ಸಹಜ ಕೃಷಿಯಿಂದ ನಮ್ಮನ್ನು ನಾವು ಉಳಿಸಿಕೊಳ್ಳಬಹುದು- ಕಡಿದಾಳು ಶಾಮಣ್ಣ
ಕಡಿದಾಳು ಶಾಮಣ್ಣನವರನ್ನು ಹತ್ತಿರದಿಂದ ನೋಡಿದ್ದು ಹತ್ತು ವರ್ಷದ ಹಿಂದೆ . ಕುದುರೆಮುಖ ಗಣಿಗಾರಿಕೆಯ ವಿರುದ್ಧ ನಡೆಯುತ್ತಿದ್ದ ಜನಾಂದೋಲನದ ಸಂದರ್ಭದಲ್ಲಿ . ನಮ್ಮಂತಹ ಯುವಕರನ್ನು ತಮ್ಮ ನಡೆನುಡಿಗಳಿಂದ ಪ್ರಭಾವಿಸಿ ಪ್ರೇರೇಪಿಸುತ್ತಿದ್ದ ಶಾಮಣ್ಣನವರನ್ನು ದ ಸಂಡೆ ಇಂಡಿಯನ್ ಗಾಗಿ ಒಂದೆರಡು ಗಂಟೆಗಳ ಕಾಲ ಭಗವತಿಕೆರೆಯ ಮನೆಯಲ್ಲಿ ಸಂದರ್ಶಿಸುವ ಸಂದರ್ಭ ಒ ದಗಿ ಬಂದಾಗ ಸಹಜವಾಗಿ ಸಂತೋಷವಾಗಿತ್ತು . ನಾನು ಮತ್ತು ಗೆಳೆಯ ಕಿರಣ್ ಮಾರಶೆಟ್ಟಿಹಳ್ಳಿ ಜೊತೆಗೂಡಿ ಹೋದೆವು . ನಿಜಕ್ಕೂ ಅದೊಂದು ಆಪ್ಯಾಯ ಮಾನವಾದ ಮಾತುಕತೆ . ಶ್ರೀದೇವಿ ಅಕ್ಕ ತೋರಿದ ಅಕ್ಕರೆ ಮರೆಯಲಾರದ್ದು . ಹೊತ್ತು ಸರಿದದ್ದೇ ತಿಳಿಯಯಲಿಲ್ಲ . ಕೊನೆಗೆ ತಮ್ಮ ಸರೋದ್ ಹಾಗೂ ಹಾರ್ಮೋನಿಯಂ ನುಡಿಸಿ ನಮ್ಮ ಮನಸ್ಸನ್ನು ಮುದಗೊಳಿಸಿದರು ಶಾಮಣ್ಣ . ಮತ್ತಷ್ಟು ಹೊತ್ತು ಅವರೊಂದಿಗೆ ಕಳೆಯುವ ಮನಸ್ಸಾಗುತ್ತಿದ್ದರೂ ಕತ್ತಲುಗೂಡಿದ್ದರಿಂದ ಅವರಿಂದ ಬೀಳ್ಕೊಂಡೆವು . ಮರುದಿನ ಶ್ರೀದೇವಿ ಅಕ್ಕನಿಂದ ಒಂದು ಕರೆ ಬಂದಿತು . " ಹರ್ಷಾ , ನೆನ್ನೆ ತುಂಬಾ ಬೇಸರವಾಗಿಬಿಟ್ಟಿತು . ಎಷ್ಟೊಂದು ಹಣ್ಣುಗಳಿದ್ದವು ಮನೆಯಲ್ಲಿ . ಆ ಗಡಿಬಿಡಿಯಲ್ಲಿ ನಿಮಗೆ ಕೊಡಲು ನೆನಪೇ ಆಗಲಿಲ್ಲ . ನೀವು ಹೋದ ಮೇಲೆ ನೆನಪಾಗಿ ಇಬ್ಬರಿಗೂ ಬಹಳ...