(ರೋಹಿತ್ ವೇಮುಲ ಬದುಕು-ಹೋರಾಟ ಆಧರಿಸಿದ ಏಕವ್ಯಕ್ತಿ ರಂಗಪ್ರಯೋಗ ನಾಟಕ ಕೃತಿ)
ನಕ್ಷತ್ರದ ಧೂಳು
ರಚನೆ: ಹರ್ಷಕುಮಾರ್ ಕುಗ್ವೆ
(ಪರದೆಯಲ್ಲಿ ಕಾರ್ಲ್ ಸೇಗನ್ ಜಗತ್ತನ್ನು, ಭೂಮಿಯ ಮತ್ತು ಮನುಷ್ಯನ ಕುರಿತು ಹೇಳುವ ವಿಡಿಯೋ. ಎದುರಿಗೆ ರೋಹಿತ್ ಕುರ್ಚಿಯ ಮೇಲೆ ಅದನ್ನು ವೀಕ್ಷಿಸುತ್ತಾ ಕುಳಿತಿದ್ದಾನೆ. ವಿಡಿಯೋ ಕೊನೆಯಾಗುತ್ತಿದ್ದಂತೆ ಎದ್ದು ಮುಂದೆ ಬಂದು)
ರೋಹಿತ್: ವಾಹ್, ಎಂತಹ ಅದ್ಭುತವಾದ ಒಳನೋಟ! ಈ ಬ್ರಹ್ಮಾಂಡದ ಬಗೆ,್ಗ ನಕ್ಷತ್ರಗಳ ಬಗ್ಗೆ, ಬದುಕಿನ ಬಗ್ಗೆ!! ಮನುಷ್ಯ ಎಷ್ಟು ಸಣ್ಣವನು ಅಂತ ನಿಜಕ್ಕೂ ಅರಿವಿಗೆ ಬರಬೇಕಾದ್ರೆ ಕಾರ್ಲ್ ಸೇಗನ್ ವಿಚಾರಗಳನ್ನ ತಿಳ್ಕೋಬೇಕು. ನಂಗಂತೂ ಹುಚ್ಚು ಹಿಡಿಸಿದ ಬರಹಗಾರ ಈತ.
ನಂಗೆ ದೊಡ್ಡ ಬರಹಗಾರ ಆಗ್ಬೇಕು ಅನ್ನೋ ಕನಸು. ಎಂತಹ ಬರಹಗಾರ ಅಂದ್ರೆ ಈ ಕಾರ್ಲ್ ಸೇಗನ್ ತರದ ಬರಹಗಾರ. ವಿಜ್ಞಾನ, ಖಗೋಳ ಜ್ಞಾನವನ್ನ ತಿಳ್ಕೊಂಡು ಅದರ ಆಧಾರದ ಮೇಲೆ ಇಡೀ ವಿಶ್ವದ ಭವಿಷ್ಯವನ್ನ ಹೇಳ್ಬೇಕು, ಹಾಗೆ.
ಓಹ್, ನಿಮಗೆ ನನ್ನ ಪರಿಚಯಾನೇ ಇನ್ನೂ ಆಗಿಲ್ಲ ಅಲ್ವಾ?
ನನ್ನ ಹೆಸರು ರೋಹಿತ್. ವೇಮುಲ ರೋಹಿತ್ ಚಕ್ರವರ್ತಿ. ನಾನು ಹುಟ್ಟಿ ಬೆಳೆದಿದ್ದೆಲ್ಲಾ ಆಂಧ್ರ ಪ್ರದೇಶದ ಗುಂಟೂರಲ್ಲಿ. ಈಗ ನಾನು ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ಒಬ್ಬ ಸಂಶೋಧಕ ವಿದ್ಯಾರ್ಥಿ ಆಗಿ ಅಧ್ಯಯನ ಮಾಡ್ತಾ ಇದೀನಿ. ವಿಜ್ಞಾನ ಮತ್ತು ಸಮಾಜವಿಜ್ಞಾನ ಎರಡನ್ನೂ ಎರಡೂ ಸೇರಿಸ್ಕೊಂಡು ಮಾಡ್ತಿರೋ ಈ ಸಂಶೋಧನೆ ನಂಗೆ ಬಹಳ ಮುಖ್ಯವಾದದ್ದು.
ಆದರೆ... ಈ ಕ್ಷಣದಲ್ಲಿ ನನ್ನ ಸಂಶೋಧನೆಯನ್ನ ನಿಜಕ್ಕೂ ಪೂರೈಸ್ತೀನಾ ಅನ್ನೋ ಆತಂಕ ಕಾಡ್ತಾ ಇದೆ. (ಆತಂಕದ ದನಿ) ಒಂದು ವೇಳೆ ಇದನ್ನು ಪೂರೈಸೋಕೆ ಸಾಧ್ಯನೇ ಆಗ್ದೇ ಹೋದ್ರೆ?... ನೊ...... ಸಾಧ್ಯವಿಲ್ಲ... ಹಾಗಾಗ್ಬಾರ್ದ್ದು. ಈ ಸಂಶೋಧನೆ ಮತ್ತು ಅದನ್ನು ಆಧರಿಸಿದ ಮುಂದಿನ ಬದುಕು ನಂಗೆ ಬಹಳ ಮುಖ್ಯ.
ಇದನ್ನ ಬಿಟ್ಟು ಬೇರೆ ಯಾವ್ದೇ ಬದುಕನ್ನ ಕಲ್ಪಿಸಿಕೊಳ್ಳೋಕೂ ನಂಗೆ ಸಾಧ್ಯ ಇಲ್ಲ. ಆದರೆ ಈಗ ಯಾಕೋ ನಂಬಿಕೆನೇ ಬರ್ತಾ ಇಲ್ಲ... ಇದು ನನ್ನ ಮೇಲೆ ನಂಗಿರೋ ವಿಶ್ವಾಸದ ಕೊರತೆ ಅಂತ ಅನ್ನಿಸ್ತಿದೆಯಾ?... ಅದು ಹಾಗಲ್ಲ. ಈ ಸಂಶೋಧನೆಯನ್ನ ನಾನು ಬಾಳಾ ಆಸೆಪಟ್ಟು ಆಯ್ದುಕೊಂಡಿದೀನಿ. ಇದನ್ನ ಆರಾಮಾಗಿ ಮುಗಿಸಬಲ್ಲೆ ಅನ್ನೋ ಆತ್ಮವಿಶ್ವಾಸ ನಂಗಿತ್ತು. ಆದರೆ ಈಗ .. (ಹಿನ್ನೆಲೆ ಸಂಗೀತ ಆರಂಭ) ಈ ಕ್ಷಣ... ಹಂಗನ್ನಿಸ್ತಾನೇ ಇಲ್ಲ.
ಯಾಕೆ ನನ್ನ ಮನಸ್ಸು ಈ ಹಂತ ತಲುಪಿದೆ ಅನ್ನೋದಕ್ಕೆ ಹಲವು ಕಾರಣಗಳಿವೆ. ನನ್ನ ಕನಸುಗಳು, ನಾನು ಪಡೆದ ಅರಿವು ಮತ್ತು ರಾಜಿಗೊಪ್ಪದ ನನ್ನ ಮನಸುಗಳೇ ನನ್ನನ್ನ ಈ ಸ್ಥಿತಿಗೆ ತಂದಿವೆಯಾ ಅನ್ನೋ ಪ್ರಶ್ನೆನೂ ಕಾಡ್ತಾಯಿದೆ.
(ಹಿನ್ನೆಲೆ ಸಂಗೀತ ಮುಕ್ತಾಯ)
ಇದನೆಲ್ಲ ಏನು ಅಂತ ಹೇಳ್ಲಿ? ನನ್ನ ಬದುಕಿನ ಕೆಲವು ಘಟನೆಗಳನ್ನ ಅವು ನಡೆದ ಹಾಗೇ ಹೇಳ್ಬಿಡ್ತೀನಿ. ಆಗ ನಿಮಗೇ ತಿಳಿಯುತ್ತೆ.
(ಸಂಗೀತ)
***
ನಾನು ಹುಟ್ಟಿದ್ದು 1989ರ ಜನವರಿ 30ನೇ ತಾರೀಕು. ನಾನು ಹುಟ್ಟೋಕಿಂತ ಸುಮಾರು 18 ವರ್ಷಗಳ ಹಿಂದಿನ ಮಾತಿದು. ಆಗ ನನ್ನ ಸಾಕು ಅಜ್ಜಿ ಅಂಜನಿ ದೇವಿಗೆ ಮಕ್ಕಳಿರ್ಲಿಲ್ಲ. ಒಂದು ಸಾರಿ ಕೂಲಿ ಕೆಲಸದ ಕುಟುಂಬವೊಂದು ಅವರ ಮನೆ ಹತ್ತಿರ ಬಂದು ನೆಲ್ಸುತ್ತೆ. ಆ ಕುಟುಂಬದಲ್ಲಿ ಒಂದು ಸಣ್ಣ ಹುಡುಗಿ, ಭಾಳಾ ಚೂಟಿಯಾಗಿ ಓಡಾಡ್ಕೊಂಡಿರ್ತಾಳೆ. ನನ್ನ ಅಜ್ಜಿಗೆ ಅದೇನನ್ನಿಸ್ತೋ ಏನೋ, ಆ ಬಡ ದಂಪತಿಗಳ ಹತ್ರ ಮಾತಾಡಿ, “ನಂಗೆ ಮಕ್ಳಿಲ್ಲ, ನಿಮ್ಮ ಮಗಳನ್ನ ನನ್ನ ಮಗಳ ತರಾನೇ ನೋಡ್ಕೋತೀನಿ, ನಂಗೆ ದತ್ತು ಕೊಡಿ” ಅಂತ ಪರಿಪರಿಯಾಗಿ ಕೇಳಿಕೊಂಡ್ರಂತೆ. ಈ ಅಜ್ಜಿ ಬಹಳ ಎಜುಕೇಟೆಡ್ ಆಗಿದ್ರು ಮತ್ತೆ ಜೋರಾಗಿದ್ರು. ಆ ಬಡ ದಂಪತಿಗಳಿಗೆ ಈ ಶ್ರೀಮಂತರ ಮನೇಲಿ ತಮ್ಮ ಮಗಳು ಚೆನ್ನಾಗಿ ಬೆಳೀಬಹುದು ಅನ್ನೋ ಆಸೇ ಆಯ್ತೋ ಏನೋ, ಸರಿ ಅಂತ ಒಪ್ಕೊಂಡು ಮಗಳನ್ನ ಅಂಜನಿದೇವಿಯ ಮಡಿಲಿಗೆ ಹಾಕ್ಬಿಟ್ರು. ಹೀಗೆ ಆ ದಿನ ಅಂಜನಿದೇವಿಯ ಮನೆಗೆ ಸೇರಿಕೊಂಡ ಹುಡುಗಿಯ ಹೆಸರು ರಾಧಿಕಾ... ಆಕೆ ಬೇರಾರೂ ಅಲ್ಲ. ನನ್ನ ಹೆತ್ತಮ್ಮ. ಆ ನಂತ್ರದಲ್ಲಿ ಅಂಜನಿದೇವಿಗೂ ಮಕ್ಕಳಾದ್ವು. ನನ್ನ ಅಮ್ಮನನ್ನ ಚೆನ್ನಾಗಿ ನೋಡ್ಕೋತೀನಿ ಅಂತ ಹೇಳಿ ದತ್ತು ಪಡೆದ ಅಂಜನಿದೇವಿಗೆ ಸ್ವತಃ ತನಗೇ ಮಕ್ಕಳಾದ್ಮೇಲೆ ಆಕೆ ಬಗ್ಗೆ ಕಾಳಜಿ ಕಡಿಮೆಯಾಯ್ತು ಅಂತ ಕಾಣುತ್ತೆ . ಅವರ ಮನೆಯಲ್ಲಿ ನನ್ನಮ್ಮಂಗೆ ಊಟ ತಿಂಡಿಗೇನೂ ಕೊರತೆ ಆಗ್ಲಿಲ್ಲ ಅನ್ನೋದು ನಿಜ. ಆದ್ರೆ ಸ್ವತಃ ಇಂಗ್ಲಿಷ್ ಎಂ.ಎ. ಮಾಡಿ ಟೀಚರ್ ಆಗಿದ್ದ ಅಂಜನಿದೇವಿ ನನ್ನ ಅಮ್ಮನನ್ನ ಮಾತ್ರ ಹೈಸ್ಕೂಲಿಗೇ ಶಾಲೆ ಬಿಡಿಸಿದ್ರು! ತನ್ನ ಸ್ವಂತ ಮಕ್ಕಳನ್ನ ಮಾತ್ರ ಚೆನ್ನಾಗೇ ಓದ್ಸಿದ್ರು ಅನ್ನಿ. ತನ್ನ ದೂರದ ಸಂಬಂಧದಲ್ಲಿ ಒಂದು ಗಂಡು ಗೊತ್ತು ಮಾಡಿ ಹದಿನಾಲ್ಕನೇ ವಯಸ್ಸಿಗೇ ಅಮ್ಮಂಗೆ ಮದುವೆನೂ ಮಾಡಿಬಿಟ್ರು. ಹಿಂಗೆ ನನ್ನಮ್ಮನನ್ನ ಮದುವೆಯಾದ ಭೂಪನೇ ಮಣಿಕುಮಾರ.
ಮದುವೆಯಾಗಿ ಐದು ವರ್ಷದೊಳಗೆ ನನ್ನಮ್ಮ ಮೂರು ಮಕ್ಕಳ ತಾಯಿ ಆದ್ರು. ಅಕ್ಕ ನೀಲಿಮಾ, ತಮ್ಮ ರಾಜಾ ಮತ್ತು ನಾನು.
ನನ್ನ ಅಪ್ಪ ಮಹಾ ಕುಡುಕ ಆಗಿದ್ದ. ದಿನಾ ಕುಡಿದು ಬಂದು ಅಮ್ಮಂಗೆ ಹೊಡೀತಿದ್ದ. ಬಹಳಷ್ಟು ಕುಡುಕ ಗಂಡಂದ್ರು ಮಾಡೋದು ಹೀಗೇ ಅಲ್ವೇ? ಕುಡ್ದಾಗ ಅವರು ಮನುಷ್ಯರೇ ಆಗಿರೋದಿಲ್ಲ. ಇದನ್ನೆಲ್ಲಾ ನನ್ನಮ್ಮ ಸಹಿಸಿಕೊಂಡೇ ಬರ್ತಿದ್ಲು. ಆದ್ರೆ ಇವೆಲ್ಲ ಗಂಭೀರ ಸ್ವರೂಪ ಪಡೆದಿದ್ದು ನಂತರದಲ್ಲಿ.
(ವ್ಯಂಗ್ಯದ ದನಿ) ಅದಕ್ಕೆ ಕಾರಣ ಆದದ್ದು ಮಾತ್ರ ನನ್ನಮ್ಮಂಗೇ ಗೊತ್ತಿರದಿದ್ದ ಅವಳ ಜಾತಿ!
(ಆಕ್ರೋಶದ ದನಿಯಲ್ಲಿ) ಹೌದು ಜಾತಿ ಅನ್ನೋ ಅನಿಷ್ಟ ನನ್ನಮ್ಮನ ಮತ್ತು ನಮ್ಮ ಬದುಕಿನಲ್ಲಿ ಪ್ರವೇಶ ಮಾಡಿ ನಮ್ಮ ಬಾಲ್ಯವನ್ನೇ ಕಿತ್ಕೊಂಡ್ಬಿಡ್ತು. ಅವತ್ತು ಬೆನ್ನು ಹತ್ತಿದ ಆ ಜಾತಿಯ ಭೂತ ಇವತ್ತಿಗೂ ನನ್ನ ಬೆನ್ನು ಬಿಟ್ಟಿಲ್ಲ. ನನ್ನ ಅಮ್ಮನಾಗ್ಲಿ ನಾನಾಗ್ಲಿ ಬದುಕಿನಲ್ಲಿ ಪಟ್ಟ ಪಾಡಿನ ಬಗ್ಗೆ ಯಾವತ್ತೂ, ಯಾರ ಹತ್ರಾನೂ ಸರಿಯಾಗಿ ಹೇಳ್ಕೊಳ್ಳೋಕೆ ಆಗ್ಲೇ ಇಲ್ಲ.
(ಹಿನ್ನೆಲೆ ಸಂಗೀತ)
ಬಾಲ್ಯ ಪ್ರತಿ ಮನುಷ್ಯನ ಬದುಕಿನಲ್ಲಿ ನೀಡೋ ಅನುಭವಗಳು ಅದ್ಭುತವಾಗಿರ್ತವೆ ಅಂತ ಕೇಳಿದೀನಿ. ನನ್ನ ಗೆಳೆಯರೆಲ್ಲಾ ಅವರವರ ಬಾಲ್ಯದ ಬಗ್ಗೆ ಹೇಳೋವಾಗ ನಂಗೇ ಗೊತ್ತಿಲ್ಲದ ಹಾಗೆ ನನ್ನ ಒಳಮನಸು ಅಳ್ತಾ ಇತ್ತು. ನನಗೆ ಸಿಕ್ಕಿಂತ ಬಾಲ್ಯ ಯಾರಿಗೂ ಸಿಗಬಾರ್ದು. ( ಹಿನ್ನೆಲೆ ಸಂಗೀತ ಗೌಣವಾಗುತ್ತದೆ) (ಒಂದು ಧೀರ್ಘವಾದ ನಿಟ್ಟುಸಿರು..)
ಅದೆಲ್ಲಾ ಆದದ್ದು ಹೀಗೆ…
ಯಾವ ಬಡ ದಂಪತಿಗಳು ನನ್ನ ಅಮ್ಮನನ್ನ ಅಂಜನಿದೇವಿಗೆ ದತ್ತು ನೀಡಿದ್ರೋ ಅವರು ಮಾಲ ಅಂದರೆ ಹೊಲೆಯ ಜಾತಿಗೆ ಸೇರಿದವರು. ಆದರೆ ನನ್ನ ಸಾಕು ಅಜ್ಜಿ ಅಂಜನಿ ದೇವಿ ಹಿಂದುಳಿದ ವಡ್ಡೇರ್ ಜಾತಿಗೆ ಸೇರಿದವರು. ನನ್ನಮ್ಮ ಅಂಜನಿದೇವಿಯ ಮನೇಲಿ ಇರೋವರೆಗೂ ಇದೆಲ್ಲಾ ಒಂದು ಸಮಸ್ಯನೇ ಆಗಿರ್ಲಿಲ್ಲ. ಯಾಕಂದ್ರೆ ಅಂಜನಿದೇವಿ ಇದೆಲ್ಲ ಗೊತ್ತಿದ್ದೇ ಆಕೆಯನ್ನ ದತ್ತು ತೊಗೊಂಡಿದ್ರು.
ಯಾವ್ದೋ ಒಂದು ಸಂದರ್ಭದಲ್ಲಿ ಅದ್ಹೇಗೋ ಅಮ್ಮ ಅಂಜನಿದೇವಿಯ ಸ್ವಂತ ಮಗಳಲ್ಲ, ದಲಿತ ಮಾಲ ಜಾತಿಗೆ ಸೇರಿದ ಬಡ ಕೂಲಿಗಳ ಮಗಳು ಅಂತ ಅಪ್ಪಂಗೆ ಗೊತ್ತಾಯ್ತು. ಅಲ್ಲಿಂದ ಶುರುವಾಯ್ತು ನೋಡಿ ಆ ಮಣಿಕುಮಾರನ ರುದ್ರನರ್ತನ... ಮದುವೆ ಆಗಿ ಐದು ವರ್ಷ ಸಂಸಾರ ಮಾಡೋವರ್ಗೂ ಏನೂ ಮಾಡಿರದ ಈ ಜಾತಿ ನನ್ನಮ್ಮ ದಲಿತರ ಮಗಳು ಅಂತ ಗೊತ್ತಾಗಿದ್ದೇ ತಡ, ದೊಡ್ಡ ಭೂಕಂಪವನ್ನೇ ಸೃಷ್ಟಿಸಿಬಿಡ್ತು. ಅಲ್ಲಾರೀ ನನ್ನ ಅಮ್ಮಂಗೆ ತಾನು ಯಾವ ಜಾತಿ, ಏನ್ತನ ಅಂತ ಗೊತ್ತಾಗೋಕ್ಕೂ ಮೊದಲೇ ಅಂಜನಿದೇವಿ ದತ್ತು ತೆಗೆದುಕೊಂಡಿದ್ರು. ಇಂತಾದ್ರಲ್ಲಿ ನನ್ನ ಅಮ್ಮನ ತಂದೆ ತಾಯಿಗಳ ಜಾತಿ ಅಪ್ಪನಿಗೆ ದೊಡ್ಡ ವಿಷಯ ಆಗ್ಬೇಕಾಗೇ ಇರ್ಲಿಲ್ಲ. ಆದ್ರೆ ಅದು ಆಯ್ತು.
