ಜೂನ್ 22, 2012

ಡಾ.ರಾಜ್‌ರನ್ನು ಇಂದು ನೆನೆವುದೆಂದರೆ...







ಇಲ್ಲಿಗೆ ನೂರನೇ ವರ್ಷಕ್ಕೆ ಹಿಂದೆ ಭಾರತೀಯ ನೆಲದಲ್ಲಿ ಮೊತ್ತಮೊದಲ ಸಿನಿಮಾ ಚಿತ್ರೀಕರಣ ಆರಂಭಗೊಂಡಿತ್ತು. ದಾದಾ ಸಾಹೇಬ್ ಫಾಲ್ಕೆ ನಿರ್ದೇಶನದ ಆ ರಾಜಾ ಹರಿಶ್ಚಂದ್ರ ಸಿನಿಮಾ ತೆರೆಕಂಡ ಈ 99 ವರ್ಷಗಳಲ್ಲಿ ಭಾರತೀಯ ಸಿನಿಮಾ ಇಂದು ಬಹು ಎತ್ತರಕ್ಕೆ ಬೆಳೆದು ನಿಂತಿದೆ. ಹಿಂದಿ ಚಿತ್ರರಂಗದ ಬಾಲಿವುಡ್ ಅಲ್ಲದೇ ಎಲ್ಲಾ ರಾಜ್ಯಗಳ ಮುಖ್ಯಭಾಷೆ ಹಾಗೂ ಹಲವಾರು ಉಪಭಾಷೆಗಳ ಸಿನಿಮಾ ರಂಗಗಳೂ ಏಳಿಗೆ ಕಂಡಿವೆ. ಈ ಹಿನ್ನೆಲೆಯಲ್ಲಿ ಕನ್ನಡ ಚಿತ್ರರಂಗ ಇಡೀ ದೇಶದ ಚಿತ್ರರಂಗಕ್ಕೆ ನೀಡಿರುವ ಕೊಡುಗೆಯೂ ಅಪಾರವಾದದ್ದು. ಅದರಲ್ಲೂ ಕನ್ನಡದ ನಟಸಾರ್ವಭೌಮ ದಿ. ಡಾ. ರಾಜ್‌ಕುಮಾರ್ ಅವರು ಕನ್ನಡಚಿತ್ರರಂಗವನ್ನು ರಾಷ್ಟ್ರಮಟ್ಟದಲ್ಲೂ ಪ್ರತಿನಿಧಿಸಬಲ್ಲ ಮೇರುನಟ. "ಡಾ. ರಾಜ್‌ಕುಮಾರ್‌ನಂತಹ ನಟ ಏನಾದರೂ  ಬಾಲಿವುಡ್‌ನಲ್ಲಿದ್ದಿದ್ದರೆ ನಮ್ಮಂವರು ಯಾವ ಕಡೆಗೂ ಇರುತ್ತಿರಲಿಲ್ಲ" ಎಂದು ಬಾಲಿವುಡ್ ಸಾಮ್ರಾಟ ಅಮಿತಾಬ್ ಬಚನ್ ಅವರೇ ಹಿಂದೊಮ್ಮೆ ಆಡಿದ್ದ ಮಾತನ್ನು ಗಮನಿಸಿದರೆ ರಾಜ್‌ಕುಮಾರ್ ಅವರ ಸ್ಥಾನವನ್ನು ಅರಿಯಬಹುದು. ಕರ್ನಾಟಕದಲ್ಲಿ 1921ರಿಂದಲೇ ಮೂಕಿಚಿತ್ರಗಳು ಆರಂಭಗೊಂಡಿದ್ದವು. 1934ರಲ್ಲಿ ಮೊತ್ತಮೊದಲ ಟಾಕಿ ಚಿತ್ರ ’ಸತಿ ಸುಲೋಚನ’ ಬಿಡುಗಡೆಗೊಂಡಿತ್ತು. ಆದರೆ ಆರಂಭ ಕಾಲದಲ್ಲಿ ಕನ್ನಡ ಚಿತ್ರಗಳು ಮದ್ರಾಸಿನ ಸಿನಿಮಾ ನಿರ್ಮಾಪಕರನ್ನೇ ಅವಲಂಬಿಸಬೇಕಾಗಿತ್ತು. ಅದೇ ಸಂದರ್ಭದಲ್ಲಿ ಪರಭಾಷಾ ಚಿತ್ರಗಳ ಡಬ್ಬಿಂಗ್ ಕೂಡಾ ಅಲ್ಪಸ್ವಲ್ಪ ಪ್ರಮಾಣದ ಕನ್ನಡ ಚಿತ್ರಗಳ ಅಸ್ತಿತ್ವವನ್ನೇ ಅಲುಗಾಡಿಸುವ ಪರಿಸ್ಥಿತಿ ಅದು. ಇಂತಹ ಸಂದರ್ಭದಲ್ಲಿ ಕನ್ನಡ ಸಿನಿಮಾಗಳಿಗೆ ಭದ್ರ ಬುನಾದಿ ಹಾಕಿದ ಹಲವಾರು ಮೇರು ಕಲಾವಿದರಲ್ಲಿ ಡಾ.ರಾಜ್‌ಕುಮಾರ್ ಕೂಡಾ ಪ್ರಮುಖರಾಗಿ ನಿಲ್ಲುತ್ತಾರೆ. 
ಗುಬ್ಬಿ ವೀರಣ್ಣನವರ ನಾಟಕ ಕಂಪನಿಯಲ್ಲಿ ನಟಿಸುತ್ತಿದ್ದ ಸಿಂಗನೆಲ್ಲೂರು ಪುಟ್ಟಸ್ವಾಮಯ್ಯನಯವರ ಪುತ್ರ ಮುತ್ತುರಾಜ್ ತಾನೂ ಕೂಡ ಆಗಾಗ ನಾಟಕದ ಪಾತ್ರಗಳಲ್ಲಿ ಬಣ್ಣ ಹಾಕುತ್ತಿದ್ದರು. ಹೀಗೆ ರಂಗನಟನಾಗಿದ್ದ ಮುತ್ತುರಾಜ ಸಿನಿಮಾ ನಿರ್ದೆಶಕ ಎಚ್.ಎಲ್.ಎನ್.ಸ್ವಾಮಿಯವರ ಕಣ್ಣಿಗೆ ಬಿದ್ದಿದ್ದೇ ಬಿದ್ದಿದ್ದು ರಾತ್ರೋರಾತ್ರಿ ’ರಾಜಕುಮಾರ’ನಾಗಿ ಬಿಟ್ಟರು. ಓದಿದ್ದು ಮೂರೋ ನಾಲ್ಕೋ ನೆನಪಿರದಿದ್ದರೂ ಮೈಸೂರು ವಿದ್ಯಾನಿಲಯ ನೀಡಿದ ಡಾಕ್ಟರೇಟ್ ಪದವಿಯನ್ನೂ ಮುಡಿಗೇರಿಸಿಕೊಂಡು ಡಾ.ರಾಜ್‌ಕುಮಾರ್ ಆದರು. ರಾಜ್ ಅಭಿನಯದ ಚೊಚ್ಚಲ ಚಿತ್ರ ಬೇಡರ ಕಣ್ಣಪ್ಪ ರಾಷ್ಟ್ರಪ್ರಶಸ್ತಿಯನ್ನೂ ಗಳಿಸಿ ದೊಡ್ಡ ಹೆಸರು ಮಾಡಿತ್ತು. ಅದರಲ್ಲಿನ ಶಿವಭಕ್ತ ಕಣ್ಣಪ್ಪನಿಂದ ಶುರುವಾದ ’ಅಣ್ಣಾವ್ರ’ ಸಿನಿಯಾನವು ಕೊನೆಗೆ ’ಶಬ್ದವೇದಿ’ಯ ಪೋಲೀಸ್ ಅಧಿಕಾರಿಯವರಗೂ ನಡೆಯಿತು. ತಮ್ಮ ಅಭಿನಯದ ಒಟ್ಟು ೨೦೫ ಸಿನಿಮಾಗಳಲ್ಲಿ ನೂರಾರು ಬಗೆಯ ಪಾತ್ರಗಳಿಗೆ ಜೀವ ನೀಡಿದ ರಾಜ್‌ಕುಮಾರ್‌ಗೆ ಅಭಿನಯದಲ್ಲಿ ಸರಿಸಾಟಿಯಾಗುವವರು ಯಾರೂ ಇಲ್ಲವೆಂದೇ ಹೇಳಬೇಕು. 
ಡಾ.ರಾಜ್ ತಮ್ಮ ಚಿತ್ರಗಳಲ್ಲಿ ಶೃಂಗಾರ ರಸದ, ರಸಿಕತೆಯ ಪಾತ್ರಗಳಿಗೆ ಜೀವ ತುಂಬುತ್ತಿದ್ದ ರೀತಿ ಅನನ್ಯ. ಅದೇ ರೀತಿ ಭಕ್ತಿಪ್ರಧಾನ ಪಾತ್ರಗಳಲ್ಲಿರಲಿ ಅಥವಾ ದುಃಖಪ್ರಧಾನ ಪಾತ್ರಗಳಲ್ಲಿರಲಿ ಅವರು ಆ ಪಾತ್ರವೇ ತಾವಾಗಿ ಅಭಿನಯಿಸುತ್ತಿದ್ದರು. ಭಕ್ತಕುಂಬಾರ ಸಿನಿಮಾದ ’ಗೋರ’ ಪಾತ್ರದ ತಲ್ಲೀನತೆಯನ್ನು ಯಾರಿಗಾದರೂ ಮರೆಯಲು ಸಾಧ್ಯವೇ? ಅಂತೆಯೇ ಪುರಣಾ ಕತೆಗಳ ಶೌರ್ಯಪ್ರಧಾನ ಪಾತ್ರಗಳಲ್ಲಿನ ಅವರ ಅಭಿನಯವು ಒಂದು ಅದ್ಭುತ ಅನುಭೂತಿಯನ್ನು ನೋಡುಗರಿಗೆ ಒದಗಿಸುವಂತದ್ದು. ಇಂದಿನ ಬಹುತೇಕ ನಟರಿಗೆ ಡಾ.ರಾಜ್ ಎಂದಿಗೂ ಒಂದು ಸರಿಗಟ್ಟಲಾಗದ ಪ್ರತಿಮೆ ಮಾತ್ರವಾಗಿ ನಿಲ್ಲಬಹುದೇ ವಿನಃ ಇತರರಿಗೆ ರಾಜ್‌ರನ್ನು ಪ್ರತಿಸ್ಪರ್ಧಿಯಾಗಿಸಿಕೊಳ್ಳಲು ಎಂದಿಗೂ ಸಾಧ್ಯವಿಲ್ಲ. ಅಭಿನಯದಲ್ಲಿ ಅವರು ಮೌಂಟ್ ಎವರೆಷ್ಟ್‌ನಂತೆ. 
ಗಾಯನದಲ್ಲಾದರೂ ಅಷ್ಟೆ. ಮೂಲತಃ ಗಾಯಕರಲ್ಲದಿದ್ದರೂ ತಮ್ಮ ಬಹುತೇಕ ಸಿನಿಮಾಗಳಿಗೆ ತಾವೇ ಹಾಡುತ್ತಿದ್ದ ರಾಜ್ ನಂತರದಲ್ಲಿ ಕರ್ನಾಟಕ ಸಂಗೀತವನ್ನು ಅಭ್ಯಸಿಸಿದ್ದರು. ಜೀವನ ಚೈತ್ರ ಚಿತ್ರದ 'ನಾದಮಯ ಲೋಕವೆಲ್ಲಾ’ ಗೀತಗಾಯನ ನಂತರ ರಾಷ್ಟ್ರಪ್ರಶಸ್ತಿಗೂ ಭಾಜನವಾಗಿದ್ದು ಅವರ ಹಾಡುಗಾರಿಕೆಯ ಶಕ್ತಿಗೆ ಸಾಕ್ಷಿಯಾಗಿ ನಿಲ್ಲುತ್ತದೆ. 
ತಮ್ಮ ಒಂದೇ ಒಂದು ಸಿನಿಮಾದಲ್ಲಿ ಸಿಗರೇಟು ಸೇದುವ ಅಥವಾ ಕುಡಿಯುವ ಚಟವುಳ್ಳ ಪಾತ್ರಗಳಲ್ಲಿ ರಾಜ್ ಅಭಿನಯಿಸದಿರಲು ಕಾರಣ ಸಿನಿಮಾಗಳು ಯುವಜನತೆಯ ಮನಸ್ಸಿನ ಮೇಲೆ ಬೀರಬಹುದಾದ ಪರಿಣಾಮದ ಬಗ್ಗೆ ಅವರಿಗಿದ್ದ ಕಳವಳ. ತರುಣರು ದಾರಿತಪ್ಪಬಾರದೆಂಬ ಕಾಳಜಿ. ಅಂತೆಯೇ ಅವರ ಅತ್ಯುತ್ತಮ ಚಿತ್ರಗಳ ಸಾಲಿನಲ್ಲಿ ನಿಲ್ಲುವ ಸಾಕ್ಷಾತ್ಕಾರ, ಕಸ್ತೂರಿ ನಿವಾಸ, ಬಂಗಾರದ ಮನುಷ್ಯ ಇಂದಿಗೂ ಪ್ರತಿಯೊಬ್ಬರ ಹೃದಯವನ್ನೂ ಕಲಕಿಬಿಡುವಂತಹ ಕಥಾವಸ್ತುವನ್ನುಳ್ಳ ಚಿತ್ರಗಳು. ಬಂಗಾರದ ಮನುಷ್ಯದ ರಾಜೀವಪ್ಪ ಇಂದಿಗೂ ಸಾಧನೆಯ ಕೆಚ್ಚು ಮತ್ತು ತ್ಯಾಗದ ಪ್ರತೀಕವಾಗಿ ತರುಣರಿಗೆ ಮಾದರಿಯಾಗಬಲ್ಲ ಪಾತ್ರ. ಸ್ವತಃ ಯೋಗಪಟುವಾಗಿದ್ದ ಅವರು ತಮ್ಮ ಯೋಗಸಾಮರ್ಥ್ಯವನ್ನು ಕಾಮನಬಿಲ್ಲು ಸಿನಿಮಾದ ಮೂಲದ ಪ್ರದರ್ಶಿಸಿ ತರುಣರಲ್ಲಿ ಯೋಗಾಭ್ಯಾಸದ ಸಂದೇಶವನ್ನೂ ನೀಡಿದ್ದರು ರಾಜ್. ಕೇವಲ ಪಾತ್ರಗಳಲ್ಲಿ ಮಾತ್ರವಲ್ಲದೇ ನಿಜಜೀವನದಲ್ಲೂ ಹಲವಾರು ಸಂಸ್ಕಾರಗಳನ್ನು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಪ್ರತಿಯೊಬ್ಬರಲ್ಲಿರಬೇಕಾದ ಆದರೆ ಬಹಳ ವಿರಳವಾಗಿ ಕಾಣುವಂತಹ ವಿನೀತತೆಯನ್ನು ರಾಜ್‌ಕುಮಾರ್ ಅಳವಡಿಸಿಕೊಂಡಿದ್ದರು. ತಮ್ಮೆಲ್ಲ ಒಳ್ಳೆಯತನಗಳ ಶ್ರೇಯಸ್ಸು ತಮ್ಮ ತಂದೆ ಪುಟ್ಟಸ್ವಾಮಯ್ಯನವರಿಗೇ ಸಲ್ಲುತ್ತದೆಂದು ಅವರು ಅಷ್ಟೇ ವಿನೀತರಾಗಿ ಹೇಳುತ್ತಿದ್ದರು.
ಕನ್ನಡತನ, ಕನ್ನಡಭಾಷೆಗಳೊಂದಿಗೆ ಡಾ.ರಾಜ್ ಎಂದಿಗೂ ಒಂದರೊಳಗೊಂದು ಬಿಡಿಸಲಾಗದಂತೆ ಬೆರೆತು ಹೋಗಿರುವಂತವು. ೮೦ರ ದಶಕದಲ್ಲಿ ಕನ್ನಡದ ಶ್ರೇಷ್ಠ ಚಿಂತಕ ಶಂ.ಭಾ.ಜೋಷಿಯವರ ನೇತೃತ್ವದಲ್ಲಿ ಆರಂಭಗೊಂಡ ಭಾಷಾಷಳವಳಿಗೆ ಬೆಂಬಲ ನೀಡಲು ದೊಡ್ಡ ಸಾಹಿತಿವರೇಣ್ಯರೇ ಹಿಂದೇಟು ಹಾಕುತ್ತಿದ್ದರೂ ಡಾ.ರಾಜ್‌ಕುಮಾರ್ ಹಿಂದೆಮುಂದೆ ನೋಡದೇ ಮದ್ರಾಸಿನಲ್ಲಿ ಚಿತ್ರೀಕರಣ ಸ್ಥಳದಿಂದಲೇ ಬೆಂಬಲ ಘೋಷಿಸಿ ನಂತರದಲ್ಲಿ ನೇರವಾಗಿ ಪಾಲ್ಗೊಂಡು ಚಳವಳಿಗೂ ಒಂದು ರಭಸ ತುಂಬಿದ್ದರು. "ಸಾಹಿತಿಗಳು, ಶಿಕ್ಷಕರು ಆರಂಭಿಸಿದ್ದ ಗೋಕಾಕ್ ಚಳವಣಿಗೆ ಕಸುವು ಬಂದದ್ದು ರಾಜ್‌ಕುಮಾರ್ ಅವರು ಸ್ವಯಂ ಪ್ರೇರಣೆಯಿಂದ ಚಳವಳಿಗೆ ಧುಮುಕಿದ ಮೆಲೆ. ನಂತರದಲ್ಲಿ ಚಳವಳಿಗೆ ಒಂದು ಸಾಂಸ್ಕೃತಿಕ ಆಯಾವಮ ದೊರಕಿತ್ತು ಮಾತ್ರವಲ್ಲದೇ ಎಲ್ಲಾ ಕಡೆಗಳಿಂದ ಬೆಂಬ ಬಂತು. ಕೊನೆ ಸರ್ಕಾರವು ಚಳವಳಿಕಾರರನ್ನು ಮಾತುಕತೆಗೆ ಆಮಂತ್ರಿಸಿ ಗೋಕಾಕ್ ಸೂತ್ರವನ್ನೂ ಒಪ್ಪಿಕೊಂಡಿತು" ಎನ್ನುತ್ತಾರೆ ಈ ಕುರಿತು ಟಿಎಸ್‌ಐನೊಂದಿಗೆ ಮಾತನಾಡಿದ ಸಾಹಿತಿ ಚಂದ್ರಶೇಖರ್ ಪಾಟೀಲ್ (ಚಂಪಾ). 
ರಾಜ್‌ಕುಮಾರ್ ಇಲ್ಲಿ ಕರ್ನಾಟಕದಲ್ಲಿ ತಮ್ಮ ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗಲೇ ನಮ್ಮ ಅಕ್ಕಪಕ್ಕದ ರಾಜ್ಯಗಳಾದ ಆಂಧ್ರ ಮತ್ತು ತಮಿಳುನಾಡುಗಳಲ್ಲಿ ಎನ್‌ಟಿಆರ್ ಮತ್ತು ಎಂಜಿಆರ್ ಕೂಡಾ ಜನಪ್ರಿಯತೆಹೊಂದಿದ್ದರು. ಇವರಿಬ್ಬರೂ ರಾಜಕೀಯಕ್ಕೆ ಧುಮುಕಿ ತಮಗಿದ್ದ ಜನಪ್ರಿಯತೆಯನ್ನು ಮತಗಳಾಗಿ ಪರಿವರ್ತಿಸಿಕೊಂಡು ಅಧಿಕಾರದ ಗದ್ದುಗೆಯೇರಿ ತಾವು ಒಂದು ಮಟ್ಟಕ್ಕೆ ಜನವಿರೋಧಿಯಾಗಿ ಪರಿವರ್ತನೆಗೊಂಡವರು. ರಾಜ್ಯದ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರೊಂದಿಗೆ ಬೀಗತನ ಹೊಂದಿದ್ದರೂ ಸಹ ತಾವು ಮಾತ್ರ ರಾಜಕೀಯದಿಂದ ಬಹುದೂರವುಳಿದು ಪಕ್ಷ, ಜಾತಿ, ಮತಗಳೆಲ್ಲದರಾಚೆ ಜನಪ್ರೀತಿಯನ್ನು ಇಂದಿನವರೆಗೂ ಕಾಯ್ದುಕೊಂಡವರು ರಾಜ್.

