ಕರ್ನಾಟಕದ ಮೊದಲ ಧರ್ಮ- ಬೌದ್ಧಧರ್ಮ





* ಕರ್ನಾಟಕದಲ್ಲಿ ಇತಿಹಾಸ ಆರಂಭವಾಗುವುದು ಮೌರ್ಯ ದೊರೆ ಅಶೋಕ ಬರೆಸಿದ ಶಾಸನಗಳಿಂದ. ಸಾಮ್ರಾಟ್‌ ಅಶೋಕನು ಬೌದ್ಧ ಉಪಾಸಕನಾಗಿದ್ದನಲ್ಲದೆ ಆತನು ಕರ್ನಾಟಕಕ್ಕೂ ಬಂದಿದ್ದಕ್ಕೆ ಬ್ರಹ್ಮಗಿರಿ ಶಾಸನ ದಾಖಲೆ ಒದಗಿಸಿದೆ.


* ಸಾಮ್ರಾಟ್‌ ಅಶೋಕ ಇಲ್ಲಿ ಬರುವುದಕ್ಕೂ ಮೊದಲೇ, ಕ್ರಿಪೂ 5- 4ನೇ ಶತಮಾನದಿಂದಲೇ ಬೌದ್ಧ ಬಿಕ್ಕುಗಳು ನೆಲೆಗೊಂಡಿದ್ದರು ಎಂದು ಹೇಳಲಾಗುತ್ತದೆ. ಆಶೋಕನಿಗೂ ಮುಂಚೆ ‌ಕ್ರಿ.ಪೂ 387ರಲ್ಲಿ ಇಂದಿನ ಉತ್ತರ ಪ್ರದೇಶದ ವೈಶಾಲಿಯಲ್ಲಿ ಎರಡನೇ ಸಂಗೀತಿ (ಬೌದ್ಧ ಮಹಾಸಮ್ಮೇಳನ) ನಡೆದಾಗ ಬನವಾಸಿ ಹಾಗೂ ಮಹಿಷಮಂಡಲದ ಮಹಿಶಾಸಕ ಶಾಖೆಯವರು ಅದರಲ್ಲಿ ಭಾಗವಹಿಸಿದ್ದರು ಎಂಬ ಉಲ್ಲೇಖ ದೊರಕುತ್ತದೆ.

* ಕರ್ನಾಟಕದ ಪ್ರಾಚೀನ ಬೌದ್ಧ ನೆಲೆಗಳೆಲ್ಲವೂ ನವಶಿಲಾಯುಗದ ನೆಲೆಗಳು ಎಂಬುದನ್ನು ಗಮನಿಸಿದಾಗ ಅಲ್ಲೆಲ್ಲಾ ಕರ್ನಾಟಕದ ಮೊದಲ ಪೇಟೆಪಟ್ಟಣಗಳು ಅಥವಾ ನಗರಗಳು ಸ್ಥಾಪನೆಗೊಂಡಿದ್ದು ತಿಳಿದುಬರುತ್ತದೆ. ಈ ಜನನಿಬಿಡ ಸ್ಥಳಗಳ ಸಮೀಪದಲ್ಲೇ ಬೌದ್ಧ ವಿಹಾರಗಳು ಚೈತ್ಯಾಲಯಗಳು ಸ್ಥಾಪನೆಗೊಂಡಿದ್ದವು.

* ಕ್ರಿ.ಪೂ. 3 ಹಾಗೂ ಕ್ರಿಪೂ 2 ನೇ ಶತಮಾನದಲ್ಲಿ ಕರ್ನಾಟಕದ ಹಲವಾರು ಕಡೆಗಳಲ್ಲಿ ಬೌದ್ಧ ವಿಹಾರಗಳು, ಸ್ತೂಪಗಳು ಇದ್ದುವೆನ್ನಲು ಸಾಕ್ಷಿಗಳಿವೆ.

* ಕರ್ನಾಟಕದ ಮೊದಲ ಅರಸರು ಶಾತವಾಹನರು ಮತ್ತು ಚುಟುಗಳು. ಇವರ ಕಾಲಘಟ್ಟದಲ್ಲಿದ್ದ ನಾಣ್ಯಗಳು ಸ್ಪಷ್ಟವಾಗಿ ಇವರು ಮೂಲತಃ ಬೌದ್ಧಾನುಯಾಯಿಗಳಾಗಿದ್ದರು ಎಂಬುದನ್ನು ತಿಳಿಸುತ್ತವೆ.