ಮೊದಲೆಲ್ಲಾ ಬರೀ ಕುಡ್ದು ಬಂದು ಹಿಂಸೆ ಕೊಡ್ತಿದ್ದ ನನ್ನಪ್ಪ ಈಗ ಅಮ್ಮಂಗೆ "ನೀನು ನಂಗೆ ಮೋಸ ಮಾಡಿದೀಯ ಕಣೆ, ನಿನ್ನ ಜಾತಿ ಮುಚ್ಚಿಟ್ಟು ನನ್ನನ್ನ ಮದುವೆ ಆಗಿದೀಯ, ನೀನು ಹೊಲತಿ" ಅಂತೆಲ್ಲಾ ಜಾತಿ ಹಿಡಿದು ಪ್ರತಿ ದಿನ ಬೈಯ್ಯೋದು ಹೊಡೆಯೋದು ಶುರು ಮಾಡ್ದ. ಅಷ್ಟು ಮಾತ್ರ ಅಲ್ಲ ತನ್ನ ಸಿಟ್ಟನ್ನ ನಮ್ಮ ಮೇಲೂ ತೋರಿಸೋಕೆ ಶುರು ಮಾಡ್ದ. ಅಮ್ಮಂಗೆ ಬೀಳೋ ಹೊಡೆತಗಳು ನಮಗೂ ಬಿದ್ದ ಸಂದರ್ಭಗಳು ಅದೆಷ್ಟೋ. “ಏಯ್ ನಾಯಿಗಳ.. ನೀವೆಲ್ಲ ಸೇರ್ಕೊಂಡು ನಂಗೆ ಮೋಸ ಮಾಡಿದೀರಿ... ಈ ಹೊಲತಿ ಮಕ್ಕಳು ನೀವೆಲ್ಲ.. ನಿಮ್ನೆಲ್ಲ ಹುಟ್ಲಿಲ್ಲ ಅನ್ನಿಸಿಬಿಡ್ತೀನಿ..” ಅಂತ ನಮಗೂ ಹೊಡೀತ್ತಿದ್ದ. ನಾವು ‘ಅಯ್ಯೋ ಅಪ್ಪಾ ಹೊಡೀಬೇಡ.. ಅಮ್ಮಾ.... ನೋವು…’ ಅಂತ ಒದ್ದಾಡಿಹೋಗ್ತಿದ್ವಿ. ಈ ವಿಷಯ ಅಕ್ಕಪಕ್ಕದವರಿಗೆಲ್ಲಾ ಗೊತ್ತಾದ್ಮೇಲೆ ಆ ಊರಿನ ಜನ ನಮ್ಮನ್ನ ನೋಡೋ ರೀತಿನೇ ಬದ್ಲಾಗೋಯ್ತು. ತಮ್ಮ ಮಕ್ಕಳನ್ನು ನಮ್ಮ ಹತ್ತಿರ ಸೇರಲಿಕ್ಕೇ ಬಿಡ್ತಿರ್ಲಿಲ್ಲ. ಇದು ನನ್ನನ್ನ ತೀರಾ ಒಂಟಿಯಾಗಿಸಿಬಿಟ್ಟಿತ್ತು.
ಇದು ಹಿಂಗೇ ಮುಂದುವರೆದಿದ್ರೆ ನಮ್ಮಮ್ಮ ಯಾವತ್ತಿಗೂ ನೆಮ್ಮದಿಯಾಗಿರೋದು ಸಾಧ್ಯನೇ ಇರಲಿಲ್ಲ. ಅವಳು ನಮ್ಮನ್ನೆಲ್ಲಾ ಕಟ್ಕೊಂಡು ಯಾವುದಾದ್ರೂ ಹಾಳು ಬಾವಿಗೆ ಬೀಳೋದೇ ವಾಸಿ ಅನ್ನೋ ಸ್ಥಿತಿ ತಂದುಬಿಟ್ಟದ್ದ ನನ್ನಪ್ಪ. ಆದ್ರೆ ನನ್ನಮ್ಮ
ಗಟ್ಟಿಗಿತ್ತಿ. ನಮ್ಮ ಮೇಲೆ ಜೀವಾನೇ ಇಟ್ಟಿದ್ದ ಅವಳು ಸ್ವತಂತ್ರವಾಗಿ ಬದುಕೋ ನಿರ್ಧಾರ ತೊಗೊಂಡ್ಳ್ಳು. ಒಂದು ದಿನ ನಮ್ನೆಲ್ಲ ಕಟ್ಕೊಂಡು ಮಣಿಯ ಮನೆಯಿಂದ ಹೊರಟೇ ಬಿಟ್ಳು. ಸ್ವಲ್ಪ ದಿನ ನಾವು ಅಜ್ಜಿ ಮನೇಲೇ ಇದ್ವಿ. ಅಂಜನಿದೇವಿ ಏನೋ ನಮ್ಮನ್ನ ತನ್ನ ಮನೇಲಿ ಇಟ್ಟುಕೊಂಡ್ರು. ಆದರೆ ನಾವೆಲ್ಲಾ ಅವರಿಗೆ ಹೊರೆಯಾಗ್ತಿದಿವೇನೋ ಅಂತ ನಮ್ಗೆ ಅನ್ನಿಸ್ತಿತ್ತು. ನಮಗೆಲ್ಲಾ ಉಸಿರುಗಟ್ಟಿದ ಹಾಗಾಗಿತ್ತು.
ಜಾತಿ ಕಾರಣಕ್ಕೆ ತನ್ನ ಮದುವೆ ಮುರಿದು ಬೀಳೋವರ್ಗೂ ಅಮ್ಮ ಜಾತಿ ಬಗ್ಗೆ ಯೋಚ್ನೇನೇ ಮಾಡಿರ್ಲಿಲ್ಲ. ತನ್ನ ಹುಟ್ಟು ದಲಿತ ಕುಟುಂಬದಲ್ಲಾಗಿತ್ತು ಅನ್ನೋದು ಆಕೆ ಬದುಕಲ್ಲಿ ಅಷ್ಟೆಲ್ಲ ಘಾಸಿ ಉಂಟು ಮಾಡಿದ್ಮೇಲೆ ಅವಳು ಒಂದು ದೃಢ ನಿರ್ಧಾರ ಮಾಡ್ಕೊಂಡ್ಲು. ನಮ್ಮನ್ನೂ ಕರ್ಕೊಂಡು ದಲಿತ ಕಾಲೋನಿಯಲ್ಲೇ ಒಂದು ಸಣ್ಣ ಬಾಡಿಗೆ ಮನೆ ಮಾಡಿದ್ಲು. ನಾವು ಇದೇ ಐಡೆಂಟಿಟಿ ಜತೆ ಬೆಳೀಬೇಕು ಅನ್ನೋದು ಅಮ್ಮನ ಗಟ್ಟಿ ನಿಲುವಾಗಿತ್ತು. ಹೊಟ್ಟೆಗಿಲ್ದೆ ಇದ್ರೂ ಸ್ವಾಭಿಮಾನದಿಂದ ಬದುಕ್ಬೇಕು ಅನ್ನೋದನ್ನ ಅಮ್ಮ ಕಲಿಸಿದ್ದು ಹೀಗೆ.
(ಮನೆಯ ವೀಡಿಯೋ)
ಅಮ್ಮ ನಮ್ಮನ್ನ ಸಾಕೋಕೆ ಮೊದ್ಲು ಅವರಿವರ ಮನೆಗೆಲಸ, ಗಾರೆ ಕೆಲಸ ಮಾಡ್ತಾ ಇದ್ಲು. ಆದರೆ ಈ ಕೆಲಸಗಳಿಂದ ಬರೋ ಆದಾಯದಲ್ಲಿ ಮೂರು ಮಕ್ಕಳನ್ನ ಇಟ್ಕೊಂಡು ಮನೆ ನಡ್ಸೋದೇನು ಸುಲಭ ಆಗಿರಲಿಲ್ಲ. ಈ ನಡುವೆ ಟೇಲರಿಂಗ್ ಕಲಿತ್ಲು. ಕಷ್ಟಪಟ್ಟು ಒಂದು ಹೊಲಿಗೆ ಯಂತ್ರನೂ ತೊಗೊಂಡ್ಲು. ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಹೊಲಿಗೆ ಕೆಲಸ ಮಾಡ್ತಿದ್ಲು. ಟೈಲರಿಂಗ್ ಜೊತೆ ಕಸೂತಿ ಕೂಡಾ ಚೆನ್ನಾಗಿ ಹಾಕ್ತಾ ಇದ್ಲು. ಈ ಹೊಲಿಗೆ ಕೆಲಸದಲ್ಲಿ ನಾಲ್ಕು ಕಾಸು ಗಳಿಸಿ, ಉಳಿಸಿ ನಮ್ಮನ್ನ ಶಾಲೆಗೆ ಕೂಡಾ ಕಳಿಸಿದ್ಲು.
(ಸಂಗೀತ ವಾದ್ಯ- ತಾಳ)
(ನಸುನಗುತ್ತಾ) ಅಮ್ಮ ಯಾವಾಗ್ಲೂ ಹೇಳ್ತಾ ಇದ್ಲು: ಯಂತ್ರ ಹೆಣ್ಮಕ್ಕಳನ್ನ ಪವರ್ಫುಲ್ ಮಾಡುತ್ತೆ ಅಂತ...
ಅಮ್ಮಂಗೆ ಸಹಾಯ ಆಗ್ಲಿ ಅಂತ ಸ್ಕೂಲ್ ಓದುವಾಗಿಂದ್ಲೂ ನಾನು ಮತ್ತೆ ರಾಜು ಕೂಡಾ ಗಾರೆ ಕೆಲಸಕ್ಕೆ ಹೋಗ್ತಿದ್ವಿ. ಇಷ್ಟೆಲ್ಲ ಆದ್ರೂ ನಮಗೆ ಖಾತ್ರಿ ಇದ್ದದ್ದು ಎರಡು ಹೊತ್ತಿನ ಊಟ ಮಾತ್ರ.
ನಾನು, ನನ್ನ ತಮ್ಮ ರಾಜಾ ಇಬ್ರೂ ಓದ್ನಲ್ಲಿ ಎಂದೂ ಹಿಂದೆ ಬಿದ್ದೋರಲ್ಲ. ಹಾಂ ನಿಮಗೆ ಇನ್ನೊಂದು ವಿಷ್ಯ ಹೇಳ್ಬೇಕು. ನಾವು ಕಾಲೇಜು ಓದೋ ಹೊತ್ಗೆ ಅಮ್ಮ ಕೂಡಾ ಹಠದಿಂದ ಓದು ಮುಂದುವರೆಸಿ, ಹತ್ತನೇ ಕ್ಲಾಸು ಮತ್ತೆ ಪಿಯುಸಿನೂ ಕಟ್ಟಿ ಪಾಸು ಮಾಡಿದ್ಲು.
(ಖುಷಿಯಿಂದ) ನಾನು ಮತ್ತೆ ರಾಜ ಕೂತು ಅಮ್ಮಂಗೆ ಪಾಠ ಹೇಳ್ಕೊಡ್ತಿದ್ವಿ. ಮುಂದೆ ನಾನು ಅಂತಿಮ ಬಿಎಸ್ಸಿ ಪರೀಕ್ಷೆ ಬರೆಯೋವಾಗ ಅಮ್ಮ ಎರಡನೇ ಬಿಎ ಪರೀಕ್ಷೆ ಬರೀತ್ತಿದ್ಲು. ಇವತ್ತು ನನ್ನಮ್ಮ ನಮ್ಮನ್ನೂ ಓದಿಸಿ ತಾನೂ ಪದವಿ ಪಡೆದ ದಲಿತ ಮಹಿಳೆಯಾಗಿದ್ದಾಳೆ ಅಂದ್ರೆ ಅದರ ಹಿಂದಿನ ಛಲ ಎಷ್ಟಿರಬಹುದು ಯೋಚ್ಸಿ. ಅಮ್ಮನ ಛಲ ಮತ್ತು ಸಾಧನೆ ಬಗ್ಗೆ ನಂಗೆ ಯಾವತ್ತೂ ಹೆಮ್ಮೆ ಅನ್ಸುತ್ತೆ. (ಸಂಗೀತ – ಆರೋಹಣ – 15-20 ಸೆಕೆಂಡ್)
ಗುಂಟೂರು ಹಿಂದೂ ಕಾಲೇಜಿನಲ್ಲಿ ಬಿಎಸ್ಸಿ, ಎಂಎಸ್ಸಿ ಪದವಿ ಆದ ಮೇಲೆ ನಾನು ಹೆಚ್ಚಿನ ಸಂಶೋಧನೆ ಮಾಡೋಕ್ಕೆ ಹೈದರಾಬಾದ್ ಸೆಂಟ್ರಲ್ ಯೂನಿವರ್ಸಿಟಿಗೆ ಅರ್ಜಿ ಹಾಕಿದ್ದೆ. ನನಗೆ ಮೆರಿಟ್ ಸೀಟೇ ಸಿಕ್ತು. ನನಗಾದ ಸಂತೋಷಕ್ಕೆ ಕೊನೇನೇ ಇರ್ಲಿಲ್ಲ. ಆ ದಿನ ತಮ್ಮ, ಅಮ್ಮ ನಾನು ಮೂವರೂ ಸಂಭ್ರಮಿಸಿದ್ವಿ. ನಾವು ಈ ಹಂತ ತಲುಪುವುದರಲ್ಲಿ ಅಮ್ಮ ಅದೆಷ್ಟು ಕಷ್ಟ ಪಟ್ಟಿದ್ಲು, ಅದೆಷ್ಟು ಅವಮಾನ ಅನುಭವಿಸಿದ್ಲು, ಅದೆಷ್ಟು ನೊಂದಿದ್ಲು. (ನಿಟ್ಟುಸಿರು)
ನನಗೆ ಜ್ಯೂನಿಯರ್ ರಿಸರ್ಚ್ ಫೆಲೋ ಸೀಟು ಸಿಕ್ಕಾಗ ಅಷ್ಟೊಂದು ಸಂತೋಷ ಪಡೋಕ್ಕೆ ಇನ್ನೊಂದು ಮುಖ್ಯ ಕಾರಣಾನೂ ಇತ್ತು. (ಸಂಭ್ರಮ..) ಈ ಸಂಶೋಧನೆ ಮಾಡುವ ಎರಡು ವರ್ಷ ಯುಜಿಸಿಯಿಂದ ನಂಗೆ ತಿಂಗಳಿಗೆ 25,000 ರೂಪಾಯಿ ಫೆಲೋಶಿಪ್ ಸಿಗ್ತಿತ್ತು. ನನ್ನ ಓದಿನ ಖರ್ಚು ಕಳೆದು ಅಮ್ಮಂಗೂ ಒಂದಷ್ಟು ದುಡ್ಡು ಕಳಿಸ್ಬಹುದು ಅನ್ನೋದೇ ನನಗಾದ ದೊಡ್ಡ ಸಂತೋಷ. ಅದೇ ಸಮಯದಲ್ಲಿ ಉನ್ನತ ಶಿಕ್ಷಣಕ ಪಡೆಯೋಕೆ ನನ್ನ ತಮ್ಮ ಪಡ್ತಿದ್ದ ಪರದಾಟ ಏನೂ ಕಡಿಮೆಯದಲ್ಲ. (ವಿಷಾದ..)
ಆದ್ರೆ ನಾನು ಅವನಿಗೆ ಏನೂ ಸಹಾಯ ಮಾಡೋಕಾಗ್ದೆ ಇರೋ ಸ್ಥಿತೀಲ್ಲಿದ್ದೆ.
(ಹಿನ್ನೆಲೆ ಸಂಗೀತ ಆರಂಭ)
ಹೂಂ.. ನಾನೀಗ ಹೈದರಾಬಾದ್ ಸೆಂಟ್ರಲ್ ಯೂನಿವರ್ಸಿಟಿಯಲ್ಲಿ ರಿಸರ್ಚ್ ಸ್ಕಾಲರ್. (ಹೆಮ್ಮೆ, ಖುಷಿ..) ಈ ಯೂನಿವರ್ಸಿಟಿ ಅನ್ನೋದು ಒಂದು ಅದ್ಭುತ ಜಗತ್ತು. ಅಲ್ಲಿ ನನ್ನ ಹಾಗೇ ಹೊಸ ಬದುಕಿನ ಕನಸು ಹೊತ್ತು ಎಲ್ಲೆಲಿಂದಲೋ ಬಂದು ಒಂದು ಕಡೆ ಸೇರಿದ್ದ ಸಾವಿರಾರು ಗೆಳೆಯ ಗೆಳತಿಯರು.. ನಮ್ಮ ಜ್ಞಾನದ ದಾಹವನ್ನ ತಣಿಸೋಕಂತಾನೇ ಕಾಯ್ತಾ ಇದ್ದ ದೊಡ್ಡ ಲೈಬ್ರರಿ, ವಿಶಾಲವಾದ ಕ್ಯಾಂಪಸ್ಸು, ಆ ಕ್ಯಾಂಪಸ್ಸಿನ ಅದ್ಭುತ ಪರಿಸರ, ಕಾಡು, ಕೀಟ, ಹಕ್ಕಿ, ಚಿಟ್ಟೆ ಇವೆಲ್ಲ ನನ್ನಲ್ಲಿ ಹುಚ್ಚು ಉತ್ಸಾಹ ತುಂಬಿತ್ತು. ನಮ್ಮ ಹಾಸ್ಟೆಲ್, ಗೆಳೆಯರೊಡನೆ ಸಹಜೀವನ, ನಮ್ಮ ಓದು, ಚರ್ಚೆ ಎಲ್ಲ.. ಎಲ್ಲವೂ ನನ್ನೊಳಗೆ ಒಂದು ಹೊಸ ಜಗತ್ತನ್ನೇ ಸೃಷ್ಟಿಸಿದ್ವು. (ಹಿನ್ನೆಲೆ ಸಂಗೀತ ಕೊನೆಗೊಳ್ಳುತ್ತದೆ)
ಈ ಹೊತ್ಗೆ ನನ್ ಬದುಕು, ನನ್ ಓದು ನನ್ ತಿಳುವಳಿಕೆ ನನ್ನಲ್ಲಿ ಹೊಸ ಬಗೆಯ ಕನಸುಗಳನ್ನು ಹುಟ್ಸಿತ್ತು.
ಕನಸುಗಳೇ ತಾನೇ ನಮ್ಮನ್ನ ಜೀವನದಲ್ಲಿ ಮುಂದಕ್ಕೆ ಸಾಧನೆಯ ಕಡೆಗೆ ಕೊಂಡೊಯ್ಯೋದು? ನನ್ನ ಕನಸು ಮತ್ತು ಆ ಕನಸುಗಳ sಸಾಕಾರಕ್ಕೆ ಬೇಕಾದ ಅರಿವು ನನ್ನಲ್ಲಿ ಹೆಚ್ತಾ ಹೋಯ್ತು..... ಆದರೆ ನಮ್ಮ ದೇಶ, ಹಲವರ ಭಾರತ ಕೆಲವರ ಇಂಡಿಯಾದಲ್ಲಿ ಕನಸು ಮತ್ತು ಅರಿವು ಎಲ್ರಿಗೂ ಸಮಾನವಾಗಿ ಪ್ರಗತಿ ತರೋದಿಲ್ಲ ಅನ್ನೋ ಕಟು ಸತ್ಯ ತುಂಬ ಬೇಗ ನನ್ನ ಕಣ್ಣೆದುರು ಬಿಚ್ಚಿಕೊಳ್ತಾ ಹೋಯ್ತು..