ಕನ್ನಡದ ಮತ್ತು ಕರ್ನಾಟಕದ ಮೇಲಿನ ಡಾ.ರಾಜ್ ಅವರ ಅಭಿಮಾನಕ್ಕೆ ಪ್ರತಿಯಾಗಿ ಕನ್ನಡಿಗರಿಗೆ ರಾಜ್ ಮೇಲಿದ್ದ ಅಭಿಮಾನವೆಂತಾದ್ದು ಎಂಬುದು ಎರಡು ಸಲ ಅನಾವರಣಗೊಂಡಿದೆ. ಒಂದು 2000ನೇ ಇಸವಿಯ ಜೂನ್ 30ರಂದು ವೀರಪ್ಪನ್ ರಾಜ್ ಅವರನ್ನು ಅಪಹರಿಸಿದ್ದ ಒಂದು ಸಂದರ್ಭ ಮತ್ತು 2006ರ ಏಪ್ರಿಲ್ 12ರಂದು ರಾಜ್ ತೀರಿಕೊಂಡ ದಿನ. ಎರಡೂ ಸಂದರ್ಭಗಳಲ್ಲಿ ರಾಜ್ ಮೇಲಿನ ಅಭಿಮಾನ ಹಿಂಸೆಯ ರೂಪವನ್ನೇ ಪಡೆದುಕೊಂಡಿದ್ದು ನಮ್ಮ ಆಡಳಿತ ಅವ್ಯವಸ್ಥೆಗೆ ಹಿಡಿದ ಕನ್ನಡಿಯಾದರೂ ಅದು ಭಾವುಕ ಕನ್ನಡಿಗರ ಮನಸ್ಸಿಗೆ ಹಿಡಿದ ಕನ್ನಡಿಯೂ ಹೌದು. ರಾಜ್‌ರನ್ನು ಕಳೆದುಕೊಂಡಾಗ ಸಹಸ್ರ ಸಹಸ್ರ 'ಅಭಿಮಾನಿ ದೇವರು’ ಬೀದಿಗಿಳಿದರು. ನಟನೊಬ್ಬ ತೀರಿಕೊಂಡಾದ ಈ ಮಟ್ಟದಲ್ಲಿ ಜನರ ದುಃಖದ ಕಟ್ಟೆಯೊಡೆದು ಬೀದಿಯ ಮೇಲೆ ಪ್ರದರ್ಶನಗೊಂಡ ಉದಾಹರಣೆ ಪ್ರಾಯಶಃ ಇಡೀ ಭಾರತದ ಚಿತ್ರರಂಗದ ಚರಿತ್ರೆಯಲ್ಲೇ ಇರಲಿಲ್ಲ. ಆದರೆ ರಾಜ್ ಮತ್ತು ಕನ್ನಡಿಗರ ಸಂಬಂಧ ಅಂತದ್ದು.
ನಾಡಿನ ತೀರಾ ಹಿಂದುಳಿದಿದ್ದ ಸಮುದಾಯವೊಂದರ ಸಾಮಾನ್ಯ ಕುಟುಂಬದಿಂದ ಬಂದು ಹತ್ತಿಪ್ಪತ್ತು ವರ್ಷಗಳಲ್ಲಿ ಮೇರು ಕಲಾವಿದನಾಗಿ ಬೆಳೆದು ನಿಂತ ಅಪ್ಪಟ ಪ್ರತಿಭೆ ಡಾ.ರಾಜ್. ಶಿವಾಜಿ ಗಣೇಶ್‌ರಂತಹ, ನಾಗಿರೆಡ್ಡಿಯವರಂತಹ ಸಿನಿಮಾ ಲೋಕದ ಘಟಾನುಘಟಿಗಳೇ ಒಂದು ಸಂದರ್ಭದಲ್ಲಿ ಡಾ.ರಾಜ್‌ರನ್ನು ಕುರಿತು 'ರಾಜ್‌ಕುಮಾರ್ ಇರೋ ಸ್ಥಾನವೇ ಬೇರೆ. ಯಾರಿಗೂ ಅಲ್ಲಿಗೆ ತಲುಪಲಾಗುವುದಿಲ್ಲ' ಎಂದು ಹೇಳಿದ್ದರೆಂದರೆ ನಾವು ಹೆಮ್ಮೆಪಡಲಾಗದಿದ್ದೀತೆ? ಭಾರತೀಯ ಸಿನಿಮಾ ಶತಮಾನೋತ್ಸವಕ್ಕೆ ಸಜ್ಜಾಗುತ್ತಿರುವ ಹೊತ್ತಿನಲ್ಲಿ ಡಾ.ರಾಜ್‌ನಂತಹ ಕಲಾವಿದರ ಕೊಡುಗೆಯನ್ನು ಬರೀ ನೆನೆಸಿಕೊಂಡರಷ್ಟೇ ಸಾಲದು. ಬರೀ 'ಎರವಲು’ಕತೆಗಳಿಗೇ ತೃಪ್ತಿಪಟ್ಟುಕೊಂಡಿರಬೇಕಾಗಿ ಬಂದಂತಹ ಇಂದಿನ ಕನ್ನಡ ಚಿತ್ರರಂಗವನ್ನು ಮತ್ತಿ ಮೌಲಿಕವಾಗಿ ಮುನ್ನಡೆಸಲು ರಾಜ್ ಅವರ ಕೊಡುಗೆಯನ್ನು ನೋಡುವ ಹೊಸದೊಂದು ದೃಷ್ಟಿ ನಮಗೆ ಪ್ರಾಪ್ತವಾಗಬೇಕಿದೆ. 
(ದ ಸಂಡೆ ಇಂಡಿಯನ್ ಜುಲೈ 22, 2012ರ ಸಂಚಿಕೆಯಲ್ಲಿ ಪ್ರಕಟಿತ)

ಜೂನ್ 11, 2012

ಹಳ್ಳೀಮುಕ್ಕ..... ಬಿದ್‌ಬಿದ್ ನಕ್ಕ!





ಕೃತಿ: ಹಳ್ಳೀಮುಕ್ಕ ಎಲ್ಲೆಲ್ ಹೊಕ್ಕ
ಲೇಖಕರು: ನಾಗೇಶ ಹೆಗಡೆ
ಪುಟಗಳು: ೯೨
ಬೆಲೆ: ೭೫ ರೂಪಾಯಿ
ಪ್ರಕಾಶನ: ಭೂಮಿ ಪ್ರಕಾಶನ
ಮೊದಲ ಮುದ್ರಣ: ೨೦೧೧


