ಮೇಘಾನೆಯಿಂದ ಬೆಳ್ಳಿಗುಂಡಿಯವರೆಗೆ....- ಒಂದು ಚಾರಣದ ಅನುಭವ

ಕಡಿದಾಳು ಶಾಮಣ್ಣನವರ ಸಂದರ್ಶನ ಮುಗಿಸಿಕೊಂಡು ಗೆಳೆಯ ಕಿರಣ ನ ಊರಾದ ಮಾರಶೆಟ್ಟಿಹಳ್ಳಿಗೆ ಹೋಗಿದ್ದಾಗ ಆ ಸಂಜೆ ಮಬ್ಬುಗತ್ತಲಿನಲ್ಲಿ ಕಿರಣನ ಮನೆಯಿಂದ ಸ್ವಲ್ಪ ದೂರ ಇರುವ ದಾರಿಯೊಂದರಲ್ಲಿ ನಡೆದುಕೊಂಡು ಹೋಗುತ್ತಿದ್ದೆವು. ಅಲ್ಲೇ ಸ್ವಲ್ಪ ದೂರದಲ್ಲಿರುವ ಬೆಟ್ಟವೊಂದು ತನ್ನಲ್ಲಿ ಉಂಟು ಮಾಡುವ ಭಾವನೆಗಳನ್ನು ಆತ ವರ್ಣಿಸುವುದನ್ನು ಕೇಳುತ್ತಾ ಅವನೊಂದಿಗೆ ನಡೆದಿದ್ದೆ. ದೂರದಿಂದ ಆ ಬೆಟ್ಟವನ್ನು ಕತ್ತಲಲ್ಲೇ ನೋಡಿಕೊಂಡು ವಾಪಾಸು ಬರುವಾಗ ಇಬ್ಬರ ಮನಸ್ಸಿನಲ್ಲಿ ಒಂದು ವಿಚಾರ ಬಂತು. ಎಲ್ಲಾದರೂ ದಟ್ಟವಾದ ಕಾಡು, ಗುಡ್ಡ, ಬೆಟ್ಟಗಳನ್ನು ಒಂದೆರಡು ದಿನ ಸುತ್ತಿಕೊಂಡು ಆ ಎರಡು ದಿನಗಳ ಕಾಲವಾದರೂ ನಮ್ಮನ್ನು ನಾವು ಮರೆತು ಪೃಕೃತಿಯೊಂದಿಗೆ ಬೆರೆತು ಬರುವ ಯೋಚನೆ ನಮಗೆ ಬಂದಿತ್ತು. ಅಂತ ಒಂದು ಅನುಭವ ನಮಗೆ ಬೇಕಾಗಿತ್ತು ಕೂಡ. ಇದಾದ ಕೂಡಲೇ ನಮ್ಮ ನಮ್ಮ ಕೆಲಸದಲ್ಲಿ ಮುಳುಗಿದ್ದರೂ ಆಗಾಗ ನೆನಪು ಮಾಡಿಕೊಳ್ಳುತ್ತಿದ್ದೆವು. ಕೊನೆಗೂ ದಿನ ಗೊತ್ತು ಮಾಡಿಕೊಂಡು ನಮ್ಮೊಂದಿಗೆ ಇನ್ನೂ ಕೆಲವರನ್ನು ಜೊತೆ ಮಾಡಿಕೊಂಡು ಹೋಗುವಾ ಎಂದುಕೊಂಡೆವು. ಇದರಂತೆ ನಾವಿಬ್ಬರಲ್ಲದೆ ನಮಗೆ ಸರಿಹೊಂದುವ ಇತರ ಐದು ಮಂದಿ ಗೆಳೆಯರು ಸಿದ್ಧರಾದರು. ಆದರೆ ಕೊನೆಯ ಕ್ಷಣದಲ್ಲಿ ಅನಿವಾರ್ಯತೆಗಳಿಂದ ಇಬ್ಬರು ಹೊರಡಲಾಗಿರಲಿಲ್ಲ. ಹೀಗಾಗಿ ಕೊನೆಗೆ ಹೊರಟಿದ್ದು ನಾವು ಐದು ಜನ- ನಾನು, ಕಿರಣ, ಶಿವು, ಹರೀಶ್ ಹಾಗೂ ರಾಜು. ಮೊದಲ ದಿನ: ಹೇಡಿಗುಡ್ಡವೇರಿದ ಧೀರರು ನಾವು! ನಮ್ಮ ಚಾರಣ ಶು...