ಆಗಸ್ಟ್ 10, 2011

ಮಂಜು ಯಾಕೋ ಹೀಗೆ ಮಾಡಿಕೊಂಡುಬಿಟ್ಟೆ??




Manju




Manju and Chitra

ಮಂಜು ಕಳೆದ ಬುಧವಾರ ಅಂದರೆ ೩ ನೇ ತಾರೀಖು ಸಂಜೆ ಹೊತ್ತಿಗೆ ಕಾಲ್ ಮಾಡಿದ. ಅಂದು ನಮಗೆ ಎಡಿಷನ್ ದಿನವಾದ ಕಾರಣ ಆಹೋರಾತ್ರಿ ಕೆಲಸ. ಹೀಗಾಗಿ ಬ್ಯುಸಿ ಇದ್ದ ಕಾರಣ 'ಮಂಜೂ ಇವತ್ತು ಬ್ಯುಸಿ ಇದೀನಿ ನಾಳೆ ಕಾಲ್ ಮಾಡ್ತೀನಿ ಕಣೋ'  ಎಂದು ಹೇಳಿ ಫೋನ್ ಇಟ್ಟು ನನ್ನ ಪಾಡಿಗೆ ಕೆಲಸದಲ್ಲಿ ತೊಡಗಿದೆ. ಆದರೆ ಮರುದಿನ ಅವನು ಕರೆ ಮಾಡಿದ್ದು ಮರೆತೇಬಿಟ್ಟಿದ್ದೆ. 
ನೆನ್ನೆ ಮನೆಯಿಂದ ಅಪ್ಪ ನನಗೆ ಕರೆ ಮಾಡಿ 'ಹರ್ಷ, ಇವತ್ತು ಪ್ರಜಾವಾಣಿಯಲ್ಲಿ ಲೋಕಲ್ ಪೇಜಿನಲ್ಲಿ ಒಂದು ಸುದ್ದಿ ಬಂದಿದೆ. ಕೊಳಚೆಗಾರಿನಲ್ಲಿ ಮಂಜುನಾಥ ಎಂಬ ಹುಡುಗ ಸೂಸೈಡ್ ಮಾಡಿಕೊಂಡಿದಾನೆ ಅಂತಿದೆ. ಯಾರ ಅವ್ನು? ನಿನ್ನನ್ನು ಬಹಳ ಹಚ್ಚಿಕೊಂಡಿದ್ನಲ್ಲಾ ಅವನೇನಾ?' ಕೇಳಿದ್ರು. ಅಲ್ಲಿ ಮಂಜುನಾಥ ಎನ್ನುವ ಹುಡುಗ ಅವನನ್ನು ಬಿಟ್ರೆ ಬೇರೆ ಯಾರೂ ಇಲ್ಲ. ನೋಡ್ತೀನಿ ತಡಿ ಎಂದು ಇಟ್ಟವನೇ ಮಂಜು ನಂಬರ್‌ಗೆ ಕರೆ ಮಾಡಿದೆ. ಅದು ಸ್ವಿಚ್ ಆಫ್ ಆಗಿತ್ತು. ಕೊನೆಗೆ ಯಾವ್ಯಾವುದೋ ನಂಬರ್‌ಗೆಲ್ಲ ಮಾಡಿ ಕೊನೆಗೆ ಅವರಪ್ಪ ಸಿಕ್ಕಿದರು. "ಶಂಕ್ರಣ್ಣಾ ನಾನು ಕೇಳಿದ ಸುದ್ದಿ ನಿಜವಾ?'