ನಾಗೇಶ್ ಹೆಗಡೆಯವರ ’ಹಳ್ಳೀಮುಕ್ಕ ಎಲ್ಲೆಲ್ ಹೊಕ್ಕ’ ಅವರ ಹಿಂದಿನ ಎಲ್ಲ ಗಂಭೀರ ವಸ್ತು ವಿಷಯಗಳ ಕುರಿತ ಬರಹಗಳಿಗಿಂತ ಭಿನ್ನವಾಗಿ ತಮ್ಮ ಹಳ್ಳಿ, ಮನೆ ಮತ್ತು ಅವರ ತೋಟದ ಪರಿಸರದೊಂದಿಗಿನ ದಿನದಿನದ ಒಡನಾಟವನ್ನು ಹಾಸ್ಯಭರಿತವಾಗಿ ತೆರೆದಿಡುವ ಪುಸ್ತಕ. ವಿಜ್ಞಾನದ ಅದೆಂತಹ ಕಬ್ಬಿಣದಂತಹ ವಿಷಯವನ್ನೂ ಕಡಲೆಯಾಗಿಸಿ ಕನ್ನಡಿಗರು ಸುಲಲಿತವಾಗಿ ಓದಲು ಅನುವಾಗುವಂತೆ ಬರೆದುಕೊಂಡು ಬರುತ್ತಿರುವವರು ನಾಗೇಶ್ ಹೆಗಡೆ. ಈಗ ಈ ಕೃತಿಯಲ್ಲಿ ತಮ್ಮದೇ ಪ್ರಯೋಗ ಜೀವನದ ಅನುಭವಗಳನ್ನು ಮತ್ತೂ ಸೊಗಸಾಗಿ ಓದುಗರ ಮನಸ್ಸು ಮುದಗೊಳ್ಳುವಂತೆ ಬರೆದಿದ್ದಾರೆ. 
ತಮ್ಮ ಪತ್ರಿಕಾ ವ್ಯವಸಾಯದಿಂದ ನಿವೃತ್ತಿ ಪಡೆದ ನಂತರ ಬೆಂಗಳೂರಿನ ಕೆಂಗೇರಿ ಬಳಿಯಲ್ಲಿ ಕೆಲವರು ಸಮಾನಾಸಕ್ತರು ಸೇರಿ ನಿರ್ಮಿಸಿಕೊಂಡ ಮೈತ್ರಿ ಗ್ರಾಮದಲ್ಲಿ ಲೇಖಕರ ಮನೆ ಮತ್ತು ಕೈತೋಟಗಳಲ್ಲಿನ ಕೈಕಾರ್ಯಗಳ ಕುರಿತಾಗಿ ಈ ಕೃತಿಯ ಹದಿನಾಲ್ಕು ಲೇಖನಗಳಿವೆ. ಕೃತಿಯ ಮೊದಲ ಲೇಖನ ’ದೈತೋಟರ ಮನೆಯ ಪಕ್ಕ ನಮ್ಮ ಕೈದೋಟ’ ನಮಗೆ ಹೊಸ ಬಗೆಯ ವಿಸಿಟಿಂಗ್ ಕಾರ್ಡನ್ನು ಪರಿಚಯಿಸುತ್ತದೆ. ಹೆಸರಾಂತ ಪರಿಸರವಾದಿ ಶ್ರೀಪಡ್ರೆಯವರು ಲೇಖಕರಿಗೆ ನೀಡುವ ಆ ವಿಸಿಟಿಂಗ್ ಕಾರ್ಡು ಬೇರೇನಲ್ಲ. ಒಂದು ಪಾರದರ್ಶಕ ಪ್ಯಾಕೆಟ್ ಒಳಗಿನ ನಾಲ್ಕು ಬಾಂಗ್ಲಾ ಬಸಳೆ ಬೀಜಗಳು! ದೊಡ್ಡವರ ಮನೆಗಳಲ್ಲಿ ಶೋಕಿಗಾಗಿ ಇಡುವ ಭಾರೀ ಹಣ ತೆತ್ತು ವಿದೇಶಗಳಿಂದೆಲ್ಲಾ ತರಿಸುವ ನಿರ್ಜೀವ ವಸ್ತುಗಳಿಗಿಂತ ಈ ಹೊಸರೂಪದ ವಿಸಿಟಿಂಗ್ ಕಾರ್ಡ್ ಹೆಚ್ಚು ಮೌಲ್ಯಯುತವಾದದ್ದು ಎಂಬುದನ್ನು ತಮ್ಮದೇ ಆಕರ್ಷಕ ರೀತಿಯಲ್ಲಿ ಲೇಖಕರು ಹೇಳುತ್ತಾ ಹೋಗುತ್ತಾರೆ. ’ಸಿಂಥೆಟಿಕ್ ಸೆಗಣಿಗೆ ಹುಡುಕಾಟ’ ಎಂಬ ಲೇಖನದಲ್ಲಿ ಸಾವಯವ ಕೃಷಿಗಾಗಿ ಪಾಳೇಕರ್ ಜೀವಾಮೃತ, ಬೀಜಾಮೃತ ತಯಾರಿಸಲಿಕ್ಕಾಗಿ ಸೆಗಣಿ ಹುಡುಕಲಿಕ್ಕಾಗಿ ಲೇಖಕರು ಪರದಾಟುವ ಪ್ರಸಂಗ. ಅಪ್ಪಟ ದೇಸೀ ಸೆಗಣಿಯನ್ನು ಹುಡುಕಲು ವಿಫಲಗೊಂಡು ಕೊನೆಗೆ ಕೋಳಿ ಗೊಬ್ಬರವನ್ನು ಹಾಕಬಹುದೆಂಬ ಕೃಷಿಕ ನಾರಾಯಣಗೌಡ ಅವರ ಸಲಹೆ ಮೇರೆಗೆ ಕೋಳಿ ಸಾಕಲಾಗಿ ಅವಕ್ಕೆ ಗೆದ್ದಲು ಆಹಾರ ಎಂಬ ಕಾರಣಕ್ಕೆ ಗೆದ್ದಲು ಸಾಕಲೆಂದು ಹೊರಡುತ್ತಾರೆ. ಕೊನೆಗೆ ಗೆದ್ದಲು ಸಾಕುವ ವಿಧಾನ ಇಂತಿರುತ್ತದೆ ತೂತಾದ ಮಡಕೆಯನ್ನು ನೆಲದಲ್ಲಿ ಹೂಳಬೇಕು.ಅದಕ್ಕೆ ನಾಲ್ಕಾರು ಚೂರು ಹಳೆ ಕಟ್ಟಿಗೆ ಇಲ್ಲವೆ ಪ್ಲೈವುಡ್ ಚೂರುಪಾರು, ವೇಸ್ಟ್ ಪೇಪರ್ ಹಾಕಬೇಕು. ಒಂದಿಷ್ಟು ಸೆಗಣಿ ಹಾಕಿ ನೀರು ಚುಮುಕಿಸಿ ನಾಲ್ಕು ದಿನ ಇಡಬೇಕು. ಸೆಗಣಿ ತೀರಾ ಮುಖ್ಯ!! ಹೀಗೆ ಸೆಗಣಿಯಿಂದ ಶುರುವಾಗಿ ಮತ್ತೆ ಸೆಗಣಿಗೇ ನಿಲ್ಲುವ ಈ ಪ್ರಸಂಗವನ್ನು ಬಹುರಸವತ್ತಾಗಿ ಲೇಖಕರು ವಿವರಿಸುತ್ತಾರೆ. ಇದೇ ತರದ ಮತ್ತೊಂದು ಪ್ರಸಂಗ ’ಅದೇನು-ಮಾಯಾವಿಯಾ ಮ-ಯೂರಿಯಾ’ ಲೇಖನದಲ್ಲೂ ಬರುತ್ತದೆ. ಕೈದೋಟದ ಕೊಳದಲ್ಲಿ ಪಾಚಿ ತೆಗೆಯಲುಹೊರಡುವ ಲೇಖಕರು ಮತ್ತವರ ಪತ್ನಿ ಕೊಳದ ಸಣ್ಣ ಮೀನುಗಳನ್ನು ಕೋಳಿಗಳು ತಿನ್ನುವುದನ್ನು ನೋಡಿ ಮೀನುಗಳ ಸಂಖ್ಯೆ ಹೆಚ್ಚಿಸಲು ಯೂರಿಯಾ ತರಲೆಂದು ಪತ್ತೆ ಪರದಾಟುತ್ತಾರೆ. ಆದರೆ ಕೊನೆಯಲ್ಲಿ ತಿಳಿಯುವುದು ಯೂರಿಯಾ ಪಾಚಿಯನ್ನು ಹುಲುಸಾಗಿ ಬೆಳೆಸುತ್ತದೆ, ಅದನ್ನು ತಿಮದು ಮೀನುಗಳು ಬೆಳೆಯುತ್ತವೆ ಎಂಬುದು! 
ಚಕೋತ ಗಿಡಕ್ಕೆಂದು ಗೊಬ್ಬರ ಹುಡುಕು ಯತ್ನವನ್ನು ಚಕೋತ ಗಿಡಕ್ಕೆ ಚಳ್ಳೆ ಹಣ್ಣು ಲೇಖನದಲ್ಲಿ ನೀರಾ ಇಳಿಸಲೆಂದು ಹೋಗಿ ಮನೆಯಾಕೆಯ ಕೋಪಕ್ಕೀಡಾಗುವ ’ನೀರಾ ರಾಡಿಯ ಕತೆ’ಗಳು ಲಘುಹಾಸ್ಯದೊಂದಿದೆ ಕೂಡಿವೆ. ನೀರಾ ರಾಡಿಯ ಕತೆಯಲ್ಲಿ ಲೇಖಕರು ಇತ್ತೀಚಿನ ನೀರಾ ರಾಡಿಯಾ ಹಗರಣದ ಸಂದರ್ಭದೊಂದಿಗೆ ತಳುಕು ಹಾಕಿ ವಿವರಿಸುತ್ತಾರೆ. ಮೈತ್ರಿ ಗ್ರಾಮದ ಸುತ್ತಲೂ ಕೆಲವಾರು ಹಳ್ಳಿಗಳಿವೆ. ಅಲ್ಲಿನ ಜನರು ನಗರ ಮತ್ತು ಇಂದಿನ ರಿಯಲ್ ಎಸ್ಟೇಟ್ ದಂಧೆಯ ಸಂದರ್ಭದಲ್ಲಿ ಪಡೆದುಕೊಂಡಿರುವ ಆರ್ಥಿಕ ಲೆಕ್ಕಾಚಾರಗಳನ್ನು ಲೇಖಕರ ಇಲ್ಲಿಗಲ್ ಮಣ್ಣಂಗಟ್ಟಿ, ಬೀಮನ ಅಮಾಸೆ ಮಹಾತ್ಮೆ ಲೇಖನಗಳಲ್ಲಿ ಕಾಣಬಹುದು. ಮಾರುತಿ ಪ್ರಣಯ ಪ್ರಸಂಗ ಲೇಖನವು ಸಾಕಿದ ತಾಯಿ ಗಂಗಮ್ಮ ಮತ್ತು ಪ್ರಾಣಿದಯಾ ಸಂಘದವರ ನಡುವೆ ಕೋತಿಯೊಂದು ಸಿಲುಕುವ ಪ್ರಸಂಗವನ್ನು ತಿಳಿಸುತ್ತದೆ. ಅಗತ್ಯ ಸಂದರ್ಭದಲ್ಲಿ ನಾಯಿಯೊಂದರ ಜೀವವನ್ನು ರಕ್ಷಿಸಲಾರದ ಪ್ರಾಣಿದಯಾಪರರು  ಮನುಷ್ಯರು ಸಾಕಿಕೊಂಡ ಕೋತಿಯ ರಕ್ಷಣೆಗೆ ಬರುವ ಅವರ ಇಬ್ಬಂದಿತನವನ್ನು ಲೇಖಕರು ಚೆನ್ನಾಗಿ ಬಯಲುಗೊಳಿಸಿದ್ದಾರೆ. ತಮ್ಮ ಮನೆಯೊಳಗೇ ನಿಸರ್ಗದತ್ತ ಆಹಾರ ಸರಪಳಿಯೊಂದು ಹೇಗೆ ರೂಪುಗೊಳ್ಳುತ್ತದೆ ಎಂಬುದನ್ನು ’ಅಂತರಜಾಲ ಮತ್ತು ಜೀವಜಾಲ’ ಕೃತಿ ಅದ್ಭುತ ರೀತಿಯಲ್ಲಿ ಅಷ್ಟೇ ಸೊಗಸಾಗಿ ಬಿಚ್ಚಿಡುತ್ತದೆ. ಇಂತಹ ಒಂದು ಪ್ರಕ್ರಿಯೆ ಪ್ರತಿಯೊಬ್ಬರ ಮನೆಯಲ್ಲೂ ಇರುತ್ತದೆಯಾದರೂ ನಾವು ಅದನ್ನು ಗುರುತಿಸಿ ಅದನ್ನು ಹಾಗೇ ಇರಗೊಡುವ ಸೂಕ್ಷ್ಮತೆಯನ್ನೇ ಕಳೆದುಕೊಂಡಿರುವ ಸತ್ಯ ಈ ಲೇಖನವನ್ನೋದುತ್ತಾ ಹೋದಂತೆ ಅರಿವಾಗುತ್ತದೆ.  
ಸರಳ ಮತ್ತು ಪರಿಸರ ಸ್ನೇಹಿ ಬದುಕನ್ನು ಅಳವಡಿಸಿಕೊಂಡು ಬಂದಿರುವ ಲೇಖಕ ನಾಗೇಶ್ ಹೆಗಡೆಯವರು ಅದನ್ನು ಎಲ್ಲೂ ತಮ್ಮ ಬರಹಗಳಲ್ಲಿ ಬೋಧನೆ, ಪ್ರವಚನದಂತೆ ವಾಚ್ಯಗೊಳಿಸದೆ ಲಲಿತ ಪ್ರಬಂಧಗಳ ರೀತಿ ಹೇಳಬೇಕಾದುದನ್ನು ಓದುಗರಲ್ಲು ಕುತೂಹಲ ಮೂಡಿಸುತ್ತಲೇ ಹೇಳುವ ರೀತಿ ಆಕರ್ಷಕವಾಗಿರುತ್ತದೆ. ಲೇಖಕರು ಎದುರಿಸುವ ಪಡಿಪಾಟಲುಗಳನ್ನೂ ತಮಾಷೆಯಾಗಿಯೇ ಹೇಳಿಬಿಡುವ ಕಲೆ ಅವರಿಗೆ ಸಿದ್ಧಿಸಿಬಿಟ್ಟಿದೆ. ಹಳ್ಳೀಮುಕ್ಕ.... ಕೃತಿಯ ಬಹುತೇಕ ಲೇಖನಗಳು ಹಲವೆಡೆ ನಮ್ಮನ್ನು ಬಿದ್ದು ಬಿದ್ದು ನಗುವಂತೆ ಮಾಡುತ್ತಲೇ  ಹೊಸಬದುಕಿನ ಮಾರ್ಗದ ಚಿಂತಯೊಂದನ್ನು ಓದುಗರಿಗೆ ದಾಟಿಸುವಲ್ಲಿ ಯಶಸ್ವಿಯಾಗಿವೆ.  

ಕೃತಿಯ ಪುಟಗಳಿಂದ....

"...ಶ್ರೀಮತಿಯವರಿಗೆ ಹಳ್ಳಿಯ ಹವೆಗಿಂತ ನಗರದಲ್ಲಿ ಉಸಿರಾಟ ಸಲೀಸಾಗಿ ಅನ್ನಿಸತೊಡಗಿತು. ಹಳ್ಳಿಯನ್ನು ಬಿಟ್ಟು ಮತ್ತೆ ನಗರಕ್ಕೆ ಬಂದು ವಾಸಿಸುವುದರಲ್ಲೇ ಅವರ ಸಮಸ್ಯೆಗೆ ಉತ್ತರವಿದೆ’ -ಹೀಗೆಂದು ಮೌನ ಮುರಿದು ತ್ರಿವಿಕ್ರಮ ಹೇಳಿದ್ದೇ ತಡ, ಆತನ ಹೆಗಲಮೇಲಿದ್ದ ಬೇತಾಳ ಛಂಗನೆ ಮೇಲಕ್ಕೆ ನೆಗೆದು ಫ್ಲೈಓವರ್‌ನ ಕಾಂಕ್ರೀಟಿಗೆ ತಲೆ ಬಡಿಸಿಕೊಂಡು ದಿಕ್ಕುತೋಚದಂತಾಗಿ ಕೊಂಬೆ ಇರಬಹುದಾದ ಎತ್ತರದ ಮರವೊಂದನ್ನು ಹುಡುಕುತ್ತ ಚಾಮರಾಜಪೇಟೆ, ಬಸವನಗುಡಿಗಳಲ್ಲಿ ಅಂಡಲೆಯುತ್ತ ತ್ರಿಶಂಕುವಾಯಿತು."

(ದ ಸಂಡೆ ಇಂಡಿಯನ್ ಪತ್ರಿಕೆಯಲ್ಲಿ ಪ್ರಕಟಿತ)


ಜೂನ್ 09, 2012

"ಸಹಪಂಕ್ತಿ ಭೋಜನದಿಂದಲೇ ಜಾತಿ ಸಾಮರಸ್ಯ ಸಾಧ್ಯ" : ಪ್ರೊ. ಬಿ. ವಿ. ವೀರಭದ್ರಪ್ಪ







ಪ್ರೊ.ಬಿ.ವಿ.ವೀರಭದ್ರಪ್ಪನವರು ಕನ್ನಡ ನಾಡು ಕಂಡ ಪ್ರಖರ ವಿಚಾರವಾದಿ. ಅಧ್ಯಾಪಕರಾಗಿ, ಬರಹಗಾರರಾಗಿ ಪತ್ರಕರ್ತರಾಗಿ ಕೆಲಸ ಮಾಡಿದ ಬೀವಿಯವರು ನಾಡಿನ ವೈಚಾರಿಕ ಸಾಹಿತ್ಯಕ್ಕೆ ನೀಡಿರುವ ಕೊಡುಗೆ ದೊಡ್ಡದು. ’ವೇದಾಂತ’ ರೆಜಿಮೆಂಟ್, ವೇದಗಳಲ್ಲಿ ಜನಸಾಮಾನ್ಯರು, ಭಗವದ್ಗೀತೆ: ಒಂದು ವೈಚಾರಿಕ ಒಳನೋಟ ಮುಂತಾದ ಅವರ ಕೃತಿಗಳು ನಾಡಿನ ವಿಚಾರ ಸಾಹಿತ್ಯದಲ್ಲಿ ಶಾಶ್ವತ ಸ್ಥಾನ ಪಡೆದಿರುವಂತವಹು. ಇದೀಗ ನಿವೃತ್ತ ಜೀವನ ಸಾಗಿಸುತ್ತಿರುವ ಬೀವಿಯವರು ಸಮಕಾಲೀನ ಸಂಗತಿಕಳ ಕುರಿತು ಮಾತನಾಡಿದ್ದಾರೆ.

ನಾಡಿನಲ್ಲಿ ವೈಚಾರಿಕ ಸಾಹಿತ್ಯ ಪರಂಪರೆಗೆ ಬಹಳಷ್ಟು ಕೊಡುಗೆ ನೀಡಿರುವವರು ನೀವು. ವೈಚಾರಿಕ ಸಾಹಿತ್ಯ ರಚನೆಗೆ ನೀವು ತೊಡಗಿಕೊಂಡಿದ್ದಕ್ಕೆ ಕಾರಣಗಳೇನಿತ್ತು? 

ನನಗೆ ನನ್ನ ಸುತ್ತಮುತ್ತಲಿನ ಸಮಾಜವು ಧರ್ಮನಿಷ್ಟತೆ, ಜಾತಿ ನಿಷ್ಠತೆಯ ಅಂಧಕಾರದಲ್ಲಿ ಬಳಲುತ್ತಿದೆ ಎನಿಸಿತ್ತು. ಕತೆ ಕವನಕಿಂತ ವೈಚಾರಿಕ ಸಾಹಿತ್ಯ ಜನರನ್ನು ಜಾಗೃತಗೊಳಿಸಬಲ್ಲದು ಎಂಬ ನಂಬಿಕೆ ನನ್ನದಾಗಿತ್ತು. ಹಾಗಾಗಿ ಜನರಿಗೆ ವಿಚಾರವನ್ನು ನೇರವಾಗಿ ತಲುಪಿಸಬೇಕೆಂಬ ಪ್ರೇರಣೆ ಉಂಟಾಯಿತು. ಜನರು ಯಾವುದನ್ನು ಅತ್ಯಂತ ಪವಿತ್ರ, ಪೂಜ್ಯ ಎಂದು ತಿಳಿದಿದ್ದರೋ ಅದರ ಮೂಲ ಪರಿಕಲ್ಪನೆಗಳನ್ನು ಜನರಿಗೆ ತಿಳಿಸುವ ಉದ್ದೇಶದಿಂದಲೇ ಅನೇಕ ಲೇಖನಗಳನ್ನು ಬರೆಯುತ್ತಾ ಹೋದೆ. ನನ್ನಲ್ಲಿ ವೈಚಾರಿಕ ಪ್ರಜ್ಞೆ ಬೆಳೆಯಲು ಕಾರಣ ಜನಪದರು. ಅವರ ನುಡಿ, ಬದುಕಿನ ಪ್ರೀತಿ, ಸ್ಥಾವರ ನಿರಾಕರಣದ ಪರಿಕಲ್ಪನೆಗಳು ಅತ್ಯಂತ ಆರೋಗ್ಯಕರವಾದವು. ಅಕ್ಷರ ಜಗತ್ತಿನ ಮೌಢ್ಯಗಳು ಜನಪದರಲ್ಲಿಲ್ಲ. ಎರಡನೆಯದಾಗಿ ಪ್ರೊ. ಕೋವೂರ್, ಎಚ್. ನರಸಿಂಹಯ್ಯ ಅವರನ್ನು ಆಹ್ವಾನಿಸಿ ಭಾಷಣ ಮಾಡಿಸಿದ್ದೆವು. ಇವೂ ನನಗಾದ ಪ್ರೇರಣೆಗಳೆ. 

