗ ಕೊನೆಗೆ ತನ್ನ ಫಿಕ್ಸೆಡ್ ಹಣವನ್ನಾದರಿಸಿ ೭೫ ಸಾವಿರ ರೂಪಾಯಿ ಸಾಲವನ್ನೂ ತೆಗೆದುಕೊಂಡಿದ್ದಾನೆ. ಇದನ್ನು ತಿಳಿದ ರಾಜೇಶನ ತಂದೆಗೆ ಗಾಬರಿಯಾಗಿದೆ. ಟಿಎಸ್‌ಐನೊಂದಿಗೆ ಮಾತನಾಡಿದ ರಾಜೇಶ್ ತಂದೆ ಈ ಕುರಿತು ಕೆಲವೆ ತಿಂಗಳಲ್ಲಿ ಈ ಸಾಲದ ಬಡ್ಡಿ ಒಂದು ಲಕ್ಷ ಮುಟ್ಟಿ ಮತ್ತೊಂದು ಅಕೌಂಟ್‌ನಲ್ಲಿಟ್ಟಿರುವ ನಾಲ್ಕು ಲಕ್ಷ ರೂಪಾಯಿ ಫಿಕ್ಸೆಡ್‌ನ್ನೂ ತಿನ್ನಲು ಶುರುಮಾಡುತ್ತೆ ಅಂತ ಗೊತ್ಯಾಯ್ತು ಸರ್. ಹಿಂಗಾಗಿ ನಾನು ನನ್ನ ಉಳಿತಾಯದ ಹಣದಲ್ಲಿ ೫೦ ಸಾವಿರ ರೂಪಾಯಿ ತೆಗೆದು ಬ್ಯಾಂಕಿಗೆ ಕೊಟ್ಟು ಬಂದು ೩ ತಿಂಗಳಾಯ್ತು. ಆದರೆ ಅವರು ಅದನ್ನು ಇನ್ನೂ ಪಾಸ್‌ಬುಕ್‌ನಲ್ಲಿ ಬರೆದೇ ಇಲ್ಲ. ಆಸ್ಪತ್ರೆಯಿಂದ ಹೋದ ಕೂಡಲೇ ಆ ಕೆಲಸ ಮಾಡಬೇಕು ಎಂದು ತಮ್ಮ ಆತಂಕ ತೋಡಿಕೊಂಡರು.

ಪಲ್ಸಾರ್ ಬೈಕು, ಜನರೇಟರ್ , ಕರ್ಲಾನ್  ಬೆಡ್ಡು 
ರಾಜೇಶ ಲಕ್ಷಗಳನ್ನು ಗೆದ್ದು ಬರುವುದು ಖಾತ್ರಿಯಾದೊಡನೆ ಹಾಡಿಯ ಜನರಲ್ಲಿ ಒಂದು ಆಸೆ ಬಂದಿತ್ತು. ಒಂದು ಸಣ್ಣ ಪಾಲನ್ನಾದರೂ ರಾಜೇಶ ಹಾಡಿಯ ಎಲ್ಲಾ ಬಡವರಿಗೆ ನೀಡಬಹುದೇ ಎಂಬ ಆಸೆ ಅದು. ಆದರೆ ಹಣ ನೀಡುವುದಿರಲಿ ಹಾಡಿಯ ದೇವರಿಗೆ ದೇವಸ್ಥಾನ ಕಟ್ಟಿಸುವ ತನ್ನ ಹರಕೆಯನ್ನೂ ಮರೆತು ಐಶಾರಾಮಿ ದುಂದುವೆಚ್ಚದಲ್ಲಿ ತೊಡಗಿದ್ದ ರಾಜೇಶನನ್ನು ನೋಡಿ ಹಾಡಿಯವರು ಬೇಸರಿಸಿಕೊಂಡುಬಿಟ್ಟರು. 