ಅದಕ್ಕೆ ಅವರು,
ಹೌದು ಮಾರಾಯಾ, ಮೊನ್ನೆ ೫ ನೇ ತಾರೀಖು ಹೀಗೆ ಮಾಡಿಕೊಂಡು ಬಿಟ್ಟ’ ಎಂದರು. ಕಾರಣ ಏನೂ ಇರಲಿಲ್ಲ. ಯಾಕೆ ಮಾಡಿಕೊಂಡ ಅಂತಾನೂ ಗೊತ್ತಿಲ್ಲ. ಬ್ರಾಂಡಿ ಬಾಟಲಿಯಲ್ಲಿ ಅರ್ಧ ಲೀಟರು ವಿಷ ಹಾಕಿಕೊಂಡು ಕುಡಿದಿದ್ದ. ಸಾಗರಕ್ಕೆ ಕರೆದುಕೊಂಡು ಹೋಗೋವಷ್ಟರಲ್ಲಿ ಹೋಗಿಬಿಟ್ಟ ಎಂದರು.  
......
......
......
ಶೀರ್ಷಿಕೆ ಸೇರಿಸಿ
ಮನೆಯಲ್ಲಿ ಒಬ್ಬನೇ ಗಂಡು ಮಗನಾದ ಈತ ಓದು ತಲೆಗೆ ಹತ್ತಿಸಿಕೊಳ್ಳದೇ ಗಾರೆ ಕೆಲಸ ಮಾಡುತ್ತಿದ್ದ. ಕೆಲ ದಿನ ಬೆಂಗಳೂರಿಗೂ ಬಂದರೂ ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲೇ ಇಲ್ಲ. ಈಗ್ಗೆ ಮೂರು ತಿಂಗಳ ಹಿಂದೆ ಕುಂದಾಪುರದಲ್ಲಿ ಮನೆಯೊಂದರಲ್ಲಿ ಗಾರೆ ಕೆಲಸ ಮಾಡುವಾಗ ಸಾರೆಯ ಮೇಲಿಂದ ಬಿದ್ದು ಕಾಲು ಮುರಿದುಕೊಂಡಿದ್ದ. ಕೂಲಿ ಕೆಲಸ ಮಾಡುವ ಅಪ್ಪ ಅಮ್ಮ ಮುರು ವರ್ಷದ ಹಿಂದೆ ಮಾಡಿದ್ದ ಮಗಳ ಮದುವೆಗೆ ಆಗಿದ್ದ ಸಾಲವನ್ನು ಆದಷ್ಟೂ ಬೇಗ ತೀರಿಸಲೇಬೆಂಕೆಂಬ ಹಟದಿಂದ ಕೆಲಸ ಮಾಡುತ್ತಿದ್ದರು. ಆ ಹೊತ್ತಿನಲ್ಲಿ ಇವನ ಆಸ್ಪತ್ರೆ ಖರ್ಚು ಮತ್ತಷ್ಟು ಸೇರಿಕೊಂಡು ಜರ್ಜರಿತರಾಗಿಬಿಟ್ಟಿದ್ದರು. ಒಮ್ಮೆ ತನಗೆ ಒದಗಿ ಬಂದ ಒತ್ತಡಗಳನ್ನು ಹೇಳಿಕೊಂಡು ಫೋನ್‌ನಲ್ಲೇ ಅತ್ತುಬಿಟ್ಟ ಮಂಜು. ಸಮಾಧಾನ ಮಾಡಿದ್ದೆ. ಇರೋ ಸಾಲವನ್ನೇ ತೀರಿಸಲು ಆಗ್ತಾ ಇಲ್ಲ. ಇಂತಾದ್ದರಲ್ಲಿ ನಾನೂ ಕೆಲಸ ಮಾಡಲು ಆಗದಂತೆ ಆಯ್ತು. ಏನು ಮಾಡಬೇಕೆಂದೇ ತಿಳೀತಾ ಇಲ್ಲ... ಅಂತೆಲ್ಲಾ ಒಂದು ಬಗೆಯ ಹತಾಶೆಯಿಂದ ಮಾತಾಡಿದಾಗ, ನಾನು ಸ್ವಲ್ಪ ಬೈದು ’ಇದೆಲ್ಲಾ ಏನು ಕಷ್ಟಾ ಮಂಜೂ. ಏನೂ ಆಗಲ್ಲ. ಸ್ವಲ್ಪ ದಿನದಲ್ಲಿ ಸರಿ ಹೋಗುತ್ತೆ ಬಿಡು. ಜೀವ ಒಂದಿದ್ದರೆ ಯಾಕೆ ಚಿಂತೆ ಮಾಡಬೇಕು. ಕಷ್ಟ ಮನುಷ್ಯನಿಗೆ ಬರದೇ ಮತ್ಯಾರಿಗೆ ಬರಬೇಕು ಹೇಳು ಎಂದು ಸಮಾಧಾನ ನೀಡಿ ಭರವಸೆ ತುಂಬುವ ಹೇಳುವ ಪ್ರಯತ್ನ ಮಾಡಿದ್ದೆ. ಎರಡೇ ತಿಂಗಳಲ್ಲಿ ಮತ್ತೆ ಕೆಲಸಕ್ಕೆ ಹೋಗುತ್ತಿದ್ದ. ’ಕಾಲು ಪೂರ್ತಿ ಸರಿ ಹೋಯ್ತೇ? ಎಂದು ಕೇಳಿದ್ದಕ್ಕೆ ಇಲ್ಲ. ಸ್ವಲ್ಪ ನೋವಿದೆ. ಹಾಗಂತ ಮನೆಯಲ್ಲಿ ಸುಮ್ಮನೇ ಕೂರುವ ಸ್ಥಿತಿ ಇಲ್ಲ ಹರ್ಷಣಾ ಎಂದಿದ್ದ. 
Manju and Me

ಮೊನ್ನೆ ನನಗೆ ಅವನು ಸಾಯುವ ಮುನ್ನ ಕರೆ ಮಾಡಿದ್ದಾಗ ಯಾವ ಒತ್ತಡದಲ್ಲಿದ್ದನೋ? 
ನಾನು ಅವನು ಮಾಡಿದ್ದ ಕರೆಯನ್ನು ಸ್ವೀಕರಿಸದಿದ್ದದ್ದು ತಪ್ಪಾಯ್ತಾ? ಅಟ್‌ಲೀಸ್ಟ್ ಅವನಿಗೆ ಹೇಳಿದಂತೆ ನಾನು ಮರುದಿನವಾದರೂ ಕರೆ ಮಾಡಿದ್ದರೆ ಏನಾದರೂ ಹೇಳಿಕೊಳ್ಳುತಿದ್ನಾ..? ನನ್ನ ಮಾತುಗಳೇನಾದರೂ ಅವನು ಆತ್ಮಹತ್ಯೆ ಮಾಡಿಕೊಳ್ಳದಂತೆ ತಡೆಯುತ್ತಿದ್ದವಾ?.... 
ಗೊತ್ತಿಲ್ಲ. 