ಇದಕ್ಕೆ ನಿಮಗೆ ಸಾಹಿತ್ಯಕವಾಗಿ ಏನಾದರೂ ಪ್ರೇರಣೆಗಳಿದ್ದವೇ? 
ಪರಂಪರೆಯೊಂದಿಗೆ ಹೇಗೆ ಅನುಸಂಧಾನ ನಡೆಸಬೇಕೆಂಬುದನ್ನು ನಮ್ಮಲ್ಲಿ ಪಂಪ ಮತ್ತು ಅವನ ಸಮಕಾಲೀನ ಕವಿಗಳು, ವಚನಕಾರರು, ದಾಸರು ತೋರಿಸಿಕೊಟ್ಟಿದ್ದಾರೆ. ವಚನಕಾರರು ವೇದ ಉಪನಿಷತ್ತುಗಳಲ್ಲಿನ ಮಿತಿ ಹಾಗೂ ಮೌಲ್ಯಗಳನ್ನು ಅರ್ಥೈಸಿದ ವಿಶಿಷ್ಟ ಬಗೆಗಳು ನನಗೆ ಪ್ರಭಾವಿಸಿವೆ. ನಮ್ಮ ಇಂದಿನ ಸಮಕಾಲೀನ ತಲ್ಲಣಗಳಿಗೆ ಒಳಬೇರುಗಳು ಹಾಗೂ ಉತ್ತರಗಳು ವೇದ, ಉಪನಿಷತ್ತುಗಳಲ್ಲೇ ಇವೆ. ಆದ್ದರಿಂದ ನನ್ನ ಅಧ್ಯಯನ ಆ ಕುರಿತಾಗಿಯೇ ಇದೆ. 

ನಿಮ್ಮ ಬರಹಗಳಿಗೆ ಸಿಕ್ಕಂತಹ ಪ್ರತಿಕ್ರಿಯೆ, ಪ್ರೋತ್ಸಾಹಗಳೇನಾಗಿದ್ದವು? 
ನಾನು ಲಂಕೇಶ್ ಪತ್ರಿಕೆ ಪ್ರಾರಂಭವಾದ ಹೊಸತರಲ್ಲಿ ಒಂದು ಲೇಖನ ಬರೆದ್ದು ಕಳಿಸಿದ್ದೆ. ಆಗ ಅವರು ಅದನ್ನು ಮೆಚ್ಚಿಕೊಂಡು ನೀವು ಪತ್ರಿಕೆಗೆ ಬರೀತಾ ಇರಿ ಎಂದರು. ನಂತರ ಬರೆಯುತ್ತಾ ಹೋದೆ. ನನಗೆ ನನ್ನ ಲೇಖನಗಳನ್ನು ವೈಚಾರಿಕ ಲೇಖನಗಳು ಅಂತ ಹೆಸರಿಟ್ಟಿದ್ದು ಅವರೇ. ನನಗೆ ಅದೇನೂ ಗೊತ್ತಿರಲಿಲ್ಲ. ಆ ಕಾಲದಲ್ಲಿ ಸಂಪ್ರದಾಯಗಳು ಜಾಸ್ತಿ ರೂಡಿಯಲ್ಲಿದ್ದು ವಿದ್ಯಾವಂತರಾವರೂ ಅವಕ್ಕೇ ಗಂಟು ಬಿದ್ದಿದ್ದಂತ ಸಂದರ್ಭ. ಆಗ ಲಂಕೇಶ್ ಅವರು ನನ್ನ ಲೇಖನಗಳನ್ನು ಪ್ರಕಟಿಸುವ ಜೊತೆಗೆ ’ವೇದಾಂತ ರೇಜಿಮೆಂಟ್’ ಶೀರ್ಷಿಕೆಯ ನನ್ನ ಲೇಖನಗಳ ಸಂಗ್ರಹ ಪುಸ್ತಕವನ್ನೂ ಪ್ರಕಟಿಸಿದರು. ಇಂದು ನಮ್ಮ ಉಡುಗೆ ತೊಡುಗೆ ಜೀವನ ವಿಧಾನಗಳೆಲ್ಲಾ ಅತ್ಯಂತ ಆಧುನಿಕವಾಗಿವೆಯಾದರೂ ಬಹಳಷ್ಟು ಜನರು ಮಡಿವಂತಿಕೆಗಳನ್ನು ಬಿಟ್ಟು ಬರಲು ತಯಾರಿಲ್ಲ. ಸಮಾಜ ಮುಂದುವರೆಯಬೇಕಾದರೆ ಇಂತಹ ಅಂಧವಿಶ್ವಾಸಗಳಿಂದ ಹೊರಬರುವ ಅಗತ್ಯ ಇದೆ ಎನ್ನುವುದು ಇದು ನನ್ನ ಅಭಿಪ್ರಾಯ. 

ತಾವು ಇತ್ತೀಚೆಗೆ ಬರೆಯುತ್ತಿಲ್ಲವಲ್ಲ? 
ಇಲ್ಲ. ಇತ್ತೀಚೆಗೆ ಬರೆಯುವ ಶಕ್ತಿ ಕುಂದಿದೆ. ನೆನಪಿರುವುದಿಲ್ಲ. ಏನಾದರೂ ಬರೆಯಲು ಕುಳಿತರೆ ಅದರ ಹಿಂದೆ ಮುಂದಿನ ವಿಷಯಗಳು ನೆನಪಿಗೆ ಬರುವುದಿಲ್ಲ. 

ಇಂದು ವೈಜ್ಞಾನಿಕ ಚಿಂತನೆಗಳನ್ನು ಪ್ತೋತ್ಸಾಹಿಸುವ ನಿಟ್ಟಿನಲ್ಲಿ ನಮ್ಮ ಮಾಧ್ಯಮಗಳು ಕೆಲಸ ಮಾಡುತ್ತಿವೆಯಾ?
ಹಾಗಾಗುತ್ತಿಲ್ಲ ಎನ್ನುವುದೇ ವಿಷಾದ. ಇಂದು ಸಮಾಜದಲ್ಲಿ ವೈಜ್ಞಾನಿಕತೆ ಹೆಚ್ಚುತ್ತಿಲ್ಲ ಎಂದರೆ ಅದು ವಿಜ್ಞಾನದ ವೈಫಲ್ಯವಲ್ಲ. ಅದು ಜನರ ವೈಫಲ್ಯ. ವೈಜ್ಞಾನಿಕ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಲ್ಲಿ ವಿಫಲರಾಗುತ್ತಿದ್ದೇವೆ. ವಿಜ್ಞಾನ ದಿನೇ ದಿನೇ ಪ್ರಗತಿಯಲ್ಲಿದೆ. ಸ್ಟೀಫನ್ ಹಾಕಿಂಗ್‌ನಂತವರು ಅದ್ಭುತವಾಗಿ ಬರೆಯುತ್ತಿದ್ದಾರೆ. ಆದರೆ ನಮ್ಮ ಮಾಧ್ಯಮಗಳು ಅವನ್ನು ಪ್ರಚುರಪಡಿಸುತ್ತಿಲ್ಲ. ಮೂಢನಂಬಿಕೆಗಳನ್ನು ಪ್ರಚಾರ ಮಾಡುವುದರಿಂದ ಮಾಧ್ಯಮಗಳಿಗೆ ಆರ್ಥಿಕ ಲಾಭವಿರುವುದರಿಂದ ಅವುಗಳನ್ನು ಹೆಚ್ಚಾಗಿ ಪ್ರಸಾರ ಮಾಡುತ್ತಾರೆ. ಸಮಾಜದದಲ್ಲಿ ಬಹಳ ಜನರು ವೈಚಾರಿಕತೆ ಅಳವಡಿಸಿಕೊಳ್ಳದಿದ್ದರೆ ಜನರ ಮೌಢ್ಯವನ್ನು ಬಳಸಿಕೊಂಡು ಸುಖಜೀವನ ನಡೆಸುವ ವರ್ಗಗಳಿಗೆ ಲಾಭವಿದೆ. ಹೀಗಾಗಿಯೇ ಮಾಧ್ಯಮಗಳೂ ಅಂತಹ ವರ್ಗಗಳಿಗೆ ಲಾಭವಾಗುವಂತೆ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿವೆ. 

ಮೊನ್ನೆ ಪೇಜಾವರ ಸ್ವಾಮಿಗಳು ಸಹಪಂಕ್ತಿ ಕುರಿತು ಹೇಳಿದ ಮಾತುಗಳ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು?

ಪೇಜಾವರರು ಮಠಾಧಿಪತಿಗಳು. ಈ ಹಿಂದೆ ದಲಿತರನ್ನೂ ತಮ್ಮ ಭಕ್ತರನ್ನಾಗಿಸಿಕೊಳ್ಳುವ ಕಾರಣಕ್ಕೆ ದಲಿತರ ಕೇರಿಯಲ್ಲಿ ಪಾದಯಾತ್ರೆ ಮಾಡಿದರು. ಜಾತಿಗಳ ನಡುವೆ ನಿಜಕ್ಕೂ ಸಾಮರಸ್ಯ ಮೂಡಿಸುವ ಉದ್ದೇಶ ಅವರಿಗೇನಾದರೂ ಇದ್ದಿದ್ದರೆ ದಲಿತರ ಕೇರಿಗಳಲ್ಲಿ ಮತ್ತು ಮೇಲ್ಜಾತಿಯವರ ಕೇರಿಗಳಲ್ಲಿ ಸಹಪಂಕ್ತಿ ಭೋಜನವನ್ನು ಅವರು ಏರ್ಪಡಿಸಬೇಕು. ಅದಕ್ಕೆ ಇವರು ತಯಾರಿಲ್ಲ. ಇಂದು ಪರಿಸ್ಥಿತಿ ಹೇಗಿದೆ ಎಂದರೆ ಆರ್ಥಿಕವಾಗಿ ಉತ್ತಮ ಹಂತದಲ್ಲಿರುವ, ವಿದ್ಯಾವಂತ ದಲಿತರಿಗೆ ಮೇಲ್ಜಾತಿ ಮನೆಗಳಲ್ಲಿ ಪ್ರವೇಶ ಸುಲಭವಿಲ್ಲ. ಒಬ್ಬ ಮೇಲಧಿಕಾರಿ ದಲಿತನಾಗಿದ್ದು ಕೆಳಗಿನ ಅಧಿಕಾರಿ ಮೇಲ್ಜಾತಿಯವನಾಗಿದ್ದರೆ ಆ ಮೇಲಧಿಕಾರಿಯ ಮನೆಯಲ್ಲಿ ಊಟ ಮಾಡುವ ಪರಿಸ್ಥಿತಿ ಇಂದೂ ಇಲ್ಲ. ಇಂತಹ ಕೀಳು ಮನಸ್ಥಿತಿಯೇ ನಮ್ಮ ದೇಶದ ಅವನತಿಗೆ ಕಾರಣ. 

ಪ್ರಬಲ ಜಾತಿಗಳೆಲ್ಲಾ ಜಾತಿ ಸಮಾವೇಶಗಳನ್ನು ನಡೆಸುವ ಪ್ರಕ್ರಿಯೆ ನಡೆಯುತ್ತಿದೆ. ಇದು ಸಮಾಜದಲ್ಲಿ ಆರೋಗ್ಯಕರ ವಾತಾವರಣ ಉಂಟುಮಾಡುತ್ತದೆಯಾ?
ಈಗ ನೋಡಿ ಟಿವಿಯಲ್ಲಿ ಬರುತ್ತಿದೆ. ಒಕ್ಕಲಿಗೆರೆಲ್ಲ ಒಂದಾಗಬೇಕು, ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹಸರಿಡಬೇಕು ಎಂದೆಲ್ಲಾ ಹೇಳುತ್ತಿದಾರೆ. ಆದರೆ ಒಕ್ಕಲಿಗರಲ್ಲೇ ಮತ್ತೆ ನೂರಾರು ಜಾತಿಗಳಿವೆಯಲ್ಲ? ನಾವೆಲ್ಲಾ ಜಾತಿ ಪಂಗಡಗಳನ್ನು ಬಿಟ್ಟು ಒಂದು ಎನ್ನುವಂತಾಗಿದ್ದರೆ ಸಮಾಜದ ಪ್ರಗತಿಯೆಡೆ ಸಾಗುತ್ತಿತ್ತು. ಆದರೆ ನಮ್ಮ ಪರಂಪರೆಯಲ್ಲಿಯೇ ಒಡೆದು ಆಳುವ ಪದ್ಧತಿ ಹಾಸು ಹೊಕ್ಕಾಗಿದೆ. ಇಲ್ಲಿ ಜನಪ್ರತಿನಿಧಿಗಳಾದವರೂ ಜಾತಿರಾಜಕಾರಣ ಮಾಡುತ್ತಾರೆ. ಜನಪ್ರತಿನಿಧಿಯಾದವರಿಗೆ ತನ್ನ ಜಾತಿ ಮುಖ್ಯವಾಗಬಾರದು. ದೇಶದ ಸಂವಿಧಾನಕ್ಕೆ ಅನುಸಾರವಾಗಿ ಆಡಳಿತ ನಡೆಸಬೇಕೇ ಹೊರತು, ತನ್ನ ಜಾತಿಯ ಹಿತದೃಷ್ಟಿಯಿಂದ ಅಲ್ಲ. 

ಬಿಜೆಪಿ ಸರ್ಕಾರ ಬಂದ ಮೇಲೆ ಮಠಾಧೀಶರೂ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರಲ್ಲ?
ನಮ್ಮಲ್ಲಿ ರಾಜಕಾರಣ ಎನ್ನುವುದು ಸಂವಿಧಾನದಲ್ಲಿ ಹೇಳುವಂತೆ ಜಾತ್ಯಾತೀತವಾಗಿಲ್ಲ. ಸೆಕ್ಯುಲರ್ ಎಂದರೆ ಆಳ್ವಿಕೆಯಲ್ಲಿ ಧರ್ಮಗಳನ್ನಾಗಲೀ ಜಾತಿಗಳನ್ನಾಗಿಗಲೀ ಲೆಕ್ಕಕ್ಕೇ ತೆಗೆದುಕೊಳ್ಳಬಾರದು. ಆದರೆ ಇಲ್ಲಿ ಅದಕ್ಕೆ ವಿರುದ್ಧವಾಗಿಯೇ ನಡೆಯುತ್ತಿದೆ. ಯಡಿಯೂರಪ್ಪ ಲಿಂಗಾಯತ ಎಂದು ಹೇಳಿ ಮಠಗಳಿಗೆ ದುಡ್ಡುಕೊಡುವುದನ್ನು ಆರಂಭಿಸಿ ಅಂತಹ ಕೆಟ್ಟ ಚಾಳಿಗೆ ನಾಂದಿಹಾಡಿದರು. ಇದರಿಂದ ಪ್ರಜೆಗಳಿಗಿಂತ ಮಠಾಧಿಪತಿಗಳ ಮಾತಿಗೇ ಹೆಚ್ಚು ಬಲ ಬಂದಿದೆ. 

ನಿಮ್ಮ ಮನೆಗೆ ’ಲೋಕಾಯತ’ ಎಂದು ಹೆಸರಿಟ್ಟಿದೀರಲ್ಲ. ಏಕೆ?
ನಮ್ಮ ಈ ಮನೆಯನ್ನು ಕಟ್ಟುವಾಗ ದೇವಿಪ್ರಸಾದ್ ಚಟ್ಟೋಪಾದ್ಯಾಯ ಅವರ ’ಲೋಕಾಯತ’ ಎಂಬ ಪುಸ್ತಕ ಓದುತ್ತಿದ್ದುದರಿಂದ ಆ ಹೆಸರನ್ನೇ ಮನೆಗೆ ಇಟ್ಟಿದ್ದೆ. ಸಾಮಾನ್ಯವಾಗಿ ಮನೆಗಳಿಗೆ ದೇವರ ಹೆಸರಿಡುತ್ತಾರೆ. ದೇವರು ಬಂದು ತಮ್ಮನ್ನು ಕಾಪಾಡುತ್ತಾನೆ ಎಂದು. ’ಲೋಕಾಯತ’ ಅಂದರೆ ’ನಾನು ಈ ಲೋಕದ ಪ್ರಜೆ. ಲೋಕದ ಎಲ್ಲ ಜನರು ಸುಖ ಸಮೃದ್ಧಿಯಾಗಿರುವುದು ಜೀವನದ ಉದ್ದೇಶವಾಗಿಬೇಕು. ಎಲ್ಲೊರಂದಿಗೆ ನಾನು ಬದುಕಬೇಕು ಎಂಬ ಆಶಯವನ್ನು ಕೊಂಡೊಯ್ಯುವುದು. ಇದು ನಮ್ಮ ಭಾರತೀಯ ತತ್ವಶಾಸ್ತ್ರದ ಒಂದು ಮುಖ್ಯವಾದ ಪರಂಪರೆಯಾಗಿತ್ತು. ಈಗ ’ಲೋಕಾಯುಕ್ತ’ ಎನ್ನುವುದು  ಪ್ರಚಾರಕ್ಕೆ ಬಂದ ಮೇಲೆ ಬಹಳ ಜನ ವಿದ್ಯಾವಂತರು ’ಓಹೋ ಲೋಕಾಯುಕ್ತರಾ ನೀವು?’ ಎಂದು ಕೇಳ್ತಾರೆ. ಲೋಕಾಯತ ಎಂಬುದರ ಅರಿವೇ ಅವರಿಗಿರುವುದಿಲ್ಲ. 