'ನಾವು ಹಿಂದೆ ಒಂದು ಸೇರು ರಾಗಿ ಸಿಕ್ಕರೆ ಗಂಜಿ ಮಾಡಿಕೊಂಡು ಇಡೀ ಹಾಡಿಯವರು ಸಮನಾಗಿ ಹಂಚಿಕೊಂಡು ಕುಡೀತಿದ್ದೋರು, ಕಾಡಿನಲ್ಲಿ ಸಿಕ್ಕಿದ ಗೆಡ್ಡೆಗೆಣಸು ಸಿಕ್ಕದ್ದನ್ನೆಲ್ಲಾ ಒಟ್ಟು  ಬೇಯಿಸಿ ಹಂಚಿಕೊಂಡು ತಿಂದೋರು ಸ್ವಾಮಿ. ಇಂತಾದ್ದರಲ್ಲಿ ರಾಜೇಶ ಹೀಗೆ ಮಾಡಿದಾಗ ಎಲ್ಲರಿಗೂ ಬೇಜಾರಾಗಿದ್ದು ನಿಜಾ ಸ್ವಾಮಿ' ಎನ್ನುತ್ತಾರೆ ಹಾಡಿಯ ಯಜಮಾನ ಚಿಕ್ಕಮರಿ. ಹಲವು ಹಾಡಿಗಳ ಜೇನುಕುರುಬ ಜನರೇ ಸೇರಿ ಪಕ್ಕದ ಬಾವಲಿ ಹಾಡಿಯಲ್ಲಿ ಆಯೋಜಿಸಿದ್ದ ಸನ್ಮಾನವೊಂದನ್ನು ತಿರಸ್ಕರಿಸಿದ್ದ ರಾಜೇಶ ನಾನು ಹಾಡಿಗೆ ಬರಬೇಕಾ? ಆಗೋದಿಲ್ಲ ಎಂದು ಅವಮಾನಿಸಿ ಕಳಿಸಿದ್ದ. ಇಷ್ಟಾದ ಮೇಲೂ ಈಗ ರಾಜೇಶ ಆಸ್ಪತ್ರೆಗೆ ಸೇರಿರುವ ಸುದ್ದಿ ತಿಳಿದು ಹಾಡಿಯ ಜನರೆಲ್ಲಾ ತಮ್ಮ ದೇವರಿಗೆ ಪೂಜೆ ಮಾಡಿದ್ದಾರೆ. ನಮ್ಮ ಹುಡುಗ ಬೇಗನೇ ಹುಷಾರಾಗಲಿ ಎಂದು ಬೇಡಿಕೊಂಡಿದ್ದಾರೆ. 

ನಾವು ಜೇನು ಕುರುಬ ಮಕ್ಕಳು...

ನಂಗ ಜೇನು ಕುರುಬ ಮಕ್ಕಳು ದೂರಿ ದೂರಿ
ನಂಗ ಕಾಡಿಗೆ ಅರಸರು ದೂರಿ ದೂರಿ
ನಂಗ ಹುಲಿಯ ಜೊತೆ ಹುಡುಗಾಟ ದೂರಿ ದೂರಿ
ನಂಗ ಆನೆ ಜೊತೆ ಐಲಾಟ ದೂರಿದೂರಿ
ನಂಗ ನವಿಲು ಜೊತೆ ನಲಿದಾಟ ದೂರಿ ದೂರಿ
ನಂಗ ಕಾಡಲಿ ಬದುಕವರು ದೂರಿ ದೂರಿ
ನಂಗ ಕತ್ತಲ ಲೋಕದಿ ಮಿಡಿತವರು ದೂರಿದೂರಿ...