(ಹಿನ್ನೆಲೆ ಸಂಗೀತ ಆರಂಭ)
(ಭಾವತೀವ್ರತೆಯಿಂದ) ಕಾರ್ಲ್ ಸೇಗನ್ ತರ ಒಬ್ಬ ದೊಡ್ಡ ವಿಜ್ಞಾನದ ಬರಹಗಾರನಾಗ್ಬೇಕು ಅನ್ನೋದು ನನ್ನ ಕನಸು, ಅಂತ ಹೇಳ್ದೆ ಅಲ್ವಾ? ಇಲ್ಲಿ ಮಾತಾಡ್ತಿರೋ ಈ ನಾನು, ಮತ್ತು ಕೇಳ್ತಾಯಿರೋ ನೀವು, ಅವನು.. ಅವಳು... ಅವರು, ಈ ಗಿಡ, ಮರ, ನದಿ, ಕೊಳ್ಳ, ಪ್ರಾಣಿ, ಪಕ್ಷಿ, ಇಡೀ ಪ್ರಕೃತಿ ಇವೆಲ್ಲಾ, ಇವೆಲ್ಲವೂ ಕೂಡಾ ಬಿಲಿಯಾಂತರ ಜ್ಯೋತಿರ್ವರ್ಷಗಳ ಹಿಂದೆ ನಭೋಮಂಡಲದಲ್ಲಿ ಸೃಷ್ಟಿಯಾದ ನಕ್ಷತ್ರಗಳ ಧೂಳಿನಿಂದ ಹುಟ್ಟಿದ್ದು. ಈ ಜಗತ್ತಿನ ರಮಣೀಯತೆ, ನಿಸರ್ಗದ ಈ ಚೆಲುವು ಇವೆಲ್ಲಾ ತಾರೆಗಳಿಂದಾದ ರಚನೆಗಳು.
(ಸಹಜ ದನಿಯಲ್ಲಿ) ಅಂದ್ಮೇಲೆ ultimately
ಇಲ್ಲಿ ನಾವು ನೀವು ಮಾಡ್ಕೊಂಡಿರೋ ಈ ದೇಶ, ಭಾಷೆಗಳ ಗಡಿಗಳು, ಜಾತಿ ಜಾತಿಗಳ ಗಡಿಗಳು, ನಾ ಮೇಲು, ನೀ ಕೀಳು, ಅವನು ಮೊದಲು, ಇವಳು ಕಡೆಗೆ, ಇವೆಲ್ಲಾ ಎಷ್ಟು ಕ್ಷುಲ್ಲಕ ಅಲ್ವಾ? ಪ್ರಕೃತಿ ಯಾವತ್ತಾದರೂ ಯಾರಿಗಾದರೂ ಭೇದ ಎಣಿಸಿರೋ ಉದಾಹರಣೆ ಇದ್ಯಾ? ಖಂಡಿತಾ ಇಲ್ಲ. ಆ ಗುಣ ಇರೋದು ಮನುಷ್ಯ ಜೀವಿಗೆ ಮಾತ್ರ. (ನಸುನಗೆಯಿಂದ…)
ಇದೆಲ್ಲದರಾಚೆಗೂ ಕೂಡಾ ಮನುಷ್ಯ ಜೀವಿ ಪ್ರಕೃತಿಯ ಅದ್ಭುತ ಸೃಷ್ಟಿ ಅನ್ನೋದರಲ್ಲಿ ಎರಡು ಮಾತಿಲ್ಲ.
ಹಾ... ಜಗತ್ತಿಗೆ ನಾನು ನನ್ನ ವಿಜ್ಞಾನ ಬರಹಗಳ ಮೂಲಕ ಈ ಬ್ರಹ್ಮಾಂಡದ ಸೃಷ್ಟಿ ಮತ್ತು ಮನುಷ್ಯನೆಂಬ ಅದ್ಭುತ ಜೀವಿಯ ಸಾಧ್ಯತೆಗಳ ಬಗ್ಗೆ ಹೇಳೋಕೆ ಬಯಸಿದ್ದೆ. ಇದಕ್ಕಾಗಿ ನಾನು ವಿಜ್ಞಾನ ಮತ್ತು ಸಮಾಜಗಳ ಮಧ್ಯೆ ಇರೋ ಒಳಸಂಬಂಧಗಳನ್ನ ಕುರಿತು ಸಂಶೋಧನೆ ನಡೆಸೋ ಕನಸು ಹೊತ್ತು ಇಲ್ಲಿಗೆ ಬಂದೆ.
ನೋಡಿ ನಮ್ಮ ಇಂಡಿಯಾ ಮಂಗಳನ ಅಂಗಳಕ್ಕೆ ತಲುಪಿದೆ, ವಾಟ್ ಆನ್ ಅಚೀವ್ಮೆಂಟ್! ರಿಯಲಿ ಗ್ರೇಟ್! ಆದರೆ ಇದೇ ಇಂಡಿಯಾದ ರಸ್ತೆಗಳ ಮ್ಯಾನ್ ಹೋಲ್ಗಳಲ್ಲಿ, ಕಕ್ಕಸು ಗುಂಡಿಗಳಲ್ಲಿ ವಿಷಾನಿಲ ನೆತ್ತಿಗೇರಿ ಪ್ರಾಣ ಕಳೆದುಕೊಳ್ತಿರೋ ನನ್ನ ಅಣ್ಣ ತಮ್ಮಂದಿರನ್ನ ರಕ್ಷಿಸೋ ಒಬ್ಬ ವಿಜ್ಞಾನಿಯನ್ನೂ ಹುಟ್ಟಿಸಲಾರದ ಹೀನ ಸ್ಥಿತಿಯಲ್ಲಿ ಈ ದೇಶ ಇರೋದಾದ್ರೂ ಯಾಕೆ?! ಇಲ್ಲಿ ವಿಜ್ಞಾನ ತಂತ್ರಜ್ಞಾನಗಳು ಸಮಾಜದ ಕಟ್ಟಕಡೆಯ ಮನುಷ್ಯನ ಬದುಕನ್ನು ಉತ್ತಮಗೊಳಿಸಲು ಸಾಧ್ಯವಾಗ್ತಿಲ್ಲ ಅಂದ್ರೆ ಅದಕ್ಕಿರೋ ಕಾರಣಗಳಾದ್ರು ಏನು?! ಅಡೆತಡೆಗಳೇನು?! ಈ ಪ್ರಶ್ನೆಗಳಿಗೆ ಉತ್ತರ ಕಂಡ್ಕೊಳ್ಳೋದೇ ನನ್ನ ಸಂಶೋಧನೆಯ ಮೂಲ ಉದ್ದೇಶ.
ಆದರೆ... (ನಿಟ್ಟುಸಿರು...) ಈ ಯೂನಿವರ್ಸಿಟಿ, ಈ ವ್ಯವಸ್ಥೆ...
ಇಲ್ಲಿ ಸೇರ್ಕೊಂಡ್ ಮೇಲೆ ನಂಗೆ ಮತ್ತೆ ಬಾಲ್ಯ ಮರುಕಳಿಸ್ದಂಗೆ ಅನ್ಸೋಕೆ ಶುರುವಾಯ್ತು. ಇಲ್ಲಿ ನನ್ನಂತೆ ಕನಸು ಹೊತ್ತು ಬಂದ ದಲಿತ ವಿದ್ಯಾರ್ಥಿಗಳು ಮಾನಸಿಕವಾಗಿ ಜರ್ಜರಿತಗೊಂಡು ಜೀವ ಕಳ್ಕೋಳ್ಳೋದು ನೋಡಿ ನನ್ನ ಮನಸ್ಸು ಮುದುಡಿಹೋಗಿದೆ. ಬದುಕ್ನಲ್ಲಿ ನಾನು ಕಂಡ ಅತ್ಯಂತ ದುಷ್ಟ ಮನುಷ್ಯ ಅಂದ್ರೆ ನನ್ನ ಅಪ್ಪ ಮಣಿ ಅಂದ್ಕೊಂಡಿದ್ದೆ. ಆದ್ರೆ ಈ ಯೂನಿವರ್ಸಿಟಿಯಲ್ಲ್ಲಿ ಅದೆಷ್ಟು ಮಣಿಗಳಿದ್ದಾರಲ್ಲ! ಹೌದು ಇಲ್ಲಿ ಮೆರಿಟ್ಟಿನ ಭೂತ ಅಮರಿಕೊಂಡ ಮಣಿಗಳಿದಾರೆ. ದಲಿತ, ಆದಿವಾಸಿ, ಹಿಂದುಳಿದ ವರ್ಗದ ವಿದ್ಯಾರ್ಥಿಗಳನ್ನ ‘ಕೋಟಾದಿಂದ ಬಂದೋರು, ಪ್ರತಿಭೆ ಇಲ್ದೋರು’ ಅಂತ ವಿಚಿತ್ರವಾಗಿ ನಡೆಸಿಕೊಳ್ಳೋ ಕೊಳಕು ಮನಸ್ಸಿನ ಜನ್ರಿದಾರೆÉ ಇಲ್ಲಿ. ದಲಿತರು ಅನ್ನೋ ಕಾರಣಕ್ಕೇ ಕೆಲವು ವಿದ್ಯಾರ್ಥಿಗಳಿಗೆ ಬೇಕಂತ್ಲೇ ಕಡಿಮೆ ಅಂಕ ಕೊಟ್ಟು ಮುಂದಿನ ಸೆಮಿಸ್ಟರುಗಳಿಗೆ ಪ್ರವೇಶಾನೇ ಸಿಗದೇ ಇರೋ ಹಾಗೆ ಮಾಡೋ ಅಂತ ಪ್ರೊಫೆಸರ್ಗಳೂ ಇದ್ದಾರೆ. ಈ ವಿದ್ಯಾರ್ಥಿಗಳ ಕನಸುಗಳಿಗೆ ಕೊಳ್ಳಿ ಇಟ್ಟು ಬಿಡೋ ಇಂತ ಧೂರ್ತರನ್ನ ನೋಡ್ದಾಗ ನನ್ನೊಳಗೆ ರೋಷ ಉಕ್ಕತ್ತೆ. ಅರೇ, ಇವರೆಲ್ಲಾ ಮಾಸ್ಟರ್ ಡಿಗ್ರಿ ಓದ್ಕೊಂಡು, ಪಿಎಚ್.ಡಿ ಮಾಡ್ಕೊಂಡು ಬಂದವ್ರು, ಇವರಿಗೆ ಮನುಷ್ಯರನ್ನ ಮನುಷ್ಯರು ಅಂತ ಗುರುತಿಸೋ ಶಿಕ್ಷಣನೇ ಸಿಕ್ಕಿಲ್ವಲ್ಲ. ಪ್ರತಿಭೆಯನ್ನ ಜಾತಿಯಿಂದ ಮಾತ್ರ ಅಳೆಯುವ ಇವ್ರಿಗೆ ತಮ್ಮ ಜಾತಿಯಲ್ಲದವ್ರಲ್ಲಿ ಇರೋ ಕನಸು, ಹಂಬಲಗಳನ್ನ ಗುರುತಿಸೋ ಮನಸೇ ಇಲ್ಲ. ಇಂತದೊಂದು ವಿಚಿತ್ರ ಕುರುಡುತನ ಇವ್ರನ್ನ ಆವರಿಸ್ಕೊಂಡು ಬಿಟ್ಟಿರುತ್ತೆ! ಯೂನಿವರ್ಸಿಟಿ ಆಡಳಿತ ಮಂಡಳಿಯ ಈ ಧೋರಣೆಗಳಿಂದಾಗಿನೇ ಅನೇಕ ವಿದ್ಯಾರ್ಥಿಗಳು ಪ್ರಾಣ ತೆಗೆದುಕೊಂಡಿದ್ದನ್ನ ನಾನು ಕಣ್ಣಾರೆ ನೋಡಿದ್ದೀನಿ.
(ನೋವಿನಿಂದ ಮಂದ ದನಿಯಲ್ಲಿ) ಈಗ್ಗೆ ಎರಡು ವರ್ಷಗಳ ಹಿಂದೆ ಪಿ.ಎಚ್.ಡಿ. ಸ್ಕಾಲರ್ಸ್ ರಾಜು ಮತ್ತೆ ಮಾದಾರಿ ವೆಂಕಟೇಶ್ ಆತ್ಮಹತ್ಯೆ ಮಾಡಿಕೊಂಡ್ರು…. (ವಿಷಣ್ಣತೆಯಿಂದ)
ಕ್ಯಾಂಪಸ್ಸಿನಲ್ಲಿ ಜಾತಿ ದೌರ್ಜನ್ಯಕ್ಕೆ ಮತ್ತೆರಡು ಬಲಿ ಬಿತ್ತು...
(ಧ್ವನಿ ಗಟ್ಟಿಯಾಗುತ್ತದೆ) ಯೂನಿವರ್ಸಿಟಿಯ ಎಲ್ಲಾ ವಿದ್ಯಾರ್ಥಿ ಸಂಘಟನೆಗಳು ಜಂಟಿಯಾಗಿ ರಾಜು ಮತ್ತು ವೆಂಕಟೇಶ್ ಸಾಲಿಡಾರಿಟಿ ಕಮಿಟಿ ರಚಿಸ್ಕೊಂಡು ಅಂದಿನ ವಿಸಿ ರಾಜಿನಾಮೆಗೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹ ನಡೆಸಿದ್ವಿ. ಜಾತಿ ತಾರತಮ್ಯಕ್ಕೆ ಗುರಿಯಾದ ತಳಸಮುದಾಯದ ಎಲ್ಲಾ ವಿದ್ಯಾರ್ಥಿಗಳು ಒಗ್ಗಟ್ಟಾಗಿ ಇದರಲ್ಲಿ ಭಾಗವಹಿಸಿದ್ರು. ಆದರೆ ‘ಕ್ಯಾಂಪಸ್ ನಲ್ಲಿ ಜಾತಿ ತಾರತಮ್ಯ ಇಲ್ವೇ ಇಲ್ಲ’ ಅನ್ನೋ ತನ್ನ ಧೋರಣೆಗೆ ಅಂಟಿಕೊಂಡಿದ್ದ ವಿಸಿ ಮಾತ್ರ ಇವನ್ನೆಲ್ಲ ನಿರಾಕರಿಸಿ ಮತ್ತೊಮ್ಮೆ ತನ್ನ ಜಾತಿವಾದಿ ಅಹಂಕಾರ ತೋರ್ಸಿದ್ರು.
“ಈಗ ತಾನೇ ಮೊದಲನೇ, ಎರಡನೇ ತಲೆಮಾರಿನ ದಮನಿತರು ಉನ್ನತ ಶಿಕ್ಷಣಕ್ಕೆ ತೆರೆದುಕೊಳ್ತಾ ಇದಾರೆ. ಸೆಂಟ್ರಲ್ ಯೂನಿವರ್ಸಿಟಿಗಳಲ್ಲಿ, ಐ.ಐ.ಎಸ್.ಸಿ.ಗಳಲ್ಲಿ, ಐ.ಐ.ಟಿ.ಗಳಲ್ಲಿ, ಐ.ಐ.ಎಂ.ಗಳಲ್ಲಿ ತಳಸಮುದಾಗಳ ಪ್ರವೇಶ ಆಗ್ತಾ ಇದೆ. ಆದರೆ ಇದನ್ನ ಒಪ್ಪುವ, ಸಹಿಸುವ ಮನಸುಗಳದ್ದೇ ಕೊರತೆ... ಈ ಒಂದೊಂದು ಸಂಸ್ಥೆಗೂ ಸಾರ್ವಜನಿಕ ಬೊಕ್ಕಸದಿಂದ ವರ್ಷಕ್ಕೆ ಒಂದು ಸಾವಿರ ಕೋಟಿ ರೂಪಾಯಿ ಹೊಗ್ತ್ತಾ ಇದೆ. ಆದ್ರೆ ಇಂಥ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ದಲಿತ ಹಿಂದುಳಿದವರು ಸೇರ್ಕೊಂಡ್ಬಿಟ್ಟ್ರೆ ಮೆರಿಟ್ಟೇ ಸತ್ತು ಹೋಗುತ್ತೆ ಅಂತ ಬೊಬ್ಬೆ ಹಾಕ್ತಾರೆ. ಇಲ್ಲಿ ತಯಾರಾಗೋ ನೂರಕ್ಕೆ ತ್ತೊಂಬತ್ತು ತಂತ್ರಜ್ಞರು ದೊಡ್ಡ ದೊಡ್ಡ ಕಂಪನಿಗಳ ಗುಲಾಮಗಿರಿ ಮಾಡೋಕೆ ಅಮೆರಿಕ, ಫ್ರಾನ್ಸ್, ಜರ್ಮನಿಗಳಿಗೆ ಹಾರಿ ಹೋಗ್ತಾರೆ. ಹೀಗೆ ದೇಶದ ಸಂಪನ್ಮೂಲ, ಪ್ರತಿಭೆ ಪರದೇಶದವರ ಪಾಲಾಗೋದರಲ್ಲಿ ಯಾವ ಸಣ್ಣ ಪಾಪಪ್ರಜ್ಞೆಯೂ ಇಲ್ಲ ಇವ್ರಿಗೆ. ಆದ್ರೆ ತಳಸಮುದಾಯದವರು (ವ್ಯಂಗ್ಯದ ದನಿ) ಈ ‘ಉನ್ನತ’ ಶಿಕ್ಷಣ ಸಂಸ್ಥೆಗಳನ್ನ ಪ್ರವೇಶಿಸಿದರೆ ಕೋಟಾದಿಂದ ಪ್ರತಿಭೆ ಹಾಳಾಗುತ್ತೆ, ತೆರಿಗೆ ಹಣ ಪೋಲಾಗುತ್ತೆ ಅಂತ ಬೊಬ್ಬೆ ಹಾಕೋದರ ಅರ್ಥ ಏನು? ಮುಖ್ಯವಾಗಿ ಈ ಸಮುದಾಯಗಳವರು ಅವರ ಸರಿಸಮಾನರಾಗಿ ಬೆಳೆಯೋದು ಅವರಿಗೆ ಬೇಕಿಲ್ಲ.
ಇಂತ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಕೊಡುವಾಗ ಅತ್ಯಂತ ಕಠಿಣವಾದ ಪ್ರವೇಶ ಪರೀಕ್ಷೆಗಳನ್ನ ಪಾಸು ಮಾಡಿಯೇ ಎಲ್ಲಾ ವಿದ್ಯಾರ್ಥಿಗಳನ್ನ ಸೇರಿಸಿಕೊಳ್ಳಲಾಗತ್ತೆ. ಚಿಕ್ಕಂದಿನಿಂದಲೂ ಸರಿಯಾದ ಸೌಲಭ್ಯಗಳೇ ಇಲ್ದೇ
ಅತ್ಯಂತ ಕಷ್ಟದಲ್ಲಿ ಈ ಹಂತದವರೆಗೆ ಬರೋ ತಳಸಮುದಾಯಗಳ ಮಕ್ಕಳಲ್ಲಿರೋ ಪ್ರತಿ¨s,É ಎಲ್ಲಾ ಸೌಲಭ್ಯಗಳನ್ನ ಹೊಂದಿ ಇಲ್ಲಿಗೆ ಪ್ರವೇಶ ಪಡೆಯೋ ಜನರಲ್ ಕೆಟಗರಿ ವಿದ್ಯಾರ್ಥಿಗಳಿಗಿಂತ ಮಿಗಿಲಾಗಿರೋದು ಅಂತ ಯಾಕೆ ಇವ್ರಿಗೆ ಅರ್ಥಾನೇ ಆಗಲ್ಲ? ಈ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿ ಜ್ಞಾನವನ್ನು ಕೊಡಬೇಕಾದ ಸಮಾಜ ಮತ್ತು ಪ್ರಾಧ್ಯಾಪಕರು ಇಲ್ಲಿ ಮಾಡ್ತಿರೋದಾದ್ರೂ ಏನು? “ಜಾತಿನೇ ಮುಂದಿಟ್ಕೊಂಡು ಇವರೆಲ್ಲ ಬೇರೆ ಪ್ರತಿಭಾವಂತರ ಅವಕಾಶ ಕಿತ್ಕೋತಿದಾರೆ, ಶಿಕ್ಷಣದ ಗುಣಮಟ್ಟ ಹಾಳಾಗ್ತಿದೆ, ಇಂಥೋರೆಲ್ಲ ಇಲ್ಲಿಂದ ಹೊರಬಂದು ಏನು ದೇಶ ಕಟ್ತಾರೆ?” ಅಂತೆಲ್ಲ ಚುಚ್ಚಿ ಚುಚ್ಚಿ ಈ ವಿದ್ಯಾರ್ಥಿಗಳನ್ನ
ಕೀಳರಿಮೆಯಿಂದ ಕೊರಗಿಸಿ ಕೊನೆಗೆ ಸಾವಿಗೇ ದೂಡಿಬಿಡೋದು ಎಂಥ ಕ್ರೌರ್ಯ ಅಲ್ವಾ?
ಇದನ್ನೆಲ್ಲ ನೋಡ್ತಾ ನೋಡ್ತಾ ನನ್ನ ಮನಸ್ಸು ಮನುಷ್ಯರ ಈ ಕುರುಡುತನಕ್ಕೆ ಕಾರಣಗಳನ್ನ ತಿಳಿಯೋಕೆ ಸಮಾಜ ಪಠ್ಯಗಳ ಕಡೆಗೆ ಹೊರಳ್ತು. ಈ ಪ್ರಯತ್ನದಲ್ಲೇ ನನಗೆ ಸಿಕ್ದವ್ರು ಮಾಕ್ರ್ಸ್, ಚೆ ಗುವಾರ, ಮಾಲ್ಕಂ ಎಕ್ಸ್, ಫುಲೆ ದಂಪತಿಗಳು, ಸಾಹು ಮಹರಾಜ್, ನಾರಾಯಣ ಗುರು, ಪೆರಿಯಾರ್ ಮತ್ತು ಬಾಬಾಸಾಹೇಬ್ ಅಂಬೇಡ್ಕರ್...