ಪತ್ರಿಕೋದ್ಯಮದ ಭಾಗವಾಗಿಯೂ ಕೆಲಸ ನಿರ್ವಹಿಸಿದ್ದಿರಿ. ನಿಮ್ಮ ಕಾಲದ ಪತ್ರಿಕೋದ್ಯಮಕ್ಕೂ ಇಂದಿನ ಪತ್ರಿಕೋದ್ಯಮಕ್ಕೂ ಯಾವ ಭಿನ್ನತೆ ಕಾಣುತ್ತೀರಿ?

ಉನ್ನತ ಉದ್ದೇಶಗಳನ್ನಿಟ್ಟುಕೊಂಡು, ಅದಕ್ಕಾಗಿಯೇ ತಮ್ಮ ಜೀವನವನ್ನು ಮುಡಿಪಾಗಿಡುವಂತವರು ಅಂದು ಇದ್ದರು. ಈಗ ಪತ್ರಿಕೆ - ಮಾದ್ಯಮಗಳಲ್ಲಿ ಪೈಪೋಟಿ ವಿಪರೀತವಾಗಿದೆ. ಎಲ್ಲರೂ ಪತ್ರಿಕೆ ನಡೆಸುತ್ತಿರುವುದು ಹೊಟ್ಟೆ ಹೊರೆದುಕೊಳ್ಳುವುದಕ್ಕೆ ಮಾತ್ರ. ಅದಕ್ಕಾಗಿ ಜನಸಾಮಾನ್ಯರನ್ನು ಜಾಗೃತಗೊಳಿಸುವ ವಿಷಯಗಳಿಗಿಂತ ಸುಲಭವಾಗಿ ಜನರು ನೋಡುವಂತಹ, ಮನರಂಜನೆಗಳನ್ನು ಮಾತ್ರ ನೀಡುತ್ತಾರೆ. ಇಂದು ಮಾದ್ಯಮಗಳಿಗೆ ಜಾಹೀರಾತುಗಳೇ ಮುಖ್ಯವಾಗಿಬಿಟ್ಟದೆ. ಜನಸಾಮಾನ್ಯರ ಪ್ರಗತಿ ಹೊಂದುವುದಕ್ಕಿಂತ ತಮ್ಮ ಹೊಟ್ಟೆಹೊರೆದುಕೊಳ್ಳುವುದೇ ಇಂದು ಪ್ರಧಾನ ಎಂಬಂತಾಗಿದೆ. ಸುದ್ದಿಗಳನ್ನೂ ಹಣ ತೆಗೆದುಕೊಂಡು ನೀಡುವ ದುಸ್ಥಿತಿ ಇದೆ. 

ನಿಮ್ಮ ಮತ್ತು ಪತ್ರಿಕೋದ್ಯಮದ ಒಡನಾಟ ಹೇಗಾದದ್ದು? 

ನಾನು ಪತ್ರಕರ್ತನಾಗಬೇಕೆಂದು ಉದ್ದೇಶ ಇಟ್ಟುಕೊಂಡವನಾಗಿರಲಿಲ್ಲ. ನಾನು ಪದವಿ ಓದುವಗಲೇ ಆಸಕ್ತಿಯ ಕಾರಣಕ್ಕೆ ಬರೆಯುತ್ತಿದ್ದೆ. ಒಮ್ಮೆ ಲಂಕೇಶ್ ಪತ್ರಿಕೆಗೆ ಪ್ರತಿಕ್ರಿಯೆ ಬರೆದೆ. ಅದಕ್ಕೆ ಅವರು ಮರುಪತ್ರ ಬರೆದು ನೀವು ಚೆನ್ನಾಗಿ ಬರೀತೀರಿ. ನಮ್ಮ ಪತ್ರಿಕೆಗೆ ಬರೆಯಿರಿ ಎಂದು ತಿಳಿಸಿದರು. ಆಮೇಲಷ್ಟೇ ನಾನು ಗಂಭೀರವಾಗಿ ನಾನಾ ವಿಷಯಗಳ ಬಗ್ಗೆ ವರದಿ, ವಿಶ್ಲೇಷಣೆಗಳನ್ನು ಬರೆಯುತ್ತಾ ಹೋದದ್ದು. ಅದರಿಂದ ಸಣ್ಣ ಪುಟ್ಟ ಬದಲಾವಣೆಗಳೂ ನನ್ನೆದುರಿಗೇ ಸಂಭವಿಸಿದ್ದು ನನಗೆ ಸಂತೋಷ ನೋಡುತ್ತಿತ್ತು. ಬರೆಯುತ್ತಾ ಬರೆಯುತ್ತಾ ವಿಷಯಗಳನ್ನು ಹೇಗೆ ನೋಡಬೇಕು, ನೋಡಬಾರದು ಎಂಬುದೂ ತಿಳಿಯುತ್ತಾ ಹೋಯಿತು. ಸುತ್ತಮುತ್ತಲಿನ ಹಲವಾರು ವಿಷಯಗಳ ಬಗ್ಗೆ ಬರೆದೆ. 

ನಾವು ತಂತ್ರಜ್ಞಾನದ ಬೆಳವಣಿಗೆ ಉತ್ತುಂಗದಲ್ಲಿದ್ದೇವೆ. ಆದರೆ ಈ ಆಧುನಿಕತೆ ತಂತ್ರಜ್ಞಾನಗಳು ವೈಚಾರಿಕತೆಯನ್ನು ಮುಂದೆ ಕೊಂಡೊಯ್ಯಬಲ್ಲವಲ್ಲವೇ? 

ಹಿಂದೆಲ್ಲಾ ವಿಚಾರವಾದಿಗಳು, ಲೇಖಕರು ಸಮಾವೇಶಗಳನ್ನು, ರ‍್ಯಾಲಿಗಳನ್ನೆಲ್ಲಾ ಸಂಘಟಿಸಿದ್ದೆವು. ವೈಚಾರಿಕ ಚಿಂತನೆ ಮತ್ತು ಮೂಢನಂಬಿಕೆಗಳ ವಿರುದ್ಧ ಜಾಗೃತಿಯ್ನನು ಬೆಳೆಸುವ ಕೆಲಸ ಮಾಡುತ್ತಿದ್ದೆವು. ಆದರೆ ಇಂದು ಅಂತಹ ಆಂದೋನಗಳು ಇಲ್ಲ. ಇಂದು ಆಧುನಿಕೀಕರಣದ ಭರಾಟೆಯಲ್ಲಿ ಜನರು ತಮ್ಮ ತಮ್ಮ ಜೀವನ ನಿರ್ವಹಣೆಯನ್ನೇ ಮುಖ್ಯವಾಗಿಸಿಕೊಂಡಿದ್ದಾರೆ. ಸಾಮಾಜಿಕ ಕೆಲಸಗಳಿಗೆ ಸಮಯವೆ ಇಲ್ಲದಂತೆ ಹೈಟೆಕ್ ಆಗಿದ್ದೇವೆ ಇಂದು. ನಮ್ಮಲ್ಲಿ ಕಂಪ್ಯೂಟರ್ ಬಂದಿದೆ, ಇಂಟರ್ನೆಟ್ ಬಂದಿದೆ. ಎಲ್ಲಾ ಸರಿ. ಆದರೆ ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳುತ್ತಿಲ್ಲ. ಇಂದು ಆಧುನಿಕತೆ ಎನ್ನುವುದು ಅನಿವಾರ್ಯವಾಗಿ ಬರುತ್ತಿದೆ. ಜಗತ್ತು ಹಳ್ಳಿಯಾಗಿ ಬಿಟ್ಟಿದೆ. ಈ ಕಾರಣದಿಂದಲೇ ಇಂದು ಅಸ್ತಿತ್ವಕ್ಕಾಗಿ ಸಂಘರ್ಷವೂ ನಡೆಯುತ್ತಿದೆ. ಆದರೆ ಸಂಸ್ಕೃತಿ, ನೈತಿಕತೆಗಳು ತಮ್ಮ ಸ್ಥಾನ ಕಳೆದಕೊಂಡಿವೆ. ನೈತಿಕವಾಗಿ, ಆಧ್ಯಾತ್ಮಿಕವಾಗಿ ಹಾಗೂ ಮಾನವೀಯವಾಗಿ ಮೌಲ್ಯಗಳನ್ನು ನಾವು ಉಳಿಸಿಕೊಂಡು ಹೋಗುತ್ತಿಲ್ಲ ಎನ್ನುವುದು ಖೇದಕರ. ಇದರ ನಡುವೆಯೂ ಅಲ್ಲಲ್ಲಿ ಕೆಲವರಿದ್ದಾರೆ. ಸಿದ್ದೇಶ್ವರ ಸ್ವಾಮಿ ಎಂಬುವವರೊಬ್ಬರಿದ್ದಾರೆ. ಅವರು ಕಾವಿ ಉಡುವುದಿಲ್ಲ. ಲುಂಗಿ ಜುಬ್ಬ ತೊಡುತ್ತಾರೆ. ತಮ್ಮ ಬಟ್ಟೆ ತಾವೇ ಒಗೆದುಕೊಳ್ಳುತ್ತಾರೆ. ಸ್ವಂತ ಕಾರಿಟ್ಟುಕೊಂಡಿಲ್ಲ. ದೂರ ಊರಿಗೆ ಹೋದರೆ ಮಾತ್ರ ಬಸ್‌ಬನಲ್ಲಿ ಓಡಾಡುತ್ತಾರೆ. ಉಳಿದಂತೆ ನಡೆದೇ ಹೋಗುತ್ತಾರೆ. ಇವರಿಗೆ ಅಪಾರ ಸಂಖ್ಯೆ ಭಕ್ತರೂ ಇದ್ದಾರೆ. ಇಂತವರು ಜನರಿಗೆ ದಾರಿ ತೋರಿಸಬೇಕು. 

ಆರೋಗ್ಯಕರ ಸಮಾಜದ ಕನಸು ಕಂಡಿರುವ ನೀವು ಇಂದಿನ ನಮ್ಮ ಅಭಿವೃದ್ಧಿ ಮಾದರಿಗಳ ಬಗ್ಗೆ ಏನು ಹೇಳುತ್ತೀರಿ? 

ಇಂದಿನ ಅಭಿವೃದ್ಧಿ ಯೋಜನೆಗಳೆಲ್ಲಾ ತಯಾರಾಗುತ್ತಿರುವುದು ಕಾರ್ಪೊರೇಟ್ ಕಛೇರಿಗಳಲ್ಲಿ. ನೆಲದ ನೋವೇನೆಂದೇ  ತಿಳಿಯದವರು ಈ ದೇಶದ ಅಭಿವೃದ್ಧಿ ಬಗ್ಗೆ ಯೋಜನೆಗಳನ್ನು ಸಿದ್ಧಪಡಿಸುತ್ತಾರೆ. ಬಡವರ ಹೆಸರಿನಲ್ಲಿಯೇ ಇರುವ ಇಂತಹ ಯೋಜನೆಗಳು ಅಕ್ಷರವಂತರಿಗೆ, ಶ್ರೀಮಂತರಿಗೆ, ಮೇಲ್ಜಾತಿಗಳಿಗಷ್ಟೇ ದಕ್ಕಿಬಿಡುವ ಯೋಜನೆಗಳಾಗಿವೆ.  

ಸಮಾಜವನ್ನು ಕಾಡುತ್ತಿರುವ ಅನೇಕ ಸಮಸ್ಯೆಗಳಲ್ಲಿ ಯಾವುದು ಮುಖ್ಯ ಎನ್ನಿಸುತ್ತದೆ ನಿಮಗೆ? 

ಭ್ರಷ್ಟಾಚಾರವೇ ಎಲ್ಲದಕ್ಕಿಂತ ದೊಡ್ಡ ಸಮಸ್ಯೆ. ಅದನ್ನು ಯಾರು ಯಾರ ಮೇಲೆ ಹೇಳುವುದು? ಭ್ರಷ್ಟಾಚಾರ ಇದೆ ಎಂದು ಹೇಳುವವರೇ ದೊಡ್ಡ ಭ್ರಷ್ಟರಾಗಿರುತ್ತಾರಲ್ಲ. ಯಾರಾದರೂ ಲಂಚ ಕೇಳಿದಾಗ ಪ್ರಶ್ನಿಸದೆ ಹಿಂದೆ ಮುಂದೆ ನೋಡದೆ ಕೊಟ್ಟು ಬರುವವರಿದ್ದಾಗ ಭ್ರಷ್ಟಾಚಾರ ಹೇಗೆ ನಿಲ್ಲುತ್ತದೆ ಹೇಳಿ?

ಇಂದಿನ ತರುಣರಿಗೆ ಏನು ಹೇಳಲು ಇಚ್ಛಿಸುತ್ತೀರಿ?
ಇಂದಿನ ಯುವಕರಿಗೆ ನಾನು ಹೇಳಲು ಇಚ್ಛಿಸುವುದಿಷ್ಟೆ. ಇಂದಿನ ಪರಿಸ್ಥಿತಿ ಸಮಾಜ ಹದಗೆಟ್ಟಿದೆ ನಿಜ. ಅದರಲ್ಲೂ ಸಹ ನೀವು ಸಮಾಜದಲ್ಲಿ ಮತ್ತೊಬ್ಬರ ಮೇಲೆ ಅವಲಂಬಿತತರಾಗದೇ ಬದುಕುವುದನ್ನು ಕಲಿಯಬೇಕು. ಪ್ರಾಮಾಣಿಕವಾಗಿ ದುಡಿದು ಜೀವನ ನಡೆಸುತ್ತಾ ಮತ್ತೊಬ್ಬರಿಗೆ ಮಾರ್ಗದರ್ಶನ ನೀಡಲು ಕಲಿಯಬೇಕಿದೆ. 

ಯುವ ಬರಹಗಾರರಿಗೆ ನಿಮ್ಮ ಸಲಹೆ ಸೂಚನೆ ಏನು?
ಯುವ ಬರಹಗಾರರಾದವರು ನಿರಂತರ ಓದಿನಲ್ಲಿ ತೊಡಗಿರಬೇಕು. ಭಾರತೀಯ ತತ್ವಶಾಸ್ತ್ರ, ವೇದ ಉಪನಿಷತ್ತುಗಳಂತಹ ಪ್ರಾಚೀನ ಗ್ರಂಥಗಳನ್ನು ಮತ್ತು ಆಧುನಿಕ ಚಿಂತನೆಗಳನ್ನು ಅಧ್ಯಯನ ನಡೆಸಬೇಕು. ಇಲ್ಲದಿದ್ದರೆ ಸಾಮಾಜಿಕ ವಿಷಯಗಳ ಬಗ್ಗೆ ಸ್ಪಷ್ಟ ನಿಲುವುಗಳು ಹೊರಬರುವುದಿಲ್ಲ. ಹಾಗೆಯೇ ಸಾಮಾಜಿಕವಾದ ಉದ್ದೇಶವಿರದ ಬರಹಕ್ಕೆ ಯಾವ ಬೆಲೆಯೂ ಇಲ್ಲ ಎನ್ನುವುದನ್ನು ಅವರು ಅರಿತುಕೊಳ್ಳಬೇಕು. ನಮ್ಮ ಪರಂಪರೆಯನ್ನು ಅರ್ಥಮಾಡಿಕೊಂಡರೆ ಮಾತ್ರ ಸಮಕಾಲೀನ ಸಮಾಜದ ನಾಡಿಮಿಡಿತವನ್ನು ಕೇಳಿಸಿಕೊಳ್ಳಲು ಸಾಧ್ಯ. ಹೊಸ ತಲೆಮಾರಿನ ಬರಹಗಾರರಿಗೆ ಈ ಜವಾಬ್ದಾರಿ ಬೇಕಿದೆ. 

ಜೂನ್ 08, 2012

ನಾಡಿನ ಪ್ರಗತಿಯಲ್ಲಿ GIMಗಳ ಪಾತ್ರವಿದೆಯೇ?