* ಕರ್ನಾಟಕದ ಮೊದಲ ನಾಣ್ಯಗಳು ಸನ್ನತಿಯ ಸಾತವಾಹನರು ಹಾಗೂ ಬನವಾಸಿ ಚುಟುಗಳಿಗೆ ಸೇರಿದವು. ಇವುಗಳ ಮೇಲೆ ಬೌದ್ಧ ಸ್ತೂಪಗಳು, ಬೋಧಿ ವೃಕ್ಷಗಳು ಇರುವ ಚಿತ್ರಣಗಳಿವೆ.

* Studies in the Early Coins of Karnataka ಎಂಬ ಸಂಶೋಧನಾ ಕೃತಿಯಲ್ಲಿ ಡಾ. ಎಚ್‌ ಆರ್.‌ ರಘುನಾಥ್‌ ಭಟ್‌ ಅವರು ಹೀಗೆ ದಾಖಲಿಸುತ್ತಾರೆ, "The coin symbols of Chutus, Anandas are still more complex than those of Satavahanas. Arched hill (Stupas), river, bow and arrow, Bodhi Vruksha within the railing are some of symbols. These are mostly of Buddhist significance"( p76-77)

* ಬನವಾಸಿಯಲ್ಲಿ ಕ್ರಿ.ಪೂ 3ನೇ ಶತಮಾನದಲ್ಲಿ ಬೌದ್ಧ ವಿಹಾರವಿತ್ತೆನ್ನಲು ಸಾಕ್ಷ್ಯಗಳಿವೆ. ಅಲ್ಲಿ ಚುಟು ಅರಸರು ಸ್ಥಾಪಿಸಿದ್ದ ಐದು ಹೆಡೆಯ ನಾಗನ ಮೂರ್ತಿ ಬೌದ್ಧಚಿನ್ಹೆಯಾಗಿದೆ. ಇದೇ ಬಗೆಯ ನಾಗಪ್ರತಿಮೆಗಳು (ಬೌದ್ಧರಕ್ಷಕ ಮುಚಲಿಂದ ನಾಗ) ಸನ್ನತಿಯ ಸ್ತೂಪದಲ್ಲೂ ಇವೆ. ಸನ್ನತಿಯಲ್ಲಿ ನಾಗ ಬುಡಕಟ್ಟಿನ ಮುಖಂಡರು ಶಾತವಾಹನ ಅರಸರೊಂದಿಗೆ ಸ್ನೇಹ ಹೊಂದಿದ್ದ ಚಿತ್ರಿಕೆಗಳು ಕಲ್ಲಿನಲ್ಲಿ ಕೊರೆಯಲಾಗಿದೆ. ʼಚುಟು ಅಂದರೆ ನಾಗನ ಹೆಡೆ ಎಂದು ಅರ್ಥ. ಅಂದರೆ ಕರ್ನಾಟಕದಲ್ಲಿ ಶಾತವಾಹನರ ಕಾಲದಲ್ಲಿ ಇದ್ದ ಚುಟು ವಂಶ ಒಂದು ನಾಗಕುಲಕ್ಕೆ ಸೇರಿತ್ತು ಮತ್ತು ಬೌದ್ಧ ಧರ್ಮವನ್ನು ಅನುಸರಿಸಿತ್ತು ಎಂದು ತೀರ್ಮಾನಿಸಬಹುದು.

* ಕರ್ನಾಟಕದ ಮೊದಲ ಶಿಲ್ಪಕಲೆ- ಸನ್ನತಿ. ಇದು ಬೌದ್ಧ ಶಿಲ್ಪಕಲೆ. ಕ್ರಿ.ಪೂ 2, 1ನೆಯ ಶತಮಾನ. ಮುಖ್ಯವಾಗಿ ಶಹಬಾದಿ ಸುಣ್ಣಕಲ್ಲಿನಿಂದ ಕೆತ್ತಿರುವ ಉಬ್ಬುಶಿಲ್ಪಗಳು ಮತ್ತು ಶಿಲಾಪಲಕಗಳಿವೆ. ಇವುಗಳಲ್ಲಿ ಶಾತವಾಹನ ಅರಸರು, ಸಾಮ್ರಾಟ್‌ ಆಶೋಕ ಮತ್ತವನ ಕುಟುಂಬ, ಬುದ್ಧನ ಜೀವನ, ಜಾತಕ ಕತೆಗಳನ್ನು ಸಾವಿರಾರು ಸಂಖ್ಯೆಯಲ್ಲಿ ಕೆತ್ತಲಾಗಿದೆ.