ಈ ಮಹಾನ್ ಚೇತನಗಳು ನನ್ನಲ್ಲಿ ಹುಟ್ಟಿಸಿದ ಅರಿವಿನ ಕಿಡಿ ಇಲ್ಲಿ ನಡೀತಿದ್ದ ದೌರ್ಜನ್ಯಗಳಿಗೆ, ಶೋಷಣೆಗಳಿಗೆ ನಾನು ಸುಮ್ನೇ ಮೂಕಪ್ರೇಕ್ಷಕನಾಗಿರೋಕೆ ಬಿಡೋ ಹಾಗೇ ಇರಲಿಲ್ಲ..
ಈ ಜಗತ್ತಲ್ಲಿ ಬಾಳಾ ಮಹತ್ವದ ವಿಷಯ ಅಂದ್ರೆ ಅದು ಸ್ವಾತಂತ್ರ್ಯ. (ಹುಮ್ಮಸ್ಸಿನಿಂದ) ಸ್ವಾತಂತ್ರ್ಯ ಮನುಷ್ಯನ ಮೂಲದ ತುಡಿತ. ಮನುಕುಲದ ಚರಿತ್ರೆಯ ಉದ್ದಕ್ಕೂ ಸ್ವಾತಂತ್ರ್ಯಕ್ಕಾಗಿ ನಡೆದ ಸಂಘರ್ಷಗಳು ಲೆಕ್ಕವಿಲ್ದಷ್ಟು. ಹೌದು ನನ್ನ ಮನದಾಳದಲ್ಲಿ ಕೂಡಾ ಎಲ್ಲೋ ಒಂದು ಮೂಲೆನಲ್ಲಿ ಈ ಸ್ವಾತಂತ್ರ್ಯದ ಕೂಗು ಎದ್ದಿತ್ತು. ನನ್ನ ಹೃದಯ ಬುದ್ದಿಗಳೆಲ್ಲಾ ಅದಕ್ಕಾಗೇ ತುಡೀತಾ ಹೋದ್ವು.
(ಸಂಗೀತ)
1947ರ ಸ್ವಾತಂತ್ರ್ಯ ಈ ದೇಶದ ಜನರನ್ನ ನಿಜದ ಸ್ವಾತಂತ್ರ್ಯದ ಹತ್ತಿರಕ್ಕೂ ಕೊಂಡೊಯ್ಯೋಕ್ಕಾಗದೇ ಇರೋದು ಎಂತ ವಿಪರ್ಯಾಸ ಅಲ್ವಾ? ನಾನು ಹುಟ್ಟಿ ಬೆಳೆದು ಬದುಕಿದ ರೀತಿ ನನಗೇ ಅರಿವಿಲ್ದೇ ನನ್ನೊಳಗೆ ನಿಜದ ಸ್ವಾತಂತ್ರ್ಯಕ್ಕಾಗಿ ಒಂದು ಹಂಬಲವನ್ನ ಹುಟ್ಟಿಸಿದೆ. ಇಲ್ಲಿ ಸ್ವಾತಂತ್ರ್ಯ ಅಂದ್ರೆ ಪ್ರತಿ ವ್ಯಕ್ತಿ ಆತ್ಮಗೌರವದೊಂದಿಗೆ ಬದುಕುವ ಹಕ್ಕು ಮತ್ತು ಅದಕ್ಕಾಗಿ ಅವಕಾಶ. ಸ್ವಾತಂತ್ರ್ಯ ಅಂದ್ರೆ ಪ್ರತಿಯೊಬ್ಬರೂ ಗಳಿಸಿಕೊಳ್ಳಬೇಕಾದ ಘನತೆ ಮತ್ತು ಆತ್ಮಗೌರವ. ಹೇಳಿ, ಈ ದೇಶದಲ್ಲಿ ಎಷ್ಟು ಜನ ಈ ತರದ ಘನತೆಯಿಂದ ಬದುಕ್ತಾ ಇದಾರೆ? ಇಲ್ಲಿ ಹೆಜ್ಜೆ ಹೆಜ್ಜೆಗೂ ತುಂಬ್ಕೊಂಡಿರೋ ಅಸ್ಪøಷ್ಯತೆ, ಜಾತೀಯತೆಗಳೇ ಇದಕ್ಕೆ ದೊಡ್ಡ ಅಡ್ಡಿ. ನಾವು ಕಟ್ಕೊಂಡಿರೋ ಈ ಜಾತಿ ಗೋಡೆಗಳನ್ನ ಒಡೆಯದ ಹೊರತು ಈ ಬಂಧನದಿಂದ ವಿಮೋಚನೆ ಇಲ್ಲ. ಅದೇ..ಅದೇ.. ಈ ದೇಶ ಮತ್ತು ಇಲ್ಲಿನ ಜನ ನಿಜದ ಸ್ವಾತಂತ್ರ್ಯದ ಕಡೆಗೆ ಇಡುವ ಮೊದಲ ಹೆಜ್ಜೆಯಾಗಿರತ್ತೆ.
ಒಟ್ಟಾರೆ ಯೂನಿವರ್ಸಿಟಿಯ ನನ್ನ ಈ ಅನುಭವಗಳು ಮತ್ತು ಅಧ್ಯಯನ ನನ್ನನ್ನು ಹೊಸ ಅರಿವಿನ ಕಡೆಗೆ ಪ್ರೇರೇಪಿಸಿದ್ವು. ಈ ಹೊಸ ಅರಿವು ನನ್ನ ಕನಸುಗಳನ್ನ ಮತ್ತಷ್ಟು ವಿಸ್ತಾರಗೊಳಿಸ್ತು. ಬರಹಗಾರನಾಗುವ ಕನಸಿನ ಜೊತೆ ಜೊತೆಗೆ ಈ ದೇಶದಲ್ಲಿ ಮನುಷ್ಯರು ಕೇವಲ ಮನುಷ್ಯರಾಗಿ ಬದುಕುವ ಒಂದು ಸುಂದರ ಸಮಾಜ ನಿರ್ಮಿಸುವ ಕನಸು ಸಹ ಮೂಡ್ತಾಹೋಯ್ತು.
ಈ ಸಮಾಜವನ್ನ, ಜಗತ್ತನ್ನ, ಮನುಷ್ಯರನ್ನ ಅರಿಯುವ ಪ್ರಯತ್ನದಲ್ಲಿ ನನ್ನನ್ನ ನಾನು ತೊಡಗಿಸಿಕೊಂಡೆ. ಸಂಘಟನೆಗಳನ್ನ ಸೇರ್ಕೊಂಡೆ. ಮೊದ್ಲಿಗೆ ಕಮ್ಯುನಿಷ್ಟ್ ಸಂಘಟನೆ- (ಒಂದು ಕೈಯಲ್ಲಿ ಕೆಂಪು ಬಾವುಟ ಹಿಡಿದು, ಮತ್ತೊಂದು ಕೈ ಮುಷ್ಟಿ ಬಿಗಿ ಹಿಡಿದು ಘೋಷಣೆ ಕೂಗುತ್ತಾ-)
“(ಜೋಶ್ನಲ್ಲಿ) ಇಂಕ್ವಿಲಾಬ್ ಝಿಂದಾಬಾದ್, ದೇಶವೇನು ಕೇಳುತಿದೆ- ಕೆಂಪು ಕೋಟೆ ಮೇಲೆ ಕೆಂಪು ಧ್ವಜ; ಜೀನಾ ಹೇ ತೋ ಮರ್ನಾ ಸೀಖೋ, ಖದಂ ಖದಂ ಪರ್ ಲಡ್ನಾ ಸೀಖೋ! ಲಾಲೇ ಲಾಲೇ ಲಾಲೆ ಲಾಲ್ ಸಲಾಂ, ಲಾಲ್ ಸಲಾಂ ಲಾಲ್ ಸಲಾಂ......”
(ಗಂಭೀರವಾಗಿ ಮುಂದೆ ಬಂದು ನಿಂತುಕೊಂಡು)
ನಂತ್ರದಲ್ಲಿ ನಾನು ಅಂಬೇಡ್ಕರ್ ವಿದ್ಯಾರ್ಥಿ ಸಂಘ ಸೇರಿದೆ-
(ನೀಲಿ ಬ್ಯಾನರ್ ಹಿಡಿದು ಮೈಗೆ ಹೊದ್ದುಕೊಂಡು ನಿಲ್ಲುತ್ತಾನೆ.)
(ಕ್ಯಾಂಪಸ್ ಪ್ರತಿಭಟನೆಯ ವಿಡಿಯೋ ಪ್ಲೇ ಆಗುತ್ತದೆ)
(ಹಿನ್ನೆಲೆ ಸಂಗೀತ)
(ದೃಶ್ಯ ಬದಲಾಗುತ್ತದೆ)
ಡಿಗ್ರಿ ಕಾಲೇಜಿನಲ್ಲಿ ಓದುವಾಗ ನಾನು ಇಷ್ಟು ಗಂಭೀರವಾಗಿರ್ಲೇ ಇಲ್ಲ ಗೊತ್ತಾ? ಕಾಲೇಜಿನ ಪಾಠ ಬಿಟ್ರೆ ಫ್ರೆಂಡ್ಸ್ ಜೊತೆ ಸೇರಿ ಕ್ರಿಕೆಟ್ ಆಡೋದು, ಸಿನಿಮಾ ನೋಡೋದು ನನ್ನ ನೆಚ್ಚಿನ ಹವ್ಯಾಸಗಳಾಗಿದ್ವು. ರಾಮ್ ಚರಣ್ ನನ್ನ ಇಷ್ಟದ ಹೀರೋ. (ನಸುನಗುತ್ತಾ..) ಅವನ ಸಿನಿಮಾಗಳನ್ನ ನೋಡದೇ ಬಿಟ್ಟಿದ್ದೇ ಇಲ್ಲ.
ನಮ್ಮ ಈ ಕಾಲಕ್ಕೇ ಒಂದು ವಿಶೇಷತೆ ಇದೆ ಅನ್ಸುತ್ತೆ. ಈ ಟೈಮ್ ನಲ್ಲೇ ನಮ್ಮನ್ನೆಲ್ಲ ಇಂಟರ್ನೆಟ್ ಜಗತ್ತು ಆವರಿಸಿಕೊಂಡಿದ್ದು. ನನ್ನ ಪಾಲಿಗೆ ಇದೊಂಥರ ಅದ್ಭುತಾನೇ ಸರಿ. ನಾನು ಡಿಗ್ರಿ ಓದುವಾಗ ನನಗೆ ಇಷ್ಟವಾದ ತಾಣ ಎಂದರೆ ವೀಕಿಪಿಡಿಯಾ. ಅಬ್ಬಾ! ಅಲ್ಲಿ ಬೆರಳ ತುದಿಯಲ್ಲೇ ಅದೆಷ್ಟೊಂದು ಮಾಹಿತಿ. ಅದು ಎಷ್ಟು ಮೊಗೆದರೂ ಖಾಲಿಯಾಗದ ಸಿಹಿನೀರ ಬುಗ್ಗೆ ತರಾ. ಹೀಗೆ ಮಾಹಿತಿ ಸಂಗ್ರಹಿಸೋದು ನನಗೆ ಹುಚ್ಚೇ ಆಗಿತ್ತು ಅನ್ನಿ. ರಿಯಲಿ ಐ ವಾಜ್ ಕ್ರೇಝಿ ಅಬೌಟ್ ಇನ್ಫರ್ಮೇಶನ್.
Of course I was
crazy about beautiful girls too...
(ಲ್ಯಾಪ್ ಟಾಪಿನಲ್ಲಿ ಏನೋ ಟೈಪ್ ಮಾಡುತ್ತಾ, ...ಹೆಡ್ ಫೋನ್ ಹಾಕಿಕೊಂಡು)
ನೀವೆಲ್ಲ ಮರೆತಿರಲಿಕ್ಕಿಲ್ಲ. ಏಳೆಂಟು ವರ್ಷಗಳ ಹಿಂದೆ ನಮ್ಮನ್ನೆಲ್ಲಾ ಆರ್ಕುಟ್ ಅನ್ನೋ ಮಾಯಾಜಾಲ ಆವರಿಸಿಕೊಂಡುಬಿಟ್ಟಿತ್ತು. ಅಲ್ಲಿ ಕುಲಗೊತ್ರ ಅನ್ನದೇ ಜಗತ್ತಿನ ಮೂಲೆ ಮೂಲೆಗಳಿಂದ ನಮ್ಮ ಆಸಕ್ತಿ, ವಿಚಾರಗಳ ಮೇಲೆ ಗೆಳೆಯರನ್ನ ಪಡೆಯೋ ಅವಕಾಶ ಇತ್ತಲ್ಲ, ನನಗಂತೂ ಅದು ಥ್ರಿಲ್ಲಿಂಗ್ ಆಗಿತ್ತು. ಕ್ರಮೇಣ ನಮ್ಮನ್ನೆಲ್ಲಾ ಮಾರ್ಕ್ ಝುಕರ್ ಬರ್ಗನ ಫೇಸ್ ಬುಕ್ ಆವಾಹಿಸಿಕೊಂಡುಬಿಟ್ಟದ್ದು ಮತ್ತೊಂದು ಕತೆ ಬಿಡಿ. ಬಾಲ್ಯದಲ್ಲಿ ಈ ಸಮಾಜ ನನಗೆ ಹೊರಜಗತ್ತಿನ ಜೊತೆಗೆ ಬೆರೆಯೋಕೆ ಸಹ ಅವಕಾಶ ನೀಡಿರ್ಲಿಲ್ಲ. ಆದರೆ ತಂತ್ರಜ್ಞಾನ ಈಗ ಜಗತ್ತಿನ ಜೊತೆ ಬೆರೆಯೋಕೆ, ಮಾತಾಡೊಕೆ ನಂಗೆ ದಾರಿ ಮಾಡಿಕೊಟ್ಟಿತ್ತು.
ಆದ್ರೆ ಆಧುನಿಕ ತಂತ್ರಜ್ಞಾನದ ಈ ಮಾಯಾಲೋಕದ ಸಾಧ್ಯತೆಗಳು ಅಲ್ಲಿಗೆ ಮಾತ್ರವೇ ಸೀಮಿತ. ಇದರಿಂದ ಸ್ವಲ್ಪ ಹೊರಬಂದು ನಿಜದ ಜಗತ್ತು ನೋಡಿದ್ರೆ ನಮಗೆ ಬೇರೆಯದೇ ವಾಸ್ತವ ಕಾಣುತ್ತೆ. ಈ ವಾಸ್ತವದ ಅರಿವು ನನಗೆ ಬಹಳ ಸ್ಪಷ್ಟವಾಗಿ ದಕ್ಕಿದ್ದು ನಮ್ಮ ಯೂನಿವರ್ಸಿಟಿಯಲ್ಲೇ. ಇಡೀ ಸಮಾಜದಲ್ಲಿ ಇರುವ ಮನುಷ್ಯ ಮನುಷ್ಯರ ನಡುವಿನ ಅಗಾಧ ಕಂದಕಗಳನ್ನು ನೋಡಿದ್ರೆ ದಿಗಿಲಾಗುತ್ತೆ.
(ಆರ್ತನಾದದ ಹಿನ್ನೆಲೆ ಧ್ವನಿ)
(ಏನೋ ಕೇಳಿಸಿಕೊಂಡವನಂತೆ ... ನೋವಿನಿಂದ)
ಅದೋ ಅಲ್ಲಿ ಕೇಳಿ-- ಆ ಆರ್ತನಾದ.... ಕೇಳಿಸ್ತಾ ಇದೆಯಾ? ಕಾರಂಚೇಡು, ಚುಂಡೂರು, ಬೆಲ್ಚಿ, ಪಿಪ್ರಾ, ಕೀಲ್ವೇಣ್ಮಣಿ, ಬೆಂಡಿಗೇರಿ, ಲಕ್ಷ್ಮಣಪುರ ಬಾತೆ, ಕಂಬಾಲಪಲ್ಲಿ, ನಾಗಲಾಪಲ್ಲಿ, ಹರ್ಯಾಣದ ಜಝಾರ್, ಖೈರ್ಲಾಂಜಿ..ಇಲ್ಲೆಲ್ಲಾ ಈ ಸೂಪರ್ ಪವರ್ ನೇಶನ್ ನಡೆಸಿರೋ ದಮನ, ದೌರ್ಜನ್ಯಕ್ಕೆ, ಅತ್ಯಾಚಾರಗಳಿಗೆ ಬಲಿಯಾದ ನನ್ನ ದಲಿತ ಅಣ್ಣತಮ್ಮಂದಿರ, ಅಕ್ಕ ತಂಗಿಯರ ಆರ್ತನಾದ. ನಿಮ್ಗೂ ಕಿವಿಗಳಿದ್ರೆ ಕೇಳಿಸಿಕೊಳ್ಳಿ..
(ವಿಷಾದ ವ್ಯಂಗ್ಯ) ಈ ದೇಶದಲ್ಲಿ ನಿಂತಿರೋ ನಿಮಗೆ ದೂರದ ಮಲಾಲಾ ಧ್ವನಿ ಜೋರಾಗಿ ಕೇಳಿಸಿಬಿಡುತ್ತೆ.. ನಿರ್ಭಯಳಿಗಾಗಿ ಇಡೀ ದೇಶನೇ ಹತ್ತಿ ಉರಿಯುತ್ತೆ. ಆ ಸಹೋದರಿಯರಿಗಾಗಿ ನಾನೂ ಧ್ವನಿ ಎತ್ತಿದೀನಿ ನಿಜ, ಆದ್ರೆ... ಆದ್ರೆ, (ಭಾವುಕವಾಗಿ) ಖೈರ್ಲಾಂಜಿ ಊರಿನ ದಲಿತ ಕೇರಿಯಲ್ಲಿ ಮೇಲ್ಜಾತಿ ಗಂಡಸರು ನನ್ನಕ್ಕ ಸುರೇಖಾ ಭೋತ್ಮಾಂಗೆ, ಹತ್ತನೇ ಕ್ಲಾಸ್ ಓದ್ತಾ ಇದ್ದ ಮುದ್ದು ಕಂದ ಪ್ರಿಯಾಂಕಾರ ಮೇಲೆ ಅತ್ಯಾಚಾರ ಮಾಡಿ, ಹಿಂಸಿಸಿ ಕೊಂದು ಅವರ ಹೆಣಗಳನ್ನೂ ಬಿಡದೇ ಅತ್ಯಾಚಾರ ಮಾಡ್ತಿದ್ದಾಗ, ಅವರ ಹೆಣಗಳೂ ಆಳ್ತಾ ಇದ್ವು..... ಆ ಅಳು ಯಾರ ಕಿವಿಗಾದ್ರೂ ಬಿದ್ದಿತ್ತ? ಹೇಳಿ...
ದಲಿತರಾದವ್ರು ಸ್ವಾಭಿಮಾನದಿಂದ ಎದೆಯೆತ್ತಿ ನಡೆಯೋದೇ ಅಪರಾಧವಾಗಿ, ಹೀನಾತಿಹೀನ ದೌರ್ಜನ್ಯಕ್ಕೆ ಒಳಗಾದಾಗ ಅವರಿಗೆ ಕಾನೂನಾಗಲೀ, ನ್ಯಾಯಾಲಯಗಳಾಗಲೀ ಕನಿಷ್ಠ ರಕ್ಷಣೆಯನ್ನೂ ನೀಡದ ಸ್ಥಿತಿ ತಲುಪಿರೋದು ದೊಡ್ಡ ವಿಷಯಾಅನಿಸಿಕೊಳ್ಳೋದಿಲ್ವಲ್ಲ?
ಈ ಕಂದಕಗಳನ್ನು ಮುಚ್ಚುವ ಮಾರ್ಗಗಳಿಗಾಗಿ ನನ್ನ ಮನಸ್ಸು ನಿರಂತರ ಹುಡುಕಾಟ ನಡೆಸ್ತಾ ಇತ್ತು. ಅದು ಬಾಬಾಸಾಹೇಬರ ಮಾರ್ಗ ಮಾತ್ರವೇ ಅನ್ನೋದು ನಂಗೆ ಖಚಿತವಾಯ್ತು.