ಮತ್ತೊಂದು ವಿಶ್ವ ಹೂಡಿಕೆದಾರರ ಸಮ್ಮೇಳನ ನಡೆಯುತ್ತಿದೆ. ಸರ್ಕಾರದ ಭಾರೀ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿಯವರು ಈಗ ಮತ್ತೊಮ್ಮೆ ದೇಶ ವಿದೇಶಗಳಲ್ಲೆಲ್ಲ ಸುತ್ತಿ ಬಂದು ರಾಜ್ಯದಲ್ಲಿ ಬಂಡವಾಳ ಹೂಡಲು ವಿದೇಶಿ ಬಂಡವಾಳಿಗರಿಗೆ ರತ್ನಗಂಬಳಿ ಹಾಸಿದ್ದಾರೆ. ಈ ಸಲ ೫ ಲಕ್ಷ ಕೋಟಿ ಬಂಡವಾಳ, ೧೦ ಲಕ್ಷ ಉದ್ಯೋಗ ಮತ್ತು ೨೦೨೦ರೊಳಗೆ ರಾಜ್ಯದ ಒಟ್ಟು ಉತ್ಪನ್ನ ದ್ವಿಗುಣಗೊಳ್ಳಬೇಕೆನ್ನುವ ಮಹತ್ವಕಾಂಕ್ಷೆಯನ್ನು ಕೈಗಾರಿಕಾ ಸಚಿವರು ಮತ್ತು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರು ವ್ಯಕ್ತಪಡಿಸಿದ್ದಾರೆ. ಅಮೆರಿಕದ ಭಾರೀ ಉದ್ದಿಮೆಪತಿ ವಾರನ್ ಬಫೆಟ್ ಅವರನ್ನೇ ಈ ಸಲ ಕರೆದು ಕೂರಿಸಲಾಗುವುದು ಎಂದು ಹೇಳಿಕೆ ನೀಡಿದ್ದರೂ ಅವರು ಒಪ್ಪಲಿಲ್ಲವೋ ಏನು ಕತೆಯೋ ಕೊನೆಗೆ ಜಪಾನು ಜರ್ಮನಿಗಳ ಉಪಸಚಿವ, ಉಪಪ್ರಧಾನಿಗಳ ಉಪಸ್ಥಿತಿಗೇ ತೃಪ್ತಿಪಟ್ಟುಕೊಳ್ಳಬೇಕಾಗಿದೆ. ನಮ್ಮ ಸರ್ಕಾರಗಳು ಕಳೆದ ೧೨ ವರ್ಷಗಳಿಂದ ಈ ವಿಶ್ವ ಹೂಡಿಕೆದಾರರ ಸಮ್ಮೇಳನಗಳನ್ನು (ಜಿಮ್) ಸಂಘಟಿಸುತ್ತಲೇ ಬಂದಿವೆ. ಮೊದಲ ಜಿಮ್ ೨೦೦೦ರ ಜೂನ್ ತಿಂಗಳಿನಲ್ಲಿ ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರವರ ನಾಯಕತ್ವದಲ್ಲಿ ಆಯೋಜನೆಗೊಂಡು ಆಗ ೧೩,೦೦೦ ಕೋಟಿ ರೂಪಾಯಿಗಳ ಬಂಡವಾಳ ಹೂಡಿಕೆ ಒಪ್ಪಂದಗಳಾಗಿದ್ದರೆ ಯಡಿಯೂರಪ್ಪನವರು ಹಾಗೂ ಮುರುಗೇಶ್ ನಿರಾಣಿಯವರು ಆಯೋಜಿಸಿದ್ದ  ಕಡೆಯ ೨೦೧೦ರ ಜಿಮ್ ನಲ್ಲಿ ಸುಮಾರು ೫ ಲಕ್ಷ ಕೋಟಿ ರೂಪಾಯಿಗಳ ಹೂಡಿಕೆ ಒಪ್ಪಂದಗಳಾಗಿತ್ತು. ಹೀಗೆ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಇಂತಹ ಬೃಹತ್ ಬಂಡವಾಳ ಹೂಡಿಕೆದಾರರ ಸಮ್ಮೇಳನದಿಂದ ರಾಜ್ಯ ಮುಂದೆ ಚಲಿಸುತ್ತಿದೆಯೇ ಅಥವಾ ಅಭಿವೃದ್ಧಿಯ ಚಕ್ರ ನಿಂತಲ್ಲೇ ನಿಂತೆದೇಯೇ, ನಿಜಕ್ಕೂ ಇಲ್ಲಿ ಅಭಿವೃದ್ಧಿಯಾಗಬೇಕಾದ ಕ್ಷೇತ್ರಗಳು ಯಾವುದು ಮತ್ತು ಹಿಂದುಳಿಯುತ್ತಿರುವ ಕ್ಷೇತ್ರಗಳು ಯಾವುದು, ಇತ್ಯಾದಿ ಯಾವೊಂದು ಪ್ರಶ್ನೆಗಳನ್ನು ಗಂಭೀರವಾಗಿ ಹಾಕಿಕೊಳ್ಳದೇ ನಮ್ಮ ಸರ್ಕಾರ ನಡೆಸುವವರು ಕೇವಲ ಬಂಡವಾಳದ ಬೆನ್ನುಬಿದ್ದಿರುವ ಲಕ್ಷಣಗಳು ನಿಚ್ಚಳವಾಗಿ ಕಾಣುತ್ತಿವೆ.
ಕೇವಲ ಪ್ರಚಾರಕ್ಕೇ ಹತ್ತಾರು ಕೋಟಿ ರೂಪಾಯಿಗಳನ್ನು ಈ ಜಿಮ್ ಸಂದರ್ಭದಲ್ಲಿ ಖರ್ಚು ಮಾಡಲಾಗುತ್ತಿದೆ. ಎರಡು ದಿನಗಳ ಅವಧಿಯಲ್ಲಿ ಈ ಸಮಾವೆಶದಲ್ಲಿ ಭಾಗವಹಿಸುವ ಅತಿಥಿಗಳಿಗೆ ಸ್ಟಾರ್ ಹೋಟೆಲ್‌ಗಳಲ್ಲಿ ಅದ್ದೂರಿ ವ್ಯವಸ್ಥೆಗೆಂದೂ ಕೋಟ್ಯಂತರ ರೂಪಾಯಿಗಳ ವೆಚ್ಚವಾಗುತ್ತದೆ. ಇಷ್ಟೆಲ್ಲಾ ಆದರೂ ಅಂತಿಮವಾಗಿ ರಾಜ್ಯ ಪಡೆದುಕೊಳ್ಳುವುದೇನು ಎಂಬ ಪ್ರಶ್ನೆಗೆ ಉತ್ತರ ಕೇಳಿದರೆ ನಿರಾಸೆಯಾಗುತ್ತದೆ. ಯಾಕೆಂದರೆ ಕಳೆದ ೨೦೧೦ರ ಜಿಮ್‌ನ ಉದಾಹರಣೆಯನ್ನೇ ನೋಡಿ. ಆಗಲೂ ಇನ್ನಿಲ್ಲದ ನಿರೀಕ್ಷೆಗಳನ್ನು ಹುಟ್ಟಿಸಲಾಗಿತ್ತು. ಎರಡು ದಿನಗಳ ಸಮಾವೇಶದಲ್ಲಿ ಸುಮಾರು ೩.೯೨ ಲಕ್ಷ ಕೋಟಿ ರೂಪಾಯಿಗಳ ೩೮೯ ಒಡಂಬಡಿಕೆಗಳಿಗೆ ಸಹಿ ಬಿದ್ದಿದ್ದವು. ಆದರೆ ಇವುಗಳಲ್ಲಿ ಇದುವರೆಗೆ ಜಾರಿಯಾಗಿರುವವು ಕೇವಲ ೩೮ ಯೋಜನೆಗಳು. ೬೮ ಯೋಜನೆಗಳು ಇನ್ನೂ ಅನುಷ್ಠಾನ ಹಂತದಲ್ಲಿವೆ. ಎಸ್.ಎಂ.ಕೃಷ್ಣ ಕಾಲದಿಂದ ಲೆಕ್ಕ ಹಿಡಿದರೂ ಇದುವರೆಗಿನ ಒಟ್ಟು ಒಡಂಬಡಿಕೆಗಳಲ್ಲಿ ಜಾರಿಯಾಗಿರುವುದು ಕೇವಲ ಶೇಕಡ ೪೦ರಷ್ಟು ಮಾತ್ರ. ಆಗ ಅತಿ ಹೆಚ್ಚು ಬಂಡವಾಳ ಹೂಡಿಕೆ ಆಗಿದ್ದು ಬಳ್ಳಾರಿ ಜಿಲ್ಲೆಯಲ್ಲಿ. ಆದರೆ ಅಲ್ಲಿ ೩೫ ಕಂಪನಿಗಳು ಒಟ್ಟು ೧.೩೯ ಲಕ್ಷ ಕೋಟಿ ರೂಪಾಯಿ ಹೂಡಿಕೆ ಒಪ್ಪಂದ ಮಾಡಿಕೊಂಡಿದ್ದರಲ್ಲಿ ಅಂತಿಮವಾಗಿ ಬಂದದ್ದು ಕೇವಲ ೫ ಕಂಪನಿಗಳು ಮಾತ್ರ.
ಹಾಗಾದರೆ ಯಾಕೆ ಹೀಗೆ? ಈ ಸಲವೂ ಹೀಗೇ ಆಗುವುದಿಲ್ಲವೇ ಅಂದರೆ ಖಂಡಿತಾ ಈ ಸಲ ಆಗುವುದೂ ಹೀಗೆ ಎಂದು ಯಾವ ಅಳುಕಿಲ್ಲದೇ ಉತ್ತರಿಸಬಹುದು. ಯಾಕೆಂದರೆ ನಮ್ಮ ಸರ್ಕಾರದ ದೂರದೃಷ್ಟಿಯ ಕೊರತೆಯೇ ಪ್ರಮುಖ ಕಾರಣ. ಮುಖ್ಯವಾಗಿ ಕೈಗಾರಿಕಾ ಮತ್ತು ಸೇವಾ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆ ನಡೆಸ ಬಯಸುವ ಯಾವುದೇ ಕಂಪನಿಗೆ ಮೂಲಭೂತ ಸೌಕರ್ಯ ಎನ್ನುವುದು ಪೂರ್ವಶರತ್ತಾಗಿರುತ್ತದೆ. ಭೂಮಿ, ವಿದ್ಯುತ್ ಮತು ನೀರಿನ ಸೌಕರ್ಯಗಳು ಸಮರ್ಪಕವಾಗಿದ್ದರೇನೇ ಇದು ಸಾಧ್ಯ. ಆದರೆ ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಏನು ಏನೂ ಮಾಡದೇ ಕೇವಲ ಮಾತಿನಲ್ಲಿ ಎಲ್ಲವನ್ನೂ ಸಾಧಿಸುತ್ತದೆ.
ಕಳೆದ ಜಿಮ್‌ಗೆ ಮುನ್ನ ಕರ್ನಾಟಕ ಸಾರ್ಕಾರವು ಕೈಗಾರಿಕೆಗಳ ಸ್ಥಾಪನೆಗಾಗಿ ರಾಜ್ಯದಾದ್ಯಂತ ಒಟ್ಟು ೧.೧೯ ಲಕ್ಷ ಎಕರೆಗಳಷ್ಟು ಜಮೀನಿ ಸ್ವಾದೀನಪಡಿಸಿಕೊಳ್ಳುವ ಲ್ಯಾಂಡ್ ಬ್ಯಾಂಕ್ ಯೀಜನೆಯನ್ನು ಘೋಷಿಸಿತ್ತು. ಆದರೆ ಇದೊಂದು ಅತ್ಯಂತ ಮೂರ್ಖತನದ ಯೋಜನೆ ಎಂಬುದು ಸರ್ಕಾರಕ್ಕೆ ಅರಿವಾಗಲೇ ಇಲ್ಲ. ೨೦೧೦ರ ಜಿಮ್‌ನಲ್ಲಿ ಕೊರಿಯಾ ದೇಶದ ಪೋಸ್ಕೋ ಕಂಪನಿಯೊಂದಿಗೆ ಮಾಡಿಕೊಂಡ ಒಪ್ಪಂದಕ್ಕೆ ಪೂರಕವಾಗಿ ಉಕ್ಕು ತಯಾರಿಕಾ ಘಟಕ ಸ್ಥಾಪಿಸಲಿಕ್ಕಾಗಿ ಗದಗ ಜಿಲ್ಲೆಯ ಹಳ್ಳಿಗುಡಿಯ ೩೨೦೦ ಎಕರೆ ಜಮೀನನ್ನು ಸ್ವಾದೀನ ಮಾಡಿಕೊಳ್ಳಲು ಸರ್ಕಾರ ಹೊರಟೊಡನೆ ಈ ಪ್ರದೇಶದ ರೈತ ಸಮೂಹ ಎದ್ದು ನಿಂತು ಹೋರಾಟಕ್ಕಿಳಿಯಿತು. ಪ್ರಾಣ ಕೊಟ್ಟೇವು ಭೂಮಿ ಬಿಡೆವು ಎಂಬ ಘೋಷಣೆಯ ಈ ಹೋರಾಟಕ್ಕೆ ತೋಂಟದ ಸಿದ್ದಲಿಂಗ ಸ್ವಾಮೀಜಿಗಳು ನೇತ್ರತ್ವ ವಹಿಸಿದರು. ಮೇಧಾ ಪಾಟ್ಕರ್ ಅವರೂ ಬಂದರು. ಅಲ್ಲಿಗೆ ಸರ್ಕಾರ ಹಿಂದಡಿ ಇಡಲೇ ಬೇಕಾಯಿತು. ಇದೇ ರೀತಿ ಹೊಸಪೇಟೆ ತಾಲ್ಲೂಕಿನ ಗಾದಿಗನೂರು ಬಳಿ ಬೃಹತ್ ಉಕ್ಕಿನ ಕಾರ್ಖಾನೆ ಸ್ಥಾಪಿಸಲು ಮುಂದೆ ಬಂದಿದ್ದ ಭೂಷಣ್ ಸ್ಟೀಲ್ ಕಂಪನಿಗೆ ದರೋಜಿ ಕರಡಿಧಾಮದ ವನ್ಯಜೀವಿಗಳಿಗೆ ಅಪಾಯವಾಗುವ ಹಿನ್ನೆಲೆಯಲ್ಲಿ ಅನುಮತಿ ನಿರಾಕರಿಸಲಾಯಿತು. ಇಂತಹ ಉದಾಹರಣೆಗಳು ಒಂದೆಡೆ ಅನ್ನ ಬೆಳೆವ ರೈತನ ಹಿತಾಸಕ್ತಿಯನ್ನೇ ಬಲಿಕೊಡುವ ಸರ್ಕಾರದ ನೀತಿಗಳನ್ನು ತೋರಿಸಿದರೆ ಕೈಗಾರಿಕಗಳನ್ನು ಸ್ಥಾಪಿಸುವಾಗ ಬೇಕಾದ ಮುನ್ನೆಚ್ಚರಿಕೆಗಳಿಲ್ಲದಿಲ್ಲದಿರುವುದನ್ನು ತೋರಿಸುತ್ತದೆ.
ಜಿಮ್‌ನಂತಹ ದೊಡ್ಡ ಬಂಡವಾಳ ಹೂಡಿಕೆ ಸಮಾವೇಶದಲ್ಲಿ ಬಂಡವಾಳ ತೊಡಗಿಸಲು ಹೂಡಿಕೆದಾರರು ಹೆದರುವುದು ನಮ್ಮ ರಾಜಕಾರಣಿಗಳ ಭೂದಾಹವನ್ನು ನೋಡಿ. ಇದಕ್ಕೆ ಇಲ್ಲೊಂದು ಉದಾಹರಣೆ ನೋಡಿ. ೨೦೧೦ರ ಜಿಮ್‌ನಲ್ಲಿ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಇರುವ ದೇವನಹಳ್ಳಿಯ ಸುತ್ತಮುತ್ತ ಸುಮಾರು ೬೦೦೦ ಎಕರೆಗಳನ್ನು ಉದ್ಯಮಿಗಳಿಗೆ ಕೊಡುವ ಸಲುವಾಗಿ ಸರ್ಕಾರವು ಭೂಸ್ವಾಧೀನ ನಡೆಸಿದೆ ಎಂದು ಘೋಷಿಸಲಾಗಿತ್ತು. ಅಂದು ಸಮ್ಮೇಳನದಲ್ಲಿ ಭಾಗವಹಿಸಿದ ಹಲವಾರು ಕಂಪನಿಗಳಲ್ಲಿ ‘ಪಾಶ್ ಸ್ಪೇಸ್ ಇಂಟರ್ನ್ಯಾಷನಲ್ ಪ್ರೈವೇಟ್ ಲಿಮಿಟೆಡ್’ ಕೂಡಾ ಒಂದು. ಹೀಗೆ ಅಂದು ಉತ್ಸಾಹದಿಂದ ಭಾಗವಹಿಸಿದ್ದ ಈ ಕಂಪನಿಯ ಒಡೆಯ ಪಾಶ್  ಅವರಿಗೆ ಕೊನೆಗೆ ಗುಂಡಿಗೆ ಬಿದ್ದ ಅನುಭವವಾಗಿ ಮುರುಗೇಶ್ ನಿರಾಣಿಯವರ ವಿರುದ್ಧವೇ ನ್ಯಾಯಾಲಯದ ಮೆಟ್ಟಿಲನ್ನೂ ಏರಿದ್ದರು. ಯಾಕೆಂದರೆ ಅವರಿಗೆ ನೀಡಲಾದ ಜಮೀನನ್ನು ಅವರದ್ದಲ್ಲವೆಂದು ಅವರೇ ಒಪ್ಪಿಕೊಂಡಿರುವ ಅವರ ಸಹಿಯಿರುವ ಪತ್ರವೊಂದನ್ನು ಕೆಐಎಡಿಬಿ ಅಧಿಕಾರಿಗಳು ಆಲಂ ಅವರಿಗೆ ನೀಡಲಾಗಿತ್ತು. ಆಗ ಆಲಂ ಪಾಶ ಬೇಸ್ತು ಬಿದ್ದಿದರು. ಅದು ಅವರ ಫೋರ್ಜರಿ ಸಹಿಯಾಗಿತ್ತು ಎನ್ನುವುದು ಅವರ ವಾದ.
ಈಗ ರಾಜ್ಯದ ಸಣ್ಣ ಕೈಗಾರಿಗೆಗಳ ಒಕ್ಕೂಟವಾದ ಕಾಸಿಯಾವು ರಾಜ್ಯದಲ್ಲಿರುವ ಸುಮಾರು ೬.೫ ಲಕ್ಷ ಸಣ್ಣ ಕೈಗಾರಿಕೆಗಳಿಗೆ ಕಳೆದ ಎರಡು ವರ್ಷಗಳಲ್ಲಿ ಮೂರು ಪಟ್ಟು ಆಸ್ತಿ ತೆರಿಗೆ ಹೆಚ್ಚಿಸಲಾಗಿದ್ದರೆ ನಾನಾ ವಿನಾಯ್ತಿಗಳನ್ನು ನೀಡಿ ವಿದೇಸಿ ಹೂಡಿಕೆದಾರರಿಗೆ ರತ್ನಗಂಬಳಿಹಾಸುತ್ತಿರುವುದನ್ನು ವಿರೋಧಿಸುವುದಾಗಿ ಹೇಳಿದೆ.