* ಕರ್ನಾಟಕದ ಮೊದಲ ದೊಡ್ಡ ಶಾಸನ- ಸನ್ನತಿಯ ಅಶೋಕ ಶಾಸನ. ಬ್ರಾಹ್ಮಿ ಲಿಪಿಯಲ್ಲಿದೆ.

* ಕರ್ನಾಟಕದ ಮೊದಲ ವಿಗ್ರಹಗಳು- ಬುದ್ಧನ ಪಾದುಕೆಗಳು. (ವಜ್ರಾಸನ ಮೂರ್ತಿಗಳು) ಇವು ಬನವಾಸಿ, ಚಂದ್ರವಳ್ಳಿ, ಸನ್ನತಿಗಳಲ್ಲಿ ಕಂಡಿವೆ. ಇವುಗಳಿಗೆ ಮೊದಲು ಯಾವುದೇ ದೇವತಾ ವಿಗ್ರಹಗಳು ಪತ್ತೆಯಾಗಿಲ್ಲ.

* ಕರ್ನಾಟಕದ ಮೊದಲ ಮಾನವ ಮೂರ್ತಿ- ಕ್ರಿ.ಶ 1- 2 ನೇ ಶತಮಾನದಲ್ಲಿ ಸನ್ನತಿಯಲ್ಲಿ ನೆಟ್ಟಿರುವ ಬುದ್ಧನ ಗಾಂಧಾರ ಶೈಲಿಯ ಶಿಲ್ಪಗಳು. ಇವುಗಳನ್ನು ಬೇರೆ ಕಡೆಗಳಿಂದ ತರಿಸಿರಬೇಕು.

* ಶ್ರೀಲಂಕಾದ ಪ್ರಾಚೀನ ʼಮಹಾವಂಶʼ ಕ್ರಾನಿಕಲ್‌ ನಲ್ಲಿ ಇರುವ ದಾಖಲೆಯ ಪ್ರಕಾರ ಕ್ರಿ. ಶ 1 ನೆಯ ಶತಮಾನದಲ್ಲಿ ದುಠ್ಠಗಾಮಣಿ ಎಂಬ ಅರಸನು ಶ್ರೀಲಂಕಾದಲ್ಲಿ ಮಹಾಸ್ತೂಪವನ್ನು ಪ್ರತಿಷ್ಠಾಪಿಸುವ ಸಂದರ್ಭದಲ್ಲಿ ಥೇರ ಚಂದ್ರಗುಪ್ತನ ನೇತೃತ್ವದಲ್ಲಿ ವನವಾಸ ದೇಶದಿಂದ (ಬನವಾಸಿ) ಹೋಗಿದ್ದ 80,000 ಥೇರರು ಆ ಸ್ಥೂಪ ಸ್ಥಾಪನೆಯ ಮಹಾಘಟನೆಯನ್ನು ವೀಕ್ಷಿಸಿದರು ಎಂದು ಮಹಾವಂಶದಲ್ಲಿ ದಾಖಲಾಗಿದೆ.

* ಮಹಾವಂಶ ಮತ್ತು ದೀಪವಂಶಗಳು ಹೇಳುವ ಪ್ರಕಾರ ಕ್ರಿ.ಪೂ 3 ನೇ ಶತಮಾನದಲ್ಲಿ ಮಹಿಷಮಂಡಲಕ್ಕೆ ಬೌದ್ಧ ಬಿಕ್ಕು ಮಹಾದೇವ ಹಾಗೂ ಬನವಾಸಿಗೆ ಬೌದ್ಧಭಿಕ್ಕು ರಖ್ಖಿತ ಬಂದು ಬೌದ್ಧಧರ್ಮ ಪ್ರಸಾರದಲ್ಲಿ ತೊಡಗಿದ್ದರು.