(ಹಿನ್ನೆಲೆ ಸಂಗೀತ)
(ಹೇಟ್ರೆಡ್ ಇನ್ ದ ಬೆಲ್ಲಿ ಪುಸ್ತಕ ಕೈಗೆತ್ತಿಕೊಂಡು, ಸ್ವಲ್ಪ ಹೊತ್ತು ಓದಿ, ನಂತರ ಎದ್ದು ಮುಂದೆ ಬಂದು)
ಈ ಕಮ್ಯುನಿಷ್ಟ್ ನಾಯಕರು ಬಾಬಾಸಾಹೇಬರನ್ನ ಅರ್ಥ ಮಾಡ್ಕೊಳೋದಿರಲಿ ಕಾರ್ಲ್ ಮಾಕ್ರ್ಸ್ ವಿಚಾರಗಳನ್ನೇ ಹೇಗೆ ನೋಡ್ತಾರೆ ಅನ್ನೋ ಪ್ರಶ್ನೆ ನಂಗಿದೆ. ಈಗ ನೋಡಿ, ನಮ್ಮ ಅಧಿಕಾರಸ್ಥ ವ್ಯವಸ್ಥೆ ಹೇರುತ್ತಲ್ವಾ? ಬಹುಸಂಖ್ಯಾತ ದೃಷ್ಟಿಕೋನ... ಬಹಳಷ್ಟು ಸಲ ಆ ಮೆಜಾರಿಟಿ ದೃಷ್ಟಿಕೋನದಿಂದ ಕಮ್ಯುನಿಷ್ಟ್ರು ಹೊರಗೇ ಬರೋಲ್ಲ. ವರ್ಗ-ಜಾತಿ-ಲಿಂಗಗಳ ಶೋಷಕ ಸಂರಚನೆಗಳಿಂದ ಕಳಚಿಕೊಳ್ಳೋದರ ಬಗ್ಗೆನೂ ಅವರು ಗಂಭೀರವಾಗಿಲ್ಲ ಅನ್ಸುತ್ತೆ.
From Each According to Their Abilities, to Each According to
Their Needs – ಅನ್ನೋ
ಕಾರ್ಲ್ ಮಾರ್ಕ್ಸ್ ಮಾತುಗಳನ್ನ ನಮ್ ದೇಶಕ್ಕೆ ಅಳವಡಿಸೋದ್ರಲ್ಲಿ ಕಮ್ಯುನಿಷ್ಟರು ಸೋತಿದಾರೆ ಅಂತ ನನಗನ್ಸುತ್ತೆ. ಇಡೀ ದೇಶಾನೇ ಸಾವಿರಾರು ಜಾತಿಗಳಾಗಿ, ಆ ಜಾತಿಗಳೇ ವರ್ಗಗಳೂ ಆಗಿ ಛಿದ್ರಗೊಂಡಿರೋ ಇಲ್ಲಿ ಒಬ್ಬ ಮೇಲ್ಜಾತಿ ಪುರುಷನ ಅಗತ್ಯವೇ ಬೇರೆಯಾಗಿರುತ್ತೆ, ಒಬ್ಬ ದಲಿತನ ಅಗತ್ಯವೇ ಬೇರೆಯಾಗಿರುತ್ತೆ. ಮೇಲ್ಜಾತಿ ಮಹಿಳೆಯ ಅಗತ್ಯವೇ ಬೇರೆಯಾಗಿರುತ್ತೆ, ಒಬ್ಬ ದಲಿತ ಮಹಿಳೆಯ ಅಗತ್ಯವೇ ಬೇರೆಯಾಗಿರುತ್ತೆ. ಸ್ವಾತಂತ್ರ್ಯದ ಕಡೆಗೆ, ವಿಮೋಚನೆಯ ಕಡೆಗೆ ನಡೆಯುವ ನಡಿಗೆಯಲ್ಲಿ ಈ ಅಗತ್ಯವನ್ನ ಗುರುತಿಸೋದು ಬಹಳ ಮುಖ್ಯ ಅಲ್ವಾ? ಹೀಗಾಗಿನೇ ನನ್ನ ಹುಡುಕಾಟದ ಹಾದಿ Radical ಅಂಬೇಡ್ಕರ್ ವಾದಿ ಚಳವಳಿ ಜತೆ ಬೆಸೆದುಕೊಳ್ತು.
(ದೃಢವಾಗಿ) ನನ್ನ ಈ ಸ್ಥಿತ್ಯಂತರ ಅತ್ಯಂತ ಪ್ರಜ್ಞಾಪೂರ್ವಕವಾದದ್ದು. ಬಾಬಾಸಾಹೇಬರು ಯಾವತ್ತೂ ಕನಸಿದ ಸಮಸಮಾಜದ ಸೃಷ್ಟಿಗಾಗಿ ನಾನೂ ಬದ್ಧನಾದೆ. ಈ ದಾರಿಯಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಅಣ್ಣಂದಿರ, ಅಕ್ಕಂದಿರ ಜೊತೆ ಹೆಚ್ಚೆಚ್ಚು ಒಡನಾಡಬಯಸಿದೆ.
(ಸಂಗೀತ)
``Ours is a battle
not for wealth; nor for power, ours is battle; for freedom, for reclamation of
human personality'' ನಮ್ಮ ಈ ಕದನ ನಡೀತಿರೋದು ಮನುಷ್ಯನ ಘನತೆಯನ್ನು ಎತ್ತಿ ಹಿಡಿಯಲಿಕ್ಕಾಗಿ ಅಂತ ಬಾಬಾಸಾಹೇಬರು ಸಾರಿ ಹೇಳಿದ್ದು ನನ್ನ ಮನಸ್ಸಲ್ಲಿ ಪದೇ ಪದೇ ಪ್ರತಿಧ್ವನಿಸ್ತಿದೆ.
(ಹಿನ್ನೆಲೆ ಸಂಗೀತ)
(ಏನೋ ನೆನೆಸಿಕೊಂಡವನಂತೆ)
ಹಾಂ, ಒಂದ್ನಿಮಿಷ...
(ಪುಸ್ತಕದ ಶೇಲ್ಫ್ ಕಡೆ ಲಗುಬಗೆಯಿಂದ ನಡೆದು ಸಾವಿತ್ರಿ ಬಾಯಿ ಫುಲೆಯವರ ಪುಸ್ತಕವೊಂದನ್ನು ಕೈಯಲ್ಲಿ ಹಿಡಿದು ಓದುತ್ತಾ,)
ದಲಿತರು, ಶೂದ್ರರು ಶಿಕ್ಷಣ ಪಡೆಯೋದೇ ಅಪರಾಧವಾಗಿದ್ದ ಕಾಲಕ್ಕೆ, ಒಂದೂವರೆ ಶತಮಾನಗಳಷ್ಟು ಹಿಂದೆಯೇ ಈ ದೇಶದಲ್ಲಿ ಹೆಣ್ಣುಮಕ್ಕಳಿಗೆ ಶಿಕ್ಷಣ ಒದಗಿಸೋಕೆ ಮೊತ್ತಮೊದಲ ಶಾಲೆ ತೆರೆದವರು ಸಾವಿತ್ರಿ ಬಾಯಿ ಫುಲೆ.
"ದುರ್ಬಲ ಮತ್ತು ದಮನಿತನಾದ ನನ್ನ ಸೋದರನೇ, ಎದ್ದೇಳು ಈ ಗುಲಾಮಗಿರಿಯ ಬದುಕಿನಿಂದ ಹೊರಗೆ ಬಾ.."
ಅವರ ಪದ್ಯದ ಈ ಸಾಲುಗಳು ಯಾವತ್ತೂ ನನ್ನ ಮನಸ್ಸಿನಲ್ಲಿ ರಿಂಗಣಿಸುತ್ತಿರುತ್ತೆ.
ನೋಡಿ, 150 ವರ್ಷಗಳ ಹಿಂದೆನೇ ಆ ಫುಲೆ ದಂಪತಿಗಳು ಭಾರತೀಯರಿಗೆ ಮನುಧರ್ಮ ಪ್ರಣೀತವಾದ ದರಿದ್ರ ಮನಸ್ಥಿತಿಯಿಂದ ಹೊರಬನ್ನಿ ಅಂತ ಕರೆ ನೀಡಿದ್ರು. ಆದ್ರೆ ಇವತ್ತು ಇಲ್ಲಿ ಏನಾಗ್ತಿದೆ..?
ಹೌದು, ಈ ದೇಶದಲ್ಲಿ ಸ್ವಾತಂತ್ರ್ಯದ ಅರ್ಥ ಸೀಮಿತಗೊಳ್ಳೋಕೆ ಕಾರಣ ಏನು ಗೊತ್ತಾ? ಇಲ್ಲಿ ಒಂದು ವರ್ಗ ಮನುಧರ್ಮಶಾಸ್ತ್ರವನ್ನ, ಅದ್ರೊಳಗಿನ ಮನುಷ್ಯ ವಿರೋಧಿ ಚಿಂತನೆಗಳನ್ನ ಬಳಸ್ಕೊಂಡು ಯಾವತ್ತೂ ತಾನು ಮೇಲೇ ಇರಲು ಬಯಸೋದೇ ಕಾರಣ.
ನನಗೀಗ ಬಲವಾಗಿ ಅನ್ಸುತ್ತೆ, ಅಮ್ಮ ಮತ್ತು ನಮ್ಮನ್ನು ನನ್ನಪ್ಪ ಮಣಿ ಕೀಳಾಗಿ ನಡೆಸಿಕೊಳ್ಳಲಿಕ್ಕೆ, ಈ ಯೂನಿವರ್ಸಿಟಿಯಲ್ಲಿ ಕೆಲವರು ದಮನಿತರ ಬಗ್ಗೆ ತಾತ್ಸಾರ ಮತ್ತು ದ್ವೇಷ ಬೆಳೆಸಿಕೊಳ್ಳಲಿಕ್ಕೆ, ಮೂಲ ಕಾರಣಾನೇ ಈ ಮನುಧರ್ಮ.
1927ರ ಡಿಸೆಂಬರ್ 25ರಂದು ಮಹಾಡ್ ನಲ್ಲಿ ಸೆಕೆಂಡ್ ಡಿಪ್ರೆಸ್ಡ್ ಕ್ಲಾಸಸ್ ಕಾನ್ಫರೆನ್ಸ್ ನಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಮನುಸ್ಮೃತಿಯನ್ನ ಸುಟ್ಟು ಹಾಕಿದ್ದರ ಹಿಂದೆ ಇದ್ದದ್ದು ಇದೇ ತಿಳಿವಳಿಕೆ. ಅಂದು ಬಾಬಾಸಾಹೇಬರು ಮನುಸ್ಮೃತಿ ಸುಟ್ಟು ಹಾಕುವ ಮೂಲಕ ‘ಅಸ್ಪೃಷ್ಯತೆ, ಗುಲಾಮಗಿರಿಗಳನ್ನ ಈ ದೇಶದ ಸ್ವಾತಂತ್ರ್ಯವಂಚಿತ ಜನತೆ ಮಾನ್ಯ ಮಾಡೋದಿಲ್ಲ್ಲ’ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದ್ದರು.
ನಮ್ಮ ಹೈದ್ರಾಬಾದ್ ಸೆಂಟ್ರಲ್ ಯೂನಿವರ್ಸಿಟಿ ಇಂತಹ ಮನುವಾದಿಗಳ ನಿಯಂತ್ರಣದಲ್ಲಿರೋ ದೊಡ್ಡ ಅಡ್ಡೆಯಾಗಿದೆ. ಅದಕ್ಕಾಗಿನೇ ನಾವು ಎಎಸ್ಎ ಗೆಳೆಯರೆಲ್ಲಾ ಸೇರಿ ಕ್ಯಾಂಪಸ್ನಲ್ಲಿ ಸಹ ಮನುಸ್ಮೃತಿ ಸುಟ್ಟುಹಾಕೋ ಕಾರ್ಯಕ್ರಮ ಹಮ್ಮಿಕೊಂಡ್ವಿ.
(ಇಲ್ಲಿಂದ ವೇಗಗತಿಯಲ್ಲಿ)
ಈ ಮನುವಾದಿ ಪ್ರಣೀತ ಮನಸ್ಸುಗಳಿಗೆ ತಮ್ಮ ನಂಬಿಕೆಯನ್ನ ಪ್ರಶ್ನಿಸೋ ಏನೊಂದನ್ನೂ ಸಹಿಸೋ ಶಕ್ತಿನೇ ಇಲ್ಲ. ಬದಲಾವಣೆ ಅಂದ್ರೆನೇ ಇವ್ರಿಗೆ ಭಯ. ಹೀಗಾಗಿ ಸಹನೆ ಅನ್ನೋ ಒಂದು ಮನುಷ್ಯ ಸಹಜ ಗುಣಾನೇ ಇಲ್ಲಿ ಉಡುಗಿ ಹೋಗ್ತಾ ಇದೆ. ಪ್ರತಿಯೊಂದು ವಿಷಯದಲ್ಲೂ ಅಸಹನೆಯ ದಟ್ಟವಾದ ಹೊಗೆ ಎಲ್ಲಾ ಕಡೆ ಆವರಿಸ್ಕೊಂಡುಬಿಟ್ಟಿದೆ. ಉಸಿರಾಡೋದೂ ಕಷ್ಟ ಆಗ್ತಿದೆ. ಅದೂ ಎಲ್ಲೀವರಗೆ ಅಂದ್ರೆ ಕರ್ನಾಟಕದಲ್ಲಿ ಮಹಾನ್ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿಯವರನ್ನು ಕೊಲೆ ಮಾಡೋ ಹೀನ ಮಟ್ಟಕ್ಕೂ ಕೆಲವು ಅವಿಚಾರಿಗಳು ಇಳಿದುಬಿಟ್ರು.
ಸತ್ಯಗಳ ಹುಡುಕಾಟದಲ್ಲಿರೋ ನಮ್ಮಂತಹ ಸಾವಿರಾರು ಮನಸ್ಸುಗಳಿಗೆ ಇದನ್ನು ಅರಗಿಸಿಕೊಳ್ಳೋದು ಅಷ್ಟು ಸುಲಭದ್ದಾಗಿರಲಿಲ್ಲ. ನಾವು, ಕಲಬುರ್ಗಿಯವರ ವಿಚಾರಗಳ ಕುರಿತು ನಮ್ಮ ಕ್ಯಾಂಪಸ್ನಲ್ಲಿ ಒಂದು ಕಾರ್ಯಕ್ರಮ ನಡೆಸಿ, ಈ ಮೂಲಕ ಅವರ ವಿಚಾರಗಳನ್ನ ಜೀವಂತವಾಗಿಡೋ ಪಣ ತೊಟ್ವಿ.
ಸಮಾಜದಲ್ಲಿ ತಮ್ಮ ಸ್ಟೀರಿಯೋ ಟೈಪ್ ಆಲೋಚನೆಗಳಿಗೆ ಹೊಂದದ ಎಲ್ಲರನ್ನೂ ಎಲ್ಲವನ್ನೂ ದ್ವೇಷಿಸೋ ಅಸಹನೆ ಬೆಳೀತಾ ಇದ್ದದ್ದನ್ನ ಎ.ಎಸ್.ಎ. ಮೂಲಕ ಪ್ರಶ್ನಿಸ್ತಾ ಹೋದ್ವಿ.
ನಮ್ಮ ಮನೆಯ ಫ್ರಿಜ್ಜಿನಲ್ಲಿರೋ ಒಂದು ಮಾಂಸದ ತುಂಡು ನಮ್ಮನ್ನ ಕೊಚ್ಚಿ, ಕೊಲೆ ಕೂಡಾ ಮಾಡಿಬಿಡುವಷ್ಟು ಅಸಹನೆ ತರಿಸೋ ಹೀನ ಮನಸ್ಥಿತಿಯನ್ನ ಪ್ರಶ್ನಿಸಿದ್ವಿ.
ಪೊಳ್ಳು ದೇಶಭಕ್ತಿಯ ಹೆಸರಲ್ಲಿ, ಸಿನಿಮಾ ಜಾಹೀರಾತಿನ ಮಧ್ಯೆ ರಾಷ್ಟ್ರಗೀತೆ ಬಂದಾಗ ಎದ್ದುನಿಲ್ಲದ ಕಾರಣಕ್ಕೆ ಒಂದು
ಕುಟುಂಬವನ್ನ ಟಾಕೀಸಿಂದ ಹೊರದಬ್ಬಿದನ್ನ ಹೆಮ್ಮೆಯಿಂದ ಹೇಳಿಕೊಳ್ಳೋ ಮನಸ್ಥಿತಿಯನ್ನ ಖಂಡಿಸಿದ್ವಿ.
(ದೃಢವಾಗಿ) ದೇಶಭಕ್ತಿ ಅನ್ನೋದು ಎದ್ದು ನಿಲ್ಲೋದರಲ್ಲಾಗ್ಲೀ ಕುಳಿತುಕೊಳ್ಳೋದರಲ್ಲಾಗ್ಲೀ ಇಲ್ಲ. ಅದು ನಿಜಕ್ಕೂ ಇರೋದು ನೆರೆಹೊರೆಯಲ್ಲಿ ಬದುಕುವ ಸಹನಾಗರಿಕರನ್ನ, ಸಹ ಮನುಷ್ಯರನ್ನ ಗೌರವಯುತವಾಗಿ ನಡೆಸಿಕೊಳ್ಳೋದ್ರಲ್ಲಿ ಅಂತ ಹೇಳೋಕೆ ಪ್ರಯತ್ನ ಪಟ್ವಿ.
ಇದನ್ನೆಲ್ಲ ಚರ್ಚಿಸೋದು, ಪ್ರಶ್ನಿಸೋದು, ಪ್ರತಿಭಟಿಸೋದು ನಮ್ಮ ಹಕ್ಕು ಮತ್ತು ಕರ್ತವ್ಯ ಅಂತ ತಿಳ್ಕೊಂಡು ನಮ್ಮ ಕ್ಯಾಂಪಸ್ ನಲ್ಲಿ ಇವುಗಳ ಸುತ್ತ ಕಾರ್ಯಕ್ರಮಗಳನ್ನ ಮಾಡ್ತಿದ್ವಿ. ಆದ್ರೆ ಯೂನಿವರ್ಸಿಟಿಗಳ ಕ್ಯಾಂಪಸ್ ಗಳಲ್ಲಿ ಯಾವಾಗ್ಲೂ ‘ನಮಸ್ತೇ ಸದಾ ವತ್ಸಲೇ’ ಸಂಸ್ಕೃತಿ ಮಾತ್ರ ಇರ್ಬೇಕು ಅಂತ ಬಯಸೋರಿಗೆ ಈ ಯಾವ ವಿಚಾರಗಳನ್ನೂ ಸಹಿಸಲಾಗ್ತಿಲ್ಲ.
(ಹಿನ್ನೆಲೆ ಸಂಗೀತ)
(ನಿಧಾನ ಗತಿಯಲ್ಲಿ, ತಿರುಗಿ ನಿಂತು)
ನಾವು ವಿದ್ಯಾರ್ಥಿಗಳಾಗಿ, ಮನುಷ್ಯ ಮನುಷ್ಯರ ನಡುವೆ ಪ್ರೀತಿ ಸಹನೆ ಇರೋವಂತ ಸಮಾಜವನ್ನ ಹಂಬಲಿಸಿದ್ದಕ್ಕೆ, ಕ್ಯಾಂಪಸ್ಸಿನ ಒಳಗೆ, ಹೊರಗೆ ಹಲವಾರು ಮೌಲಿಕ ಚರ್ಚೆಗಳನ್ನು ಹುಟ್ಟು ಹಾಕಿದ್ದಕ್ಕೆ, ಸಂವಿಧಾನಕ್ಕೆ ಬದ್ಧವಾಗಿ ನ್ಯಾಯದ ಪರ ದನಿ ಎತ್ತಿದ್ದಕ್ಕೆ, ಆಡಳಿತಾಂಗದ ದುಷ್ಟತನಗಳನ್ನು ಪ್ರಶ್ನಿಸಿದ್ದಕ್ಕೆ ಸಿಕ್ಕಿದ ಬಹುಮಾನ ಏನ್ ಗೊತ್ತಾ?
ಯೂನಿವರ್ಸಿಟಿ ನನ್ನ ಫೆಲೋಶಿಪ್ನ್ನೇ ತಡೆಹಿಡೀತು.
(ಮತ್ತೆ ಪ್ರೇಕ್ಷಕರತ್ತ ತಿರುಗಿ)
ನಿಜಕ್ಕೂ ಇದನ್ನು ನಾವು ನಿರೀಕ್ಷಿಸಿರಲಿಲ್ಲ. ಇದರಿಂದ ನಾನು ತೀವ್ರವಾದ ಹಣದ ಸಮಸ್ಯೆಗೆ ಸಿಕ್ಕಿಹಾಕಿಕೊಂಡೆ.
........
ಇದಾದ್ಮೇಲೆ ನಮ್ಮನ್ನ ಗುರಿಯಾಗಿಸ್ಕೊಂಡು ನಡೆದ ಕೆಲವು ಘಟನೆಗಳು ನಮ್ಮ ಪಾಲಿಗೆ ಇನ್ನೂ ಆಘಾತಕಾರಿಯಾಗಿದ್ವು.
........
ದೆಹಲಿ ಯೂನಿವರ್ಸಿಟಿಯ ವಿದ್ಯಾರ್ಥಿಗಳು ಮುಝಪರ್ ನಗರ್ ಬಾಕಿ ಹೇ ಅನ್ನೋ ಡಾಕ್ಯುಮೆಂಟ್ರಿ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮ ಹಮ್ಕೊಂಡಿದ್ರು. ಆದ್ರೆ ಇದರ ಪ್ರದರ್ಶನಕ್ಕೆ ಎಬಿವಿಪಿ ಸಂಘಟನೆ ಅಡ್ಡಿ ಮಾಡಿ ದಾಂಧಲೆ ಮಾಡ್ತು. ಹೀಗೆ ಒಂದು ಸಿನಿಮಾ ತೋರಿಸಲು ಕೂಡಾ ಅವಕಾಶ ಕೊಡ್ದೇ ಅಭಿವ್ಯಕ್ತಿ ಸ್ವಾತಂತ್ರ್ಯವನ್ನ ದಮನ ಮಾಡೋವಂತ ಎಬಿವಿಪಿಯ ದುಂಡಾವರ್ತನೆಯನ್ನ ನಾವು ಎಎಸ್ಎ ವತಿಯಿಂದ ಖಂಡಿಸಿ ಮಾತಾಡಿದ್ವಿ. ಇಷ್ಟಕ್ಕೇ ನಮ್ಮ ಯೂನಿವರ್ಸಿಟಿಯ ಎಬಿವಿಪಿ ಅಧ್ಯಕ್ಷ ಫೇಸ್ ಬುಕ್ಕಿನಲ್ಲಿ ನಮ್ಮ ಬಗ್ಗೆ ಅವಹೇಳನಕಾರಿಯಾಗಿ ಬರೆದಿದ್ದ. ಎಎಸ್ಎಯವರು ಗೂಂಡಾಗಳು ಎಂದು ನಿಂದಿಸಿದ್ದರ ಬಗ್ಗೆ ನಾವು ಅಂದೇ ನೇರ ಅವನ ಬಳಿ ಹೋಗಿ ಸ್ಪಷ್ಟನೆ ಕೇಳಿದ್ವಿ.
(ಇಲ್ಲಿಂದ ಇಡೀ ಘಟನೆಯನ್ನು ಎನ್ಯಾಕ್ಟ್ ಮಾಡಬಹುದು) ಹೀಗೆ ಕೇಳುವಾಗ ನಮ್ಮೊಂದಿಗೆ ಕ್ಯಾಂಪಸ್ನ ಸೆಕ್ಯುರಿಟ್ ಗಾರ್ಡ್ ಕೂಡಾ ಇದ್ರು. ಈ ಸಮಯದಲ್ಲಿ ನಮಗೂ ಆತನಿಗೂ ವಾದವಿವಾದ ಸಹ ಆಯ್ತು.
“ನಾವು ಖಚಿತ ಸಿದ್ದಾಂತದ ಆಧಾರದ ಮೇಲೆ ಕೆಲಸ ಮಾಡ್ತಾ ಇದೀವಿ. ಹೀಗಿರುವಾಗ ನಾವು ಯಾರ ಮೇಲೆ ಯಾವಾಗ ಗೂಂಡಾಗಿರಿ ಮಾಡಿದೀವಿ ತೋರ್ಸು” ಅಂತ ನಾವು ಪಟ್ಟು ಹಿಡಿದ್ವಿ. ಕೊನೆಗೆ ಆತ ತನ್ನ ತಪ್ಪು ಒಪ್ಕೊಂಡು ಆ ಫೇಸ್ಬುಕ್ ಪೋಸ್ಟನ್ನು ವಾಪಾಸು ತೊಗೊಂಡ. ನಮಗೊಂದು ಕ್ಷಮಾಪಣೆ ಪತ್ರವನ್ನ ಸಹ ಬರ್ಕೊಟ್ಟ. ಅಲ್ಲಿಗೆ ಈ ವಿಚಾರ ಮುಕ್ತಾಯವಾಗ್ಬೇಕಿತ್ತು.
ಆದ್ರೆ ಮಾರನೇ ದಿನ ಅಲ್ಲಿ ನಡೆದದ್ದೇ ಬೇರೆ. ಆತನ ಅಮ್ಮ ರಾಜಕೀಯವಾಗಿ ಪ್ರಭಾವಿ ವ್ಯಕ್ತಿ. ಅವನ ಅಣ್ಣ ಸಹ ಯುವ ಮೋರ್ಚಾದ ಮುಖಂಡ. ಇವರು ಆತನನ್ನು ಆಸ್ಪತ್ರೆಗೆ ದಾಖಲಿಸಿ ಅವನಿಗೆ ಬಹಳ ದಿನದಿಂದ ಇದ್ದ ಅಪೆಂಡಿಸೈಟಿಸ್ ಖಾಯಿಲೆಗೆ ಶಸ್ತ್ರಚಿಕಿತ್ಸೆ ಮಾಡಿಸಿದ್ರು. ಆಮೇಲೆ ಆ ದಾಖಲಾತಿ ಮತ್ತು ಶಸ್ತ್ರಚಿಕಿತ್ಸೆಗಳು ನಾವು ಅವನ ಮೇಲೆ ನಡೆಸಿದ ಹಲ್ಲೆಯಿಂದ ಆಗಿದ್ದು ಅಂತ ನಮ್ಮ ಮೇಲೆ ಪೊಲೀಸ್ ಠಾಣೆಯಲ್ಲಿ ಸುಳ್ಳು ದೂರು ದಾಖಲಿಸಿದ್ರು. ಇದನ್ನೇ ಹೊರಗಡೆ ವ್ಯವಸ್ಥಿತವಾಗಿ ಅಪಪ್ರಚಾರವನ್ನೂ ಮಾಡಿದ್ರು.
(ವಾದ್ಯ ಸದ್ದು)
``ಅಂಬೇಡ್ಕರ್ ವಿದ್ಯಾರ್ಥಿ ಸಂಘಟನೆ ಭಯೋತ್ಪಾದಕ ಯಾಕೂಬ್ ಮೆಮನ್ಗೆ ಬೆಂಬಲ ನೀಡಿದ್ದನ್ನ ವಿರೋಧಿಸಿದ್ದಕ್ಕೆ ಎಬಿವಿಪಿ ಅಧ್ಯಕ್ಷನಿಗೆ ಎ.ಎಸ್.ಎ. ಸದಸ್ಯರು ಸಾಯೋ ಹಾಗೆ ಹೊಡೆದ್ಬಿಟ್ಟಿದ್ದಾರೆ, ಈಗ ಅವನು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೀತಿದಾನೆ'' ಅಂತ ಬಲವಾಗಿ ಒಂದು ಸುಳ್ಳು ಸುದ್ದಿ ಹಬ್ಬಿಸಿದ್ರು.. ಆದ್ರೆ ನಾವು ಹೇಳೋಕೆ ಪ್ರಯತ್ನಿಸಿದ ಸತ್ಯಸಂಗತಿಗಳು ಯಾರನ್ನೂ ತಲುಪ್ಲೇ ಇಲ್ಲ. ಯಾರ ಜೊತೆಗೆ ಹಣಬಲ, ಮಾಧ್ಯಮದ ಬಲ ಇತ್ತೋ ಅವರ ಮಾತುಗಳೇ ಸತ್ಯ ಅನಿಸಿಕೊಳ್ತಾ ಹೋದ್ವು.
ಇದೇ ಸಮಯಕ್ಕೆ ಎಂ.ಎಲ್.ಸಿ.ಯೊಬ್ರು ಯೂನಿವರ್ಸಿಟಿಗೆ ನುಗ್ಗಿ ವಿಸಿ ಮುಂದೆ ``ಈ ಅಂಬೇಡ್ಕರ್ ವಿದ್ಯಾರ್ಥಿ ಸಂಘದ ಹುಡುಗರನ್ನ ಬಲಿ ಹಾಕಿ, ಅವರನ್ನ ಸಸ್ಪೆಂಡ್ ಮಾಡಿ” ಅಂತ ಧಮಕಿನೂ ಹಾಕಿದ್ರು. ಆಗ ನಮ್ಮ ವಿ.ಸಿ. ಯೂನಿವರ್ಸಿಟಿ ಶಿಸ್ತುಪಾಲನಾ ಸಮಿತಿಗೆ ಈ ವಿಷಯದ ಕುರಿತು ಕೂಡಲೇ ತನಿಖೆ ನಡೆಸಿ ವರದಿ ಕೊಡಿ ಅಂತ ಸೂಚನೆ ನೀಡಿದ್ರು. ಅಲ್ಲಿ ಅದೇನಾಗ್ತಿದೆ ಅಂತ ನಮಗೆ ತಿಳಿಯೋದ್ರೊಳಗೆ ನಾಟಕೀಯವಾಗಿ ಏನೇನೆಲ್ಲ ನಡೆದುಹೋಯ್ತು!
ಆ ಶಿಸ್ತುಪಾಲನಾ ಸಮಿತಿ ತನಿಖೆ ನಡೆಸ್ತು. ಸಂಬಂಧಪಟ್ಟವರನ್ನ ವಿಚಾರಿಸ್ತು. ಎಬಿವಿಪಿ ಅಧ್ಯಕ್ಷನಿಗೆ ಚಿಕಿತ್ಸೆ ನೀಡಿದ ವೈದ್ಯೆಯನ್ನ ಸಹ ಮಾತಾಡಿಸಿ, ನಂತರ ತನ್ನ ವರದಿ ಕೊಡ್ತು. ವರದಿಯಲ್ಲಿ, “ಎಬಿವಿಪಿ ಮುಖಂಡ ಆಸ್ಪತ್ರೆಗೆ ದಾಖಲಾಗಿದ್ದಕ್ಕೂ ಎ.ಎಸ್.ಎ. ಜೊತೆಗೆ ನಡೆದ ವಾಗ್ವಾದಕ್ಕೂ ಯಾವುದೇ ಸಂಬಂಧ ಇಲ್ಲ, ಮತ್ತು ಅವನ ಮೇಲೆ ಯಾವುದೇ ದೈಹಿಕ ಹಲ್ಲೆ ನಡೆದಿರ್ಲಿಲ್ಲ.” ಅಂತ ಸ್ಪಷ್ಟವಾಗಿ ಹೇಳಲಾಗಿತ್ತು. “ಇಡೀ ವಿವಾದ ಶುರುವಾಗಿದ್ದೆ ಎಬಿವಿಪಿ ಮುಖಂಡ ಹಾಕಿದ್ದ ಫೇಸ್ ಬುಕ್ ಪೋಸ್ಟಿನಿಂದ. ಅವನು ಅದನ್ನು ತೆಗೆದು ಹಾಕಿದ ನಂತರ ಎಲ್ಲವೂ ಇತ್ಯರ್ಥವಾಗಿದೆ” ಅಂತ ಆ ವರದಿ ತಿಳಿಸ್ತು.
ಇಷ್ಟೊತ್ತಿಗೆ ಮತ್ತೊಂದು ನಾಟಕೀಯ ಬೆಳವಣಿಗೆ ನಡೀತು. ಕೇಂದ್ರದ ರಾಜ್ಯ ಸಚಿªರೊಬ್ರು ನೇರವಾಗಿ ಸೆಂಟ್ರಲ್ ಹೆಚ್.ಆರ್.ಡಿ. ಮಿನಿಸ್ಟರ್ ಗೆ ಪತ್ರ ಬರೆದು “ಯೂನಿವರ್ಸಿಟಿಯಲ್ಲಿ ದಲಿತ ವಿದ್ಯಾರ್ಥಿಗಳು ನಡೆಸುತ್ತಿರೋ ತೀವ್ರಗಾಮಿ, ದೇಶದ್ರೋಹಿ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು” ಅಂತ ಒತ್ತಾಯಿಸಿದ್ರು. (ವ್ಯಂಗ್ಯದಿಂದ..) ಇದಕ್ಕೆ ಕೇಂದ್ರ ಸಚಿವಾಲಯವೂ ಕ್ಷಿಪ್ರವಾಗಿ ಸ್ಪಂದಿಸಿ ಯೂನಿವರ್ಸಿಟಿ ಆಡಳಿತಾಂಗಕ್ಕೆ ಪತ್ರದ ಮೇಲೆ ಪತ್ರಗಳನ್ನ ಬರೀತು. ನಮ್ಮ ಮೆಲೆ ಕೇಂದ್ರ ಸರ್ಕಾರವೇ ಮುಗಿಬೀಳೋದು ಅಂದ್ರೆ..?! ಅರೆ! ನಾವು ಯಕಶ್ಚಿತ್ ಯೂನಿವರ್ಸಿಟಿಯೊಂದರಲ್ಲಿ ಓದ್ಕೊಂಡು ಒಂದಷ್ಟು ರಾಜಕೀಯ ವಿಚಾರಗಳಿಗೆ ಬದ್ಧರಾಗಿ ಕೆಲಸ ಮಾಡ್ತಾ ಬದುಕ್ತಿರೊ ವಿದ್ಯಾರ್ಥಿಗಳಷ್ಟೇ. ಡಾ.ಬಾಬಾಸಾಹೇಬರ ವಿಚಾರಧಾರೆಗಳನ್ನ ಗಂಭೀರವಾಗಿ ಓದ್ಕೊಂಡು, ಚರ್ಚಿಸಿ ಅದರಂತೆ ಈ ದೇಶದ ನಿಜವಾದ ದೇಶಪ್ರೇಮಿ, ಮನುಷ್ಯಪ್ರೇಮಿ ನಾಗರಿಕರಾಗಲು ಪ್ರಯತ್ನಪಡುತ್ತಿದ್ದೀವಿ. ಇದೇ ನಾವು ಮಾಡಿದ ಅಪರಾಧ. ಈ ದೇಶದ ಸಂವಿಧಾನ ಶಿಲ್ಪಿಯ ಚಿಂತನೆಗಳನ್ನ ಪ್ರಾಮಾಣಿಕವಾಗಿ ಬದ್ಧತೆಯಿಂದ ಅನುಸರಿಸಿದ್ದೇ ದೇಶದ್ರೋಹವಾಗಿ ಕಂಡ್ಬಿಟ್ರೆ ಏನು ಹೇಳೋದು?
ಇದೆಲ್ಲಾ ಆಗೋವಾಗ್ಲೇ ಹೆಚ್.ಆರ್.ಡಿ. ಸಚಿವಾಲಯ (ವ್ಯಂಗ್ಯದ ದನಿ) ಸನ್ಮಾನ್ಯ ಅಪ್ಪಾರಾವ್ ಪೋಡಿಲೆಯವರನ್ನು ನಮ್ಮ ಯೂನಿವರ್ಸಿಟಿಯ ನೂತನ ಉಪಕುಲಪತಿಗಳಾಗಿ ನೇಮಿಸ್ತು. ಕೆಲವು ವರ್ಷಗಳ ಹಿಂದೆ ಹಾಸ್ಟೆಲ್ ವಾರ್ಡನ್ ಆಗಿದ್ದಾಗ ಹತ್ತಾರು ದಲಿತ ವಿದ್ಯಾರ್ಥಿಗಳನ್ನ ಹಾಸ್ಟೆಲಿನಿಂದ ಬಹಿಷ್ಕರಿಸಿ ಅವರ ಭವಿಷ್ಯವನ್ನೇ ಹಾಳು ಮಾಡಿದ್ದ ಅಪ್ಪಟ ದಲಿತ ವಿರೋಧಿ ಈ ಅಪ್ಪಾರಾವ್. ಈಗ ಕೇಂದ್ರ ಸರ್ಕಾರವೇ ಖುದ್ದು ಮುಂದೆ ನಿಂತು ಈ ಮನುಷ್ಯನನ್ನ ನೇಮಿಸಿದೆ ಎಂದರೆ ಇವರ ಉದ್ದೇಶ ಏನು ಅಂತ ಊಹಿಸೋಕೆ ಕಷ್ಟವಿರಲಿಲ್ಲ.
ನಾವಂದ್ಕೊಂಡಂಗೇ ಆಯ್ತು. ಈ ಮೊದಲು ಶಿಸ್ತು ಪಾಲನಾ ಸಮಿತಿ ಸರಿಯಾದ ವರದಿನೇ ನೀಡಿದ್ರೂ, ಅಪ್ಪಾರಾವ್ ನಮ್ಮ ಮೇಲೆ ಮತ್ತೊಂದು ತನಿಖೆಗೆ ಆದೇಶ ಮಾಡಿದ್ರು. ಈ ಎರಡನೇ ಸಮಿತಿ ಯಾವ ತನಿಖೇನೂ ಮಾಡ್ದೇ ನಮ್ಮಲ್ಲಿ ಐವರು ದಲಿತ ಸ್ಕಾಲರ್ ಗಳನ್ನು ಯೂನಿವರ್ಸಿಟಿಯಿಂದಲೇ ಸಸ್ಪೆಂಡ್ ಮಾಡಲು ಶಿಫಾರಸು ಮಾಡ್ತು. ಅದಾಗಿ ಐದೇ ದಿನದಲ್ಲಿ ನಮ್ಮನ್ನು ಸಸ್ಪೆಂಡ್ ಕೂಡಾ ಮಾಡ್ಬಿಟ್ರು.
ಈ ಘಟನೆ ವಿದ್ಯಾರ್ಥಿ ಸಮೂಹವನ್ನ ಸಿಟ್ಟಿಗೆಬ್ಬಿಸ್ತು. ಸಾವಿರಾರು ವಿದ್ಯಾರ್ಥಿಗಳು ಇದರ ವಿರುದ್ಧ ಪ್ರತಿಭಟನೆ ನಡೆಸಿದ್ರು. ಅದಕ್ಕೆ ಹೆದರಿದ ವಿ.ಸಿ. ನಮ್ಮ ಮೇಲಿನ ಅಮಾನತ್ತನ್ನು ತಾತ್ಕಾಲಿಕವಾಗಿ ವಾಪಾಸು ತೊಗೊಂಡ್ರು. ಈಗ ಅಪ್ಪಾರಾವ್ ಮೂರನೇ ಸಮಿತಿಯಿಂದ ತನಿಖೆಗೆ ಆದೇಶಿಸಿದ್ರು. ಈ ಸಮಿತಿ ಕೇವಲ ಎಬಿವಿಪಿಯರನ್ನು ಮಾತಾಡಿಸಿತೇ ಹೊರತು ಎಎಸ್ಎ ಸದಸ್ಯರನ್ನು ಮಾತಾಡಿಸಲೇ ಇಲ್ಲ. ಆದ್ರೆ ನಮಗೂ ಆಶ್ಚರ್ಯ ಆಗೋ ಹಾಗೆ ಈ ಸಮಿತಿಯ ವರದಿಯಲ್ಲೂ ಮೊದಲನೇ ವರದಿಯ ಅಂಶಗಳೇ ಇದ್ವು. ಆದರೂ ಮಿಸ್ಟರ್ ಅಪ್ಪಾರಾವ್ ನನ್ನನ್ನೂ ಸೇರಿದಂತೆ 5 ಜನ ವಿದ್ಯಾರ್ಥಿಗಳನ್ನು ಯೂನಿವರ್ಸಿಟಿ ಹಾಸ್ಟೆಲಿನಿಂದ ಸಸ್ಪೆಂಡ್ ಮಾಡಿದ್ರು. ವiತ್ತೆ ನಾವು ಕ್ಯಾಂಪಸ್ನ ಯಾವುದೇ ಚಟುವಟಿಕೆಯಲ್ಲಿ ಭಾಗವಹಿಸಕೂಡದು ಅಂತ ನಿರ್ಬಂಧ ವಿಧಿಸಿದ್ರು.
ಅಪ್ಪಾರಾವ್ ಎಂತ ಸುಳ್ಳುಗಾರ ಅಂದ್ರೆ ತನಿಖಾ ವರದಿಯೇ ನಮ್ಮ ಅಮಾನತಿಗೆ ಶಿಫಾರಸ್ಸು ಮಾಡಿದೆ ಅಂತ ಬಿಂಬಿಸಿದ್ರು.. ಬಹಳಷ್ಟು ವಿದ್ಯಾರ್ಥಿಗಳು ಈ ಹಸಿ ಸುಳ್ಳನ್ನು ನಂಬಿದ್ರಿಂದ ಈ ಸಲ ನಮ್ಮ ಪರವಾಗಿ ಮತ್ತೊಮ್ಮೆ ಗಟ್ಟಿಯಾಗಿ ನಿಲ್ಲೋದಕ್ಕೆ ಹಿಂಜರಿದ್ರು.