ನಮ್ಮ ಕೈಗಾರಿಕಾ ಸಚಿವರಿಗೆ ಜಪಾನಿಗೆ ಹೋದಾಗ ಅಲ್ಲಿ ಓಡಾಡುವ ಅತಿವೇಗದ ರೈಲನ್ನು ನೋಡಿ ಅಂತದೇ ರೈಲನ್ನು ನಮ್ಮ ರಾಜ್ಯದಲ್ಲಿಯೂ ಓಡಿಸುವ ಮನಸ್ಸಾಗಿದೆಯಂತೆ. ಆದರೆ ನಮ್ಮ ಸಚಿವರಿಗೆ ಇದು ಮಾತ್ರ ಮಾದರಿಯಾಗುತ್ತದೆಯೇ ವಿನಃ ಸಂಪೂರ್ಣ ನೆಲಕ್ಕೆ ಬಿದ್ದಂತಹ ಸಂದರ್ಭದಲ್ಲಿಯೂ ಮತ್ತೆ ಜಗತ್ತಿನಲ್ಲಿ ಜಪಾನ್ ದೇಶಕ್ಕೆ ತಲೆ ಎತ್ತಿ ನಿಲ್ಲಲು ಕಾರಣವಾದ ಅದರ ಸ್ವಾಭಿಮಾನಿ ಆರ್ಥಿಕ ನೀತಿ ಗೋಚರವಾಗದಿರುವುದು ದುರಂತ. ನಮ್ಮ ಪರಾವಲಂಬಿ ನೀತಿಯಿಂದಲೇ ನಮ್ಮ ಜಿಮ್‌ನಲ್ಲಿ ಜಪಾನಿನ ಅತಿಥಿಗಳಿರುತ್ತಾರೆಯೇ ವಿನಃ ಅವರ ದೇಶಗಳ ಸಮಾವೇಶಗಳಲ್ಲಿ ನಮ್ಮರಿರುವುದಿಲ್ಲ.

ನಿಜಕ್ಕೂ ನಮ್ಮ ಸರ್ಕಾರಗಳಿಗೆ ರಾಜ್ಯವನ್ನು ಪ್ರಗತಿಯ ಪಥದಲ್ಲಿ ನಡೆಸುವ ಇಚ್ಛೆಯಿರುವುದಾದರೆ ಇಂತಹ ಜಿಮ್‌ಗಳು ಉಪಯೋಗಕ್ಕೆ ಬರುವುದಿಲ್ಲ ಎಂಬುದನ್ನು ಮೊದಲು ಅರಿಯಬೇಕು. ನಮ್ಮ ರಾಜ್ಯದ ಆರ್ಥಿಕತೆ ಎಂಬುದು ಎಷ್ಟೊಂದು ಅಸಮಾನವಾಗಿಬಿಟ್ಟಿದೆ ಎಂಬುದನ್ನಿ ಇತ್ತೀಚಿನ ಆರ್ಥಿಕ ಸಮೀಕ್ಷೆಯೇ ಹೇಳುತ್ತದೆ. ೨೦೧೧-೧೨ರ ಸಾಲಿನಲ್ಲಿ ನಮ್ಮ ಒಟ್ಟು ರಾಜ್ಯ ಉತ್ಪನ್ನ (ಜಿಎಸ್‌ಡಿಪಿ)ಯಲ್ಲಿ ಶೇಕಡ ೫೫ ರಷ್ಟು ಪಾಲು ಕೇವಲ ಸೇವಾ ಕ್ಷೇತ್ರ ಹೊಂದಿದ್ದರೆ, ಪ್ರಾಥಮಿಕ ಕ್ಷೇತ್ರವಾದ ಕೃಷಿ ಕ್ಷೇತ್ರದ ಪಾಲು ಕೇವಲ ಶೇಕಡ ೧೬.೨೨ ಮತ್ತು ಕೈಗಾರಿಕಾ ಕ್ಷೇತ್ರದ ಪಾಲು ಶೇಕಡ ೨೮.೬ ಮಾತ್ರ. ಹಾಗೆಯೇ ೨೦೧೨ ಮಾರ್ಚ್ ಅವಧಿಯ ಅಧಿಕೃತ ಅಂಕಿಅಂಶಗಳ ಪ್ರಕಾರ ರಾಜ್ಯದ ಕೃಷಿ ಕ್ಷೇತ್ರದ ಬೆಳವಣಿಗೆ ಕೇವಲ ಶೇ.೨.೯ರ ದರದಲ್ಲಿದ್ದರೆ ಕೈಗಾರಿಕೆಯ ಬೆಳವಣಿಗೆ ದರ ಕೇವಲ ಕೇವಲ ಶೇ.೩.೬. ಅದೇ ಸೇವಾ ಕ್ಷೇತ್ರದ ಬೆಳವಣಿಗೆ ಶೇಕಡ ೧೦.೬ ರಷ್ಟಿದೆ.
ನಮ್ಮ ಆರ್ಥಿಕ ಅಭಿವೃದ್ಧಿಯ ದುರಂತವೇ ಇದು. ಸೇವಾಕ್ಷೇತ್ರ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನಗಳೆಲ್ಲಾ ಅಭಿವೃದ್ದಿ ಹೊಂದುವುದು ಒಳ್ಳೇಯದೇ. ಬೆಂಗಲೂರು ಜಗತ್ತಿನಲ್ಲೇ ನಾಲ್ಕನೇ ದೊಡ್ಡ ತಂತ್ರಜ್ಞಾನ ಕೇಂದ್ರವಾಗಿರುವುದೂ ನಮಗೆ ಹೆಮ್ಮೆ ತರುವ ವಿಷಯ. ಆದರೆ ಇದೆಲ್ಲಾ ನಮ್ಮ ಕೃಷಿ ಮತ್ತು ಕೈಗಾರಿಕೆಗಳನ್ನು ಬಲಿ ಕೊಟ್ಟೇ ಆಗಬೇಕೆ? ಕೃಷಿ ಕೈಗಾರಿಕೆ ಮತ್ತು ಸೇವಾಕ್ಷೇತ್ರ ಮೂರರ ಬೆಳವಣಿಗೆಯನ್ನೂ ಸಮತೋಲನದಿಂದ ಕೊಂಡಿಯ್ದಾಗ ಮಾತ್ರ ನಿಜವಾದ ಸರ್ವತೋಮುಖ ಪ್ರಗತಿ ಸಾಧ್ಯವಲ್ಲವೇ? ಅದೇ ರೀತಿಯಲ್ಲಿ ಬಂಡವಾಳ ಹೂಡಿಕೆಯ ಪ್ರಧಾನ ಭಾಗ ಬೆಂಗಳೂರಿನ ಸುತ್ತ ಮುತ್ತಲೇ ಇರುತ್ತದೆ. ಈಗಾಗಲೇ ಎಲಾ ರೀತಿಯಲ್ಲೂ ಹೊರಲಾರದ ಭಾರ ಹೊತ್ತಿರುವ ಬೆಂಗಳೂರಿಗೆ ಇನ್ನೂ ಎಷ್ಟು ಭಾರ ಹೊರಿಸುತ್ತಾ ಹೋಗಬೇಕು? ಹೀಗೇ ಹೋದರ ಬೆಂಗಳೂರಿನ ನೀರಿನ ಸಮಸ್ಯೆ ಮತ್ತು ಟ್ರಾಫಿಕ್ ಸಮಸ್ಯೆಗಳೆರಡೂ ಅಪಾರ ಪ್ರಮಾಣಕ್ಕೆ ಉಲ್ಬಣಗೊಂಡಾಗ ನಮಗಿರುವ ಪರಿಹಾರವಾದರೂ ಏನು? ಈ ನಿಟ್ಟಿನಲ್ಲಿ ನಿವೃತ್ತ ಐಎಎಸ್ ಅಧಿಕಾರಿಯಾಗಿದ್ದ ಚಿರಂಜೀವಿ ಸೀಂಗ್ ಅವರು ತಾವು ನಗರಾಭಿವೃದ್ಧಿ ಕಾರ್ಯದರ್ಶಿಯಾಗಿದ್ದಾಗ ಹರಿಹರ-ರಾಣೇಬೆನ್ನೂರಿನಲ್ಲಿ ಎರಡನೇ ಹೊದ ರಾಜಧಾನಿಯೊಂದನ್ನು ಸ್ಥಾಪಿಸಲು ಸರ್ಕಾರದ ಮುಂದೆ ಸಲಹೆ ನೀಡಿದ್ದರು. ನಮ್ಮ ಇಂದಿನ ಪರಿಸ್ಥತಿಯಲ್ಲಿ ಅದು ರಾಜ್ಯದ ನಿಜವಾದ ಪ್ರಗತಿಗೆ ಸಹಾಕಾರಿಯಾಗಬಲ್ಲದು.
ಹೀಗಾಗಿ ಈ ದುಂದು ವೆಚ್ಚ ಮತ್ತು ಪೊಳ್ಳು ಒಡಂಬಡಿಕೆಗಳ ಜಿಮ್‌ಗಳ ಅನಿವಾರ್ಯತೆ ಇಂದು ಕರ್ನಾಟಕಕ್ಕಿಲ್ಲ ಎಂದಷ್ಟೆ ಹೇಳಬಹುದು.
(ದ ಸಂಡೆ ಇಂಡಿಯನ್ ಪತ್ರಿಕೆಯಲ್ಲಿ ಪ್ರಕಟಿತ ಲೇಖನ)




ಜೂನ್ 04, 2012

ಮನಸ್ಸನ್ನು ತೇವಗೊಳಿಸುವ ”ನಡುವೆ ಸುಳಿವಾತ್ಮನ ಬದುಕು-ಬಯಲು’





"ಅಮ್ಮಾ ನನಗ್ಯಾಕೆ ಈ ಸಂಕಟ? ಯಾಕೆ ಇಂತ ಪರೀಕ್ಷೆಗೆ ನನ್ನ ಒಳಪಡಿಸ್ತಿದೀಯ? ನಿನ್ನ ನಂಬಿದವರಿಗೆ ಎಲ್ಲವನ್ನೂ ನೀನು ಕೊಡ್ತೀಯ ಅಂತಾರೆ. ಆದರೆ ನನಗೆ ನೀನು ಕೊಟ್ಟಿರೋದು ನೀನು ಬರೀ ನೋವನ್ನಷ್ಟೆ. ನಾನು ಮಾಡಿರೋ ತಪ್ಪಾದರೂ ಏನು? ಗಂಡಸಿನ ರೂಪದಲ್ಲಿ ಹೆಣ್ಣಿನ್ ಭಾವನೆ ತುಂಬಿ ಸೃಷ್ಟಿ ಮಾಡಿರೋಳು ನೀನೇ. ನಿನ್ನ ತಪ್ಪಿಗೆ ನಿನ್ನದೇ ದೇವಸ್ಥಾನದಲ್ಲಿ ನನಗೆ ಶಿಕ್ಷೆಯಾಗುತ್ತಿದೆ. ನೀನು ಹೆಣ್ಣಲ್ವ? ಇನ್ನೊಂದು ಹೆಣ್ಣಿನ ಭಾವನೆ ನಿನಗೆ ಅರ್ಥ ಆಗಲ್ವ? ನಿನಗೆ ಕನಿಕರ ಇಲ್ವಾ? ಮುಂದಿನ ವರ್ಷ ಇದೇ ದಿನದ ಹೊತ್ತಿಗೆ ನಿನ್ನ ಹಾಗೆ ನನ್ನನ್ನೂ ಹೆಣ್ಣಾಗಿ ಮಾಡ್ಬೇಕು. ಆಗಲಿಲ್ಲ ಆಂದ್ರೆ ಪೂರ‍್ತಿ ಗಂಡಸಾಗಿಯಾದ್ರೂ ಮಾಡೇ....." ಎಂದು ದೊರೈಸ್ವಾಮಿಯನ್ನು  ಸಮಯಾಪುರದ ದೇವಸ್ಥನದಲ್ಲಿ ಆತನ ತಲೆಗೂದಲನ್ನು ಬೋಳಿಸುವಾಗ ನೋವು, ಹತಾಶೆ, ಸಿಟ್ಟಿನಿಂದ ಹೇಳಿಕೊಂಡ ಮಾತುಗಳನ್ನು ರಂಗದ ಮೇಲೆ ಕೇಳಿದ ನಮಗೆಲ್ಲಾ ಇಷ್ಟು ದಿನದ ನಮ್ಮ ಅರಿವಿನ ಮೂಲಗಳೆಲ್ಲಾ ಪತರಗುಟ್ಟಿದಂತಹ ಅನುಭವ. ಕಿಕ್ಕಿರಿದ ಪ್ರೇಕ್ಷಕರ ಎದುರು ನೆನ್ನೆ ಶಿವಮೊಗ್ಗದ ಡಿ.ವಿ.ಎಸ್. ರಂಗಮಂದಿರಲ್ಲಿ ಪ್ರದರ್ಶನವಾದ ’ನಡುವೆ ಸುಳಿವಾತ್ಮನ ಬದುಕು-ಬಯಲು’ ನಾಟಕದ ಒಂದು ದೃಶ್ಯ ಇದು.