ಎಂದು ಸಾಗುತ್ತದೆ ಜೇನುಕುರುಬರ ಹಾಡಿಯ ಹಾಡು. ದೇಶದ ಅತ್ಯಂತ ಪ್ರಾಚೀನ ಬುಡಕಟ್ಟುಗಳಲ್ಲಿ ಜೇನು ಕುರುಬ ಬುಡಕಟ್ಟು ಸಹ ಒಂದಾಗಿದೆ. ಈ ಹಿಂದೆ ಕಾಡಿನ ಅರಸರಾಗಿದ್ದ ಜೇನು ಕುರುಬರು ಎಂದೂ ಒಂದು ಕಡೆ ನೆಲೆ ನಿಲ್ಲುತ್ತಿರಲಿಲ್ಲ. ಒಂದೆಡೆಯಿಂದ ಮತ್ತೊಂದೆಡೆ ಅಲೆಯುತ್ತ ಜೇನು ಸಂಗ್ರಹಿಸುತ್ತ, ಗೆಡ್ಡೆ ಗೆಣಸು ಸಂಗ್ರಹಿಸುತ್ತ, ಕುಮರಿ ಬೇಸಾಯ ಮಾಡುತ್ತ, ಕರ್ನಾಟಕ-ಕೇರಳ-ತಮಿಳು ನಾಡುಗಳ ಗಡಿಭಾಗಗಳ ದಟ್ಟಾರಣ್ಯದಲ್ಲಿ ಅಲೆಮಾರಿಗಳಾಗಿ ಬದುಕಿದ್ದ ಸಮುದಾಯ ಇದು. ಆಗ ಅವರದ್ದು ಅತ್ಯಂತ ಕಷ್ಟದ ಬದುಕು. ಆದರೆ ಎಂದೂ ಸ್ವಾರ್ಥದ ಬದುಕಾಗಿರಲಿಲ್ಲ. ತೀರಾ ಇತ್ತೀಚೆಗೆ ಅವರು ಆಧುನಿಕತೆಗೆ ಒಡ್ಡಿಕೊಳ್ಳುವವರೆಗೂ ಸಾಮೂಹಿಕತೆ ಎನ್ನುವುದು ಅವರ ರಕ್ತದಲ್ಲಿತ್ತು. ಈಗಲೂ ಒಂದು ಮಟ್ಟಿಗಿದೆ. ನಾಳೆಯ ಚಿಂತೆ ಅವರಿಗಿಲಿಲ್ಲ. ಇಂದಿಗೆ ಇಂದೇ ಹುಡುಕಿಕೊಂಡು ಸಿಕ್ಕಷ್ಟು ಹಂಚಿಕೊಂಡು ತಿಂದು ತಮ್ಮ 
ಲಿಂಗಮ್ಮ, ರಾಜೇಶನ ಅಜ್ಜಿ
ಕಾಡಿನ ದೇವರುಗಳಾದ ತಾಳಬಳ್ಳಿ, ಕುಳಿತಳ ದೊರೆ, ಬಳ್ಳೆಗದ್ದೆ ತಾಯಿ, ಮಾಸ್ತ್ಯಮ್ಮರನ್ನು ಪೂಜಿಸಿಕೊಂಡು ಬದುಕಿದ್ದರು. ರಾಜೇಶನ ಅಜ್ಜಿ ಲಿಂಗಮ್ಮ ಟಿಎಸ್‌ಐನೊಂದಿಗೆ ಆಡಿದ ಈ ಮಾತು ಕೇಳಿ. "ನಮ್ಮ ಅರಮನೆ ಇದೇ ಸಾ. ನಿಮ್ಮರಮನೆ ನಮಗೆ ಆಗಲ್ಲ ಸಾ. ನಾವೆಂದೂ ಕಳ್ತನ ಮಾಡ್ದೋರಲ್ಲ ಸಾ. ಸರ್ಕಾರದೋರು ಬಂದು ಹಣ ಕೊಡ್ತೀವಿ ನೀವು ಕಾಡು ಬಿಟ್ಟು ಹೊರಗೆ ಹೋಗಿ ಅಂದರೆ ನಾವು ಹೋಗಕಾಗತ್ತಾ ಸಾ... ನಮಗೆ ಕರೆಂಟು ಕೊಡಿ, ನೀರು ಕೊಡಿ, ಮಕ್ಕಳಿಗೆ ಶಾಲೆ ಕೊಡಿ ಆದರೆ ಇಲ್ಲಿಂದ ಹೊರಗೆ ಕರೆದರೆ ಬೇಕಾದರೆ ವಿಷವನ್ನೇ ಕುಡೀತೀವಿ ಸಾ..".   