* ಕರ್ನಾಟಕದ ಮೊದಲ ಧರ್ಮ ಬೌದ್ಧ ಧರ್ಮ ಎನ್ನಲು ಚಂದ್ರವಳ್ಳಿ ಶಾಸನ ದಾಖಲೆ ಒದಗಿಸುತ್ತದೆ. ಇಲ್ಲಿ ದೊರೆತ ಪ್ರಾಚೀನ ನಾಣ್ಯಗಳಲ್ಲಿ ಬೋಧಿವೃಕ್ಷ ಮತ್ತು ಬೌದ್ಧ ಸ್ತೂಪಗಳು ಚಿತ್ರಣಗೊಂಡಿವೆ.

* ಹಂಪಿಯ ಉತ್ಖನನಗಳಲ್ಲಿ ಕ್ರಿ. ಶ 2 ನೇ ಶತಮಾನಕ್ಕೆ ಸೇರಿದ್ದ ಬೌದ್ಧ ಪ್ರತಿಮೆಗಳು ದೊರೆತಿವೆ. ಅಲ್ಲಿ ದೊರೆತ ಬ್ರಾಹ್ಮಿಲಿಪಿಯಲ್ಲಿರುವ ಒಂದು ಶಾಸನವು ಬೌದ್ಧ ಸಂಘಕ್ಕೆ ಥೇರಪುತ ಎಂಬುವವನು ದಾನವನ್ನಿತ್ತ ವಿಷಯವನ್ನು ಉಲ್ಲೇಖಿಸುತ್ತದೆ. ಹಂಪಿಯ ವಸ್ತುಸಂಗ್ರಹಾಲಯದಲ್ಲಿ ಬುದ್ಧನ ಶಿರಸ್ಸಿನ ಒಂದು ಸ್ಥಟಿಕ ಮೂರ್ತಿ ಇದೆ. ಹಂಪಿಯಲ್ಲಿನ ಅರಸನ ಆಸ್ಥಾನಭವನದ ಸಮೀಪ ನಡೆಸಿದ ಉತ್ಖನನದಲ್ಲಿ ಐದು ಸುಣ್ಣಕಲ್ಲಿನ ದೊಡ್ಡ ಶಿಲ್ಪಫಲಕಗಳು ದೊರೆತಿವೆ. ಇವು ಬುದ್ಧನ ಜೀವನದ ಸನ್ನಿವೇಶಗಳನ್ನು ಮತ್ತು ಜಾತಕ ಕತೆಗಳನ್ನು ಉಬ್ಬುಕೆತ್ತನೆಯಲ್ಲಿ ತೋರಿಸಿವೆ.

* ಕ್ರಿ.ಪೂ 2 ನೇ ಶತಮಾನದಲ್ಲಿ ಮಹಾರಾಷ್ಟ್ರದ ಲೋನಾವಾಲದ ಬಳಿ ಶಾತವಾಹನ ಅರಸರು ಸ್ಥಾಪಿಸಿದ್ದ ಬೌದ್ಧ ವಿಹಾರ ಮತ್ತು ಸುಪ್ರಸಿದ್ಧ ಕಾರ್ಲಾ ಚೈತ್ಯಾಲಯ ನಿರ್ಮಾಣಕ್ಕೆ ಕನ್ನಡ ನಾಡಿನ ಬನವಾಸಿಯ ವರ್ತಕ ಭೂತಪಾಲ ಶೆಟ್ಟಿ ಎಂಬುವವರು ದೇಣಿಗೆ ನೀಡಿದ್ದಕ್ಕೆ ಅದೇ ವೈತ್ಯಾಲಯದಲ್ಲಿ ಶಾಸನವಿದೆ. ಇದು ಆ ಕಾಲದ ಮಹತ್ವದ ಬೌದ್ಧ ಕೇಂದ್ರವಾಗಿದ್ದ ಬನವಾಸಿಯಲ್ಲಿ ದೊಡ್ಡ ಮಟ್ಟದಲ್ಲಿ ಬೌದ್ಧ ಧರ್ಮವನ್ನು ಅನುಸರಿಸಲಾಗುತ್ತಿತ್ತು ಎನ್ನಲು ಪುರಾವೆಯಾಗಿದೆ. ಇಲ್ಲಿಂದಲೇ ನಾಗಾರ್ಜುನ ಕೊಂಡಕ್ಕೂ ಸ್ತೂಪ ವಿಹಾರ ನಿರ್ಮಾಣಕ್ಕೆ ಸಹಾಯ ಒದಗಿಸಿದ್ದಕ್ಕೆ ಸಾಕ್ಷ್ಯಗಳಿವೆ.