ಶಿವಮೊಗ್ಗದ ಕ್ರಿಯಾಶೀಲ ರಂಗ ಸಂಘಟನೆಯಾದ ’ರಂಗ ಬೆಳಕು’ ತಂಡವು ಆಯೋಜಿಸಿದ್ದ ಹೆಗ್ಗೋಡಿನ ’ಜನಮನದಾಟ’ ತಂಡದ ಈ ನಾಟಕ ಎ.ರೇವತಿಯವರ ಟ್ರೂತ್ ಎಬೌಟ್ ಮಿ- ಎ ಹಿಜ್ರಾ ಲೈಫ್’ ಕೃತಿಯ ಅನುವಾದಿತ ಕೃತಿಯಾದ ’ಬದುಕು=ಬಯಲು’ ಕೃತಿಯ ಕೆಲವು ಭಾಗಗಳ ರಂಗರೂಪ. ತಮಿಳುನಾಡಿನ ಸೇಲಂ ಜಿಲ್ಲೆಯ ನಾಮಕ್ಕಂ ತಾಲ್ಲೂಕಿನ ಹಳ್ಳಿಯೊಂದರಲ್ಲಿ ಗೌರವಾನ್ವಿತ ಕುಟುಂಬವೊಂದರಲ್ಲಿ ಹುಟ್ಟಿ ಬೆಳೆದ ದೊರೈಸ್ವಾಮಿ ಎಂಬ ಬಾಲಕ ಬೆಳೆಬೆಳೆಯುತ್ತಾ ತನ್ನೊಳಗಿನ ಭಾವನೆಗಳಿಗೂ ತನ್ನ ದೇಹದ ಸಂರಚನೆಗೂ ಇರುವ ವೈರುಧ್ಯವನ್ನು ಕಂಡುಕೊಳ್ಳುತ್ತಾ ವಿಚಿತ್ರ ತಳಮಳಗಳಿಗೊಳಗಾಗುತ್ತಾ ಹೋಗುತ್ತಾನೆ. ದೊರೈಸ್ವಾಮಿಯ ಹೆಣ್ಣು ನಡವಳಿಕೆಗಳು ವ್ಯಕ್ತಗೊಳ್ಳುತ್ತಾ ಹೋದಂತೆ, ಮೇಲುಗಡೆಯ ಗಂಡಿಗಿಂತಲೂ ಒಳಗಡೆಯ ಹೆಣ್ಣು ಗಟ್ಟಿಗೊಳ್ಳುತ್ತಾ ಹೋದಂತೆ ಅದನ್ನು ಕುಟುಂಬದ ಅಣ್ಣನ ದ್ವೇಷ, ಹೊರಗಿನ ಸಮಾಜದ ಅಪಹಾಸ್ಯಗಳಿಗೆ ಈಡಾಗುತ್ತಾ ಹೋಗುತ್ತಾನೆ. ಕುಟುಂಬ ಇಂತಹ ಮಗನ ಹೆಣ್ಣು ನಡವಳಿಕೆಯಿಂದ ಸಮಾಜದಿಂದ ಎದುರಾಗುವ ಅವಮಾನಗಳನ್ನು ನೆನೆಸಿಕೊಂಡು  ಕುಗ್ಗುತ್ತದೆ. ದೊರೈಸ್ವಾಮಿಯನ್ನು ಗಂಡಾಗಿಯೇ ಉಳಿಸಲು ಇನ್ನಿಲ್ಲದ ಹರಸಾಹಸ ನಡೆಯುತ್ತದೆ. ಆಗ ದೊರೈ ಸ್ವಾಮಿಗೆ ಎದುರಾಗುವ ಮೊದಲ ಪ್ರಶ್ನೆ ಹೀಗಿರುವುದು ತಾನೊಬ್ಬನೆಯಾ ಅಥವಾ ಇನ್ನೂ ಬೇರೆಯವರೂ ಇರಬಹುದಾ? ಎಂಬುದು. ಈ ಹುಡುಕಾಟದಲ್ಲಿ ಇನ್ನಿತರ ಹಿಜ್ರಾ ಸಮುದಾಯದೊಳಕ್ಕೆ ದೊರೈ ಸ್ವಾಮಿಯ ಪ್ರವೇಶವಾಗುತ್ತದೆ. ಮನೆಬಿಟ್ಟು ಹೋಗಿ ಕೆಲದಿನ ಅವರೊಂದಿಗೆ ಇರುವ ದುರೈಸ್ವಾಮಿ ಮನೆಗೆ ಬಂದಾಗ ಮತ್ತದೇ ಹೊಡೆತ, ಬಡಿತ, ಹೀಯಾಳಿಕೆ, ಅವಮಾನ. ಆಗ ದೆಹಲಿಗೆ ತನ್ನ ಹಿಜ್ರಾ ಗುರುವನ್ನು ಆರಿಸಿಕೊಂಡು ಹೋಗಿ ಅಲ್ಲಿ ಆಕೆಯ ’ಚೇಲಾ’ ಆಗಿ ನಿರ‍್ವಾಣವನ್ನೂ ( ಅಪರೇಷನ್) ಮಾಡಿಸಿಕೊಳ್ಳುವ ದೊರೈಸ್ವಾಮಿ ’ರೇವತಿ’ಯಾಗುತ್ತಾಳೆ. ಪೂರ್ತಿ ಹೆಣ್ಣಾಗಿ ಸೀರೆಯುಟ್ಟುಕೊಂಡು ಬರುವ ರೇವತಿಯನ್ನು ಕಂಡು ಮನೆಯವರು ’ಇದೇನಿ ವೇಷ ಹಾಕ್ಕೊಂಡು ಬಂದಿದೀಯಾ?’ ಎಂದು ಗದರಿಸುವ ಮನೆಯವರಿಗೆ ’ಈಗ ನಿಮ್ಮೆದುರಿಗಿರುವುದೇ ನನ್ನ ನಿಜ ರೂಪ. ಇಷ್ಟು ದಿನ ಇದ್ದಿದ್ದು ವೇಷದಲ್ಲಿ’
ಎಂದು ತಿರುಗಿ ನಿಂತು ಬಿಡುತ್ತಾಳೆ. ’ನಿನ್ನ ಪಾಲಿನ ಆಸ್ತಿ ಬೇಕಾದರೆ ಒಂದು ದಿನದ ಮಟ್ಟಿಗಾದರೂ ನೀನು ನ್ಯಾಯಾಲಯದಲ್ಲಿ ಗಂಡುಮಗನಂತೆ ನಿಲ್ಲಬೇಕು’ ಎನ್ನು ವಕೀಲರ ಬೇಡಿಕೆಯನ್ನು ರೇವತಿ ಧಿಕ್ಕರಿಸಿ ಬಿಡುತ್ತಾಳೆ. ಮತ್ತೆ ದೆಹಲಿಯಿಂದ ಮುಂಬೈ ಹೋಗುವ ರೇವತಿ ತನ್ನ ಸಮುದಾಯದೊಂದಿಗೆ ಸೆಕ್ಸ್‌ವರ್ಕ್ ಅನಿವಾರ್ಯವಾಗುವಂತ ಪರಿಸ್ಥಿತಿ ಅಲ್ಲಿ ನಿರ್ಮಾಣವಾಗುತ್ತದೆ. ಕ್ರಮೇಣ ತನ್ನ ಸಮುದಾಯದ ವಾಸ್ತವತೆಗಳು, ತನ್ನ ಸಮುದಾಯವನ್ನು ನಡೆಸಿಕೊಳ್ಳುವ ರೀತಿ ರಿವಾಜುಗಳು, ಇಬ್ಬಂದಿತನಗಳೆಲ್ಲಾ ಆಕೆಯ ಮುಂದೆ ತೆರೆದುಕೊಳ್ಳುತ್ತಾ ಹೋಗುತ್ತವೆ. ಹಿಜ್ರಾ ಸಮುದಾಯದ ಗುರುವಿನಲ್ಲಿ ಹೊಸ ತಾಯಿಯೊಬಬ್ಳನ್ನು ಕಾಣುವ; ಮೊದಲ ಬಾರಿಗೆ ಸೀರಿಯುಟ್ಟು ಕನ್ನಡಿಯಲ್ಲಿ ತನ್ನ ಸೌಂದರ್ಯ ನೋಡಿ ಸಂಭ್ರಮ ಪಡುವ; ವಿಕೃತನೊಬ್ಬನ ಕಾಮದಾಹಕ್ಕೆ ಅತ್ಯಾಚಾರಕ್ಕೊಳಗಾಗುವ; ತಮ್ಮ ಸಮುದಾಯಕ್ಕೆ ರಾಮಾಯಣದಲ್ಲಿ ಇರುವ ಪ್ರಾಮಖ್ಯತೆಯನ್ನು ಕೇಳುವ; ಸಮಯಾಪುರ ದೇವಸ್ಥನದಲ್ಲಿ ದೇವರನ್ನು ಪ್ರಶ್ನಿಸುವ; ಅಣ್ಣನೆದುರು ತನ್ನತನವನ್ನು ರಾಜಾರೋಷವಾಗಿ ಘೋಷಿಸಿಕೊಳ್ಳುವ ದೊರೈಸ್ವಾಮಿ-ರೇವತಿಯ ಚಿತ್ರಗಳು ಪ್ರೇಕ್ಷಕರನ್ನು ಬಹುಕಾಲ ಕಾಡುವಂತವು. ನಾಟಕದ ಕೊನೆಯ ಭಾಗದಲ್ಲಿ ರೇವತಿಯ ತಂದೆ ವಾಸ್ತವವನ್ನು ಒಪ್ಪಿಕೊಂಡು ಆಕೆಗೆ ಎಲ್ಲೂ ನೋವಾಗದಂತೆ ಇರಲು ಹೆಂಡತಿ ಮತ್ತು ಹಿರಿಯ ಮಗನಿಗೆ ಹೇಳುವ ದೃಶ್ಯವೇ ಇಡೀ ನಾಟಕದ ಆಶಯವನ್ನು ಬಿಂಬಿಸುತ್ತದೆ. ಆ ತಂದೆ ’ರೇವತಿ’ಗೆ ತೋರುವ ಮಮತೆಯನ್ನು ಇಡೀ ಸಮಾಜ ಮತ್ತು ಆಳುವವರು ’ಹಿಜ್ರಾ’ ಸಮುದಾಯಕ್ಕೆ ತೋರಬೇಕೆಂದು ಎಂಬ ಸಂದೇಶವನ್ನು ಪ್ರೇಕ್ಷಕರಿಗೂ ದಾಟಿಸುವಲ್ಲಿ ನಿರ್ದೇಶಕರಾದ ಗಣೇಶ್ ಮೇಸ್ಟ್ರು ಸಫಲರಾಗಿದ್ದಾರೆ. ಆದರೆ ನಾಟಕದ ಮುಕ್ತಾಯ ಕೊಂಚ ತರಾತುರಿಯಲ್ಲಾದಂತೆ ಅನ್ನಿಸುತ್ತದೆ. ಬದುಕು- ಬಯಲು ಕೃತಿ ಬಯಲು ಮಾಡುವ ಮತ್ತಷ್ಟು ನಗ್ನ ಸತ್ಯಗಳನ್ನು ಈ ನಾಟಕದಲ್ಲಿ ಸೇರಿಸುವ ಅಗತ್ಯವಿದೆ ಅನ್ನಿಸುತ್ತದೆ.

ಇಂತಹದೊಂದು ವಸ್ತುವಿಷಯದ ಕತೆಯನ್ನು ರಂಗದ ಮೇಲಿಳಿಸುವ ಕೆಲಸ ನಿಜಕ್ಕೂ ಸವಾಲಿನದೇ ಸರಿ. ಆದರೆ ಈ ಸಾವಾಲನ್ನು ಸ್ವೀಕರಿಸಿರುವ ’ಜನಮನದಾಟ’ ಸಂಪೂರ್ಣ ಯಶಸ್ಸೂ ಕಂಡಿದೆ. ಪ್ರಾಯಶ: ಹಿಜ್ರಾಗಳ ಬದುಕನ್ನು ಹೇಳುವ ನಾಟಕವೊಂದು ಕನ್ನಡದಲ್ಲಿ ಪ್ರದರ್ಶನಗೊಳ್ಳುತ್ತಿರುವುದು ಇದೇ ಮೊದಲೆಂದು ಕಾಣುತ್ತದೆ. ನಾಟಕದ ಪ್ರಮುಖ ಪಾತ್ರವಾದ ರೇವತಿಯ ಪಾತ್ರದಲ್ಲಿ ಚಂದ್ರು ಆ ಪಾತ್ರವೇ ತಾವಾಗಿದ್ದಾರೆನ್ನುವಷ್ಟರ ಮಟ್ಟಿಗೆ ಅಭಿನಯಿಸಿದ್ದಾರೆ. ಬಾಲಕ ದೊರೈಸ್ವಾಮಿ ಮತ್ತು ಹಿಜ್ರಾ ಗುರುವಿನ ಪಾತ್ರಧಾರಿಗಳೂ ಅಷ್ಟೇ ಸಮರ್ಥವಾಗಿ ಅಭಿನಯಿಸಿದ್ದಾರೆ. ಮೊಲೆ ಮೂಡಿ ಬಂದೆಡೆ ಹೆಣ್ಣೆಂಬರುಬರು, ಗಡ್ಡ ಮೀಸೆ ಬಂದೊಡೆ ಗಂಡೆಂಬರು, ನಡುವೆ ಸುಳಿವಾತ್ಮನು ಹೆಣ್ಣೂ ಅಲ್ಲ ಗಂಡ ಅಲ್ಲ’ ಎಂಬ ಜೇಡರ ದಾಸಿಮಯ್ಯನ ವಚನವನ್ನು ನಾಟಕದುದ್ದಕ್ಕೂ ಬಳಸಿಕೊಂಡಿರುವುದು ಮಾರ್ಮಿಕವಾಗಿದೆ.

ನೆನ್ನೆ ರಂಗಮಂದಿರದಲ್ಲಿ ನಾಟಕ ನೋಡಲು ಹಿಜ್ರಾ ಸಮುದಾಯದ ಏಳಂಟು ಮಂದಿ ಕುಳಿತಿದ್ದರು. ಈ ನಾಟಕದ ಪ್ರತಿದೃಶ್ಯದಲ್ಲೂ ತಮ್ಮ ಬದುಕನ್ನು ಕಾಣುತ್ತಿದ್ದ ಅವರು ಪ್ರತಿ ದೃಶ್ಯಕ್ಕೂ ’ಚಪ್ಪಾಳೆ’ ಹೊಡೆಯುತ್ತಿದ್ದುದು ವಿಶೇಷವಾಗಿತ್ತು. ಮಾತ್ರವಲ್ಲ ಕಡೆಕಡೆಗೆ ಅವರು ಕಣ್ಣಿರು ಹಾಕುತ್ತಿದ್ದರು. ನಡುನಡುವೆ ತಡೆಯಲಾರದೆ ಕಮೆಂಟ್ ಹಾಕುತ್ತಿದ್ದರು. ಅಂತಿಮವಾಗಿ ಇವರ ’ಚಪ್ಪಾಳೆ’ಗಳೂ ಇತರೆಲ್ಲ ಗಂಡು ಹೆಣ್ಣುಗಳ ಚಪ್ಪಾಳೆಗಳೂ ಒಂದಾಗಿ ರಂಗಮಂದಿರದಲ್ಲಿ ಮಾರ್ದನಿಸಿದವು.

ಇಂತಹ ಒಂದು ನಾಟಕವನ್ನು ಆಯೋಜಿಸಿದ  ಶಿವಮೊಗ್ಗದ ’ರಂಗಬೆಳಕು’ ಮತ್ತು ಪ್ರದರ್ಶಿಸಿದ
ಹೆಗ್ಗೋಡಿನ ’ಜನಮನದಾಟ’ ಎರಡೂ ತಂಡಗಳು ಬಹು ಕ್ರಿಯಾಶೀಲ ಮತ್ತು ಸಮಾಜಮುಖಿ ರಂಗ
ತಂಡಗಳು. ಎರಡೂ ತಂಡಗಳಿಗೆ ಅಭಿನಂದನೆಗಳು.














 ಧರ್ಮ V/s ರಿಲಿಜನ್ ಧರ್ಮ ಎಂತರೆ ಒಳಿತು ಮಾಡುವುದು, ನೀತಿ ಮಾರ್ಗದಲ್ಲಿ ನಡೆಯುವುದು ಎಂದು ನೀವು ಭಾವಿಸುವುದಾದರೆ ಅಂತಹ ತತ್ವ ಹೇಳಿದ ಧರ್ಮಗಳು ಮೂರು. -  1. ಬೌದ್ಧ ಧರ್...

ಮರದೊಂದು ಎಲೆ ನಾನು..

ನನ್ನ ಫೋಟೋ
A Writer, Researcher, Journalist and Activist. Born and brought up from Kugwe a village near Sagara, Shimoga district of Karnataka state. Presently working as the Editor In Chief of PEEPAL MEDIA /PEEPAL TV.