ನೆನ್ನೆ ಆಫೀಸ್‌ನಿಂದ ಮನೆಗೆ ಹೋದವನೇ ಸಿಸ್ಟಂ ಆನ್ ಮಾಡಿ ಫೋಟೋಸ್ ತೆರೆದೆ. ಐದಾರು ತಿಂಗಳ ಹಿಂದೆ ಗೆಳೆಯ ರೋರ್ಕಿಚಾಂದ್ ಹಾಗೂ ಚಿತ್ರಾರನ್ನು ಕರೆದುಕೊಂಡು ಹೋಗಿ ಅವರ ಮನೆಯಲ್ಲಿ ತಂಗಿದ್ದ ದಿನ ತೆಗೆದ ಪೋಟೋ ನೋಡುತ್ತಾ ಕುಳಿತುಕೊಂಡೆ. ಜೋಗ್ ಫಾಲ್ಸ್ ನೋಡಲು ಹೋಗಿದ್ದಾಗ ಸಂಜೆ ಮಂಜು ಮನೆಗೆ ಹೋಗಿ ತಂಗಿದ್ದೆವು. ಮರುದಿನ ಮಂಜುನೇ ಊರಿನಲ್ಲಿ ಉಕ್ಕಡವೊಂದನ್ನು ನಮಗಾಗಿ ಅರೇಂಜ್ ಮಾಡಿ ನಾವು ನಾಲ್ವರೂ ಶರಾವತಿ ಹಿನ್ನೀರಿನಲ್ಲಿ ಅಡ್ಡಾಡಿ ಬಂದಿದ್ದೆವು. ಅಂದು ರಾತ್ರಿ ಮಂಜು ಹೆಂಡತಿ ಪ್ರೇಮ ನನ್ನ ಬಳಿ ದೂರು ಹೇಳಿ ಅವನಿಗೆ ’ಕುಡಿದು ಮನೆಯಲ್ಲಿ ಗಲಾಟೆ ಮಾಡುವುದನ್ನು ನಿಲ್ಲಿಸಲು ಹೇಳಿ ಅಣ್ಣಾ ಎಂದಿದ್ದಳು. ಅದರಂತೆ ಬರುವಾಗ ಆದಷ್ಟು ತಿಳಿಹೇಳಿ ಬಂದಿದ್ದೆ. ಆದರೆ ಈ ಗೆಳೆಯನ ಭೇಟಿ ಅದೇ ಕೊನೆ ಆಗುತ್ತೆ ಎಂದು ನಾನಾದರೂ ಹೇಗೆ ಊಹಿಸಲು ಸಾಧ್ಯವಿತ್ತು?
ಉಕ್ಕಡವನ್ನು ನೀರಿಗಿಳಿಸುವಾಗ, ಉಕ್ಕಡದಲ್ಲಿ, ಮನೆಯಲ್ಲಿ, ಅವರ ಮನೆಯ ಹೊರಗೆ, ನಾನು ಕ್ಲಿಕ್ಕಿಸಿದ ಫೋಟೋಗಳಲ್ಲಿ ಆದಷ್ಟು ಹೊತ್ತು ನೋಡಿದೆ. ತೀರಾ ಅಸಮಾಧಾನ ಕಾಡತೊಡಗಿತು. ಅಳು ತಡೆಯಲಾಗಲಿಲ್ಲ.  
ಈಗ್ಗೆ ನಾಲ್ಕೈದು ವರ್ಷಗಳ ಹಿಂದೆ ಹೀಗೇ ಡಿಪ್ರೆಶನ್‌ಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದ ಆತ್ಮೀಯ ಸ್ನೇಹಿತ ಪ್ರಶಾಂತನ ನೆನಪಾಗಿ ಯಾಕೋ ಅವನೀಗ ಇರಬೇಕಿತ್ತು ಎಂದು ಅನ್ನಿಸಲು ತೊಡಗಿತ್ತು. ಶಿವಮೊಗ್ಗದಲ್ಲಿದ್ದಾಗ ಅದೆಷ್ಟು ಹಚ್ಚಿಕೊಂಡಿದ್ವಿ ಇಬ್ಬರೂ... ಆತ ಬೆಂಗಳೂರು ಸೇರಿಕೊಂಡ ಮೇಲೆ ಇಬ್ಬರ ಜಗತ್ತೂ ದೂರವಾಗಿತ್ತು. ಆದರೆ ಆತ ಸಾಕಷ್ಟು ಒತ್ತಡದಲ್ಲಿದ್ದನೆಂದು ನನಗೆ ಗೊತ್ತಿತ್ತಾದರೂ ಮತ್ತೆ ಒಬ್ಬರೊಬ್ಬರು ಕುಳಿತು ಮಾತಾಡಿದ್ದೇ ಇಲ್ಲ. ಅವನೀಗ ಇದ್ದಿದ್ದರೆ ಹಾಗಾಗುತ್ತಿರಲಿಲ್ಲ. ತಿಂಗಳಲ್ಲಿ ಕೆಲ ಗಂಟೆಗಳಾದರೂ ನಾನು ಅವನೊಂದಿಗೆ ಕಳೆಯುತ್ತಿದ್ದೆ..... ಹೀಗೇ ನನ್ನಷ್ಟಕ್ಕೇ ನಾನು ಮಾತಾಡಿಕೊಂಡು ಹದಿನೈದು ದಿನವಾಗಿಲ್ಲ. 