ಮತ್ತೂ ಮುಂದುವರೆದು ಮಾತನಾಡಿದ ಅವರು "ನಂಗೆ ಹತ್ತು ಜನ ಮಕ್ಕಳು. ಆ ಕಾಲದಲ್ಲಿ ಆಪೇಸನ್ನು ಇಲ್ಲ ಸಾ. ಇದ್ದಿದ್ರೆ ನಾನು ಮೂರೇ ಮಕ್ಕಳನ್ನ ಮಾಡ್ಸಿಕೊಳ್ವೇನು. ನಮ್ ತಾತನ ಕಾಲದಲ್ಲಿ ಅವೆಲ್ಲ ಇಲ್ಲ. ಈಗ ಹೊಟ್ಟೆ ಕತ್ತರಸಿ ಬನ್ನಿ, ಅಂತ ಸುರುವಗಿರದು. ನಾನು ಗುಂಡು ಕಲ್ಲಿನಂಗೆ ಇವ್ನಲ್ಲ?  ಹತ್ತು ಮಕ್ಕಳು ಹೆತ್ರೂ ನಂಗೆ ಯಾವ ರೋಗ ಬಂದಿಲ್ವಲ್ಲ? ಈಗಿನವರು ಅಲ್ವಾ ರೋಗ ನೋಡ್ತಾ ಇರಾದು? ಲಕ್ಷ ಲಕ್ಷ ಡಾಕುಟ್ರಿಗೆ ಸುರಿಯಾದು? ಇಲ್ಲಿ ನಮಗೆ ಸೊಪ್ಪು ತಿಂದ ಮೇಲೆ ನಮಗೆ ಯಾವ ರೋಗ ಬರಲ್ಲ. ಪ್ಯಾಟೇಲೇ ರೋಗ. ನಿಮ್ ರೋಗ ನಂಗ ಹತ್ತಕಳದು ನನ್ನ ರೋಗ ನಿಮಗ ಹತ್ತಕಳದು. ನಾವು ಗಲೀಜು ನೀರು ಕುಡಿಯೋಕಾಗಲ್ಲ. ನಾವು ಗುಂಡಿ ಮಾಡಿಕಂಡು ಹೊಸ ನೀರನ್ನೇ ತೆಗೆಯೋದು. ಅರ್ಥ ಮಾಡ್ಕಳಿ. ಹಿಂಗೆ ಬದುಕದವರು ನಾವ್ ಅಲ್ಲೆಲ್ಲ ಹೋಗಿ ಬದುಕಕಾಯ್ತದ ಸಾ? ನಮ್ಮನ್ನು ಹಾಳು ಮಾಡಕಿರದು ಗೌರ‍್ಮೆಂಟು. ನಮ್‌ಗೆ ಅದೆಲ್ಲಾ ಬ್ಯಾಡ. ನನ್ನ ರಾಜೇಶನನ್ನ ಒಳ್ಳೇದ ಮಾಡಿ ಕಳಿಸಿ. ಅಷ್ಟೇ ಸಾಕು ಸಾ ನಮಗೆ.."   