* ಕ್ರಿ. ಶ 2-3ನೇ ಶತಮಾನದಲ್ಲಿ ಬನವಾಸಿಯಲ್ಲಿ ಬೌದ್ಧಧರ್ಮಕ್ಕೆ ರಾಜಾಶ್ರಯವಿತ್ತು ಎನ್ನಲು ಚುಟು ವಂಶದ ವಿಣ್ಹುಕಡ ಚುಟುಕಲಾನಂದ ಶಾತಕರ್ಣಿ ತನ್ನ ಆಳ್ವಿಕೆಯ 12ನೇ ವರ್ಷದಲ್ಲಿ (ಕ್ರಿ ಶ 262) ಬರೆಸಿದ ನಾಗಶಿಲಾ ಶಾಸನ ಸಾಕ್ಷಿಯಾಗಿದೆ. ಮಹಾಭೋಜ ಶಿವಖದ ನಾಗಸಿರಿ ಎಂಬಾಕೆ ಈ ನಾಗಪ್ರತಿಮೆ ಶಿಲಾಫಲಕವನ್ನು, ತಡಾಕವನ್ನು ಹಾಗೂ ಒಂದು ಬೌದ್ಧ ವಿಹಾರವನ್ನು ಮಾಡಿಸಿದಳೆಂದು ಆ ಶಾಸನ ತಿಳಿಸುತ್ತದೆ. ಅಮಾತ್ಯ ಖಡಸಾತಿಯ ಮೇಲ್ವಿಚಾರಣೆಯಲ್ಲಿ ವಿಹಾರವನ್ನು ಸಂಜಯಂತಿಯ (ಬನವಾಸಿಯ) ದಮೋದರಕನ ಶಿಷ್ಯನಾದ ನಟಕನು ನಾಗಶಿಲ್ಪವನ್ನು ಕೆತ್ತಿದನು ಎಂಬ ಮಾಹಿತಿ ಅದರಲ್ಲಿದೆ.

* ಮಹಿಷಮಂಡಲ (ಇಂದಿನ ತಲಕಾಡು) ಮತ್ತು ಬನವಾಸಿಗಳ ನಡುವೆ ಇದ್ದ ಪ್ರಾಚೀನ ಸಂಪರ್ಕಗಳು, ತಲಕಾಡಿನಲ್ಲಿ ಬೌದ್ಧ ಚಿನ್ಹೆಗಳು ದೊರೆತಿರುವುದು ಗಮನಿಸಬೇಕಾದ ಅಂಶ.

* ಹೊನ್ನಾವರ ತಾಲ್ಲೂಕಿನ ಹೈಗುಂದದಲ್ಲಿ ದೊರೆತ ಎರಡು ಬುದ್ಧನ ಪ್ರತಿಮೆಗಳು, ಶಿವಮೊಗ್ಗ ಜಿಲ್ಲೆಯ ತೊಗರ್ಸಿಯಲ್ಲಿ ದೊರೆತ ಬುದ್ಧನ ಹಾಗೂ ಕುಬ್ಜ ಯಕ್ಷರ ಶಿಲ್ಪವಿರುವ ದೀಪಸ್ಥಂಬ, ಕಡಗೋಡಿನಲ್ಲಿ ದೊರೆತ ಒಂದು ಇಟ್ಟಿಗೆ ಸ್ತೂಪದ ಅವಶೇಷ ಇವೆಲ್ಲಾ ಕ್ರಿ.ಶ 2-3ನೇ ಶತಮಾನದ ಸಾಕ್ಷಿಗಳು.

* ಕೊಲ್ಲೂರಿನ ದೇವಾಲಯದಲ್ಲಿ ಮೊದಲು ಇದ್ದ ಬೌದ್ಧದೇವತೆ ʼಮಂಜುಶ್ರೀʼ. ಇದೇ ಮುಂದೆ ಶಾಕ್ತದೇವತೆ ಮೂಕಾಂಬಿಕೆಯಾಗಿದೆ, ಕಾಂಚೀಪುರದ ಕಾಮಾಕ್ಷಿ ಬೌದ್ಧರ ತಾರಾ ಆಗಿದ್ದನ್ನು ಶಂಕರಾಚಾರ್ಯರ ಅಣತಿಯಂತೆ ʼಕಾಮಾಕ್ಷಿʼ ಮಾಡಲಾಯಿತೆನ್ನಲಾಗಿದೆ.