ಅಕಾಲ ಸಾವಿಗೀಡಾದ ನನ್ನೊಂದಿಗರು, ಗೆಳೆಯ ಹಾಗೂ ಅವರನ್ನು ಕೊಂಡೊಯ್ದ ಸಾವು ಯಾವಾಗಲೂ ನನಗೆ ವಿಚಿತ್ರ ನೋವು ನೀಡುತ್ತಲೇ ಇರುತ್ತದೆ. ಕಳೆದ ವರ್ಷ ಗೆಳತಿ ಸಿರೀನ್‌ಳ ಸಾವನ್ನು ತೀರಾ ಹತ್ತಿರದಿಂದ ನೋಡಿ ಅವಳ ನೆನಪಾದಾಗಲೆಲ್ಲಾ ವಿಚಿತ್ರ ಸಂಕಟವಾಗುತ್ತಿರುತ್ತದೆ. ನನ್ನ ಊರಿನ ಆತ್ಮೀಯ ಮಿತ್ರ ಧರ್ಮ ಅಪಘಾತಕ್ಕೀಡಾಗಿ ಸಾವು ಕಂಡು ಇನ್ನೂ ಒಂದು ವರ್ಷವಾಗಿಲ್ಲ. ಮೊನ್ನೆ ಊರಿಗೆ ಹೋದಾಗ ಧರ್ಮನ ತಾಯಿಯನ್ನು ಮಾತನಾಡಿಸಲು ಹೋದ ನನ್ನನ್ನು ನೋಡಿ ಕಣ್ಣಲ್ಲಿ ನೀರು ತುಂಬಿಕೊಂಡು ಮುಕ್ಕಾಲು ಗಂಟೆಗೂ ಹೆಚ್ಚು ಕಾಲ ಮಗನ ನೆನೆಸಿಕೊಂಡು ಬಿಕ್ಕಳಿಸಿದರು. ನಮ್ಮಿಬ್ಬರ ಸ್ನೇಹಕ್ಕೆ ಸಾಕ್ಷಿಯಾಗಿದ್ದುದೂ ಅವರೊಬ್ಬರೇ. ಆಕೆಯ ಎದುರು ನಿಂತುಕೊಂಡು ಸಮಾಧಾನ ಮಾಡುವವರೆಗೂ ಸುಮ್ಮನಿದ್ದ ನನಗೆ ಹೊರಟು ಬಂದ ಮೇಲೆ ನನಗೆ ನನ್ನನ್ನೇ ಸಮಾಧಾನ ಮಾಡಿಕೊಳ್ಳುವುದು ಕಷ್ಟವಾಗಿತ್ತು.  