ವಾಸ್ತವದಲ್ಲಿ ಜೇನುಕುರುಬರು ಕಾಡಿನ ಕುರಿತ ಅಪಾರ ಜ್ಞಾನ ಹೊಂದಿರುವಂತವರು. ಕಾಡಿನಲ್ಲಿ ಜೇನು ಕೀಳಲು ಹೋಗುವಾಗ ಬಾಯಾರಿತೆಂದರೆ ಇಂತದ್ಧೇ ಮರದ ಕಾಂಡದಲ್ಲಿ ನೀರಿದೆ ಹುಡುಕಿ ಆ ಮರವನ್ನು ಏರಿ ನೀರಿನ ಬುಗ್ಗೆ ಚಿಮ್ಮಿಸುವಷ್ಟು ಪಕ್ಕಾ ಪ್ರತಿಭೆ ಅವರದ್ದು. ಆದರೆ ಬುದ್ಧಿ ಮಾತ್ರ ಬಲಿತು ಹೃದಯವನ್ನೇ ಕಳೆದುಕೊಂಡ ಪೇಟೆಯ ಕೆಲ ವಿಕೃತ ಮನಸ್ಸಿನವರು ಇಂತಹ ಆದಿವಾಸಿಗಳನ್ನು ಇಲ್ಲಿ ತಂದು ಅವರನ್ನು ರಿಯಾಲಿಟಿ ಶೋಗಳಲ್ಲಿ ಅವಮಾನಿಸಿದ್ದ ರೀತಿ ಮಾತ್ರ ಅಕ್ಷಮ್ಯವಾದದ್ದು. ಇದೇ ವಹಿನಿಯಲ್ಲಿ ನಂತರ ಪ್ಯಾಟೆ ಮಂದಿ ಕಾಡಿಗೆ ಬಂದ್ರು ಎಂಬ ರಿಯಾಲಿಟಿ ಶೋ ಸಹ ಆದಿವಾಸಿಗಳನ್ನು ಹಳೆ ಶಿಲಾಯುಗದ ಜನರಂತೆ ತೋರಿಸಿ ಆದಿವಾಸಿ ಬದುಕನ್ನು ವಿಕೃತವಾಗಿ ತೋರಿಸಿದ್ದನ್ನು ನೆನಪಿಸಿಕೊಳ್ಳಬಹುದು. 
ಬಳ್ಳೇಹಾಡಿ
ವಾಸ್ತವದಲ್ಲಿ ಜೇನುಕುರುಬರಂತಹ ಬುಡಕಟ್ಟುಗಳು ಇಂದು ಅತ್ಯಂತ ಸಂಕಷ್ಟದಲ್ಲಿ ಸಿಲುಕಿವೆ. ಬಂಡೀಪುರ, ನಗರಹೊಳೆ ಅಭಯಾರಣ್ಯಗಳಲ್ಲಿನ ಐವತ್ತಕ್ಕೂ ಹೆಚ್ಚು ಜೇನುಕುರುಬ ಹಾಡಿಗಳನ್ನು ಈಗಾಗಲೇ ಎತ್ತಂಗಡಿ ಮಾಡಿರುವ ಕಾರಣ ಅವರಲ್ಲಿ ಅನೇಕರು ತಮ್ಮ ಸಾಂಪ್ರದಾಯಿಕ ಬದುಕಿನ ಮೂಲಗಳಿಂದ ದೂರವಾಗಿ ಹೊರಜಗತ್ತಿನ ಬದುಕಿಗೂ ಹೊಂದಿಕೊಳ್ಳಲಾಗದೆ ಸೋತುಸುಣ್ಣವಾಗುತ್ತಿದ್ದಾರೆ. ಬಳ್ಳೇ ಹಾಡಿ ಮತ್ತು ಸುತ್ತಲಿನ ಹಾಡಿಗಳ ಜನರು ಹೊರಹೋಗಲು ಒಪ್ಪಿಲ್ಲ. ಆದರೆ ಅರಣ್ಯ ಇಲಾಖೆಯ ನಿರ್ಬಂಧಗಳು ಅವರನ್ನು ಇದ್ದಲ್ಲಿಯೇ ಅಸಹಾಯಕರನ್ನಾಗಿ ಮಾಡಿವೆ. ವರ್ಷದಲ್ಲಿ ಮೂರುತಿಂಗಳು ಕಾಲ ಕೊಡಗಿನ ಕಾಫಿ ಎಸ್ಟೇಟುಗಳಿಗೆ ಹೋಗಿ ಒಂದಷ್ಟು ಕಾಸು ಮಾಡಿಕೊಂಡು ಬರುತ್ತಾರಾದರೂ ಅದು ಅವರ ಬದುಕಿನ ನಿರ್ವಹಣೆಗೆ ಸಾಲುತ್ತಿಲ್ಲ. ೨೦೦೬ರ ಅರಣ್ಯ ಹಕ್ಕು ಕಾಯ್ದೆ ಅವರಿಗೆ ತಮ್ಮ ಕಾಡಿನ ನೆಲೆಗಳನ್ನು ಖಾಯಂಗೊಳಿಸಿದೆಯಾದರೂ ಅದೂ ಸಹ ಈ ಜೇನುಕುರುಬರ ಸಾಮೂಹಿಕ ಬದುಕನ್ನು ಅರ್ಥಮಾಡಿಕೊಳ್ಳಲು ವಿಫಲವಾಗಿದೆ. ಈ ಹಿಂದೆ ಮೈಸೂರಿನ ಕಮಿಷನರ್ ಆಗಿದ್ದ ಹರ್ಷಗುಪ್ತ ಈ ಜನರನ್ನು ಅರಿಯಲು ಒಂದಷ್ಟು ಪ್ರಯತ್ನಿಸಿದ್ದರು ಮಾತ್ರವಲ್ಲ ಅವರ ಸಮಸ್ಯೆಗಳಿಗೆ ಸ್ಪಂದಿಸಲೂ ಯತ್ನಿಸಿದ್ದರು. ಅವರು ವರ್ಗಾವಣೆಯಾದಮೇಲೆ ಅದೂ ಈಗ ಅಂತಹ ಯಾವ ಪ್ರಯತ್ನಗಳೂ ನಡೆದಿಲ್. ತಮ್ಮ ಬದುಕುವ ಹಕ್ಕನ್ನು ರಕ್ಷಿಸಿಕೊಳ್ಳುವ ಹಿನ್ನೆಲೆಯಲ್ಲಿ ಜೇನುಕುರುಬರು ಸಂಘಟಿತರಾಗಿ ಹೋರಾಟವನ್ನೂ ನಡೆಸಿಕೊಂಡು ಬಂದಿದ್ದಾರೆ. ಪರಿಣಾಮವಾಗಿ ಸರ್ಕಾರವು ಡಾ. ಮುಜಾಫರ್ ಅಸ್ಸಾದಿಯವರ ನೇತೃತ್ವದಲ್ಲಿ ನೇಮಿಸಿದ್ದ ಅಧ್ಯಯನ ಸಮಿತಿಯು ಮಧ್ಯಂತರ ವರದಿಯು ಒಂದಷ್ಟು ಆಶಾಭಾವನೆಯನ್ನು ಮೂಡಿಸಿದೆ. ಅದರ ಪೂರ್ಣ ವರದಿ ಇನ್ನೂ ಬರಬೇಕಿದೆ ಎಂಬ ಅಭಿಪ್ರಾಯ ಸಮುದಾಯದ ಹೋರಾಟಗಾರ ಸೋಮಣ್ಣ ಅವರದ್ದು. ಟಿಎಸ್‌ಐನೊಂದಿಗೆ ಮಾತನಾಡಿದ ಸೋಮಣ್ಣ  "೨೦೦೬ರ ಅರಣ್ಯ ಹಕ್ಕು ಕಾಯ್ದೆ ವಯುಕ್ತಿಕ ಆಸ್ತಿಯನ್ನು ಮಾತ್ರ ಗುರುತಿಸುವುದರಿಂದ ಜೇನು ಕುರುಬರಿಗೆ ಅನ್ಯಾಯವಾಗಿದೆ. ಅದರ ಪ್ರಕಾರ ನಾವು ಜೇನು ಸಂಗ್ರಹಿಸಬಹುದಾದರೂ ಅದನ್ನು ಮಾರುವಂತಿಲ್ಲ. ಈ ಕಾರಣಗಳಿಂದ ನಾವು ನಮ್ಮ ಸಮುದಾಯಕ್ಕೆ ಸಾಮೂಹಿಕ ಆಸ್ತಿಯನ್ನು ನೀಡಿ ಹಕ್ಕುಪತ್ರಗಳನು ನೀಡಲು ಒತ್ತಾಯಿಸುತ್ತಿದ್ದೇವೆ "ಎಂದರು. 