* ಕೆಲವು ತಿಂಗಳ ಹಿಂದೆಯಷ್ಟೇ ಮಂಗಳೂರಿನ ಕದ್ರಿಯ ಕೆರೆಯಲ್ಲಿ 4 ನೇ ಶತಮಾನದ ಬುದ್ಧನ ರುಂಡವಿಲ್ಲದ ಮೂರ್ತಿಯನ್ನು ಪುತಾತತ್ವ ವಿಜ್ಞಾನಿಗಳು ಪತ್ತೆ ಮಾಡಿದರು. ಕದ್ರಿಯ ಮಂಜುನಾಥ ದೇವಸ್ಥಾನ ಮೂಲಕ ಬೌದ್ಧದೇವತೆ ʼಮಂಜುಶ್ರೀʼ ಹಾಗೂ ಅದು ಒಂದು ಬೌದ್ಧ ವಿಹಾರವಾಗಿತ್ತು ಎಂಬುದನ್ನು ರಾಷ್ಟ್ರಕವಿ ಗೋವಿಂದ ಪೈ ತಮ್ಮ ಸಂಶೋಧನಾ ಲೇಖನದಲ್ಲಿ ವಿವರವಾಗಿ ತಿಳಿಸಿದ್ದಾರೆ. ಕದ್ರಿ ದೇವಸ್ಥಾನದಲ್ಲಿ ಬ್ರಹ್ಮ ವಿಷ್ಣು ಮಹೇಶ್ವರ ಎಂದು ಪೂಜಿಸಲಾಗುತ್ತಿರುವ ಕಂಚಿನ ಪ್ರತಿಮೆ ಬೌದ್ಧ ಅವಲೋಕಿತೇಶ್ವರ. ಇದೇ ಕದ್ರಿಯಲ್ಲಿ 10 ನೇ ಶತಮಾನದ ಆಳುಪರ ಕಾಲದ ಒಂದು ಶಾಸನದಲ್ಲಿ ಇದು ಬೌದ್ಧ ವಿಹಾರವಾಗಿತ್ತು ಎಂಬುದನ್ನು ತಿಳಿಸುತ್ತದೆ.

* ಇಷ್ಟೂ ಸಂಗತಿಗಳನ್ನು ನೋಡಿದಾಗ ಕ್ರಿ.ಪೂ 5 ನೇ ಶತಮಾನದಿಂದ ಕ್ರಿ.ಶ 3-4ನೇ ಶತಮಾನದ ವರೆಗೆ ಅಂದರೆ ಸುಮಾರು 700-800 ವರ್ಷಗಳ ಕಾಲ ಕರ್ನಾಟಕದ ಏಕೈಕ ಆರಂಭಿಕ ಧರ್ಮವಾಗಿ ಬೌದ್ಧ ಧರ್ಮವು ಪ್ರಾಬಲ್ಯ ಹೊಂದಿತ್ತೆಂದು ತೀರ್ಮಾನಿಸಬಹುದು.