......
ಈ ಆದೇಶಕ್ಕೆ ನಮ್ಮ ಪ್ರತಿರೋಧ ದಾಖಲಿಸೋದಕ್ಕೆ ಯೂನಿವರ್ಸಿಟಿ ಆಡಳಿತ ಮಂಡಳಿಗೆ ಒಂದು ಪತ್ರ ಬರೆದೆ.
(ರೋಹಿತ್ ಟೇಬಲ್ ಮೇಲೆ ಕುಳಿತು ಪತ್ರವನ್ನು ಬರೆಯುತ್ತಾನೆ...)
ಇವರಿಗೆ,
ಉಪಕುಲಪತಿ,
ಹೈದರಾಬಾದ್ ವಿ.ವಿ.
ವಿಷಯ: ದಲಿತ ಸಮಸ್ಯೆಗೆ ಪರಿಹಾರ
ಮಾನ್ಯರೆ,
ದಲಿತರ ಬಗ್ಗೆ ಮಾಡಿರುವ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದ, ಎಬಿವಿಪಿ ಅಧ್ಯಕ್ಷರೊಬ್ಬರನ್ನು ಪ್ರಶ್ನಿಸಿದ್ದಕ್ಕಾಗಿ, ದಲಿತರ ಆತ್ಮಗೌರವದ ಚಳವಳಿಯ ಬಗ್ಗೆ ನೀವು ನೀಡಿದ `ಶ್ರದ್ಧಾಪೂರ್ವಕ' ಹೇಳಿಕೆಗಾಗಿ ಮೊದಲಿಗೆ ನಾನು ನಿಮ್ಮನ್ನು ಅಭಿನಂದಿಸುತ್ತೇನೆ. ಈ ವಿಷಯದ ಬಗ್ಗೆ ನೀವು ವೈಯಕ್ತಿಕವಾಗಿ ತೋರಿದ ಆಸಕ್ತಿಯು, ಐತಿಹಾಸಿಕ ಹಾಗೂ ಅಭೂತಪೂರ್ವವಾದುದು. ಐವರು ದಲಿತ ವಿದ್ಯಾರ್ಥಿಗಳನ್ನು ಕ್ಯಾಂಪಸ್ನಲ್ಲಿ ``ಸಾಮಾಜಿಕವಾಗಿ ಬಹಿಷ್ಕರಿಸಲಾಗಿದೆ''. ನಿಮ್ಮ ಬದ್ಧತೆಗಳನ್ನು ಕಾಣುವಾಗ, ಡೋನಾಲ್ಡ್ ಟ್ರಂಪ್ ಕೂಡಾ ಲಿಲಿಪುಟ್ನಂತೆ ಭಾಸವಾಗುತ್ತಿರುವುದರಿಂದ, ನಾನು ನೈತಿಕತೆಯ ಸಂಕೇತವಾಗಿ ಎರಡು ಸಲಹೆಗಳನ್ನು ನೀಡಲಿಚ್ಚಿಸುತ್ತೇನೆ. ಈ ಮೂಲಕ ನೀವು ದಲಿತರ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು.
1. ಪ್ರವೇಶಾತಿಯ ಸಮಯದಲ್ಲಿ ಎಲ್ಲಾ ದಲಿತ ವಿದ್ಯಾರ್ಥಿಗಳಿಗೆ ದಯವಿಟ್ಟು 10 ಮಿ.ಗ್ರಾಂ. ಸೋಡಿಯಂ ಆಸಿಡ್ ವಿಷವನ್ನು ನೀಡಿರಿ. ಅಂಬೇಡ್ಕರ್ ಓದುತ್ತಿದ್ದಾಗ ಎದುರಿಸಿದ ಪರಿಸ್ಥಿತಿಯೇ ತಮಗಾಗುತ್ತಿದೆಯೆಂಬ ಅನುಭವಾದಲ್ಲಿ ಅವರು ಅದನ್ನು ಬಳಸಿಕೊಳ್ಳಲಿ.
2. ನಿಮ್ಮ ಸಂಗಡಿಗರಾದ, ಮಹಾನ್ ಮುಖ್ಯ ವಾರ್ಡನ್ ಮೂಲಕ ಎಲ್ಲಾದಲಿತ ವಿದ್ಯಾರ್ಥಿಗಳ ಕೊಠಡಿಗೆ ಒಳ್ಳೆಯ ನೇಣು ಹಗ್ಗವನ್ನು ಪೂರೈಕೆ ಮಾಡಿರಿ.
ನಾವು ಸ್ಕಾಲರ್ ಗಳು, ಪಿಹೆಚ್ ಡಿ ವಿದ್ಯಾರ್ಥಿಗಳು ಈಗಾಗಲೇ ಆ ಹಂತವನ್ನು ಹಾದುಹೋಗಿದ್ದೇವೆ ಹಾಗೂ ಈಗಾಗಲೇ ದಲಿತ ಆತ್ಮಗೌರವ ಚಳವಳಿಯ ಸದಸ್ಯರಾಗಿದ್ದೇವೆ. ದುರದಷ್ಟವಶಾತ್, ಇಲ್ಲಿಂದ ನಮಗೆ ನಿರ್ಗಮಿಸುವ ಸುಲಭ ಮಾರ್ಗ ನಮಗೆ ತೋಚುತ್ತಿಲ್ಲ.
ಹೀಗಾಗಿ, ಮಹನೀಯರಾದ ತಾವು, ನನ್ನಂತಹ ವಿದ್ಯಾರ್ಥಿಗಳಿಗೆ ``ದಯಾಮರಣ''ದ ಸೌಲಭ್ಯವನ್ನು ಒದಗಿಸಲು ಸಿದ್ಧತೆಗಳನ್ನು ನಡೆಸುವಂತೆ ನಾನು ನಿಮ್ಮನ್ನು ಕೋರುತ್ತೇನೆ ಮತ್ತು ನಿಮಗೆ ಮತ್ತು ನಿಮ್ಮ ಕ್ಯಾಂಪಸ್ ಗೆ ಸದಾ ಶಾಂತಿ ದೊರೆಯಲಿ ಎಂದು ಹಾರೈಸುತ್ತೇನೆ.
ಧನ್ಯವಾದಗಳು.
ನಿಮ್ಮ
ವಿನಮ್ರ,
ವೇಮುಲಾ ಆರ್. ಚಕ್ರವರ್ತಿ
ಇದು ನನ್ನ ಮತ್ತು ನನ್ನ ಸಂಗಾತಿಗಳ ಹತಾಶ ಪ್ರಯತ್ನ ಅಷ್ಟೇ ಆಗಿತ್ತು.
(ಹಿನ್ನೆಲೆ ಸಂಗೀತ)
ನಾವು ಹಾಸ್ಟಲ್ನಿಂದ ಹೊರಬಿದ್ವಿ...
(ಪುಸ್ತಕ, ಚಾಪೆ, ಫೋಟೋ ಹಿಡಿದುಕೊಂಡು ಹೊರಡುತ್ತಾನೆ.)
ಹೀಗೆ ಬಂದ ನಾವು ಕ್ಯಾಂಪಸ್ ನ ನಡುಭಾಗದಲ್ಲಿ ಟೆಂಟ್ ಹಾಕಿದ್ವಿ.
(ವೇಲಿವಾಡ ಎಂದು ಬರೆದಿರುವ ಪೋಸ್ಟರ್ ಎದುರಿಗಿರುತ್ತದೆ)
ಇದು ವೇಲಿವಾಡ ಟೆಂಟು. ಆಧುನಿಕ ಶಿಕ್ಷಣ ಸಂಸ್ಥೆಯೊಂದ್ರಲ್ಲ್ಲಿ ಜಾತಿವಾದಿ ಶಕ್ತಿಗಳು ದಲಿತ್ರಿಗೆ ಹಾಕಿದ ಆಧುನಿಕ ಸಾಮಾಜಿಕ ಬಹಿಷ್ಕಾರದ ಸಂಕೇತವಾಗಿ ನಾವು ಈ ವೇಲಿವಾಡ ಟೆಂಟ್ ಹಾಕಿದ್ವಿ. ನಮಗಾದ ಅನ್ಯಾಯವನ್ನ ವಿರೋಧಿಸಿ ನಾವು ನಮ್ಮ ಪ್ರತಿಭಟನೆ ಆರಂಭಿಸಿದ್ವಿ.
ಎರಡು ಮೂರು ದಿನಗಳಾಗೋಷ್ಟರಲ್ಲಿ ಜತೆಗಿದ್ದ ಗೆಳೆಯರ ಆರೋಗ್ಯ ತೀರಾ ಹದಗೆಟ್ಟಿತು. ಆದ್ರೂ ನಾವು ಈ ಸತ್ಯಾಗ್ರಹವನ್ನ ಕೈ ಬಿಡೋಹಾಗಿರ್ಲಿಲ್ಲ.
ದೃಢವಾಗಿ ತೀರ್ಮಾನಿಸಿಯೇ ಈ ಹೋರಾಟ ಆರಂಭಿಸಿದ್ವಿ. ವೇಲಿವಾಡ ಸತ್ಯಾಗ್ರಹ ನಮ್ಮ ಆತ್ಮಗೌರವ ಉಳಿಸಿಕೊಳ್ಳೋ ಪ್ರತಿರೋಧ ಆಗಿತ್ತು...
ಆದ್ರೆ,... ಆದ್ರೆ..... ಬರಬರ್ತಾ ನಮ್ಮ ದನಿ ನಮಗೇ ಕೇಳಿಸದಷ್ಟು ಕ್ಷೀಣ ಆಗ್ಬಿಟ್ಟಿದೆ. ಹೋರಾಟ ಅಂದ್ರೆ ತ್ಯಾಗ ಅನ್ನೋದು ನನಗೆ ಗೊತ್ತು. ಆದ್ರೆ ಈ ನಮ್ ಹೋರಾಟ, ತ್ಯಾಗಗಳ ಕಡೆಗೆ ಯಾರೂ ಗಮನಿಸೋ ಗೋಜಿಗೇ ಬರ್ದೇ ಇದ್ದದು ನಮ್ಮ ಆತ್ಮವಿಶ್ವಾಸವನ್ನ ಕುಂದಿಸ್ತಾ ಹೋಯ್ತು. ಯೂನಿವರ್ಸಿಟಿ ಆಡಳಿತ ಮಂಡಳಿ ಒಂದ್ಕಡೆ ಇರಲಿ, ನಾವು ನಿರೀಕ್ಷಿಸಿ ಕಾಯ್ತಾ ಇದ್ದ ಹೊರಗಿನ ಪ್ರಗತಿಪರ ನಾಯಕರುಗಳು ಕೂಡ ಬಂದು ನಮ್ಮ ಬೆನ್ನು ತಟ್ಲಿಲ್ಲ, ನಾವೂ ನಿಮ್ಜೊತೆಗಿದ್ದೀವಿ ಅಂತ ಧೈರ್ಯ ತುಂಬುವ ನಾಲ್ಕು ಮಾತಾಡ್ಲಿಲ್ಲ. ಇದು ನಮ್ಮನ್ನು ಮತ್ತಷ್ಟು ನಿರಾಶೆಗೆ ನೂಕಿತು.
(ಉದ್ವೇಗದಿಂದ) ನಾವಿದ್ದ ಸ್ಥಿತಿ ನಮ್ಮನ್ನ ಎಷ್ಟು ದುರ್ಬಲಗೊಳಿಸಿತ್ತು ಅಂದ್ರೆ ಒಂದು ದಿನ ಜೊತೆಗಿದ್ದ ಫ್ರೆಂಡ್ಸ್ ಗೆ ನಾನು “ಏನ್ರೋ ಇದು? ನಮ್ಮ ಈ ಪ್ರತಿಭಟನೆ ಕಡೆ ಯಾರೂ ತಿರುಗಿ ನೋಡ್ತಾನೇ ಇಲ್ವಲ್ರೋ? ನಮ್ಮ ದನಿ ಯಾರಿಗೂ ಕೇಳಿಸ್ತಾನೇ ಇಲ್ವಲ್ರೋ? ಈ ಯೂನಿವರ್ಸಿಟಿ ಆಡಳಿತ ಮಂಡಳಿಗೆ ನಮ್ಮ ಮೇಲೆ ಕನಿಷ್ಟ ಕನಿಕರನೂ ಬೇಡ್ವಾ? ನಮ್ಮ ಹೋರಾಟ ವಿಫಲ ಆಗಿ ಬಿಟ್ರೆ ಏನ್ರೋ ಮಾಡೋದು?” ಅಂತೆಲ್ಲ ಹತಾಶೆಯಿಂದ ಬಡಬಡಿಸಿಬಿಟ್ಟೆ.
ನನ್ನ ಗೆಳೆಯರು ‘ರೋಹಿತ್, ಇನ್ನೂ ಕಾಯೋಣ, ಈಗ್ಲೇ ಧೈರ್ಯ ಕಳಕೊಳ್ಳೋದು ಬೇಡ, ಯಾರಿಗಾದ್ರೂ ನಮ್ಮ ದನಿ ಕೇಳಿಸ್ಬಹುದು, ನಮ್ಮನ್ನ ಇಲ್ಲಿಂದ ಪಾರುಮಾಡ್ಬಹುದು’ ಅಂತ ಧೈರ್ಯ ಹೇಳಿದ್ದು ನನ್ನಲ್ಲಿ ಯಾವ ಭರವಸೆನೂ ಹುಟ್ಟಿಸಲಿಲ್ಲ. ತಿಂಗಳು ಕಳೆದ್ರೂ ಯೂನಿವರ್ಸಿಟಿ ಆಡಳಿತಾಂಗ ನಮ್ಮನ್ನ್ನ ಮಾತುಕತೆಗೆ ಕರೆಯೋ ಕನಿಷ್ಠ ಸೌಜನ್ಯವನ್ನೂ ತೊರಿಸ್ಲಿಲ್ಲ.... ಹೊರಗಿಂದ ಯಾವ ಬೆಂಬಲದ ಆಸೆಯೂ ನಮಗೆ ಉಳಿದಿರ್ಲಿಲ್ಲ. ಈಗ ಏನು ಮಾಡ್ಬೇಕು, ಎತ್ತ ಹೋಗ್ಬೇೀಕು ಅಂತ ದಾರಿನೇ ಕಾಣ್ತಿಲ್ಲ.
ಒಂದ್ಕಡೆ ಆರೇಳು ತಿಂಗ್ಳಿಂದ ಫೆಲೋಷಿಪ್ ನಿಂತು ಹೋಗಿದ್ರಿಂದ ಬರಿಗೈಯಾಗಿದ್ದೆ. ಇನ್ನೊಂದು ಕಡೆ ಸಣ್ಣ ಸಣ್ಣ ಖರ್ಚುಗಳನ್ನ ತೂಗಿಸೋಕೆ ಫ್ರೆಂಡ್ಸ್ ಹತ್ರ ಬೆಳೀತ್ತಿದ್ದ ಸಾಲ.
ಹಾಸ್ಟಲ್ ನಿಂದಾನೂ ಹೊರದಬ್ಬಿಸ್ಕೊಂಡು ಹೊತ್ತು ಹೊತ್ತಿನ ಊಟಕ್ಕೂ ಪರದಾಡೋ ಹಾಗಾಗಿತ್ತು.. ಈಗ ನಾನು ವಾಪಾಸು ಹೋಗಿ ಅಮ್ಮನಿಗೆ ಮತ್ತೆ ಹೊರೆಯಾಗೋದೂ ಸಾಧ್ಯ ಇರ್ಲಿಲ್ಲ.
ನನ್ನ ಜೊತೆ ಸಸ್ಪೆಂಡ್ ಆಗಿರೋ ಅಂಬೇಡ್ಕರ್ ವಿದ್ಯಾರ್ಥಿ ಸಂಘದ ಇತರ ನಾಲ್ಕು ಗೆಳೆಯರ ಪರಿಸ್ಥಿತಿನೂ ಇದಕ್ಕಿಂತ ಭಿನ್ನವಾಗಿರ್ಲಿಲ್ಲ.
ನಾನು ಈ ಹೋರಾಟವನ್ನ, ಸಂಶೋಧನೆಯನ್ನ, ಈ ಯೂನಿವರ್ಸಿಟಿಯನ್ನೇ ಬಿಟ್ಟು ಹೊರಗ್ಹೋಗಿ ಫ್ರೆಂಡ್ಸ್ ಸಹಾಯದಿಂದ ಸಿಟಲಿ ಯಾವುದಾದ್ರೂ ಒಂದು ಬಿಸ್ನೆಸ್ ಶುರು ಮಾಡಿ ರಾಜನ ಹಾಗೆ ಬದುಕಿಬಿಡ್ಬಹುದು. ಆದ್ರೆ, ಅದು ನಾನು ಬಯಸಿದ, ಕನಸಿದ, ಹಂಬಲಿಸಿದ ಬದುಕಾಗೋದಿಲ್ಲ. ನಾನು ಹಾಗೆ ಬದುಕಿದ್ದೂ ಸತ್ತವರ ಪಟ್ಟಿಗೆ ಸೇರಲ್ಲ. ಅದು ನನ್ನ ಬದುಕಲ್ಲ.
ನನ್ನ ಬದುಕು ನನ್ನ ಜನಗಳ ಬದುಕಿನಲ್ಲಿ ನಿಜವಾದ ಬದಲಾವಣೆ ತರೋವಂತ ಬದುಕಾಗ್ಬೇಕು. ಬಾಬಾಸಾಹೇಬರು ಕಂಡಂತ ಕನಸನ್ನ ನನಸಾಗಿಸೋ ಬದುಕು ನನ್ದಾಗ್ಬೇಕು. ಈ ದೇಶದಲ್ಲಿ ವಿಜ್ಞಾನದ, ವಿಚಾರದ ತೀವ್ರ ಬರದಲ್ಲಿ ನರಳ್ತಾ ಮೌಢ್ಯದಲ್ಲಿ ಮುಳುಗಿ, ವಂಚಕ್ರು ಬೀಸೋ ಬಲೆಗೆ ಸುಲಭದ ಶಿಕಾರಿಗಳಾಗ್ತಾ ಇರೋ ನನ್ನ ಜನರಲ್ಲಿ ಅರಿವಿನ ಹಣತೆ ಹಚ್ಚೋ ಬದುಕಾಗ್ಬೇಕು. ಇದೆಲ್ಲ ನಿಜ ಆಗೋಕೆ ನಾನೀಗ ನಡೆಸುತ್ತಿರೋ ಸಂಶೋಧನೆ, ಆಳ ಅಧ್ಯಯನ ಮತ್ತು ಬಾಬಾ ಸಾಹೇಬರು ಮಾಡಿದ ರೀತಿಯ ಶೈಕ್ಷಣಿಕ ಸಾಧನೆ ನನಗೆ ಅತ್ಯಂತ ಅನಿವಾರ್ಯ.
ಆದ್ರೆ,..
ಆದ್ರೆ...
ನನ್ನ ಕನಸುಗಳ ಹಾದಿಗೆ ಈ ಪಟ್ಟಭದ್ರರು ಸುರಿದಿರೋ ಮುಳ್ಳುಗಳನ್ನ ಸರಿಸಿ ಮುನ್ನುಗ್ಗಬಲ್ಲೆ ಅನ್ನೋ ನನ್ನ ವಿಶ್ವಾಸ ಕರಗಿ ಹೋಗ್ತಾಯಿದೆ... ನಮಗೆ ನಮ್ಮ ಶಿಕ್ಷಣನೇ ಮುಗಿಸೋಕೆ ಅವಕಾಶ ಮಾಡಿಕೊಡದಿರೋ ಈ ವ್ಯವಸ್ಥೆಯ ಚಕ್ರವ್ಯೂಹದಿಂದ ಹೊರಗೆ ಬರೋ ಮಾರ್ಗನೇ ನಂಗೆ ತೋಚ್ತಿಲ್ಲ.
(ಹತಾಶ ದನಿ) ನಮ್ಮ ಕೂಗು ಅರಣ್ಯರೋಧನ ಅನ್ನಿಸ್ತಿದೆ. ನಾವಿಲ್ಲಿ ಅನಾಥರ ಹಾಗೆ ಬಿದ್ದುಕೊಂಡಿದ್ದೀವಿ. ವೇಲಿವಾಡದಲ್ಲಿ ನಿಂತು ಒಂದು ತಿಂಗಳಿನಿಂದ ನಾವು ನಡೆಸ್ತಿರೋ ಈ ಹೋರಾಟ ನಿಮ್ಮ ಕಿವಿಗೆ ಯಾವುದಾದರೂ ಮಾರ್ಗದ ಮೂಲಕ ಬಂದು ಬಿದ್ದಿದ್ಯಾ? ಇಲ್ಲ ಅಲ್ವಾ? (ಮತ್ತಷ್ಟು ಹತಾಶೆಯಿಂದ) ಬಿದ್ದಿರಲು ಸಾಧ್ಯವೂ ಇಲ್ಲ ಬಿಡಿ.
(ರಂಗದ ಮುಂಬಾಗಕ್ಕೆ ಬಂದು, ಸಭಿಕರನ್ನುದ್ದೇಶಿಸಿ)
ಹೇಳಿ, ನಾನೀಗ ಏನ್ ಮಾಡ್ಲಿ? ಇಲ್ಲಿಂದ ಹೊರಬೀಳ್ಲಾ? ಹೋರಾಟದಿಂದ ಹೆಜ್ಜೆ ಹಿಂದಕ್ಕಿಟ್ಟುಬಿಡ್ಲಾ? ಹಾಗೇ ಮಾಡಿಬಿಡ್ಲಾ??
(ಇಲ್ಲ ನಾನು ಮಾಡುವುದಿಲ್ಲ ಎಂಬಂತಹ ಮುಖಭಾವ )
``we should
never compromise to keep ourself comfortable, ನಾವು ಆರಾಮಾಗಿ ಬದುಕೋದಕ್ಕೆ ನಮ್ಮ ನಂಬಿಕೆ ಆದರ್ಶಗಳನ್ನು ರಾಜಿ ಮಾಡಿಕೊಳ್ಳಬಾರ್ದು” ಇದು ನಾನು ಯಾವತ್ತಿಗೂ ನಂಬಿರೋ ಬದುಕಿನ ಫಿಲಾಸಫಿ. ಈಗ ನಾನೇ ನನಗೆ ವಿರುದ್ಧವಾಗಿ ನಡೆದುಕೊಳ್ಲಾ? ಆತ್ಮವಂಚನೆಗಿಳೀಲಾ?
ಇಲ್ಲ. ನನಗೆ ನನ್ನ ಕನಸುಗಳೊಂದಿಗೆ ರಾಜಿ ಮಾಡಿಕೊಳ್ಳಲು ಇಷ್ಟವಿಲ್ಲ (ಒಮ್ಮೆ ದೃಢವಾಗಿ) ರಾಜಿ ಮಾಡಿಕೊಳ್ಳಲಾರೆ. (ಮತ್ತೊಮ್ಮೆ ನೋವಿನಿಂದ-ಹತಾಶೆಯಿಂದ)- ರಾಜಿ..ಮಾಡಿಕೊಳ್ಳಲಾರೆ.........................
[ಕೈಯಲ್ಲಿ ಬ್ಯಾನರ್ ಹಿಡಿದು ನಿಧಾನವಾಗಿ ನಡೆದುಕೊಂಡು ರೂಮು ಹೊಕ್ಕು ಸುತ್ತಲೂ ನೋಡುತ್ತಾನೆ. ಕೆಲ ಗಳಿಗೆ ಶೂನ್ಯದಲ್ಲಿ ದೃಷ್ಟಿ ನೆಟ್ಟು ನಿಲ್ಲುತ್ತಾನೆ. ಅರೆಗಳಿಗೆಯ ನಂತರ ಏನೋ ನಿರ್ಧರಿಸಿದವನಂತೆ ಕೈಯಲ್ಲಿರುವ ಬ್ಯಾನರನ್ನೊಮ್ಮೆ, ಮೇಲೆ ಫ್ಯಾನನ್ನೊಮ್ಮೆ ನೋಡುತ್ತಾನೆ. ನಿಧಾನವಾಗಿ ಟೇಬಲ್ಲಿನ ಬಳಿ ಹೋಗಿ ಕೂರುತ್ತಾನೆ. ಏನೋ ನಿರ್ಧರಿಸಿದವನಂತೆ ಬರೆಯಲು ಶುರುಮಾಡುತ್ತಾನೆ]
(ರಂಗದ ಮೇಲೆ ಬೆಳಕು ಮಂದವಾಗುತ್ತಾ ಹೋಗುವುದು..)
(ಬೆಳಕು ಮೂಡಿದಾಗ ಕುರ್ಚಿಯ ಮೇಲೆ ಕುಳಿತು ಡೆತ್ ನೋಟ್ ಕೈಯಲ್ಲಿಟ್ಟುಕೊಂಡು….)
ಗುಡ್ ಮಾರ್ನಿಂಗ್,
ಈ ಪತ್ರವನ್ನು ನೀವು ಓದೋವಾಗ ನಾನಿರೋದಿಲ್ಲ. ಕೋಪ ಮಾಡ್ಕೋಬೇಡಿ. ನಂಗೊತ್ತು, ನಿಮ್ಮಲ್ಲಿ ಹಲವರು ನಿಜಕ್ಕೂ ನನ್ ಬಗ್ಗೆ ಕಾಳಜಿ ತೋರ್ಸಿದ್ರಿ, ನನ್ನ ಪ್ರೀತ್ಸಿದ್ರಿ ಮತ್ತು ಚೆಂದ ನೋಡ್ಕೊಂಡ್ರಿ. ಯಾರ ಮೇಲೂ ನಂಗೆ ದೂರುಗಳಿಲ್ಲ. ಯಾವಾಗ್ಲೂ ನಂಗೆ ಸಮಸ್ಯೆಯಿದ್ದಿದ್ದು ನನ್ಜೊತೆಗೇನೇ.
ನನ್ನ ದೇಹ ಮತ್ತು ಆತ್ಮದ ನಡುವಿನ ಕಂದಕ ದೊಡ್ಡದಾಗ್ತಿರೋ ಭಾವನೆ ಮೂಡ್ತಿದೆ. ಮತ್ತು ನಾನು ರಾಕ್ಷಸನಾಗ್ಬಿಟ್ಟಿದ್ದೀನಿ.
ಯಾವಾಗ್ಲೂ ಒಬ್ಬ ಬರಹಗಾರ ಆಗ್ಬೇಕು ಅನ್ನೋದು ನನ್ ಬಯಕೆ ಆಗಿತ್ತು. ಕಾರ್ಲ್ ಸೇಗನ್ ತರಾ. ಕೊನೆಗೆ, ನನ್ನಿಂದ ಬರೆಯೋಕೆ ಸಾಧ್ಯವಾಗ್ತಿರೋದು ಇದೊಂದು ಪತ್ರವನ್ನ ಮಾತ್ರ.
ವಿಜ್ಞಾನ, ನಕ್ಷತ್ರ, ಪ್ರಕೃತಿಯನ್ನ ಪ್ರೀತಿಸ್ದೆ; ಪ್ರಕೃತಿಯಿಂದ ಮನುಷ್ಯರು ಡಿವೋರ್ಸ್ ಪಡ್ದು ಬಾಳಾ ಕಾಲ ಆಯ್ತು ಅನ್ನೋದನ್ನ ಅರಿಯದೆ ಮನುಷ್ರನ್ನ ಪ್ರೀತಿಸ್ದೆ. ನಮ್ಮ ಭಾವನೆಗಳೆಲ್ಲ ಸೆಕೆಂಡ್ ಹ್ಯಾಂಡು. ಇಲ್ಲಿ ಪ್ರೀತೀನ ರಚಿಸ್ಲಾಗಿದೆ. ನಂಬಿಕೆಗಳಿಗೆ ಬಣ್ಣ
ಬಳಿಯಲಾಗಿದೆ. ನಮ್ಮ ಸ್ವಂತಿಕೆಗೆ ಇಲ್ಲಿ ಬೆಲೆ ಬರೋದೇ ಕೃತಕ ಕಲೆಯಿಂದ. ನೋವುಣ್ಣದೆ ಪ್ರೀತ್ಸೋದು ನಿಜಕ್ಕೂ ಕಷ್ಟ.
ಈ ಜಗತ್ತು ಮನುಷ್ಯನನ್ನು ಅವನ್ ಮನಸ್ಸಿನ್ ಮೂಲಕ ಎಂದೂ ಪರಿಗಣಿಸ್ಲೇ ಇಲ್ಲ. ನಭೋಮಂಡಲದ ನಕ್ಷತ್ರಗಳ ಧೂಳಿನಿಂದ ಮಾಡಲಾಗಿರೋ ಅತ್ಯದ್ಭುತ ವಸ್ತು ಅಂತ ಎಂದೂ ಅವನನ್ನ ಗುರುತಿಸ್ಲಿಲ್ಲ. ಮನುಷ್ಯನ ಮೌಲ್ಯ ಅನ್ನೋದು ಅವನ ತತ್ಕ್ಷಣದ ಐಡೆಂಟಿಡಿ ಹಾಗೂ ಸಮೀಪದ ಯಾವುದೋ ಒಂದು ಸಾಧ್ಯತೆಂ ಮಟ್ಟಕ್ಕಷ್ಟೇ ಇಳಿದ್ಬಿಟ್ಟಿದೆ. ಒಂದ್ ವೋಟಿಗೆ. ಒಂದ್ ಸಂಖ್ಯೆಗೆ. ಒಂದ್ ವಸ್ತುವಿಗೆ.. ಅದು ಅಧ್ಯಯನ ಕ್ಷೇತ್ರದಲ್ಲಿರ್ಲಿ, ಬೀದಿಗಳಲ್ಲಿರ್ಲಿ, ರಾಜಕೀಯದಲ್ಲಿರ್ಲಿ, ಬದುಕಿನಲ್ಲೇ ಇರಲಿ ಅಥವಾ ಸಾವಿನಲ್ಲೇ ಇರಲಿ;
ಈ ರೀತಿಯ ಪತ್ರವನ್ನ ಮೊದಲ್ನೇ ಸಲಕ್ಕೆ ಬರೀತಿದೀನಿ. ಇದು ಕೊನೇ ಪತ್ರದ ಮೊದಲ ಪ್ರಯತ್ನ. ಒಂದ್ವೇಳೆ ಇದೇನಾದ್ರೂ ಅರ್ಥ ಕೊಡೋಕೆ ವಿಫಲವಾದ್ರೆ ಕ್ಷಮಿಸಿ.
ಬಹುಶಃ ಪ್ರಪಂಚವನ್ನ ಅರ್ಥ ಮಾಡ್ಕೊಳೋದ್ರಲ್ಲಿ ನಾನು ತಪ್ದೆ ಅನ್ಸುತ್ತೆ. ಪ್ರೀತಿ, ನೋವು, ಬದುಕು, ಸಾವು ಇವನ್ನೆಲ್ಲಾ ಅರ್ಥ ಮಾಡ್ಕೊಳೋದ್ರಲ್ಲಿ ಸೋತೆ. ಆತುರವೇನೂ ಇರ್ಲಿಲ್ಲ, ನಾನು ಓಡ್ತಾನೇ ಇದ್ದೆ. ಬದುಕು ಪ್ರಾರಂಭಿಸೋ ಹತಾಶೆಯಿಂದ ಓಡ್ತಿದ್ದೆ. ಕೆಲವರಿಗೆ ಬದುಕೇ ಒಂದ್ ಶಾಪ. ಆದ್ರೆ ನಂಗೆ, ನನ್ನ ಹುಟ್ಟೇ ಮಾರಾಣಾಂತಿಕ ಅಪಘಾತವಾಗ್ಬಿಟ್ಟಿತ್ತು. ನನ್ನ ಬಾಲ್ಯದ ಏಕಾಂಗಿತನದಿಂದ ನಾನು ಎಂದೂ ಚೇತರಿಸಿಕೊಳ್ಳಲಾರೆ. ನನ್ನ ಗತದಿಂದ ಬಂದ ಪಾಪಿ ಕೂಸು ನಾನು.
ಈ ಕ್ಷಣದಲ್ಲಿ ನಂಗೆ ನೋವಾಗ್ತಿಲ್ಲ, ದುಃಖವಾಗ್ತಿಲ್ಲ; ಖಾಲಿ ಖಾಲಿ ಅನಿಸ್ತಿದೆ. ನನ್ನ ಬಗ್ಗೆ ನನಗೇ ಕಾಳಜಿಯಿಲ್ಲ. ಇದು ಅಸಹ್ಯ. ಹಾಗಾಗಿ ಈ ಕೆಲಸ ಮಾಡ್ತಿದೀನೇನೋ.
ಜನ ನನ್ನನ್ನ ಹೇಡಿ ಅಂತ ಜರೀಬಹುದು. ನಾನು ಹೋದ್ಮೇಲೆ ಸ್ವಾರ್ಥಿ, ಮೂರ್ಖ ಅನ್ಬಹುದು. ಅದರ ಬಗ್ಗೆ ನಂಗೇನೂ ಚಿಂತೆಯಿಲ್ಲ. ಪುನರ್ ಜನ್ಮದ ಕತೆಗಳಲ್ಲಿ, ಭೂತ, ಪ್ರೇತಗಳಲ್ಲಿ ನಂಗೆ ನಂಬಿಕೆಯಿಲ್ಲ. ಏನಾದ್ರೂ ನಂಬೋದಿದ್ರೆ ಅದು ನಾನು ನಕ್ಷತ್ರಗಳವರೆಗೆ ಪ್ರಯಾಣಿಸಬಲ್ಲೆ ಅನ್ನೋದನ್ನ ಮಾತ್ರ ಮತ್ತು ಇತರೆ ಪ್ರಪಂಚಗಳ ಬಗ್ಗೆ ತಿಳಿದುಕೊಳ್ಳಬಲ್ಲೆ ಅನ್ನೋದನ್ನ ಮಾತ್ರವೇ.
ಈ ಪತ್ರ ಓದ್ತಿರೋ ನೀವು ನಂಗೇನಾದ್ರೂ ಮಾಡಬಹುದಾದ್ರೆ, ಕಳೆದ ಏಳು ತಿಂಗಳಿನ ಫೆಲೋಶಿಪ್ ಹಣ ಒಂದು ಲಕ್ಷದ ಎಪ್ಪತ್ತೈದು ಸಾವಿರ ರುಪಾಯಿ ಇನ್ನೂ ಬರ್ಬೇಕು. ಅದು ನನ್ನ ನನ್ನ ಕುಟುಂಬದವ್ರಿಗೆ ತಲುಪೋ ಹಾಗೆ ಮಾಡಿ. ರಾಮ್ಜಿಗೆ ನಲವತ್ತು ಸಾವಿರದಷ್ಟು ಸಾಲ ಹಿಂದಿರುಗಿಸ್ಬೇಕು. ಅವ್ನು ಅದನ್ಯಾವತ್ತೂ ವಾಪಸ್ಸು ಕೇಳಿಲ್ಲ. ದಯವಿಟ್ಟು ನಂಗೆ ಬರೋ ಹಣದಲ್ಲಿ ಅದನ್ನ ತೀರಿಸ್ಬಿಡಿ.
ನನ್ನ ಅಂತ್ಯಕ್ರಿಯೆ ಶಾಂತವಾಗಿ, ಸುಗಮವಾಗಿ ನಡೀಲಿ. ಹಿಂಗೆ ಕಾಣಿಸ್ಕೊಂಡ್ ಹಂಗೆ ಮರೆಯಾಗ್ಬಿಟ್ಟ ಅನ್ನೋಹಾಗೆ ವರ್ತಿಸಿ. ನನಗಾಗಿ ಕಣ್ಣೀರು ಹಾಕೋದು ಬೇಡ. ಜೀವಂತವಾಗಿದ್ದಾಗ ಇದ್ದುದಕ್ಕಿಂತ್ಲೂ ಸತ್ತಮೇಲೆ ನಾನು ಖುಷಿಯಾಗಿರ್ತೀನಿ ಅನ್ನೋದು ಗೊತ್ತಿರ್ಲಿ.
``ಇರುಳ ಮರೆಯಿಂದ ನಕ್ಷತ್ರಗಳ ವರೆಗೆ''
ಉಮಾ ಅಣ್ಣ, ಈ ಕೆಲಸಕ್ಕೆ ನಿಮ್ಮ ರೂಮನ್ನ ಉಪಯೋಗಿಸ್ತಿರೋದಕ್ಕೆ ಕ್ಷಮೆ ಇರ್ಲಿ
ನಿರಾಸೆ ಮೂಡಿಸಿದ್ದಕ್ಕೆ `ಎಎಸ್ಎ' ಕುಟುಂಬದ ಕ್ಷಮೆ ಕೋರ್ತೀನಿ. ನೀವೆಲ್ರೂ ನನ್ನನ್ನ ತುಂಬಾ ಪ್ರೀತ್ಸಿದ್ರಿ. ನಿಮ್ಮೆಲ್ಲರ ಉಜ್ವಲ ಭವಿಷ್ಯಕ್ಕಾಗಿ ಹಾರೈಸ್ತೀನಿ.
ಹಾಂ.. ಫಾರ್ಮಾಲಿಟಿಗಳನ್ನ ಬರೆಯೋದೇ ಮರೆತ್ಬಿಟ್ಟೆ ನೋಡಿ.
ನನ್ನ ಸಾವಿಗೆ ಯಾರೂ ಹೊಣೆಗಾರರಲ್ಲ. ಯಾರೂ ನನ್ನನ್ನ ತಮ್ಮ ಕೃತ್ಯಗಳಿಂದಾಗ್ಲೀ, ಮಾತ್ನಿಂದಾಗ್ಲೀ ಇದಕ್ಕೆ ಉತ್ತೇಜಿಸ್ಲಿಲ್ಲ.
ಇದು ನನ್ನ ನಿರ್ಧಾರ ಮತ್ತು ಇದಕ್ಕೆ ನಾನೊಬ್ನೇ ಜವಾಬ್ದಾರ.
ನಾನು ಹೋದ್ಮೇಲೆ ಈ ವಿಷಯವಾಗಿ ನನ್ನ ಸ್ನೇಹಿತರಿಗೆ ಮತ್ತು ಶತ್ರುಗಳಿಗೆ ತೊಂದರೆ ಕೊಡ್ಬೇಡಿ.''
ಇದೋ ಕೊನೆಯ ಒಂದು ಸಲ, (ಮುಷ್ಠಿ ಬಿಗಿದೆತ್ತಿ) ...... ಜೈ ಭೀಮ್.
(ವೇಲಿವಾಡಾದಲ್ಲಿ ರೋಹಿತ್ ಬಟ್ಟೆಗಳನ್ನಿಟ್ಟು ಮರುನಿರ್ಮಿಸಿದ ವೇಲಿವಾಡಾ ಟೆಂಟ್ ವಿಡಿಯೋ ಪ್ಲೇ ಆಗಿ, ಪರದೆಯ ಮೇಲೆ “ಮತ್ತೆ ಕಟ್ಟುತ್ತಿದ್ದಾರೆ”
ಎಂದು ಕಾಣಿಕೊಳ್ಳುವುದರೊಂದಿಗೆ ಪರದೆ ಕತ್ತಲಾವರಿಸುವುದು)
- ಮುಗಿಯಿತು-
(ಥಿಯೇಟರ್ ರಿ ಆಕ್ಟ್ ತಂಡ ಪಸ್ತುತಪಡಿಸಿ, ಸ್ವರ (ವೆಂಕಟೇಶ್ವರ ಕೆ) ನಿರ್ದೇಶನದಲ್ಲಿ ಕಿರಣ್ ಮಾರಶೆಟ್ಟಿಹಳ್ಳಿ ರೋಹಿತ್ ವೇಮುಲನಾಗಿ ಅಭಿನಯದ ನಕ್ಷತ್ರದ ಧೂಳು ನಾಟಕದ ಯೂಟ್ಯೂಬ್ ಲಿಂಕ್ ಇಲ್ಲಿವೆ. ಇಡೀ ನಾಟಕವನ್ನು ಚಿಕ್ಕ ಚಿಕ್ಕ ತುಣುಕುಗಳಾಗಿ ಗೆಳೆಯರೊಬ್ಬರು ಅಪ್ ಲೋಡ್ ಮಾಡಿದ್ದಾರೆ. ಆಸಕ್ತರು ವೀಕ್ಷಿಸಬಹುದು)
ರೋಹಿತ್ ವೇಮುಲನ ಅಮ್ಮ ರಾಧಿಕಾ ವೇಮುಲ |
ಸಂಪರ್ಕ:- ಹರ್ಷಕುಮಾರ್ ಕುಗ್ವೆ
ಮೊಬೈಲ್- 9008401873
Mailharsha09@gmail.com
x