ಅದಕ್ಕೂ ಹಿಂದಿನ ವರ್ಷ ಅಗಲಿದ ನನ್ನೂರಿನ ಗೋಪಾಲಣ್ಣನ ಮುಖವನ್ನು ಈಗಲೂ ಶಿವಮೊಗ್ಗದ ರಸ್ತೆಗಳಲ್ಲಿ ಹುಡುಕುತ್ತಿರುತ್ತವೆ ನನ್ನ ಕಣ್ಣುಗಳು. ಯಾಕಂದರೆ ಅವರು ಊರಿಂದ ಬಂದಾಗೆಲ್ಲಾ ಶಿವಮೊಗ್ಗದ ಕರ್ನಟಕ ಸಂಘದ ಬಳಿ ಸಿಕ್ಕು ಇಬ್ಬರೂ ಟೀ ಕುಡಿಯುತ್ತಾ ಊರಿನ ಆಗುಹೋಗುಗಳ ಬಗ್ಗೆ ಶಿವಮೊಗ್ಗದ ನಮ್ಮ ’ಕ್ರಾಂತಿ’ಗಳ ಬಗ್ಗೆ ಹರಟುತ್ತಿದ್ದೆವು. ಇಬ್ಬರ ನಡುವೆ ಕ್ರಾಂತಿಗೀತೆಗಳ ವಿನಿಮಯವಾಗುತ್ತಿತ್ತು. ಊರಿಗೆ ಹೋದಾಗಲೂ ಅಷ್ಟೆ ನಾನು ಬಂದಿದ್ದು ತಿಳಿದೊಡನೆಯೇ ಗೋಪಾಲಣ್ಣ ಮನೆಗೆ ಹಾಜರ್.... 
ಮೊನ್ನೆ ಒಂದು ತಿಂಗಳ ಕಾಲ ಮನೆಯಲ್ಲಿದ್ದಾಗ ಗೋಪಾಲಣ್ಣ ಇದ್ದಿದ್ದರೆ ಅದೆಷ್ಟು ಸಲ ಬರುತ್ತಿದ್ದರೋ.....

...
Manju Rorrky
ಪಟ್ಟಿಯಲ್ಲಿ ಈಗ ಮಂಜು ಸೇರಿದ್ದಾನೆ.....  ’50 rupis karensi hako’ ಎಂದು ಆಗಾಗ ನನ್ನ ಮೊಬೈಲ್‌ಗೆ ಬರುತ್ತಿದ್ದ ಮೆಸೇಜು ಇನ್ನು ಬರುವುದಿಲ್ಲ ಎನ್ನುವುದನ್ನು ನೆನೆಸಿಕೊಂಡು ನೋವಾಗುತ್ತಿದೆ. ಪ್ರತಿ ಸಲ ಕರೆನ್ಸಿ ಹಾಕಿಸುವಾಗ ನನಗೆ ಅವರ ಮನೆಯಲ್ಲಿ ಸಿಗುವ ಪ್ರೀತಿ ಕಾಳಜಿಯನ್ನು ನೆನೆದು ಅದರ ಮುಂದೆ ಈ ಐವತ್ತು ರೂಪಾಯಿ ಯಾವ ದೊಡ್ಡದು ಎಂದುಕೊಳ್ಳುತ್ತಿದ್ದೆ. 
.....
ಶೀರ್ಷಿಕೆ ಸೇರಿಸಿ
ಮಂಜುನ ಇಬ್ಬರು ಮುದ್ದು ಮಕ್ಕಳು ಕಣ್ಣ ಮುಂದೆ ಬರುತ್ತಿದ್ದಾರೆ.

ಹೊಸತು - ಹಳತು : ಬುದ್ದ ತತ್ವ

ಲೋಕದ ಪ್ರತಿಯೊಂದೂ ಎಡೆಬಿಡದ ಚಲನೆಯಲ್ಲಿದೆ. ಕೆಲವೊಮ್ಮೆ ಬರಿಗಣ್ಣಿಗೆ ಚಲಿಸದೇ ಜಡವಾಗಿವೆ ಎಂದು ತೋರುವ ಪ್ರತಿಯೊಂದೂ ಚಲನೆಯಲ್ಲಿದೆ. ಒಂದು ಮರದ ತುಂಡು, ಕಬ್ಬಿಣದ ಬಿಲ್ಲೆ,...

ಮರದೊಂದು ಎಲೆ ನಾನು..

ನನ್ನ ಫೋಟೋ
A Writer, Researcher, Journalist and Activist. Born and brought up from Kugwe a village near Sagara, Shimoga district of Karnataka state. Presently working as the Editor In Chief of PEEPAL MEDIA /PEEPAL TV.