* ಕ್ರಿ. ಶ 1 ನೇ ಶತಮಾನದಲ್ಲಿ ಕರ್ನಾಟಕಕ್ಕೆ ಶ್ವೇತಾಂಬರ ಜೈನ ಮುನಿಗಳು ಕಲಬುರಗಿ ಮಳಖೇಡಕ್ಕೆ ಬಂದಿದ್ದರು ಎಂಬ ಉಲ್ಲೇಖವಿದೆ. ಆದರೆ ಕರ್ನಾಟಕದಲ್ಲಿ ಜೈನಧರ್ಮ ಮುನ್ನೆಲೆಗೆ ಬರುವುದು 4-5 ನೇ ಶತಮಾನದ ನಂತರದಲ್ಲಿ. ವಿಶೇಷವಾಗಿ ಗಂಗ ಅರಸರು ರಾಜಾಶ್ರಯ ನೀಡಿದ ನಂತರ. ಅಶೋಕನ ತಾತ ಚಂದ್ರಗುಪ್ತ ಮೌರ್ಯ ಶ್ರವಣ ಬೆಳಗೊಳಕ್ಕೆ ಬಂದಿದ್ದ ಎನ್ನಲು ಯಾವುದೇ ಸಾಕ್ಷಿಯಿಲ್ಲ. ಇಲ್ಲಿ ಇದ್ದ ಚಂದ್ರಗುಪ್ತ ಬೇರೆಯೇ ಜೈನ ಮತಾನುಯಾಯಿ ಎಂದು ಇತಿಹಾಸಕಾರರು ತರ್ಕಿಸಿದ್ದಾರೆ. ಏಕೆಂದರೆ 7 ನೇ ಶತಮಾನಕ್ಕೆ ಮೊದಲು ಎಲ್ಲೂ ಈ ಕುರಿತು ಮಾಹಿತಿ ಇಲ್ಲ. 7 ನೇ ಶತಮಾನದ ಶಾಸನವೊಂದರಲ್ಲಿ ಭದ್ರಬಾಹು ಮತ್ತು ಆತನ ಶಿಷ್ಯ ಪ್ರಭಾಚಂದ್ರ ಎಂಬ ಹೆಸರು ದಾಖಲಾಗಿದೆ. ಆದರೆ ಈ ಪ್ರಭಾಚಂದ್ರ ಚಂದ್ರಗುಪ್ತ ಮೌರ್ಯ ಎನ್ನಲು ಯಾವುದೇ ನಿಖರ ದಾಖಲೆಯಿಲ್ಲ. ಶ್ರವಣ ಬೆಳಗೊಳದಲ್ಲಿರುವ ಅತ್ಯಂತ ಹಳೆಯ ಜೈನಬಸದಿಯಾದ ಚಂದ್ರಗುಪ್ತ ಬಸದಿಯ ಕಾಲಮಾನ ಕ್ರಿ.ಶ 9ನೆಯ ಶತಮಾನ. ಅಲ್ಲಿರುವ ಉಳಿದೆಲ್ಲಾ ಬಸದಿಗಳು ನಂತರದ ಕಾಲದಲ್ಲಿ ಸ್ಥಾಪನೆಯಾದವು.



ಮೇಲಿನ ಚಿತ್ರ ಬನವಾಸಿಯಲ್ಲಿ ಸಿಕ್ಕಿದ ಚುಟು ಶಾಸನ: ಇದು ಮುಚಲಿಂದ ನಾಗನ ಪ್ರತಿಮೆ. ಗೌತಮ ಬುದ್ಧನಿಗೆ ಜ್ಞಾನೋದಯವಾದ ನಂತರ ಆರನೇ ವಾರದ ಧ್ಯಾನದಲ್ಲಿ ತೊಡಗಿದ್ದಾಗ ದೊಡ್ಡ ಬಿರುಗಾಳಿ ಬರುತ್ತದೆ. ಆಗ ನಾಗ ಬುಡಕಟ್ಟಿನ ಅರಸ ಮುಚಲಿಂದನು ತನ್ನ ಬುಡಕಟ್ಟಿನ ಜನರ ಮೂಲಕ ಬುದ್ಧನಿಗೆ ರಕ್ಷಣೆ ನೀಡುತ್ತಾನೆ. ಪ್ರಾಚೀನ ಬೌದ್ಧ ವಿಹಾರಗಳಲ್ಲಿ ಮತ್ತು ಸ್ತೂಪಗಳಲ್ಲಿ ಇದನ್ನು ಸಾಂಕೇತಿವಾಗಿ ನಾಗಪ್ರತಿಮೆಗಳ ಮೂಲಕ ಚಿತ್ರಸಲಾಗಿದೆ. ಚುಟು ಎಂದರೆ ನಾಗರ ಹೆಡೆ. ಶಾತವಾಹನದ ಕಾಲದ ಚುಟು ವಂಶವು ನಾಗ ಬುಡಕಟ್ಟಿಗೆ ಸಂಬಂದಿಸಿತ್ತು ಹಾಗೂ ಅದು ಬೌದ್ಧ ಧರ್ಮವನ್ನು ಅನಸರಿಸುತ್ತಿತ್ತು ಎಂಬುದನ್ನು ಇದು ಸೂಚಿಸುತ್ತದೆ. )


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬ್ರಹ್ಮಶ್ರೀ ನಾರಾಯಣ ಗುರುಗಳ ಬದುಕು ಮತ್ತು ಸೋಶಿಯಲ್ ಫಿಲಾಸಫಿ

ಹೊಸತು - ಹಳತು : ಬುದ್ದ ತತ್ವ

ಮೇಘಾನೆಯಿಂದ ಬೆಳ್ಳಿಗುಂಡಿಯವರೆಗೆ....- ಒಂದು ಚಾರಣದ ಅನುಭವ