ಬಿ.ಟಿ.ಪೋಷಿಣಿ  ಹೀಗೆನ್ನುತ್ತಾರೆ....

ಬಿ.ಟಿ. ಪೋಷಿಣಿ,  ಸ್ವಾಮಿ ವೇಕಾನಂದ ಯೂತ್ ಮೂವ್ಮೆಂಟ್  ಸಂಘಟಕಿ
"ಜೇನುಕುರುಬರಿಗೆ ಯಾವತ್ತೂ ವಯುಕ್ತಿಕ ಆಸ್ತಿ ಎಂಬುದಿಲ್ಲ. ಈ ಅರಣ್ಯ ಹಕ್ಕು ಕಾಯ್ದೆ ಇತರೆ ಆದಿವಾಸಿಗಳಿಗೆ ಅನುಕೂಲ ಮಾಡಿದ್ದರೂ ಜೇನುಕುರುಬರು ಮಾತ್ರ ಅನ್ಯಾಯಕ್ಕೊಳಗಾಗಿದ್ದಾರೆ. ಅವರ ಗುಡಿಸಲು ಬಿಟ್ಟರೆ ಅವರ ಜಮೀನು ಇಲ್ಲ. ಕಾನೂನು ಏನಾದರೂ ಬದಲಾಗದ ಹೊರತು ಅವರಿಗೆ ಬದುಕು ಕಷ್ಟ. ಅವರ ಬದುಕು ಕಾಡಿನಲ್ಲೂ ಕಷ್ಟ ಹೊರಗೂ ಕಷ್ಟ ಎಂಬಂತಾಗಿದೆ.  ನೇರವಾಗಿ ಅವರಿಗೆ ಬಿಟ್ಟು ಹೋಗಿ ಅನ್ನದಿದ್ದರೂ ಬೇರೆ ಬೇರೆ ತಂತ್ರಗಳ ಮೂಲಕ ಹೊಹೋಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ"- ಪೋಷಿಣಿ. ಬಿ.ಟಿ. ವಿವೇಕಾನಂದ ಯೂಥ್ ಮೂವ್‌ಮೆಂಟ್, ಸರಗೂರು. 



ಬಳ್ಳೇಹಾಡಿಯ ಹುಡುಗರು
ಬಳ್ಳೇಹಾಡಿಯ ಪ್ರಾಥಮಿಕ ಶಾಲೆ

 ಧರ್ಮ V/s ರಿಲಿಜನ್ ಧರ್ಮ ಎಂತರೆ ಒಳಿತು ಮಾಡುವುದು, ನೀತಿ ಮಾರ್ಗದಲ್ಲಿ ನಡೆಯುವುದು ಎಂದು ನೀವು ಭಾವಿಸುವುದಾದರೆ ಅಂತಹ ತತ್ವ ಹೇಳಿದ ಧರ್ಮಗಳು ಮೂರು. -  1. ಬೌದ್ಧ ಧರ್...

ಮರದೊಂದು ಎಲೆ ನಾನು..

ನನ್ನ ಫೋಟೋ
A Writer, Researcher, Journalist and Activist. Born and brought up from Kugwe a village near Sagara, Shimoga district of Karnataka state. Presently working as the Editor In Chief of PEEPAL MEDIA /PEEPAL TV.